Wednesday, May 25, 2016

ಎಲ್ಲ ಹಕ್ಕಿಗಳಿಗೂ ಗೂಡು

‘ಯಾರಿಗೂ ಹೇಳ್ಬೇಡಿ’ ಅನ್ನೋ ಕೋಡ್ಲು ರಾಮಕೃಷ್ಣ ನಿರ್ದೇಶನದ ಸಿನೆಮಾ ನೋಡ್ತಿದ್ದೆ. ನೀವೂ ನೋಡಿರುತ್ತೀರಿ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗದ ಒಂದಷ್ಟು ಮಹಿಳೆಯರ ಕನಸನ್ನು ಬಂಡವಾಳ ಮಾಡಿಕೊಳ್ಳುವ ಒಬ್ಬಾತ, ತನ್ನ ಬುದ್ಧಿವಂತಿಕೆ ಮತ್ತು ನಯವಾದ ಮಾತುಗಳಿಂದ ಹೇಗೆ ಅವರನ್ನು ವಂಚಿಸುತ್ತಾನೆ ಎಂಬುದು ಸಿನೆಮಾ ಕತೆ. ಸಿನೆಮಾ ಪೂರ್ತಿ ಇರುವುದು ಒಂದು ವಟಾರದಲ್ಲಿನ ಗೃಹಿಣಿಯರ ಸ್ವಂತ ಮನೆ ಮಾಡುವ ಮಹದಾಸೆಯ ಸುತ್ತ. ಬಾಡಿಗೆ ಮನೆಯ ಸಂಕಷ್ಟಗಳೂ, ಸ್ವಂತ ಮನೆ ಇಲ್ಲ ಎಂಬುದು ಒಂದು ಮಾನಸಿಕ ಕೊರಗೇ ಆಗಿಬಿಡುವ ಪರಿಯೂ, ಸ್ವಗೃಹವೆಂಬ ಮರೀಚಿಕೆಯ ಬೆನ್ನೇರಿ ಹೊರಟ ಬಡ ಮತ್ತು ಮಧ್ಯಮ ವರ್ಗದವರ ಪಾಡು –ಎಲ್ಲವೂ ಈ ಚಿತ್ರದಲ್ಲಿ ಅತ್ಯದ್ಭುತವಾಗಿ ಬಿಂಬಿತವಾಗಿವೆ ಎಂದರೆ ನೀವು ‘ಚೆನ್ನಾಗ್ ಹೇಳಿದ್ರಿ’ ಎನ್ನದೇ ಇರಲಾರಿರಿ.

ನಮ್ಮ ಶಾಲೆಯ ಎರಡನೆಯ ಇಯತ್ತೆಯ ಕನ್ನಡ ಪಠ್ಯದಲ್ಲಿ ‘ನಮ್ಮ ಮನೆ’ ಎಂಬ ಪಾಠವೊಂದಿತ್ತು. ಈ ಪಾಠದಲ್ಲಿ ಇದ್ದ ಮನೆ, ಒಳಾಂಗಣ, ಮನೆಯಲ್ಲಿನ ಪೀಠೋಪಕರಣಗಳು, ಮನೆಯ ಹೊರಗಿನ ವಾತಾವರಣಗಳ ವಿವರಗಳನ್ನೆಲ್ಲ ನಾವು ವಿದ್ಯಾರ್ಥಿಗಳು ನಮ್ನಮ್ಮ ಮನೆಗಳಿಗೆ ಹೋಲಿಸಿ ರೋಮಾಂಚಿತರಾಗುತ್ತಿದ್ದೆವು.  ನಮ್ಮ ಮಾಸ್ತರರೂ ಈ ಪಾಠ ಮಾಡಿದ ಮರುದಿನದ ಹೋಂವರ್ಕಾಗಿ ನಮ್ನಮ್ಮ ಮನೆಗಳ ಸ್ವರೂಪವನ್ನು ವಿವರವಾಗಿ ಬರೆದುಕೊಂಡು ಬರುವಂತೆ ಹೇಳಿರುತ್ತಿದ್ದರು. ನಮ್ಮ ಮನೆಯನ್ನು ಕೂಲಂಕುಷವಾಗಿ ನಾವು ನೋಡಿದ್ದೂ ಆಗಲೇ. ಮನೆಗೆ ಎಷ್ಟು ಮೆಟ್ಟಿಲಿದೆ, ಜಗುಲಿಯಲ್ಲಿ ಎಷ್ಟು ಕುರ್ಚಿಯಿದೆ, ಅಡುಗೆಮನೆಯ ನಾಗಂದಿಗೆ ನಮ್ಮ ಕೈಗೆ ಸಿಗದಂತಿದೆ, ಅಪ್ಪ-ಅಮ್ಮ ಮಲಗುವ ಮಂಚದ ಕೆಳಗೇನಿದೆ, ಅಜ್ಜಿಯ ಕೋಲು ಯಾಕೆ ಬಾಗಿಲ ಹಿಂದೇ ಅಡಗಿಕೊಂಡಿರುತ್ತೆ, ನಾಯಿ ಜಾಕಿಯ ಮಲಗುವ ಮೂಲೆಗೆ ಕಟ್ಟಿದ ಸರಪಳಿ ಎಷ್ಟುದ್ದವಿದೆ ಎಂಬೆಲ್ಲ ವಿವರಗಳು ಅದೇ ಮೊದಲ ಸಲ ದಾಖಲಾದವು.

ನಮ್ಮ ಮನೆಯ ಮಾಡು ಸೋಗೆಯಿಂದ ಹೆಂಚಿಗೆ ಬಡ್ತಿ ಪಡೆದ ಕತೆಯನ್ನು ಅಪ್ಪ ಆಗಾಗ ಹೇಳುತ್ತಿದ್ದ. ಅಜ್ಜ ಕಟ್ಟಿಸಿದ್ದ ಮಣ್ಣು ಗೋಡೆಯ ಮನೆಗೆ ಹೆಂಚು ಹೊದಿಸುವ ಮೂಲಕವೇ ತನ್ನ ಅಧಿಕಾರವನ್ನು ಶುರು ಮಾಡಿದ ಅಪ್ಪ, ಆಮೇಲೆ ಆ ಮನೆ ಕೆಡವಿ ಹೊಸ ಮನೆ ಕಟ್ಟಿಸುವ ಮಟ್ಟಕ್ಕೆ ಬೆಳೆದದ್ದು ಒಂದು ಸಾಹಸಗಾಥೆಯೇ. ಅನೇಕ ಮಳೆಗಾಲಗಳನ್ನು ಕಂಡಿದ್ದ ಆ ನಮ್ಮ ಮನೆಯ ಮಣ್ಣಿನ ಗೋಡೆಗಳನ್ನು ಇಲಿಗಳು ಕೊರೆದು ದೊರಗು ಮಾಡಿದ್ದರೆ, ಬಾಗಿಲು-ಕಿಟಕಿ-ಕಂಬಗಳನ್ನು ವರಲೆ ಹುಳುಗಳು ತಿಂದು ಜೀರ್ಣ ಮಾಡಿದ್ದವು.  ಹೆಂಚಿನ ಮಾಡಿಗೆ ಹಾಕಿದ್ದ ಅಡಿಕೆ ದಬ್ಬೆಗಳಂತೂ ಪೂರ್ತಿ ಲಡ್ಡಾಗಿ ಜೋರು ಗಾಳಿಯೋ ಮಳೆಯೋ ಬಂದರೆ ಸೂರೇ ಕಳಚಿ ಬೀಳಬಹುದೆಂಬ ಭಯವೂ ಇತ್ತು. ಮನೆಗೆ ಬಂದ ನೆಂಟರು ಅಕಸ್ಮಾತ್ ಕತ್ತೆತ್ತಿ ಮೇಲೆ ನೋಡಿದರೆ ಬೆಚ್ಚಿ ಬೀಳುವಂತೆ ಮಾಡು ಒಂದು ಕಡೆ ವಾಲಿತ್ತು ಸಹ. ಹೀಗಾಗಿ ಈ ಅಭ್ಯಾಗತರನ್ನು ಭಯಮುಕ್ತಗೊಳಿಸಲು ನಾವು ಬಿಳಿಯ ಸಿಮೆಂಟ್ ಚೀಲಗಳನ್ನು ಹೊಲಿದು ದೊಡ್ಡ ಶೀಟ್ ಮಾಡಿ ಇಡೀ ಮನೆಗೆ ‘ಫಾಲ್ ಸೀಲಿಂಗ್’ ಥರ ಹೊದಿಸಿಬಿಟ್ಟಿದ್ದೆವು. ಜೋರು ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದ್ದ ನೀರು ಈ ಫಾಲ್ ಸೀಲಿಂಗ್ ಮೇಲೆ ಶೇಖರಗೊಂಡು ಅಲ್ಲಲ್ಲೇ ಜೋತುಕೊಂಡಿರುತ್ತಿತ್ತು. ಹಾಗೆ ಶೇಖರಗೊಂಡ ನೀರನ್ನು ನಾವು ಅಲ್ಲಲ್ಲೇ ಒಂದು ದಬ್ಬಣ ಹೆಟ್ಟಿ ಕೆಳಗೆ ಬಕೆಟ್ ಹಿಡಿದು ಬಸಿದುಕೊಳ್ಳುತ್ತಿದ್ದೆವು.

ಅಡಿಕೆಗೆ ರೇಟ್ ಬಂದ ಒಂದು ವರ್ಷ ಅಪ್ಪ ಈ ಮನೆ ಕೆಡವಿ ಹೊಸ ಮನೆ ಕಟ್ಟಿಸುವುದಾಗಿ ಘೋಷಿಸಿದ. ಆಟವಾಡುವಾಗ ಮರಳಿನಲ್ಲೋ, ಮಣ್ಣಿನಲ್ಲೋ, ಕೋಲಿನಿಂದಲೋ ಮನೆ ಕಟ್ಟಿಯಷ್ಟೇ ಗೊತ್ತಿದ್ದ ನನಗೆ, ಹೊಸದೊಂದು ವಾಸದ ಮನೆ ಕಟ್ಟಬೇಕು ಎಂದರೆ ಅದಕ್ಕೆ ಎಷ್ಟು ಹಣ ಬೇಕು, ಅಪ್ಪ ಅದನ್ನು ಎಲ್ಲಿಂದ ಹೊಂದಿಸುತ್ತಾನೆ, ಎಷ್ಟು ಪರಿಶ್ರಮ ಬೇಕು –ಎಂಬ್ಯಾವುದರ ಅರಿವೂ ಇರಲಿಲ್ಲವಷ್ಟೇ? ಆದರೆ ಅಪ್ಪನಿಗೆ ಅದು ಹೇಗೆ ಎಲ್ಲಾ ಕೂಡಿ ಬಂತೋ, ಎರಡು ವರ್ಷದೊಳಗೆ ಹೊಸ ಮನೆ ಎದ್ದು ನಿಂತಿತು.  ಆ ಮನೆ ಕಟ್ಟುವಷ್ಟು ಕಾಲ ನಾವು ಬಾವಿಮನೆಯ ಪುಟ್ಟ ಜಾಗದಲ್ಲಿ ಇದ್ದುದು.  ಹಳೇ ಮನೆ ಕೆಡವುವ ಭಾವಪೂರ್ಣ ಸನ್ನಿವೇಶದಿಂದ ಹೊಸ ಮನೆಗೆ ಒಕ್ಕಲಾಗುವ ಸಂತೋಷದ ಘಳಿಗೆಯವರೆಗೆ ದಿನಗಳು ನೋಡನೋಡುತ್ತ ಕಳೆದವು.  ಫೌಂಡೇಶನ್ ಹಾಕುವುದೇನು, ದಿನವೂ ಕ್ಯೂರಿಂಗ್ ಮಾಡುವುದೇನು, ಮರಳು-ಜಲ್ಲಿಗಳ ಲಾರಿಗಳಿಗೆ ಕಾಯುವುದೇನು, ಮಟಗೋಲಿಟ್ಟು ಅಳೆಯುತ್ತ ಇಟ್ಟಿಗೆಗಳನ್ನು ಜೋಡಿಸುವ ಮೇಸ್ತ್ರಿಯ ಕೆಲಸ ನೋಡುವುದೇನು, ಬಂದವರೆಲ್ಲ ಹೊಸಹೊಸ ಐಡಿಯಾ ಕೊಡುವುದೇನು, ವಾಸ್ತು ಪ್ರಕಾರ ಕಟ್ಟಿ ಅಂತ ಹೆದರಿಸುವವರೇನು, ಕಳ್ಳನಾಟಕ್ಕಾಗಿ ರಾತ್ರಿ ಕಾರ್ಯಾಚರಣೆ ನಡೆಸುವುದೇನು, ವಾಸ್ತುಬಾಗಿಲಿಗೆ ಆಚಾರಿ ಹೂಬಳ್ಳಿ ಕೆತ್ತುವಾಗ ಪಕ್ಕ ನಿಂತು ವೀಕ್ಷಿಸುವುದೇನು, ಸ್ಲಾಬ್ ಹಾಕುವ ದಿನ ನೂರಾರು ಕೆಲಸಗಾರರಿಗೆ ಅಡುಗೆ ಮಾಡುವುದೇನು... ಓಹೋಹೋ! ಮೇಸ್ತ್ರಿಗಳು, ಆಚಾರಿಗಳು, ವೈರಿಂಗಿನವರು, ಟೈಲ್ಸ್ ಹಾಕುವವರು, ಪೇಂಟಿಂಗ್ ಮಾಡುವವರು –ಹೀಗೆ ಬೇರೆಬೇರೆ ವಿಭಾಗದ ಹತ್ತಾರು ಜನಗಳ ಜೊತೆಗೆ ಹೆಣಗಾಡುತ್ತ, ಮನೆ ಕಟ್ಟಿ ಮುಗಿಯಿತು ಎಂಬಷ್ಟರಲ್ಲಿ ‘ಮನೆ ಕಟ್ಟಿ ನೋಡು’ ಅನ್ನೋ ಹಿರಿಯರ ಮಾತು ಅಕ್ಷರಶಃ ಸತ್ಯ ಎಂಬ ಅರಿವು ನಮಗೆಲ್ಲ ಆಗಿತ್ತು. ಅಂತೂ ಅಪ್ಪ ಸಾಧಿಸಿಯೇಬಿಟ್ಟಿದ್ದ. ನೂತನ ಗೃಹಪ್ರವೇಶಕ್ಕೆ ಬಂದವರೆಲ್ಲ ‘ಚನಾಗಿದೆ’, ‘ಸಖತ್ ಪ್ಲಾನ್ ಮಾಡಿ ಕಟ್ಸಿದೀರಿ’, ‘ಎಲ್ಲೂ ಸ್ವಲ್ಪ ಜಾಗಾನೂ ವೇಸ್ಟ್ ಮಾಡಿಲ್ಲ’ ಅಂತೆಲ್ಲ ಹೊಗಳಿ ನಮ್ಮ ಹಿಗ್ಗು ಹೆಚ್ಚಿಸಿದ್ದರು.

ಅಂತೂ ಊರ ಮೊದಲ ಆರ್ಸಿಸಿ ಮನೆಯಾಗಿ ನಮ್ಮ ಮನೆ ಥಳಥಳ ಹೊಳೆಯಿತು. ಹಿಂದೆಯೇ ಕಟ್ಟಲ್ಪಟ್ಟ, ನಮ್ಮ ಮನೆಗಿಂತ ಬೃಹತ್ತಾದ, ಮೆತ್ತು-ಮೇಲ್ಮೆತ್ತುಗಳೂ ಇರುವ, ಆದರೂ ಹಳೇ ಶೈಲಿಯ ಹೆಂಚು ಹೊದಿಸಿದ ನಮ್ಮೂರ ಅನೇಕ ಮನೆಗಳಿಗಿಂತ ನಮ್ಮ ಮನೆಯೇ ಪುಟ್ಟಗೆ ಚೆನ್ನಾಗಿದೆ ಅಂತ ನಮಗೆ ನಾವೇ ಅಂದುಕೊಂಡೆವು. ‘ನಿಮ್ಮನೆ ಹಳ್ಳಿಮನೆ ಥರಾನೇ ಇಲ್ಲ, ಪೇಟೆ ಮನೆ ಇದ್ದಂಗಿದೆ’ ಅಂತ ಯಾರಾದರೂ ಹೇಳಿದರೆ ಅದು ಹೊಗಳಿದ್ದೋ ತೆಗಳಿದ್ದೋ ಗೊತ್ತಾಗದೆ ಒದ್ದಾಡಿದೆವು. ಸಿಮೆಂಟಿನ ಗೋಡೆಗಳಿಗೆ ಕನ್ನ ಕೊರೆಯಲಾಗದೆ ಇಲಿಗಳು ಈಗ ಹಳೆಯ ಕೊಟ್ಟಿಗೆಮನೆ ಸೇರಿದವು. ಪಾಲಿಶ್ ವಾಸನೆಯ ಮರಮಟ್ಟುಗಳು ಗೆದ್ದಲು ಹುಳುಗಳಿಗೆ ಇಷ್ಟವಾಗಲಿಲ್ಲ. ಹೀಗಾಗಿ, ಹಳೇಮನೆಯಲ್ಲಿ ಅನೇಕ ಜೀವಿಗಳೊಂದಿಗೆ ಒಂದಾಗಿ ಸಹಜೀವನ ನಡೆಸುತ್ತಿದ್ದ ನಾವು, ಈ ಹೊಸಮನೆಯಲ್ಲಿ ಮನುಷ್ಯರು ಮಾತ್ರ ಜೀವಿಸುವಂತಾಯ್ತು. ನಮ್ಮ ಪುಣ್ಯಕ್ಕೆ ಒಂದೆರಡು ತಿಂಗಳಲ್ಲಿ ಹಲ್ಲಿಗಳೂ, ನೊಣಗಳೂ ಮನೆಯೊಳಗೆ ಸೇರಿಕೊಂಡು ನಮಗೆ ಕಂಪನಿ ಕೊಟ್ಟವು.

‘ದಟ್ಟ ಹಸಿರು-ಅಲ್ಲಲ್ಲಿ ಮನೆ’ ಎಂಬಂತಿರುವ ಹಳ್ಳಿಯಿಂದ, ‘ಎಲ್ಲೆಲ್ಲೂ ಮನೆಗಳು-ಅಲ್ಲಲ್ಲಿ ಹಸಿರು’ ಎಂಬಂತಿರುವ ನಗರಕ್ಕೆ ಬಂದಮೇಲೆ ಮನೆಗಳ ಬಗ್ಗೆ ಇರುವ ನನ್ನ ಕಲ್ಪನೆಯೇ ಬದಲಾಯಿತು. ಮನೆ ಎಂದರೆ ಬರೀ ಕಟ್ಟಡವಲ್ಲ, ಅದೊಂದು ಸಜೀವ ಭಾವಕೋಶ ಎಂದುಕೊಂಡಿದ್ದ ನನ್ನ ಊಹನೆಯನ್ನು ತೊಡೆದುಹಾಕಿದ್ದು ಈ ನಗರ. ಮನೆ ಎಂದರೆ ಕಳೆ ತುಂಬಿದ ಅಂಗಳ, ಜಗುಲಿಯ ಟೇಬಲ್ಲಿನ ಮೇಲಿನ ಕವಳದ ಹರಿವಾಣ, ನಡುಮನೆಯ ಕತ್ತಲು, ಅಡುಗೆಮನೆ ಗ್ಯಾಸ್ಕಟ್ಟೆ ಮೇಲೆ ಕೂತು ಹೇಳಿದ ಕತೆ, ಬೆಡ್ರೂಮಿನ ಮಂಚದ ಕೆಳಗೆ ಪೇರಿಸಿರುವ ಚೀನೀಕಾಯಿ, ಹಿತ್ತಿಲ ಕಟ್ಟೆಯ ಹರಟೆಗೆ ಸಾಥಿಯಾಗುವ ತಂಗಾಳಿ, ಬಾವಿಯ ನೀರಲ್ಲಿ ಪ್ರತಿಫಲಿತ ಗಡಗಡೆಯ ಬಿಂಬ, ಕೊಟ್ಟಿಗೆಯಲ್ಲಿನ ಹೊಸ ಪುಟ್ಟಿಕರುವಿನ ಜಿಗಿತ, ಅಟ್ಟದ ಕಂಬಕ್ಕೆ ಸಿಕ್ಕಿಸಿದ ಕುಡುಗೋಲು ...ಎಂಬೆಲ್ಲ ಚಿತ್ರಗಳನ್ನು ಅಳಿಸಿಹಾಕಿ, ಮನೆ ಎಂದರೆ ಒಂದೋ-ಎರಡೋ-ಮೂರೋ ಬಿ‌ಎಚ್ಕೆಗಳಲ್ಲಿ ಅಳೆಯಲ್ಪಡುವ, ಬಾಡಿಗೆಗೆ ಕೊಡಲೆಂದೇ ಕಟ್ಟಿಸಿದ ಬೆಂಕಿಪೊಟ್ಟಣಗಳಂತ ಅಚೇತನ ನಿಕೇತನಗಳು ಎಂಬ ವಿಷಯ ಅರಗಿಸಿಕೊಳ್ಳಲೇ ಕಷ್ಟವಾಗಿತ್ತು.

ಆದರೆ ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವುದೇ ಮನುಷ್ಯನ ಸ್ವಭಾವವಲ್ಲವೇ? ಹೀಗಾಗಿ ದುಡಿಮೆಯ ಜಿದ್ದಿಗೆ ಬಿದ್ದು ನಗರ ಸೇರಿದ ನಾನೂ ಈ ಪುಟ್ಪುಟ್ಟ ಮನೆಗಳಲ್ಲೇ ಸೌಂದರ್ಯ ಹುಡುಕುವ ಅನಿವಾರ್ಯತೆಗೆ ಸಿಲುಕಿದೆ. ಬಾಡಿಗೆ ಮನೆಗೆಂದು ಬೀದಿಬೀದಿ ಅಲೆಯುವ, ಟು-ಲೆಟ್ ಬೋರ್ಡುಗಳನ್ನು ದೂರದಿಂದಲೇ ಗುರುತಿಸುವ, ರಿಯಲ್ ಎಸ್ಟೇಟ್ ಏಜೆಂಟುಗಳ ಜತೆ ಗುದ್ದಾಡುವ, ಓನರುಗಳ ಜತೆ ವ್ಯವಹರಿಸುವ, ಒಂದು ಮನೆಯಿಂದ ಮತ್ತೊಂದು ಮನೆಗೆ ಆಗಾಗ ಪೆಟ್ಟಿಗೆ ಕಟ್ಟುವ ಜಾಣ್ಮೆ ಬೆಳೆಸಿಕೊಂಡೆ. ಹೀಗೆ ಮನೆಯೊಂದನ್ನು ಪ್ರವೇಶಿಸುವಾಗ ಯಾರೋ ತೊಟ್ಟು ಬಿಟ್ಟ ಬಟ್ಟೆ ತೊಡುತ್ತಿದ್ದೇನೆ ಎನ್ನುವಂತ ಅವಮಾನವೇನೂ ಆಗುತ್ತಿರಲಿಲ್ಲ. ಈ ಮನೆಗಳೂ ಈಗಾಗಲೇ ಯಾರ್ಯಾರೋ ಇದ್ದು ಹೋಗಿದ್ದ ಜಾಗವಿದು ಎಂಬ ಲಕ್ಷಣಗಳನ್ನೆಲ್ಲ ತೊಡೆದುಹಾಕುವಂತೆ ಒಮ್ಮೆ ಬಣ್ಣ ಹೊಡೆಸಿಕೊಂಡು, ಸಣ್ಣ-ಪುಟ್ಟ ರಿಪೇರಿ ಮಾಡಿಸಿಕೊಂಡು ಚಂದ ಪ್ರಸಾದನಕ್ಕೊಳಗಾಗಿ ಹೊಸ ಅತಿಥಿಯನ್ನು ಸ್ವಾಗತಿಸುವವು.  ನಗರಕ್ಕೆ ಬ್ಯಾಚುಲರ್ರಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ, ಟೆರೇಸಿನ ಮೇಲಿನ ಒಂಟಿಕೋಣೆಯಿಂದ ಗ್ರೌಂಡ್ ಫ್ಲೋರಿನ ಥ್ರೀ ಬಿ‌ಎಚ್ಕೆ ಮನೆಯವರೆಗೆ, ಒಂಟಿಯಿಂದ ಜಂಟಿಯಾಗಿ ಮಕ್ಕಳೊಂದಿಗನಾಗಿ ಸಂಸಾರವನ್ನು ಬೆಳೆಸುತ್ತ ಸದೃಢನಾಗುತ್ತ ಹೋಗುವುದನ್ನು ಈ ನಿರ್ಜೀವ ಕಟ್ಟಡಗಳು ತಮ್ಮ ಸಿಮೆಂಟಿನ ಕಣ್ಣುಗಳಿಂದ ನೋಡುವವು.  ಬರೀ ಒಂದು ಚಾಪೆ, ಬಟ್ಟೆಗಂಟು, ನಾಲ್ಕು ಪಾತ್ರೆಗಳೊಂದಿಗೆ ಶುರುವಾಗಿದ್ದ ಅವನ ಜೀವನ, ಬೆಳೆಯುತ್ತ ಬೆಳೆಯುತ್ತ ಒಂದು ಲಾರಿಯಲ್ಲಿ ಹಿಡಿಸಲಾಗದಷ್ಟು ಸಾಮಗ್ರಿಗಳ ಆಗರವಾಗುವುದಕ್ಕೆ ನಗರದ ಮನೆಗಳು ಸಾಕ್ಷಿಯಾಗುವವು.

ಮತ್ತು ಹಾಗೆ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ವರ್ಗವಾಗುತ್ತ ಈಗ ಗ್ರೌಂಡ್ ಫ್ಲೋರಿನ ಮನೆಯಲ್ಲಿರುವ ಈತನ ಮುಂದಿನ ವಾಸ್ತವ್ಯ ‘ಸ್ವಂತ ಮನೆ’ಯಲ್ಲಿ ಎಂಬುದೂ ಸ್ಪಷ್ಟ. ‘ಪ್ರತಿ ಸಲ ಮನೆ ಬದಲಿಸ್ಬೇಕಾದ್ರೂ ಸಾಮಾನು ಸೇರ್ಸೀ ಸೇರ್ಸೀ ಸಾಕಾಯ್ತು ನಂಗೆ.. ಇನ್ನೊಂದ್ ವರ್ಷ ಬಿಟ್ಟು ನೀವು ಮತ್ತೆ ಶಿಫ್ಟ್ ಮಾಡ್ತೀನಿ ಅಂದ್ರೆ ನಾನಂತೂ ಬರಲ್ಲ. ಸ್ವಂತ ಮನೆ ಮಾಡಿ, ಪರ್ಮನೆಂಟಾಗಿ ಒಕ್ಕಲಾಗೋಣ’ ಎಂಬ ಹೆಂಡತಿಯ ಚಿತಾವಣೆಗೆ ಮಣಿದ ಗಂಡ ನಿಧಾನಕ್ಕೆ ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ಸೇವಿಂಗ್ಸ್ ಇದೆ, ಚೀಟಿ ಹಣ ಎಷ್ಟು ಬರಬಹುದು, ನನ್ನ ಯೋಗ್ಯತೆಗೆ ಎಷ್ಟು ಸಾಲ ಸಿಗಬಹುದು ಎಂಬೆಲ್ಲ ಲೆಕ್ಕಾಚಾರಕ್ಕೆ ಬೀಳುತ್ತಾನೆ.  ‘ಈಗೆಲ್ಲಾ ಸೈಟ್ ತಗೊಂಡು ಮನೆ ಕಟ್ಟಿಸಿ ಉದ್ಧಾರ! ಅಲ್ಲದೇ ಸೈಟ್ ಸಿಕ್ಕರೂ ಅದು ನಗರದ ಹೊರಭಾಗದಲ್ಲಿ ಸಿಗೋದು. ಅಲ್ಲಿ ಮನೆ ಕಟ್ಟಿಕೊಂಡು ಅಷ್ಟೆಲ್ಲ ದೂರದ ಆಫೀಸಿಗೆ ಈ ಟ್ರಾಫಿಕ್ಕಲ್ಲಿ ದಿನಾ ಓಡಾಡ್ತೀಯಾ? ಸುಮ್ನೇ ಒಂದು ಫ್ಲಾಟ್ ತಗೋ. ಈ ಬಾಡಿಗೆ ಕಟ್ಟೋ ದುಡ್ಡಲ್ಲೇ ಸಾಲದ ಕಂತು ಕಡ್ಕೊಂಡು ಹೋದ್ರೆ ಆಯ್ತು’ ಎಂಬ ಗೆಳೆಯರ ಸಲಹೆ ಇವನನ್ನು ಯೋಚಿಸುವಂತೆ ಮಾಡುತ್ತದೆ. ನಿಜವಾಗಿಯೂ ಫ್ಲಾಟ್ ಕೊಳ್ಳುವಷ್ಟು ಹಣ, ಆಮೇಲೆ ಆ ಸಾಲ ತೀರಿಸುವಷ್ಟು ಶಕ್ತಿ ತನ್ನಲ್ಲಿದೆಯಾ ಎಂಬ ವಿಶ್ಲೇಷಣೆಗೆ ತೊಡಗುತ್ತಾನೆ. ದಿನವೂ ನ್ಯೂಸ್ಪೇಪರುಗಳಲ್ಲಿ ನೋಡಿ ಉಪೇಕ್ಷಿಸುತ್ತಿದ್ದ ಜಾಹೀರಾತುಗಳೆಡೆಗೆ ಕಣ್ಣು ಹಾಯುತ್ತದೆ. ಯಾರೋ ಎಲ್ಲೋ ಮನೆ ಖರೀದಿಗಿದೆ ಎಂದಾಗ ಕಿವಿ ನೆಟ್ಟಗಾಗುತ್ತದೆ.

ನಗರದ ತುಂಬ ಮಾರಲೆಂದೇ ಕಟ್ಟಿದ ಅಪಾರ್ಟ್ಮೆಂಟುಗಳು, ಬಾಡಿಗೆ ಕೊಡಲೆಂದೇ ಕಟ್ಟಿದ ಮನೆಗಳ ನಡುವಿನ ರಸ್ತೆಯಲ್ಲಿ ನಿರಾಶ್ರಿತ ಉದ್ಯೋಗಾಕಾಂಕ್ಷಿ ಒಂಟಿಯಾಗಿ ನಡೆಯುತ್ತಾನೆ. ಪಾರ್ಕಿನ ಬೆಂಚಿನ ಮೇಲೆ ಕೂತು, ಅಲ್ಲೇ ಪಕ್ಕದ ಮರದ ಮೇಲೆ ಹೊಸ ಗೂಡು ಕಟ್ಟುತ್ತಿರುವ ಹಕ್ಕಿಯೊಂದರ ಚುರುಕು ಕೆಲಸ ನೋಡುತ್ತಾನೆ. ಚಿಲಿಪಿಲಿಗುಟ್ಟಲೂ ಸಮಯವಿಲ್ಲವೆಂಬಂತೆ ಹೊಂಚಿ ತಂದ ಕಡ್ಡಿಗಳನ್ನು ಜೋಡಿಸಿ ಹೊಲಿಯುವಲ್ಲಿ ನಿರತವಾಗಿರುವ ಹಕ್ಕಿ, ಆ ಗಡಿಬಿಡಿಯಲ್ಲೂ ಓರೆಗಣ್ಣಲ್ಲಿ ಇವನೆಡೆಗೆ ನೋಡುತ್ತದೆ. ಆ ನೋಟದಿಂದ, ಚಿಕ್ಕವನಿದ್ದಾಗ ಹಕ್ಕಿ ಹಿಡಿಯಲು ತನ್ನೊಂದಿಗೆ ಕಾಡಿಗೆ ಬರುತ್ತಿದ್ದ ಗೆಳೆಯನ ನೆನಪಾಗುತ್ತದೆ. ಕಳೆದ ಸಲ ಊರಿಗೆ ಬಂದಾಗ ಫೋನ್ ನಂಬರ್ ಕೊಟ್ಟುಹೋಗಿದ್ದು ಹೊಳೆದು, ಪಾಕೀಟಿನಲ್ಲಿ ತಡಕಾಡಿ, ಅಲ್ಲೇ ಕಾಯ್ನ್ ಬೂತಿನಿಂದ ಒಂದು ಫೋನ್ ಮಾಡಿಯೇಬಿಡುತ್ತಾನೆ. ‘ಬಾರೋ ಗೆಳೆಯಾ... ಕೆಲಸ ಸಿಕ್ಕು ಬಾಡಿಗೆ ಮನೆ ತೆಗೆದುಕೊಳ್ಳುವಷ್ಟು ಚೈತನ್ಯ ಬರುವವರೆಗೂ ನಮ್ಮನೆಯಲ್ಲೇ ಇರು. ಸ್ವಲ್ಪಾನೂ ಸಂಕೋಚ ಪಟ್ಕೋಬೇಡ’ ಎಂಬ ಭರವಸೆ ಅತ್ತಲಿಂದ ಸಿಕ್ಕಿದ್ದು ಈತನ ಮುಖಭಾವದಿಂದಲೇ ಗೊತ್ತಾಗುತ್ತದೆ. ಎಲ್ಲ ಹಕ್ಕಿಗಳಿಗೂ ಗೂಡು ಕಲ್ಪಿಸುವ ಈ ನಗರದ ಅಗಾಧತೆ ಮತ್ತು ಇನ್ನೂ ಉಳಿದುಕೊಂಡಿರುವ ಆತ್ಮೀಯತೆಯೆಡೆಗೆ ಬೆರಗಾಗುತ್ತದೆ. ಪಾರ್ಕಿನ ಮರದ ಹಕ್ಕಿಯೆಡೆಗೆ ಕೃತಜ್ಞತೆಯಲ್ಲಿ ಕಣ್ಣು ಮಿಟುಕಿಸುತ್ತಾನೆ.

ನಗರದ ಏಕತಾನತೆ ಎಲ್ಲರಿಗೂ ಈಗ ಬೇಸರ ತಂದಿದೆ. ಮೊನ್ನೆ ಹೆಂಡತಿ ಹೇಳುತ್ತಿದ್ದಳು: ‘ಇನ್ನೊಂದಷ್ಟು ವರ್ಷ ಇಲ್ಲಿದ್ದು ದುಡ್ಡು ಮಾಡಿಕೊಂಡು ಊರಿಗೆ ಹೋಗಿಬಿಡೋಣ. ಹೇಗೂ ನಿಮ್ಮಪ್ಪ ಕಟ್ಟಿಸಿದ ಮನೆ ಗಟ್ಟಿಮುಟ್ಟಾಗಿ ಚೆನ್ನಾಗಿದೆ. ಅದರ ಮೇಲೆ ಇನ್ನೊಂದು ಫ್ಲೋರ್ ಕಟ್ಟಿಸಿ ಮೇಲೆ ಹೆಂಚು ಹೊದಿಸೋಣ. ಮತ್ತೆ ಆರ್ಸಿಸಿ ಬೇಡ. ಹಳ್ಳಿಮನೆ ಅಂದ್ರೆ ಹಳ್ಳಿಮನೆ ಥರಾನೇ ಇರ್ಬೇಕು. ಬೇಕಿದ್ರೆ ಪಕ್ಕದಲ್ಲಿ ಒಂದು ಸೋಗೆಯ ಗುಡಿಸಲು ಕಟ್ಟಿಸಿ ಹೋಮ್ಸ್ಟೇ ಶುರು ಮಾಡೋಣ. ಈಗಂತೂ ಈ ಪೇಟೆ ಮಂದಿಗೆ ಹಸಿರು-ನೀರು-ಮಣ್ಣು ರಸ್ತೆ ಇರೋ ಹಳ್ಳಿಗಳಿಗೆ ಹೋಗಿ ಗುಡಿಸಲುಗಳಂತಹ ಮನೆಯಲ್ಲಿ ಇದ್ದು ವೀಕೆಂಡ್ ಕಳೆದು ಬರೋದು ಶೋಕಿಯಾಗಿಬಿಟ್ಟಿದೆ. ಒಂದು ವೆಬ್ಸೈಟ್ ಮಾಡಿ ಸ್ವಲ್ಪ ಪ್ರಚಾರ ಕೊಟ್ರೆ ಆಯ್ತು’ ಅಂತ.

ಹತ್ತಾರು ವರ್ಷದ ಹಿಂದೆ, ಊರಿಗೆ ಒಂದೇ ಆರ್ಸಿಸಿ ಮನೆ ಅಂತ ನಾವು ಖುಷಿ ಪಟ್ಟಿದ್ದು ನೆನಪಾಯಿತು. ಈಗ ಊರಲ್ಲೂ ಅನೇಕ ಹೊಸಮನೆಗಳು ಎದ್ದುನಿಂತಿವೆ. ಒಂದೆಡೆ ಆಧುನಿಕತೆಯ ಹೆಸರಲ್ಲಿ ತಳುಕು-ಬಳುಕು ಮೆರೆಯುತ್ತಿದ್ದರೆ, ಇನ್ನೊಂದೆಡೆ ಪುರಾತನಕ್ಕೆ ಮರಳುವ – ಅದೇ ಚಂದ ಎಂದು ಹೇಳುವ ಮನಸುಗಳೂ ಜಾಸ್ತಿಯಾಗುತ್ತಿವೆ. ಗಗನಚುಂಬಿ ಕಟ್ಟಡಗಳು, ಇಟಾಲಿಯನ್ ಸ್ಟೈಲ್ ಕಿಚನ್, ಫಳಫಳ ಗ್ರಾನೈಟ್ ನೆಲಹಾಸು, ಪಿಂಗಾಣಿಯ ಸಿಂಕು, ಬಿಳಿಬಿಳಿ ಬಚ್ಚಲಲ್ಲಿನ್ನ ಬಾತ್ಟಬ್ಬು, ಇತ್ಯಾದಿಗಳ ಮೆರವಣಿಗೆಯ ಜತೆಜತೆಯಲ್ಲೇ, ಹಳ್ಳಿಯ ಸಾದಾಸೀದಾ ಮನೆಗಳು, ಮರದ ಕೆತ್ತನೆ ಕಂಬಗಳು, ಕೆಂಪು ಗಾರೆ ನೆಲ, ಮಾಳಿಗೆಯ ಮುಚ್ಚಿಗೆ, ಬಚ್ಚಲ ಹಂಡೆಯ ನೀರು, ಹಳೆಯ ಪೀಠೋಪಕರಣಗಳಿಂದ ಕೂಡಿದ ತಾವುಗಳೆಡೆಗಿನ ಆಕರ್ಷಣೆ ಹೆಚ್ಚಾಗುತ್ತಿದೆ. ಸರಳತೆಯಲ್ಲೇ ಮನೆಗಳಿಗೊಂದು ಆಪ್ತತೆ ಬರುತ್ತದೆ ಎಂಬ ಭಾವ ಮತ್ತಷ್ಟು ದೃಢವಾಗುತ್ತಿದೆ.

ಅಪ್ಪನಿಗೆ ಫೋನ್ ಮಾಡಿ ಹೆಂಡತಿ ಹೇಳಿದ ವಿಚಾರ ಅರುಹುತ್ತೇನೆ. ‘ಈಗ ಇರೋ ಮನೇನೆ ಗುಡಿಸಿ-ಸಾರಿಸಿ ಮಾಡೋರ್ ಇಲ್ಲ, ಇನ್ನು ಮೇಲೆ ಬೇರೆ ಕಟ್ಟಿಸಿದ್ರೆ ಏನೋ ಗತಿ?’ ಅಂತ ಕೇಳುತ್ತಾನೆ. ‘ತಾಳು ತಾಳು, ಅದೆಲ್ಲಾ ಬೇರೇನೇ ಪ್ಲಾನ್ ಇದೆ’ ಅಂತಂದು ನಗುತ್ತಾ ನಾನು ಫೋನ್ ಇಡುತ್ತೇನೆ.  ಈ ಸಂಭಾಷಣೆಯನ್ನು ಕದ್ದಾಲಿಸಿದ ಅಡುಗೆ ಮನೆಯ ಮೂಲೆಯಲ್ಲಿದ್ದ ಒಂದಷ್ಟು ಇರುವೆಗಳು ಎಲ್ಲಿ ತಮಗೆ ಶಿಕ್ಷೆಯಾಗುತ್ತದೋ ಎಂಬ ಭಯಕ್ಕೊಳಗಾದಂತೆ ಚುರುಕಾಗಿ ಓಡಿ ಗೂಡು ಸೇರಿಕೊಳ್ಳುತ್ತವೆ.

[ವಿಶ್ವವಾಣಿ 'ವಿರಾಮ'ದ 'ಮನೆ' ಬಗೆಗಿನ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.]