Monday, August 30, 2010

ಆಗಸ್ಟ್ ತಿಂಗಳೇ ಹೀಗೆ

ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ
ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ
ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು
ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು
ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ
ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ
ಈ ಆಗಸ್ಟ್ ತಿಂಗಳೇ ಹೀಗೆ

ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ
ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು
ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ
ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು
ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು
ಛೇ, ಈ ಆಗಸ್ಟ್ ತಿಂಗಳೇ ಹೀಗೆ

ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು
ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್‌ಪಾಸ್ ಕೆಳಗೆ ಕಾಮಕೇಳಿ
ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ
ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ
ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ

ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾ‌ಎಂಟು ಸಲ ಸ್ನಾನ
ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ
ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ
ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ
ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ
ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ
ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ.

Thursday, August 26, 2010

ಆಮ್‌ಲೆಟ್ಟು -೨

ಆಮ್ಲೆಟ್ ಆಗದ ಒಂದು ಮೊಟ್ಟೆ
ತಾನೂ ಕವಿತೆಯಾಗುತ್ತೇನೆ ಎಂದಿತು
ಪರ್ಮನೆಂಟ್ ಮಾರ್ಕರ್ ಪೆನ್ನಿನಿಂದ
ಅದಕ್ಕೆ ಕಣ್ಣು ಮೂಗು ಬಾಯಿ ಬರೆದು
ಶೋಕೇಸಿನಲ್ಲಿಟ್ಟು

ದೋಶಮುಕ್ತನಾಗಲು ತೀರ್ಥಯಾತ್ರೆಗೆ ಹೊರಟೆ
ವಾಪಸು ಬಂದು ನೋಡಿದರೆ
ಅಂಗಳದ ತುಂಬ ಪುಟ್ಟಪುಟ್ಟ ಮರಿಗಳು
ಕಿಂವ್‌ಕಿಂವ್‌ಕಿಂವ್‌ಕಿಂವ್ ಗಲಾಟಿ
ಯಾವುದೋ ಒಂದು ಮರಿ ಎತ್ತಿಕೊಂಡು
ಹೆಸರೇನು ಕೇಳಿದೆ
ಕವಿತೆ ಅಂತ ಹೇಳಿತು

ಒಳಗೆ ಹೋಗಿ ನೋಡಿದರೆ
ಮುಖ ಒಡೆದು ಚೂರಾಗಿ
ಶೋಕೇಸೆಲ್ಲ ರಾಡಿ.
ಕಾಲಿಗೆ ಬಂದು ಮುತ್ತಿಕೊಳ್ಳುವ ಮರಿಗಳನ್ನು ನೋಡುತ್ತ
ಒಂದು ಮೊಟ್ಟೆಯೊಳಗೆ ಒಂದೇ ಕೋಳಿ
ಒಂದು ಕೋಳಿಯಿಂದ ನೂರಾರು ಮೊಟ್ಟೆ
ಅಂತೆಲ್ಲ ಬರೆಯಬಹುದು ಎಂದುಕೊಂಡೆ,
ಅಂತೂ ಚರ್ಚೆ ಮುಗಿಸಿದ ಮಹಾನುಭಾವರು ಹೊರಬಂದು
ಹೋಯ್, ಭಾರೀ ಲಾಯ್ಕಿವೆಯೋ ಮರಿಗಳು
ಎಂದರು.

Monday, August 23, 2010

ಆಮ್‌ಲೆಟ್ಟು

ಮೊಟ್ಟೆ ವೆಜ್ಜೋ ನಾನ್ವೆಜ್ಜೋ ಎಂಬ
ಕುರಿತು ನಿನ್ನೆ ಆದ ಭಾರೀ ಚರ್ಚೆ
ಯಲ್ಲಿ ನಾನು ಭಾಗವಹಿಸಲಿಲ್ಲ.
ಕಾರಣ ಇಷ್ಟೇ:
ಸ್ವಲ್ಪ ಅಬ್ಬೊತ್ತಿದರೂ ಒಡೆದು
ಹೋಗಿಬಿಡುತ್ತದೇನೋ ಎನಿಸುವ ಮೊಟ್ಟೆಯ
ತಲೆಯನ್ನಷ್ಟೇ ಚಮಚೆಯಿಂದ ತಟ್ಟಿ ಒಡೆದು
ಹಾರಿಸುವ ಕಾರ್ಯದಲ್ಲಿ ನಾನು ಗರ್ಕನಾಗಿದ್ದೆ.
ಅದರೊಡಲ ಸರ್ವಸಾರವನ್ನೂ
ಬಸಿದು ಲೋಟಕೆ ಪುಳಕ್ಕನೆ
ಈರುಳ್ಳಿ-ಮೆಣಸಿನಕಾಯಿಗಳೊಂದಿಗೆ ಇಷ್ಟೇ
ಉಪ್ಪು ಹಾಕಿ ಲೊಳಲೊಳ ಕಲಸಿ
ಹೊಯ್ದು ಚೊಂಯನೆ ಕಾದ ಕಾವಲಿಯ ಮೇಲೆ
ಇಷ್ಟಗಲವಾಪ ಭೂಪಟದ್ಯಾವುದೋ ಖಂಡದಂತ
ದೋಸೆಯನ್ನು ಬಿಸಿಬಿಸಿ ಸವಿಯುವ
ನನ್ನಿಷ್ಟದ ಕೈಂಕರ್ಯದಲ್ಲಿ ನಿಮಗ್ನನಾಗಿದ್ದೆ.

ಜಗುಲಿಯಲ್ಲಿಯ ಮಾತು ಕೇಳಿಸುತ್ತಿತ್ತು:
ರಕ್ತವಿರುವುದಿಲ್ಲ, ಹಾಗಾಗಿ ತಿನ್ನಲಡ್ಡಿಯಿಲ್ಲ ಎಂದರು ಯಾರೋ.
ಮತ್ಯಾರೋ ಅಂದರು,
ಸಸ್ಯಜನ್ಯವಾಗಿದ್ದರೆ ಮಾತ್ರ ಅದು ಸಸ್ಯಾಹಾರ
ಅಲ್ಲದೇ,
ಯಾವ ಜಾತಿಯವರ ಮನೆಯ ಕೋಳಿಯೋ ಏನೋ
ಏನು ತಿಂದು ಬೆಳೆದಿತ್ತೋ ಏನೋ
ಎಂಥ ಹುಂಜವ ಕೂಡಿತ್ತೋ ಏನೋ
ಈಯ್ದು ಎಷ್ಟು ದಿನವಾಯ್ತೋ ಏನೋ
ಇಂಥ ಕುಲ-ಜಾತಿ-ಭೂತಗಳ ತಿಳಿಯದ
ಪದಾರ್ಥ ಸೇವನೆಗೆ ವರ್ಜ್ಯವೇ ಸರಿ
ಎಂಬ ತೀರ್ಮಾನಕ್ಕೆ ಅವರು ಬರುವಷ್ಟರಲ್ಲಿ

ನಾನು ತೇಗಿ, ಆಹ್, ಅದ್ಭುತವಾಗಿತ್ತು ಆಮ್ಲೆಟ್ಟು
ಎಂದದ್ದಕ್ಕೆ ಎಲ್ಲರೂ ತಿರುಗಿ ನನ್ನನ್ನೇ
ನೋಡಿದರು.
ಅಂಡಾಕೃತಿಯ ಅವರ ತಲೆಯ
ಮೇಲುಳಿದಿದ್ದ ಕೆಲವೇ ಕೂದಲುಗಳೂ
ನಿಮಿರಿ ನಿಂತಿದ್ದನ್ನು ನಾನು ಗಮನಿಸಿದೆ.

Tuesday, August 10, 2010

ಕೀರಂ, ಬೇಂದ್ರೆ, ಸಿದ್ದಲಿಂಗಯ್ಯ ಮತ್ತು ಮಂಜು ಮುಚ್ಚಿದ ಮುಳ್ಳಯ್ಯನ ಗಿರಿ

ಮೆಜೆಸ್ಟಿಕ್ಕಿನ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಒಟ್ಟೊಟ್ಟಿಗೆ ಐದಾರು ಗೆಳೆಯರ ಎಸ್ಸೆಮ್ಮೆಸ್ಸುಗಳು ಬಂದವು. ಎಲ್ಲದರಲ್ಲೂ ಇದ್ದಿದ್ದು ಒಂದೇ ಸಾಲು: ಕಿ.ರಂ. ನಾಗರಾಜ್ ಇನ್ನಿಲ್ಲ. ಮುಳ್ಳಯ್ಯನಗಿರಿಯ ಚಾರಣಕ್ಕೆಂದು ಹೊರಟಿದ್ದ ನಾನು ಹನ್ನೊಂದು ಗಂಟೆಗಿದ್ದ ಚಿಕ್ಕಮಗಳೂರಿನ ಬಸ್ ಕಾಯುತ್ತ ನಿಂತಿದ್ದೆ. ಈ ಎಸ್ಸೆಮ್ಮೆಸ್ಸುಗಳನ್ನು ಓದುತ್ತಿದ್ದಂತೆ ನಾನು ನಿಂತಿದ್ದ ಸ್ಥಳ, ಸುತ್ತಲಿದ್ದ ಜಂಗುಳಿ, ಗಂಟಲು ಸರಿ ಮಾಡಿಕೊಳ್ಳುತ್ತಿದ್ದ ಮೈಕು, ಬರಬೇಕಿದ್ದ ಬಸ್ಸು, ಇನ್ನೂ ಕೂಡಿಕೊಳ್ಳಬೇಕಿದ್ದ ಗೆಳೆಯರು -ಎಲ್ಲಾ ಅರೆಕ್ಷಣ ಮಾಯವಾಗಿ, ಕಣ್ಮುಂದೆ ಜಟೆ ಹರಡಿದ ಕೀರಂರ ಮುಖ, ಕಿವಿಯಲ್ಲಿ ಅವರ ಸಣ್ಣ ಒಡಕಲು ದನಿ ತುಂಬಿಕೊಂಡವು.

ಪ್ರಣತಿಯ ಬ್ಲಾಗರ್ಸ್ ಮೀಟ್‌ನಲ್ಲಿ ಮಾತಾಡುತ್ತಿರುವ ಕಿ.ರಂ. ನಾಗರಾಜ್
ಈ ಕೀರಂರ ಬಗ್ಗೆ ರಶೀದ್ ತಮ್ಮ ಮೈಸೂರ್‌‍ ಪೋಸ್ಟ್ ಬ್ಲಾಗಿನಲ್ಲಿ ಬರೆದಿದ್ದು ಓದಿದ್ದೆ. ಒಮ್ಮೆ ಮಂಗಳೂರಿಗೆ ಬಂದಿದ್ದ ಕೀರಂರನ್ನು ರಶೀದ್ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಕಡಲು ತೋರಿಸಲು ಕರೆದೊಯ್ದದ್ದು, ಅಲ್ಲೊಂದು ಮುಳುಗಿದ ಹಡಗು ತೋರಿಸಿದ್ದು, ಅದ್ಯಾವುದೋ ಮೀನಿನ ಕಥೆ ಹೇಳಿದ್ದು, ಆ ಮೀನು ಹೆಕ್ಕಿಕೊಂಡು ಬರುವ ಮೊಹಮ್ಮದ್ ಅಲಿ ಎಂಬ ಪಾತ್ರ, ಇವನ್ನೆಲ್ಲ ಪುಟ್ಟ ಹುಡುಗನಂತೆ ನೋಡುತ್ತ ನಿಂತಿದ್ದ ಕೀರಂ.. ಆ ಬರಹ ಎಷ್ಟು ಚೆನ್ನಾಗಿತ್ತೆಂದರೆ, ನನಗೆ ಕೀರಂ ಎಂದರೆ ಕಡಲನ್ನು ನೋಡುತ್ತ ನಿಂತ ಪುಟ್ಟ ಬಾಲಕ ಎಂಬ ಚಿತ್ರವೇ ಮನಸಲ್ಲಿ ಅಚ್ಚಾಗಿಹೋಗಿತ್ತು. ಮುಂದೆ ಕೀರಂ ನಾವು ಪ್ರಣತಿಯಿಂದ ಆಯೋಜಿಸಿದ್ದ ಬ್ಲಾಗರ್ಸ್ ಮೀಟ್‌ಗೆ ಅಭ್ಯಾಗತರಂತೆ ಬಂದುಬಿಟ್ಟಿದ್ದರು. ನಮಗೋ ಭಯ: ಮೊದಲೇ ಚಿಕ್ಕದೊಂದು ಹಾಲ್ ಬುಕ್ ಮಾಡಿಕೊಂಡು ನೂರಾರು ಜನರನ್ನು ಕರೆದುಬಿಟ್ಟಿದ್ದೇವೆ, ಈಗ ಇಂತಹ ಹಿರಿಯರೆಲ್ಲ ಬಂದುಬಿಟ್ಟರೆ, ಹಾಲ್ ತುಂಬಿಹೋಗಿಬಿಟ್ಟರೆ, ಇವರನ್ನೆಲ್ಲ ಎಲ್ಲಿ ಕೂರಿಸೋದಪ್ಪ ಅಂತ.. ಆದರೆ ಕೀರಂ ಮಾತ್ರ ಸಭೆಯೊಳಗೆ ಎಲ್ಲರಂತೆ ಕೂತಿದ್ದು, ಕೊನೆಗೆ ಚರ್ಚೆಯ ಸಮಯ ಬಂದಾಗ ಮುಂದೆ ಹೋಗಿ, ಸರಳ ಕನ್ನಡದ ಕುರಿತೇನೋ ತಮ್ಮ ಒಡಕಲು ದನಿಯಲ್ಲಿ ಮಾತಾಡಿದ್ದರು. ಆಗಲೂ ಅವರು ನನಗೆ ಪುಟ್ಟ ಹುಡುಗನಂತೆಯೇ ಕಂಡಿದ್ದರು. ಮತ್ತೊಮ್ಮೆ ಮೇಫ್ಲವರಿನಲ್ಲಿ ಲಂಕೇಶ್ ಬಗ್ಗೆ ಮಾತಾಡುವಾಗ - ನಾನು ತೀರ ಅವರ ಹತ್ತಿರದಲ್ಲೇ ಕೂತಿದ್ದೆ, ಅವರು ನಗುವಾಗಲೂ ಪುಟ್ಟ ಹುಡುಗಂತೆಯೇ ಕಾಣುತ್ತಾರೆ ಅಂತ ಅವತ್ತು ನಂಗೆ ತುಂಬ ಅನಿಸಿತ್ತು. ಆಮೇಲೆ ಅವರು ಛಂದ ಕಾರ್ಯಕ್ರಮದಲ್ಲಿ ಕುಂವೀ ಬಗ್ಗೆ ಮಾತಾಡುವಾಗಲೂ ಅಷ್ಟೇ.

ಈಗ ಹೀಗೆ ಅಚಾನಕ್ಕಾಗಿ ಬಂದ ಕೀರಂರ ಸಾವಿನ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕೋ ತಿಳಿಯಲಿಲ್ಲ. ಅಷ್ಟೊತ್ತಿಗಾಗಲೇ ಬಂದು ಸೇರಿಕೊಂಡಿದ್ದ ಅರುಣ, ಕೀರಂ ತನ್ನ ಅಮ್ಮನ ಸಾಲಿನಲ್ಲಿ ಹೇಗೋ ನೆಂಟರು, ಅಮ್ಮನಿಗೆ ಗೊತ್ತಾಗಿದೆಯೋ ಇಲ್ವೋ, ತಿಳಿಸ್ತೀನಿ ಅಂತ ಫೋನಿಗೆ ಟ್ರೈ ಮಾಡತೊಡಗಿದ. ಅಷ್ಟೊತ್ತಿಗೆ ಶ್ರೀಕಾಂತನೂ ಬಂದ. ಬಸ್ ಹುಡುಕಲು ಹೊರಟೆವು.

ಚಿಕ್ಕಮಗಳೂರಿನಲ್ಲಿ ತುಂತುರು ಹನಿಗಳ ಮುಂಜಾವಿನಲ್ಲಿ ಇಳಿದು ಪೇಪರ್ ಕೊಂಡರೆ ಮುಖಪುಟದಲ್ಲೇ ಕೀರಂ ಸಾವಿನ ಸುದ್ದಿ ಬಂದಿತ್ತು. ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ಬಸ್ಸಿನಲ್ಲಿ ಹೋಗಿ ಮಧ್ಯದಲ್ಲೆಲ್ಲೋ ಇಳಿದು ನಾವು ಟ್ರೆಕ್ ಶುರು ಮಾಡಬೇಕಿತ್ತು. ಆಗಷ್ಟೆ ತೆರೆದ ಕಾಮತ್ ಹೋಟೆಲಿನಲ್ಲಿ ತಿಂಡಿ ತಿಂದ ನಾವು, ಬಾಬಾಬುಡನ್ ಗಿರಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ನಾನು ಜೋಗಿಯವರ ರೂಪರೇಖೆ ಅಂಕಣ ಓದಿದೆ. ಯಾರದೋ ಕತೆಯಲ್ಲಿ ಓದುಗ ಒಂದಾಗುವ ಕುರಿತು ಬರೆಯಹೊರಟಿದ್ದ ಜೋಗಿ, ಬೇಂದ್ರೆ ಕವನವೊಂದನ್ನು ಉದಾಹರಿಸಿದ್ದರು. ಅದರಲ್ಲೂ ಕೀರಂ ಪ್ರಸ್ತಾಪವಿತ್ತು. ಅದು ಕೀರಂಗೆ ಇಷ್ಟವಾದ ಬೇಂದ್ರೆಯವರ ಕವನವಂತೆ. ಕವನ ಓದುತ್ತ ಓದುತ್ತ ನಾನೂ ಅದರಲ್ಲಿ ಒಂದಾದೆ. ಊರಾಚೆಗೊಂದು ಕೈಮರ, ಅಲ್ಲೊಂದು ತಣ್ಣಗೆ ಹರಿವ ಗುಪ್ತಗಾಮಿನಿ, ಅದರಾಚೆಗೊಂದು ದಟ್ಟ ಕಾಡು, ನಡುವಲ್ಲೊಂದು ತಪ್ಪಿ ಬೆಳೆದ ಮಾಮರ, ಆ ಮರದಲ್ಲಿ ಕೂತು ದಿನವಿಡೀ ಕುಹೂ ಕುಹೂ ಎಂದು ಹಾಡುವ ಕೋಗಿಲೆ. ಕವಿತಾನಾಯಕಿಗೆ ಈ ಕೋಗಿಲೆ ಹಾಡು ಎಂದರೆ ಏನೋ ಸೆಳೆತ. ಹಾಡು ಕೇಳುತ್ತ ಕೇಳುತ್ತ ಆಕೆ ಮೈಮರೆಯುತ್ತಾಳೆ. ಎಲ್ಲಿ ಹೋದರೂ ಹಾಡು ಅವಳನ್ನು ಹಿಂಬಾಲಿಸುತ್ತದೆ, ದಿನವಿಡೀ ಕಾಡುತ್ತದೆ -ಎನ್ನುವಾಗ ಅದು ಬರೀ ಕೋಗಿಲೆ ದನಿಯಲ್ಲ, ಅತೀತದೆಡೆಗಿನ ಕರೆ ಎಂಬರ್ಥ ಪಡೆಯುತ್ತದೆ ಕವನ. ಅಷ್ಟರಲ್ಲಿ ನಾವು ಇಳಿಯಬೇಕಿದ್ದ ಸ್ಥಳ ಬಂದಿತ್ತು, ಬೇಂದ್ರೆ ಕರೆದೊಯ್ದಿದ್ದ ಕಾಡಿನಲ್ಲಿ ಕಳೆದುಹೋಗಿದ್ದ ನನ್ನನ್ನು ತಟ್ಟಿ ಎಚ್ಚರಿಸಿದ ಅರುಣ್. ಕೆಳಗಿಳಿದರೆ ಎದುರಿಗೆ ಅಂಬರಚುಂಬಿತ ಗಿರಿ.

ಬೇಂದ್ರೆಯ ಕವಿತೆಯ ನಾಯಕಿಯಂತೆಯೇ ಇರಬೇಕು ನಮ್ಮೆಲ್ಲರ ಪಾಡು. ಏಕೆಂದರೆ, ಕೋಟೆ ಬೆಟ್ಟ ಹತ್ತಿಳಿದು ತಿಂಗಳಾಗಿರಲಿಲ್ಲ, ಮತ್ತೆ ಕರೆದಿತ್ತು ಚಾರಣದ ಹಾದಿ. ಇದೆಂತಹ ಹುಚ್ಚೋ- ಭಾರಚೀಲ ಹೊತ್ತು ಬೆಟ್ಟವೇರುವುದು? ಸುರಿವ ಮಳೆಯಲಿ ತೊಯ್ದು ಜ್ವರ ಬರಿಸಿಕೊಳ್ಳುವುದು? ತಂಡಿಗಾಳಿಗೆ ಮುಖವೊಡ್ಡಿ ತಲೆನೋವಿಗೀಡಾಗುವುದು? ಮಂಜಮುಂಜಾವಿನ ದಟ್ಟಹಸಿರಲಿ ದಾರಿ ತಪ್ಪಿ ಕಕ್ಕಾಬಿಕ್ಕಿಯಾಗುವುದು? ನೋಯ್ವ ಕಾಲನು ತೀಡಿ ಮತ್ತೆ ನಡೆಯಲಣಿಯಾಗುವುದು? ಮುಳ್ಳಯ್ಯನಗಿರಿಯ ಏರು ಸರ್ಪದಾರಿಯಲಿ ಬರೀ ಬೇಂದ್ರೆಯದೇ ಕನವರಿಕೆ.

ಅರುಣ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ..’ ಅಂತ ಸಿದ್ದಲಿಂಗಯ್ಯನವರ ಹಾಡು ಹೇಳತೊಡಗಿದ. ಇದ್ದಕ್ಕಿದ್ದಂತೆ ಬೆಟ್ಟಕ್ಕೆ ಕವಿದಿದ್ದ ಶ್ವೇತವರ್ಣದ ಮಂಜೆಲ್ಲ ಬೆಳದಿಂಗಳಾಗಿಹೋಯಿತು. ಬೇಂದ್ರೆಯ ಹುಡುಗಿಯ ಚೆಲುವಾದ ಮೈಬಣ್ಣವನ್ನು ಸುಡುತ್ತಿರುವ ಬೆಳ್ಳಿಕಿರಣಗಳು ಸುತ್ತೆಲ್ಲ ಸುರಿಯುತ್ತಿರುವಂತೆ ಭಾಸವಾಯಿತು. ‘ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ..’ ಹಾಡಿಗೆ ನಮ್ಮ ಏದುಸಿರು ಮತ್ತು ಸುರಿವ ಮಳೆಯ ತಟ್ತಟ ಸಾಥ್ ಆದವು. ನೀರಹನಿಯಾಶ್ರಿತ ಜೊಂಡು ಹುಲ್ಲುಗಳೆಲ್ಲ ಮೊಲದ ಹಿಂಡಿನಂತೆ ಕಾಲಿಗೆ ಮುತ್ತತೊಡಗಿದವು. ಈ ಹಾಡನ್ನ ಎಸ್ಪಿಬಿಯ ಸುಶ್ರಾವ್ಯ ಕಂಠದಲ್ಲಿ ಕೇಳುವುದಕ್ಕಿಂತ ಅಪ್ಪಗೆರೆ ತಿಮ್ಮರಾಜು ಕುಣಿದಾಡಿಕೊಂಡು ಹಾಡುವ ಶೈಲಿಯೇ ಚಂದ ಅಂತ ಎಷ್ಟೋ ಬಾರಿ ನಾನು ಯೋಚಿಸಿದ್ದೆ. ಸಿದ್ದಲಿಂಗಯ್ಯನವರ ಎದುರಿಗೇ ಅವರು ಹಾಡಿದ್ದನ್ನು ನಾನು ನೋಡಿದ್ದೆ. ಸಭೆಯನ್ನೊಮ್ಮೆ, ಪಕ್ಕವಾದ್ಯದವರನ್ನೊಮ್ಮೆ, ಕವಿಯನ್ನೊಮ್ಮೆ ನೋಡುತ್ತ, ತುಂಬುನಗೆ ಚಿಮ್ಮಿಸುತ್ತ, ಮಧ್ಯದಲ್ಲೊಂದು ಸಲ ಮುಗಿದೇಹೋಯಿತೇನೋ ಎನ್ನುವಂತೆ ಹಾಡಿನ ಬಂಡಿಯನ್ನು ಗಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿ, ಇಡೀ ಪ್ರೇಕ್ಷಕವೃಂದದ ಎದೆಬಡಿತವನ್ನು ಕ್ಷಣಕಾಲ ಹಿಡಿದು-ಬಿಟ್ಟಂತೆ, ಗಳಿಗೆಯ ನಂತರ ಮತ್ತೆ ಮುಂದುವರೆಸುವ ಪರಿ.. ವಾಹ್! ಕವಿಯ ಕಣ್ಣಲ್ಲಿ ಮಂಜ ಪದರ! ಆ ಹಾಡು, ಈ ಭಾವ, ಆ ಮಂಜು, ಈ ನೋಟ ಯಾಕೆ ನಿರಂತರವಾಗಬಾರದು? ಆಗಿಬಿಟ್ಟರೆ ಇದೂ ಬೇಸರ ಬಂದು ಮತ್ತೇನಕ್ಕೋ ತುಡಿಯುತ್ತೇವೆಯೋ? ರೇಖಾ ತನಗೆ ನಿಪ್ಪಟ್ಟು ಬೇಕು ಅಂತ ಹಟ ಶುರು ಮಾಡಿದ್ದಳು.

ಮುಳ್ಳಯ್ಯನ ಗಿರಿಯ ಸೌಂದರ್ಯವೂ ನಾಶವಾಗುವುದಕ್ಕೆ ಇನ್ನು ಹೆಚ್ಚು ಕಾಲ ಬೇಕಿಲ್ಲ ಅಂತ ಮೇಲೆ ತಲುಪಿದಾಗ ನಮಗೆ ತಿಳಿಯಿತು. ಶೃಂಗದವರೆಗೂ ಪ್ರವಾಸೋದ್ಯಮ ಇಲಾಖೆಯವರು ಟಾರ್ ಎಳೆದುಬಿಟ್ಟಿದ್ದಾರೆ. ಇಂಥ ಮಳೆಗಾಲದಲ್ಲೇ ಅಲ್ಲಿ ಹದಿನೈದಿಪ್ಪತ್ತು ಕಾರು-ಜೀಪುಗಳಿದ್ದವು. ಏರಿಸಿದ ಅರೆಪಾರದರ್ಶಕ ಗಾಜಿನ ಹಿಂದೆ ಗ್ಲಾಸುಗಳು ಖಾಲಿಯಾಗುತ್ತಿದ್ದವು. ರಸ್ತೆಬದಿಯಲ್ಲೆಲ್ಲ ಒಡೆದ ಬಾಟಲಿಗಳು. ಸಿಗರೇಟಿನ ಪ್ಯಾಕುಗಳು. ಇನ್ನೆರಡು ವರ್ಷಗಳಲ್ಲಿ ಇಲ್ಲಿ ರೆಸಾರ್ಟುಗಳು ಬಂದು, ಐಷಾರಾಮಿ ಲಾಡ್ಜುಗಳು ತಲೆಯೆತ್ತಿ, ವೆಬ್‌ಸೈಟುಗಳು ಪ್ರವಾಸಿಗರನ್ನು ಆಕರ್ಶಿಸಿ... ‘ಮುಗೀತು ಬಿಡು, ಇನ್ನು ನಾವು ಒಂದು ದಿನದ ಟ್ರೆಕ್‌ಗೆ ಹೊಸ ಜಾಗ ಹುಡುಕ್ಕೋಬೇಕು’ ಅಂತ ಶ್ರೀಕಾಂತ ನಿಟ್ಟುಸಿರು ಬಿಟ್ಟ. ಟಾರು ಬಳಿದ ಕಡುಗಪ್ಪು ರಸ್ತೆಯಲ್ಲಿ ಮಾತೇ ಇಲ್ಲದೆ ನಾವು ವಾಪಸು ನಡೆಯತೊಡಗಿದೆವು. ಬೇಂದ್ರೆಯ ಹಾಡಿನ ಹುಡುಗಿಯ ಮೇಲೆ ಸುರಿದ ಸಿದ್ದಲಿಂಗಯ್ಯನವರ ಕವಿತೆಯ ಬೆಳದಿಂಗಳ ಬಗ್ಗೆ ಕೀರಂ ಸ್ವರ್ಗದಲ್ಲಿ ಉಪನ್ಯಾಸ ಕೊಡುತ್ತಿದ್ದರು.

// ಫೋಟೋಸ್ //

Monday, August 02, 2010

ಸ್ಥಿತ್ಯಂತರ

"ಹೂವಿಗಿಂತ ಅರಳು ಮೊಗ್ಗು ಯಾಕೆ ಚಂದ ಹೇಳು? -ಪೂರ್ತಿ ಬಿರಿಯದೆ, ಒಳಗೆ ಸೊಬಗಿದೆ ಅಂತ ಹೇಳುವ ಬಗೆಗೆ.."
-ಸಿಂಧು

* *

ಸುರುಗಿಟ್ಟರೆ ಮಾಲೆಯಲ್ಲೇ ಅರಳಿತು
ಚೂರೂ ತೋರಲಿಲ್ಲ ನಗುವಾಗ ಅಳುಕು.
ಚುಚ್ಚಿದಾಗ ಸೂಜಿ, ಹೊರ-
ಬಂದ ಬಿಳೀರಕ್ತ: ತಡೆಯಲೇ ಇಲ್ಲ
ನಿರ್ದಯಿ ಕೈ.
ಒತ್ತೊತ್ತಿ ತಲೆಯೆತ್ತಿ ಕೇಳಿತು:
ಪ್ರೇಯಸಿಯ ಮುಡಿಗೋ, ದೇವತೆಯ ಅಡಿಗೋ?
ಅವೆರಡಕ್ಕೂ ನಿನ್ನ ಸ್ಪರ್ಶದ ಅರ್ಹತೆಯೇ ಇಲ್ಲ ಅಂತಂದು,
ಮೃದುನೀಳಕಾಯ ನೇವರಿಸಿ
ಬಿಸಿಲ ಬಯಲ ಕಲ್ಲುಬಂಡೆಯ ಮೇಲೆ ಇಟ್ಟು
ಪಕ್ಕದಲ್ಲಿ ತೆಪ್ಪಗೆ ತಲೆತಗ್ಗಿಸಿ ಕೂತುಬಿಟ್ಟೆ.

ಕವಿತೆ ಬರೆದು ಮುಗಿಯುವಷ್ಟರಲ್ಲಿ
ಕಲ್ಲು ಕರಗಿ, ಸಂಜೆ ಮಾಗಿ
ಸೊರಗಿದ ಹೂವುಗಳ ಮೊಗದಲ್ಲಿ
ಹೊಳೆದ ವಿನೀತ ಕಾಂತಿ ಕಂಡು-
ಸೊಬಗ ತೋರದ ಮೊಗ್ಗು,
ಘಮವ ಬೀರಿದ ಹೂವುಗಳಿಗಿಂತ
ನೋವ ಮೀರಿದ ಈ ಬಾಡಿದ ಬೆಕ್ಕೇ ಚಂದ
ಎಂದೆನಿಸಿ ಮುದ್ದು ಉಕ್ಕಿ ಬಂದುಬಿಟ್ಟಿತು.