Wednesday, January 20, 2021

ಕಂಪನ


ನೀವು ಗಮನಿಸಿದ್ದೀರೋ ಇಲ್ಲವೋ
ವಿಲ್ ಬರೆಸುವವರ ಕೈ ಸಣ್ಣಗೆ ನಡುಗುತ್ತಿರುತ್ತದೆ
ಅಂಬಾಸಿಡರ್ ಕಾರಿನ ಗೇರಿನಂತೆ
ಅವರ ಬಳಿ ಗಟ್ಟಿಯಾಗಿ ಮಾತಾಡಬೇಡಿ
ಗಾಜಿನ ಕವಚದ ಅವರ ಹೃದಯ
ಫಳ್ಳನೆ ಒಡೆದು ಹೋಗಬಹುದು
ಕುರ್ಚಿಗೊರಗದೆ ಕೂತು ತುಸುವೆ ಬಾಗಿ
ಮೆಲುದನಿಯಲವರಾಡುವ ಮಾತು ಕೇಳಿಸಿಕೊಳ್ಳಿ:

ಅಷ್ಟೆಲ್ಲ ಮಾಡಿದರೂ ತನ್ನನು ತಾತ್ಸಾರ ಮಾಡುವ
ಹಿರಿಮಗನ ಬಗೆಗಿನ ಅವರ ಅಸಮಾಧಾನ
ವಿದೇಶದಲ್ಲಿದ್ದರೂ ಆಗೀಗ ಫೋನು ಮಾಡುವ
ಕಿರಿಮಗನೆಡೆಗೆ ಅದೇನೋ ಅಭಿಮಾನ
ಈಗಾಗಲೇ ಹಿಸ್ಸೆ ತೆಗೆದುಕೊಂಡು ಬೇರಾಗಿರುವ
ಮಧ್ಯದ ಮಗನ ಬಗ್ಗೆ ಸಿಡುಕು
ಹೆಣ್ಣುಮಕ್ಕಳನ್ನೆಲ್ಲ ಒಳ್ಳೇ ಕಡೆ ಸೇರಿಸಿದ್ದೇನೆ
ಎನ್ನುವಾಗ ನೆಮ್ಮದಿಯ ಸಣ್ಣನಗೆ

ಯಾವುದಕ್ಕೂ ಟಿಶ್ಯೂ ರೆಡಿಯಿಟ್ಟುಕೊಂಡಿರಿ:
ನಾಲ್ಕು ವರ್ಷದ ಹಿಂದೆ ಗತಿಸಿದ
ಹೆಂಡತಿಯ ಬಗ್ಗೆ ಹೇಳುವಾಗ
ಫಕ್ಕನೆ ಕಣ್ಣೀರೂ ಉಕ್ಕೀತು
ಆ ಟಿಶ್ಯೂವನ್ನೇನು ಅವರು ಬಳಸುವುದಿಲ್ಲ
ಮಂಜುಗಟ್ಟಿದ ಕನ್ನಡಕ ತೆಗೆದು
ತಮ್ಮದೇ ಕರವಸ್ತ್ರದಿಂದ ಒರೆಸಿಕೊಂಡು...

ನಿಮ್ಮ ಕತೆ ಬೇಡ, ಆಸ್ತಿ ವಿಲೇವಾರಿ ಬಗ್ಗೆ
ಹೇಳಿ ಸಾಕು ಅಂತೆಲ್ಲ ರೇಗಬೇಡಿ
ರಿಟೈರಾದ ದಿನ ಸಹೋದ್ಯೋಗಿಗಳು
ಹಾರ ಹಾಕಿ ಮಾಡಿದ ಸನ್ಮಾನದ ಬಗ್ಗೆ
ಅವರಿಗೆ ಹೇಳಿಕೊಳ್ಳಬೇಕಿದೆ, ಕೇಳಿಸಿಕೊಳ್ಳಿ

ಕೆಲಸ ಮುಗಿಸಿ ನಿಮ್ಮ ಕಚೇರಿಯಿಂದ
ಹೊರಟಾಗ ಅವರ ಜತೆಗೇ ತೆರಳಿ
ಮೆಟ್ಟಿಲು ಇಳಿಯುವಾಗ ಕೈ ಹಿಡಿದುಕೊಳ್ಳಿ
ಬೇಡ ಬೇಡ ಎನ್ನುತ್ತಲೇ ವಾಲುದೇಹವನ್ನು
ಸಂಬಾಳಿಸಿಕೊಳ್ಳುತ್ತ ಕೈಚೀಲದಲ್ಲಿನ
ಕಾಗದ ಪತ್ರಗಳನ್ನು ಜೋಪಾನ ಮಾಡುತ್ತಾ...

ಆಮೇಲವರು ರಸ್ತೆಯ ತಿರುವಿನಲ್ಲಿ
ಕರಗಿಹೋಗುವರು ಪಶ್ಚಿಮದ ರವಿಯ ಹಾಗೆ

ನೀವು ವಾಪಸು ಕಚೇರಿಗೆ ಬಂದಾಗ
ಅರೆ, ಅದ್ಯಾಕೆ ನಿಮ್ಮ ಕೈ ಸಣ್ಣಗೆ ನಡುಗುತ್ತಿದೆ
ಅದ್ಯಾಕೆ ಹಾಗೆ ನಿರ್ವಾತವನ್ನು ತುಂಬಿಸಿಬಿಡುವವರ ಹಾಗೆ
ಹಳೆಯ ಹಿಂದಿ ಹಾಡುಗಳಿಗೆ ತಡಕಾಡುತ್ತಿದ್ದೀರಿ
ಎಂದೂ ಇಲ್ಲದವರು ಅದ್ಯಾಕೆ ಲಗುಬಗೆಯಿಂದ ಹೆಂಡತಿಗೆ
ಫೋನು ಮಾಡಿ ಏನು ಮಾಡ್ತಿದೀ ಅಂತೆಲ್ಲ ವಿಚಾರಿಸ್ತಿದೀರಿ
ಅದ್ಯಾಕೆ ಮಕ್ಕಳ ಫೋಟೋಗಳನ್ನು
ಸ್ಕ್ರಾಲ್ ಮಾಡಿ ಮಾಡಿ ನೋಡುತ್ತಿದ್ದೀರಿ
ಅದ್ಯಾಕೆ ಹಾಗೆ ನೀರು ಕುಡಿಯುತ್ತಿದ್ದೀರಿ
ಅದ್ಯಾಕೆ ಅದ್ಯಾಕೆ... 

Friday, January 15, 2021

ಹರ್

ಆಕೆ ಬಲಗೈಗೆ ವಾಚು ಕಟ್ಟುವಳು
ನಗರದ ನಿರಾಳವು ದಯಪಾಲಿಸಿದ 
ರೆಕ್ಕೆ ಬಳಸಿ ಸಂಚರಿಸುವಳು ಟ್ಯಾಕ್ಸಿಯಲ್ಲಿ 
ರಿಕ್ಷಾದಲ್ಲಿ ನೂಕುನುಗ್ಗಲಿನ ಬಸ್ಸಿನಲ್ಲಿ
ಹಾಯ್ವ ವಾಹನದಲಿ ಕೂತು 
ಕಣ್ತುಂಬಿಸಿಕೊಳ್ಳುವಳು ನಿಯಾನ್ ದೀಪಗಳು 
ಬೆಳಗುವ ಗಾಜುಗೋಡೆಯ ಅಂಗಡಿಗಳೊಳಗನ್ನು  
ಬಣ್ಣಬೇಗಡೆ ಸೇರಿಸಿ ಬಟ್ಟೆ ಹೊಲಿಯುವ ಕನಸು ಕಾಣುವಳು 
ಟೆರೇಸಿನ ಬೀಸುಗಾಳಿಗೆ ಒದ್ದೆಕೂದಲನೊಡ್ಡಿ 
ಸ್ಥವಿರ-ಚಲನ ಬೆಳಕುಗಳ ಬಗ್ಗಿ ನೋಡುವಳು 
ಉತ್ಸವದುತ್ಸಾಹೀ ಹುಡುಗರ ಜತೆಗೂಡಿ 
ಕುಣಿಯುವಳು ಮೈಮರೆಯುವಂತೆ, ಮೈಬೆಮರುವಂತೆ

ಗೊತ್ತು ಅವಳಿಗೆ- 
ಒಂದು ಖಾಲಿಯ ತುಂಬಲೆಷ್ಟು ದಿವಸ ಬೇಕು 
ಒಂದು ದುಃಖವ ಮರೆಸಲೆಷ್ಟು ಮರುಗಬೇಕು 
ಒಂದು ಉಮ್ಮಳವನಳಿಸಲೆಷ್ಟು ನಗು ಬೇಕು
ಅವಳಿಗಷ್ಟೇ ಗೊತ್ತು-
ಭಗ್ನ ಹೃದಯಕೆ ಭಗ್ನ ಹೃದಯವೇ ಸಾಥಿಯೆಂಬುದು 
ಖಿನ್ನರಿಗಷ್ಟೇ ತಿಳಿದಿರುವಂತೆ- 
ಮೌನವ ಕಲಕದಂತೆ ಮಾತಾಡುವ ಕಲೆ 

ಹಾಗೆಂದೇ ಆಕೆ ತೊಡಗಿಕೊಳ್ಳುವಳು 
ಬಿಡುವಿರದಂತಹ ಕೆಲಸಗಳಲಿ 
ತಲೆಯೆತ್ತಿ ನಡೆವಳು ಸಣ್ಣ ಓಣಿಗಳಲಿ 
ಎದುರಿಸುವಳು ಎರಗಿದ ಪ್ರಶ್ನೆಗಳ 
ಚೂಪಲಗಿನ ಕೂಪಿನಿಂದ 
ಹೂಡುವಳು ಮತ್ಯಾರದೋ ಕನಸಲಿ ಹಣ 
‘ಬ್ರೇವ್’ ಶಬ್ದದ ಅರ್ಥ ತಿಳಿದುಕೊಳ್ಳುವಳು 
ಹಿಂಜರಿಕೆಯ ನೆರಳನೊರೆಸುವಳು 
ಪದೇಪದೇ ದಿಟ್ಟ ಹೆಜ್ಜೆಗಳನಿಡುತ
ನಿಲ್ಲಿಸುವಳು ಮತ್ಯಾರನೋ 
ತನ್ನ ತೆಳುತೋಳು ಬಳಸಿ. 

[‘Sir’ ಸಿನೆಮಾ ನೋಡಿ]