ಎಲ್ಲೋ ಚಂಡಮಾರುತವೆದ್ದಿದ್ದಕ್ಕೆ ಇಲ್ಲಿ ಮಳೆಯಾಗುತ್ತಿದೆ
ಆಕಾಶಕ್ಕೆ ಮುಖ ಮಾಡಿ ನಿಂತ ಡಿಶ್ಶುಗಳು
ಧಾರಾವಾಹಿಯ ಸಿಗ್ನಲ್ಲುಗಳನ್ನು ಸ್ವೀಕರಿಸುತ್ತಿವೆ
ಬಚ್ಚಲ ಗೋಡೆಯಲ್ಲಿ ನೇತಾಡುತ್ತ ಪರಿಮಳ ಸೂಸುತ್ತಿರುವ
ಏರ್ ಫ್ರೆಶನರ್‌ನ ಮೈಮೇಲೆ ನೀರ ಹನಿಗಳು ನಿಂತಿವೆ
ಬಿಡಿಸಿದಾಗ ಪುಳಕ್ಕನೆ ಹೊರಬಂದ ಬಿಳಿಬಿಳಿ ಅವರೆಕಾಳುಗಳು
ಆಶ್ಚರ್ಯದಲ್ಲಿ ಕಣ್ ಕಣ್ ಬಿಟ್ಟು ನೋಡುತ್ತಿವೆ
ನೋಟ್‌ಬುಕ್ಕಿನ ಹಾಳೆಯಿಂದ ಯಾರೋ ಮಾಡಿ ಬಿಟ್ಟ ರಾಕೆಟ್
ಟೆರೇಸಿನಲ್ಲಿ ಗಾಳಿಗೆ ಅತ್ತಿತ್ತ ತುಯ್ಯುತ್ತಿದೆ
ಕಾರ್ತಿಕ ದೀಪೋತ್ಸವದಲ್ಲಿ ಉರಿಯುತ್ತಿರುವ ಸಾಲು ದೀಪಗಳಲ್ಲಿ
ಎಣ್ಣೆ ಖಾಲಿಯಾಗಿ ಆರಿರುವ ಹಣತೆಗೆ ಒಂಟಿತನ ಕಾಡುತ್ತಿದೆ
ಜಿಮೇಲಿನ ಸ್ಪಾಮ್ ಫೋಲ್ಡರಿನಲ್ಲಿ ಎನ್‌ಲಾರ್ಜ್‌ಮೆಂಟ್
ಟಿಪ್ಪುಗಳು ಅನಾಥವಾಗಿ ಬಂದು ಬಿದ್ದಿವೆ
ಸಿಕ್ಕಾಪಟ್ಟೆ ಕೆಮ್ಮು ಎಂಬ ಸ್ಟೇಟಸ್ಸಿಗೂ
ಫೇಸ್‌ಬುಕ್ಕಿನ ಗೋಡೆಯಲ್ಲಿ ನಾಲ್ಕು ಲೈಕು ಬಂದಿದೆ
ಕೆಂಪು ಸೇಬುಗಳ ಬದಿಗೆ ಸರಿಸಿ
ತಳ್ಳುಗಾಡಿಯ ಮೇಲೆ ಕಿತ್ತಳೆ ರಾರಾಜಿಸುತ್ತಿದೆ
ಮಟಮಟ ಮಧ್ಯಾಹ್ನವೇ ನ್ಯೂಸ್‌ಚಾನೆಲ್ಲಿನಲ್ಲಿ
ಅದದೇ ಜೋಕುಗಳ ಹಾಸ್ಯಸಂಜೆ ಬರುತ್ತಿದೆ
ಎಕ್ಸ್‌ಪ್ರೆಸ್ ರೈಲು ಸಾಗಿಹೋಗಲೆಂದು ಗೂಡ್ಸ್ ರೈಲು
ಜಂಕ್ಷನ್ನಿನಲ್ಲಿ ಗಂಟೆಯಿಂದ ಕಾದಿದೆ
ನಿದ್ದೆಯಿಂದೆದ್ದ ಸಚಿನ್ ತೆಂಡೂಲ್ಕರ್ ಮೈಮರೆವಿನಲ್ಲಿ
ಬ್ಯಾಟ್ ಹಿಡಿದು ಸ್ಟೇಡಿಯಂ ಕಡೆ ನಡೆದಿದ್ದಾನೆ.
ಪೂರ್ತಿ ಮೂವತ್ತು ದಿವಸ ತುಂಬಿರುವ ಕ್ಯಾಲೆಂಡರಿನ
ನವೆಂಬರ್ ಹಾಳೆಯ ಮೇಲೆ ಚಿಟ್ಟೆಯೊಂದು ಕೂತಿದೆ
ಪಕ್ಕಕ್ಕೆ ಸರಿ ಪತಂಗವೇ, ನನಗೆ ಡಿಸೆಂಬರಿಗೆ ಹೋಗಬೇಕಿದೆ.