Friday, December 29, 2006

ಹೊಸ ವರ್ಷದ ಶುಭಾಶಯ"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."

* * *

ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...

ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್‍ಶ್‍ಶ್‍ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...

ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...


ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...


ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...

*
* *

ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.

ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:


"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."

ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.

ನೂತನ ವರ್ಷದ ಶುಭಾಶಯಗಳು.

Monday, December 18, 2006

ಹೊಸ ವರ್ಷದ ಆಶಯ

ನಿನ್ನೆ ರಾತ್ರಿಯ ಕನಸಿನಲ್ಲಿ ಹೊಸವರ್ಷ ಬಂದಿತ್ತು.

ನಾನು ಸುಳ್ಳು ಹೇಳ್ತಿದೀನಿ, ನಾಟಕ ಮಾಡ್ತಿದೀನಿ ಅಂದ್ಕೊಂಡ್ರೇನು? ಇಲ್ರೀ, ನಿಜವಾಗಿಯೂ ಬಂದಿತ್ತು. ನನಗೆ ಆನಂದಾಶ್ಚರ್ಯಗಳು ಒಟ್ಟಿಗೇ ಆದ್ವು. ಒಂಥರಾ ದಿಗ್ಭ್ರಮೆ. ಇದೇನು ನನಸೋ ಕನಸೋ ಅಂತ ಗೊಂದಲ.

ನಾನು ಹೊಸವರ್ಷದ ಬಳಿ ಕೇಳಿದೆ, 'ಇದೇನಿದು, ಇಷ್ಟು ಮುಂಚೆ ಬಂದ್ಬಿಟ್ಯಲ್ಲ?' ಅಂತ. ಅದಕ್ಕೆ ಹೊಸವರ್ಷ 'ಅದಕ್ಕೇನೀಗ? ಏನೋ ಒಂದೆರಡು ವಾರ ಮುಂಚೆ ಬಂದಿದೀನಿ. ಬೆಂಗಳೂರಿನಲ್ಲಿ ಭಯಂಕರ ಟ್ರಾಫಿಕ್ಕು ಅಂತ ಕೇಳಿದ್ದೆ. ಹಾಗಾಗಿ ಸ್ವಲ್ಪ ಮುಂಚೇನೇ ಹೊರಟುಬಿಟ್ಟೆ. ಆದ್ರೆ ಮಜಾ ನೋಡು, ನಂಗೆ ಎಲ್ಲೂ ಟ್ರಾಫಿಕ್ಕೇ ಸಿಗಲಿಲ್ಲ! ಹಾಗಾಗಿ... ಹೆಹ್ಹೆ! ಲೇಟಾಗಿ ಬರೋದಕ್ಕಿಂತ ಮುಂಚೆ ಬಂದಿರೋದು ಒಳ್ಳೇದಲ್ವಾ?' ಎಂದು ಹೇಳಿ ಪ್ಯಾಲಿ ನಗೆಯಾಡಿತು.

ಆದರೆ ನನಗೆ ಕೋಪ ಬಂತು. 'ಛೇ! ನೀನು ಇಷ್ಟು ಬೇಗ ಬರ್ತೀಯ ಅಂತ ಗೊತ್ತಿರ್ಲಿಲ್ಲ. ನಾನು ನಿನ್ನನ್ನು ಸ್ವಾಗತಿಸಲಿಕ್ಕೇಂತ ಎಷ್ಟು ತಯಾರಿ ಮಾಡ್ಕೊಂಡಿದ್ದೆ ಗೊತ್ತಾ? ಎಲ್ಲಾ ಹಾಳು ಮಾಡಿಬಿಟ್ಟೆ' ಅಂತ ಬೈದೆ. ಅದಕ್ಕೆ ಹೊಸವರ್ಷ, 'ಹೌದಾ? ಏನೇನು ತಯಾರಿ ಮಾಡ್ಕೊಂಡಿದ್ದೆ?' ಅಂತ ಕೇಳ್ತು. ನಾನೆಂದೆ: 'ಈ ವರ್ಷ ಇಯರೆಂಡನ್ನು ಗ್ರಾಂಡ್ ಆಗಿ ಆಚರಿಸ್ಬೇಕೂಂತ ಮೈಸೂರ್ ರೋಡಲ್ಲಿ ಒಂದು ರೆಸಾರ್ಟ್‍ಗೆ ಬುಕ್ ಮಾಡಿದ್ವಿ ನಾನೂ ನನ್ನ ಫ್ರೆಂಡ್ಸೂ. ಥರ್ಟಿಫಸ್ಟ್ ಇವನಿಂಗೇ ಅಲ್ಲಿಗೆ ಹೋಗಿ, ಎರಡು ಲಾರ್ಜ್ ವ್ಹಿಸ್ಕಿ ಆರ್ಡರ್ ಮಾಡಿ, ಅದರಳೊಗೆ ಐಸನ್ನು ಕರಗಿಸಿ, ನಿಧನಿಧಾನವಾಗಿ ಹೀರ್ತಾ... ತೇಲಿ ಬರೋ ವೆಸ್ಟರ್ನ್ ಮ್ಯೂಸಿಕ್ಕಿನಲ್ಲಿ ಒಂದಾಗ್ತಾ... ಸುಂದರ ಸ್ಲೀವ್‍ಲೆಸ್‍ ಹುಡುಗೀರ ಜೊತೆ ಡಾನ್ಸ್ ಮಾಡ್ತಾ... ಆಹಾ! ಅದರಲ್ಲಿರೋ ಮಜಾ ನಿಂಗೇನು ಗೊತ್ತು? ಗಡಿಯಾರದ ಮುಳ್ಳು ಹನ್ನೆರಡನ್ನು ಮುಟ್ಟುತ್ತಿದ್ದಂತೆಯೇ ಎಲ್ಲರೂ 'ಹೋ' ಎಂದು ಜೋರಾಗಿ ಕೂಗಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಎಲ್ರೂ ಎಲ್ರಿಗೂ 'ಹ್ಯಾಪಿ ನ್ಯೂ ಇಯರ್' ಹೇಳಿ, ತಬ್ಕೊಂಡು..... ಓಹ್! ನಮ್ಮ ಯೋಜನೆಗಳನ್ನೆಲ್ಲಾ ಹಾಳು ಮಾಡಿಬಿಟ್ಟೆ' ಅಂದೆ.

ನನ್ನ ಮಾತನ್ನು ಕೇಳಿ ಹೊಸವರ್ಷ ನಸು ನಕ್ಕಿತು. ಅದರ ನಗು ನನಗೆ ವ್ಯಂಗ್ಯಭರಿತವಾಗಿದ್ದಂತೆ, ಒಂಥರಾ ನಿಗೂಢವಾಗಿದ್ದಂತೆ ಅನ್ನಿಸಿತು. 'ಅಲ್ಲಿಂದ ನಡಕೊಂಡು ಬಂದಿದೀನಿ. ಸುಸ್ತಾಗಿದೆ. ತಣ್ಣಗೆ ಒಂದು ಸ್ನಾನ ಮಾಡಿ ಬರ್ತೀನಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ, ಕೂತಿರು' ಅಂತಂದು ಹೊಸವರ್ಷ ನನ್ನ ಟವೆಲನ್ನು ಎತ್ತಿಕೊಂಡು ಬಾತ್‍ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿತು. ನಾನು ತಕ್ಷಣ ಮೊಬೈಲೆತ್ತಿಕೊಂಡು ಗೆಳೆಯರಿಗೆಲ್ಲ ಫೋನ್ ಮಾಡಿ 'ಅಯ್ಯೋ ಕೆಲಸ ಕೆಟ್‍ಹೋಯ್ತು ಕಣ್ರೋ.. ಹೊಸವರ್ಷ ಆಗಲೇ ಬಂದುಬಿಟ್ಟಿದೆ. ರೆಸಾರ್ಟಿಗೆ ಬುಕ್ ಮಾಡಿದ್ದೆಲ್ಲಾ ಕ್ಯಾನ್ಸೆಲ್ ಮಾಡ್ಸಿ. ಪಟಾಕಿ ತಗೋಳ್ಲಿಕ್ಕೆ ಹೋಗ್ಬೇಡಿ' ಅಂತೆಲ್ಲಾ ಅಂದೆ. ಗೆಳೆಯರು 'ಯಾಕೋ ಹುಚ್ಚು-ಗಿಚ್ಚು ಹಿಡಿದಿದೆಯೇನೋ?' ಅಂತ ಗೇಲಿ ಮಾಡಿ ನಕ್ಕುಬಿಟ್ಟರು. ಇವರಿಗೆ ಹೇಗೆ ಅರ್ಥ ಮಾಡಿಸಬಹುದು ಅಂತಲೇ ನನಗೆ ತಿಳಿಯಲಿಲ್ಲ. ಅಷ್ಟರಲ್ಲಿ ಹೊಸವರ್ಷದ ಸ್ನಾನ ಮುಗಿದು, ಬಾತ್‍ರೂಮಿನಿಂದ ಹೊರಬಂತು. ನಾನು ಫೋನ್ ಕಟ್ ಮಾಡಿ, ಹುಳ್ಳಹುಳ್ಳಗೆ ನಗೆಯಾಡುತ್ತಾ, ಯಥಾಸ್ಥಾನದಲ್ಲಿ ಕುಳಿತೆ.

ಹೊಸವರ್ಷ ನನ್ನ ಎದುರಿಗೆ ಬಂದು ಕುಳಿತುಕೊಂಡು ಮಾತನಾಡಲಾರಂಭಿಸಿತು: 'ನೋಡು ಗೆಳೆಯಾ, ಈ ತರಹದ ಆಡಂಭರಗಳೆಲ್ಲ ನಿಮ್ಮಂಥವರಿಗೆ ಮಾತ್ರ. ಫೂಟ್‍ಪಾತಿನ ಮೇಲೆ ಸೆಕೆಂಡ್ಸ್ ಮಾರುವವರು, ಮೆಜೆಸ್ಟಿಕ್ಕಿನ ಫ್ಲೈಓವರಿನ ಮೇಲೆ ಬ್ಯಾಟರಿ, ಕೀಚೈನು, ಮೊಬೈಲ್ ಕವರ್ರು, ಕರ್ಚೀಫು, ಬೂಟಿನ ಹಿಮ್ಮಡ, ಬೇಯಿಸಿದ ಮೊಟ್ಟೆ, ಕಡಲೆಕಾಯಿಗಳನ್ನು ಮಾರುವವರನ್ನು ಹೋಗಿ ನೋಡು. ಕೆ.ಆರ್. ಮಾರ್ಕೆಟ್ಟಿನ ಇಕ್ಕಟ್ಟಿನಲ್ಲಿ ತರಕಾರಿ ಮಾರುವವರನ್ನು ನೋಡು. ಹೋಟೆಲ್ಲುಗಳಲ್ಲಿ ಟೇಬಲ್ ಕ್ಲೀನ್ ಮಾಡುವ ಹುಡುಗರನ್ನು ನೋಡು. ಕಸ ಎತ್ತುವ, ಚರಂಡಿ ದುರಸ್ಥಿ ಮಾಡುವ ಕಾರ್ಪೋರೇಷನ್ ಕೆಲಸಗಾರನ್ನು ನೋಡು. ಅವರುಗಳ ಬಳಿ ಹೋಗಿ ಕೇಳು: 'ನೀವು ಹೊಸವರ್ಷವನ್ನು ಹೇಗೆ ಸ್ವಾಗತಿಸುತ್ತೀರಿ?' ಅಂತ. ಅವರು ಜೋರಾಗಿ ನಕ್ಕುಬಿಡುತ್ತಾರೆ. ಅವರು ನಿಮ್ಮಂತೆ ರೆಸಾರ್ಟುಗಳಲ್ಲಿ ಚಿಲ್ಡ್ ಬಿಯರ್ ಕುಡಿಯುವವರಲ್ಲ, ಕೇಕ್ ಕತ್ತರಿಸುವವರಲ್ಲ, ರಾಕೆಟ್ಟುಗಳನ್ನು ಹಾರಿಸಿ 'ಹೋ' ಎಂದು ಕೂಗುವವರಲ್ಲ. ಹೊಸವರ್ಷದ ದಿನ ಅವರ ಮನೆಯಲ್ಲಿ ಸ್ವೀಟ್ ಮಾಡುವುದಿಲ್ಲ. ಅವರು ಹೊಸವರ್ಷಕ್ಕೇಂತ ಕ್ಯಾಲೆಂಡರು ಸಹ ಕೊಳ್ಳುವುದಿಲ್ಲ. ನಿನಗೆ ಗೊತ್ತಾ ಬ್ರದರ್, ನೀನು ಹೊಸವರ್ಷದ ಸಂಭ್ರಮಕ್ಕೆಂದು ಖರ್ಚು ಮಾಡುವ ಹಣವನ್ನು ಒಬ್ಬೊಬ್ಬರಿಗೆ ಒಂದೊಂದು ರೂಪಾಯಿಯಂತೆ ಹಂಚುತ್ತಾ ಬಂದರೂ ಸಾಕಾಗದಷ್ಟು ಭಿಕ್ಷುಕರು ಬರೀ ಈ ಬೆಂಗಳೂರಿನಲ್ಲಿದ್ದಾರೆ...'

ನಾನು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದೆ. ಏನೋ ತಪ್ಪು ಮಾಡಲು ಹೊರಟಿದ್ದ ನನ್ನನ್ನು ತಡೆದಂತಾಯಿತು. ನನ್ನ ಕೋಪ, ಆವೇಶ, ಅಸಮಾಧಾನಗಳೆಲ್ಲಾ ತಣ್ಣಗಾಗಿದ್ದವು. 'ಹಾಗಾದರೆ ನನ್ನನ್ನು ಈಗ ಏನು ಮಾಡು ಅಂತೀಯಾ?' ತಗ್ಗಿದ ದನಿಯಲ್ಲಿ ಕೇಳಿದೆ.

'ಅದನ್ನೂ ನಾನೇ ಹೇಳಬೇಕಾ?' ಎಂದು ಹೊಸವರ್ಷ ಎದ್ದು ನಿಂತಿತು. 'ಅರೆ, ತಾಳು ಹೊರಡಬೇಡ...' ಅಂದೆ. 'ಇಲ್ಲ, ನಾನು ಹೊರಟೆ. ನಿನ್ನಂತಹ ಇನ್ನೊಂದಿಷ್ಟು ಜನರಿಗೆ ಇದೇ ಮಾತುಗಳನ್ನು ಹೇಳಬೇಕಿದೆ. ನೀನೂ ನಿನ್ನ ಗೆಳೆಯರಿಗೆ ತಿಳಿಹೇಳು. ಮತ್ತೆ ಸಿಗೋಣ. ಒಂದನೇ ತಾರೀಖು ಬರ್ತೀನಲ್ಲ!' ಎಂದು ಹೇಳಿ ಹೊರಟೇಬಿಟ್ಟಿತು. 'ಏ.. ನಿಲ್ಲು..' ಅಂತ ನಾನು ಕೂಗಿಕೊಂಡೆ.

ನನಗೆ ತಟ್ಟನೆ ಎಚ್ಚರಾಯಿತು. ದಢಬಡಿಸಿ ಎದ್ದು ಕುಳಿತೆ. ಕಿಟಕಿಯಲ್ಲಿ ಹೊಸ ಬೆಳಗಿನ ಬಿಸಿಲು ಕಾಣಿಸಿತು. ಕ್ಯಾಲೆಂಡರು ನೋಡಿದೆ: ಇನ್ನೂ ಡಿಸೆಂಬರಿನಲ್ಲಿಯೇ ಇತ್ತು. ಗಡಿಯಾರ ನೋಡಿದೆ: ಏಳು ಗಂಟೆಯನ್ನೂ ದಾಟಿ ಓಡುತ್ತಿತ್ತು ಮುಳ್ಳು.

[ಈ ಲೇಖ, 'ವಿಕ್ರಾಂತ ಕರ್ನಾಟಕ ' ಪತ್ರಿಕೆಯ ಈ ವಾರದ (22.12.2006) ಸಂಚಿಕೆಯಲ್ಲಿ ಪ್ರಕಟವಾಗಿದೆ. ಅವರಿಗೆ ನನ್ನ ಕೃತಜ್ಞತೆಗಳು.]

Thursday, December 14, 2006

ಸುಗ್ಗಿ ವ್ಯಾಳ್ಯಾಗ...

ಅಹಹಹ ಚಳಿ...! ಮೈ ಕೊರೆಯುವ ಚಳಿ. ಗಡಗಡ ನಡುಗಿಸುವ ಚಳಿ. ಹಲ್ಲುಗಳನ್ನು ಕಟಕಟ ಅನ್ನಿಸುವ ಚಳಿ. ಮಾಘಿ ಚಳಿ. ಚಳಿ ಚಳಿ! ಬೆಂಗಳೂರಿನಲ್ಲಿ ಕಮ್ಮಗೆ ಚಳಿ ಬಿದ್ದಿದೆ.

ಊರಿನಲ್ಲಿ ಸುಗ್ಗಿ ಶುರುವಾಗಿದೆಯಂತೆ. ಪ್ರತಿ ವರ್ಷವೂ ಹೀಗೆಯೇ. ಚಳಿ ಬೀಳುತ್ತಿದ್ದಂತೆಯೇ ಸುಗ್ಗಿಯೂ ಶುರುವಾಗುತ್ತದೆ. ಚಳಿಗಾಲ ಶುರುವಾಗುತ್ತಿದ್ದಂತೆಯೇ ಅಡಿಕೆಕಾಯಿಗಳು ಬೆಳೆದು ಹಣ್ಣಾಗಿ ಉದುರಲಾರಂಭಿಸುತ್ತವೆ. ಚಾಲಿ ಮಾಡುವ ಆಲೋಚನೆ ಇದ್ದವರು ಸ್ವಲ್ಪ ತಡವಾಗಿ ಕೊನೆ ಕೊಯ್ಲು ಶುರುಮಾಡುತ್ತಾರೆ. ಕೆಂಪಡಿಕೆ ಮಾಡುವವರು, ಚಳಿ ಬೀಳುತ್ತಿದ್ದಂತೆಯೇ, ಒಂದೆರಡು ಮರಗಳಲ್ಲಿ ಹಣ್ಣಡಿಕೆಗಳು ಉದುರಲು ಶುರುವಿಡುತ್ತದ್ದಂತೆಯೇ, ಅಡಿಕೆ ಬೆಳೆದದ್ದು ಗೊತ್ತಾಗಿ ಕೊನೆಕಾರನಿಗೆ ಬರಲು ಹೇಳಿಬಿಡುತ್ತಾರೆ.

ಈಗ ಚಾಲಿ ಅಡಿಕೆಗೆ ರೇಟ್ ಇಲ್ಲವಾದ್ದರಿಂದ ಕೆಂಪಡಿಕೆ ಮಾಡುವವರೇ ಜಾಸ್ತಿ. ಅಲ್ಲದೇ, ಅಡಿಕೆ ಹಣ್ಣಾಗಿ, ಆಮೇಲೆ ಅದನ್ನು ಒಣಗಿಸಿ, ಆಮೇಲೆ ಸುಲಿಸಿ, ಮಂಡಿಗೆ ಒಯ್ದು ಹಾಕಿ... ಅಷ್ಟೆಲ್ಲಾ ಆಗಲಿಕ್ಕೆ ಮತ್ತೆರಡು-ಮೂರು ತಿಂಗಳು ಕಾಯಬೇಕು. ಅಲ್ಲಿಯವರೆಗೆ ಕಾಯುವ ಚೈತನ್ಯವಿದ್ದವರು ಕಾಯುತ್ತಾರೆ. ಆದರೆ ಅರ್ಧ-ಒಂದು ಎಕರೆ ತೋಟ ಇರುವವರಿಗೆ ಅಷ್ಟೊಂದು ಕಾಯಲಿಕ್ಕೆ ಆಗುವುದಿಲ್ಲ. ಏಕೆಂದರೆ ಈಗಾಗಲೇ 'ಕೈ' ಖಾಲಿಯಾಗಿರೊತ್ತೆ. ಮಂಡಿಯವರು 'ಇನ್ನು ಅಡಿಕೆ ತಂದು ಹಾಕುವವರೆಗೂ ದುಡ್ಡು ಕೊಡುವುದಿಲ್ಲ' ಅಂದಿರುತ್ತಾರೆ. ಆದ್ದರಿಂದ, ಅಡಿಕೆ ಬೆಳೆಯುತ್ತಿದ್ದಂತೆಯೇ ಕೊಯ್ಲು ಮಾಡಿ, ಕೆಂಪಡಿಕೆ ಮಾಡಿ, ಮಂಡಿಗೆ ಸಾಗಿಸಿ, ಸುಗ್ಗಿ ಮುಗಿಸಿಕೊಂಡುಬಿಡುತ್ತಾರೆ ಬಹಳಷ್ಟು ಬೆಳೆಗಾರರು.

ಸುಗ್ಗಿ ಸಾಮಾನ್ಯವಾಗಿ ದೀಪಾವಳಿಯ ಎಡ-ಬಲಕ್ಕೆ ಬರುತ್ತದೆ. ಅಂಗಳದಲ್ಲಿ ಬೆಳೆದಿದ್ದ ಕಳೆ-ಜಡ್ಡನ್ನೆಲ್ಲಾ ಕೆತ್ತಿಸಿ ಚೊಕ್ಕು ಮಾಡಿ 'ದೊಡ್ಡಬ್ಬಕ್ಕೂ ಆತು - ಸುಗ್ಗಿಗೂ ಆತು' ಅನ್ನುವುದರೊಂದಿಗೆ ಸುಗ್ಗಿಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗುತ್ತವೆ. ತೋಟದಲ್ಲಿ ಗೋಟಡಿಕೆಗಳು ಬೀಳುವುದು ಶುರುವಾಯಿತೆಂದರೆ ಅಪ್ಪ ಕೊನೆಕಾರನಿಗೆ ಹೇಳಿ ನಮ್ಮ ಮನೆಯ ಕೊಯ್ಲಿನ 'ಡೇಟ್ ಫಿಕ್ಸ್' ಮಾಡಿಕೊಂಡು ಬರುತ್ತಾನೆ. ಸರಿ, ಹೇಳಿದ ದಿನ ಕೊನೆಕಾರ ತನ್ನ ಊದ್ದನೆಯ ದೋಟಿ, ನೇಣಿನ ಹಗ್ಗ, ಕಡಿಕೆ ಮಣೆ.. ಎಲ್ಲಾ ಹಿಡಿದುಕೊಂಡು, ತನ್ನ ಸೈಕಲ್ಲನ್ನು ತಳ್ಳಿಕೊಂಡು, ತನ್ನ ಜೊತೆ ಮತ್ತೆ ನಾಲ್ಕಾರು ಜನ ಆಳುಗಳನ್ನು ಕರೆದುಕೊಂಡು ಬೆಳಗ್ಗೆ ೮.೩೦ಕ್ಕೆಲ್ಲ ಬಂದುಬಿಡುತ್ತಾನೆ. ಆಳುಗಳಲ್ಲಿ ಹೆಣ್ಣಾಳು-ಗಂಡಾಳು ಇಬ್ಬರೂ ಇರುತ್ತಾರೆ. ಕೆಲವೊಮ್ಮೆ ಕೊನೆಕಾರ ತನ್ನ ಮಕ್ಕಳನ್ನೂ ಕರೆತರುವುದುಂಟು. ಈ ಮಕ್ಕಳು ತಮ್ಮ ತಾಯಂದಿರ ಜೊತೆ ಕೊನೆಕಾರ ಉದುರಿಸಿದ ಅಡಿಕೆಗಳನ್ನು ಒಟ್ಟುಮಾಡುತ್ತಾರೆ. ದೊಡ್ಡವರು, ಗಂಡಸರು ಕೊನೆಯನ್ನು ಕಲ್ಲಿ / ಹೆಡಿಗೆಯಲ್ಲಿ ತುಂಬಿ ತೋಟದಿಂದ ಮನೆಯ ಅಂಗಳಕ್ಕೆ ಹೊತ್ತು ತಂದು ಹಾಕುತ್ತಾರೆ. ಇವರಲ್ಲೇ ಒಬ್ಬ ನೇಣು (ಮಿಣಿ) ಹಿಡಿಯುತ್ತಾನೆ.

ಕೊನೆಕಾರ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ, ಕೇವಲ ಲಂಗೋಟಿ, ಹಾಳೆಟೊಪ್ಪಿ ಮತ್ತು ಕೊರಳಿಗೊಂದು ಹಾಳೆಯ ಪಟ್ಟಿಯನ್ನು ನೇತುಬಿಟ್ಟುಕೊಂಡು ಮರ ಹತ್ತುತ್ತಾನೆ. ಒಮ್ಮೆ ಬೀಡಿ ಎಳೆದು ಮರ ಹತ್ತಿದನೆಂದರೆ ಸುತ್ತಮುತ್ತಲಿನ ಎಲ್ಲಾ ಮರಗಳ ಕೊನೆಗಳನ್ನೂ, ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುತ್ತಾ, ಕೊಯ್ದು ಮುಗಿಸಿಬಿಡುತ್ತಾನೆ.

ಅಪ್ಪ, ಹತ್ತೂ ವರೆ ಹೊತ್ತಿಗೆ, ಅಮ್ಮನ ಬಳಿ ಚಹ ಮಾಡಿಸಿಕೊಂಡು ಒಂದು ಗಿಂಡಿಯಲ್ಲಿ ತುಂಬಿಕೊಂಡು, ಒಂದು ದೊಡ್ಡ ಕ್ಯಾನಿನಲ್ಲಿ ನೀರು ತುಂಬಿಕೊಂಡು, ಸ್ವಲ್ಪ ಬೆಲ್ಲವನ್ನೂ ತಗೊಂಡು, ತೋಟಕ್ಕೆ ಧಾವಿಸುತ್ತಾನೆ. ಅಪ್ಪನ ಜೊತೆ, ಮೂರನೇ ಕ್ಲಾಸಿಗೆ ಹೋಗುವ ಪುಟ್ಟನೂ ಬರುತ್ತಾನೆ. ಈ ಪುಟ್ಟ 'ಇವತ್ತು ಕೊನೆಕೊಯ್ಲು' ಅಂತ ಹೇಳಿ ಮೇಷ್ಟ್ರಿಂದ ರಜೆ ಪಡೆದು ಬಂದಿದ್ದಾನೆ. ಅಪ್ಪ, 'ಕೊನೆ ಕೊಯ್ಯದು ಅವ್ವು, ಇಲ್ಲಿ ಅಡುಗೆ ಮಾಡದು ಅಮ್ಮ, ನಿಂಗೆಂತಾ ಕೆಲ್ಸ? ಸುಮ್ನೇ ಶಾಲಿಗೆ ಹೋಗದು ಬಿಟ್ಟು.. ಸರಿ, ಬಾ ತೋಟಕ್ಕೆ, ಒಂದು ಹೆಡಿಗೆ ಹೊರುಸ್ತಿ, ಹೊತ್ಕಂಡು ಬರ್ಲಕ್ಕಡ..' ಅನ್ನುತ್ತಲೇ ಮಗನನ್ನೂ ಕರೆದುಕೊಂಡು ತೋಟಕ್ಕೆ ಹೊರಟಿದ್ದಾನೆ. 'ಅಪ್ಪ ತಮಾಷೆಗೆ ಹೇಳ್ತಿದ್ದಾನೆ' ಅಂತ ಗೊತ್ತಿದ್ದರೂ ಪುಟ್ಟನಿಗೆ ಒಳಗೊಳಗೇ ಭಯ. ಅಂವ ಸುಮ್ಮನೆ ಅಪ್ಪನನ್ನು ಹಿಂಬಾಲಿಸಿದ್ದಾನೆ. ಸಾರ ದಾಟುವಾಗ, ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಮೀನು ನೋಡಲು ಹೋಗಿ, ಒಮ್ಮೆ ಓಲಾಡಿ, ಮೈಯೆಲ್ಲಾ ನಡುಗಿ, ಅಪ್ಪನ ಕೈ ಹಿಡಕೊಂಡಿದ್ದಾನೆ.

'ನಿಧಾನಕ್ಕೆ ಕಾಲ್ಬುಡ ನೋಡ್ಕ್ಯೋತ ಬಾ, ಹಾವು-ಹುಳ ಇರ್ತು... ಮೇಲೆ ನೋಡಡ, ಕಣ್ಣಿಗೆ ಕಸ ಬೀಳ್ತು' ಎಂದೆಲ್ಲಾ ಪುಟ್ಟನಿಗೆ ಅಪ್ಪ 'ಇನ್‍ಸ್ಟ್ರಕ್ಷನ್ಸ್' ಕೊಡುತ್ತಾ ಬರುತ್ತಿದ್ದಾನೆ. ಕೊನೆ ಕೊಯ್ಯುತ್ತಿರುವಲ್ಲಿಗೆ ಬರುತ್ತಿದ್ದಂತೆಯೇ ನೇಣು ಹಿಡಿಯುತ್ತಿದ್ದ ಮಾದೇವ 'ಓಹೋ.. ಸಣ್ ಹೆಗಡೇರು ಬಂದ್ಬುಟ್ಯಾರೆ.. ಏನು ಸಾಲಿಗೆ ಹೋಗ್ನಲ್ಲಾ?' ಎಂದಿದ್ದಾನೆ. ಪುಟ್ಟ ಮೇಲೆ ನೋಡಿದರೆ ಕೊನೆಕಾರ ಒಂದು ಕೋತಿಯಂತೆ ಕಾಣಿಸುತ್ತಾನೆ. ಅಂವ ಒಂದು ಮರದಿಂದ ಒಂದು ಮರಕ್ಕೆ ಹಾರಿದಾಕ್ಷಣ ಮರ ಸುಂಯ್ಯನೆ ತೂಗುತ್ತಾ ವಾಪಸು ಬರುವುದನ್ನು ಬೆರಗುಗಣ್ಣಿನಿಂದ ನೋಡುತ್ತಾನೆ. ಅಪ್ಪ ಈಗಾಗಲೆ ಎಷ್ಟು ಕೊಯ್ದಾಗಿದೆ, ಆಚೆ ತುಂಡಿಗೆ ಹೋಗಲಿಕ್ಕೆ ಇನ್ನೂ ಎಷ್ಟು ಹೊತ್ತು ಬೇಕು, ಇವತ್ತು ಆಚೆ ಬಣ್ಣ ಮುಗಿಯಬಹುದೇ, ಈ ವರ್ಷ ಕೊನೆಯಲ್ಲಿ 'ಹಿಡಿಪು' ಇದೆಯೇ, ಅಥವಾ ಪೀಚೇ? -ಅಂತೆಲ್ಲಾ ನೋಡಿಕೊಂಡು, ಲೆಕ್ಕ ಹಾಕಿಕೊಂಡು, ಪುಟ್ಟನೊಂದಿಗೆ ಮನೆಗೆ ಮರಳುತ್ತಾನೆ. ಅದಾಗಲೇ ಮನೆಯ ಅಂಗಳದಲ್ಲಿ ಕೊನೆ, ಉದುರಡಿಕೆಗಳನ್ನು ತಂದು ಸುರಿದು ಅಂಗಳದ ತುಂಬಾ ಸುಗ್ಗಿಯ ಕಳೆ ತುಂಬಿರುತ್ತದೆ.

ಅಮ್ಮ ಕೊನೆಕೊಯ್ಲಿನವರಿಗಾಗಿಯೇ ಇವತ್ತು ಚಿತ್ರಾನ್ನ ಮಾಡುತ್ತಾಳೆ. ರವೆ ಉಂಡೆ ಮಾಡುತ್ತಾಳೆ. ಅಪ್ಪ ನಾಲ್ಕು ಬಲಿಷ್ಟ ಕೊನೆಗಳನ್ನು ತಂದು ದೇವರ ಮುಂದಿಟ್ಟು, ತನಗಿನ್ನೂ ಸ್ನಾನವಾಗದೇ ಇದ್ದುದರಿಂದ 'ಆನು ಇವತ್ತು ಸಂಜೆ ಸ್ನಾನ ಮಾಡ್ತಿ; ನೀನೇ ಒಂಚೂರು ಪೂಜೆ ಮಾಡ್ಬುಡೇ' ಎಂದು ಅಮ್ಮನ ಬಳಿ ಹೇಳುತ್ತಾನೆ. ಅಮ್ಮ, ದೇವರಿಗೂ, ಅಡಿಕೆ ಕೊನೆಗಳಿಗೂ ಕುಂಕುಮ-ಗಿಂಕುಮ ಹಾಕಿ, ಊದುಬತ್ತಿ ಹಚ್ಚಿ ಪೂಜೆ ಮಾಡುತ್ತಾಳೆ. ತುಪ್ಪದ ದೀಪ ಹಚ್ಚಿಟ್ಟು, 'ನಮ್ಮನೆ ಅಡಿಕೆಗೆ ಈ ವರ್ಷ ಒಳ್ಳೇ ರೇಟು ಸಿಗ್ಲಿ ದೇವ್ರೇ' ಎಂದು ಪ್ರಾರ್ಥಿಸುತ್ತಾಳೆ. ಶುಭ್ರವಾಗಿ ಬೆಳಗುತ್ತದೆ ದೇವರ ಗೂಡಿನಲ್ಲಿ ದೀಪ.

ಮಧ್ಯಾಹ್ನ ಒಂದೂ ವರೆ ಹೊತ್ತಿಗೆ ಕೊನೆ ಹೊರುವ ಒಬ್ಬ ಆಳು, ಅಮ್ಮ 'ಇಲ್ಲೇ ಹಾಕ್ತೀನಿ ಊಟ ಮಾಡ್ರೋ' ಅಂದರೂ ಕೇಳದೇ, 'ತ್ವಾಟದಾಗೇ ಉಣ್ತೀನಿ ಅಮ್ಮಾವ್ರೇ' ಅಂತಂದು, ಚಿತ್ರಾನ್ನ-ರವೆ ಉಂಡೆ-ನೀರು ಇತ್ಯಾದಿಗಳನ್ನೆಲ್ಲಾ ತೋಟಕ್ಕೆ ಒಯ್ದುಬಿಡುತ್ತಾನೆ. ಅವರು ಅಲ್ಲಿ ತೋಟದ ತಂಪಿನಲ್ಲಿ ಊಟ ಮಾಡುತ್ತಿರಬೇಕಾದರೆ ಇಲ್ಲಿ ಅಪ್ಪ-ಅಮ್ಮ-ಪುಟ್ಟ ಮನೆಯಲ್ಲಿ ಉಂಡು ಮುಗಿಸುತ್ತಾರೆ.

ಸಂಜೆ ಐದೂ ವರೆ ಹೊತ್ತಿಗೆ ಅವತ್ತಿನ ಕೊಯ್ಲು ಮುಗಿಸಿ ಆಳುಗಳೆಲ್ಲಾ ತೋಟದಿಂದ ಮರಳುತ್ತಾರೆ. 'ಕೊನೆ, ಉದುರು ಏನನ್ನೂ ತೋಟದಲ್ಲಿ ಬಿಟ್ಟಿಲ್ಲ ತಾನೆ?' ಅಂತ ಅಪ್ಪ ಕೇಳುತ್ತಾನೆ. ಆಮೇಲೆ ಅವತ್ತು ಕೊಯ್ದ ಕೊನೆಗಳನ್ನು ಎಣಿಸಬೇಕು. ಏಕೆಂದರೆ ಕೊನೆಕಾರನಿಗೆ 'ಪೇಮೆಂಟ್' ಮಾಡುವುದು ಕೊನೆಯ ಲೆಕ್ಕದ ಮೇಲೆ. 'ಒಂದು ಕೊನೆಗೆ ಇಷ್ಟು' ಅಂತ. ಲೆಕ್ಕವೆಲ್ಲ ಮುಗಿದ ಮೇಲೆ, ಅಪ್ಪ 'ಲೆಕ್ಕದ ಪುಸ್ತಕ'ದಲ್ಲಿ ನಮೂದಿಸಿಯಾದ ಮೇಲೆ, ಆಳುಗಳು ನಾಳೆ ಬೆಳಗ್ಗೆ ಬರುವುದಾಗಿ ಹೇಳಿ ಹೊರಟುಹೋಗುತ್ತಾರೆ.

ಮುಂದಿನ ಕೆಲಸವೆಂದರೆ, ಉದುರಡಿಕೆಯಲ್ಲಿ ಗೋಟು-ಹಸಿರಡಿಕೆಗಳನ್ನು 'ಸೆಪರೇಟ್' ಮಾಡುವುದು. ಬೇಗಬೇಗ ಮಾಡಬೇಕು. ಏಕೆಂದರೆ ಇನ್ನು ಸ್ವಲ್ಪೇ ಹೊತ್ತಿಗೆ ಅಡಿಕೆ ಸುಲಿಯುವವರು ಬಂದುಬಿಡುತ್ತಾರೆ. ಈ ಕೆಲಸಕ್ಕೆ ಅಮ್ಮ, ಪುಟ್ಟ ಎಲ್ಲರೂ ಕೈಜೋಡಿಸುತ್ತಾರೆ -ಅಪ್ಪನ ಜೊತೆ. ಉದುರಡಿಕೆಯೇ ಸಾಕಷ್ಟಿರುವುದರಿಂದ ಇವತ್ತು ಕೊನೆ ಬಡಿಯುವುದೇನು ಬೇಡ. ನಾಳೆ ಆಳಿಗೆ ಬರಲಿಕ್ಕೆ ಹೇಳಿ ಬಡಿಸಿದರಾಯಿತು.

ಈಗ ಅಡಿಕೆ ಸುಲಿಯುವವರು ಬಂದಿದ್ದಾರೆ. ಜ್ಯೋತಿ ಬಂದ್ಲು, ಜಲಜ ಬಂದ್ಲು, ಸುಮಿತ್ರ ಬಂದ್ಲು, ಬಾಕರ ಬಂದ... ಎಲ್ಲರೂ ತಮ್ಮ ಮೆಟಗತ್ತಿಯನ್ನು (ಮೆಟ್ಟುಗತ್ತಿ) ಮಣೆಗೆ ಬಡಿದು ಸಿದ್ಧಪಡಿಸಿಕೊಂಡು ಕುಳಿತಿದ್ದಾರೆ. ಅಪ್ಪ ಅಂಗಳಕ್ಕೆ ಒಂದು ತಾತ್ಕಾಲಿಕ ವೈರೆಳೆದು ನೂರು ಕ್ಯಾಂಡಲಿನ ಬಲ್ಬು ಹಾಕಿ ಬೆಳಕು ಮಾಡಿಕೊಟ್ಟಿದ್ದಾನೆ. ಈಗ ಅಂಗಳದಲ್ಲಿ 'ಕ್ಚ್ ಕ್ಚ್ ಕಟ್ ಕಟ್' ಶಬ್ದ ಶುರುವಾಗಿದೆ. ರಾತ್ರಿ ಒಂಬತ್ತರವರೆಗೆ ಸುಲಿದು, ಗಿದ್ನ (ಅಥವಾ ಡಬ್ಬಿ) ಯಲ್ಲಿ ಅಳೆದು, ಲೆಕ್ಕದ ಪುಸ್ತಕದಲ್ಲಿ ಬರೆಸಿ, ಅವರೆಲ್ಲ ಮನೆಗೆ ಹೋಗುತ್ತಾರೆ. (ಕೆಲವೊಂದು ಊರುಗಳಲ್ಲಿ ರಾತ್ರಿ-ಬೆಳಗು ಸುಲಿಯುತ್ತಾರೆ) ನಂತರ, ಸುಲಿದ ಅಡಕೆಯ ಬುಟ್ಟಿಗಳನ್ನು ಅಪ್ಪ-ಅಮ್ಮ ಇಬ್ಬರೂ ಆಚೆ-ಈಚೆ ಹಿಡಿದುಕೊಂಡು ಮನೆಯೊಳಗೆ ತಂದು ಇಡುತ್ತಾರೆ. ಇವತ್ತು ಹೆಚ್ಚು ಅಡಿಕೆ ಆಗಿಲ್ಲವಾದ್ದರಿಂದ, ನಾಳೆ ಎಲ್ಲಾ ಸೇರಿ ಬೇಯಿಸಿದರಾಯಿತು ಅಂದುಕೊಂಡಿದ್ದಾನೆ ಅಪ್ಪ.

ಮರುದಿನ ಮತ್ತೆ ಕೊನೆಕೊಯ್ಲು, ಅಡಿಕೆ ಸುಲಿಯುವುದು ನಡೆಯುತ್ತದೆ. ಅಪ್ಪ ಅಂಗಳದಲ್ಲೇ ಒಂದು ಮೂಲೆಯಲ್ಲಿ ಅಡಿಕೆ ಬೇಯಿಸುವುದಕ್ಕೆ ದೊಡ್ಡ ಎರಡು ಜಂಬಿಟ್ಟಿಗೆ ಕಲ್ಲುಗಳಿಂದ ಒಲೆ ಹೂಡುತ್ತಾನೆ. ಅದರ ಮೇಲೆ ಹಂಡೆ ತಂದಿಡುತ್ತಾನೆ. ರಾತ್ರಿ ಅಡಿಕೆ ಸುಲಿಯುವವರು ಹೋದಮೇಲೆ ಅಪ್ಪ ಒಲೆಗೆ ಬೆಂಕಿ ಕೊಟ್ಟು, ಹಂಡೆಯಲ್ಲಿ ನೀರು ಸುರಿದು, ಕಳೆದ ವರ್ಷದ ತೊಗರು (ಅಡಿಕೆ ಬೇಯಿಸಿಯಾದ ಮೇಲೆ ಉಳಿಯುವ ಕೆಂಪಗಿನ ನೀರು; 'ಚೊಗರು' ಅಂತಲೂ ಕೆಲವಡೆ ಕರೆಯುತ್ತಾರೆ) ಉಳಿದಿದ್ದರೆ ಅದನ್ನು ಸ್ವಲ್ಪ 'ಮಿಕ್ಸ್' ಮಾಡಿ, ಬುಟ್ಟಿಗಳಲ್ಲಿನ ಸುಲಿದ ಅಡಿಕೆಗಳನ್ನು ತಂದು ಸುರಿಯುತ್ತಾನೆ. ಚಳಿ ಕಾಯಿಸಲಿಕ್ಕೆ ಈ ಅಡಿಕೆ ಬೇಯಿಸುವ ಒಲೆ ಹೇಳಿ ಮಾಡಿಸಿದಂತಿರುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದ ಗಣಪತಣ್ಣ, ಪಕ್ಕದ ಕಣವನ್ನು ಕಾಯಲು ಬರುವ ಮಾಬ್ಲಜ್ಜ ಎಲ್ಲರೂ ಈ ಒಲೆಯೆಡೆಗೆ ಆಕರ್ಷಿತರಾಗಿ ಒಬ್ಬೊಬ್ಬರೇ ಬರುತ್ತಾರೆ... 'ಹೂಂ, ಈ ವರ್ಷ ಏನು ಭಾರೀ ತೇಜಿ ಕಾಣ್ತಲೋ.. ಶ್ರೀಪಾದನ ಮನೆ ಅಡಿಕೆ ಹನ್ನೆರಡು ಸಾವ್ರಕ್ಕೆ ಹೋತಡ..' ಎನ್ನುತ್ತಾ ಮಾಬ್ಲಜ್ಜ ಕವಳ ಉಗಿದು, ಅಂಗಳದ ಮೂಲೆಗೆ ಹೋಗಿ ವಂದಕ್ಕೆ ಕೂರುತ್ತಾನೆ. 'ಓಹ..? ಆದ್ರೂ ನಮ್ಮನೆ ಅಡಿಕೆ ರೆಡಿಯಾಗ ಹೊತ್ತಿಗೆ ಎಂತಾಗ್ತೇನ' ಎನ್ನುತ್ತಾನೆ ಅಪ್ಪ. 'ಹೂಂ, ಜಾಸ್ತಿ ತೆರಿಬೆಟ್ಟೆ ಬರ್ಲೆ ಅಲ್ದಾ?' ಅನ್ನುತ್ತಾನೆ ನಾರಣಣ್ಣ ಬುಟ್ಟಿಯಲ್ಲಿದ್ದ ಅಡಿಕೆಯಲ್ಲಿ ಒಮ್ಮೆ ಕೈಯಾಡಿಸಿ. 'ಏನಂದ್ರೂ ಇನ್ನೂ ನಾಕು ಒಬ್ಬೆ ಆಗ್ತೇನ' ಅನ್ನುತ್ತಾನೆ ಗಣಪತಣ್ಣ. ಅಷ್ಟೊತ್ತಿಗೆ ಲಕ್ಷ್ಮೀ ಬಸ್ಸು ನಿಂತುಹೋದ ಸದ್ದು ಕೇಳಿಸುತ್ತದೆ. 'ಬಸ್ಸಿಗೆ ಯಾರೋ ಬಂದ ಕಾಣ್ತು.' 'ಹೂಂ, ಯಾರು ಬಂದ್ರೂ ಇನ್ನು ಎರಡು ನಿಮಿಷದಾಗೆ ಗೊತ್ತಾಗ್ತಲ..' 'ಯಾರೋ ಪ್ಯಾಂಟು-ಶರಟು ಹಾಕ್ಯಂಡವರ ಥರ ಕಾಣ್ತಪ.. ಸ್ಟ್ರೀಟ್‍ಲೈಟ್ ಬೆಳಕಗೆ' 'ಓ, ಹಂಗರೆ ಪಟೇಲರ ಮನೆ ಗಣೇಶನೇ ಸಯ್ಯಿ ತಗ..!' ಅವರ ಹರಟೆ ಮುಂದುವರಿಯುತ್ತದೆ. ಅಮ್ಮ ಎಲ್ಲರಿಗೂ ಕಷಾಯ ಮಾಡಿಕೊಟ್ಟು, ತಾನು ಮಲಗಲು ಕೋಣೆಗೆ ಹೋಗುತ್ತಾಳೆ. ಪುಟ್ಟ ಅದಾಗಲೇ ನಿದ್ದೆ ಹೋಗಿರುತ್ತಾನೆ.

ಕೊನೆಕೊಯ್ಲು ಮೂರ್ನಾಲ್ಕು ದಿನಗಳ ವರೆಗೆ ಮುಂದುವರೆಯುತ್ತದೆ: ತೋಟದ ವಿಸ್ತೀರ್ಣವನ್ನು ಅವಲಂಭಿಸಿ. ಬೇಯಿಸಿದ ಅಡಿಕೆಯನ್ನು ಚಾಪೆ (ಅಥವಾ ತಟ್ಟಿ)ಯ ಮೇಲೆ ಒಣಗಿಸಲಾಗುತ್ತದೆ. ಒಳ್ಳೆಯ ಬಿಸಿಲಿದ್ದರೆ ಐದಾರು ದಿನಗಳಲ್ಲಿ ಅಡಿಕೆ ಒಣಗುತ್ತದೆ. ಈ ಮಧ್ಯೆ ತೆರಿಬೆಟ್ಟೆ-ಗೋಟಡಿಕೆಗಳನ್ನು ಹೆರೆಯುವುದು, ಇತ್ಯಾದಿ ಕೆಲಸಗಳು ನಡೆದಿರುತ್ತವೆ. ಒಣಗಿದ ಅಡಿಕೆಯನ್ನು ದೊಡ್ಡ ಗೋಣಿಚೀಲಗಳಲ್ಲಿ ತುಂಬಿ ಅಪ್ಪ ಬಾಯಿ ಹೊಲೆಯುತ್ತಾನೆ. ಸುಬ್ಬಣ್ಣನ ಮನೆ ವ್ಯಾನು ಪೇಟೆಗೆ ಹೋಗುವಾಗ ಅದರಲ್ಲಿ ಹೇರಿ ಮಂಡಿಗೆ ಸಾಗಿಸಲಾಗುತ್ತದೆ. ವ್ಯಾಪಾರಿಗಳು ಒಳ್ಳೆಯ ರೇಟು ನಿಗಧಿಪಡಿಸಿದ ದಿನ ಅಪ್ಪ ಅದನ್ನು ಕೊಡುತ್ತಾನೆ.

ಎಷ್ಟೇ ಮುಂಚೆ ಕೊಯ್ಲು ಮಾಡಿಸಿ ಕೆಂಪಡಿಕೆ ಮಾಡಿದ್ದರೂ ಸಹ ಒಂದಷ್ಟು ಅಡಿಕೆ ಹಣ್ಣಾಗಿರುತ್ತದಾದ್ದರಿಂದ ಅವು ಅಂಗಳದಲ್ಲಿ ಒಣಗುತ್ತಿರುತ್ತವೆ. ಸುಮಾರು ನಲವತ್ತು ದಿನಗಳಲ್ಲಿ ಅದೂ ಒಣಗುತ್ತದೆ. ಆಮೇಲೆ ಅದನ್ನು ಸುಲಿಸಿ ಮಂಡಿಗೆ ಕಳಿಸಲಾಗುತ್ತದೆ.

ಹೀಗೆ ಅಡಿಕೆ ಬೆಳೆಗಾರ ಹವ್ಯಕರ ಮನೆಗಳಲ್ಲಿ ಸುಗ್ಗಿಯೆಂದರೆ ಹಬ್ಬವೇ. ಆ ಒಂದಷ್ಟು ದಿನ ಗುದ್ದಾಡಿಕೊಂಡು ಬಿಟ್ಟರೆ, ಒಳ್ಳೆಯ ಬೆಲೆಗೆ ಅಡಿಕೆ ಮಾರಾಟವಾಗಿಬಿಟ್ಟರೆ, ಉಳಿದಂತೆ ಇಡೀ ವರ್ಷ ಆರಾಮಾಗಿರಬಹುದು. ತೋಟಕ್ಕೆ ದಿನಕ್ಕೊಮ್ಮೆ ಹೋಗಿ-ಬಂದು ಮಾಡಿಕೊಂಡು ಇದ್ದರೆ ಆಯಿತು. ಮಳೆಗಾಲದಲ್ಲಿ ಒಮ್ಮೆ ಗೊಬ್ಬರ ಹಾಕಿಸಬೇಕು. ಮಳೆ ಮುಗಿದಮೇಲೆ ಕಳೆ ತೆಗೆಸಬೇಕು. ಅಷ್ಟೇ! ಉಳಿದಂತೆ ಅಡಿಕೆ ಬೆಳೆಗಾರನ ಜೀವನವೆಂದರೆ ಸುಖಜೀವನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಸಿಕ್ಕಾಪಟ್ಟೆ ಏರುಪೇರು ಆಗುತ್ತಿರುವುದರಿಂದ, ಮತ್ತು ಮಳೆ ಸರಿಯಾಗಿ ಆಗದೆ ಸಿಂಗಾರ ಒಣಗುವುದರಿಂದ, ಮರಗಳೇ ಸಾಯುತ್ತಿರುವುದರಿಂದ, ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು. ಮಳೆ ಸರಿಯಾಗಿ ಆಗಿ, ಅಡಿಕೆಗೆ ಒಳ್ಳೆಯ ರೇಟ್ ಬಂದು, ಬರೆಯದಿರುವಂತೆ ಆದರಂತೂ ಒಳ್ಳೆಯದೇ!

Wednesday, November 29, 2006

ಕೀರ್ವಾಣಿಯ ಮದುವೆ ಸುದ್ದಿ ಕೇಳಿ...

ನಿನ್ನೆ ಮನೆಗೆ ಫೋನ್ ಮಾಡಿದ್ದಾಗ ಅಮ್ಮ 'ಅವಳ' ಮದುವೆ ಫಿಕ್ಸಾಗಿರುವ ಸುದ್ದಿ ಹೇಳಿದಳು. ತಕ್ಷಣ ನನ್ನ ನೆನಪಿನಾಳದಿಂದ ಹರಿದು ಬಂತಲ್ಲ ನೀರು..?

ನಾನು ನನ್ನ ಹೈಸ್ಕೂಲು ಓದಿದ್ದು ನಮ್ಮೂರಿನಿಂದ ನಾಲ್ಕು ಮೈಲು ದೂರದಲ್ಲಿರುವ ನಿಸರಾಣಿಯ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯಲ್ಲಿ. ಏಳನೇ ತರಗತಿ ಮುಗಿದದ್ದೇ ನನ್ನನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಬೇಕು ಎಂದು ಅನೇಕರು ಸಲಹೆಯಿತ್ತರಾದರೂ ನನ್ನ ಅಪ್ಪ ಅದಕ್ಕೆ ಮನಸು ಮಾಡಲಿಲ್ಲ. 'ಓದೋವ್ರಿಗೆ ಎಲ್ಲಾದರೆ ಏನು? ನಿಸರಾಣಿ ಶಾಲೆಯಲ್ಲಿ ತುಂಬಾ ಚೆನ್ನಾಗಿ ಪಾಠ ನಡೆಯುತ್ತೆ. ಮೇಷ್ಟ್ರುಗಳೆಲ್ಲ ನಮ್ಮವರೇ. ನಾವೆಲ್ಲ ಹಿಂದೆ ಓದಿದ್ದು ಅಲ್ಲೇ ಅಲ್ವೇನು? ಅಲ್ಲಿ ಓದಿದ ಎಷ್ಟೊಂದು ಜನ ಈಗ ಎಲ್ಲೆಲ್ಲೋ ದೊಡ್ಡ ದೊಡ್ಡ ಕೆಲಸದಲ್ಲಿ ಇಲ್ವೇನು?' ಅಂತೆಲ್ಲಾ ಮಾತುಕತೆಯಾಗಿ ನಾನು ನಿಸರಾಣಿ ಶಾಲೆಗೇ ಸೇರುವುದು ಅಂತ ಆಯ್ತು. ಇಂಗ್ಲೀಷ್ ಮೀಡಿಯಂ ಶಾಲೆ ಎಂದರೆ ಸಾಗರದಲ್ಲಿತ್ತು. ದಿನವೂ ಓಡಾಡುವುದು ತೊಂದರೆ. ಅಲ್ಲದೆ ನಾನು ಆಗ ತುಂಬಾ ಚಿಕ್ಕವನಿದ್ದೆ ಬೇರೆಯವರಿಗೆ compare ಮಾಡಿದ್ರೆ. ಹೀಗಾಗಿ, 'ಇಂವ ಸಾಗರದ ಭಯಂಕರ ಟ್ರಾಫಿಕ್ಕಿನ (!) ರಸ್ತೆಯಲ್ಲಿ ಓಡಾಡಿ ಜಯಿಸಿಕೊಂಡು ಬರುವುದು ಸುಳ್ಳೇ ಸರಿ, ಬ್ಯಾಡೇ ಬ್ಯಾಡ ಸಾಗರ, ಇಲ್ಲೇ ನಿಸರಾಣಿಗೆ ಹೋಗಲಿ ಸಾಕು' ಅಂತ ಅಮ್ಮ ಅಜ್ಜಿಯರೂ ಸೇರಿಸಿದರು. ಅಲ್ಲಿಗೆ ಸರಿಯಾಯಿತು. ನನಗಂತೂ ಆಗ ಏನೆಂದರೆ ಏನೂ ತಿಳಿಯುತ್ತಿರಲಿಲ್ಲ. ಸಾಗರವಾದರೆ ಸಾಗರ, ನಿಸರಾಣಿಯಾದರೆ ನಿಸರಾಣಿ ಅಂತ ಇದ್ದವನು ನಾನು.

ಸರಿ, ನನ್ನನ್ನು ನಿಸರಾಣಿಯ ಶಾಲೆಗೆ ಸೇರಿಸಿದರು. ನಾನು ದಿನವೂ ನಾಲ್ಕು ಮೈಲು ಸೈಕಲ್ಲು ಹೊಡೆಯತೊಡಗಿದೆ. ಏರಲ್ಲೂ ಇಳಿಯದೇ ತುಳಿಯುತ್ತಿದ್ದೆ. ನನ್ನ ಜೊತೆ ಅಣ್ಣಪ್ಪ, ದುರ್ಗಪ್ಪರೇ ಮೊದಲಾದ ಸಹೃದಯ ಗೆಳೆಯರು ಸಿಕ್ಕಿದರು. ಈ ಲೋಕಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗದ ಮಾತುಗಳನ್ನು ಲೋಕಾಭಿರಾಮವಾಗಿ ಆಡುತ್ತಾ ಸಾಗುತ್ತಿದ್ದರೆ ಶಾಲೆ ಬಂದದ್ದೇ ಗೊತ್ತಾಗುತ್ತಿರಲಿಲ್ಲ.

ನಿಸರಾಣಿ ಶಾಲೆ ಹಿಂದೊಂದು ಕಾಲದಲ್ಲಿ ತುಂಬಾ ಚೆನ್ನಾಗಿದ್ದ ಶಾಲೆ. ಇಡೀ ಸೊರಬ ತಾಲೂಕಿಗೆ, ಅಷ್ಟೇ ಏಕೆ, ಜಿಲ್ಲೆಯಲ್ಲೇ ಹೆಸರು ಮಾಡಿದ್ದ ಶಾಲೆ. ನಿಸರಾಣಿ ಹೈಸ್ಕೂಲಿನಲ್ಲಿ ಎಸ್‍ಎಸ್‍ಎಲ್‍ಸಿ ಮಾಡಿಕೊಂಡು ಬಂದವರಿಗೆ ಯಾವ ಕಾಲೇಜಿನವರೂ ಸೀಟಿಲ್ಲ ಅನ್ನುತ್ತಿರಲಿಲ್ಲ. ಅಲ್ಲಿಯ ವಿಜ್ಞಾನ ಕೊಠಡಿಯಲ್ಲಿ ಇರುವ ಉಪಕರಣಗಳು ಮತ್ಯಾವುದೇ ಉತ್ತಮ ಶಾಲೆಗೆ ಹೋಲಿಸಬಹುದಾದಷ್ಟಿದ್ದವು. ಆಗ ಶಿಕ್ಷಕವರ್ಗವೂ ಹಾಗೆಯೇ ಇತ್ತು. ನನ್ನ ಅಪ್ಪ, ಅತ್ತೆಯರೆಲ್ಲರೂ ಓದಿದ್ದು ಅದೇ ಶಾಲೆಯಲ್ಲಿ. ನನ್ನ ಅಜ್ಜ ಶಾಲೆಯ ಪಕ್ಕ ಒಂದು ಕ್ಯಾಂಟೀನೂ ಇಟ್ಟಿದ್ದನಂತೆ.

ಆದರೆ ನಾನು ಸೇರುವ ಹೊತ್ತಿಗೆ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. Retirement ಸಮೀಪಿಸಿದ್ದ ಶಿಕ್ಷಕವರ್ಗ. ಯಾವ ಮೇಷ್ಟ್ರಿಗೂ ಪಾಟ ಮಾಡಬೇಕು ಅನ್ನುವ ಹುಮ್ಮಸ್ಸೇ ಇರಲಿಲ್ಲ. ಕೆಲ ಹಳೆಯ ಶಿಕ್ಷಕರು ಮತ್ತು ಆಗ ತಾನೇ ಸೇರಿದ್ದ ಒಂದಿಬ್ಬರು ಯುವ ಶಿಕ್ಷಕರನ್ನು ಬಿಟ್ಟರೆ ಉಳಿದವರೆಲ್ಲ ಕಾಟಾಚಾರಕ್ಕೆ ಶಾಲೆಗೆ ಬರುತ್ತಿದ್ದವರೇ. ನಮ್ಮ ಕನ್ನಡ ಪಂಡಿತರು ಕ್ಲಾಸಿಗೆ ಬಂದು ನಮಗೆ ಓದಿಕೊಳ್ಳಲು ಹೇಳಿ ತಾವು ಕಾಫಿಪುಡಿ ಲೆಕ್ಕ ಬರೆಯುತ್ತಾ ಕುಳಿತುಬಿಡುತ್ತಿದ್ದರು. ಹೆಡ್‍ಮಾಸ್ತರಂತೂ ಬಾಯಿ ತುಂಬಾ ಜರದಾ ತುಂಬಿಕೊಂಡು ಬರುತ್ತಿದ್ದರು. 'ಕೆಲವೊಂದು ದಿನ ಕುಡಿದುಕೊಂಡೇ ಬರ್ತಾರೆ' ಎಂದು ಕೆಲ ಗೆಳೆಯರು ಮೂದಲಿಸುತ್ತಿದ್ದರಾದರೂ ನನಗೆ ಆಗ ಅಷ್ಟೆಲ್ಲ ಮೂಗು ಚುರುಕಿರಲಿಲ್ಲ, ಮೇಲಾಗಿ ತಿಳಿಯುತ್ತಲೂ ಇರಲಿಲ್ಲ.

ಶಾಲೆಯಲ್ಲಿ ಹೆಣ್ಣು ಮಕ್ಕಳು ಬಲಗಡೆಯ ಬೆಂಚುಗಳಲ್ಲಿ, ಗಂಡುಮಕ್ಕಳು ಎಡಗಡೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಧ್ಯದಲ್ಲಿ ಓಡಾಡಲಿಕ್ಕೆ ದಾರಿ. ಹೆಣ್ಣು ಮಕ್ಕಳೂ ಗಂಡು ಮಕ್ಕಳೂ ಪರಸ್ಪರ ಮಾತನಾಡುವುದನ್ನು ನಿಷೇಧಿಸಲಾಗಿತ್ತು. ನಾವು ಗೆಳೆಯರು ಕಾರಿಡಾರಿನಲ್ಲಿ ಗುಂಪಾಗಿ ಮಾತನಾಡುತ್ತ ನಿಂತಿದ್ದಾಗ ಹುಡುಗಿಯರು ಬಂದರೆ 'ಹುಡುಗ್ರು ದಾರಿ ಬಿಡ್ಬೇಕು!' ಅಂತ ಹೇಳುತ್ತಿದ್ದರು. ನಾವು ಆ 'ಸಶರೀರವಾಣಿ'ಗೆ ಹೆದರಿ ತಕ್ಷಣ ಪಕ್ಕಕ್ಕೆ, ಅಂಗಳಕ್ಕೆ ಇಳಿದುಬಿಡುತ್ತಿದ್ದೆವು. ಯಾರಾದರೂ ಹುಡುಗರು ಕೀಟಲೆ ಮಾಡಿದರೆ ಹುಡುಗಿಯರು ಹೋಗಿ class teacherಗೆ complaint ಮಾಡುತ್ತಿದ್ದರು. ಹೀಗಾಗಿ ಹುಡುಗಿಯರೆಡೆಗೆ ನಮಗೆ ಒಂದು ತರಹದ ಭಯಮಿಶ್ರಿತ ದ್ವೇಷವಿತ್ತು.

ಆದರೆ ದ್ವೇಷವಿದ್ದಲ್ಲೇ ಪ್ರೀತಿ ಮೊಳೆಯುವ ಸಂಭವಗಳು ಜಾಸ್ತಿ. ನಮಗೆ ಅಷ್ಟೆಲ್ಲಾ restrictions ಇದ್ದರೂ ಹುಡುಗಿಯರೆಡೆಗೆ ಒಂದು 'ಹುಡುಗಸಹಜ'ವಾದ ಕುತೂಹಲ ಇದ್ದೇ ಇತ್ತು. ಸಿನಿಮಾ-ಗಿನಿಮಾ ನೋಡಿ ಅಷ್ಟಿಷ್ಟು ಪ್ರೀತಿ-ಪ್ರೇಮಗಳ ಬಗ್ಗೆ ಅರಿತಿದ್ದ ನಾವು, ನಮ್ಮ ನಮ್ಮ ಹೀರೋಯಿನ್ನುಗಳಿಗಾಗಿ ತಲಾಷೆ ನಡೆಸಿದ್ದೆವು. ಚಂದದ ಹುಡುಗಿಯನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನು ತಲೆಯಲ್ಲಿಟ್ಟುಕೊಳ್ಳದೇ ಮಾಸಿಕ ಟೆಸ್ಟುಗಳಲ್ಲಿ ಫೇಲಾಗುವ ಕಲೆಯನ್ನು ಅದಾಗಲೇ ಸಿದ್ಧಿಸಿಕೊಂಡಿದ್ದೆವು. 'ನನಗೆ ಆ ಹುಡುಗಿ, ನಿನಗೆ ಈ ಹುಡುಗಿ' ಎಂಬಂತೆ ನಮ್ಮನಮ್ಮಲ್ಲೇ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದ ನಾವು, ಈ ವಿಷಯ ಮಾತ್ರ ಆ ಹುಡುಗಿಯರಿಗಾಗಲೀ, ಮೇಷ್ಟ್ರುಗಳಿಗಾಗಲೀ, ಮುಖ್ಯವಾಗಿ ನಮ್ಮ ತಂದೆ-ತಾಯಿಯರಿಗಾಗಲೀ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದೆವು.

ಏಳುತ್ತಾ ಬೀಳುತ್ತಾ ಅಂತೂ ಹತ್ತನೇ ತರಗತಿಯ ಕೊನೆಯ ಹಂತಕ್ಕೆ ಬಂದಿದ್ದೆವು. ಶಾಲೆ ಬಿಟ್ಟುಹೋಗುವಾಗ ಆಟೋಗ್ರಾಫ್ ಬರೆಸಿಕೊಳ್ಳಬೇಕು ಅಂತಾಯಿತು. ಮನೆಯಲ್ಲಿ ಅಣ್ಣ-ಅಕ್ಕಂದಿರನ್ನು ಹೊಂದಿದ ಕೆಲ ಗೆಳೆಯರು ಈ ಬಗ್ಗೆ ಸ್ವಲ್ಪ ಜ್ಞಾನವುಳ್ಳವರಾಗಿದ್ದರು. ಏಕೆಂದರೆ ಅವರು ತಮ್ಮ ಅಣ್ಣ-ಅಕ್ಕಂದಿರು ಶಾಲೆ ಬಿಡುವಾಗ ಬರೆಸಿಕೊಂಡ ಆಟೋಗ್ರಾಫ್ ಪುಸ್ತಕಗಳನ್ನು ನೋಡಿದ್ದರು. ಹಾಗಾದರೆ ನಾವೂ ಬರೆಸಬೇಕು ಅಂತಾಯಿತು. ಅಲ್ಲದೇ ನಮ್ಮ ಆಟೋಗ್ರಾಫ್ ಪುಸ್ತಕದವನ್ನು ಹುಡುಗಿಯರಿಗೆ ಕೊಟ್ಟು (ಕೊಡುವಾಗ ಸಿಗಬಹುದಾದ ಅವರ ಹಸ್ತಸ್ಪರ್ಷವನ್ನು ಅನುಭವಿಸುವ ಅಭಿಲಾಷೆ ಇರುವಷ್ಟು ವಯಸ್ಸಾಗಿರಲಿಲ್ಲ ನಮಗೆ), ಅವರು ನಮಗೆ ಏನು ಬರೆದುಕೊಡುತ್ತಾರೆ ಎಂದು ನೋಡುವ ಕುತೂಹಲ ಬೇರೆ! ಸರಿ, ಬರೆಸಬೇಕು, ಅದಕ್ಕಿಂತ ಮುಂಚೆ ಆಟೋಗ್ರಾಫ್ ಪುಸ್ತಕವನ್ನು ತರಬೇಕಲ್ಲ? ಸೊರಬ ಪೇಟೆಯಿಂದ ತರುವುದು ಎಂದಾಯಿತು. ಅದಕ್ಕಾಗಿ ಸೊರಬ ಪೇಟೆಯ ಬಗ್ಗೆ ತಿಳಿದಿದ್ದ ಎರಡು ಹುಡುಗರು ಮುಂದೆಬಂದರು. ಆಟೋಗ್ರಾಫ್ ಬರೆಸುವ ಹುಕಿ ಇದ್ದವರೆಲ್ಲಾ ಅವರಿಗೆ ದುಡ್ಡು ಕೊಟ್ಟೆವು. ಒಂದು ಶನಿವಾರ ಅವರು ರಾಘವೇಂದ್ರ ಬಸ್ಸಿಗೆ ಸೊರಬಕ್ಕೆ ಹೋಗಿ ಆಟೋಗ್ರಾಫ್ ಪುಸ್ತಕಗಳನ್ನು ತಂದೇಬಿಟ್ಟರು!

ಬಣ್ಣದ ಕವರನ್ನು ಹೊದ್ದುಕೊಂಡಿದ್ದ ಈ ಪುಟ್ಟ ಆಟೋಗ್ರಾಫ್ ಪುಸ್ತಕ ನೋಡಲಿಕ್ಕೇ ಖುಷಿಯಾಗುವಂತಿತ್ತು. ಅದರೊಳಗೆ ಸ್ಕೆಚ್‍ಪೆನ್ನಿನಿಂದ ನನ್ನ ಹೆಸರು ಬರೆದೆ. 'ಸ್ನೇಹವೇ ಸಂಪದ' ಅಂತ ಮೊದಲ ಪುಟದಲ್ಲಿ ನನ್ನ artistic styleನಲ್ಲಿ ಬರೆದೆ. ನಾನು ಬರೆದಿದ್ದನ್ನು ನೋಡಿದ ನನ್ನ ಕೆಲ ಗೆಳೆಯರು ತಮಗೂ ಬರೆದುಕೊಡುವಂತೆ ಕೋರಿದರು. ಚಾಕ್ಲೇಟಿನ ಆಮಿಷ ಒಡ್ಡಿದರು. ಅವರಿಗೂ ಬರೆದುಕೊಟ್ಟೆ. ಅಂತೂ ಸುಂದರವಾಗಿದ್ದ ಪುಸ್ತಕವನ್ನು ಸಿಂಗಾರ-ಬಂಗಾರ ಮಾಡಿ ಮತ್ತಷ್ಟು ಸುಂದರಗೊಳಿಸಿ ಸುಂದರ ಹುಡುಗಿಯರ ಕಡೆಗೆ ವರ್ಗಾಯಿಸಿ 'ಎಲ್ಲರೂ ಬರ್ದುಕೊಟ್ಬಿಡಿ' ಅಂದು ಕೃಥಾರ್ತನಾದೆ!

ಹುಡುಗಿಯರು ಎಲ್ಲರೂ ಬರೆದುಕೊಡುವುದಕ್ಕೆ ಮೂರು ದಿನ ತೆಗೆದುಕೊಂಡರು. ಈ ಮಧ್ಯೆ ನಾವೂ ಅವರು ಕೊಟ್ಟ ಪುಸ್ತಕಗಳಿಗೆ ನಮ್ಮ ಆಟೋ ಬರೆಯುವದರಲ್ಲಿ ಬ್ಯುಸಿಯಾಗಿದ್ದೆವು. ಎಲ್ಲೆಲ್ಲೋ ತಡಕಾಡಿ ಹೊಂದಿಸಿದ ಸಾಲುಗಳನ್ನು, ಕೆಲವರಿಗೆ ನಮ್ಮದೇ 'own' ವ್ಯಾಕ್ಯೆಗಳನ್ನೂ, ಹಿತವಚನಗಳನ್ನೂ ಬರೆದುಕೊಟ್ಟದ್ದಾಯ್ತು. ಮೂರು ದಿನಗಳ ನಂತರ ಎಲ್ಲಾ ಹುಡುಗಿಯರೂ ಬರೆದಾದಮೇಲೆ ನನ್ನ ಆಟೋಗ್ರಾಫ್ ಬುಕ್ಕು ಕೈಗೆ ವಾಪಸು ಬಂತು. ಬಂದಮೇಲೆ ಅದನ್ನು ಅಲ್ಲಿಯೇ ಬಿಚ್ಚಿ ನೋಡಲಾದೀತೆ? ಎಲ್ಲಾ ಗೆಳೆಯರೂ ಮುತ್ತಿಕೊಂಡಿರುತ್ತಿದ್ದರು. ಅಕಸ್ಮಾತಾಗಿ ಯಾವುದಾದರೂ ಹುಡುಗಿ 'ಏನಾದ್ರೂ' ಬರೆದುಕೊಟ್ಟುಬಿಟ್ಟಿದ್ದರೆ....? ಹಾ! ಇಷ್ಟೆಲ್ಲಾ ಹುಡುಗರ ಎದುರಿಗೆ ಅದನ್ನು ಓಪನ್ನು ಮಾಡಲು ಮನಸಾಗದೆ (ಅಥವಾ ಧೈರ್ಯ ಸಾಲದೆ), ಮನೆಗೆ ಬಂದು, ಕೋಣೆ ಸೇರಿಕೊಂಡು, ಬೆಚ್ಚಗೆ ಕುಳಿತು ಬಿಚ್ಚಿ ನೋಡಿದೆ...

ಆದರೆ excite ಆಗುವಂತಹ ಯಾವ ಆಟೋಗ್ರಾಫೂ ಅದರಲ್ಲಿ ನನಗೆ ಕಾಣಲಿಲ್ಲ. 'ಪರೀಕ್ಷೆ ಎಂಬ ಯುದ್ಧದಲ್ಲಿ, ಪೆನ್ನು ಎಂಬ ಖಡ್ಗ ಹಿಡಿದು...' ಎಂಬಿತ್ಯಾದಿ ಪರೀಕ್ಷೆಯನ್ನು ನೆನಪಿಸಿ ಭಯ ಹುಟ್ಟಿಸುತ್ತಿದ್ದ ಆಟೋಗಳೂ, 'ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ನಶ್ವರವಾಗುವ ಈ ದೇಹಕ್ಕೆ ಸ್ನೇಹವೊಂದೇ ಶಾಶ್ವತ' ಎಂಬಿತ್ಯಾದಿ ಸ್ನೇಹಪರ ಸಾಲುಗಳೂ, 'ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವಾಗ ಉಳಿಯುವ ನೆನಪೇ ಸ್ನೇಹ' ಎಂಬಂತಹ ಗಜಾನನ ಬಸ್ಸಿನ ಹಿಂದಿನಿಂದ ಕದ್ದ ಸಾಲುಗಳೂ, 'Life is a game, play it!' ಎಂದು ಜೀವನವನ್ನು ಆಟಕ್ಕೆ ಹೋಲಿಸಿ ನಮ್ಮನ್ನು confuse ಮಾಡುವಂತಹ ಸಾಲುಗಳೂ ಇದ್ದವು. ಅದರಲ್ಲಿ ಸಹಸ್ರಾರು spelling mistakeಗಳೂ, ಕಾಟು-ಚಿತ್ತುಗಳೂ ಇದ್ದವು. ಎಲ್ಲಕ್ಕಿಂತ ಬೇಜಾರಾದ ಸಂಗತಿಯೆಂದರೆ ಎಲ್ಲಾ ಹುಡುಗಿಯರೂ ಮೊದಲ ಸಾಲಿನಲ್ಲಿ 'ಪ್ರಿಯ ಸಹೋದರನಾದ .....ನಿಗೆ' ಅಂತಲೋ 'My dear brother ....' ಅಂತಲೋ ಶುರುಮಾಡಿರುತ್ತಿದ್ದುದು. ನಾನು ಆಶಾಭಂಗವಾದವನಂತೆ ಸುಮ್ಮನೆ ಪುಟ ತಿರುವುತ್ತಾ ಮುನ್ನಡೆದೆ.

ಆದರೆ ಮತ್ತೆ ಮೂರ್ನಾಲ್ಕು ಪುಟಗಳನ್ನು ತಿರುವುತ್ತಿದ್ದಂತೆ ನನಗೆ ಒಂದು ಆಘಾತ ಕಾದಿತ್ತು. ಬೇರೆಲ್ಲಾ ಆಟೋಗಳಂತೆಯೇ 'My dear brother ....' ಅಂತಲೇ ಅದು ಶುರುವಾಗಿತ್ತಾದರೂ, ಅದರ ಮುಂದಿನ ಸಾಲುಗಳು ನನ್ನನ್ನು ತಬ್ಬಿಬ್ಬು ಮಾಡುವಂತಿದ್ದವು. ಅದನ್ನು ಯಥಾವತ್ತಾಗಿ, ಅದರ spelling mistakeಗಳ ಜೊತೆಗೆ, ಇಲ್ಲಿ ಕೊಡುತ್ತಿದ್ದೇನೆ:

"You are in mine heart like photograph
Then wat yuo to write in my autougraph

Your loving,

........."

ಮುಗಿಯಿತಲ್ಲಪ್ಪಾ? ನಮಗೋ, ಆಗ ಈ ಇಂಗ್ಲೀಷ್ ಭಾಷೆಯೆಂದರೆ ಭಯವಾಗುತ್ತಿದ್ದಂತಹ ಕಾಲ. ನಾವು ಅದನ್ನು ಪರಕೀಯ ಭಾಷೆಯೆಂದು ಪರಿಗಣಿಸಿ ಹೊರಗಿಟ್ಟಿದ್ದ ಕಾಲ. ಇಂಗ್ಲೀಷ್ ಟೀಚರ್ರು ಸಹ ನಮಗೆ ಪ್ರಿಯರಾಗಿರಲಿಲ್ಲ. ಇಂಗ್ಲೀಷ್ ಟೀಚರ್ರು ನಮಗೆ ಪಾಠ ಕಲಿಸಲು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ; ನಮಗೇ ಅವರ ಮೇಲೆ ಕರುಣೆ ಉಕ್ಕುವಷ್ಟು. ಹುಡುಗಿಯರೂ ಏನು ಇಂಗ್ಲೀಷಿನಲ್ಲಿ ಚುರುಕಾಗಿರಲಿಲ್ಲ. ಈ ಆಟೋಗ್ರಾಫ್ ಬರೆದುಕೊಟ್ಟ ಹುಡುಗಿಯೂ ಅದಕ್ಕೆ ಹೊರತಾಗಿರಲಿಲ್ಲ. ಅದು ಅವಳು ಸ್ವತಃ ರಚಿಸಿದ ಆಟೋಗ್ರಾಫ್ ಆಗಿರಲಿಕ್ಕಂತೂ ಶಕ್ಯವೇ ಇರಲಿಲ್ಲ. ಬಹುಶಃ ತನ್ನ ಅಕ್ಕನ ಆಟೋಗ್ರಾಫ್ ಪುಸ್ತಕದಿಂದ ಕದ್ದ ವಾಕ್ಯವಿರಬೇಕು. ಏನೇ ಆಗಿರಲಿ. ನಾನು ಅದನ್ನು ಹೀಗೆ ಅರ್ಥ ಮಾಡಿಕೊಂಡೆ:

"ನೀನು ನನ್ನ ಹೃದಯದಲ್ಲಿ ಒಂದು ಚಿತ್ರದಂತೆ ಇದ್ದೀಯ;
ಇನ್ನು ನೀನು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ ಏನು ಬರೆಯುತ್ತೀಯ ಎಂದು ಕಾಯುತ್ತಿರುತ್ತೇನೆ" !!!

ಅಬ್ಬ! ಅರ್ಥವಾದದ್ದೇ ನಾನು ಬೆವೆಯತೊಡಗಿದೆ...! ಮತ್ತೆ ಮತ್ತೆ ಓದಿಕೊಂಡೆ.. ಕೊನೆಯಲ್ಲಿ 'Your loving' ಅಂತ ಬೇರೆ! ಸೆಖೆ ಜಾಸ್ತಿಯಾಯಿತು. ಮನೆಯಲ್ಲಿ ಫ್ಯಾನ್ ಬೇರೆ ಇರಲಿಲ್ಲ.. ಆಟೋಗ್ರಾಫ್ ಪುಸ್ತಕವನ್ನು ರಪ್ಪನೆ ಮುಚ್ಚಿಟ್ಟು ಮನೆಯಿಂದ ಹೊರಬಿದ್ದೆ.. ತಂಗಾಳಿ ಸೋಕಿ ಮೈಪುಳಕವಾಯಿತು.. ದೂರದ ಸ್ಟ್ರೀಟ್‍ಲೈಟ್‍ನ ಬೆಳಕು ನನ್ನ ಮೈಮೇಲೆ ಬೀಳುತ್ತಿತ್ತು.. ಆ ಬೆಳಕಿನಲ್ಲಿ ಅಂತೂ ಒಂದು ಹುಡುಗಿಯನ್ನು 'ಬೀಳಿಸಿಕೊಂಡ' ನನ್ನ ಬಾಡಿಯನ್ನೇ ನೋಡಿಕೊಂಡೆ.. ನನಗೂ ಒಬ್ಬ ಹುಡುಗಿ.. ನನಗೂ ಒಬ್ಬ ಹೀರೋಯಿನ್..! ಇನ್ನು ನಾನೂ-ಅವಳೂ ಹಾಡು ಹೇಳುತ್ತಾ ಮರ ಸುತ್ತುತ್ತಾ.... ಅಷ್ಟರಲ್ಲಿ... ಅಮ್ಮ ಮನೆಯ ಒಳಗಿಂದ ಕೂಗಿದಳು: 'ಓದ್‍ಕ್ಯಾ ಅಂದ್ರೆ ಅದೇನು ಅಂಗಳದಲ್ಲಿ ಸುತ್‍ತಾ ಇದೀಯ? ಒಳಗೆ ಬಂದು ಓದ್‍ಕ್ಯಾ..!' ಆಹ್! ನಾನು ದುಃಸ್ವಪ್ನ ಕಂಡವನಂತೆ ಕಲ್ಪನಾಲೋಕದಿಂದ ಹೊರಬಂದೆ. ಮನೆಯ ಒಳಬಂದೆ. ನನ್ನನ್ನೇ ಮನಸಿನಲ್ಲಿಟ್ಟುಕೊಂಡು ಕರಗುತ್ತಿರುವ, ಕೊರಗುತ್ತಿರುವ ಆ ಹುಡುಗಿಯ ಬಗ್ಗೆ ಪ್ರೀತಿಯುಂಟಾಯಿತು.. ಆದರೆ ಫಕ್ಕನೆ ಭಯವಾಯಿತು.. ಏನಾದ್ರೂ ಈ ವಿಷಯ ಮನೆಯವರಿಗೆ ಗೊತ್ತಾದ್ರೆ? ಹೋಗಲಿ, ಅವಳ ಮನೆಯಲ್ಲಿ ಈ ಬಗ್ಗೆ ಗೊತ್ತಿದೆಯಾ? ಗೊತ್ತಾದರೆ, ಅವಳ ಅಣ್ಣ ನನ್ನನ್ನು ಹೊಡೆಯಲಿಕ್ಕೆ ಅಂತ ಬಂದ್ರೆ? ...ನಾನು ಫೈಟ್ ಮಾಡಿ.. ಅವನನ್ನು ಮಾರಣಾಂತಿಕ ಗಾಯಗಳಿಗೆ ತುತ್ತುಮಾಡಿ... ಪೋಲೀಸರು ಬಂದು ನನಗೆ ಕೋಳ ಹಾಕಿ... ಸಿನಿಮಾಗಳಲ್ಲಿ ಆಗುವಂತೆ ನಿಜಜೀವನದಲ್ಲೂ ಆಗುತ್ತದೆ ಅಂದುಕೊಂಡೆ.. ಈ ರಗಳೆಗಳೆಲ್ಲ ಬೇಡವೇ ಬೇಡ, ಪ್ರೀತಿ-ಪ್ರೇಮಗಳಿಗೆಲ್ಲ ಗೋಲಿ ಹೊಡೀಲಿ. ಅವಳಾಗೇ ಬಂದು propose ಮಾಡಿದರೂ 'ಇಲ್ಲ' ಅಂದು ತಿರಸ್ಕರಿಸಬೇಕು ಅಂದುಕೊಂಡೆ!

ಇಷ್ಟಕ್ಕೂ ಆ ಹುಡುಗಿ ನಮ್ಮ ಊರಿನ ಪಕ್ಕದ ಊರಿನವಳು. ಶ್ರೀಮಂತರ ಮನೆಯ ಹುಡುಗಿ. ಒಂಥರಾ ಕೀರಲು ದನಿ ಅವಳದು. ಅದಕ್ಕಾಗಿಯೇ ಅವಳನ್ನು ನಾವು 'ಕೀರ್ವಾಣಿ' ಅಂತ ಕರೆಯುತ್ತಿದ್ದೆವು! ಅವಳಾಗಿಯೇ ಆ ಆಟೋಗ್ರಾಫನ್ನು ಉದ್ದೇಶಪೂರ್ವಕವಾಗಿ ಬರೆದಿರಲಿಕ್ಕಂತೂ ಸಾಧ್ಯವಿರಲಿಲ್ಲ. ಆದರೆ ನನ್ನ ಹುಚ್ಚು ಮನಸ್ಸು ಕೇಳಬೇಕಲ್ಲ? ಅಲ್ಲದೇ ಅವಳು ತನ್ನ ಆಟೋಗ್ರಾಫ್ ಬುಕ್ಕಿನಲ್ಲಿ ನಾನು ಏನು ಬರೆಯುತ್ತೀನಿ ಅಂತ ಕಾಯುತ್ತಾ ಇರುತ್ತಾಳೆ... ಅಥವಾ ಇವೆಲ್ಲಾ ಕೇವಲ ನನ್ನ ಹುಚ್ಚು ಭ್ರಮೆಯೇ? ಗೊಂದಲದಲ್ಲಿದ್ದೆ.

ಅಷ್ಟರಲ್ಲಿ ಮತ್ತೊಂದು ಘಟನೆಯಾಯಿತು! ನಮ್ಮೂರಿನಲ್ಲಿ ಒಬ್ಬರ ಮನೆಗೆ ಗುರುಗಳು (ಸ್ವಾಮೀಜಿ) ಬಂದಿದ್ದರು. ಅವರ ಮನೆಯಲ್ಲಿ ಸ್ವಾಮಿಗಳ 'ಭಿಕ್ಷಾ' ಇತ್ತು. ನಾನು ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ. ಅಲ್ಲಿಗೆ ಕೀರ್ವಾಣಿಯ ಪಕ್ಕದ ಮನೆಯ ಒಬ್ಬ ಹುಡುಗ ಕೂಡ ಬಂದಿದ್ದ. ಸುಮಾರು ಐದನೇ ಕ್ಲಾಸು ಓದುತ್ತಿರಬಹುದಾದ ತುಂಬಾ ಕೀಟಲೆ ಹುಡುಗ ಅವನು. ಊಟಕ್ಕೆ ಪಂಕ್ತಿಯಲ್ಲಿ ನಾನೂ-ಅವನು ಒಟ್ಟಿಗೇ ಕುಳಿತುಕೊಳ್ಳುವಂತಾಯಿತು. ಊಟ ಮಾಡುತ್ತಿರುವಾಗ ನನ್ನ ಗೊಂದಲಗಳು ಹೆಚ್ಚಾಗುವಂತಹ ಒಂದು ಮಾತನ್ನು ಆ ಹುಡುಗ ಆಡಿದ. "ನಮ್ಮನೆ ಪಕ್ಕದ್ಮನೆ ಅಕ್ಕ ಇದಾಳಲ್ಲ, ಅವ್ಳು ನಿಂದು ಒಂದು ಫೋಟೋ ಕಟ್ ಮಾಡಿ ಇಟ್ಕೊಂಡ್ ಬಿಟ್ಟಿದಾಳೆ ಮಾರಾಯ.. ನಾವು ಎಷ್ಟು ಕೊಡು ಅಂದ್ರೂ ಕೊಡೋದಿಲ್ಲ.." ಅಂದುಬಿಟ್ಟ! ಅಲ್ಲಿಗೆ ಮುಗಿಯಿತಲ್ಲ? ಊಟ ಮಾಡುತ್ತಿದ್ದವನು ದಂಗಾಗಿಬಿಟ್ಟೆ. ಒಂದು ಕ್ಷಣ ಸುಮ್ಮನೆ ಕುಳಿತುಬಿಟ್ಟೆ. ಅಷ್ಟಂದು ಅವನೇನೋ ಸುಗ್ರಾಸ ಭೋಜನ ಮುಂದುವರಿಸಿದ. ಆದರೆ ನನಗೆ ಗಂಟಲಲ್ಲಿ ಅನ್ನ ಹಿಡಿಯಲಿಕ್ಕೆ ಶುರುವಾಯಿತು. ಪಲ್ಯ ಬಡಿಸುತ್ತಿದ್ದ ರಾಘವೇಂದ್ರಣ್ಣ 'ಪಲ್ಯ ಪಲ್ಯ ಪಲ್ಯ' ಎಂದು ನನ್ನ ಎದುರು ಮೂರು ಮೂರು ಸಲ ಕೇಳಿದರೂ ನಾನು ಸುಮ್ಮನಿದ್ದುದ್ದು ನೋಡಿ ಎರಡು ಸೌಟು ಸರಿಯಾಗಿ ಪಾಯಸದ ಮೇಲೆ ಹಾಕಿ ಹೋಗಿಬಿಟ್ಟ!

ಇಷ್ಟೆಲ್ಲಾ ಗೊಂದಲಗಳು ನನ್ನ ತಲೆಯಲ್ಲಿ ಆಗುತ್ತಿದ್ದರೂ ಆ ಹುಡುಗಿ ಮಾತ್ರ ಮಾಮೂಲಿನಂತೆಯೇ ಇದ್ದಳು. ಹಾಗೇ ತಲೆ ತಗ್ಗಿಸಿಕೊಂಡು ಶಾಲೆಗೆ ಬರುತ್ತಿದ್ದಳು. ತನ್ನ ಗೆಳತಿಯರೊಡನೆ ಕೀರಲು ದನಿಯಲ್ಲಿ ಮಾತನಾಡುತ್ತಿರುತ್ತಿದ್ದಳು. ಒಟ್ಟಿನಲ್ಲಿ ನನಗಂತೂ ತಲೆ ಕೆಟ್ಟು ಹೋಯಿತು. ನನ್ನ ಬಳಿ ಮಾತನಾಡಿ 'ಮುಂದುವರಿಸ'ಬಹುದು ಅಂದುಕೊಂಡೆ. ಆದರೆ ಆಕೆ ನನ್ನ ಕಡೆ at least ಓರೆ ನೋಟವನ್ನೂ ಬೀರಲಿಲ್ಲ. ನನಗೆ ಆಗುತ್ತಿದ್ದುದ್ದು ಹತಾಶೆಯೋ, ನಿರಾಶೆಯೋ, ಭ್ರಮನಿರಸನವೋ ತಿಳಿಯದಾದೆ.

ಅಂತೂ ಮೂರ್ನಾಲ್ಕು ವಾರಗಳ ನಂತರ ಅವಳು ತನ್ನ ಆಟೋಗ್ರಾಫ್ ಪುಸ್ತಕವನ್ನು ನನಗೆ ಬರೆಯಲು ಕೊಟ್ಟಳು. ನಾನೂ ಇದಕ್ಕೇ ಕಾಯುತ್ತಿದ್ದವನಂತೆ, ಹಿಂದೆ ಮುಂದೆ ಯೋಚಿಸದೆ 'What is the real meaning of your autograph?' ಅಂತ ಒಂದೇ ಲೈನು ಬರೆದುಕೊಟ್ಟೆ. ಆದರೆ ಅದಕ್ಕೂ ಅವಳಿಂದ reply ಬರಲಿಲ್ಲ. ಬಹುಶಃ ಅವಳಿಗೆ ಅದು ಅರ್ಥವೇ ಆಗಲಿಲ್ಲವೇನೋ!

ನೋಡುನೋಡುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಹತ್ತಿರಾದವು. ನಾವು ಬರೆದದ್ದೂ ಆಯಿತು. ರಿಸಲ್ಟು ಬಂದದ್ದೂ ಆಯಿತು. ಆಕೆ ಫೇಲ್ ಆಗಿದ್ದಳು; ನಾನು ಆ ಗಂಢಾಂತರದಿಂದ ಕೆಲವೇ ಮಾರ್ಕುಗಳ ಅಂತರದಿಂದ ಪಾರಾಗಿದ್ದೆ. ಹಾಗೆ ನಮ್ಮ ಹೈಸ್ಕೂಲು ಜೀವನ ಮುಗಿದುಹೋಯಿತು.

ಕೊನೆಗೆ ನಾನೆಲ್ಲೋ ಅವಳೆಲ್ಲೋ ಆದೆವು. ನಮ್ಮ ಪಕ್ಕದ ಊರಿನಲ್ಲೇ ಇರುತ್ತಿದ್ದಳಾದರೂ ಒಬ್ಬರಿಗೊಬ್ಬರು ಭೇಟಿ ಆಗುವಂತಹ ಸನ್ನಿವೇಶಗಳು ಕೂಡಿಬರಲಿಲ್ಲ. ಒಂದೆರಡು ಬಾರಿ ಕಂಡಿದ್ದಳಾದರೂ ಸುಮ್ನೆ 'ಅರಾಮಿದೀಯ?' 'ಏನ್ಮಾಡ್ತಿದೀಯ ಈಗ?' ಇತ್ಯಾದಿ ಪ್ರಶ್ನೋತ್ತರಗಳಲ್ಲಿ ಮಾತುಕತೆ ಮುಗಿದು ಹೋಗುತ್ತಿತ್ತು. 'ಇಷ್ಟಕ್ಕೂ ನೀನು ನನ್ನನ್ನು ಪ್ರೀತಿಸಿದ್ದು ಹೌದಾ?' ಅಂತ ಕೇಳಬೇಕೆಂದುಕೊಳ್ಳುತ್ತಿದ್ದೆ. ಆದರೆ ಧೈರ್ಯ ಸಾಲುತ್ತಿರಲಿಲ್ಲ. ಅಥವಾ ಮುಜುಗರವಾಗುತ್ತಿತ್ತು.

ಈಗ ನೋಡಿದರೆ ಕೀರ್ವಾಣಿಯ ಮದುವೆಯ ಸುದ್ದಿ ಬಂದಿದೆ. ಎಲ್ಲಾ ನೆನಪಾಗುತ್ತಿದೆ... ಇಷ್ಟಕ್ಕೂ ಕೀರ್ವಾಣಿಗೆ ನನ್ನ ಮೇಲೆ ಒಲವಿತ್ತಾ? ಆ ಪ್ರಶ್ನೆ ಮಾತ್ರ ನನ್ನಲ್ಲೇ ಉಳಿದುಹೋಗಿದೆ: ಸವಿನೆನಪುಗಳನ್ನು ಕೆದಕಲು ಗುದ್ದಲಿಯಾಗಿ.

Monday, November 27, 2006

ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ

'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ, ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ. ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?" ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ: "ಶ್...! ನಾನು ಹ್ಯಾಂಗ ಸುಮ್ಮನಿದ್ದೀನಿ, ಹಾಗೆ ಸ್ವಲ್ಪ ಸುಮ್ಮನಿರು." ಸುಮ್ಮನಿದ್ದಾಗ ಕಾಣುವಂಥಾದ್ದು- ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆ ದೀಪಶಿಖೆ!

-ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಈ ಗದ್ಯಸಾಲುಗಳನ್ನು ಓದಿ ಹೇಳಿದವರು ಜಯಂತ ಕಾಯ್ಕಿಣಿ- ಭಾನುವಾರ, ೨೬.೧೧.೨೦೦೬ ರಂದು 'ಯವನಿಕಾ'ದಲ್ಲಿ ನಡೆದ ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮ 'ನಾದಲೀಲೆ'ಯಲ್ಲಿ. ಹಿಂದೊಮ್ಮೆ ಅವರು ಇದೇ ಸಾಲುಗಳನ್ನು ತಮ್ಮ 'ಭಾವನಾ' ಮಾಸಿಕದ ಸಂಪಾದಕೀಯದಲ್ಲಿ ಬರೆದಿದ್ದರು.


'ದೇಶಕಾಲ' (ವಿವೇಕ ಶಾನಭಾಗ್ ಸಂಪಾದಕತ್ವದ ಸಾಹಿತ್ಯಿಕ ತ್ರೈಮಾಸಿಕ) ಮತ್ತು 'ಅಷ್ಟದಿಕ್ಕು' (ಅಶೋಕ ಹೆಗಡೆ, ಗೋಪಲಕೃಷ್ಣ ಪೈ ಮತ್ತು ಎಸ್. ದಿವಾಕರ್ ನೇತೃತ್ವದ ಪ್ರಕಾಶನ) -ಸಂಯೋಜಿಸಿದ್ದ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂತು. ಪಂಡಿತ್ ಪರಮೇಶ್ವರ ಹೆಗಡೆ, ಯು.ಆರ್. ಅನಂತಮೂರ್ತಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಸಿ.ಆರ್. ಸಿಂಹ, ಸಿದ್ದಲಿಂಗಯ್ಯ, ಬಿ. ಜಯಶ್ರೀ, ಕಿ.ರಂ. ನಾಗರಾಜ, ರವಿ ಬೆಳಗೆರೆ, ಪ್ರತಿಭಾ ನಂದಕುಮಾರ್, ಪವಿತ್ರಾ ಲೋಕೇಶ್, ಕೆ.ಎಚ್. ಶ್ರೀನಿವಾಸ, ರಘುನಂದನ, ಎಚ್.ಜಿ. ಸೋಮಶೇಖರ್ ರಾವ್, ಶ್ರೀನಿವಾಸ್ ಜಿ. ಕಪ್ಪಣ್ಣ, ವಿಶ್ವೇಶ್ವರ ಭಟ್, ವಿಜಯ ಭಾರದ್ವಾಜ್, ಚಿರಂಜೀವಿ ಸಿಂಗ್, ಟಿ.ಎನ್. ಸೀತಾರಾಂ, ರೇಖಾ ಹೆಬ್ಬಾರ್, ಎಸ್.ಜಿ. ವಾಸುದೇವ್, ಶ್ರೀಕಾಂತ -ಹೀಗೆ ವಿವಿಧ ಕ್ಷೇತ್ರಗಳ ಇಪ್ಪತ್ತಕ್ಕೂ ಹೆಚ್ಚು ಗಣ್ಯರಿಂದ ಬೇಂದ್ರೆ ಕಾವ್ಯಗಳ ವಾಚನವಾಯಿತು. ಬೇಂದ್ರೆಯವರ ದ್ವನಿಯಲ್ಲಿನ ಅವರ ಕವನ ವಾಚನಗಳ ಅಪರೂಪದ ಧ್ವನಿಮುದ್ರಣವನ್ನು ಮಧ್ಯೆ ಮಧ್ಯೆ ಕೇಳಿಸಿದರು. ಬೇಂದ್ರೆಯವರ ಅಪರೂಪದ ಛಾಯಾಚಿತ್ರ, ರೇಖಾಚಿತ್ರಗಳ ಪ್ರದರ್ಶನವಿತ್ತು. ಕೊನೆಯಲ್ಲಿ ಗಿರೀಶ್ ಕಾರ್ನಾಡ್ ಬೇಂದ್ರೆಯವರ ಕುರಿತು ಚಿತ್ರಿಸಿದ ಸಾಕ್ಷ್ಯಚಿತ್ರವೊಂದರ ಪ್ರದರ್ಶನವೂ ಇತ್ತು.

ಭಾನುವಾರ ಬೆಳಗ್ಗೆ ೯.೩೦ಕ್ಕೆ 'ಯವನಿಕಾ' ಪ್ರೇಕ್ಷಕರಿಂದ ತುಂಬಿಹೋಗಿತ್ತು. ಬಹುಶಃ ಅಷ್ಟೊಂದು ಜನ ಸೇರುತ್ತಾರೆ ಎನ್ನುವ ಕಲ್ಪನೆ ಸಂಘಟಕರಿಗೆ ಇರಲಿಲ್ಲವೇನೋ? ಬಂದಿದ್ದ ಅನೇಕ ಸಾಹಿತಿಗಳಿಗೇ ಕುಳಿತುಕೊಳ್ಳಲಿಕ್ಕೆ ಜಾಗ ಸಿಗಲಿಲ್ಲ. ಬಂದವರೆಲ್ಲರಿಗೂ ಬೆಳಗ್ಗೆ ತಿಂಡಿ-ಕಾಫಿ ಕೊಟ್ಟು, ಕಾವ್ಯ ಕೇಳಿಸಿ, ವಾಪಸು ಹೋಗುವಾಗ ಊಟವನ್ನೂ ಕೊಟ್ಟು ಕಳುಹಿಸಿದರು. 'ಹೀಗೆಲ್ಲ ಮಾಡುತ್ತಿದ್ದೀವಿ ಬನ್ನಿ' ಅಂತ ಕರೆದು ಇನ್ನೂ ಸ್ವಲ್ಪ ಪ್ರಚಾರವನ್ನೂ ಕೊಟ್ಟಿದ್ದರೆ ಬಹುಶಃ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಜನ ತುಂಬಿಕೊಳ್ಳುತ್ತಿದ್ದರೇನೋ? ಕನ್ನಡದ ಕಾವ್ಯಾಸಕ್ತರಿಗೇನು ಕೊರತೆಯೇ?

***

ವಾಪಸು ಬರುವಾಗ ನನಗೆ ಹಾಗೇ ಅನ್ನಿಸಿತು. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ನಮ್ಮಂತಹ ಈಗಿನ ಕಾಲದವರಿಗೆ ಬೇಂದ್ರೆ ಕಾವ್ಯದ ಪರಿಚಯ ಅಷ್ಟಾಗಿ ಇಲ್ಲ. ಏಕೆಂದರೆ ಬೇಂದ್ರೆಯವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಉದಾಹರಣೆಗೆ, ಅವರ 'ನಾಕುತಂತಿ' ಸಂಕಲನದ 'ನಾಕುತಂತಿ' ಕವನದಲ್ಲಿ ಈ ಸ್ಟಾಂಜ಼ಾ ಬರುತ್ತದೆ: 'ನಾನು ನೀನು ಆನು ತಾನು ನಾಕೇ ನಾಕು ತಂತಿ' -ಈ ಸಾಲುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಗಣಿತ (ಸಂಖ್ಯಾಶಾಸ್ತ್ರ)ದ ಮೇಲೆ ಹಿಡಿತವಿರಬೇಕು ಮತ್ತು ಸಂಗೀತ ತಿಳಿದಿರಬೇಕು. ಅದಿಲ್ಲದಿದ್ದರೆ ಅರ್ಥವಾಗುವುದೇ ಇಲ್ಲ. ಸಂಗೀತ ಕಲಿತು, ಗಣಿತದಲ್ಲಿ ಪಾಂಡಿತ್ಯ ಗಳಿಸಿ, ಆಮೇಲೆ ಈ ಕವಿತೆ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ನಮಗಿಲ್ಲ. ಅಷ್ಟೊಂದು ಕಷ್ಟವಲ್ಲದ ಕವಿತೆಗಳನ್ನೂ ಬೇಂದ್ರೆ ಬರೆದಿದ್ದಾರೆ. ಅವುಗಳಲ್ಲಿ ಅನೇಕ ಕವಿತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಆದರೆ ಭಾವಗೀತೆಗಳಾಗದ ಅನೇಕ ಅದ್ಭುತ ಕವನಗಳು ಇವೆಯಲ್ಲ, ಅವನ್ನು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಬಲ್ಲವರಿಂದ ಓದಿಸಿ, ಅದರ ಅರ್ಥ - ಬರೆದ ಸಂದರ್ಭಗಳನ್ನು ಹೇಳಿಸಿದರೆ ನಮ್ಮಂತಹ ಯುವ ಪೀಳಿಗೆಗೆ ಅನುಕೂಲವಾಗುತ್ತದೆ. ಕನ್ನಡ ಕಾವ್ಯಪ್ರೇಮಿಗಳ ಸಂಖ್ಯೆಯೂ ಹೆಚ್ಚುತ್ತದೆ.

ಇತ್ತೀಚೆಗೊಂದು ದಿನ ನನ್ನ ನೆಂಟರ ಮನೆಗೆ ಹೋಗಿದ್ದಾಗ ಕನ್ನಡ ಟೀವಿ ಚಾನೆಲ್ಲೊಂದರಲ್ಲಿ ಕಾರ್ಯಕ್ರಮ ಬರುತ್ತಿತ್ತು. ಟೀವಿ ಸಂದರ್ಶಕಿ ಮೈಕು ಹಿಡಿದುಕೊಂಡು ಸಾರ್ವಜನಿಕರನ್ನು ಮಾತಾಡಿಸಿ, ಒಂದೆರಡು ಪ್ರಶ್ನೆ ಕೇಳಿ, ಸರಿಯುತ್ತರ ಕೊಟ್ಟವರಿಗೆ ಸೋಪಿನ ಬಾಕ್ಸನ್ನೋ, ಊದುಬತ್ತಿ ಬಂಡಲನ್ನೋ ಕೊಡುವ ಕಾರ್ಯಕ್ರಮ ಅದು. ಅಂದು ಆ ಸಂದರ್ಶಕಿ ಬೇಂದ್ರೆಯವರ ರೇಖಾಚಿತ್ರವೊಂದನ್ನು ಜನರಿಗೆ ತೋರಿಸಿ 'ಇವರು ಯಾರು ಗುರುತಿಸಿ?' ಅಂತ ಕೇಳುತ್ತಿದ್ದಳು. ಯಾರೂ ಸರಿಯುತ್ತರ ಕೊಡಲಿಲ್ಲ. ಅನೇಕರು 'ಗೊತ್ತಿಲ್ಲ' ಅಂದರು. ಸುಮಾರು ಹದಿನೈದಿಪ್ಪತ್ತು ಜನರನ್ನು ಸಂದರ್ಶಿಸಿದರೂ ಸರಿಯುತ್ತರ ಸಿಗದಿದ್ದುದು ನೋಡಿ ನನಗೆ ಆಶ್ಚರ್ಯವಾಯಿತು. ಕೊನೆಗೆ ಸಂದರ್ಶಕಿಯೇ 'ಅದು ದ.ರಾ. ಬೇಂದ್ರೆ' ಎಂದು ಉತ್ತರವನ್ನು ಹೇಳಿದಳು. ನನಗೆ ಮತ್ತೂ ಆಶ್ಚರ್ಯವಾದದ್ದೆಂದರೆ, ಅವಳು ಉತ್ತರ ಹೇಳುತ್ತಿದ್ದಂತೆಯೇ ನನ್ನ ಜೊತೆ ಟೀವಿ ನೋಡುತ್ತಿದ್ದವರೂ 'ಓ, ಬೇಂದ್ರೆನಾ?' ಅಂದಿದ್ದು! 'ನಿಮಗ್ಯಾರಿಗೂ ಗೊತ್ತೇ ಇರಲಿಲ್ವಾ?' ಅಂದೆ. 'ಇಲ್ಲ!' ಅಂದರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಎಲ್ಲ ಕನ್ನಡ ಭಾಷಾ ಪಠ್ಯದಲ್ಲೂ 'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು' ಎಂಬ ಪಟ್ಟಿಯಲ್ಲಿ ಬೇಂದ್ರೆಯವರ ಇದೇ ರೇಖಾಚಿತ್ರ್ರ ಇದೆ. (ನಾನು ಓದಬೇಕಾದರಂತೂ ಇತ್ತು; ಈಗ ಇದೆಯೋ ಇಲ್ಲವೋ ಗೊತ್ತಿಲ್ಲ). ಅಂಥಾದ್ದರಲ್ಲಿ ಗುರುತಿಸಲಾಗಲಿಲ್ಲ ಎಂದರೆ ಏನನ್ನೋಣ?

'ನಾದಲೀಲೆ'ಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದು, ಅವು ಟೀವಿ-ರೇಡಿಯೋಗಳಲ್ಲಿ ಪ್ರಸಾರವಾಗುವಂತಾದರೆ ಚೆನ್ನಾಗಿರುತ್ತಿತ್ತಲ್ಲವೇ?

Monday, November 20, 2006

ಸಾವನದುರ್ಗದ ಬೆಟ್ಟದ ಮೇಲೊಂದು ನಂದಿ.. (A trip to Savandurga)

ಆ ನಂದಿ ಸುಮ್ಮನಿತ್ತು.

ಕಲ್ಗಾರ್ ಗಿರಿಯ ಕಿರುಚಾಟ - ಫೋಟೋ ಹುಚ್ಚು, ಸಂದೀಪನ ಶೇರು ಹಗರಣ, ಬಪ್ಪನ ಐರಿಷ್ ಸಂಭಾಷಣೆ.... ಎಲ್ಲವನ್ನೂ ಕೇಳಿಕೊಂಡೂ ಸುಮ್ಮನೇ ಇತ್ತು. ಬೆಳಗ್ಗೆ ಯಾರೋ ಪೂಜೆ ಮಾಡಿಹೋದ ಕುರುಹಾಗಿ ಅದರ ಕೊರಳಲ್ಲಿ ಇನ್ನೂ ಬಾಡದ ಹೂವಿನ ಹಾರ, ಹಣೆಯಲ್ಲಿ ಕುಂಕುಮ ಇದ್ದವು. ಗೆಳೆಯರು ಹೇಳಿದ ಪೋಲಿ ಜೋಕುಗಳಿಗೊಂದಕ್ಕೂ ಅದು ನಗಲಿಲ್ಲ. ಬಹುಶಃ ಆ ಜೋಕುಗಳನ್ನೆಲ್ಲಾ ಅದು ಮೊದಲೇ ಕೇಳಿತ್ತೇನೋ? ಇವೆಲ್ಲಾ 'ಓಲ್ಡ್ ಜೋಕ್ಸ್' ಆಗಿದ್ದವೇನೋ ಅದಕ್ಕೆ... ನಾವು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ತಾನು ಒಂದೂ ಮಾತಾಡದೆ ಸುಮ್ಮನೆ ಕುಳಿತಿತ್ತು.. ಬೀಸುಗಾಳಿಗೆ ಮೈಯೊಡ್ಡಿ..


***


ಈಗ ಮೂರು ದಿನಗಳ ಹಿಂದೆ ಸಂದೀಪ ಫೋನ್ ಮಾಡಿ 'ಈ ಭಾನುವಾರ ಏನೂ ಪ್ರೋಗ್ರಾಮ್ ಫಿಕ್ಸ್ ಮಾಡ್ಕೋಬೇಡ. ಸಾವನದುರ್ಗಕ್ಕೆ ಹೋಗೋಣ. ಹಿಂದೆ ಶಿವನಸಮುದ್ರಕ್ಕೆ ಹೋದದ್ದೇ ಟೀಮು; ಪ್ಲಸ್ ಇನ್ನೊಂದಷ್ಟು ಜನ' ಅಂತ ಹೇಳಿದಾಗ, ನಾನು ಮರುಯೋಚನೆ ಮಾಡದೆ 'ಓಕೆ' ಅಂದುಬಿಟ್ಟೆ. ನಂತರ googleನಲ್ಲಿ ಸಾವನದುರ್ಗದ ಬಗ್ಗೆ search ಮಾಡಿದಾಗ ಅದೊಂದು ಏಕಶಿಲೆಯ ಪರ್ವತ, ಅಲ್ಲಿ ಸಾಮಂತರಾಯನ ಕೋಟೆಯ ಅಳಿದುಳಿದ ಅವಶೇಷಗಳು ಇವೆ ಅಂತಲೂ, ಅದು ಕೆಂಪೇಗೌಡನ ಉಪ-ರಾಜಧಾನಿಯಾಗಿತ್ತು ಅಂತಲೂ, ಆ ಬೆಟ್ಟ ಕಾಡಿನಿಂದ ಆವರಿಸಲ್ಪಟ್ಟಿದೆ, ಕಾಡಿನಲ್ಲಿ ಕ್ರೂರ ಮೃಗಗಳು ಇವೆ ಅಂತಲೂ ಮಾಹಿತಿಗಳು ದೊರೆತವು.

ಭಾನುವಾರ ಬೆಳಗ್ಗೆ ಆರೂ ಮುಕ್ಕಾಲಿಗೆಲ್ಲಾ ರೆಡಿಯಾಗಿ ಸಂದೀಪನಿಗಾಗಿ ಕಾಯುತ್ತಿದ್ದಾಗ ಚಾರಣಿಗ ಶ್ರೀನಿಧಿಯಿಂದ ಮೆಸೇಜು ಬಂತು: "ಬೆಳಗಿನೆಳೆ ಕಿರಣಗಳ ಜೊತೆ ಸಾಗೋದು ಅಂದರೆ, ಏನೋ ಸಂತಸ.. ಬದುಕು ಸುಂದರವಾಗಿದೆ..!" ನಾನು reply ಒತ್ತಿ: "ನೇಸರನು ಮೀಸೆ ತಿರುವುತ ನುಸುಳುತ್ತಿರಲು, ಸಾವನದುರ್ಗದ ಹೆಸರರಿಯದ ದೇವರು ಕರೆಯುತ್ತಿರಲು, ನಸುಕಿಗೇ ಹೊಸ ಬಣ್ಣ ಬಂದಿರಲು.." ಅಂತ type ಮಾಡಿದೆ; ಅಷ್ಟರಲ್ಲಿ ಸಂದೀಪ ಬಂದ. ಅರ್ಧ ಟೈಪಿಸಿದ್ದ ಮೆಸೇಜನ್ನು ಹಾಗೆಯೇ ಚಾರಣಿಗನಿಗೆ ಕಳಿಸಿ ಮನೆಯ ಮೆಟ್ಟಿಲಿಳಿಯತೊಡಗಿದೆ.

ಗಿರಿಯ ಮನೆಯಿಂದ ನಮ್ಮ ಪಯಣ 'ಅಧಿಕೃತವಾಗಿ' ಶುರುವಾಯಿತು. ಒಟ್ಟು ಹದಿನೇಳು ಹುಡುಗರು. ಒಂಬತ್ತು ಬೈಕುಗಳ ಗಾಲಿಗಳಲ್ಲೂ ಹುಮ್ಮಸ್ಸಿನ ಗಾಳಿ ತುಂಬಿತ್ತು. ಮಾಗಡಿ ರಸ್ತೆಯಲ್ಲಿ ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ಸಾವನದುರ್ಗ ಬೆಟ್ಟ ಕಾಣಲಾರಂಭಿಸಿತು: ಗಮ್ಯದಂತೆ. ಅದನ್ನೇ ನೋಡುತ್ತಾ, ಮಧ್ಯದಲ್ಲೊಮ್ಮೆ ಚಹ ಕುಡಿದು, 'ದುಸ್ಥಿತಿ'ಯಲ್ಲಿದ್ದ ರಸ್ತೆಯಲ್ಲಿ ಸಾಗಿದೆವು...


ಸಾವನದುರ್ಗ ತಲುಪಿದಾಗ ಹತ್ತು ಗಂಟೆ. ಬೈಕು ಪಾರ್ಕ್ ಮಾಡಿ, ಅಲ್ಲೇ ಮಾರುತ್ತಿದ್ದ ನೀರಾ ಕೊಂಡುಕೊಂಡು, ಬ್ಯಾಗೇರಿಸಿ ಬೆಟ್ಟ ಹತ್ತತೊಡಗಿದೆವು. ಏದುಸಿರು ಬಂದು ಅಲ್ಲಲ್ಲಿ ಕುಂತು ಸುಧಾರಿಸಿಕೊಂಡೆವು. ಸುಮಾರು ಅರ್ಧ ಹತ್ತಿದೆವು ಅನ್ನಿಸಿದಾಗ, ಒಂದು ಕಡೆ 'ಕೂರಬಹುದಾದಂತಹ ಜಾಗ' ಕಂಡಾಗ ಕುಂತು, ಕಟ್ಟಿಸಿಕೊಂಡು ಹೋಗಿದ್ದ ಚಪಾತಿ-ಪಲ್ಯ ತಿಂದೆವು. ನೀರು ಕುಡಿದೆವು. ಮತ್ತೆ ಹತ್ತತೊಡಗಿದೆವು. ಹತ್ತಿದಷ್ಟೂ ಬೆಟ್ಟ; ಮುಗಿಯದ ದಾರಿ; ದಾರಿಯಲ್ಲದ ದಾರಿ; ಎಲ್ಲೆಲ್ಲೂ ಕಲ್ಲುಬಂಡೆ; ಒಂದಷ್ಟು ಹಸಿರು ಚಿಗುರು, ಪಾಪಸು ಕಳ್ಳಿ, ನಿಂತ ನೀರು ಅಲ್ಲಲ್ಲಿ.... ಬೆಟ್ಟ ಅದೆಷ್ಟು ಕಡಿದಾಗಿದೆಯೆಂದರೆ... ಹೆಚ್ಚುಕಮ್ಮಿಯಾಗಿ ಜಾರಿ ಬಿದ್ದರೆ ಪುಡಿಪುಡಿ; ಹೆಣ ಸಿಗುವುದೂ ಡೌಟು.. ಕೆಲವೊಂದೆಡೆ ತೆವಳಿಕೊಂಡು ಸಾಗಬೇಕು.


ಬೆಟ್ಟದ ಮೇಲೆ ತಲುಪಿದಾಗ ಹನ್ನೆರಡೂ ಕಾಲು. ಅಲ್ಲೊಂದು ಮಂಟಪದಲ್ಲಿ ನಂದಿ. ತಣ್ಣಗೆ ಬೀಸುವ ಗಾಳಿ. ಒಂದು ತಾಸು ಅಲ್ಲೇ ಕುಳಿತು, ಮಲಗಿ, ಫೋಟೋ ತೆಗಿಸಿಕೊಂಡು, ಜೋಕ್ಸ್ ಹೇಳಿಕೊಂಡು, ನಕ್ಕು, ಹಗುರಾದೆವು. ನಂತರ ಊಟ ಮಾಡಿದೆವು. 'ಮಿತವಾಗಿ' ನೀರು ಕುಡಿದೆವು. ಎರಡೂ ವರೆ ಹೊತ್ತಿಗೆ ಗುಂಪುಗುಂಪಾಗಿ ಅವರೋಹಣ ಶುರುಮಾಡಿದೆವು.


ನಿಧಾನಕ್ಕೆ ಇಳಿದು 'ಭೂಮಿ'ಯನ್ನು ತಲುಪಿದೆವು. ಎಳನೀರು ಕುಡಿದೆವು. ಮಳೆ ಬರುವ ಸಾಧ್ಯತೆ ಇತ್ತು. ಬೇಗ ಮನೆ ಮುಟ್ಟಿಕೊಳ್ಳೋಣ ಎಂದುಕೊಂಡು ಹೊರಟೆವು. ಮಧ್ಯದಲ್ಲೊಮ್ಮೆ ನಿಲ್ಲಿಸಿ, ಉಳಿದಿದ್ದ ಚಪಾತಿ ತಿಂದು ಖಾಲಿ ಮಾಡಿದೆವು. ಮತ್ತೆ ಮುಂದೆ ನಿಲ್ಲಿಸಿ ಕಾಫಿ ಕುಡಿದೆವು. 'ಮತ್ತೆ ಸಿಗೋಣ' ಅಂತಂದು ಎಲ್ಲರೂ ಬೇರಾದೆವು.

***

ರಾತ್ರಿ ಲೈಟಾರಿಸಿ ಮಲಗಿದರೆ ಕಣ್ಣಿನಲ್ಲಿ ಅದೇ ಬಿಂಬ: ಸಾವನದುರ್ಗ ಬೆಟ್ಟದ ಮೇಲಿನ ನಂದಿ ಚಳಿ, ಗಾಳಿ, ಮಳೆಗಳಿಗೆ ಹೆದರದೇ ಮೌನವಾಗಿ ನಿಂತಿದೆ. ಇಲ್ಲ, ಕುಳಿತಿದೆ. ಇಲ್ಲ, ಮಲಗಿದೆ. ಗಂಭೀರವಾಗಿ ಮಲಗಿದೆ. ಬಹುಶಃ ಅದಕ್ಕೆ ಭ್ರಮೆ: ಬರುವ ಜನರೆಲ್ಲಾ ಇಷ್ಟೆತ್ತರದ ಬೆಟ್ಟ ಹತ್ತಿ ತನ್ನನ್ನು ನೋಡಲೇ ಬರುತ್ತಾರೆ ಅಂತ! ಅದಕ್ಕೇ ಅಷ್ಟೊಂದು ಗತ್ತು. ಗೋಣು ಸಹ ಅಲ್ಲಾಡಿಸುವುದಿಲ್ಲ. ಅದರ ಪೂಜಾರಿಯ ಮನೆ ಎಲ್ಲಿದೆ? ಆತ ದಿನವೂ ಬೆಳಗ್ಗೆ ಎದ್ದು, ಬೆಟ್ಟ ಹತ್ತಿ ಬಂದು ಪೂಜೆ ಮಾಡಿ ಹೋಗುತ್ತಾನೆಯೇ?

ಉತ್ತರ ಗೊತ್ತಿರದ ಪ್ರಶ್ನೆಗಳು ಕಾಡುತ್ತಿರಲು, ಸುಸ್ತಿಗೇ ನಿದ್ದೆ ಹತ್ತಿತು.

(For more photos, click here / here)

Monday, November 13, 2006

ಒಂದು ಹುಟ್ಟು, ಒಂದು ಮದುವೆ ಮತ್ತು ಒಂದು ಸಾವು..

"ಚೆಲುವ ಬಿದಿರ ತೊಟ್ಟಿಲಲ್ಲಿ
ನಗುವ ಮಗುವ ಕಂಡೆ"

ಅಂತ ಬರೆದರು ಕೆ‍ಎಸ್‍ನ. ಮೊನ್ನೆ ನಮ್ಮ ಬಾಸ್‍ ತಂದೆಯಾದರು. ಮಗುವನ್ನು ನೋಡಿಕೊಂಡುಬರಲು ನಾನು ನನ್ನ colleagues ಜೊತೆ ಆಸ್ಪತ್ರೆಗೆ ಹೋಗಿದ್ದೆ. ಬಾಸ್ ತುಂಬಾ ಖುಷಿಯಲ್ಲಿದ್ದರು. ಸ್ವೀಟ್ ಕೊಟ್ಟರು. ನಾನು ಇದೇ ಸಂದರ್ಭ ಅಂತ 'ಸರ್, ಸ್ವೀಟ್ ಸಾಕಾಗಲ್ಲ, ಟ್ರೀಟ್ ಬೇಕು' ಅಂದೆ. 'ಓ, ಅದಕ್ಕೇನಂತೆ, ಕೊಡುಸ್ತೀನಿ' ಅಂದ್ರು. ಬೆಡ್ಡಿನಲ್ಲಿ ಮಲಗಿದ್ದ ಬಾಸ್-ಮಿಸ್ಸಸ್‍ಗೆ ಕಂಗ್ರಾಟ್ಸ್ ಹೇಳಿದೆ. ತೊಟ್ಟಿಲಲ್ಲಿ ಮಗು ನಿದ್ದೆ ಹೋಗಿತ್ತು. 'ಯಾರ ಹಾಗಿದಾಳಪ್ಪ?' ಅಂದ್ರು ಬಾಸ್ ಅತ್ತೆ. ಹೆಚ್ಚೆಸ್ವಿ ತಮ್ಮ ಮೊಮ್ಮೊಗಳ ಕುರಿತು ಬರೆದ 'ಸೋನಿ ಪದ್ಯಗಳು' ನೆನಪಾಗುತ್ತಿತ್ತು ನನಗೆ...


***

ಮೊನ್ನೆ ಸಿಂಧು ಅಕ್ಕನ ಮದುವೆಯ receptionಗೆ ಹೋಗಿದ್ದೆ. ತನ್ನನ್ನು ತಾನೇ 'ಅಕ್ಕ' ಅಂತ ಕರೆದುಕೊಂಡ ಮಹಾದೇವಿ ಈಕೆ! ಮದುವೆಗೆ ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿ ಬಂದಿದ್ದರು. ಊಟದ ಸಮಯದಲ್ಲಿ ಜಯಂತ್ ಮಾತಿಗೆ ಸಿಕ್ಕಿದರು. ಈ ಮೊದಲು ಒಮ್ಮೆ ಸಪ್ನಾ ಬುಕ್‍ಹೌಸ್‍ನಲ್ಲಿ ಜಯಂತ್ ಸಿಕ್ಕಿದ್ದರು. ಅದನ್ನು ನೆನಪಿಸಿ, 'ನಾನು..ಸುಶ್ರುತ.. ಅವತ್ತು ಸಪ್ನಾದಲ್ಲಿ ಸಿಕ್ಕಿದ್ನಲ್ಲ...' ಅಂದೆ. 'ಓಹ್, ಹೌದು, ಕರೆಕ್ಟ್!' ಅಂದ್ರು. (ನಿಜವಾಗ್ಯೂ ನೆನಪಾಯ್ತೋ ಸುಳ್ಳೇ ಹೂಂ ಅಂದ್ರೋ ನಂಗಂತೂ ಡೌಟು!). ಕೊನೆಗೆ ಜಯಂತ್ ಜೊತೆಯೇ ತುಂಬಾ ಹೊತ್ತು ಮಾತಾಡಿದೆ. 'ಸರ್ ನೀವು ನಮಗೆ continuous ಆಗಿ ಓದ್ಲಿಕ್ಕೆ ಸಿಗ್ಬೇಕು, ಯಾವ್ದಾದ್ರೂ ಪತ್ರಿಕೆಗೆ ಬರೀರಿ' ಅಂದೆ. 'ಸಧ್ಯದಲ್ಲೇ ಪ್ರಜಾವಾಣಿಗೆ ಬರೀತೀನಿ. ಡಾ| ರಾಜಕುಮಾರ್ ಬಗ್ಗೆ 'ನಮಸ್ಕಾರ' ಸರಣಿಯಲ್ಲಿ ಈಟೀವಿಯಲ್ಲಿ ನಾಡಿದ್ದು ಭಾನುವಾರದಿಂದ ನನ್ನ ಪ್ರೋಗ್ರಾಮ್ ಒಂದು ಬರುತ್ತೆ, ನೋಡಿ' ಅಂದರು. ಅದೂ ಇದು ಮಾತಾಡಿದ್ವಿ.

ಅಕ್ಕನ ಮದುವೆಯ reception hallನಲ್ಲಿ ಕೇಳಿಬರುತ್ತಿದ್ದ 'ಮೈಸೂರು ಮಲ್ಲಿಗೆ' ಮತ್ತಿತರ ಭಾವಗೀತೆಗಳು ಕಿವಿಗಿಂಪಾಗಿದ್ದವು. ಅಕ್ಕನಿಗೆ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಪುಸ್ತಕವನ್ನು present ಮಾಡಿದೆ.


***

ಮೊನ್ನೆ Bangalore Book Fairನಿಂದ ಒಂದಷ್ಟು ಪುಸ್ತಕಗಳನ್ನು ಕೊಂಡುತಂದೆ. ತಂದ ಪುಸ್ತಕಗಳಿಗೆಲ್ಲ ಬೈಂಡ್ ಹಾಕಿ, ಮೇಲೆ ಹೆಸರು ಬರೆದು ಇಡುವುದು ನನ್ನ ರೂಢಿ. ನಿನ್ನೆ ಹಾಗೇ ಹೆಸರು ಬರೆಯುತ್ತಾ ಕೂತಿದ್ದೆ. ಅಷ್ಟರಲ್ಲಿ ನಮ್ಮ ಕೆಳಗಡೆ ಮನೆಯ ಆಂಟಿ 'ಸುಪ್ರೇಶ್' ಅಂತ ಕರೆದರು. ಅವರು ನನ್ನನ್ನು ಕರೆಯುವುದೇ ಹಾಗೆ. ನಾನೂ ಅದನ್ನು rectify ಮಾಡಲು ಹೋಗಿಲ್ಲ. ಏಕೆಂದರೆ 'ಸುಶ್ರುತ' ಎಂಬ ನನ್ನ ಹೆಸರನ್ನು ಸರಿಯಾಗಿ ಕರೆಯುವವರ ಸಂಖ್ಯೆ ತುಂಬಾ ಕಮ್ಮಿ. Pronunciation problem! ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ. ನಾನೂ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗುವುದಿಲ್ಲ. (ಎಷ್ಟೂಂತ ಕೆಡಿಸಿಕೊಳ್ಳಲಿ ನಾನಾದರೂ!)

ಆಂಟಿ ಕರೆದಾಗ ನಾನು ಕಾರಂತರ 'ಅಳಿದ ಮೇಲೆ' ಕಾದಂಬರಿಗೆ ಸ್ಕೆಚ್‍ಪೆನ್ನಿನ್ನಲ್ಲಿ ಹೆಸರು ಬರೆಯುತ್ತಿದ್ದೆ. 'ಏನ್ ಆಂಟಿ?' ಎನ್ನುತ್ತಾ ಹೊರಬಂದೆ. ಆಂಟಿ ನನ್ನನ್ನೇ ದುರುದುರು ನೋಡಿದರು. 'ಅಂಕಲ್ ಹೋಗ್ಬಿಟ್ರು ಗೊತ್ತಾಗ್ಲಿಲ್ವಾ ನಿಮ್ಗೆ?' ಅಂದ್ರು. ನನಗೆ ಒಮ್ಮೆಲೇ ಅರ್ಥವಾಗಲಿಲ್ಲ. ಈ ಆಂಟಿ ಮತ್ತು ಅಂಕಲ್ (actually ಅವರು ಅಜ್ಜ-ಅಜ್ಜಿ: ಅಂಕಲ್‍ಗೆ ಸುಮಾರು ಅರವತ್ತು ವರ್ಷ; ಆಂಟಿಗೆ ಐವತ್ತು ಛೇಂಜ್) ನಮ್ಮ ಮನೆಯ ಥರ್ಡ್ ಫ್ಲೋರಿನಲ್ಲಿರುವ ಒಂಡು ಡಬ್ಬಲ್ ಬೆಡ್‍ರೂಮ್ ಹೌಸಿನಲ್ಲಿ ಬಾಡಿಗೆಗಿದ್ದಾರೆ. ಅವರಿಗೆ ಗಂಡುಮಕ್ಕಳು ಇಲ್ಲದ್ದರಿಂದ ಮತ್ತು ಹೆಣ್ಣುಮಕ್ಕಳಿಗೆ ಮದುವೆಯಾಗಿದೆಯಾದ್ದರಿಂದ, ಅಂಕಲ್ ಮತ್ತೆ ಆಂಟಿ ಇಬ್ಬರೇ ಇಲ್ಲಿ ಇರುವುದು. ಅಂಕಲ್ ಆದ್ರೂ ತುಂಬಾ ಉತ್ಸಾಹದಿಂದಿರುವವರು. ಮನೆಗೆ Worldspace Radio, Tata Sky TV ಎಲ್ಲಾ ಹಾಕಿಸಿಕೊಂಡಿದ್ದಾರೆ. 'ರಿಟೈರ್ಡ್ ಲೈಫಪ್ಪ. ಅವಾಗ್ಲಂತೂ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ; ಈಗ ಎಲ್ಲಾ ಇದೆ, ಎಂಜಾಯ್ ಮಾಡೋಣ ಅಂತಿದೀನಿ' ಅಂದಿದ್ರು ನನ್ಹತ್ರ ಒಮ್ಮೆ.

ಆಂಟಿ ನನ್ನ ಬಳಿ 'ಅಂಕಲ್ ಹೋಗಿದ್ದು ನಿಮಗೆ ಗೊತ್ತೇ ಇಲ್ವಾ, ಮೊನ್ನೇನೆ ಹೋಗ್ಬಿಟ್ರು' ಅಂದ್ರು. 'ಎಲ್ಲಿಗೆ?' ಅಂತ ಕೇಳ್ಲಿಕ್ಕೆ ಹೊರಟವನು ಬಾಯಿಗೆ ಬೀಗ ಹಾಕಿಕೊಂಡೆ. ನನಗೆ ಅವರು ಸತ್ತುಹೋಗಿರಬಹುದು ಎಂಬ ಕಲ್ಪನೆಯೇ ಬರಲಿಲ್ಲ. ಏಕೆಂದರೆ ಆಂಟಿಯ ಹಣೆಯ ಕುಂಕುಮ, ಕೊರಳ ಕರಿಮಣಿ ಸರ ಎಲ್ಲಾ ಹಾಗೇ ಇತ್ತು. ಅಲ್ಲದೇ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ನಾನು ಮತ್ತೆ ಮತ್ತೆ ಆಂಟಿಯನ್ನೇ ನೋಡಿದೆ. 'ಮೊನ್ನೆ ಬೆಳಗ್ಗೆ ಒಂಬತ್ತೂ ವರೆ ಹೊತ್ತಿಗೆ ಹೋಗ್ಬಿಟ್ರಪ್ಪ. ತುಂಬಾ ಜನಗಳು ಸೇರಿದ್ರು, ನಿಮಗೆ ನಿಜವಾಗ್ಯೂ ಗೊತ್ತೇ ಇಲ್ವಾ?' ಅಂದ್ರು. ಈಗ ನಾನು ಸ್ವಲ್ಪ convince ಆದೆ. 'ಓ, ಹೌದಾ ಆಂಟಿ... ಅಯ್ಯೋ, ನಂಗೆ ಗೊತ್ತೇ ಇಲ್ವಲ್ಲ... ಅರೆ.. ಹೆಂಗಾಯ್ತು..' ಅಂತೆಲ್ಲ ಹಲುಬಿದೆ.

ಈ ಬೆಂಗಳೂರು ಇದೆಂತಾ ಊರೋ ಏನೋ. ಕೆಳಗಡೆ ಮನೆಯಲ್ಲಿ ಒಂದು ಸಾವು ಸಂಭವಿಸಿದರೆ ಮೇಲ್ಗಡೆ ಮನೆಯಲ್ಲಿರುವವರಿಗೆ ಅದು ತಿಳಿಯುವುದು ಮೂರು ದಿನಗಳ ನಂತರ! ನಾನು ಬೆಳಗ್ಗೆ ಎಂಟೂ ಮೂಕ್ಕಾಲಿಗೆ ಆಫೀಸಿಗೆ ಹೊರಟುಬಿಡುತ್ತೇನೆ. ಮತ್ತೆ ವಾಪಸು ಬರುವಷ್ಟರಲ್ಲಿ ಎಂಟಾಗಿರುತ್ತದೆ. ಅಲ್ಲದೇ ನಾನು ಈಗ ಮೂರು ದಿನಗಳಿಂದ ಸ್ವಲ್ಪ ಬ್ಯುಸಿ ಇದ್ದುದರಿಂದ ರೂಮಿನಲ್ಲಿರುತ್ತಿದ್ದುದೇ ಕಮ್ಮಿ. ಹೀಗಾಗಿ ನನಗೆ ಅಂಕಲ್ ತೀರಿಕೊಂಡ ಸುದ್ದಿ ತಿಳಿದೇ ಇರಲಿಲ್ಲ. ಅಂಕಲ್‍ಗೆ ಸ್ವಲ್ಪ ಅರಾಮಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಮನೆಯ ಹೊರಗಡೆ ಮೊನ್ನೆ ತುಂಬಾ ಚಪ್ಪಲಿಗಳು ಕಂಡರೂ ಯಾರೋ ನೆಂಟರು ಬಂದಿರಬಹುದು ಅಂತಷ್ಟೇ ಅಂದುಕೊಂಡಿದ್ದೆ.

ಆಂಟಿ 'ಇವರೇನು ನಗುನಗ್ತಾ ಇದಾರಲ ಅಂದ್ಕೋಬೇಡಪ್ಪಾ.. ಮೂರು ದಿನಗಳಿಂದ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋಗಿದೆ' ಅಂದ್ರು. 'ಅಯ್ಯೋ ಹಾಗೇನಿಲ್ಲ ಬಿಡಿ ಆಂಟಿ.. ಸಮಾಧಾನ ಮಾಡ್ಕೋಬೇಕು.. ಏನ್ಮಾಡ್ಲಿಕ್ಕಾಗೊತ್ತೆ...' ಅಂತ ಏನೇನೋ ಅಂದೆ. ನನಗೆ ಇಂತಹ ಸಂದರ್ಭಗಳಲ್ಲಿ ಮಾತನಾಡುವುದಕ್ಕೆ ತೋಚುವುದೇ ಇಲ್ಲ. 'ಇನ್ನು ನೀವು ಒಬ್ರೇ ಇರ್ತೀರ ಆಂಟಿ?' ಅಂತ ಕೇಳಿದೆ. 'ನನ್ನ ಹೆಣ್ಣುಮಕ್ಳು ತಮ್ಮನೇಲೇ ಇರು ಬಾ ಅಂತ ಕರೀತಿದಾರೆ... ಏನ್ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ..' ಅಂದರು. ಅಷ್ಟರಲ್ಲಿ ಅವರ ಹೆಣ್ಣುಮಗಳೊಬ್ಬರು ಮೇಲೆ ಬಂದು ಅವರನ್ನು ಕರೆದುಕೊಂಡು ಕೆಳಗೆ ಹೋದರು.

ಕಾರಂತರ 'ಅಳಿದ ಮೇಲೆ' ಪುಸ್ತಕ ನನ್ನ ಕೈಯಲ್ಲೇ ಇತ್ತು.


***

ಈ ಬ್ಲಾಗ್ ಶುರುಮಾಡುವಾಗ ಇಂತಹ personal ಆದ ವಿಷಯಗಳನ್ನು ಇಲ್ಲಿ ಬರೆಯಬಾರದು ಅಂತ ಅಂದುಕೊಂಡಿದ್ದೆ. ಈ ಬ್ಲಾಗನ್ನು ನನ್ನ ಖಾಸ್‍ಬಾತ್‍ ಮಾಡಬಾರದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಇವತ್ತು ಬೆಳಗ್ಗೆ ಒಂದು ಎಸ್ಸೆಮ್ಮೆಸ್ ಬಂತು: ಸಂತೋಷ ಮತ್ತು ದುಃಖಗಳು ಇರುವುದೇ ಹಂಚಿಕೊಳ್ಳುವುದಕ್ಕಾಗಿ ಅಂತ. ಆಮೇಲೆ ಇದನ್ನೆಲ್ಲಾ ಟೈಪ್ ಮಾಡಿ upload ಮಾಡಿದೆ.

Tuesday, November 07, 2006

ಹೋಳಿಗೆಯ ಮೆಲುಕು

ಹೋಳಿಗೆ ಮಾಡುವುದು ಹೇಗೆ ಗೊತ್ತಾ?

ಮೊದಲು ಕಡಲೆ ಬೇಳೆಯನ್ನು ತೊಳೆದು, ನೆನೆಸಿಡಬೇಕು. ಆಮೇಲೆ ಅದನ್ನು ಬೆಲ್ಲದೊಂದಿಗೆ ಬೇಯಿಸಬೇಕು. ಅದು ಬೆಂದಾದಮೇಲೆ ಸಿದ್ದವಾಗುವ ಖಾದ್ಯವೇ ಹಯಗ್ರೀವ. ಆಮೇಲೆ ಅದನ್ನು ಬೀಸಬೇಕು. ಈಗ ಹೂರಣ ಸಿದ್ದ. ಈ ಮಧ್ಯೆ ಹೋಳಿಗೆ ರವೆ (ಅಥವಾ ಗೋಧಿ/ಮೈದಾ ಹಿಟ್ಟು) ಯನ್ನು ಎಣ್ಣೆ/ನೀರಿನೊಂದಿಗೆ ಕಲಸಿ, ಮೆದ್ದು, ಸರಿಯಾಗಿ ಹದ ಮಾಡಿಟ್ಟುಕೊಳ್ಳಬೇಕು. ರಬ್ಬರಿನಂತೆ flexible ಆಗಿರಬೇಕು ಅದು. ಈಗ ಕಣಿಕೆ ಸಿದ್ದ. ಈಗ ಏನು ಮಾಡಬೇಕೆಂದರೆ.. ಕಣಿಕೆಯನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಆಮೇಲೆ ಹೂರಣವನ್ನೂ ಉಂಡೆ ಕಟ್ಟಬೇಕು. ಈ ಹೂರಣದ ಉಂಡೆಗಳು ಕಣಿಕೆ ಉಂಡೆಗಳಿಗಿಂತ ದೊಡ್ಡವು. ಕಣಿಕೆಯ ಉಂಡೆಗಳು ಮತ್ತು ಹೂರಣದ ಉಂಡೆಗಳು ಸಮಸಂಖ್ಯೆಯಲ್ಲಿರಬೇಕು. (ಕಣಿಕೆ ಸ್ವಲ್ಪ ಉಳಿದುಬಿಟ್ಟರೆ ಕೊನೆಯಲ್ಲಿ 'ಕಣಿಕೆ ರೊಟ್ಟಿ' ಮಾಡಬಹುದು, ಚಿಂತೆಯಿಲ್ಲ!). ಕಾವಲಿ ಕಾದಿದೆಯಾ ನೋಡಿ... ಹಾಂ, ಕಾದಿದೆ. ಈಗ ಕಾವಲಿಗೆ ಎಣ್ಣೆ ಸವರಿ. ಹಾಂ, ಇನ್ನು ಕಣಿಕೆಯನ್ನು ಒತ್ತಿ (ಅಥವಾ ತಟ್ಟಿ) ಚಪ್ಪಟೆ ಮಾಡಿ, ಅದರೊಳಗೆ ಹೂರಣದ ಉಂಡೆಯನ್ನು ಇಟ್ಟು, ಕಣಿಕೆಯಿಂದ ಮುಚ್ಚಿಬಿಡಿ. ಈಗ ಅದನ್ನು ಮಣೆಯ ಮೇಲಿಟ್ಟು, (ಮಣೆಯ ಮೇಲೆ ಕವರು ಹಾಸಿಕೊಂಡಿದ್ದೀರ ತಾನೆ?), ಲಟ್ಟಣಿಗೆಯಿಂದ ತೆಳ್ಳಗೆ ವರೆಯಬೇಕು... ಕಣಿಕೆ transparent ಆಗಿ ಒಳಗಿನ ಹೂರಣ ಎದ್ದುಬರುವಂತಾಗುವವರೆಗೆ ವರೆಯಬೇಕು. ಈಗ ಇದನ್ನು ಕಾದ ಕಾವಲಿಯ ಮೇಲೆ ಹಾಕಬೇಕು. ಹತ್ತಿ ಕರಕಲಾಗದಂತೆ ಆಗಾಗ ಮಗುಚಿಹಾಕುತ್ತಿರಬೇಕು. ಬೆಂದಮೇಲೆ ತೆಗೆದು ಪೇಪರ್ ಮೇಲೆ ಆರಲು ಹಾಕಬೇಕು... ಇಗೋ, ಇದೀಗ ಹೋಳಿಗೆ ತಿನ್ನಲು ಸಿದ್ದ! ನೋಡಿ, ಎಷ್ಟು ಕಷ್ಟ ಹೋಳಿಗೆ ಮಾಡುವುದು...!

ಮನುಷ್ಯನಿಗೆ ಬೇಳೆ, ಬೆಲ್ಲ, ರವೆ, ಹಿಟ್ಟುಗಳನ್ನು ಹಾಗ್-ಹಾಗೇ ತಿನ್ನಲಾಗುವುದಿಲ್ಲ ಅದಕ್ಕಾಗಿ ಇಷ್ಟೆಲ್ಲ ಕಷ್ಟ ಪಡುತ್ತಾನೆ! ಅದ್ಸರಿ, ಈ ಹೋಳಿಗೆ ಮಾಡುವುದನ್ನು ಕಂಡುಹಿಡಿದವರು ಯಾರು?

ಮರೆತದ್ದು: ಹಯಗ್ರೀವವನ್ನು ಬೀಸುವ ಮುಂಚೆ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿದರೆ ಹೋಳಿಗೆಗೆ ಪರಿಮಳವೂ, ಜಾಸ್ತಿ ರುಚಿಯೂ ಲಭ್ಯವಾಗುತ್ತದೆ!


***

ಯಾಕೆ ಬರೆದೆ ಇದನ್ನ ಇಲ್ಲಿ ಅಂದ್ರೆ...

ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದೆ. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಹೆಣ್ಣುಮಕ್ಕಳು ಇಲ್ಲದ ಕಾರಣ ನಾನೇ ಅಮ್ಮನಿಗೆ ಹೋಳಿಗೆ ಮಾಡುವಲ್ಲಿ assist ಮಾಡುವುದು. ಕಳೆದ ವರ್ಷದವರೆಗೆ ಅಜ್ಜಿ ಇದ್ದಳು. ಅವಳಿಗೆ ಏನನ್ನೂ ಮಾಡಲು ಆಗುತ್ತಿರಲಿಲ್ಲವಾದರೂ, ಒಂದಷ್ಟು ಹೊತ್ತು ಒಲೆ ಬುಡದಲ್ಲಿ ಕೂತು ಹೋಳಿಗೆ ಮಗುಚಿಹಾಕುವ ಕೆಲಸವನ್ನು ಮಾಡುತ್ತಿದ್ದಳು. ಅವಳು ತೀರಿಕೊಂಡಮೇಲೆ ಈ ವರ್ಷ ಹೂರಣದ ಉಂಡೆ ಕಟ್ಟುವುದು, ಬೆಂಕಿಯ ಕಾವು ಹೆಚ್ಚುಕಮ್ಮಿಯಾಗದಂತೆ manage ಮಾಡುವುದು, ಹೋಳಿಗೆ ಮಗುಚಿಹಾಕುವುದು ಎಲ್ಲಾ ನಾನೇ. ಅಮ್ಮ ಕಣಿಕೆಯ ಉಂಡೆ ಕಟ್ಟುವುದು, ಹೂರಣದ ಉಂಡೆಯನ್ನು ಕಣಿಕೆಯ ಒಳಗಿಟ್ಟು ಹೋಳಿಗೆ ವರೆಯುವುದು, ಆಮೇಲೆ ಅದನ್ನು ಕೈಮೇಲೆ ಹಾಕಿಕೊಂಡು ಹರಿದುಹೋಗದಂತೆ ಕಾದ ಕಾವಲಿಯ ಮೇಲೆ ವರ್ಗಾಯಿಸುವುದು, ಹೋಳಿಗೆ ಬೆಂದಿತಾ ಅಂತ ಚೆಕ್ ಮಾಡುವುದು.. ಎಲ್ಲಾ ಮಾಡುತ್ತಾಳೆ.

ನನಗೆ ಮೊದಲಿನಿಂದಲೂ ಅಮ್ಮನಿಗೆ ಸಹಾಯ ಮಾಡುವ ಇಂತಹ ಕೆಲಸಗಳಲ್ಲಿ ಆಸಕ್ತಿ. ಏಕೆಂದರೆ ಒಲೆಯ ಹಳದಿ ಬೆಳಕು ಅಮ್ಮನ ಮುಖದ ಮೇಲೆ ಲಾಸ್ಯವಾಡುತ್ತಿರುವಾಗ ನಾನು ಉಂಡೆ ಕಟ್ಟಿಕೊಡುತ್ತಾ ಅದೆಷ್ಟು ಮಾತಾಡಬಹುದು...! ಊರ ಕಥೆಯನ್ನೆಲ್ಲಾ ಅಮ್ಮ ಹೇಳುತ್ತಾಳೆ. ಯಾರ್‍ಯಾರ ಮನೆಯಲ್ಲಿ ಏನೇನಾಯ್ತು, ಪಾರಕ್ಕ ಗಂಡ-ಹೆಂಡ್ತಿ ಕಾಶೀಯಾತ್ರೆಗೆ ಹೋಗಿಬಂದದ್ದು, ಹೊಸವರ್ಷದ ಹಿಂದಿನ ದಿನ ಊರವರೆಲ್ಲಾ ಸೇರಿ ಕಂಬಳ ಮಾಡಿದ್ದು, ಪ್ರಕಾಶಣ್ಣನ ಮನೆಯ ಹುಲ್ಲು ಗೊಣಬೆಗೆ ಬೆಂಕಿ ಬಿದ್ದುಬಿಟ್ಟದ್ದು, (ಬೆಂಕಿ ಹಾಕಿದ್ದು ಇಂಥವನೇ ಇರಬೇಕು ಅಂತ ಊರವರೆಲ್ಲ ಗುಸುಗುಸು ಮಾತಾಡಿಕೊಳ್ಳುತ್ತಿರುವುದು), ಸರೋಜಕ್ಕನೂ ಶ್ರೀಲಕ್ಷ್ಮಕ್ಕನೂ ಮಾಡಿಕೊಂಡ ಜಗಳ, ಗುಂಡ ಹೊಸ ಬೈಕಿನಿಂದ ಬಿದ್ದು ಕಾಲು ಮುರಿದುಕೊಂಡದ್ದು... ಎಲ್ಲ.

ಇವನ್ನೆಲ್ಲ ಫೋನಿನಲ್ಲಿ ಮಾತನಾಡಲು ಆಗುವುದಿಲ್ಲ. ಏಕೆಂದರೆ ಬಹಳ ಸಲ ನಮ್ಮನೆಯ ಫೋನಿನಲ್ಲಿ ಮಾತಾಡುತ್ತಿರುವುದನ್ನು ಬೇರೆಯವರ ಮನೆಯವರು ಫೋನೆತ್ತಿದರೆ ಕೇಳಿಸಿಕೊಳ್ಳಬಹುದು! ಆದ್ದರಿಂದ, ಇದಕ್ಕೆ ಹಿತ್ಲಕಡೆ ಲಾಯದಲ್ಲಿ ಹೋಳಿಗೆ ಮಾಡಲಿಕ್ಕೆಂದು ಹೂಡಿದ ವಿಶೇಷ ಒಲೆಯ ಎದುರೇ ಆಗಬೇಕು. ನಾನು ಹಿಂದಿನ ಸಲ ಊರಿಗೆ ಬಂದುಹೋದಂದಿನಿಂದ ಈ ಸಲ ಬರುವವರೆಗೆ ಊರಿನಲ್ಲಿ, ನಮ್ಮ ನೆಂಟರಿಷ್ಟರ ಕುಟುಂಬಗಳಲ್ಲಿ ಏನೇನಾಯ್ತೋ ಎಲ್ಲದರ ವರದಿ ಈ ಒಲೆಯ ಮುಂದೆ ನನಗೆ ಸಿಗುತ್ತದೆ ಅಮ್ಮನಿಂದ. ನಾನು ಹೂರಣದ ಉಂಡೆ ಕಟ್ಟಿಕೊಡುತ್ತಾ, ಆ ಉಂಡೆ ಅಮ್ಮನ ಪುಟ್ಟ ಕಣಿಕೆಯ ಉಂಡೆಯೊಳಗೆ ಬೆಚ್ಚಗೆ ಮುಚ್ಚಿಹೋಗುವುದನ್ನು ವಿಸ್ಮಯದಿಂದ ನೋಡುತ್ತಾ, ಈ ಕಥೆಯನ್ನೆಲ್ಲಾ ಕೇಳುತ್ತೇನೆ... ಆಗಾಗ ಬೆಂಕಿ ಮುಂದೂಡುತ್ತಾ, ಕಾವು ಜಾಸ್ತಿಯಾದರೆ ಕಟ್ಟಿಗೆಯನ್ನು ಹಿಂದಕ್ಕೆಳೆಯುತ್ತಾ, ಕಣಿಕೆಯ ಉಂಡೆ ಮತ್ತು ನನ್ನ ಹೂರಣದ ಉಂಡೆ -ಎರಡೂ ಸಮಸಂಖ್ಯೆಯಲ್ಲಿದೆಯಾ ಅಂತ ಲೆಕ್ಕ ಮಾಡುತ್ತಾ ನಾನು ಕುಳಿತಿರುವಾಗ ಲಟ್ಟಣಿಗೆಯ ಕೆಳಗೆ ಕಣಿಕೆಯೊಳಗಣ ಹೂರಣ ಅಗಲವಾಗುತ್ತಾ ಹೋಗುತ್ತದೆ. ಕಣಿಕೆ ತಾನು ಪಾರದರ್ಶಕವಾಗುತ್ತಾ, ಹೂರಣವನ್ನು ಅಗಲವಾಗಲು ಬಿಡುತ್ತದೆ. ಹೂರಣಕ್ಕೆ ಕಣಿಕೆಯನ್ನೂ ಮೀರಿ ಬೆಳೆಯುವ ಧೈರ್ಯ. ಆದರೆ ಅಷ್ಟರಲ್ಲಿ ಅಮ್ಮ ವರೆಯುವುದನ್ನು ನಿಲ್ಲಿಸಿಬಿಡುತ್ತಾಳೆ.

ನಾನು ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಆಟವಾಡಿದ್ದು ಎಲ್ಲ ಈ ಹಳ್ಳಿಯಲ್ಲೇ, ಅಮ್ಮ-ಅಪ್ಪ-ಅಜ್ಜಿಯರ ಸಂಗಡವೇ. ನನ್ನ ಜೀವನದ ಮೊದಲ ಹದಿನೆಂಟು ವರ್ಷಗಳನ್ನು ಇಲ್ಲೇ ಕಳೆದುಬಿಟ್ಟೆ. ಓದಿನಲ್ಲಿ ಮುಂದಿದ್ದ ಕಾರಣ, ನಾನೇ ಊರಿಗೆಲ್ಲ ಹೀರೋ ಆಗಿದ್ದೆ. ಅಲ್ಲದೆ ಏನೇನೂ ಕೀಟಲೆ ಮಾಡದೆ, ಹೆಚ್ಚು ಮಾತೂ ಆಡದೆ, decent ಆಗಿ ಇರುತ್ತಿದ್ದೆನಾದ್ದರಿಂದ ನನಗೆ 'ತುಂಬಾ ಒಳ್ಳೇ ಮಾಣಿ' ಎಂಬ ಬಿರುದೂ ಬಂದುಬಿಟ್ಟಿತ್ತು! ಆದರೆ ಕೊನೆಕೊನೆಗೆ ಆ ಪಟ್ಟ ಬೇರೆಯವರಿಗೆ ವರ್ಗಾವಣೆಯಾಗುವ ಸಂಭವ ಬಂತು. ಓದುವುದರಲ್ಲಿ dull ಹೊಡೆಯಲು ಶುರು ಮಾಡಿದೆ. ನನ್ನ ಉಳಿದ ಸ್ನೇಹಿತರಿಗೆ ಬೇರೆಬೇರೆ ಕ್ಷೇತ್ರಗಳಲ್ಲಿ 'ಮನ್ನಣೆ' ಸಿಗಲಿಕ್ಕೆ ಪ್ರಾರಂಭವಾಗಿತ್ತು. ಹೀಗಾಗಿ ನಾನು ಏನೂ ಇಲ್ಲದೆ, ತೀರ ಪೇಲವನಂತಾಗಿಬಿಟ್ಟೆ. ಇಲ್ಲೇ ಇದ್ದರೆ ನಾನು ಇನ್ನು ಕೊಳೆತುಹೋಗಿಬಿಡುತ್ತೇನೆ ಅನ್ನಿಸಲು ಶುರುವಾಯಿತು ನನಗೆ... So, ನನ್ನ ಡಿಪ್ಲೋಮಾ ಮುಗಿದದ್ದೇ ಬೆಂಗಳೂರಿಗೆ ಹತ್ತಿಬಿಟ್ಟೆ.

ಇಲ್ಲಿಗೆ ಬರುವ ಮುನ್ನ ಕಟ್ಟಿದ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ಅವನ್ನೆಲ್ಲಾ achieve ಮಾಡಿಕೊಳ್ಳಲು ಬೇಕಾದ ಸಮಯ ಮತ್ತು ಅವಕಾಶವನ್ನು ಈ ಬೆಂಗಳೂರಿನ busyನೆಸ್ಸು ತಿಂದುಹಾಕುತ್ತಿದೆ. ಮೆಜೆಸ್ಟಿಕ್ಕಿನ ಬಳಿಯ ಫ್ಲೈಓವರಿನ ಮೇಲೆ ನಿಂತು ಕೆಳಗೆ ನೋಡಿದರೆ ಜನಸಾಗರ. ಎಲ್ಲಾ ಸರಸರನೆ ಓಡಾಡುತ್ತಿದ್ದಾರೆ. ಇವರೆಲ್ಲ ಯಾರು? ಎಲ್ಲಿಗೆ ಹೋಗುತ್ತಿದ್ದಾರೆ? ಏನದು ತರಾತುರಿ? ಒಂದೂ ಅರ್ಥವಾಗುತ್ತಿಲ್ಲ. ಸುಮ್ಮನೇ ಎಲ್ಲರೂ ಓಡುತ್ತಿದ್ದಾರೆ. ಗಮನಿಸಿ ನೋಡಿದರೆ, ನಾನೂ ಓಡುತ್ತಿದ್ದೇನೆ -ಇವರಂತೆಯೇ, ಇವರೊಂದಿಗೇ. ಹೀಗೇ ಓಡುತ್ತಿದ್ದರೆ ಮುಂದೊಂದು ದಿನ ಎಲ್ಲಿಗೆ ಹೋಗಿ ಮುಟ್ಟುತ್ತೇನೋ ಅನ್ನಿಸಿದಾಗ ಭಯವಾಗುತ್ತದೆ.


***

I am sorry. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಕ್ಕೆ ಬಂದರೂ, ಅದೆಷ್ಟೇ ನಗರೀಕೃತಗೊಂಡಿದ್ದೇನೆಂದರೂ, ಇನ್ನೂ ಊರಲ್ಲೇ ಇದ್ದೇನೆ ಅನ್ನಿಸುತ್ತದೆ. ಅಮ್ಮನನ್ನೂ, ಊರನ್ನೂ, ಬೆಚ್ಚನೆಯ ಆ ಒಲೆಯ ಎದುರನ್ನೂ ಬಿಟ್ಟಿರಲು ಆಗುವುದೇ ಇಲ್ಲ. ಅಮ್ಮ ಕೊಟ್ಟುಕಳುಹಿಸಿದ ಹೋಳಿಗೆಯನ್ನು ಮೆಲ್ಲುವಾಗ ಎಲ್ಲಾ ನೆನಪಾಗುತ್ತದೆ...

Saturday, November 04, 2006

ಮಳೆಗಾಲದ ನೆನಪು

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ, ಸಂಜೆ ಹೊತ್ತಿಗೆ ಮಳೆ. ಮನಸು ಪ್ರಫುಲ್ಲವಾಗಿರಬೇಕೆಂದರೆ ಆಗಸ ಶುಭ್ರವಾಗಿರಬೇಕು. ಬೆಳಗ್ಗೆ ಎದ್ದು ಹೊರಬಂದಾಗ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು ಕಂಡರೆ ಆ ದಿನವೆಲ್ಲಾ ಏನೋ ಹುಮ್ಮಸ್ಸು. ಬೆಳಗು ಚೆನ್ನಾಗಿ ಆಗಲಿಲ್ಲ ಆ ದಿನವೆಲ್ಲ mood out.

ಇವತ್ತು ಬೆಳಗ್ಗೆ ಎದ್ದಾಗ ಎಂಟೂ ಕಾಲು. ಮಬ್ಬು ವಾತಾವರಣವಾದ್ದರಿಂದ ಎಚ್ಚರೇ ಆಗಲಿಲ್ಲ. ಮೊಬೈಲಿನ ಅಲಾರಾಂ ಕೂಗಿದರೂ ಹಾಗೇ ಮುಸುಕು ಹಾಕಿ ಮಲಗಿಕೊಂಡಿರುವ ಮನಸು. ಆದರೂ ಆಫೀಸಿಗೆ ಹೋಗಬೇಕಾದ್ದರಿಂದ ಎದ್ದೆ. ಸ್ನಾನಕ್ಕೆ ಅಣಿ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಊರಿಗೆ ಹೋಗಿದ್ದ ಗೆಳೆಯ ಶ್ರೀನಿಧಿಯಿಂದ ಎಸ್ಸೆಮ್ಮೆಸ್ಸು ಬಂತು:

"ಗುಡ್ಡೆಗೆ ದನ ಕಟ್ಟಿ ಬರಲು ಹೋಗಿದ್ದೆ.
ಚೆನ್ನಾದ ಐದಾರು ನವಿಲುಗರಿಗಳು ಸಿಕ್ಕಿದವು.
ಕೈಗೆ ಖುಷಿಯೇ ವಸ್ತುರೂಪ ಧರಿಸಿ ಸಿಕ್ಕಂತಾಯ್ತು"

-ಅಂತ ಇತ್ತು. ಮೆಸೇಜು ಓದಿಯಾದಮೇಲೆ ಮನಸ್ಸು ಉಲ್ಲಾಸದಿಂದ ತುಂಬಿಕೊಂಡಿತು. ಆ ಕ್ಷಣದಲ್ಲಿ ನವಿಲು, ನವಿಲುಗರಿ, ಗುಡ್ಡೆ (ನಮ್ಮೂರಿನ ಕಡೆ ಅದು ಹಿತ್ಲು ಅಥವಾ ಹಕ್ಲು), ದನ, ಅದನ್ನು ಮೇಯಲು ಬಿಟ್ಟುಬರಲು ಹೋಗುವುದು ....ಎಲ್ಲಾ ಕಣ್ಣಮುಂದೆ ಬಂದು, ಊರು ನೆನಪಾಗಿ, ಓಹ್! ನನ್ನ ದಿನವನ್ನು ಹಸನುಗೊಳಿಸಲು ಒಂದು ಮೆಸೇಜು ಸಾಕು. ಶ್ರೀನಿಧಿಯ ಕೈಗೆ ಸಿಕ್ಕ 'ಖುಷಿ' ಮೊಬೈಲಿನ ಮೂಲಕ ನನ್ನ ಕೈಗೆ ವರ್ಗಾವಣೆಯಾಗಿತ್ತು!

ಆಗಸದ ಬಣ್ಣ ನಮ್ಮ ಮೂಡನ್ನು ಹೇಗೆ ನಿರ್ಧರಿಸುತ್ತದೋ ಊರಿನ ನೆನಪೂ ಹಾಗೇ. ಈ ಬೆಂಗಳೂರಿನಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಿಗೆ ವ್ಯತ್ಯಾಸವೇ ಇಲ್ಲ. ಯಾವಾಗ ಬೇಕೆಂದರೆ ಅವಾಗ ಮಳೆ ಬರುತ್ತದೆ. ಮಳೆಗಾಲದಲ್ಲೂ ಬಿಸಿಲಿರುತ್ತದೆ, ಎಲ್ಲೋ ಸಂಜೆ ಹೊತ್ತಿಗೆ ಒಂದು ಮಳೆ ಬಂದು ಹೋಗುತ್ತದೆ. ಆದರೆ ಊರಿನಲ್ಲಿ ಮಳೆಗಾಲ ಎಂದರೆ ಹೀಗಲ್ಲ. ಊರಿನಲ್ಲಿ ಮಳೆಗಾಲ ಎಂದರೆ... ಧೋ ಎಂದು ದಿನವಿಡೀ ಸುರಿಯುತ್ತಿರುತ್ತದೆ ಮಳೆ.. ಮಳೆ ನೀರು ಕುಡಿದು ಕುಡಿದು ಧರೆ ತಣಿಯುತ್ತದೆ... ಎಲ್ಲೆಂದರಲ್ಲಿ ಜಲ ಒಡೆದು, ಜವಳಾಗಿ, ಕೆರೆ ತುಂಬಿ, ಕೋಡಿ ಬಿದ್ದು, ವಟರುಗಪ್ಪೆ ಕೂಗಿ, ಕಂಬಳಿಕೊಪ್ಪೆ ಹಾಕಿಕೊಂಡ ರೈತರು ಉಗ್ಗ ಹಿಡಿದು ಗದ್ದೆಗಳಿಗೆ ತೆರಳಿ, ತೋಟದಲ್ಲಿ ಕಳೆ ಹುಟ್ಟಿ, ಹಿತ್ತಿಲಲ್ಲಿ ಹುಲ್ಲು ಚಿಗುರಿ, ಅಪ್ಪ ಹುಲ್ಲು ಕೊಯ್ದು ತಂದು ಹಾಕಿ, ಅಮ್ಮ ಸೌತೆ-ಚೀನಿ-ಕುಂಬಳ ಬೀಜಗಳನ್ನು ಅಲ್ಲಲ್ಲಿ ಹಾಕಿ... ಓಹೋಹೋ..! ಊರಿನಲ್ಲಿ ಮಳೆಗಾಲ ಎಂದರೆ ಏನೆಲ್ಲ... ಹೊರಗೆ ಜೋರು ಮಳೆಯಾಗುತ್ತಿದ್ದರೆ ಒಳಗೆ ಹಲಸಿನಕಾಯಿ ಹಪ್ಪಳವನ್ನು ಕರಿದುಕೊಂಡೋ, ಗೇರುಬೀಜ ಸುಟ್ಟುಕೊಂಡೋ ಬೆಚ್ಚಗೆ ತಿನ್ನುವುದರಲ್ಲಿರುವ ಸ್ವರ್ಗಸುಖ ಈ ಬೆಂಗಳೂರಿನ ಯಾವ ಡಿಸ್ಕೋಥೆಕ್ಕಿನಲ್ಲಿದೆ?

ಅಂಥಾ ಸುಂದರ 'ಕೈಬರಹ'ದಂತಹ ಊರನ್ನು ಬಿಟ್ಟುಬಂದು ಈ 'ಪ್ರಿಂಟೆಡ್'ನಂತಹ ಬೆಂಗಳೂರಿನಲ್ಲಿ ಬದುಕುತ್ತಿರುವ ನಮ್ಮದು ಇದೆಂತಹ ದುರಾದೃಷ್ಟ... ಊರು, I miss you.

Thursday, November 02, 2006

ಹೆಸರು ಬದಲಾವಣೆ ಮತ್ತು ರಾಜ್ಯೋತ್ಸವ ಶುಭಾಷಯ

ನನ್ನ ಬ್ಲಾಗಾಭಿಮಾನಿಗಳೇ,

ನನ್ನ ಬ್ಲಾಗಿನ ಹೆಸರನ್ನು ಬದಲಿಸಿದ್ದೇನೆ. 'ಬರೆಯುವುದೆಲ್ಲಾ ಕನ್ನಡದಲ್ಲಿ, ಟೈಟಲ್ ಮಾತ್ರ ಯಾಕೆ ಇಂಗ್ಲಿಷಿನಲ್ಲಿ?' ಅಂತ ಕೆಲವು ಗೆಳೆಯರು ಆಕ್ಷೇಪಿಸಿದ್ದರು. ನಾನೋ, ಈ ಬ್ಲಾಗ್ ಶುರುಮಾಡುವಾಗ ಅಷ್ಟೊಂದು ಯೋಚಿಸಿರಲಿಲ್ಲ. ಆದರೆ ಇವರೆಲ್ಲಾ ಹೇಳಿದ ಮೇಲೆ ನನಗೂ ಹೌದು ಅನ್ನಿಸಿತು. ಅಲ್ಲದೇ ಸುವರ್ಣ ಕರ್ನಾಟಕದ ಸಂಭ್ರಮ ಬೇರೆ. ಈ ಸುಸಂದರ್ಭದಲ್ಲಿ ನನ್ನ ಬ್ಲಾಗಿನ ಹೆಸರನ್ನು ಕನ್ನಡೀಕರಿಸಲು ತುಂಬಾ ಖುಷಿಯಾಗುತ್ತಿದೆ.

ಅಂದಹಾಗೆ, ಈ ಟೈಟಲ್ 'ಮೌನಗಾಳ' -ನಾನು ತುಂಬಾ ಇಷ್ಟ ಪಡುವ ಕವಯತ್ರಿ ಪ್ರತಿಭಾ ನಂದಕುಮಾರರ ಕವನವೊಂದರಿಂದ ಆಯ್ದುಕೊಂಡದ್ದು. 'ಕವಿ ಕಾಲಾತೀತದಲ್ಲಿ ಗಾಳ ಹಾಕಿ ಕೂತ ಬೆಸ್ತ' ಎನ್ನುತ್ತಾರೆ ಎ.ಕೆ. ರಾಮಾನುಜನ್. ಕವಿತೆಗಳ ವಿಷಯದಲ್ಲಂತೂ ಇದು ಅಕ್ಷರಶಃ ಸತ್ಯ. ಕರೆದಾಗ ಬಾರದೇ, ತಡಕಾಡಿದಾಗ ಎಡತಾಕದೇ ಚಡಪಡಿಸುವಂತೆ ಮಾಡುತ್ತದೆ ಕವಿತೆ. ಮೂಡಿಲ್ಲದಾಗ ಮೂಡುವುದೇ ಇಲ್ಲ ಕವಿತೆ. ಅದು ಮೂಡಣ ಮನೆಯ ಮುತ್ತಿನ ನೀರನ್ನು ಆಕಸ್ಮಿಕವಾಗಿ ನೋಡಿದಾಗ ತನ್ನಿಂದ ತಾನೇ ಹೊಮ್ಮಿಬರುತ್ತದೆಯೇ ಹೊರತು, ಕವಿತೆ ಬರೆಯಲೆಂದೇ ಮನೆಯ ಮಾಡನ್ನು ಏರಿ ಮೂಡುತ್ತಿರುವ ಸೂರ್ಯನನ್ನು ನಿರೀಕ್ಷಿಸುತ್ತಾ ಕುಳಿತರೆ ಹತ್ತಿರವೇ ಸುಳಿಯದು. ನದಿಯ ತೀರದಲ್ಲಿ, ನೀರಿನಲ್ಲಿ ಕಾಲಿಳಿಸಿ ಕುಳಿತಿರಲು, ಪಕ್ಕದಲ್ಲೊಂದು ಜೀವವಿರಲು, ಮೀನಾಗಿ ಬಂದು ಕಾಲ್ತೊಡಕಾಗುತ್ತದೆ ಕವಿತೆ. ಗದ್ಯದ ವಿಷಯದಲ್ಲೂ ಇದು ಸತ್ಯ.

ಇದೇ ಹೆಸರನ್ನು ಆಯಲು ಮತ್ತೊಂದು ಕಾರಣವಿದೆ. ನಾನೊಬ್ಬ ಮೌನಿ. ಮಾತು ತುಂಬಾ ಕಮ್ಮಿ. ಗುಂಪಿನಲ್ಲಂತೂ ಮಾತೇ ಆಡುವುದಿಲ್ಲ. ನನ್ನ ಗೆಳೆಯರ ಆಕ್ಷೇಪವೂ ಅದೇ: ನೀನು ಹೀಗೆ ಮಾತೇ ಆಡದಿದ್ರೆ ಹ್ಯಾಗೆ? ಆದರೆ ನನಗೆ ಮಾತಿಗಿಂತ ಮೌನ ಇಷ್ಟ. ಯಾವುದೋ ಒಂದು ನಿರ್ದಿಷ್ಟ ವಿಷಯ ಕೊಟ್ಟರೆ ಮಾತಾಡಿಯೇನು, ಅಥವಾ ನನ್ನ ಜೊತೆ ಯಾರಾದರೂ ಒಬ್ಬರೇ ಇದ್ದಾಗ ಅವರೊಂದಿಗೆ ತುಂಬಾ ಮಾತಾಡುತ್ತೇನೆ, ಆದರೆ ಗುಂಪಿನಲ್ಲಿ ಮಾತ್ರ ನಾನು ಮಾತಾಡಲೊಲ್ಲೆ. ಮಾತಾಡಲು ಬರುವುದಿಲ್ಲ ಅಂತಲ್ಲ, (ಸ್ಕೂಲು, ಕಾಲೇಜುಗಳಲ್ಲಿ ಆಶುಭಾಷಣ, ಚರ್ಚಾಸ್ಪರ್ಧೆಗಳಲ್ಲಿ ನನಗೇ ಬರುತ್ತಿದ್ದುದು ಫಸ್ಟ್ ಪ್ರೈಜ್ ಕಣ್ರಪಾ!), ಆದರೆ 'ಆಡಬಾರದು' ಅಂತ ತೀರ್ಮಾನಿಸಿರುವಾಗ ಹೇಗೆ ಆಡಲಿ?! 'ಹೀಗಿದ್ದರೆ ನೀನು ಉದ್ಧಾರವಾಗೊಲ್ಲ' ಎಂಬ ಎಚ್ಚರಿಕೆಯನ್ನು ಮನೆಮಂದಿಯಿಂದಲೂ, ಸ್ನೇಹಿತರಿಂದಲೂ ಪದೇಪದೇ ಕೇಳುತ್ತಾ ಬಂದಿದ್ದೇನೆ, ಆದರೂ ನಾನು ನನ್ನ ನಿರ್ಧಾರ ಬದಲಿಸಿಲ್ಲ ಮತ್ತು ಆ 'ಉದ್ಧಾರ'ದತ್ತ ದಿನೇದಿನೇ ದಾಪುಗಾಲಿಡುತ್ತಲೇ ಇದ್ದೇನೆ. ಮಾತು ಬೆಳ್ಳಿ, ಮೌನ ಬಂಗಾರ ಅಲ್ವಾ?

ನಿನ್ನೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಸಮಾರಂಭದಲ್ಲಿ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾನು ಇದ್ದೆ. ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮ ಎಂಬಂತೆ ತೋರಲೇ ಇಲ್ಲ. ಮೊದಲಿಗೆ ಹೆಲಿಕಾಪ್ಟರ್ ಎಲ್ಲರ ಮೇಲೂ ಗುಲಾಬಿಯ ಪುಷ್ಪವೃಷ್ಠಿಗೈದು ಹೋಯಿತು. ನಂತರ ಈ ಸಂಭ್ರಮಕ್ಕಾಗಿಯೇ ಎಂಬಂತೆ ಮೋಡಗಳು ಮಳೆ ಸುರಿಸಿದವು. ಬಿಸಿಲು-ಮಳೆ ಹೊಯ್ದಿದ್ದರಿಂದ ಆಗಸದಲ್ಲಿ ಕಾಮನಬಿಲ್ಲು ಮೂಡಿ ಸುವರ್ಣ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಕೃತಿಯೇ ಸಿಳ್ಳೆ ಗಿಟ್ಟಿಸಿತು. ನಂತರ ಯಕ್ಷಗಾನ, ಡೊಳ್ಳುಕುಣಿತ, ಕರಡಿ ಮಜಲು, ಕೋಲಾಟ, ಅದೆಷ್ಟೋ ಸಾವಿರ ಮಕ್ಕಳಿಂದ ನೃತ್ಯ, ವೃಂದಗಾನ..... ಓಹೋಹೋ! ಒಂದೇ ಎರಡೇ? ರಾಜ್ಯೋತ್ಸವ, ಏಕೀಕರಣ ಪ್ರಶಸ್ತಿಗಳ ಪ್ರಧಾನವಾಯಿತು. ಮುಖ್ಯಮಂತ್ರಿಗಳು ಅದ್ಭುತವಾದ ಭಾಷಣವೊಂದನ್ನು ಓದಿ ಹೇಳಿದರು. ಕೊನೆಗೆ ಲೇಸರ್ ಬೆಳಕಿನ ಹೊಯ್ದಾಟ, ಬಾಣ-ಬಿರುಸುಗಳ ಢಾಂಢೂಂ... "ಕನ್ನಡಕ್ಕೇ" "ಕರ್ನಾಟಕಕ್ಕೇ" "ಕನ್ನಡಾಂಬೆಗೇ" ಎಂದು ಕೂಗಿದಾಗ ನಮ್ಮ ಎದೆಯಾಳದಿಂದ ಹೊಮ್ಮಿಬರುತ್ತಿದ್ದ "ಜೈ"ಕಾರದಲ್ಲಿ ಅದೆಷ್ಟು ಸಂಭ್ರಮವಿತ್ತು! ಅದೆಷ್ಟು ಹೆಮ್ಮೆಯಿತ್ತು!

ಓ ಕನ್ನಡಮ್ಮ, ನಿನಗೆ ನಾನು ಚಿರಋಣಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಕನ್ನಡ ಬರುವವರೊಂದಿಗೆ ಕನ್ನಡದಲ್ಲೇ ಮಾತಾಡುವ ಪಣ ತೊಡೋಣ.

ಧನ್ಯವಾದಗಳು.

Wednesday, October 18, 2006

ದೀಪಾವಳಿಗೆ ಒಂದಷ್ಟು ಪ್ರಣತಿಗಳು

ಗೋಪೂಜೆ ಮಾಡಬೇಕಿದೆ..

ಇದು ಈ ವರ್ಷ ತಂದ ಹೊಸ ದನ..
ಕಳೆದ ವರ್ಷ ಇತ್ತಲ್ಲ, ಆ ದನ
ಕೆಚ್ಚಲುಬಾವು ಬಂದು ಮಧ್ಯದಲ್ಲೇ ಹಾಲು
ಕೊಡುವುದನ್ನು ನಿಲ್ಲಿಸಿಬಿಟ್ಟಿತು.
ನಮಗ್ಯಾಕಿದ್ದೀತು ರಗಳೆ ಎಂದು ಆಲೋಚಿಸಿ
ಒಳ್ಳೆಯ ರೇಟು ನೋಡಿ ಮಾರಿಬಿಟ್ಟೆವು.

ಈಗ ಆ ದನ ಎಲ್ಲಿದೆಯೋ ಗೊತ್ತಿಲ್ಲ
ಅದಕ್ಕೆ ಸರಿಯಾಗಿ ಅಕ್ಕಚ್ಚು, ಹಿಂಡಿ
ಕೊಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ
ಮೇಯಲು ಹೊರಗೆ ಬಿಡುತ್ತಾರೊ
ಅಥವಾ ಅವರೇ ಹುಲ್ಲು ಕೊಯ್ದು
ತಂದು ಹಾಕುತ್ತಾರೋ ಗೊತ್ತಿಲ್ಲ
ಅಪ್ಪನನ್ನು ಕೇಳಿದರೆ
'ಕೊಟ್ಟ ದನ ಕೊಟ್ಟಿಗೆಗೆ ಹೊರಗೆ,
ಸುಮ್ಮನಿರು' ಅನ್ನುತ್ತಾನೆ.

ಗೋಪೂಜೆ ಮಾಡಬೇಕಿದೆ..
ಕಳೆದ ವರ್ಷದ ದೀಪಾವಳಿಯಲ್ಲಿ
ಕೆಂಪು-ಹಸಿರು ಬಣ್ಣಗಳನ್ನು ಕೊಂಬು,
ಮೈಗೆಲ್ಲ ಸವರುವಾಗ ಆ ದನ
ಸ್ವಲ್ಪವೂ ತಿರುಗಾಡದೆ, ಹಾಯದೆ, ಒದೆಯದೆ
ನಿಂತಿರುತ್ತಿತ್ತು. ಅದರ ಕರು ಮಾತ್ರ ಚಿಗರೆಮರಿ.
ನನ್ನ ಹುಡುಗಿಗಿಂಥಾ ಜೋರು ಹಾರಾಟ-ಕುಣಿದಾಟ
-ಗುದ್ದುಮುರಿಯಾಟಗಳಲ್ಲಿ.

ಗೋಪೂಜೆ ಮಾಡಬೇಕಿದೆ..
ನನಗೋ ಹಳೆಯ ಗೋವಿನದೇ ನೆನಪು
ಈ ವರ್ಷ ಅದನ್ನು ಹಿಡಿದು ಕಟ್ಟಿ,
ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಬಣ್ಣ ಹಚ್ಚಿ,
ಹೊಸ ಕಣ್ಣಿ ಕಟ್ಟಿ, ಪೂಜೆ ಮಾಡಿ,
ಗೋಗ್ರಾಸ ಕೊಟ್ಟು, ಕೊನೆಗೆ ಮರುದಿನ
ದೃಷ್ಟಿ ತೆಗೆದು... ಅದನ್ನೆಲ್ಲಾ ಮಾಡುವವರು ಯಾರು?

ಗೋಪೂಜೆ ಮಾಡಬೇಕಿದೆ..
ಅಪ್ಪನ ಬಳಿ ಹೇಳುತ್ತೇನೆ:
'ಅಪ್ಪಾ, ನಂಗ್ಯಾಕೋ ಆಗುತ್ತಿಲ್ಲ,
ನೀನೇ ಮಾಡು..'

***
ನನಗೆ ಹಾಗೇ, ಒಂಥರಾ ತಿಕ್ಕಲು.
ದೀಪ ಹಚ್ಚುವಾಗ
ಹಣತೆ ಮಾಡಿದ ಕೈಗಳು
ಬತ್ತಿ ಹೊಸೆಯುವಾಗ
ಹತ್ತಿಯನ್ನು ಬೀಜದಿಂದ ಬಿಡಿಸಿದ ಕೈಗಳು
ಹಣತೆಗೆ ಎಣ್ಣೆ ಎರೆಯುವಾಗ
ಆ ಎಣ್ಣೆಯನ್ನು ತಯಾರಿಸಿದ ಕೈಗಳು
ಹೋಳಿಗೆಗೆ ಉಂಡೆ ಕಟ್ಟಿಕೊಡುವಾಗ
ಬೇಳೆ ಬೆಳೆದವನ ಕೈಗಳು
ಹೊಸ ಕಣ್ಣಿಯನ್ನು ಕಟ್ಟುವಾಗ
ಅದನ್ನು ಹೊಸೆದ ಕೈಗಳು
ಪಟಾಕಿ ಹಚ್ಚುವಾಗ
ಅದರೊಳಗೆ ಮದ್ದು ತುಂಬಿದ ಕೈಗಳು
.....ಬಿಡದೇ ಕಾಡುತ್ತವೆ.
ಮಂದಿಯ ಪ್ರಕಾರ ನಾನು
ನಾಟ್ ಪ್ರಾಕ್ಟಿಕಲ್ಲು.
ನನಗೆ ಹಾಗೇ, ಒಂಥರಾ ತಿಕ್ಕಲು!

***

ಆದರೆ ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ ನೋಡಿ
ಹಣತೆ ಎಲ್ಲಿದೆ ಹುಡುಕಬೇಕು
ಬೆಂಕಿಪೊಟ್ಟಣವಂತೂ ಇಟ್ಟಲ್ಲಿ ಇರುವುದಿಲ್ಲ
ಹಣತೆಯಲ್ಲಿ ನಿನ್ನೆ ಸುರಿದಿಟ್ಟಿದ್ದ ಎಣ್ಣೆ ಆರಿಹೋಗಿದೆ
ಬತ್ತಿ ಕಟ್ಟು ಎಲ್ಲಿದೆ...?
ಓಹ್! ದೇವರ ಗೂಡಿನ ಮೇಲಿದೆ
ಎಲ್ಲವನ್ನೂ ಹುಡುಕಿ ತಂದು,
ಹಣತೆಗೆ ಎಣ್ಣೆ ಸುರಿದು,
ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ,
ಕಡ್ಡಿ ಗೀರಿ "ಚೊರ್ರ್"... ಬೆಳಕು.
ಹಾಗೆಲ್ಲಾ ಒಂದೇ ಕಡ್ಡಿಯಲ್ಲಿ ಹಚ್ಚಲಾಗುವುದಿಲ್ಲ
(ಇದೇನು ಸಿಗರೇಟಾ?)
ಮತ್ತೊಂದು ಕಡ್ಡಿ ಗೀರಬೇಕು.

ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ.
ಗಾಳಿಯಿದ್ದರಂತೂ ಮತ್ತೂ ಕಷ್ಟ.

***

ನಾನು ಚಿಕ್ಕವನಿದ್ದಾಗ
ಪಟಾಕಿ ಹಚ್ಚುವುದಕ್ಕೆ ಹೆದರುತ್ತಿದ್ದೆ.
ಈಗ ಏನಕ್ಕೂ ಹೆದರುವುದಿಲ್ಲ.

***

ದೀಪಾವಳಿಯೆಂದರೆ ದೀಪಗಳ ಹಬ್ಬ
ಅನ್ನುತ್ತಾರೆ.

ನಾನೀಗ ಕಷ್ಟ ಪಟ್ಟು
ಎರಡು ದೀಪಗಳನ್ನು ಹಚ್ಚಿಟ್ಟಿದ್ದೇನೆ.
ಅವು ಪರಸ್ಪರ ಮಾತಾಡಿಕೊಳ್ಳುತ್ತಿವೆ:
"ಹೇ, ನೀನು ಈಗ ಕಾಣಿಸುತ್ತಿದ್ದೀಯ"
"ಹೇ, ನೀನಿವತ್ತು ಚಂದ ಕಾಣಿಸುತ್ತಿದ್ದೀಯ".
"ಹೂಂ, ಇವತ್ತು ಹಬ್ಬ ಅಲ್ವಾ?"
"ಏನ್ ಹಬ್ಬ?"
"ದೀಪಾವಳಿ, ನಮ್ಮ ಹಬ್ಬ"

ಹಣತೆ ಹಣತೆಯನ್ನು ನೋಡುವುದಕ್ಕೂ
ಬೆಳಕು ಬೇಕು ನೋಡಿ.

***

ದೀಪದ ಬೆಳಕಿನಲ್ಲಿ ಕಂಡಷ್ಟು ಚಂದ
ಬೆಂಕಿಯ ಬೆಳಕಿನಲ್ಲಿ ಕಾಣುವುದಿಲ್ಲ
ನಲ್ಲೆಯ ಮುಖಾರವಿಂದ.

*** *** *** ***

ಎಲ್ಲೋ ಇರುವ ಆ ದನಕ್ಕೆ ಈ ವರ್ಷವೂ ಗೋಗ್ರಾಸ ಸಿಗಲಿ. ಎಲ್ಲೋ ಇದ್ದೂ ಇಲ್ಲಿ ನೆನಪಾಗುವ ಎಲ್ಲಾ ಕಷ್ಟಜೀವಿಗಳ ಅಗೋಚರ ಕೈಗಳು ಬೆಚ್ಚಗಿರಲಿ. ಕತ್ತಲೆಯಲ್ಲಿರುವವರಿಗೆ ದೀಪ ಬೇಗ ಸಿಗಲಿ. ಒಂದೇ ಬೆಂಕಿಕಡ್ಡಿಯಿಂದ ದೀಪ ಹತ್ತಿಕೊಳ್ಳಲಿ. ಪಟಾಕಿಯ ಸದ್ದಿಗೆ ಮಲಗಿದ ಮಗು ಎಚ್ಚರಗೊಳ್ಳದಿರಲಿ. ಹಣತೆಗಳು ಸದಾ ಮಾತಾಡಿಕೊಳ್ಳುತ್ತಿರಲಿ. ನಲ್ಲೆಯ ಮುಖದಲ್ಲಿ ದೀಪದ ಬೆಳಕು ಸದಾ ಲಾಸ್ಯವಾಡುತ್ತಿರಲಿ. ಮತ್ತು ದೀಪ ಎಂದೂ ಬೆಂಕಿಯಾಗದಿರಲಿ.

ಎಲ್ಲರಿಗೂ ದೀಪಾವಳಿಯ ಶುಭಾಷಯಗಳು.

Monday, October 09, 2006

ಪ್ರವಾಸ ಕಥನ: ಚುಕ್ಕಿಗಳ ಊರು ಶಿವನಸಮುದ್ರ

ಅಕ್ಟೋಬರ್ ಎರಡು, ಎರಡ್ಸಾವ್ರದ ಆರರ ಶುಭ್ರ ಮುಂಜಾನೆ ಬೆಂಗಳೂರಿನ ಯಾವ್ಯಾವುದೋ ಬಡಾವಣೆಗಳ ಯಾವ್ಯಾವುದೋ ಬೀದಿಗಳಲ್ಲಿನ ಮನೆಗಳಲ್ಲಿ ಕನಸುಗಳೊಂದಿಗೆ ನಿದ್ರಾಲೋಕದಲ್ಲಿ ಮುಳುಗಿಹೋಗಿದ್ದ ಎಂಟು ಜನ ಗೆಳೆಯರು ಅಲಾರಾಂ ಸದ್ದಿಗೆ ಎಚ್ಚೆತ್ತಾಗ ಆಕಾಶದಲ್ಲಿನ್ನೂ ಚುಕ್ಕಿಗಳ ಸರಭರ ಮುಗಿದಿರಲಿಲ್ಲ. ಆದರೆ ಆಗಲೇ ಚುಕ್ಕಿಗಳ ಊರು ಶಿವನಸಮುದ್ರ ಕರೆಯುತ್ತಿತ್ತು. ಇನ್ನೂ ಹುಟ್ಟಿರದ ಸೂರ್ಯ ದೊಡ್ಡ ಟೆರೇಸು ಮನೆಗಳ ಹಿಂಬದಿಯಿಂದ ಎದ್ದು ಬರಲು ಹೊಂಚು ಹಾಕಿ ಕುಳಿತಿದ್ದ. ಹಕ್ಕಿಗಳೆಲ್ಲಾ 'ತಮಗೆ ಇವತ್ತೂ ಆಫೀಸಿದೆ' ಎಂಬಂತೆ ಆಗಲೇ ಚಿಲಿಪಿಲಿಗುಡುತ್ತಾ ತಮ್ಮ ಗೂಡು ಬಿಟ್ಟು ಸ್ನೇಹಿತರೊಡಗೂಡಿ ಹಾರಟ ಹೊರಟಿದ್ದವು. ನೈಟ್‍ಶಿಫ್ಟ್ ಮುಗಿಸಿದ ನೌಕರರು ನಿದ್ದೆಗಣ್ಣಿನಲ್ಲಿ ಕ್ಯಾಬಿನಿಂದ ಇಳಿಯುತ್ತಿದ್ದರು. ಪೇಪರ್ ಹುಡುಗರು ಆಯುಧಪೂಜೆಯ ಮರುದಿನವಾದ್ದರಿಂದ ಯಾವ ಪೇಪರೂ ಹಂಚುವುದಿರಲಿಲ್ಲವಾದರೂ ಬೆಳಗ್ಗೆ ಮುಂಚೆಯೇ ಎಚ್ಚರಾಗಿ, 'ಥೋ, ಇವತ್ತು ರಜ!' ಅಂತ ಗೊಣಗಿಕೊಂಡು, ಮತ್ತೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದರು.

ಸ್ನಾನ ಗೀನ ಮಾಡಿ ರೆಡಿಯಾಗಿ, ಬಟ್ಟೆ ಗಿಟ್ಟೆ ತೊಟ್ಟು ತಲೆ ಬಾಚಿ, ನಿನ್ನೆ ತೊಳೆದಿದ್ದ ಬೈಕೆಳೆದುಕೊಂಡು, ತಮ್ಮ ಗೆಳೆಯನೊಬ್ಬನನ್ನು ಕೂರಿಸಿಕೊಂಡು, 'ಜೈ ಭಜಿರಂಗಬಲಿ!' ಅಂತ ಕಿಕ್ ಹೊಡೆದು ಸ್ಟಾರ್ಟ್ ಮಾಡಿ ಹೊರಟು, ನಾವು ಎಂಟು ಹುಡುಗರು ಬಿಎಚ್‍ಇಎಲ್ ಗೇಟ್ ಬಳಿ ಸೇರಿದಾಗ ಏಳು ಗಂಟೆ ಹತ್ತು ನಿಮಿಷ. ಅಲ್ಲೇ ಬದಿಯ ಚಾ-ದುಖಾನ್‍ನಲ್ಲಿ ಕಟಿಂಗ್ ಚಾಯ್ ಕುಡಿದು, ಬೈಕಿಗೆ ಪೆಟ್ರೋಲು ಕುಡಿಸಿ, ಮೈಸೂರು ರಸ್ತೆಯಲ್ಲಿ ಬೈಕು ಚಲಿಸತೊಡಗಿದರೆ, ಉಲ್ಲಾಸ-ಉತ್ಸಾಹ-ಉನ್ಮಾದಗಳು ಚಕ್ರದ ಪ್ರತಿ ಉರುಳುವಿಕೆಯಲ್ಲೂ ಇಮ್ಮಡಿಯಾಗಿದ್ದವು.


ಇಂಟರ್‍ನೆಟ್ಟಿನಲ್ಲಿ Orkut ಅಂತ ಒಂದು friendship building network. ಅದರಲ್ಲಿ 'ಹವ್ಯಕ' ಅಂತ ಒಂದು community. ಆ community ಯಿಂದ ಒಂದುಗೂಡಿದ, ಹತ್ತಿರಾದ ನಾವು ಎಂಟು ಜನ ಹುಡುಗರೇ ಈ ಟೂರಿಗೆ ಹೊರಟಿದ್ದ ಟ್ರೂಪು. ಮೊದಲೇ ಮಾತಾಡಿಕೊಂಡಿದ್ದಂತೆ ಕಾಮತ್ ರೆಸ್ಟುರಾದಲ್ಲಿ ಬೆಳಗಿನ ತಿಂಡಿಗೆ ನಿಲ್ಲಿಸಿದೆವು. ವಡೆ, ಮಸಾಲೆ ದೋಸೆ ಮತ್ತು ಕಾಫಿಯ ಜೊತೆಗೆ ಒಂದೊಂದು ಕೊಟ್ಟೆ ಇಡ್ಲಿಯೂ ಬಿದ್ದಾಗ ಹೊಟ್ಟೆ ಫುಲ್ಲಾಗಿತ್ತು. ತಿಂಡಿಗಿಂತಾ ಚೆನ್ನಾಗಿದ್ದದ್ದು ಕಾಮತ್ ರೆಸ್ಟುರಾ ಮತ್ತು ಅದಕ್ಕಿಂತಾ ಚೆನ್ನಾಗಿದ್ದದ್ದು ಪಕ್ಕದ ಕೊಳದಲ್ಲಿ ಈಜಾಡುತ್ತಿದ್ದ ಹಂಸಪಕ್ಷಿ.

ಅಲ್ಲಲ್ಲಿ ನಿಲ್ಲಿಸುತ್ತಾ, ಡ್ರೈವರ್ ಬದಲಿಸುತ್ತಾ, ದಾರಿ ವಿಚಾರಿಸುತ್ತಾ, ಕೆಟ್ಟ ರಸ್ತೆಯನ್ನು ಬೈದುಕೊಳ್ಳುತ್ತಾ ನಾವು ಶಿವನ ಸಮುದ್ರ ಮುಟ್ಟುವಷ್ಟರಲ್ಲಿ ಹನ್ನೊಂದೂ ಕಾಲು. ಕಾವೇರಿ ನದಿ ಇಲ್ಲಿ ಕವಲಾಗಿ ಒಡೆದು, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳನ್ನು ಉಂಟುಮಾಡಿದೆ. ಎರಡೂ ಜಲಪಾತಗಳೂ ಒಂದಕ್ಕೊಂದು ಎದುರು-ಬದುರು ಇವೆ. ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿ, ಮದ್ದೂರಿನಿಂದ ಎಡಕ್ಕೆ ಕೊಳ್ಳೇಗಾಲ ರಸ್ತೆಯಲ್ಲಿ ಸುಮಾರು ಎಪ್ಪತ್ತು ಕಿ.ಮೀ. ಚಲಿಸಿದರೆ, ನಿಮಗೆ ಮೊದಲು ಸಿಗುವುದು ಭರಚುಕ್ಕಿ ಜಲಪಾತ. ಅಲ್ಲಿಂದ ಐದು ಕಿ.ಮೀ. ಸುತ್ತುವರಿದುಕೊಂಡು ಬಂದರೆ ಗಗನಚುಕ್ಕಿ ಕಾಣುತ್ತದೆ. ಭರಚುಕ್ಕಿಯನ್ನು ನೋಡುವಾಗ ಗಗನಚುಕ್ಕಿ ನಿಮ್ಮ ಕಾಲಡಿಗೇ ಇರುತ್ತದೆ; ಆದರೆ ನೋಡಲಾಗುವುದಿಲ್ಲ. ಹಾಗೆಯೇ ಇಲ್ಲಿಂದ ಭರಚುಕ್ಕಿಯನ್ನು ನೋಡುವಾಗ ಅದರ ಭಾರೀ ಪ್ರಮಾಣದ ಅರಿವು ಆಗುವುದೇ ಇಲ್ಲ. ಇಲ್ಲಿದ್ದಾಗ ಗಮನ ಸೆಳೆಯುವುದು ದೂರದಲ್ಲಿನ ಮುದಿ ಒಂಟಿ ಮರ. ಈ ಮರ ಅದೆಷ್ಟೋ ವರ್ಷಗಳಿಂದ ಜಲಪಾತದ ಭೋರ್ಗರೆತವನ್ನು ಕೇಳುತ್ತಾ ಕೇಳುತ್ತಾ ಸರ್ವಸಂಗಪರಿತ್ಯಾಗಿಯಾದಂತೆ ತನ್ನ ಎಲೆಗಳನ್ನೆಲ್ಲಾ ಉದುರಿಸಿ ಬೋಳಾಗಿ ನಿಂತಿದೆ. ಪಕ್ಕದಲ್ಲಿನ ಚಿಕ್ಕಪುಟ್ಟ ಗಿಡ-ಮರಗಳ್ಯಾವೂ ಇದರ ಕಷ್ಟ ವಿಚಾರಿಸುವುದಿಲ್ಲ. ಅದು ಪ್ರವಾಸಿಗರಿಗೆಲ್ಲಾ ತನ್ನ ಕತೆಯನ್ನು ಹೇಳುತ್ತದೆ. ಈ ಮರ ಕಾವೇರಿ ವಿವಾದವಾದಾಗ ಸಹ ಇಲ್ಲೇ ಇತ್ತು. ಆಗ ಕಾವೇರಿ ಬೇಸರದಿಂದ ಇಲ್ಲಿ ಧುಮ್ಮಿಕ್ಕುವುದನ್ನು ಕಣ್ಣಾರೆ ಕಂಡನಂತರ, ಅದಕ್ಕೆ ಈ ಇಹಲೋಕದ ಬಗ್ಗೆ ಬೇಸರ ಮೂಡಿ, ಪ್ರತಿಭಟನೆ ವ್ಯಕ್ತಪಡಿಸಲೆಂದು ತನ್ನೆಲ್ಲಾ ಎಲೆಗಳನ್ನು ಉದುರಿಸಿದ್ದಂತೆ. ಆದರೆ ಮತ್ತೆ ಎಲೆಗಳು ಚಿಗುರಲೇ ಇಲ್ಲ.ಭರಚುಕ್ಕಿಯನ್ನು ನೋಡಿ, ಮನಸಾರೆ ದಣಿದು, ಪೆಪ್ಸಿ ಕುಡಿದು, ಫೋಟೋ ಕ್ಲಿಕ್ಕಿಸಿಕೊಂಡು ನಾವು ಮತ್ತೆ ಬೈಕು ಹತ್ತಿ ಗಗನಚುಕ್ಕಿಯತ್ತ ಹೊರಟೆವು. ದಾರಿ ಮಧ್ಯೆ ಒಂದು ಕಡೆ ನಿಲ್ಲಿಸಿದೆವು. ಅಲ್ಲಿ ಕಾವೇರಿಯ ನೀರು backwaterನಂತೆ ನಿಂತಿದೆ. ಇಲ್ಲ, ನಿಂತಿಲ್ಲ, (ನದಿ ನಿಲ್ಲುವುದುಂಟೆ?), ಹರಿಯುತ್ತಿದೆ, ನಿಧಾನವಾಗಿ ಹರಿಯುತ್ತಿದೆ. ನಿಂತಲ್ಲೇ ಹರಿಯುತ್ತಿದೆ. ಅದರಲ್ಲೊಂದು ಬಕಪಕ್ಷಿ. ಕತ್ತನ್ನಷ್ಟೇ ಎತ್ತಿ ಸುತ್ತ ನೋಡಿ ಮತ್ತೆ ಮುಳುಗಿಬಿಡುತ್ತೆ ಗತ್ತಿನಲ್ಲಿ. ಇಲ್ಲಿ ಮುಳುಗಿ ಎಲ್ಲೋ ಏಳುತ್ತದೆ. ಅದರ ಫೋಟೊ ತೆಗೆಯುವಷ್ಟರಲ್ಲಿ ಸಾಕುಬೇಕಾಗಿತ್ತು ನಮಗೆ!

ಗಗನಚುಕ್ಕಿಯ ವೀಕ್ಷಣಾಸ್ಥಳವನ್ನು ನಾವು ಮುಟ್ಟಿದಾಗ ಮಧ್ಯಾಹ್ನದ ಒಂದೂ ವರೆ. ಹೋದಮೇಲೇ ಗೊತ್ತಾದದ್ದು: ನಾವು ಭರಚುಕ್ಕಿಯನ್ನು ನೋಡಲು ನಿಂತ ಜಾಗದ ಕೆಳಗೇ ಗಗನಚುಕ್ಕಿ ಇತ್ತು ಎಂಬುದು! ಭರಚುಕ್ಕಿಯ ಎದುರುಮನೆಯಲ್ಲೇ ಗಗನಚುಕ್ಕಿಯ ಭೋರ್ಗರೆತ. ಗಗನಚುಕ್ಕಿ ಸ್ಲಿಮ್ಮಾಗಿ ಆದರೆ ಬಲು ಎತ್ತರದಿಂದ ಧುಮುಕುತ್ತಾಳಾದರೆ, ಭರಚುಕ್ಕಿ ಅಗಾಧ ಪ್ರಮಾಣದ ನೀರಿನೊಂದಿಗೆ ಕಂದಕಕ್ಕಿಳಿಯುತ್ತಾಳೆ. ಕೆಳಗಿಳಿದ ಮೇಲೆ ಇಬ್ಬರೂ ಮತ್ತೆ ಒಂದಾಗಿ ಮುಂದೆ ಸಾಗುತ್ತಾರೆ. ಮುಸ್ಲಿಮರ ದರ್ಗಾ ಇರುವ ಪ್ರದೇಶವಾದ್ದರಿಂದಲೋ ಏನೋ, ಇಲ್ಲಿ ಸ್ವಲ್ಪವೂ cleanness ಇಲ್ಲ. ಕಾಲಿಡುವಾಗ ನೋಡಿಕೊಂಡು ಇಡಬೇಕು. ಅಲ್ಲೇ ದರ್ಗಾದ ಪಕ್ಕದಲ್ಲಿ ಹಾದುಹೋದರೆ, ಕೆಳಗಿಳಿಯಲಿಕ್ಕೆ ಒಂದು ಕಾಲ್ದಾರಿ ಇದೆ. ನಾವು ಅಲ್ಲೇ ನಿಂತು ಸ್ವಲ್ಪ ಹೊತ್ತು ವೀಕ್ಷಿಸಿ, ಕೆಳಗಿಳಿದು ಹೋದೆವು. ಮೊದಲು ಸ್ನಾನ ಮಾಡಬೇಕು ಎಂದಾಯಿತು. ಎಲ್ಲಿ ಸ್ನಾನ ಮಾಡುವುದು ಅಂತ ಹುಡುಕಿ ಹುಡುಕಿ, ಕೊನೆಗೆ ಸರ್ವಾನುಮತದಿಂದ ಒಂದು ಜಾಗಕ್ಕೆ ಹೋಗಿ, ಬಟ್ಟೆ ಬಿಚ್ಚಿ, ಬರ್ಮುಡಾ ತೊಟ್ಟು, ನೀರಿಗಿಳಿದರೆ.... ನೀರಿನ ತಂಪಿಗೆ ಆಹಾ! ಸ್ವರ್ಗಸುಖ! ನಾವು ನೀರಿನಲ್ಲೇ ಸುಮಾರು ಮೂರು ತಾಸು ಇದ್ದೆವು. ಮಧ್ಯೆ ಒಮ್ಮೆ ಹೊರಬಂದು ಚಕ್ಲಿ ಕಂಬಳದಲ್ಲಿ ಉಳಿದಿದ್ದ ಚಕ್ಲಿಯನ್ನೆಲ್ಲಾ ತಿಂದೆವು. ಪೆಪ್ಸಿ ಕುಡಿದೆವು. ಕತೆ ಹೊಡೆದೆವು. ಮತ್ತೆ ನೀರಿಗಿಳಿದೆವು. ಫೋಟೋ ತೆಗೆಸಿಕೊಂಡೆವು. ಒಬ್ಬರು ಮತ್ತೊಬ್ಬರಿಗೆ ನೀರು ಸೋಕಿಕೊಂಡೆವು. ಜೋಕು ಮಾಡಿಕೊಂಡೆವು.... ಹಾಗೆಯೇ ಸಮಯ ಕಳೆಯಿತು.ವಾಪಸು ಹೊರಟೆವು. ಬಟ್ಟೆ ಧರಿಸಿ ಮೇಲೆ ಹತ್ತಿ ಬಂದೆವು. ಬಂದಮೇಲೆ ಕೆಳಗೆ ನೋಡಿದರೆ, ಬಹಳಷ್ಟು ಜನ ಭರಚುಕ್ಕಿ ಜಲಪಾತದ ಸಮೀಪದಲ್ಲೇ ನಿಂತು ವೀಕ್ಷಿಸುತ್ತಿರುವುದು ಕಂಡುಬಂತು. ನಾವೂ ಅಲ್ಲಿಗೆ ಹೋಗಬೇಕು ಅನ್ನಿಸಿತು. ತುಂಬಾ ಸುಸ್ತಾಗಿತ್ತಾದರೂ ಮತ್ತೆ ಕೆಳಗಿಳಿದೆವು. ಸಾಹಸ ಮಾಡಿ, 'ಜಂಪ್' ಮಾಡಿ, ಧೈರ್ಯವಿಲ್ಲದವರಿಗೂ ಧೈರ್ಯ ತುಂಬಿ, ಭರಚುಕ್ಕಿಯ ಸಮೀಪ ಹೋಗಿ ನಿಂತು ನೋಡುತ್ತೇವೆ: ಏನದು ಜಲರಾಶಿ.. ಅಲ್ಲಿ ನೀರಲ್ಲ, ಸಮುದ್ರವೇ ಧುಮ್ಮಿಕ್ಕುತ್ತಿತ್ತು. ನಾನಂತೂ ಒಂದು ಕ್ಷಣ ಮೂಕವಿಸ್ಮಿತನಾಗಿ ನಿಂತುಬಿಟ್ಟೆ. ಕಾವೇರಿ ಉನ್ಮತ್ತಳಂತೆ ಭರದಿಂದ ಎದುರಿಗಿನ ಗಗನಚುಕ್ಕಿ ನಾಚುವಂತೆ ರುದ್ರಾವತಾರ ತಾಳಿ ಧುಮುಕುತ್ತಿದ್ದಳು. ಕಿವಿಗಡಚಿಕ್ಕುವಂತಹ ಭೋರ್ಗರೆತ. ನೀರು ಕೆಳಗೆ ಬಿದ್ದು ಸಿಡಿದ ಹನಿಗಳು ಮೋಡದಂತೆ ಗಗನವನ್ನೇ ಮುಟ್ಟಿದ್ದವು.


ನಾನು ಯೋಚಿಸುತ್ತಿದ್ದೆ: ಅದೆಲ್ಲೋ ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಹರಿಯುತ್ತಾ ಹರಿಯುತ್ತ ಇಲ್ಲಿಗೆ ಬಂದು ಹೀಗೆ ಧುಮ್ಮಿಕ್ಕುವ ಪರಿ... ಇದ್ಯಾವ ಸಂಕಲ್ಪ? ಅಷ್ಟು ದೂರದಿಂದ ಜೊತೆಯಾಗಿ, ಒಂದಾಗಿ (ಒಂದೇ ಆಗಿ) ಬಂದು ಇಲ್ಲಿ ಸ್ವಲ್ಪ ದೂರ ಬೇರ್ಪಟ್ಟು, ಬೇರ್ಪಟ್ಟಿದ್ದಕ್ಕೇ ಬೇಸರಗೊಂಡು, ಇಷ್ಟೆತ್ತರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು, ಆದರೂ ಸಾಯದೆ, ಮತ್ತೆ ಒಂದಾಗಿ ಮುಂದೆ ಸಾಗುವ ವಿಸ್ಮಯ... ಇದ್ಯಾವ ಮಾಯೆ? ಏನು ಮರ್ಮ? ಪ್ರಕೃತಿಯ ಈ ರಮಣೀಯ ಸೌಂದರ್ಯಕ್ಕೆ ಎಣೆ ಎಲ್ಲಿದೆ? ಇದರ ಮುಂದೆ ನಾವೆಲ್ಲಾ ಚುಕ್ಕಿಗಳೇ ಅಲ್ಲವೆ?


ತುಂಬಾ ಹೊತ್ತು ಅಲ್ಲೇ ಇದ್ದು ನಾವು ಹೊರಟೆವು. ಅಷ್ಟು ಹೊತ್ತೂ ಇರದಿದ್ದ ಹಸಿವು ಆಗ ಕಾಣಿಸಿಕೊಂಡಿತ್ತು. ಏನನ್ನಾದರೂ ತಿನ್ನಬೇಕಿತ್ತು. ಮದ್ದೂರಿನವರೆಗೂ ಯಾವುದೇ ಒಳ್ಳೆಯ ಹೋಟಿಲಿರಲಿಲ್ಲವಾದ್ದರಿಂದ, ಮದ್ದೂರ್ ಟಿಫಾನೀಸ್‍ಗಾಗಿಯೇ ಕಾಯಬೇಕಾಯಿತು. ಜನಪ್ರಿಯ ಮದ್ದೂರು ವಡೆ ತಿಂದು, ಈರುಳ್ಳಿ ದೋಸೆ ತಿಂದು, ಕಾಫಿ ಕುಡಿದು, ಸಂಜೆ ಐದೂವರೆಗೆ 'ಮಧ್ಯಾಹ್ನದ ಊಟ' ಮುಗಿಸಿದೆವು. ಮತ್ತೆ ಬೈಕು ಹತ್ತುವಷ್ಟರಲ್ಲಿ ಕತ್ತಲಾವರಿಸುತ್ತಿತ್ತು.

ಹೆಡ್‍ಲೈಟ್ ಆನ್ ಮಾಡಿ ಹೊರಟರೆ ರಸ್ತೆಯ ತುಂಬಾ ಚುಕ್ಕಿಗಳೋ ಚುಕ್ಕಿಗಳು. ದೂರದ ರಸ್ತೆ ದೀಪಗಳೂ ಚುಕ್ಕಿಗಳು. ಕತ್ತೆತ್ತಿ ಮೇಲೆ ನೋಡಿದರೆ ಆಗಸದಲ್ಲೂ ಚುಕ್ಕಿಗಳು. ಮಧ್ಯೆ ಮಧ್ಯೆ ನಿಲ್ಲಿಸುತ್ತಾ, ಹಿಂದಿದ್ದವರು ಬರುವತನಕ ಕಾಯುತ್ತಾ, ಶರವೇಗದಲ್ಲಿ ಸಾಗುತ್ತಿದ್ದರೆ, ಮಧ್ಯೆ ಬಂದ ಸಣ್ಣ ಮಳೆ ಯಾವ ಲೆಕ್ಕ? ಬೆಂಗಳೂರಿನ ದೀಪಗಳು ಚುಕ್ಕಿಗಳಾಗಿ ಕಾಣುತ್ತಿತ್ತು. ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆಯೇ, ರಸ್ತೆಬದಿಯ ಟೀ ಅಂಗಡಿಯೊಂದರಲ್ಲಿ ಎಲ್ಲರೂ ಟೀ ಕುಡಿದು, ಅಲ್ಲೇ ಎಲ್ಲರಿಗೂ ಬೈಬೈ ಹೇಳಿ ಹೊರಟೆವು. ಮತ್ತು ಸಿಗ್ನಲ್ಲುಗಳ ಊರಿನ ಟ್ರಾಫಿಕ್ಕಿನಲ್ಲಿ ಕಳೆದುಹೋದೆವು.

Tuesday, September 26, 2006

'ಸರ್ವಸ್ವ'ದ ಬಗ್ಗೆ ಸರ್ವೇಸಾಮಾನ್ಯನ ಒಂದು ಸರ್ವೆ!

ಇಷ್ಟೊತ್ತಿನ ತನಕ ಗೆಳೆಯ ಸಂತೋಷನೊಂದಿಗೆ ಮಾತನಾಡುತ್ತಿದ್ದೆ. ಸಂತೋಷ ಮತ್ತು ನಾನು ಆಗೀಗೊಮ್ಮೆ ಫೋನ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುವ ಸ್ನೇಹಿತರು. ನಮ್ಮ ಮಾತು ತೀರಾ ಭಾವನಾತ್ಮಕವಾಗಿರೊತ್ತೆ. ಸಾಮಾನ್ಯವಾಗಿ ಅದೊಂದು ಚರ್ಚೆಯೇ ಆಗಿರೊತ್ತೆ. ಯಾವುದೋ ಒಂದು topic ಅವನನ್ನು ಕಾಡಲಾರಂಭಿಸಿದಾಗ ಅವನು ನನಗೆ call ಮಾಡುತ್ತಾನೆ. ಆಮೇಲೆ ನಾವಿಬ್ಬರೂ ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಬಹಳಷ್ಟು ಚರ್ಚೆಗಳು ಎಲ್ಲೋ ಶುರುವಾಗಿ ಎಲ್ಲೋ ಹೋಗಿ ಮುಗಿಯುತ್ತವೆ. ಕೆಲವೊಮ್ಮೆ ಅವು right way ನಲ್ಲೇ ಸಾಗುತ್ತವೆ. ಅನೇಕ ಸಲ ಚರ್ಚೆ ದಾರಿ ತಪ್ಪುತ್ತದೆ. ನನ್ನ ಕೆಲ concept ಗಳನ್ನು ಆತ ಒಪ್ಪುವುದಿಲ್ಲ; ಹಾಗೆಯೇ ಅವನ ಕೆಲ ವಾದಗಳನ್ನು ನಾನು ಅಲ್ಲಗಳೆಯುತ್ತೇನೆ. ಒಟ್ಟಿನಲ್ಲಿ ಕೊನೆಯಲ್ಲಿ ಇಬ್ಬರೂ satisfy ಆಗದೇ ಮಾತು ಮುಗಿಸುತ್ತೇವೆ.

ಇವತ್ತು ನಾವು ಮಾತಾಡಿದ್ದು 'ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲನೇ?' ಎಂಬ ವಿಷಯದ ಮೇಲೆ. 'ಹಾಯ್' ನ ಬಾಟಮ್ ಐಟಮ್ ನಲ್ಲಿ ರವಿ ಬೆಳಗೆರೆ ಬರೆದ ಲೇಖನವೊಂದರ ತಳಹದಿಯ ಮೇಲೆ ನಮ್ಮ ವಾದ ಸಾಗಿತ್ತು. ನಾನೆಂದೆ, 'ಹೌದು, ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲ' ಅಂತ. ಆತ ಅದನ್ನು ಒಪ್ಪಲಿಲ್ಲ. ನನ್ನ ವಾದ- ನಾವು ಪ್ರೀತಿಸಿದ ವ್ಯಕ್ತಿ ನಮಗೆ ಸರ್ವಸ್ವವೇ ಅಲ್ಲವೇ? ನೀನೇ ನನ್ನ ಸರ್ವಸ್ವ ಅಂತ ಒಪ್ಪಿಕೊಂಡಿರುತ್ತೇವಲ್ಲವೇ ಅವಳ ಬಳಿ? ಆಕೆಗೆ ನಾನು ಸರ್ವಸ್ವ ಎಂದಾದಾಗ ನಾನು ಆಕೆಯನ್ನು ಸರ್ವಸ್ವ ಅಂದುಕೊಳ್ಳುವುದರಲ್ಲಿ ಯಾವ ತಪ್ಪಿದೆ? ಆಕೆಗೆ ನಾನು ಸರ್ವಸ್ವ ಅಲ್ಲ ಅಂತಾದರೆ, of course, ನನಗೆ ಆಕೆ ಸರ್ವಸ್ವಳಾಗಲಿಕ್ಕೂ ಅರ್ಹಳಲ್ಲ.

ಇಷ್ಟಕ್ಕೂ ಒಬ್ಬ ವ್ಯಕ್ತಿ ನನಗೆ ಸರ್ವಸ್ವ ಯಾವಾಗ ಆಗುತ್ತಾನೆ? ಆತ ನನ್ನೆಲ್ಲಾ need ಗಳನ್ನೂ fulfill ಮಾಡುವವನಾಗಿದ್ದಾಗ. ಬೆಳಗೆರೆಯ ಉದಾಹರಣೆಯನ್ನೇ ಇಲ್ಲಿ ಬಳಸುವುದಾದರೆ, ನಮ್ಮ ಮಗುವಿನ ಮೂಗಿನಲ್ಲಿ ಬಳಪ ಸಿಕ್ಕಿಕೊಂಡಿರುತ್ತದೆ. ನಾವು ಡಾಕ್ಟರ್ ಬಳಿಗೊಯ್ಯುತ್ತೇವೆ. ಆಗಿನ ಆ ಕ್ಷಣದಲ್ಲಿ ಆ ಡಾಕ್ಟರೇ ನಮ್ಮ ಸರ್ವಸ್ವ. ಹೀಗೆ, ನಮ್ಮನ್ನು ಕಷ್ಟದಿಂದ ಪಾರು ಮಾಡುವವರು, ನಮ್ಮ ಅಪೇಕ್ಷೆಯನ್ನು ಈಡೇರಿಸುವವರು ನಮಗೆ ಸರ್ವಸ್ವವಾಗುತ್ತಾರೆ.

ಸಂತೋಷ ನಾನು ಮೊದಲು ಹೇಳಿದ್ದನ್ನೇ ಮತ್ತೆ ಕೈಗೆತ್ತಿಕೊಂಡು ಕೆಣಕಲಾರಂಭಿಸಿದ. 'ಪ್ರೀತಿಸಿದ ವ್ಯಕ್ತಿಯೇ ಸರ್ವಸ್ವ ಅಂದೆಯಲ್ಲಾ, ನೀನು ನಿನ್ನ ತಾಯಿಯನ್ನು ಪ್ರೀತಿಸುತ್ತೀಯ. ಹಾಗಾದರೆ ನೀನು ತಾಯಿಯನ್ನು ಸರ್ವಸ್ವ ಎಂದು ಭಾವಿಸಿದ್ದೀಯಾ? ಪ್ರಾಮಾಣಿಕವಾಗಿ ಉತ್ತರಿಸು.' ನಾನು ಯೋಚಿಸಿದೆ: ಹೌದು, ನನ್ನಮ್ಮ ನನ್ನ ಪಾಲಿಗೆ ಸರ್ವಸ್ವವೇ ಸರಿ. ಹಾಗಿದ್ದಾಗ, ಆಕೆಯೇ ನನ್ನ ಸರ್ವಸ್ವವಾಗಿದ್ದಾಗ, ನಾನ್ಯಾಕೆ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸಬೇಕು? ಅಮ್ಮನಲ್ಲಿ ಇಲ್ಲದ್ದು ಇವಳಲ್ಲಿ ಏನಿದೆ? ಹೌದು, ಸಾಕಷ್ಟಿದೆ. ಅದಕ್ಕಾಗಿಯೇ ನಾನು ಇವಳ ಪ್ರೀತಿಗೆ ಕೈ ಚಾಚಿದ್ದು. ಇವಳು ಅಂತ ಅಷ್ಟೇ ಅಲ್ಲ, ಇವಳ ಪ್ರೀತಿ ಅಲ್ಲದೆಯೂ ನನಗೆ ಇನ್ನೂ ಸಾಕಷ್ಟು ಬೇಕು. ನನಗೆ ಸಂತೋಷನಂತಾ ಉತ್ತಮ ಗೆಳೆಯರ ಸ್ನೇಹ ಬೇಕು, ಬೆಳಗೆರೆಯಂತಾ 'ಗುರುವಲ್ಲದ ಗುರು-ತಂದೆಯಲ್ಲದ ತಂದೆ'ಯ ಬರಹ ಬೇಕು, ಮನಸ್ಸಿಗೆ ಬೇಸರವಾದಾಗ ಮುದ ನೀಡುವಂತಹ ಹಾಡು ಬೇಕು, ನೋಡಲು ಖುಷಿ ನೀಡುವಂತಹ ಸಿನಿಮಾ ಬೇಕು... ನನ್ನ ಬೇಕುಗಳ ಪಟ್ಟಿ ದೊಡ್ಡದಿದೆ. ಇವನ್ನೆಲ್ಲಾ ಕೊಡಮಾಡುವವರು ಆಯಾ ಕ್ಷಣದಲ್ಲಿ ನನ್ನ ಪಾಲಿನ ಸರ್ವಸ್ವಗಳೇ. ಆದರೂ ಒಬ್ಬ ಹುಡುಗಿ ಒಬ್ಬ ಹುಡುಗನಿಗೆ ಕೊಡಬಹುದಾದಂತಹ ಸರ್ವಸ್ವದ ಘಾಢತೆ ಇದೆಯಲ್ಲಾ, ಅದು ಉಳಿದೆಲ್ಲಕ್ಕಿಂತ ಶ್ರೇಷ್ಟವಾದದ್ದು ಅಂತ ನನ್ನ ನಂಬುಗೆ. ಒಬ್ಬ ಹುಡುಗಿ ನನಗೆ ಎಲ್ಲವೂ ಆಗಬಲ್ಲಳು. ಆಕೆ ನನಗೆ ಅತ್ಯುತ್ತಮ ಗೆಳತಿ, ಪ್ರೇಯಸಿ, ಗುರು, ಅಮ್ಮ, ಬಂಧು... ಆಕೆಗೆ ಸರ್ವಸ್ವವೂ ಆಗುವ ಸಾದ್ಯತೆ ಇದೆ. She means everything to me. ಬಹಶಃ ಬೇರೆ ಯಾರಿಗೂ ಈ ಸಾಧ್ಯತೆ ಇಲ್ಲ.

ಸಂತೋಷ ಮತ್ತೆ ನನ್ನನ್ನು cross-question ಮಾಡಿದ: ಹಾಗಾದರೆ 'ಪ್ರೀತಿ' ಮತ್ತು 'ಅವಳಿಗೆ ಸರ್ವಸ್ವವಾಗುವುದು' ('love' and 'being everything to her') ಎರಡೂ ಒಂದೇನಾ? ಒಂದೇ ಎಂತಾದರೆ, ನೀನಾಗ ಹೇಳಿದಂತೆ 'ನಮ್ಮ ಅಪೇಕ್ಷೆಯನ್ನು ಈಡೇರಿಸುವವರೇ ನಮಗೆ ಸರ್ವಸ್ವ'; ಹಾಗಾಗಿ ಪ್ರೀತಿಯೂ ಸಹ ನಿನ್ನ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುವ ಒಂದು ಮಾರ್ಗ ಅಷ್ಟೇನಾ? ನೀನು ಪ್ರೀತಿ ಮಾಡುವುದು ಕೇವಲ ನಿನ್ನ ಅಪೇಕ್ಷೆಗಳ ಈಡೇರಿಕೆಗೋಸ್ಕರವೊ? ನಿರಪೇಕ್ಷ ಪ್ರೇಮವೆಂಬುದಿಲ್ಲವೋ?

ಈ ಬಗ್ಗೆ ಇಬ್ಬರೂ ಸ್ವಲ್ಪ ಚರ್ಚಿಸಿದೆವಾದರೂ, 'ಪ್ರೀತಿ'ಗೆ ಹೊಸ definition ಕೊಡಬೇಕಾದಂತಾದಾಗ, ಅದನ್ನು ಅಲ್ಲಿಗೇ ಕೈಬಿಟ್ಟು ಮತ್ತೆ ವಾಪಾಸು ಬಂದೆವು.

ಇಷ್ಟಕ್ಕೂ 'ಅವಳಿಗೆ ಸರ್ವಸ್ವವಾಗುವುದು' ಅಂದರೇನು? ಅದೊಂದು ಸಾಧ್ಯವಾಗುವಂತಹ ಮಾತಾ? ಯಾವಾಗ 'ಅವಳೇ ನನ್ನ ಸರ್ವಸ್ವ' ಅಂತ ನನಗೆ ಭಾಸವಾಗುತ್ತದೆಯೆಂದರೆ, ನಾನು ಅವಳ ಪ್ರೀತಿಯ ಕೊಳದಲ್ಲಿ ಪೂರ್ತಿ ಮುಳುಗಿಹೋಗಿದ್ದಾಗ. ನಾನು ಯಾರನ್ನು ನೋಡಿದರೂ, ಏನನ್ನು ನೋಡಿದರೂ ಅದರಲ್ಲಿ ಅವಳ ಬಿಂಬವೇ ಕಾಣಿಸುತ್ತದೆ. ಅಮ್ಮನಲ್ಲೂ ಅವಳು, ಗುರುವಿನಲ್ಲೂ ಅವಳು, ಸಿನಿಮಾದ ನಾಯಕಿಯಲ್ಲೂ ಅವಳ ಮುಖ, ಹಾಡಿನ ಗಾಯಕಿಯಲ್ಲೂ ಅವಳ ದನಿ. ಈಕೆ ಹೀಗೆಂದರೆ, ನಾನು ಎಲ್ಲವನ್ನೂ ಅವಳ ಪ್ರೀತಿಯ ಕೊಳದ ನೀರಿನ ಮೂಲಕವೇ ನೋಡುತ್ತಿದ್ದೇನೆ.

ಈ ವಾದದ ಮಧ್ಯೆ ನನಗೆ ಮತ್ತೊಂದು ಅನುಮಾನ ಬಂತು. ಹಾಗಾದರೆ ಈ ಪ್ರೀತಿಯ ಕೊಳ ಬತ್ತಿಹೋದರೆ? 'ನನ್ನ ಸರ್ವಸ್ವ' ಅಂದುಕೊಂಡಿದ್ದ ಅವಳು ಬಿಟ್ಟುಹೋದರೆ? ಸರ್ವಸ್ವವೂ ಹೋದಮೇಲೆ ಉಳಿಯುವುದೇನು? ನಾನೂ ಉಳಿಯಬಾರದಲ್ಲವೇ? ಆದರೂ ಎಷ್ಟೊಂದು ಜನ ಹೀಗಾದಮೇಲೂ ಉಳಿದಿದ್ದಾರಲ್ಲವೇ? ಸರ್ವಸ್ವ ಎಂದುಕೊಂಡಿದ್ದ ಹುಡುಗಿ ಬಿಟ್ಟುಹೋದಮೇಲೂ ಬದುಕಿದ್ದಾರೆ, ಮತ್ತೊಂದು 'ಸರ್ವಸ್ವ'(?) ದೆಡೆಗೆ ಕಣ್-ಚಾಚಿದ್ದಾರೆ. ಹಾಗಾದರೆ ಪ್ರೀತಿ, ಪ್ರೀತಿಸಿದ ಹುಡುಗಿ ಸರ್ವಸ್ವ ಅಲ್ಲವೇ? ಯಾರೂ ಯಾರಿಗೂ 'ಸರ್ವಸ್ವ' ಆಗಲಿಕ್ಕೆ ಸಾಧ್ಯವಿಲ್ಲವೇ? 'ಅವಳೇ ನನ್ನ ಸರ್ವಸ್ವ' ಅಂದುಕೊಳ್ಳುವುದು ಕೇವಲ ಭ್ರಮೆಯೇ? 'Being everything to somebody' ಎಂಬುದು ಕೇವಲ ಆ ಕ್ಷಣದ ಸತ್ಯವೇ? ಅಷ್ಟೇನೇನೋ ಅನ್ನಿಸಿಬಿಟ್ಟಿತು -ಫೋನೀಟ್ಟ ಮೇಲೆ.

ಗೆಳೆಯನಿಗೆ SMS ಮಾಡಿದೆ: 'ಸಂತೋಷ, ಅವಳೇ ಸರ್ವಸ್ವ ಅಲ್ಲದಿರಬಹುದು, ಆದರೆ ಅವಳೇ ನನ್ನ ಸರ್ವಸ್ವ - ಮತ್ತು ಅವಳಿಗೆ ನಾನೇ ಸರ್ವಸ್ವ ಅಂದುಕೊಳ್ಳುವಾಗ ಸಿಗುವ ನಿರಾಳತೆ, ಖುಷಿ ಮತ್ತು ಹಮ್ಮು ಇದೆಯಲ್ಲ, ಅವು ನಿಜಕ್ಕೂ ಉನ್ನತವಾದವು. ಮತ್ತು ಅದಕ್ಕಾಗಿಯಾದರೂ ಪ್ರೀತಿಸಬೇಕು!' ಅಂತ. 'Good Night' ಒಂದು ಆ ಕಡೆಯಿಂದ ಬಂತು.

(೨೫.೦೯.೨೦೦೬; ರಾತ್ರಿ ೧.೩೦)


--------------
ಇಲ್ಲಿ 'ಅವಳು' ಅಂತ ಇರುವಲ್ಲೆಲ್ಲ 'ಅವನು' ಅಂತ, replace ಮಾಡಿಕೊಂಡರೂ ಈ ಲೇಖನದ ದಾಟಿ ಬದಲಾಗಲಾರದು ಅಲ್ಲವೇ? (ಹುಡುಗಿಯರೇ ಉತ್ತರಿಸಬೇಕು!)

Friday, September 22, 2006

ಮಬ್ಬಿನಿಂದ ಕತ್ತಲೆಯೆಡೆಗೆ

ಕರುಣಾಳು ಬಾ ಬೆಳಕೇ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಎಂದು ನಾನು ಹಾಡಿದಾಗ ಕತ್ತಲೆಯೇನು ಇರಲಿಲ್ಲ;
ಮಬ್ಬಿತ್ತು ಅಷ್ಟೆ.

ನೀನು ಬೆಳಕಾಗಿ ಬಂದೆ.
ನಾನು ಖುಷಿಯಲ್ಲಿ ಮುಳುಗಿಹೋದೆ.
ಗಾಳಿ ಬೀಸುವ ಮೊದಲು
ಬಾಗಿಲು
ಭದ್ರಗೊಳಿಸಿಕೊಳ್ಳಬೇಕು ಎಂಬ ಅರಿವು
ನನಗಾದಾಗ ತಡವಾಗಿತ್ತು.

ಜೋರು ಗಾಳಿ ಬೀಸತೊಡಗಿದಾಗ ಭಿನ್ನವಿಸಿಕೊಂಡೆ:
ದೀಪವೂ ನಿನ್ನದೆ
ಗಾಳಿಯೂ ನಿನ್ನದೆ
ಆರದಿರಲಿ ಬೆಳಕು..

ಬೆಳಕು ಉಳಿಯಲಿಲ್ಲ;
ಗಾಳಿ ಬಿಡಲಿಲ್ಲ.
ದೀಪವಾರಿದಾಕ್ಷಣ ಕತ್ತಲು
ಸುತ್ತಮುತ್ತಲೂ.

ಸಣ್ಣ ಬಿಳಿ ಹೊಗೆ ಎದ್ದಿತ್ತೇನೋ-
ಕಾಣಲಿಲ್ಲ ಕತ್ತಲೆಯಲ್ಲಿ.
ಒಳ್ಳೆಯದೇ ಆಯಿತು;
ನನಗೆ ಹೊಗೆ ಎಂದರೆ 'ಹೋಗೇ'.

ಈಗೆಲ್ಲ ಇಲ್ಲಿ ದೀಪ ಉಳಿಸಿ ಹೋದ
ಕಂಪಿನದೇ ರಾಜ್ಯಭಾರ.
ಮತ್ತು ನನ್ನ ಮಂತ್ರಪಠಣ:
ತಮಸೋಮಾ ಜ್ಯೋತಿರ್ಗಮಯ..

Monday, September 18, 2006

ಒಂದು ಪೂರ್ಣ ಕತೆ; ಒಂದು ಅಪೂರ್ಣ ಕತೆ..!

ಕೊಕ್ಕರೆ ಕಥೆ

ಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು. ಅದು ಕೊಕ್ಕರೆಯೊಂದಿಗೆ ಸ್ನೇಹ ಸಂಪಾದಿಸಲು ನೋಡಿತು. 'ಕೊಕ್ಕರೆಯಣ್ಣಾ ಕೊಕ್ಕರೆಯಣ್ಣಾ, ನೀನು ಅದೆಷ್ಟು ಸುಂದರವಾಗಿದ್ದೀಯೆ! ನಿನ್ನ ಮೈಬಣ್ಣ ಅದೆಷ್ಟು ಬಿಳಿ! ಕೋಮಲವಾದ ನಿನ್ನ ಮೈಮಾಟ, ನೀಳವಾದ ಕತ್ತು, ಊದ್ದ-ಚೂಪು ಕೊಕ್ಕು.. ಆಹಾ! ನೀನು ನಿಜಕ್ಕೂ ಸುಂದರಾಂಗ! ನೀನು ನೆಲದ ಮೇಲೆ ಓಡಬಲ್ಲೆಯಷ್ಟೇ ಅಲ್ಲ, ನೀರಿನಲ್ಲಿ ಈಜಬಲ್ಲೆ, ಆಕಾಶದಲ್ಲಿ ಹಾರಬಲ್ಲೆ.. ನನಗೋ, ಆ ಅದೃಷ್ಟ ಇಲ್ಲ...' ಎಂಬುದಾಗಿ ಕೊಕ್ಕರೆಯನ್ನು ಹೊಗಳಲು ಪ್ರಾರಂಭಿಸಿತು. ಕೊಕ್ಕರೆ ನರಿಯ ಹೊಗಳಿಕೆ ಮರುಳಾಯಿತು. ನರಿ ಮತ್ತು ಕೊಕ್ಕರೆ ಸ್ನೇಹಿತರಾದರು. ನರಿ ಹಸಿದಿರುವುದನ್ನು ತಿಳಿದ ಕೊಕ್ಕರೆ, ಒಂದಷ್ಟು ಮೀನುಗಳನ್ನು ಹೆಕ್ಕಿ ನರಿಗೆ ತಿನ್ನಲು ದಡಕ್ಕೆ ಹಾಕಿತು.

ನರಿ ಪ್ರತಿದಿನವೂ ಬರತೊಡಗಿತು. ಕೊಕ್ಕರೆ ನರಿಗೆ ಮೀನುಗಳನ್ನು ಹೆಕ್ಕಿ ಹೆಕ್ಕಿ ಕೊಡುತ್ತಿತ್ತು. ಒಂದು ದಿನ ನರಿ 'ಕೊಕ್ಕರೆಯಣ್ಣಾ, ನೀನು ನಮ್ಮ ಮನೆಗೆ ಒಮ್ಮೆಯೂ ಬಂದೇ ಇಲ್ಲವಲ್ಲ.. ನಾಳೆ ನೀನು ನಮ್ಮ ಮನೆಗೆ ಬಾ, ನನ್ನ ಹೆಂಡತಿ ನಿನಗಾಗಿ ಪಾಯಸ ಮಾಡುತ್ತಾಳೆ' ಎಂದು ಆಹ್ವಾನಿಸಿತು. ನರಿಯ ಕರೆಗೆ ಓಗೊಟ್ಟು ಕೊಕ್ಕರೆ ಮರುದಿನ ನರಿಯ ಮನೆಗೆ ಹೋಗುತ್ತದೆ. ನರಿ ಮತ್ತು ಕೊಕ್ಕರೆ ಮಾತನಾಡುತ್ತಾ ಕುಳಿತಿರುವಾಗ ನರಿಯ ಹೆಂಡತಿ ಒಂದು ಅಗಲವಾದ ಹರಿವಾಣದಲ್ಲಿ ಪಾಯಸವನ್ನು ಸುರಿದು ತಂದು ಕೊಕ್ಕರೆಯ ಮುಂದಿಡುತ್ತದೆ. ಇಬ್ಬರೂ ತಿನ್ನಲಾರಂಭಿಸುತ್ತಾರೆ. ಹರಿವಾಣದಲ್ಲಿ ತಳ ಮುಚ್ಚುವಷ್ಟೇ ಇದ್ದ ಪಾಯಸವನ್ನು ತಿನ್ನಲು ಕೊಕ್ಕರೆಗೆ ಆಗುವುದಿಲ್ಲ. ಅದು ತನ್ನ ಕೊಕ್ಕನ್ನು ಮುಳುಗಿಸಿದರೆ ಒಂದು ಚಮಚದಷ್ಟು ಮಾತ್ರ ಪಾಯಸ ಬಾಯಿಗೆ ಬರುತ್ತಿತ್ತು. ಹಾಗೇ ಅದು ಐದಾರು ಚಮಚ ತಿನ್ನುವುದರೊಳಗೆ ಆ ಕಡೆಯಿಂದ ನರಿ ಬಾಯಿ ಹಾಕಿ ಬರಬರನೆ ತಿನ್ನುತ್ತಾ ಪಾತ್ರೆಯನ್ನು ಖಾಲಿ ಮಾಡಿಬಿಟ್ಟಿತು! ನರಿ ಕೊಕ್ಕರೆಯನ್ನು 'ಹೇಗಿತ್ತು ಪಾಯಸ?' ಅಂತ ಕೇಳಿದ್ದಕ್ಕೆ, ಕೊಕ್ಕರೆ ಸಂಕೋಚಕ್ಕೆ ಬಲಿಯಾಗಿ 'ಚೆನ್ನಾಗಿತ್ತು' ಎಂದು ಹೇಳುತ್ತೆ. ಹಾಗೆಯೇ ಕೊಕ್ಕರೆ ನರಿಯನ್ನು ಮರುದಿನ ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸುತ್ತದೆ.

ಮರುದಿನ ನರಿ ಕೊಕ್ಕರೆಯ ಮನೆಗೆ ಹೋಗುತ್ತದೆ. ಕೊಕ್ಕರೆ ಒಂದು ಪ್ಲಾನ್ ಮಾಡಿರುತ್ತದೆ. ಕೊಕ್ಕರೆ ಒಂದು ಚಿಕ್ಕ ಬೋಗುಣಿಯಲ್ಲಿ ಪಾಯಸವನ್ನು ಹಾಕಿ ತಂದಿಡುತ್ತದೆ. ನರಿಯ ಮೂತಿ ಅದರೊಳಗೆ ತೂರುವುದೇ ಇಲ್ಲ! ಕೊಕ್ಕರೆ ಸಲೀಸಾಗಿ ತನ್ನ ಕೊಕ್ಕಿನಿಂದ ಪಾಯಸವನ್ನು ಹೀರುತ್ತದೆ!

ಹೀಗೆ ಕೊಕ್ಕರೆ ನರಿಯ ಮೇಲೆ ಸೇಡು ತೀರಿಸಿಕೊಳ್ಳುತ್ತದೆ!

ಕಥೆ ಹೇಳಿದ್ದು: ವಿದ್ವಾನ್ ಶ್ರೀ ಎನ್. ರಂಘನಾಥ ಶರ್ಮ
ಸಂದರ್ಭ: ದಿನಾಂಕ ೧೭.೦೯.೨೦೦೬ ರಂದು ಗಿರಿನಗರದ ಶಂಕರ ಮಂಟಪದಲ್ಲಿ ನಡೆದ ಆರ್ಕುಟ್-ಹವ್ಯಕ ಚಕ್ಲಿ-ಚುಡ್ವಾ ಕಂಬಳ ದಲ್ಲಿ
ಉದ್ದೇಶ: ರಂಘನಾಥ ಶರ್ಮರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ೯೨ ವರ್ಷ ವಯಸ್ಸಿನ, ಹಲ್ಲುಗಳೆಲ್ಲಾ ಬಿದ್ದು ಹೋಗಿರುವ ಅವರು, ಕಂಬಳವನ್ನು ಉದ್ಘಾಟಿಸುವುದೇನೋ ಸರಿ, ಆದರೆ ಚಕ್ಲಿಯನ್ನು ತಿನ್ನುವುದೆಂತು?! ಅವರು ತಮ್ಮ ಪರಿಸ್ಥಿತಿಯನ್ನು ಈ ಕಥೆಯೊಂದಿಗೆ ಹೊಂದಿಸಿ ರಸವತ್ತಾಗಿ ಹೇಳಿ ನೆರೆದಿದ್ದವರನ್ನೆಲ್ಲಾ ರಂಜಿಸಿದರು. ಕೊನೆಗೆ ಅವರಿಗೆ ಚಕ್ಲಿಯನ್ನು ಪುಡಿ ಮಾಡಿ ತಿನ್ನಿಸಲಾಯಿತು ಅನ್ನುವುದು ಬೇರೆ ವಿಷಯ!

***

ಈ ಕಥೆಯನ್ನು ಕೇಳುತ್ತಿದ್ದಾಗ ನನಗೆ ನೆನಪಾದದ್ದು, ನಾವೆಲ್ಲಾ ಬಾಲ್ಯದಲ್ಲಿ ಕೇಳಿದ 'ಕಾಗಕ್ಕ-ಗುಬ್ಬಕ್ಕನ ಕಥೆ'. ಸರಳವಾಗಿ ಹೇಳುವುದಾದರೆ, ಆ ಕಥೆ ಹೀಗಿದೆ:


ಕಾಗಕ್ಕ-ಗುಬ್ಬಕ್ಕ ಕಥೆ

ಒಂದೂರಲ್ಲಿ ಕಾಗಕ್ಕ ಮತ್ತೆ ಗುಬ್ಬಕ್ಕ ಫ್ರೆಂಡ್ಸ್ ಆಗಿರ್ತಾರೆ. ಕಾಗಕ್ಕನ ಮನೆ ಮಣ್ಣು ಮತ್ತೆ ತರಗೆಲೆಗಳಿಂದ ಮಾಡಿದ್ದು; ಗುಬ್ಬಕ್ಕನ ಮನೆ ಮರದ ತೊಗಟೆಯಿಂದ ಕಟ್ಟಿದ ಗಟ್ಟಿಮುಟ್ಟಾದ ಮನೆ. ಒಮ್ಮೆ ಜೋರು ಗಾಳಿ-ಮಳೆಯಾದಾಗ ಕಾಗಕ್ಕನ ಮನೆ ತೊಳೆದು ಹೋಗುತ್ತದೆ. ಆಗ ಗುಬ್ಬಕ್ಕ ಕಾಗಕ್ಕನನ್ನು ತನ್ನ ಮನೆಗೆ ಉಳಿದುಕೊಳ್ಳುವುದಕ್ಕೆ ಆಹ್ವಾನಿಸುತ್ತದೆ.

ರಾತ್ರಿ ಎಲ್ಲರೂ ಮಲಗಿದ್ದಾಗ ಕಾಗಕ್ಕ ಗುಬ್ಬಕ್ಕನ ಮೊಟ್ಟೆ-ಮರಿಗಳನ್ನು ತಿನ್ನಲಾರಂಭಿಸುತ್ತದೆ. 'ಕಟ್ ಕಟ್' 'ಕರ ಕರ' ಎಂಬ ಶಬ್ದ ಕೇಳಿ ಗುಬ್ಬಕ್ಕ ಕೇಳುತ್ತೆ: 'ಏನದು ಶಬ್ದ ಕಾಗಕ್ಕಾ?' ಅಂತ. ಅದಕ್ಕೆ ಕಾಗಕ್ಕ ಹೇಳುತ್ತೆ: 'ಏನಿಲ್ಲ, ದನ ಕಾಯೋ ಹುಡುಗ ನಾಕು ಕಡ್ಲೇಕಾಯಿ ಕೊಟ್ಟಿದ್ದ, ತಿನ್ತಾ ಇದ್ದೆ' ಅಂತ. ಬೆಳಗ್ಗೆ ಮುಂಚೆ, ಗುಬ್ಬಕ್ಕ ಏಳೋ ಮೊದಲೇ ಕಾಗಕ್ಕ ಗುಬ್ಬಕ್ಕನ ಗೂಡಿಂದ ಹಾರಿಹೋಗಿಬಿಡುತ್ತೆ.

ಗುಬ್ಬಕ್ಕ ಬೆಳಗ್ಗೆ ಎದ್ದು ನೋಡುತ್ತೆ: ಕಾಗಕ್ಕನೂ ಇಲ್ಲ; ತನ್ನ ಮೊಟ್ಟೆ-ಮರಿಗಳೂ ಇಲ್ಲ! ಕಾಗಕ್ಕನ ಮೇಲೆ ಅದು ಸೇಡು ತೀರಿಸಿಕೊಳ್ಳಬೇಕು ಅಂತ ತೀರ್ಮಾನಿಸುತ್ತೆ...

***
ಆದರೆ friends, ಇದರ ಮುಂದೆ ಮರೆತು ನನಗೆ ಹೋಗಿದೆ! ನನ್ನ ಗೆಳೆಯರನೇಕರ ಬಳಿ ಕೇಳಿದೆ; ಅವರಿಗೂ ನೆನಪಿಲ್ಲ. ಗುಬ್ಬಕ್ಕ ಕಾಗಕ್ಕನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳೊತ್ತೆ ಅಂತ ನನಗೆ ಬೇಕು. Second part of the storey ಬೇಕು. ದಯವಿಟ್ಟು ಗೊತ್ತಿರೋರು ಈ ಕಥೆಯನ್ನು ಪೂರ್ಣಗೊಳಿಸಿಕೊಡಬೇಕು ಅಂತ ನನ್ನ ವಿನಂತಿ..

Friday, September 15, 2006

ಕೊಲೆಗಾರನ ಕಳವಳ

ನಿನ್ನೆ ರಾತ್ರಿ ಏನಾಯಿತೆಂದರೆ....
ಇಲ್ಲ, ಹೆದರಬೇಡಿ, ಅಂಥದ್ದೇನೂ ಆಗಲಿಲ್ಲ-
ಹೇಳಿಕೊಳ್ಳುವಂತದ್ದು;
ಆದರೆ ತಾಳಿಕೊಳ್ಳಲೂ ಆಗಲಿಲ್ಲ-
ಬಾಳೆಕಾಯಿ ಶೆಟ್ಟಿ ಎಂಬ ಹಸಿರು ಹುಳ
ನಾನು ದೀಪವಾರಿಸಿ ಮಲಗಿದ ಮೇಲೆ ಒಳ
ಬಂದು ಪಟಪಟ ಶಬ್ದ ಮಾಡುತ್ತಾ
ನನಗೆ ಕಾಟ ಕೊಡಲು ಶುರುವಿಟ್ಟಾಗ.

ಮೊಬೈಲಿನ ದೀಪ ಹೊತ್ತಿಸಿ
ಕೈಗೆ ಸಿಕ್ಕ ಪೇಪರು ಬಳಸಿ
ಕೈಬೀಸಿ ಜಾಡಿಸಿದಾಗ ಶತ್ರು
ಒಂದೇ ಹೊಡೆತಕ್ಕೆ ನೆಲಕಚ್ಚಿ ಬಿದ್ದು
ವಿಲವಿಲನೆ ಒದ್ದಾಡುವ ಸದ್ದು
ಕೇಳುತ್ತಿರಲು, ನಾನು ಯುದ್ಧ ಗೆದ್ದ
ಖುಷಿಯಲ್ಲಿ, ಹೊದ್ದು ನಿದ್ದೆ ಹೋದೆ.

ಬೆಳಗ್ಗೆ ಎದ್ದು ನೋಡುತ್ತೇನೆ:
ಪಕ್ಕದಲ್ಲೇ ಹೆಣ!
ಅದನ್ನು ಸಾಗಿಸಲು ಹೆಣ-
ಗಾಡುತ್ತಿರುವ ಇರುವೆಗಳ ಬಣ!
ಮಣಭಾರದ ಈ ದೇಹವನ್ನು
ಸಣಕಲು ಇರುವೆಗಳು ಹೇಗಾದರೂ
ಸಾಗಿಸುತ್ತವೋ ಎಂದು ಯೋಚಿಸುತ್ತಾ,
ರೂಮಿನ ಕಸ ಗುಡಿಸದೇ ಹಾಗೇ
ಆಫೀಸಿಗೆ ಬಂದೆ.

ಸಂಜೆ ರೂಮಿಗೆ ಮರಳಿ ನೋಡಿದರೆ
ಹೆಣವೂ ಇಲ್ಲ; ಇರುವೆಗಳೂ ಇಲ್ಲ!
ಏನಾಯಿತು ಹೋಗಿ ವಿಚಾರಿಸೋಣವೆಂದರೆ
ಅವುಗಳ ಗೂಡಿನ ವಿಳಾಸ ನನಗೆ ಗೊತ್ತಿಲ್ಲ

ನಾನು ಕೊಲೆಗಾರನೆಂಬ ಭಾವ ಆವರಿಸಿಕೊಳ್ಳತೊಡಗಿತು...

ಏಕೆ ಬಂದಿತ್ತು ಅದು ನನ್ನ ರೂಮಿಗೆ?
ಅದು ಸತ್ತ ಸುದ್ದಿ ಹೇಗೆ ತಿಳಿಯಿತೋ ಇರುವೆಗಳ ಟೀಮಿಗೆ?

ಬಾಳೆಕಾಯಿ ಶೆಟ್ಟಿ ಸತ್ತದ್ದೇನು ಸುದ್ದಿಯಲ್ಲ ಬಿಡಿ
ಕೊಲೆ ಮಾಡಿದ್ದಕ್ಕೆ ನನಗೆ ಯಾರೂ ತೊಡಿಸುವುದಿಲ್ಲ ಬೇಡಿ
ಗೂಡಿನಲ್ಲಿ ಇರುವೆಗಳೆಲ್ಲಾ ಘರಮ್ ಬಿರಿಯಾನಿ ಮಾಡಿ
ತಿಂದು ತೇಗಿರಬಹುದು;
ಆದರೆ ಅದಲ್ಲ ವಿಷಯ-

...ನಿನ್ನೆ ರಾತ್ರಿ ಬಂದ ನಿದ್ದೆ ಇವತ್ಯಾಕೆ ಬರುತ್ತಿಲ್ಲ ನನಗೆ?

(14.09.2006; ರಾತ್ರಿ 12:30)

Monday, September 11, 2006

ಬಿ.ಆರ್.ಎಲ್. -60: ಸಮಾರಂಭದ ವರದಿ!


ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತುಂಟಕವಿ ಬಿ.ಆರ್.ಎಲ್. ಗೆ ಅರವತ್ತು ವರ್ಷ ವಯಸ್ಸಾಯಿತೇ? Impossible ! ಅದು ಹೇಗೆ ಸಾಧ್ಯ? ನನ್ನ ಅನುಮಾನವನ್ನು ಬಗೆಹರಿಸುವಂತೆ, ನಿಜವಾಗಿಯೂ ಅರವತ್ತಾಗಿದೆ ಎನ್ನುವಂತೆ ಸಾಪ್ತಾಹಿಕದಲ್ಲಿ ಜಯಂತ ಕಾಯ್ಕಿಣಿ ಬಿ.ಆರ್.ಎಲ್. ಕುರಿತು ಬರೆದ ಲೇಖನವೊಂದಿತ್ತು. ಅಭಿನಂದನಾ ಕಾರ್ಯಕ್ರಮಕ್ಕೆ ಬರಲಿರುವವರ list ನೋಡಿದೆ. ಈ ಕಾರ್ಯಕ್ರಮವನ್ನು ನಾನು attend ಮಾಡಲೇಬೇಕು ಅನ್ನಿಸಿತು. Movie ಗೆ ಹೋಗೋಣ ಎಂದು ಗೆಳೆಯರ ಜೊತೆ ಮಾತಾಡಿಕೊಂಡಿದ್ದವನು, ಅದನ್ನೆಲ್ಲಾ cancel ಮಾಡಿ, ಮಧ್ಯಾಹ್ನ ಮೂರರ ಹೊತ್ತಿಗೆ ಸೀದಾ ಕಲಾಕ್ಷೇತ್ರಕ್ಕೆ ನಡೆದೆ.

ಕಾರ್ಯಕ್ರಮವನ್ನು ಮೂರು ಚರಣಗಳಲ್ಲಿ ಆಯೋಜಿಸಿದ್ದರು. ಮೊದಲನೇ ಚರಣದಲ್ಲಿ ಬಿ.ಆರ್.ಎಲ್. ಬರಹಗಳ ಬಗ್ಗೆ ಗೋಷ್ಠಿ, ಎರಡನೇ ಚರಣದಲ್ಲಿ ಬಿ.ಆರ್.ಎಲ್.ರ ಹನಿಗವನಗಳ ಸಂಕಲನ, ಸಿಡಿ ಮತ್ತು mp3 ಬಿಡುಗಡೆ, ಮತ್ತು ಮೂರನೇ ಚರಣದಲ್ಲಿ ಲಕ್ಷ್ಮಣರಾಯರಿಗೆ ಅಭಿನಂದನೆ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ.

ಮೊದಲನೇ ಚರಣದಲ್ಲಿ ಭಾಗವಹಿಸಿದ್ದವರು ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯ ಚೊಕ್ಕಾಡಿ ಮತ್ತು ಎನ್.ಎಸ್. ರಂಗನಾಥ ರಾವ್. ನರಹಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಲಕ್ಷ್ಮೀನಾರಾಯಣ ಭಟ್ಟರು ಬಿ.ಆರ್.ಎಲ್. ರವರ ಜೊತಿಗಿನ ತಮ್ಮ ಅವಿನಾಭಾವ ಸಂಬಂಧದ ಕುರಿತು ಹೇಳಿದರು. 'ಗೋಪಿ'ಗೆ 'ಕಡಿವಾಣ' ಹಾಕಲು ಅವರ ಮನೆಯವರು ಕೇಳಿಕೊಂಡಾಗ ಅವರಿಗೆ ಹೆಣ್ಣು ಹುಡುಕಿಕೊಟ್ಟವರು (ಸುಬ್ಬಾಭಟ್ಟರ ಮಗಳು!) ತಾವೇ ಎಂಬ ಸತ್ಯವನ್ನು ಬಹಿರಂಗಗೊಳಿಸಿದರು. ನಂತರ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಬಿ.ಆರ್.ಎಲ್. ರ ಕಾವ್ಯದ ಬಗ್ಗೆ ಪಕ್ಷಿನೋಟ ಬೀರಿದರು. ತದನಂತರ ರಂಗನಾಥರಾವ್, ಬಿ.ಆರ್.ಎಲ್. ರ ಗದ್ಯದ ಕುರಿತು ಮಾತನಾಡಿದರು.

ಎರಡನೇ ಚರಣದಲ್ಲಿ, ಕವಿ-ಕತೆಗಾರ್ತಿ ಎಂ.ಆರ್. ಕಮಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಆರ್.ಎಲ್. ರ ಹನಿಗವನಗಳ ಸಂಕಲನವನ್ನು ಬಿಡುಗಡೆ ಮಾಡಿದ ಚುಟುಕು ರತ್ನ ದುಂಡೀರಾಜ್, ಆ ಪುಸ್ತಕದಲ್ಲಿನ ಕೆಲ ಹನಿಗವಿತೆಗಳನ್ನು ಓದಿ ಹೇಳಿದರು. ಗಾಯಕ ಶಿವಮೊಗ್ಗ ಸುಬ್ಬಣ್ಣ ಭಾವಗೀತೆಗಳ ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿ, ಸಿಡಿಯಲ್ಲಿರುವ ಗೀತೆಗಳನ್ನು ಪರಿಚಯಿಸಿದರು. 'ಹೇಳಿ ಹೋಗು ಕಾರಣ' mp3 ಬಿಡುಗಡೆ ಮಾಡಿದ ಮುದ್ದುಕೃಷ್ಣ ಅದರಲ್ಲಿರುವ ಹಾಡುಗಳ ಬಗ್ಗೆ ಹೇಳಿದರು.

ಚಹಾ ವಿರಾಮದ ನಂತರ ಶುರುವಾದ ಸಮಾರಂಭದ ಮೂರನೇ ಚರಣದಲ್ಲಿ ವೇದಿಕೆ ಮತ್ತಷ್ಟು ಗಣ್ಯ ವ್ಯಕ್ತಿಗಳಿಂದ ತುಂಬಿತ್ತು. ಅಭಿನಂದನಾ ಸಮಾರಂಭ ಸಮಿತಿಯ ಗೌರವಾಧ್ಯಕ್ಷತೆಯನ್ನು ವಹಿಸಿದ್ದ ಜಿ.ಎಸ್. ಶಿವರುದ್ರಪ್ಪ, ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಯು.ಆರ್. ಅನಂತಮೂರ್ತಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವಿ ಬೆಳಗೆರೆ, ಎಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್ ಮತ್ತಿತರ ನಡುವೆ ಬಿ.ಆರ್.ಎಲ್. ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ ದೃಶ್ಯ ತುಂಬಾ ಚೆನ್ನಾಗಿತ್ತು. ಅಭಿನಂದನಾ ಗ್ರಂಥ 'ಚಿಂತಾಮಣಿ'ಯನ್ನು ಲೋಕಾರ್ಪಣ ಮಾಡಲಾಯಿತು. ಎಚ್ಚೆಸ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ತಮ್ಮ ಮತ್ತು ಲಕ್ಷ್ಮಣರಾಯರ ಸ್ನೇಹ ಸಂಬಂಧವನ್ನು ವಿವರಿಸಿದರು. ಕಾರ್ಯಕ್ರಮದುದ್ದಕ್ಕೂ ಸಿಕ್ಕ ಸಿಕ್ಕ ಕಾಗದಿಂದ ಗಾಳಿ ಬೀಸಿಕೊಳ್ಳುತ್ತ ಕುಳಿತಿದ್ದ ರವಿ ಬೆಳಗೆರೆ ತಮ್ಮ ಆಕರ್ಷಕ ಮಾತಿನಿಂದ ಚಪ್ಪಾಳೆ ಗಿಟ್ಟಿಸಿದರು. ಲಕ್ಷ್ಮಣರಾಯರ ಅನೇಕ ಭಾವಗೀತೆಗಳಿಗೆ ರಾಗ ಸಂಯೋಜಿಸಿ, ಹಾಡಿದ ಸಿ.ಅಶ್ವತ್ಥ್, ಬಿ.ಆರ್.ಎಲ್.ರ ಕಾವ್ಯ ತಮ್ಮನ್ನು ಸೆಳೆದಿದ್ದರ ಬಗ್ಗೆ ಹೇಳಿದರು. ಜಿ.ಎಸ್.ಎಸ್. ಅಭಿನಂದನಾ ಗ್ರಂಥದಲ್ಲಿರುವ ಹೂರಣವನ್ನು ಪ್ರೇಕ್ಷಕರಿಗೆ ಹಂಚಿದರು. ಯು.ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಿ.ಆರ್.ಎಲ್. ರ ಮಹತ್ವವನ್ನು ಕೊಂಡಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ತುಂಟಕವಿ ಬಿ.ಆರ್.ಎಲ್., ತಮ್ಮ ಕಾವ್ಯರಚನೆಗೆ ಸ್ಪೂರ್ತಿಯಾದ, ನೆರವಾದ ಅನೇಕರನ್ನು ಈ ಸಂದರ್ಭದಲ್ಲಿ ನೆನೆದರು.

'ಕನ್ನಡವೇ ಸತ್ಯ' ಖ್ಯಾತಿಯ ಪ್ರಭಾಕರ್ ರಾವ್ ಸಹಕಾರದಲ್ಲಿ ಉಪಾಸನಾ ಮೋಹನ್ ಆಯೋಜಿಸಿದ್ದ ಈ ಕಾರ್ಯಕ್ರಮ ನಿಜಕ್ಕೂ ಚೆನ್ನಾಗಿತ್ತು, ಮನ ಮುಟ್ಟುವಂತಿತ್ತು. ಕೊಟ್ಟ ಕಾಫಿ ತುಂಬಾ ಬಿಸಿಯಿತ್ತು. ಎನ್.ಎಸ್. ರಂಗನಾಥರಾವ್ ಲಕ್ಷ್ಮಣರಾಯರ ಗದ್ಯದ ಕುರಿತು ಮಾತನಾಡುವಾಗ, ಜನಕ್ಕೆ ಅವರ ಗದ್ಯದ ಬಗ್ಗೆ ಹೆಚ್ಚು ಪರಿಚಯವಿಲ್ಲದ್ದರಿಂದ ಪ್ರೇಕ್ಷಕರು ಮಧ್ಯದಲ್ಲೇ ಚಪ್ಪಾಳೆ ಹೊಡೆದರು (ಆದರೂ ಅವರು ಮಾತು ನಿಲ್ಲಿಸಲಿಲ್ಲ!) -ಇಂಥ ಕೆಲವೊಂದು ಅಪಸವ್ಯಗಳು ಸಂಭವಿಸಿದ್ದು ಬಿಟ್ಟರೆ ಇಡೀ ಸಮಾರಂಭದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರ್‍ಏಕ್ಷಕರು ಭಾವನೆಗಳಲ್ಲಿ, ಖುಷಿಯಲ್ಲಿ, ನಗೆಗಡಲಿನಲ್ಲಿ ತೇಲುತ್ತಿದ್ದರು. ಸಮಾರಂಭದ ಪ್ರಯುಕ್ತ ಖ್ಯಾತ ಗಾಯಕರಿಂದ ಬಿ.ಆರ್.ಎಲ್. ರಚನೆಯ ಭಾವಗೀತೆಗಳ ಗಾಯನವೂ ಇತ್ತು.

ಹೊರಗೆ discount ನಲ್ಲಿ ಪುಸ್ತಕಗಳ ಮಾರಾಟ ಇತ್ತು. ನಾನು 'ಸುಬ್ಬಾಭಟ್ಟರ ಮಗಳೇ' ಪುಸ್ತಕ (ಬಿ.ಆರ್.ಎಲ್. ಇದುವರೆಗಿನ ಭಾವಗೀತೆಗಳ ಸಂಕಲನ) ಮತ್ತು 'ಹೇಳಿ ಹೋಗು ಕಾರಣ' mp3 ಕೊಂಡುಕೊಂಡೆ. ಪುಸ್ತಕದ ಮೇಲೆ ಲಕ್ಷ್ಮಣರಾಯರ ಹಸ್ತಾಕ್ಷರ ಪಡೆಯಲು ಹೆಣಗಿದೆನಾದರೂ ಕೊನೆಗೂ ಸಾಧ್ಯವಾಗಲಿಲ್ಲ. ಆ ನಿರಾಶೆ ದೂರಾದದ್ದು ರೂಮಿಗೆ ಮರಳಿ ರಾತ್ರಿಯಿಡೀ ಕುಳಿತು 'ಹೇಳಿ ಹೋಗು ಕಾರಣ' ಸಿಡಿಯಲ್ಲಿದ್ದ ಹಾಡುಗಳನ್ನು ಕೇಳಿಸಿಕೊಂಡಾಗಲೇ.

Thanx to BRL for all that...

Saturday, September 09, 2006

ಗ್ರಹಣ ಮತ್ತು ಚಂದ್ರ

ಎಲ್ಲೋ ಓದಿದ ನೆನಪು:

ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆ ಅದು ಬರೀ ಕಲ್ಲುಗುಂಡು

ಕವಿ ಯಾರೋ ನೆನಪಿಲ್ಲ. ಹೈಸ್ಕೂಲ್ ಕನ್ನಡ ಪಠ್ಯದಲ್ಲಿತ್ತು. ನಮ್ಮ ಮೇಷ್ಟ್ರು ಎಂ.ಜಿ. ಹೆಗಡೆ ಅದನ್ನು ಬಹಳ ಚೆನ್ನಾಗಿ ವಿವರಿಸಿದ್ದರು ಕೂಡ. ಹೇಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ತರಹ ಇರುತ್ತೆ ಎಂಬುದನ್ನ ತುಂಬ ಸುಂದರವಾಗಿ, ಕೇವಲ ನಾಲ್ಕೇ ನಾಲ್ಕು ಸಾಲುಗಳಲ್ಲಿ ಬಿಚ್ಚಿಡುತ್ತದೆ ಆ ಕವನ.

ಇಲ್ಲ, ನಾನಿವತ್ತು ಕವಿತೆಗಳ ಬಗ್ಗೆಯಾಗಲೀ, ದೃಷ್ಟಿಕೋನಗಳ ಬಗ್ಗೆಯಾಗಲೀ, ಬೇರೆ ಬೇರೆ ದೃಷ್ಟಿಕೋನಗಳ ಜನಗಳ ಬಗ್ಗೆಯಾಗಲೀ ಹೇಳುವುದಕ್ಕೆ ಹೊರಟಿಲ್ಲ. ನಾನು ಹೇಳ ಹೊರಟಿರುವುದು ಚಂದಿರನ ಬಗ್ಗೆ.

ಚಂದಿರ. ಅದೆಷ್ಟು ಚಂದದ ಹೆಸರು. ಅದೆಷ್ಟು ಸುಂದರ ಅಂವ. ಚಂದಿರ ಎಂದರೆ ಬೆಳದಿಂಗಳು. ಬೆಳದಿಂಗಳು ಎಂದರೆ ಪ್ರೀತಿ. ಪ್ರೀತಿ ಎಂದರೆ ಅವಳು. ಅವಳು ಎಂದರೆ ಪ್ರೀತಿ.

ಚಂದ್ರ ಎಂದರೆ, ಭಾವನೆಗಳನ್ನು ಸ್ಪುರಿಸುವ ಕೇಂದ್ರ ನನ್ನ ಪಾಲಿಗೆ. ಹುಣ್ಣಿಮೆಯ ರಾತ್ರಿ ಲಕ್ಷ ನಕ್ಷತ್ರಗಳ ನಡುವೆ ತಾನೇ ತಾನಾಗಿ ಮೆರೆಯುವ ಮನ್ಮತ. ಕಪ್ಪು ಕಡಲಲ್ಲಿ ಬೆಳ್ಳಿತುಂಡಿನಂತೆ ತೇಲುವವ. ಹೊಟ್ಟೆಕಿಚ್ಚಾಗೊತ್ತೆ ಅವನನ್ನು ನೋಡಿದರೆ.

ಲೆಕ್ಕ ಇಟ್ಟಿಲ್ಲವಂತೆ ಚಂದ್ರ: ಅದೆಷ್ಟೋ ಮಕ್ಕಳಿಗೆ ಮಾಡಿಸಿದ ಊಟ. ನನಗೆ ಅಮ್ಮನೂ ಹಾಗೇ ಊಟ ಮಾಡಿಸುತ್ತಿದ್ದಿದ್ದಂತೆ. ಚಂದ್ರನಿಗೊಂದು ತುತ್ತು - ನಿನಗೊಂದು ತುತ್ತು ಅಂತ ಹೇಳಿ, ಚಂದ್ರನಿಗೆ ಕೊಟ್ಟಂತೆ ಮಾಡಿ, ನಾನು ಬೆರಗುಗಣ್ಣುಗಳಲ್ಲಿ ಮೇಲ್ನೋಡುತ್ತಿರುವಾಗ, ತೆರೆದ ಬಾಯಿಗೆ ತುತ್ತು ತುರುಕಿ... ಹೀಗೇ ಅದೆಷ್ಟು ತಾಯಂದಿರು ಉಣ್ಣಿಸಿದ ತುತ್ತು ತಿಂದಿದ್ದಾನೋ ಚಂದ್ರ. ಅದಕ್ಕೇ ಅಷ್ಟು ಸ್ಮಾರ್ಟ್ ಅಂವ. ಆದರೆ ಅದು ವಿಚಿತ್ರವೂ ಹೌದು: ಅಷ್ಟೊಂದು ಮನೆಯ ಅಡಿಗೆ ಉಂಡು ಅವನ ಹೊಟ್ಟೆ ಕೆಟ್ಟು ಹೋಗಬೇಕಿತ್ತು! ಆದರೆ ಎಂದೂ ಅಂವ ಕಾಯಿಲೆ ಬಿದ್ದ ವರ್ತಮಾನ ಬಂದಿಲ್ಲ!

ನಿನ್ನೆ ರಾತ್ರಿ ಎಲ್ಲ ರಾತ್ರಿಗಳಂತಲ್ಲ. ನನ್ನ ಗೆಳೆಯ ಚಂದ್ರನಿಗೆ ಗ್ರಹಣ. ಬಿಚ್ಚು ಆಕಾಶದಲ್ಲಿ ನಕ್ಷತ್ರಗಳ ಜಾತ್ರೆ ನೆರೆದಿತ್ತು.. ಕಪ್ಪು ಕಡಲಲ್ಲಿ ತೇಲಿಬಂದ ನನ್ನ ಗೆಳೆಯ.. ಮೇಲೆ ಮೇಲೆ ಬಂದ.. ರಾತ್ರಿ ಹತ್ತೂ ವರೆಯಾಗಿತ್ತೇನೋ: ನಿಧ ನಿಧಾನವಾಗಿ ಅವನ ಒಂದು ಪಾರ್ಶ್ವದಿಂದ ಕಪ್ಪು ಆವರಿಸುತ್ತಾ ಬಂತು... ತುಂಬು ಚಂದಿರನ ಮೇಲ್ಮೈಯ ಮೇಲೆ ಯಾರದೋ ಕಪ್ಪು ನೆರಳು.. ನನಗೆ ಬೇಸರ..

ದುಂಡೀರಾಜರ ಕವನವೊಂದು ಬಿಟ್ಟೂ ಬಿಡದೆ ನೆನಪಾಗುತ್ತಿತ್ತು:

ನಾಚುತ್ತಾ ಆಕೆ
ಎದೆಯ ಮೇಲಿನ ಹೊದಿಕೆ
ಬದಿಗೆ
ಸರಿಸುತ್ತಾ ಹೋದ ಹಾಗೆ
ಪಾಡ್ಯ, ಬಿದಿಗೆ, ತದಿಗೆ..

'ಹುಣ್ಣಿಮೆ' ಎಂಬ ಶೀರ್ಷಿಕೆಯಡಿ ಅದೆಷ್ಟು ಅದ್ಭುತವಾಗಿ ಬರೆದಿದ್ದಾರೆ ಕವಿ! ನಾನು ಚಂದಿರನನ್ನು ನೋಡುತ್ತಾ ಹಾಗೇ ಟೆರೇಸಿನಲ್ಲಿ ಅಡ್ಡಾಡುತ್ತಿದ್ದೆ ಮಧ್ಯರಾತ್ರಿಯವರೆಗೂ. ಒಂದು ಗಂಟೆಯ ಮೇಲೆ ಗ್ರಹಣ ಬಿಟ್ಟಿತು. ನನ್ನನ್ನು ಕವಿದಿದ್ದ ಖಿನ್ನತೆಯೂ ಕಳೆದಂತಾಯ್ತು.

ನಂಜುಳ್ಳೆ ಹೇಳಿದ್ದು


ನಾನು ನಿನಗೇನು ಮಾಡಿದ್ದೆ ಹೇಳು?
ಕೆಸರಿನಾಳದಲ್ಲಿ ನನ್ನ ಪಾಡಿಗೆ ನಾನು ಬೆಚ್ಚಗಿದ್ದೆ
ನೀನೇ ಮೀಟಿ ಹೊರತೆಗೆದೆ ನನ್ನ.

ಒಂದು ಉದ್ದ ಕೋಲಂತೆ
ಅದರ ಒಂದು ತುದಿಗೆ ದಾರವಂತೆ
ದಾರದ ತುದಿಗೆ ಮುಳ್ಳಂತೆ
ಆ ಮುಳ್ಳಿಗೆ ನನ್ನನ್ನು ಚುಚ್ಚುತ್ತಾರಂತೆ
-ಎಲ್ಲಾ ಕೇಳಿ ಗೊತ್ತಿತ್ತು ನನಗೆ;
ಅಂದು ನಿಜವಾಯ್ತು.

ಹೌದು, ಆಗಿನ್ನೂ ನನಗೆ ಜೀವವಿತ್ತು
ದೇಹಕ್ಕೆ ಚುಚ್ಚಿಕೊಂಡ ಮುಳ್ಳು
ನೀನು ನನ್ನನ್ನು ನೀರಿನಲ್ಲಿ ಮುಳು-
ಗಿಸಿದಾಗ ಹಿತವೆನಿಸಿತ್ತು.
ಎಲ್ಲಾ ಸಡಿಲಾಗಿ ನಾನು ಕೊಸರಾಡಿ...

ಆಗಲೇ ಕಂಡಿದ್ದು ಆ ಮೀನು
ಆಸೆ ಪಟ್ಟು ನನ್ನ ಬಳಿಗೆ ಬಂತು
ನನಗೆ ಭಯವಾಗುವ ಮೊದಲೇ
ಬಾಯಿ ಹಾಕಿಬಿಟ್ಟಿತ್ತು, ಪಾಪ
ನಿನ್ನ ಸಂಚಿಗೆ ಬಲಿಯಾಗಿಬಿಟ್ಟಿತ್ತು.

ಆ ಮೀನಿನ ಸಾವಿಗೆ ನಾನೇ ಕಾರಣವಾದೆನಾ ಅನ್ನಿಸಿ
ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದೇನೆ
ಸತ್ತೂ ಬದುಕಿದ್ದೇನೆ.

ನಿನಗೇನೂ ಅನ್ನಿಸುವುದೇ ಇಲ್ಲವಾ?

ಮೀನಿಗೆ ಆಹಾರ ನಾನು;
ಅದನ್ನೇ ಬಲಿತೆಗೆದುಕೊಳ್ಳುವುದನ್ನು ಬಯಸಲಾರೆ.
ನಿನ್ನ ಆಹಾರ ಮೀನು;
ಅದಕ್ಕೇ, ಅದು ಸುಮ್ಮನೆ ಕಣ್ಮುಚ್ಚಿತು
ನೀನು ಯಾರಿಗೂ ಆಹಾರವಲ್ಲ ನೋಡು;
ಹಾಂ, ಗೊತ್ತಾಯಿತು, ಅದಕ್ಕೇ ನೀನು ಹೀಗಾಡುತ್ತೀ.

Tuesday, September 05, 2006

ಸಿಗ್ನಲ್ಲಿನ ಕ್ಷಣದ ಚಿತ್ರಗಳು

ಓಡುತ್ತಿರುವ ಬಸ್ಸುಗಳು ಕಾರುಗಳು ಬೈಕುಗಳು ಎಲ್ಲಾ ಕೆಂಪು ಸಿಗ್ನಲ್ಲು ಬೀಳುತ್ತಿದ್ದಂತೆ ಗಕ್ಕನೆ brake ಹೊಡೆದು ಒಂದು ಕ್ಷಣದ ಮಟ್ಟಿಗೆ ನಿಲ್ಲುತ್ತವೆ. ಹಾಗೆ ಅವು ನಿಲ್ಲುತ್ತಿದ್ದಂತೇ ಕೌಂಟ್‍ಡೌನ್ ಶುರುವಾಗುತ್ತದೆ. ಎಂಬತ್ತು, ಎಪ್ಪತ್ತೊಂಬತ್ತು, ಎಪ್ಪತ್ತೆಂಟು, ಎಪ್ಪತ್ತೇಳು, ಎಪ್ಪತ್ತಾರು.... ಅದು ಮೂರು, ಎರಡು, ಒಂದು, ಸೊನ್ನೆಯಾದ ಮೇಲೆ ಹಸಿರು ಬಣ್ಣದ ದೀಪ ಹೊತ್ತಿಕೊಳ್ಳುತ್ಥದೆ. ಅಷ್ಟರವರೆಗೆ ಕಾಯುವುದೇ ಇದೆ ರಗಳೆ.

ಕೆಲವರು ತಮ್ಮ ವೆಹಿಕಲ್ಲನ್ನು off ಮಾಡಿದ್ದಾರೆ. ಇನ್ನು ಕೆಲವರು ಹಾಗೇ ನಿಲ್ಲಿಸಿಕೊಂಡಿದ್ದಾರೆ. ಎಲ್ಲೈಸಿ ಏಜೆಂಟ್ ಕಾಮತ್ತರ ಗಾಡಿ ಅದೆಷ್ಟೇ brake ಹೊಡೆದರೂ ನಿಲ್ಲದೇ, ಸ್ಕೂಟರಿನ ಮುಂದಿನ ಗಾಲಿ ಎದುರುಗಡೆ ನಿಂತಿದ್ದ ಬಿಎಂಟೀಸಿ ಬಸ್ಸಿನ ಅಡಿಗೇ ಹೋಗಿಬಿಟ್ಟಿದೆ. 'ಇನ್ನೊಂದು ಸ್ವಲ್ಪ ಮುಂದೆ ಹೋಗಿದ್ದಿದ್ರೆ ಹ್ಯಾಂಡಲು ಹೋಗಿ ಬಸ್ಸಿಗೆ ಗುದ್ದೇ ಬಿಟ್ಟಿರೋದು, ಸಧ್ಯ!' ಅಂದ್ಕೊಂಡಿದಾರೆ ಕಾಮತರು. ಹಿಂದಕ್ಕಾದರೂ ತಗೊಳ್ಳಾಣಾಂದ್ರೆ ಕಾರೊಂದು ಬಂದು ಇವರ ಸ್ಕೂಟರಿನ ಹಿಂದೇ, ಒಂದೇ ಒಂದು ಇಂಚು ಗ್ಯಾಪು ಕೊಟ್ಟು ನಿಂತಿದೆ. 'ಅಯ್ಯೋ, ಈ ಬಸ್ಸಿನವನು ಸೀದಾ ಮುಂದೆ ಹೋದ್ರೆ ಸಾಕಿತ್ತು. ಒಂಚೂರು ಹಿಂದೆ ಬಂದ್ರೂ ನಂಗೆ ಗ್ರಾಚಾರ ತಪ್ಪಿದ್ದಲ್ಲ...' -ಕಾಮತರು ಮನಸ್ಸಿನಲ್ಲೇ ದೇವರನ್ನು ನೆನೆಯುತ್ತಿದ್ದಾರೆ.

ಮುಂದೆ, ಸಿಗ್ನಲ್ ಬ್ರೇಕ್ ಮಾಡಿ ಗಾಡಿ ಓಡಿಸಿದ್ದಕ್ಕಾಗಿ ಕಾಲೇಜು ಹುಡುಗನೊಬ್ಬನನ್ನು ಟ್ರಾಫಿಕ್ ಪೋಲೀಸ್ ಹಿಡಿದುಕೊಂಡು ದಂಡ ವಸೂಲಿ ಮಾಡುತ್ತಿದ್ದಾನೆ. ಅವನ ಬೆನ್ನಿಗೆ ಕಚ್ಚಿಕುಳಿತ ಹುಡುಗಿ ಬೆಪ್ಪುತಕಡಿಯಂತೆ ಆ ಪೋಲೀಸನ ಟೋಪಿಯನ್ನೇ ನೋಡುತ್ತಿದ್ದಾಳೆ.

ಜೀಬ್ರಾಲೈನಿಗೆ ಸರಿಯಾಗಿ brake ಹೊಡೆದು ನಿಲ್ಲಿಸಿಕೊಂಡಿರುವ ಗಾಡಿಯಲ್ಲಿ ಕುಳಿತ ಮಾರ್ಕೆಟಿಂಗ್ ವೃತ್ತಿಯಲ್ಲಿರುವ ಅಭಿಜಿತ್ ತನ್ನ ಹೆಲ್ಮೆಟ್ಟಿನ ಕಿಟಕಿಯಿಂದಲೇ ರೋಡ್ ಕ್ರಾಸ್ ಮಾಡುತ್ತಿರುವ ಹುಡುಗಿಯನ್ನು ನೋಡುತ್ತಿದ್ದಾನೆ. ಕೊಳಕಾದ, ಹರುಕು ಅಂಗಿಯ, ಕೈಯಲ್ಲೊಂದು ದೇವರ ಫೋಟೋ ಹಿಡಿದು ದುಡ್ಡು ಕೇಳಲು ಬರುತ್ತಿರುವ ಹುಡುಗನನ್ನು ಕಂಡದ್ದೇ, ಹಸಿರು ಲಾನ್ಸರ್ ಕಾರಿನ ಕಿಟಕಿಯ ಅಪಾರದರ್ಶಕ ಗಾಜು ಮೇಲಕ್ಕೆ ಸರಿದಿದೆ.

ಬಿಎಂಟೀಸಿ ಬಸ್ಸಿನಲ್ಲಿ ಕುಳಿತ ಜನ ಆಕಳಿಸುತ್ತಾ ಕಿಟಿಕಿಯಾಚೆಗೆ ತಲೆಹಾಕಿ ಇನ್ನೂ ಎಷ್ಟು ಸೆಕೆಂಡು ಬಾಕಿಯಿದೆ ಅಂತ ನೋಡುತ್ತಿದ್ದಾರೆ. ಇನ್ನೇನು ಮುಗೀತಾ ಬಂತು; ಆಗಲೇ ನಲವತ್ತೊಂಬತ್ತು, ನಲವತ್ತೆಂಟು, ನಲವತ್ತೇಳು... ಇನ್ನು ಸ್ವಲ್ಪ ಹೊತ್ತು; ಬಸ್ಸು start ಆಗಿ ಬಿಡುತ್ತದೆ.

ಕೈನೆಟಿಕ್ಕಿನ ಹುಡುಗಿ ತನ್ನ ಕೊರಳಲ್ಲಿ ನೇತುಹಾಕಿಕೊಂಡಿರುವ ಮೊಬೈಲನ್ನು ಕೈಗೆತ್ತಿಕೊಂಡು 'missed call' ಯಾರದ್ದು ಅಂತ ನೋಡುತ್ತಿದ್ದಾಳೆ. ಮೊಳಕೈ ತುಂಬಾ ಯಾವ್ಯಾವುದೋ ವೃತ್ತಪತ್ರಿಕೆ, ವಾರಪತ್ರಿಕೆ, ಮ್ಯಾಗಜೀನುಗಳನ್ನು ಜೋಲಿಸಿಕೊಂಡ ಕುಡಿಮೀಸೆಯ ಯುವಕ ಕಾರಿನ ಕಿಟಕಿ, ಆಟೊರಿಕ್ಷಾಗಳ ಅಕ್ಕಪಕ್ಕ ಎಲ್ಲಾ ಓಡಾಡುತ್ತಿದ್ದಾನೆ. ಇನ್ನೊಂದು ಸ್ವಲ್ಪ ಹೊತ್ತಿಗೇ ಇವತ್ತಿನ 'ಸಂಜೆವಾಣಿ' ರಿಲೀಸ್ ಆಗುತ್ತದೆ. ಆಗ ಈ ಯುವಕ, ಕೈ ತುಂಬಾ ಸಂಜೆವಾಣಿಗಳನ್ನೇ ತುಂಬಿಕೊಂಡು, 'ಬಿಸಿ ಬಿಸೀ ಸುದ್ಧಿ...' ಅಂತ ಕೂಗುತ್ತಾ ಓಡಾಡುತ್ತಾನೆ. ಅದರಲ್ಲಿದ್ದುದು ಬಿಸೀ ಸುದ್ಧಿಯೇ ಆಗಿದ್ದಲ್ಲಿ ಇವತ್ತು ರಾತ್ರಿ ಅವನ ಹೊಟ್ಟೆಗೆ ಊಟ ಸಿಕ್ಕುತ್ತದೆ; ಅದಿಲ್ಲದಿದ್ದರೆ ಇಲ್ಲ.

ಸಿಗ್ನಲ್ಲು ಮುಗಿಯುತ್ತಿದೆ: ಅಗೋ, ಆಗಲೇ ಹದಿನೆಂಟು, ಹದಿನೇಳು.... ಉಹೂಂ, ಇನ್ನೂ ಪಾಪ್ ಮ್ಯೂಸಿಕ್ ಹಾಕಿಕೊಂಡು ಕಾರೊಳಗೆ ಕುಳಿತಿರುವ software engineerನ ಸಿಗರೇಟು ಮುಗಿದಿಲ್ಲ. ಅವನು ಬಿಟ್ಟ ಹೊಗೆ ಕಾರೊಳಗೆಲ್ಲಾ ತುಂಬಿಕೊಂಡಿದೆ.

ಅರೆ! ಸಿಗ್ನಲ್ಲು ಮುಗಿಯುತ್ತಿದೆ.. ಒಂಬತ್ತು, ಎಂಟು, ಏಳು... ಎಲ್ಲಾ ತಮ್ಮ ವೆಹಿಕಲ್ಲನ್ನು ಸ್ಟಾರ್ಟ್ ಮಾಡುತ್ತಿದ್ದಾರೆ.. ಇಲ್ಲ, 'ತಾಯಿಯ ಆಶೀರ್ವಾದ' ಎಂಬ ಬೋರ್ಡಿರುವ ಆಟೋ ಅದೇಕೋ ಸ್ಟಾರ್ಟೇ ಆಗುತ್ತಿಲ್ಲ. ಡ್ರೈವರು ಈಗ ಪುಳಕ್ಕನೆ ಕೆಳಗಿಳಿದು, ಹಿಂದೆ ಬಂದು, ಅಡಿಷನಲ್ ಸಿಲಿಂಡರಿಗೆ ಕನೆಕ್ಟ್ ಮಾಡುತ್ತಿದ್ದಾನೆ. ಅಗೋ ಸಿಗ್ನಲ್ಲು ಮುಗಿಯಿತು.. ಎರಡು, ಒಂದು, ಸೊನ್ನೆ..... ಆಟೋ ಸ್ಟಾರ್ಟ್ ಆಗುತ್ತಿದೆ.. ಹಿಂದಿನಿಂದ ಒಂದೇ ಸಮನೆ ಹಾರನ್ನುಗಳ ಶಬ್ದ ಕೇಳಿಬರುತ್ತಿದೆ. ಅಬ್ಬ, ಆಟೋ ಹೊರಟಿತು. ಅದರ ಹಿಂದಿನಿಂದಲೇ, ಕಾಮತ್ತರ ಗಾಡಿಯೂ ಸೇರಿದಂತೆ, ಒಂದೊಂದೇ ವೆಹಿಕಲ್ಲುಗಳು ಭರಭರನೆ ಓಡಹತ್ತಿವೆ: ಬಿಡುಗಡೆಯ ಖುಷಿಯಲ್ಲಿ.

(ಬರೆದದ್ದು: ೨೬.೦೯.೨೦೦೪)

Monday, September 04, 2006

ನನ್ನ ನೆರಳು

ನಮ್ಮೂರಿನ ಮಣ್ಣು ರಸ್ತೆಯಲ್ಲಿ
ಕಡುಗತ್ತಲ ರಾತ್ರಿಯಲ್ಲಿ
ಬೀದಿ ದೀಪಗಳ ಬೆಳಕಿನಲ್ಲಿ ನಡೆಯುತ್ತಿದ್ದೇನೆ.

ಅಲ್ಲೊಂದು ಇಲ್ಲೊಂದು ದೀಪ
ಒಂದರ ಬೆಳಕು ಮುಗಿದ ನಂತರ ಮತ್ತೊಂದರದ್ದು ಶುರುವಾಗುತ್ತದೆ.

ಎದುರುಗಡೆಯ ದೀಪದ ಬೆಳಕು
ನನ್ನ ಮೈಮೇಲೆ ಬಿದ್ದದ್ದೇ
ನನ್ನ ನೆರಳು ಹಿಂದೆ ಸರಿಯುತ್ತದೆ.
ಅದು ನನಗಿಂತ ಉದ್ದ, ಊದ್ದವಾಗುತ್ತದೆ..
ಕ್ರಮೇಣ ಬರುಬರುತ್ತಾ ಚಿಕ್ಕದಾಗುತ್ತಾ ನನ್ನದೇ ಅಳತೆಗೆ ಬರುತ್ತದೆ..
ಕೊನೆಗೆ ನನಗಿಂತಲೂ ಚಿಕ್ಕದಾಗುತ್ತಾ, ದೀಪದ ಕೆಳಗಿನ ಒಂದು ಬಿಂದುವಿನಲ್ಲಿ ಇಲ್ಲವಾಗುತ್ತದೆ.
ಇನ್ನೊಂದು ಹೆಜ್ಜೆ ಮುಂದೆ ಇಟ್ಟರೆ ಸಾಕು:
ನನ್ನ ಮುಂದೆ ಸೃಷ್ಟಿಯಾಗುತ್ತಾ, ದೊಡ್ಡದಾಗುತ್ತಾ,
ನನ್ನ ಮುಂದಿನ ಎಷ್ಟೋ ಜಾಗವನ್ನು ಆಕ್ರಮಿಸಿಕೊಂಡುಬಿಡುತ್ತದೆ.

ನನ್ನ ಚಪ್ಪಲಿ - ಅದರ ಚಪ್ಪಲಿ ಒಂದೇ;
ನನ್ನ ಕಾಲಿನ ತುದಿ ಅದರ ಕಾಲಿನ ತುದಿಗೆ
ಸದಾ ಜಾಯಿಂಟಾಗೇ ಇರುತ್ತೆ;
ಅದಕ್ಕೆ ನನ್ನನ್ನು ಬಿಟ್ಟಿರಲು ಆಗುವುದಿಲ್ಲ;
ನನಗೂ.

ಬೀದಿ ದೀಪಗಳ ಸಾಲು ಮುಗಿಯುವುದೇ ಇಲ್ಲ.
ನಾನು ಈ ಕಪ್ಪನೆಯ ಮನುಷ್ಯನನ್ನು ಹಿಂಬಾಲಿಸುತ್ತಾ,
ಅವನು ನನ್ನನ್ನು ಹಿಂಬಾಲಿಸುತ್ತಾ ಸಾಗುತ್ತಿದ್ದೇವೆ.
ಬರ್‍ನಾದ, ಟ್ಯೂಬಿಲ್ಲದ ಒಂದು ಸ್ಥಳದಲ್ಲಿ ಇವನಿಲ್ಲದೇ ನನಗೆ ಬೇಜಾರು.
ಅಲ್ಲಿ ನನಗೆ ನಾನೂ ಕಾಣಿಸುವುದಿಲ್ಲ.
ಒಂಥರಾ ಭಯವಾಗಲು ಶುರುವಾಗುತ್ತದೆ..
ನಾನು ಬೇಗ ಬೇಗನೆ ನಡೆಯುತ್ತೇನೆ.
ದೂರದಲ್ಲೊಂದು ದೀಪ-ದೀಪದ ಬೆಳಕು: ಚಂದ್ರ-ಬೆಳದಿಂಗಳಂತೆ.

ಮತ್ತೆ ಈತ ಕಾಣಿಸಿಕೊಳ್ಳುತ್ತಾನೆ.
ಹಿಂದಿನಿಂದ ಮುಂದೆ ಬರುತ್ತಾನೆ.
ನನ್ನ ಗೆಳೆಯನಂತೆ, ಬೆಂಗಾವಲಿನವನಂತೆ ಭಾಸವಾಗುತ್ತಾನೆ.
ಆಪ್ತನಾಗುತ್ತಾನೆ.

ಇವನಿಗೆ ಒಂದು ಹೆಸರಿಡಬೇಕು ಅಂದುಕೊಳ್ಳುತ್ತೇನೆ.
ಅಸಲು ಅಸ್ಥಿತ್ವವೇ ಇಲ್ಲದ, ಕಣ್ಣಿರದ, ಬಾಯಿರದ,
ಮಾತನಾಡದ ಈ ಆಕೃತಿಗೇಕೆ ಹೆಸರು ಅನ್ನಿಸುತ್ತದೆ.
ಎಷ್ಟೆಂದರೂ ಅದು ನಾನೇ ಅಲ್ಲವೇ ಅನ್ನಿಸುತ್ತದೆ.
ಹಾಗನಿಸಿದ ಕೂಡಲೇ ಅದರ ಮೇಲೆ ಅಧಿಕಾರೀ ಮನೋಭಾವ ಬರುತ್ತದೆ.
'ಏಯ್, ನೀನ್ಯಾಕೆ ನನಗಿಂತ ಉದ್ದವಾಗಿದ್ದೀಯ?' -ಕೇಳುತ್ತೇನೆ.
ಉತ್ತರವಿಲ್ಲ; ಮೌನ.

ದೀಪದ ಸಾಲಿನ ರಸ್ತೆ ಮುಂದುವರೆದಿದೆ.
ನನಗೋ ಈತನ ಸಂಗಡ ಬೇಸರ ತಂದಿದೆ.
ಈತನಿಂದ ಹೇಗಾದರೂ ಬೇರಾಗಬೇಕು ಅನ್ನಿಸುತ್ತಿದೆ.
ಥಟ್ಟಂತ ಐಡಿಯಾ ಹೊಳೆಯುತ್ತದೆ:
ದೀಪ ಹಿಂದಾದ ಕ್ಷಣವೊಂದರಲ್ಲಿ,
ನಡೆಯುತ್ತಿದ್ದ ನಾನು ಒಂದು ಜಂಪ್ ಮಾಡಿದೆ..
ವ್ಹಾವ್! ಆತ ನನ್ನನ್ನು ಬಿಟ್ಟು, ಸದಾ ಕಾಲಿಗೆ ಹೊಂದಿಕೊಂಡೇ ಇರುವುದನ್ನು ಬಿಟ್ಟು,
ತಾನೂ ಒಂದು ಕುಪ್ಪಳಿಕೆ ಹಾರಿಬಿಡಬೇಕೇ...!
ಮಜಾ ಅಂದರೆ, ನಾನು ನೆಲದಿಂದ ಮೇಲೆ ಹಾರಿದೆ;
ಆತ ನೆಲದಲ್ಲೇ ಹಾರಿದ.

ಸದಾ ನೆಲಕ್ಕೆ ಅಂಟಿಕೊಂಡೇ ಇರಬೇಕಾದ ಅವನ ಸ್ಥಿತಿಯ ಬಗ್ಗೆ ನನಗೆ ಕನಿಕರವಾಗುತ್ತಿದೆ..
ಅವನಿಗೊಂದು ಸ್ವಂತ ಅಸ್ಥಿತ್ವವಿದ್ದಿದ್ದರೆ...
ಬಾಹ್ಯ ರೂಪ ಕೊಡುವಂತಿದ್ದಿದ್ದರೆ...
ಆತನೂ ನನ್ನಂತೆಯೇ ನನ್ನ ಜೊತೆಯಲ್ಲೇ ನಡೆಯುವಂತಿದ್ದಿದ್ದರೆ...

ಬೀದಿದೀಪದ ಸಾಲು ಮುಂದುವರೆದಿದೆ...


(ಬರೆದದ್ದು: ಬೆಂಗಳೂರಿನಲ್ಲಿ, ಜ್ವರದ ತಾಪಕ್ಕೆ ರಜೆ ಹಾಕಿದ ಒಂದು ದಿನ,
ಊರಿನ ನೆನಪಿನ ನೆರಳಲ್ಲಿ.. //೨೦.೦೯.೨೦೦೩)

Saturday, September 02, 2006

ಕಾಣೆಯಾದವರ ಪಟ್ಟಿಯಲ್ಲಿ ನಾನು!

ಗೆಳತಿ ನಿಮ್ಮಿ ಬರೆದುಕೊಟ್ಟ ಆಟೋಗ್ರಾಫಿನ ಕೊನೆಯ ಸೆಂಟೆನ್ಸುಗಳು ಹೀಗಿದ್ದವು:

"Be a good human, be a good student, be a good son, be a good husband, be a good father, be a good citizen... then only your life is worth living"

ಇವು ಕೇವಲ ಆಟೋಗ್ರಾಫ್ ಆಗಿರದೆ, ನನಗೆ ಕೊಡುವ advise ಆಗಿರದೆ, ನೇರವಾಗಿ ನನ್ನ roleಗಳ ಬಗ್ಗೆ ನನಗೇ ಪರಿಚಯ ಮಾಡಿಕೊಡುವ ಪ್ರಯತ್ನವೂ ಆಗಿತ್ತು ಅಂತ ಅನ್ನಿಸೊತ್ತೆ.

ನಿಜ, ನಾವೆಲ್ಲಾ ಬದುಕುವ ಒಂದೇ ಒಂದು ಬದುಕಿನಲ್ಲಿ ಎಷ್ಟೆಲ್ಲಾ ಪಾತ್ರಗಳನ್ನು ನಿರ್ವಹಿಸುತ್ತೇವೆ! ಅಪ್ಪನಿಗೆ ಮಗ, ಅಜ್ಜಿಗೆ ಮೊಮ್ಮಗ, ಮಾವನಿಗೆ ಅಳಿಯ, ಮಾವನ ಮಗಳಿಗೆ ಭಾವಯ್ಯ, ಹೆಂಡತಿಗೆ ಗಂಡ, ಮಗನಿಗೆ ಅಪ್ಪ, ಮೊಮ್ಮಗನಿಗೆ ಅಜ್ಜ! ಊರ ಜನರಿಗೆ ಗ್ರಾಮಸ್ಥ, ಬೇರೆ ಊರಿಗೆ ಹೋದರೆ ನೆಂಟ, ಹೊಸ ಊರಿಗೆ ಹೋದರೆ ಅತಿಥಿ, ಆಫೀಸಿನಲ್ಲಿ ಮ್ಯಾನೇಜರ್ರು, ಆಳಿಗೆ ಯಜಮಾನ, ಅಂಗಡಿಯವನಿಗೆ ಕಸ್ಟಮರ್ರು.... ಹೀಗೇ.

ಈಗ ನನ್ನನ್ನೇ ತೆಗೆದುಕೊಳ್ಳಿ: ಅಪ್ಪ 'ಪಾಪು' ಅನ್ನುತ್ತಾನೆ, ಅಮ್ಮ 'ಅಪ್ಪಿ' ಅನ್ನುತ್ತಾಳೆ, ಮಾವ 'ಗುಂಡ' ಅನ್ನುತ್ತಾನೆ, ಊರ ಹುಡುಗರೆಲ್ಲ 'ಸೂರು' ಅನ್ನುತ್ತಾರೆ, ಪ್ರೀತಿಯ ಕೆಲವು ಗೆಳೆಯರು 'ಸುಶಿ' ಅನ್ನುತ್ತಾರೆ, ಆಫೀಸಿನಲ್ಲಿ ನಾನು 'ಮಿಸ್ಟರ್ ಸುಶ್ರುತ್', ಆಫೀಸಿಗೆ ಬರುವ client ಗಳಿಗೆ 'ಸರ್'!

ಇಷ್ಟೆಲ್ಲಾ designationಗಳ ಮಧ್ಯೆ 'ನಾನು' ಕಳೆದುಹೋಗಿದ್ದೇನೇನೋ ಅಂತ ಒಮ್ಮೊಮ್ಮೆ ಭಯವಾಗುತ್ತದೆ. ಇವುಗಳೆಲ್ಲದರ ಮಧ್ಯೆ 'ನಾನು' ಯಾರು ಎಂಬ ಪ್ರಶ್ನೆ ಒಮ್ಮೊಮ್ಮೆ ಎದ್ದುಬಿಡುತ್ತದೆ. ಅಥವಾ ಇವೆಲ್ಲವೂ ಸೇರಿದರೇ ನಾನಾ? ಹಾಗೆನಿಲ್ಲ; ಇದರಲ್ಲಿ ಒಂದೆರಡು ಪಾತ್ರಗಳನ್ನು ತೆಗೆದರೂ ನಾನು ನಾನಾಗೇ ಇರುತ್ತೇನಲ್ಲಾ, ಎಲ್ಲವನ್ನೂ ತೆಗೆದರೂ.... ಅರೆ! ಹಾಗಾದರೆ ನಾನೆಲ್ಲಿ?

'ನಾನು' ಯಾರು?

Friday, September 01, 2006

ನಾನು ಓದಿದ ಪುಸ್ತಕ (೨)

ದಾಟು: ಜಾತಿ ಸಮಸ್ಯೆಯ ಒಳನೋಟ

ತಿರುಮಲಾಪುರದ ದೇವಸ್ಥಾನದ ಅರ್ಚಕ ವೆಂಕಟರಮಣಯ್ಯನವರ ಮಗಳು ಸತ್ಯಭಾಮಳೂ ಅದೇ ಊರಿನ ಶಾಸಕ ಮೇಲಗಿರಿ ಗೌಡರ ಮಗ ಶ್ರೀನಿವಾಸನೂ ಪ್ರೀತಿಸುತ್ತಿದ್ದಾರೆ, ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ತಿಳಿದು ಕೆರಳುವ ಸತ್ಯಳ ತಂದೆ ಬೆಂಗಳೂರಿಗೆ ಹೋಗಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದು ಬುದ್ಧಿ ಹೇಳುತ್ತಾರೆ. ಶ್ರೀನಿವಾಸನ ಪೋಷಕರೂ ಮಗನಿಗೆ ಬುದ್ಧಿ ಹೇಳುತ್ತಾರೆ. ಆದರೆ ಸತ್ಯ ನಿರ್ಧಾರ ಬದಲಿಸುವುದಿಲ್ಲ; ಶ್ರೀನಿವಾಸ ನಿರ್ಧಾರ ಬದಲಿಸಿ ಬೇರೆ ಮದುವೆಯಾಗುತ್ತಾನೆ.

ಇತ್ತ ಮಗಳನ್ನು ಚಪ್ಪಲಿಯಲ್ಲಿ ಹೊಡೆದು ಬಂದನಂತರ ವೆಂಕಟರಮಣಯ್ಯರವರನ್ನು ಚಿಂತೆ ಆವರಿಸಿಕೊಳ್ಳುತ್ತದೆ. ವೆಂಕಟರಮಣಯ್ಯನವರಿಗೆ ಒಂದು ಚರಿತ್ರೆ ಇರುತ್ತದೆ. ಅವರ ಹೆಂಡತಿ ಪ್ರಾಯದಲ್ಲೇ ತೀರಿಕೊಂಡಿರುತ್ತಾರೆ. ದೇವಸ್ಥಾನದ ಅರ್ಚಕರಾಗಿದ್ದ ಇವರು ಮೊದಮೊದಲು ಹೆದರಿದರೂ, ಕೊನೆಗೂ ದೈಹಿಕ ವಾಂಛೆಗಳನ್ನು ಗೆಲ್ಲಲಾಗದೆ, ಮಾತಂಗಿ ಎಂಬ ಹರಿಜನರ ವಿಧವೆ ಹೆಂಗಸಿನೊಂದಿಗೆ ಸಂಬಂಧವಿರಿಸಿಕೊಳ್ಳುತ್ತಾರೆ. ಈ ಗೌಪ್ಯ ಸಂಬಂಧಕ್ಕೆ ಸುಮಾರು ಮೂರು ವರ್ಷಗಳ ಕಾಲವಾಗಿರುತ್ತದೆ. ಆಗ ಒಂದು ಎಡವಟ್ಟು ಆಗಿಬಿಡುತ್ತದೆ. ಮಾತಂಗಿ ಗರ್ಭವತಿಯಾಗಿಬಿಡುತ್ತಾಳೆ. ಗುಡಿಯ ಅರ್ಚಕರಿಗೆ ಕೆಟ್ಟ ಹೆಸರು ಬರುವುದನ್ನು ಬಯಸದ ಅವಳು ದೂರದ ಊರೊಂದಕ್ಕೆ ಹೋಗಿ, ಅಲ್ಯಾರೊಂದಿಗೋ ಮದುವೆಯಾಗಿ, ಮಗುವನ್ನು ಹೆತ್ತು ಸಾಕಿಕೊಳ್ಳುತ್ತಾಳೆ. ಇದೆಲ್ಲಾ ಆಗಿದ್ದು ಈಗ ಹದಿನೈದಿಪತ್ತು ವರ್ಷಗಳಾಗಿವೆ.

ಈ ಮಧ್ಯೆ ದೇಶದಲ್ಲಿ ಜಾತಿಮತ ಭೇದವೆಲ್ಲಾ ದೂರವಾಗಬೇಕು ಅಂತ ಕ್ರಾಂತಿಯಾಯಿತು. ಹೊಲೆಯ, ಮಾದಿಗರನ್ನು 'ಹರಿಜನರು' ಅಂತ ಕರೆಯಬೇಕು ಎಂದಾಯಿತು. ಅವರೆಲ್ಲರಿಗೂ ದರಖಾಸ್ತಿನಲ್ಲಿ ಸರ್ಕಾರ ಜಮೀನು ಮಂಜೂರು ಮಾಡಿತು. ಮಂಗಳೂರು ಹೆಂಚಿನ ಮನೆ ಕಟ್ಟಿಸಿಕೊಟ್ಟಿತು. ಹರಿಜನರನ್ನು ಅಸ್ಪೃಷ್ಯರನ್ನಾಗಿ ಕಾಣಬಾರದು ಎಂದರು. ಅವರನ್ನು ದೇವಸ್ಥಾನದೊಳಕ್ಕೆ ಬಿಡುವಂತೆಯೂ ಆಯಿತು.

ಈಗ ವೆಂಕಟರಮಣಯ್ಯನವರಿಗೆ ಇವೆಲ್ಲ ನೆನಪಾಗಿ, ಸತ್ಯಳ ವರ್ತನೆ, ವಾದಗಳೊಂದಿಗೆ ಹೋಲಿಸಿಕೊಳ್ಳುವಂತಾಗಿ, ಗೊಂದಲವಾಗಿ, ಅದೇ ಯೋಚನೆ ಮಾಡಿ ಮಾಡಿ, ಹುಚ್ಚೇ ಹಿಡಿದುಬಿಡುತ್ತದೆ. ಅವರು ಮನೆ ಬಿಟ್ಟು, ದೇವಸ್ಥಾನದ ಪೂಜೆ ಬಿಟ್ಟು, ತೋಟದಲ್ಲಿ ಗುಡಿಸಲೊಂದನ್ನು ಕಟ್ಟಿಕೊಂಡು ಬದುಕಲು ಶುರುವಿಡುತ್ತಾರೆ.

ಪ್ರೇಮಭಂಗವಾಗಿ, ವಿಷಯ ಬಹಿರಂಗವಾಗಿ, ಸಮಾಜದಲ್ಲಿ ಹೆಸರು ಕಳೆದುಕೊಂಡು, ಅದರಿಂದಾಗಿ ಕೆಲಸ ಕಳೆದುಕೊಂಡು, ಸೀರೆ ಅಂಗಡಿಯೊಂದರಲ್ಲಿ ಕೂಲಿ ಮಾಡಿಕೊಂಡಿದ್ದ ಸತ್ಯ ಅಪ್ಪನ ಪರಿಸ್ಥಿತಿಯ ಸುದ್ಧಿ ಕೇಳಿ ಊರಿಗೆ ಧಾವಿಸುತ್ತಾಳೆ. ತೋಟದ ಗುಡಿಸಲಿನಲ್ಲಿ ಹುಚ್ಚು ಹಿಡಿದಿದ್ದ ತಂದೆ ವೆಂಕಟರಮಣಯ್ಯ, ಸತ್ಯಳಿಗೆ ಯಜ್ನೋಪವೀತ ಧಾರಣೆ ಮಾಡುತ್ತಾರೆ. 'ಇನ್ನು ಮೇಲೆ ಹೋಮ, ಹವನ ಮಾಡು' ಅಂತ ಭೋದಿಸುತ್ತಾರೆ. ಅವರ ಹುಚ್ಚು ಹುಚ್ಚು ಮಾತುಗಳ ಸಹಾಯದಿಂದಲೇ ಸತ್ಯ ಮಾತಂಗಿಯ ಜತೆಗಿನ ಗೌಪ್ಯ ಸಂಬಂಧದ ಇತಿಹಾಸವನ್ನು ಪತ್ತೆ ಮಾಡುತ್ತಾಳೆ. ಅವರನ್ನು ಮಾನಸಿಕ ರೋಗ ತಜ್ನರ ಬಳಿಗೊಯ್ದು ಕಾಯಿಲೆ ವಾಸಿ ಮಾಡಿಸಿಕೊಂಡು ಬರಬೇಕು ಎಂಬ ಪ್ರಯತ್ನಗಳು ನಡೆಯುತ್ತಿರುವಾಗಲೇ ವೆಂಕಟರಮಣಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸತ್ಯ ತಾನು ಇನ್ನು ಇದೇ ಗುಡಿಸಲಿನಲ್ಲಿ ಬದುಕಬೇಕು ಅಂತ ತೀರ್ಮಾನಿಸುತ್ತಾಳೆ. ಅಪ್ಪ ಬರೆದಿಟ್ಟಿದ್ದ ವಿಲ್ ಅವಳ ನೆರವಿಗೆ ಬರುತ್ತದೆ. ತಾನು ಶೂದ್ರಳಂತೆ ಬದುಕಬೇಕಂತ ನಿರ್ಧರಿಸುತ್ತಾಳೆ. ಮಾತಂಗಿಗಿಂತ ಶೂದ್ರಳಾಗಬೇಕೆಂದುಕೊಳ್ಳುತ್ತಾಳೆ.
ಅತ್ತ ಶ್ರೀನಿವಾಸನ ಹೆಂಡತಿ ಹೆರಿಗೆಯ ಸಮಯದಲ್ಲಿ ತೀರಿಕೊಳ್ಳುತ್ತಾಳೆ. ಶ್ರೀನಿವಾಸ ಒಬ್ಬಂಟಿಯಾಗುತ್ತಾನೆ. ಸತ್ಯಳ ನೆನಪು ಕಾಡಲಾರಂಭಿಸುತ್ತದೆ. ಅವನಿಗೆ ಮತ್ತೊಂದು ಮದುವೆ ಮಾಡುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಅವನ ಪೋಷಕರು 'ಹೋಗಲಿ, ಸತ್ಯಳನ್ನೇ ಮಾಡಿಕೋ ಹಾಗಾದರೆ' ಅನ್ನುತ್ತಾರೆ. ಆದರೆ ಈ ಬಾರಿ ಸತ್ಯಳೇ ಮದುವೆಯನ್ನು ನಿರಾಕರಿಸುತ್ತಾಳೆ ಮತ್ತು ಹರಿಜನರ ಬೆಟ್ಟಯ್ಯನ ಮಗಳು ಮೀರಾಳನ್ನು ಮಾಡಿಕೋ ಎಂದು ಶ್ರೀನಿವಾಸನಿಗೆ ಸಲಹೆ ಕೊಡುತ್ತಾಳೆ. ಅವಳು ಕೊಟ್ಟ ಸಲಹೆಯೇ ಗಟ್ಟಿಯಾಗಿ ಶ್ರೀನಿವಾಸನಿಗೆ ಮೀರಾಳ ಮೇಲೆ ಎಂಥದೋ ಆಕರ್ಷಣೆ ಉಂಟಾಗಿ ಪ್ರೇಮ ಶುರುವಾಗುತ್ತದೆ. ಅವರಿಬ್ಬರೂ ಮದುವೆ ಮಾಡಿಕೊಳ್ಳುವುದು ಅಂತ ತೀರ್ಮಾನಿಸುತ್ತಾರೆ.

ಆದರೆ ಶ್ರೀನಿವಾಸನ ಮನೆಯಿಂದ ಈ ಬಗ್ಗೆ ತೀವ್ರವಾದ ವಿರೋಧ ಬರುತ್ತದೆ. ಬೆಟ್ಟಯ್ಯನವರೂ ಮನಸ್ಪೂರ್ತಿಯಿಂದ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಬುದ್ಧಿ ಹೇಳಿದರೂ ಸರಿಹೋಗದ ಶ್ರೀನಿವಾಸನನ್ನು ತಹಬಂದಿಗೆ ತರಲು ಅವನ ತಂದೆ ಉಪಾಯ ಮಾಡಿ ಸತ್ಯಳ ಅಣ್ಣ ವೆಂಕಟೇಶನನ್ನು ಈ ಕೆಲಸಕ್ಕೆ ನೇಮಿಸುತ್ತಾರೆ. ವೆಂಕಟೇಶ ಶ್ರೀನಿವಾಸನನ್ನು ಕಂಡು 'ಸತ್ಯ ಮೀರಾಳ ಅಣ್ಣ ಮೋಹನದಾಸನನ್ನು ಮದುವೆಯಾಗುತ್ತಿದ್ದಾಳೆ. ನಿನಗೆ ಈ ರೀತಿ ದಡ ಕಾಣಿಸಿ ಅವನನ್ನು ಮದುವೆಯಾಗುವ ಪ್ಲಾನು ಅವಳದು' ಎಂದು ಸುಳ್ಳು ಹೇಳಿ ಕಿವಿ ತಿರುಚುತ್ತಾನೆ. ಸದರಿ ಮೋಹನದಾಸ -ಬೆಟ್ಟಯನವರ ಮಗ- ತಲತಲಾಂತರದಿಂದ ತಮ್ಮನ್ನು ಕೀಳಾಗಿ ಕಾಣುತ್ತಾ ಬಂದಿರುವ ಮೇಲುಜಾತಿಯವರ ಮೇಲೆ ಸದಾ ಕೆಂಡ ಕಾರುವ, ಇವೆಲ್ಲಾ ತೊಲಗಬೇಕಾದರೆ ಕ್ರಾಂತಿಯಾಗಬೇಕು, ಮೇಲು ಜಾತಿಯವರ ಮೇಲೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು ಎಂಬ ತತ್ವವುಳ್ಳ ತರುಣ. 'ಜಾತಿ ಬೇಧವೆಲ್ಲಾ ಸುಳ್ಳು' ಎಂಬ ವಾದವನ್ನು ನಂಬಿದ್ದ ಮತ್ತು ಎಂದೂ ಜಾತಿ ಬೇಧ ಮಾಡದ ಸತ್ಯಳೊಂದಿಗೆ ಅವನಿಗೆ ಪರಿಚಯ ಬೆಳೆಯುತ್ತದೆ. ಅವನ ಅನೇಕ ತತ್ವಗಳನ್ನು ಸತ್ಯ ಒಪ್ಪದಿದ್ದರೂ, ಅವನು ಒತ್ತಾಯಿಸಿದ ಕಾರಣ, ಈ ಜಾತಿಪದ್ಧತಿ, ಹರಿಜನ, ಅಸ್ಪೃಷ್ಯತೆ, ಸಮಾನತೆ -ಇವುಗಳನ್ನೆಲ್ಲಾ ಸಮೀಕರಿಸಿ ಒಂದು ಪುಸ್ತಕ ಬರೆದು ಮೋಹನದಾಸನಿಗೆ ಕೊಡಲು ಒಪ್ಪಿರುತ್ತಾಳೆ. ಇದೇ ಕಾರಣಕ್ಕೆ ಅವಳ ತೋಟದ ಮನೆಗೆ ಪದೇ ಪದೇ ಬಂದು ಹೋಗುತ್ತಿದ್ದ ಮೋಹನದಾಸನ ಬಗ್ಗೆ ತಿಳಿದಿದ್ದ ಶ್ರೀನಿವಾಸ, ಈಗ 'ಸತ್ಯ ಅವನನ್ನೇ ಮದುವೆಯಾಗುತ್ತಿದ್ದಾಳಂತೆ' ಎಂಬ ಸುಳ್ಳು ಸುದ್ಧಿಯನ್ನು ಸುಲಭವಾಗಿ ನಂಬುತ್ತಾನೆ. ತನ್ನಂತಹ ತನ್ನನ್ನೇ ನಿರಾಕರಿಸಿ ಆ ಮಾದಿಗನನ್ನು ಕಟ್ಟಿಕೊಳ್ಳಲು ಹೊರಟಿರುವ ಸತ್ಯಳ ಬಗ್ಗೆ ದ್ವೇಷ ಬೆಳೆಯುತ್ತದೆ. 'ತಾನು ಮಾದಿಗನಿಂತ ಕೀಳಾ?' ಅಂತ ಕೇಳಿಕೊಳ್ಳುತ್ತಾನೆ. ಮೀರಾಳೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಮೀರಾ ಈ ಅವಮಾನ, ಅನ್ಯಾಯವನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮತ್ತು ಶ್ರೀನಿವಾಸ ಅಕ್ಷರಶಃ ಹುಚ್ಚನೇ ಆಗಿಬಿಡಿತ್ತಾನೆ.

ಈ ಮಧ್ಯೆ ಸತ್ಯ ಬರೆದ ಪುಸ್ತಕ ಕ್ರಾಂತಿಯನ್ನೇ ಉಂಟುಮಾಡುತ್ತದೆ. ಮೋಹನದಾಸನ ನೇತೃತ್ವದಲ್ಲಿ ಎಲ್ಲೆಡೆಯಲ್ಲೂ ಹರಿಜನರು ಸಂಘಗಳನ್ನು ಕಟ್ಟಿಕೊಂಡು ಹೋರಾಟಕ್ಕಿಳಿಯುತ್ತಾರೆ. ದೇವಸ್ಥಾನಗಳಿಗೆ ನುಗ್ಗುತ್ತಾರೆ. ಹೋಟೆಲುಗಳಿಗೆ ನುಗ್ಗುತ್ತಾರೆ. ಅವರ ಕ್ರಾಂತಿಯಾತ್ರೆ ತಿರುಮಲಾಪುರಕ್ಕೂ ಬರುತ್ತದೆ. ಜನಗಳ ತೀವ್ರ ಪ್ರತಿರೋಧದ ನಡುವೆಯೂ ಅವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಆದರೆ ಮಂಗಳಾರತಿಯ ಸಂದರ್ಭದಲ್ಲಿ ಮೋಹನದಾಸನಿಗೆ ಅಂತಃಪ್ರಜ್ನೆ ಕೆಲಸ ಮಾಡಿ ಮೂರ್ಚೆ ತಪ್ಪಿ ಬಿದ್ದುಬಿಡುತ್ತಾನೆ.

ಎಚ್ಚರಾಗಿ ಎದ್ದು ಊರುಬಿಟ್ಟು ಹೋದವನಿಗೆ ತನ್ನ ಊರಲ್ಲೇ ತನಗಾದ ಈ ಅವಮಾನವನ್ನು ಸಹಿಸಲಾಗದೆ, ದೇವಸ್ಥಾನವನ್ನೇ, ಮೇಲ್ಜಾತಿಯ ಜನಗಳನ್ನೇ, ಇಡೀ ಊರನ್ನೇ ನಾಶ ಮಾಡುವ ಸಂಚು ಹೂಡುತ್ತಾನೆ. ಡೈನಾಮೈಟ್ ಇಟ್ಟು ಕೆರೆಯನ್ನು ಉಡಾಯಿಸಿಬಿಡುತ್ತಾನೆ. ಇಡೀ ಊರು ಜಲಪ್ರಳಯಕ್ಕೊಳಗಾಗುತ್ತದೆ. ಸತ್ಯ ಮೂಕವಿಸ್ಮಿತಳಾಗಿ ದೂರ ನಿಂತು ನೋಡುತ್ತಾಳೆ.

Monday, August 28, 2006

ನಾನು ಓದಿದ ಪುಸ್ತಕ (೧)

ಪರ್ವ: ಮಹಾಭಾರತದ ಮರುಸೃಷ್ಟಿ
ಕಾದಂಬರಿಯನ್ನು ಮದ್ರದೇಶದ ಅರಮನೆಯ ದೃಶ್ಯದೊಂದಿಗೆ ಶುರು ಮಾಡುತ್ತಾರೆ ಭೈರಪ್ಪ. ರಾಜ ಶಲ್ಯ ತನ್ನ ಮೊಮ್ಮಗಳು ಹಿರಣ್ಯವತಿಯೊಂದಿಗೆ ಮಾತನಾಡುತ್ತಿದ್ದಾನೆ. ಹಿರಣ್ಯವತಿ ತಾತನ ವಯಸ್ಸನ್ನು ಕೇಳುತ್ತಾಳೆ. ಅದಕ್ಕೆ ಶಲ್ಯ ಎಂಬತ್ತನಾಲ್ಕು ಎಂದು ಉತ್ತರಿಸುತ್ತಾನೆ. ಹೇಗೆ ಲೆಕ್ಕ ಇಟ್ಟಿದ್ದೀಯ ಎಂಬ ಅವಳ ಮರುಪ್ರಶ್ನೆಗೆ 'ಭೀಷ್ಮನಿಗಿಂತ ನಾನು ಮೂವತ್ತಾರು ವರ್ಷಕ್ಕೆ ಚಿಕ್ಕವನು. ಅವನಿಗೆ ಈಗ ನೂರ ಇಪ್ಪತ್ತಂತೆ. ಅಂದರೆ ನನಗೆಷ್ಟಾಯಿತು ಹೇಳು..?' ಎನ್ನುತ್ತಾನೆ.

ಪರ್ವದಲ್ಲಿ ನಾನು ಮೊದಲು ಗಮನಿಸಿದ ಅಂಶವೆಂದರೆ, ಪಾತ್ರಗಳ ವಯಸ್ಸನ್ನು ಖಚಿತವಾಗಿ mention ಮಾಡಿದ್ದು. ಮೂಲ ಮಹಾಭಾರತದಲ್ಲಿ ಇಲ್ಲದ, ಪರ್ವವನ್ನು ಓದುವಾಗ 'ಅರೆರೆ, ಹೌದಲ್ಲ' ಅನ್ನಿಸುವ ಅತ್ಯಂತ ದೊಡ್ಡ ವಿಶೇಷ ಇದು. ಮೂಲ ಮಹಾಭಾರತವನ್ನು ಓದುವಾಗ, ಅಥವಾ ಅದರ ಕತೆಯನ್ನು ಕೇಳುವಾಗ, ಅಥವಾ ಟೀವಿ - ಯಕ್ಷಗಾನಗಳಲ್ಲಿ ನೋಡುವಾಗ ನಮ್ಮ ಗಮನಕ್ಕೇ ಬಾರದ ಅಂಶ ಇದು. ಅಲ್ಲೆಲ್ಲಾ ಧರ್ಮರಾಯನಿಗೆ ಸುಮಾರು ನಲವತ್ತು ವರ್ಷವಾದಂತೆ ಅನ್ನಿಸುತ್ತದೆ. ಭೀಮ, ಅರ್ಜುನ, ದುರ್ಯೋಧನ, ದುಶ್ಯಾಸನ, ಕರ್ಣ, ಕೃಷ್ಣರನ್ನೆಲ್ಲ ಮೂವತ್ತು - ಮೂವತ್ತೈದರ ಆಸುಪಾಸಿನವರಂತೆ ಬಿಂಬಿಸಲಾಗುತ್ತದೆ. ಭೀಷ್ಮ-ದ್ರೋಣರು ಅರವತ್ತೈದು-ಎಪ್ಪತ್ತರವರವರಂತೆ ಕಾಣಿಸುತ್ತಾರೆ. ಆದರೆ ಪರ್ವದಲ್ಲಿ ಅದು ಪೂರ್ತಿಯಾಗಿ ವಿಭಿನ್ನವಾಗಿದೆ. ಇಲ್ಲಿ ಧರ್ಮರಾಯನಿಗೆ ಅರವತ್ತು; ಭೀಮ ದುರ್ಯೋಧನರಿಗೆ ಐವತ್ನಾಲ್ಕು-ಐವತ್ತೈದು; ಅರ್ಜುನ ಕೃಷ್ಣರಿಗೆ ಐವತ್ಮೂರು; ಭೀಷ್ಮರಿಗೆ ಪೂರ್ತಿ ನೂರ ಇಪ್ಪತ್ತು!

ಪರ್ವದ ಮೊದಲ ಅಧ್ಯಾಯದ ಪೂರ್ತಿ ಶಲ್ಯಾದಿ ರಾಜರುಗಳಲ್ಲಿ ಯುದ್ಧ ಪೂರ್ವದಲ್ಲಿದ್ದ ತೊಡಕುಗಳ ಚಿತ್ರಣವಿದೆ. ಕುರುಕ್ಷೇತ್ರ ಯುದ್ಧಕ್ಕೆ ತಾವು ಹೋಗಬೇಕೆ ಬೇಡವೆ? ಹೋದರೆ ಯಾರ ಪರವಾಗಿ ಹೋಗಬೇಕು? ಧರ್ಮದ ಪರ ಹೋಗಬೇಕು. ಇಷ್ಟಕ್ಕೂ ಯಾರದು ಧರ್ಮ? ಕೌರವರದ್ದೋ ಪಾಂಡವರದ್ದೋ? ಎರಡೂ ಪಕ್ಷಗಳಿಂದ ರಾಜದೂತರು ಬಂದು ಇವರ ಮನವೊಲಿಸಲಿಕ್ಕೆ ಪ್ರಯತ್ನಿಸುತ್ತಿರುತ್ತಾರೆ. 'ಧರ್ಮಕ್ಕೆ ಗೆಲುವಾಗಬೇಕು; ಆದ್ದರಿಂದ ನೀವು ನಮ್ಮ ಕಡೆ ಬರಬೇಕು' ಎಂದು ಓಲೈಸುತ್ತಾರೆ. ಎರಡೂ ಕಡೆಯವರೂ ತಮ್ಮದೇ ಧರ್ಮ ಅನ್ನುವಂತೆ ಮಾತನಾಡುತ್ತಾರೆ. ಇವರಿಗೆ dilemma. ಅದಲ್ಲದೆ 'ಹೋಗಲಿ, ಯಾರ ಕಡೆಗೂ ಬೇಡ, ನಾವು ತಟಸ್ಥರಾಗಿದ್ದುಬಿಡೋಣ' ಎಂದರೆ, ನಡೆಯಲಿರುವುದು ಭಾರೀ ಯುದ್ಧ. ಎಲ್ಲಾ ರಾಜರೂ ಒಂದಲ್ಲಾ ಒಂದು ಕಡೆ ಹೋಗಿಯೇ ಹೋಗುತ್ತಾರೆ. ಹಾಗಿದ್ದಾಗ ನಾವು ಸುಮ್ಮನಿದ್ದರೆ ನಮ್ಮ ಗೌರವ, ಪ್ರತಿಷ್ಠೆಗಳಿಗೆ ಕುಂದು ಎಂದುಕೊಂಡು, ಇಡೀ ಆರ್ಯಾವರ್ತದ ರಾಜರೆಲ್ಲ ಯುದ್ಧದ ತಯಾರಿಯಲ್ಲಿ ತೊಡಗುತ್ತಾರೆ.

ಎರಡನೇ ಅಧ್ಯಾಯ ವಿದುರನ ಮನೆಯ ಎದುರಿಗೆ ಹರಿಯುವ ಗಂಗಾನದಿಯ ದಡದಲ್ಲಿ ಯೋಚನಾಮಗ್ನಳಾಗಿ ಕುಳಿತ ಮುದುಕಿ ಕುಂತಿಯ ಚಿತ್ರಣದೊಂದಿಗೆ ಆರಂಭವಾಗುತ್ತದೆ. ವಿದುರ ಬಂದು ಕುಂತಿಗೆ ಹೇಳುತ್ತಾನೆ: 'ಸಂಧಾನಕ್ಕೇಂತ ಇಂದು ಕೃಷ್ಣ ಕೌರವನ ಆಸ್ಥಾನಕ್ಕೆ ಬಂದಿದ್ದ. ಆಗ ಎಲ್ಲರೂ ನಿಬ್ಬೆರಗಾಗುವಂತಹ ಒಂದು ಮಾತನ್ನು ದುರ್ಯೋಧನ ಆಡಿದ. ಪಾಂಡವರ್‍ಯಾರೂ ಅಪ್ಪನಿಗೆ ಹುಟ್ಟಿದವರಲ್ಲ. ಅವರಿಗೆ ನಾವ್ಯಾಕೆ ಪಾಲು ಕೊಡಬೇಕು. ಅವರು ಕುಂತಿಯ ಮಕ್ಕಳು ಅಷ್ಟೆ. ನಿಯೋಗದಿಂದ ಹುಟ್ಟಿದ ಮಕ್ಕಳು ಧರ್ಮದ ಸಂತತಿಯಲ್ಲ -ಎಂದುಬಿಟ್ಟ.' ಕುಂತಿ ಮತ್ತೆ ಯೋಚನಾಲಹರಿಗೆ ಬೀಳುತ್ತಾಳೆ.

ಪರ್ವದ ವೈಶಿಷ್ಟ್ಯವೇನೆಂದರೆ, ಮೂಲ ಮಹಾಭಾರತದಲ್ಲಿನ ಯಾವತ್ತೂ ಅಲೌಕಿಕ ಅಂಶಗಳಿಂದ ಪಾರಾಗಿರುವುದು. ಇಲ್ಲಿ ಕೃಷ್ಣ ದೇವರಲ್ಲ, ಪಾಂಡವರು ವರದಿಂದ ಜನಿಸಿದವರಲ್ಲ, ನೂರೂ ಜನ ಕೌರವರು ಗಾಂಧಾರಿಯ ಪಿಂಡದಿಂದ ಹುಟ್ಟಿದವರಲ್ಲ, ಕರ್ಣ ಸೂರ್ಯಪುತ್ರನಲ್ಲ, ಅಭಿಮನ್ಯು ಹೊಟ್ಟೆಯಲ್ಲಿದ್ದಾಗಲೇ ಚಕ್ರವ್ಯೂಹದ ಗುಟ್ಟು ತಿಳಿದದ್ದು ಸುಳ್ಳು. ಒಂದೊಮ್ಮೆ ಮಹಾಭಾರತ ನಡೆದಿದ್ದರೂ ನಡೆದಿದ್ದಿರಬಹುದೇನೋ ಅನ್ನಿಸುವಂತೆ ಬರೆದಿದ್ದಾರೆ ಭೈರಪ್ಪ. ಪ್ರತಿ ವಿವರವೂ ಓದುಗನಿಗೆ ಆಪ್ತವೆನಿಸುವಂತೆ, ಕಣ್ಣಿಗೆ ಕಟ್ಟಿದಂತೆ, ಇಲ್ಲೇ ಎದುರಿಗೆ ನಡುಯುತ್ತಿದೆಯೇನೋ ಅನ್ನಿಸುವಂತ ಚಿತ್ರಕ ಶಕ್ತಿಯಿಂದ ಕೂಡಿದೆ ಇಡೀ ಪರ್ವ. ಅದಕ್ಕಾಗಿ ಭೈರಪ್ಪ ವರ್ಷಾನುಗಟ್ಟಲೆ study ಮಾಡಿದ್ದೇನು ಸುಳ್ಳಲ್ಲವಲ್ಲ?

ಕುಂತಿ ಯೋಚಿಸುತ್ತಾಳೆ. ನೆನಪುಗಳು ತೂರಿ ಬರುತ್ತವೆ. ಪಾಂಡುವಿನೊಂದಿಗೆ ತನ್ನ ಮದುವೆಯಾದದ್ದು.... ಎಂತಹ ವೈಭವದ ಮದುವೆ! ಎಲ್ಲಾ ನೆನಪಾಗುತ್ತದೆ ಕುಂತಿಗೆ... ಮದುವೆಯ ರಾತ್ರಿಯೇ ಅವಳಿಗೆ ಅರಿವಾಗುತ್ತದೆ: ಪಾಂಡುರಾಜ ನಿರ್ವೀರ್ಯ ಎಂದು. ಆದರೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಪಾಂಡು ಮತ್ತೊಂದು ಮದುವೆಯಾಗುತ್ತಾನೆ. ಮಾದ್ರಿ ಅವನ ಹೆಂಡತಿಯಾಗಿ ಬರುತ್ತಾಳೆ. ಆದರೆ ಅವಳಲ್ಲಿಯೂ ಮಕ್ಕಳಾಗದಿದ್ದಾಗ ದೋಷ ಪಾಂಡುವಿನದೇ ಎಂದು ಸಾಬೀತಾಗುತ್ತದೆ. ಆತ ಹಿಮಾಲಯಕ್ಕೆ ಹೋಗಿ ತನ್ನ ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದು ಬರುವುದಾಗಿ ಹೊರಡುತ್ತಾನೆ. ಅವನ ಇಬ್ಬರು ಮಡದಿಯರೂ ಅವನನ್ನು ಹಿಂಬಾಲಿಸುತ್ತಾರೆ. ಅವರು ಹೋಗಿ ಪರ್ವತವೊಂದರ ತಪ್ಪಲಿನಲ್ಲಿ ನೆಲೆಸುತ್ತಾರೆ. 'ಆ ಪರ್ವತದಾಚೆಗಿನದೇ ದೇವಲೋಕ' ಎಂದು ಪಾಂಡು ಪರಿಚಯಿಸುತ್ತಾನೆ. 'ಅಲ್ಲಿ ನಾನಾ ಔಷಧಿ, ಗಿಡಮೂಲಿಕೆಗಳನ್ನು ತಿಳಿದವರಿದ್ದಾರೆ. ಅವರ ಸಹಾಯದಿಂದ ನಾನು ದೌರ್ಬಲ್ಯಮುಕ್ತನಾಗುತ್ತೇನೆ' ಎಂದು ಅರುಹುತ್ತಾನೆ. ಪರ್ವತಗಳು ಕುಂತಿಗೆ ಕರ್ಣನ ಹುಟ್ಟಿನ ನೆನಪನ್ನು ಮರುಕಳಿಸುತ್ತವೆ.

ಏನೂಂತ ತಿಳಿಯುವ ಮೊದಲೇ ಹುಟ್ಟಿದ ಮಗು. ಕುಂತೀಭೋಜನ ಮಗಳು ಕುಂತಿಗೆ ಹದಿನೈದು ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ, ಒಂದು ದಿನ ದುರ್ವಾಸ ಮುನಿಗಳು ಅರಮನೆಗೆ ಬರುತ್ತಾರೆ. ಅವರ ಸೇವೆಗೆಂದು ನಿಯೋಜಿತಳಾಗಿದ್ದ ಕುಂತಿ ಅವರ ಬಳಿ ಕುತೂಹಲಕ್ಕೆಂದು 'ತಾಯಿಯಾಗುವುದು ಎಂದರೇನು?' ಅಂತ ಕೇಳುತ್ತಾಳೆ. 'ಮಗು ಅಂದರೆ ತುಂಬ ಆಸೆಯೇ?' ದುರ್ವಾಸರು ಕೇಳುತ್ತಾರೆ. ಕುಂತಿ ಹೂಂಗುಡುತ್ತಾಳೆ. ದುರ್ವಾಸರು ಕುಂತಿಯನ್ನು ಕೂಡುತ್ತಾರೆ. ಮಗು ಹುಟ್ಟುತ್ತದೆ. ಆದರೆ ಅದು ಕಾನೀನ (ಮದುವೆಗೆ ಮುಂಚೆ ಹುಟ್ಟಿದ ಮಗು) ವಾದ್ದರಿಂದ, ಅದಾಗಲೇ ಆರ್ಯಜಗತ್ತು ಮುಂದುವರೆದು, ಇಂಥದ್ದನ್ನು ಗೌರವಿಸುತ್ತಿರಲಿಲ್ಲವಾದ್ದರಿಂದ, ವಿಷಯವನ್ನು ಮುಚ್ಚಿಟ್ಟು, ಹುಟ್ಟಿದ ಮಗುವನ್ನು ದಾಸಿ ರಾಧೆಗೆ ಸಾಕಿಕೊಳ್ಳಲು ಕೊಟ್ಟುಕಳುಹಿಸುತ್ತಾರೆ. ಕರ್ಣ ರಾಧೆಯ ಮನೆಯಲ್ಲಿ ಸೂತಪುತ್ರನಂತೆ ಬೆಳೆಯುತ್ತಾನೆ.

ಕುಂತಿ ನೆನಪುಗಳಲ್ಲಿ ತೋಯುತ್ತಿರುವಾಗ ಇತ್ತ ಹಸ್ತಿನಾವತಿಯಿಂದ ಧೃತರಾಷ್ಟ್ರನ ಮದುವೆಯಾದ ಸುದ್ದಿ ಬರುತ್ತದೆ. ಪಾಂಡುವಿಗೆ ಯೋಚನೆಯಾಗುತ್ತದೆ. ತನಗಿಂತ ಮೊದಲು ಧೃತರಾಷ್ಟ್ರನಿಗೆ ಮಕ್ಕಳಾದರೆ ಕುರು ಸಿಂಹಾಸನ ಅವರದೇ ಪಾಲಾಗಿ ನಾವು ಇಲ್ಲೇ ಪರ್ವತದ ತಪ್ಪಲಿನಲ್ಲೇ ಉಳಿಯುವಂತಾಗಿಬಿಡುತ್ತದೇನೋ ಎಂದು ಯೋಚಿಸುತ್ತಾನೆ. ಮತ್ತು ಕುಂತಿಯನ್ನು 'ನಿಯೋಗ'ದಿಂದ ತನಗೊಂದು ಮಗುವನ್ನು ಹೆತ್ತುಕೊಡುವಂತೆ ಪುಸಲಾಯಿಸುತ್ತಾನೆ. ಅವಳಿಗೆ ವೀರ್ಯದಾನ ಮಾಡಲು ದೇವಲೋಕದವರಲ್ಲಿ ಬೇಡಿಕೊಳ್ಳುತ್ತಾನೆ. ಅಲ್ಲಿನ ಧರ್ಮಾಧಿಕಾರಿ ಮುಂದೆ ಬರುತ್ತಾನೆ. ಪಾಂಡುವಿನೊಂದಿಗೆ ಒಪ್ಪಂದದ ನಂತರ ಆತ ಕುಂತಿಯೊಂದಿಗೆ ಕೂಡುತ್ತಾನೆ. ಅವನಿಂದಾಗಿ ಕುಂತಿಗೆ ಮಗು ಜನಿಸುತ್ತದೆ. ಆ ಮಗುವೇ ಧರ್ಮರಾಜ. ಸಣ್ಣ ಮೈಕಟ್ಟಿನ, ಶಾಂತ ಸ್ವಭಾವದ ಮಗು. ಅದರಿಂದ ಪಾಂಡುವಿಗೆ ತೃಪ್ತಿಯಾಗುವುದಿಲ್ಲ. ತನಗೆ ಇನ್ನೊಂದು ಮಗುವನ್ನು ಹೆತ್ತುಕೊಡುವಂತೆ ಕೇಳಿಕೊಳ್ಳುತ್ತಾನೆ. ಈ ಭಾರಿ ದೇವಲೋಕದ ಸೇನಾಪತಿ ಮರುತ್ ಬರುತ್ತಾನೆ. ಅವನಿಂದ ಕುಂತಿಗೆ ಭೀಮ ಜನಿಸುತ್ತಾನೆ; ಬಲಭೀಮ. ತದನಂತರ, ಒಂದು ದಿನ ಕುಂತಿ ನದಿಯಲ್ಲಿ ಭೀಮನಿಗೆ ಸ್ನಾನ ಮಾಡಿಸುತ್ತಿರುವಾಗ ದೇವಲೋಕದಿಂದ ಬಂದ ಅಲ್ಲಿನ ಮುಖ್ಯಸ್ಥ ಇಂದ್ರ ಇವಳ ರೂಪವನ್ನು ಕಂಡು ಮನಸೋತು ತಾನೇ ಅವಳಲ್ಲಿ ಒಂದಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಕುಂತಿ ಹೆದರಿದರೂ ಇಂದ್ರನೇ ಪಾಂಡುವನ್ನು 'ತಾನೂ ಕುಂತಿಗೆ ನಿಯೋಗದಲ್ಲಿ ಒಬ್ಬ ಪುತ್ರನನ್ನು ಕರುಣಿಸುವುದಾಗಿ' ಹೇಳಿ ಒಪ್ಪಿಸುತ್ತಾನೆ. ಕುಂತಿಗೆ ಇಂದ್ರನಿಂದ ಹುಟ್ಟಿದ ಮಗುವೇ ಅರ್ಜುನ.

ಇಷ್ಟೆಲ್ಲಾ ಆದಮೇಲೆ ಮಾದ್ರಿಗೆ ಅಕ್ಕನ ಮೇಲೆ ಅಸೂಯೆಯಾಗುತ್ತದೆ. ಆಕೆ ತನಗೂ ಮಕ್ಕಳು ಬೇಕು ಎಂಬ ಆಸೆಯನ್ನು ಪಾಂಡುವಿನಲ್ಲಿ ಅರುಹುತ್ತಾಳೆ. ಕುಂತಿಯೂ ಸಮ್ಮತಿಸುತ್ತಾಳೆ. ಪಾಂಡುವಿನ ಚಿಕಿತ್ಸೆಗೆಂದು ಬರುತ್ತಿದ್ದ ಇಬ್ಬರು ವೈದ್ಯರು ಮಾದ್ರಿಯನ್ನು ಕೂಡುತ್ತಾರೆ. ಮಾದ್ರಿಗೆ ಅವಳಿ ಮಕ್ಕಳಾಗುತ್ತವೆ. ಅವರಿಗೆ ನಕುಲ-ಸಹದೇವರೆಂದು ನಾಮಕರಣವಾಗುತ್ತದೆ. ಇಷ್ಟರಲ್ಲಿ ಪಾಂಡುವಿಗೆ ತನ್ನ ಮೇಲೆ ಔಷಧಿಗಳು ಬೀರುತ್ತಿರುವ ಪ್ರಭಾವದ ಮೇಲೆ ವಿಶ್ವಾಸ ಬಂದಿರುತ್ತದೆ. ಒಂದು ದಿನ ಅವನೇ ಬಲವಂತದಿಂದ ಮಾದ್ರಿಯನ್ನು ಕೂಡಲು ಹೋಗಿ, ಆಘಾತವಾಗಿ, ಸಾವನ್ನಪ್ಪುತ್ತಾನೆ. ಮಾದ್ರಿಗೆ ಪಾಪಪ್ರಜ್ನೆ ಕಾಡಿ, ಯಾರು ಎಷ್ಟೇ ತಡೆದರೂ, ಗಂಡನ ಚಿತೆಯಲ್ಲಿ ತಾನೂ ಸಹಗಮನ ಮಾಡಿಬಿಡುತ್ತಾಳೆ. ಕುಂತಿ ಐದೂ ಮಕ್ಕಳೊಂದಿಗೆ ಹಸ್ತಿನಾವತಿಗೆ ಮರಳಿ ಮಕ್ಕಳನ್ನು ಬೆಳೆಸುತ್ತಾಳೆ.

ಪರ್ವದ ಮೂರನೇ ಅಧ್ಯಾಯ ಭೀಮನ ಮನಸ್ಸಿನ ತುಮುಲಗಳನ್ನು ಚಿತ್ರಿಸುತ್ತದೆ. ಇಡೀ ಪರ್ವ ಕಾದಂಬರಿಯೇ ಪಾತ್ರಗಳ ಮನಸ್ಸಿನ ತಾಕಲಾಟಗಳಿಂದ ತುಂಬಿದುದು. ಭೀಮ, ರಾಕ್ಷಸಜನರ ಸಾಲಕಟಂಕಟಿ (ಹಿಡಿಂಬೆ)ಯಿಂದ ತನಗೆ ಜನಿಸಿದ ಪುತ್ರ ಘಟೋತ್ಕಜನನ್ನು ತನ್ನ ಸೈನ್ಯ ಸಮೇತ ಬಂದು ಯುದ್ಧದಲ್ಲಿ ತನ್ನನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳಲು ಕಾಡಿಗೆ ಹೊರಟಿದ್ದಾನೆ. ಅವನಿಗೆ ಹಿಂದಿನದೆಲ್ಲಾ ನೆನಪಾಗುತ್ತಾ ಹೋಗುತ್ತದೆ. ಅಣ್ಣ ಧರ್ಮಜನ ಯುವರಾಜ ಪಟ್ಟದ ಆಳ್ವಿಕೆಯ ಕಾಲದಿಂದ. ಅಣ್ಣ ಚೆನ್ನಾಗಿಯೇ ಆಳ್ವಿಕೆ ನಡೆಸುತ್ತಿದ್ದ. ಕೀರ್ತಿ ಸಂಪಾದಿಸಿದ್ದ. ಹೀಗೆಯೇ ಮುಂದುವರೆದರೆ ಇವನನ್ನೇ ರಾಜಪದವಿಗೇರಿಸಬೇಕಾಗುತ್ತದೆ ಎಂದರಿತ ಧೃತರಾಷ್ಟ್ರ, ಧರ್ಮಜನ ಬಳಿ ನಯವಾಗಿ 'ವಾರಣಾವತದಲ್ಲಿ ನಿಮಗಾಗಿ ಹೊಸ ಅರಮನೆಯೊಂದನ್ನು ಕಟ್ಟಿಸಿದ್ದೀನಿ. ನೀವೆಲ್ಲ ಅದನ್ನೇ ಉಪರಾಜಧಾನಿಯೆಂದು ಭಾವಿಸಿ ಅಲ್ಲೇ ವಾಸಿಸಿದರೆ ರಾಜ್ಯಕ್ಕೆ ಒಳಿತಾಗುತ್ತದೆ, ರಾಜ್ಯ ವಿಸ್ಥರಣೆಗೂ ಅನುಕೂಲವಾಗುತ್ತದೆ' ಎಂದು ಮರುಳು ಮಾಡಿ ಒಪ್ಪಿಸಿ, ತಮ್ಮನ್ನು ಅರಗಿನ ಅರಮನೆಗೆ ಸ್ಥಳಾಂತರಿಸಿದ್ದ. ವಿದುರನ ಸಹಾಯದಿಂದ ಕುತಂತ್ರ ಬಯಲಾಗಿತ್ತು. ಅರಗಿನ ಅರಮನೆ ಉರಿದುಹೋಗಿ, ಅಲ್ಲಿ ಅಂದು ತಂಗಿದ್ದ ಭೀಲರ ಹೆಂಗಸು ಮತ್ತವಳ ಐವರು ಮಕ್ಕಳ ಸುಟ್ಟ ಶವವನ್ನು ನೋಡಿ, ಪಾಂಡವರು ಸತ್ತೇ ಹೋದರೆಂದು ಭಾವಿಸಿ ಖುಷಿ ಪಟ್ಟಿದ್ದರಂತೆ ದುರ್ಯೋಧನಾದಿಗಳು. ಸುರಂಗದಿಂದ ತಪ್ಪಿಸಿಕೊಂಡು, ತಾಯಿ ಮತ್ತು ನಾಲ್ಕು ಜನ ಸಹೋದರರನ್ನು ತಾನು ಹೊತ್ತು ಕಾಡಿನ ಕತ್ತಲೆಯಲ್ಲಿ ದಿಕ್ಕು ದೆಸೆಯನ್ನದೆ ಓಡಿ ಓಡಿ ಓಡಿ....

to be continued...