Monday, July 28, 2008

ಪಯಣ

"ಮಿನೂ,"

"ಮ್?"

"ಚಂದ್ರನಿಗೆ ಶಶಾಂಕ ಅಂತ ಯಾಕೆ ಹೆಸರು ಗೊತ್ತಾ?"

"ಇಲ್ಲ, ಗೊತ್ತಿಲ್ಲ"

"ಶಶ ಅಂದ್ರೆ ಮೊಲ. ಚಂದ್ರನ ಮೇಲೆ ಮೊಲದ ಚಿತ್ರದ ಅಂಕ -ಅಂದ್ರೆ ಸೈನ್- ಇದೆ ಅಲ್ವಾ, ಅದಕ್ಕೇ ಅವನನ್ನ ಶಶಾಂಕ ಅಂತ ಕರೀತಾರೆ"

"ಓಹ್! ಗೊತ್ತೇ ಇರ್ಲಿಲ್ಲ ನಂಗೆ... ಥ್ಯಾಂಕ್ಯೂ ವೆರಿ ಮಚ್ ಫಾರ್ ದಿ ಇನ್‌ಫಾರ್ಮೇಶನ್ ಮಿ. ಶಶಾಂಕ್! ಆದ್ರೆ ನಿಮಗೆ ಎಲ್ಲಿ ಮೊಲದ ಗುರುತು ಇದೆ ಅಂತ ಕೇಳಬಹುದಾ?"

"ಅಗತ್ಯವಾಗಿ ಕೇಳಬಹುದು. ಆದ್ರೆ ನಾನು ಮಾತ್ರ ಹೇಳಲ್ಲ! ಯಾಕೇಂದ್ರೆ ನಂಗೆ ಎಲ್ಲೂ ಮೊಲದ ಗುರುತಿನ ಮಚ್ಚೆ ಇಲ್ಲ!"

"ಮತ್ಯಾಕಪ್ಪಾ ನೀನು ಶಶಾಂಕ ಅಂತ ಹೆಸರಿಟ್ಕೊಂಡಿದೀಯಾ?"

"ಏಯ್... ನಾನಾ ಇಟ್ಕೊಂಡಿರೋದು? ಅಪ್ಪ ಇಟ್ಟಿದ್ದಪ್ಪ"

"ಹ್ಮ್... ಅದು ನಿಜ... ಶಶೂ, ಈಗ ಹೀಗೆ ನಮ್ಮಿಬ್ರುನ್ನೂ ಒಟ್ಟಿಗೇ ನೋಡಿದ್ರೆ ನಿಮ್ಮಪ್ಪ ಹೇಗೆ ರಿಸೀವ್ ಮಾಡ್ಬಹುದು?"

"ಹೆದರಬೇಡ್ವೋ... ಅಪ್ಪ ತುಂಬಾ ಸೋಶಿಯಲ್ ಅಂಡ್ ಪ್ರಾಕ್ಟಿಕಲ್... ಮೊದಲಿಗೆ ಶಾಕ್ ಆಗ್ತಾರೆ... ಆಮೇಲೆ ತಿಳಿಸಿ ಹೇಳಿದ್ರೆ ಒಪ್ಕೋತಾರೆ"

"ಆದ್ರೂ ನಂಗ್ಯಾಕೋ ತುಂಬಾ ಭಯ ಆಗ್ತಿದೆ ಶಶೂ..."

ಮಿನುಗು ನನ್ನ ಎದೆಗೆ ಒರಗಿದಳು. ಅವಳು ಅಷ್ಟೊಂದು ಭಯ ಪಡಬೇಕಾದ ಅವಶ್ಯಕತೆಯೇ ಇಲ್ಲ ಎನಿಸಿ, ಅವಳ ಬೆನ್ನ ಮೇಲಿಂದ ಕೈ ಹಾಕಿ ಬಳಸಿ ಮತ್ತಷ್ಟು ಬಿಗಿಯಾಗಿ ನನ್ನೆದೆಗೆ ತಬ್ಬಿಕೊಂಡೆ.

ನಾವು ಕುಳಿತಿದ್ದ ವೋಲ್ವೋ ಬಸ್ಸು 'ಸುಂಯ್' ಸದ್ದು ಮಾಡುತ್ತಾ ಓಡುತ್ತಿತ್ತು. ಕಿಟಕಿಗೆ ಇಳಿಬಿಟ್ಟಿದ್ದ ಪರದೆಯನ್ನು ನಾನು ಪಕ್ಕಕ್ಕೆ ಸರಿಸಿದ್ದೆನಾದ್ದರಿಂದ ಚಂದ್ರ ಒಳಬಂದು ನಮ್ಮಿಬ್ಬರ ಮೇಲೂ ಬೆಳದಿಂಗಳ ಹೊದಿಕೆ ಹೊಚ್ಚಿದ್ದ. ಮಿನುಗು ಕಣ್ಣು ಮುಚ್ಚಿಕೊಂಡಿದ್ದಳು. ನಾನು ಅವಳ ಮುಖವನ್ನೇ ನೋಡಿದೆ. ಅವಳ ಬಲಕಿವಿಯ ಲೋಲಕ್‌ನ ತುದಿ ಈಗ ಕೆನ್ನೆಯ ಮೇಲಿತ್ತು. ಮುಂಗುರುಳೊಂದು ಅದರ ಪಕ್ಕ. ನಾನು ಅದನ್ನು ಅವಳ ಕಿವಿಯ ಹಿಂದೆ ಸರಿಸಿದೆ. ಅವಳ ನುಣುಪು ಕೆನ್ನೆ, ಮೂಗು, ಅರ್ಧವಷ್ಟೇ ಕಾಣುತ್ತಿದ್ದ ತುಟಿಗಳು, ಗರಿಗರಿ ಚೂಡಿಯನ್ನು ಬಳಸಿದ್ದ ಮಿದು ಸ್ವೆಟರ್... ಎಲ್ಲಾ ಈ ಬೆಳದಿಂಗಳ ಬೆಳಕಿನಲ್ಲಿ ಹಿತವಾಗಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಂತೆ ಕಾಣುತ್ತಿದ್ದವು. ನಾನು ನಮ್ಮೊಂದಿಗೇ ಓಡಿ ಬರುತ್ತಿದ್ದ ಚಂದ್ರನತ್ತ ದೃಷ್ಟಿ ಹೊರಳಿಸಿದೆ.

ಈ ಚಂದಿರನೊಬ್ಬ ಅಂದಿನಿಂದ ಇಂದಿನವರೆಗೂ ನನ್ನೊಂದಿಗೇ ಬರುತ್ತಿದ್ದಾನೆ. ಎಲ್ಲರಿಗೂ ಚಂದಿರ ಸದಾ ಹಸನ್ಮುಖಿಯಂತೆ ಕಾಣುತ್ತಾನಂತೆ. ನನಗೆ ಮಾತ್ರ ಹಾಗಲ್ಲ. ಆತ ನನ್ನ ಪರಿಸ್ಥಿತಿಗಳ ಅಭಿವ್ಯಕ್ತಿಯಂತೆ ಕಾಣಿಸುತ್ತಾನೆ ನನಗೆ. ನಾನು ಬೇಸರದಲ್ಲಿದ್ದರೆ ಚಂದ್ರನ ಮುಖ ಬಾಡಿರುತ್ತದೆ, ನಾನು ಕೋಪದಲ್ಲಿದ್ದರೆ ಚಂದ್ರನ ಮುಖ ಗಂಟಿಕ್ಕಿಕೊಂಡಿರುತ್ತದೆ, ನಾನು ಆತಂಕದಲ್ಲಿದ್ದರೆ ಚಂದಿರನ ಮುಖವೂ ಚಿಂತೆಯಲ್ಲಿದ್ದಂತೆ ಗೋಚರಿಸುತ್ತದೆ, ನಾನು ನಗುತ್ತಿದ್ದರೆ, ಅಫ್ ಕೋರ್ಸ್, ಚಂದಿರನೂ ನಗುತ್ತಿರುತ್ತಾನೆ. ಏಕೆಂದರೆ ಚಂದಿರ ನನ್ನ ಗೆಳೆಯ. ಅಲ್ಲ, ಚಂದಿರ ಎಂದರೆ ನಾನೇ.

ಮಿನುಗು ನನ್ನ ಪ್ರಪೋಸಲ್ಲನ್ನು ಒಪ್ಪಿಕೊಳ್ಳುವ ಮುನ್ನ ರೇಗಿಸುತ್ತಿದ್ದಳು. "ಹೇಳೀ ಕೇಳೀ ನೀನು ಶಶಾಂಕ, ಅದೆಷ್ಟು ನಕ್ಷತ್ರಗಳು ಪ್ರೀತಿಸ್ತಿದಾವೇನೋ? ನೀನು ಎಷ್ಟು ನಕ್ಷತ್ರಗಳಿಗೆ ಲೈನು ಹಾಕಿ ಕಾಯ್ತಿದೀಯೇನೋ? ನಿನ್ನಂಥವನನ್ನು ನಂಬುವುದು ಹೇಗೆ ಮಾರಾಯಾ...?" ಆದರೆ ಅವಳು ನನ್ನನ್ನೇ ನಂಬಿರುವುದು, 'ಗುಪ್ತ್ ಗುಪ್ತ್' ಆಗಿ ನನ್ನನ್ನೇ ಪ್ರೀತಿಸುತ್ತಿರುವುದು ಅವಳ ಚಹರೆಯಲ್ಲೇ ಗೊತ್ತಾಗುತ್ತಿತ್ತು. ಸುಮ್ಮನೆ ನಕ್ಕು ಹೇಳಿದ್ದೆ: "ಕಾಯ್ತಿರಬಹುದು... ಆದರೆ ನಿನ್ನಂತಹ 'ಮಿನುಗು'ತಾರೆಯನ್ನು ಕಂಡಮೇಲೆ ಈ ಶಶಾಂಕನ ಕಣ್ಣೇ ಮಂಕಾಗಿಹೋಗಿದೆ ದೇವೀ...! ನನ್ನ ಪೋಷಕ ಸೂರ್ಯನಿಗಿಂತ ಪ್ರಖರ ನಿನ್ನ ಪ್ರಭೆ... ಎಷ್ಟೋ ಬಾರಿ ಅನಿಸುತ್ತದೆ: ನನ್ನ ಬಾಹ್ಯ ರೂಪ ಮಾತ್ರ ಭೂಮಿಯನ್ನು ಸುತ್ತುತ್ತಿರುವುದು; ಮನಸು ಸದಾ ಈ ಮಿನುಗು ಅನ್ನೋ ನಕ್ಷತ್ರವನ್ನು ಸುತ್ತುತ್ತಿರುತ್ತೆ ಅಂತ. ಈ ಬಡ ಚಂದ್ರನ ಪ್ರೀತಿಯನ್ನು ಒಪ್ಪಿಕೋ ತಾರೇ..." ಮಿನುಗುವಿನ ಕಣ್ಣಲ್ಲಿ ಎಂಥಾ ನಕ್ಷತ್ರ ಮಿನುಗಿತ್ತು ಆ ಕ್ಷಣದಲ್ಲಿ...!

ಬಹುಶಃ ಅದು ನನ್ನ ಬಾಳಿನ ಇದುವರೆಗಿನ ಅದ್ಭುತ ಘಳಿಗೆ ಮತ್ತು ದಿನ. ಆಗಸದ ಮುಖ ಕೆಂಪೇರಿದ್ದು ಸಂಜೆಯಾದ್ದರಿಂದಲೋ ಅಥವಾ ಈ ಕಿನ್ನರ ಜೀವಿಗಳ ಪ್ರೇಮ ಸಾಕಾರವಾಗುತ್ತಿರುವ ಪರಿಯನ್ನು ನೋಡುತ್ತಾ ನಾಚಿದ್ದರಿಂದಲೋ ಹೇಳಲಾಗುತ್ತಿರಲಿಲ್ಲ. ಸೂರ್ಯ ಸಹ 'ಇವಳು ಒಪ್ಪುತ್ತಾಳೋ ಇಲ್ಲವೋ ನೋಡಿಕೊಂಡೇ ಮುಳುಗೋಣ' ಎಂದು ನಿರ್ಧರಿಸಿದವನಂತೆ ನಿಧನಿಧಾನವಾಗಿ ಕೆಳಗೆ ಸರಿಯುತ್ತಿದ್ದ. ಮಿನುಗು ಒಪ್ಪಿದಳು. ಇಲ್ಲ, ಮಿನುಗು ಒಪ್ಪದಿರಲಿಕ್ಕೆ ಸಾಧ್ಯವೇ ಇರಲಿಲ್ಲ. 'ಇಂದು ಬಾನಲ್ಲಿ ಚಂದಿರ ಮೂಡುವ ಮೊದಲು ಮಿನುಗುವಿನ ಬಾಳಲ್ಲಿ ಈ ಶಶಾಂಕನ ಪ್ರೀತಿಗೆ ಅಧಿಕೃತ ಒಪ್ಪಿಗೆ ಸಿಕ್ಕಿರುತ್ತೆ' ಅಂತ ಬೆಳಗ್ಗೆ ಎದ್ದು ಟೆರೇಸಿಗೆ ಬಂದಾಗಲೇ ನಾನು ತೀರ್ಮಾನಿಸಿದ್ದೆ. ಎದುರಿನ ಸಿತಾಳೆ ಮರದ ಗೆಲ್ಲ ಮೇಲೆ ಕೂತಿದ್ದ ಹಕ್ಕಿಯೊಂದು ಹಾರಿ ಎಲೆಯ ಮೇಲೆಲ್ಲ ನಿಂತಿದ್ದ ಇಬ್ಬನಿ ಹನಿಗಳು ತಟತಟನೆ ಭಾಷ್ಪವಾಗಿ ನನ್ನ ತೀರ್ಮಾನಕ್ಕೆ ಅಸ್ತು ಅಸ್ತು ಎಂದಿದ್ದವು. ಹಾಗೆ ಬಿದ್ದ ಹನಿಗಳು- ಆವಿಯಾಗಿ ಹೋಗಿ ಹಿಮಗಟ್ಟಿ ಉದುರಿದ ಪಾವನ ಯಮುನೆಯ ನೀರೇ ಇರಬೇಕು -ಎಂದುಕೊಂಡೆ.

ನನಗೇ ನಂಬಲಾಗುವುದಿಲ್ಲ; ನಾನೇನಾ ಈ ಮಿನುಗುವನ್ನು ಒಲಿಸಿಕೊಂಡದ್ದು? ಮಥುರೆಯನ್ನು ಜಯಿಸಿಕೊಂಡದ್ದು? ಬದುಕನ್ನು ಕಟ್ಟಿಕೊಂಡದ್ದು? ಈಗ ಹೀಗೆ ಈಕೆಯನ್ನು ಕರೆದುಕೊಂಡು ಹೋದರೆ 'ಇಲ್ಲ' ಎನ್ನಲಾಗದೆ ಒಪ್ಪಿಕೊಳ್ಳುವಂತೆ ಅಪ್ಪನನ್ನೂ ಮಾನಸಿಕವಾಗಿ ಮಾರ್ಪಡಿಸಿದ್ದು? ಊರು, ಬಂಧುಗಳು, ಸನ್ಮಿತ್ರರನ್ನೆಲ್ಲಾ ಎದುರು ಹಾಕಿಕೊಂಡಾದರೂ -ಇಲ್ಲ, ಅವರೆಲ್ಲ ಭಯ-ವಿಸ್ಮಯ-ಮಿಶ್ರಿತ ನಗೆಯೊಂದಿಗೆ ಮಹಾವಿಶ್ವಾಸಿಗಳಂತೆ ಮೆಲು ನಗೆಯಾಡುತ್ತಾ ಕೈಕುಲುಕುವಂತೆ ಮಾಡಿಕೊಂಡು- ಈಕೆಯನ್ನು ಮದುವೆಯಾಗುವೆನೆಂಬ ಧೈರ್ಯ ಒಡಗೂಡಿಸಿಕೊಂಡದ್ದು? ಅದೇ ಊರ ಜನ, ಬಂಧುಗಳು, ಮಿತ್ರರು ಎಲ್ಲರೂ 'ಶಶಾಂಕ ಹಕ್ಲ್ ಹತ್ತಿ ಹೋದ ತಗ... ಮುಗತ್ತು ಇನ್ನು ಅವನ್ ಕಥೆ!' ಎಂದು ಮಾತಾಡಿಕೊಳ್ಳುವುದು ಕಿವಿಗೆ ಬಿದ್ದಾಗ ಭುಗಿಲೆದ್ದಿದ್ದ ಈ ಛಲದ ಬೆಂಕಿ ಇನ್ನೂ ಉರಿಯುತ್ತಲೇ ಇರುವುದು... ಆಹ್! ಎಲ್ಲಡಗಿತ್ತು ಈ ಆತ್ಮವಿಶ್ವಾಸ ನನ್ನಲ್ಲಿ ಮುಂಚೆ?

ಊರು ಬಿಟ್ಟು ಹೊರಟ ಆ ಕಾವಳದ ರಾತ್ರಿ... ಅಪ್ಪ ಬಸ್‌ಸ್ಟ್ಯಾಂಡಿನವರೆಗೆ ಬ್ಯಾಟರಿ ಹಿಡಿದು ಬಂದಿದ್ದ. "ಅಲ್ಲ ಪಾಪು, ಹೋಗ್ಲೇಬೇಕಾ?" ಎಷ್ಟು ಸಣ್ಣ ದನಿಯಲ್ಲಿ ಕೇಳಿದ್ದ! ಆ ದನಿಯ ತಗ್ಗಿನಲ್ಲಿ ಅದೆಷ್ಟು ಪಶ್ಚಾತ್ತಾಪವಿತ್ತು! 'ಇಲ್ಲ ಮಗನೇ, ಇನ್ನೊಂದು ಸಲ ಹಾಗೆಲ್ಲ ಮಾತಾಡೊಲ್ಲ... ನೀನು ಮನೆ ಬಿಟ್ಟು ಹೊರಡುವಷ್ಟು ಕಠಿಣ ತೀರ್ಮಾನ ತೆಗೆದುಕೊಳ್ತೀಯಾ ಅಂತ ಗೊತ್ತಿದ್ರೆ ಹಾಗೆ ಹೇಳ್ತಿರಲಿಲ್ಲ... ನೀನು ಇಷ್ಟೊಂದು ಗಂಭೀರವಾಗಿ ಪರಿಗಣಿಸ್ತೀಯಾ ಅಂದುಕೊಂಡಿರಲಿಲ್ಲ... ನೀನೀಗ ಹೋಗೋದಿಲ್ಲ ಅಂತಾದ್ರೆ ಬೇಕಾದ್ರೆ ತಪ್ಪಾಯ್ತು ಅಂತ ಕೇಳ್ತೀನಿ... ನನಗೂ ವಯಸ್...' ಹೌದು, ಅಪ್ಪ ಅದನ್ನೆಲ್ಲ ಹೇಳಬಯಸಿದ್ದ. ನನಗದು ಗೊತ್ತಾಗುತಿತ್ತು. ಆಗಾಗ ಬೆಳಗುತ್ತಿದ್ದ ಬ್ಯಾಟರಿಯ ಬೆಳಕಿನಲ್ಲಿ ಕಾಣುತ್ತಿದ್ದ ಅಪ್ಪನ ಮುಖ ಪೂರ್ತಿ- ಪೂರ್ತಿ ಕುಗ್ಗಿಹೋಗಿತ್ತು. ಅಪ್ಪನನ್ನು ಸಮೀಪಿಸಿ, ಅವನ ಕೈಮುಟ್ಟಿ ಹೇಳಿದ್ದೆ: "ಬೇಜಾರಾಗಡ... ನೀ ಹೇಳಿದೆ ಅಂತ ಅಲ್ಲ ನಾ ಹೋಗ್ತಾ ಇರೋದು... ನೀನಷ್ಟೇ ಅಲ್ಲ; ಇಡೀ ಊರೇ ಮಾತಾಡಿಕೊಳ್ತಾ ಇದ್ದು ಕದ್ದು ಮುಚ್ಚಿ ಒಳಗೊಳಗೇ ನಗ್ತಾ.. 'ತಾಯಿ ಒಂದು ಹೋದ್ಮೇಲೆ ವಿನಾಯಕಣ್ಣನ ಮನೆ ಮಾಣಿ ಉಂಡಾಡಿಯಾಗಿಹೋತು... ಅದು ಇರೋ ತನಕ ಹಿಡಿತದಲ್ಲಿದ್ದ ಅಂವ... ಈಗಂತು ಯಾರ ಕೈಗೂ ಸಿಗದಿಲ್ಲೆ...' ಅವ್ರಿಗೆಲ್ಲ ಒಂದು ಉತ್ತರ ಹೇಳೋದು ಬ್ಯಾಡದಾ ಅಪ್ಪಾ? ತೋರುಸ್ತಿ ಅಪ್ಪಾ ನಾ ಯಾರು ಅಂತ..." ಅಪ್ಪನ ಕೈ ತಣ್ಣಗಿತ್ತು.

ಬೆಂಗಳೂರಿನ ಬಸ್ಸು ಹತ್ತಿದಾಗ ಏನಿತ್ತು ನನ್ನ ಕೈಯಲ್ಲಿ? ಮೂರು ವರ್ಷ ಟೆಕ್ಸ್‌ಟೈಲ್ ಡಿಪ್ಲೋಮಾ ಮಾಡಿದ್ದಕ್ಕೆ ಕುರುಹಾಗಿ ಒಂದಷ್ಟು ಸರ್ಟಿಫಿಕೇಟುಗಳು... ಕಿರಣನ ಅಂಗಡಿಯಲ್ಲಿ ಕೂತು ನ್ಯೂಸ್‌ಪೇಪರುಗಳನ್ನು ತಡಕಾಡಿ ಗೀಚಿಕೊಂಡು ಇಟ್ಟುಕೊಂಡಿದ್ದ ಒಂದಷ್ಟು ಜಾಹೀರಾತುಗಳು, ಕಂಪನಿಗಳ ವಿಳಾಸಗಳು... ಎರಡು ವರ್ಷದ ಹಿಂದೆ ಯಾವುದೋ ಕೆಲಸದ ಮೇಲೆ ಹೋಗಿ ಓಡಾಡಿಕೊಂಡು ದಿಗಿಲಿನ ಕಣ್ಣಲ್ಲಿ ನೋಡಿಕೊಂಡು ಬಂದಿದ್ದ ಬೃಹತ್ ಬೆಂಗಳೂರಿನ ಸೆಳೆತ... 'ಏನಕ್ಕಾದ್ರೂ ಬೇಕಾಗ್ತು ಇಟ್ಗ... ಹಂಗೆಲ್ಲ ತೀರಾ ಭಂಡತನ ಮಾಡ್ಲಾಗ' ಎಂದು ಅಪ್ಪ ಕೊನೆಯ ಘಳಿಗೆಯಲ್ಲಿ ಜೇಬಿಗೆ ತುರುಕಿದ್ದ ಸಾವಿರದಿನ್ನೂರು ರೂಪಾಯಿ ಎಣಿಸುವ ನೋಟುಗಳು... ಅಷ್ಟೇ, ಅಷ್ಟೇ ನನ್ನ ಬಳಿ ಇದ್ದದ್ದು.

ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಇದ್ದದ್ದು ಛಲ! ತಲೆಯೊಳಗೆ ತುಂಬಿಕೊಂಡು ಕೊರೆಯುತ್ತಿದ್ದ -ಅಪ್ಪ ಬೆಳಿಗ್ಗೆ ಕಣದಲ್ಲಿ ಅಡಿಕೆ ಹರವುತ್ತಿದ್ದಾಗ ಹೇಳಿದ್ದ ಮಾತುಗಳು... "ಅಡಿಕೆ ಹರವಿಕ್ಕೆ, ಕೃಷ್ಣಾ ಬಸ್ಸಿಗೆ ಒಂಚೂರು ಸಾಗರಕ್ಕೆ ಹೋಗ್ಬರ್ತಿ ಅಪ್ಪಾ... ಕೆಲ್ಸಿದ್ದು" ಎಂದು ನಾನು ಅಲಕ್ಷ್ಯದಿಂದ ಹೇಳಿದ್ದೆ ತಡ, ಅಪ್ಪ ತಿರುಗಿಬಿದ್ದವನಂತೆ ಕೂಗಿದ್ದ: "ಸಾಕು! ಅದೆಂಥಕೆ ಸಾಗರಕ್ಕೆ ಹೋಗವು ಈಗ? ಏನು ಕೆಲ್ಸಿದ್ದು? ಅಲ್ಲಿ ಆ ಕಿರಣನ ಅಂಗಡೀಲಿ ಕುಂತ್ಗಂಡು ಕತೆ ಹೊಡಿಯಕ್ಕಾ? ಎದ್ರಿಗೆ ಕಾಲೇಜ್ ಹುಡ್ಗೀರ್ ಹೋದಕೂಡ್ಲೆ ಡೈಲಾಗ್ ಹೊಡ್ಕೋತ ನಿಗ್ಯಾಡಕ್ಕಾ? ಮತ್ತೆ ಹತ್ತು ಪ್ಯಾಕೆಟ್ ಗುಟ್ಕಾ ತಿನ್ನಕ್ಕಾ? ಊರೋರೆಲ್ಲ ನಿನ್ ಬಗ್ಗೆ ಏನೇನ್ ಮಾತಾಡಿಕೊಳ್ತ ಗೊತ್ತಿದ್ದಾ ನಿಂಗೆ? ನಿನ್ ಕಾಲದಲ್ಲಿ ನಂಗೂ ಮರ್ಯಾದಿ ಇಲ್ಲೆ. ಎಲ್ಲಿಗೆ ಹೋಪ್ದೂ ಬ್ಯಾಡ. ನಾನಂತೂ ಒಂದ್ರುಪಾಯ್ ಕೊಡದಿಲ್ಲೆ. ತ್ವಾಟಕ್ ಹೋಗಿ ಸ್ವಾಂಗೆ ಸಾಚಿಕ್ ಬಾ. ಒಂದು ರೌಂಡ್ ಬ್ಯಾಣಕ್ ಹೋಗ್ಬಾ. ಸ್ವಲ್ಪನಾದ್ರೂ ಜವಾಬ್ದಾರಿ ಇದ್ದನಾ ನಿಂಗೆ? ದಿನಾ ಪೆನ್ಸಿಲ್ಲು, ಬಣ್ಣ ಇಟ್ಗಂಡು ಏನೇನೋ ಚಿತ್ರ ಬಿಡಿಸ್ತಾ ಕೂತ್ರೆ ಆಗಲ್ಲೆ. ಹಿಂಗೇ ಮಳ್ ಹರಕೋತ ಮನೇಲಿದ್ರೆ ಹೆಣ್ಣು ಕೊಡ್ತ್ವಲ್ಲೆ ನಿಂಗೆ, ತಿಳ್ಕ!" ಅಪ್ಪ ಬಾಯಿಬಿಟ್ಟು ನನ್ನನ್ನು ಒಮ್ಮೆಯೂ ಹೀಗೆ ಬೈದವನಲ್ಲ. ನಾನು ಮನೆಯಲ್ಲಿರುವುದರ ಬಗ್ಗೆ ಅವನಿಗೆ ಅಂತಹ ಅಸಮಾಧಾನವೂ ಇರಲಿಲ್ಲ. ಅಮ್ಮ ತೀರಿಕೊಂಡಮೇಲೆ ಒಂಟಿಯಾಗಿಹೋದೆನೇನೋ ಎಂಬಂತೆ ಚಡಪಡಿಸುತ್ತಿದ್ದ ಅಪ್ಪನಿಗೆ ಮಗ ಜೊತೆಯಲ್ಲಿರುವುದು ಹಿತವಾಗಿಯೇ ಇತ್ತು. ಅದಿಲ್ಲವೆಂದರೆ ಮನೆಯಲ್ಲಿ ತಾನೊಬ್ಬನೇ... ಏನಂತ ಮಾಡುವುದು?

ಆದರೆ ಅಪ್ಪ ಇವತ್ತು ಹೀಗೆ ಬೆಳಬೆಳಗ್ಗೆ ಸಿಟ್ಟಿಗೆದ್ದವನಂತೆ ಕೂಗಿಕೊಂಡದ್ದು -ಅದೂ ಕಣದಲ್ಲಿ, ಅಕ್ಕಪಕ್ಕದ ಮನೆಯವರಿಗೆಲ್ಲ ಕೇಳುವಂತೆ -ನನಗೆ ಕೆರಳಿಹೋಗಿತ್ತು. "ನೀನೇನು ನಂಗೆ ದುಡ್ಡು ಕೊಡೋದು ಬ್ಯಾಡ. ನಾ ಸಾಗರಕ್ಕೆ ಹೋಗವು ಅಂದ್ಮೇಲೆ ಹೋಗವು. ಹೆಂಗಾದ್ರೂ ಹೋಗ್ಬರ್ತಿ" ಅಂತಂದು, ಅರ್ಧ ಹರವಿದ್ದ ಅಡಿಕೆ ಚಾಪೆಯನ್ನು ಹಾಗೆಯೇ ಬಿಟ್ಟು ಒಳಬಂದು, ಪ್ಯಾಂಟು ಹಾಕಿ ಹೊರಟಿದ್ದೆ. ಜೇಬಲ್ಲಿ ನೂರಿನ್ನೂರು ರೂಪಾಯಿಯಂತೂ ಇತ್ತು. ಸಾಗರಕ್ಕೆ ಬಂದು, ಕಿರಣನ ಅಂಗಡಿಯಲ್ಲಿ ಚಡಪಡಿಸುತ್ತಾ ಕೂತಿದ್ದಾಗ ಕಿರಣ "ಏಯ್ ನಿಂದು ಡಿಪ್ಲೋಮಾ ಆಯ್ದಲಾ ಮಾರಾಯಾ... ನನ್ನ ಹಾಗಲ್ಲ. ಬೆಂಗಳೂರಲ್ಲಿ ಒಂದಲ್ಲಾ ಒಂದು ಕೆಲಸ ಸಿಗ್ತು. ಸುಮ್ನೆ ಊರಲ್ಲಿದ್ದು ಹಿಂಗೆ ದಿನಾ ಒಬ್ಬೊಬ್ರ ಹತ್ರ ಏನು ಹೇಳಿಸ್ಕ್ಯಳ್ತೆ? ಹೋಗ್ಬುಡು. ಏನಾದ್ರೂ ಮಾಡ್ಲಕ್ಕು. ಅಲ್ಲಿ ನಿನ್ನನ್ನ ಯಾರೂ ಕೇಳೋರು ಇರೋದಿಲ್ಲೆ. ಜನ ಒಂದಷ್ಟು ದಿನ ಆಡಿಕೊಳ್ತ. ಆಮೇಲೆ ನಿಂಗೂ 'ಜೆಸ್' ತಿರುಗಿ ಏನಾದ್ರೂ ದುಡ್ಡು-ಗಿಡ್ಡು ಮಾಡಿಕೊಂಡು ಬಂದ್ರೆ ಅದೇ ಜನ ನಿನ್ನನ್ನ ಹೆಂಗೆ ಮಾತಾಡಿಸ್ತ ನೋಡ್ಲಕ್ಕಡ" ಎಂದಿದ್ದ. ಅದೇನು ನಾನೂ ಯೋಚಿಸದ ಪರಿಹಾರವಲ್ಲ. ಕಿರಣ ನನ್ನ ಬಳಿ ಹೀಗೆ ಹೇಳುತ್ತಿದ್ದುದೂ ಮೊದಲನೇ ಸಲವಲ್ಲ. ಆದರೆ ಆವತ್ತು ನಿರ್ಧರಿಸಿಬಿಟ್ಟೆ. 'ಮನೆಯಲ್ಲಿದ್ದರೆ ಹೆಣ್ಣು ಸಹ ಸಿಕ್ಕುವುದಿಲ್ಲ!' -ಆಹ್, ಅದು ಒತ್ತಟ್ಟಿಗಿರಲಿ, ಇನ್ನು ಊರಲ್ಲಿದ್ದರೆ ನಾನು ಕೊಳೆತೇಹೋಗುತ್ತೇನೆ ಎಂಬುದಂತೂ ವಿಧಿತವಿತ್ತು. ಕಿರಣನಿಂದ ಒಂದು ಸಾವಿರ ರೂಪಾಯಿ ತೆಗೆದುಕೊಂಡೆ. ವಾಪಸು ಮನೆಗೆ ಬರುವಷ್ಟರಲ್ಲಿ ನನ್ನ ನಿರ್ಧಾರ ದೃಢವಾಗಿತ್ತು. ಬಟ್ಟೆಯನ್ನೆಲ್ಲಾ ಬ್ಯಾಗಿಗೆ ತುರುಕಿಕೊಂಡು ಅಪ್ಪನ ಬಳಿ ನನ್ನ ತೀರ್ಮಾನ ಹೇಳಿದಾಗ ಅಪ್ಪ ಇದ್ದಕ್ಕಿದ್ದಂತೇ ಕುಸಿದುಹೋದ. ಏನೂ ಹೇಳಲಿಲ್ಲ.

ಅವತ್ತೂ ಚಂದ್ರ ಇದ್ದ ನನ್ನ ಜೊತೆ: ಬಸ್ಸ ಕಿಟಕಿಯಾಚೆ, ನನ್ನೊಂದಿಗೇ ಬರುತ್ತಾ. ಮುಗುಳ್ನಗುತ್ತಾ. ಆತ್ಮವಿಶ್ವಾಸ ತುಂಬುತ್ತಾ. ಹಾಗೆ ಆ ಚಂದ್ರನೊಂದಿಗೆ ಶುರುವಾದ ನನ್ನ ಪಯಣ ಆಹಾ, ಇದೆಲ್ಲಿಗೆ ತಂದು ಮುಟ್ಟಿಸಿತು ನನ್ನ? ಇಲ್ಲ, ಮುಟ್ಟಿಸಿಲ್ಲ, ಮುಂದುವರೆಯುತ್ತಲೇ ಇದೆ... ನಿಲ್ಲಲಾರದು ಚಂದಿರನಿರುವವರೆಗೆ.

ಮಿನುಗು ಸಣ್ಣಗೆ ಮಿಸುಕಿದಳು.

"ನಿದ್ರೆ ಬಂತಾ ಮಿನು?" -ಕೇಳಿದೆ.

"ಹುಂ" -ನನ್ನ ಮೈಗೊತ್ತಿ.

ಒಂದು ತಿಂಗಳು ಹಿಡಿಯಿತು ಕೆಲಸವೊಂದು ಸಿಗಲಿಕ್ಕೆ: "ಟೆಕ್ಸ್‌ಟೈಲಲ್ಲಿ ಬರೀ ಡಿಪ್ಲೋಮಾ ಮಾಡಿಕೊಂಡ್ರೆ ಸಾಕಾಗಲ್ಲಪ್ಪಾ... ವಿ ಆರ್ ಲುಕಿಂಗ್ ಫಾರ್ ಗ್ರಾಜುಯೇಟ್ಸ್!" "ಯು ಆರ್ ವೆರಿ ಪೂರ್ ಇನ್ ಇಂಗ್ಲಿಷ್" "ಕಂಪ್ಯೂಟರ್ ಲಿಟರಸಿ ಇಸ್ ಮಸ್ಟ್" -ಎಲ್ಲಾ ಮುಗಿದು, ಕೊನೆಗೆ ಯಾವುದೋ ಕಂಪನಿಯಲ್ಲಿ ಸಿಕ್ಕಿದ ಎರಡೂವರೆ ಸಾವಿರ ರೂಪಾಯಿಯ ಕೆಲಸ. ನಾನು ನಿರಾಳ ನಿಟ್ಟುಸಿರು ಬಿಟ್ಟಿದ್ದೆ. ನನಗೆ ಸಹಾಯಕವಾದದ್ದು ಅದೇ ನನ್ನ ಚಿತ್ರ ಬಿಡಿಸುವ ಕಲೆ. ಡಿಸೈನಿಂಗ್ ವಿಭಾಗದಲ್ಲಿ ನನಗೆ ಕೆಲಸ. ಚಂದಿರನಿಗೆ ಥ್ಯಾಂಕ್ಸ್ ಹೇಳಿದ್ದೆ. ಕಲಿತೆ, ನಿಧಾನವಾಗಿ; ಕಲಿಸಿತು ಬೆಂಗಳೂರು, ಬದುಕು, ಛಲ: ಇಂಗ್ಲೀಷು, ಕಂಪ್ಯೂಟರು, ಡಿಸೈನಿಂಗು, ಎಲ್ಲ. ಅದೊಂದು ದಿನ 'ನಮ್ಮ ಕಂಪನಿಯ ಮುಖ್ಯ ಕಚೇರಿಯಿರುವ ಮಥುರೆಗೆ ನೀನು ಹೋಗುತ್ತೀಯಾ?' ಎಂದು ಎಂ.ಡಿ. ಕೇಳಿದಾಗ ಒಂದೇ ಕ್ಷಣದಲ್ಲಿ ಒಪ್ಪಿಕೊಂಡಿದ್ದೆ. ಬದುಕ ಪಯಣಕ್ಕೆ ಸಿದ್ಧಗೊಂಡು, ಮೇಣದಂತೆ ಅಂಟಿಕೊಂಡಿದ್ದ ಊರಿನ ಜಾಡ್ಯವನ್ನೇ ಬಿಡಿಸಿಕೊಂಡು ಹೊರಟಿದ್ದವನಿಗೆ ಬೆಂಗಳೂರಾದರೇನು, ಮಥುರೆಯಾದರೇನು? ಮನೆಗೆ ಫೋನ್ ಮಾಡಿ ಹೇಳಿದೆ. ಅಪ್ಪ ಮನವಿಯೇನೋ ಎಂಬಂತೆ ಹೇಳಿದ: "ಹೋಗ್ಲಕ್ಕಡ... ಒಂದ್ಸಲ ಮನೆಗೆ ಬಂದು ಹೋಗಾ ಅಪ್ಪೀ.. ನೋಡದೇ ಬ್ಯಾಸರ ಆಗಿಹೋಯ್ದು..." ತಿರಸ್ಕರಿಸಲಾಗಲಿಲ್ಲ. ಒಂದು ವಾರ ಸಮಯ ಕೇಳಿಕೊಂಡು ಊರಿಗೆ ಬಂದೆ.

ಊರು ಹಾಗೆಯೇ ಇತ್ತು. ಆದರೆ ಜನ ಬದಲಾಗಿಹೋಗಿದ್ದರು. ಕನಿಷ್ಟ ನನ್ನ ಪಾಲಿಗೆ! "ಅದೆಲ್ಲೋ ಫಾರಿನ್ನಿಗೆ ಹೋಗ್ತಾ ಇದ್ಯಡ?" -ಕೇಳಿಕೊಂಡು ಬಂದ ವಿಶ್ವೇಶ್ವರಣ್ಣ. 'ಫಾರಿನ್ನಿಗಲ್ಲ ಮಾರಾಯಾ.. ಭಾರತಾನೇ! ಮಥುರೆ. ಯು.ಪಿ.' -ನಾನು ಸರಿ ಮಾಡಲು ಹೋಗಲಿಲ್ಲ. ನಕ್ಕೆ ಅಷ್ಟೇ. "ಬೆಂಗ್ಳೂರಗೆ ಸೈಟ್ ತಗಂಡ್ಯಡ, ಹೌದೇ?" -ವಿಚಾರಿಸುವ ಕೋಮಲಕ್ಕ. 'ಇನ್ನೂ ತಗಳಲ್ಲೆ ಮಾರಾಯ್ತಿ... ಹಾಗಂತ ತಗಳದೇನೂ ದೂರ ಇಲ್ಲೆ!' -ನಾನು ಹೇಳಲು ಹೋಗಲಿಲ್ಲ. ನಕ್ಕೆ ಅಷ್ಟೇ. "ಮಾಣಿಗೆ ಮದುವೆ ಮಾಡ್ತ್ರನಾ ಈ ವರ್ಷ? ಅಲ್ಲ, ಎನ್ನ ಭಾವನ ಮಗಳೂ ಓದಿಕೊಂಡಿದ್ದು. ಬೆಂಗ್ಳೂರಗ್ ಇಪ್ಪೋರೇ ಬೇಕು ಹೇಳಿ ಹಟ ಅದ್ರುದ್ದು..." -ನನಗೆ ಕೇಳಿಸುವಂತೆ ಸುಬ್ಬಣ್ಣನ ಮಾತು ಅಪ್ಪನ ಬಳಿ. ಅಪ್ಪ ನನ್ನ ಕಡೆ ನೋಡಿದ್ದು ಗೊತ್ತಾದರೂ ನಾನು ಮಾತಾಡಲಿಲ್ಲ. ನಕ್ಕೆ ಅಷ್ಟೇ.

ಅಪ್ಪ ಈಗ ಗಟ್ಟಿ ಕೂತಿದ್ದ ತನ್ನ ಕುರ್ಚಿಯ ಮೇಲೆ. ಮಗ... ತನ್ನ ಮಗ... ಏನು ಮಾತಾಡುವುದು ಅವನ ಬಳಿ? ಈಗವನು ಪೂರ್ತಿ ಗಂಭೀರನಾಗಿದ್ದಾನೆ. ಅವನಿಗೆ ಬೈಯುವಂತಿಲ್ಲ. ಏನಾದರೂ ಕೆಲಸ ಹೇಳಲಿಕ್ಕೂ ಹಿಂಜರಿಕೆ. ಯಾವುದಾದರೂ ವಿಷಯ ಪ್ರಸ್ತಾಪಿಸಲೂ ಭಯ. ಆದರೆ ಅಪ್ಪನಿಗೂ ಅದೇ ಬೇಕಿತ್ತು ಎನಿಸುತ್ತೆ. ಅವನು ನನ್ನ ಅಭ್ಯುದಯವನ್ನು ಮನಸಾರೆ ಸವಿಯುತ್ತಿದ್ದಂತೆನಿಸಿತು. ಊರಲ್ಲಿ, ನೆಂಟರಲ್ಲಿ ಇದಾಗಲೇ ಮಗನಿಂದ ಮರುಪ್ರಾಪ್ತವಾಗಿದ್ದ ಗೌರವ ಅವನಿಗೆ ಚೂರು ಗರ್ವವನ್ನೂ ತಂದುಕೊಟ್ಟಿತ್ತಿರಬೇಕು. ಅಪ್ಪ ಒಂದು ವಿಚಿತ್ರ ಸಂಭ್ರಮದಲ್ಲಿದ್ದ. ಸಂಭ್ರಾಂತಿಯಲ್ಲಿದ್ದ. ಮಗನೊಂದಿಗೆ ಎಂದೂ ಹೆಚ್ಚು ಮಾತನಾಡದ ಅವನು ಈಗ ಮಗ ಏನು ಹೇಳಿದರೂ 'ಹಾಂ ಸರಿ ಸರಿ' ಅಂತ ಒಪ್ಪಿಕೊಂಡುಬಿಡುತ್ತಾನೇನೋ ಎಂಬಂತೆ ಕಾಣುತ್ತಿದ್ದ. ಮಗ, ಬಹುಶಃ ಈಗ ಅವನಿಗೆ, ದೊಡ್ಡವನಾದಂತೆ ಕಾಣುತ್ತಿದ್ದ. ಅಪ್ಪ ನನ್ನನ್ನು ಅದು ಎಷ್ಟರ ಮಟ್ಟಿಗೆ ಒಪ್ಪಿಕೊಂಡುಬಿಟ್ಟಿದ್ದನೆಂದರೆ, ನಾನು ಹಿತ್ತಿಲಿಗೆ ಹೋಗಿ ಸಿಗರೇಟ್ ಸೇದುತ್ತಿದ್ದಾಗ ಅಲ್ಲಿಗೆ ಬಂದು, "ಅದೆಂತಕೆ ಇಲ್ಲಿಗ್ ಬರ್ತೆ ಸಿಗರೇಟ್ ಸೇದಕ್ಕೆ? ಮನೇಲೇ ಸೇದು" ಎಂದಿದ್ದ. ಇಷ್ಟು ದೊಡ್ಡವನಾಗಿರುವ ಮಗನಿಗೆ ಬೈಯಬಾರದು ಎಂದುಕೊಂಡನೇ? ಅಥವಾ ತಾನೂ ಸಿಗರೇಟು ಸೇದುವವನಾಗಿ ಮಗನಿಗೆ ಬೈದರೆ ಅವನು ತಿರುಗಿ ಹೇಳಿಯಾನು ಎಂದು ಹಿಂಜರಿದನೇ? ಗೊತ್ತಿಲ್ಲ.

ಚಂದಿರ ಕೈಬಿಡಲಿಲ್ಲ. ನನ್ನ ಜೊತೆ ಮಥುರೆಗೂ ಬಂದ: ರೈಲಿನ ಕಿಟಕಿಯಲ್ಲಿ. ಕೃಷ್ಣ ಹುಟ್ಟಿದ ಭೂಮಿ ಮಥುರೆ. ಕೃಷ್ಣ ಆಡಿ ನಲಿದ ಧರೆ ಮಥುರೆ. ಕೃಷ್ಣ ಈಜಾಡಿದ ಯಮುನೆಯ ತಟದಲ್ಲಿನ ಊರು ಮಥುರೆ. ಕೃಷ್ಣ ಬೆಣ್ಣೆ ಕದ್ದು ಜಾರಿ ಬಿದ್ದು ಮೊಣಕಾಲೂದಿಸಿಕೊಂಡಾಗಿನ ಸ್ಪರ್ಶದ ನೆನಪಿರುವ ನೆಲ ಮಥುರೆ. ಕೃಷ್ಣನ ಕೊಳಲ ದನಿಯನ್ನು ಇನ್ನೂ ಪ್ರತಿಧ್ವನಿಸುವ ಬೃಂದಾವನೀ ಮಥುರೆ. ಮಥುರೆ ನನ್ನನ್ನು ಮೊದಲ ನೋಟದಲ್ಲೇ ಸೆಳೆದುಬಿಟ್ಟಿತು. ಕೆಲಸ, ಹವೆ ಒಗ್ಗಿಕೊಂಡಿತು.

ಒಂದು ರವಿವಾರದ ಶ್ಯಾಮಲ ಸಂಜೆ. ಯಮುನೆಯ ತಟದಲ್ಲಿ, ಬೆಂಚೊಂದರಲ್ಲಿ ಕೂತು, ನನ್ನಿಷ್ಟದ ಹವ್ಯಾಸವಾದ ಚಿತ್ರ ಬಿಡಿಸುತ್ತಿದ್ದೆ. ಕಿಲ್ಲ ನಗುವಿನೊಂದಿಗೆ ಹುಡುಗಿಯರ ಗುಂಪೊಂದು ಬಂತು. ತಲೆಯೆತ್ತಿ ನೋಡಿದೆ. ಮಧ್ಯದಲ್ಲೊಂದು ಮಿನುಗುತಾರೆ. ತಟ್ಟನೆ ನನ್ನತ್ತ ನೋಡಿದ ತಾರೆಯ ಕಣ್ಣುಗಳು. ಮಥುರೆಯಂತೆಯೇ ಸೆಳೆವ ನೋಟ. ಬಾಯ್ಕಳೆದು ನೋಡುತ್ತಿದ್ದ ನನ್ನನ್ನು ದಾಟುವಾಗ ತೊಡೆಯ ಮೇಲಿದ್ದ ಅರ್ಧ ಬಿಡಿಸಿದ್ದ ಚಿತ್ರದೆಡೆಗೆ ಬಿದ್ದ ದೃಷ್ಟಿ. ಸೂರೆ ಹೋದ ಮನಸು. ಪೂರ್ತಿಯಾಗದ ಆ ಚಿತ್ರ; ನಿದ್ರೆಯಿಲ್ಲದ ಆ ರಾತ್ರಿ ಕ್ಯಾನ್ವಾಸಿನಲ್ಲಿ ಮೂಡಿ ನಿಂತ ಅದೇ ಹುಡುಗಿಯ ಚಿತ್ರ. ಚಿತ್ರದ ಕೆಳಗೆ 'ಮಿನುಗುತಾರೆ' ಅಂತ ಬರೆದು, ದಿನಾಂಕ, ಸಹಿ ಹಾಕಿ ಎದುರಿಗಿಟ್ಟುಕೊಂಡು ಅದನ್ನೇ ನೋಡುತ್ತಾ ಮಲಗಿದೆ.

ಮರುವಾರ ಸಂಜೆ ಆ ಚಿತ್ರ ಹಿಡಿದು ಯಮುನೆಯ ತಟದ ಅದೇ ಬೆಂಚಿನಲ್ಲಿ ಕೂತಿದ್ದೆ. ನನ್ನ ಎಣಿಕೆ ಸುಳ್ಳಾಗಲಿಲ್ಲ: ಮಿನುಗು ಬಂದಳು. ತನ್ನೊಬ್ಬಳೇ ಗೆಳತಿಯೊಂದಿಗೆ, ನನ್ನೆಡೆಗೆ ಕಳ್ಳನೋಟ ಬೀರುತ್ತಾ. ಆಕೆ ಹಾಗೆ ನಡೆದು ಬರುತ್ತಿದ್ದರೆ, ಸಖಿಯೊಂದಿಗೆ ಕೃಷ್ಣನೆಡೆಗೆ ನಡೆದು ಬರುತ್ತಿರುವ ರಾಧೆಯಂತೆ ಕಾಣುತ್ತಿದ್ದಳು.

ಮಿನುಗು ನನಗಾಗಿಯೇ ಬಂದಿದ್ದಳು. ನನ್ನ ತೊಡೆಯ ಮೇಲಿದ್ದ ತನ್ನದೇ ಚಿತ್ರ ನೋಡಿದಳು. ತಡೆದು ನಿಂತಳು. ನಾನೂ ಎದ್ದು ನಿಂತೆ. "ದಿಸಿಸ್ ಫಾರ್ ಯೂ, ಇಫ್ ಯು ಡೋಂಟ್ ಮೈಂಡ್..." ಚಿತ್ರವನ್ನು ಆಕೆಯತ್ತ ಚಾಚಿದೆ, ನಡುಗುವ ಕೈಯಿಂದ. ಮಿನುಗು ಅದನ್ನು ತೆಗೆದುಕೊಂಡಳು. "ಏನಿದು ಕೆಳಗಡೆ ಬರೆದಿರುವುದು?" ಓದಲು ಬಾರದ ಕನ್ನಡ ಅಕ್ಷರಗಳನ್ನು ಬೆರಳಲ್ಲಿ ಸವರುತ್ತಾ ಕೇಳಿದಳು, ಇಂಗ್ಲೀಷಿನಲ್ಲಿ. "ಮಿನುಗುತಾರೆ ಅಂತ ಬರೆದಿದ್ದೇನೆ. ಅಂದ್ರೆ ಬ್ಲಿಂಕಿಂಗ್ ಸ್ಟಾರ್. ನಿಮ್ಮನ್ನು ನಾನು ಮೊದಲ ಬಾರಿ ನೋಡಿದಾಗ ನೀವು ನಂಗೆ ಗೋಚರಿಸಿದ್ದೇ ಹಾಗೆ. ನಿಮ್ಮನ್ನ ಮಿನುಗು ಅಂತ ಕರೆದರೆ ಬೇಜಾರಿಲ್ವಲ್ಲ?" ಕಣ್ಣನ್ನೇ ನೋಡುತ್ತಾ ಕೇಳಿದೆ. "ಹಹ್ಹ..! ಚೆನ್ನಾಗಿದೆ. ಇಷ್ಟವಾಯ್ತು. ನನಗೆ ಚಿತ್ರಕಲೆ ಅಂದ್ರೆ ತುಂಬಾ ಇಷ್ಟ. ನೀವೊಬ್ಬ ಒಳ್ಳೆಯ ಆರ್ಟಿಸ್ಟ್" -ಹೊಳೆಯುವ ಕಂಗಳಲ್ಲಿ ತುಂಬಿದ್ದ ಹೊಗಳಿಕೆ. "ಥ್ಯಾಂಕ್ಸ್" -ಕಾರ್ಡ್ ಕೊಟ್ಟೆ.

ನಂತರದ ರವಿವಾರದ ಸಂಜೆ ಆ ಬೆಂಚು ನಮ್ಮಿಬ್ಬರನ್ನೂ ಅಕ್ಕಪಕ್ಕದಲ್ಲಿ ಕೂರಿಸಿಕೊಂಡಿತ್ತು. ಮಿನುಗು ನನ್ನನ್ನು ತಮ್ಮ ಮನೆಗೆ ಕರೆದೊಯ್ದಳು. ತಂದೆ- ತಾಯಿಯರಿಗೆ ಪರಿಚಯಿಸಿದಳು. ತನ್ನ ಕೋಣೆಗೆ ಕರೆದೊಯ್ದು ತಾನು ಮಾಡಿದ್ದ ಪೇಂಟಿಂಗ್‌ಗಳನ್ನು ತೋರಿಸಿದಳು. ಅವಳ ತಂದೆ ಕಾನ್ಪುರದ ದೊಡ್ಡ ಚಪ್ಪಲಿ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿದ್ದರು. ಅಮ್ಮ ಮನೆಯಲ್ಲಿ. ಮಿನುಗು ಹುಟ್ಟಿ ಬೆಳೆದದ್ದೆಲ್ಲಾ ಮಥುರೆಯಲ್ಲಿ. ಆರ್ಟ್ ಸ್ಕೂಲ್ ಒಂದರಲ್ಲಿ ಕಲಿಯುತ್ತಿದ್ದಳು. ನಮ್ಮ ಸ್ನೇಹಕ್ಕೆ ಅವಳ ಮನೆಯಲಿ ಯಾವ ಅಡ್ಡಿಯೂ ಬರಲಿಲ್ಲ. ಅದು ಸ್ನೇಹವಷ್ಟೇ ಅಲ್ಲ ಎಂಬುದು ತಿಳಿದೂ, ಮಿನುಗುವಿನ ಅಮ್ಮ ನಾನು ಹೋದಾಗಲೆಲ್ಲ ಚೆನ್ನಾಗಿ ಉಪಚರಿಸುತ್ತಿದ್ದರು.

ನನ್ನ ಕಂಪನಿಯ ವತಿಯಿಂದ ಒಮ್ಮೆ ಬ್ಯಾಂಕಾಕಿಗೆ ಹೋಗಬೇಕಾಗಿ ಬಂತು. ಒಂದು ವಾರದ ಟ್ರಿಪ್. ವಾಪಸು ಬಂದವನೇ ಊರಿಗೆ ಹೋದೆ. ಅಪ್ಪನಿಗೆಂದು ತಂದಿದ್ದ ಕ್ವಾರ್ಟ್ಸ್ ವಾಚು ಕೊಟ್ಟೆ. ಜತೆಗೇ, ಹಿಂಜರಿಯುತ್ತಲೇ, ಎರಡು ವಿದೇಶಿ ಸಿಗರೇಟ್ ಪ್ಯಾಕು, ಒಂದು 'ಥಾಯಿ ವೈನ್' ಬಾಟಲು ಕೊಟ್ಟೆ. ಅಪ್ಪ ಏನೆಂದರೆ ಏನೂ ಹೇಳಲಿಲ್ಲ. ಅರೆಕ್ಷಣ ನನ್ನನ್ನೇ ನೋಡಿ, ಆ ಬಾಟಲು, ಪ್ಯಾಕುಗಳನ್ನು ಒಳಗೆ ತೆಗೆದುಕೊಂಡು ಹೋದ. ನನಗೆ ಆ ನೋಟದಲ್ಲಿದ್ದ ಭಾವವನ್ನು ಗ್ರಹಿಸಲಾಗಲಿಲ್ಲ. ಮರುದಿನ ಅಟ್ಟದ ಮೆಟ್ಟಿಲ ಬಳಿ ಖಾಲಿ ಬಾಟಲಿ ಇದ್ದುದು ನೋಡಿ ರಾತ್ರಿ ತನ್ನ ಕೋಣೆಯಲ್ಲಿ ಕೂತು ಕುಡಿದಿರಬಹುದು ಎಂದುಕೊಂಡೆ. ಆಮೇಲೂ ಅಪ್ಪ ಆ ವಿಷಯವಾಗಿ ಒಂದೇ ಒಂದು ಮಾತು ಸಹ ಎತ್ತಲಿಲ್ಲ, ಬೇರೆ ಏನೇನೋ ಮಾತಾಡಿದ: ನನ್ನ ದುಗುಡವನ್ನು ಕಮ್ಮಿ ಮಾಡುವಂತೆ.

ಮೊದಲೆಲ್ಲಾ ನಾನು-ಅಪ್ಪ ಅಷ್ಟೆಲ್ಲಾ ಮಾತೇ ಆಡಿಕೊಳ್ಳುತ್ತಿರಲಿಲ್ಲ. ಆದರೆ ನಾನು ಹೊರ ಹೊರಟಮೇಲೆ, ನನ್ನ ಕಾಲ ಮೇಲೆ ನಿಂತಮೇಲೆ, ನನಗೂ ನನ್ನದೇ ಆದ 'ಐಡೆಂಟಿಟಿ'ಯೊಂದು ಸಿಕ್ಕಮೇಲೆ, ಅಪ್ಪನಿಗೆ ಆಗಾಗ ಫೋನ್ ಮಾಡುವುದು, ಅವನ ಹುಟ್ಟಿದ ದಿನ, ಫಾದರ್ಸ್ ಡೇ, ಇತ್ಯಾದಿ ದಿನಗಳಂದು ಶುಭಾಶಯ ಹೇಳುವುದು -ಹೀಗೆ ನನಗೂ ಅಪ್ಪನಿಗೂ ನಡುವೆ ಈಗ ಒಂದು ಬೇರೆಯದೇ ತೆರನಾದ ಸಂಬಂಧ ಸೃಷ್ಟಿಯಾಗಿಬಿಟ್ಟಿತ್ತು.

ಬದುಕು ನನ್ನನ್ನು ಎಲ್ಲೆಲ್ಲಿಗೋ ಕಳುಹಿಸಿತು, ಏನೇನನ್ನೋ ಕಲಿಸಿತು. ನನ್ನನ್ನು ಬದಲಿಸಿತು. ಆದರೆ ಅಪ್ಪ ಹೇಗೆ ಬದಲಾದ? ಈ ಕಾಲಕ್ಕೆ ಹೊಂದಿಕೊಂಡ? ಅವನನ್ನು ನಾನು ಬದಲಾಯಿಸಿದೆನೇ? ಎಷ್ಟೆಲ್ಲ ಪಯಣ ಮಾಡಿದೆ ನಾನು... ಆದರೆ ಅಪ್ಪ ಅಲ್ಲೇ ಇದ್ದುಕೊಂಡು ಎಲ್ಲೆಲ್ಲಿಗೋ ಹೋದ: ಚಂದಿರನಂತೆ. ನನ್ನೊಂದಿಗೇ ಬಂದ. ಹಿಂದುಳಿಯಲಿಲ್ಲ. ಕಾಲ-ದೇಶಗಳ ಬಗ್ಗೆ ಚಕಾರವೆತ್ತಲಿಲ್ಲ. ಇದು ಅಪ್ಪನ ಮೇಲಿನ ನನ್ನ ಪ್ರಭಾವವಾ? ಅಥವಾ ಅಪ್ಪನ ಬಯಕೆಯೇ ನಾನು ಹೀಗಾಗಬೇಕು ಎಂಬುದಾಗಿತ್ತಾ?

ಬಸ್ಸು ಡಾಬಾವೊಂದರ ಬಳಿ ನಿಂತಿತು. ಮಿನುಗುವಿಗೂ ಎಚ್ಚರವಾಯಿತು. "ಕೆಳಗೆ ಹೋಗಬೇಕಾ?" -ಕೇಳಿದೆ. ಇಲ್ಲವೆಂದಳು. "ಏನಾದ್ರೂ ತರಬೇಕಾ?" -ಕೇಳಿದೆ. ಬೇಡವೆಂದಳು. ನಾನೊಬ್ಬನೇ ಕೆಳಗಿಳಿದು ಹೋದೆ.

ರಸ್ತೆ ದಾಟಿ ಹೋಗಿ ನಿಂತು, ದಿಗಂತದ ಕತ್ತಲೆಯಲ್ಲಿ ತೂಕಡಿಸುತ್ತಿದ್ದ ಬಿಳಿ ಬಿಳೀ ನಕ್ಷತ್ರಗಳನ್ನು ನೋಡುತ್ತಾ, ಉಚ್ಚೆ ಹೊಯ್ದೆ. ನಿರಾಳವಾದಂತೆನಿಸಿತು. ಪ್ಯಾಂಟಿನ ಜಿಪ್ಪೆಳೆದು ಇತ್ತ ತಿರುಗಿದೆ. ಅನತಿ ದೂರದಲ್ಲಿ ಕಿಟಕಿ ಕಿಟಕಿ ಕಿಟಕಿಗಳಲ್ಲಿ ಒಳಗಿನ ಬೆಳಕನ್ನು ತೋರುತ್ತಾ ನಿಂತಿದ್ದ ನಮ್ಮ ಬಸ್ಸು ಒಂದು ದೊಡ್ಡ ರೇಡಿಯೋ ಪೆಟ್ಟಿಗೆಯಂತೆ ಕಂಡಿತು. ಹೌದು, ಅಲ್ಲಿ ಕೂತಿರುವ ಒಂದೊಂದು ಜೀವವೂ ಒಂದೊಂದು ಛಾನೆಲ್ಲಿನಂತೆ. ಸ್ವಲ್ಪ ಟ್ಯೂನ್ ಮಾಡಿದರೆ ಸಾಕು, ಶುರು ಹಚ್ಚಿಕೊಳ್ಳುತ್ತವೆ ಅವು ತಮ್ಮ ತಮ್ಮದೆ ಹಾಡು, ವಾರ್ತೆ, ವರದಿ, ಸುದ್ದಿ, ಪ್ರವಾಸ ಕಥನ. ಪ್ರತಿ ಜೀವಕ್ಕೂ ತನ್ನದೇ ಅನುಭವಗಳು, ಅಭಿಪ್ರಾಯಗಳು, ತುಮುಲಗಳು, ಪ್ರಶ್ನೆಗಳು, ನೀತಿ ಸಂಹಿತೆಗಳು, ಪಯಣದ ಸುಸ್ತು. ಇವರೆಲ್ಲರ ಜೊತೆ ಮಿನುಗು, ನಾನು. ದೂರದಲ್ಲಿ ಅಪ್ಪ. ಮೇಲೆ ಚಂದ್ರ.

ವಾಪಸು ಬಸ್ಸು ಹತ್ತಿ ಸೀಟಿನಲ್ಲಿ ಕೂತೆ. ಪಕ್ಕದ ಸೀಟಿನವರು ಬಿಡಿಸುತ್ತಿದ್ದ ಕಿತ್ತಳೆ ಹಣ್ಣಿನ ಪರಿಮಳ ಅಲ್ಲೆಲ್ಲ ಇತ್ತು. ಪೂರ್ತಿ ಎಚ್ಚರಾಗಿದ್ದ ಮಿನುಗು ಈಗ ಕಿಟಕಿಯಾಚೆ ನೋಡುತ್ತಿದ್ದಳು.

"ಮಿನೂ, ನಾನು ಮೊದಲಿಂದಲೂ ಇಂಟಲಿಜೆಂಟ್ ಇದ್ದೆ. ಅಪ್ಪ ಅದನ್ನು ಗಮನಿಸಿಯೇ ನನ್ನ ಬಗ್ಗೆ ಕನಸು ಕಟ್ಟಿದ್ದ ಅನ್ನಿಸುತ್ತೆ. ಅವನಿಗೂ ಆ ಊರು, ಆ ಏಕತಾನತೆ, ಜನಗಳ ಸಂಕುಚಿತ ಮನೋಭಾವ, ಸಣ್ಣದನ್ನೂ ಆಡಿಕೊಂಡು ಒಳಗೊಳಗೇ ನಗಾಡುವ ರೀತಿ, ಎಲ್ಲಾ ಬೇಸರ ತಂದಿರಬೇಕು. ಎಲ್ಲರ ಮಕ್ಕಳೂ 'ಏನೇನೋ' ಆಗುವುದನ್ನು, ಹೆಸರು ಮಾಡುತ್ತಿರುವುದನ್ನು ನೋಡುತ್ತಾ ಅವನಿಗೆ ಸುಮ್ಮನಿರಲಿಕ್ಕಾಗುತ್ತಿರಲಿಲ್ಲ. ಅವನಿಗೆ ತನ್ನ ಮಗ 'ಏನೋ' ಆಗಬೇಕಿತ್ತು. ತನಗೆ ಸ್ವತಃ ಗಳಿಸಲಾಗದ 'ಐಡೆಂಟಿಟಿ'ಯೊಂದನ್ನು ಪಡೆಯಲಿಕ್ಕೆ ಅವನು ಮಗನನ್ನು ಆಶ್ರಯಿಸಿದ ಅನ್ನಿಸುತ್ತೆ. ಅಪ್ಪ ಆ ವಿಷಯದಲ್ಲಿ ತುಂಬಾ ಪ್ಯಾಶನೇಟ್!" ಹೇಳಿದೆ.

"ಹೀಗೇ ಅಂತ ಹೇಗೆ ಹೇಳ್ತೀಯಾ ಶಶೂ...? ನಿನ್ನ ಅಪ್ಪನ ಮನಸು ಓದೋದಕ್ಕೆ ಸಾಧ್ಯವಾ ನಿಂಗೆ? ಅದು ಚಂದ್ರನನ್ನು ನೋಡಿ ಏನೇನೋ ಅಂದಂತೆ. ಅವನೊಡಲೊಳಗಾಗುವ ತಳಮಳಗಳೇನೋ, ಭೂಕಂಪಗಳೇನೋ? ನಮಗೇನು ಕಾಣುತ್ತೆ? ನಮಗೆ ಕಾಣುವುದು ಚಂದ ಮೇಲ್ಮೈ ಅಷ್ಟೇ. ಅದನ್ನೇ ನೋಡಿ ಏನೇನೋ ಕಲ್ಪಿಸಿಕೊಂಡು ಆಡುತ್ತೇವೆ..."

ಮಿನುಗು ಕವಿಯಂತೆ, ದಾರ್ಶನಿಕಳಂತೆ ಮಾತಾಡುತ್ತಿದ್ದಳು. ನಾನು ನಿರ್ಧರಿಸಿದೆ: ವಾಪಸು ಹೋಗುವಾಗ ಅಪ್ಪನನ್ನೂ ಕರೆದುಕೊಂಡು ಹೊರಡಬೇಕು. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಆಯೋಜಿಸಿರುವ ನನ್ನ ಚಿತ್ರಗಳ ಪ್ರದರ್ಶನದಲ್ಲಿ ಅಪ್ಪ ಇರಬೇಕು. ಹೊಸ ಪಂಚೆ, ಗರಿ ಗರಿ ಜುಬ್ಬಾ ಧರಿಸಿದ ಅಪ್ಪ ಒಂದು ಶಲ್ಯ ಹೊದ್ದು ಹಾಲಿನಲ್ಲಿ ಓಡಾಡುತ್ತಾ ನನ್ನ ಚಿತ್ರಗಳನ್ನೆಲ್ಲಾ ಮೆಚ್ಚುಗೆಯ ಕಣ್ಣಲ್ಲಿ ನೋಡಬೇಕು. ಪ್ರದರ್ಶನ ಉದ್ಘಾಟಿಸಲು, ವೀಕ್ಷಿಸಲು ಬರುವ ಗಣ್ಯರಿಗೆ ಅಪ್ಪನನ್ನು ಪರಿಚಯಿಸಿಕೊಡಬೇಕು. ಅವರು ಚಿತ್ರ ನೋಡಿ ನನ್ನ ಹೆಗಲು ತಟ್ಟುವಾಗ ಅಪ್ಪ ಸೆರೆಯುಬ್ಬಿ ಬಂದ ಕೊರಳಲ್ಲಿ ಬೀಗಬೇಕು. ಹೌದು, ಅಪ್ಪನಿಗೆ ಅವೆಲ್ಲ ಇಷ್ಟ. ಮತ್ತು ಅಪ್ಪ ಅವಕ್ಕೆಲ್ಲ ಅರ್ಹ.

ಡ್ರೈವರ್ ಹತ್ತಿ ಹಾರ್ನ್ ಮಾಡಿದ. ಕಂಡಕ್ಟರ್ ಒಮ್ಮೆ ಕೊನೆಯ ಸೀಟಿನವರೆಗೂ ಹೋಗಿ ಎಲ್ಲರೂ ಬಂದಿದ್ದಾರಾ ನೋಡಿಕೊಂಡು ಬಂದ. ಬಸ್ ಸ್ಟಾರ್ಟ್ ಆಯಿತು. ಹೆಡ್‌ಲೈಟ್ ಬೆಳಕಿನಲ್ಲಿ ಎದುರಿನ ದಾರಿ ಕೋರೈಸತೊಡಗಿತು. ಹೊಸ ಹುರುಪಿನೊಂದಿಗೆ ಓಡತೊಡಗಿತು ಬಸ್ಸು.


['ದ ಸಂಡೇ ಇಂಡಿಯನ್' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ.]

Monday, July 21, 2008

ಚರಣಗಳ ಮಧ್ಯದ ಮೌನಚಣ..

ಗಿಜಿಗುಡುವ ದಿನಗಳು. ಮಳೆಗಾಲವಾದರೂ ಬಾರದ ಮಳೆ - ಧಗೆಯ ದಿನಗಳು. ದಿನಬೆಳಗಾದರೆ ಆಫೀಸು, ಶೆಡ್ಯೂಲು, ಟೆನ್ಷನ್ನು, ಟ್ರಾಫಿಕ್ಕು, ಒಂದಲ್ಲಾ ಒಂದು ಕಿರಿಕ್ಕು. ಕೋರಮಂಗಲದಲ್ಲೆಲ್ಲೋ ಹುಡುಗ, ರಾಜಾಜಿನಗರದಲ್ಲೆಲ್ಲೋ ಹುಡುಗಿ; ಎಸ್ಸೆಮ್ಮೆಸ್ಸಿನ ತುಂಬ ಬರೀ ಮಿಸ್ಯೂ; ಅದೂ ಬಾರದ ದಿನ ಬದುಕೆಂಬುದು ಕರೆಂಟಿಲ್ಲದ ಬೆಂಗಳೂರು. ಸಾಯಿಬಾಬಾ ಕಣ್ಣು ಬಿಟ್ಟರೂ ಮುಗಿಯದ ಹಣದುಬ್ಬರ; ಬಿಜೆಪಿ ಬಂದರೂ ಅಷ್ಟೇ, ಯಡಿಯೂರಪ್ಪ ಗೆದ್ದರೂ ಅಷ್ಟೇ, ಅದೇ ಹೊಲಸು ರಾಜಕೀಯ; ಬದಲಾಗದ ಜೀವನ ಕ್ರಮ; ದಿನವೂ ಕರ್ಮಕಾಂಡ. ಇದನ್ನೆಲ್ಲಾ ಬಿಟ್ಟು ಎಲ್ಲಿಗಾದರೂ ಓಡಿ ಹೋಗಿಬಿಡಬೇಕೆಂಬ ತಪನೆ; ಸಾಧ್ಯವಾಗದ ಅಸಹಾಯಕತೆ; ಬದುಕು ಮಾಯೆಯ ಆಟ.

ಸರಿ. ಹಾಗಾದರೆ ಏನು ಮಾಡಬೇಕು? ಈ ಏಕತಾನತೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಬದುಕಿಗೂ ಬೆಂಗಳೂರಿಗೂ ನಡುವೆ ಫರಕು ಕಲ್ಪಿಸುವ ಬಗೆಯೆಂತು?

ಊರಲ್ಲಾದರೂ ಮಳೆ ಬರುತ್ತಿದ್ದಿದ್ದರೆ ಗಂಟು ಮೂಟೆ ಕಟ್ಟಿಕೊಂಡು, ಕನಿಷ್ಟ ಒಂದು ವಾರ ರಜ ಹಾಕಿ ಹೋಗಿಬಿಡಬಹುದಿತ್ತು. ದಟ್ಟ ಮೋಡಕಟ್ಟಿದ ಮುಗಿಲು ನೋಡುತ್ತ ಬೆಳಗಾ ಮುಂಚೆ ಬಸ್‍ಸ್ಟಾಂಡಿನಲ್ಲಿ ಇಳಿಯಬಹುದಿತ್ತು. ಕಂಬಳಿ ಕೊಪ್ಪೆ ಹೊದ್ದು - ಉಗ್ಗ ಹಿಡಿದು ಗದ್ದೆಗೆ ಹೊರಟ ಆಳುಗಳು 'ಓಹ್ ಹೆಗ್ಡೇರು ಬೆಂಗ್ಳೂರಿಂದ ಬಂದ್ರಾ?' ಎಂದು ಕೇಳುವಾಗ 'ಹೌದು, ನೀ ಅರಾಮಿದೀಯಾ?' ಎನ್ನುತ್ತಾ ಮಣ್ಣು ರಸ್ತೆಯಲ್ಲಿ ಜಾರುತ್ತಾ ಮನೆ ಕಡೆ ಹೆಜ್ಜೆ ಹಾಕಬಹುದಿತ್ತು. ಕಟ್ಟೆ ಮೇಲೆ ತನ್ನ ದಿನದ ಮೊದಲ ಕವಳದ ತಯಾರಿಕೆಯಲ್ಲಿ ತೊಡಗಿದ್ದ ಕನ್ನಡಕ ಹಾಕಿಕೊಳ್ಳದ ಮಂಜುಗಣ್ಣಿನ ಅಜ್ಜನ ಎದುರು ನಿಂತು 'ಯಾರು ಬಂದಿದ್ದು ಹೇಳು ನೋಡನ?' ಎಂದು ಕೇಳಬಹುದಿತ್ತು. ದನಿಯಿಂದಲೇ ಮೊಮ್ಮಗನನ್ನು ಗುರುತಿಸಿದ ಅವನು 'ಓಹೊಹೋ, ಮಾಣಿ! ಇದೇನೋ ಇದ್ದಕ್ಕಿದ್ದಂಗೆ?' ಎಂದು ಆನಂದಾಶ್ಚರ್ಯದಿಂದ ಕೇಳುವಾಗ 'ನಿನ್ನ ನೋಡವು ಅನ್‍ಸ್ಚು; ಹಂಗೇ ಬಂದಿ' ಎಂದು ಅವನ ಖುಷಿಯನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು. ಅಮ್ಮ ದೋಸೆಯನ್ನು ಎರೆದೆರೆದು ಹಾಕುವಾಗ ಬಾಳೆಲೆಯಲ್ಲಿ ಜೋನಿ ಬೆಲ್ಲ, ಹೆರೆಗಟ್ಟಿದ ತುಪ್ಪ, ಚೂರೇ ಉಪ್ಪಿನಕಾಯಿ, ಗಟ್ಟಿ ಮೊಸರು ಹಾಕಿಕೊಂಡು ಹೊಟ್ಟೆ ತುಂಬ ತಿನ್ನಬಹುದಿತ್ತು; ಕುಕ್ಕರಗಾಲಲ್ಲಿ ಕೂತ ಅಪ್ಪನಿಗೆ ಬೆಂಗಳೂರಿನ ಕತೆ ಹೇಳಬಹುದಿತ್ತು. ಕೊಟ್ಟಿಗೆಗೆ ಹೋಗಿ ಶಂಕ್ರಿ ಹಾಕಿದ ಹೊಸ ಕರುವಿಗೆ ಹಿಂಡಿಯ ಚೂರು ಕೊಟ್ಟು 'ಫ್ರೆಂಡ್' ಮಾಡಿಕೊಳ್ಳಬಹುದಿತ್ತು; ಬೆದರಿದಂತಾಡುವ ಅದರ ಕಣ್ಣು ನೋಡುತ್ತಾ ಯಾರನ್ನೋ ನೆನಪು ಮಾಡಿಕೊಳ್ಳಬಹುದಿತ್ತು.

ಅಮ್ಮ ಅಂಗಳದಲ್ಲಿ ಹಾಕಿದ ಸೌತೆಬೀಜ ಮಳೆನೀರು ಕುಡಿದು ದಪ್ಪಗಾಗಿ, ಮೊಳಕೆಯೊಡೆದು, ತಾನು ಹುದುಗಿದ್ದ ನೆಲವನ್ನು ತಳ್ಳಿಕೊಂಡು ಹೊರಬಂದು, ರವಿಕಿರಣ ಉಂಡು ಮೊಳಕೆ ಬಲಿತು ಸಣ್ಣ ಎಲೆಗಳು ಮೂಡಿ, ಹರಿತ್ತು ಹರಿದು ಬಳ್ಳಿ ಬೆಳೆದು ಇಡೀ ಅಂಗಳವನ್ನಾವರಿಸಿ... ದೊಡ್ಡ ದೊಡ್ಡ ಎಲೆಗಳ ಬಳ್ಳಿಯಲ್ಲಿ ಪುಟ್ಟ ಪುಟ್ಟ ಬಿಳಿ ಹೂಗಳು ಅರಳಿ, ಬಣ್ಣ ಬಣ್ಣದ ಚಿಟ್ಟೆಗಳು ಆ ಹೂವನರಸಿ ಬಂದು, ಮಕರಂದ ಹೀರಿ, ಊಹೂಂ ದಾಹ ತೀರದೇ ಮತ್ತೊಂದು ಹೂವಿಗೆ ಹೋಗಿ ಕುಳಿತದ್ದೇ ಪರಾಗಸ್ಪರ್ಶವೇರ್ಪಟ್ಟು, ಹೂವ ತಾಯಿಯಾಗುವ-ಕಾಯಿಯಾಗುವ ಕನಸು ನನಸಾಗಿ... ಹೂವ ಅಂಡಿನಲ್ಲೇ ಕಿರಿದಾದೊಂದು ಮಿಡಿ ಮೂಡಿ, ಆ ಮಿಡಿಯೇ ದೊಡ್ಡ ಸೌತೆಕಾಯಿಯಾಗಿ, ತಿಂಗಳೊಳಗೆ ಅದು ಹಣ್ಣಾಗಿ, ಆ ಹಣ್ಣೊಡಲ ತುಂಬ ನೂರಾರು ಬೀಜಗಳು; ಆ ಬೀಜಗಳ ತುಂಬ ಮತ್ತೆ ಧರೆಯೊಡಲು ಸೇರಿ ಮೊಳಕೆಯಾಗಿ ಬಳ್ಳಿಯಾಗಿ ಹೂವಾಗಿ ಕಾಯಾಗುವ ಕನಸುಗಳು... ಈ ಪ್ರಕೃತಿ ಎಷ್ಟೊಂದು ಸುಂದರ ಮತ್ತು ಸಹಜ..! ಅದರಲ್ಲೇ ಮುಳುಗಿಹೋಗುವ ಆನಂದಕಿಂತ ಮಿಗಿಲು ಮತ್ತೇನಿದೆ? -ಎಂದುಕೊಳ್ಳುತ್ತ ನಾನು ಅಂಗಳ - ಹಿತ್ತಿಲು - ತೋಟ ಎಂದೆಲ್ಲ ಓಡಾಡುತ್ತಾ...

ಆದರೆ ಈ ಬಾರಿ ಮಳೆಯೇ ಇಲ್ಲ. ಬರೀ ಅಪ್ಪನ ನಿಟ್ಟುಸಿರನ್ನೇ ಕೇಳಿಸುವ ಮೊಬೈಲಿನ ಸ್ಪೀಕರು. ಮೋಡಗಳ ಸುಳಿವೇ ಇಲ್ಲವಂತೆ. ಹೋರಾಡಿ ಪಡೆದ ಗೊಬ್ಬರ ಚೀಲದಲ್ಲೇ ಉಳಿದಿದೆಯಂತೆ. ಊರಲ್ಲೂ ಬವಣೆ, ದಾಹ, ನೀರು ತಳಕಂಡಿರುವ ಬಾವಿ, ಬರದ ಭಯ. ಅಂದರೆ, ಈಗ ಅಲ್ಲಿಗೆ ಹೋದರೆ ಪ್ರಯೋಜನವಿಲ್ಲ. ಹಾಗಾದರೆ ಏನು ಮಾಡಬೇಕು?

ಏನಿಲ್ಲ, ಒಂದಷ್ಟು ಗೆಳೆಯರನ್ನು ಕರೆದುಕೊಂಡು, ಬುತ್ತಿ ಕಟ್ಟಿಕೊಂಡು, ಚಾರಣ ಹೊರಟುಬಿಡಬೇಕು. ಮಡಿಕೇರಿಯ ಬಸ್‍ಸ್ಟಾಂಡ್ ಹೋಟೆಲು ತೆರೆಯುವುದನ್ನೇ ಕಾದು ಬಿಸಿಬಿಸಿ ಕಾಫಿ ಕುಡಿಯಬೇಕು. ಒತ್ತುಶಾವಿಗೆಗೆ ಸಿಹಿಹಾಲು ಹಾಕಿಕೊಂಡು ತಿನ್ನಬೇಕು. ಅಲ್ಲಿಂದ ಒಂದು ಜೀಪು ಮಾಡಿಸಿಕೊಂಡು 'ಕೋಟೆ ಬೆಟ್ಟ'ದ ಬುಡದವರೆಗೆ ಹೋಗಬೇಕು. ಅಲ್ಲಿಂದ ಆರೋಹಣ.

ಮೊದಲರ್ಧ ತಂಪು ಬಂಡಿಹಾದಿ; ಇಕ್ಕೆಲಗಳಲ್ಲಿ ಎಸ್ಟೇಟು. ದಾರಿಯುದ್ದಕ್ಕೂ ಅಲ್ಲಲ್ಲಿ ಅಡ್ಡ ಸಿಗುವ ಹರಿವ ತೊರೆಗಳು. ತಣ್ಣಗೆ ಕೊರೆವ ಶುದ್ಧಜಲ. ಬಾಟಲಿಗೆ ತುಂಬಿಸಿಕೊಳ್ಳಬೇಕು. ಕಾಲಿಗೆ ಹತ್ತಿಕೊಂಡ ಇಂಬಳವನ್ನು ಪ್ರೀತಿಯಿಂದ ಕಿತ್ತು ತೆಗೆಯಬೇಕು. ಸೋರುವ ರಕ್ತವನ್ನು ಕಡೆಗಣಿಸಿ, ಏದುಸಿರು ಬಿಡುತ್ತಾ ಬೆಟ್ಟ ಹತ್ತಬೇಕು. ಹಾದಿಯಲ್ಲಿ ಆನೆ ಹೆಜ್ಜೆ ಕಂಡು ಬೆಚ್ಚಬೇಕು. ಹಸಿರೆಲೆಗಳ ನಡುವೆ ಮಿಡತೆ ಮರಿಗಳೆರಡು ಆಟವಾಡುವುದನ್ನು ಕೆಮೆರಾದ ಮ್ಯಾಕ್ರೋ ಮೋಡಿನಲ್ಲಿ ಸೆರೆಹಿಡಿಯಬೇಕು. ಕಾಡುಹರಟೆ ಹೊಡೆಯುತ್ತ ಮೇಲೇರುತ್ತ ಏರುತ್ತ ಹೋದಂತೆಲ್ಲ ಬದುಕು-ಬ್ಯುಸಿ-ಬೆಂಗಳೂರು ಎಲ್ಲಾ ಮರೆತು ದೂರವಾಗುವುದನ್ನು, ಜಗತ್ತು ವಿಶಾಲವಾಗುವುದನ್ನು ಅರಿತುಕೊಳ್ಳುತ್ತ, ತಿನ್ನುವ ಚಾಕಲೇಟಿನಲ್ಲಿ ಕರಗಬೇಕು. ಮುಕ್ಕಾಲು ಬೆಟ್ಟ ಹತ್ತಿದ ನಂತರ ನಿಂತರೆ ಕಾಣುವ ಬೆಟ್ಟದ ಅಪೂರ್ವ ದೃಶ್ಯವನ್ನು ಕಣ್ತುಂಬ ಉಣ್ಣಬೇಕು. 'ಕುಹೂಊ' ಎಂದು ಕೂಗಬೇಕು. ಆ ಕೂಗು ಮಾರ್ದನಿಯಾಗಿ 'ಕುಹೂಊ' 'ಕುಹೂಊ' 'ಕುಹೂಊ' ಆಗುವುದನ್ನು ಕೇಳುತ್ತಾ ಮೈಮರೆಯಬೇಕು.

'ಇನ್ನೇನು, ಒಂದು ತಾಸು ಅಷ್ಟೇ. ಅದೋ, ಅಲ್ಲಿ ಕಾಣ್ತಿದೆಯಲ್ಲಾ, ಅದೇ ಶೃಂಗ' ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಪರಸ್ಪರ ಹುರಿದುಂಬಿಸುತ್ತಾ, ಹಸಿದ ಹೊಟ್ಟೆಯಲ್ಲಿ ದಡದಡನೆ ನಡೆಯಬೇಕು. ಜೋಕಿಗೆ ಹೊಟ್ಟೆ ಹುಣ್ಣಾಗುವಂತೆ ನಗಬೇಕು. ಮಧ್ಯಾಹ್ನವಾಯಿತು ಎನ್ನುವಾಗ ತುದಿಯಲ್ಲಿರಬೇಕು.

ಅಲ್ಲೊಂದು ಗುಡಿ. ಗುಡಿಯೊಳಗ್ಯಾವುದೋ ದೇವರು ಕತ್ತಲೆಯಲ್ಲಿ. ಮರದ ಬಾಗಿಲಿಗೆ ಬೀಗ. ಬಡಿದರೆ ಮೌನಕ್ಕೆ ಢಂಡಣ ಬೆರೆಸುವ ಘಂಟೆಗಳು ಅಕ್ಕ-ಪಕ್ಕ. ಗುಡಿಯೆದುರು ಸುಮ್ಮನೆ ನೋಡುತ್ತ ಕೂತಿರುವ ಮೂರ್ನಾಲ್ಕು ಕಲ್ಲ ನಂದಿಗಳು. ಗುಡಿಯ ಕಟ್ಟೆಯ ಮೇಲೆ ಕೂತು, ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ತಿನ್ನಬೇಕು. ಚಟ್ನಿಯ ಖಾರಕ್ಕೆ ಬಾಯಿ ಸೆಳೆದುಕೊಳ್ಳಬೇಕು. ನೀರು ಕುಡಿಯಬೇಕು. ಹೊಟ್ಟೆ ತುಂಬಿದ ಹಿಗ್ಗಿನಲ್ಲಿ ಮತ್ತೆ ಎಲ್ಲರೂ ಹೊರಬಂದು ಶೃಂಗದ ತುದಿಯ ಬಂಡೆಗಳ ಮೇಲೆ ಒಬ್ಬರಿಗೊಬ್ಬರು ಒರಗಿ ಕುಳಿತುಕೊಳ್ಳಬೇಕು.

'ಯಾರಾದರೂ ಹಾಡು ಹೇಳಿ..?'
'ಹ್ಮ್, ಶ್ರೀಕಾಂತ್?'
'ಊಹುಂ, ನನಗಿಂತ ಶ್ರೀನಿವಾಸ್ ಚನಾಗ್ ಹಾಡ್ತಾನೆ'
'ಹೂಂ, ಶ್ರೀನಿವಾಸ್, ಹಾಡಿ'

ಬೀಸುತ್ತಿರುವ ತಂಗಾಳಿ. ಶ್ರೀನಿವಾಸ್ ಹಾಡತೊಡಗುತ್ತಾನೆ: 'ವ್ಯಥೆಗಳ ಕಳೆಯುವ ಕತೆಗಾರ.. ನಿನ್ನ ಕಲೆಗೆ ಯಾವುದು ಭಾರ..' ಅಶ್ವತ್ಥ್, ಬೆಟ್ಟದ ಮೇಲೆ ಅನುರಣಿಸುತ್ತಾರೆ. ಆ ಹಾಡಿನ ಚರಣಗಳ ಮಧ್ಯೆ, ಅಲ್ಲಲ್ಲಿ, ಚೂರೂ ಅಡಚಣೆಯಿಲ್ಲದ ಮೌನ... ಶ್ರೀನಿವಾಸ್ ನಂತರ ಅರುಣ್. ಆಮೇಲೆ ಶ್ರೀಕಲಾ. ಹಾಗೇ ವಿಜಯಾ. 'ಸುಶ್, ನೀನೂ ಹಾಡೋ' ಎನ್ನುವ ಶ್ರೀನಿಧಿ. ಫೋಟೋ ತೆಗೆಯುವ ಅಮರ್. ಅಷ್ಟರಲ್ಲಿ, ಬೀಸುವ ಗಾಳಿಯಲ್ಲಿ ಚಳಿಯ ಕಣಗಳು ಜಾಸ್ತಿಯಾಗಿ, ಎಲ್ಲರಿಗೂ ಮೈ ನಡುಗಿ, ಗುಡಿಯಲ್ಲಿ ಬಿಟ್ಟು ಬಂದಿದ್ದ ಜಾಕೆಟ್ಟುಗಳೆಡೆಗೆ ಓಟ.

ಮೈ-ಕೈ-ತಲೆ-ಮುಖ ಎಲ್ಲಾ ಮುಚ್ಚುವಂತೆ ಹೊದ್ದುಕೊಂಡು, ಮುದುಮುದುಡಿಕೊಂಡು ಹೊರಬಂದರೆ, ಬೆಳ್ಳಗೆ ಸುರಿಯತೊಡಗಿರುವ ಹಿಮ. ಎದುರಿಗಿರುವವರು ಯಾರು? ಊಹುಂ, ಕಾಣುತ್ತಿಲ್ಲ. ಮೋಡದ ಮೊಟ್ಟೆಯೊಳಗೆ ಅವಿತಿರುವ ನಾವು, ಆ ಹಿಮಕಣಗಳು ಪದರ ಪದರವಾಗಿ ಗಾಳಿಯಲ್ಲಿ ತೇಲಿ ತೇಲಿ ಬಂದು ಮೈಗಪ್ಪಳಿಸುವುದನ್ನು, ಗಿಡಗಳೆಲೆಗಳಿಂದ ನೀರು ತೊಟ್ಟಿಕ್ಕುವುದನ್ನು ನೋಡುತ್ತಾ, 'ಸ್ವರ್ಗ ಅಂದರೆ ಇದೇ ಇರಬೇಕು ಅಲ್ವೇನೋ ದೋಸ್ತಾ?' ಎಂದುಸುರುತ್ತಾ, ಸಮಯ ಉರುಳುತ್ತಿರುವುದೇ ತಿಳಿಯದಾಗಿ, ಹಾಗೇ ಸಂಜೆಯಾಗಿ.

ಕೆಳಗೆ ಕಾಯುತ್ತಿರುವ ಜೀಪಿನವನಿಲ್ಲದಿದ್ದರೆ ನಾವು ಅಲ್ಲೇ ಇರುತ್ತಿರಲಿಲ್ಲವೇ ಅವತ್ತು? ಯಾರಿಗೆ ಬೇಕಿತ್ತು ಈ ಜಗತ್ತು? ಮಂಜುಮುಚ್ಚಿದ ಬೆಟ್ಟದ ಮೇಲಿಂದ ಇಳಿಯುವ ದರ್ದಾದರೂ ಏನಿತ್ತು? ನಾಳೆ ಬೆಳಗಾದರೆ ಬೆಂಗಳೂರು, ಮತ್ತೆ ಟ್ರಾಫಿಕ್ಕು, ಅದೇ ಆಫೀಸು, ಹಾಳು ಮೊಬೈಲು, ಚೆಕ್ ಮಾಡಲೇಬೇಕಿರುವ ಈಮೇಲು, ಒಟ್ಟಿನಲ್ಲಿ ಬ್ಯುಸಿ, ತೈತೈ ಕುಣಿದಾಟ.

ಯಾಕೆ ಅಲ್ಲೇ ಉಳಿದುಬಿಡಲಿಲ್ಲ ನಾವು ಅವತ್ತು? ಆ ಬೆಟ್ಟ, ಆ ಹಸಿರು, ಆ ಕುಕಿಲು, ಆ ಹಾಡು, ಆ ಮಂಜು... ಯಾಕಾಗಬಾರದು ನಿರಂತರ? ಇಲ್ಲೆಲ್ಲಿ ಕ್ರೆಡಿಟ್ ಕಾರ್ಡುಜ್ಜಿದರೆ ಸಿಕ್ಕೀತು ಆ ಹಾಡಿನ ಮಧ್ಯದ ಮೌನ? ಇಲ್ಯಾವ ಪಾರ್ಕಿನ ಹೂವಿನ ಗಿಡದಲ್ಲಿ ಕಾಣಸಿಕ್ಕೀತು ಆ ಮಿಡತೆಯಾಟ? ಇಲ್ಲೆಷ್ಟೆತ್ತರದ ಬಿಲ್ಡಿಂಗು ಹತ್ತಿದರೆ ಕಂಡೀತು ಆ ಬೆಟ್ಟದ ಮೇಲಣ ರಮಣೀಯ ದೃಶ್ಯ?

ಗೊತ್ತು ನಮಗೂ, ಸಿಗುವುದಿಲ್ಲವೆಂದು. ಈ ಬೆಂಗಳೂರ ಬದುಕಿನ ಹಾಡೇ ಹೀಗೇ. ಈ ಹಾಡ ನಡುನಡುವೆ ಬೇಕು ಸಣ್ಣ ಸಣ್ಣ ಮೌನದ ಕ್ಷಣಗಳು. ಅದಕ್ಕೇ, ನಾವು ಹೊರಡುತ್ತೇವೆ ಚಾರಣ. ಈ ಸಲ ಕೋಟೆಬೆಟ್ಟ. ಮಳೆ ಬರಲಿ ಸಾಕು, ಸೀದಾ ಊರು. ಸೌತೆ ಬಳ್ಳಿಯ ನಡುವೆ ಎಳೇಕಾಯಿಗಾಗಿ ಹುಡುಕಾಟ. ಉಪ್ಪು-ಕಾರ.

Monday, July 14, 2008

ಕೀಟಾಣೂ, ಐ ಲವ್ ಯೂ!

ತಿಂಗಳು ಜೂನಿಗೆ ಕಾಲಿಡುತ್ತಿದ್ದ ಕಾಲ. ಬಂದ ಸಣ್ಣಮಳೆಯೊಂದು ಚಳಿಗೆ 'ಕೋ' ಕೊಟ್ಟು ಪರಾರಿಯಾಗಿತ್ತು. ಗಾಳಿಯೊಂದಿಗೆ ಸೇರಿಕೊಂಡ ಆ ಚಳಿ ನಮ್ಮನ್ನು ರ್‍ಯಾಗಿಂಗ್ ಮಾಡುತ್ತಿತ್ತು. ಸಂಜೆ ಏಳರ ಹೊತ್ತಿಗೆ ಆಫೀಸಿನಿಂದ ಬಂದ ನಾನೂ ನನ್ನ ರೂಂಮೇಟೂ ಪ್ಲಾಸ್ಟಿಕ್ ಕಪ್ಪಿನಲ್ಲಿ ಬೈಟೂ ಟೀ ಕುಡಿಯುತ್ತಾ, ‘ಅಂಬೊಡೆ’ ಎಂದು ರೋಡ್‌ಸೈಡ್ ಅಂಗಡಿಯವನು ಬಾಣಲಿಯಿಂದ ಎತ್ತಿಕೊಟ್ಟ ಗಟ್ಟಿಮುಟ್ಟಾದ ಬಿಸಿಬಿಸಿ ಪದಾರ್ಥವನ್ನು ಉಫು‌ಉಫು ಮಾಡಿಕೊಂಡು ಬಾಯೊಳಗಿಟ್ಟುಕೊಂಡು ಚಳಿಗೆ ಬುದ್ಧಿ ಕಲಿಸಿದ ಖುಶಿಯಲ್ಲಿ ಹಿಗ್ಗುತ್ತಿದ್ದೆವು.

ಅಂಬೊಡೆಯ ಖಾರಕ್ಕೆ ಬಾಯಿ ಸೆಳೆದುಕೊಳ್ಳುತ್ತಾ ರೂಂಮೇಟು “ದೋಸ್ತಾ, ಈ ಚಳೀಲಿ ಬಿಸಿಬಿಸಿ ಕರಿದ ಪದಾರ್ಥ ತಿನ್ನೋಕಿಂತ ಸುಖ ಪ್ರಪಂಚದಲ್ಲಿ ಮತ್ತಿನ್ನೇನೂ ಇಲ್ಲ ನೋಡು!” ಎಂದ. ಅವನು ಹಾಗೆ ಹೇಳುವುದರ ಮೂಲಕ ಮತ್ತೆರಡು ಅಂಬೊಡೆ ಆರ್ಡರ್ ಮಾಡುವುದಕ್ಕೆ ಪೀಠಿಕೆ ಹಾಕುತ್ತಿದ್ದಾನೆ ಎಂಬುದು ನನಗೆ ತಕ್ಷಣ ಹೊಳೆದರೂ “ಕರೆಕ್ಟ್ ಹೇಳ್ದೆ ನೋಡು” ಎಂದು ತಲೆಯಾಡಿಸಿದೆ. ಮತ್ತೆ, ಅಂಬೊಡೆ ರುಚಿರುಚಿಯಾಗಿತ್ತು. ಅಲ್ಲದೇ ಆ ಅಂಬೊಡೆ ಕರಿಯುತ್ತಿದ್ದ ದೊಡ್ಡ ಬಾಣಲಿಯ ಸುತ್ತಲಿನ ಸುಮಾರು ಜಾಗ ಬೆಚ್ಚಬೆಚ್ಚಗಿತ್ತು. ಆದರೂ ಉಳಿದಿದ್ದ ಚೂರುಪಾರು ಚಳಿಯನ್ನು ಓಡಿಸಲೆಂದು ರಸ್ತೆಯಲ್ಲಿ ಇಬ್ಬರು ಟೈಟ್ ಜೀನ್ಸಿನ ಹುಡುಗಿಯರು ಪಾಸಾಗುತ್ತಿದ್ದರು. ಹೀಗಾಗಿ ಚಳಿ, ಇನ್ನು ಇವರ ಬಳಿ ತನ್ನ ಆಟ ನಡೆಯುವುದಿಲ್ಲ ಎಂದರಿತು ಕಾಲಿಗೆ ಬುದ್ಧಿ ಹೇಳಲು ರೆಡಿಯಾಗಿತ್ತು.

ಚುಳ್ಳನೆ ನೋವಾಯಿತು. ಎಲ್ಲಿ ಅಂತ ಮೊದಲು ಗೊತ್ತಾದದ್ದು ಬಹುಶಃ ಕೈಗೆ. ಅದು ಹೋಗಿ ಗದ್ದವನ್ನು ಹಿಡಿದುಕೊಂಡಿತು. ಮುಖದ ಎಕ್ಸ್‌ಪ್ರೆಶನ್ನೂ ಬದಲಾಯಿತಿರಬೇಕು, ರೂಂಮೇಟು “ಏನಾಯ್ತೋ?” ಎಂದ. “ಹಲ್ಲು..” ಎಂದೆ. ಅವನಿಗೆ ವಿಷಯ ವಿಷದವಾಯಿತು. “ಮಗನೇ ಆ ಹಲ್ಲು ಹೋಗಿದೆ, ಡಾಕ್ಟರ್ ಹತ್ರ ತೋರಿಸ್ಕೊಂಡು ಬಾ ಅಂತ ಬಡ್ಕೋತಿದೀನಿ ಒಂದು ತಿಂಗ್ಳಿಂದ, ನೀನು ಹೋಗ್ಬೇಡ! ನೋಡು ಈಗ, ನೋವು ಬಂತು ಅನ್ಸುತ್ತೆ” ಬೈದ. ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾಶೆಯಾಯಿತಿರಬೇಕು. “ಸಾಕು ಬಾ ಹೋಗೋಣ” ಎಂದು, ಅಂಗಡಿಯವನಿಗೆ ದುಡ್ಡು, ಕರುಣಾಜನಕ ಸ್ಥಿತಿಯಲ್ಲಿದ್ದ ನನ್ನನ್ನು ಕರೆದುಕೊಂಡು ಮನೆಕಡೆ ಹೊರಟ.

ನಾನು ಯಾವಾಗಲೂ ಹಾಗೇ. ಬೇರೆಯವರು ಹೇಳಿದ ಮಾತನ್ನೆಲ್ಲಾ ಅಷ್ಟು ಸುಲಭವಾಗಿ ಕೇಳುವುದಿಲ್ಲ. ಅದರಲ್ಲೂ ಆರೋಗ್ಯಭಾಗ್ಯದ ವಿಷಯದಲ್ಲಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ನಾನು ಡಾಕ್ಟರ ಬಳಿಗೆ ಹೋಗುವುದಿಲ್ಲ. ನನಗೇ ಗೊತ್ತಿರುವ ಮಾತ್ರೆಗಳನ್ನು ತಿಂದುಕೊಂಡು ಹಾಯಾಗಿರುತ್ತೇನೆ. ಅಲ್ಲಿಗೆ ಹೋದಕೂಡಲೇ, ಏನೋ ಪುರುಸೊತ್ತು ಮಾಡಿಕೊಂಡು ಬಂದಿದ್ದಾರೆ ಪಾಪ ಅನ್ನುವ ಕರುಣೆಯನ್ನೂ ತೋರದೇ, ನೂರಾರು ಅಪರಿಚಿತ ಖಾಯಿಲೆಗಳ ಹೆಸರು ಹೇಳಿ ಹೆದರಿಸಿ, ‘ಹೀಗೆ ಮಾಡಿಸಿ, ಹಾಗೆ ಮಾಡಿಸಿ, ಅದಿಲ್ಲಾಂದ್ರೆ ಮುಂದೆ ತೊಂದ್ರೆ ಆಗತ್ತೆ’ ಅಂತೆಲ್ಲಾ ಹೇಳಿ, ದುಡ್ಡು ವಸೂಲಿ ಮಾಡುವ ಡಾಕ್ಟರನ್ನು ಕಂಡರೆ ಯಾರಿಗೇ ತಾನೇ ಇಷ್ಟವಾಗತ್ತೆ ಹೇಳಿ? ಆದರೂ ‘ಇಷ್ಟ’ ಪಡಬೇಕಾಗುವಂತಹ ಸಂದರ್ಭ ಸಧ್ಯದಲ್ಲೇ ನನಗೆ ಬರಲಿತ್ತು!

ಮನೆಗೆ ಬಂದವನೇ ನನಗೆ ಈ ಪರಿ ನೋವುಂಟು ಮಾಡುತ್ತಿರುವ ಹಲ್ಯಾವುದು ಅಂತ ಕನ್ನಡಿಯಲ್ಲಿ ನೋಡಿಕೊಂಡೆ. ಬೆಂಗಳೂರಿನ ರಸ್ತೆ ಕಂಡಂತಾಗಿ ಬೆಚ್ಚಿಬಿದ್ದೆ. ಕಪ್ಪು ಬಣ್ಣ. ಅಲ್ಲಲ್ಲಿ ಪಾತ್‌ಹೋಲ್‌ಗಳು. ಓಹೋ, ಈ ಗುಂಡಿಯನ್ನೆಲ್ಲಾ ಮುಚ್ಚಿಸುವಷ್ಟರಲ್ಲಿ ನನ್ನ ‘ಸರ್ಕಾರ’ ಮಗುಚಿಬೀಳುವುದಂತೂ ಗ್ಯಾರೆಂಟಿ ಅಂತ ಲೆಕ್ಕ ಹಾಕಿದೆ. ಆದರೂ ಈ ತಿಂಗಳ ಬಜೆಟ್ಟಿನಲ್ಲಿ ಒಂದೆರಡಾದರೂ ಗುಂಡಿ ತುಂಬಿಸದಿದ್ದರೆ ನಾನೆಂಬ ಪ್ರಜೆಗೆ ಊಟ ಮಾಡುವುದಕ್ಕೂ ತೊಂದರೆಯಾಗುವುದು ನಿಶ್ಚಿತವಿತ್ತು. ‘ಸಧ್ಯಕ್ಕಿರಲಿ’ ಅಂತ ಒಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿದವನೇ ನಾಳೆ ದಂತವೈದ್ಯರನ್ನು ಕಾಣುವುದೇ ಸೈ ಅಂತ ನಿರ್ಧರಿಸಿದೆ. ರೂಂಮೇಟಿಗೂ ಹೇಳಿದೆ. ಅವನು ‘ಗುಡ್ ಗುಡ್’ ಅಂದ. ಕಷ್ಟ ಪಟ್ಟು ಊಟ ಮಾಡಿ ಮಲಗಿದೆ. ನೋವಿನ ಮಧ್ಯೆಯೇ ಚೂರುಪಾರು ನಿದ್ರೆ.

* *

ಮರುದಿನ. ಆಫೀಸಿನಿಂದ ಬರುತ್ತಿದ್ದೇನೆ. ಪ್ಲಸ್ ಚಿಹ್ನೆಯ ಪಕ್ಕದ ‘ಡೆಂಟಲ್ ಕ್ಲಿನಿಕ್’ ಎಂಬ ಕೆಂಪಕ್ಷರದ ಬೋರ್ಡು ಕಂಡದ್ದೇ ಬೈಕು ನಿಲಿ ಸಿ ಒಳನುಗ್ಗಿದೆ. “ಕನ್ಸಲ್ಟೇಶನ್ನಾ ಸರ್?” ಎಂದು ತನ್ನ ಮೃದುವಾದ ದನಿಯಲ್ಲಿ ಕೇಳಿದ ರಿಸೆಪ್ಷನಿಸ್ಟು, ಒಂದು ರಿಜಿಸ್ಟರಿನಲ್ಲಿ ನನ್ನ ಹೆಸರು ನಮೂದಿಸಿಕೊಂಡು, ಕಾಯಲು ಹೇಳಿದಳು. ಸೋಫಾದಲ್ಲಿ ಕೂತು, ಟೀಪಾಯಿಯ ಮೇಲಿದ್ದ ಯಾವುದೋ ಮ್ಯಾಗಜೀನೆತ್ತಿಕೊಂಡು ಚಿತ್ರಗಳನ್ನು ನೋಡತೊಡಗಿದೆ. ನಿಶ್ಯಬ್ದ. ಆಸ್ಪತ್ರೆಯ ವಾಸನೆ. ಹತ್ತು ನಿಮಿಷದ ನಂತರ ನನಗೆ ಕರೆ ಬಂತು. ‘ಪುಶ್ ಮಿ’ ಡೋರು ತಳ್ಳಿಕೊಂಡು ಒಳಗೆ ಹೋದೆ.

ಏನನ್ನೋ ಬರೆಯುತ್ತ ಖುರ್ಚಿಯಲ್ಲಿ ಕೂತ್ತಿದ್ದ ಡಾಕ್ಟರು ತಲೆಯಿತ್ತಿದರು. ಹೇಳ್ತೀನಲ್ಲ, ಹುಡುಗಿಯರು ಅಷ್ಟೊಂದು ಚೆನ್ನಾಗಿ ಇರಬಾರದು. ಅವನೆಂಥಾ ಹುಡುಗನೇ ಇರಲೀರಿ, ಮೊದಲ ನೋಟಕ್ಕೇ, ನಾನು ಹೇಳ್ತೀನಲ್ಲ, ಮೊದಲ ನೋಟಕ್ಕೇ ಬಿದ್ದು ಹೋಗ್ಬೇಕು, ಅಷ್ಟು ಚೆನ್ನಾಗಿದ್ದರು ಆ ಡಾಕ್ಟರು. ಈ ಬೆಳದಿಂಗಳ ರಾತ್ರೀಲಿ ದೇವತೆಯೊಬ್ಬಳು ನಮ್ಮೆಡೆಗೇ ನಡೆದು ಬಂದಹಾಗೆ ನಮಗೆ ಆಗಾಗ ಕನಸು ಬೀಳುತ್ತೆ ನೋಡಿ, ಹಾಂ, ಆ ದೇವತೆಯ ಹಾಗಿದ್ದರು ಡಾಕ್ಟರು. ಬಾಬ್ ಮಾಡಿದ, ನನ್ನ ಹಲ್ಲಿನ ಬಣ್ಣದ್ದೇ ಕೂದಲು. ಪುಟ್ಟ ಫ್ರೇಮಿಲ್ಲದ ಕನ್ನಡಕ. ಅದರ ಹಿಂದೆ ಕೂದಲಿಗಿಂತ ಕಪ್ಪು ಬಣ್ಣದ ಪಿಳಿಪಿಳಿ ಕಣ್ಗಳು. ಪುಟ್ಟ ಮೂಗು. ಯು ನೋ, ಮುದ್ದು ಬರಬೇಕು, ಹಾಗೆ ಪುಟ್ಟ ಮೂಗು. ತುಟೀನಂತೂ ಕೇಳಲೇಬೇಡಿ. ನಾನು ಒಂದು ಕ್ಷಣ ಹಾಗೇ ನಿಂತುಬಿಟ್ಟೆ. ಡಾಕ್ಟರು ಮುಗುಳ್ನಕ್ಕರು. ನಾನು ಎಚ್ಚೆತ್ತುಕೊಂಡು ಮುಂದೆ ನಡೆದು, ‘ಹಲೋ ಡಾಕ್ಟರ್’ ಅಂತ ಕೈ ಚಾಚಿದೆ. ಮುಗುಳ್ನಗೆಗೆ ಮತ್ತಷ್ಟು ಪರ್ಸೆಂಟ್ ಸೇರಿಸಿ, ಮತ್ತಷ್ಟು ಚಂದ ಚಂದ ಕಾಣುತ್ತಾ, ಅವರೂ ‘ಹಲೋ’ ಅಂದು ಕೈ ಕುಲುಕಿದರು. ಆಹ್, ಈ ಡಾಕ್ಟರ ದನಿಯೂ ಎಷ್ಟು ಇನಿ..! ನಕ್ಕಾಗ ಕಂಡ ಅವರ ಹಲ್ಲನ್ನೂ ಗಮನಿಸಿದೆ. ಬಹುಶಃ ದಂತವೈದ್ಯರಾಗಲು ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅನಿಸೊತ್ತೆ- ಅವರ ಹಲ್ಲನ್ನು ಹುಣ್ಣಿಮೆ ಚಂದ್ರ ನೋಡಿದರೆ ಅವಮಾನಗೊಂಡು ನಾಳೆಯೇ ಅಮಾವಾಸ್ಯೆ ಘೋಷಿಸಬೇಕು -ಅಷ್ಟು ಬೆಳ್ಳಗಿದ್ದವು ಅವು. ಮತ್ತೆ ಕುಲುಕಿದ ಆ ಹಸ್ತ ಅದೆಷ್ಟು ಮೃದುವಾಗಿತ್ತು ಅಂದ್ರೆ, ಛೇ, ಹೋಗ್ಲಿ ಬಿಡಿ.

“ಸೋ, ವ್ಹಾಟೀಸ್ ಯುವರ್ ಪ್ರಾಬ್ಲಮ್?” ಕೇಳಿದರು. ಇಷ್ಟೊಂದು ಚಂದದ ಹುಡುಗಿಯೆದುರು ನನ್ನ ಪ್ರಾಬ್ಲಮ್ಸ್ ಹೇಳಿಕೊಳ್ಳುವುದು, ಬಾಯಿಬಿಟ್ಟು ನನ್ನ ಕೆಟ್ಟ ದಂತಪಂಕ್ತಿಯನ್ನು ತೋರಿಸುವುದು ನನಗೆ ಸರಿಯೆನಿಸಲಿಲ್ಲ. ಅವಮಾನವೆನಿಸಿತು. ಸಣ್ಣವನಿದ್ದಾಗ ಅಷ್ಟೊಂದು ಚಾಕ್ಲೇಟ್ ತಿನ್ನಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟುಕೊಂಡೆ. ಆದರೂ ಡಾಕ್ಟರು ಹಾಗೆ ಕೇಳುತ್ತಿರುವಾಗ ಏನು ಸುಳ್ಳು ಹೇಳುವುದು ಅಂತ ಹೊಳೆಯದೇ ನನ್ನ ಪ್ರಾಬ್ಲಮ್ಮುಗಳನ್ನೆಲ್ಲ ಹೇಳಿಕೊಂಡೆ. ಮತ್ತೆ ಮುಗುಳ್ನಕ್ಕ ಡಾಕ್ಟರು, “ಫೈನ್, ಕಮ್ ವಿತ್ ಮಿ. ಐ ವಿಲ್ ಚೆಕ್ ಇಟ್” ಎನ್ನುತ್ತಾ ನನ್ನನ್ನು ಒಳಗಡೆಗೆ ಕರೆದೊಯ್ದದು.

ಈ ಸಿನಿಮಾಗಳಲ್ಲಿ ತೋರಿಸುತ್ತಾರಲ್ಲ, ಆಪರೇಶನ್ ಥಿಯೇಟರ್, ಹಾಗಿದ್ದ ಕೋಣೆ. ಮಂಚದಂತಿದ್ದ ಖುರ್ಚಿಯನ್ನು ತೋರಿಸುತ್ತಾ, “ಪ್ಲೀಸ್ ಸಿಟ್” ಎಂದರು ಡಾಕ್ಟರು. ಸೆಲೂನಿನಲ್ಲಿ ಬಿಟ್ಟರೆ ಇಷ್ಟೊಳ್ಳೆ ಖುರ್ಚಿ ಇರುವುದು ದಂತವೈದ್ಯರಲ್ಲೇ ಇರಬೇಕು. ಈ ಖುರ್ಚಿಯಲ್ಲ್ಲಿ ಕೂತು ಒರಗಲು ನೋಡಿದರೆ ಇದು ನನ್ನನ್ನು ಮಲಗಿಸಿಕೊಂಡುಬಿಟ್ಟಿತು. ಇದಕ್ಕೆ ಅನೇಕ ಬಾಹುಗಳಿದ್ದವು. ಅವನ್ನೆಲ್ಲಾ ಡಾಕ್ಟರು ತಮ್ಮ ಕಡೆ ಎಳೆದುಕೊಂಡರು. ಮೇಲ್ಗಡೆ ಕೈಯಾಡಿಸಿ ಟಕ್ಕೆಂದು ಒಂದು ಸ್ವಿಚ್ಚದುಮಿದ್ದೇ ಲೈಟೊಂದು ಆನಾಗಿ ನನ್ನ ಕಣ್ಣಿಗೆ ಕುಕ್ಕಲಾರಂಭಿಸಿತು. ನಾನು ತಲೆ ಸರಿಸಿ ಡಾಕ್ಟರನ್ನೇ ನೋಡತೊಡಗಿದೆ. ಅವರೀಗ ತಮ್ಮ ಮೂಗು, ಬಾಯಿ ಮುಚ್ಚುವಂತೆ ಮಫ್ಲರಿನಂತಹ ಹಸಿರು ಬಟ್ಟೆಯೊಂದನ್ನು ಕಟ್ಟಿಕೊಂಡರು. ನನಗೀಗ ಅತೀವ ಅವಮಾನವಾಯಿತು.

ಹುಡುಗಿಯೊಬ್ಬಳು, ಅದರಲ್ಲೂ ಚಂದದ ಹುಡುಗಿಯೊಬ್ಬಳು, ನಾನು ಪ್ರಪೋಸ್ ಮಾಡಲಾ ಅಂತ ಯೋಚಿಸುತ್ತಿರುವವಳು, ನನ್ನೆಡೆಗೆ ಬಗ್ಗಿ, ನನ್ನನ್ನು ಮುಟ್ಟುವಂತಹ ಸಂದರ್ಭ... ಆಗ ಅವಳು ಈ ಹುಡುಗನ ಬಾಯಿಯಿಂದ ದುರ್ವಾಸನೆ ಬರಬಹುದೆಂದು ಬಗೆದು, ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದೆಂದರೆ... ಛೇ! ಹೀಗೇಂತ ಗೊತ್ತಿದ್ದರೆ ನಾನು ಮತ್ತೊಮ್ಮೆ ಬ್ರಶ್ ಮಾಡಿಕೊಂಡೇ ಬರುತ್ತಿರಲಿಲ್ಲವಾ ಕ್ಲಿನಿಕ್ಕಿಗೆ? “ಓಪನ್ ಯುವರ್ ಮೌತ್.. ಆ...” ಡಾಕ್ಟರು ನಿರ್ದೇಶಿಸಿದರು. ಎಲ್ಲ ಅವಮಾನಗಳನ್ನೂ ನುಂಗಿಕೊಂಡು, ಬ್ರಹ್ಮಾಂಡ ತೋರಿಸಲು ಅಣಿಯಾಗಿ ನಾನು ಬಾಯಿ ತೆರೆದೆ. ಲೈಟು ಸರಿಹೊಂದಿಸಿಕೊಂಡರು. ಟಿಣ್ ಟಿಣ್ ಶಬ್ದ ಮಾಡುತ್ತಾ ತಟ್ಟೆಯಲ್ಲಿದ್ದ ಅದ್ಯಾವುದೋ ಸ್ಟೀಲಿನ ಹತಾರವೊಂದನ್ನು ಹುಡುಕಿ ಹಿಡಿದು ನನ್ನೆಡೆಗೆ ಬಗ್ಗಿದರು. ನನ್ನ ಮುಖವನ್ನು ತಮ್ಮ ಎಡಗೈಯಲ್ಲಿ, ನಾನು ಬಾಯಿ ಮುಚ್ಚಲಾಗದಂತೆ ಹಿಡಿದುಕೊಂಡರು. ಸ್ಟೀಲಿನ ಉಪಕರಣವನ್ನು ನನ್ನ ಬಾಯೊಳಗೆ ಹಾಕಿ ಜಾಲಾಡಿದರು. ಒಂದೆರಡು ಹಲ್ಲಿಗೆ ಬಡಿದರು. ಕುಕ್ಕಿದರು. “ಓಹ್! ದೇರಾರ್ ಸೋ ಮೆನಿ ಡಿಕೇಸ್!” ಉದ್ಘರಿಸಿದರು. ನಾನು ಡಾಕ್ಟರ ಕನ್ನಡಕದ ಹಿಂದಿನ ಕಣ್ಣನ್ನೇ ನೋಡುತ್ತಿದ್ದೆ. ಮತ್ತೆ, ಅವರ ಕೆನ್ನೆ. ಈ ಪಾಲಿಶ್ ಮಾಡಿದ ಅಮೃತಶಿಲೆ ಇರುತ್ತಲ್ಲ, ಅಷ್ಟು ನುಣುಪಾಗಿತ್ತು ಅದು. ಕುಂಚದಿಂದ ಬರೆದಂತಹ ಕಡುಗಪ್ಪು ಹುಬ್ಬುಗಳ ಮಧ್ಯದಲ್ಲೊಂದು ಕಂಡೂ ಕಾಣದಷ್ಟು ಸಣ್ಣ ಕಪ್ಪು ಸ್ಟಿಕರ್. ಅವರು ಮಾತಾಡುವಾಗ ಅವರ ಮಿತಪಾರದರ್ಶಕ ಹಸಿರು ಬಟ್ಟೆಯ ಹಿಂದಿನ ತುಟಿಗಳು ಊಂ, ಚಂದ ಕಾಣುತ್ತಿದ್ದವು. ‘ಹೀಗೇ ನೀವು ನನ್ನ ಪಕ್ಕದಲ್ಲಿ, ಇಷ್ಟು ಹತ್ತಿರದಲ್ಲಿ ನಿಂತಿರ್ತೀರಾ ಅಂದ್ರೆ ಮೂವತ್ತೆರಡೂ ಹಲ್ಲು ಹಾಳು ಮಾಡಿಕೊಂಡು ಬರ್ತೀನಿ ಡಾಕ್ಟ್ರೇ’ ಅಂತ ಮನಸಿನಲ್ಲೇ ಹೇಳಿಕೊಂಡೆ. ಆದರೆ “ಓಹ್..” “ಟೂ ಬ್ಯಾಡ್..” “ಈವನ್ ದಿಸ್ ಟೀತ್” ಎಂದೆಲ್ಲ ಅವರು ಉದ್ಘರಿಸುವಾಗ ಕಟುವಾಸ್ತವ ನೆನಪಾಗಿ, ನನಗಾಗುತ್ತಿದ್ದ ಅವಮಾನವನ್ನು ಹೀಗೆ ಬಾಯಿ ಕಳೆದುಕೊಂಡು ವ್ಯಕ್ತಪಡಿಸುವುದು ಹೇಗೆಂದು ತಿಳಿಯದೇ, ಒದ್ದಾಡಿದೆ. ಸುಮಾರು ಐದು ನಿಮಿಷದ ನಂತರ, “ಓಕೆ. ಗೆಟಪ್” ಎಂದು ಹೇಳಿ, ಅಂತೂ ಆ ಸುಖಾಸನದಿಂದ ನನ್ನನ್ನೆಬ್ಬಿಸಿದರು.

ನನ್ನ ಊಹೆಯ ಪ್ರಕಾರ ಈ ಡಾಕ್ಟರುಗಳ ಹೃದಯ ತುಂಬಾ ಗಟ್ಟಿಯಿರುತ್ತದೆ. ಅಥವಾ ಅವರಿಗೆ ಹೃದಯವೇ ಇರುವುದಿಲ್ಲ. ಅವರು ಯಾರ ಮೈಯ ಯಾವ ಭಾಗವನ್ನು ಬೇಕಾದರೂ ಕತ್ತರಿಸಬಲ್ಲರು. ಅವರಿಗೆ ತರಕಾರಿಯೂ ಒಂದೇ ಮನುಷ್ಯರೂ ಒಂದೇ. ಎಲ್ಲಿಗೆ ಬೇಕಾದರೂ ಹೊಲಿಗೆ ಹಾಕಬಲ್ಲರು. ಅವರು ಏನಕ್ಕೂ ಅಂಜುವುದಿಲ್ಲ. ಸುಲಭಕ್ಕೆಲ್ಲ ಪೆಗ್ಗು ಬೀಳುವುದಿಲ್ಲ. ಮರುಳಾಗುವುದಿಲ್ಲ. ಮೃದುವಾಗುವುದಿಲ್ಲ. ಅವರಿಗೆ ತಮ್ಮದೇ ಆದ ಸ್ಪಷ್ಟ ನಿಲುವುಗಳಿರುತ್ತವೆ. ತುಂಬಾ ಗಂಭೀರ ಸ್ವಭಾವದವರು. ಹಾಗಿದ್ದಾಗ, ಸೀ, ಈಗ ಇವಳ ಮೇಲಂತೂ ನನಗೆ ಪ್ರೀತಿಯಾಗಿಬಿಟ್ಟಿದೆ, ಇನ್ನು ಒಲಿಸಿಕೊಳ್ಳುವುದು ಹೇಗೆ? ನಾನು ಚಿಂತೆಗೆ ಬಿದ್ದೆ. ನಾನು ಕ್ಲಿನಿಕ್ಕಿಗೆ ಹೊಕ್ಕ ಕ್ಷಣದಿಂದಲೂ ಇವಳ ಕಣ್ಣಿನಲ್ಲಿ ಅವಮಾನಿತ ಬೇರೆ. ನಾನು ಇವಳಿಗೆ ಒಬ್ಬ ಪೇಶೆಂಟು ಅಷ್ಟೇ. ಹಲ್ಲನ್ನೆಲ್ಲಾ ಹುಳುಕು ಹಿಡಿಸಿಕೊಂಡಿರುವ ಒಬ್ಬ ಬಾಯ್ಕುರೂಪಿ. ನನ್ನ ಪ್ರೀತಿಯನ್ನು ಇವಳು ಒಪ್ಪಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಇವಳೇನಾದರೂ ಪ್ರೀತಿಸಿದರೆ ಎಲ್ಲಾ ಮೂವತ್ತೆರಡೂ ಹಲ್ಲೂ ಸರಿಯಿರುವ, ಫಳಫಳನೆ ಹೊಳೆಯುವಂತಿರುವ, ದಿನಕ್ಕೆ ಕನಿಷ್ಟ ಐವತ್ತು ಸಲ ಬ್ರಶ್ ಮಾಡುವ ಹುಡುಗನನ್ನೇ ಪ್ರೀತಿಸುತ್ತಾಳೆ. ಬಹುಶಃ ಕೋಲ್ಗೇಟ್ ಕಂಪನಿ ಓನರ್ರಿನ ಮಗನನ್ನೇ ಮದುವೆಯಾಗಬಹುದು. ಗ್ಯಾರೆಂಟಿ. ನೋ ಡೌಟು.

ಡಾಕ್ಟರು ನನ್ನನ್ನು ಮತ್ತೆ ತಮ್ಮ ಛೇಂಬರಿಗೆ ಕರೆದೊಯ್ದರು. ತಮ್ಮ ಡ್ರಾವರಿನಿಂದ ಪುಸ್ತಕವೊಂದನ್ನು ಹೊರತೆಗೆದು ಬರೆದುಕೊಳ್ಳತೊಡಗಿದರು:

“ಯುವರ್ ನೇಮ್?”
“ಸುಶ್ರುತ”
“ಸುಶ್ರುತ? ಓಹ್.. ಇಫ್ ಯು ಡೋಂಟ್ ಮೈಂಡ್, ಕ್ಯಾನೈ ಆಸ್ಕ್ ಯೂ ಸಮ್‌ಥಿಂಗ್? ಯೂ ಆರ್ ದಿ ಸೇಮ್ ಸುಶ್ರುತ ಹೂ ರೈಟ್ ಇನ್ ಬ್ಲಾಗ್ಸ್? ಸುಶ್ರುತ ದೊಡ್ಡೇರಿ?”
“ಯೆಸ್! ನಾನೇ!” ಇಷ್ಟಗಲ ಕಣ್ಣು ಬಿಡುತ್ತಾ ನಾನು ಹೇಳಿದೆ.
“ಓಹ್! ನಾನು ನಿಮ್ಮ ಬ್ಲಾಗಿನ ದೊಡ್ಡ ಫ್ಯಾನು! ವೆರಿ ನೈಸ್ ಮೀಟಿಂಗ್ ಯೂ! ತುಂಬಾ ಚನಾಗ್ ಬರೀತೀರಾ ನೀವು..”, ಖುರ್ಚಿಯಲ್ಲಿ ಕೂತಿರಲಾಗದೇ ಜಿಗಿದಾಡುತ್ತಾ ಹೇಳಿದಳು, “ಐ ಯಾಮ್ ಸೋ ಎಕ್ಸೈಟೆಡ್!”
ನಾನೂ ಅದೇ ಆಗಿದ್ದೆ. “ಓಹ್ ಥ್ಯಾಂಕ್ಯೂ ವೆರಿ ಮಚ್! ಥ್ಯಾಂಕ್ಯೂ..!” ಏನು ಹೇಳುವುದು ಅಂತಲೇ ಗೊತ್ತಾಗದೇ ಒದ್ದಾಡಿದೆ.
“ನಿಮ್ಮ ರೀಸೆಂಟ್ ಆರ್ಟಿಕಲ್.. ..” ಅವಳು ಇನ್ನೂ ಏನೇನೋ ಹೇಳತೊಡಗಿದಳು. ನಾನಾಗಲೇ ಆಕಾಶದಲ್ಲಿದ್ದೆ.

ನೋಡಿ, ನಾನು ಈ ಅದೃಷ್ಟ ಪಿದೃಷ್ಟಗಳನ್ನೆಲ್ಲಾ ಯಾವಾಗಲೂ ನಂಬಿದವನಲ್ಲ. ಆದರೂ ಕೆಲವೊಮ್ಮೆ ನಂಬುವಂತಾಗುತ್ತದೆ. ನಾನು ಚಿಕ್ಕವನಿದ್ದಾಗ ಸಿಕ್ಕಾಪಟ್ಟೆ ಚಾಕ್ಲೇಟು ತಿನ್ನುತ್ತಿದ್ದುದು, ಕೀಟಾಣುಗಳೆಲ್ಲಾ ಸೇರಿ ನನ್ನ ಹಲ್ಲಿನ ಮೇಲೆ ದಾಳಿ ಮಾಡಿ ಕುಳಿ ತೋಡಿದ್ದು, ನಾನು ಸರಿಯಾಗಿ ಬ್ರಶ್ ಮಾಡದೇ ಇದ್ದುದು, ನಿನ್ನೆ ಅಂಬೊಡೆ ತಿಂದಿದ್ದು, ಆಗ ಅದರಲ್ಲಿದ್ದ ಕಡಲೆ ಬೇಳೆ ಒತ್ತಿ ಹಲ್ಲಿನಲ್ಲಿ ನೋವು ಕಾಣಿಸಿಕೊಂಡದ್ದು, ರೂಂಮೇಟಿನ ಸಲಹೆಗೆ ಗೌರವ ತೋರಿಸಿ ಡಾಕ್ಟರನ್ನು ನೋಡುವ ತೀರ್ಮಾನ ತೆಗೆದುಕೊಂಡದ್ದು, ಹುಡುಹುಡುಕಿಕೊಂಡು ಇದೇ ಕ್ಲಿನಿಕ್ಕಿಗೆ ಬಂದದ್ದು, ಇಲ್ಲಿ ಇದೇ ಡಾಕ್ಟರು ಇದ್ದದ್ದು, ಇವರು ನನ್ನ ಬರಹಗಳನ್ನೆಲ್ಲಾ ಓದಿದ್ದು... ಯು ನೋ, ದೇರೀಸ್ ಸಮ್‌ಥಿಂಗ್ ಯಾರ್! ಏನಿರಬಹುದು ಅದು?

“ಅದು ಏನೂ ಅಲ್ಲ” ನನಗಿಂತ ಮೊದಲು ವಾಸ್ತವಕ್ಕೆ ಬಂದ ಡಾಕ್ಟರು ಹೇಳಿದರು, “ಅದು ಕೀಟಾಣು. ಜರ್ಮ್ಸ್ ಅಷ್ಟೇ. ಐದು ಡಿಕೇಸ್ ಇವೆ. ಕ್ಯಾವಿಟಿ ಫಿಲ್ ಮಾಡಿದ್ರೆ ಆಯ್ತು; ಯು ವಿಲ್ ಬಿ ಆಲ್ರೈಟ್. ಐದು ದಿನ ಬರಬೇಕಾಗತ್ತೆ. ಒಂದೊಂದು ದಿನ ಒಂದೊಂದು ಹಲ್ಲು. ಯಾವಾಗ ಬರ್ತೀರಾ?”
“ಆಂ.. ಯಾವಾಗಾದ್ರೂ ಓಕೇ. ನಾಳೆ? ಸಂಜೆ ಆರರ ನಂತರವಾದರೆ ಉತ್ತಮ” -ಹೇಳಿದೆ.
“ಸರಿ ಹಾಗಾದ್ರೆ. ನಾಳೆ ಸಿಕ್ಸ್ ಥರ್ಟಿಗೆ ಬನ್ನಿ” -ತಮ್ಮ ಕಾರ್ಡೊಂದನ್ನು ತೆಗೆದು ಕೊಟ್ಟರು.
“ಥ್ಯಾಂಕ್ಯೂ ಡಾಕ್ಟರ್” ನಾನು ಎದ್ದು ನಿಂತು ಕುಲುಕಲಿಕ್ಕೆ ಕೈ ಚಾಚಿ ಹೇಳಿದೆ.
“ಅಯ್ಯೋ.. ಡಾಕ್ಟರ್ ಅಂತೆಲ್ಲ ಕರೀಬಾರದು ನೀವು. ಪ್ರೀತಿಯಿಂದ ಹೆಸರು ಹೇಳಿ ಕರೀರಿ. ನಿಮ್ಮನ್ನ ಮೀಟ್ ಮಾಡಿ ತುಂಬಾ ಖುಶಿಯಾಯ್ತು ನಂಗೆ..” ಈ ಸಲ ತುಂಬಾ ಹೊತ್ತು ಅವರ ಕೈ ನನ್ನ ಹಸ್ತದಲ್ಲಿತ್ತು. ಮತ್ತದು ಆಗಿನಕಿಂತ ಮೃದುವಾಗಿತ್ತು. ಅಲೆಲೆಲೆ! ‘ಪ್ರೀತಿಯಿಂದ ಕರೀರಿ’ -ಹೌದಲ್ವಾ, ಹಾಗೇ ಹೇಳಿದಳಲ್ವಾ? ಗುನುಗುನು ಹಾಡುತ್ತಾ ಹೊರಬಂದೆ. ಕಾಯುತ್ತಿದ್ದ ಪೇಶೆಂಟುಗಳಲ್ಲಿ ಕೆಲವರು ಗದ್ದದ ಮೇಲೆ ಕೈ ಇಟ್ಟುಕೊಂಡಿದ್ದರು, ಕೆಲವರ ಮುಖ ಇಷ್ಟು ದೊಡ್ಡಕೆ ಊದಿಕೊಂಡಿತ್ತು, ಕೆಲವರದು ಮುದುಕರ ಕೆನ್ನೆಯಂತೆ ಬೊಚ್ಚಾಗಿತ್ತು... ಛೇ, ಇವರಿಗೆಲ್ಲಾ ಹೋಲಿಸಿದರೆ ನನ್ನದು ಏನೂ ಅಲ್ಲ. ಐದಾರು ಕುಳಿಗಳು ಅಷ್ಟೇ. ಮುಚ್ಚಿಸಿಬಿಟ್ಟರೆ ಮುಗಿಯಿತು. ನಾನೇ ರಾಜಕುಮಾರ. ಮತ್ತೆ ಅವಳೇ ರಾಜಕುಮ್..? ಯಾ ಯಾ ಯಾ..! ಏನಂದಳು? ‘ಪ್ರೀತಿಯಿಂದ..’ ರೈಟ್? ಗೆದ್ದೆ ನಾನು.

ಕೀಟಾಣೂಗೆ ಜೈ. ಅಂಬೊಡೆ ಅಂಗಡಿಯವನಿಗೆ ಜೈ. ರೂಂಮೇಟಿಗೂ ಜೈ.

* *

“ಏಯ್ ಏನಾಯ್ತೋ? ಜೈ ಜೈ ಅಂತಿದೀಯಾ? ಯಾವುದೋ ಚಳುವಳೀಲಿ ಭಾಗವಹಿಸಿದ ಕನಸು ಬಿತ್ತಾ?” ರೂಂಮೇಟು ತಟ್ಟಿ ಎಬ್ಬಿಸಿ ಕೇಳಿದ.
ಕಣ್ಬಿಟ್ಟೆ. ಕತ್ತಲೆ. ಎದ್ದು ಕೂತು ಲೈಟ್ ಹಾಕಿದೆ. ಗದ್ದವನ್ನು ಒತ್ತಿ ನೋಡಿಕೊಂಡೆ. ಹಲ್ಲು ಇನ್ನೂ ನೋಯುತ್ತಿತ್ತು. “ಥೂ ಇದರಜ್ಜಿ! ನಾನು ನಾಳೆ ಡಾಕ್ಟರ್ ಹತ್ರ ಹೋಗಲ್ಲ ಕಣೋ. ಸುಮ್ನೇ ಎಲ್ಲಾ ಕನಸು. ಅವಳು ನನ್ನನ್ನ ಒಪ್ಪಲ್ಲ. ಯಾವ ಡಾಕ್ಟ್ರೂ ಹಲ್ಲು ಹುಳುಕಾಗಿರೋ ಪೇಶೆಂಟ್‌ನ ಲವ್ ಮಾಡಲ್ಲ. ಶಿಟ್!” ಎಂದು ಬೈದುಕೊಂಡು, ಗೂಡಿನಲ್ಲಿದ್ದ ಮತ್ತೊಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿ ನೀರು ಕುಡಿದೆ.
“ಲವ್ವಾ? ಎಲ್ಲೋ? ಯಾವ ಡಾಕ್ಟ್ರೋ? ಏನೋ ಹೇಳ್ತಿದೀಯಾ?” ರೂಂಮೇಟು ಎದ್ದು ಕೂತು ಕೇಳಿದ.
“ಏನೂ ಇಲ್ಲ” ನಾನು ಲೈಟ್ ಆಫ್ ಮಾಡಿದೆ.
“ನಿಂಗೆಲ್ಲೋ ತಲೆ ಕೆಟ್ಟಿದೆ! ಹಲ್ಲಿನ ಕೀಟಾಣು ತಲೇಗೂ ದಾಳಿ ಮಾಡಿರ್ಬೇಕು” ಅವನು ಗೊಣಗಿಕೊಂಡ. ನನಗೂ ಹಾಗೇ ಅನಿಸಿತು. ಆದರೂ ಕನಸಿನಲ್ಲಾದರೂ ಒಬ್ಬ ಇಷ್ಟು ಚಂದದ ಹುಡುಗಿ ನನ್ನನ್ನು ಮುಟ್ಟುವಂತೆ, ಇಷ್ಟ ಪಡುವಂತೆ, ಪ್ರೀತಿ ಮಾಡುವಂತೆ ಮಾಡಿದ ಕೀಟಾಣೂಗೆ ಮನಸಿನಲ್ಲೇ ಥ್ಯಾಂಕ್ಸ್ ಮತ್ತು ಲವ್ಯೂ ಹೇಳುತ್ತಾ, ನಿದ್ರೆ ಮಾಡಲು ಪ್ರಯತ್ನಿಸಿದೆ.