ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ |
ಕುವೆಂಪುರವರ ಕಥನಕವನ 'ಬೊಮ್ಮನಹಳ್ಳಿಯ ಕಿಂದರಿಜೋಗಿ' ಶುರುವಾಗುವುದೇ ಹೀಗೆ. ಎಲ್ಲಾ ಹಳ್ಳಿಗಳಂತೆ ಅದೂ ಒಂದು ಹಳ್ಳಿ. ಆದರೆ ಅಲ್ಲಿ ಇಲಿಗಳ ಕಾಟ! ಇಲಿ ಯಾವೂರಲ್ಲಿಲ್ಲ ಹೇಳಿ? ಎಲ್ಲಾ ಊರಲ್ಲೂ ಎಲ್ಲರ ಮನೆಯಲ್ಲೂ ಇದ್ದದ್ದೇ ಇಲಿ ಕಾಟ. ಆದರೆ ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ ಮಿತಿ ಮೀರಿದೆ. ಎಷ್ಟು ಅಂತೀರಾ? ಅಲ್ಲಿನ ಇಲಿಗಳಿಗೆ ಹೆದರಿಕೆ ಬೆದರಿಕೆ ಒಂದೂ ಇಲ್ಲ.. ಅವು ನಾಯಿ, ಬೆಕ್ಕುಗಳನ್ನೇ ಕಡಿಯುತ್ತವೆ..! ಅಡುಗೆ ಭಟ್ಟನ ಕೈಯ ಸಟುಗವನ್ನು ಭೀತಿಯಿಲ್ಲದೇ ನೆಕ್ಕುತ್ತವೆ..! ಟೋಪಿ ಒಳಗೇ ಗೂಡು ಮಾಡಿಕೊಳ್ಳುತ್ತವೆ, ಪೇಟದ ಒಳಗೆ ಆಟವಾಡ್ತವೆ, ಗೋಡೆಗೆ ತಗುಲಿಸಿದಂಗಿಯ ಜೇಬನು ದಿನವೂ ಜಪ್ತಿಯ ಮಾಡುತ್ತವೆ..! ಮಲಗಿದ್ದ ಶೇಶಕ್ಕ ಬೆಳಗೆದ್ದು ನೋಡುವಾಗ ಕೇಶವೇ ಇಲ್ಲ! ಸಿದ್ದೋಜೈಗಳು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಅವರ ಜೇಬಿನಿಂದ ಇಲಿಯೊಂದು ಛಂಗನೆ ನೆಗೆದು, ಮಕ್ಕಳೆಲ್ಲಾ ಗೇಲಿ ಮಾಡಿ, ಮೇಷ್ಟರಿಗೆ ತುಂಬಾ ಅವಮಾನವಾಗುತ್ತದೆ.
ಇಲಿಗಳ ಕೊಲ್ಲಲು ಜನಗಳು ಮಾಡಿದ ನಾನಾ ಯತ್ನ ನಿಶ್ಫಲವಾಗಲು ಊರ ಗೌಡ ಈ ಇಲಿಗಳನ್ನು ಕೊಂದವರಿಗೆ ಆರು ಸಾವಿರ ನಾಣ್ಯಗಳನ್ನು ಕೊಡುವುದಾಗಿ ಘೋಶಿಸುತ್ತಾನೆ. ಆಗ ಬರುತ್ತಾನೆ ನಮ್ಮ ಕಿಂದರಿಜೋಗಿ.. ಅವನು ಕಿಂದರಿ ಊದಿದ್ದೇ ಇಲಿಗಳೆಲ್ಲ ಬುಳಬುಳನೆ ಹೊರಬರುತ್ತವೆ, ಜೋಗಿಯನ್ನೇ ಹಿಂಬಾಲಿಸುತ್ತವೆ. ಯಾವ್ಯಾವ ಥರದ ಇಲಿಗಳು ಅವು: ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ, ಸಣ್ಣಿಲಿ, ದೊಡ್ಡಿಲಿ, ಸುಂಡಿಲಿ, ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ -ಎಲ್ಲಾ ಬಂದುವಂತೆ ಓಡೋಡಿ... ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ, ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ, ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು... ಹೀಗೆ ಕುವೆಂಪುರವರ ಶಬ್ದ ಭಂಡಾರದೊಳಗಿದ್ದ ಇಲಿಗಳೆಲ್ಲ ಹೊರಬರುತ್ತವೆ.
ಜೋಗಿ ಕಿಂದರಿ ಊದುತ್ತಾ ಊದುತ್ತಾ ಇಲಿಗಳನ್ನೆಲ್ಲಾ ಮೋಡಿ ಮಾಡಿ ಅವೆಲ್ಲಾ ಹೊಳೆಯಲ್ಲಿ ಮುಳುಗಿ ಸಾಯುವಂತೆ ಮಾಡುತ್ತಾನೆ. ಆಮೇಲಿನ ಕಥೆ ನಿಮಗೆ ಗೊತ್ತೇ ಇದೆ: ಗೌಡ ಮಾತಿಗೆ ತಪ್ಪುತ್ತಾನೆ; ಹೇಳಿದಂತೆ ಆರು ಸಾವಿರ ನಾಣ್ಯ ಕೊಡುವುದಿಲ್ಲ. ಆಗ ಜೋಗಿ ಮತ್ತೆ ಕಿಂದರಿ ಊದುತ್ತಾನೆ, ಊರಿನ ಮಕ್ಕಳೆಲ್ಲಾ ಅವನ ಹಿಂದೆ ಹೋಗುತ್ತವೆ, ಬೆಟ್ಟವೊಂದು ಬಾಯಿ ತೆರೆಯುತ್ತದೆ, ಅದರೊಳಗೆ ಜೋಗಿ - ಅವನ ಹಿಂದೆಯೇ ಮಕ್ಕಳು - ಕೊನೆಗೆ ಉಳಿದವನೊಬ್ಬನೇ ಕುಂಟ. 'ಅಯ್ಯೋ ಹೋಯಿತೆ ಆ ನಾಕ! ಅಯ್ಯೋ ಬಂದಿತೆ ಈ ಲೋಕ!'
* * *
ಇಲಿಗಳ ಜೊತೆ ಗುದ್ದಾಡುವುದು ಕಷ್ಟ. ಮನೆಯೊಳಗೆ ಒಂದು ಇಲಿ ಹೊಕ್ಕಿಕೊಂಡಿತೆಂದರೇ ತಲೆಬಿಸಿ ನಿಭಾಯಿಸಲಿಕ್ಕಾಗುವುದಿಲ್ಲ; ಇನ್ನು ನೂರಾರು ಇಲಿಗಳು ಸೇರಿಬಿಟ್ಟರೆ ಗತಿಯೇನು ಹೇಳಿ? ಈ ಇಲಿಗಳ ವಾಸಕ್ಕೆ ಸಂದಿಗೊಂದಿಯೇ ಆಗಬೇಕು. ಓಡಾಟಕ್ಕೆ ಗೋಡೆಬದಿಯೇ ಆಗಬೇಕು. ರಾಜಾರೋಶವಾಗಿ ಕೋಣೆಯ ಮಧ್ಯದಲ್ಲಿ ಇವು ಓಡಾಡುವುದನ್ನು ನಾನು ಕಂಡಿದ್ದೇ ಇಲ್ಲ. ಉಗ್ರಾಣದಲ್ಲಿನ ಚೀಲಗಳನ್ನು ಕೊರೆಯುವುದು, ಸ್ಟ್ಯಾಂಡಿನಲ್ಲಿನ ಬಟ್ಟೆಗಳನ್ನು ತೂತು ಮಾಡುವುದು, ಗ್ಯಾಸ್‍ಕಟ್ಟೆಯ ಮೇಲಿದ್ದ ಕಾಯಿಕಡಿಯನ್ನು ಎತ್ತಿಕೊಂಡು ಹೋಗುವುದು -ಇತ್ಯಾದಿ ಕಿತಾಪತಿ ಕೆಲಸಗಳನ್ನು ಮಾಡುವುದೇ ಇವುಗಳ ಜಾಯಮಾನ. ಹಾಕಿದಷ್ಟನ್ನು ತಿಂದುಕೊಂಡು, ಶಿಸ್ತಾಗಿ ಓಡಾಡಿಕೊಂಡಿದ್ದು, ಕೋಣೆಯಲ್ಲಿ ಒಂದು ಕಡೆ ಮಲಗೆದ್ದು ಹೋಗುವಂತಿದ್ದರೆ ಇವನ್ನೂ ನಾಯಿ-ಬೆಕ್ಕುಗಳಂತೆ ಸಾಕಬಹುದಿತ್ತೇನೋ ಎಂದು ನಾನು ಯೋಚಿಸಿದ್ದಿದೆ.
ಈ ಇಲಿಗಳ ಮೂಗು ಬಹು ಚುರುಕು. ಹತ್ತಾರು ಮಾರು ದೂರದಲ್ಲಿ ಬಿದ್ದಿರುವ ಕಾಯಿಚೂರಿನ ಪರಿಮಳವನ್ನೂ ಇವು ಗ್ರಹಿಸಿ, ಅಲ್ಲಿಗೆ ಧಾವಿಸಿ, ಅದನ್ನು ಗುಳುಂ ಮಾಡಬಲ್ಲವು. ಬಹುಶಃ ಗಣೇಶ ಈ ಇಲಿಯನ್ನೇ ತನ್ನ ವಾಹನವನ್ನಾಗಿ ಆರಿಸಿಕೊಂಡಿರುವ ಹಿಂದೆ ಈ ಕಾರಣವೂ ಇದ್ದಿರಬಹುದು. ಸದಾ ಹಸಿದ ಹೊಟ್ಟೆಯ ಈ ಟೊಣಪನಿಗೆ ಆಹಾರ ಎಲ್ಲಿದೆ ಎಂದು ಪತ್ತೆಹಚ್ಚಿ, ಅಲ್ಲಿಗೆ ಕರೆದೊಯ್ದು ಕೊಡಿಸುವ ಆಶ್ವಾಸನೆಯನ್ನು ಇಲಿ ಕೊಟ್ಟಿರಬೇಕು. ಹಾಗಾಗೇ ಇವನು ಇಲಿಗೆ ತನ್ನ ಟ್ರಾವೆಲ್ ಕಾಂಟ್ರಾಕ್ಟ್ ವಹಿಸಿಕೊಟ್ಟಿರುವುದು. ಹಾಗೆ ನೋಡಿದರೆ, ಪ್ರಥಮಪೂಜಿತ ಗಣೇಶನ ವಾಹನವನ್ನು ನಾವೆಲ್ಲಾ ಅರ್ಚಿಸಿ ಗೌರವಿಸಬೇಕು. ಆಫ್ಟರಾಲ್ ಒಬ್ಬ ಮಂತ್ರಿಯ ಕಾರಿಗೆ - ಅದರ ಡ್ರೈವರಿಗೆ ಎಷ್ಟು ಗೌರವ ಇರುತ್ತದೆ ಯೋಚಿಸಿ? ಮೊದಲು ಅವನಿಗೆ ಸೆಲ್ಯೂಟ್ ಹೊಡೆದೇ 'ಸಾಯೇಬ್ರು ಯಾವ ಮೂಡಲ್ಲವ್ರೆ?' ಅಂತ ಕೇಳೋದಿಲ್ಲವಾ? ಅಂಥಾದ್ದರಲ್ಲಿ, ಗಜಮುಖನ ವಾಹನವೆಂದಾದರೂ ನಾವು ಇಲಿಗೆ ಸ್ವಲ್ಪ ಕನ್ಸಿಡರೇಶನ್ ಕೊಡಬಹುದಿತ್ತು. ಆದರೆ ಅದರದ್ದು ಅದೇನು ಕರ್ಮವೋ ಏನೋ, ಜನ ಅದನ್ನು ತಮ್ಮ ಆಜನ್ಮ ಶತ್ರುವೆಂಬಂತೆ ಪರಿಗಣಿಸಿಬಿಟ್ಟಿದ್ದಾರೆ. ಕಣ್ಣಿಗೆ ಬಿದ್ದರೆ ಹೊಡೆಯಲಿಕ್ಕೆ ದೊಣ್ಣೆ ಎಲ್ಲಿದೆ ಹುಡುಕುತ್ತಾರೆ.
ನಮ್ಮ ಹಳೆ ಮನೆಯಲ್ಲಿ ಇಲಿಗಳ ಕಾಟ ಜೋರಿತ್ತು. ಅದು ಮಣ್ಣುಗೋಡೆಯ ಮನೆಯಾಗಿದ್ದರಿಂದ ಇವಕ್ಕೆ ಬಿಲ ತೋಡಲಿಕ್ಕೆ ಬಹಳ ಸುಲಭವಾಗಿತ್ತು. ರಾತ್ರಿಯಾಯಿತೆಂದರೆ ಸಾಕು, ಕೊಟ್ಟಿಗೆ ಮನೆಯಿಂದಲೋ ಮತ್ತೆಲ್ಲಿಂದಲೋ ಮನೆಯೊಳಗೆ ಟುಕುಟುಕನೆ ಆಗಮಿಸುತ್ತಿದ್ದ ಇವು ಕಣ್ಣು ಮಿಟುಕಿಸುವುದರೊಳಗೆ ಒಳಗೆಲ್ಲೋ ಹೋಗಿ ಸೇರಿಕೊಂಡುಬಿಡುತ್ತಿದ್ದವು. ಮಂಚದಡಿಗೋ, ಕಪಾಟಿನ ಕೆಳಗೋ ಅಡಗಿಕೊಂಡಿರುತ್ತಿದ್ದ ಇವು ನಾವು ಲೈಟೆಲ್ಲಾ ಆಫ್ ಮಾಡಿ ಮಲಗಿದಮೇಲೆ ಕಾರ್ಯಾಚರಣೆಗೆ ಇಳಿಯುತ್ತಿದ್ದವು. ಸೀದಾ ಅಡುಗೆಮನೆಗೆ ಹೋಗಿ ಸ್ಟ್ಯಾಂಡ್ ಹತ್ತಿ ಢಣಾರನೆ ಯಾವುದಾದರೂ ಪಾತ್ರೆ ಕೆಡವುವುದೋ, ಗೋಡೌನಿಗೆ ಹೋಗಿ ಕೊರಕೊರ ಎಂದು ಹೊಸ ಕನ್ನ ಕೊರೆಯುವುದೋ ಮಾಡುತ್ತಾ, ತಮ್ಮತಮ್ಮಲ್ಲೇ ಕಿಚಪಿಚ ಎಂದು ಕಾನ್ವರ್ಸೇಶನ್ ಮಾಡಿಕೊಳ್ಳುತ್ತಾ ನಮ್ಮ ನಿದ್ದೆಗೆಡಿಸುತ್ತಿದ್ದವು. ಆಗ ಅಜ್ಜಿ "ಥೋ, ಈ ಇಲಿ ಕಾಲದಲ್ಲಿ ಆಗಲ್ಯೇ" ಎಂದು ಗೊಣಗುತ್ತಾ ಲೈಟ್ ಹಾಕಿದ್ದೇ ತಡ, ಸದ್ದು ಬಂದ್! ಅಡುಗೆಮನೆಗೆ ಹೋಗಿ ಬಿದ್ದಿದ್ದ ಪಾತ್ರೆ ಎತ್ತಿಟ್ಟು ಬಂದು, ದೀಪವಾರಿಸಿ ಮಲಗಿದ ಐದು ನಿಮಿಷಕ್ಕೆ ಮತ್ತೆ ಶುರುವಾಗುತ್ತಿತ್ತು ಸದ್ದು..!
ನೋಡೀ, ವಿನಾಕಾರಣ ಈ ಮಲಗಿದ್ದ ಮನುಷ್ಯನ ನಿದ್ದೆ ಕೆಡಿಸುವುದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಆಗ ಆತನ ಕೋಪ ನೆತ್ತಿಗೇರಿಬಿಡುತ್ತದೆ. ಆತ ತನ್ನ ನಿದ್ರಾಹರಣಕ್ಕೆ ಕಾರಣರಾದವರನ್ನು ಮುಗಿಸಲಿಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಅದಕ್ಕೆ ನನ್ನ ಅಜ್ಜಿಯೇ ಉದಾಹರಣೆ. ಅಜ್ಜಿಯ ಮಂಚದ ಪಕ್ಕದಲ್ಲಿ ಯಾವಾಗಲೂ ಒಂದು ದೊಣ್ಣೆ ಇರುತ್ತಿತ್ತು. ನಿದ್ದೆಗಣ್ಣ ಆಕೆ ಅದನ್ನು ಕೈಗೆತ್ತಿಕೊಳ್ಳುತ್ತಿದ್ದಳು. 'ಎಲಾ ಇಲಿಯೇ, ಎಲ್ಲಿರುವೆ ನೀನು? ನನ್ನ ಮುಂದೆ ನಿನ್ನಾಟವೇನೂ ನಡೆಯದು. ಇಗೋ, ನಿನ್ನ ಆಯುಷ್ಯ ಇಂದಿಗೆ ಮುಗಿಯಿತೆಂದೇ ತಿಳಿದುಕೋ' ಎಂದು ಮನಸಿನಲ್ಲಿಯೇ ಅಬ್ಬರಿಸಿ, ರಣಚಂಡಿ ಅವತಾರ ತಾಳಿ ಇಲಿ ಎಲ್ಲೈತೆ ಎಲ್ಲೈತೆ ಎಂದು ಹುಡುಕುತ್ತಾ ಮನೆಯನ್ನೆಲ್ಲಾ ಜಾಲಾಡಿ ಒಂದಾದರೂ ಇಲಿಯನ್ನು ಹೊಡೆದು ತನ್ನ ದೊಣ್ಣೆಗೆ ಸವರಿದ್ದ ನೆತ್ತರನ್ನು 'ಜೋಗಿ' ಚಿತ್ರದ ಶಿವರಾಜ್‍ಕುಮಾರ್ ಸ್ಟೈಲಲ್ಲಿ ನೋಡಿ ಸಂತೃಪ್ತಿ ಪಟ್ಟುಕೊಂಡ ನಂತರವೇ ಮಲಗುತ್ತಿದ್ದಳು. ಅಷ್ಟರಲ್ಲೇ ಒಂದೆರಡು ರೌಂಡು ಸಣ್ಣ ನಿದ್ರೆಗಳನ್ನು ಪೂರೈಸಿ ಎಚ್ಚರಾಗಿರುತ್ತಿದ್ದ ನಾನು, ಅಜ್ಜಿ ಈ ಹತ್ಯಾಕಾಂಡಕ್ಕೆ ಮುಂದಾಗುವಾಗ ಅವಳ ಹಿಂದೆಯೇ ಹೋಗಿ, ಅವಳು ಕೊಲೆ ಎಸಗುವುದನ್ನು ಕಣ್ತುಂಬ ನೋಡಿ, ಆಮೇಲಷ್ಟೇ 'ಕ್ರೈಂ ಡೈರಿ' ವೀಕ್ಷಕನಂತೆ ನಿದ್ರೆ ಹೋಗುತ್ತಿದ್ದೆ.
ಈ ದೇವರು ಎಂಬಾತ, ಪ್ರಾಣಿಗಳಿಗೆ ಬುದ್ಧಿಶಕ್ತಿಯನ್ನು ಅಲಾಟ್ ಮಾಡುವಾಗ ತುಂಬಾನೇ ಪಕ್ಷಪಾತ ಮಾಡಿಬಿಟ್ಟ. ಮನುಷ್ಯನಿಗೆ ಸಿಕ್ಕಾಪಟ್ಟೆ ಬುದ್ಧಿ ಕೊಟ್ಟು, ಉಳಿದ ಪ್ರಾಣಿಗಳಿಗೆ ತಮ್ಮ ಆಹಾರ ಹುಡುಕಿಕೊಳ್ಳಲಿಕ್ಕೆ - ಬದುಕಿಕೊಳ್ಳಲಿಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬುದ್ಧಿ ಕೊಟ್ಟ. ಈ ಮನುಷ್ಯ ಏನು ಮಾಡಿದಾ, ಇಲಿಗತ್ತರಿ - ಇಲಿಬೋನು ಇತ್ಯಾದಿ ಮಷಿನ್ನುಗಳನ್ನು ಕಂಡುಹಿಡಿದ. ಇಲಿಪಾಶಾಣದಂತಹ ವಿಷಗಳನ್ನು ಕಂಡುಹಿಡಿದ. 'ಪ್ರತಿದಿನ ನಿದ್ರೆ ಕೆಡಿಸಿಕೊಂಡು ಇಲಿ ಹೊಡೆಯುವುದ್ಯಾಕ? ಇಟ್ಟರೆ ಒಂದು ಹಿಡಿ ಪಾಶಾಣ ಸಾಕ!' ಎಂದು ಜಾಹೀರಾತು ಮಾದರಿಯಲ್ಲಿ ತನಗೆ ತಾನೇ ಹೇಳಿಕೊಂಡು, ಇಲಿಗೆ ಪ್ರಿಯವಾಗುವ ಯಾವುದೇ ತಿಂಡಿಯ ಜೊತೆ ಈ ಪುಡಿಯನ್ನು ಕಲಸಿ, ಅದು ಓಡಾಡುವ ದಾರಿಯಲ್ಲಿ ಇಟ್ಟುಬಿಟ್ಟ. ಇಲಿ ಪಾಪ ವಾಸನೆ ಗ್ರಹಿಸಿಕೊಂಡು ಬಂತು, 'ತನಗಾಗಿಯೇ' ಎಂಬಂತೆ ಇಟ್ಟಿರುವ ಆಹಾರವನ್ನು ತಿಂತು, ಅಟ್ಟದ ಮೇಲೋ ಗೋಡೌನಿನ ಮೂಲೆಗೋ ಹೋಗಿ ಸತ್ತಿತು. ಆಮೇಲೆ ಮನೆಯಿಡೀ ದುರ್ನಾತ! "ಓಹ್ ಎಲ್ಲೋ ಇಲಿ ಸತ್ತಿದ್ದು ಕಾಣ್ತು" ಎನ್ನುತ್ತಾ ಮೂಗಿಗೆ ಸೆರಗು ಮುಚ್ಚಿಕೊಳ್ಳುವ ಅಮ್ಮ; ಬ್ಯಾಟರಿ ಬಿಟ್ಟುಕೊಂಡು ಹುಡುಕುವ ಅಪ್ಪ; ಗೂಡಚರ ಸಂಸ್ಥೆಯ ವಕ್ತಾರನಂತೆ ಕತ್ತಲ ಮೂಲೆಯಲ್ಲಿ ಹಾರಾಡುವ ನೊಣಗಳಿಂದಾವೃತ ಹೆಣವನ್ನು ಪತ್ತೆಹಚ್ಚುತ್ತಿದ್ದ ನಾನು; ನಂತರ ಶವದ ವಿಲೇವಾರಿ.
ಇವೆಲ್ಲಾ ಸ್ವಲ್ಪ ರಗಳೆಯ ವಿಷಯ ಎನ್ನಿಸಿತು ನಮಗೆ. ಅಲ್ಲದೇ ಈ ಪಾಶಾಣವನ್ನು ತಿಂದಮೇಲೆ ಕುಡಿಯಲಿಕ್ಕೆ ನೀರೇನಾದರೂ ಸಿಕ್ಕಿಬಿಟ್ಟರೆ ಇಲಿ ಬದುಕಿಕೊಂಡುಬಿಡುತ್ತಿತ್ತು. ವಿಷ ತಿಂದೂ ಅರಗಿಸಿಕೊಂಡು ತನ್ನ ಬಾಸ್ ಗಣೇಶನ ಬಳಿ 'ನಿನ್ನಪ್ಪ ವಿಷಕಂಠನಿಗಿಂತ ನಾನೇನು ಕಮ್ಮಿ?' ಎಂಬಂತೆ ಮೀಸೆ ತಿರುವುತ್ತಿತ್ತು. ಈ ಬಾರಿ ಅಜ್ಜಿ ಇಲಿಗತ್ತರಿ ಎಂಬ ಹತಾರವನ್ನು ಉಪಯೋಗಿಸಿದಳು. ಒಂದು ಸಣ್ಣ ಕಾಯಿಚೂರನ್ನೋ, ಬೋಂಡವನ್ನೋ ಈ ಕತ್ತರಿಯ ಮಧ್ಯಕ್ಕೆ ಸಿಕ್ಕಿಸಬೇಕು. ಇದೊಂದು ಭಾರೀ ಅಪಾಯದ ಅಸ್ತ್ರ. ಇದನ್ನು ಹೂಡಿ ಇಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಕೈಯೇ ತುಂಡಾಗುವ ಸಾಧ್ಯತೆ ಇರುತ್ತದೆ. ತಿಂಡಿಯನ್ನು ತಿನ್ನಲಿಕ್ಕೆಂದು ಈ ಕತ್ತರಿಯನ್ನೇರಿ ಇಲಿ ಬಾಯಿ ಹಾಕಿದ್ದೇ ಇದರ ಎರಡಲಗುಗಳೂ ಮುಚ್ಚಿಕೊಂಡು, ಇಲಿ ಮಧ್ಯದಲ್ಲಿ ಸಿಕ್ಕಿಕೊಂಡು, 'ಸ್ಪಾಟ್ ಡೆತ್' ಆಗುತ್ತದೆ! ಅಜ್ಜಿ ಪರಮಾನಂದತುಂದಿಲಳಾಗಿ ಮರುದಿನ ಅದನ್ನು ಹೊರಗೆಸೆಯುತ್ತಾಳೆ. ಕಾಗೆಗಳು 'ಥ್ಯಾಂಕ್ಸ್ ಫಾರ್ ದಿ ಬ್ರೇಕ್‍ಫಾಸ್ಟ್' ಅಂತಂದು ಕಚ್ಚಿಕೊಂಡು ಹೋಗುತ್ತವೆ.
ಇಲಿಗತ್ತರಿಯ ನಂತರ ನಮ್ಮ ಮನೆಗೆ ಬಂದ ಇಲಿಸಂಹಾರೀ ಯಂತ್ರ ಇಲಿಬೋನು. ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದ ಇದು, ಶತ್ರುವನ್ನು ಕೊಲ್ಲುತ್ತಿರಲಿಲ್ಲ; ಸಜೀವ ಸೆರೆ ಹಿಡಿಯುತ್ತಿತ್ತು! ಅಗೇನ್ ಇದರ ಪ್ರಯೋಗಕ್ಕೆ ಬೇಕಾದ ಮದ್ದೂ ಒಂದು ಕಾಯಿಚೂರು ಅಥವಾ ಕರಿದ ತಿಂಡಿ. ಬೋನಿನೊಳಗೆ ಇಳಿಬಿಟ್ಟಿದ್ದ ಕೊಕ್ಕೆಗೆ ತಿಂಡಿಯನ್ನು ಸಿಕ್ಕಿಸಿಡುವುದು. ಕತ್ತಲಲ್ಲಿ ಇಲಿ ಇದರೊಳಗೆ ಹೋಗಿ ತಿಂಡಿಯನ್ನು ಕಚ್ಚಿದಾಕ್ಷಣ ಬೋನಿನ ಬಾಗಿಲು ಹಾಕಿಕೊಂಡು ಇಲಿ ಬಂಧಿಯಾಗಿಬಿಡುತ್ತಿತ್ತು! ಬೆಳಗ್ಗೆ ಎದ್ದು ನೋಡಿದರೆ, ದಿಕ್ಕೆಟ್ಟು ಜೈಲಿನೊಳಗೆ ಅತ್ತಿತ್ತ ಓಡಾಡುತ್ತಾ, ಕಿಂಡಿಗಳಿಂದ ತನ್ನ ಮೂತಿಯನ್ನು ಹೊರತೂರಿಸುತ್ತಾ ಒದ್ದಾಡುತ್ತಿರುವ ಇಲಿರಾಯ! ನನಗೆ ಖುಷಿಯೋ ಖುಷಿ. ಸದ್ಧಾಂ ಸಿಕ್ಕಿಬಿದ್ದಾಗ ಅಮೇರಿಕನ್ನರೂ ಅಷ್ಟು ಹಾರಾಡಿದ್ದರೋ ಇಲ್ಲವೋ, ನಾನಂತೂ ಬೋನೆತ್ತಿಕೊಂಡು ಕೇಕೆ ಹಾಕುತ್ತಾ ಇಡೀ ಮನೆಯೆಲ್ಲಾ ಹಾರಾಡುತ್ತಿದ್ದೆ. ನಂತರ ಒಂದು ಬಕೆಟ್ಟಿಗೆ ನೀರು ತುಂಬಿ ಅದರಳೊಗೆ ಬೋನನ್ನು ಮುಳುಗಿಸುವುದು. ಇಲಿ ಉಸಿರುಗಟ್ಟಿ ಸಾಯುತ್ತಿತ್ತು.
ಹಾಗಂತ ಇಲಿಗಳು ನಮ್ಮ ಯುದ್ಧತಂತ್ರಗಳಿಂದ ತಪ್ಪಿಸಿಕೊಂಡು ಹೋದ ಘಟನೆಗಳೂ ಇಲ್ಲದಿಲ್ಲ. ಇಲಿಗತ್ತರಿಯಂತಹ ಅಪಾಯಕಾರಿ ಶಸ್ತ್ರದಲ್ಲೂ ಸಿಕ್ಕಿ ಸಾಯದೇ ಅದರಲ್ಲಿಟ್ಟಿದ್ದ ತಿಂಡಿಯನ್ನಷ್ಟೇ ಇವು ಎಗರಿಸಿಕೊಂಡು ಹೋದದ್ದಿದೆ. ಇಲಿ ತುಂಬಾ ಲೈಟ್‍ವೆಯ್ಟ್ ಆಗಿದ್ದರೆ ಆಗ ಕತ್ತರಿ ಆಪರೇಟ್ ಆಗುತ್ತಲೇ ಇರಲಿಲ್ಲ. ಇಲಿ ಆರಾಮಾಗಿ ತಿಂಡಿ ತಿಂದುಕೊಂಡು ಹೋಗಿಬಿಡುತ್ತಿತ್ತು. (ಈ ಗುಟ್ಟು ಎಲ್ಲಾ ಇಲಿಗಳಿಗೂ ಗೊತ್ತಾಗಿದ್ದರೆ, ಅವೆಲ್ಲಾ ಡಯಟ್ ಮಾಡಿ ತೂಕ ಇಳಿಸಿಕೊಂಡು ಕತ್ತರಿಯನ್ನು ಒಂದು ನಿಶ್ಪ್ರಯೋಜಕ ಅಸ್ತ್ರವನ್ನಾಗಿ ಮಾಡಿಬಿಡುತ್ತಿದ್ದವೇನೋ?!) ಮತ್ತೆ ಕೆಲ ಶಕ್ತಿಶಾಲೀ ಹೆಗ್ಗಣಗಳು ಬೋನಿನ ಬಾಗಿಲನ್ನು ತಳ್ಳಿಕೊಂಡು ಹೊರಗೋಡಿಹೋದದ್ದೂ ಇದೆ. ಕೆಲ ಪುಟಾಣಿ ಇಲಿಗಳು ಬೋನಿನಲ್ಲಿ ಸಿಕ್ಕಿಬಿದ್ದರೂ, ಬೋನಿನ ಸಣ್ಣ ಕಿಂಡಿಯಿಂದಲೇ ತೂರಿ, ತಿಂಡಿಯನ್ನೂ ತಿಂದು ಪರಾರಿಯಾಗಿ ನಮಗೆ ಚಳ್ಳೇಹಣ್ಣು ತಿನ್ನಿಸಿದ್ದಿದೆ.
ಇಷ್ಟಕ್ಕೂ ಇಲಿ ಕಾಟದ ಪರಿಹಾರಕ್ಕೆ ಎಲ್ಲರಂತೆ ನಾವೂ ಬೆಕ್ಕು ಸಾಕಲಿಲ್ಲವೇ ಎಂದು ನೀವು ಯೋಚಿಸಬಹುದು. ನಮ್ಮ ಪಕ್ಕದ ಮನೆಯಲ್ಲಿ ಸಾಕಿದ್ದರು. ಆದರೆ ಅದು ಮರಿಬೆಕ್ಕು. ಅದಕ್ಕೆ ಯಾವ ಇಲಿಯೂ ಹೆದರುತ್ತಿರಲಿಲ್ಲ. ಅವು ಗುಂಪಾಗಿ ಬಂದು 'ಇಲಿಗೆ ಚೆಲ್ಲಾಟ; ಬೆಕ್ಕಿಗೆ ಪ್ರಾಣಸಂಕಟ' ಎಂಬಂತೆ ಬೆಕ್ಕನ್ನೇ ಹೆದರಿಸುತ್ತಿದ್ದವು. ದಡಿಯ ಹೆಗ್ಗಣಗಳನ್ನು ಕಂಡರಂತೂ ಈ ಬೆಕ್ಕಿನ ಮರಿ ತಾನೇ ಓಡಿ ಹೋಗುತ್ತಿತ್ತು. ಇದನ್ನು ನೋಡಿದ್ದ ನನಗೆ ಬೆಕ್ಕು ಸಾಕುವ ತಲುಬು ಬರಲೇ ಇಲ್ಲ. ಅಲ್ಲದೇ ಹಿಂದೊಮ್ಮೆ ನಾಯಿಮರಿ ಸಾಕಿ, ಅದು ನನಗೆ ಅತಿಯಾಗಿ ಹೊಂದಿಕೊಂಡುಬಿಟ್ಟು, ನಾನು ಹೋದಲ್ಲೆಲ್ಲಾ ಹಚ್ ನೆಟ್‍ವರ್ಕಿನಂತೆ ನನ್ನ ಹಿಂದೆಯೇ ಬರತೊಡಗಿ, ಒಂದು ದಿನ ತೋಟಕ್ಕೆ ಹೋಗುತ್ತಿದ್ದಾಗ ನನ್ನ ಹಿಂದೆ ಬಂದ ಇದನ್ನು ಪಟೇಲರ ಮನೆಯ ನಾಯಿ ಕಚ್ಚಿ ಕೊಂದು ಹಾಕಿದ ಮೇಲೆ ನಾನು ಇನ್ನು ಯಾವ ಪ್ರಾಣಿಯನ್ನೂ ಸಾಕಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೆ. ಪ್ರೀತಿಪಾತ್ರ ಸಾಕುಪ್ರಾಣಿಗಳನ್ನು ಕಳೆದುಕೊಳ್ಳುವ ದುಃಖ ಯಾವ ದುಃಖಕ್ಕೂ ಕಮ್ಮಿಯಲ್ಲ.
ನಾವು ಹೊಸ ಮನೆಗೆ ಬಂದಮೇಲೆ ಇಲಿಗಳ ಕಾಟ ಪ್ರಾಯಶಃ ನಿಂತೇ ಹೋಯಿತು. ಸಿಮೆಂಟ್ ಗೋಡೆ-ಟೈಲ್ಸ್ ನೆಲ ಅವಕ್ಕೆ ಸರಿ ಬರಲಿಲ್ಲವೇನೋ, 'ನಿಮ್ಮ ಹೊಸಮನೆ ನಿಮಗೇ ಇರ್ಲಿ' ಅಂತ ಬಿಟ್ಟುಕೊಟ್ಟು ಅವು ಹಳೆಯ ಕೊಟ್ಟಿಗೆ ಮನೆ, ಕಟ್ಟಿಗೆ ಮನೆ, ಬಚ್ಚಲು ಮನೆಗಳಲ್ಲೇ ಸಂಸಾರ ಹೂಡಿದವು. ಹಿಂಡಿಚೀಲಕ್ಕೆ ತೂತು ಮಾಡುವುದು, ಗೋಧಿಬೂಸ ಮೆಲ್ಲುವುದು, ಜಾನುವಾರುಗಳಿಗೆಂದು ಇಟ್ಟಿದ್ದ ಆಹಾರವನ್ನು ತಿನ್ನುವುದು -ಇತ್ಯಾದಿ ಕಡಿಮೆ ಪ್ರಮಾಣದ ಕಾಟ ಕೊಡುವುದರಲ್ಲಿ ನಿರತವಾದವು. ಕೊಟ್ಟಿಗೆ ಕಡೆ ಹೋದಾಗ ಎಲ್ಲೋ ಒಮ್ಮೊಮ್ಮೆ 'ಹಾಯ್' ಎಂದು ಕಣ್ಮರೆಯಾಗುತ್ತಿದ್ದ ಇವನ್ನು ನಾವೂ ಕಡೆಗಣಿಸಿದೆವು.
ಕಳೆದ ಬಾರಿ ಗಣೇಶ ಚತುರ್ಥಿಗೆ ನಾನು ಊರಿಗೆ ಹೋದಾಗ, ಅಮ್ಮ ಹೇಳಿದ ಮಜಾ ಘಟನೆಯೊಂದನ್ನು ಹಂಚಿಕೊಂಡು ನಾನು ಈ ಲೇಖನವನ್ನು ಮುಗಿಸುತ್ತೇನೆ. ಚೌತಿಗೆ ಒಂದು ವಾರವಿರಬೇಕಾದರೆ ಬಚ್ಚಲು ಮನೆಯಲ್ಲಿಟ್ಟಿದ್ದ ಅಪ್ಪನ ರೇಸರ್ ಸೆಟ್ ಕಾಣೆಯಾಯಿತಂತೆ. ಅಪ್ಪ ಅಲ್ಲಿಲ್ಲಿ ಹುಡುಕಿದ, ಸಿಗದಿದ್ದರಿಂದ ಹೊಸ ರೇಸರ್ ಕೊಂಡು ಶೇವಿಂಗ್ ಮಾಡಿಕೊಂಡ. ಮಾರನೇ ದಿನ ನೋಡಿದರೆ ಮೈಸೋಪು ಇಲ್ಲ! ಹೊಸ ಸೋಪು.. ನಿನ್ನೆ ತಾನೇ ಒಡೆದದ್ದು.. ಹನ್ನೆರಡು ರೂಪಾಯಿ.. ಶೋಧಿಸಿದರು. ಸಿಕ್ಕಲಿಲ್ಲ. ಹೊಸ ಸೋಪಿನ ಪ್ಯಾಕು ಒಡೆದರು. ಅದರ ಮರುದಿನ ಮೈ ತಿಕ್ಕುವ ಬ್ರಶ್ ಇಲ್ಲ! 'ಎಲಾ! ಇದು ಇಲಿಗಳದ್ದೇ ಕೆಲಸ' ಅಂತ ಗೊತ್ತಾಯಿತು. ಅಮ್ಮ-ಅಪ್ಪ ಸೇರಿ ಹುಡುಕಿದರು. ಬಾವಿಕಟ್ಟೆಯ ಸಂದಿಗೆ ಒಂದು ಬಿಲ. ಅದರ ಬಾಗಿಲಲ್ಲಿ ಕಳೆದುಹೋಗಿದ್ದ ರೇಸರ್ ಸೆಟ್ಟು, ಅರ್ಧಮರ್ಧ ಕೊರೆಯಲ್ಪಿಟ್ಟಿದ್ದ ಸೋಪು, ಹರಿದು ಕೆದರಿಹೋಗಿದ್ದ ಬ್ರಶ್ಶು!
ಕಥೆ ಕೇಳಿ ನನಗೆ ನಗುವೋ ನಗು. ಬಹುಶಃ ಚೌತಿಗೆ ಗಣೇಶಾರೂಢ ಇಲಿ, ಚಂದ ಶೇವಿಂಗ್-ಗೀವಿಂಗ್ ಮಾಡಿಕೊಂಡು, ಸ್ನಾನ ಮಾಡಿ ಫ್ರೆಶ್ಶಾಗಿ ಬರುತ್ತೇನೋ ಎಂದುಕೊಂಡು ಕಾಯತೊಡಗಿದೆವು... ಅಡುಗೆ ಮನೆಯಿಂದ ಕಾಯಿಕಡುಬು - ಚಕ್ಕುಲಿಯ ಪರಿಮಳ.
* * *
ಮೂಷಿಕವಾಹನನ ಆಗಮನ ನಿಮ್ಮ ಮನೆಗೆ ಸಂತಸ ತರಲಿ. ಶುಭಾಶಯಗಳು.