೧
ಹಸಿರು ಶಾಯಿಯ ಪೆನ್ನಿನಲ್ಲಿ ಕವಿತೆ
ಬರೆಯುವುದು ಎಂದರೆ ನನಗೆ ಖಯಾಲಿ
ಒಂದೆಲಗ ಬತ್ತಿಸಿದ ನೀರಿಗೆ ಕಾಳು-
ಮೆಣಸು ಜಜ್ಜಿ ಹಾಕಿ ಕುಡಿದೆ
ಮೊಣಕಾಲು ದಾಟುವವರೆಗಿನ ಕುರ್ತಾ
ಧರಿಸಿ ಸಾಹಿತ್ಯ ಸಮಾರಂಭಗಳಿಗೆ ಹೋಗಿಬಂದೆ
ಗೊಂಬೆಗೆ ಉಡಿಸಿದ ಸೀರೆ, ನೀರಲ್ಲಿ ತೇಲಿಬಿಟ್ಟ ದೋಣಿ,
ಮೊದಲ ಮಳೆಯ ಮಣ್ಣ ಘಮ, ಹುಣ್ಣಿಮೆ ರಾತ್ರಿಯ ಚಂದ್ರ-
ಎಲ್ಲ ನನ್ನ ಕವಿತೆಯಲ್ಲಿ ರೂಪಕಗಳಾದವು
ಬೆಟ್ಟದ ಹೂವಿಗೆ ಮಳೆಯ ರಾತ್ರಿ ಬಿದ್ದ ಕನಸಿನಲ್ಲಿ
ದುಂಬಿಯೊಂದು ಕೊಡೆ ಹಿಡಿದು ಬಂದಿತ್ತಂತೆ
ಅಂತೆಲ್ಲ ಬರೆದು ಚಪ್ಪಾಳೆ ಗಿಟ್ಟಿಸಿದೆ
ಶೇವಿಂಗು ಮಾಡ್ಕೊಳೋ ಎಂದ ಅಮ್ಮನಿಗೆ
ಜಿಲೆಟ್ಟಿ ಕಂಪನಿಯ ಲಾಭಕೋರತನದ ಬಗ್ಗೆ ತಿಳಿಹೇಳಿದೆ
೨
ಚಿಕ್ಕವನಿದ್ದಾಗ ನಾನು ಶ್ರುತಿಯ ಕಷ್ಟ ನೋಡಿ
ಟೀವಿಯ ಮುಂದೆ ಅತ್ತದ್ದಿದೆ. ಅಕ್ಟೋಬರಿನ
ಗುಡುಗು-ಸಿಡಿಲಿಗೆ ಹೆದರಿ ಅಮ್ಮನ ಸೆರಗ ಹಿಂದೆ ಬಿಕ್ಕಳಿಸಿದ್ದಿದೆ.
ತಿಳುವಳಿಕೆ ಬಂದಮೇಲೆ ನಾನು ಅತ್ತಿದ್ದೇ ಇಲ್ಲ
ಗಂಡಸರು ಅಳಬಾರದು ಅಂದವರು ಯಾರೋ?
ನಗರಿಯ ಕಟ್ಟಡಗಳ ತುದಿಯಲ್ಲಿ ನನ್ನ ಭಯವನ್ನು ನೂಕಿದೆ
ಅಪಘಾತದ ಸ್ಥಳದಲ್ಲಿ ಸ್ಥಗಿತಗೊಂಡ ಟ್ರಾಫಿಕ್ ಕಂಡು
ಜೋರಾಗಿ ಹಾರನ್ನು ಬಾರಿಸಿದೆ
ಊಟ ಮಾಡಿ ಕೂತು ಕ್ರೈಂಸ್ಟೋರಿಯನ್ನು ರಸವತ್ತಾಗಿ ನೋಡಿದೆ
ಹತನಾದ ಯೋಧನ ಕಥೆ ತೋರಿಸುತ್ತಿದ್ದ ಛಾನೆಲ್
ಫಕ್ಕನೆ ಬದಲಿಸಿ ಕುಣಿಯೋಣು ಬಾರಾ ಎಂದೆ
ಗೆಳೆಯ ಫೋನ್ ಮಾಡಿ ನಾಳೆ ಮನೆ ಶಿಫ್ಟಿಂಗು,
ಸ್ವಲ್ಪ ಹೆಲ್ಪ್ ಮಾಡೋಕೆ ಬಾರಯ್ಯಾ ಎಂದಾಗ
ಎಷ್ಟು ಕೊಡ್ತೀಯ ಅಂತ ಕೇಳಲು ಹೋಗಿ ತಡೆದುಕೊಂಡು
ಬೇರೆ ಏನೋ ಸಬೂಬು ಹೇಳಿ ತಪ್ಪಿಸಿಕೊಂಡೆ
ಟೆರೇಸಿನಲ್ಲಿನ ಮೌನ ಕಂಡು ಖುಶಿಯಾಗಿ
ಬಾಲ್ಯದ ಹಸಿರಿನ ಸಿರಿಯ ಕುರಿತು ಕವನ ಬರೆದು
ನನಗೆ ನಾನೇ ಐದಾರು ಸಲ ಓದಿಕೊಂಡೆ
೩
ರೈಲಿನ ನೂಕಿನಲ್ಲಿ ನಿಜಗಂಧದ ತರುಣಿ
ತೂರಿ ಬಂದರೆ ಕಾಯಕದ ದಿನವಿಡೀ ಉಲ್ಲಾಸ
ಕೈಯಲ್ಲಿ ಐಫೋನು, ಕಿವಿಯಲ್ಲಿ ಮೊರೆಯುವ ಪಾಪ್-
ಚಿಗುರು ಬೆರಳಿನ ಹುಡುಗಿಗೆ ಟಚ್‌ಸ್ಕ್ರೀನ್ ಫೋನು ಇಷ್ಟ;
ಹಾಗೆಯೇ ಟಚ್‌ಸ್ಕ್ರೀನ್ ಫೋನಿಗೆ ಚಿಗುರು ಬೆರಳಿನ ಹುಡುಗಿ.
ಹೂವಿನ ಚಬ್ಬೆಯ ಮುದುಕಿ ಬಂದಾಗ ಎತ್ತಲೋ
ನೋಡಿದ ನಾನು ಐಫೋನಿನ ಹುಡುಗಿಗೆ
ಪ್ಲೀಸ್ ಸಿಟ್ ಅಂತ ಸೀಟು ಬಿಟ್ಟುಕೊಟ್ಟೆ
ನಯವನ್ನೂ ನಾಜೂಕಿನಲ್ಲಿ ಬಳಸಬೇಕು
ಅಂತ ಮನಸಿನಲ್ಲೇ ಅಂದುಕೊಂಡು ಮುಗುಳ್ನಕ್ಕೆ
ಟ್ವೀಟುಗಳನ್ನು ಸ್ಕ್ರಾಲ್ ಮಾಡುತ್ತಿದ್ದವಳು
ಬ್ಲಾಸ್ಟ್ಸ್ ಅಗೇನ್ ಅಂತ ಕೂಗಿದ್ದೇ ರೈಲಿನಲ್ಲಿ
ಗಲಿಬಿಲಿ ಶುರುವಾಗಿ ಕೆಲವರು ಹೊರಗೆ ಹಾರಿ
ಒಬ್ಬರ ಮೇಲೊಬ್ಬರು ಬಿದ್ದು ಆಕ್ರಂದನಗಳು
ಹೇಷಾರವಗಳಾಗಿ ಅಕೋ ಅಲ್ಲಿ ಓಡಿ ಬರುತ್ತಿರುವ
ರಕ್ತಸಿಕ್ತ ದೇಹವೊಂದು ನನಗೇ ಢಿಕ್ಕಿ ಹೊಡೆದು
ನಾನು ಬೋರಲು ಬಿದ್ದು ಯಾರೋ ತುಳಿದುಕೊಂಡು ಹೋಗಿ
ಮತ್ಯಾರೋ ಬಂದು ಕೈ ಹಿಡಿದೆತ್ತಿ ಹತ್ತಿರದ
ಗೋಡೆಗೆ ಒರಗಿಸಿ ಕೂರಿಸಿ ನೀರು ಕೊಟ್ಟರು.
೪
ಆಗಲೇ ನನಗೆ ಅಳು ಮತ್ತೆ ನೆನಪಾದದ್ದು;
ಕೆಂಪು ಇಂಕಿನ ಪೆನ್ನಿನಿಂದ ಪದ್ಯ ಬರೆದದ್ದು.
Thursday, July 14, 2011
Monday, July 11, 2011
ಇದೇ ಈ ಕ್ಷಣಕ್ಕೆ...
ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದೇ
ನಿರಾಳ ಬದುಕಿನ ಯಶೋಸೂತ್ರ ಎಂದವರು
ಸೂರ್ಯನನ್ನೇ ಕರಿಬಟ್ಟೆಯಿಂದ ಮುಚ್ಚಿ
ಮಂದಬೆಳಕಿನ ದೀಪಗಳ ಕೆಳಗೆ
ಮಿಕ್ಸ್ ಮಾಡಲು ಐಸನ್ನೋ ನೀರನ್ನೋ
ಸ್ಪ್ರೈಟನ್ನೋ ಕಾಯುತ್ತ ಕೂತಿದ್ದಾರೆ
ಅವರ ಮಾತನ್ನು ಜಗತ್ತು ಕೇಳುತ್ತಿಲ್ಲ.
ಅತಿಯಾಗಿ ಸಿಟ್ಟು ಮಾಡುವ ಹುಡುಗಿಗೆ
ಉಪ್ಪು ಕಮ್ಮಿ ಹಾಕಿದ ಉಪ್ಪಿಟ್ಟು ತಿನ್ನಿಸಿ
ತುದಿಯಷ್ಟೇ ಕೆಂಪಗಾಗಿರುವ ಮೂಗಿಗೆ
ಅಂಟಿಕೊಂಡಿರುವ ಗುಲಗುಂಜಿ ಒರೆಸುವಾಗ
ತುಟಿ ಬಿರಿದರಳಿ ಮೊಗ ಹೂವಾಗಿದೆ
ಇವರಾಡುವ ಮಾತು ಈ ಲೋಕದ್ದೇ ಅಲ್ಲ.
ಕೆಲವೇ ಗಂಟೆಗಳ ಹಿಂದೆ, ಎತ್ತಿ ಹಿಡಿದ ಪರದೆಯ
ಆಚೀಚೆ ನಿಂತಿದ್ದಾಗ ಸುಲಗ್ನೇ ಸಾವಧಾನ
ಎಂದಿದ್ದ ಪುರೋಹಿತರಿಗೂ ಡೊಳ್ಳುಹೊಟ್ಟೆಯ ಬೀಗರು
ಬಗ್ಗಿ ಬಗ್ಗಿ ಹೇಳುತ್ತಿದ್ದಾರೆ:
ಸಾವಧಾನ, ನಿಧಾನವಾಗಿ ಆಗಲಿ ಊಟ.
ಪಂಕ್ತಿಯ ಕೊನೆಯಲ್ಲಿ ಕುಳಿತಿದ್ದಾನೆ ಒಬ್ಬ ಹುಡುಗ
ಅವರು ಬರುವುದರೊಳಗೆ ಎದ್ದು ಹೋಗಬೇಕು ಅಂತ
ಕಣ್ಣು ಮೂಗು ಕಿವಿಗಳಿಂದಲೂ ತಿನ್ನುತ್ತಿದ್ದಾನೆ
ಅಪಘಾತದಿಂದ ತಪ್ಪಿಸಿಕೊಳ್ಳಲೆಂದೇ ಅವಸರ ಮಾಡುತ್ತಿದ್ದಾನೆ.
ಗಿಜಿಗಿಜಿ ತುಂಬಿದ ಮದುವೆಯ ಮನೆಯಲ್ಲಿ
ಎಲ್ಲರೂ ಅವರವರ ಮಾತು ಆಡುತ್ತಿದ್ದಾರೆ.
ಪಂಕ್ತಿಯ ಮಧ್ಯದಲ್ಲಿ ಒಂದು ಬಾಳೆ ಉಳಿದುಹೋಗಿದೆ
ಹಸಿದ ಬೀಗರು ಎಡೆಶೃಂಗಾರಕ್ಕೆ ಹಾಕಿದ
ಪದಾರ್ಥಗಳನ್ನು ನೋಡುತ್ತ ನಿಂತುಬಿಟ್ಟಿದ್ದಾರೆ.

Sunday, July 03, 2011
ನಡೆಯುವ ಕಪ್ಪೆ
ಅವತ್ತೊಂದು ಮಳೆಗಾಲದ ದಿನ, ಹೀಗೇ ಜೋರು ಮಳೆ.
ನಮ್ಮೂರಿನ ರಸ್ತೆಯ ಪಕ್ಕದಲ್ಲೇ ದೊಡ್ಡ ಕೆರೆ.
ಹುಟ್ಟಿ ಮೂರು ದಿನವಾದ ಕಪ್ಪೆಗಳು ನೀರಿನಿಂದ ಹೊರ-
ಬಂದು ದಂಡೆ ಏರಿ ಕೋಡಿ ಹತ್ತಿಳಿದು ರಸ್ತೆಯನ್ನೂ ದಾಟಿ
ಆಚೆ ಹೋಗುವ ಸರ-
ಭರದಲ್ಲಿ ಚಲಿಸುವ ಜೋರು
ವಾಹನಗಳ ಚಕ್ರಕ್ಕೆ ಸಿಲುಕಿ
ಅಪ್ಪಚ್ಚಿಯಾಗಿ
ಸತ್ತು ಹೋಗುತ್ತಿದ್ದಾಗ
ಇದೊಂದು ಕಪ್ಪೆ ಕುಪ್ಪಳಿಸುವ ಬದಲು
ನಡೆದು ಹೋಗುತ್ತಿತ್ತು.
ಇದನ್ನು ನೋಡಿದ ಒಂದು ಪಿಕಳಾರ ಹಕ್ಕಿ ತಾನು
ಹಾರುವುದರ ಬದಲು ಕುಪ್ಪಳಿಸತೊಡಗಿತು
ಅಲ್ಲಿದ್ದ ನಾಯಿಯೊಂದು ನಡೆಯುವುದು ಬಿಟ್ಟು ಹಾರಿತು
ಕೆರೆಯಿಂದ ಕತ್ತೆತ್ತಿ ನೋಡಿದ ಮೀನುಗಳು
ದಂಡೆಯ ಮೇಲೆ ನಡೆದಾಡತೊಡಗಿದವು
ಹೆಗ್ಗಣಕ್ಕೆ ತಲೆಕೆಟ್ಟು ಕೆರೆಗೆ ಹಾರಿ ಈಜಿತು
ಈ ವಿಚಿತ್ರ ನೋಡುತ್ತ ವಾಹನಗಳೆಲ್ಲ ನಿಂತು
ಬಿಟ್ಟವು. ನಡೆಯುತ್ತಿದ್ದ ಕಪ್ಪೆ ಅರಾಮಾಗಿ ರಸ್ತೆ
ದಾಟಿತು. ನನಗೆ ಏನೂ ಮಾಡಲು ತೋಚದೆ
ಕವನ ಬರೆದೆ.
Saturday, June 25, 2011
ಟಂಗ್‌ಸ್ಟನ್ ಎಂದರೆ ಪ್ರೀತಿ
ಎಷ್ಟು ಸಣ್ಣ ಎಳೆ ಅದು ಹಿಡಿದಿಟ್ಟಿದ್ದು
ಅದೆಷ್ಟು ಬೆಳಕು, ಜುಮ್ಮೆನಿಸುವ ವಿದ್ಯುತ್ತು
ವಿರುದ್ಧ ಧ್ರುವಗಳನೂ ಜತೆಮಾಡಿದ ತಂತಿ
ಸಂಚರಿಸಿದ ಕಿರಣಗಳು, ಯಾರು ಕಟ್ಟಿದರು ಬಿಲ್ಲು?
ಅಳಿಸಿಬಿಡಬಹುದೇ ಹಾಗೆ ನೆನಪುಗಳನ್ನು, ಕರಿ-
ಹಲಗೆಯ ಮೇಲೆ ಬರೆದ ಚಿತ್ರವನ್ನು ಒರೆಸಿದಂತೆ ವಸ್ತ್ರ
ಮರೆಯಾಗಿಸಬಹುದೇ ಹಾಗೆ ಮರಳದಿಣ್ಣೆಯ ಮೇಲೆ
ಕೊರೆದ ಅಕ್ಷರಗಳನ್ನು ಒಂದೇ ಭರತದ ಅಲೆ
ತೊಳೆಯಬಹುದೇ ಹಾಗೆ ಹೋಳಿಯ ಬಣ್ಣ ಮೆತ್ತಿದ
ಅಂಗಿಯನ್ನು ನೆನೆಸಿಟ್ಟಲ್ಲೇ ಬುರುಗಿನ ನೀರು
ಎಷ್ಟೆಲ್ಲ ಕೆಲಸವಿದೆ- ಆರ್ಕುಟ್ಟಿನಲ್ಲಿನ ನಿನ್ನ ಸ್ಕ್ರಾಪು,
ಫೇಸ್‌ಬುಕ್ಕಿನಲ್ಲಿನ ಮೆಸೇಜು, ಜಿಮೇಲಿನಲ್ಲಿನ ಇಮೇಲು,
ಬ್ಲಾಗುಗಳಲ್ಲಿನ ಕಮೆಂಟು, ಮೊಬೈಲಿನಲ್ಲಿನ ಎಸ್ಸೆಮ್ಮೆಸ್ಸು...
ಎಲ್ಲವನ್ನು ಡಿಲೀಟು ಮಾಡಿ, ನೀನು ಕೊಟ್ಟ ಕೀಚೈನು,
ಪುಟ್ಟ ಟೆಡ್ಡಿಬೇರು, ಆರೇ ಸಾಲಿನ ಪತ್ರ, ಬಿಳಿನವಿಲಿನ ಚಿತ್ರ...
ಎಲ್ಲ ಒಯ್ದು ಎಲ್ಲಿಡಲಿ? ಊರಾಚೆ ಅಷ್ಟೆಲ್ಲ ಜಾಗವಿಲ್ಲ.
ನಕ್ಷತ್ರಗಳೆಲ್ಲ ಮಿಂಚುಹುಳುಗಳಾದರೆ
ಚಂದ್ರ ಎಲ್ಲಿಗೆ ಹೋಗಬೇಕು ಪಾಪ?
ಮೀನುಗಳೆಲ್ಲ ಸಮುದ್ರವನ್ನೇ ಬಯಸಿದರೆ
ನದಿಯ ಕಲ್ಲಿನ ಏಕಾಂತಕ್ಯಾರು ಜೊತೆ?
ಕತ್ತಲೆಗೆ ಹೆದರಿದವನಲ್ಲ ನಾನು,
ಆದರೂ ಇವತ್ಯಾಕೋ ಹೆಜ್ಜೆ ಮುಂದಾಗುತ್ತಿಲ್ಲ;
ಬಲ್ಬು ಹೋಗಿದೆ ಅಂತ ಗೊತ್ತಿದೆ,
ಆದರೂ ಸ್ವಿಚ್ ಒತ್ತುವುದು ಬಿಡುವುದಿಲ್ಲ.
[Eternal Sunshine of the Spotless Mind ಸಿನೆಮಾ ನೋಡಿ..]

Tuesday, June 14, 2011
ಅಮ್ಮನಿಗೆ
ಅವರು ಹೀಗಂದುದಕ್ಕೆ
ನಾನು ಹೀಗಂದೆ
ಎನ್ನುವಳು ಅಮ್ಮ
ಯಾರಿಗಾಗಿ ಈ ಸಮರ್ಥನೆ ಅಮ್ಮಾ..
ನನಗೆ ನೀನು ಗೊತ್ತು
ನಿನಗೆ ನಾನು ಗೊತ್ತು
ಅವರಿಗೂ ತಿಳಿದಿಲ್ಲವೆಂದಲ್ಲ
ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ
ಅದರ ಉತ್ತರಕ್ರಿಯೆಯೂ ಆಗಿರುತ್ತದೆ
ಆದರೂ ಕೇಳುತ್ತಾರೆ
ರಿಂಗಣವಾಗಿರಬಹುದು ಚಪ್ಪಾಳೆಯ ಮೊಳಗು
ಸಭೆಯ ಸರ್ವರ ಮುಂದೆ
ಮೆಚ್ಚಿರಬಹುದು ಅಹುದಹುದು ಎಂದು
ಆದರೆ ಮುಚ್ಚಿದ ಹೊದರಿನ ಕೆಳಗಿರುವ ಮಿತಿಗಳೂ
ಕದವಿಕ್ಕಿದ ಮನೆಯೊಳಗಿನ ಕತ್ತಲೆಯ ಕತೆಗಳೂ
ಮರೆತ ಸಾಲು, ತಪ್ಪಿ ತಗ್ಗಿದ ಶೃತಿಗಳೂ
ನಿನಗಷ್ಟೇ ಗೊತ್ತು.
ಮಗ ಕಾರ್ನೆಟೋ ಕೊಡಿಸುವಾಗ
ಐದನೇ ಕ್ಲಾಸಿನಲ್ಲಿ ರೇಖಾಗಣಿತದ ಮೇಷ್ಟ್ರು
ಬರೆಸಿದ್ದ ಶಂಕುವಿನ ಚಿತ್ರ ನೆನಪಾಗಿದ್ದು
ನಿನಗೇ ಹೊರತು ಅವರಿಗಲ್ಲ.
ಆದರೂ ಹೇಳುತ್ತಾರೆ: ‘ಎಂಥಾ ರಸಭಂಗ!’
ನೀನು ಅಲ್ಲಿಂದೀಚೆ ಬರುತ್ತಿದ್ದಂತೆಯೇ ಪ್ಲೇಟಿಗೆ ಹೊಯ್ದ
ಹಲ್ವಾವನ್ನು ನೀಟಾಗಿ ಕತ್ತರಿಸಿ ಎತ್ತಿ
ಕೈಗೆ ಬಾಯಿಗೆ ಹಲ್ಲಿಗೆ ಮೆತ್ತಿಕೊಳ್ಳುತ್ತ ಮೆಲ್ಲುತ್ತಾರೆ.
ಕೆಂಪುಗಾರೆಯ ನೆಲದ ಮೇಲೆ ಓಡಾಡುವ ಇರುವೆಗಳು
ತಲೆಯೆತ್ತಿ ನೊಡುತ್ತವೆ. ದಂಡುಪಾಳ್ಯದ
ಗ್ಯಾಂಗಿನಲ್ಲಿ ಸಾಲು ಸಾಲು ಸಂಚಲನ.
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ,
ನೀ ಸುಮ್ಮನಿರು ಎಂದರೆ ಅಮ್ಮ ಕೇಳುವುದಿಲ್ಲ.
ನಾಳೆ ನಮ್ಮ ಮನೆಯಲ್ಲೂ ಮಾಡುತ್ತಾಳಂತೆ
ಗೋಧಿ ಹಲ್ವಾ.

Saturday, June 04, 2011
ಅಪ್ಪ ಅಮ್ಮನ ಮದುವೆಯ ಅಲ್ಬಮ್
ನಿಮ್ಮ ಮದುವೆಯ ಮಾಸಲು ಮುಖಪುಟದ ಅಲ್ಬಮ್ ಸವರುವಾಗ
ಕಾಟನ್ ಶರ್ಟು-ಕಚ್ಚೆಪಂಚೆಯ ದೊಡ್ಡಜ್ಜ
ಜಗುಲಿಕಟ್ಟೆಯ ಆ ಹಳೇ ಮರದ ಖುರ್ಚಿಯಲ್ಲಿ ಕೂತು
ಕವಳ ಹಾಕುತ್ತಿದ್ದ ನೆನಪು.
ನಿಮ್ಮ ಮದುವೆ ಅಲ್ಬಮ್ಮಿನ ಅಂಟಿಕೊಂಡ ಪುಟಗಳನ್ನು ಬಿಡಿಸುವಾಗ
ಕೇಜಿಗಟ್ಟಲೆ ಮೂಸಂಬಿ-ದ್ರಾಕ್ಷಿ ಹಿಡಿದು ಮಾವ
ಉಳವಿಯಿಂದ ಬಾಡಿಗೆ ಸೈಕಲ್ ಹೊಡೆದುಕೊಂಡು
ನಡುಮಧ್ಯಾಹ್ನ ಕೆಂಪಾಗಿ ಬರುತ್ತಿದ್ದ ನೆನಪು.
ನಿಮ್ಮ ಮದುವೆ ಅಲ್ಬಮ್ಮಿನ ಬ್ಲಾಕ್ ಅಂಡ್ ವ್ಹೈಟ್ ಫೋಟೋಗಳನ್ನು
ಕವರಿನಿಂದ ಹುಷಾರಾಗಿ ಹೊರತೆಗೆಯುವಾಗ
ಆ ನಶ್ಯದ ಡಬ್ಬಿಯ ಪುರೋಹಿತ ಭಟ್ಟರು ಒಮ್ಮೆ ನನ್ನ ಕೈ ನೋಡಿ
ಭಾರೀ ಉಜ್ವಲ ದಿನಗಳ ಭವಿಷ್ಯ ಹೇಳಿದ ನೆನಪು.
ನಿಮ್ಮ ಮದುವೆಯ ಆ ಫೋಟೋಗಳನ್ನು ಸ್ಕ್ಯಾನ್ ಮಾಡುವಾಗ
ತನ್ನ ಯೌವನದ ದಿನಗಳಲ್ಲಿ ಕನ್ನಡಿ ಮುಂದೆ ನಿಂತ ಅಪ್ಪ
ಮೀಸೆಯನ್ನು ಚೂಪಗೆ ಟ್ರಿಮ್ ಮಾಡಿಕೊಂಡು, ಮುಖಕ್ಕೆ ಪೌಡರ್
ಹಚ್ಚಿಕೊಳ್ಳುತ್ತಿದ್ದ ಬೆಳ್ಳನೆ ನೆನಪು.
ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಆ ಫೋಟೋಗಳಿಗೆ
ಟಚ್-ಅಪ್ ಕೊಟ್ಟು ರಕ್ಷಿಸಿ ಇಡುವಾಗ, ಅಮ್ಮ ನೈಟಿ ತೊಡಲೋ ಬೇಡವೋ
ಅಂತ ವಾರಗಟ್ಟಲೆ ಯೋಚಿಸಿ ಪಕ್ಕದ ಮನೆಯವಳ ಬಳಿ ಚರ್ಚಿಸಿ
ಕೊನೆಗೂ ಸೀರೆಯನ್ನೇ ಖಾಯಂ ಮಾಡಿದ ಹಚ್ಚನೆ ನೆನಪು.
ಅಪ್ಪ-ಅಮ್ಮನ ಮದುವೆಯ ಫೋಟೋಗಳಲ್ಲಿ ನಾನಿಲ್ಲ
ನನ್ನ ನೆನಪಿನ ಅಲ್ಬಮ್ಮಿನಲ್ಲಿ ಅಪ್ಪ, ಅಮ್ಮ ಮತ್ತು ಎಲ್ಲ.

Sunday, May 29, 2011
ಮುಳಕ
ನೋ, ಇದು ಪ್ಲಾಸ್ಟಿಕ್ಕಲ್ಲ ಕಣೋ, ಇಕೋ, ಒಮ್ಮೆ ಮುಟ್ಟಿ ನೋಡು
ತಾಜಾ ಇದೆ ಹೂವು. ಕೆಸವಿನೆಲೆಮೇಲಿನ ಇಬ್ಬನಿ ಹನಿ,
ಮುಟ್ಟಿದರೆ ನಾಚಿಕೊಳ್ಳುವ ಮುಚ್ಚಗನ ಎಲೆಗಳು,
ಕಾಪಿಡದಿದ್ದರೆ ಕೊಳೆತುಹೋಗುವ ಕೊಯ್ದ ಹಣ್ಣು
ಎಲ್ಲ - ಎಲ್ಲ ನಿಜವಾದ್ದು.
ಚಳಿ ನೀಗುವ ಈ ಕೆಂಪನೆ ಮೃದು ರಗ್ಗು,
ಫ್ರಿಜ್ಜಿನಿಂದ ಹೊರತೆಗೆದರೆ ಕರಗುವ ಐಸ್‌ಕ್ರೀಂ,
ಕಿಡಿ ತಾಕಿದರೆ ಗಂಧ ಹೊಮ್ಮಿಸುವ ಲೋಭಾನ,
ನೀರು ಹೊಯ್ದರೆ ಕೊತಕೊತ ಕುದಿಯುವ ಸುಣ್ಣದ ಕಲ್ಲು,
ಬೆಳಕು ಹಾಯ್ದರೆ ಕಾಮನಬಿಲ್ಲು ಮೂಡಿಸುವ ಪಟ್ಟಕ,
ಎಲ್ಲಾ ಸತ್ಯ. ಎಲ್ಲಿತ್ತು ಆ ಏಳು ಬಣ್ಣಗಳು,
ಸುಡುಸುಡು ಬೆಂಕಿ, ಆ ಪರಿಮಳ, ಘನದೊಳಗಿನ ದ್ರವ,
ನೆಮ್ಮದಿಯ ಕಾವು -ಅಂತೆಲ್ಲ ಕೇಳಬಾರದು.
ಬಾಯೊಳಗಿಟ್ಟುಕೋ ಚೂರೇ ಮುರಿದು
ಅಮ್ಮ ನಿನಗೇಂತಲೇ ಈ ಗಡಿಬಿಡಿಯಲ್ಲೂ ಮಾಡಿಕೊಟ್ಟಿದ್ದು
ಹಲಸಿನ ಹಣ್ಣಿನ ಮುಳಕ ಎಂದರೆ ಅವನಿಗೆ ಪಂಚಪ್ರಾಣ
ಅಂತ ಹಿಂದೆಲ್ಲೋ ಹೇಳಿದ್ದೆ. ಅದನ್ನೇ ನೆನಪಿಟ್ಟುಕೊಂಡಿದ್ದಾಳೆ.
ಹಾಗೆ ದುರುಗುಟ್ಟಿಕೊಂಡು ನೋಡಬೇಡ, ಎಲ್ಲ ಸುಳ್ಳೆನ್ನಬೇಡ.
ಅರ್ಥ ಮಾಡಿಕೋ, ಅಜ್ಜನಿಗೆ ನಾನೆಂದರೆ ಅಷ್ಟು ಪ್ರೀತಿ
ಮೊಮ್ಮಗಳು ಏನು ಮಾಡಿಕೊಂಡಳೋ ಅಂತ ಭಯ
ಮೂರು ಜನರಿಗೆ ಅಭಯ ತುಂಬಿ ಬರುವುದು
ನೂರು ಯೋಜನ ದಾಟಿ ಬಂದಷ್ಟೇ ಕಷ್ಟ.
ನಾಲ್ಕು ದಿನ ತಡವಾಗಿದೆ ಅಷ್ಟೇ.
ನಮ್ಮ ಮದುವೆಯಲ್ಲಿ ಮನೆಯವರೆಲ್ಲ ಇರ್ತೀವಿ
ಅಂತ ಅಜ್ಜನೇ ಹೇಳಿದ್ದಾನೆ.
ನನಗೂ ತಿಳಿಸದೆ ನೀನು ಮಾಡಿಸಲು ಹಾಕಿದ
ಮಾಂಗಲ್ಯದ ಗುಟ್ಟು ಅಕ್ಕಸಾಲಿಗ ಹೇಳಿಬಿಟ್ಟಿದ್ದಾನೆ.
ತಯಾರಾಗಿದೆಯಂತೆ, ನೋಡಿಕೊಂಡು ಬರೋಣ ಬಾ.

Wednesday, May 18, 2011
ಹೊಸ ಭಾವ
‘ನಿನ್ನ ಜೀವನದಲ್ಲಿ ಅತಿ ಹೆಚ್ಚು ಉಪ್ಪಿಟ್ಟು ತಿಂದ ದಿನಗಳು ಯಾವುದು?’ ಅಂತ ಯಾರಾದರೂ ಕೇಳಿದರೆ, ನಾನು ಸುಲಭವಾಗಿ ‘ಅದು ನನ್ನ ಅಕ್ಕನಿಗೆ ಗಂಡು ಹುಡುಕುವ ದಿನಗಳಲ್ಲಿ’ ಅಂತ ಉತ್ತರಿಸುತ್ತೇನೆ.
ಅಕ್ಕ ಡಿಗ್ರಿಯಲ್ಲಿ ಡುಮ್ಕಿ ಹೊಡೆದದ್ದೇ ಮದುವೆಯಾಗಲಿಕ್ಕೆ ಅರ್ಹತೆ ಪಡೆದುಬಿಟ್ಟಳು. ‘ಶೇಷಭಟ್ರ ಮನೆ ಕೂಸಿಗೆ ಮದುವೆ ಮಾಡ್ತಾರಂತೆ. ಜಾತಕ ಹೊರಡಿಸಿದ್ದಾರಂತೆ’ ಎಂಬ ಸುದ್ದಿ ಊರಿನ ಬಾಯ್ಬಡುಕರ ಮುಂದಿನ ನೋಟೀಸ್ ಬೋರ್ಡಿನಲ್ಲಿ ತೂಗಾಡಿತು. ಆಮೇಲೆ ಆ ಸುದ್ದಿ ಹರಡಲಿಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಗಣಪತಣ್ಣನನ್ನು ಮೊದಲ್ಗೊಂಡು ಕೊನೇಮನೆ ಸೌಭದ್ರಕ್ಕನವರೆಗೆ ಎಲ್ಲರೂ ದೂರ್ವೆ ಕೊಯ್ಯುವ ನೆಪದಲ್ಲೋ, ಹೆಪ್ಪಿಗೆ ಮಜ್ಜಿಗೆ ಕೇಳುವ ನೆಪದಲ್ಲೋ, ಕುಡಗೋಲು ಮಸೆಯುವ ನೆಪದಲ್ಲೋ ನಮ್ಮನೆಗೆ ಬಂದು, ‘ಕೂಸಿನ ಜಾತಕ ಹೊಂಡ್ಸಿದ್ರಡ ಹೌದನೇ?’ ಅಂತ ಕೇಳಿಕೊಂಡು, ತಮ್ಮ ನೆಂಟರಿಷ್ಟರ ಪೈಕಿ ಮದುವೆಗೆ ಇರುವ ಗಂಡಿನ ಬಗ್ಗೆ ಒಂದು ಮಾತು ನಮ್ಮ ಕಿವಿಗೆ ಹಾಕಿ, ‘ನಿಮ್ಮನೆ ಕೂಸು ಬಿಡು, ಹೈಕ್ಲಾಸ್ ಇದ್ದು. ಅಲ್ದೇ ಮೊದಲೇ ಹುಡುಗಿಯರಿಗೆ ಬರ ಈಗ, ಯಾರರು ಫಾರಿನ್ನಗಿಪ್ಪವೇ ಹಾರ್‌ಸ್ಕ್ಯಂಡ್ ಹೋಗ್ತ ತಗ’ ಅಂತ ಹೊಗಳಿ ಹೋಗುತ್ತಿದ್ದರು.
ಒಂದೇ ಇದ್ದ ಅಕ್ಕನ ಜಾತಕ ಜೆರಾಕ್ಸ್ ಮಷೀನಿನ ಗಾಜುಗಳ ನಡುವೆ ಕೂತು ಮೂವತ್ತು ಕಾಪಿಯಾಯಿತು. ಯಶವಂತ್ ಸ್ಟುಡಿಯೋದ ಹಸಿರು ಉದ್ಯಾನದ ಪೋಸ್ಟರಿನ ಮುನ್ನೆಲೆಯಲ್ಲಿ ನಿಂತ ಸೀರೆಯುಟ್ಟ ಅಕ್ಕ ಕೆಮೆರಾದ ಫ್ಲಾಶಿನಲ್ಲಿ ಬೆಳಗಿದಳು. ಒಂದು ವಾರದೊಳಗೆ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಧಾಳಿ ಇಡಲು ಶುರು ಮಾಡಿದರು.
ಹುಡುಗಿಯರಿಗಿರುವ ಬೇಡಿಕೆಯ ಸಂಪೂರ್ಣ ಲಾಭ ಪಡೆದುಕೊಂಡ ಪೀಯೂಸಿ ಪಾಸಾಗಿದ್ದ ಅಕ್ಕ, ಹಳ್ಳಿಯಲ್ಲಿರುವ ಹುಡುಗ ಬೇಡವೇ ಬೇಡ ಅಂತ ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದಳು. ಆದರೆ ಆ ಕಂಡೀಶನ್ನು, ಜಾತಕ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ವರ್ಗಾವಣೆಯಾಗುವ ನಡುವೆ ಎಲ್ಲೋ ತಪ್ಪಿಹೋಗಿಬಿಟ್ಟಿರುತ್ತಿತ್ತು. ಹೀಗಾಗಿ ಮೊದಮೊದಲು ಅಕ್ಕನನ್ನು ನೋಡಲು ಬಂದವರು ಹಳ್ಳೀಹುಡುಗರ ಪೋಷಕರೇ. ಹಳ್ಳಿಯವರಾದರೇನು ದಿಲ್ಲಿಯವರಾದರೇನು, ಹುಡುಗಿ ನೋಡಲು ಬಂದವರನ್ನು ಹಾಗೇ ಕಳಿಸಲಿಕ್ಕೆ ಬರುತ್ತದೆಯೇ? ದೂರದ ಊರಿನಿಂದ ಬಜಾಜ್ ಎಮ್‌ಎಯ್ಟಿಯಲ್ಲಿ ಧೂಳು ಹಾರಿಸುತ್ತಾ ಬಂದ ಹುಡುಗನ ಕಡೆಯವರಿಗೆ ಉಪ್ಪಿಟ್ಟು-ಕಾಫಿ ಮಾಡುವುದು ಅಮ್ಮನಿಗೆ ಅನಿವಾರ್ಯ ಕರ್ಮವಾಯಿತು. ಹಳ್ಳಿಯವರಾದರೆ, ತನ್ನ ತಂದೆಯ ಜೊತೆಗೋ ಮಾವನ ಜೊತೆಗೋ ಹುಡುಗನೇ ಬಂದುಬಿಟ್ಟಿರುತ್ತಿದ್ದ. ಆದರೆ ಹುಡುಗ ಪರ ಊರಿನಲ್ಲಿರುವವನಾದರೆ, ಮೊದಲ ಭೇಟಿಯಲ್ಲಿ ಹುಡುಗನ ತಂದೆ ಮತ್ತು ಹುಡುಗನ ಮಾವ ಅಥವಾ ಹತ್ತಿರದ ಯಾರೋ ನೆಂಟ -ನೋಡಲು ಬರುತ್ತಿದ್ದುದು. ಜಾಗತೀಕರಣದ ಪರಿಣಾಮವೋ, ಪೇಟೆಯೆಡೆಗಿನ ಆಕರ್ಷಣೆಯೋ, ಟೀವಿ-ಗೀವಿಗಳಲ್ಲಿ ನೋಡಿದ ಸಿಟಿಲೈಫಿನ ಥಳುಕುಬಳುಕಿನ ಮೋಡಿಯೋ ಅಥವಾ ತನ್ನ ಓರಗೆಯ ಹುಡುಗಿಯರ ಗಂಡಂದಿರನ್ನು ನೋಡಿದ್ದ ಪ್ರಭಾವವೋ ಏನೋ, ಈ ಹಳ್ಳಿಯ ಹುಡುಗರೆಲ್ಲ ಅಕ್ಕನಿಗೆ ಬೆಪ್ಪುತಕ್ಕಡಿಗಳಂತೆ ಕಾಣಿಸುತ್ತಿದ್ದರು. ಬೆಂಗಳೂರಿನಲ್ಲಿರುವವ, ಅಮೆರಿಕೆಗೆ ಹೋಗಿಬಂದವ, ಸಾಫ್ಟ್‌ವೇರ್ ಇಂಜಿನಿಯರು, ಓನ್ ಫ್ಲಾಟು, ಸ್ವಿಫ್ಟ್ ಕಾರು -ಇತ್ಯಾದಿ ಶಬ್ದಗಳು ಅಡುಗೆಮನೆಯಲ್ಲೋ ರೂಮಿನಲ್ಲೋ ನಿಂತು ಜಗುಲಿಯಲ್ಲಿನ ಮಾತುಗಳನ್ನು ಕದ್ದು ಕೇಳುತ್ತಿದ್ದ ಅಕ್ಕನಿಗೆ ಖುಶಿ ತರುತ್ತಿದ್ದವು.
ವಿಷಯ ಎಂದರೆ- ಬಂದ ಅಭ್ಯಾಗತರೊಂದಿಗೆ ಒಳ್ಳೆಯ ಮಾತಾಡಿ ಸಂಭಾಳಿಸುವ ಸಂಕಷ್ಟಲ್ಲಿರುತ್ತಿದ್ದ ಅಪ್ಪ, ಉಪ್ಪಿಟ್ಟಿನ ರುಚಿ ಸರಿಯಾಗಿದೆಯೋ ಇಲ್ಲವೋ ಎಂಬ ಆತಂಕದಲ್ಲಿರುತ್ತಿದ್ದ ಅಮ್ಮ, ಮತ್ತೊಂದು ಹೊಸ ನಾಟಕ ಪ್ರದರ್ಶನಕ್ಕೆ ಸೀರೆಯಂತಹ ತನ್ನಿಷ್ಟದ್ದಲ್ಲದ ಉಡುಗೆ ತೊಡುತ್ತಿದ್ದ ಅಕ್ಕ -ಇವರೆಲ್ಲರ ನಡುವೆ ಈ ಸನ್ನಿವೇಷದ ನಿಜವಾದ ಮಜಾ ತೆಗೆದುಕೊಳ್ಳುತ್ತಿದ್ದುದು ನಾನು! ಈ ಹುಡುಗಿ ನೋಡಲಿಕ್ಕೆಂದು ಬಂದ ಹುಡುಗರೆಲ್ಲ ಒಂದು ತರಹದ ವಿಚಿತ್ರ ಸೋಗಿನಲ್ಲಿರುತ್ತಿದ್ದರು. ನೀಟಾಗಿ ಇಸ್ತ್ರಿ ಮಾಡಿದ ಪ್ಯಾಂಟು ಧರಿಸಿ, ಇನ್‌ಶರ್ಟ್ ಮಾಡಿಕೊಂಡು, ಫಳಫಳ ಹೊಳೆಯುವ ತೊಳೆದ ಚಪ್ಪಲಿ ಹಾಕಿಕೊಂಡು ಬಂದಿರುತ್ತಿದ್ದ ಇವರು ಟೈ ಒಂದು ಇದ್ದರೆ ಥೇಟ್ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೆ ಕಾಣುತ್ತಿದ್ದರು. ಇವರು ಧರಿಸಿದ ಬಿಳಿಯಂಗಿಯ ಮೇಲೆ ನಮ್ಮೂರ ರಸ್ತೆಯ ಧೂಳಿನ ಕಣಗಳು ಬಿಂದಾಸ್ ಕೂತು ರಾರಾಜಿಸುತ್ತಿದ್ದವು. ನಗೆಯೆಂಬುದು ಇವರ ತುಟಿಗಳಿಗೇ ಪೇಟೆಂಟ್ ಆಗಿಹೋಗಿರುತ್ತಿತ್ತು. ‘ನಾನೇ ಹುಡುಗಿ ಅಪ್ಪ, ಇವಳು ನಮ್ಮನೆಯವಳು, ಇಂವ ಹುಡುಗಿ ತಮ್ಮ’ ಅಂತೆಲ್ಲ ಅಪ್ಪ ಪರಿಚಯಿಸಿಕೊಡುವಾಗ ಈ ಬಕರಾ, ಅಪ್ಪ-ಅಮ್ಮರ ಜೊತೆಗೆ ನನಗೂ ‘ಹೆಹೆ, ನಮಸ್ಕಾರ’ ಅಂತ ಕೈ ಮುಗಿಯುತ್ತಿದ್ದ. ಬಹುಶಃ ನನಗಿಂತ ಹಿರಿಯವರಿಂದ ಅನೇಕ ನಮಸ್ಕಾರಗಳನ್ನು ನಾನು ಪಡೆದದ್ದೂ ಆ ದಿನಗಳಲ್ಲೇ ಇರಬೇಕು!
ಅಕ್ಕ ಅಡುಗೆಮನೆಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟ್ರೇಯಲ್ಲಿಟ್ಟುಕೊಂಡು ಬರುವಾಗ ನನ್ನೀ ಭಾವೀ ಭಾವಂದಿರ ಮುಖ ನೋಡುವ ಹಾಗಿರುತ್ತಿತ್ತು. ಸಿಗುತ್ತಿದ್ದ ಆ ಎರಡ್ಮೂರು ನಿಮಿಷಗಳಲ್ಲೇ ಹುಡುಗಿಯನ್ನು ಪೂರ್ತಿಯಾಗಿ ಅಳೆದುಬಿಡುವ ಸಾಮರ್ಥ್ಯವನ್ನು ಈಗಾಗಲೇ ತಮ್ಮ ಅನುಭವದಿಂದ ಸಂಪಾದಿಸಿಕೊಂಡಿರುತ್ತಿದ್ದ ಈ ಭಾವಂದಿರು, ಅಕ್ಕ ಟ್ರೇಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟೀಪಾಯಿಯ ಮೇಲಿಟ್ಟು, ಅಮ್ಮ ಹೇಳಿದ ‘ತಗಳಿ, ನಮ್ಮನೆ ಕೂಸೇ ಮಾಡಿದ್ದು ಉಪ್ಪಿಟ್ಟು’ ಎಂಬ ಶುದ್ಧ ಸುಳ್ಳಿನ ನುಡಿಗೆ ‘ಓಹೋ?’ ಎಂದು ಮುಗುಳ್ನಕ್ಕು ತಲೆಯಾಡಿಸಿ, ತಟ್ಟೆಗೂ ಸ್ಪೂನಿಗೂ ಕೈ ಹಾಕುವ ಈ ದೃಶ್ಯ, ಎಲ್‌ಬಿಡಬ್ಲೂ ಅಪೀಲನ್ನು ಮತ್ತೆಮತ್ತೆ ತೋರಿಸುವ ಕ್ರಿಕೆಟ್ಟಿನಾಟದ ರಿಪ್ಲೇಯಂತೆ ಪ್ರತಿ ವಧುಪರೀಕ್ಷೆಯಲ್ಲೂ ಸಾಮಾನ್ಯವಾಗಿರುತ್ತಿತ್ತು. ಈ ಹುಡುಗರು ತಮ್ಮ ಮಾವ-ಅತ್ತೆಯರ -ಅದಕ್ಕೂ ಹೆಚ್ಚಾಗಿ ಅಡುಗೆಮನೆಯಲ್ಲಿ ಕೇಳಿಸಿಕೊಳ್ಳುತ್ತಲೇ ಇರಬಹುದಾದ ಹುಡುಗಿಯ- ಮನ ಗೆಲ್ಲಲೆಂದು ಅನೇಕ ಕಸರತ್ತು ನಡೆಸುತ್ತಿದ್ದರು. ತಮ್ಮ ತಂದೆ ‘ಯಮ್ಮನೆ ಮಾಣಿಗೆ ಒಂದೇ ಒಂದು ಚಟ ಇಲ್ಲೆ. ತಪ್ಪಿ ಎಲೆ-ಅಡಿಕೆ ಸಹ ಹಾಕದಿಲ್ಲೆ. ಜಾಬಲ್ಲಿ ಇಲ್ದೇ ಇದ್ರೆ ಎಂತಾತು? ಆರು ಎಕರೆ ತೋಟ ಇದ್ದು. ಮನೇಲಿ ಸಕಲ ಸೌಕರ್ಯವೂ ಇದ್ದು. ಕೈಕಾಲಿಗೆ ಆಳು ಇದ್ದ. ಪ್ಯಾಟೆ ಮನೇಲಿ ಇದ್ದಂಗೇ ಆರಾಮಾಗಿ ಇರ್ಲಕ್ಕು ನಿಮ್ಮನೆ ಕೂಸು’ ಅಂತೆಲ್ಲ ಹೇಳುವಾಗ, ಅದಾಗಲೇ ನನ್ನಕ್ಕನ ಸೌಂದರ್ಯಕ್ಕೆ ಮರುಳಾಗಿರುತ್ತಿದ್ದ ಈ ಭಾವಿ ಭಾವ ಪ್ರತಿಯೊಂದಕ್ಕೂ ತಲೆಯಾಡಿಸುತ್ತಿದ್ದ. ಎಲ್ಲಾ ಮುಗಿದು, ‘ಸರಿ. ಹುಡುಗ-ಹುಡುಗಿ ನೋಡಿ ಆತು. ಇನ್ನು ನಿಂಗ್ಳ ನಿರ್ಧಾರ ಲಘೂ ತಿಳಿಸಿ’ ಅಂತ ಹೇಳಿ, ನಿರ್ಣಯವನ್ನು ಥರ್ಡ್ ಅಂಪೇರಿಗೆ ವರ್ಗಾಯಿಸಿ ಅವರು ಜಾಗ ಖಾಲಿ ಮಾಡುತ್ತಿದ್ದರು. ಅವರಿಗೂ ಗೊತ್ತಿತ್ತು: ಇಲ್ಲಿ ಆಟಗಾರಳೇ ಥರ್ಡ್ ಅಂಪೇರೂ! ಅವಳದೇ ಕೊನೆಯ ನಿರ್ಧಾರ! ಹುಡುಗ ಔಟೋ ನಾಟೌಟೋ ಎಂದು ತೀರ್ಮಾನಿಸುವ ಸಿಗ್ನಲ್ಲಿನ ಸ್ವಿಚ್ಚು ಅಕ್ಕನ ಕೈಯಲ್ಲೇ ಇರುತ್ತಿತ್ತು.
ಅವರು ಅತ್ತ ಹೋದಮೇಲೆ ಅಕ್ಕ ಆ ಹುಡುಗ ಹೇಗೆ ಬೆಪ್ಪನಂತಿದ್ದನೆಂದು ನನ್ನ ಮತ್ತು ಅಮ್ಮನ ಬಳಿ ಹೇಳಿಕೊಂಡು ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಳು. ಮಿಕ್ಕಿರುತ್ತಿದ್ದ ಉಪ್ಪಿಟ್ಟು ತಿನ್ನುತ್ತಾ ನಾನು, ಈ ಭಾವನೂ ಔಟ್ ಆದುದಕ್ಕೆ, ಆತನ ಪ್ರದರ್ಶನವೆಲ್ಲ ವೇಸ್ಟ್ ಆದುದಕ್ಕೆ ಅಯ್ಯೋ ಪಾಪ ಎಂದುಕೊಳ್ಳುತ್ತಿದ್ದೆ. ಅಮ್ಮ-ಅಪ್ಪಂದಿರು ಮಾತ್ರ, ಅಕ್ಕನಿಗೆ ಅದ್ಯಾವತ್ತು ಬುದ್ಧಿ ಬರುತ್ತದೋ, ಯಾವಾಗ ಗ್ರೀನ್ ಸಿಗ್ನಲ್ಲು ಕೊಡುತ್ತಾಳೋ ಎಂಬ ಚಿಂತೆಯಲ್ಲಿ ಕಾಫಿ ಕುಡಿಯುತ್ತಿದ್ದರು.
ಅಕ್ಕ ಕೊನೆಗೂ ಒಪ್ಪಿದ್ದು ಬೆಂಗಳೂರಿನ ಸಾಫ್ಟ್‌ವೇರ್ ಮಾಣಿಯನ್ನೇ. ಅಕ್ಕನನ್ನು ನೋಡಲು ಟೀಶರ್ಟ್ ಧರಿಸಿ ಪ್ಲೇಬಾಯ್ ಥರ ಬಂದಿದ್ದ ಈ ಹೊಸ ಭಾವ ಮೊದಲು ಸಂಪಾದಿಸಿದ್ದು ನನ್ನ ಗೆಳೆತನ! ಇವನ ಅಪ್ಪ ನನ್ನ ಅಪ್ಪನೊಂದಿಗೆ ಹುಡುಗನ ಗುಣಗಾನದಲ್ಲಿ ತೊಡಗಿದ್ದಾಗ ಅಲ್ಲಿಂದ ಮೆಲ್ಲನೆದ್ದುಬಂದ ಇವನು, ನನ್ನನ್ನು ಹೊರಕಟ್ಟೆಗೆ ಕರೆದೊಯ್ದು ‘ಯಾವ ಕಾಲೇಜು, ಏನು ಓದ್ತಿದೀ, ಮುಂದೇನು ಮಾಡಬೇಕು ಅಂತಿದೀಯಾ, ಜೂನಿಯರ್ ಕಾಲೇಜಿನಲ್ಲಿ ಈಗಲೂ ಆ ಲೆಕ್ಚರರ್ ಇದಾರಾ’ ಅಂತೆಲ್ಲ ಕೇಳಿ ಮೊದಲ ವಿಕೆಟ್ಟು ಗಳಿಸಿಬಿಟ್ಟ. ಅಪ್ಪ-ಅಮ್ಮಂದಿರಂತೂ ಇವರು ನೋಡಲು ಬರುತ್ತಿರುವ ಸುದ್ದಿ ಕೇಳಿಯೇ ಆಸ್ಟ್ರೇಲಿಯಾ ಎದುರಿನ ಕೀನ್ಯಾ ಆಟಗಾರರಂತೆ ಮೊದಲೇ ಶರಣಾಗಿಹೋಗಿದ್ದರು. ಇನ್ನು ಥರ್ಡ್ ಅಂಪೇರ್ ಡಿಸಿಷನ್ ಒಂದೇ ಪೆಂಡಿಂಗ್ ಇದ್ದುದು. ಕನ್ನಡಕದ ಭಾವ, ನಾವೆಲ್ಲ ನಿಬ್ಬೆರಗಾಗುವಂತೆ ಅಕ್ಕನನ್ನೂ ಹೊರಕಟ್ಟೆಗೆ ಕರೆದೊಯ್ದು ಅದೇನೇನೋ ಮಾತಾಡಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಆಟ ಮುಗಿಸಿಯೇಬಿಟ್ಟ!
ಧಾಮ್‌ಧೂಮ್ ಎಂದು ಮುಗಿದುಹೋದ ಮದುವೆಯ ನಂತರ ಈ ಹೊಸ ಭಾವ ನಮ್ಮ ಮನೆ ಅಳಿಯನಾಗಲು, ಎಲ್ಲರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲವೇ ಹಿಡಿಯಿತು. ಮೂಲ ಹಳ್ಳಿಯವನೇ ಆದರೂ ಅದಾಗಲೇ ಬೆಂಗಳೂರಿನ ಗತ್ತುಗಳನ್ನು ಮೈಮೇಲೆ ಹಾಕಿಕೊಂಡಿದ್ದ ಭಾವ, ನಮ್ಮ ಮನೆಯ ಗಾರೆ ನೆಲ, ಕತ್ತಲೆಯ ನಡುಮನೆ, ಬೋಲ್ಟು ಕೂರದ ಬೆಡ್‌ರೂಮಿನ ಬಾಗಿಲು, ಜಾರುವ ಬಚ್ಚಲುಕಲ್ಲು, ಸುಳಿದಾಡುವ ನೆಂಟರ ನಡುವೆ ನುಣುಚಿಕೊಳ್ಳುವ ಹೆಂಡತಿ -ಇವುಗಳೊಂದಿಗೆ ಹೇಳಿಕೊಳ್ಳಲಾಗದ ಅಸಮಾಧಾನ ಅನುಭವಿಸುತ್ತಾ ಕಷ್ಟ ಪಡುತ್ತಿದ್ದುದು ನನಗೆ ಅರ್ಥವಾಗುತ್ತಿತ್ತು. ನಮಗೂ ಈ ಹೊಸ ಅಳಿಯದೇವನನ್ನು, ಬೀಗರನ್ನು, ಅವರ ಕಡೆಯ ನೆಂಟರನ್ನು ಸಂಭಾಳಿಸುವ, ಅವರಿಗೆ ಅಭಾಸವಾಗದಂತೆ ನಡೆದುಕೊಳ್ಳುವ ಕಷ್ಟ ಇತ್ತು. ಮಧ್ಯಾಹ್ನದ ಊಟದ ನಂತರ ‘ಸುಸ್ತಾಗಿದ್ದರೆ ರೂಮಿಗೆ ಹೋಗಿ ಮಲಗಿ’ ಅಂತ ಅಪ್ಪ ಕೇಳಿದರೆ, ಅದೆಷ್ಟೇ ನೇರ ನಡೆಯವನಾದರೂ ಭಾವ ‘ಅಯ್ಯೋ, ಎಂಥಾ ಸುಸ್ತೂ ಇಲ್ಲೆ’ ಅಂತ, ಜಗುಲಿಯ ಕಂಬಳಿಯ ಮೇಲೇ ಕೂತು ತೂಕಡಿಸುತ್ತಿದ್ದ. ಅಂತೂ ಭಾವ ದಿನ ಕಳೆದಂತೆ, ಹಬ್ಬಗಳಿಗೆ ಬಂದು-ಹೋಗಿ ಮಾಡುತ್ತ, ಫೋನಿನಲ್ಲಿ ಮಾತಾಡುತ್ತಾ ಹಳಬನಾದ. ಅವನ ಬೆಂಗಳೂರಿನ ಮನೆಗೆ ಹೋಗಿದ್ದಾಗ ನಮ್ಮ ಮನೆಯಲ್ಲಿ ಆತ ಅನುಭವಿಸಿದ್ದ ಧರ್ಮಸಂಕಟಗಳನ್ನೆಲ್ಲ ನಾವು ಇಲ್ಲಿ ಅನುಭವಿಸಿದೆವು. ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು ಅಂತ ಅರಿತುಕೊಂಡೆವು.
ಓದು ಮುಗಿಸುವ, ಕೆಲಸ ಹುಡುಕುವ, ನಗರದಲ್ಲಿ ಸೆಟಲ್ ಆಗುವ ಜರೂರಿನಲ್ಲಿ ಮುಳುಗಿಹೋಗಿದ್ದ ನನಗೆ ಇವೆಲ್ಲ ನೆನಪಾದದ್ದು, ‘ಇಪ್ಪತ್ತೇಳು ವರ್ಷ ಆತು ನಿಂಗೆ. ಮನೆಗೆ ಸುಮಾರೆಲ್ಲ ಜಾತಕ ಬೈಂದು. ನಿನ್ನೆ ಬಂದಿದ್ದೋರು ಹೇಳಿದ, ಕೂಸಿಗೆ ಕಾನಸೂರು ಆತಡ. ಬೆಂಗಳೂರಲ್ಲೇ ಯಾವುದೋ ಕಂಪನೀಲಿ ಕೆಲಸ ಮಾಡ್ತಡ. ಮೊಬೈಲ್ ನಂಬರ್ ಕೊಡಸ್ತಿ. ಮೊದಲು ನಿಂಗನೇ ಎಲ್ಲಾದ್ರೂ ಮೀಟ್ ಆಗಿ ಮಾತಾಡಿ. ನಿಮಗೆ ಪರಸ್ಪರ ಒಪ್ಪಿಗೆ ಆತು ಅಂದ್ರೆ ನಾವು ಮುಂದುವರಿತ್ಯ. ಅಡ್ಡಿಲ್ಯಾ?’ ಅಂತ ಅಪ್ಪ ಫೋನ್ ಮಾಡಿ ಕೇಳಿದಾಗ.
ಅಪ್ಪ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಕಾಫಿ ಡೇಯ ಕುರ್ಚಿಯಲ್ಲಿ ವಿಕೆಟ್ಟು ಉದುರಿತು. ನಿಶ್ಚಿತಾರ್ಥದ ದಿನ ಅವರ ಮನೆಗೆ ಹೋದಾಗ, ಈಗಾಗಲೇ ಫೇಸ್‌ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿಹೋಗಿದ್ದ ಆಕೆಯ ಭೇಷ್ ತಮ್ಮ ಸಂಪತ್, ಬಿಳೀ ಜುಬ್ಬಾ ಧರಿಸಿ ‘ಇವನೇನಾ ಹೊಸ ಭಾವ?’ ಎಂಬಂತೆ ನನ್ನನ್ನು ನೋಡುತ್ತಿದ್ದ. ಇವನಿಗೊಂದು ಡೈರಿಮಿಲ್ಕ್ ಹಿಡಿದುಕೊಂಡು ಬರಬೇಕಿತ್ತು ಅಂತ ಅನಿಸಿತಾದರೂ ಈಗಾಗಲೇ ಬುಟ್ಟಿಗೆ ಬಿದ್ದವನಿಗೆ ಕಾಳು ಹಾಕುವುದ್ಯಾಕೆ ಅಂತ ಸುಮ್ಮನಾದೆ. ಆದರೆ, ಹುಡುಗಿಗೆ ಉಂಗುರ ತೊಡಿಸುವಾಗ ‘ಅವತ್ತು ನೋಡಿದ ಕೂಸು ಇವಳೇ ಸೈಯಾ ಕರೆಕ್ಟಾಗಿ ನೋಡಿಕೊಳ್ಳೋ. ಒಂದೇ ಸಲ ನೋಡಿದ್ದು, ಮರೆತು ಹೋಗಿರ್ತು’ ಅಂತ ಮಾವನ ಕಡೆಯವರ್ಯಾರೋ ಕಿಚಾಯಿಸುವಾಗ, ನಮ್ಮ ಮನೆಗಳಿಗೆ ತಿಳಿಸದಂತೆ ಲಾಲ್‌ಭಾಗ್, ಫೋರಮ್ ಮಾಲ್, ನಂದಿಬೆಟ್ಟ ಅಂತೆಲ್ಲ ಸುತ್ತಿದ್ದ ನಮ್ಮ ಜಂಟಿ ಫೋಟೋಗಳನ್ನು ಅಲ್ಬಮ್ಮಿನಲ್ಲಿ ನೋಡಿಬಿಟ್ಟಿರಬಹುದಾದ ಸಂಪತ್, ಅದನ್ನು ಈಗ ಬಾಯಿಬಿಡದಿರಲಪ್ಪಾ ಅಂತ ನಾನು ಪ್ರಾರ್ಥಿಸುತ್ತಿದ್ದೆ. ಹೊಸ ಭಾವನ ತಳಮಳ ಸಂಪೂರ್ಣ ಅರ್ಥವಾದವನಂತೆ, ಅವನು ಮುಗುಳ್ನಕ್ಕ. ನಾನು ಕಣ್ಣು ಹೊಡೆದೆ. ಸುಳ್ಳೇ ಸಂಕೋಚವನ್ನು ಆವಾಹಿಸಿಕೊಂಡು, ಹೊಸಬನಂತೆ ನಟಿಸುವ ಪ್ರಯತ್ನ ಮಾಡಿದೆ. ಉಪ್ಪಿಟ್ಟಿನ ಘಮ ಅಡುಗೆಮನೆಯಿಂದ ತೇಲಿಬರುತ್ತಿತ್ತು.
[ಕನ್ನಡ ಪ್ರಭ - ಅಂಕಿತ ಪುಸ್ತಕ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯ ಯುವ ವಿಭಾಗದಲ್ಲಿ ಬಹುಮಾನ.]

Monday, May 09, 2011
ಬಾವಿಯ ಸುತ್ತ ಭಾವಬಂಧ
ಐವತ್ತು ವರ್ಷಗಳ ಹಿಂದೆ ನಮ್ಮೂರಲ್ಲಿ ಇದ್ದುದು ಐದೋ ಆರೋ ಮನೆಗಳಂತೆ. ಮೂಲ ಮನೆಯಿಂದ ಬೇರಾಗಿ ಬಂದ ನನ್ನ ಅಜ್ಜ ಒಂದು ಪುಟ್ಟ ಸ್ವಾಂಗೆಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ನಮ್ಮ ಮನೆಗೆ ಬಾವಿ ಇರಲಿಲ್ಲ. ಬಾವಿ ತೆಗೆಸುವಷ್ಟು ದುಡ್ಡೂ ಅಜ್ಜನ ಬಳಿ ಇರಲಿಲ್ಲ. ಅಜ್ಜಿ ಹತ್ತಿರವಿದ್ದ ಸರ್ಕಾರಿ ಬಾವಿಯಿಂದ ನೀರು ಹೊತ್ತು ತರುತ್ತಿದ್ದಳಂತೆ. ಸೊಂಟದಲ್ಲೊಂದು, ಕೈಯಲ್ಲೊಂದು ಕೊಡಪಾನ ಹಿಡಿದು ಗಂಡ-ಮೂರು ಮಕ್ಕಳ ಮನೆಗೆ ಒದಗಿಸುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನನ್ನ ಅಪ್ಪ-ಅತ್ತೆಯರು ಸ್ವಲ್ಪ ನೀರು ದಂಡ ಮಾಡಿದರೂ ಅಜ್ಜಿಯ ದಾಸವಾಳ ಬರಲಿನ ಹೊಡೆತಕ್ಕೆ ಒಳಗಾಗಬೇಕಿತ್ತು. ಊರ ಯಾರ ಮನೆಯಲ್ಲೂ ಇಲ್ಲದಷ್ಟು ಸಣ್ಣ ಚೊಂಬು, ಮಗ್ಗುಗಳು ನಮ್ಮ ಮನೆಯಲ್ಲಿದ್ದವಂತೆ. ದೊಡ್ಡ ಚೊಂಬು ಇದ್ದರೆ ಜಾಸ್ತಿ ನೀರು ಖರ್ಚಾಗುತ್ತದೆಯಲ್ಲವೇ? ‘ನಿನ್ನ ಅಜ್ಜಿಯ ಹೆದರಿಕೆಗೆ ಎಷ್ಟೋ ಸಲ ನಾವು ಬರೀ ಎರಡೇ ಚೊಂಬು ನೀರಲ್ಲಿ ಸ್ನಾನ ಮಾಡಿ ಮುಗಿಸ್ತಿದ್ಯ’ ಅಂತ ಅಪ್ಪ ಆಗೀಗ ನೆನಪು ಮಾಡಿಕೊಂಡು ಹೇಳುತ್ತಾನೆ. ‘ಬಿಂದಿಗೆ ಹೊತ್ತ ನಾರಿ’ ಎಂಬುದು ರೂಪಕಕ್ಕಷ್ಟೇ ಚೆಂದ, ಹೊರುವ ಕಷ್ಟ ನಾರಿಗಷ್ಟೇ ಗೊತ್ತು ಅಂತ ನಾನು ಅಂದುಕೊಳ್ಳುತ್ತಿದ್ದೆ.
ಅಪ್ಪ ಸಂಸಾರ ವಹಿಸಿಕೊಂಡಮೇಲೆ ಮೊದಲು ಮಾಡಿದ ಕೆಲಸ ಮನೆಯ ಆವರಣದಲ್ಲೊಂದು ಬಾವಿ ತೆಗೆಸಿದ್ದು. ನನ್ನ ದೊಡ್ಡತ್ತೆಯ ಬಾಣಂತನಕ್ಕೆ ಅಜ್ಜಿ ಸರ್ಕಾರಿ ಬಾವಿಯಿಂದ ನೀರು ಹೊರುವುದನ್ನು ಅವನಿಗೆ ನೋಡಲಾಗಲಿಲ್ಲವಂತೆ. ನನ್ನ ಅಜ್ಜಿಯ ತಮ್ಮ ರಾಘವೇಂದ್ರಜ್ಜ ಅಂತರ್ಜಲ ನೋಡುವ ಕಲೆಯಲ್ಲಿ ನಿಪುಣ. ಅವನನ್ನು ಕರೆಸಿ, ಮನೆಯ ಹತ್ತಿರ ಜಲ ನೋಡಿಸಿದ್ದು. ಸುಮಾರು ಹೊತ್ತು ತೆಂಗಿನಕಾಯಿಯನ್ನು ಅಂಗೈಯಲ್ಲಿಟ್ಟುಕೊಂಡು ಮನೆಯ ಸುತ್ತಮುತ್ತ ಓಡಾಡಿದ ರಾಘವೇಂದ್ರಜ್ಜ, ಬೀಡಿ ಮುಗಿಯುವುದರೊಳಗೆ ಮನೆಯ ಸ್ವಲ್ಪ ಹಿಂದೆ ನೀರ ನಿಕ್ಷೇಪ ಇರುವುದು ಪತ್ತೆ ಹಚ್ಚಿದ. ಅಲ್ಲಿಗೆ ಹೋಗಿ ಅಂವ ನಿಲ್ಲುತ್ತಿದ್ದಂತೆ ತೆಂಗಿನಕಾಯಿಯೂ ಜುಟ್ಟು ಮೇಲೆ ಮಾಡಿ ನಿಂತಿತಂತೆ! ಅವನ ಅಣತಿಯಂತೆ ಅಗೆಯಲು, ಐವತ್ತು ಅಡಿ ಆಳದಲ್ಲಿ ಅಂತೂ ನೀರು ಸಿಕ್ಕಿತು. ಬಾವಿಯ ಸುತ್ತ ಒಂದು ಕಟ್ಟೆ ಎದ್ದುನಿಂತಿತು. ಆ ಕಡೆಗೊಂದು - ಈ ಕಡೆಗೊಂದು ಕವಲುಕಂಬಗಳು ಹೂಳಲ್ಪಟ್ಟು, ಅದರ ಮೇಲೊಂದು ಮರದ ತುಂಡು ಹೇರಿ, ಮಧ್ಯದಲ್ಲಿ ಗಡಗಡೆ ಕಟ್ಟಿ, ಪೇಟೆಯಿಂದ ತಂದ ಅರವತ್ತಡಿ ಉದ್ದದ ಬಾವಿಹಗ್ಗಕ್ಕೆ ಕುಣಿಕೆ ಬಿಗಿದು, ಕೊಡಪಾನ ಇಳಿಸಿ, ಅಜ್ಜಿ-ಅತ್ತೆಯರೆಲ್ಲ ನಿಟ್ಟುಸಿರಾಗುವಂತೆ, ಗಂಗೆಯನ್ನು ಮೇಲೆತ್ತಿಯೇಬಿಟ್ಟರು!
ಆದರೆ ನಮ್ಮ ಮನೆಯ ಬಾವಿಯ ಜಲದ ಸೆಲೆ ಅಷ್ಟೊಂದು ಚೆನ್ನಾದ್ದಲ್ಲ. ಸರ್ಕಾರಿ ಬಾವಿಯಲ್ಲಿ ವರುಷವಿಡೀ ನೀರು ಕೈಗೆಟುಕುವಷ್ಟು ಸಮೀಪವಿರುತ್ತದೆ. ಊರಿನ ಐದಾರು ಮನೆಗಳಲ್ಲೂ ಹಾಗೆಯೇ. ನಮ್ಮ ಮನೆಯ ಬಾವಿ ಜೋರು ಮಳೆಗಾಲದಲ್ಲಿ ತುಂಬಲ್ಪಟ್ಟು ಕಟ್ಟೆಯಿಂದ ತುಸು ಕೆಳಗಿರುವ ಪೈಪಿನ ಮೂಲಕ ನೀರು ಹೊರಬರುತ್ತದಾದರೂ ಮೇ ತಿಂಗಳಿನ ಹೊತ್ತಿಗೆ ನೀರು ತಳ ಕಂಡಿರುತ್ತದೆ. ಪಂಪ್‌ಸೆಟ್ಟಿನ ಫೂಟ್‌ವಾಲ್ವ್‌ಗೆ ನೀರು ಸಿಗದೇ ಒದ್ದಾಡುತ್ತದೆ. ಪ್ರತಿವರ್ಷವೂ ಬೇಸಿಗೆಯ ಕಡೆಯ ಎರಡು ತಿಂಗಳು ಮೋಟರು ಕೆಲಸ ಮಾಡದೆ ನೀರು ಸೇದುವುದು ಅನಿವಾರ್ಯವಾಗುತ್ತದೆ. ಏಳೆಂಟು ವರ್ಷಗಳ ಕೆಳಗೆ ‘ಜಲ ಜಾಗೃತಿ’ ಎಂಬ ಬ್ಯಾನರ್ ಕಟ್ಟಿಕೊಂಡು ನಮ್ಮ ಸೀಮೆಯ ಒಂದಷ್ಟು ಪ್ರಗತಿಪರರು ಊರೂರಿನಲ್ಲಿ ಜಾತಾ ಮಾಡಿದ್ದರು. ‘ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಇಲ್ಲವಾಗುವುದಕ್ಕೆ ಮಳೆಗಾಲದಲ್ಲಿ ಜಲದ ಸೆಲೆಗಳು ಸರಿಯಾಗಿ ಭರ್ತಿಯಾಗದಿರುವುದೇ ಕಾರಣ. ಮಳೆಯ ನೀರು ಹರಿದು ಕೆರೆಕೋಡಿ ಸೇರುತ್ತದೆ, ನೆಲದಲ್ಲಿ ಇಂಗುತ್ತಲೇ ಇಲ್ಲ. ಹಾಗಾಗಿ ನಿಮ್ಮ ಬಾವಿಯ ಆವರಣದಲ್ಲಿ ಇಂಗುಗುಂಡಿಗಳನ್ನು ಮಾಡಿ ಮಳೆಗಾಲದಲ್ಲಿ ನೀರು ಇಂಗುವಂತೆ ಮಾಡಬೇಕು’ ಅಂತ ಕರೆ ಕೊಟ್ಟರು. ಅಮ್ಮ ಬೇಸಿಗೆಯಲ್ಲಿ ನೀರು ಸೇದೀ ಸೇದೀ ರಟ್ಟೆ ನೋವು ಮಾಡಿಕೊಂಡು ಅಮೃತಾಂಜನ ತಿಕ್ಕಿಕೊಳ್ಳುವುದನ್ನು ನೋಡಲಾರದ ನಾನೂ ನಮ್ಮ ಹಿತ್ತಿಲಿನಲ್ಲಿ ಗುದ್ದಲಿಯಿಂದ ಸುಮಾರು ಗುಂಡಿಗಳನ್ನು ತೋಡಿ ಬಂದೆ. ಅದರಿಂದ ಬಾವಿಯ ನೀರಿನ ಮಟ್ಟ ಏರಿತೋ ಇಲ್ಲವೋ ಗೊತ್ತಿಲ್ಲ, ಆದರೆ ಜಾನುವಾರಿಗೆ ಹುಲ್ಲು ಕೊಯ್ಯಲು ಹೋದ ಅಪ್ಪ ಆ ಗುಂಡಿಯಲ್ಲಿ ಕಾಲು ಹಾಕಿ ಸರಿಯಾಗಿ ಉಳುಕಿಸಿಕೊಂಡು ಬಂದ. ಒಟ್ಟಿನಲ್ಲಿ ಅಮೃತಾಂಜನದ ಕಂಪನಿಗೆ ಅಳಿವಿಲ್ಲ ಅಂತ ನಾನು ತೀರ್ಮಾನಿಸಿದೆ.
ವೀಣತ್ತೆಯ ಮಗಳು ವರ್ಷ ನಮ್ಮ ಮನೆಗೆ ಬಂದಾಗ ಅವಳನ್ನು ಕಾಯುವುದು ಒಂದು ಸಾಹಸವೇ ಆಗುತ್ತಿತ್ತು. ಏಕೆಂದರೆ ಅವಳೂರಿನಲ್ಲಿ ಅಬ್ಬಿ ನೀರು. ಬಾವಿ ಅವಳಿಗೆ ಹೊಸತು. ತನಗಿಂತ ಎತ್ತರದ ಕಟ್ಟೆಯನ್ನು ಸುತ್ತ ಕಟ್ಟಿಸಿಕೊಂಡು ಬಚ್ಚಲಮನೆಯ ಪಕ್ಕದಲ್ಲಿ ನಿಗೂಢವಾಗಿದ್ದ ಬಾವಿ ಅವಳಿಗೆ ಕುತೂಹಲಕಾರಿಯಾಗಿತ್ತು. ದೇವರ ಪೂಜೆ, ಕುಡಿಯುವ ನೀರು ಅಂತ ದಿನಕ್ಕೆ ಎರಡ್ಮೂರು ಬಾರಿಯಾದರೂ ನಾವು ನೀರೆತ್ತುವುದು, ಕೆಳಗಿಳಿಸುವಾಗ ಖಾಲಿಯಾಗಿದ್ದ ಸ್ಟೀಲಿನ ಕೊಡಪಾನ ಮೇಲೆ ಬರುವಷ್ಟರಲ್ಲಿ ತುಂಬಿಕೊಂಡಿರುವುದು, ಅವಳಿಗೆ ಆಶ್ಚರ್ಯವಾಗಿತ್ತು. ನಾವು ಸ್ವಲ್ಪ ಆಚೀಚೆ ಹೋದರೂ ಸಾಕು, ಅವಳು ಸೀದಾ ಬಾವಿಕಟ್ಟೆ ಹತ್ತಿ ಕೆಳಗಿಣುಕುವ ಸಾಹಸ ಮಾಡುತ್ತಿದ್ದಳು. ‘ಕೆಳಗಡೆ ಬಿದ್ರೆ ಮುಳುಗಿಹೋಗ್ತೆ ಅಷ್ಟೇ.. ಅಲ್ಲಿ ಹಾವು, ಮೊಸಳೆ, ಭೂತ ಎಲ್ಲಾ ಇದ್ದ’ ಅಂತ ಹೆದರಿಸಿದರೂ ಪುಟ್ಟಿ ಕೇಳುತ್ತಿರಲಿಲ್ಲ. ಕೊನೆಗೆ ನಾವೇ ಅವಳನ್ನೆತ್ತಿಕೊಂಡು ಚೂರೇ ಬಗ್ಗಿಸಿ ‘ನೋಡಿದ್ಯಾ? ಎಷ್ಟು ಆಳ ಇದ್ದೂ..?’ ಅಂತ ತೋರಿಸಬೇಕು, ಅವಳು ಹೆದರಿದಂತೆ ನಟಿಸಿ ‘ಹೂಂ, ನಾ ಇನ್ನು ಇದರ ಹತ್ರ ಬರದಿಲ್ಯಪಾ’ ಎನ್ನಬೇಕು.
ಬಾವಿಯೊಂದಿಗೆ ನಾವು ಅನುಭವಿಸಿದ ಪುಳಕಗಳನೇಕವನ್ನು ವರ್ಷ ಪುಟ್ಟಿ ಅನುಭವಿಸಲಿಲ್ಲವಲ್ಲಾ ಅಂತ ನಾನು ಅಂದುಕೊಳ್ಳುತ್ತಿದ್ದೆ. ಚಿಕ್ಕವರಿದ್ದಾಗ ಬಾವಿಯ ಬಳಿ ಹೋಗಲು ನಮಗೂ ದೊಡ್ಡವರ ತಡೆಯಿತ್ತಾದರೂ ನಮಗೆ ಬಾವಿಯೆಂದರೆ ಆಳವಿರುವ, ತುಂಬ ನೀರಿರುವ, ಅಕಸ್ಮಾತ್ ಬಿದ್ದರೆ ಮತ್ತೆ ಬರಲಾಗದ ಕೂಪ ಎಂಬ ಅರಿವಿತ್ತು. ಆದರೆ ತೋಟದ ಕಾದಿಗೆಯಲ್ಲಿ ಮೀನು ಹಿಡಿದು, ಹೊಂಬಾಳೆಯಲ್ಲಿಟ್ಟುಕೊಂಡು ಬಂದು ಮನೆಯ ಬಾವಿಗೆ ಬಿಡುವ ಸಂಭ್ರಮದಲ್ಲಿ ಮಾತ್ರ ಅವೆಲ್ಲ ನೆನಪಾಗುತ್ತಿರಲಿಲ್ಲ. ಮೀನು ಬಿಟ್ಟ ಮರುದಿನದಿಂದ ಯಾರೇ ನೀರು ಸೇದಲು ಬಂದರೂ ಅವರೊಂದಿಗೂ ನಾನೂ ನಿಂತು, ಮೇಲೆ ಬಂದ ಕೊಡಪಾನದಲ್ಲಿ ನಾವು ಬಿಟ್ಟ ಮೀನೇನಾದರೂ ಬಂದಿದೆಯಾ ಅಂತ ನೋಡುವ ಕುತೂಹಲಕ್ಕೆ ಪಾರವಿರಲಿಲ್ಲ. ಒಂದಲ್ಲಾ ಒಂದು ದಿನ ಮೀನು ಕೊಡಪಾನದಲ್ಲಿ ಬಂದೇ ಬಿಡುತ್ತಿತ್ತು. ಅಮ್ಮ ‘ಥೋ, ಇದ್ಯಾವಾಗ ತಂದು ಬಿಟ್ಟಿದ್ರಾ? ಕುಡಿಯೋ ನೀರು.. ಥೋ..’ ಎನ್ನುತ್ತಾ, ಹೆದರುತ್ತಾ ಆ ಮೀನನ್ನು ಎಡಗೈಯಿಂದ ತೆಗೆದು ಬಿಸಾಕುತ್ತಿದ್ದಳು. ನಾನು ಮತ್ತೆ ಅದನ್ನು ನೀರು ತುಂಬಿದ ಹಾಳೆಯಲ್ಲಿಟ್ಟುಕೊಂಡು ಬಂದು ತೋಟದ ಕಾದಿಗೆಯಲ್ಲಿ ಬಿಡುತ್ತಿದ್ದೆ.
ಒಮ್ಮೆ ಅಮ್ಮ ನೀರು ಸೇದುವಾಗ ಕುಣಿಕೆ ಸರಿಯಾಗಿ ಹಾಕದೆ ಕೊಡಪಾನ ಬಾವಿಯಲ್ಲಿ ಬಿದ್ದುಬಿಟ್ಟಿತು. ಅರ್ಧದವರೆಗೆ ಬಂದಿದ್ದ ಕೊಡ ಕಳಚಿ ಬಿದ್ದುದಕ್ಕೆ ಹಗ್ಗ ಹಿಡಿದು ಜಗ್ಗುತ್ತಿದ್ದ ಇವಳೂ ಆಯತಪ್ಪಿ ಹಿಂದೆ ಬಿದ್ದಳು. ಎರಡೆರಡು ಸದ್ದು ಕೇಳಿ ಮನೆಮಂದಿಯೆಲ್ಲ ಏನೋ ಅನಾಹುತವಾಯಿತೆಂದು ಓಡಿ ಬಂದೆವು. ಬಗ್ಗಿ ನೋಡಿದರೆ ಪ್ಲಾಸ್ಟಿಕ್ ಕೊಡಪಾನ ತೇಲುತ್ತಿತ್ತು. ತಕ್ಷಣ ಬುಟ್ಟಿ ಇಳಿಬಿಟ್ಟು ತಡಕಾಡಿದರೂ ಮೇಲೆತ್ತಲಾಗಲಿಲ್ಲ. ಬದಲಿಗೆ ಅದು ಪೂರ್ತಿ ಮುಳುಗಿಯೇ ಹೋಯಿತು. ಆಮೇಲೆ ಸೀತಾರಾಮಣ್ಣನ ಮನೆಯಿಂದ ಪಾತಾಳಗರುಡ ತಂದು ಹರಸಾಹಸ ಮಾಡಿದರೂ ಅದು ಸಿಗಲೇ ಇಲ್ಲ. ಮಣ್ಣಿನಲ್ಲಿ ಹೂತು ಹೋಗಿರಬಹುದೆಂದು ತೀರ್ಮಾನಿಸಿ, ಹೇಗೂ ಬಾವಿ ಸೋಸದೆ ಸುಮಾರು ವರ್ಷ ಆಗಿದ್ದುದರಿಂದ, ಯಾರಾದರೂ ಪರಿಣಿತರನ್ನು ಕರೆಸಿ ಸೋಸುವುದು ಅಂತ ಆಯಿತು. ಮಳಲಗದ್ದೆಯ ಕನ್ನಪ್ಪ ಎಂಬುವವ ಈ ಕೆಲಸದಲ್ಲಿ ಭಾರಿ ಜೋರಿದ್ದಾನೆ ಅಂತ ಯಾರೋ ಅಂದರು. ಕನ್ನಪ್ಪನಿಗೆ ಬುಲಾವ್ ಹೋಯಿತು.
ಈ ಕನ್ನಪ್ಪ ಬಂದವನೇ ಮೊದಲು ಒಂದು ಲಾಟೀನು ಹೊತ್ತಿಸಿ ಬಾವಿಗೆ ಇಳಿಸಿ ನೋಡಿದ. ಕೆಳಕೆಳಗೆ ಹೋಗುತ್ತಿದ್ದಂತೆ ಅದು ಆರಿಹೊಯ್ತು. ‘ಹೋಯ್, ಈ ಬಾವಿಗೆ ಇಳದ್ರೆ ನನ್ ಕತೆ ಪೋಂಯ! ಉಸುರೇ ಇಲ್ಲ ಇದ್ರಲ್ಲಿ. ಮೊದ್ಲು ಬಾಳೆದಿಂಡು ತಕಂಬನ್ನಿ’ ಅಂತ ಆಜ್ಞಾಪಿಸಿದ. ಸರಿ, ಬಾಳೆದಿಂಡು ಕಡಿದು ತಂದು ಏಳೆಂಟು ಸಲ ಇಳಿಸಿ ಏರಿಸಿ ಮಾಡಿ ಬಾವಿಯೊಳಗೊಂದಷ್ಟು ಆಮ್ಲಜನಕ ತುಂಬಿದ್ದಾಯ್ತು. ‘ಇನ್ನು ತೊಂದ್ರೆ ಇಲ್ಲ, ಇಳಿಯಪ್ಪಾ’ ಎಂದು ನಾವು ಹೇಳಿದರೆ, ಇಂವ ‘ಸರಿ, ಇಳಿಸಿ’ ಅಂದ. ನಮಗೆ ಅರ್ಥವಾಗಲಿಲ್ಲ. ಕೊನೆಗೆ ನೋಡಿದರೆ, ಕನ್ನಪ್ಪ ಬಾವಿ ಸೋಸುವುದರಲ್ಲಿ ಮಾತ್ರ ನಿಪುಣನಿದ್ದನೇ ವಿನಹ ಬಾವಿಗೆ ಇಳಿಯುವುದರಲ್ಲಾಗಲೀ ವಾಪಸು ಹತ್ತುವುದರಲ್ಲಾಗಲೀ ಅಲ್ಲ! ಇವನನ್ನು ಒಂದು ದೊಡ್ಡ ಬುಟ್ಟಿಯೊಳಗೆ ಕೂರಿಸಿ ಇಳಿಸಿ ನಾವೇ ಮೇಲೆತ್ತಬೇಕಿತ್ತು! ಹತ್ತತ್ತಿರ ಒಂದು ಕ್ವಿಂಟಾಲ್ ತೂಕವಿದ್ದ ಇವನನ್ನು ಇಳಿಸಿ-ಎತ್ತುವುದೆಂದರೆ! ಕನ್ನಪ್ಪನಿಗೆ ಮೊದಲೇ ದುಡ್ಡು ಕೊಟ್ಟು ಕರಕೊಂಡು ಬಂದ ತಪ್ಪಿಗೆ ಈಗ ಹಾಗೇ ಬಿಡುವಂತೆಯೂ ಇರಲಿಲ್ಲ. ಊರ ಐದಾರು ಜನರನ್ನು ಕರೆಸಿಕೊಂಡು, ದೊಡ್ಡ ಬುಟ್ಟಿಯಲ್ಲಿ ಇವನನ್ನು ಕೂರಿಸಿದ್ದಾಯ್ತು. ಪದ್ಮಾಸನ ಹಾಕಿ ದೇವರ ಥರ ಕನ್ನಪ್ಪ ಕೂತ. ಇವನನ್ನು ಕೆಳಗಿಳಿಸುವಾಗ ಎಲ್ಲಿ ಕಂಬವೋ ಗಡಗಡೆಯೋ ಹಗ್ಗವೋ ತುಂಡಾಗಿ ಧಡಾಲನೆ ಬೀಳುತ್ತಾನೋ ಅಂತ ನಾವೆಲ್ಲ ಭಯದಲ್ಲಿದ್ದಾಗ, ಸ್ಥಿತಪ್ರಜ್ಞ ಕನ್ನಪ್ಪ ಟಾಟಾ ಮಾಡಿದ. ದೇವರಾಣೆಗೂ ನಾವ್ಯಾರೂ ವಾಪಸು ಟಾಟಾ ಮಾಡುವ ಸ್ಥಿತಿಯಲ್ಲಿರಲಿಲ್ಲ ಮತ್ತು ನಮಗ್ಯಾರಿಗೂ ಮುಳುಗುವ ಸೂರ್ಯನ ಉಪಮೆ ನೆನಪಾಗಲಿಲ್ಲ. ಅಂತೂ ಕನ್ನಪ್ಪ ತಳ ತಲುಪಿ ಕೊಡಪಾನವೇ ಅಲ್ಲದೇ ಇನ್ನೂ ಬಿದ್ದಿದ್ದ ಅನೇಕ ವಸ್ತುಗಳನ್ನೂ, ಕೂತಿದ್ದ ಹೂಳುಮಣ್ಣನ್ನೂ ಮೊಗೆದು, ನಾವು ಇಳಿಬಿಟ್ಟ ಬುಟ್ಟಿಯಲ್ಲಿ ತುಂಬಿ ತುಂಬಿ ಮೇಲೆ ಕಳುಹಿಸಿ ಬಾವಿಯನ್ನು ಸ್ವಚ್ಚ ಮಾಡಿ, ಅರ್ಧಗಂಟೆಯ ನಂತರ ಮತ್ತದೇ ಬುಟ್ಟಿಯಲ್ಲಿ ಕೂತು ಜಗದೇಕವೀರನಂತೆ ಮೇಲೆ ಮೂಡಿಬಂದಾಗ, ಅವನಿಗೆ ಹಾಕಲಿಕ್ಕೆ ಒಂದು ಗೊಲ್ಟೆ ಹೂವಿನ ಹಾರವೂ ಇಲ್ಲವಲ್ಲಪ್ಪಾ ಅಂತ ನಾವು ಕೈ ಕೈ ಹಿಸುಕಿಕೊಂಡೆವು. ಆದರೆ ಅದಕ್ಕೇನು ಬೇಸರಿಸಿಕೊಳ್ಳದ ಕನ್ನಪ್ಪ ‘ಇನ್ನೊಂದು ಐವತ್ರುಪಾಯಿ ಜಾಸ್ತಿ ಕೊಡ್ರೀ ಹೆಗಡೇರೇ’ ಅಂತ ಹೇಳಿದ.
ನಮ್ಮ ಮನೆಯ ಬಾವಿಯಲ್ಲಿ ಒಂದು ಫ್ರಿಜ್ ಇತ್ತು. ‘ಅದು ಹ್ಯಾಗೆ ಬಿತ್ತು?’ ಅಂತ ಕೇಳಬೇಡಿ. ನೀವು ಅಂದುಕೊಂಡ ಎಲೆಕ್ಟ್ರಿಕ್ ರೆಫ್ರಿಜರೇಟರ್ ಅಲ್ಲ ಅದು. ನೈಸರ್ಗಿಕ ಶಿತಿಲೀಕರಣ ಯಂತ್ರ ಅದು. ಒಂದು ಕೈಚೀಲಕ್ಕೆ ಹಗ್ಗ ಕಟ್ಟಿ, ಅದನ್ನು ನೀರಿನ ಸಮೀಪದವರೆಗೆ ಇಳಿಬಿಟ್ಟು, ಹಗ್ಗದ ಈ ತುದಿಯನ್ನು ಮೇಲೆ ಕಂಬಕ್ಕೆ ಕಟ್ಟಿರುತ್ತಿದ್ದೆವು. ಈ ಚೀಲದೊಳಗೆ ನಿಂಬೆಹಣ್ಣು, ವೀಳ್ಯದೆಲೆ, ಕೊತ್ತಂಬರಿ ಕಟ್ಟು, ಇತ್ಯಾದಿ ವಸ್ತುಗಳನ್ನು ಹಾಕಿ ಬಾವಿಯೊಳಗೆ ಇಳಿಸಿಟ್ಟರೆ ವಾರಗಳವರೆಗೆ ಅವು ಹಾಳಾಗದೇ ಇರುತ್ತಿದ್ದವು. ಕವಳದ ತಬಕಿನಲ್ಲಿ ವೀಳ್ಯದೆಲೆ ಖಾಲಿಯಾಯಿತೆಂದರೆ ಮತ್ತೆ ತೋಟಕ್ಕೆ ಓಡುವ ಅಗತ್ಯವಿರುತ್ತಿರಲಿಲ್ಲ. ಬಾವಿಯ ಬಳಿ ಹೋಗಿ ಈ ಹಗ್ಗ ಎಳೆದರೆ ಸಾಕು, ತಾಜಾ ತಾಜಾ ಎಲೆ ಫ್ರಿಜ್ಜಿನಲ್ಲಿ ನಮ್ಮನ್ನೇ ಕಾಯುತ್ತಿರುತ್ತಿತ್ತು.
ಬಾವಿ, ಮೇಲ್ಚಾವಣಿ ಇಲ್ಲದ ಹೊರ ಆವರಣದಲ್ಲಿದ್ದರೆ ಚಂದ. ಆಗ ತುಂಬುಚಂದಿರನೂ ಮೋಹಗೊಂಡು ಇದರಲ್ಲಿ ಬಿದ್ದೇಬಿಡುತ್ತಾನೆ. ನೀರವ ರಾತ್ರಿಯಲ್ಲಿ, ನಿಶ್ಚಲ ನೀರಲ್ಲಿ, ತೇಲುತ್ತಿರುವ ಚಂದಿರನನ್ನು ಬಿಂದಿಗೆ ಇಳಿಬಿಟ್ಟು ಎತ್ತುವಾಗ ಹುಡುಗಿ, ಕವಿಗಳೆಲ್ಲ ನವಿಲುಗರಿ ಹಿಡಿದು ಸಜ್ಜಾಗುತ್ತಾರೆ. ಸುಂದರಿಯ ಸೊಂಟಪೀಟದಲ್ಲಿ ಕೂತ ಬಿಂದಿಗೆಯಲ್ಲಿ ಶಶಿ ಮುಗುಳ್ನಗುವಾಗ ಪರವಶರಾಗುತ್ತಾರೆ.
ಕೇರಿಗೊಂದೇ ಬಾವಿಯಾಗಿಬಿಟ್ಟರಂತೂ ಹೆಂಗಸರಿಗೆ ಇದು ಹರಟೆಕಟ್ಟೆಯಾಗಿಬಿಡುತ್ತದೆ. ನೀರು ತುಂಬಲು ಬಂದವರೆಲ್ಲ ಹಗ್ಗ ಇಳಿಬಿಟ್ಟು ಕತೆ ಹೊಡೆಯುವರು. ಪಾತಾಳದಲ್ಲೆಲ್ಲೋ ದುಡದುಡ ಸದ್ದು ಮಾಡುತ್ತಾ ಬಿಂದಿಗೆ ತುಂಬಿದ್ದು ಇವರ ಅರಿವಿಗೇ ಬರುವುದಿಲ್ಲ. ಅಂದಿನ ಅಡುಗೆ, ಮನೆಗೆ ಬಂದಿರುವ ನೆಂಟರು, ಯಾರದೋ ಮನೆಯ ಕತೆ, ಮತ್ಯಾರದೋ ಬಗೆಗಿನ ಗುಸುಗುಸುಗಳಿಗೆಲ್ಲ ಬಾವಿಕಟ್ಟೆಯೇ ವೇದಿಕೆ. ತುಂಬಿದ ಬಿಂದಿಗೆ ಮೇಲೆಳೆಯುವಾಗ ಇವಳಿಗೆ ಅವಳೂ ಅವಳಿಗೆ ಇವಳೂ ಸಹಾಯ ಮಾಡುವರು. ಅದನ್ನು ಸೊಂಟದಲ್ಲಿಟ್ಟುಕೊಂಡು ಮನೆ ತಲುಪುವವರೆಗೂ ಕತೆ ಮುಗಿಯುವುದೇ ಇಲ್ಲ.
ನಗರಗಳಲ್ಲಿ ಬಾವಿಯೇ ಇರುವುದಿಲ್ಲ. ಅಡಿ ಜಾಗವೇ ದುಬಾರಿಯಾಗಿರುವ ಕಾಲದಲ್ಲಿ ಅಷ್ಟು ದೊಡ್ಡ ಜಾಗವನ್ನು ಬಾವಿಗಾಗಿ ಮೀಸಲಿಡಲು ಸಾಧ್ಯವೂ ಇಲ್ಲ. ಅಂಗೈಯಷ್ಟು ಅಗಲದಲ್ಲಿ ಬೋರ್ ಕೊರೆದು ನೀರೆತ್ತಿಬಿಡುತ್ತಾರೆ. ಮಳೆಯ ಏರುಪೇರು, ಮರಗಳ ಹನನ, ಅತಿಯಾಗಿ ಬೋರ್‌ವೆಲ್ ಕೊರೆಯುವುದರಿಂದಾಗಿ ಹಳ್ಳಿಗಳಲ್ಲೂ ಅಂತರ್ಜಲದ ಪ್ರಮಾಣ ಇಳಿಕೆಯಾಗಿ ಸುಮಾರು ಬಾವಿಗಳು ಪಾಳಾಗುತ್ತಿವೆ. ಬೇಸಿಗೆ ಬಂತೆಂದರೆ ಮಲೆನಾಡಿನಲ್ಲೂ ಬರ. ಭವಿಷ್ಯದ ಬಗ್ಗೆ ಯೋಚಿಸಲು ಭಯ ಪಡುವ ಮನಸು ಮೌನದಲ್ಲೇ ಹಾರೈಸುತ್ತದೆ: ಎಲ್ಲ ಬಾವಿಯಲ್ಲೂ ಸದಾ ಸಿಹಿನೀರು ತುಂಬಿರಲಿ. ಬಿಂದಿಗೆಯ ನೀರು ತುಳುಕಿದರೆ ತರುಣಿ ಪುಳಕಗೊಳ್ಳಲಿ. ಬಾವಿಯ ಸುತ್ತ ಬೆಸೆದುಕೊಂಡಿರುವ ಭಾವಬಂಧ ಚಿರಂತನವಿರಲಿ.
[ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ.]

Tuesday, April 26, 2011
ವರುಷಗಳು ಉರುಳುರುಳಿ...
ಈಗ್ಗೆ ಹಲ ವರುಷಗಳ ಹಿಂದೆ, ನಮ್ಮೂರ ಪಕ್ಕದೂರಿನ ಯುವಕರೊಬ್ಬರು ಆರೆಸ್ಸೆಸ್ ಸಂಘಟನೆಗೆ ಹುಡುಗರನ್ನು ಒಗ್ಗೂಡಿಸುವ ಸಲುವಾಗಿ ಊರೂರು ಸುತ್ತಿ, ಪ್ರತಿ ಊರಲ್ಲೂ ಅಷ್ಟಿಷ್ಟು ಜನರನ್ನು ಒಂದೆಡೆ ಕೂಡಿಸಿ, ಧ್ವಜವಂದನೆ ಮಾಡಿಸಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ..’ ಹಾಡಿಸಿ ಹೋಗಿದ್ದರು. ಆಗ ಅವರ ಜೊತೆ ನಾನೂ ಒಂದಷ್ಟು ಕಾಲ ಓಡಾಡಿಕೊಂಡಿದ್ದೆ. ಇದನ್ನು ನೋಡಿ ನನ್ನ ಅಪ್ಪ-ಅಮ್ಮ, ಇರುವ ಒಬ್ಬನೇ ಮಗ ಎಲ್ಲಿ ದೇಶಸೇವೆ-ಗೀಶಸೇವೆ ಅಂತ ಹೊರಟುಬಿಡುತ್ತಾನೋ ಎಂದು ವ್ಯಾಕುಲರಾಗಿ, ‘ಅದೆಲ್ಲ ನಮ್ಮಂಥವರಿಗಲ್ಲ, ಮನೇಲಿ ಇಬ್ರು-ಮೂವರು ಮಕ್ಕಳು ಇದ್ರೆ ಒಬ್ಬ ಮಗ ಹಿಂಗೆ ಹೋಗೋದು ಸರಿ. ನೀನು ಇನ್ಮೇಲೆ ಅವನ ಹಿಂದೆ ಓಡಾಡ್ಬೇಡ’ ಅಂತ ನನ್ನನ್ನು ಕೂರಿಸಿಕೊಂಡು ಹೇಳಿದ್ದರು. ನನಗಾದರೂ ಆರೆಸ್ಸೆಸ್ ಬಗೆಗಾಗಲೀ, ದೇಶದ ಬಗೆಗಾಗಲೀ, ದೇಶಸೇವೆ ಎಂದರೇನು ಅಂತಾಗಲೀ, ಪುತ್ರವಾತ್ಸಲ್ಯದ ಅರ್ಥವಾಗಲೀ ಆಗ ಗೊತ್ತಿರಲಿಲ್ಲ. ಅಪ್ಪ-ಅಮ್ಮ ಹೇಳಿದಮೇಲೆ ಹೌದಿರಬಹುದು ಅಂದುಕೊಂಡು ಆಮೇಲೆ ಅತ್ತಕಡೆ ತಲೆ ಹಾಕಲಿಲ್ಲ.
ಐದಾರು ತಿಂಗಳ ಹಿಂದೆ ಊರಿಗೆ ಹೋಗಿದ್ದಾಗ, ಮನೆಗೆ ಬಂದಿದ್ದ ಅತ್ತೆ ಮತ್ತು ಅವಳ ಮಕ್ಕಳೊಂದಿಗೆ ಉಪ್ಪು-ಖಾರ ತಿನ್ನುತ್ತ ಅದೂ-ಇದೂ ಹರಟೆ ಹೊಡೆಯುತ್ತ ಹಿತ್ಲಕಡೆ ಕಟ್ಟೆಯ ಮೇಲೆ ಕೂತಿದ್ದೆ. ಅಷ್ಟೊತ್ತಿನ ತನಕ ಹಳೇ ನೆನಪು, ಅವರಿವರ ಮನೆ ಕತೆ, ಗೋಳಿನ ಬೆಂಗಳೂರಿನ ಬಗ್ಗೆಯೆಲ್ಲ ನನ್ನ ಜೊತೆ ಲೋಕಾರೂಢಿ ಮಾತಾಡುತ್ತಿದ್ದ ಅತ್ತೆ ಇದ್ದಕ್ಕಿದ್ದಂತೆ ‘ಸರೀ, ಈ ವರ್ಷ ಮದುವೆ ಆಗ್‌ತ್ಯಾ?’ ಅಂತ ಕೇಳಿಬಿಟ್ಟಳು. ಈ ವಿಧಿಯ ಸಂಚೇ ಹಾಗೆ, ಯಾವಾಗ ಕೈ ಕೊಡುತ್ತೆ ಹೇಳಲಿಕ್ಕಾಗುವುದಿಲ್ಲ. ಆದರೂ ಧೃತಿಗೆಡದ ನಾನು, ‘ಅಯ್ಯೋ, ಇನ್ನೊಂದೆರ್ಡು ವರ್ಷ ತಡಿ ಮಾರಾಯ್ತಿ’ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಅತ್ತೆ ಮುಂದುವರಿದು, ‘ಹಂಗಲ್ಲಾ, ನೀನೇ ಬೆಂಗಳೂರಲ್ಲಿ ಯಾರನ್ನಾದ್ರೂ ನೋಡಿಕೊಂಡ್ರೂ ಅಡ್ಡಿ ಇಲ್ಲೆ. ಆದರೆ ಎಲ್ಲಾ ಸರಿ ಇದ್ದಾ ನೋಡಿ ಮಾಡ್‌ಕ್ಯ’ ಎಂದಳು. ‘ಎಲ್ಲಾ ಸರಿ ಇರದು ಅಂದ್ರೆ ಎಂತು?’ ನಾನು ಕೇಳಿದೆ. ‘ನಿಂಗ ಸಾಹಿತಿಗಳು ಆದರ್ಶ-ಗೀದರ್ಶ ಅಂತ ಹೊರಟುಬಿಡ್ತಿ. ನೀನು ಮಾಡಿಕೊಳ್ಳೋದಿದ್ರೆ ನಮ್ ಜಾತಿ ಕೂಸಿನ್ನೇ ಮಾಡ್‌ಕ್ಯ. ಹುಡುಗಿ ಮನೆ ಕಡೆಗೂ ಚನಾಗಿರವು. ಕುಂಟಿ, ಕಿವುಡಿ, ನಿನಗಿಂತ ದೊಡ್ಡೋರು, ಡೈವೋರ್ಸಿಗಳು, ಇಂಥವರನ್ನೆಲ್ಲಾ ಮಾಡಿಕೊಳ್ಬೇಡ. ಮೊದಮೊದಲು ಆದರ್ಶ ಅಂತ ಚೊಲೋ ಕಾಣ್ತು. ಆದರೆ ಆಮೇಲೆ ಅದೇ ಒಂದು ಕೊರಗು ಆಗ್ತು..’ ಅಂತೆಲ್ಲ ಹೇಳಿ, ‘ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ’ ಎಂದಳು.
ಅವಳ ಕೊನೆಯ ವಾಕ್ಯ ನನ್ನೊಳಗೇ ಉಳಿದುಕೊಂಡು ಬಿಟ್ಟಿತು: ‘ಆದರ್ಶಗಳು ನಾವು ಪಾಲಿಸಲಲ್ಲ; ಬೇರೆಯವರಿಗೆ ಬೋಧಿಸಲು.’ ಅದೆಷ್ಟೇ ವಿರೋಧಾತ್ಮಕವಾಗಿದ್ದರೂ, ನನ್ನ ಅತ್ತೆ ಹೇಳಿದ ಮಾತು ಅವಳ ಆ ಕ್ಷಣದ, ಪ್ರಾಮಾಣಿಕವಾಗಿ ಹೊರಬಂದ, ಅಂತಃಕರಣದ ಮಾತಾಗಿತ್ತು. ಅವಳ ಹೇಳಿಕೆಯನ್ನಿಟ್ಟುಕೊಂಡು ದಿನವಿಡೀ ವಾದಿಸಬಹುದಿತ್ತಾದರೂ ನಾನು ಸರಿಸರಿಯೆಂದು ತಲೆದೂಗಿದೆ. ಆದರೆ ಆ ವಾಕ್ಯ ಇವತ್ತಿನ ಈ ಕ್ಷಣದವರೆಗೂ ನನ್ನೊಂದಿಗೆ ಬರುತ್ತಿದೆ, ಮನಸಿನೊಂದಿಗೆ ಸೆಣಸುತ್ತಿದೆ.
ಬಹುಶಃ ನನ್ನ ಅತ್ತೆ ಬಾಯಿಬಿಟ್ಟು ಹೇಳಿದ ಆ ಮಾತು ನಾವೆಲ್ಲ ನಮ್ಮ ಆಪ್ತರಿಗೆ ಬಾಯಿಬಿಟ್ಟೋ ಬಿಡದೆಯೋ ಹೇಳುವ ಮಾತು. ‘ಯೋಧ ಜನಿಸಬೇಕು. ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ’ ಎಂಬ ಅಭಿಪ್ರಾಯ ೯೦ ಪ್ರತಿಶತ ಜನರದು. ನಿರ್ಧಾರದ ಗಳಿಗೆಗಳಲ್ಲೆಲ್ಲ ನಮ್ಮನ್ನು ಕಾಡಿದ ದ್ವಂದ್ವ ಅದೇ: ಧ್ಯೇಯವೋ? ಮೋಹವೋ? ಕವಲುದಾರಿಯಲ್ಲಿ ನಿಂತಾಗಲೆಲ್ಲ ನಮಗೆ ಎದುರಾಗುವ ಗೊಂದಲ ಅದೇ: ಜನ ಹೇಳಿದತ್ತ ಹೋಗಲೋ? ನನ್ನ ವಿವೇಕ ಹೇಳಿದತ್ತ ಹೋಗಲೋ? ಇಷ್ಟಕ್ಕೂ ಆದರ್ಶದ ಪಾಲನೆ ನಮ್ಮ ಸಂತೋಷಕ್ಕೋ ಅಥವಾ ಸಮಾಜ ನನ್ನನ್ನು ಪ್ರಶ್ನಿಸುವ ಕಣ್ಣುಗಳಿಂದ ನೋಡುತ್ತಿದೆ ಎಂಬ ಆತಂಕಕ್ಕೋ?
ಈ ಆದರ್ಶದ ಪರಿಕಲ್ಪನೆಯೂ ಒಬ್ಬರಿಂದೊಬ್ಬರಿಗೆ ಭಿನ್ನ. ಜಗತ್ತು ನಮ್ಮ ಮೇಲೆ ಹೇರುವ ಆದರ್ಶಗಳು ಒಂದು ತೂಕದವಾದರೆ ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಆದರ್ಶಗಳು ಇನ್ನೊಂದು ತೆರನವು. ಬಹುಶಃ ನಮ್ಮ ಆದರ್ಶವನ್ನು ನಾವು ಮೊದಲೇ ಸೆಟ್ ಮಾಡಿಕೊಂಡಿದ್ದರೆ ಆಯ್ಕೆಯ ಕ್ಷಣಗಳಲ್ಲಿ ಗೊಂದಲಗಳಾಗುವುದಿಲ್ಲ. ‘ನನ್ನ ಆದರ್ಶದ ಮಿತಿ ಇಷ್ಟೇ’ ಅಂತ ಜಗತ್ತಿಗೆ ಉತ್ತರಿಸಬಹುದು. ಅಥವಾ ಜಗತ್ತಿಗೆ ಉತ್ತರಿಸುವ ದರ್ದಿಲ್ಲ ಎಂದರೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಅದು ‘ಬುದ್ಧಿವಂತಿಕೆ’ ಆಗಿಹೋಗುತ್ತದಾ? ಹಾಗಾದರೆ ಆದರ್ಶಗಳನ್ನು ಮೈಮೇಲೆ ಹೇರಿಕೊಳ್ಳುವುದೇ ತಪ್ಪಾ? ಬಿಡುಬೀಸಾಗಿ ನಡೆದು, ಮನಸಿಗೆ ತೋಚಿದತ್ತ ಸಾಗುವುದೇ ಸರಿಯಾದ ರೀತಿಯಾ? ಆ ಕ್ಷಣದಲ್ಲಿ ನನಗೆ ಏನನ್ನಿಸುತ್ತದೋ ಅದರಂತೆಯೇ ನಿರ್ಧರಿಸುವುದು ಸರಿಯಾದ ಮಾರ್ಗವಾ? ಗೊತ್ತಿಲ್ಲ.
* * *
ಜಯಂತ ಕಾಯ್ಕಿಣಿ ‘ಚಾರ್‌ಮಿನಾರ್’ ಎಂಬ ನೀಳ್ಗತೆಯೊಂದನ್ನು ಬರೆದಿದ್ದಾರೆ. ನನ್ನನ್ನು ಬಹಳವಾಗಿ ಕಾಡಿದ ಕತೆ ಅದು. ಯುನಿವರ್ಸಿಟಿಗೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾದ ನೈಋತ್ಯ ಗಾಂವಕರ ಎಂಬ ಯುವಕ, ಕೆಲಸ ಹಿಡಿದು ದುಡ್ಡು ಮಾಡುವುದು ಬಿಟ್ಟು, ಈ ಸಮಾಜಕ್ಕೆ ಒಳ್ಳೆಯದಾಗುವಂಥದ್ದೇನಾದರೂ ಮಾಡಬೇಕು ಎಂದುಕೊಂಡು, ಮನೆ ಬಿಟ್ಟು ಓಡಿ ಬಂದಂತಹ ಮಕ್ಕಳನ್ನು ಮರಳಿ ಮನೆ ಸೇರಿಸುವ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾನೆ. ರೈಲುಗಳಲ್ಲಿ ಟೀ, ಮಜ್ಜಿಗೆ, ವಡೆ, ನ್ಯೂಸ್‌ಪೇಪರು, ತಿಂಡಿಯ ಪೊಟ್ಟಣಗಳನ್ನು ಹಿಡಿದು ಬರುವ ಮಕ್ಕಳಿಂದ ಹಿಡಿದು ಹೋಟೆಲ್‌ಗಳ ಕ್ಲೀನರ್ ಹುಡುಗರವರೆಗೆ, ಅವರ ಪೂರ್ವಾಪರ ವಿಚಾರಿಸಿ ಮತ್ತೆ ಸಾಮಾನ್ಯ ಮಕ್ಕಳನ್ನಾಗಿಸುವ, ಮಕ್ಕಳಿಗೆ ಸಿಗಬೇಕಾದುದನ್ನು ಕೊಡಿಸುವ ಪ್ರಯತ್ನ ಮಾಡುತ್ತಾನೆ. ಪುನರ್ವಸು ಎಂಬ ಹುಡುಗಿ ಅವನ ಈ ಕೆಲಸದಲ್ಲಿ ಸಾಥಿಯಾಗಿ, ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ. ಇನ್ನಾದರೂ ಇವರು ಹಳಿಗೆ ಬಂದಾರು ಎಂದುಕೊಂಡ ಉಭಯ ಪೋಷಕರೂ ನಿರಾಶೆಯಾಗುವಂತೆ ಇವರು ತಮ್ಮ ಸಮಾಜೋದ್ಧಾರದ ಕೆಲಸ ಮುಂದುವರೆಸುತ್ತಾರೆ. ವೈಯಕ್ತಿಕ ಸುಖ-ದುಃಖಗಳು ಗೌಣವಾಗುತ್ತವೆ. ರಸ್ತೆಬದಿ, ರೈಲು, ಬಸ್‌ಸ್ಟಾಂಡು, ಶಾಲೆಯ ಕಟ್ಟೆಗಳ ಮೇಲೇ ಮಲಗೆದ್ದು, ಎಲ್ಲೆಲ್ಲೋ ಏನೇನೋ ತಿನ್ನುತ್ತ, ಅವರು ಈ ಕೆಲಸದಲ್ಲೇ ಮುಳುಗಿಹೋಗಿರುತ್ತಾರೆ. ಆದರೆ ಯಾವಾಗ ಪುನರ್ವಸು ಗರ್ಭಿಣಿಯಾಗುತ್ತಾಳೋ ಆಗ ಅವರಿಗೂ ಒಂದು ‘ವೈಯಕ್ತಿಕ ಬದುಕು’ ಪ್ರಾಪ್ತವಾಗುತ್ತದೆ. ಬಸುರಿ ಹೆಂಡತಿಗಾಗಿ ಹಾಲು, ಒಳ್ಳೆಯ ಊಟ, ಮನೆ, ಬಟ್ಟೆ, ಆರೈಕೆ, ತಾನು, ತನ್ನದು -ಗಳಂತಹ ಸಂಸಾರದ ಚೌಕಟ್ಟಿಗೆ ಅವರೂ ಒಳಗಾಗಬೇಕಾಗುತ್ತದೆ. ‘ಹಣ’ಕ್ಕೊಂದು ಪ್ರಾಮುಖ್ಯತೆ ಬರುತ್ತದೆ. ಬೇರೆ ಸಂಸಾರಗಳನ್ನು, ಗೆಳೆಯರ ಮಕ್ಕಳನ್ನು ನೋಡಿದಾಗ ತಾನು ತೆಗೆದುಕೊಂಡ ನಿರ್ಧಾರಗಳು, ತನ್ನ ಆದರ್ಶಗಳು ಎಲ್ಲಾ ಸುಳ್ಳಾಗಿದ್ದವೇ ಎಂಬ ಗೊಂದಲಕ್ಕೆ ಬೀಳುತ್ತಾನೆ ನೈಋತ್ಯ.
ನಾವು ಪಾಲಿಸಿಕೊಂಡು ಬಂದ ಆದರ್ಶಗಳನ್ನು ಕೈಬಿಡುವ ಕ್ಷಣಗಳಲ್ಲಿ ಆಗುವ ಗೊಂದಲ ತೀವ್ರವಾದದ್ದು. ಬಹುಶಃ ಈ ‘ಆದರ್ಶದ ಪರಿಪಾಲನೆ’ ಎಂಬ ಸಂಗತಿಗೆ ‘ಯಾವುದೋ ಸುಖದ ತ್ಯಾಗ’ ಎಂಬ ಸಂಗತಿ ಲಿಂಕ್ ಆಗಿರಬೇಕು. ಮತ್ತು ಈ ‘ಯಾವುದೋ ಸುಖದ ತ್ಯಾಗ’ ಎಂಬುದು ಮತ್ತೊಬ್ಬರನ್ನು ನೋಡಿದಾಗ ನಮಗನಿಸುವ ಭಾವವಿರಬೇಕು. ಉದಾಹರಣೆಗೆ, ‘ಹಣ ಮಾಡುವುದಕ್ಕಾಗಿ ನಾನು ದುಡಿಯುವುದಿಲ್ಲ; ಸಧ್ಯಕ್ಕೆ ನನಗೆ ಬದುಕಲೆಷ್ಟು ಬೇಕೋ ಅಷ್ಟನ್ನು ಮಾತ್ರ ನಾನು ದುಡಿದುಕೊಳ್ಳುತ್ತೇನೆ’ ಎಂಬ ಧ್ಯೇಯವನ್ನು ನಾನು ಇಟ್ಟುಕೊಂಡರೆ, ಇಡೀ ಜಗತ್ತೇ ಹಣದ ಹಿಂದೆ ಬಿದ್ದಿರುವ ಈ ದಿನಗಳಲ್ಲಿ ನಾನು ಒಂಟಿಯಾಗಿಬಿಡುತ್ತೇನೆ. ನಾನೂ ನನ್ನ ಗೆಳೆಯರ, ಊರವರ, ಸಮಾಜದವರ ಸರಿಸಮಾನನಾಗಿ ಬದುಕಬೇಕು ಎಂಬ ಬಯಕೆಗೂ ನನ್ನ ಆದರ್ಶಕ್ಕೂ ಬೀಳುವ ಜಿದ್ದಾಜಿದ್ದಿ ಇದು. ಗೆಳೆಯ ಕಾರು ತಗೊಂಡ, ಸೈಟು ಖರೀದಿಸಲು ನೋಡುತ್ತಿದ್ದಾನೆ, ಫ್ಲಾಟ್‌ನಲ್ಲಿ ಇದ್ದಾನೆ, ಅಮೆರಿಕೆಗೆ ಹಾರುತ್ತಿದ್ದಾನೆ, ಎಷ್ಟು ಸುಂದರಿ ಹೆಂಡತಿ, ಫೈವ್ ಸ್ಟಾರ್ ಹೋಟೆಲಿಗೆ ಕರೆದೊಯ್ಯುತ್ತಾನೆ, ಮಲ್ಟಿಪ್ಲೆಕ್ಸಿನಲ್ಲೇ ಸಿನೆಮಾ ನೋಡುತ್ತಾನೆ, ಶಾಪಿಂಗ್ ಮಾಡುವುದೇನಿದ್ದರೂ ಮಾಲಿನಲ್ಲೇ -ಎಂಬಿತ್ಯಾದಿ ಬೇಡವೆಂದರೂ ನನ್ನನ್ನು ಚುಚ್ಚುವ ಶೂಲಗಳು; ‘ಬರೀ ಈಗಿನದಷ್ಟೇ ನೋಡಿಕೊಂಡ್ರೆ ಆಗ್ಲಿಲ್ಲ, ನಿನ್ನನ್ನಷ್ಟೇ ಸಂಭಾಳಿಸಿಕೊಂಡ್ರೆ ಆಗ್ಲಿಲ್ಲ; ಫ್ಯೂಚರ್ - ಫ್ಯೂಚರ್ ಬಗ್ಗೆ ಯೋಚಿಸು. ನಿನ್ನ ತಂದೆ-ತಾಯಿಯರನ್ನ ನೋಡ್ಕೋಬೇಕು, ಮದುವೆ ಮಾಡ್ಕೋಬೇಕು, ಆಮೇಲೆ ಮಕ್ಳು-ಮರಿ-ಶಾಲೆ-ಫೀಸು, ಸಂಸಾರವನ್ನ ಸುಖವಾಗಿಡಬೇಕು, ಕೊನೇಕಾಲದಲ್ಲಿ ನಿನಗೇ ಹಣದ ಜರೂರತ್ತು ಬೀಳಬಹುದು... ಇದನ್ನೆಲ್ಲ ಯೋಚಿಸು. ಕಮ್ ಔಟ್ ಆಫ್ ದಟ್ ಕಂಪನಿ ಅಂಡ್ ಜಾಯ್ನ್ ಅ ನ್ಯೂ ಜಾಬ್’ ಎಂದು ನನ್ನನ್ನು ಪ್ರೇರೇಪಿಸುವ ಶಕ್ತಿಗಳು; ‘ಈಗಿನ ಕಾಲದಲ್ಲಿ ಲಾಯಲ್ಟಿ, ಭಾವನೆ, ಆದರ್ಶ ಅಂತೆಲ್ಲ ಯೋಚಿಸ್ತಾ ಕೂತ್ರೆ ಅಷ್ಟೇ ಕತೆ. ದುಡ್ಡಿಗಾಗಿ ಏನು ಮಾಡಲಿಕ್ಕೂ ಹೇಸದ ಜನಗಳ ಮಧ್ಯೆ ನೀನಷ್ಟೇ ಸುಮ್ಮನಿದ್ದು ಏನು ಸಾಧಿಸ್ತೀಯಾ? ಹೇಳ್ತೀನಿ ಕೇಳು: ಮುಂದೆಮುಂದೆ ನಿನ್ನ ಆದರ್ಶಗಳ ಪಾಲನೆಗೂ ಹಣವೇ ಬೇಕಾಗತ್ತೋ ಮೂರ್ಖಾ!’ ಎಂದು ಹೆದರಿಸುವ ಆಪ್ತರು; ‘ಒಂದು ಸಲ ನಿಂಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿಕೊಂಡು ಲೈಫಲ್ಲಿ ಸೆಟಲ್ ಆಗಿ ಕೂತುಬಿಟ್ರೆ ಮುಗೀತಪ್ಪ. ಆಮೇಲೆ ನಿಂಗೆ ಏನು ಬೇಕೋ ಅದು ಮಾಡ್ಕೋ. ಹ್ಯಾಗೆ ಬೇಕೋ ಹಾಗೆ ಬದುಕು’ ಎಂಬ ಹೊಸ ಆಯಾಮದ ಸಲಹೆ -ಇವೆಲ್ಲವುಗಳ ಮಧ್ಯೆ ನಾನು ನಾನಾಗಿ ಉಳಿಯುವುದು ಹೇಗೆ?
ಈ ಸುಖ ಎಂಬ ಊಹನೆಗೆ ಗರಿಷ್ಠ ಮಿತಿಯೇ ಇಲ್ಲದಿರುವುದು ಇವಕ್ಕೆಲ್ಲ ಕಾರಣವಿರಬಹುದು. ಏನೆಲ್ಲ ಇದ್ದೂ ಇವ್ಯಾವುದೂ ಬೇಡ, ಮತ್ತೇನೋ ಬೇಕು ಎಂದು ಹಂಬಲಿಸುವುದು ಅಧ್ಯಾತ್ಮ. ಆದರೆ ಇಷ್ಟೆಲ್ಲ ಇದ್ದರೂ ಇನ್ನೂ ಬೇಕೆಂಬುದಕ್ಕೆ, ಎಷ್ಟೇ ಅನುಭವಿಸಿದರೂ ಸಾಕೆನಿಸದೇ ಹೋಗುವುದಕ್ಕೆ, ಬರೀ ನಮಗಿಂತ ಮೇಲಿನವರೇ ನಮ್ಮ ಕಣ್ಣಿಗೆ ಚುಚ್ಚುವುದಕ್ಕೆ ತೃಪ್ತಿಯ ಅಳತೆಗೋಲು ಬೆಳೆಯುತ್ತಲೇ ಹೋಗುವುದೇ ಕಾರಣ. ಈ ಎಲ್ಲ ಏನೆಲ್ಲವನ್ನು ಗಳಿಸುವ ಭರಾಟೆಯಲ್ಲಿ ನಾನು ಮುರಿಯಬೇಕಿರುವ ನಿರ್ಧಾರಗಳಿಗೆ ಕೊಟ್ಟುಕೊಳ್ಳಬಹುದಾದ ಸಮರ್ಥನೆಯೇನು? ನಾನು ಬದುಕುತ್ತಿರುವ ಈ ವಾಸ್ತವಿಕ ಜಗತ್ತು ನನ್ನದಲ್ಲ, ನಾನು ಮಾಡುತ್ತಿರುವ ಈ ಕೆಲಸ ನನ್ನದಲ್ಲ, ಐಯಾಮ್ ನಾಟ್ ವ್ಹಾಟ್ ಐಯಾಮ್ -ಎಂಬ, ಆಗಾಗ ನನಗನಿಸುವ ಭಾವ, ಮತ್ತು ಹಾಗಿದ್ದಾಗ್ಯೂ ಇವ್ಯಾವುದನ್ನೂ ಬಿಡಲಾಗದ ಅನಿವಾರ್ಯತೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಸವೆಸುವುದೇ ಬದುಕೇ? ಗೊತ್ತಿಲ್ಲ.
* * *
ಭಾನುವಾರ ಬೆಳಬೆಳಗ್ಗೆ ಫೋನಿಸಿದ ಹುಡುಗಿ ಭೈರಪ್ಪನವರ ‘ನಿರಾಕರಣ’ ಓದುತ್ತಿರುವುದಾಗಿ ಹೇಳಿದಳು. ಅದ್ಯಾವುದೋ ಗುಂಗಿನಲ್ಲಿದ್ದ ನಾನು, ‘ಅದರಲ್ಲಿ ಬರುವ ಪಾತ್ರ ನರಹರಿಯ ಹಾಗೆ ನಂಗೂ ಆಗಾಗ ಹಿಮಾಲಯಕ್ಕೆ ಹೋಗಿಬಿಡಬೇಕು ಅಂತ ಅನ್ನಿಸುತ್ತೆ. ಒಂದಷ್ಟು ಕಾಲ ಸನ್ಯಾಸಿಯ ಥರ ಬದುಕಿ ಬರಬೇಕು ಅಂತ ಇದೆ’ ಎಂದುಬಿಟ್ಟೆ. ಅಷ್ಟೇ, ಫೋನ್ ಕಟ್! ಏನಾಯಿತು ಅಂತ ತಿಳಿಯಲು ಅರ್ಧ ಗಂಟೆಯ ನಂತರ ಬಂದ ಎಸ್ಸೆಮ್ಮೆಸ್ಸನ್ನೇ ಓದಬೇಕಾಯಿತು: ‘ನಿಂಗೆ ಸನ್ಯಾಸಿ ಆಗ್ಬೇಕು ಅಂತೆಲ್ಲ ಇದ್ರೆ ಮೊದಲೇ ಹೇಳ್ಬಿಡು. ನಾನು ನಿನ್ನ ಮದುವೇನೇ ಮಾಡ್ಕೊಳಲ್ಲ. ಆಮೇಲೆ ಸಂಸಾರ ಬಿಟ್ಟು, ಮಕ್ಕಳನ್ನ ಹರಾಜಿಗೆ ಹಾಕಿ ನೀನು ಹತ್ತಿ ಹೋಗೋದು ಎಲ್ಲಾ ನಂಗೆ ಸಹಿಸಲಿಕ್ಕೆ ಆಗಲ್ಲ. ಎಲ್ಲಾರ ಹಾಗೆ ಡೀಸೆಂಟಾಗಿ ಬದುಕೋ ಹುಡುಗ ಬೇಕು ನಂಗೆ.’ ಆಹ್! ಆಮೇಲೆ ‘ನಾನು ಹೇಳಿದ್ದು ಹಂಗಲ್ಲ, ಹಿಂಗೆ, ನಾನು ದೇವರಾಣೆ ಸನ್ಯಾಸಿ ಆಗಲ್ಲ, ಹೆಂಡತಿ-ಮಕ್ಕಳನ್ನ ಬಿಟ್ಟುಹೋಗುವಷ್ಟು ಬೇಜವಾಬ್ದಾರಿತನ ನಂಗಿಲ್ಲ’ ಅಂತೆಲ್ಲ ಹೇಳಿ ಸಮಾಧಾನ ಮಾಡಬೇಕಾಯ್ತು. ಮೂರು ದಿನ ಮಾತಿಲ್ಲ ಕತೆಯಿಲ್ಲ. ಕೊನೆಗೆ ದೇವರೇ ಡೈರಿಮಿಲ್ಕ್ ರೂಪದಲ್ಲಿ ಬಂದು ಈ ಪ್ರಕರಣಕ್ಕೆ ಸುಖಾಂತ್ಯ ಕೊಟ್ಟ. ಕ್ಯಾಡ್‌ಬರೀಸಿಗೆ ಥ್ಯಾಂಕ್ಸ್ ಹೇಳಿದೆ.
ಕನಸಿಗೂ, ಆದರ್ಶಕ್ಕೂ, ಹುಚ್ಚಿಗೂ ಸಿಕ್ಕಾಪಟ್ಟೆ ಸಂಬಂಧವಾ? ಕನಸು ಕಾಣುವುದು ಹಾಗೂ ಆದರ್ಶಗಳನ್ನು ಆವಾಹಿಸಿಕೊಳ್ಳುವುದು ಹುಚ್ಚಿನ ಲಕ್ಷಣವಾ? ಗೊತ್ತಿಲ್ಲ.
* * *
ಏನೇನೂ ಗೊತ್ತಿಲ್ಲದ ಕಾಲದಲ್ಲಿ ಶುರು ಮಾಡಿದ್ದು ಈ ಬ್ಲಾಗು. ಆದರೆ ಹೀಗೆಲ್ಲ ನಿಮ್ಮೊಂದಿಗೆ ಮಾತಾಡುತ್ತ ಐದು ವರುಷಗಳೇ ಕಳೆದುಹೋಗಿವೆ. ನಾನು ಬರೆದದ್ದೆಲ್ಲ ಓದಿದ ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಸ್ಪಂದನಗಳು ನನಗೆ ನೀಡಿದ ಆತ್ಮವಿಶ್ವಾಸ ಅಪಾರ. ಥ್ಯಾಂಕ್ಸ್, ಋಣಿ, ಕೃತಜ್ಞ, ಆಭಾರಿ -ಇತ್ಯಾದಿ ಶಬ್ದಗಳು ಈ ಸದ್ದಿಲ್ಲದ ಭಾವಗೀತದ ಬಣ್ಣನೆಗೆ ಏನೇನೂ ಸಾಲವು. ಆದರೂ ಈ ಕ್ಷಣಕ್ಕೆ ಹೊಳೆಯುತ್ತಿರುವವು ಅವೇ.
ದೈನಂದಿನ ಬದುಕಿಗೆ ಇಂಗ್ಲೀಷ್ ಕ್ಯಾಲೆಂಡರ್ ಇಯರ್, ಹಿಂದೂಗಳಿಗೆ ಸಂವತ್ಸರ, ವ್ಯವಹಾರ ಜಗತ್ತಿಗೆ ಫೈನಾನ್ಷಿಯಲ್ ಇಯರ್ -ಇರುವ ಹಾಗೆ ಬ್ಲಾಗಿಗರಿಗೆ ‘ಬ್ಲಾಗೀ ವರ್ಷ.’ ಈ ಬ್ಲಾಗೀ ವರ್ಷ ನನಗೆ ಒಂದಷ್ಟು ಬಹುಮತಿಗಳನ್ನು ತಂದುಕೊಟ್ಟಿತು: ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...ಹೀಗೆ ಹಂಚಿಕೊಳ್ಳಲು ಒಂದಷ್ಟು ಖುಶಿಗಳು. ನಿಮ್ಮೊಂದಿಗೇ ಯಾಕೆ ಹಂಚಿಕೊಳ್ಳಬೇಕು ಎಂದರೆ ಮೇಷ್ಟ್ರಿಗೆ ಯಾಕೆ ಗೌರವ ಕೊಡಬೇಕು ಎಂದಂತಾಗುತ್ತದೆ.
ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು... ಬುಟ್ಟಿಗೆ ಬಿದ್ದುದೆಲ್ಲ ಕವಿತೆಯಾಗಲಿ; ಮರೆತ ಉಸಿರು ಕತೆಯಾಗಲಿ. ಸಾಗುತ್ತಿರುವ ಪಯಣದಲ್ಲಿ, ಜಾರುತ್ತಿರುವ ಕ್ಷಣಗಳಲ್ಲಿ, ಭಾರ ಭಾರ ಮನಸಿನಲ್ಲಿ ಹೀಗೊಂದು ಪುಟ್ಟ ಪ್ರಾರ್ಥನೆ:
ಜಗುಲಿಕಟ್ಟೆಯ ಮೇಲೆ ನಡೆಯುತ್ತಿದೆ ಜೋರುನಗೆಯಲಿ ಅಂತ್ಯಾಕ್ಷರಿ
ಹೊಸ ಹಾಡು ಹೊಳೆಯುತಿರಲಿ, ಆಟಕಂತ್ಯವಿಲ್ಲದಿರಲಿ
ಕಾದ ಧರಣಿಗೆ ಆಗುತ್ತಿದೆ ರಾತ್ರಿಯಿಡೀ ಮಳೆಯ ಮೇಜವಾನಿ
ಯಾವ ಗೋಡೆಯೂ ಕುಸಿಯದಿರಲಿ, ಮರದ ರೆಂಬೆ ಗಟ್ಟಿಯಿರಲಿ
ತಿರುಗುತ್ತಿರುವ ಆಲೆಮನೆಯ ಕೋಣಗಳಿಗೆ ತಲೆಸುತ್ತು ಬಾರದಿರಲಿ
ಅರಳುತ್ತಿರುವ ಎಲ್ಲ ಹೂವ ಕೊರಳಿಗೂ ದುಂಬಿಯುಸಿರು ತಾಕಲಿ
ಉಪ್ಪಿಟ್ಟು ವಾಕರಿಕೆ ತರಿಸುವ ಮುನ್ನ ಬ್ಯಾಚುಲರುಗಳಿಗೆ ಮದುವೆಯಾಗಲಿ
ವುಡ್ವರ್ಡ್ಸ್ ಕುಡಿದ ಮಗು ಅಳು ನಿಲ್ಲಿಸಲಿ, ಅಪ್ಪನಿಗೆ ತನ್ನಮ್ಮನ ನೆನಪಾಗಲಿ
ಬಿಸಿಲ ಬೇಗೆಗೆ ಇರಲಿ ಇಬ್ಬಟ್ಟಲ ಹಣ್ಣಿನ ಶರಬತ್ತು
ಚಳಿಯ ರಾತ್ರಿಗೆ ಇರಲಿ ತಬ್ಬಿ ಮುತ್ತಿಡುವಷ್ಟು ಮೊಹಬತ್ತು
ಸೂಜಿಯೊಳಗೆ ದಾರ ಪೋಣಿಸುತ್ತಿರುವಜ್ಜಿಗೆ ನೆರವಾಗಲಿ ಮೊಮ್ಮಗಳು
ಮರಳಿ ಬರಲಿ ವನಮಾಲಿ ರಾಧೆಯೆಡೆಗೆ, ಉಲಿಯಲಿ ಮತ್ತೆ ಕೊಳಲು
ಒತ್ತೆಯಲ್ಲಿಟ್ಟ ಹಣ್ಣು ಸಿಹಿಯಾಗಲಿ, ಒಳ್ಳೆ ಸುದ್ದಿಯೇ ಬರಲಿ ಕಾದವರಿಗೆ
ಆಸೆ ಪಟ್ಟ ಹುಡುಗಿಗೆ, ತಂದು ಮುಡಿಸಲಿ ಹುಡುಗ ಪರಿಮಳದ ಕೇದಿಗೆ
ಕಣ್ಣ ಕೆಂಪೆಲ್ಲ ತಿಳಿಯಾಗಲಿ, ಭಾಷ್ಪವೆಲ್ಲ ಮೀಸಲಿರಲಿ ಆನಂದಕೆ
ಅನ್ನವಿರಲಿ ಹಸಿದ ಹೊಟ್ಟೆಗಳಿಗೆ, ಕಾವಿರಲಿ ತಬ್ಬಲಿ ಮೊಟ್ಟೆಗಳಿಗೆ
ಒಲ್ಲದ ಒಪ್ಪಿಗೆಗಳ ನೀಡದಂತೆ ನನ್ನನ್ನು ಅಣಿಗೊಳಿಸು
ನಿರ್ಧಾರದ ಗಳಿಗೆಗಳಲಿ ಮನಸನ್ನು ಗಟ್ಟಿಗೊಳಿಸು
ಕನಸುಗಳನ್ನು ಗುರಿಗಳನ್ನಾಗಿಸುವ ಛಲ ತೊಡಿಸು
ಕವಿತೆಗಳನು ಕವಿಸಮಯಕೇ ಬಿಟ್ಟು ವಾಸ್ತವದಲ್ಲಿ ಬದುಕುವುದ ಕಲಿಸು
ತುಂಬು ಪ್ರೀತಿ,
-ಸುಶ್ರುತ ದೊಡ್ಡೇರಿ
Friday, April 08, 2011
ಎಮ್ಮೆಬಸ್ಸು ಎಂಬ ಪುಷ್ಪಕ ವಿಮಾನ
‘ಫಸ್ಟ್ ಇಂಪ್ರೆಷನ್ ಈಸ್ ದ ಬೆಸ್ಟ್ ಇಂಪ್ರೆಷನ್’ ಎಂಬ ಅದ್ಯಾವುದೋ ಪುಣ್ಯಾತ್ಮ ಮಾಡಿದ ಗಾದೆ ನಮ್ಮೂರ ಬಸ್ಸುಗಳಿಗೂ ಅನ್ವಯಿಸುತ್ತದೆ. ಕಿತ್ತುಹೋಗಿರೋ ಟಾರು ರಸ್ತೆಯಲ್ಲಿ ಗಂಟೆಗೊಂದರಂತೆ ಹಾರನ್ ಮಾಡಿಕೊಂಡು ಚಲಿಸುವ ನಮ್ಮೂರ ಬಸ್ಸುಗಳು ಜನಮನ ಪ್ರೀತಿ ಗಳಿಸಿರುವುದು ತಮ್ಮ ಮೂಲ ಹೆಸರುಗಳೊಂದಿಗೆ. ಹಾಳಾದ ರಸ್ತೆಯಿಂದಾಗಿ ಪದೇಪದೇ ರಿಪೇರಿಗೆ ಬಂದು ಜೇಬಿಗೆ ಸಂಚಕಾರ ತರುವುದಕ್ಕೋ, ಜನರೆಲ್ಲ ಶ್ರೀಮಂತರಾಗಿ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡತೊಡಗಿ ಕಲೆಕ್ಷನ್ ಸರಿಯಾಗಿ ಆಗದಿರುವುದಕ್ಕೋ ಅಥವಾ ಗ್ರಹಚಾರ ಸರಿಯಿಲ್ಲದೆ ಮತ್ತೆಮತ್ತೆ ಅಪಘಾತಗಳಿಗೆ ಈಡಾಗುವುದಕ್ಕೋ ಬೇಸತ್ತು, ಯಾಕೋ ಈ ರೂಟೇ ಸರಿಯಿಲ್ಲ ಅಂತ ಅದರ ಓನರ್ರು ತೀರ್ಮಾನಿಸಿ ಬಸ್ಸಿನ ಸಮೇತ ರೂಟಿನ ಲೈಸೆನ್ಸನ್ನೂ ಮತ್ಯಾರಿಗೋ ಮಾರಾಟ ಮಾಡಿ ಕೈ ತೊಳೆದುಕೊಳ್ಳುವುದು ಒಂದು ವಾರ್ಷಿಕ ವಾಡಿಕೆಯೇ ಆಗಿತ್ತು. ಆದರೆ ಈ ಅರಿವೇನು ಪ್ರಯಾಣಿಕರಿಗೆ ಆಗುತ್ತಿರಲಿಲ್ಲ. ಬಸ್ಸು ಬರಬೇಕಾದ ಸಮಯಕ್ಕೆ ಬರುತ್ತಿತ್ತು, ಕೈ ಮಾಡಿದಲ್ಲಿ ನಿಲ್ಲುತ್ತಿತ್ತು, ಹತ್ತಿಸಿಕೊಂಡು ಹೋಗುತ್ತಿತ್ತು. ಕಾಲು-ಅರ್ಧಗಂಟೆ ಹೆಚ್ಚುಕಮ್ಮಿಯಾಗುವುದಕ್ಕೆಲ್ಲ ಪ್ರಯಾಣಿಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಈ ಓನರ್ ಬದಲಾದಾಗ ಬಸ್ಸಿನ ಬಣ್ಣ ಮತ್ತು ಹೆಸರೂ ಬದಲಾಗುತ್ತಿತ್ತು. ‘ಶ್ರೀ ಲಕ್ಷ್ಮೀ ಟ್ರಾವೆಲ್ಸ್’ ಇದ್ದುದು ‘ಶ್ರೀ ಶಿವಪ್ರಕಾಶ್ ಮೋಟಾರ್ಸ್’ ಆಯಿತು, ‘ಶ್ರೀ ಮಲ್ಲಿಕಾರ್ಜುನ ಎಕ್ಸ್‌ಪ್ರೆಸ್’ ಇದ್ದುದು ‘ಶ್ರೀ ಗಣೇಶ್ ಪ್ರಸಾದ್’ ಆಯಿತು, ‘ಶ್ರೀ ಕೃಷ್ಣಾ ಟ್ರಾನ್ಸ್‌ಪೋರ್ಟ್ಸ್ ಸರ್ವೀಸಸ್’ ಇದ್ದುದು ‘ಶ್ರೀ ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ಸ್’ ಆಯಿತು. ಆದರೆ ಜನ ಮಾತ್ರ ಅವುಗಳ ಮೂಲ ಹೆಸರನ್ನು ಬಿಟ್ಟುಕೊಡಲಿಲ್ಲ. ಲಕ್ಷ್ಮೀ ಬಸ್ಸು, ಮಲ್ಲಿಕಾರ್ಜುನ ಬಸ್ಸು, ಕೃಷ್ಣಾ ಬಸ್ಸು -ಹೀಗೆ ಅವು ತಮ್ಮ ಒರಿಜಿನಲ್ ಹೆಸರುಗಳಿಂದಲೇ ಕರೆಯಲ್ಪಡುತ್ತಿದ್ದವು. ಇದೇ ಸಾಲಿಗೆ ಸೇರುವ ಮತ್ತೊಂದು ಬಸ್ಸು ‘ಎಮ್ಮೆಬಸ್ಸು’.
ಈ ಎಮ್ಮೆಬಸ್ಸಿನ ನಿಜವಾದ ಹೆಸರು ‘ಶ್ರೀ ಎಮ್.ಎಮ್.ಎಸ್. ಅಂಡ್ ಎಸ್.ಟಿ.ಎ.’ ಎಂದು. ಇದರ ಲಾಂಗ್‌ಫಾರ್ಮು ಕಂಡುಹಿಡಿಯಲು ನಾವೊಂದಷ್ಟು ಹುಡುಗರು ಆಗ ಜಾಸೂಸಿ ಮಾಡಿದ್ದುಂಟು. ಎಮ್.ಎಮ್.ಎಸ್. ಎಂದರೆ ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ಎಂದೇನೋ ಕಂಡುಹಿಡಿದೆವು. ಆದರೆ ಈ ಎಸ್.ಟಿ.ಎ. ಎಂದರೇನೆಂದು ತಿಳಿಯಲೇ ಇಲ್ಲ. ಕಂಡಕ್ಟರ್ ಬಳಿ ಕೇಳಿದರೆ, ಇನ್ನೂ ಶಾಲಾಬಾಲಕರಾಗಿದ್ದ ನಮ್ಮನ್ನು ‘ಅದೆಲ್ಲ ನಿಮಗ್ಯಾಕ್ರೋ?’ ಅಂತ ಹೆದರಿಸಿಬಿಟ್ಟರು. ಜನ ಮಾತ್ರ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಶಿಸ್ತಾಗಿ, ಸಿಂಪಲ್ಲಾಗಿ ಅದನ್ನು ‘ಎಮ್ಮೆಬಸ್ಸು’ ಅಂತ ಕರೆದುಬಿಟ್ಟರು! ಅದರ ಓನರ್ರೂ ಬದಲಾಗಿ, ಹೆಸರೂ ಅನೇಕ ಸಲ ಬದಲಾದರೂ ಜನರ ಬಾಯಲ್ಲಿ ಅದು ಇನ್ನೂ ಎಮ್ಮೆಬಸ್ಸಾಗಿಯೇ ಉಳಿದುಕೊಂಡಿದೆ.
ಈ ಎಮ್ಮೆಬಸ್ಸು ನಮ್ಮೂರಿಗೆ ಸಾಗರದಿಂದ ಬರುವ ಕೊನೆಯ ಬಸ್ಸು. ಪೇಟೆಗೆ ಹೋದವರೆಲ್ಲ ಅದೆಷ್ಟೇ ಕೆಲಸವಿದ್ದರೂ ಮುಗಿಸಿಕೊಂಡು ಈ ಎಮ್ಮೆಬಸ್ಸಿಗೆ ಹತ್ತಿಕೊಳ್ಳಬೇಕು. ಅದಿಲ್ಲದಿದ್ದರೆ ದೂರದ ಉಳವಿಯಿಂದ ಕತ್ತಲ ರಾತ್ರಿಯಲ್ಲಿ ನಡೆದುಕೊಂಡು ಬರಬೇಕಾಗುತ್ತದೆ. ಎಮ್ಮೆಬಸ್ಸು ಸಾಗರದಿಂದ ರಾತ್ರಿ ಎಂಟೂ ಮುಕ್ಕಾಲಿಗೆ ಹೊರಡುತ್ತದೆ. ಸಂತೆಗೆ ಹೋದವರು, ಮಂಡಿ ಕೆಲಸಕ್ಕೆ ಹೋದವರು, ನೆಂಟರ ಮನೆಗೆ ಹೋದವರು, ಸಿನೆಮಾಗೆ ಹೋದವರು -ಎಲ್ಲಾ ತರಾತುರಿಯಲ್ಲಿ ಓಡಿಬಂದು ಬಸ್ ಹತ್ತಿ ನಿಟ್ಟುಸಿರು ಬಿಡುವರು. ಮೇನ್ ಬಸ್‌ಸ್ಟಾಂಡಿನಿಂದ ಹೊರಟುಹೋಗಿದ್ದರೂ ಹೊಳೆ ಬಸ್‌ಸ್ಟಾಂಡ್ ಬಳಿ ಈ ಬಸ್ ಐದು ನಿಮಿಷ ನಿಲ್ಲುತ್ತಿದುದರಿಂದ ಜನ ಆಟೋ ಮಾಡಿಸಿಕೊಂಡಾದರೂ ಇಲ್ಲಿಗೆ ಬಂದು ಬಸ್ ಹಿಡಿಯುವರು. ಸಂತೆ ಮುಗಿಸಿ ಬಂದವರ ಚೀಲದಿಂದ ಮೂಲಂಗಿಗಿಡ, ಕೊತ್ತಂಬರಿ ಕಟ್ಟುಗಳು ಇಣುಕುತ್ತಿದ್ದರೆ, ಮಂಡಿಗೆ ಹೋಗಿಬಂದವರ ಜೇಬು ನೋಟಿನಿಂದ ಉಬ್ಬಿರುತ್ತಿತು. ನೆಂಟರ ಮನೆಯಿಂದ ಬಂದವರ ಚೀಲದಲ್ಲಿ ಸಿಹಿತಿಂಡಿಗಳಿದ್ದರೆ ಸಿನೆಮಾ ನೋಡಿ ಬಂದವರ ಮೊಗದಲ್ಲಿ ಭಾರಿ ಗಮ್ಮತ್ತು. ಈ ಎಮ್ಮೆಬಸ್ಸಿಗೆ ಸಾಗರದ ಅಂಗಡಿ, ಮಂಡಿ, ಬ್ಯಾಂಕುಗಳಿಗೆ ಕೆಲಸಕ್ಕೆ ಹೋಗುವ ಒಂದಷ್ಟು ಖಾಯಂ ಪ್ರಯಾಣಿಕರೂ, ಒಂದಷ್ಟು ಕುಡುಕರೂ ಇರುತ್ತಿದ್ದರು. ಬಾಯಿಂದ ಘಮ್ಮನೆ ಪರಿಮಳ ಹೊಮ್ಮಿಸುತ್ತ ಬಿ.ಎಚ್. ರೋಡಿನಲ್ಲಿ ಹತ್ತುತ್ತಿದ್ದ ಈ ಕುಡುಕರನ್ನು ಕಂಡಕ್ಟರು ಕೊನೆಯ ಸೀಟಿನಲ್ಲಿ ಕೂರಿಸುತ್ತಿದ್ದ. ಈ ಬಸ್ಸಿನ ತುಂಬ ದಿನವೆಲ್ಲ ಅಡ್ಡಾಡಿ ಸುಸ್ತಾದ ಪ್ರಯಾಣಿಕರೇ. ಇವರೆಲ್ಲ ಕೂತೋ, ನಿಂತೋ, ಜೋತಾಡುತ್ತಲೋ ತೂಕಡಿಸುತ್ತಿದ್ದರು. ತಮ್ಮೂರಿನ ಹೆಸರನ್ನು ಕ್ಲೀನರ್ ಹುಡುಗ ಜೋರಾಗಿ ಕೂಗುತ್ತಿದ್ದಂತೆಯೇ ಎಚ್ಚರಾಗಿ ಲಘುಬಗೆಯಿಂದ ತಮ್ಮ ಚೀಲದ ಸಮೇತ ಕೆಳಗಿಳಿಯುತ್ತಿದ್ದರು.
ಎಮ್ಮೆಬಸ್ಸಿಗೆ ಬರುವ ಪ್ರಯಾಣಿಕರಲ್ಲಿ ಸಾಗರದ ಸಂಪೂರ್ಣ ಸುದ್ದಿ ಇರುತ್ತಿತ್ತು. ಮಂಡಿಯಲ್ಲಿ ಅಡಿಕೆಯ ರೇಟು ಎಷ್ಟಾಯಿತು, ಈರುಳ್ಳಿ ರೇಟು ಕಮ್ಮಿಯಾಯಿತಾ, ಅದೇನೋ ಗಲಾಟೆಯಂತೆ ಹೌದಾ, ನಾಳೆ ಬಂದ್ ಮಾಡ್ತಾರಂತಾ, ಓಸಿ ನಂಬರ್ ಎಷ್ಟು -ಹೀಗೆ. ಅಡಿಕೆ ಬೇಯಿಸುತ್ತ ಅಲ್ಲೇ ಚಳಿ ಕಾಯಿಸುತ್ತ ಕೂತ ಮಂದಿಗೆ, ಕಣ ಕಾಯಲು ಲಾಟೀನು ಹಿಡಿದು ಹೊರಟವರಿಗೆ, ಪಕ್ಕದ ಮನೆಯಿಂದ ಟೀವಿ ನೋಡಿ ಹೊರಬೀಳುತ್ತಿದ್ದವರಿಗೆ -ಈ ಬಾತ್ಮೀದಾರ ಎಲ್ಲ ವರದಿ ನೀಡಿಯೇ ಮುಂದುವರೆಯಬೇಕು. ಸ್ಟ್ರೀಟ್‌ಲೈಟ್ ಬೆಳಕಿನಲ್ಲಿ ಕಂಗೊಳಿಸುತ್ತ, ಕಪ್ಪು ಭೂತದಂತೆ ಬ್ಯಾಟರಿ ಬಿಟ್ಟುಕೊಂಡು ನಡೆದು ಬರುತ್ತಿರುವ ಇಂತಹ ವಕ್ತಾರರಿಗಾಗಿಯೇ ಕಾಯುತ್ತ ಊರ ಜನ ಕಟ್ಟೆ ಮೇಲೆ ಕೂತಿರುವರು.
ಎಮ್ಮೆಬಸ್ಸಿಗೆ ಸಂಬಂಧಿಸಿದ ಮತ್ತೊಂದು ಮಜಾ ವಿಷಯವೆಂದರೆ, ಈ ಬಸ್ಸಿಗೆ ಹೆಂಗಸರೇನಾದರೂ ಬರುವವರಿದ್ದರೆ ಅವರನ್ನು ಕರೆದುಕೊಂಡು ಬರಲು ಬ್ಯಾಟರಿ ಹಿಡಿದು ಗಂಡಸರು ಹೋಗಬೇಕಿದ್ದುದು. ಈ ರಾತ್ರಿಹೊತ್ತು ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಹೋಗುವ ಕಲ್ಪನೆಯೇ ಥ್ರಿಲ್ಲಿಂಗ್ ಆಗಿರುತ್ತಿತ್ತು. ಚಿಕ್ಕವನಿದ್ದಾಗ ಅಜ್ಜನ ಮನೆಗೆ ಹೋಗಿರುತ್ತಿದ್ದ ನಾನು, ಅಮ್ಮನೊಂದಿಗೆ ವಾಪಸು ಈ ಬಸ್ಸಿಗೇ ಬರುವಂತಹ ಸಂದರ್ಭವೇನಾದರೂ ಬಂದರೆ, ಅಪ್ಪ ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಬಂದಿರುತ್ತಿದ್ದ. ಅಷ್ಟೊತ್ತಿನತನಕ ಬಸ್ಸಿನೊಳಗೆ ಬೆಳಕಿನಲ್ಲಿ, ಸ್ಪೀಕರಿನಿಂದ ತೇಲಿಬರುತ್ತಿದ್ದ ಯಾವುದೋ ಸಿನೆಮಾ ಹಾಡಿನ ಲಹರಿಯಲ್ಲಿ, ಅಮ್ಮನ ಪಕ್ಕ ಬೆಚ್ಚಗೆ ಕೂತಿರುತ್ತಿದ್ದ ನನಗೆ, ಊರು ಬಂದು ಬಸ್ಸಿಳಿಯುತ್ತಿದ್ದಂತೆ, ಎಲ್ಲಾ ಕಡೆ ಕತ್ತಲೆಯೇ ಆವರಿಸಿ ಹೆದರಿಕೆಯಾಗುತ್ತಿತ್ತು. ಕತ್ತಲ ಕೂಪದಲ್ಲಿ ನಮ್ಮನ್ನು ಬಿಟ್ಟು, ಕಂಡಕ್ಟರು ‘ರೈಟ್’ ಅಂದದ್ದೇ ಬೆಳಕಿನ ಪೆಟ್ಟಿಗೆಯಂತೆ ಮುಂದೆ ಸಾಗಿಹೋಗುತ್ತಿದ್ದ ಬಸ್ಸು, ನನಗೆ ಪುಷ್ಪಕ ವಿಮಾನದಂತೆ ಕಾಣಿಸುತ್ತಿತ್ತು. ಥೇಟರಿನಿಂದ ಹೊರಬಿದ್ದಾಗ ನಿಜಲೋಕಕ್ಕೆ ಹೊಂದಿಕೊಳ್ಳಲು ಆಗುವ ಕಷ್ಟದಂತೆ ಈ ಕತ್ತಲಿಗೆ ಹೊಂದಿಕೊಳ್ಳಲು ಕೆಲಕ್ಷಣಗಳೇ ಹಿಡಿಯುತ್ತಿದ್ದವು. ನಮ್ಮನ್ನು ಕರೆದುಕೊಂಡು ಹೋಗಲು ಬಂದಿರುತ್ತಿದ್ದ ಅಪ್ಪ, ಆಗ ನಮ್ಮ ಮುಖಕ್ಕೇ ಬ್ಯಾಟರಿ ಬಿಟ್ಟು ನಾವೇ ಹೌದು ಅಂತ ಕನ್‌ಫರ್ಮ್ ಮಾಡಿಕೊಂಡು, ನನ್ನ ಕೈಹಿಡಿದು ಊರಿನ ಇಳಕಲು ಇಳಿಸುತ್ತಿದ್ದ. ದೆವ್ವಭೂತಗಳು ಅಕ್ಕಪಕ್ಕದ ಮರ-ಮಟ್ಟಿಗಳಲ್ಲಿ ಕೂತು ಹಾಯ್ ಎನ್ನುತ್ತಿದ್ದ ಈ ಚಳಿಯ ರಾತ್ರಿ ನಾನು ಅಪ್ಪನ ಕೈ ಗಟ್ಟಿಯಾಗಿ ಹಿಡಿದು ನಡುಗುತ್ತಾ ಮನೆ ಸೇರುತ್ತಿದ್ದೆ. ಇದೇ ಎಮ್ಮೆಬಸ್ಸಿಗೆ ಬರುವ ಅತ್ತಿಗೆಯನ್ನು ಕರೆತರಲು ನಾನೊಬ್ಬನೇ ಯಾವತ್ತು ಬಸ್‌ಸ್ಟಾಂಡಿಗೆ ಹೋದೆನೋ ಅವತ್ತೇ ನಾನು ಭಯ ಗೆದ್ದ ಶೂರನಾದೆ. ನನಗೆ ನಾನೇ ‘ದೊಡ್ಡವನಾದೆ ಮಗನೇ’ ಎಂದುಕೊಂಡೆ.
ಹಿಂದೊಂದು ಕಾಲದಲ್ಲಿ, ನಮ್ಮೂರ ಕಡೆ ಕಾಡು ದಟ್ಟವಾಗಿದ್ದ ದಿನಗಳಲ್ಲಿ, ಈ ಕೊನೆಯ ಬಸ್ಸಿಗೆ ಬರಲು ಹೆಂಗಸರೇನು, ಗಂಡಸರೂ ಭಯ ಪಡುತ್ತಿದ್ದರಂತೆ. ‘ಇಲ್ಲೆಲ್ಲ ಇಷ್ಟೆಲ್ಲ ಮನೆ ಇರ್ಲೆ. ಊರಿಗೆ ಇದ್ದಿದ್ದು ಬರೀ ನಾಲ್ಕೇ ಮನೆ. ರಸ್ತೆ ಎಡಬಲಕ್ಕೂ ಎತ್ತೆತ್ತರದ ಮರಗಳು, ದಟ್ಟ ಮಟ್ಟಿ ಇದ್ದಿದ್ದ. ಹುಲಿ, ಕಾಡೆಮ್ಮೆ ಎಲ್ಲಾ ಓಡಾಡ್ತಿದ್ದ. ಒಂದ್ಸಲ ಹುಲಿ ಗುರ್‌ಗುಟ್ಟಿದ್ದು ಕೇಳ್ಚು ಅಂದ್ರೆ, ಎದೆಯೆಲ್ಲ ಥರಗುಟ್ಟಿಹೋಗ್ತಿತ್ತು. ಅಲ್ದೇ ಗುಡುಸ್ಲು ಮಾವಿನಮರದ ಹತ್ರ ಬರ್ತಿದ್ದಂಗೇ ಸಾಲಾಗಿ ಕೊಳ್ಳಿದೆವ್ವ ಹೋಗ್ತಿರೋದು ಕಾಣ್ತಿತ್ತು, ಹೆಂಗೆ ಗೊತಿದಾ? ಗಾಯತ್ರಿ ಬಲದಮೇಲೇ ಜೀವ ಹಿಡ್ಕಳಕ್ಕಾಗಿತ್ತು. ಗುಡುಸ್ಲು ಮಾರೆಮ್ಮಂಗೆ ಹಣ್‌ಕಾಯಿ ಹೇಳಿಕೊಂಡಮೇಲೇ, ಅವು ದಾರಿ ಬಿಟ್ಟುಕೊಡ್ತಿದ್ದದ್ದು’ ಅಂತ ಅಜ್ಜ ಹೇಳುವಾಗ, ಇಂತಹ ಅನುಭವಗಳಿಗ್ಯಾವುದಕ್ಕೂ ಫಕ್ಕಾಗದ ನನ್ನ ಬಗ್ಗೆ ನನಗೇ ಬೇಸರವಾಗುತ್ತಿತ್ತು. ಅಷ್ಟೇ ಅಲ್ಲ, ಆಗಿನ ಜನಗಳ ಮೌಢ್ಯವೋ, ನಂಬಿಕೆಯ ಪರಾಕಾಷ್ಠೆಯೋ ಅಥವಾ ಎಲ್ಲವನ್ನೂ ಉತ್ಪ್ರೇಕ್ಷಿಸಿ ಹೇಳುವ ಅವರ ಕಥೆಗಾರಿಕೆಯ ಬಗೆಯೋ, ಸಾಗರದಿಂದ ಬರುವ ಈ ಕೊನೇಬಸ್ಸು ಪಡವಗೋಡಿನ ಬಳಿಯ ಒಂದು ಭೂತದಕಲ್ಲಿನ ಬಳಿ ಪ್ರತಿದಿನ ಆಫ್ ಆಗಿ ನಿಂತುಬಿಡುತ್ತಿತ್ತಂತೆ! ಡ್ರೈವರೂ ಕಂಡಕ್ಟರೂ ಇಳಿದುಹೋಗಿ, ತೆಂಗಿನಕಾಯಿ ಒಡೆದು, ಉದ್ದಂಡ ನಮಸ್ಕಾರ ಹಾಕಿಬಂದಮೇಲೇ ಬಸ್ಸು ಮುಂದೆ ಹೋಗುತ್ತಿದ್ದುದಂತೆ! ಅದಿಲ್ಲವೆಂದರೆ ತಿಪ್ಪರಲಾಗ ಹೊಡೆದರೂ ಬಸ್ಸು ನಿಂತಲ್ಲಿಂದ ಕದಲುತ್ತಿರಲಿಲ್ಲವಂತೆ! ಅದೇ ನಂಬಿಕೆ ಮುಂದುವರೆದುಬಂದು, ಈಗ ಆ ಕಲ್ಲಿನ ಸುತ್ತ ಒಂದು ಗುಡಿಯನ್ನೇ ಕಟ್ಟಲಾಗಿದೆ. ಅದರ ಬಳಿ ಈಗಲೂ ಕೆಲ ಬಸ್ಸುಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಿ ಮುಂದುವರೆಯುತ್ತಾರೆ.
ಈ ಎಮ್ಮೆಬಸ್ಸಿಗೆ ಒಮ್ಮೊಮ್ಮೆ ಅಚಾನಕ್ ನೆಂಟರು ಬಂದುಬಿಡುತ್ತಿದ್ದರು. ಫೋನಿನ್ನೂ ನಮ್ಮ ಮನೆಗೆ ಬಂದಿಲ್ಲದ ಕಾಲದಲ್ಲಿ ಆಗಂತುಕರಂತೆ ಬಂದಿಳಿಯುತ್ತಿದ್ದ ಇವರು, ಶಾಲೆಗೆ ಧಾಳಿಯಿಡುವ ಇನ್ಸ್‌ಪೆಕ್ಟರಂತೆ ಭಾಸವಾಗುತ್ತಿದ್ದರು. ಆಗಷ್ಟೆ ಊಟ ಮುಗಿಸಿ, ಕಸಮುಸುರೆ ಮುಗಿಸಿ ಮಲಗಲಣಿಯಾಗುತ್ತಿದ್ದ ನಮಗೆ ಈಗ ಇವರನ್ನು ಉಪಚರಿಸಲೇಬೇಕಾದ ಅನಿವಾರ್ಯತೆ. ಅವರಾದರೂ, ತಮ್ಮ ಊರಿಗೆ ಹೋಗಬೇಕಿದ್ದ ಬಸ್ ಬಾರದೆಯೋ, ಕೆಟ್ಟುಹೋಗಿಯೋ, ತಪ್ಪಿಹೋಗಿಯೋ ಆಗಿ, ಮತ್ಯಾವುದೇ ಗತ್ಯಂತರವಿರದೇ ನಮ್ಮಲ್ಲಿಗೆ ಬಂದವರಾಗಿರುತ್ತಿದ್ದರು. ಇವರಿಗೆ ಅನೇಕ ಸಲ ಊಟವಾಗಿರುತ್ತಿರಲಿಲ್ಲ. ಆಗ, ಇವರಿಗಾಗಿ ನಾವು ಹೊಸದಾಗಿ ಅಡುಗೆ ಮಾಡಿ ಬಡಿಸಬೇಕಿತ್ತು. ಅಮ್ಮ ಅಸಹನೆಯಿಂದಲೇ ಮತ್ತೆ ಅಡುಗೆಮನೆ ಪ್ರವೇಶಿಸುತ್ತಿದ್ದಳು.
ಹೇಗೆ ಎಮ್ಮೆಬಸ್ಸಿಗೆ ಆಗಂತುಕರು ಬಂದಾಗ ಅಸಹನೆಯಾಗುತ್ತಿತ್ತೋ ಹಾಗೇ ಈ ಬಸ್ಸಿಗೆ ಬರಬೇಕಾದವರು ಬಾರದಿದ್ದರೆ ಆತಂಕವಾಗುತ್ತಿತ್ತು. ಪೇಟೆಗೆ ಹೋಗಿದ್ದ ಅಪ್ಪ, ತವರಿಗೆ ಹೋಗಿದ್ದ ಅಮ್ಮ, ಕಾಲೇಜಿಗೆ ಹೋಗಿದ್ದ ಅತ್ತಿಗೆ ಅಥವಾ ಬರುತ್ತೇನೆ ಎಂದು ಫೋನಿಸಿದ್ದ ಯಾರೋ ನೆಂಟರು -ಬಾರದೇ ಹೋದಾಗ ಮನೆಮಂದಿಗೆಲ್ಲ ಟೆನ್ಷನ್ ಶುರುವಾಗುತ್ತಿತ್ತು. ಎಮ್ಮೆಬಸ್ಸು ಮುಂಚೆಯೇ ಬಂತೇ, ಬಸ್ ತಪ್ಪಿಸಿಕೊಂಡರೇ, ಬಸ್ಸಿನಲ್ಲಿ ನಿದ್ರೆ ಬಂದು ಸ್ಟಾಪ್ ತಪ್ಪಿಹೋಯಿತೇ, ಆಗಲೇ ಸದ್ದು ಮಾಡುತ್ತ ಹೋದದ್ದು ಬಸ್ ಅಲ್ಲ ಲಾರಿಯೇ -ಹೀಗೆ ಒಬ್ಬೊಬ್ಬರೂ ತಮಗೆ ತಿಳಿದಂತೆ ಆಲೋಚಿಸುತ್ತ ಆತಂಕದ ಶಮನದಲ್ಲಿ ಮಗ್ನರಾಗಿರುತ್ತಿದ್ದೆವು.
ನಮ್ಮೆಲ್ಲರ ಚಿಂತೆಯನ್ನು ನಿವಾರಿಸುವಂತೆ ಎಮ್ಮೆಬಸ್ಸು ಅಂದು ತಡವಾಗಿ ಬರುತ್ತಿತ್ತು. ನಮ್ಮೂರ ಬಸ್‌ಸ್ಟಾಂಡ್ ಬಳಿ ರಾಗವಾಗಿ ಹಾರನ್ ಮಾಡುತ್ತಿತ್ತು. ನಮ್ಮ ಮನೆಗೆ ಬರಬೇಕಾದವರನ್ನು ಸುರಕ್ಷಿತವಾಗಿ ಇಳಿಸುತ್ತಿತ್ತು. ಕ್ಲೀನರ್ ಹುಡುಗ ಹೊಡೆದ ಶೀಟಿ ಇಲ್ಲಿಯವರೆಗೂ ಕೇಳಿಸುತ್ತಿತ್ತು. ನಿದ್ದೆಗಣ್ಣ ಪ್ರಯಾಣಿಕರನ್ನು ತೂಗುತ್ತಾ ಕತ್ತಲನ್ನು ಬದಿಗೆ ಸರಿಸುತ್ತಾ ಕಿಟಕಿ-ಕಿಟಕಿಗಳಿಂದ ಬೆಳಕು ಚೆಲ್ಲುತ್ತಾ ಮಾಯಾಪೆಟ್ಟಿಗೆಯಂತೆ ಮುಂದೆ ಸಾಗುತ್ತಿತ್ತು.
[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ. ]
- - -
[ಈ ಪ್ರಬಂಧದಲ್ಲೊಂದು ತಪ್ಪಿದೆ. ಎಮ್.ಎಮ್.ಎಸ್.ನ ಲಾಂಗ್‌ಫಾರ್ಮು 'ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ' ಅಲ್ಲ. 'ಮೊಹಮ್ಮದ್ ಮೀರ್ ಸಾಹೆಬ್' ಅಂತಲಂತೆ. ಮತ್ತು ಎಸ್.ಟಿ.ಎ. ಎಂದರೆ 'ಸಾಗರ-ತೀರ್ಥಹಳ್ಳಿ-ಆಗುಂಬೆ'. ಮೊಹಮ್ಮದ್ ಮೀರ್ ಎಂಬ ಸಾಗರದವರೊಬ್ಬರು ನಡೆಸುತ್ತಿದ್ದ ಈ ಬಸ್ಸು ಮೊದಲು ಸಾಗರ-ತೀರ್ಥಹಳ್ಳಿ-ಆಗುಂಬೆ ರೂಟಿನಲ್ಲಿ ಚಲಿಸುತ್ತಿತ್ತಂತೆ. ಬರೆದು ಕಳುಹಿಸಿಯಾದಮೇಲೆ ನನಗೆ ತಿಳಿದದ್ದು ಇದು.]

Saturday, March 26, 2011
ಪ್ರತೀಕ್ಷೆ
ಕಾಯುವುದು ಎಂದರೆ ಹೀಗೇ ಮತ್ತೆ
ದರೋಜಿ ಕರಡಿಧಾಮದಲ್ಲಿ
ಒಣತರುಗಳ ನಡುವಿನ ಕಾದಬಂಡೆಗಳಿಗೆ
ಕಾಕಂಬಿ ಸವರಿ ಬಂದು
ಕೆಮೆರಾದ ಮೂತಿಗೆ ಜೂಮ್‌ಲೆನ್ಸ್ ಇಟ್ಟು
ಕಣ್ಣು ನೆಟ್ಟು ಕೂರುವುದು
ಸದ್ದು ಮಾಡಬೇಡಿ ಅಂತ ಎಚ್ಚರಿಸುತ್ತಾನೆ ಕಾವಲುಗಾರ..
ನವಿಲುಗಳು ದಾಹದಿಂದ ಕೇಕೆ ಹಾಕುವಾಗ
ನರ್ತನದ ಭಂಗಿಗಳ ಉನ್ಮತ್ತ ಮೆಲುಕು
ರೆಂಬಿಯಿಂದಿಳಿದೋಡೋಡಿ ಬರುತ್ತಿರುವ ಅಳಿಲೇ,
ನಿನ್ನ ಚುರುಕು ಕಣ್ಗಳಿಗೆ ಏನಾಹಾರ ಕಂಡಿತು?
ಅಕೋ, ಆ ಅಲ್ಲಿ ಒಂದಷ್ಟು ದೊಡ್ಡಕಲ್ಲುಗಳಿವೆಯಲ್ಲ,
ಅದರ ಹಿಂದೆಯೇ ಇದೆ ಮರಿಗಳಿಗೆ ಹಾಲೂಡಿಸುತ್ತಿರುವ
ಅಮ್ಮ ಕರಡಿ. ಸ್ವಲ್ಪ ತಡಿ, ಕಂದಮ್ಮನಿಗೆ ಕಣ್ಣು ಹತ್ತಲಿ.
ಆಮೇಲೆ ನೋಡಿ ಮಜ - ಮಜಲು
ಹೌದಲ್ಲಾ, ಉಬ್ಬೆಯಲ್ಲಿಟ್ಟು ಬಂದಿದ್ದ ಆ
ಕಾಯಿಗಳು ಹಣ್ಣಾದವೇ?
ಒಲೆಯ ಮೇಲಿಟ್ಟ ಹಾಲು
ಇತ್ತ ಬಂದಾಕ್ಷಣ ಉಕ್ಕಿತೇ?
ಬರುತ್ತೇನೆ ಎಂದು ಕೈಕೊಟ್ಟ ನಿನಗೇನು ಗೊತ್ತು
ಎರಡು ಮೆಟ್ಟಿಲು ಹತ್ತಿದರೂ ಸುಸ್ತಾಗುತ್ತ,
ಬಿಸಿಲ ಬೀದಿಯಲ್ಲಿ ಕಣ್ಕತ್ತಲಾಗಿ ಕೂರುತ್ತ,
ಹೊರುವ ಕಷ್ಟ ಒಂಭತ್ತು ತಿಂಗಳು ಹಾಳುಹೊಟ್ಟೆ?
ಕಾಯುವುದು ಎಂದಾಗಲೆಲ್ಲ ಅದ್ಯಾಕೋ
ಶಬರಿಯ ನೆನಪು..
ಇದ್ಯಾವ ಹಾಳು ಭಲ್ಲೂಕ-
ಹೊರಬರಲು ಎಷ್ಟು ಹೊತ್ತು?
ಬಂಡೆಗೆ ಸವರಿದ ಕಾಕಂಬಿ ಒಣಗುತ್ತಿದೆ..
ಸಹನೆಯ ಗುಳ್ಳೆಗಳನ್ನು ಒಡೆಯುತ್ತಿರುವ
ಟಿಕ್ ಟಿಕ್ ಕ್ಷಣಗಳೇ, ಶ್..!
ಸದ್ದು ಮಾಡಬೇಡಿ.. ಇನ್ನೆರಡು ಗಳಿಗೆ ಕಾಯಿರಿ.
ತೆರೆ ಸರಿದರಾಯಿತು, ಮೂಡಿಬರುವುದು ಕರಿಕರಡಿ
ನಾಲಿಗೆ ಚಾಚಿ ಮೆಲ್ಲುವುದು ಕಲ್ಲ ಮೇಲಿನ ಸಿಹಿ
ತಯಾರಿರಿ, ಶಟರ್ ಗುಂಡಿಯ ಮೇಲೆ ಬೆರಳಿಟ್ಟು
ಕೊಡಲು ಭಂಗುರ ಚಿತ್ರಕೊಂದು ಶಾಶ್ವತ ಚೌಕಟ್ಟು

Wednesday, March 16, 2011
ಉದ್ಯೋಗ ಖಾತ್ರಿ ಎಂಬ ಯೋಜನೆಯೂ, ನೆಲಮಾವಿನ ಸೊಪ್ಪಿನ ಗೊಜ್ಜೂ..
ನಮ್ಮ ಸರ್ಕಾರಗಳು ಮಾಡುವ ಯೋಜನೆಗಳಿಂದ ಎಷ್ಟು ಲಾಭಗಳಿವೆಯೋ ಅಷ್ಟೇ ಅನನುಕೂಲಗಳೂ ಇವೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈಗ ಕೆಲ ವರ್ಷಗಳ ಹಿಂದೆ ಅನುಷ್ಠಾನಗೊಂಡ ನಮ್ಮ ಕೇಂದ್ರ ಸರ್ಕಾರದ ಯೋಜನೆ ‘ಉದ್ಯೋಗ ಖಾತ್ರಿ ಯೋಜನೆ.’ ಇದು ಬಂದನಂತರ ನಮ್ಮ ಮನೆಗಳಿಗೆ ಕೆಲಸಕ್ಕೆ ಆಳುಮಕ್ಕಳು ಬರುವುದೇ ನಿಂತುಹೋಗಿದೆ! ನಾವು ಕೊಡುವ ಸಂಬಳದ ಮೂರರಷ್ಟು ಸಂಬಳವನ್ನು ಸರ್ಕಾರವೇ ಕೊಡುತ್ತಿದೆ. ಅದೂ ಕೇವಲ ಮೂರು ತಾಸು ಮಾಡುವ ಕೆಲಸಕ್ಕೆ! ಇನ್ನು ಅವರು ಯಾಕಾದರೂ ನಮ್ಮ ಮನೆಗಳಿಗೆ ಕೆಲಸಕ್ಕೆ ಬಂದಾರು? ಇದರಿಂದ ಅವರಿಗೆ ಖಂಡಿತ ಅನುಕೂಲವಾಗಿದೆ. ಮೂರು ತಾಸು ಈ ಕೆಲಸ ಮಾಡಿ, ನಂತರ ಉಳಿಯುವ ದಿನದಲ್ಲಿ ಏನು ಬೇಕೋ ಆ ಕೆಲಸ ಮಾಡಿಕೊಳ್ಳಬಹುದು. ಸೊಪ್ಪು ಕಡಿದು ತಂದು ಗೊಬ್ಬರ ಮಾಡಿ ಮಾರುವುದೋ, ಇಟ್ಟಿಗೆ ಬಿಡುವುದೋ, ಅಗರಬತ್ತಿ ಹೊಸೆಯುವುದೋ ಅಥವಾ ಮತ್ಯಾರದೋ ಮನೆಗೆ ಕೆಲಸಕ್ಕೆ ಹೋಗುವುದೋ -ಹೀಗೆ. ತಮ್ಮ ತಮ್ಮ ಮನೆ ಕೆಲಸವನ್ನು ಮಾಡಿಕೊಳ್ಳಲಿಕ್ಕೂ ಅವರಿಗೆ ಈಗ ಸಾಕಷ್ಟು ಸಮಯ ಸಿಗುತ್ತಿದೆ.
ಆದರೆ ಇದರಿಂದಾಗಿ ಹೈರಾಣಾಗಿರುವವರು ಎಂದರೆ ಎಷ್ಟೋ ವರ್ಷಗಳಿಂದ ಅವರನ್ನೇ ನಂಬಿಕೊಂಡು ಆರಾಮಾಗಿದ್ದ ಜಮೀನ್ದಾರರುಗಳು. ತೋಟದ ಕೆಲಸಕ್ಕೆ, ಗದ್ದೆಯ ಕೆಲಸಕ್ಕೆ, ಹಿತ್ತಿಲಿನ ಬೇಲಿ ಕಟ್ಟುವುದಕ್ಕೆ, ಮಳೆಗಾಲಕ್ಕೆ ಕಟ್ಟಿಗೆ ಕಡಿದುಕೊಡುವುದಕ್ಕೆ, ಹುಲ್ಲು ಕೊಯ್ಯುವುದೇ ಮೊದಲಾದ ದೈನಂದಿನ ಕೆಲಸಗಳಿಗೆ -ಆಳುಗಳನ್ನೇ ಕಾಯುತ್ತಿದ್ದ ಮಂದಿಗೆ ಈಗ ಕೈ ಮುರಿದಂತಾಗಿದೆ. ಮತ್ತೆ ಈ ಉದ್ಯೋಗ ಖಾತ್ರಿ ಯೋಜನೆಯದು ಅದೇನು ವಿಚಿತ್ರ ನಿಯಮವೋ ಏನೋ (ಅಥವಾ ಅದು ನಮ್ಮಲ್ಲಿ ಊರ್ಜಿತವಾಗಿರುವ ಬಗೆ ಹೀಗಿರಬಹುದು), ಈ ಯೋಜನೆಯಡಿಯಲ್ಲಿ ಕೇವಲ ‘ಮಣ್ಣು’ ಅಥವಾ ‘ಭೂಮಿ’ಗೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಮಾಡಬೇಕಂತೆ! ಅಂದರೆ, ಊರಿನ ರಸ್ತೆಗೆ ಮಣ್ಣು ಹಾಕಿ ಮಟ್ಟ ಮಾಡುವುದೋ, ನೀರು ಹರಿಯುವ ಕಾದಿಗೆ ಸರಿ ಮಾಡುವುದೋ, ಬಾವಿ ತೆಗೆಯುವುದೋ, ಶಾಲೆಯಂತಹ ಸಾರ್ವಜನಿಕ ಆವರಣದ ಬಯಲು ಹದಗೊಳಿಸುವುದೋ, ಕೆರೆಯ ಹೂಳೆತ್ತುವುದೋ, ಇತ್ಯಾದಿ. ಹೀಗಾಗಿ ನಮ್ಮೂರಿನ ಉದ್ಯೋಗ ಖಾತ್ರಿಯ ಅನುಭೋಗಿ ಕೆಲಸಗಾರರೂ ಉಪಯೋಗವಿದೆಯೋ ಇಲ್ಲವೋ, ಇಂಥದೇ ಕೆಲಸಗಳನ್ನು ಮಾಡುತ್ತಾ ಸಂಬಳ ಪಡೆದುಕೊಂಡು ಹಾಯಾಗಿದ್ದಾರೆ. ನಮ್ಮೂರ ಪ್ರಾಥಮಿಕ ಶಾಲೆಯ ಆವರಣವಂತೂ ಈಗ ಗುರುತೂ ಸಿಗದಂತೆ ಆಗಿಹೋಗಿದೆ. ಎದುರಿನ ಜಾರು ನೆಲವನ್ನೆಲ್ಲಾ ಮಣ್ಣು ಹಾಕಿ ಮಟ್ಟಸ ಮಾಡಿ, ಆವರಣದಲ್ಲೊಂದು ಬಾವಿ ತೆಗೆದು, ಇಡೀ ಶಾಲೆಯ ಆವರಣಕ್ಕೆ ಪಾಗಾರ ಹಾಕಿ, ಶಾಲೆಯ ಹಿಂಬಾಗದಲ್ಲೂ ಆಟದ ಬಯಲಿನಂತಹುದೇನನ್ನೋ ಮಾಡಿ, ವೇದಿಕೆಯೊಂದನ್ನು ನಿರ್ಮಿಸಿ... ಈಗ ಹೋಗಿ ನೋಡಿದರೆ ನಾವು ಹೋಗುತ್ತಿದ್ದ ಶಾಲೆ ಇದೇನಾ ಎಂಬಂತೆ ಬದಲಾಗಿಹೋಗಿದೆ! ಆದರೆ ಮಜಾ ಎಂದರೆ, ಇಡೀ ಶಾಲೆಯಲ್ಲಿ ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕಿಂತ ಕಮ್ಮಿ ಇರುವುದು! ಇಂಗ್ಲೀಷ್ ಮೀಡಿಯಮ್ಮಿನ ಮೋಹಕ್ಕೆ ಬಿದ್ದಿರುವ ಊರ ಜನಗಳು ದೂರದೂರಿನ ಕಾನ್ವೆಂಟ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಾರಿನಲ್ಲಿ ಕಳುಹಿಸತೊಡಗಿರುವುದರಿಂದ, ನಮ್ಮೂರ ಕನ್ನಡ ಪ್ರಾಥಮಿಕ ಶಾಲೆ ಕೆಲ ವರ್ಷಗಳಲ್ಲಿ ಮುಚ್ಚಿಹೋಗಿಬಿಡುತ್ತದೋ ಅಂತ ನನ್ನ ಅನುಮಾನ. ಆದರೇನು ಮಾಡುವುದು? ಇದನ್ನು ತಡೆಯಲಿಕ್ಕಾಗಲೀ ಪ್ರಶ್ನಿಸಲಿಕ್ಕಾಗಲೀ ಬದಲಿಸಲಿಕ್ಕಾಗಲೀ ಯಾರಿಂದಲೂ ಸಾಧ್ಯವಿಲ್ಲದಾಗಿದೆ.
ಅಮ್ಮ ಹೇಳಿದಳು, ಸಧ್ಯಕ್ಕೆ ನಮ್ಮೂರಿನಲ್ಲಿ ಈ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆಲಸವೆಂದರೆ, ಲಚ್ಚಮ್ಮನ ಕೆರೆಯ ಶುದ್ಧೀಕರಣ. ಈ ಲಚ್ಚಮ್ಮನ ಕೆರೆ ಎಂಬುದು ನಮ್ಮೂರಿನ ಹಳೇ ರಸ್ತೆಯ ಆರಂಭದಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿರುವ ಒಂದು ಪಾಳುಕೆರೆ. ಹಿಂದೊಂದು ಕಾಲದಲ್ಲಿ ಈ ಕೆರೆ, ಅದರ ಪಕ್ಕದಲ್ಲಿರುವ ಗದ್ದೆಗಳಿಗೆ ನೀರೊದಗಿಸುತ್ತಿತ್ತಂತೆ. ಆದರೆ ಈಗ ಅಲ್ಲಿ ಗದ್ದೆ ಮಾಡುವವರೇ ಇಲ್ಲ. ಎಕರೆಗಟ್ಟಲೆ ಜಾಗ ಸುಮ್ಮನೆ ಖಾಲಿ ಮಲಗಿಕೊಂಡಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡು ಅಲ್ಲೊಂದು ಕೆರೆಯಿತ್ತು ಎಂಬುದನ್ನೇ ಗುರುತಿಸಲಾಗದಂತಾಗಿದೆ. ಒಂದಷ್ಟು ಕಾಲ ಇಲ್ಲಿಯ ಜೌಗು ಮಣ್ಣನ್ನು ಬಳಸಿಕೊಂಡು ಇಲ್ಲಿ ಇಟ್ಟಿಗೆ ತಯಾರಿಸುತ್ತಿದ್ದರು. ನಾವು ಶಾಲೆಗೆ ಹೋಗುವಾಗ ಈ ಇಟ್ಟಿಗೆ ಸುಡುವ ಗೂಡುಗಳಿಂದ ಸದಾ ಹೊಗೆ ಹೊಮ್ಮುತ್ತಿರುವುದನ್ನು ನೋಡುತ್ತಾ ಹೋಗುತ್ತಿದ್ದೆವು. ಹಾಗೆ ಸುಡಲಿಕ್ಕೆಂದು ಜೋಡಿಸಿದ ಇಟ್ಟಿಗೆಯ ಗೂಡುಗಳ ನಿರ್ಮಾಣ, ವರ್ಷಗಳವರೆಗೆ ಹಾಗೇ ಇರುತ್ತಿತ್ತು. ಕೆಂಪುಕೋಟೆಯ ಮೇಲೆ ಹಸಿರು ಹಸಿರಾಗಿ ಪಾಚಿ ಕಟ್ಟಿ ಆಕರ್ಷಕವಾಗಿ ಕಾಣುತ್ತಿತ್ತು.
ಈ ಲಚ್ಚಮ್ಮನ ಕೆರೆಯ ಪಕ್ಕದಲ್ಲಿರುವ ಜೌಗುನೆಲದಲ್ಲಿ ನೆಲಮಾವಿನ ಸೊಪ್ಪು ಬೆಳೆಯುತ್ತಿತ್ತು. ನಾನು ಮತ್ತು ಅಜ್ಜಿ ಈ ನೆಲಮಾವಿನ ಸೊಪ್ಪನ್ನು ಕೊಯ್ಯಲು ಹೋಗುತ್ತಿದ್ದೆವು. ಸಂಜೆಯಾಗಿ ಬಿಸಿಲು ಆರಿದಮೇಲೆ ಅಜ್ಜಿಯ ಜೊತೆ ನಾನು ಈ ಗದ್ದೆಯ ಕಡೆ ಹೋಗುತ್ತಿದ್ದುದು. ದಾರಿಯಲ್ಲಿ ಸಿಕ್ಕ ಸರೋಜಕ್ಕ-ಸುಜಾತಕ್ಕರು ‘ಓಹೋ, ಎಲ್ಲಿಗ್ ಹೊಂಡ್ಚು ಅಜ್ಜಿ-ಮೊಮ್ಮಗನ ಸವಾರಿ?’ ಅಂತ ಕೇಳಿದರೆ, ‘ಹಿಂಗೇ ವಾಕಿಂಗ್ ಹೊಂಟ್ವೇ’ ಎನ್ನುತ್ತಿದ್ದಳು ಅಜ್ಜಿ. ನಾವು ನೆಲಮಾವಿನ ಸೊಪ್ಪು ಕೊಯ್ಯಲು ಹೋಗುತ್ತಿದ್ದೇವೆಂದರೆ ಇವರು ತಮಗೂ ಸ್ವಲ್ಪ ತರಲು ಹೇಳುವುದಿಲ್ಲವೇ! ಹಾಗಾಗಿ ನಾವು ಸುಳ್ಳು ಹೇಳುವುದು ಅನಿವಾರ್ಯವಿತ್ತು. ಗದ್ದೆಬಯಲಿಗೆ ತಲುಪುವಷ್ಟರಲ್ಲೇ ಅಜ್ಜಿಗೆ ಸುಸ್ತಾಗಿ ಏದುಸಿರು ಬಿಡುತ್ತಿದ್ದಳು. ಪ್ರತಿಸಲವೂ ನನಗೆ ಅಜ್ಜಿ ಅಲ್ಲಿ ಬೆಳೆದಿರುವ ನಾನಾ ಸೊಪ್ಪುಗಳ ನಡುವೆ ಬರೀ ನೆಲಮಾವಿನ ಸೊಪ್ಪನ್ನೇ ಹೇಗೆ ಗುರುತಿಸಿ ಕೀಳಬೇಕೆಂದು ಹೇಳಿಕೊಡುತ್ತಿದ್ದಳು. ಆಮೇಲೆ ನಾವು ಕತ್ತಲಾವರಿಸುವವರೆಗೂ ಬಗ್ಗಿ ಬಗ್ಗಿ ಸೊಪ್ಪು ಕೊಯ್ಯುತ್ತಿದ್ದೆವು. ಕೊಯ್ದ ಸೊಪ್ಪನ್ನು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿಕೊಳ್ಳುತ್ತಿದ್ದಳು. ನಾನು ನನ್ನ ಅಂಗಿ-ಚಡ್ಡಿಗಳ ಜೇಬುಗಳಲ್ಲೂ ತುಂಬಿಕೊಳ್ಳುತ್ತಿದ್ದೆ. ನಂತರ, ಬೀದಿದೀಪದ ಬೆಳಕಿನೊಂದಿಗೆ ಬೆರೆಯುತ್ತಿದ್ದ ತಿಂಗಳ ಬೆಳಕಿನಲ್ಲಿ, ಸಾಲುಮನೆಯೊಳಗಿರುವ ಜನಗಳಿಗೆ ಕಾಣದಂತೆ, ಸದ್ದು ಮಾಡದಂತೆ, ಸರಸರನೆ ನಡೆದು ನಾವು ಮನೆ ಸೇರಿಕೊಳ್ಳುತ್ತಿದ್ದೆವು.
ಮನೆಗೆ ಬಂದನಂತರ ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಸೊಪ್ಪನ್ನೆಲ್ಲ ಒಳಮನೆಯಲ್ಲೊಂದೆಡೆ ಸುರುವುತ್ತಿದ್ದಳು. ಆಮೇಲೆ ಅಮ್ಮ ಮತ್ತು ಅಜ್ಜಿ ಸೇರಿ ಈ ಸೊಪ್ಪನ್ನೆಲ್ಲ ಸೋಸುವರು. ಅದೆಷ್ಟೇ ಮುತುವರ್ಜಿಯಿಂದ ಕೊಯ್ದಿದ್ದರೂ ನೆಲಮಾವಲ್ಲದ ಕೆಲ ಅನ್ಯ ಸೊಪ್ಪುಗಳೂ ಇದರಲ್ಲಿ ಸೇರಿಕೊಂಡಿರುತ್ತಿದ್ದವು. ಅಜ್ಜಿಯ ಪ್ರಕಾರ ಅವೆಲ್ಲ ನಾನು ಕೊಯ್ದದ್ದು! ನಾನು ಎಷ್ಟೇ ವಾದಿಸಿದರೂ ‘ನಿಂಗೆ ತಿಳಿತಲ್ಲೆ. ಆನು ಎಷ್ಟ್ ವರ್ಷದಿಂದ ಕೊಯ್ತಿದ್ದಿ, ಯಂಗೆ ಗೊತ್ತಾಗ್ತಲ್ಯಾ?’ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದಳು. ನಾನು ಸಿಟ್ಟು ಮಾಡಿಕೊಂಡು ಅಲ್ಲಿಂದ ಎದ್ದುಹೋಗುತ್ತಿದ್ದೆ.
ಈ ನನ್ನ ಮುನಿಸು ಹಾರಿಹೋಗುತ್ತಿದ್ದುದು ಅಡುಗೆಮನೆಯಿಂದ ತೇಲಿಬರುತ್ತಿದ್ದ ಅಮ್ಮನ ‘ಊಟಕ್ ಬಾರೋ’ ಕೂಗು ಕೇಳಿದಾಗಲೇ. ಅಂದು ರಾತ್ರಿಯ ಊಟಕ್ಕೆ ನೆಲಮಾವಿನ ಸೊಪ್ಪಿನ ಬೀಸ್ಗೊಜ್ಜು ತಯಾರಾಗಿರುತ್ತಿತ್ತು. ವಿಶಿಷ್ಟ ಪರಿಮಳವನ್ನು ಹೊಂದಿದ ಈ ಸೊಪ್ಪಿನ ಗೊಜ್ಜು ಸೂಜಿಮೆಣಸಿನಕಾಯಿಯ ಖಾರವೂ ಸೇರಿ ಬಾಯಿ ಚಪ್ಪರಿಸುವಷ್ಟು ರುಚಿಯಾಗಿರುತ್ತಿತ್ತು. ಅನ್ನಕ್ಕೆ ಕಲಸಿಕೊಂಡು ಊಟ ಶುರು ಮಾಡಿದರೆ, ಜೊತೆಗೆ ಕರಿದ ಹಲಸಿನ ಹಪ್ಪಳವೂ ಇದ್ದುಬಿಟ್ಟರೆ, ಅವತ್ತು ಎಲ್ಲರಿಗೂ ಒಂದು ತೂಕ ಜಾಸ್ತಿಯೇ ಇಳಿಯುತ್ತಿತ್ತು. ಅಜ್ಜನಂತೂ ಈ ಬೀಸ್ಗೊಜ್ಜನ್ನು ಗಟ್ಟಿಯಾಗಿ ಕಲಸಿಕೊಂಡು, ತಟ್ಟೆಯಲ್ಲೊಂದು ರಿಂಗಿನಂತಹ ಕಟ್ಟೆ ಮಾಡಿ, ಅದರೊಳಗೆ ಕಡಮಜ್ಜಿಗೆ ಸುರುವಿಕೊಂಡು ತನ್ನದೇ ಶೈಲಿಯಲ್ಲಿ ಕತ್ತರಿಸುತ್ತಿದ್ದ.
ಅಜ್ಜಿಗೆ ದಮ್ಮಿನ ಕಾಯಿಲೆ ಶುರುವಾದಮೇಲೆ ಈ ಗದ್ದೆಬಯಲಿಗೆ ನೆಲಮಾವಿನ ಸೊಪ್ಪು ಕೊಯ್ಯಲು ಹೋಗುವ ಕಾರ್ಯ ನಿಂತೇಹೋಯಿತು. ಎಲ್ಲಾದರೂ ಅಪರೂಪಕ್ಕೆ ಯಾರಾದರೂ ರೈತರು ತಂದುಕೊಟ್ಟರೆ ಬೀಸ್ಗೊಜ್ಜು ಸವಿಯುವ ಅಭಿಯೋಗ ಸಿಗುತ್ತಿತ್ತು. ಅಜ್ಜಿ ತೀರಿಕೊಂಡಮೇಲಂತೂ ನನಗೆ ನೆಲಮಾವಿನ ಸೊಪ್ಪಿನ ಗೊಜ್ಜಿನ ಊಟ ಮಾಡಿದ ನೆನಪೇ ಇಲ್ಲ. ಅಲ್ಲಿ ಆ ಸೊಪ್ಪು ಈಗಲೂ ಬೆಳೆಯುತ್ತಿದೆಯೋ ಇಲ್ಲವೋ ಹೋಗಿ ನೋಡಿದವರೂ ಯಾರೂ ಇರಲಿಕ್ಕಿಲ್ಲ.
ಈಗ ಅಮ್ಮ ಫೋನಿನಲ್ಲಿ ಲಚ್ಚಮ್ಮನ ಕೆರೆಯ ಪ್ರಸ್ತಾಪವೆತ್ತಿದ್ದೇ ಇದೆಲ್ಲ ನೆನಪಾಗಿ, ನೆಲಮಾವಿನ ಸೊಪ್ಪಿನ ರುಚಿಯೂ ಪರಿಮಳವೂ ಕಾಡತೊಡಗಿ ನಾನು ವ್ಯಸ್ತನಾಗಿ ಕುಳಿತಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಲಚ್ಚಮ್ಮನ ಕೆರೆಯಲ್ಲಿ ಮತ್ತೆ ನೀರು ಜಿನುಗಿ, ಪಕ್ಕದ ನೆಲವೆಲ್ಲ ಜೌಗಾಗಿ, ಅಲ್ಲಿ ಎಕರೆಗಟ್ಟಲೆ ನೆಲಮಾವಿನ ಸೊಪ್ಪು ಬೆಳೆದು, ನಾನು ಮುಂದಿನ ಸಲ ಊರಿಗೆ ಹೋದಾಗ ಇರುವಷ್ಟೂ ದಿನ ಅದರದೇ ಅಡುಗೆ ಮಾಡಿಸಿಕೊಂಡು ಉಂಡು, ಆಮೇಲೆ ಬೆಂಗಳೂರಿಗೆ ಬರುವಾಗಲೂ ಒಂದಷ್ಟು ಸೊಪ್ಪು ಕಟ್ಟಿಕೊಂಡು ಬಂದು, ಇಲ್ಲಿನ ನನ್ನ ರೂಮಿನಲ್ಲಿ ಬೀಸ್ಗೊಜ್ಜು ಮಾಡಿಕೊಂಡು ಗಮ್ಮತ್ತಾಗಿ ಉಣ್ಣುವ ಕನಸು ಕಾಣುತ್ತಿದ್ದೇನೆ.
ಸುಮಾರು ಹೊತ್ತಿನಿಂದ ಸುಮ್ಮನೆ ಕೂತಿರುವ ನನ್ನನ್ನು ಕಂಡು ರೂಂಮೇಟು ‘ಇವತ್ತಿನ ಅಡುಗೆ ಕತೆ ಏನೋ?’ ಅಂತ ಕೇಳಿದ್ದೇ ನಾನು ‘ನೆಲಮಾವಿನ ಸೊಪ್ಪಿನ ಗೊಜ್ಜು’ ಅಂತ ಹೇಳಿ, ಅದಕ್ಕವನು ಕಕ್ಕಾಬಿಕ್ಕಿಯಾಗಿ ‘ವ್ಹಾಟ್?’ ಅಂತ ದೊಡ್ಡ ದನಿಯಲ್ಲಿ ಕಿರುಚಿದ್ದಕ್ಕೆ ನನಗೆ ಎಚ್ಚರಾಗಿ, ‘ವ್ಹಾಟ್? ಸಾರಿ, ಏನ್ ಕೇಳ್ದೆ?’ ಅಂತ ಮರು ಪ್ರಶ್ನಿಸಿದೆ.

Thursday, March 03, 2011
ಪ್ರಣತಿ- ಪ್ರಬಂಧ ಸ್ಪರ್ಧೆ ಫಲಿತಾಂಶ
ನಮ್ಮ ಸಂಸ್ಥೆ ಪ್ರಣತಿ, 'ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ' ಎಂಬ ವಿಷಯದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಪ್ರವೇಶಗಳು ಬಂದಿದ್ದವು. ಅಂತಿಮ ಫಲಿತಾಂಶ ಈ ರೀತಿ ಇದೆ:
ಪ್ರಥಮ ಬಹುಮಾನ: ವೀರನಗೌಡ ಪಾಟೀಲ, ಬೆಳಗಾವಿ (ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ)
ದ್ವಿತೀಯ ಬಹುಮಾನ: ಅಮೃತಾ ಜೆ., ಬೆಂಗಳೂರು (ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿ)
ತೃತೀಯ ಬಹುಮಾನ: ಆನಂದ ಅಲಗುಂಡಗಿ, ಗದಗ (ಹುಬ್ಬಳ್ಳಿಯ ಜಗದ್ಗುರು ಗುರುಸಿದ್ದೇಶ್ವರ ಟೀಚರ್ಸ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿ)
ಮೂವರೂ ವಿಜೇತರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು. ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಾಗುವುದು.

Friday, February 18, 2011
ಪೂರ್ಣಾಹುತಿ
ಮುಗಿಸಿಯೇ ಬಿಡಬೇಕು ಈ ಕತೆಯನ್ನು..
ಹೇಗಾಯಿತೋ ಹಾಗೆ. ಅಂದು ಅರ್ಧಕ್ಕೆ ನಿಂತಿದ್ದು
ಹಾಗೇ ನಿಂತೇಬಿಟ್ಟಿದೆ. ಕಲ್ಪನೆಯಲ್ಲೇ ಎಳೆದೆಳೆದು
ಎಲ್ಲೆಲ್ಲಿಗೋ ಹೋಗಿ, ಈಗ ತಿಳಿದಿರುವ ಕೊನೆಯೇ
ಅಸ್ಪಷ್ಟ.
ಯಜ್ಞಕುಂಡದ ಸುತ್ತ ಕೂತ ಋತ್ವಿಜರು
ಮೊಗೆಮೊಗೆದು ಹೊಯ್ಯುತ್ತಿದ್ದಾರೆ ತುಪ್ಪ..
ಯಾವ ದೇವಿಗೋ ಶಾಂತಿಯಂತೆ,
ಗಂಧ-ಚಂದನ ಪ್ರೀತಿಯಂತೆ.
ಅಗ್ನಿದೇವನ ಒಡಲಲ್ಲಿ ನಿರ್ವಿಘ್ನ ಶಾಕ.
ಹೇಗೆ ಹುಡುಕುವುದು ಇಲ್ಲಿ ಮೊದಲ ಕಟ್ಟಿಗೆ?
ಭಸ್ಮದ ನುಣುಪಲ್ಲಿ ಅದ್ಯಾವ ಚಿಗುರಿನ ಕನಸು?
ಮರೆತ ಮಂತ್ರದ ಸಾಲು, ಹೊಗೆ ತರಿಸಿದ ಕಣ್ಣೀರು,
ಇನ್ನೂ ಯಾವ ನೆನಪಿನ ನವೆ?
ಇಲ್ಲ ಅಂತಲ್ಲ, ಬಿಟ್ಟೇ ಹೋಗಿದ್ದಾನೆ ಕೀಲಿಕೈ..
ಸಣ್ಣ ಕಿಂಡಿಯೊಳಗೆ ತೂರಿಸಿ ಒಮ್ಮೆ ತಿರುವಿದರೆ ಸಾಕು;
ನಿಷ್ಪಂದ ಕತೆಯೂ ಆದೀತು ನಿಷ್ಕಲ
ಆದರೂ ಇದೇಕೆ ಈ ಹಿಂಜರಿಕೆ?
ಬಾಗಿಲು ತೆರೆಯದೇ ಉಳಿಯುವ ಸಾವರಿಕೆ?
ಪುರೋಹಿತರು ದೊಡ್ಡ ದನಿಯಲ್ಲಿ ಕರೆಯುತ್ತಿದ್ದಾರೆ:
ಪೂರ್ಣಾಹುತಿಗೆ ಸಮಯ, ಎಲ್ಲರೂ ಬನ್ನಿ
ಯಜ್ಞಕಾಷ್ಠದ ಸಿಗುರು ಕೈಗೆ ಚುಚ್ಚದಂತೆ
ಹಿಡಿದು ಒಯ್ಯುತ್ತಿದ್ದೇವೆ ಮನೆಮಂದಿಯೆಲ್ಲ..
ದಶದಿಕ್ಕುಗಳಿಂದಲೂ ಕರೆದ ದೇವತೆಗಳು
ಸಂಪ್ರೀತರಾಗಲೆಂದು ಭರ್ಜರಿ ಹವಿಸ್ಸು
ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದೇನೆ:
ಓ ದಿಕ್ಪಾಲಕರೇ, ನನಗಿವನನ್ನು ಹುಡುಕಿಕೊಡಿ
ಇನ್ನೆಂದೂ ಕೈ ಮಾಡುವುದಿಲ್ಲ, ಮರಳಿ ಬರಲು ಹೇಳಿ
ಗಿಣ್ಣು ಎಂದರೆ ಪ್ರಾಣ, ಈಯ್ದ ಗೌರಿಯ ಸುದ್ದಿ ಕೊಡಿ
ಇನ್ನೂ ಬತ್ತದ ಅವನಮ್ಮನ ಕಣ್ಣಾಸೆಯ ಬಗ್ಗೆ ತಿಳಿಸಿ
ಒಡೆದ ಗಾಜೂ ಕೂಡಿ ಹೊಸದಾಗಿದೆಯೆಂದೆನ್ನಿ
ಹೋಮಹರಕೆಯ ಫಲ ಹುಸಿಹೋಗದಿರಲಿ,
ಬೀಗ ತೆರೆಯುವ ತಿರುವ ನೀಡದೆ ಮುನ್ನಡೆಸಿ
ಕತೆಯ ಪೂರಣದ ದಾರಿ ತೋರಿಸಿ

Friday, February 04, 2011
ಟು ದತ್ತಾತ್ರಿ, ವಿಥ್ ಪ್ರೀತಿ
ಪ್ರಿಯ ದತ್ತಾತ್ರಿ ಸರ್,
ನಮಸ್ಕಾರ. ಹೇಗಿದ್ದೀರಿ?
ನಿನ್ನೆ ರಾತ್ರಿ ಹನ್ನೆರಡಕ್ಕೆ ನಿಮ್ಮ ಕಾದಂಬರಿ 'ದ್ವೀಪವ ಬಯಸಿ' ಓದಿ ಮುಗಿಸಿದೆ. ಇನ್ನೂ ಹೊರಬರಬೇಕಿದೆ. ಅದೆಷ್ಟ್ ಚನಾಗ್ ಬರ್ದಿದೀರಾ! ಗೊಲ್ಲರಹಳ್ಳಿಯಿಂದ ಲಾಸ್ ಏಂಜಲೀಸ್‌ವರೆಗೆ, ಲಾಸ್ ಏಂಜಲೀಸಿನಿಂದ ಅಮೂರ್ತದೆಡೆಗೆ -ಪ್ರತಿ ಪುಟದಲ್ಲೂ ಮುಂದಿನ ಪುಟದಲ್ಲೇನಾಗುತ್ತೋ ಅನ್ನೋ ಕುತೂಹಲ ಹುಟ್ಟಿಸ್ತಾ, ಸಸ್ಪೆನ್ಸನ್ನು ಬೆಳೆಸ್ತಾ, ಹೊಸ ರೂಪಕಗಳೊಂದಿಗೆ ಹೊಸ ರಾಗಗಳೊಂದಿಗೆ ಹೊಸ ಹೊಳಹುಗಳೊಂದಿಗೆ ಸಾಗುವ ನಿಮ್ಮ ಕಾದಂಬರಿ ಓದಿದ್ದು ನನಗೆ ತುಂಬಾ ಖುಶಿ ನೀಡಿತು. ಮುಕ್ತವಾಗಿ, ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ: ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಕಾದಂಬರಿ ಇದು.
ಶುರುವಿನಲ್ಲೇ ಕಾರ್ಪೋರೇಟ್ ಜಗತ್ತಿನ ಪರಿಮಳ ಚೆಲ್ಲಿ ನನಗೆ 'ಶಿಕಾರಿ'ಯನ್ನು ನೆನಪಿಸಿದ ನಿಮ್ಮ ಕಾದಂಬರಿ, ಆಮೇಲೆ ತಮ್ಮನನ್ನು ಹುಡುಕುವ ಶ್ರೀಕಾಂತನ ನಿರೂಪಣೆ ಓದುವಾಗ 'ಅರೆ, ಅದ್ರಲ್ಲೂ ಹೀಗೇ ಇತ್ತು' ಅನ್ನಿಸಿಬಿಟ್ಟಿತು. ಆದರೆ ಶಿಕಾರಿಯಷ್ಟು ಕ್ಲಿಷ್ಟ ಭಾಷೆಯಲ್ಲಿಲ್ಲದೇ, ಶಿಕಾರಿಗಿಂತ ಆಧುನಿಕವಾಗಿ, ಶಿಕಾರಿಗಿಂತ ಕುತೂಹಲಕಾರಿಯಾಗಿ, ಶಿಕಾರಿಗಿಂತ ಆಪ್ತವಾಗಿ ಓದಿಸಿಕೊಂಡುಹೋಯಿತು. ಮೊದಲ ಪುಟದ ಅಕ್ಷರಗಳಲ್ಲೇ ಪುಟಿದೇಳುವ ಉತ್ಸಾಹ ಮಧ್ಯದಲ್ಲೆಲ್ಲೂ 'ಡಲ್' ಎನಿಸಲಿಲ್ಲ. ನಗರ, ವಿಮಾನ, ವೇಗ, ಕಂಪನಿ, ಸಾಫ್ಟ್‌ವೇರ್, ಪ್ರಾಜೆಕ್ಟ್, ಟ್ರಾಫಿಕ್, ಪೆಟ್ರೋಲ್, ಹಣ, ಅಮೆರಿಕಾ -ಇಂತಹ ಕಾವ್ಯಕ್ಕೆ ದಕ್ಕದ ಪರಿಸರದಲ್ಲಿನ ಕತೆಯಿಟ್ಟುಕೊಂಡೂ ಇಷ್ಟು ನವಿರಾದ ಕಾದಂಬರಿ ಬರೆದ ನಿಮಗೆ ಹ್ಯಾಟ್ಸಾಫ್! ಮತ್ತು, ವಿಮಾನ ನಿಲ್ದಾಣವಿರಬಹುದು, ಕಾನ್ಫರೆನ್ಸ್ ರೂಮ್ ಇರಬಹುದು, ಫೋಟೋ ಎಗ್ಜಿಬಿಷನ್ ಇರಬಹುದು, ಯುದ್ಧವಿರಬಹುದು, ಮನಃಶಾಸ್ತ್ರಜ್ಞರ ಕ್ಲಿನಿಕ್ಕಿರಬಹುದು, ಕೊನೆಗೆ ಗಲಾಟೆಯ ಆರ್ಬಿಟ್ರೇಶನ್ ಹಾಲ್ ಇರಬಹುದು -ಎಲ್ಲೆಡೆ ಉದ್ಭವಿಸುವ ಬುದ್ಧರು ಅಥವಾ ಬುದ್ಧರಂತ ಅವಧೂತರನ್ನು ತೋರಿಸಿದ ನಿಮಗೆ ಶರಣು. ನಿಮ್ಮ ಕಾದಂಬರಿ ಓದುತ್ತಾ, ಪ್ರತಿಯೊಬ್ಬನಲ್ಲೂ ಇರುವ ಒಬ್ಬ ಬಿಕ್ಕಳಿಸುವ ಮನುಷ್ಯನನ್ನು ಕಂಡು ನಾನು ಕಣ್ತುಂಬಿಕೊಂಡಿದ್ದೇನೆ.
ಪ್ರತಿ ಅಧ್ಯಾಯವೂ ಬೇರೆಬೇರೆ ಕತೆಗಳನ್ನು ಹೇಳುವ -ಆದರೂ ಅವೆಲ್ಲ ಸೇರಿ ಒಂದೇ ಕತೆಯಾಗಿರುವ- ಎಲ್ಲರ ಕತೆಯಲ್ಲೂ ಎಲ್ಲರೂ ಇರುವ ಪರಿಗೆ ಬೆರಗಾಗಿದ್ದೇನೆ. ಜೋಳದಿಂದ ಇಂಧನ ತಯಾರಿಸುವ ಹಿಂದಿರುವ ಲಾಭ ಮತ್ತು ತೊಂದರೆಗಳ ಬಗೆಗೆ ಶ್ರೀಕಾಂತ್ ಮಾಡಿಕೊಳ್ಳುವ, ಸುಮಾರು ಮೂರ್ನಾಲ್ಕು ಪುಟಗಳಿರುವ, ನ್ಯೂಸ್‌ಪೇಪರಿನಲ್ಲೋ ಅಥವಾ ಬೇರ್ಯಾವುದೋ ಮಾಧ್ಯಮದಲ್ಲೋ ಬಂದಿದ್ದರೆ ಕಣ್ಣು ಹಾಯಿಸಲೂ ಸಹ ಸಹ್ಯವಾಗದಿದ್ದ, ನೋಟ್ಸ್ ಸಹ ನಮ್ಮಿಂದ ಸಹನೆಯಿಂದ ಓದಿಸಿಕೊಳ್ಳುತ್ತದೆ ಎಂದರೆ, ಬರೆದ ನಿಮ್ಮ ಕಲೆ ನಿಜಕ್ಕೂ ದೊಡ್ಡದು. ಲೇಆಫ್ ಡೇ-ಯ ಅಧ್ಯಾಯ ಓದುವಾಗ ಭಯದಿಂದ ನಮ್ಮೆದೆಯ ಢವವೇ ಏರುತ್ತ ಹೋದರೆ, ಯೊಸಿಮಿಟಿಯ ಸ್ವರ್ಗದ ವರ್ಣನೆಯಲ್ಲಿ ಕಾವ್ಯದ ಝರಿಯೇ ಎದೆಯಲ್ಲಿ ಹರಿಯುತ್ತದೆ. ನಿಮ್ಮ ಬರವಣಿಗೆಯ ಶೈಲಿ ಅದೆಷ್ಟು ಆಪ್ತವಾಗಿದೆಯಂದರೆ, ಪ್ರತಿ ಪಾತ್ರದ ತಲ್ಲಣವೂ ನಮ್ಮದಾಗುತ್ತದೆ. ಹಾರ್ವರ್ಡ್ ಬ್ರಿಜ್ಜಿನ ಮೇಲೆ ಶ್ರೀಕಾಂತ್ ಸೈಕಲ್ ತುಳಿಯುವಾಗ ಕಾಣುವ ದೃಶ್ಯಗಳನ್ನೆಲ್ಲಾ ನಾವೇ ಕಾಣುತ್ತ ಸಾಗಿದಂತೆ ಭಾಸವಾದರೆ, ಸಾಂಟಾ ಆಣಾ ಗಾಳಿಯಲ್ಲಿನ ಬೆಂಕಿಯ ಝಳ ನಮ್ಮನ್ನೇ ತಾಕುತ್ತದೆ. ಮರ್ಲಿನ್ ಮನ್ರೋಳ ಎದೆಯೆಡೆಗೆ ಹೋಗುವ ರಸ್ತೆ, ಬುದ್ಧನ ಚೂರಿನ ನುಣುಪು, ಶ್ರೀಲಂಕಾದ ಯೋಧ ಹಿಡಿದ ಫೋಟೋ, ಫ್ರಾಂಕೋನ ಹೆಂಡತಿಯ ಮನೆತುಂಬಿದ ವಸ್ತುಗಳು -ಎಲ್ಲವನ್ನೂ ನಾವೂ ಸವರಿದ್ದೇವೆ, ಸವಿದಿದ್ದೇವೆ.
ಈ ಕಾದಂಬರಿ ನನಗೆ ಅನೇಕ ಹೊಸ ರೂಪಕಗಳನ್ನು ಕಟ್ಟಿಕೊಟ್ಟಿದೆ, ಪ್ರತಿಮೆಗಳಿಗೆ ನೆಲೆಯಾಗಿದೆ, ಕತೆಗಳಿಗೆ ಸ್ಫೂರ್ತಿಯಾಗಿದೆ, ಅರಿವುಗಳನ್ನು ತೆರೆದಿದೆ, ವಿಷಯಗಳನ್ನು ಸ್ಪಷ್ಟಪಡಿಸಿದೆ, ಪ್ರಶ್ನೆಗಳನ್ನು ಎತ್ತಿದೆ. ಕೊನೆಗೂ ತಿಳಿಯಲಾಗದ ಭೂಷಣ ರಾವ್ ಎಂಬ ನಿಗೂಢ, ಮುಗಿಯದ ಕೃಷ್ಣನ ಹುಡುಕಾಟ, ಅರ್ಥವಾಗದ ನಮ್ಮದೇ ಮನಸುಗಳ ತಾಕಲಾಟ, ದಾರಿತಪ್ಪಿದ ಎಲ್ಲರ ಪರದಾಟ, ಜಗತ್ತು ಸಧ್ಯಕ್ಕಿರುವ ಪರಿಪಾಠ -ಎಲ್ಲವೂ ನಿಮ್ಮ ಕಾದಂಬರಿ ಓದುತ್ತ ನನಗೆ ಹೃದ್ಯವಾಗಿವೆ. ನನ್ನ ಗೊಂದಲಗಳು ಎಲ್ಲರಿಗೂ ಇವೆಯಲ್ಲಾ ಎಂಬ ಸಮಾಧಾನವಾಗಿದೆ.
ಐದು ದಿನಗಳಲ್ಲಿ, ದಿನಕ್ಕೆ ಐವತ್ತು ಪುಟಗಳಂತೆ 'ದ್ವೀಪವ ಬಯಸಿ' ಓದಿದ್ದು, ಮೈಮರೆತಿದ್ದು ನನಗೆ ದಿವ್ಯಾನುಭವ. ಇಂಥದೊಂದು ಕಾದಂಬರಿ ಕೊಟ್ಟ ನಿಮಗೆ ಧನ್ಯವಾದ. ನಿಮ್ಮ ಹೆಂಡತಿ ಹಣ್ಣನ್ನು ಟ್ರಾಷ್‌ಕ್ಯಾನಿಗಾದರೂ ಹಾಕಲಿ, ಸಿಪ್ಪೆಯನ್ನು ಫ್ರಿಜ್ಜಿನಲ್ಲಾದರೂ ಇಡಲಿ -ಇಷ್ಟೊಳ್ಳೆಯ ಮಾವಿನ ಹಣ್ಣು ತಿನ್ನಿಸಿದ ನಿಮಗೆ ನಾನಂತೂ ಆಭಾರಿ! ನಿಮ್ಮ ಮುಂದಿನ ಕಾದಂಬರಿಗೆ ಈಗಿನಿಂದಲೇ ಕಾಯುವಷ್ಟು ಉತ್ಸಾಹ ಸೃಷ್ಟಿಸಿದ್ದಕ್ಕೆ ಅಭಿನಂದನೆಯೂ!
ಪ್ರೀತಿಯಿಂದ,
ನಿಮ್ಮ,
-ಸುಶ್ರುತ ದೊಡ್ಡೇರಿ
---
ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಖಂಡಿತ ಲಭ್ಯ!

ಇನ್ನೂ ಓದದವರಿಗೆ, ಪುಸ್ತಕ ವಿವರ:
ದ್ವೀಪವ ಬಯಸಿ (ಕಾದಂಬರಿ)
ಲೇಖಕರು: ಎಂ.ಆರ್. ದತ್ತಾತ್ರಿ
ಪ್ರಕಾಶನ: ಛಂದ ಪುಸ್ತಕ
ಪುಟಗಳು: 264; ಬೆಲೆ: 150/-
Monday, January 24, 2011
ರಾಯರು ಮತ್ತು ಪದುಮ
ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.
ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.
ನಾನು ಪಾಸಾದದ್ದೆಲ್ಲ ಥಿಯರಿಯಲ್ಲೇ,
ಪ್ರಾಕ್ಟಿಕಲ್ಲಿನಲ್ಲಿ ಸೊನ್ನೆ ಎಂದರೆ
ಥಟ್ಟನೆ ಈರುಳ್ಳಿಯ ರೇಟು ಹೇಳಿ ನನ್ನನ್ನು
ತಬ್ಬಿಬ್ಬು ಮಾಡಿ ತಾನು ಹೊಟ್ಟೆ ಹಿಡಿದುಕೊಂಡು
ನಗುತ್ತಾಳೆ.
ಇನ್ನೂ ಮಾವನ ಮನೆಯಲಿ ತುಂಬಿದ
ಮಲ್ಲಿಗೆ ಹೂಗಳ ಪರಿಮಳದ ಲಯದಲ್ಲೇ
ತೇಲುತ್ತಿರುವ ರಾಯರು;
ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ
ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;
ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,
ಅಲ್ಲಿ ಒಳಮನೆಯೂ ಇಲ್ಲ.
ಈಗ ರಾಯರ ಕವಿತೆಗೆ ಪದುಮಳ ಟ್ವೀಟು
ಆಯುರ್ವೇದ ವೈದ್ಯರಿಗೆ ಅಲೋಪತಿಯ ಟ್ರೀಟು
ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು.
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.
ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.
ನಾನು ಪಾಸಾದದ್ದೆಲ್ಲ ಥಿಯರಿಯಲ್ಲೇ,
ಪ್ರಾಕ್ಟಿಕಲ್ಲಿನಲ್ಲಿ ಸೊನ್ನೆ ಎಂದರೆ
ಥಟ್ಟನೆ ಈರುಳ್ಳಿಯ ರೇಟು ಹೇಳಿ ನನ್ನನ್ನು
ತಬ್ಬಿಬ್ಬು ಮಾಡಿ ತಾನು ಹೊಟ್ಟೆ ಹಿಡಿದುಕೊಂಡು
ನಗುತ್ತಾಳೆ.
ಇನ್ನೂ ಮಾವನ ಮನೆಯಲಿ ತುಂಬಿದ
ಮಲ್ಲಿಗೆ ಹೂಗಳ ಪರಿಮಳದ ಲಯದಲ್ಲೇ
ತೇಲುತ್ತಿರುವ ರಾಯರು;
ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ
ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;
ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,
ಅಲ್ಲಿ ಒಳಮನೆಯೂ ಇಲ್ಲ.
ಈಗ ರಾಯರ ಕವಿತೆಗೆ ಪದುಮಳ ಟ್ವೀಟು
ಆಯುರ್ವೇದ ವೈದ್ಯರಿಗೆ ಅಲೋಪತಿಯ ಟ್ರೀಟು
ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು.
Thursday, January 13, 2011
ಹಕ್ಕಿ ಸಾಕುವುದು...
ಹಕ್ಕಿ ಸಾಕುವುದು ಹೇಗೆ ಅಂತ ನನಗೆಲ್ಲಿ ಗೊತ್ತಿತ್ತು?
ಅಪ್ಪನ ಜೊತೆ ಹೋಗಿದ್ದಾಗ ತೋಟಕ್ಕೆ,
ಪುಟ್ಟಗೆ ಕೂತಿತ್ತು ಸ್ವಾಂಗೆ ಅಟ್ಲಿನ ಮಡಿಲಲ್ಲಿ
ಪೆಟ್ಟಾದ ಹಕ್ಕಿ. ಚಿಂವಿಚಿಂವಿ ಗುಟ್ಟುತ್ತಿದ್ದದರ ಆರ್ತಕ್ಕೆ
ಮನ ಕರಗಿ, ಕೊಕ್ಕ ಕೆಂಪು - ಮೈಯ ಹಸುರಿಗೆ ಪ್ರೀತಿಯುಕ್ಕಿ
ಎತ್ತಿ ಹೊಂಬಾಳೆಯಲ್ಲಿಟ್ಟುಕೊಂಡು ತಂದೇಬಿಟ್ಟೆ
ಮನೆಗೆ.
ಹಕ್ಕಿಯ ಬೇಕುಬೇಡಗಳೊಂದೂ ಗೊತ್ತಿರಲಿಲ್ಲ..
ಚಿಂವಿಚಿಂವಿ ಗದ್ದಲ ಮೂರು ದಿನಕ್ಕೆ ಬೇಸರ ಬಂದು,
ವಿಚಾರಿಸಲು ಸಮಯ ವಿಳಂಬ; ಗಾಯಕ್ಕೆ ನನಗೆ ತಿಳಿಯದ ಮುಲಾಮು;
ಸಮಾಧಾನಕ್ಕೆ ಶಬ್ದಗಳು ಸಿಗದೇ ಪರಿತಾಪ.
ಕರೆದುತಂದದ್ದಕ್ಕೆ ಸಾಕುವುದೇ ಶಿಕ್ಷೆ ಎಂದಿತು ಹಕ್ಕಿ.
ಅಪ್ಪ ಗುರುಗುಟ್ಟಿದ; ಅಮ್ಮ ಕಾಳಿಗೆ ಕಾಸು ಕೊಡಲಿಲ್ಲ.
ಹೊರಲಾರದ, ಹೊರಹಾಕಲಾರದ ಇಬ್ಬಂದಿಯಲ್ಲಿ
ತಪ್ಪು ಯಾರದು ಅಂತ ತಿಳಿಯದೇ ಕಂಗಾಲು ನಾನು.
ಒಂದು ಹಕ್ಕಿ ಸಾಕುವುದು ಇಷ್ಟೆಲ್ಲ ಕಷ್ಟ ಅಂತ ನನಗೆಲ್ಲಿ ಗೊತ್ತಿತ್ತು..?
“ಚೆಲುವು ಚೆಂದ, ಒಲವಿಗರ್ತಿ, ಆಟಕ್ಕಾದರ, ಸ್ಪರ್ಷಕ್ಕೆ ಪುಳಕ,
ರೆಕ್ಕೆ ಬೀಸಿದರೆ ಭಾವರೋಮಾಂಚ, ಚಿಲಿಪಿಲಿಯೋ- ಉಪಮಾತೀತ;
...ಆದರೆ,” ಅಜ್ಜ ತಡೆದು ಹೇಳಿದ,
“..ಹಿಡಿದು ಸಾಕಿದ ದಿನದಿಂದ ನಿನಗಿಲ್ಲ ಹಾರಾಟ; ವಿಹಂಗಮ ನೋಟ.”
ಹಕ್ಕಿ ಸಾಕುವ ಕಷ್ಟ ನನಗೆ ಗೊತ್ತೇ ಇರಲಿಲ್ಲ.

Subscribe to:
Posts (Atom)