Thursday, November 27, 2008

ಮೋಡ ಕವಿದ ವಾತಾವರಣ

‘ಸ್ಥಳೀಯ ಹವಾ ಮುನ್ಸೂಚನೆಯಂತೆ, ಬೆಂಗಳೂರು ಮತ್ತು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ’ -ಊರಲ್ಲಿದ್ದಾಗ, ರೇಡಿಯೋ-ಟೀವಿಗಳ ಹವಾ ವರ್ತಮಾನದಲ್ಲಿ ಪ್ರತಿದಿನ ಕೇಳಿಬರುತ್ತಿದ್ದ ಸಾಲು. ‘ಇದೇನು ಬೆಂಗಳೂರಿನಲ್ಲಿ ಯಾವಾಗಲೂ ಮೋಡ ಕವಿದ ವಾತಾವರಣ ಇರುತ್ತದಾ?’ ಅಂತ ನಮಗೆ ಆಶ್ಚರ್ಯವಾಗುತ್ತಿತ್ತು. ಆದರೆ ನಾನು ಬೆಂಗಳೂರಿಗೆ ಬರುವಷ್ಟರಲ್ಲಿ ಬೆಂಗಳೂರು ‘ಉದ್ಯಾನನಗರಿ’ಯೆಂಬ ಬಿರುದಿಗೆ ತದ್ವಿರುದ್ಧವಾಗಿ ತನ್ನ ಹಸಿರು ಬಟ್ಟೆಯನ್ನೆಲ್ಲಾ ಬಿಚ್ಚಿಹಾಕಲು ಶುರು ಮಾಡಿತ್ತು. ಹಾಗಾಗಿ ನಾನು ಇಂಟರ್‌ವ್ಯೂಗೆಂದು ಕಂಪನಿ-ಕಂಪನಿ ಅಲೆಯುವಾಗ, ಬಿಸಿಲೆಂಬುದು ಇಂಟರ್‌ವ್ಯೂವರುಗಳಿಗಿಂತ ಭಯಾನಕವಾಗುವ ಹಂತಕ್ಕೆ ಮುಟ್ಟಿತ್ತು. ಈಗಂತೂ ಹಸಿರು ನೋಡಲು ಕಬ್ಬನ್ ಪಾರ್ಕು-ಲಾಲ್‌ಭಾಗುಗಳಿಗೇ ಹೋಗಬೇಕು ಎಂಬಂತಹ ಪರಿಸ್ಥಿತಿ. ಇಲ್ಲಿ ನನ್ನ ಆಫೀಸಿನ ಬಳಿ ರೇಸ್‌ಕೋರ್ಸ್ ರಸ್ತೆ ಅಗಲೀಕರಣ ಅಂತ ಅಷ್ಟೂ ಮರಗಳನ್ನು ಉರುಳಿಸಿದ್ದಾರೆ. ಅದನ್ನು ಮುಗಿಸಿ, ಪ್ಯಾಲೇಸ್ ರಸ್ತೆಯ ಕಡೆ ಹೋಗುತ್ತಿವೆ ಬುಲ್ಡೋಜರ್-ಜೆಸಿಬಿಗಳು. ಸಂಕಟವಾಗುತ್ತದೆ.

ಆದರೆ ಅದೇನೋ ತಮಿಳುನಾಡಿನಲ್ಲಿ ಡಿಪ್ರೆಶನ್ನಂತೆ, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸೂರ್ಯರಶ್ಮಿ ನಾಪತ್ತೆ! ‘ವ್ಹಾಟ್ ಎ ರೋಮಾಂಟಿಕ್ ವೆದರ್..! ಊಟೀಲಿ ಇದ್ದಹಾಗಿದೆ’ ಎನ್ನುವ ಫ್ರೆಂಡು, ‘ಸುಶ್ರುತ್, ಈ ವೆದರಲ್ಲಿ ಕೆಲಸ ಮಾಡಬಾರ್ದು ಕಣ್ರೀ.. ಒಂದು ಕ್ಯಾಂಪ್‌ಫೈರ್ ಹಾಕ್ಕೊಂಡು ಚಿಲ್ಲಾಗಿ ಕೂತು ವ್ಹಿಸ್ಕಿ ಹಾಕ್ಬೇಕು!’ ಎನ್ನುವ ಕಲೀಗು, ಒಂದೇ ಒಂದು ಮೆಸೇಜು ಸಹ ಕಳುಹಿಸದೇ ಜೀವ ತಿನ್ನುವ ಹುಡುಗಿ... ಛೇ! ಲೈಫು!

ಐಟಿ ಇಂಡಸ್ಟ್ರಿ ಕುಸಿತ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಎಂಪ್ಲಾಯ್‌ಮೆಂಟ್ ರೇಶಿಯೋ ಕುಸಿತ, ಶೇರ್‌ಮಾರ್ಕೆಟ್ ಕುಸಿತ -ಇತ್ಯಾದಿ ಕುಸಿತಗಳ್ಯಾವುವೂ ನಮ್ಮ ಲೀಗಲ್ ಇಂಡಸ್ಟ್ರಿಯ ಮೇಲೆ ಯಾವುದೇ ಪರಿಣಾಮ ಉಂಟುಮಾಡದಿದ್ದರೂ, ಈ ಇದೇನೋ ‘ವಾಯುಭಾರ ಕುಸಿತ’ ಮಾತ್ರ ನನ್ನೆಲ್ಲಾ ಕಲೀಗುಗಳನ್ನೂ ನಿರುತ್ಸಾಹಿಗಳನ್ನಾಗಿ ಮಾಡಿಬಿಟ್ಟಿದೆ! ಬೆಳಗ್ಗೆಯಿಂದ ಏನೆಂದರೆ ಏನೂ ಕೆಲಸ ಮಾಡದೇ ಕುಳಿತಿದ್ದೇವೆ ಎಲ್ಲರೂ. ಇದ್ದುದರಲ್ಲೇ ನಮ್ಮನ್ನು ಬೆಚ್ಚಗಿಟ್ಟಿರುವುದು ಎಂದರೆ, ಮುಂಬಯಿಯಲ್ಲಿ ಆಗಿರುವ ಸರಣಿ ಬಾಂಬ್ ಸ್ಪೋಟಗಳು. ನ್ಯೂಸ್ ಛಾನೆಲ್ ವರದಿಗಾರರ ಮೇಲಂತೂ ಒಂದು ತರಹದ ‘ಮೋದ ಕವಿದ ವಾತಾವರಣ’ ಸೃಷ್ಟಿಯಾಗಿಬಿಟ್ಟಿದೆ. ಸಿ‌ಎನ್ನೆನ್ ಐಬಿ‌ಎನ್, ಎನ್‌ಡಿಟಿವಿ ಮುಂತಾದ ಛಾನೆಲ್ಲುಗಳು ತಾಜ್, ಒಬೇರಾಯ್, ನಾರಿಮನ್ ಪಾಯಿಂಟುಗಳ ಪಕ್ಕದಲ್ಲಿ ನಿಂತು ಲೈವ್ ವರದಿ ಮಾಡುತ್ತಿವೆ: ‘ನಹೀ ಬತಾ ಸಕ್ತೇ.. ಒಳಗಡೆ ಎಷ್ಟು ಜನ ಇದಾರೆ ಅಂತ ಹೇಳಕ್ಕೇ ಆಗಲ್ಲ’.. ‘ಅದೋ ಸ್ಪೆಶಲ್ ಸ್ಕ್ವಾಡ್ ಬಂತು’.. ‘ಹಾಂ, ಗುಂಡಿನ ಶಬ್ದ ಕೇಳಿಸ್ತಿದೆಯಾ? ಕ್ಯಾನ್ಯೂ ಹಿಯರ್?’.. ‘ಇಗೋ, ಇದೀಗ ಎನ್‌ಕೌಂಟರ್ ಶುರು ಆಗ್ತಿದೆ’.. ‘ತಾಜ್ ಹೋಟೆಲಿನಲ್ಲಿ ಸಿಕ್ಕಿಹಾಕಿಕೊಂಡಿರೋರು ಒಬ್ಬರು ನಂಗೆ ಎಸ್ಸೆಮ್ಮೆಸ್ ಮಾಡಿದಾರೆ’... ಎಲ್ಲರೂ ಉಸಿರು ಬಿಗಿಹಿಡಿದು ನೋಡುತ್ತಿದ್ದೇವೆ.. ಅಬ್ಬ! ಈ ಟೆರರಿಸಂ ಮತ್ತು ಬಾಂಬ್ ಸ್ಪೋಟಗಳು ನಮ್ಮ ದೈನಂದಿನ ಜೀವನಕ್ಕೆ ಎಂತಹ ಒಂದು ‘ಥ್ರಿಲ್’ ತಂದುಬಿಟ್ಟವು! ಎಲ್ಲಿ ಯಾವಾಗ ಸಿಡಿಯೊತ್ತೆ ಅಂತಲೇ ಹೇಳಕ್ಕಾಗಲ್ಲ! ಕೋರ್ಟಿಗೆ ಹೋಗಿರೋ ಕಲೀಗು ವಾಪಸು ಬರ್ತಾನೋ ಇಲ್ವೋ ಯಾರಿಗ್ಗೊತ್ತು? ಇವತ್ತು ನಾನೇ ಆಫೀಸಿನಿಂದ ಮನೆಗೆ ವಾಪಸು ಹೋಗ್ತೀನೋ ಇಲ್ವೋ? ಹಹ್!

ಆದರೆ ಇನ್ನು ಸ್ವಲ್ಪ ಕಾಲಕ್ಕೆ ಇದೂ ನಮಗೆ ಅಭ್ಯಾಸವಾಗಿಬಿಡಬಹುದೇನೋ? ಮುಂಬಯಿಯ ಗೆಳತಿಯೊಬ್ಬಳಿಗೆ ಪಿಂಗ್ ಮಾಡಿ ‘ಪರಿಸ್ಥಿತಿ ಹೇಗಿದೆ ನೀನಿರೋ ಜಾಗದಲ್ಲಿ?’ ಅಂತ ಕೇಳಿದೆ. ‘ಯಾಸ್ ಎವೆರಿಡೇ! ನಾರ್ಮಲ್ ಇದೆ. ನಾನು ಆಫೀಸಿನಲ್ಲಿದೀನಿ. ನನ್ ಗಂಡನೂ ಆಫೀಸಿಗೆ ಹೋಗಿದಾನೆ. ಸ್ಕೂಲುಗಳಿಗೆ ರಜೆ ಕೊಟ್ಟಿರೋದ್ರಿಂದ ಕೆಲ ಮಕ್ಕಳು ಹೊರಗೆ ಆಡ್ತಿರೋದು ಇಲ್ಲಿ ಕಿಟಕಿಯಿಂದ ಕಾಣ್ತಿದೆ. ನೀವೆಲ್ಲಾ ನೋಡ್ತಿರೋ ಹಾಗೆ ನಾನೂ ಟೀವಿಯಲ್ಲಿ ನೋಡ್ತಿದೀನಿ’ ಅಂದಳು. ಅಚ್ಚರಿಯಾಯಿತು. ‘ಛೇ! ಮತ್ತೆ ನಾನ್ಯಾಕೆ ಬೆಳಗ್ಗೆಯಿಂದ ಒಳ್ಳೇ ಸಸ್ಪೆನ್ಸ್ ಪಿಚ್ಚರ್ ನೋಡಿದಹಾಗೆ ನ್ಯೂಸ್ ನೋಡುತ್ತಿದ್ದೇನೆ?’ ಅನ್ನಿಸಿ, ಸಿ‌ಎನ್ನೆನ್ ವೆಬ್‌ಸೈಟ್‌ನ ವಿಂಡೋವನ್ನು ತಟ್ಟನೆ ಕ್ಲೋಸ್ ಮಾಡಿದೆ.

ಮತ್ತೆ ಮೋಡ ಕವಿಯಿತು. ಕೊಂಚ ಎದ್ದು ಹೋಗಿ, ಪಕ್ಕದ ಕಿಟಕಿಯ ಗಾಜಿನ ಮೇಲೆ ನಿಂತಿರುವ ಮಳೆನೀರ ಹನಿಗಳ ಮೂಲಕ ಹೊರಗೆ ನೋಡಿದರೆ, ಕಪ್ಪು ಜಾಕೆಟ್ಟನ್ನು ಬೆಚ್ಚಗೆ ಹೊದ್ದುಕೊಂಡಿರುವ ಪಕ್ಕದ ಆಫೀಸಿನ ಹುಡುಗಿ ತನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವುದು ಕಾಣುತ್ತಿದೆ. ತಂಡಿಯಾಗಿರುವ ಅದರ ಎಂಜಿನ್ ಏನೆಂದರೂ ಸ್ಟಾರ್ಟ್ ಆಗುತ್ತಿಲ್ಲ. ‘ಕೆಳಗಿಳಿದು ಹೋಗಿ ಸಹಾಯ ಮಾಡಲಾ?’ ಅಂದುಕೊಳ್ಳುತ್ತೇನೆ. ಮತ್ತೆ, ‘ಮೈಯೆಲ್ಲಾ ಒದ್ದೆಯಾಗುತ್ತದೆ, ಬೇಡ’ ಅಂತ ಸುಮ್ಮನಾಗುತ್ತೇನೆ.

ವಾಪಸು ಬಂದು ಕಂಪ್ಯೂಟರ್ ಮುಂದೆ ಕೂತರೆ, ಯಾರೋ ಪಿಂಗ್ ಮಾಡುತ್ತಾರೆ: ‘ಶೇಮ್‌ಲೆಸ್ ಯಾರ್.. ಈ ಯುಪಿ‌ಎ ಸರ್ಕಾರ, ನಮ್ಮ ಪೋಲೀಸ್ ವ್ಯವಸ್ಥೆ.....’ ನಾನು ಸೈನ್‌ಔಟ್ ಆಗುತ್ತೇನೆ. ಗೂಗಲ್ ರೀಡರ್ ಹೊಸ ಬ್ಲಾಗ್ ಅಪ್‌ಡೇಟ್‌ಗಳನ್ನು ತೋರಿಸುತ್ತಿದೆ. ಅಲ್ಲೂ ಶುರುವಾಗಿಬಿಟ್ಟಿದೆ: ‘ಪ್ರತೀಕಾರ’, ‘ಪ್ರತಿಧಾಳಿ’, ‘ಪ್ರತಿಭಟನೆ’, ‘ಈ ಮುಸ್ಲಿಮರಿದ್ದಾರಲ್ಲಾ...’ ಚರ್ಚೆಗಳು. ವಾದಗಳು. ಬೆಚ್ಚಗೆ, ಅವರವರ ಆಫೀಸು-ಮನೆಗಳಲ್ಲಿ ಕೂತು.

ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ.

Monday, November 17, 2008

ಟೀವಿಯಲ್ಲಿ ನಾವು

"ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?" ಅಂತ ನಾಗೇಗೌಡ್ರು ಕೇಳಿದಾಗ, "ಹುಂ, ನಿನ್ನೆ ತಾನೇ ನೋಡಿದ್ನಲ್ಲ? ಯಾಕೆ?" ಅಂದೆ. "ಅದ್ರಲ್ಲಿ ನಾನೂ ಯಾಕ್ಟ್ ಮಾಡಿದೀನಿ, ನೋಡ್ಲಿಲ್ವಾ?" ಅಂದರು. "ನೀವಾ?! ಎಲ್ಲಿ? ಯಾವ ಸೀನಲ್ಲಿ?" ಆಶ್ಚರ್ಯದಿಂದ ಕೇಳಿದೆ. ಅವರಂದ್ರು, "ಅದೇ, ಪೋಲೀಸ್ ಕಮಿಷನರ್ ಮೀಟಿಂಗ್ ಕರೆದಿರ್ತಾರಲ್ಲ, ಆಗ ಸುತ್ಲೂ ಸುಮಾರ್ ಪೋಲೀಸ್ರು ಕೂತಿರ್ತಾರೆ.. ಅವ್ರಲ್ಲಿ ಒಬ್ಬ ಪೋಲೀಸ್ ನಾನಾಗಿದ್ದೆ!" "ಓಹ್, ಹೌದಾ? ನಾನು ಗಮನಿಸ್ಲೇ ಇಲ್ಲ.. ಛೇ, ಸುಮ್ನೇ ದುಡ್ಡು ಕೊಟ್ಟು ಹೋದ್ವಲ್ರೀ ನಿನ್ನೆ ನಾವು.. ನೀವು ಯಾಕ್ಟ್ ಮಾಡಿದೀರ ಅಂದ್ಮೇಲೆ ನಮ್ಗೆ ಫ್ರೀ ಟಿಕೇಟ್ ಕೊಡಿಸ್ತಿದ್ರಿ.. ಮಿಸ್ ಮಾಡ್ಕೊಂಡ್ಬಿಟ್ವಿ!" ನಗುತ್ತಾ ಹೇಳಿದೆ. "ಹೆಹ್ಹೆ! ಅದ್ಕೇನಂತೆ, ಮತ್ತೊಂದ್ಸಲ ಹೋಗ್ಬನ್ನಿ. ಕೊಡಿಸ್ತೀನಿ ಟಿಕೇಟು.. ನನ್ನನ್ನೇ ನೋಡ್ಲಿಲ್ಲ ನೀವು ಅಂದ್ಮೇಲೆ ಮತ್ತೊಂದ್ಸಲ ನೋಡೋದು ಸರಿ ಇದೆ.." ಎಂದು ನಗುತ್ತಾ ಖುರ್ಚಿಯಿಂದ ಎದ್ದರು ನಾಗೇಗೌಡ್ರು.

ಈ ನಾಗೇಗೌಡ್ರು ನಮ್ಮ ಕ್ಲೈಂಟು. ಸಿನಿಮಾವೊಂದರಲ್ಲಿ ನಾವು ಇರೋದು ಅಂದ್ರೆ ಅದು ನಿಜಕ್ಕೂ ಹೇಳಿಕೊಳ್ಳಬೇಕಾದ ವಿಷಯವೇ. ಒಂದು ಸಿನಿಮಾ ಅಂದರೆ ಲಕ್ಷಗಟ್ಟಲೇ ಜನ ನೋಡುತ್ತಾರೆ. ಒಂದು ಕ್ಷಣದಲ್ಲಿ ಬಂದು ಹೋಗುವ ಸೀನೇ ಇರಬಹುದು, ಆದರೂ ಅದೊಂದು ಖುಶಿಯ ವಿಷಯವೇ ತಾನೇ? ಹೀಗಾಗಿ ನಾಗೇಗೌಡ್ರು ನನಗೆ ಮತ್ತೊಮ್ಮೆ ಸಿನಿಮಾ ನೋಡಲು ಟಿಕೇಟ್ ತೆಗೆಸಿಕೊಡುತ್ತೀನಿ ಅಂದಿದ್ದರಲ್ಲಿ ಅತಿಶಯೋಕ್ತಿಯೇನೂ ಕಾಣಲಿಲ್ಲ. ಆದರೆ ‘ಸ್ಲಂ ಬಾಲ’ ಪಿಚ್ಚರ್ರು ಮತ್ತೊಮ್ಮೆ ನೋಡುವಷ್ಟೆಲ್ಲಾ ಚೆನ್ನಾಗಿಯೇನೂ ಇಲ್ಲವಾದ್ದರಿಂದ ನಾನು ನಾಗೇಗೌಡ್ರು ಟಿಕೇಟು ತೆಗೆಸಿಕೊಟ್ಟರೂ ಹೋಗುವುದು ಅನುಮಾನ.

* * *

ಹಿಂದೊಮ್ಮೆ ನನ್ನ ಅಜ್ಜ ‘ಸೂರಪ್ಪ’ ಎಂಬ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ. ಅಜ್ಜ ಆಗ ಮೈಸೂರಿನಲ್ಲಿದ್ದ, ಅಲ್ಲಿನ ಯಾವುದೋ ಛತ್ರದಲ್ಲಿ ಇವನು ಅಡುಗೆಗೆ ಹೋಗಿದ್ದಾಗ ಅಲ್ಲಿ ಶೂಟಿಂಗ್ ನಡೆಯುತ್ತಿತ್ತಂತೆ. ಅವತ್ತಿನ ಚಿತ್ರೀಕರಣದಲ್ಲಿ ಭಟ್ಟರ ಅಸಿಸ್ಟೆಂಟ್ ಪಾತ್ರ ಮಾಡಲು ವಯಸ್ಸಾದ ಯಾರಾದರೂ ಒಬ್ಬರು ಬೇಕಿತ್ತು. ನಿರ್ದೇಶಕರು ಅಲ್ಲೇ ಓಡಾಡುತ್ತಿದ್ದ ಅಜ್ಜನನ್ನು ‘ಪಾತ್ರ ಮಾಡುತ್ತೀರಾ?’ ಅಂತ ಕೇಳಿದರಂತೆ. ಅಜ್ಜ ಡ್ರೆಸ್ ಸಮೇತ ತಯಾರಿದ್ದ, (ಹಿಂದೆಲ್ಲಾ ಯಕ್ಷಗಾನ ಕುಣಿದು ರೂಢಿಯಿದ್ದವನು ಅವನು), ‘ಸರಿ’ ಅಂದ! ಡೈರೆಕ್ಟರು ಮತ್ತೊಂದಷ್ಟು ಎಕ್ಸ್‌ಟ್ರಾ ವಿಭೂತಿ ಪಟ್ಟಿ ಬಳಿಸಿ, ಎರಡ್ಮೂರು ಟೇಕ್ ತಗೊಂಡು, ಅಜ್ಜನ ಅಭಿನಯವನ್ನು ಸೆರೆ ಹಿಡಿದೇಬಿಟ್ಟರು.

ಅದಾದನಂತರ ಮನೆಗೆ ಫೋನ್ ಮಾಡಿದ್ದಾಗ ಅಜ್ಜ ಇದರ ಬಗ್ಗೆ ಹೇಳಿದ್ದ. ಸಾಗರಕ್ಕೆ ಆ ಸಿನಿಮಾ ಮೂರ್ನಾಲ್ಕು ತಿಂಗಳ ನಂತರ ಬಂತು. ಹೋಗಲಾಗದೇ ಇದ್ದೀತೇ? ನನಗೆ ಒಂದು ವಾರದಲ್ಲಿ ಪರೀಕ್ಷೆ ಇದ್ದರೂ ಅಪ್ಪನೊಂದಿಗೆ ಹೋಗಿ ಸಿನಿಮಾ ನೋಡಿ ಬಂದಿದ್ದೆ. ಅಜ್ಜ ಪರದೆಯ ಮೇಲಿರುವುದು ಮೂರರಿಂದ ನಾಲ್ಕು ಸೆಕೆಂಡು, ಸಿನಿಮಾದ ಕೊನೆಯಲ್ಲಿ. ಎರಡೂ ಕಾಲು ತಾಸು ಸಿನಿಮಾವನ್ನು ‘ಅಜ್ಜ ಈಗ ಬರುತ್ತಾನೆ, ಈಗ ಬರುತ್ತಾನೆ’ ಅಂತ ಕಾದು ಕಾದು, ಪ್ರತಿ ಸೀನಿನಲ್ಲಿ ಜಂಗುಳಿ ಕಂಡಾಗಲೂ ‘ಇದರಲ್ಲೆಲ್ಲಾದರೂ ಅಜ್ಜ ಮಿಸ್ ಆಗಿಬಿಟ್ಟರೆ ಕಷ್ಟ’ ಅಂತ ಕಣ್ಣು ಕೀಲಿಸಿಕೊಂಡು ನೋಡಿ, ಇಂಟರ್‌ವೆಲ್ಲಿನಲ್ಲಿ ಹ್ಯಾಪ ಮೋರೆ ಹಾಕಿಕೊಂಡು ಕಡಲೆ ತಿಂದು, ಸಿನಿಮಾ ಮುಗಿಯಲು ಬರುತ್ತಿದ್ದಾಗ ‘ಅಯ್ಯೋ ಅಜ್ಜ ಬರಲೇ ಇಲ್ವಲ್ಲಪ್ಪಾ’ ಅಂದುಕೊಳ್ಳುತ್ತಿರುವಾಗಲೇ ಗೂನು ಬೆನ್ನಿನ ನನ್ನ ಅಜ್ಜ ಕುಂಟುತ್ತಾ ಬಂದಿದ್ದ..! ಅವನು ಕಣ್ ಕಣ್ ಬಿಡುತ್ತಾ ದೊಡ್ಡ ಭಟ್ಟರ ಪಕ್ಕ ನಿಂತಿದ್ದು ನೋಡಿ ನಾನಂತೂ ಖುಶಿಯಿಂದ ಚಪ್ಪಾಳೆ ತಟ್ಟುತ್ತಾ ಕುಣಿದಾಡಿಬಿಟ್ಟಿದ್ದೆ. ನನ್ನ ಹಿಂದು-ಮುಂದಿನ ಸೀಟಿನವರು ‘ಈ ಸೀನಿನಲ್ಲಿ ಚಪ್ಪಾಳೆ ತಟ್ಟುವಂಥದ್ದು ಏನಿದೆ?’ ಎಂದು ವಿಚಿತ್ರವಾಗಿ ನನ್ನನ್ನೇ ನೋಡಿದ್ದರು.

ಊರಿಗೆ ಬಂದು, ಸುಮಾರು ಜನರಿಗೆ ಹೇಳಿ, ಅವರೂ ಹೋಗಿ ನೋಡಿಕೊಂಡು ಬಂದಿದ್ದರು. ‘ಅಯ್ಯೋ, ಹೌದೇ ವರಮಾಲಕ್ಷ್ಮಕ್ಕ, ಅನಂತಣ್ಣ ಘನಾಗ್ ಕಾಣ್ತ’ ಅಂತ ಶ್ರೀಮತಕ್ಕ ನನ್ನ ಅಜ್ಜಿಯ ಬಳಿ ಹೇಳಿದಾಗ ‘ಹೌದನೇ?’ ಎನ್ನುತ್ತಾ ನಾಚಿದ್ದಳು ಅಜ್ಜಿ. ನಾನು ಅಜ್ಜನಿಗೆ ಫೋನ್ ಮಾಡಿ ‘ಅಜ್ಜಾ, ಸಖ್ಖತ್ತಾಗ್ ಯಾಕ್ಟ್ ಮಾಡಿದ್ದೆ ನೀನು’ ಎಂದು ಉಬ್ಬಿಸಿದ್ದೆ ಸಹ.

ಆಮೇಲೆ ಆ ಸಿನಿಮಾ ಟೀವಿಯಲ್ಲೂ ಪ್ರಸಾರವಾಗಿತ್ತು. ಆಗ ಊರವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು. ಎಲ್ಲರ ಮನೆಯಲ್ಲೂ ಟೀವಿಯಿದ್ದರೂ, ಪಾತ್ರಧಾರಿಯ ಮನೆಯಲ್ಲೇ ಕೂತು ಸಿನಿಮಾ ನೋಡುವುದರಲ್ಲಿ ಇರುವ ಥ್ರಿಲ್ ಹೆಚ್ಚಲ್ಲವೇ! ಕರೆಂಟು ಹೋಗುವುದು-ಬರುವುದು ಆಗುತ್ತಿತ್ತು.. ಜಾಹೀರಾತುಗಳಂತೂ ಅವತ್ತೇ ಜಾಸ್ತಿಯಿದ್ದಂತ್ತಿತ್ತು.. ಈಗಾಗಲೇ ಸಿನಿಮಾ ನಾನು ನೋಡಿಬಿಟ್ಟಿದ್ದರಿಂದ ‘ತಲೆಬಿಸಿ ಮಾಡ್ಕ್ಯಳಡಿ.. ಈಗಲ್ಲ, ಲಾಸ್ಟಿಗೆ ಬರ್ತ ಅಜ್ಜ’ ಎಂದು, ಎಲ್ಲಾ ತಿಳಿದವನಂತೆ, ಎಲ್ಲರಿಗೂ ಸಮಾಧಾನ ಮಾಡುತ್ತಿದ್ದೆ.. ಅಂತೂ ಅಜ್ಜ ಬರುವ ಕೊನೆಯ ಸೀನ್ ಹತ್ತಿರ ಬಂದಾಗ, ‘ಹೂಂ, ಈಗ್ಲೇಯ, ಎಲ್ಲಾ ನೋಡ್ತಿರಿ, ಈಗ ಬರ್ತ ಅಜ್ಜ..’ ಎನ್ನುತ್ತಿದ್ದೆ, ಅಷ್ಟರಲ್ಲಿ.... ಇಲ್ಲ, ಕರೆಂಟು ಹೋಗಲಿಲ್ಲ, ಅಜ್ಜ ಬಂದ! (ಸಾಮಾನ್ಯವಾಗಿ ನಮ್ಮೂರಿನ ಕರೆಂಟು ಇಂತಹ ಸಮಯವನ್ನೇ ಕಾಯುತ್ತಿರುತ್ತದೆ ಹೋಗುವುದಕ್ಕೆ: ಕ್ರಿಕೆಟ್ ಮ್ಯಾಚಿನ ಕೊನೆಯ ಓವರು, ಸಿನಿಮಾದ ಕ್ಲೈಮ್ಯಾಕ್ಸ್ ಸೀನು, ಧಾರಾವಾಹಿಯ ಕೊನೇ ಕ್ಷಣ, ಹೀಗೆ. ಆದರೆ ಅವತ್ತು ಪುಣ್ಯಕ್ಕೆ ಹೋಗಲಿಲ್ಲ.) ‘ಓಹೋಹೋ! ಅನಂತಣ್ಣ!’ ಎಂದು ಎಲ್ಲರೂ ಒಕ್ಕೊರಲಿನಿಂದ ಉದ್ಘರಿಸಿದರು. ಅಜ್ಜಿಯಂತೂ ಟೀವಿಯ ಬುಡಕ್ಕೇ ಹೋಗಿ ತನ್ನ ಪತಿದೇವರನ್ನು ನೋಡಿದಳು. ‘ಹೌದೇ ಹೌದಲೇ!’ ಎಂದಳು. ಆದ ಆನಂದಕ್ಕೆ ಅವಳ ಕಣ್ಣಿಂದ ಒಂದೆರಡು ಹನಿಗಳೂ ಉದುರಿದವು. ಆಮೇಲೆ ಅಮ್ಮ ಎಲ್ಲರಿಗೂ ಸಕ್ಕರೆ ಹಂಚಿದಳು, ಈ ಹೆರಿಗೆ ಆದಕೂಡಲೇ ಹಂಚುತ್ತಾರಲ್ಲಾ, ಹಾಗೆ.

* * *

ದೂರದರ್ಶನದ ‘ಚಂದನ’ ವಾಹಿನಿಯಲ್ಲಿ ‘ಥಟ್ ಅಂತ ಹೇಳಿ?!’ ಎಂಬ ಕ್ವಿಜ್ ಕಾರ್ಯಕ್ರಮವೊಂದು ಬರುತ್ತದೆ. ಡಾ| ನಾ. ಸೋಮೇಶ್ವರ ಅವರು ನಡೆಸಿಕೊಡುವ ಬಹು ಜನಪ್ರಿಯ ಕಾರ್ಯಕ್ರಮ ಅದು. ಅಪ್ಪನಿಗೆ ತಾನೊಮ್ಮೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಹಂಬಲ ಬಂತು. ದೂರದರ್ಶನಕ್ಕೆ ಪತ್ರ ಹಾಕಿದ. ಇಂತಹ ದಿನ ಬರಬೇಕೆಂದು ಕರೆ ಬಂತು. ಅಪ್ಪ ನನಗೆ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ.

ಅಪ್ಪನನ್ನು ಕರೆದುಕೊಂಡು ದೂರದರ್ಶನ ಕಛೇರಿಗೆ ಹೋದೆ. ಹೆಸರು ಬರೆಸುವುದು, ಸಹಿ ಪಡೆಯುವುದು, ಮೊಬೈಲ್ ತೆಗೆದಿಟ್ಟುಕೊಳ್ಳುವುದು ಇತ್ಯಾದಿ ಪ್ರೊಸೀಜರ್ರುಗಳೆಲ್ಲ ಮುಗಿದು, ‘ಶ್ ಶ್’ ಎನ್ನುತ್ತಾ ಸ್ಟುಡಿಯೋದೊಳಗೆ ನಮ್ಮನ್ನು ಬಿಡಲಾಯಿತು. ಸ್ಟುಡಿಯೋವೊಂದರ ಒಳಗೆ ನಾನು ಮತ್ತು ಅಪ್ಪ ಇದೇ ಮೊದಲು ಕಾಲಿಡುತ್ತಿದ್ದುದು.. ಅಲ್ಲಿ ಅದಾಗಲೇ ಸಂಚಿಕೆಯೊಂದರ ಚಿತ್ರೀಕರಣ ನಡೆಯುತ್ತಿತ್ತು. ಸೋಮೇಶ್ವರರು ಎದುರಿಗೆ ಕೂತ ಮೂವರು ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಎಸೆಯುತ್ತಿದ್ದರು. ನಮ್ಮನ್ನು ದೂರದಲ್ಲಿ ಇದ್ದ ಖುರ್ಚಿಗಳಲ್ಲಿ ಶಬ್ದ ಮಾಡದಂತೆ ಕೂತಿರುವಂತೆ ಸೂಚಿಸಲಾಯಿತು. ಮುಂದಿನ ಚಿತ್ರೀಕರಣಕ್ಕೆ ತಾನು ಹೋಗಬೇಕಲ್ಲವೇ- ಅಪ್ಪ ಎಲ್ಲವನ್ನೂ ಕುತೂಹಲದಿಂದ ನೋಡಿಕೊಳ್ಳುತ್ತಿದ್ದ.. ಫೋಕಸ್ ಲೈಟುಗಳು, ಸ್ಕ್ರೀನುಗಳು, ಬ್ಯಾಕ್‌ಗ್ರೌಂಡಿನ ಬಣ್ಣಗಳನ್ನು ಲೇಸರ್ ರೇಗಳಿಂದ ಬದಲಿಸುವುದು, ಮೇಲ್ಗಡೆ ಕೋಣೆಯಲ್ಲಿ ಕೂತ ಡೈರೆಕ್ಟರ್ ಕೊಡುವ ಸೂಚನೆಗಳನ್ನು ಪಾಲಿಸುವ ಕೆಮೆರಾದವರು... ಸೋಮೇಶ್ವರರೂ ಕಿವಿಗೆ ಒಂದು ಇಯರ್‌ಫೋನ್ ಹಾಕಿಕೊಂಡಿರುತ್ತಾರೆ, ಚಿತ್ರೀಕರಣದ ಮಧ್ಯೆ ಅಲ್ಲಲ್ಲಿ ‘ಕಟ್’, ‘ರಿಪೀಟ್’ ಇತ್ಯಾದಿ ಪ್ರಸಂಗಗಳು ನಡೆದಿರುತ್ತವೆ ಅಂತೆಲ್ಲ ಗೊತ್ತಾಗಿದ್ದೇ ಆವಾಗ ನಮಗೆ..!

ನಿಧಾನಕ್ಕೆ ಪಕ್ಕದಲ್ಲಿದ್ದ ಅಪ್ಪನ ಮುಖವನ್ನು ನೋಡಿದೆ ನಾನು.. ಅಪ್ಪ ಸ್ವಲ್ಪ ಹೆದರಿದ್ದಂತೆ, ನರ್ವಸ್ ಆಗಿದ್ದಂತೆ ಕಂಡಿತು.. ಆ ಚಿತ್ರೀಕರಣದ ನಂತರ ಅಪ್ಪನನ್ನು ವೇದಿಕೆಗೆ ಕರೆದರು. ಅಪ್ಪ ನನ್ನತ್ತ ಬಾಗಿ ‘ಹೋಗ್ಬರ್ತಿ ಹಂಗರೆ’ ಎಂದ.. ಪ್ರತಿ ಪರೀಕ್ಷೆಗೆ ಹೋಗುವಾಗಲೂ ನನಗೆ ‘ಚನಾಗ್ ಮಾಡು.. ಟೆನ್ಷನ್ ಮಾಡ್ಕ್ಯಳಡ..’ ಅಂತೆಲ್ಲ ಹೇಳಿ ಕಳುಹಿಸುತ್ತಿದ್ದವ ಅಪ್ಪ.. ಅಪ್ಪ ಈಗ ಪರೀಕ್ಷೆಗೆ ಹೊರಟ ಪುಟ್ಟ ವಿದ್ಯಾರ್ಥಿಯಂತೆಯೇ ಕಾಣಿಸಿದ.. ‘ಆಲ್ ದಿ ಬೆಸ್ಟ್!’ ಎಂದು ಕೈ ಅದುಮಿದೆ.. ಅಪ್ಪನೊಂದಿಗೆ ಭಾಗವಹಿಸುವ ಮತ್ತಿಬ್ಬರು ಸ್ಪರ್ಧಿಗಳೂ ವೇದಿಕೆಗೆ ಬಂದರು.. ಸಿಟ್ಟಿಂಗ್ ಪೊಸಿಷನ್, ವಾಯ್ಸ್ ಟೆಸ್ಟಿಂಗ್, ಬಜರ್ ಒತ್ತುವುದನ್ನು ಹೇಳಿಕೊಡುವುದು, ಎಲ್ಲಾ ಮುಗಿಯಿತು. ಸೋಮೇಶ್ವರರು ಡ್ರೆಸ್ ಬದಲಿಸಿಕೊಂಡು ಬಂದರು. ಕೆಮೆರಾದವರೆಲ್ಲಾ ತಯಾರಾದ ಮೇಲೆ, ಮೇಲಿದ್ದ ಡೈರೆಕ್ಟರ್ ‘ಸ್ಟಾರ್ಟ್’ ಎಂದಿದ್ದೇ ತಡ,

‘ಸ್ವಾಗತಾ.. ಸುಸ್ವಾಗತಾ.. ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ..!’ ಎಂದು ಸೋಮೇಶ್ವರರು ತಮ್ಮ ಎಂದಿನ ಶೈಲಿಯಲ್ಲಿ ಶುರು ಮಾಡಿಯೇ ಬಿಟ್ಟರು! ಇದೊಂಥರಾ ತೀರಾ ನಾಟಕೀಯವೆನಿಸಿತಾದರೂ ನಾನು ಉತ್ಸಾಹ ತಡೆಯಲಾರದೇ ಖುರ್ಚಿಯಿಂದೊಮ್ಮೆ ಎದ್ದು ಕೂತೆ! ಸ್ಪರ್ಧಿಗಳ ಪರಿಚಯವಾಯಿತು, ಪ್ರಶ್ನೆಗಳು ಒಂದಾದ ನಂತರ ಒಂದು ಬರಲಾರಂಭಿಸಿದವು.. ಮನೆಯಲ್ಲಿ ಟೀವಿ ಮುಂದಿರುವಾಗ ಅಷ್ಟೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತ್ತಿದ್ದ ಅಪ್ಪ ಇಲ್ಲಿ ತಡವರಿಸಲಾರಂಭಿಸಿದ.. ನನಗೆ ಜಯಂತ ಕಾಯ್ಕಿಣಿಯವರ ‘ಟಿಕ್ ಟಿಕ್ ಗೆಳೆಯ’ ಕಥೆ ನೆನಪಾಗುತ್ತಿತ್ತು.. ಎರಡ್ಮೂರು ಪ್ರಶ್ನೆಗಳಿಗೆ ಅಪ್ಪ ತಪ್ಪು ಉತ್ತರ ಕೊಟ್ಟ. ಮಧ್ಯೆ ಒಮ್ಮೆ ಬ್ಯಾಕ್‌ಗ್ರೌಂಡ್ ಲೈಟ್ ಏನೋ ತೊಂದರೆ ಕೊಟ್ಟು ಚಿತ್ರೀಕರಣ ಕಟ್ ಮಾಡಿ ನಿಲ್ಲಿಸಿದರು. ಆಗ ಅಪ್ಪ ದೂರದಲ್ಲಿ ಕತ್ತಲಲ್ಲಿ ಕೂತಿದ್ದ ನನ್ನನ್ನು ನೋಡಿ ಮುಗುಳ್ನಕ್ಕ. ನಾನು ಕೈ ಮಾಡಿದೆ. ಮತ್ತೆ ಕಾರ್ಯಕ್ರಮ ಮುಂದುವರೆಯಿತು. ಕೊನೆಯಲ್ಲಿ ಅಪ್ಪ ಐದು ಪುಸ್ತಕಗಳನ್ನು ಗೆದ್ದುಕೊಂಡು ಕೆಳಗಿಳಿದು ಬಂದ. ‘ಕಂಗ್ರಾಜುಲೇಷನ್ಸ್!’ ಎಂದರೆ, ‘ಎಂಥಾ, ಫುಲ್ ಟೆನ್ಷನ್ ಆಗಿಹೋತು.. ಎಷ್ಟ್ ಸುಲಭದ ಪ್ರಶ್ನೆ ಇತ್ತು.. ಥೋ..!’ ಎಂದು ಅಲವತ್ತುಕೊಳ್ಳುತ್ತಲೇ ಅಪ್ಪ ಸ್ಟುಡಿಯೋದಿಂದ ಹೊರಬಂದ.

ಅಪ್ಪನಿಗೆ ಎಳನೀರು ಕುಡಿಸುತ್ತಾ ಮನೆಗೆ ಫೋನ್ ಮಾಡಿದೆ. ‘ಐದೇ ಪುಸ್ತಕವಾ? ಅಷ್ಟೂ ಪುಸ್ತಕ ತಗಂಬರ್ತಿ ನೋಡು ಅಂತ ಹೇಳಿ ಕೊಚ್ಕ್ಯಂಡ್ ಹೋಯ್ದ ಇಲ್ಲಿಂದ.. ಬರ್ಲಿ ಇರು!’ ಎಂದಳು ಅಮ್ಮ. ನಾನು ನಕ್ಕೆ. ಕಾರ್ಯಕ್ರಮ ಪ್ರಸಾರವಾದ ದಿನ ಮತ್ತೆ ನಮ್ಮ ಮನೆಯಲ್ಲಿ ಊರವರೆಲ್ಲಾ ಸೇರಿದ್ದರಂತೆ. ರಾತ್ರಿ ಫೋನಿಸಿದ ನನ್ನ ಬಳಿ ಅಮ್ಮ ‘ಇಶೀ, ಕಪ್ಪಗ್ ಕಾಣ್ತಿದ್ವಪ.. ಎಂಥೇನ, ಪೌಡರ್ ಆದ್ರೂ ಹಚ್ಕ್ಯಂಡ್ ಹೋಗ್ಲಾಗಿತ್ತು. ನಿಂಗೆ ಹೇಳಕ್ಕಾಗಲ್ಯಾ?’ ಎಂದಳು!

* * *

‘ಅಜ್ಜ ಬಂದ, ಮಗ ಬಂದ, ಇನ್ನು ಮೊಮ್ಮಗ ಬಪ್ದು ಯಾವಾಗ ಟೀವಿಲಿ?’ ಊರವರು ಕೇಳುತ್ತಿದ್ದರು..

ಆವತ್ತು ಆಫೀಸಿನಲ್ಲಿದ್ದೆ. ಸೋಮವಾರದ ಬ್ಯುಸಿ. ಶ್ರೀನಿಧಿ ಫೋನಿಸಿದ: ‘ದೋಸ್ತಾ ಆಫೀಸಲ್ಲಿದ್ಯಾ? ನಮ್ ಛಾನೆಲ್ಲಿಗೆ ನಿಂದೊಂದು ಸಣ್ಣ ಸಂದರ್ಶನ ಬೇಕು. ಬರ್ತಿದ್ದಿ ಈಗ ಅಲ್ಲಿಗೆ!’ ಹಹ್! ನನ್ನ ಸಂದರ್ಶನವಾ? ಏನಾಗಿದೆ ಇವನಿಗೆ ಅನ್ನಿಸಿತು. ‘ನಂದಾ? ಯಾಕೆ? ಏನು?’ ಕೇಳಿದೆ. ‘ಏನಿಲ್ಲಾ, ನಮ್ಮ ಛಾನೆಲ್ಲಿನಲ್ಲಿ ಯಾವ ತರಹದ ಕಾರ್ಯಕ್ರಮಗಳನ್ನು ನೀನು ನಿರೀಕ್ಷಿಸ್ತೀಯ ಅಂತ ಐದು ನಿಮಿಷ ಮಾತಾಡು ಸಾಕು’ ಎಂದ. ನಾನು ಟೀವಿಯನ್ನೇ ನೋಡುವವನಲ್ಲ, ಇನ್ನು ಇದು ಹೇಗೆ ಹೇಳಲಿ?! ಆದರೂ ನಿಧಿ ಬಿಡಲಿಲ್ಲ. ಅವನೇ ಏನೇನೋ ಟಿಪ್ಸ್ ಕೊಟ್ಟ. ‘ಸರಿ ಮಾರಾಯ’ ಅಂತ ಒಪ್ಪಿಕೊಂಡೆ. ಈ ಸಲ ನನ್ನ ಕಲೀಗುಗಳು ‘ಆಲ್ ದಿ ಬೆಸ್ಟ್’ ಹೇಳಿದರು. ಆಫೀಸಿನ ಪಕ್ಕದ ಪಾರ್ಕಿನ ಎದುರು ನನ್ನನ್ನು ನಿಲ್ಲಿಸಿ ‘ಹೂಂ, ಮಾತಾಡು!’ ಎಂದ ನಿಧಿ; ನಾನು ಬೆವರತೊಡಗಿದೆ.

ಅದು ಪ್ರಸಾರವಾದ ದಿನ ನಮ್ಮೂರಿನಲ್ಲಿ ಕರೆಂಟ್ ಇರಲಿಲ್ಲ. ಅಪ್ಪ ಬೇರೆ ಊರಿನ ಆ ಛಾನೆಲ್ ಬರುವ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದ. ನಾನು ಆಗ ಆಫೀಸಿನಲ್ಲಿದ್ದೆ, ಹಾಗಾಗಿ ನೋಡಲು ಆಗಲಿಲ್ಲ. ನನ್ನ ಹೆಸರಿನ ಕೆಳಗೆ ‘ಉದಯೋನ್ಮುಖ ಸಾಹಿತಿ’ ಅಂತೇನೋ ತೋರಿಸಿದ್ದರಂತೆ. ನನಗೆ ಮೈ ಉರಿದುಹೋಗಿ ನಿಧಿ ಸಿಕ್ಕಾಗ ಕೊಲೆ ಮಾಡಬೇಕು ಅಂದುಕೊಂಡಿದ್ದೆ. ಕೊನೆಗೆ, ‘ಪಾಪ, ಎಷ್ಟಂದ್ರೂ ನನ್ ಡಾರ್ಲಿಂಗ್ ಅಲ್ವಾ?’ ಅಂತ ಬಿಟ್ಟುಬಿಟ್ಟೆ. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ, ಈಗ ದಿನಕ್ಕೊಮ್ಮೆ ಅವನು ಫೋನ್ ಮಾಡಿ ‘ಏನಾದ್ರೂ ಬರೆಯೋ..’ ಎಂದು ಕಾಟ ಕೊಡುವಾಗ ಅನ್ನಿಸುತ್ತಿದೆ. ;)