Tuesday, May 28, 2019
ಒದ್ದೆ ಆಸೆಗಳು
ಯಾಕೆ ಇತ್ತೀಚಿಗೆ ಕವಿತೆ ಬರೆದಿಲ್ಲ
ಅಂತ್ಯಾರೋ ಕೇಳಿದರು
ಅವರೋ ಭಯಂಕರ ಕಾವ್ಯಾಸಕ್ತರು
ಅಯ್ಯೋ ನನ್ನ ಕವಿತೆ ಯಾರಿಗೆ ಬೇಕು ಬಿಡಿ
ಗೆಳೆಯರೆಲ್ಲ ದೇಶ ಚುನಾವಣೆ ರಾಜಕೀಯ
ಪಕ್ಷ ಭವಿಷ್ಯ ಸೋಲು ಗೆಲುವುಗಳ ಬಗ್ಗೆ
ಅತಿ ಸೀರಿಯಸ್ಸಾಗಿ ಚರ್ಚಿಸುತ್ತಿರುವಾಗ
ನಾನು ಸಿಲ್ಲಿಯಾಗಿ ಕವನ ಬರೆಯುವುದೇ
ಎಂದು ತಪ್ಪಿಸಿಕೊಂಡೆ
ಆದರೆ ಈ ಗಾಳಿಮಳೆಗೆ ಮೇಫ್ಲವರುಗಳೆಲ್ಲ ಉದುರಿ
ಮರಗಳು ಬೋಳಾದುದನ್ನು ಯಾರಾದರೂ ಬರೆಯಬೇಕಲ್ಲ?
ಪುಟ್ಟಪೋರ ನುಣುಪು ಮಣ್ಣಿನಲ್ಲಿನ ಸಣ್ಣ ಕುಣಿಗೆ ಬೆರಳು ಹಾಕಿ
ಬೆದಕಿದಾಗ ಹೊರಬಂದ ಗುಬ್ಬಚ್ಚಿ ಹುಳುವ ನೋಡಿ ಚಕಿತನಾದುದನ್ನು?
ಗಿರಾಕಿಯಿಲ್ಲದ ಹೊತ್ತಲ್ಲಿ ಕಲ್ಲಂಗಡಿ ಹಣ್ಣಿನಂಗಡಿಯವ
ಒಂದು ಸಿಹಿಗೆಂಪು ಹೋಳನು ತಾನೇ ಚಂದ್ರಿಕೆಯೆತ್ತಿ ತಿಂದುದನು?
ಮೈಯೆಲ್ಲ ಒದ್ದೆ ಮಾಡಿಕೊಂಡಿರುವ ಮುದ್ದುಮಗಳು
ಐಸ್‌ಕ್ಯಾಂಡಿಯೊಳಗಿನ ಕಡ್ಡಿಯನ್ನು ಅದರ ಬೀಜ ಎಂದುದನು?
ಹಾಗೂ ಬರೆಯದಿದ್ದರೆ ಏನಾಗುವುದು ಮಹಾ?
ಮತ್ತೊಂದು ಮೇಗೆ ಮರ ಹೂ ಬಿಡುವುದು
ಅಮ್ಮನ 'ಹೋಂವರ್ಕ್' ಕರೆಗೆ ಹೆದರಿ ಪುಟ್ಟ ಒಳಗೋಡುವನು
ಕಲ್ಲಂಗಡಿಯ ಸೀಸನ್ನು ಮುಗಿದು ಮಾವು ಮೇಳೈಸುವುದು
'ಬೀಜವಲ್ಲ, ಅದು ಕಡ್ಡಿ' ಎಂದು ತಿಳಿಸಿ ಮಗಳ ಮುಗ್ಧತೆ ಕಳೆಯಬಹುದು
ಬರೆಯದಿದ್ದರೆ ಒಂದು ಕಾಗದ ಒಂದಿಷ್ಟು ಇಂಕು
ಇಲ್ಲವೇ ಭೂಮಿಯ ಯಾವುದೋ ಮೂಲೆಯಲ್ಲಿರುವ ಸರ್ವರಿನಲ್ಲಿ
ಒಂದಿಷ್ಟು ಸ್ಪೇಸು ಉಳಿಯಬಹುದು
ಜತೆಗೆ ನಿಮ್ಮ ಟೈಮೂ
ಆದರೂ ಒಂದು ಆಸೆ:
ಬರೆದರೆ-
ನೀವು ಬೀದಿಬದಿಯ ಆ ಮರದತ್ತ ಒಮ್ಮೆ ಕಣ್ಣು ಹಾಯಿಸಬಹುದು
ಪೋರ ತನ್ನ ಗೆಳೆಯರನೂ ಕರೆದು ವಿಸ್ಮಯವ ಹಂಚಬಹುದು
ಮಾವಿನ ಹಣ್ಣು ಕೊಳ್ಳುವಾಗ 'ನೀವು ತಿಂದ್ರಾ?' ಅಂತ
ಅಂಗಡಿಯವನನ್ನು ವಿಚಾರಿಸಬಹುದು
ನನ್ನ ಮಗಳ ನೆನೆದು ನಿಮ್ಮ ಮಗಳ ತಣ್ಣನೆ ಕೆನ್ನೆಗೆ ಮುತ್ತಿಡಬಹುದು
ಕನಿಷ್ಟ, ಸಂಜೆಮಳೆಯಲಿ ಒದ್ದೆಯಾಗಿ ಬರುವ ಇಂತಹ ಆಸೆಗಳನು
ಮತ್ಯಾರೋ ಪೊರೆಯಬಹುದು ಟವೆಲಿನಲ್ಲಿ ತಲೆಯೊರೆಸಿ.
Wednesday, May 15, 2019
ಊರಲ್ಲಿನ ಶುಭಕಾರ್ಯಗಳೂ, ತಪ್ಪಿಸಿಕೊಳ್ಳಲು ಇರುವ ನೆಪಗಳೂ
ಇನ್ನೇನು ಫೆಬ್ರವರಿ-ಮಾರ್ಚ್ ತಿಂಗಳು ಮುಗಿಯಲು ಬಂತು ಎಂದರೆ ಊರಕಡೆ ಮದುವೆ-ಉಪನಯನ ಕಾರ್ಯಕ್ರಮಗಳು ಶುರುವಾದವು ಎಂದರ್ಥ. ನೆಂಟರು, ಊರವರು, ಸ್ನೇಹಿತರು –ಹೀಗೆ ಪಟ್ಟಿಯಲ್ಲಿ ಪೆಂಡಿಂಗ್ ಇದ್ದವರೆಲ್ಲ ಒಬ್ಬೊಬ್ಬರಾಗಿ ‘ಟಿಕ್’ ಆಗುತ್ತಾ ಹೋಗುತ್ತಾರೆ. ಹೈಸ್ಕೂಲಿನಲ್ಲಿ ಬೆಂಚ್‌ಮೇಟು, ಕಾಲೇಜಿಗೆ ಒಂದೇ ಬಸ್ಸಿಗೆ ಬರುತ್ತಿದ್ದ ಪಕ್ಕದೂರಿನ ಗೆಳೆಯ, ಸೀಸನ್ನಿನಲ್ಲಿ ಬುಕ್ಕೆಹಣ್ಣು ಹೆಕ್ಕಲು ಬ್ಯಾಣಕ್ಕೆ ಜೊತೆಯಾಗುತ್ತಿದ್ದ ಓರಗೆಯವ, ಅತ್ತೆಯ ಮಗ, ಹೆಂಡತಿಯ ದೊಡ್ಡಮ್ಮನ ಮಗಳು, ನಮ್ಮ ಮದುವೆಗೆ ಬಂದಿದ್ದ – ನಾವು ಹೋಗಲೇಬೇಕಾದ ನೆಂಟರು... ಹೀಗೆ ನಾವು ತಪ್ಪಿಸಲಾಗದಷ್ಟು ಆಪ್ತರಿಗೆ ಸಂಬಂಧಿಸಿದ ಶುಭಕಾರ್ಯಗಳು ಒಂದರ ಹಿಂದೊಂದು ನಿಶ್ಚಯವಾಗತೊಡಗುತ್ತವೆ. ಉರಿಬೇಸಿಗೆಯ ಈ ದಿನಗಳಲ್ಲಿ ಚಪ್ಪರದ ಕೆಳಗೋ ಶಾಮಿಯಾನಾದ ಕೆಳಗೋ ಕಲ್ಯಾಣಮಂಟಪದಲ್ಲೋ ಶೆಖೆಗೆ ಬೆವರುತ್ತಾ, ಗಿಜಿಗಿಜಿಯಲ್ಲಿ ತೊಳಲಾಡುತ್ತಾ, ಹೊಸ ಬಟ್ಟೆ ಧರಿಸಿ ಒಬ್ಬರಿಗೊಬ್ಬರು ಢಿಕ್ಕಿ ಹೊಡೆದುಕೊಳ್ಳುತ್ತಾ, ಉಡುಗೊರೆಯ ಸಾಲಿನಲ್ಲಿ ನಿಂತು ಆಕಳಿಸುತ್ತಾ, ಫೋಟೋಗೆ ಕೃತಕ ಪೋಸು ಕೊಡುತ್ತಾ, ಊಟಕ್ಕೆ ಸರತಿಯಲ್ಲಿ ಕಾಯುತ್ತಾ, ಹಾಕಿಸಿಕೊಂಡ ಐಟೆಮ್ಮುಗಳಲ್ಲಿ ಯಾವುದು ತಿನ್ನುವುದು ಯಾವುದು ಬಿಡುವುದು ತಿಳಿಯದೇ ಒದ್ದಾಡುತ್ತಾ, ಅರ್ಧ ಊಟ ಬಾಳೆಯಲ್ಲೇ ಬಿಟ್ಟು ಕೈ ತೊಳೆದುಕೊಂಡು ಪಾನ್ ಮೆಲ್ಲುತ್ತಾ ವಾಪಸ್ ಮನೆಗೆ ಬರುವುದು.
ಚಿಕ್ಕವರಿದ್ದಾಗ-ಊರಲ್ಲಿರುವಾಗ ಇವೆಲ್ಲ ನಮಗೆ ಖುಷಿ ಕೊಡುವ ಕಾರ್ಯಗಳೇ ಆಗಿದ್ದವು. ಶಾಲೆಯ ರಜೆಗಳು ಆಗಷ್ಟೇ ಶುರುವಾಗಿರುತ್ತಿದ್ದವು. ಅಥವಾ ಶಾಲೆ ಇದ್ದ ದಿನಗಳೇ ಆದರೆ ರಜೆ ಹಾಕಲೊಂದು ನೆಪ ಸಿಗುತ್ತಿತ್ತು. ಹೀಗಾಗಿ ಲಗ್ನ-ಉಪನಯನಗಳ ಆಹ್ವಾನ ಪತ್ರಿಕೆಗಳನ್ನು ನಾವು ಸಂತೋಷದಿಂದಲೇ ಸ್ವಾಗತಿಸುತ್ತಿದ್ದೆವು. ಈ ಸೀಸನ್ನು ಬಂತು ಎಂದರೆ ಸಾಕು, ಮನೆಯ ಟೀಪಾಯಿಯ ಮೇಲೆ ಆಹ್ವಾನ ಪತ್ರಿಕೆಗಳ ಕಟ್ಟೇ ಸಿದ್ದವಾಗುತ್ತಿತ್ತು. ಪ್ರತಿದಿನ ಒಬ್ಬರಲ್ಲಾ ಒಬ್ಬರು ಮದುವೆಗೆ ಕರೆಯಲು ಬರುವವರೇ. ಕೆಲವೊಮ್ಮೆ ಒಂದೇ ದಿನ ಎರಡ್ಮೂರು ಹೋಗಲೇಬೇಕಾದ ಕಾರ್ಯಗಳು ಇರುತ್ತಿದ್ದವು. ಆಗ ಮನೆಯ ಜನರನ್ನು ಹಂಚಲಾಗುತ್ತಿತ್ತು: ಅಜ್ಜಿ-ನಾನು ಇಂತಹ ಕಡೆ, ಅಪ್ಪ ಪಕ್ಕದೂರ ಮದುವೆಗೆ, ಅಮ್ಮ ಮತ್ತೊಂದು ನೆಂಟರ ಮನೆಯಲ್ಲಿನ ಉಪನಯನಕ್ಕೆ.
ಅದರಲ್ಲೂ ಊರಮನೆಯ ಕಾರ್ಯ ಎಂದರಂತೂ ಸಂಭ್ರಮ ತುಸು ಹೆಚ್ಚೇ. ಏಕೆಂದರೆ ನಮ್ಮ ಕಡೆಯ ಹಳ್ಳಿಗಳಲ್ಲಿ ಯಾರ ಮನೆಯಲ್ಲಾದರೂ ಶುಭಕಾರ್ಯ ಎಂದರೆ ಅದು ಬರೀ ಅವರ ಮನೆಯ ಕಾರ್ಯಕ್ರಮ ಅಲ್ಲ; ಇಡೀ ಊರೇ ಸೇರಿ ಮಾಡುವ ಕಾರ್ಯ. ಅಂಗಳ ಹದಮಾಡಿ ಚಪ್ಪರ ಏರಿಸುವುದರಿಂದ ಶುರುಮಾಡಿ, ಮನೆಗೆ ಬಣ್ಣ-ಬೇಗಡೆ ಸಿಂಗಾರ ಮಾಡುವುದಾಗಲಿ, ಮಂಟಪ ನಿರ್ಮಿಸುವುದಾಗಲಿ, ಪಟ್ಟಿಯಲ್ಲಿನ ದಿನಸಿ-ತರಕಾರಿ ತರುವುದಾಗಲಿ, ಅಡುಗೆಗೆ ತರಕಾರಿ ಹೆಚ್ಚುವುದಾಗಲಿ, ವಟುವಿಗೋ ಮದುಮಗನಿಗೋ ಅಲಂಕಾರ ಮಾಡುವುದಾಗಲಿ, ಊಟ ಬಡಿಸುವುದಾಗಲಿ –ಎಲ್ಲದರಲ್ಲೂ ಗ್ರಾಮಸ್ಥರು ಕೈ ಜೋಡಿಸುವರು. ಕಾರ್ಯಕ್ರಮಕ್ಕೆ ವಾರವಿದೆ ಎಂದಾಗಲೇ ಊರವರು ಆ ಮನೆಗೆ ಪದೇಪದೇ ಭೇಟಿಯಿತ್ತು ಸಂಭ್ರಮವನ್ನು ಹೆಚ್ಚಿಸುವರು. ಹೀಗೆ ಭೇಟಿಯಿಡುವಾಗ ದೊಡ್ಡವರ ಜೊತೆ ನಾವು ಚಿಕ್ಕವರೂ ಹೋಗಿ ಹೊಸದಾಗಿ ಹಾಕಿದ ಚಪ್ಪರದಡಿಯಲ್ಲಿ ಕಂಬ-ಕಂಬದಾಟ ಆಡುವುದೋ ಅಥವಾ ಮತ್ಯಾವುದೋ ಕಿತಾಪತಿ ಮಾಡುವುದರ ಜೊತೆ ಶುಭಕಾರ್ಯಕ್ಕೆ ನಮ್ಮ ಸೇವೆ ಸಲ್ಲಿಸುತ್ತಿದ್ದೆವು. ಸಾಮಾನ್ಯವಾಗಿ ನಾಂದಿಯಿಂದ ಮರುವಾರಿ-ಬೀಗರೂಟದವರೆಗೆ ಅವರ ಮನೆಯಲ್ಲೇ ಊರವರೆಲ್ಲರ ಊಟ-ತಿಂಡಿಗಳು. ಮತ್ತು ನಾವು ಹಾಗೆ ಮಾಡುವುದಕ್ಕೆ ಯಾವ ಮುಜುಗರವೂ ಇರುವುತ್ತಿರಲಿಲ್ಲ ಯಾಕೆಂದರೆ ಕರೆ ಮಾಡುವಾಗಲೇ ಯಜಮಾನರು ಹೇಳಿಯಾಗಿರುತ್ತಿತ್ತು: ‘ನಾಕ್ ದಿನ ಮನೇಲಿ ಒಲೆ ಹಚ್ಚೋಹಂಗಿಲ್ಲ ಮತ್ತೆ’ ಅಂತ.
ಆದರೆ ಇವಕ್ಕೆಲ್ಲ ಸಂಚಕಾರ ಬಿದ್ದದ್ದು ನಾನು ಊರು ಬಿಟ್ಟು ನಗರ ಸೇರಿದಮೇಲೆ. ನಗರಗಳಲ್ಲೇ ಹುಟ್ಟಿ-ಬೆಳೆದು ಇಲ್ಲೇ ಬಂಧು-ಬಳಗ ಇರುವವರಿಗೂ, ಓದಿನ ನಿಮಿತ್ತವೋ ಕೆಲಸದ ನಿಮಿತ್ತವೋ ಪರವೂರಿಗೆ ಹೋಗಿ ನೆಲೆಸಿದವರಿಗೂ ಇರುವ ದೊಡ್ಡ ವ್ಯತ್ಯಾಸಗಳಲ್ಲಿ ಇದೂ ಒಂದು. ನಗರದಲ್ಲೇ ಬಂಧು-ಬಳಗ-ಸ್ನೇಹಿತರೆಲ್ಲ ಇರುವುದಾದರೆ ಮದುವೆಯ ದಿನ ಮುಹೂರ್ತದ ಹೊತ್ತಿಗೋ ಊಟದ ಹೊತ್ತಿಗೋ ರಿಸೆಪ್ಷನ್ನಿಗೋ ಹೋಗಿ ಕೈ ಕುಲುಕಿ ಫೋಟೋ ತೆಗೆಸಿಕೊಂಡು ಉಂಡು ಬಂದುಬಿಟ್ಟರೆ ಆಯಿತು. ಆದರೆ ಬೇರು ಮತ್ತೆಲ್ಲೋ ಇರುವ ಸಧ್ಯದ ತಾವು ಮಾತ್ರ ಇಲ್ಲಿರುವ ನಮ್ಮಂಥವರಿಗೆ ಎಲ್ಲದಕ್ಕೂ ಊರಿಗೇ ಓಡಬೇಕು. ಹಾಗೆ ಹೋಗುವುದಾದರೂ ಸುಲಭವೇ? ಕಾರ್ಯಕ್ರಮದ ಬಗೆಗಿನ ಮಾಹಿತಿ ನಮಗೆ ತಿಂಗಳುಗಟ್ಟಲೆ ಮೊದಲೇ ತಲುಪಿರಬೇಕು, ನಾವು ರಜೆ ಹೊಂದಿಸಿಕೊಂಡು, ಬಸ್ಸಿಗೋ-ಟ್ರೇನಿಗೋ ಟಿಕೆಟ್ ಕಾಯ್ದಿರಿಸಿಕೊಂಡು, ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಆ ಕಾರ್ಯಕ್ರಮಕ್ಕೆ ಹೋಗಬೇಕು. ಮತ್ತು ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪೆಟ್ಟಿಗೆ ಕಟ್ಟಿಕೊಂಡು ವಾಪಸು ಓಡಿಬಂದು ಇಲ್ಲಿಯ ಕೆಲಸದ ನೊಗಕ್ಕೆ ಹೆಗಲು ಕೊಡಬೇಕು.
ಸಿಂಗಲ್ ಆಗಿದ್ದಾಗ ಹೇಗೋ ನಿಭಾಯಿಸಲ್ಪಡುತ್ತಿದ್ದ ಈ ಸಂಕಷ್ಟ ಮದುವೆಯಾದಮೇಲೆ ಜಾಸ್ತಿಯಾಯಿತು. ಏಕೆಂದರೆ ಮದುವೆಯ ತರುವಾಯ ನನ್ನ ಊರು-ಸ್ನೇಹ-ಬಂಧು-ಬಳಗದ ಜೊತೆ ಅವಳ ಊರು-ಸ್ನೇಹ-ಬಂಧು-ಬಳಗದವರೂ ಸೇರಿಕೊಂಡರು. ದಿನಾ ಒಂದೊಂದು ಮದುವೆ-ಕಾರ್ಯದ ಬಗ್ಗೆ ಕರೆಗಳು: “ಹೋಯ್, ಏಪ್ರಿಲ್ 22ಕ್ಕೆ. ನೀವು ಹೊರಗಡೆ ಇರೋವ್ರಿಗೆಲ್ಲಾ ಬರೋಕೆ ಅನುಕೂಲ ಆಗ್ಲಿ ಅಂತ ಭಾನುವಾರ ಇಡಿಸಿದೀವಿ ಮದುವೇನ. ತಪ್ಸೋಹಂಗೇ ಇಲ್ಲ” ಅಂತ ಎಚ್ಚರಿಸುವರು. ಇನ್ನು ಕೆಲವರು “ನಿಮ್ಮ ಮದುವೆಗೆ ನಮ್ಮನೆಯವರು ಎಲ್ಲರೂ ಬಂದಿದ್ವಿ ಗೊತ್ತಲ್ಲಾ? ಈಗ ನಮ್ ಮದುವೆಗೂ ಬರ್ಲೇಬೇಕು” ಅಂತ ನೆನಪಿಸಿ, ಇದೂ ಒಂದು ಕೊಡು-ಕೊಳ್ಳುವ ವ್ಯವಹಾರವೇನೋ ಎನಿಸುವಂತೆ ಮಾಡುವರು. ಇವುಗಳಲ್ಲಿ ಭಾನುವಾರ-ರಜಾದಿನಗಳಂದು ಇರುವ ಶುಭಕಾರ್ಯಗಳನ್ನು ಹೇಗೋ ನಿಭಾಯಿಸಿಬಿಡಬಹುದು. ಅಥವಾ ಸೋಮವಾರವೋ ಶುಕ್ರವಾರವೋ ಇದ್ದರೂ ಒಂದು ದಿನ ರಜೆ ಹಾಕಿ ‘ಶನಿವಾರ-ಭಾನುವಾರ ಹೆಂಗಿದ್ರೂ ರಜೆ ಇದೆ, ಊರಿಗೆ ಹೋದಂಗೂ ಆಯ್ತು ಬಿಡು’ ಅಂತ ಹೊರಟುಬಿಡಬಹುದು. ಆದರೆ ವಾರದ ಮಧ್ಯದಲ್ಲಿ –ಬುಧವಾರ /ಗುರುವಾರ- ಇರುವ ಕಾರ್ಯಗಳಿಗೆ ಹೋಗುವುದಿದೆಯಲ್ಲಾ, ಅದು ಕಡುಕಷ್ಟ. ಒಂದೋ ಎರಡ್ಮೂರು ದಿನ ರಜೆ ಹಾಕಬೇಕು ಅಥವಾ ಒಂದೇ ದಿನದ ಮಟ್ಟಿಗೆ ಈ ತುದಿಯಿಂದ ಆ ತುದಿಗೆ ರಾತ್ರಿಯೆಲ್ಲ ಪಯಣಿಸಿ ಸುಸ್ತಾಗಬೇಕು. ಹಾಗಂತ ಹೊರಗಡೆ ಇರುವ ನಮಗಾಗಿ ಅವರು ಮುಹೂರ್ತ ಬದಲಿಸಲು ಆಗುವುದೇ? ಅವರಾದರೂ ಗತ್ಯಂತರವಿಲ್ಲದೇ ಪುರೋಹಿತರು ನಿಶ್ಚಯಿಸಿದ ದಿನಕ್ಕೆ ಮೊರೆಹೋದವರು.
ಹೇಗೆ ಹೊಂದಿಸಿಕೊಂಡರೂ ಕೆಲವೊಂದು ಶುಭಕಾರ್ಯಗಳಿಗೆ ಹೋಗಲಾಗುವುದೇ ಇಲ್ಲ. ಆಗ ಸುಳ್ಳಿನ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ‘ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿಸು’ ಎಂಬುದು ಹಳೆಯ ಗಾಧೆ; ‘ಮದುವೆಗೆ ಹೋಗಲಾಗದಿದ್ದುದಕೆ ನೂರು ಸುಳ್ಳಾದರೂ ಹೇಳಿ ತಪ್ಪಿಸಿಕೋ’ ಎಂಬುದು ಹೊಸ ಗಾಧೆ. “ಆಫೀಸಲ್ಲಿ ಸಿಕ್ಕಾಪಟ್ಟೆ ಕೆಲಸ ಮಾರಾಯಾ.. ರಜೆ ಕೇಳಿದ್ರೆ ಕೊಡೋದೇ ಇಲ್ಲ ಅಂದ್ರು” ಅಂತಲೋ, “ಬಸ್ಸು-ಟ್ರೇನು ಎಲ್ಲಾದ್ರಲ್ಲೂ ನೋಡಿದೆ ಕಣೋ, ಒಂದೇ ಒಂದು ಸೀಟು ಖಾಲಿ ಇಲ್ಲ” ಅಂತಲೋ, “ಇಯರೆಂಡ್ ಅಲ್ಲದೇ ಹೋಗಿದ್ರೆ ನಿನ್ ಮದುವೆಗೆ ಬರದೇ ಇರ್ತಿದ್ನಾ? ಪ್ರಾಜೆಕ್ಟ್ ಕಂಪ್ಲೀಟ್ ಮಾಡ್ಲೇಬೇಕು, ಅನಿವಾರ್ಯ” ಅಂತಲೋ, “ನಾಲ್ಕು ದಿನದಿಂದ ಹೊಟ್ಟೆನೋವು. ಡಾಕ್ಟರು ಟ್ರಾವೆಲ್ ಮಾಡ್ಬೇಡಿ, ರೆಸ್ಟ್ ಮಾಡಿ ಅಂತ ಹೇಳಿದಾರೆ” ಅಂತಲೋ ಬಾಯಿಗೆ ಬಂದ ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಕು. ಮತ್ತು ಇಲ್ಲಿ ಸತ್ಯಕ್ಕೂ ಸುಳ್ಳಿಗೂ ಹೆಚ್ಚಿಗೆ ವ್ಯತ್ಯಾಸವಿಲ್ಲ: ಏಕೆಂದರೆ ನಾವು ಸತ್ಯವನ್ನೇ ಹೇಳಿದರೂ ಆ ಕಡೆಯವರು ನಾವು ಸುಳ್ಳು ಹೇಳುತ್ತಿದ್ದೇವೆ ಅಂತಲೇ ಅಂದುಕೊಳ್ಳುತ್ತಾರೆ!
ಮದುವೆಯಾದಮೇಲೆ ಹೋಗಬೇಕಾದ ಶುಭಕಾರ್ಯಗಳ ಪಟ್ಟಿ ದೊಡ್ಡದಾದರೂ ಕೊಡಲು ನೆಪಗಳೂ ಜಾಸ್ತಿ ಸಿಗತೊಡಗಿದವು. “ಇವ್ಳಿಗೆ ‘ರಜದ ದಿನಗಳು’ ಮಾರಾಯಾ.. ದೇವಸ್ಥಾನದಲ್ಲಿ ಇಟ್ಕೊಂಡಿದೀರ ಕಾರ್ಯಕ್ರಮ, ಹೆಂಗೆ ಬರಕ್ಕಾಗತ್ತೆ?” ಎಂದರೆ ಎಂತವರಾದರೂ ‘ಛೇಛೇ’ ಅಂತ ತಲೆದೂಗುವರು. ಅಲ್ಲದೇ ನನ್ನ ಹೆಂಡತಿಯೂ ಕೆಲಸಕ್ಕೆ ಹೋಗುವವಳಾದ್ದರಿಂದ, “ನನಗೆ ಆಫೀಸಲ್ಲಿ ರಜೆ ಕೊಟ್ರು, ಆದ್ರೆ ಇವ್ಳಿಗೆ ಸಿಗ್ಲೇ ಇಲ್ಲ. ಇವಳನ್ನ ಒಬ್ಬಳನ್ನೇ ಮನೇಲಿ ಬಿಟ್ಟು ಬರಕ್ಕೆ ಆಗಲ್ಲ ನೋಡು, ಅದಕ್ಕಾಗಿ ಇದೊಂದ್ಸಲ ಎಕ್ಸ್‌ಕ್ಯೂಸ್ ಕೊಡಿ” ಅಂತ ಹೇಳಿ ತಪ್ಪಿಸಿಕೊಳ್ಳಬಹುದು.
ಮಗಳು ಹುಟ್ಟಿದಮೇಲೆ ಶುಭಕಾರ್ಯಗಳನ್ನು ತಪ್ಪಿಸಿಕೊಳ್ಳಲು ಇನ್ನಷ್ಟು ನೆಪಗಳು ಸಿಕ್ಕವು. “ನಾನು-ಹೆಂಡತಿ ಇಬ್ರೂ ಆಫೀಸಿಗೆ ರಜೆ ಹಾಕಿದ್ವಿ. ಆದರೆ ಮಗಳಿಗೆ ಹುಷಾರಿಲ್ಲ. ಅಷ್ಟು ದೂರ ಪ್ರಯಾಣ ಮಾಡೋದು ಕಷ್ಟ” ಎಂದರೆ, “ಹೌದು ಹೌದು, ಸಣ್ಣ ಮಕ್ಕಳನ್ನ ಕರ್ಕೊಂಡು ಈ ಬೇಸಿಗೆಯಲ್ಲಿ ಓಡಾಡೋದು ಸುಲಭ ಅಲ್ಲ” ಅಂತ ಅವರೂ ಒಪ್ಪಿಕೊಳ್ಳುವರು. ಅದು ಸತ್ಯವೂ ಆಗಿತ್ತು. ಏಕೆಂದರೆ ಈ ಸೀಸನ್ನಿನಲ್ಲಿ ತಿಂಗಳಿಗೆ ನಾಲ್ಕರಂತೆ ಇರುವ ಮದುವೆಗಳಿಗೆ ನಾವು ಪ್ರತಿವಾರ ಇಲ್ಲಿಂದ ಮಗುವನ್ನು ಕರೆದುಕೊಂಡು ಹೋಗುವುದು ಬಹಳ ದುಸ್ತರದ ಸಾಹಸ. ಮಗುವಿಗೆ ಹಿಂಸೆ ಕೊಡುತ್ತಿದ್ದೀವೇನೋ ಅನ್ನಿಸುವುದು. ಅಲ್ಲದೇ ಹಾಗೆ ವಾರಕ್ಕೊಮ್ಮೆ ನೀರು-ಹವಾಮಾನ ಬದಲಾಗುತ್ತಿದ್ದರೆ ಮಗು ಖಾಯಿಲೆ ಬೀಳುವ ಸಂದರ್ಭ ಸಹ ಜಾಸ್ತಿ. ಹೀಗಾಗಿ ಮಗುವಿನ ಕಾರಣವೊಡ್ಡಿ ನಾವು ಬರಲಾಗುವುದಿಲ್ಲವೆಂದರೆ ಯಾರೂ ಅಷ್ಟಾಗಿ ಆಕ್ಷೇಪಿಸುವುದಿಲ್ಲ. ಇನ್ನು ಬಹುಶಃ ಮಗಳು ಶಾಲೆಗೆ ಹೋಗಲು ಶುರುಮಾಡಿದರೆ, ‘ಮಗಳಿಗೆ ಸ್ಕೂಲ್ ಇರೋದ್ರಿಂದ ಬರಕ್ಕಾಗಲ್ಲ’ ಎನ್ನುವ ಕಾರಣವೂ ನೆಪಗಳ ಪಟ್ಟಿಗೆ ಸೇರ್ಪಡೆಯಾಗುವುದು. ಆಗ ಶುಭಕಾರ್ಯಗಳಿಗೆ ಹೋಗಬೇಕೆಂದರೆ ಎಷ್ಟು ಕಷ್ಟ ನೋಡಿ: ನನ್ನ ಆಫೀಸಿನ ರಜೆ, ಹೆಂಡತಿಯ ಆಫೀಸಿನ ರಜೆ, ಹೆಂಡತಿಯ ತಿಂಗಳ ರಜೆ, ಮಗಳ ಶಾಲೆಯ ರಜೆ –ಹೀಗೆ ನಾವು ಹೊಂದಿಸಿಕೊಳ್ಳಲು ಸಾಕಷ್ಟು ಸಂಗತಿಗಳು, ಕೊಡಲು ಅವುಗಳಲ್ಲೇ ನೆಪಗಳೂ ವಿಫುಲವಾಗಿ ದೊರೆಯುತ್ತದೆ.
ಹಾಗಂತ ನಮಗೆ ನೆಂಟರಿಷ್ಟರ ಮದುವೆ-ಮುಂಜಿಗಳಿಗೆ ಹೋಗುವುದು ಇಷ್ಟವಿಲ್ಲವೆಂದಲ್ಲ. ಈ ನೆಪದಲ್ಲಿ ಅಪ್ಪ-ಅಮ್ಮರನ್ನು ನೋಡಬಹುದು, ಹಳೆಯ ಗೆಳೆಯರು ಸಿಗುವರು, ನೆಂಟರೆಲ್ಲ ಒಟ್ಟಿಗೇ ಸಿಗುವರು, ಒಳ್ಳೆಯ ಊಟ, ಸಂಭ್ರಮ, ನಗರದ ಝಂಜಡಗಳಿಂದ ಒಂದೆರಡು ದಿನ ಮುಕ್ತಿ... ಎಲ್ಲಾ ಸರಿ. ಆದರೆ ಈ ಕಾರ್ಯಗಳಿಗೆ ನಾವು ಇಲ್ಲಿಂದ ಬಿಡುವು ಮಾಡಿಕೊಂಡು ಹೋಗಿ-ಬರುವುದೇ ದೊಡ್ಡ ಸಾಹಸ. ಬಾಸ್ ಬಳಿ ರಜೆ ಕೇಳಿ ಪಡೆಯುವುದು, ಹೋಗುವ-ಬರುವ ಟಿಕೆಟ್ ಬುಕ್ ಮಾಡಿಕೊಳ್ಳುವುದು, ಕಾರಿನಲ್ಲಾದರೆ ಅಷ್ಟು ದೂರ ಡ್ರೈವ್ ಮಾಡುವುದು, ಸಾವಿರಾರು ರೂಪಾಯಿ ಖರ್ಚು ಮಾಡುವುದು ಹಾಗೂ ಅಲ್ಲಿ ಅಷ್ಟೆಲ್ಲ ಸಂಭ್ರಮ ಪಟ್ಟುಕೊಂಡು ವಾಪಸು ಬಂದು ಇಲ್ಲಿ ಮತ್ತೆ ಅದೇ ಕೆಲಸಕ್ಕೆ ಓಡುವುದು –ಇವೆಲ್ಲಾ ಭಯಂಕರ ಪ್ರಯಾಸದ ಸಂಗತಿಗಳಾಗಿ ಕಾಣುತ್ತವೆ. ಪದೇಪದೇ ರಜೆ ಕೇಳಿದ್ದಕ್ಕೆ ಬಾಸ್ ಬೈದರು: “ಮೊನ್ನೆಯಷ್ಟೇ ದೊಡ್ಡಮ್ಮನ ಮನೇಲಿ ಮದುವೆ ಅಂತ ಹೇಳ್ದೆ, ಈಗ ಮತ್ತೆ ಅದನ್ನೇ ಹೇಳ್ತಿದೀಯಲ್ಲಯ್ಯಾ?” ಅಂತ. “ನನಗೆ ಮೂವರು ದೊಡ್ಡಮ್ಮಂದಿರು ಇದಾರೆ ಸಾರ್” ಅಂತ ಹೇಳಿ ತಪ್ಪಿಸಿಕೊಂಡೆ. ಇತ್ತೀಚಿಗೆ ಮದುವೆಗೆ ಕರೆಯಲು ಬಂದ ಗೆಳೆಯನಿಗೆ ಹೇಳಿದೆ: “ನೀವು ಹುಡುಗ-ಹುಡುಗಿ ಇಬ್ರೂ ಬೆಂಗಳೂರಲ್ಲೇ ಇರೋದು. ಇಲ್ಲೇ ಮದುವೆ ಇಟ್ಕೋಬಹುದಿತ್ತಪ್ಪ” ಅಂತ. ಅದಕ್ಕೆ ಅವನು, “ನೆಂಟರಿಷ್ಟರೆಲ್ಲ ಊರಲ್ಲೇ ಇರೋದಲ್ವಾ ಮಾರಾಯಾ.. ಅಲ್ದೇ ಇಲ್ಲಿ ಛತ್ರಕ್ಕೆ ಕೊಡುವ ಬಾಡಿಗೆಯ ಹಣದಲ್ಲಿ ಊರಲ್ಲಿ ಮದುವೆಯೇ ಆಗುತ್ತೆ. ನೋಡು, ನೀನು ಸ್ಪಾನ್ಸರ್ ಮಾಡೋಹಂಗಿದ್ರೆ ಇಲ್ಲೊಂದು ರಿಸೆಪ್ಷನ್ ಇಟ್ಕೋತೀನಿ” ಅಂದು ನಕ್ಕ. ಇವನಿಗೆ ಸ್ಪಾನ್ಸರ್ ಮಾಡಲು ಬೇಕಾಗುವ ಹಣದಲ್ಲಿ ನಾನು ಊರಲ್ಲಿ ನಡೆಯೋ ನಾಲ್ಕು ಮದುವೆಗೆ ಹೋಗಿ ಬರಬಹುದು ಅಂದುಕೊಂಡೆ.
ನನ್ನ ಮದುವೆಯ ಸಂದರ್ಭದಲ್ಲಿ ನನ್ನ ಅತ್ತೆ-ಮಾವಂದಿರ ಆರೇಳು ಮಕ್ಕಳು ಮದುವೆಗೆ ಒಂದು ವಾರ ಮೊದಲೇ ನಮ್ಮ ಮನೆಗೆ ಬಂದು ಮದುವೆಯ ಎಲ್ಲ ಕೆಲಸ-ಕಾರ್ಯಗಳಲ್ಲಿ ನೆರವಾಗಿದ್ದರು. ಅವರಲ್ಲಿ ಹುಡುಗಿಯರೇ ಜಾಸ್ತಿಯಿದ್ದು, ಹೊಸ ಬಟ್ಟೆ ಧರಿಸಿ ಅತ್ತಿತ್ತ ಸರಭರ ಓಡಾಡುತ್ತಾ ಸಂಭ್ರಮ ಹೆಚ್ಚಿಸಿದ್ದರು. ಮದುವೆಯಾದಮೇಲೆ ನಾವು ಅವರನ್ನೆಲ್ಲಾ ಮನಸಾ ಹೊಗಳಿದೆವು: “ನೀವೆಲ್ಲಾ ಮುಂಚೆಯೇ ಬಂದು ಸುಮಾರು ಕೆಲಸ ವಹಿಸ್ಕೊಂಡ್ರಿ.. ಅದು ನಮ್ಗೆ ತುಂಬಾ ಸಹಾಯ ಆಯ್ತು” ಅಂತ. ಅದಕ್ಕೆ ಅವರೆಲ್ಲಾ ಒಕ್ಕೊರಲಿನಿಂದ ಹೇಳಿದ್ದೊಂದೇ: “ಅಯ್ಯೋ ಅದಕ್ಕೇನು, ನಮ್ಮ ಮದುವೆಯಲ್ಲಿ ನೀವೂ ಒಂದು ವಾರ ಮುಂಚೆ ಬಂದು ನಮ್ಮ ಅಪ್ಪ-ಅಮ್ಮಂಗೆ ಹೆಲ್ಪ್ ಮಾಡ್ಕೊಟ್ರೆ ಆಯ್ತು” ಅಂತ. ನಾನು ದಿಗಿಲಿಗೆ ಬಿದ್ದೆ: ಇವರೇನೋ ಎಲ್ಲರೂ ಸೇರಿ ನನ್ನ ಮದುವೆಗೆ ಅಂತ ಒಂದು ವಾರ ಈ ಕಡೆ ಇದ್ದರು. ಈಗ ನಾನು ಇವರೆಲ್ಲರ ಮದುವೆಗೂ ವಾರ ಮೊದಲೇ ಹೋಗಬೇಕು ಅಂತಾದ್ರೆ, ಆರು ಇಂಟೂ ಏಳು = ನಲವತ್ತೆರಡು ದಿನ ರಜೆ ಹಾಕ್ಬೇಕಲ್ಲಾ ಆಫೀಸಿಗೆ! ನನ್ ಗತಿ ಏನು? ನನ್ನ ತಲೆಬಿಸಿ ಅರ್ಥ ಆದವರಂತೆ ಆ ತರಲೆಗಳು, “ಭಾವಯ್ಯಾ, ನೀನು ಈಗಿನಿಂದ್ಲೇ ಮಾನಸಿಕವಾಗಿ ತಯಾರಾಗು” ಅಂತ ಕಿಚಾಯಿಸಿ ನಕ್ಕಿದ್ದರು.
ಈಗ ಆ ಹುಡುಗ-ಹುಡುಗಿಯರ ಮದುವೆಗಳು ಒಂದೊಂದಾಗಿ ಶುರುವಾಗಿವೆ. “ಭಾವಯ್ಯಾ, ನೆನಪಿದೆಯಲ್ಲಾ? ನಿನ್ ಮದುವೆಗೆ ನಾವು ಒಂದು ವಾರ ಮುಂಚೇನೇ ಬಂದಿದ್ವಿ. ನೀವು ನಾಲ್ಕು ದಿನ ಮೊದಲಾದ್ರೂ ಬರ್ಬೇಕು” ಅಂತ ಫೋನ್ ಮಾಡಿ ಎಚ್ಚರಿಸ್ತಿದ್ದಾರೆ. ನನಗೆ ಈಗಲೇ ಯೋಚನೆ ಶುರುವಾಗಿದೆ. ಇವರ ಮದುವೆಗಳಿಗೆ ಹೋಗಲು ತೆಗೆದುಕೊಳ್ಳಬೇಕಾದ ರಜೆಗಳು, ಅದಕ್ಕೆ ಮಾಡಿಕೊಳ್ಳಬೇಕಾದ ತಯಾರಿ, ಉಡುಗೊರೆ ಕೊಡಲು ಕೊಳ್ಳಬೇಕಾದ ವಸ್ತುಗಳು, ನಮಗೆ ಕೊಳ್ಳಬೇಕಾದ ಹೊಸ ಬಟ್ಟೆ, ಜೊತೆಗಿರುವ ಮಗಳಿಗೆ ಬೇಕಾದ ತುರ್ತು ಔಷಧಿಗಳು, ಅಕಸ್ಮಾತ್ ಏನಾದರೂ ತೊಂದರೆಯಾಗಿ ಯಾವುದಾದರೂ ಕಾರ್ಯಕ್ಕೆ ಹೋಗಲಾಗದಿದ್ದರೆ ಅದಕ್ಕೆ ಕೊಡಬಹುದಾದ ನೆಪಗಳು...
“ಎಂಗೇಜ್‌ಮೆಂಟಿಗೆ ಏನೋ ಸುಳ್ಳು ಹೇಳಿ ತಪ್ಪಿಸಿದಹಾಗೆ ಮದುವೆಗೂ ತಪ್ಪಿಸಿದ್ರೆ ಆಮೇಲೆ ನಿನ್ನ ಮಾತೇ ಆಡ್ಸಲ್ಲ ನೋಡು” ಅಂತ ಮೊನ್ನೆ ಗೆಳೆಯನೊಬ್ಬ ಆಹ್ವಾನ ಪತ್ರಿಕೆಯೊಂದಿಗೆ ಬೆದರಿಕೆಯನ್ನೂ ಇಟ್ಟು ಹೋಗಿದ್ದಾನೆ. ಆದರೆ ಅವನ ಮದುವೆಯ ದಿನವೇ ನನ್ನ ಅತಿ ಹತ್ತಿರದ ನೆಂಟರು ಕಟ್ಟಿಸಿರುವ ಹೊಸ ಮನೆಯ ಪ್ರವೇಶ ಕಾರ್ಯವೂ ನಿಶ್ಚಯವಾಗಿದೆ. ಈಗ ಯಾರಾದರೂ ಒಬ್ಬರಿಗೆ ನೆಪ ಹೇಳಲೇಬೇಕು. ಏನು ಹೇಳುವುದಪ್ಪಾ ಅಂತ ತಲೆ ಕೆರೆದುಕೊಂಡು ಕುಳಿತಿದ್ದಾಗಲೇ ಹೆಂಡತಿ ಕರೆದು, “ರೀ, ನನ್ನ ಅತ್ತಿಗೆ ಫೋನ್ ಮಾಡಿದ್ರು. ಅವರ ಮಗನ ಚೌಲವೂ ಮೂವತ್ತನೇ ತಾರೀಖೇ ಅಂತೆ. ಏನ್ ಮಾಡೋದು ಈಗ?” ಅಂದಳು. “ಒಂದೇ ದಿನ ಮೂರ್ಮೂರ್ ಕಡೆ ಹ್ಯಾಗೇ ಮ್ಯಾನೇಜ್ ಮಾಡೋದು? ಕನಿಷ್ಟ ಈ ಶುಭಕಾರ್ಯಗಳ ಸೀಸನ್ನಲ್ಲಾದ್ರೂ ನಮಗೆ ಅವತಾರಗಳನ್ನು ಎತ್ತಲು ಬರೋ ಹಾಗಿರ್ಬೇಕಿತ್ತು ನೋಡು. ಒಂದೊಂದು ಅವತಾರವನ್ನ ಒಂದೊಂದು ದಿಕ್ಕಿಗೆ ಕಳಿಸಿ ಎಲ್ಲಾ ಕಡೆ ಉಂಡು ಬರಬಹುದಿತ್ತು” ಎಂದೆ. ನನ್ನ ಸಿಲ್ಲಿ ಜೋಕಿಗೆ ನಗುವ ಗೋಜಿಗೆ ಹೋಗದೇ ಅವಳು ಅತ್ತಿಗೆ ಮಗನ ಚೌಲಕ್ಕೆ ಹೊಸ ಸೀರೆ ಆರ್ಡರ್ ಮಾಡಲು ಮೊಬೈಲ್ ಕೈಗೆತ್ತಿಕೊಂಡಳು. ಕಾರ್ಡ್ ನಂಬರ್ ಕೊಡಲು ನಾನು ಪೆಚ್ಚುಮೋರೆಯೊಂದಿಗೆ ತಯಾರಾದೆ.
[ತರಂಗ ಯುಗಾದಿ ವಿಶೇಷಾಂಕ - 2019ರಲ್ಲಿ ಪ್ರಕಟಿತ]

Subscribe to:
Posts (Atom)