ಬೆಂಗಳೂರಿನಲ್ಲಿ ದಿನವೂ ಮಳೆಯಾಗುತ್ತಿದೆ. ಪುಟ್ಟೇನಹಳ್ಳಿಯ ನಿವಾಸಿಗಳು ಮನೆಯೊಳಗೆ ನಿಂತ ನೀರನ್ನು ಬಕೆಟ್ಟುಗಳಲ್ಲಿ ಮೊಗೆ ಮೊಗೆದು ಹೊರಗೆ ಚೆಲ್ಲುತ್ತಿರುವ ಫೋಟೋ ಪೇಪರಿನಲ್ಲಿದೆ. ಮುಖ್ಯಮಂತ್ರಿಗಳು ಮಳೆಪೀಡಿತ ಪ್ರದೇಶಗಳಿಗೆ ಭೇಟಿಯಿತ್ತು ಫೋಟೋ ತೆಗೆಸಿಕೊಂಡಿದ್ದಾರೆ. ಹಾನಿಗೊಳಗಾದವರಿಗೆ ಪರಿಹಾರ ಘೋಷಿಸಿದ್ದಾರೆ.
ನೀಲಿ ಕಂಗಳ ಚೆಲುವೆ ಐಶ್ವರ್ಯಾ ರೈ ಕೊನೆಗೂ ತನ್ನ ಅಸಂಖ್ಯ ಆರಾಧಕರನ್ನು ನಿರಾಶೆಗೊಳಿಸಿ ಮದುವೆ ಮಾಡಿಕೊಂಡಿದ್ದಾಳೆ. ತಿರುಪತಿಯಲ್ಲಿ ಪತಿ ಅಭಿಶೇಕ್ ಜೊತೆ ಪೂಜೆ ಸಲ್ಲಿಸುತ್ತಿರುವ ಅವಳ ಕೆಂಪು ರೇಶ್ಮೆ ಸೀರೆಯ ಫೋಟೋಗಳಲ್ಲಿ ಏನೋ ಲವಲವಿಕೆ ಇದೆ. ಸಲ್ಲು ಭಾಯ್‍ನನ್ನು ವಿವೇಕ್ ಭಾಯ್ 'ಮುಂಗಾರು ಮಳೆ' ನಾಯಕನ ಶೈಲಿಯಲ್ಲಿ ಸಮಾಧಾನ ಮಾಡುತ್ತಿದ್ದಾನೆ: "ನಿನ್ ಕಷ್ಟ ನಂಗ್ ಅರ್ಥ ಆಗುತ್ತೆ ಭಾಯ್.. ಪ್ರೀತಿ... ನಿಂಗೆ ಐಶ್ವರ್ಯಾ ಅಂದ್ರೆ ತುಂಬಾ ಪ್ರೀತಿ ಅಲ್ಲಾ..? ಹ್ಮ್..! ಪ್ರೀತಿ... ಹೃದಯಾನ ಹಿಂಡುತ್ತೆ...!" ಪ್ರೀತಿಸಿ ಮೋಸ ಮಾಡುವ ಎಲ್ಲ ಹುಡುಗಿಯರ ಪ್ರತಿನಿಧಿಯಂತೆ ಕಾಣಿಸುತ್ತಿದ್ದಾಳೆ ಐಶ್.
ವರ್ಲ್ಡ್‍ಕಪ್ ಫೈನಲ್‍ಗೆ ಹಸಿರು ಮೈದಾನ ಸಜ್ಜಾಗುತ್ತಿದೆ. ಹಳದಿ ಬಣ್ಣದ ಅಂಗಿಗಳು - ನೀಲಿ ಬಣ್ಣದ ಅಂಗಿಗಳು ಮೈದಾನಕ್ಕಿಳಿಯಲು ತಾಲೀಮು ನಡೆಸುತ್ತಿವೆ. "ಯಾರಿಗೆ ಹೋಗಬಹುದು ಕಪ್ಪು?" "ಈ ವರ್ಷವೂ ಆಸ್ಟ್ರೇಲಿಯಾಕ್ಕೇ ಬಿಡು" "ಏ.. ಛಾನ್ಸೇ ಇಲ್ಲ.. ಈ ಸಲ ಶ್ರೀಲಂಕಾಕ್ಕೆ ಹೋಗುತ್ತೆ ನೋಡ್ತಿರು.."
ಜೆಸಿಬಿ ಯಂತ್ರಗಳು ಮಣ್ಣನ್ನು ಎತ್ತಿ ಎತ್ತಿ ಹಾಕುತ್ತಿವೆ... ಟೀವಿ ಛಾನೆಲ್‍ಗಳು ಈ 'ಕಾರ್ಯಕ್ರಮ'ವನ್ನು ಲೈವ್ ತೋರಿಸುತ್ತಿವೆ. ಜನ ವರ್ಲ್ಡ್‍ಕಪ್ ನೋಡುವುದನ್ನು ಬಿಟ್ಟು ಇದನ್ನೇ ನೋಡುತ್ತಿದ್ದಾರೆ. "ಏ, ಅದೇನ್ ಕ್ರಿಕೆಟ್ ನೋಡ್ತೀಯಾ? ಇಲ್ಲಿ ನೋಡು.. ಒಳ್ಳೇ ಸಸ್ಪೆನ್ಸ್ ಶೋ! ಲಾಸ್ಟಿಗೆ ಏನಾಗೊತ್ತೆ ಅಂತ ಯಾರಿಗೂ ಗೊತ್ತಿಲ್ಲ..!" "ಇನ್ನೂ ಇರಬಹುದಾ ಉಸಿರು..?" "ಇದ್ದರೂ ಇರಬಹುದು.." "ಓ ದೇವರೇ..! ಬಾಲಕ ಬದುಕಿ ಹೊರಬರಲಿ.."
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ವಿಶ್ವ ಗೋ ಸಮ್ಮೇಳನ ನಡೆಯುತ್ತಿದೆ. ಕಳೆದ ಬಾರಿ ನಾನು ಊರಿಗೆ ಹೋದಾಗಲೇ ಊರ ಜನಗಳ ನಾಲಿಗೆಯ ಮೇಲೆ ಮಠದ ಕಾರ್ಯಕ್ರಮಗಳ ಬಗ್ಗೆ ಮಾತು ತುಯ್ದಾಡುತ್ತಿತ್ತು. ಊರ ಜನಗಳೆಲ್ಲ ಅಕ್ಷತೆ ಬಟ್ಟಲು ಹಿಡಿದು ಸಮ್ಮೇಳನಕ್ಕೆ ಕರೆಯಲು ಹೊರಟಿದ್ದರು. ಮಠಗಳು, ಸ್ವಾಮೀಜಿಗಳು, ದೇವರುಗಳು, ಇತ್ಯಾದಿಗಳ ಬಗೆಗಿನ ನನ್ನ ವಿಚಾರ ಸಂಘರ್ಷಗಳು ಏನೇ ಇರಲಿ. ಆದರೆ ನನಗೆ ಈ ಅಕ್ಷತೆ ಹಂಚುವ ಕಾರ್ಯ ತುಂಬಾ ಇಷ್ಟವಾಯಿತು. ಗುರುಗಳ ಆಜ್ಞೆಯಂತೆ ಗೋ ಸಮ್ಮೇಳನಕ್ಕೆ ಕರೆಯಲು ನಮ್ಮವರು ಪ್ರತಿ ಜಾತಿ, ಪ್ರತಿ ಮತ, ಪ್ರತಿ ಧರ್ಮದವರ ಮನೆಯ ಮೆಟ್ಟಿಲನ್ನೂ ಹತ್ತಿ ಇಳಿಯುತ್ತಿದ್ದಾರೆ. ಹರಿಜನ ಕೆಲಸಗಾರರನ್ನು ಇವತ್ತಿಗೂ ನಮ್ಮೂರುಗಳಲ್ಲಿ ಬ್ರಾಹ್ಮಣರು ಅಸ್ಪೃಶ್ಯರನ್ನಾಗಿ ಕಾಣುತ್ತಾರೆ. ಅವರನ್ನು ಮನೆಯೊಳಗೆ ಬರಗೊಡುವುದಿಲ್ಲ. ಅಕಸ್ಮಾತ್ ಮೈಗೆ ಮೈ ತಗುಲಿದರೆ ಸ್ನಾನ ಮಾಡುವ ಕರ್ಮಟ ಬ್ರಾಹ್ಮಣರೂ ಇದ್ದಾರೆ ನಮ್ಮ ಕಡೆ. ನಮ್ಮ ಮನೆ ಕೊನೆಕಾರ ಬಂಗಾರಿಯ ಮನೆ ಹೇಗಿದೆ ಅಂತಲೇ ನೋಡಿಲ್ಲ ನಾವು. ಅಂಥದರಲ್ಲಿ, ಗೋ ಸಮ್ಮೇಳನ ಎಂಬ ನೆಪದಲ್ಲಾದರೂ ನಮ್ಮ ಜನಗಳು ಅವರುಗಳ ಮನೆಗಳಿಗೆ ಹೋಗಿ ಬರುವಂತಾಯ್ತಲ್ಲ...? ನನಗೆ ಅದೇ ಖುಷಿಯೆನಿಸುತ್ತಿತ್ತು. ಉಳವಿಯ ಮುಸ್ಲಿಮರಿಗೆ ಅರೆಕೆಂಬಣ್ಣದ ಅಕ್ಕಿಕಾಳು ಕೊಟ್ಟು ಗೋಸಮ್ಮೇಳನಕ್ಕೆ ಆಮಂತ್ರಿಸುವ ಪರಿಕಲ್ಪನೆಯೇ ನನಗೆ ತೀರಾ ವಿಸ್ಮಯ ಮತ್ತು ಕುತೂಹಲಕರವಾಗಿ ಕಂಡಿತ್ತು. ಈಗ ಇಪ್ಪತ್ತನಾಲ್ಕು ಗಂಟೆಗಳ ಕೊಳಲ ಮೆಲುನಿನಾದದ ಹಿನ್ನೆಲೆಯಲ್ಲಿ ಗೋ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ವಿಚಿತ್ರ ಖುಷಿ... ಏನೋ ಹುಮ್ಮಸ್ಸು... ನಾನು ಹೋಗಬೇಕು ನಾಳೆ ರಾತ್ರಿ...
ಊಹುಂ, ವಿಷಯ ಇದ್ಯಾವುದೂ ಅಲ್ಲ. ನಿಜವಾದ ಖುಷಿ ಏನೆಂದರೆ, ಇವತ್ತು ನನ್ನ ಬ್ಲಾಗಿನ ಹುಟ್ಟುಹಬ್ಬ! ಎರಡುಸಾವಿರದ ಆರನೇ ಇಸವಿಯ ಏಪ್ರಿಲ್ ಇಪ್ಪತ್ತಾರರ ಒಂದು ಸುಡುಮಧ್ಯಾಹ್ನ ಆಫೀಸಿನಲ್ಲಿ ಕೆಲಸವಿಲ್ಲದ ಸಮಯದಲ್ಲಿ 'ಸುಮ್ನೆ, ಟೈಂಪಾಸಿಗೆ' ಎಂಬಂತೆ ಶುರು ಮಾಡಿದ್ದ ಬ್ಲಾಗ್ ಬರವಣಿಗೆ ಇಲ್ಲಿಯವರೆಗೆ ನಿರಂತರವಾಗಿ ಹರಿದು ಬಂದಿರುವುದು ನನಗಂತೂ ಖುಷಿಯ ವಿಷಯ. ಹಾಗಂತ, ಬ್ಲಾಗ್ ಶುರು ಮಾಡುವ ಮುನ್ನ ಕನಸು ಕಟ್ಟಿರಲಿಲ್ಲ ಎಂದಲ್ಲ. ಆದರೆ ನನಗೆ ನನ್ನ ಮೇಲೇ ಕಾನ್ಫಿಡೆನ್ಸ್ ಇರಲಿಲ್ಲ. 'ನಾನು ಬರೆದದ್ದು ನಾಕು ಜನ ಓದಬಹುದಾದಂಥದ್ದೇ?' ಎನ್ನುವ ಅನುಮಾನ ಇತ್ತು. ಸುಮ್ಮನೆ ಬರೆದು ಮುಚ್ಚಿಟ್ಟಿದ್ದ ಅದೆಷ್ಟೋ ಕವನಗಳನ್ನು ಇಲ್ಲಿ ಹಾಕುವ ಉದ್ದೇಶವಿಟ್ಟುಕೊಂಡಿದ್ದೆ ಅಷ್ಟೆ. ಆದರೆ ಬರೆಯುತ್ತಾ ಹೋದಂತೆ ಎಲ್ಲಾ ಸರಾಗವಾಯಿತು. ಕಾಮೆಂಟುಗಳು, ಮೆಚ್ಚುಗೆಗಳು ಬರುತ್ತಾ ಹೋದಂತೆ ನನಗೂ ಓಘ ಸಿಕ್ಕಿತು. ಇನ್ ಫ್ಯಾಕ್ಟ್, ಶುರು ಮಾಡಿದಾಗ ಈ ಬ್ಲಾಗಿಗೆ 'About Me, About U & About Them!' ಅಂತ ಹೆಸರು ಕೊಟ್ಟಿದ್ದೆ. ಕೊನೆಗೆ, ಬರೆಯುವುದೆಲ್ಲಾ ಕನ್ನಡದಲ್ಲಾದ್ದರಿಂದ ಈ ಇಂಗ್ಲೀಷಿನ ಟೈಟಲ್ಲು ಸರಿಹೊಂದುವುದಿಲ್ಲ ಎಂದೆನಿಸಿ, ನವೆಂಬರ್ ಒಂದರಂದು, 'ಮೌನಗಾಳ' ಅಂತ ಮರುನಾಮಕರಣ ಮಾಡಿದೆ.
ಕೃತಜ್ಞತೆ ಹೇಳಬೇಕು. ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ, ತಿದ್ದಿದವರಿಗೆ, ರೇಗಿದವರಿಗೆ, ಬೈದವರಿಗೆ, ಸಲಹಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್. ಸ್ಪೆಶಲಿ, ಶ್ರೀನಿಧಿ ಮತ್ತು ಸಿಂಧು ಅಕ್ಕರಿಗೆ ಸಲಹೆ-ಸೂಚನೆ ನೀಡಿದ್ದಕ್ಕೆ; ಸಂದೀಪನಿಗೆ 'ಟೆಕ್ನಿಕಲೀ' ಸಹಾಯ ಮಾಡಿದ್ದಕ್ಕೆ; ದಟ್ಸ್‍ಕನ್ನಡ.ಕಾಂ ನಲ್ಲಿ ನನ್ನ ಬ್ಲಾಗ್ ಬಗ್ಗೆ ಪ್ರಕಟಿಸಿದ್ದಕ್ಕೆ; ಇನ್ನೂ ಕೆಲವರಿಗೆ ವಿಷಯ ಒದಗಿಸಿದ್ದಕ್ಕೆ... ಹಾಗೆಲ್ಲಾ ಹೆಸರು ಹೇಳಲು ಹೊರಡುವುದೇ ತಪ್ಪು ಬಿಡಿ, ಎಲ್ಲರಿಗೂ ಥ್ಯಾಂಕ್ಸ್. ಐದು ಸಾವಿರಕ್ಕೂ ಮಿಕ್ಕಿ ಹಿಟ್ಟು ಬಿದ್ದಿವೆ. ಹೀಗಾಗಿ ಹಿಡಿದ ಮೀನನ್ನು ಕರಿಯಲು ಮಸಾಲೆಗೆ ಬೇರೆ ಹಿಟ್ಟು ತರಲು ನಾನು ಹುಡುಕಬೇಕಿಲ್ಲ; ಇದೇ ಸಾಕು. :)
ಒಂದು ವರ್ಷವಾಗಿದೆ. ಗಾಳಕ್ಕೆ ಹತ್ತತ್ತಿರ ಐವತ್ತು ಮೀನುಗಳು ಸಿಕ್ಕಿವೆ. ಕೊಳದಲ್ಲಿ ಇನ್ನೂ ಸಾಕಷ್ಟು ಮೀನುಗಳು ಇರುವ ವರ್ತಮಾನವಿದೆ. ಯಾವಾಗ ಗಾಳಕ್ಕೆ ಸಿಲುಕುತ್ತವೋ ಗೊತ್ತಿಲ್ಲ. ಗಾಳದ ತುದಿಗೆ ಸಿಕ್ಕಿಸಲು ಹುಳಗಳೂ ನಾ ಮುಂದು ತಾ ಮುಂದು ಅಂತ ಕಾಯುತ್ತಿವೆ. ಅತ್ಯುತ್ಸಾಹದಿಂದ ಕೊಳಕ್ಕಿಳಿಯುತ್ತಿವೆ. ಗಾಳಗಾರಿಕೆಗೆ ಜೊತೆಗಾರರಾಗಿ ನೀವಿದ್ದೀರಿ. ಇನ್ನೇನು ಬೇಕು ಹೇಳಿ? ಈ ಸಹಚರ್ಯಕ್ಕೆ, ಪ್ರೀತಿಗೆ ಋಣಿ.
ಗಾಳಗಾರಿಕೆ ಕಂಟಿನ್ಯೂಸ್...!