Tuesday, November 16, 2010

ಕನಸ ಬೇಯಿಸಲು..

ತಳ್ಳುಗಾಡಿಯ ಮೇಲೊಂದು ಸಿಲಾವರದ ಪಾತ್ರೆ-
ಬೇಯಿಸುತ್ತಿದ್ದಾನೆ ಲುಂಗಿಯುಟ್ಟವ ಬಿಸಿನೀರಲ್ಲಿ
ರಾಶಿ ರಾಶಿ ಕಡಲೇಕಾಯಿ ಹಬೆ ಹಬೆ
ಉದ್ದ ಹಿಡಿದರೆ ಎಂಟು; ಜೋತಾಡಿಸಿದರೆ ಗಂಟು
ಒಡೆದರೆ ಎರಡು ಪುಟ್ಟ ಶಿಶುಗಳು ಗರ್ಭದಲ್ಲಿ
ಕೆಲವೊಮ್ಮೆ, ಅದೃಷ್ಟ ಜೋರಿದ್ದರೆ, ಮೂರು.

ಒಂದು ದಿನ, ಯಾರೋ ಹತ್ತಿರ ಬಂದು
ಕೂತುಬಿಡುತ್ತಾರೆ. ಕೈ ಹಿಡಿದು ಕತೆ ಹೇಳುತ್ತಾರೆ.
ಅಪ್ಪ-ಅಮ್ಮ ತುಂಬಾ ಒಳ್ಳೆಯವರು.
ದೊಡ್ಡಪ್ಪ ಚಿಕ್ಕವನಿದ್ದಾಗಲೇ ಮನೆಯಿಂದ ಓಡಿಹೋಗಿದ್ದಂತೆ.
ಅತ್ತೆ ಇದ್ದಾಳಲ್ಲ -ಅದೇ, ಅಪ್ಪನ ತಂಗಿ-
ಅವಳಿಗೆ ಕಿವಿ ಸ್ವಲ್ಪ ಮಂದ
ಆದರೆ ಸನ್ನೆಯಲ್ಲೇ ಎಲ್ಲಾ ಅರ್ಥ ಮಾಡಿಕೊಳ್ಳುತಾಳೆ
ಮಾವನಿಗೆ ಅವಳ ಮೇಲೆ ಯಾವಾಗಲೂ ಸಿಡುಕು
ಗೊತ್ತಾ? ನನ್ನ ತಂಗಿಗೆ ಗಾಜಿನ ಹೂಜಿಯಲ್ಲಿ
ಮೀನು ಸಾಕಬೇಕು ಅಂತ ಆಸೆಯಿತ್ತು

ಇಳಿದು ನೋಡಿದರೆ ಕಣ್ಣಾಳ, ಅದೆಷ್ಟೊಂದು ಕತೆಗಳು
ನಿನ್ನಲ್ಲಿ.. ಇಡಲಾಗದೇ ಈ ಪುರಾಣ, ಇತಿಹಾಸ, ಭೂತ-
ವನ್ನೆಲ್ಲ ಕಟ್ಟಿ ಆಚೆ? ಅಳಿಸಿ ಉಳಿದೆಲ್ಲ ಚಿತ್ರ,
ಬಿಡಲಾಗದೆ ಬರೀ ನಾವಿಬ್ಬರ ಮೌನಭಿತ್ತಿಯಲ್ಲಿ?

ಕಾಯುತ್ತಿದ್ದಾನೆ ತಳ್ಳುಗಾಡಿಯಲ್ಲಿ ಕಡಲೆಕಾಯಿಯವ..
ಒಂದಷ್ಟು ಬೇಯಿಸದ ಕಾಯಿಗಳೂ ಇವೆಯಂತೆ ಅವನ ಬಳಿ
ಕೇಳಿದರೆ, ಪುಟ್ಟ ಪೊಟ್ಟಣದಲ್ಲಿ ಕಟ್ಟಿಕೊಟ್ಟಾನು
ಬಿಡಾರದಲ್ಲಿ ಒಲೆಯಿದೆ; ಸೂರಂಚಿಂದ ಸುರಿವ ಮಳೆಯಿದೆ
ಹೊಸನೀರಿನಲ್ಲಿ ಬೇಯಿಸೋಣ ಕನಸುಗಳನ್ನು.
ಹಾರೈಸೋಣ ಸಾಕು- ಒಡಲ ಹೂರಣ ಕಹಿಯಿರದಿರಲೆಂದು.

Thursday, November 11, 2010

ಪ್ರೊ. ಜಿ.ವಿ. -ಎರಡು ಮಾತು

ಪ್ರಣತಿಯ ಉದ್ಘಾಟನೆ ಮತ್ತು ಚಿತ್ರಚಾಪ ಬಿಡುಗಡೆ: ಹೊಸ ಸಂಸ್ಥೆ, ಮೊದಲ ಪುಸ್ತಕ ಎಂದಾಗ ಎಲ್ಲರಿಗಿರುವ ಭಯವೇ ನಮಗೂ ಇತ್ತು. ನಾವೇನೋ ಹುಮ್ಮಸ್ಸಿನಲ್ಲಿ ಬರಹ, ಕರೆಕ್ಷನ್ಸು, ಕವರ್ ಪೇಜು, ಒಳಪುಟಗಳಿಗೆ ರೇಖಾಚಿತ್ರಗಳು, ಮುದ್ರಣ, ಇನ್ವಿಟೇಶನ್ನು ಅಂತೆಲ್ಲ ತಯಾರಿ ನಡೆಸಿದ್ದೆವು. ಆದರೆ ಪುಸ್ತಕ ಬಿಡುಗಡೆಗೆ ಯಾರನ್ನು ಕರೆಸುವುದು ಎನ್ನುವ ಗೊಂದಲ ಮಾತ್ರ ದೊಡ್ಡದಾಗಿ ಕಾಡ್ತಿತ್ತು. ಹೇಳಿಕೇಳಿ ನಾವೆಲ್ಲ ಬ್ಲಾಗಿಗಳು. ಅಲ್ಲದೆ ಇನ್ನೂ ಹುಡುಗರು. ಎಲ್ಲೋ ಆಗೀಗ ನಮ್ಮ ಲೇಖನಗಳು-ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರಬಹುದು ಅಷ್ಟೇ. ಉಳಿದಂತೆ ಹೊರಜಗತ್ತಿಗೆ ನಾವು ಯಾರು ಅಂತಲೇ ಗೊತ್ತಿಲ್ಲ. ಹಾಗಿದ್ದಾಗ, ಈಗ ಇದ್ದಕ್ಕಿದ್ದಂತೆ ಪುಸ್ತಕ ಮಾಡಿದೀವಿ, ಬನ್ನಿ, ಬಿಡುಗಡೆ ಮಾಡಿ ಅಂತ ಕರೆಯೋದಾದರೂ ಹೇಗೆ? ನಮ್ಮ ಪರಿಚಯ ಮಾಡಿಕೊಳ್ಳೋದು ಹೇಗೆ? -ಅಂತೆಲ್ಲ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದೆವು.

ವಸುಧೇಂದ್ರ, ‘ಹಾಗೆಲ್ಲ ಏನೂ ಇಲ್ಲ ಕಣೋ. ಪುಸ್ತಕ ಬಿಡುಗಡೆ ಅಂದ್ರೆ ಯಾರನ್ನ ಕರೆದ್ರೂ ಬರ್ತಾರೆ. ಬೇಕಿದ್ರೆ ಅನಂತಮೂರ್ತಿಗಳನ್ನ ಕರೀರಿ, ಹೊಸ ಹುಡುಗರ ಬೆನ್ನು ತಟ್ಟಲಿಕ್ಕೆ ಅಂತ ಬರ್ತಾರೆ. ಏನೂ ಮುಜುಗರ ಪಟ್ಕೋಬೇಡಿ. ಅರಾಮಾಗಿ ಹೋಗಿ ಕೇಳಿ’ ಅಂತ ಧೈರ್ಯ ತುಂಬಿದ್ರು. ಆದ್ರೂ ನಮಗೆ ಒಳಗೊಳಗೆ ಪುಕುಪುಕು.

ಕೊನೆಗೆ ಅರುಣ, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಹೆಸರನ್ನ ಸೂಚಿಸಿದ. ‘ಅವರು ತನ್ನ ತಾಯಿಗೆ ಪರಿಚಯ. ಆ ಮೂಲಕ ಪರಿಚಯ ಮಾಡ್ಕೋಬಹುದು ನಮ್ಮನ್ನ. ಏನಾದ್ರಾಗ್ಲಿ, ಹೋಗಿ ಕೇಳೋದು ಕೇಳೋಣ’ ಅಂತ. ಆದ್ರೆ ಜಿ.ವಿ. ಹೆಸರು ಕೇಳಿ ನಮಗೆ ಭಯ ಇನ್ನೂ ಜಾಸ್ತಿ ಆಯ್ತು! ಜಿ.ವಿ. ಅಂದ್ರೆ ನಿಘಂಟು ತಜ್ಞ. ನಾವು ಬರೆದಿರೋದರಲ್ಲಿ ಏನಾದ್ರೂ ತಪ್ಪುಗಳಿದ್ರೆ ಅಲ್ಲೇ ಓದಿ ಸರಿಯಾಗಿ ಬೈದು, ‘ಇಂತಾ ಪುಸ್ತಕ ಮಾಡ್ಲಿಕ್ಕೆ ನಾಚ್ಕೆ ಆಗಲ್ವಾ?’ ಅಂತಂದು ಕಳುಹಿಸಿಬಿಟ್ರೆ? ಆದರೆ ನಮಗೆ ಗತ್ಯಂತರವಿರಲಿಲ್ಲ. ಲೈಮ್‌ಲೈಟಿನಲ್ಲಿರೋ, ಯುವ ಸಾಹಿತಿಗಳನ್ನ ಕೇಳಿ ಇಲ್ಲಾ ಅನ್ನಿಸಿಕೊಳ್ಳೋದಕ್ಕಿಂತ ಇದು ವಾಸಿ ಎನ್ನಿಸಿ, ಜಿ.ವಿ.ಯವರನ್ನೇ ಕರೀಲಿಕ್ಕೆ ಮನಸು ಮಾಡಿದೆವು.

ಮೊದಲು ಅರುಣ ಮತ್ತೆ ವಿಜಯಾ ಜಿ.ವಿ.ಯವರ ಮನೆಗೆ ಫೋನ್ ಮಾಡಿ ಪರಿಚಯ ಹೇಳಿಕೊಂಡು ಒಂದು ದಿನ ಹೋಗಿ ಪುಸ್ತಕದ ಹಸ್ತಪ್ರತಿ ಕೊಟ್ಟುಬಂದ್ರು. “ಏನ್ ಹೇಳಿದ್ರೂರಿ ಜೀವಿ?” ಅಂತ ನಾವೆಲ್ಲ ಒಕ್ಕೊರೊಲಿನಿಂದ ಕೇಳಿದೆವು. “ಏನೂ ಹೇಳ್ಲಿಲ್ಲ ಇನ್ನೂ. ಏನ್ ಮಾಡ್ತಿದೀರಾ ನೀವೆಲ್ಲ ಅಂತ ಕೇಳಿದ್ರು. ಯಾವಾಗಿಂದ ಬರೀತಿದೀರಾ, ಏನು ಓದ್ತೀರಾ, ಯಾರು ನಿಮ್ಮ ಇಷ್ಟದ ಸಾಹಿತಿ ಅಂತೆಲ್ಲ ಕೇಳಿದ್ರು. ನಂಗೆ ಮೊದಲೇ ಟೆನ್ಷನ್ನು, ಅಡಿಗರನ್ನ ಓದ್ತಿರ್ತೀನಿ ಅಂತ ಹೇಳಿದೆ. ಅಡಿಗರ ಕಾವ್ಯದಲ್ಲಿ ಏನು ಇಷ್ಟ ಅಂತ ಕೇಳಿದ್ರು. ಅಯ್ಯೋ, ಅದೆಲ್ಲ ನಂಗೇನ್ ಗೊತ್ತು? ಇಷ್ಟ ಆಗಿದ್ದೆಲ್ಲ ಓದೋವ್ನು ನಾನು! ಏನೋ, ತೋಚಿದ್ದು ಹೇಳಿದೆ ಬೆವರ್ತಾ.. ಆಮೇಲೆ ಅವರೇ ಅಡಿಗರ ಕಾವ್ಯದ ಬಗ್ಗೆ ಸುಮಾರು ಹೊತ್ತು ಮಾತಾಡಿದ್ರು. ನಿಮ್ಮಂತ ಹುಡುಗರು ಓದ್ತಿರೋದು, ಬರೀತಿರೋದು ಖುಶಿ ವಿಷಯ ಅಂತ ಹೇಳಿದ್ರು” ಅಂತ ಹೇಳಿದ ಅರುಣ. “ಹಾಗಾದ್ರೆ ಬರ್ತಾರಂತಾ ಪ್ರೋಗ್ರಾಮಿಗೆ?” ಕೇಳಿದ್ವು. “ಹೂನಪ್ಪಾ. ಖುಶಿಯಿಂದ ಒಪ್ಪಿಕೊಂಡ್ರು” ಅಂತ ಅರುಣ ಹೇಳಿದಾಗ ನಮಗೆಲ್ಲ ನಿರಾಳ.

ಆಮೇಲೊಂದು ದಿನ, ಕಾರ್ಯಕ್ರಮಕ್ಕೆ ಒಂದು ವಾರ ಮುಂಚೆ, ನಾವು ಚಿತ್ರಚಾಪದಲ್ಲಿ ಬರೆದಿದ್ದ ಐದೂ ಗೆಳೆಯರು ವಿಜಯಾ ಜೊತೆ ಜಿ.ವಿ. ಮನೆಗೆ ಹೋದ್ವು. ಎಲ್ಲರಿಗೂ ಭಯ. ಈಗಾಗ್ಲೇ ಜಿ.ವಿ. ನಮ್ಮ ಹಸ್ತಪ್ರತಿ ಓದಿರ್ತಾರೆ. ಏನು ಹೇಳ್ತಾರೋ ಏನೋ ಅಂತ. ಪುಟ್ಟ ಮನೆಯ ಕದ ತೆರೆದ ಬಿಳಿ ವಸ್ತ್ರಧಾರಿ ನಮ್ಮೆಲ್ಲರಿಗಿಂತ ಕುಳ್ಳಗಿದ್ದರು. ಆಹ್ವಾನ ಪತ್ರಿಕೆ ಕೊಟ್ವಿ. “ಪ್ರಣತಿ -ಹೆಸರು ಯಾರು ಇಟ್ಟಿದ್ದು?” ಕೇಳಿದ್ರು ಜಿ.ವಿ. ಇದ್ದುದರಲ್ಲೇ ನಮ್ಮಲ್ಲಿ ವಿಜಯಾ ಧೈರವಂತೆ! ಮಾತಾಡಿದ್ಲು. ಆಮೇಲೆ ಜಿ.ವಿ. ನಮ್ಮೆಲ್ಲರ ಬಗ್ಗೆ ವಿಚಾರಿಸಿದ್ರು. “ಚನಾಗಿದೆ. ಓದಿದೆ ಎಲ್ಲಾನೂ. ಚಿತ್ರಚಾಪ ಅನ್ನೋ ಹೆಸರೂ ಅರ್ಥಪೂರ್ಣವಾಗಿದೆ....” ಅಂತೆಲ್ಲ ಸುಮಾರು ಹೊತ್ತು ಮಾತಾಡಿದ್ರು. ನಮಗೆ ಸ್ವಲ್ಪ ಧೈರ್ಯ ಬಂತು. “ಕಾರ್ಯಕ್ರಮದ ದಿನ ನಮಗೆ ಒಂದಷ್ಟು ಸಲಹೆಗಳನ್ನೂ ಕೊಡಿ ಸರ್.. ನಮ್ಮ ಹಾಗೇ ಸುಮಾರು ಹೊಸ ಬರಹಗಾರರು ಬಂದಿರ್ತಾರೆ ಅಲ್ಲಿ” ಅಂತ ಕೇಳಿಕೊಂಡ್ವು. “ಖಂಡಿತ ಖಂಡಿತ.. ಆದ್ರೆ.. ಕಾರ್ಯಕ್ರಮದ ದಿನ ಏನಾದ್ರೂ ವಾಹನಕ್ಕೆ ವ್ಯವಸ್ಥೆ ಮಾಡ್ಲಿಕ್ಕೆ ಆಗತ್ತಾ? ಕಾಲು ನೋವು. ಅದಿಲ್ಲಾಂದ್ರೆ ನೆಡ್ಕೊಂಡೇ ಬರ್ತಿದ್ದೆ..!” ಅಂತ ಅದೆಷ್ಟು ಸಣ್ಣ ದನಿಯಲ್ಲಿ ಕೇಳಿದ್ರು ಅಂದ್ರೆ, “ಅಯ್ಯೋ ಖಂಡಿತ ಸರ್.. ಕಾರ್ ಕಳುಹಿಸ್ತೀವಿ” ಅಂತ ಎಲ್ಲರೂ ಒಟ್ಟಿಗೇ ಹೇಳಿದೆವು ನಾವು.

ಜಿ.ವಿ. ಕಾರ್ಯಕ್ರಮದ ದಿನ ಹೇಳಿದ ಸಮಯಕ್ಕೆ ಬಂದರು. ಪ್ರಣತಿಯನ್ನ ಉದ್ಘಾಟಿಸಿದರು, ಚಿತ್ರಚಾಪವನ್ನ ಬಿಡುಗಡೆ ಮಾಡಿದ್ರು. ನಂತರ ನಮ್ಮೈವರ ಬರಹಗಳ ಬಗ್ಗೆಯೂ ವಿವರವಾಗಿ ಮಾತಾಡಿದ್ರು. ಕನ್ನಡದ ಬಗ್ಗೆ, ಸಾಹಿತ್ಯದ ಬಗ್ಗೆ, ನಗರದ ಜನಗಳ ಭಾಷೆಯ ಬಗ್ಗೆ ಅವರಾಡಿದ ಮೌಲಿಕ ನುಡಿಗಳಿಗೆ ಪ್ರೇಕ್ಷಕರೆಲ್ಲ ತಲೆದೂಗಿದರು. “ಇಲ್ಲಿಯ ಬರಹಗಳನ್ನ ನಾನು ಒಂದಲ್ಲ, ಎರಡು ಸಲ ಓದಿದೆ. ಇವರೆಲ್ಲರಿಗೂ ಉತ್ತಮ ಭವಿಷ್ಯವಿದೆ” ಎಂದಾಗಲಂತೂ ನಮಗಾದ ಸಂತೋಷ ಅಷ್ಟಿಷ್ಟಲ್ಲ. ವಯಸ್ಸು ನೂರಕ್ಕೆ ಸಮೀಪಿಸುತ್ತಿರುವ ಹಿರಿಯರೊಬ್ಬರ ಈ ಹಾರೈಕೆಗಿಂತ ನಮಗಾದರೂ ಇನ್ನೇನು ಬೇಕಿತ್ತು? ಜಿ.ವಿ. ನಮಗೆಲ್ಲ ಹಸ್ತಾಕ್ಷರ ಕೊಟ್ಟರು, ನಾವು ಫೋಟೋ ಬೇಕೆಂದಲ್ಲೆಲ್ಲ ನಿಂತು ಸಹಕರಿಸಿದರು, ಪುಸ್ತಕ ಬಿಡುಗಡೆಯ ನಂತರವಿದ್ದ ಸಂಗೀತ ಕಾರ್ಯಕ್ರಮ ಮುಗಿಯುವವರೆಗೂ ಕೂತಿದ್ದರು.

ಚಿತ್ರಚಾಪ ಬಿಡುಗಡೆ ಸಂದರ್ಭದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯ
ನಂತರವೂ ಅಷ್ಟೇ. ನಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಯಲು ಹೋದಾಗಲೆಲ್ಲ ಆತ್ಮೀಯವಾಗಿ ಸ್ವಾಗತಿಸುವರು, ಯಾವುದೇ ಹಮ್ಮು-ಬಿಮ್ಮು ತೋರಿಸದೆ ನಮ್ಮೊಂದಿಗೆ ಮಾತಾಡುವರು. ನಾವು ಕೇಳುವ ಕನ್ನಡದ ಕುರಿತಾದ, ವ್ಯಾಕರಣದ ಕುರಿತಾದ, ಶಬ್ದಪ್ರಯೋಗದ ಕುರಿತಾದ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವರು.

ಈ ಹಿರಿಯರಿಗೆ, ಮೇಧಾವಿಗೆ, ನಿರಹಂಕಾರಿಗೆ, ಶಬ್ದಬ್ರಹ್ಮಗೆ ಈಗ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆದಾಗಲೆಲ್ಲ ಇವರಿಗಿಂತ ಸೂಕ್ತರು ಮತ್ಯಾರಿದ್ದರು ಈ ಸ್ಥಾನಕ್ಕೆ ಎಂದೆನಿಸುತ್ತದೆ. ಪ್ರೊ. ಜಿ. ವೆಂಕಟಸುಬ್ಬಯ್ಯರಿಗೆ ನನ್ನ ಮತ್ತು ಪ್ರಣತಿಯ ಅಭಿವಂದನೆ, ನಮಸ್ಕಾರ.

Wednesday, November 03, 2010

ಚಳಿ, ದೀಪಾವಳಿ, ಪಿರೂತಿ, ಬ್ಲಾ ಬ್ಲಾ

‘ಕಿಲಾಡಿ ಮಾಡಿದರೆ ದೂತರು ಬರುತಾರೆ.. ಕಿನ್ನರಾ, ಹುಷಾರು’
‘ಏನ್ ಮಾಡ್ತಾರೆ ಅಮ್ಮಾ ದೂತರು? ಯಾರವರು?’
‘ದೂತರು ಇ‌ಇ‌ಇಷ್ಟು ದಪ್ಪಗಿರ್ತಾರೆ.. ಬಿಳೀ ಗಡ್ಡ.. ದೊಗಲೆ ದೊಗಲೆ ಅಂಗಿ.. ಕಪ್ಪು ಪೈಜಾಮ.. ತಲೆಗೊಂದು ಕೋನ್ ಟೊಪ್ಪಿ..’
‘ಹಾನ್! ಗೊತ್ತಾಯ್ತು.. ದೂತರು ಎಂದರೆ ಕ್ರಿಸ್‌ಮಸ್ ತಾತ ಅಲ್ವಾ ಅಮ್ಮಾ?’
‘ಅಲ್ಲ ಅಲ್ಲ.. ಕ್ರಿಸ್‌ಮಸ್ ತಾತ ಅಲ್ಲ.. ದೂತರ ಮುಖ ಕಪ್ಪ್ಪ್‌ಪಗಿರೊತ್ತೆ.. ಅಲ್ಲಲ್ಲಿ ಗುಳಿ ಬಿದ್ದಿರೊತ್ತೆ.. ಅವರು ಚೂರೂ ನಗೆಯಾಡುವುದಿಲ್ಲ.. ಚೇಷ್ಟೆ ಮಾಡಿದ ಪುಟ್ಟನನ್ನ ಎತ್ಕೊಂಡ್ ಹೋಗೀ...’
‘ಹೋಗೀ...?’
‘ಎತ್ಕೊಂಡ್ ಹೋಗಿ.. ತುಂಬಾ ಕಚಗುಳಿ ಇಟ್ಟು.. ಇಲ್ಲೆಲ್ಲ ಇಲ್ಲೆಲ್ಲ..’
‘ಹಿಹಿಹಿಹಿ... ಏಯ್ ಬಿಡಮ್ಮ.. ಬಿಡಮ್ಮಾ.. ಕಿಕಿಕಿಕಿ..’
‘..ಇಲ್ಲೆಲ್ಲ ಹೀಗೆಲ್ಲ ಕಚಗುಳಿ ಇಟ್ಟು ಪುಟ್ಟನನ್ನ ನಗಿಸ್ತಾರೆ..!’

* * *

ಹಕ್ಕಿಗಳೆಲ್ಲ ತಡವಾಗಿ ಏಳುತ್ತಿವೆ. ಈ ಚಳಿಯಲ್ಲಿ ಮುಂಜಾನೆಯೇ ಹೊರಹಾರಹೊರಟರೆ ರೆಕ್ಕೆಗಳೆಲ್ಲ ಮರಗಟ್ಟಿಹೋಗಲಾರವೇ? ಗೂಡಿನೊಳಗೆ ಬೆಚ್ಚಗೆ, ಹುಲ್ಲಿನೊಳಗೆ ಇನ್ನೂ ಇನ್ನೂ ಇನ್ನೂ ಮುದುಡಿಕೊಂಡು, ಅಮ್ಮನ ರೆಕ್ಕೆ ತೆಕ್ಕೆಯಡಿಯಲ್ಲಿ ಮುರುಟಿಕೊಂಡು ಮಲಗಿರಬೇಕು. ಉಹುಂ, ನಿದ್ದೆ ಮಾಡಬಾರದು; ಎಚ್ಚರಿರಬೇಕು.. ಅಮ್ಮನ ಬಿಸಿ ಉಸಿರು, ಅಪ್ಪನ ಗೊರಕೆ ಸದ್ದು, ದೂರ ಹೊರಳಿ ಹೋಗಿರುವ ತಮ್ಮನ ಬೇರ್ಪಡಿಕೆ, ಎಲ್ಲವನ್ನು ಮುಗುಳ್ನಗುತ್ತ ಅನುಭವಿಸುತ್ತ. ಇಷ್ಟು ಮುಂಚೆ ಹೊರಗೆ ಹಾರಿದರೆ ಈ ಇಬ್ಬನಿಯಲ್ಲಿ ಆಹಾರ ಕಂಡೀತಾದರೂ ಹೇಗೆ? ನಾಲ್ಕು ಮಾರಿನ ಮುಂದೆ ಮತ್ತೇನೂ ಕಾಣುವುದಿಲ್ಲ. ಎಲ್ಲಾ ಬಿಳಿ ಬಿಳಿ ಬೆಳ್ಳಗೆ. ಅಲಾರ್ಮಿಗೆ ಬೈದುಕೊಳ್ಳುತ್ತಾ ನೀನು ಏಳುತ್ತೀ ಹಾಸಿಗೆಯಿಂದ..

ದುಂಬಿಗಳೂ ತಡವಾಗಿ ಏಳುತ್ತಿವೆ.. ಹೂವು ಅರಳುವುದೇ ತಡ ಈಗ. ಸೂರ್ಯನ ಒಲೆಯಲ್ಲಿ ಶಾಖ ಹೆಚ್ಚಾಗಿ, ಮಂಜೆಲ್ಲ ಕರಗಿ, ಕಿರಣಗಳು ಹೂಮೇಲೆ ಬಿದ್ದು, ಅದು ಅರಳುವ ಹೊತ್ತಿಗೆ ಇನ್ನೊಂದು ಗುಕ್ಕು ನಿದ್ರೆ ತೆಗೆಯಬಹುದು. ದುಂಬಿಗಳಿಗಷ್ಟೇ ಗೊತ್ತು ಹೂವುಗಳ ಚಡಪಡಿಕೆ. ಬೇಗ ಅರಳಬೇಕೆಂಬ ತುಡಿತ. ತಮ್ಮೊಡಲಿನ ಕಂಪನ್ನು ಮೂಜಗಕೆಲ್ಲ ಹರಡಬೇಕೆಂಬ ತಪನೆ. ಸಹಾಯಕ್ಕೆ ಬಾರದ ಸೂರ್ಯನ ಬಗ್ಗೆ ಅಸಹನೆ. ನಿನ್ನ ಮುಡಿಯೇರಿ ನನ್ನ ಕಣ್ಸೆಳೆಯುವ ಚಪಲ.

ನೀರೂ ಕಾಯುವುದಿಲ್ಲ ಬೇಗ.. ಕಾಯಿಲ್ ಹಾಕಿಟ್ಟು ಎಷ್ಟೊತ್ತಾಯ್ತು? ಗಡಿಯಾರ ನೋಡಿದ್ದೇ ನೋಡಿದ್ದು. ಗಡಿಯಾರ ನಿಂತು ಹೋಗಿದೆಯೇ ಎಂದು ಪರಿಕಿಸಲು ವಾಚು ನೋಡಿದ್ದು. ಆದರೂ ನಂಬಿಕೆ ಬರದೇ ಮೊಬೈಲು ನೋಡಿದ್ದು. ಹೌದು, ಅರ್ಧ ಗಂಟೆ ಮೇಲಾಯ್ತು. ಇನ್ನೂ ಕಾದಿಲ್ಲ ನೀರು. ಮುಟ್ಟಿ ನೋಡಿದರೆ ಐಸ್ ಮುಟ್ಟಿದಂತೆ. ತಣ್ಣಗೆ. ಹಾಗೇ ತಣ್ಣೀರೇ ಹೊಯ್ದುಕೊಂಡರೆ ನಿನ್ನ ಬಂಗಾರು ಬಣ್ಣದ ಮೈತುಂಬ ಚಳಿಗುಳ್ಳೆಗಳೆದ್ದು, ಮೈಪುಳಕಗೊಂಡು, ನನ್ನ ನೆನಪಾಗಿ... ಬೇಡ ಬೇಡ, ನೀರು ಕಾಯಲಿ ಬಿಡು.

ಬಸ್ಸೂ ತಡವಾಗಿ ಬರುತ್ತದೆ.. ಡ್ರೈವರ್ ಎದ್ದರೂ ಮಂಕಿ ಕ್ಯಾಪ್ ಹಾಕಿದ ಕಂಡಕ್ಟರಿಗಿನ್ನೂ ನಿದ್ದೆ. ಅವನ ಚರ್ಮದ ಚೀಲದೊಳಗೆ ನಾಣ್ಯಗಳೊಂದಿಗೆ ನಿದ್ದೆ ಹೋಗಿರುವ ಪೀಪಳಿ. ನಾಲ್ಕು ಸಲ ಬಟನ್ ಒತ್ತಿದರೂ ಸ್ಟಾರ್ಟಾಗಲು ಒಲ್ಲದ ತಂಡಿ ಬಡಿದ ಎಂಜಿನ್. ಗಾಲಿಗಳಿಗೂ ಒದ್ದೆ ರಸ್ತೆಯ ಮೇಲೆ ಓಡಲು ಸೋಮಾರಿತನ. ನಿನಗೆ ಕಾದೂ ಕಾದೂ ಬೇಸರ. ಆಫೀಸಿನಲ್ಲಿ ಬಾಸ್ ಬೈಯುತ್ತಾರೇನೋ ಅಂತ ಟೆನ್ಷನ್.

ಎಲ್ಲರಿಗಿಂತ ನೀನೇ ಲೇಟೇನೋ ಅಂದುಕೊಂಡು ಆಫೀಸಿಗೆ ಕಾಲಿಟ್ಟರೆ ಅಂಗಣವೆಲ್ಲ ಬಿಕೋ ಬಿಕೋ.. ಪಾರ್ಕಿಗೆ ಜಾಗಿಂಗಿಗೆ ಹೋಗಿದ್ದ ಬಾಸ್ ಮುದ್ದು ಅಳಿಲಿನ ಮೀಸೆ ಮೇಲೆ ನಿಂತಿದ್ದ ಇಬ್ಬನಿಹನಿಯನ್ನು ನೋಡುತ್ತ ಮೈಮರೆತು ನಿಂತುಬಿಟ್ಟಿದ್ದರಂತೆ.. ಕಲೀಗುಗಳೆಲ್ಲ ಹೊಸದಾಗಿ ಮದುವೆಯಾದವರು: ಹೇಗೆ ತಾನೆ ಬಂದಾರು ಅಷ್ಟು ಮುಂಚೆ? ಸಿಸ್ಟಮ್ ಆನ್ ಮಾಡಿದರೆ ಕಿಂಗ್‌ಫಿಷರ್ ಹಕ್ಕಿಯ ಬ್ಯಾಕ್‌ಗ್ರೌಂಡಿನ ಮೇಲೆ ಪುಟ್ಟ ಪುಟ್ಟ ಐಕಾನುಗಳು. ನಿನ್ನ ಪುಟ್ಟ ಬೆರಳುಗಳಿಂದ ಅದುಮಿದರೆ ಮೌಸೂ ಉಲಿಯುತ್ತದೆ ಹಿತವಾಗಿ ಕ್ಲಿಕ್. ತೆರೆದುಕೊಂಡ ವಿಂಡೋದಲ್ಲಿ ನನ್ನದೇ ಮೇಯ್ಲ್: "ಚಿನಕುರುಳಿ ಹುಡುಗಿಗೆ ಗುಡ್ ಮಾರ್ನಿಂಗ್! ಪಿಂಕ್ ಡ್ರೆಸ್ಸಲ್ಲಿ ಚನಾಗ್ ಕಾಣ್ತಿದೀಯ. ಇನ್ನು ಆರು ದಿನ ನಾನಿರಲ್ಲ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗ್ತಿದೀನಿ. ಅಷ್ಟು ದಿನಕ್ಕೆ ಬೇಕಾದಷ್ಟು ಪ್ರೀತೀನ ಇಕೋ ಈ ಮೇಯ್ಲಲ್ಲೇ ಕೊಡ್ತಿದೀನಿ: ತುಂಬಿಸಿಕೋ. ಹ್ಯಾಪಿ ದಿವಾಲಿ. ಲವ್ಯೂ!"

ಡ್ರೆಸ್ಸಿನ ಪಿಂಕನ್ನೂ ಮೀರಿ ಏರಿದ ಮುಖದ ಕೆಂಪಿಗೆ ತುಟಿಯಂಚ ಮುಗುಳ್ನಗೆ ಮ್ಯಾಚ್ ಆಗುತ್ತದೆ. ಟಕಟಕನೆ ಟೈಪಿಸುತ್ತೀಯ ಎಸ್ಸೆಮ್ಮೆಸ್ ಮೊಬೈಲಿನಲ್ಲಿ: "ಥ್ಯಾಂಕ್ಯೂ ಕಣೋ ಗೂಬೆ.. ನಿಂಗೂ ಹ್ಯಾಪಿ ದೀಪಾವಳಿ. ಊರಲ್ಲಿ ಮಜಾ ಮಾಡು. ಲವ್ಯೂ!" ಗಾವುದಗಳಾಚೆಗಿನ ನನ್ನೂರಲ್ಲಿ ಸಿಗ್ನಲ್ಲನ್ನೇರಿ ಬರುತ್ತದೆ ಸಂದೇಶ ಟಿಣ್ ಟಿಣ್. ನಾನು ಹೊದಿಕೆಯಡಿಯಿಂದ ಕೈತೆಗೆದು ಮೊಬೈಲಿಗಾಗಿ ತಡಕಾಡುತ್ತೇನೆ.

* * *

ವರುಷಗಳ ಹಿಂದೆ ಬರೆದು ಅರ್ಧಕ್ಕೇ ಬಿಟ್ಟಿದ್ದ ಲಹರಿ.  ಯಾಕೋ ಈಗ ಈ ಚಳಿಗೆ ಈ ಹವೆಗೆ ಈ ಇದಕ್ಕೆ ಮತ್ತು ಹೊಸದೇನನ್ನೂ ಬರೆಯಲಾಗದ ಬಿಜಿಗೆ, ಸ್ವಲ್ಪ ಸೋಮಾರಿತನಕ್ಕೆ ಸೂಟ್ ಆಗುತ್ತದೆ ಎನ್ನಿಸಿತು; ಕೊನೆಯಲ್ಲಿಷ್ಟು ತೀಡಿ ಪೋಸ್ಟ್ ಮಾಡಿದ್ದೇನೆ. ಈ ದೀಪಾವಳಿಗೆ ಇಷ್ಟೇ.

ಶುಭಾಶಯಗಳೂ..