Friday, September 20, 2013

ಆಹ್ನಿಕ

-ಒಂದು-

ಉಭ ಇಲ್ಲ ಶುಭ ಇಲ್ಲ
ಒಂದು ದಿನ ದೋಸೆ ಹಿಟ್ಟಿಗೆ ಹದ ಬಂದುಬಿಡುತ್ತದೆ
ಎಷ್ಟು ತೆಳ್ಳಗೆ ಎಷ್ಟು ಅಗಾಲಕೆ
ಬೇಕಾದರೂ ಎರೆಯಬಹುದು
ಅರೆ ನೋಡ್ರೀ, ಎಷ್ಟು ಚನಾಗಾಗ್ತಿದೆ ದೋಸೆ
ಹೊರಗೆ ಕೆಂಪಗೆ ಒಳಗೆ ಬೆಳ್ಳಗೆ
ಹೊರಗೆ ಗರಿಗರಿ ಒಳಗೆ ಮೃದುವಾಗಿ
ನೋಡ್ರೀ, ಎಷ್ಟು ಸಲೀಸಾಗಿ ಏಳ್ತಿದೆ ಕಾವಲಿಯಿಂದ
ಹೆಂಡತಿ ಖುಶಿಯಾಗುತ್ತಾಳೆ

ಏನೂ ಬದಲಾವಣೆ ಇಲ್ಲ
ಯಾರ ಹಕ್ಕೊತ್ತಾಯವೂ ಇಲ್ಲ
ಕಾಣದ ಕೈಗಳ ಪಿತೂರಿಯೂ ಇಲ್ಲ
ಅದೇ ಅಕ್ಕಿ ಅದೇ ಉದ್ದು ಇಷ್ಟೇ ಮೆಂತೆ ಅಷ್ಟೇ ಅವಲಕ್ಕಿ
ಎಂದಿನಂತೆಯೇ ನೆನೆಸಿ ಬೀಸಿ ದಬರಿಯಲ್ಲಿಟ್ಟಿದ್ದು ಮುಚ್ಚಿ

ಇವತ್ತು ದೋಸೆ ಹಿಟ್ಟಿಗೆ ಹದ ಬಂದುಬಿಟ್ಟಿದೆ

ಒಮ್ಮೊಮ್ಮೆ ಪ್ರೀತಿಯೂ ಹಾಗೇ
ಯಾವ ಬೃಹತ್ ಕಾರ್ಯಕಾರಣವೂ ಇಲ್ಲದೇ
ಯಾರ ಮಧ್ಯಸ್ತಿಕೆಯ ತಂತ್ರಗಾರಿಕೆಯೂ ಇಲ್ಲದೇ
ಮನೆಯೊಳಗಿಟ್ಟ ಹೂಗಿಡಕ್ಕೂ ತುಂಬಿ ಬಂದಹಾಗೆ
ಆಳ ಮುಳುಗಿದ್ದ ಬಂಡೆಗೆ ಮೀನು ಮುತ್ತಿಟ್ಟ ಹಾಗೆ
ಕೆಟ್ಟು ಬದಿಗಿಟ್ಟಿದ್ದ ರೇಡಿಯೋ ತಾನಾಗೇ ಸರಿಹೋದಹಾಗೆ.

ಒಮ್ಮೊಮ್ಮೆ ಪದ್ಯವೂ ಹೀಗೇ
ಪದಗಳ ಹುಡುಕುವ ತಾಕಲಾಟವಿಲ್ಲದೆ
ಉಪಮೆ ರೂಪಕ ಪ್ರಾಸಗಳ ಹಂಗಿಲ್ಲದೆ
ವಿಪರೀತ ಸೆಖೆ, ಕಟ್ಟಿದ ಮೋಡ, ಸುಯ್ಲುಗಾಳಿ-
ಗಳ್ಯಾವುದರ ಸುಳಿವೂ ಇಲ್ಲದೇ
ಮಳೆಹನಿಗಳು ಬೀಳಲು ಶುರುವಾಗಿ
ಟೆರೇಸಿನಲ್ಲಿ ಒಣಗಿಸಿದ್ದ ಬಟ್ಟೆಗಳೆಲ್ಲ ಒದ್ದೆಯಾಗಿ
ಆರರ ಪೋರ ಜಾರುವ ದಾರಿಯಲೋಡಿ ಖುಷಿ ಪಡುತ್ತಾನೆ;
ಅರವತ್ತರ ಮುದುಕ ತನ್ನ ಕಾಲವ ನೆನೆದು ಸಂಕಟ ಪಡುತ್ತಾನೆ.

-ಎರಡು-

ಮೊನ್ನೆ ಯಾರೋ ಆಪಲ್ ಕೇಕ್ ಮಾಡುವುದು ಹೇಗೆಂದು ಹೇಳುತ್ತಿದ್ದರು.
ಮತ್ತೇನಿಲ್ಲವಂತೆ: ಅಳಿದುಳಿದ ಬೂಸಲು ಬಂದಿರುವ ಬ್ರೆಡ್ಡು
ಬನ್ನು ಕೇಕುಗಳನ್ನೆಲ್ಲ ಪುಡಿಪುಡಿಮಾಡಿ ಕಲಸಿ
ಅದಕ್ಕಿನ್ನೊಂದಿಷ್ಟು ಸಿಹಿ ಬಣ್ಣ ಪರಿಮಳ ಚೆರ್ರಿ ಪರ್ರಿ ಬೆರೆಸಿ
ಸೇಬುವಿನಾಕಾರದಲ್ಲಿ ಮುದ್ದೆ ಕಟ್ಟಿ ಬೇಕರಿಯ ಶೋಕೇಸಿನಲ್ಲಿ
ಚಂದ ಕಾಣುವಂತೆ ಇಡಬೇಕು. ಅಷ್ಟೇ.

ಇನ್ನು ಈ ಆಪಲ್ ಕೇಕನ್ನು ತಿನ್ನುವುದು ಹೇಗೆಂದರೆ...
ಹೋಗಲಿ ಬಿಡಿ, ಇಂತಹ ಕವಿತೆಗಳನ್ನು ಈಗಾಗಲೇ ಬಹಳಷ್ಟು ಕವಿಗಳು
ಬರೆದಿದ್ದಾರಾದ್ದರಿಂದ ನಿಮಗಿದು ರುಚಿಯೆನಿಸಲಿಕ್ಕಿಲ್ಲ.

ಸರಿ, ಆಪಲ್ ಕೇಕ್ ರುಚಿಯಾಗಿದೆಯಾ?
ಅದನ್ನಾದರೂ ತಿನ್ನಿ.

-ಮೂರು-

ಬೆಳಗ್ಗೆ ಬೇಗ ಏಳಬೇಕು ಎಂಬ
ಎಚ್ಚರದೊಂದಿಗೇ ಮಲಗಬೇಕು ಪ್ರತಿ ರಾತ್ರಿಯೂ.
ಅಲಾರ್ಮಿನ ಮುಳ್ಳುಗಳು ಚುಚ್ಚುತ್ತಲೇ ಎದ್ದುಬಿಡಬೇಕು.
ಒಂದು ದಿವಸ ಮೈಮರೆತು ನಿದ್ರಿಸಿದರೂ
ಕ್ಯಾಬು ಮಿಸ್ಸಾಗಿ ಆಫೀಸಿಗೆ ತಡವಾಗಿ
ಬಾಸು ಗರಮ್ಮಾಗಿ ದಿನವೆಲ್ಲ ಹಾಳಾಗಿ..
ಎಷ್ಟೋ ಸಲ ಬೇಗ ಏಳಬೇಕೆಂಬ ದ್ಯಾಸದಲ್ಲೇ
ರಾತ್ರಿಯಿಡೀ ನಿದ್ರೆಯಿರದೇ ಮರುದಿನ ಕೆಂಪು ಕಣ್ಣು.

ಬದುಕು ಬರೀ ಕಮಾಯಿಗಾಗಲ್ಲ ಎನಿಸಿದ ದಿನ
ಒಂದು ಹಸಿಬೆ ಚೀಲ ಬಗಲಿಗೇರಿಸಿ
-ಒಳಗೆ ನಾಕು ಚಪಾತಿ, ಜೀವಜಲ-
ಇಂಬಳಗಳ ತುಳಿಯುತ್ತ ಬೆಟ್ಟವೇರಿ ಬಗ್ಗಿದರೆ
ಹಬೆಯಾಡುವ ಹಸಿರು ಶ್ರೇಣಿಗಳು
ಕಟ್ಟಿಕೊಂಡು ಬಂದ ಉಸಿರೆಲ್ಲ ಅಲ್ಲೆ ಬಿಟ್ಟು
ಮೋಡ ದಬ್ಬುವ ಗಾಳಿಯೊಳಗೆಳೆದುಕೊಂಡು
ತೊಯ್ದು ತೊಪ್ಪೆಯಾಗಿ, ತಿನ್ನದೇ ಹೊಟ್ಟೆತುಂಬಿ
ಮತ್ತೆ ಇಳಿಯುವುದಾದರೆ ಹತ್ತುವುದೇಕೆ ಎನ್ನದೆ
ಶಿವಶಿವಾ, ಮತ್ತೆ ಮುಂದಿನ ಪಯಣಕೆ, ದಾರಿ ಕೆಳಗೆ.

-ನಾಲ್ಕು-

ಬೈಕು ಸರ್ವೀಸು ಮಾಡಿಸಿದ ದಿನ ಖುಷಿಯ ರುಂರುಂ
ಹೊಸ ಅಂಗಿ ತೊಟ್ಟ ದಿನ ಹೊಸದೆ ಖದರು
ಹೊರಗನು ತೊಳೆದರೆ ಒಳಗೂ ತಿಳಿ
ಕಣ್ಣು ತಂಪಾದರೆ ಮನಸೂ ಸಿಹಿ
ದೋಸೆ ಸಲೀಸು ಕಾವಲಿಯಿಂದೆದ್ದುಬಂದರೆ ಸಾಕು
ದಿನವಿಡೀ ಪ್ರಫುಲ್ಲ.
ದಿನವೂ ಬೆಟ್ಟವೇರುವ ಹಾಗಿಲ್ಲವಲ್ಲ
ಹಾಗಾಗಿ ಇಷ್ಟೆಲ್ಲ.
ಜೋಗದ ಸಿರಿ ತುಂಗೆ ಬಳುಕು ಸಹ್ಯಾದ್ರಿಯುತ್ತುಂಗ
ಎಲ್ಲಾ ಇಲ್ಲೇ. ನಿತ್ಯೋತ್ಸವ.