Tuesday, March 27, 2007

ಹೊಸ ಆಹ್ಲಾದ

"ರಾಧೇಶಾಮ ರಾಧೇ ಶಾಮ್
ರಾಧಾ ಮಾಧವ ಮೇಘಶ್ಶಾಮ್.."

ದೇವಸ್ಥಾನದಿಂದ ಮಹಿಳೆಯರ ಭಜನೆಯ ದನಿ ತೇಲಿಬರುತ್ತಿತ್ತು. ಕಟ್ಟೆಯ ಮೇಲೆ ಕುಳಿತಿದ್ದ ನಾನು ಅಂಗಳದಲ್ಲಿ ಅಕ್ಕಿ ಹೆಕ್ಕುತ್ತಿದ್ದ ಪಾರಿವಾಳಗಳನ್ನು ನೋಡುತ್ತಿದ್ದೆ. ತಾಳದ ಟಿಣ್‍ಟಿಣ್‍ನೊಂದಿಗೆ ಬೆರೆತು ಬರುತ್ತಿದ್ದ ಭಜನೆ ಕಿವಿಗಿಂಪಾಗಿತ್ತು. ನಮ್ಮೂರಿನದು ಗೋಪಾಲಕೃಷ್ಣನ ದೇವಸ್ಥಾನ. ಈ ಕೃಷ್ಣನಿಗೆ ಸಂಬಂಧಿಸಿದ ಭಜನೆಗಳು, ಭಕ್ತಿಗೀತೆಗಳೆಲ್ಲ ಪ್ರೇಮಗೀತೆಗಳೇ ಆಗಿಬಿಟ್ಟಿವೆ. ಅವನ್ನ ಆಲಿಸುತ್ತಿದ್ದರೆ ಕೃಷ್ಣ ಸಹ ನಮ್ಮ-ನಿಮ್ಮಂತೆ ಪ್ರೀತಿ-ಗೀತಿ ಮಾಡಿಕೊಂಡಿದ್ದ ಸಾಮಾನ್ಯ ಮನುಷ್ಯನಂತೆ ಭಾಸವಾಗುತ್ತಾನೆ. ಭಕ್ತಿಗಿಂತ ಹೆಚ್ಚಾಗಿ ಅವನಲ್ಲಿ ಅನುರಕ್ತಿ ಮೂಡುತ್ತದೆ: ಮೀರಾಗೆ ಆದಂತೆ.

ಅಂಗಳದಲ್ಲಿ ಬಣ್ಣ ಬಣ್ಣದ ಪಾರಿವಾಳಗಳು ಬಿಳಿಹುಲ್ಲು ಗೊಣಬೆಯ ಅಕ್ಕಪಕ್ಕ ಸಿಕ್ಕಬಹುದಾದ ಅಕ್ಕಿಕಾಳುಗಳನ್ನು ಹೆಕ್ಕುತ್ತಾ, ಪುರ್ರನೆ ಹಾರುತ್ತಾ, ಗುಟುರು ಗಲಾಟೆ ಮಾಡಿಕೊಂಡಿದ್ದವು. ಅಪ್ಪ ಅಂದ, "ಗುಂಡನ ಮನೆ ಪಾರಿವಾಳಗಳು ಇವು. ಗುಂಡ ಒಂದು ತಿಂಗಳಿಂದ ಊರಲ್ಲಿಲ್ಲ. ಎಲ್ಲಿದಾನೆ ಅಂತಾನೆ ಗೊತ್ತಿಲ್ಲ. ಕೆಲವರು 'ಮನೆಯವರು ಅಡಗಿಸಿಟ್ಟಿದಾರೆ' ಅಂತಾರೆ ಮತ್ತೆ ಕೆಲವರು 'ಏನೋ ಕೆಟ್ಟ ಖಾಯಿಲೆ ಬಂದಿದೆ ಅವಂಗೆ. ಅದ್ಕೇ ಯಾವ್ದೋ ಆಸ್ಪತ್ರೆಗೆ ಸೇರಿಸಿದಾರೆ' ಅಂತಾರೆ. ಅಂವ ಇದ್ದಿದ್ದಿದ್ರೆ ಈ ಪಾರಿವಾಳಗಳಿಗೆಲ್ಲ ಕಾಳು ಹಾಕ್ಕೊಂಡು ಇರ್ತಿದ್ದ. ಪಾಪ, ಈಗ ಅವರ ಮನೇಲಿ ಯಾರೂ ಕಾಳು ಹಾಕೋರು ಇಲ್ಲ ಅನ್ಸುತ್ತೆ ಇವಕ್ಕೆ. ಅದ್ಕೇ ಇಲ್ಲಿಗೆ ಬರ್ತಿವೆ.." ಇಷ್ಟು ಸಣ್ಣ ಹಳ್ಳಿಯಲ್ಲೂ ಸಹ ಎಷ್ಟೊಂದು ಗೌಪ್ಯಗಳು! ಗುಪ್ತ ಚಟುವಟಿಕೆಗಳು! ಗುಸುಗುಸುಗಳು! ನಾನು ಪಾರಿವಾಳಗಳನ್ನೇ ನೋಡುತ್ತಾ ಕುಳಿತೆ.

ಅಪ್ಪ ಅಡುಗೆಮನೆಯಿಂದ ಒಂದು ಮುಷ್ಟಿ ಅಕ್ಕಿ ತಂದ. ನನ್ನ ಪಕ್ಕದಲ್ಲೇ ಕುಳಿತು ಸ್ವಲ್ಪ ಅಕ್ಕಿಯನ್ನು ಅಂಗಳಕ್ಕೆ ಬೀರಿದ. ಬಿಳಿಹುಲ್ಲು ಗೊಣಬೆಯ ಬಳಿ ಓಡಾಡುತ್ತಿದ್ದ ಪಾರಿವಾಳಗಳು ಈಗ ನಮ್ಮ ಕಡೆಯೇ ಬಂದವು. ಅಪ್ಪ ಬೀರಿದ್ದ ಅಕ್ಕಿಕಾಳುಗಳನ್ನು ಕ್ಷಣಮಾತ್ರದಲ್ಲಿ ಹೆಕ್ಕಿಕೊಂಡು ಪುರ್ರನೆ ಮತ್ತೆ ಹುಲ್ಲು ಗೊಣಬೆ ಕಡೆ ಹಾರಿಬಿಟ್ಟವು. ಅಪ್ಪ ಮತ್ತೆ ಅಕ್ಕಿ ಬೀರಿದ. ಪಾರಿವಾಳಗಳು ಮತ್ತೆ ಬಂದವು. ಅಪ್ಪ ಅಂಗೈಯಲ್ಲಿ ಅಕ್ಕಿ ಹಾಕಿಕೊಂಡು 'ಗುಕ್' 'ಗುಕ್' 'ಗುಕ್' ಅಂತ ಪಾರಿವಾಳ ಗುಟುರು ಹಾಕುವಂತೆಯೇ ಶಬ್ದ ಮಾಡುತ್ತಾ ಕರೆದ. ಆದರೆ ಅವು ಅಂಗಳಕ್ಕೆ ಬೀರಿದ್ದ ಅಕ್ಕಿಕಾಳನ್ನು ಹೆಕ್ಕಿಕೊಂಡು ಹೋದವೇ ಹೊರತು ನಮ್ಮ ಹತ್ತಿರ ಬರಲೇ ಇಲ್ಲ.

"ಆ ಪಾರಿವಾಳ ನೋಡು.. ಏನ್ ಚನಾಗಿದೆ...!" ಅಪ್ಪ ನನಗೆ ಬೆರಳು ಮಾಡಿ ತೋರಿಸಿದ. ಮುಟ್ಟುವುದಾದರೆ ಕೈತೊಳೆದುಕೊಂಡು ಮುಟ್ಟಬೇಕೆನಿಸುವಷ್ಟು ಬಿಳಿ ಇರುವ ಆ ಪಾರಿವಾಳಕ್ಕೆ ಅಲ್ಲಲ್ಲಿ ಕಾಫಿ ಕಲರಿನ ಪೇಯಿಂಟ್ ಸ್ಪ್ರೇ ಮಾಡಿದಂತೆ ಹಚ್ಚೆ. ಗೋಣು ಕುಣಿಸುತ್ತಾ ಒಂದೊಂದೇ ಹೆಜ್ಜೆಯನ್ನು ಮೆಲ್ಲಮೆಲ್ಲನೆ ಇಡುತ್ತಿದೆ: ಪುಟ್ಟ ಕೃಷ್ಣನಂತೆ. ಊಹುಂ, ಕೃಷ್ಣನೆಡೆಗೆ ಲಜ್ಜೆಯಿಂದ ಹೆಜ್ಜೆಯಿಡುತ್ತಿರುವ ರಾಧೆಯಂತೆ. ಅಕ್ಕಿ ಕಂಡಲ್ಲಿ ಬಾಗಿ ತನ್ನ ಕೊಕ್ಕಿನಿಂದ ಹೆಕ್ಕುತ್ತಿದೆ. ಅಲ್ಲಲ್ಲಿ ನಿಂತು ಗಾಂಭೀರ್ಯದಿಂದ ತಲೆಯೆತ್ತಿ ನೋಡುತ್ತಿದೆ. ಇಡುತ್ತಿರುವ ಪ್ರತಿ ಹೆಜ್ಜೆಯಲ್ಲೂ ಬಿಂಕ-ಬಿನ್ನಾಣ. ಎಷ್ಟೊತ್ತಾಗಿತ್ತೋ ಅವನ್ನು ನೋಡುತ್ತಾ ನಾವು? ಅಪ್ಪ ತಂದಿದ್ದ ಅಕ್ಕಿಯೆಲ್ಲಾ ಖಾಲಿಯಾಗುವಷ್ಟರಲ್ಲಿ ದೇವಸ್ಥಾನದಲ್ಲಿ ಹೆಂಗಸರ ಭಜನೆ ಮುಗಿದು ಘಂಟೆ ಬಾರಿಸುವ ಶಬ್ದ ಕೇಳಿಬಂತು.

ನಮ್ಮೂರಿನ ಹೆಂಗಸರೆಲ್ಲಾ ಪ್ರತಿ ಶನಿವಾರ ಸೇರಿ ಇಲ್ಲಿ ಭಜನೆ ಮಾಡುತ್ತಾರೆ. ನಮ್ಮ ಮನೆಯ ಎದುರಿಗೇ ದೇವಸ್ಥಾನ. ಹೀಗಾಗಿ, ನಮ್ಮ ಮನೆಯಲ್ಲಿ ತುಂಬಿರುವ ಟೀವಿ, ಮಿಕ್ಸಿ, ಪಂಪ್ಸೆಟ್ಟು, ಫೋನಿನ ರಿಂಗು, ಮನೆಮಂದಿಯ ಮಾತು-ಕತೆ, ಜಾನುವಾರುಗಳ 'ಅಂಬಾ', ಇತ್ಯಾದಿ ಶಬ್ದಗಳ ಜೊತೆಗೆ ದೇವಸ್ಥಾನದಿಂದ ಆಗಾಗ ತೇಲಿಬರುವ ಘಂಟೆಗಳ ನಿನಾದವೂ ಸೇರಿರುತ್ತೆ. ನಮಗೆ ಗೊತ್ತು: ಯಾರ್‍ಯಾರು ಯಾವಾಗ್ಯಾವಾಗ ದೇವಸ್ಥಾನಕ್ಕೆ ಬರುತ್ತಾರೆ ಅಂತ. ಘಂಟೆ ಶಬ್ದದಿಂದಲೇ ಪತ್ತೆ ಮಾಡುತ್ತೇವೆ ಅದನ್ನು! ದೊಡ್ಡ ಘಂಟೆ ಎರಡು ಸಲ ಬಡಿದು ಸಣ್ಣ ಘಂಟೆ ಮೂರು ಸಲ ಬಡಿದ ಶಬ್ದ ಬಂತೆಂದರೆ, ಈಗ ದೇವಸ್ಥಾನಕ್ಕೆ ಬಂದಿರುವವರು ಸುಧಣ್ಣ! ಸಣ್ಣ ಘಂಟೆಯನ್ನು ಕೇವಲ ಎರಡು ಸಲ ಬಡಿದ ಸದ್ದಾದರೆ, ಈಗ ಬಂದಿರುವುದು ಲಕ್ಷ್ಮಕ್ಕ! ಇವತ್ತು ಬೆಳಗ್ಗೆ ಎಷ್ಟೊತ್ತಿಗೆ ಗಣೇಶಣ್ಣ ಬಂದು ಪೂಜೆ ಮಾಡಿಕೊಂಡು ಹೋದ ಅಂತ ನಮಗೆ ಗೊತ್ತು. ಸಂಜೆ ಬಂದು ದೀಪ ಹಚ್ಚಿ ಹೋದ ಗಳಿಗೆಯೂ ಗೊತ್ತು!

ಲಾಂಗ್ ಬೆಲ್ ಹೊಡೆದ ಕೂಡಲೆ ಮಕ್ಕಳೆಲ್ಲ ಶಾಲೆಯಿಂದ ಹೊರಬೀಳುವಂತೆ ಭಜನೆ ಮುಗಿದ ಕೂಡಲೆ ಹೆಂಗಸರೆಲ್ಲ ದೇವಸ್ಥಾನದಿಂದ ಮನೆ ಕಡೆ ಹೊರಟರು. ನಮ್ಮ ಮನೆ ಹಾದು ಹೋಗುವಾಗ ಕಟ್ಟೆಯ ಮೇಲೆ ಕುಳಿತಿದ್ದ ನನ್ನನ್ನು 'ಯಾವಾಗ ಬಂದಿದೀಯ?' 'ಅರಾಮಿದೀಯಾ?' 'ಬೆಂಗ್ಳೂರಲ್ಲೂ ಸೆಖೇನಾ?' ಇತ್ಯಾದಿ ಪ್ರಶ್ನೆಗಳ ಮೂಲಕ ಕುಶಲ ವಿಚಾರಿಸಿದರು. 'ಬನ್ರೇ, ಆಸರಿಗೆ ಕುಡಿದು ಹೋಗ್ಬಹುದು' ಎಂಬ ಅಮ್ಮನ ಕರೆಗೆ ಯಾರೂ ಸೊಪ್ಪು ಹಾಕಲಿಲ್ಲ. ಅಮ್ಮ ಬಂದದ್ದೇ ಹೂವಿನ ಗಿಡಗಳಿಗೆ ನೀರು ಹಾಕಲಿಕ್ಕೆಂದು ಬಚ್ಚಲು ಮನೆಯಿಂದ ಕೊಡಪಾನ ತಂದು ನಲ್ಲಿಯ ಕೆಳಗಿಟ್ಟಳು. ಅಮ್ಮನ ಈ ಕೆಲಸದಲ್ಲಿ ನೆರವಾಗಲು ನಾನು ಕಟ್ಟೆಯಿಳಿದು ಬಂದೆ.

ನಮ್ಮ ಮನೆಯ ಅಂಗಳವೆಂಬ ಗಾರ್ಡನ್ನಿನ್ನಲ್ಲಿ ಎಷ್ಟೊಂದು ಬಣ್ಣದ ಹೂಗಳು. ಯಾವುದಕ್ಕೆ ಹೋಲಿಸುವುದು ಇದನ್ನು? 'ಅವಳ' ಚೂಡಿಗೆ? ಊರಲ್ಲಿದ್ದಾಗ ನಾನೂ ಅಮ್ಮನೂ ಸೇರಿ ಅದೆಷ್ಟೋ ಹೂವಿನ ಗಿಡಗಳನ್ನು ನೆಡುತ್ತಿದ್ದವು. ಮಳೆಗಾಲ ಶುರುವಾಯಿತೆಂದರೆ ನಮಗೆ ಅದೇ ಕೆಲಸ. ಸುಜಾತಕ್ಕನ ಮನೆಯ ಅಂಗಳದಲ್ಲಿ ಹೊಸ ಬಣ್ಣದ ದಾಸಾಳ ಹೂವು ಕಂಡರೆ ಸಾಕು, ಅಮ್ಮ ಹೋಗಿ 'ನಂಗೊಂದು ಹೆಣಿಕೆ ಕೊಡೇ' ಅಂತಂದು ಇಸಕೊಂಡು ಬರುತ್ತಿದ್ದಳು. ಕೊನೆಗೆ ನಾನೂ ಅಮ್ಮನೂ ಸೇರಿ, ಅಂಗಳದಲ್ಲಿ ಗುದ್ದು ತೋಡಿ, ಸ್ವಲ್ಪೇ ಸ್ವಲ್ಪ ಗೊಬ್ಬರ - ಹೊಸ ಮಣ್ಣು ಹಾಕಿ ಆ ರೆಂಬೆಯನ್ನು ಊರುವುದು. ಅಮ್ಮನ ಕೈಗುಣದ ಬಗ್ಗೆ ಎರಡು ಮಾತಿಲ್ಲ. ಅವಳು ನೆಟ್ಟಮೇಲೆ ಅದು ಚಿಗುರಲೇಬೇಕು: ಉಲ್ಟಾ ನೆಟ್ಟಿದ್ದರೂ! ಎಷ್ಟು ಗಿಡ ನೆಡುತ್ತಿದ್ದೆವು ನಾವು... ನೆಂಟರ ಮನೆಗೆ ಹೋದಾಗ ಬಿಳಿ ಬಿಳಿ ಎಸಳಿನ ಶ್ಯಾವಂತ್ಗೆ ಹೂವು ಕಣ್ಣಿಗೆ ಬಿತ್ತೋ, ಅಮ್ಮ ಅವರ ಬಳಿ ಗೋಗರೆದು ಒಂದು ಹಿಳ್ಳು ಪಡೆದು ತಂದು ನಮ್ಮನೆಯ ಶ್ಯಾವಂತಿಗೆ ಪಟ್ಟೆಯಲ್ಲಿ ಸೇರಿಸುತ್ತಿದ್ದಳು. ನಾನಾದರೂ ಅಷ್ಟೆ: ಮೆಡ್ಲಿಸ್ಕೂಲಿಗೆ ಹೋಗಬೇಕಾದರೆ ಯಾವ ಹುಡುಗಿಯರ ಮುಡಿಯಲ್ಲಿ ನಮ್ಮನೆಯಲ್ಲಿ ಇಲ್ಲದ ಬಣ್ಣದ ಡೇರೇ ಹೂವು ಕಂಡರೂ 'ಇದರ ಗಿಡದ ಒಂದು ಕೊಂಬೆ ತಂದ್ಕೊಡ್ರೇ, ನಮ್ಮಮ್ಮಂಗೆ...' ಅಂತ ದುಂಬಾಲು ಬೀಳುತ್ತಿದ್ದೆ. ಆ ಹುಡುಗಿಯರಿಗೂ ನನ್ನ ಮೇಲೆ ಎಂಥದೋ ಪ್ರೀತಿ; ತಪ್ಪದೇ ತಂದುಕೊಡುತ್ತಿದ್ದರು! ಹಾಲಮ್ಮನಂತೂ ಪಿಂಡಿಗಟ್ಟಲೆ ತಂದು ಕೊಟ್ಟಿದ್ದಳು ಒಮ್ಮೆ! ಆದರೆ ಹೈಸ್ಕೂಲಿಗೆ ಹೋಗಲು ಶುರುಮಾಡಿದ ಮೇಲೆ ಹಾಗೆ ಹುಡುಗಿಯರನ್ನು ಕೇಳುತ್ತಿರಲಿಲ್ಲ. ಏಕೆಂದರೆ ನಮ್ಮ ಹೈಸ್ಕೂಲಿನಲ್ಲಿ ಹುಡುಗರೂ-ಹುಡುಗಿಯರೂ ಪರಸ್ಪರ ಮಾತಾಡಿಕೊಳ್ಳುವಂತೆಯೇ ಇರಲಿಲ್ಲ, ಇನ್ನು ನಾನು ಹೂವಿನ ಗಿಡ ಕೇಳುವುದೆಲ್ಲಿಂದ ಬಂತು? ಅಮ್ಮ 'ನಿಮ್ ಶಾಲೆ ಹುಡುಗಿಯರ ಮನೇಲಿ ಒಳ್ಳೊಳ್ಳೇ ಹೂವಿನ ಗಿಡ ಇದ್ರೆ ತಂದುಕೊಡಕ್ಕೆ ಹೇಳಾ' ಅಂತ ನನ್ನ ಬಳಿ ಹೇಳಿದಾಗ ನಾನು 'ಹಂಗೆಲ್ಲ ಕೇಳಕ್ಕೆ ಆಗೊಲ್ಲಮ್ಮ, ನಾನು ಹೈಸ್ಕೂಲು ಈಗ' ಅನ್ನುತ್ತಿದ್ದೆ. ಅಮ್ಮನಿಗೆ ನನ್ನ ಪರಿಸ್ಥಿತಿಯ ಅರಿವಾಗಿಯೋ, ಮಗ ದೊಡ್ಡವನಾಗಿದ್ದಾನೆ ಎಂಬ ಸುಳಿವು ಸಿಕ್ಕೋ ಅಥವಾ ತನ್ನ ಹೈಸ್ಕೂಲು ದಿನಗಳ ನೆನಪಾಗಿಯೋ, ಸಣ್ಣಗೆ ನಾಚುತ್ತಿದ್ದಳು: ಶಂಖಪುಷ್ಪದ ಹೂವಿನಂತೆ.

ಅಮ್ಮನೊಂದಿಗೆ ನಾನೂ ಬಣ್ಣಬಣ್ಣದ ಗುಲಾಬಿ ಗಿಡಗಳಿಗೆ ನೀರು ಹನಿಸಿದೆ. ಬೇಲಿಗೂಟವನ್ನು ತಬ್ಬಿದ್ದ ಮಲ್ಲಿಗೆ ಬಳ್ಳಿ, ತೆಂಗಿನ ಮರದ ತಂಪಿನಲ್ಲಿದ್ದ ಗೊಲ್ಟೆ ಹೂವಿನ ಗಿಡ, ಅದರ ಪಕ್ಕದಲ್ಲೇ ನವಿಲುನೀಲಿ ಹೂಗಳನ್ನು ತೂಗುತ್ತಿರುವ ಶಂಖಪುಷ್ಪ, ಚಿಕ್ಕ ಮಕ್ಕಳಂತೆ ನಗುತ್ತಿರುವ ತುಂಬೆ ಹೂವು, ಮನೆಯ ಪಕ್ಕ ನೆರಳಿನಲ್ಲಿರುವ ಶ್ಯಾವಂತಿಗೆ ಪಟ್ಟೆ... ಎಲ್ಲಕ್ಕೂ ನೀರು ಹಾಕಿದೆವು. ತುಂತುರು ತಾಕಿದ್ದೇ ಖುಷಿಯೋ ಖುಷಿ ಹೂವುಗಳಿಗೆ! ತಣ್ಣೀರಿನಿಂದ ಮೈಪುಳಕಗೊಂಡು ಗಾಳಿಗೆ ತೂಗತೊಡಗಿದವು. ಈ ಹೂವುಗಳು ಸಾಮಾನ್ಯ ಅಂದುಕೊಳ್ಳಬೇಡಿ, ಸಿಕ್ಕಾಪಟ್ಟೆ ಕಿಲಾಡಿ ಇದಾವೆ... ನೋಡಿದ ಗೃಹಿಣಿಯ ಕಣ್ಣಲ್ಲಿ ಆಕರ್ಷಣೆ ಹುಟ್ಟಿಸಿ, ಆಕೆಯ ಮುಡಿಯೇರಿ, ರಾತ್ರಿ ಮಲಗುವಾಗ ಅವಳು ಹೇರ್‌ಕ್ಲಿಪ್ಪಿನಿಂದ ಬಿಡಿಸಿಕೊಳ್ಳುವ ಮುನ್ನ ಅವಳ ಹೆರಳ ತುಂಬಾ ತಮ್ಮ ಘಮವನ್ನು ಉಳಿಸಿಯೇ ಇಳಿಯುತ್ತವೆ ಇವು. ಆ ರಾತ್ರಿ ಆ ಪರಿಮಳದಿಂದಲೇ ಅವನು ಇನ್ನಷ್ಟು ಉನ್ಮತ್ತನಾಗುತ್ತಾನೆ...

ಹಿತ್ತಿಲ ಹಲಸಿನ ಮರದ ಹಿಂದೆಲ್ಲೋ ಸೂರ್ಯ ಮುಳುಗುತ್ತಿದ್ದ. ಆಗಸದ ಹೂದೋಟದಲ್ಲಿ ಚುಕ್ಕಿಗಳು ಒಂದೊಂದಾಗಿ ಅರಳುತ್ತಿದ್ದವು. ಪಾರಿವಾಳಗಳೆಲ್ಲ ಆಗಲೇ ಗೂಡು ಸೇರಿದ್ದವಿರಬೇಕು. 'ಸಾಕು, ಕಪ್ಪಾಯ್ತು, ಒಳಗೆ ಹೋಗೋಣ ಬಾ. ಅವಲಕ್ಕಿ-ಮೊಸರು ತಿನ್ನುವಂತೆ' ಅಮ್ಮ ಕರೆದಳು. ಹೊಸ ಆಹ್ಲಾದದೊಂದಿಗೆ ನಾನು ಮನೆಯ ಒಳನಡೆದೆ.

Tuesday, March 13, 2007

ಸಿದ್ದರ ಬೆಟ್ಟದ ಮೇಲೆ ಸಿದ್ದರುರಾಷ್ಠ್ರೀಯ ಹೆದ್ದಾರಿ ಸಂಖ್ಯೆ ನಾಲ್ಕರಲ್ಲಿ ಆ ಏಳೂ ಬೈಕುಗಳು ರೊಂಯ್ಯರೊಂಯನೆ ಸಾಗುತ್ತಿದ್ದವು. ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಬೆಂಗಳೂರಿನ ನವರಂಗ್ ಬಳಿಯಿಂದ ಶುರುವಾಗಿದ್ದ ಅವುಗಳ ಪಯಣ ತುಮಕೂರು ಬೈಪಾಸ್ ರಸ್ತೆಯಲ್ಲಿ ಸಾಗಿ ಅಲ್ಲೆಲ್ಲೋ ರೈಟಿಗೆ ತಗೊಂಡು ಮುಂದೆಲ್ಲೋ ಲೆಫ್ಟಿಗೆ ತಗೊಂಡು ಸಾಗಿ ಸಾಗಿ ಸಿದ್ದರ ಬೆಟ್ಟದ ತಪ್ಪಲಿಗೆ ಬಂದು ಮುಟ್ಟಿದಾಗ ಸೂರ್ಯನಿಗೆ ಹನ್ನೊಂದರ ಚಹ ಸಹ ಆಗಿಹೋಗಿತ್ತು. ಈ ಬೆಂಕಿ ಬಿಸಿಲಿನಲ್ಲಿ ಬೆಟ್ಟ ಹತ್ತಲೆಂದು ಬಂದ ಹದಿನಾಲ್ಕು ಜನ ಸಿದ್ದರನ್ನು ಅವನು ತನ್ನ ಉರಿಗಣ್ಣಿನಿಂದ ನೋಡಿದ. ಅವನಿಗೆ ಗುರುತು ಸಿಕ್ಕಿತು. ಆ ಸಿದ್ದರಲ್ಲೇ ಒಬ್ಬನನ್ನು ಕೇಳಿದ: 'ಶಿವನ ಸಮುದ್ರಕ್ಕೆ ಬಂದಿದ್ರಲ್ಲ, ನೀವೇನಾ?' ಸಿದ್ದ ಉತ್ತರಿಸಿದ: 'ಹೌದು.' 'ಮತ್ತೆ ಸಾವನದುರ್ಗಕ್ಕೆ?' 'ನಾವೇ!' 'ಓಹೋ! ಗೊತ್ತಾಯ್ತು ಬಿಡಿ, ನೀವು ಆರ್ಕುಟ್ ಹವ್ಯಕ ಗ್ರೂಪಿನವರು!' ಇವನಿಗೆ ಖುಷಿಯಾಯಿತು 'ಹಾಂ, ಹೌದು ಹೌದು!' 'ಸರಿ, ಒಳ್ಳೆಯದಾಗಲಿ, ಹತ್ತಿ ಬೆಟ್ಟ' ಅಂತಂದು ಸೂರ್ಯ ತನ್ನ ಬಿಸಿಲು ಸೂಸುವಿಕೆಯನ್ನು ಮುಂದುವರೆಸಿದ. ಅವನು ವಿಶ್ವಾಸ ತೋರಿಸಿದ್ದು ನೋಡಿ ಬಿಸಿಲು ಕಮ್ಮಿ ಮಾಡಬಹುದೇನೋ ಅಂದುಕೊಂಡಿದ್ದ ಸಿದ್ದರಿಗೆ ನಿರಾಶೆಯಾಯಿತು. ಅವರ ನಿರಾಶೆ ಸೂರ್ಯನಿಗೂ ಅರ್ಥವಾಗಿರಬೇಕು. ಅವನೆಂದ: 'ಏನ್ಮಾಡ್ಲಿ ಫ್ರೆಂಡ್ಸ್? ನಾನು ತಂಪಾಗಬೇಕಿದ್ದರೆ ಮೋಡ ಬರಬೇಕು. ಅವಳಿಲ್ಲದಿದ್ದರೆ ನಾನು ಹೆಲ್ಪ್‍ಲೆಸ್. ಮೋಡ ಇದ್ದಿದ್ದರೆ ನಾನು ಅವಳ ಸೀರೆ ಸೆರಗಿನಡಿ ಮರೆಯಾಗಿ ನಿಮಗೆ ತಂಪನ್ನೀಯುತ್ತಿದ್ದೆ. ಹ್ಮ್, ನಿಮ್ಮ ಬ್ಯಾಡ್‍ಲಕ್!'ಸರಿ, ಸಿದ್ದರು ಬೆವರು ಒರೆಸಿಕೊಳ್ಳುತ್ತಾ ಬೆಟ್ಟ ಹತ್ತತೊಡಗಿದರು. ನೀರು ಕುಡಿದರು, ಗ್ಲುಕೋಸ್ ತಿಂದರು, ಬಟ್ಟೆ ಬಿಚ್ಚಿ ಬರೀ ಬನಿಯನ್ನು-ಚಡ್ಡಿಯಲ್ಲಿ ನಡೆಯತೊಡಗಿದರು... ಓಹ್! ಇದೆಂಥಾ ಬೆಟ್ಟ! ಇದ್ಯಾಕೆ ಇಷ್ಟೆತ್ತರ ಬೆಳೆದು ನಿಂತಿದೆ? ಇದಕ್ಕೆ ಮೆಟ್ಟಿಲುಗಳನ್ನು ಕೊರೆದವರು ಯಾರು? ಇಗೋ ಇಲ್ಲಿ ಬೆಳೆದು ನಿಂತಿರುವ ಪುಟ್ಟ ಗಿಡ, ಇದ್ಯಾವ ಬೀಜದ ಫಲ? ನಾವು ಈ ಬೆಟ್ಟವನ್ನು ಇಷ್ಟು ಕಷ್ಟಪಟ್ಟು ಹತ್ತಿ ಬರುತ್ತಿರುವುದು ದೊಡ್ಡದೋ ಅಥವಾ ಈ ಬೀಜ ಬಲಿತು ಗಿಡವಾಗಲು ಪಟ್ಟ ಪರಿಶ್ರಮ ದೊಡ್ಡದೋ? ಸಿದ್ದರಿಗೊಂದೂ ಅರ್ಥವಾಗುತ್ತಿಲ್ಲ... ಯಾರೋ ಜೋಕು ಮಾಡುತ್ತಿದ್ದಾರೆ, ಮತ್ಯಾರೋ ಸುಸ್ತಾಗಿ ಅರ್ಧದಾರಿಯಲ್ಲೇ ಕುಳಿತಿದ್ದಾರೆ, ಇನ್ಯಾರೋ ಫೋಟೋ ತೆಗೆಯುತ್ತಿದ್ದಾರೆ... ಹತ್ತುತ್ತಾ ಹತ್ತುತ್ತಾ ಗುಹೆಯ ಬಾಗಿಲಿಗೆ ಬಂದು ಮುಟ್ಟಿದ್ದಾರೆ.ಗುಹೆಗಳೊಳಗೆ ದಾರಿ ತಪ್ಪದಂತೆ ಕರೆದೊಯ್ಯಲು ಒಬ್ಬ ಗೈಡ್ ಮುಂದೆ ಬಂದ. ಸಿದ್ದರು ಅವನ ಹಿಂದ್‍ಹಿಂದೆ ಹೊರಟರು. ಗುಹೆಯೊಳಗೆ ಕಾಲಿಡುತ್ತಿದ್ದಂತೆಯೆ ಎಂಥಾ ತಂಪು! ಮಾಡು ಮುಚ್ಚಿದ ಮನೆಯಂತೆ! ಒಳಒಳಗೆ ಹೋಗುತ್ತಿದ್ದಂತೆ ಕಗ್ಗತ್ತಲು. 'ಏಯ್ ಬ್ಯಾಟ್ರಿ ಯಾರ ಹತ್ರ ಇದ್ರೋ?' 'ನನ್ ಹತ್ರ ಇದ್ದು. ತಡಿ, ಬಂದಿ..' 'ಹುಷಾರಿ, ನಿಧಾನ..' 'ಗಿರೀ, ನೀನು ಈ ಕಿಂಡಿ ಒಳಗೆ ತೂರೋದು ಡೌಟು!' ....ಇತ್ಯಾದಿ ಮಾತುಗಳು ಅಲ್ಲಿ ಸಣ್ಣಕೆ ಪ್ರತಿಧ್ವನಿಸುತ್ತಿದ್ದವು. ಜೊತೆಗೆ ಬಂದಿದ್ದ ಗೈಡ್ ಬಾಟಲಿಗಳಲ್ಲಿ ನೀರು ತುಂಬಿಸಿಕೊಟ್ಟ. ಆ ನೀರು ತಣ್ಣಗಿತ್ತೂ ತಣ್ಣಗಿತ್ತೂ, ಫ್ರಿಜ್ ವಾಟರ್‌ಗಿಂತ ತಣ್ಣಗಿತ್ತು. ಕುಡಿದರೆ ಆರಿದ್ದ ಗಂಟಲಿಗೆ ನೀರಿನ ತಂಪು ತಾಗಿ ಮೈಯೆಲ್ಲಾ ರೋಮಾಂಚನ. ಆ ನೀರಿನ ಗುಟುಕು ಗಂಟಲಿನಿಂದ ಕೆಳಗಿಳಿದು ಅನ್ನನಾಳದ ಮೂಲಕ ಜಟರವೆಂಬ ಗುಹೆಯೊಳಗೆ ಬಿದ್ದಾಗ ಎದ್ದ ಸಣ್ಣ ಶಬ್ದ ಪ್ರತಿಧ್ವನಿಸಲೇ ಇಲ್ಲ.ಕಿಂಡಿಯಿಂದ ಕಾಣುತ್ತಿದ್ದ ಬೆಳಕು. ಜಾಗ ಸಿಕ್ಕಲ್ಲೆಲ್ಲ ತೂರಿಬರುತ್ತಿದ್ದ ಸೂರ್ಯರಶ್ಮಿ. ಸಣ್ಣ ಬಂಡೆಯ ಮೇಲೆ ದೊಡ್ಡ ಬಂಡೆ. ದೊಡ್ಡ ಬಂಡೆಯ ಮೇಲೆ ಸಣ್ಣ ಬಂಡೆ. ಬಂಡೆಯ ಮೇಲೆ ಬಂಡೆ. ಈ ಬಂಡೆಗಳು ಹೀಗ್ಯಾಕೆ ರಚಿತವಾಗಿವೆ? ಮಧ್ಯದಲ್ಲೊಂದು 'ಗ್ಯಾಪ್' ಬಿಟ್ಟಿದ್ಯಾಕೆ? ಆ ಗ್ಯಾಪನ್ನು ಒಂದು ಪುಟ್ಟ ಬಂಡೆ ಮುಚ್ಚಿದ್ದರೂ ಇದು ಗುಹೆಯಾಗುತ್ತಿರಲಿಲ್ಲ. ತೆರೆದಿದ್ದರೆ ಮಾತ್ರ ಅದು ಗುಹೆ. ಒಳಗೆ ತೂರಲು ಬರುವಂತಿದ್ದರೆ ಮಾತ್ರ ಅದು ಗುಹೆ. ಸಿದ್ದರು ಗುಹೆಯ ಒಳಒಳಗೆ ನಡೆದರು.ಯಾವ ಬಂಡೆಯ ಯಾವ ಪದರದಲ್ಲಿ ಒಡೆದ ಜಲವೋ ಏನೋ, ಇಲ್ಲಿ ನೀರಾಗಿ ಚಿಮ್ಮುತ್ತಿದೆ. ಒಂದು ಪುಟ್ಟ ಬಾವಿ. ಬರುವ ಯಾತ್ರಿಕರ ಬಾಯಾರಿಕೆಯನ್ನೆಲ್ಲಾ ನೀಗುತ್ತಿದೆ. ಗುಹೆಯ ಒಳಗೆ ಒಂದು ಗುಡಿ. ಗುರುತು ಸಿಗದ ಕಲ್ಲು ದೇವರು. ಅಲ್ಲಲ್ಲಿ ಚೆಲ್ಲಿದ ಕುಂಕುಮ. ಕಗ್ಗತ್ತಿಲಿನಷ್ಟೇ ಕಪ್ಪಗಿನ ಅರ್ಚಕನೊಬ್ಬ ಬೆಳಗುತ್ತಿರುವ ಮಂಗಳಾರತಿ. ಗಂಟೆಯ ಶಬ್ದ. ದಾಟಿ ಹೊರಬಂದರೆ ಅಲ್ಲೊಂದು ಮನೆ. ಗುಹೆಯೊಳಗೊಂದು ಮನೆ. ಇಹ-ಪರಗಳ ಕಲ್ಪನೆಯೇ ಬಾರದಂತಹ, ಹೊರಜಗತ್ತಿನ ಗಾಳಿ-ಗಂಧವೊಂದೂ ಸುಳಿಯದ, ಸೂರ್ಯನ ಬೆಳಕೂ ಫಿಲ್ಟರ್ ಆಗಿ ಬರುವ ಈ ಜಾಗದಲ್ಲಿ ಒಂದು ಮನೆ. ಆಹಾ! ಕವಿಕಲ್ಪನೆಯಲ್ಲೂ ಮೂಡಲಾರದಂತಹ ಜಾಗ! ಎಷ್ಟಿರಬಹುದು ಇಲ್ಲಿ ಒಂದು ಸೈಟಿಗೆ? ಕೊಟ್ಟಿದ್ದರೆ ನಾವೂ ಇಲ್ಲೇ ಇರಬಹುದಾಗಿತ್ತಲ್ಲ? ಯಾಕೆ ಬೇಕು ಆ ಹಾಳು ಬೆಂಗಳೂರು? ಯಾಕೆ ಬೇಕು ಆ ಕಂಪ್ಯೂಟರು, ಇಂಟರ್ನೆಟ್ಟು, ಟಾರ್ಗೆಟ್ಟು, ಪ್ಯಾಕೇಜು? ಹೀಗೇ, ಇಲ್ಲೇ, ಇದ್ದೂ ಇಲ್ಲದಂತೆ ಇರಬಾರದೇಕೆ? ಸಿದ್ದರ ಮನಸ್ಸಿನಲ್ಲಿ ಆಲೋಚನೆಗಳು ಏಳುತ್ತಿದ್ದಂತೆಯೇ ಆ ಪುಟ್ಟ ಮನೆಯ ಇಳಿಬಿಟ್ಟ ಪರದೆಗಳು ತೆರೆಗಳಂತೆ ಎದ್ದೆದ್ದು ಬಿದ್ದವು. ಹುಡುಗಿಯೊಂದು ಯಾರಿಗೂ ಕಾಣದಂತೆ ಕಿಟಕಿಯಲ್ಲಿ ಇಣುಕಿ ಮರೆಯಾದಳು.ಬೆಟ್ಟ ಹತ್ತುವುದಕ್ಕಿಂತ ಇಳಿಯುವುದು ಸುಲಭ. ದಡದಡನೆ ಕೆಳಗಿಳಿದು, ದಾಸೋಹದಲ್ಲಿ 'ಸಹನಾ ಭವತು...' ಹೇಳಿಕೊಂಡು ಉಂಡು, 'ಅನ್ನದಾತೋ ಸುಖೀಭವ' ಎಂದು ಹರಸಿ, ಬೈಕು ಹತ್ತಿ ವಾಪಸು ಹೊರಟರೆ ಸಿದ್ದರ ಬೆಟ್ಟ ತಾನು ಹಿಂದುಳಿದಿತ್ತು: ಇನ್ನೂ ಎಷ್ಟೋ ಸಿದ್ದರಿಗೆ, ಪ್ರಸಿದ್ಧರಿಗೆ, ಪ್ರವಾಸಿಗರಿಗೆ ತಾಣವಾಗಲು; ಆಕರ್ಷಣೆಯಾಗಲು; ಅಚ್ಚರಿಯಾಗಲು.

* * *

ಇದು, ಮೊನ್ನೆ ಮಾರ್ಚ್ ಹನ್ನೊಂದರ ಭಾನುವಾರ ನಾವು ಹೊಗಿದ್ದ ಪ್ರವಾಸದ 'ಕಥನ'. ಆ ಸಿದ್ದರು ನಾವೇ. ಸಿದ್ದರ ಬೆಟ್ಟಕ್ಕೆ ಹೋಗಲು ಸಿದ್ದತೆಯನ್ನೇನೂ ನಡೆಸಿರಲಿಲ್ಲ. ಶನಿವಾರ ಹೋಗಬೇಕು ಅಂತಾಯಿತು, ಭಾನುವಾರ ಬೆಳಗ್ಗೆ ಹೊರಟೆವು! ಹೊರಡುವುದು ಲೇಟಾಗಿದ್ದು, ಕಾಮತ್ತಲ್ಲಿ ತಿಂಡಿ ತಿಂದಿದ್ದು, ಮಧ್ಯೆ ಒಂದು ಗಾಡಿ ಪಂಕ್ಚರ್ ಆಗಿದ್ದು, ಅದನ್ನು ಅಲ್ಲಿಯೇ ಬಿಟ್ಟು, ಟ್ರಿಬಲ್ ಡ್ರೈವ್ ಮಾಡಿಕೊಂಡು ಹೋಗಿದ್ದು, ಊಟ ಮಾಡಿದ್ದು, ಬಾಳೆ ಹಣ್ಣು ತಿಂದಿದ್ದು, ವಾಪಸು ಬರುತ್ತಾ ಪಂಕ್ಚರ್ ಕಟ್ಟಿಸಿದ್ದು, ಮತ್ತೆ ಅದು ಪಂಕ್ಚರ್ ಆಗಿದ್ದು, ಅಲ್ಲೇ ನಿಲ್ಲಿಸಿಕೊಂಡು ಮೆಕ್ಯಾನಿಕ್ಕನ್ನು ಕರೆಸಿದ್ದು, ಹೊಸ ಟ್ಯೂಬು ತಂದದ್ದು, ತರುವವರೆಗೆ ಉಳಿದವರು ಆಟ ಆಡಿದ್ದು, ಮತ್ತೆ ಕಾಮತ್ತಲ್ಲಿ ದೋಸೆ-ಐಸ್‍ಕ್ರೀಮ್ ತಿಂದಿದ್ದು........ ಎಲ್ಲಾ ಬರೆಯುತ್ತಾ ಹೋದರೆ ಭಾಳಾ ಉದ್ದವಾದೀತೆನ್ನಿಸಿ, ಸ್ವಲ್ಪ ಭಟ್ಟಿ ಇಳಿಸಿದೆ.

ಬೆಟ್ಟ ಹತ್ತಿಳಿದ, ಅಷ್ಟು ದೂರ ಬೈಕಿನಲ್ಲಿ ಪಯಣಿಸಿದ ಸುಸ್ತು ಇನ್ನೂ ಪೂರ್ತಿ ಹೋಗಿಲ್ಲ. ಉಳಿದಂತೆ ಎಲ್ಲಾ ಅರಾಂ.

- - - - - - - -
ಫೋಟೋಸ್: ಸಂದೀಪ ನಡಹಳ್ಳಿ / ಸುಬ್ಬು ||| ಮತ್ತಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Saturday, March 10, 2007

ಕೊಟ್ಟಿಗೆ: ಒಂದು ಸುಲಲಿತ ಪ್ರಬಂಧ

ಅಮ್ಮ ಅಂದಳು ಫೋನಿನಲ್ಲಿ "ದನ ಮೊನ್ನೆ ಕರ ಹಾಕ್ಚು. ಆದರೆ ಹಾಲು ಕರೆಯಕ್ಕೇ ಕೊಡ್ತಾ ಇಲ್ಲೆ. ಹಾಯಕ್ಕೇ ಬರ್ತು. ನಿಲ್ತೇ ಇಲ್ಲೆ ಒಂದು ಕಡೆ, ಒಂದೇ ಸಮನೆ ತಿರುಗ್ತು. ಮೊಲೆಗೆ ಕೈ ಹಾಕಿದ್ರೆ ಒದಿತು.."

ಅಯ್ಯೋ! ಏನಾಯಿತು ನಮ್ಮನೆ ದನಕ್ಕೆ? ಎಂಥ ಸಿಟ್ಟು ಅದಕ್ಕೆ? ನಾನು ಯೋಚಿಸಿದೆ. ಹೇಳಿದೆ ಅಮ್ಮನ ಹತ್ರ "ಕೈ ಮರ್ಚಲೇನ? ಅಪ್ಪನ ಹತ್ರ ನೋಡಕ್ಕೆ ಹೇಳಕ್ಕಾಯಿತ್ತು" ಅಂತ. ಅಮ್ಮ ಅಂದಳು "ಅಯ್ಯೋ ಎಲ್ಲಾ ನೋಡ್ಯಾತು. ಅವರಿಗೂ ಕೊಡ್ಲೆ. ನಿನ್ನೆ ಮಾವ ಬಂದಿದ್ದಿದ್ದ, ಅವನ ಹತ್ರ ನೋಡು ಅಂದ್ಯ. ಅವಂಗೆ ಸಲೀಸಾಗಿ ಕೊಡ್ಚು!"

ವಿಷಯ ಏನಪ್ಪಾ ಅಂದ್ರೆ, ಅದು ಮಾವನ ಮನೆಯಿಂದ ಹೊಡೆದು ತಂದ ದನ. ನಮ್ಮನೆಯಲ್ಲಿ ಅಜ್ಜಿ ತೀರಿಕೊಂಡಾಗ, ಪ್ರತಿ ತಿಂಗಳೂ ಗೋಗ್ರಾಸ ಕೊಡಬೇಕಲ್ಲ, ಅದಕ್ಕೆ ದನ ಇರಲಿಲ್ಲ. ಬೇರೆ ಯಾರ ಮನೆ ದನಕ್ಕಾದರೂ ಕೊಡುವುದು ಅಂತ ನಾವು ತೀರ್ಮಾನಿಸಿದ್ದೆವು. ಆದರೆ ಅಷ್ಟೊತ್ತಿಗೆ ನಮ್ಮನೆ ಎಮ್ಮೆಯೂ ಹಾಲು ಕಮ್ಮಿ ಮಾಡಿತ್ತು. 'ಓ, ಈಗ ಒಂದು ಬೇರೆ ಜಾನುವಾರು ಮಾಡೋದೇ ಸೈ' ಅಂತ ಅಪ್ಪ ಯೋಚಿಸುತ್ತಿದ್ದಾಗಲೆ ಮಾವ ಬಂದು "ಈಗ ಅರ್ಜೆಂಟಿಗೆ ಎಲ್ಲಿ ಅಂತ ಹುಡುಕ್ತಿ? ನಮ್ಮನೆ ದನಾನೆ ಹೊಡಕಂಡು ಹೋಕ್ಯಳಿ" ಅಂದ. ನಾವೂ ಹೆಚ್ಚು ಯೋಚಿಸದೆ ಮಾವನ ಮನೆ ದನ 'ಕೃಷ್ಣೆ'ಯನ್ನು ತಂದುಕೊಂಡೆವು. ತೌರಿನಿಂದ ಬಂದಮೇಲೆ ಬೇರೆ ಹೆಸರಿಡುವ ಸಂಪ್ರದಾಯ ಜಾನುವಾರುಗಳಲ್ಲಿ ಇಲ್ಲವಾದರೂ ನಾನು ಅದಕ್ಕೆ 'ಮಂಗಳ' ಅಂತ ಹೊಸ ಹೆಸರಿಟ್ಟೆ. ನಾನು ಆ ಹೆಸರಿಟ್ಟಿದ್ದಕ್ಕೆ ನಿಜವಾದ ಕಾರಣ ಅದು ನನ್ನ ಕಾಲೇಜಿನ ಚಂದದ ಹುಡುಗಿಯೊಬ್ಬಳ ಹೆಸರು ಎಂಬುದಾಗಿತ್ತಾದರೂ "ಇವತ್ತು ಮಂಗಳವಾರವಾದ್ದರಿಂದ 'ಮಂಗಳ' ಅಂತ ಹೆಸರಿಟ್ಟೆ" ಅಂತ ನಾನಂದಾಗ ನಮ್ಮ ಮನೆಯಲ್ಲಿ ಯಾರಿಗೂ ಅನುಮಾನ ಬರಲಿಲ್ಲ.

ಇದೆಲ್ಲಾ ಆಗಿದ್ದು ಎರಡು ವರ್ಷದ ಹಿಂದೆ. ಆದರೆ ಆ ದನ ಇನ್ನೂ ಮಾವನನ್ನು ನೆನಪಿಟ್ಟುಕೊಂಡಿದೆ! ಅದು ಅವರ ಮನೆಯಲ್ಲೇ ಹುಟ್ಟಿದ ದನ. ಮಾವನ ಮನೆಯವರು ಅಕ್ಕರೆಯಿಂದ ಬೆಳೆಸಿದ ದನ. ಮೊದಲನೇ ಕರು ಹಾಕಿದಾಕ್ಷಣ ನಮ್ಮನೆಗೆ ಬಂದಿತ್ತು ಅದು.

ಹಳ್ಳಿ ಮನೆ ಎಂದಮೇಲೆ ಅದಕ್ಕೊಂದು ಕೊಟ್ಟಿಗೆ ಇರಬೇಕು. ಕೊಟ್ಟಿಗೆ ತುಂಬಾ ಜಾನುವಾರುಗಳಿರಬೇಕು. ಒಂದು ಕೊಟ್ಟಿಗೆ ಇದೆ ಎಂದರೆ ಏನೆಲ್ಲ ಇರಬೇಕು... ಹುಲ್ಲು ಗೊಣಬೆ, ಕಲ್ಡದ ಬ್ಯಾಣ, ಹಸಿಹುಲ್ಲಿಗೆ ಹಿತ್ಲು, ಹಿಂಡಿ-ಗೋಧಿಭೂಸ-ತೌಡು ಶೇಖರಿಸಿಡಲು ಗೋಡೌನು, ಅಕ್ಕಚ್ಚು ತೋರಲು ಒಂದು ಹಿಂಡಾಲಿಯಂ ಬಕೀಟು, ಹರಿದು ಹೋದರೆ ಬೇಕಾಗುತ್ತದೆ ಎಂದು ತಂದಿಟ್ಟ ಎಕ್ಸ್‍ಟ್ರಾ ಕಣ್ಣಿ.... ಕೊಟ್ಟಿಗೆ ಇದೆ ಎಂದಮೇಲೆ ಅಲ್ಲಿ ಏನೆಲ್ಲ ಇರುತ್ತದೆ... ಆಡಿಕೊಳ್ಳಲೆಂದು ಅಂಗಳದಲ್ಲಿ ಬಿಟ್ಟಿದ್ದ ಕರು ಅಲ್ಲಲ್ಲಿ ಹಾಕಿದ ಸಗಣಿ ಉಳ್ಳೆ, ಸರಿಯಾದ ಹೊತ್ತಿಗೆ ಹುಲ್ಲು ಹಾಕಲಿಲ್ಲವೆಂದರೆ ಕೊಟ್ಟಿಗೆಯಿಂದ ಬರುವ ದನದ 'ಅಂಬಾ..' ಕೂಗು, ಅದನ್ನು ಹಿಂಬಾಲಿಸುವ ಎಮ್ಮೆಯ 'ಆಂಯ್' ಕೂಗು, ಹಾಗೆ ಕೊಟ್ಟಿಗೆಯಿಂದ ಕೂಗುಗಳು ಬಂದಾಕ್ಷಣ ಅಮ್ಮನನ್ನು 'ಹುಲ್ಲು ಹಾಕಲ್ಯನೇ?' ಎಂದು ಕೇಳುವ ಅಪ್ಪ, 'ಹಿಂಡಿ ಖಾಲಿ ಆಯ್ದು. ಸುಬ್ಬಣ್ಣನ ವ್ಯಾನು ಸಾಗರಕ್ಕೆ ಹೋಗ್ತೇನ, ಒಂದು ಚೀಲ ಹಾಕ್ಯಂಡು ಬರಕ್ಕೆ ಹೇಳಲಾಗಿತ್ತು' ಎಂಬ ಅಮ್ಮನ ವರಾತ, ಹಾಲು ಕೊಡದಿದ್ದರೆ 'ಮುರ ಇಟ್ಕಂಡು ನೋಡಿ' ಎಂಬ ಸಲಹೆ... ಕೊಟ್ಟಿಗೆ ಎಂಬುದು ಹಳ್ಳಿಯ ಮನೆಗಳ ಅವಿಭಾಜ್ಯ ಅಂಗ. ಅದು ಹಳ್ಳಿಗರ ಜೀವನಶೈಲಿಯೆಂಬ ಚಿತ್ರಾನ್ನಕ್ಕೆ ಹಾಕಿದ ಉಪ್ಪು-ಖಾರ.

ಮನೆಗೆ ಹೊಂದಿಕೊಂಡಂತೆ ಇರುತ್ತದೆ ಕೊಟ್ಟಿಗೆ. ಚಪ್ಪಡಿ ಹಾಸಿದ ಕೊಟ್ಟಿಗೆಯಲ್ಲಿ ಮಧ್ಯದಲ್ಲೊಂದು ಒಗದಿ. ಜಾನುವಾರು ಹೊಯ್ದ ಉಚ್ಚೆ (ಗ್ವಾತ), ಅವುಗಳ ಮೈತೊಳೆದ ನೀರು, ಎಲ್ಲಾ ಆ ಒಗದಿಯ ಮೂಲಕ ಸಾಗಿ ಗೊಬ್ಬರಗುಂಡಿಯ ಪಕ್ಕ ಇರುವ ಒಂದು ಬಾನಿಗೆ ಬೀಳುತ್ತದೆ. ಹುಲ್ಲು ತಿನ್ನುತ್ತಾ ನಿಂತಿರುವ ದನ, ಮಲಗಿ ಮೆಲಕು ಹಾಕುತ್ತಿರುವ ಎಮ್ಮೆ, ಆಸೆಗಣ್ಣುಗಳಲ್ಲಿ ತಾಯಿಯನ್ನೇ ನೋಡುತ್ತಿರುವ ಕರು, ತಾನು ಹಾಕಿದ ಸಗಣಿಯನ್ನು ತಾನೇ ಮೂಸುತ್ತಿರುವ ಪೆದ್ದ ಎಮ್ಮೆಕರು... ಈ ಜಾನುವಾರುಗಳು ಎಷ್ಟೊಂದು ಸುಖಿಗಳು ಅನ್ನಿಸುತ್ತದೆ ಎಷ್ಟೋ ಸಲ. ಅವುಗಳ ಸುಖ ನಮಗಿಲ್ಲವಲ್ಲ ಅನ್ನಿಸುತ್ತದೆ. ಅರಾಮಾಗಿ ಹಾಕಿದ ಹುಲ್ಲು ತಿನ್ನುವುದು, ಮಲಗುವುದು, ಮೆಲುಕು ಹಾಕುವುದು, ಏಳುವುದು.... ಉಚ್ಚೆ ಹೊಯ್ಯುವುದಕ್ಕೂ ಹೊರಗೆ ಹೋಗಬೇಕಿಲ್ಲ; ಸಂಡಾಸನ್ನು ಲ್ಯಾಟ್ರೀನ್ ರೂಮಿಗೇ ಹೋಗಿ ಮಾಡಬೇಕೆಂಬ ರಿಸ್ಟ್ರಿಕ್ಷನ್ ಇಲ್ಲ! ನಿಂತಲ್ಲೇ ಎಲ್ಲಾ ಮಾಡಿದರಾಯಿತು. ಬೇಕಾದರೆ ಸಾಕಿಕೊಂಡವರು ಅವನ್ನೆಲ್ಲಾ ಕ್ಲೀನ್ ಮಾಡಿಕೊಳ್ಳಲಿ. ಆಹಾ! ಎಷ್ಟು ಸುಖಜೀವನ! ಯಾವ ಸಾಫ್ಟ್‍ವೇರ್ ಇಂಜಿನಿಯರ್ರಿನ ಹೆಂಡತಿಗಿದೆ ಈ ಸುಖ?

ಇವೆಲ್ಲಾ ಮೇಯಲು ಹೊರಗಡೆ ಬಿಡದ, ಮನೆಯಲ್ಲೇ ಕಟ್ಟಿ ಹಾಕುವ ಮನೆಗಳ ಜಾನುವಾರುಗಳ ಸುಖದ ಕತೆಯಾದರೆ ಮೇಯಲು ಬ್ಯಾಣಕ್ಕೆ ಬಿಡುವ ಜಾನುವರಗಳ ಸುಖ ಮತ್ತೊಂದು ತರ! ಬೆಳಗ್ಗೆ ಎದ್ದ ಕೂಡಲೆ ಹುಲ್ಲು ಹಾಕಿ, ಹಾಲು ಕರೆದು, ತೊಳಕಲು, ಹಿಂಡಿ ಕೊಟ್ಟು, ಕಣ್ಣಿ ಕಳಚಿ ಹೊರಗೆ ಬಿಟ್ಟರೆ ಆಮೇಲು ಅವು ವಾಪಾಸು ಕೊಟ್ಟಿಗೆಗೆ ಬರುವುದು ಸೂರ್ಯ ಮುಳುಗಿದ ಮೇಲೇ. ಕೆಲ ಊರುಗಳಲ್ಲಿ ದನಗಾವಲು ಅಂತಲೇ ಇರುತ್ತದೆ. 'ದನ ಕಾಯುವ ಹುಡುಗ' ಎಂಬ ಬಿರುದಾಂಕಿತ ಹುಡುಗನೊಬ್ಬ ತನ್ನ ಕಂಬಳಿ ಕೊಪ್ಪೆ ಮತ್ತು ದಾಸಾಳ ಬರ್ಲು ಹಿಡಿದು 'ದನ ಹೊಡಿರೋss..' ಎಂದು ಕೂಗುತ್ತ ಪ್ರತಿ ಬೆಳಗ್ಗೆ ಬರುತ್ತಾನೆ. ಅವನ ಕೂಗು ಕೇಳುತ್ತಿದ್ದಂತೆ ಎಲ್ಲರೂ ತಮ್ಮ ಮನೆಗಳ ಕೊಟ್ಟಿಗೆಯ ಬಾಗಿಲು ತೆರೆದು ದನಕರುಗಳನ್ನು ಕಣ್ಣಿ ಕಳಚಿ ಹೊರಬಿಡುತ್ತಾರೆ. ಎಲ್ಲರ ಮನೆಯ ಜಾನುವಾರುಗಳ ಹಿಂಡಿನ ಜೊತೆ ನಮ್ಮನೆ ದನವೂ ಸೇರಿಕೊಳ್ಳುವುದನ್ನು ನೋಡುವಾಗ ಶಾಲೆಗೆ ಹೊರಟ ಮಗುವಿನ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೀಳ್ಕೊಡುವ ಹೃದಯ ಒಂದು ಕ್ಷಣ ತುಂಬಿಕೊಳ್ಳುತ್ತದೆ.

ಗೋಪಬಾಲಕ ಜಾನುವಾರುಗಳನ್ನೆಲ್ಲ ಹೊಡೆದುಕೊಂಡು ಯಾವುದೋ ಬೆಟ್ಟದ ಮೇಲೋ, ಹುಲ್ಲುಗಾವಲಿಗೋ ಒಯ್ಯುತ್ತಾನೆ. ಅಲ್ಲಿ ಅವನ್ನೆಲ್ಲಾ ಮೇಯಲು ಬಿಟ್ಟು ಇವನು ಮರ ಹತ್ತಿ ಹಣ್ಣು ಕೀಳುವುದೋ, ಊರ ಹುಡುಗರಿಗೆ ಎರಡು ರೂಪಾಯಿಗೆ ಕೊಡಲು ಪೆಟ್ಲು ಮಾಡುವುದರಲ್ಲೋ ತೊಡಗುತ್ತಾನೆ. ಅವನು ಹಾಗೆ ಬೇರೆ ಕಡೆ ಹೋಗುತ್ತಿದ್ದಂತೆಯೇ ದನಗಳು ಮರದ ತಂಪನ್ನರಸಿ ಹೊರಟರೆ ಎಮ್ಮೆಗಳು ಕೆಸರಿನ ಹೊಂಡ ಎಲ್ಲಿದೆ ಅಂತ ಹುಡುಕಿ ಹೊರಡುತ್ತವೆ. ಈ ಎಮ್ಮೆಗಳಿಗೆ ಕೆಸರಿನ ಹೊಂಡದಲ್ಲಿ ಹೊರಳಾಡುವುದೆಂದರೆ ಭಾರೀ ಪ್ರೀತಿ. ಉರಿಬಿಸಿಲಿನಲ್ಲಿ ಮುಖವನ್ನಷ್ಟೇ ನೀರಿನಿಂದ ಮೇಲಕ್ಕೆ ಎತ್ತಿ ಕೆಸರಿನ ಹೊಂಡದಲ್ಲಿ ಶತಸೋಮಾರಿಯಂತೆ ಈಜುತ್ತಾ ತೂಕಡಿಸುತ್ತಾ ಇರುವ ಎಮ್ಮೆಯ ಸುಖದ ತಂಪಿನ ಮುಂದೆ ಹೊಂಡಾ ಕಾರಿನ ಏಸಿ ಏನೂ ಅಲ್ಲ. ಹೊಟ್ಟೆಕಿಚ್ಚಾಗುತ್ತೆ ಅದನ್ನು ನೋಡಿದರೆ!

ಸೂರ್ಯ ಮುಳುಗುವ ಹೊತ್ತಿಗೆ ದನಕರುಗಳೆಲ್ಲ ತಮ್ಮ ತಮ್ಮ ಮನೆ ಸೇರುತ್ತವೆ. ಬೆಳಗ್ಗೆಯಷ್ಟೆ ಮೈತೊಳೆದು ಬಿಟ್ಟಿದ್ದ ಎಮ್ಮೆ ಮೈಯೆಲ್ಲಾ ಕೆಸರು ಮಾಡಿಕೊಂಡು ಬಂದದ್ದನ್ನು ನೋಡಿ ಅಪ್ಪ ಸಿಡಿಮಿಡಿಗೊಳ್ಳುತ್ತಾನೆ. ಗೂಟಕ್ಕೆ ಕಣ್ಣಿ ಕಟ್ಟಿ ಹಿಂದೆ ಬರುವಾಗ ಅದು ಬೀಸಿದ ಬಾಲ ಅಪ್ಪನ ಮುಖಕ್ಕೆ ಹೊಡೆದು ಅಪ್ಪನ ಸಿಟ್ಟು ಇಮ್ಮಡಿಯಾಗುತ್ತದೆ. 'ಥೂ, ಸುಮ್ನೆ ನಿಂತ್ಕಳಕ್ಕೆ ಆಗ್ತಲ್ಯನೆ?' ಎಂದು ಒಂದೇಟು ಕೊಡುತ್ತಾನೆ. ಆಮೇಲೆ ಅಕ್ಕಚ್ಚು ಕೊಡುತ್ತಾನೆ. ಯಜಮಾನ ಬೈದನಲ್ಲ ಎಂಬ ಅವಮಾನಕ್ಕೋ ಅಥವಾ ಮತ್ತೆ ಹೊಡೆದಾನು ಎಂಬ ಭಯಕ್ಕೋ, ಪೂರ್ತಿ ಎರಡು ಬಕೆಟ್ ಅಕ್ಕಚ್ಚನ್ನು ಶುಲ್ಟಿ ಎಮ್ಮೆ ತಲೆ ಎತ್ತದೆ ಕುಡಿದು ಮುಗಿಸುತ್ತದೆ. ಆಮೇಲೆ ಅಮ್ಮ ದನದ ಹಾಲನ್ನೂ ಅಪ್ಪ ಎಮ್ಮೆಯ ಹಾಲನ್ನೂ ಕರೆಯುತ್ತಾರೆ. ಹಾಲು ಕರೆದಾದಮೇಲೆ ಹುಲ್ಲು ಹಾಕಿ, ಕೊಟ್ಟಿಗೆಯ ಬಾಗಿಲು ಮುಚ್ಚಿ ಒಳಬಂದರೆ ಹೆಚ್ಚುಕಮ್ಮಿ ಅವತ್ತಿನ ಕೊಟ್ಟಿಗೆ ಕೆಲಸ ಆದಂತೆಯೇ.

ಹಳ್ಳಿಯ ಜನ ಕೊಟ್ಟಿಗೆಗೆ, ಜಾನುವಾರುಗಳಿಗೆ ಎಷ್ಟು ಹೊಂದಿಕೊಂಡಿರುತ್ತಾರೆಂದರೆ ಒಂದು ದಿನ ಕೊಟ್ಟಿಗೆಗೆ ಹೋಗಲಿಲ್ಲವೆಂದರೆ ಸಮಾಧಾನವಿರುವುದಿಲ್ಲ. ಅಲ್ಲದೇ ಕೊಟ್ಟಿಗೆ ಇಲ್ಲದಿದ್ದರೆ ಹಳ್ಳಿ ಮನೆಯ ಜನಗಳಿಗೆ ಅಂತಹ ಕೆಲಸವೂ ಇರುವುದಿಲ್ಲ. ಕೊಟ್ಟಿಗೆ ಕೆಲಸ ದಿನದ ಮುಖ್ಯ ಕೆಲಸಗಳಲ್ಲಿ ಒಂದು. ಬೆಳಗ್ಗೆ ಎದ್ದಕೂಡಲೇ ಹಾಲು ಕರೆಯುವುದು, ಆಮೇಲೆ ದನಕರುಗಳ ಮೈತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನ್ ಮಾಡುವುದು, ಗೋಬರ್ ಗ್ಯಾಸಿಗೆ ಸಗಣಿ ಕರಡುವುದು, ಹಿತ್ಲಿನಿಂದ ಹಸಿ ಹುಲ್ಲು ಕೊಯ್ದು ತರುವುದು, ಅವಾಗಿವಾಗ ಹುಲ್ಲು ಹಾಕುತ್ತಿರುವುದು, ಸಂಜೆ ತೊಳಕಲು ತೋರುವುದು, ಹಿಂಡಿ ಕೊಡುವುದು.... ಹೀಗೆ ಕೊಟ್ಟಿಗೆ ಕೆಲಸ ಹಳ್ಳಿಗರ ದಿನದ ಬಹಳ ಸಮಯವನ್ನು ತಿಂದು ಹಾಕುತ್ತದೆ. ಇದನ್ನು ಆಲೋಚಿಸಿಯೇ ಕೆಲ ಮನೆಯವರು ಇತ್ತೀಚೆಗೆ ತಮ್ಮ ಮನೆಯ ಜಾನುವಾರುಗಳನ್ನೆಲ್ಲಾ ಮಾರಿ ಹಾಲು ಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಅಲ್ಲದೇ ಕೊಟ್ಟಿಗೆಗೆ ಖರ್ಚೂ ತುಂಬಾನೇ ಬರುತ್ತದೆ. ದನಕರುಗಳಿಗೆ ಹಿಂಡಿ, ಹತ್ತಿಕಾಳು, ಗೋಧಿಬೂಸ, ತೌಡು, ಬಿಳಿಹುಲ್ಲು.... ಹೀಗೆ ಆಹಾರಕ್ಕೇ ಸಿಕ್ಕಾಪಟ್ಟೆ ಖರ್ಚು. ಅವಕ್ಕೆ ಖಾಯಿಲೆ-ಕಸಾಲೆ ಬಂದರಂತೂ ಡಾಕ್ಟರಿಗೆ-ಔಷಧಿಗೆ ದುಡ್ಡು ಕೊಟ್ಟು ಪೂರೈಸುವುದೇ ಅಲ್ಲ. ಈ ಮಧ್ಯೆ ಎಮ್ಮೆ-ದನಗಳು ಯಾವಾಗ ಬತ್ತಿಸಿಕೊಳ್ಳುತ್ತವೆ (ಹಾಲುಕೊಡುವುದು ನಿಲ್ಲಿಸುವುದು) ಎಂದು ಹೇಳಲಾಗುವುದಿಲ್ಲ. ಬಲ್ಡು (ಬರಡು) ಬಿದ್ದ ಜಾನುವಾರನ್ನು ಇಟ್ಟುಕೊಂಡು ಸುಮ್ಮನೆ ಸಾಕುವುದು ಯಜಮಾನನಿಗೆ ಹೊರೆಯೇ. ಹೀಟಿಗೆ ಬಂದಾಗ ಮಳಗದ್ದೆ ಮನೋಹರನನ್ನೋ ಮೂಡಗೋಡು ಅರವಿಂದನನ್ನೋ ಕರೆಸಿ ಇನ್ಸೆಮಿನೇಶನ್ ಮಾಡಿಸಬೇಕು. ಒಂದೇ ಸಲಕ್ಕೆ ಗರ್ಭ ಕಟ್ಟುತ್ತದೆ ಅಂತ ಹೇಳಲಾಗುವುದಿಲ್ಲ. ಮತ್ತೆ ಮತ್ತೆ ಕರೆಸಬೇಕಾಗಬಹುದು. ಗಬ್ಬ ಆಗಿ ಐದಾರು ತಿಂಗಳಾದ ಮೇಲೆ ದನ ಹಾಲು ಕೊಡುವುದು ನಿಲ್ಲಿಸುತ್ತದೆ. ಇನ್ನು ಅದು ಕರು ಹಾಕುವವರೆಗೂ ಕಾಯಬೇಕು. ಇದೆಲ್ಲಾ ರಗಳೆಗಳು ಬೇಡವೇ ಬೇಡ ಎಂದು ನಿರ್ಧರಿಸಿ ಹಳ್ಳಿ ಜನಗಳು ಈಗೀಗ 'ಬುದ್ಧಿವಂತ'ರಾಗುತ್ತಿದ್ದಾರೆ. ದಿನಕ್ಕೆ ಎರಡು ಲೀಟರ್ ಹಾಲು ಕೊಂಡರಾಯಿತು. ತೋಟಕ್ಕೆ ಹಾಕಿಸಲು ಎರಡು ಲೋಡ್ ಗೊಬ್ಬರ ಕೊಂಡರಾಯಿತು. ಅಡುಗೆಗೆ ಹೇಗಿದ್ದರೂ ಸಿಲಿಂಡರ್ ಗ್ಯಾಸ್ ಇದೆ.

ಆದರೆ ಹಾಗೆ ಜಾನುವಾರುಗಳನ್ನೆಲ್ಲಾ ಕೊಟ್ಟು ಕೊಟ್ಟಿಗೆ ಖಾಲಿ ಮಾಡಿಕೊಂಡವರು ಆ ಮೂಲಕ ಕೆಲಸ ಕಮ್ಮಿ ಮಾಡಿಕೊಂಡರೂ ಕೊಟ್ಟಿಗೆಯಿಂದ ಸಿಗುತ್ತಿದ್ದ ಅದೆಷ್ಟೋ ಖುಷಿಯನ್ನು ಅವರು ಮಿಸ್ ಮಾಡಿಕೊಳ್ಳುತ್ತಾರೆ. ದನಕರುಗಳು, ಅವು ಕೊಟ್ಟಿಗೆಯಲ್ಲಿದ್ದರೂ, ಮನೆ ಮಂದಿಯಷ್ಟೇ ಪ್ರಾಮುಖ್ಯತೆ ಇರುತ್ತದೆ ಅವಕ್ಕೆ. 'ಏನೇ, ಇನ್ನೂ ಮಲಗಿದ್ಯಲ, ಏಳು ಸಾಕು' ಎನ್ನುತ್ತಾ ಕೊಟ್ಟಿಗೆಗೆ ಹೋದರೆ ಅದೆಷ್ಟು ದೈನ್ಯತೆಯಿಂದ ಎದ್ದು ನಿಲ್ಲುತ್ತದೆ ದನ! ಎಷ್ಟು ಪ್ರೀತಿ ತೋರಿಸುತ್ತದೆ ಅದು ಯಜಮಾನನಿಗೆ! ಸಾಕುಪ್ರಾಣಿಗಳ ಒಡನಾಟದಲ್ಲಿ ನಾವು ನಮ್ಮ ದುಃಖವನ್ನೆಲ್ಲಾ ಮರೆಯುತ್ತೇವೆ. ಅಪ್ಪ-ಅಮ್ಮ ಯಾವುದೋ ಕಾರಣಕ್ಕೆ ಬೈದಾಗ ಕೊಟ್ಟಿಗೆಗೆ ಹೋಗಿ ಕರುವಿನ ಎದುರು ನಿಂತು ಬಿಕ್ಕಿ ಬಿಕ್ಕಿ ಅಳುತಿದ್ದರೆ, ಅದು ನಮ್ಮ ಕಷ್ಟವನ್ನೆಲ್ಲಾ ಅರಿತಂತೆ, ತನ್ನ ಒರಟು ನಾಲಿಗೆಯಿಂದ ನಮ್ಮ ಕಾಲನ್ನು ನೆಕ್ಕುತ್ತಾ ಸಾಂತ್ವನ ಹೇಳುತ್ತದೆ. ಕೊಟ್ಟಿಗೆಗೆ ಹೋಗಿ ಬರುವಾಗೆಲ್ಲ ದನಕರುಗಳೊಂದಿಗೆ ಮಾತನಾಡುತ್ತಾ, ಅವುಗಳ ಮೈದಡುವುತ್ತಾ, ಒಂದು ವಿಲಕ್ಷಣ ಸುಖವನ್ನು ಅನುಭವಿಸುತ್ತಿರುತ್ತೇವೆ.

ಜಾನುವಾರುಗಳಿಗೆ, ಕೊಟ್ಟಿಗೆಯನ್ನು ತೂಗಿಸುವುದಕ್ಕೆ ತುಂಬಾ ಖರ್ಚು ಬರುತ್ತದೆಯಾದರೂ ಅದರಿಂದ ಲಾಭವೂ ಅಷ್ಟೇ ಇದೆ. ಒಳ್ಳೆಯ ಬನಿ ಇರುವ ಹಾಲು, ಸಗಣಿಯಿಂದ ಗೋಬರ್ ಗ್ಯಾಸ್, ಕೊಟ್ಟಿಗೆಯ ತ್ಯಾಜ್ಯದಿಂದ ತೋಟಕ್ಕೆ ಫಲವತ್ತಾದ ಗೊಬ್ಬರ.... ನಮ್ಮನೆ ಅಜ್ಜಿ ಅವಾಗಿವಾಗ ಹೇಳುತ್ತಿದ್ದಳು: 'ನಾವು ತಿನ್ನೋದು ದನಕರದ ಸಗಣಿ! ಅವುನ್ನ ಚನಾಗಿ ಸಾಕವು' ಅಂತ. ಎಷ್ಟೋ ಸಲ ಅದು ಸರಿ ಅನ್ನಿಸುತ್ತದೆ.

ಎಮ್ಮೆ ವ್ಯಾಪಾರದಿಂದಲೇ ದುಡ್ಡು ಮಾಡಿದವರಿದ್ದಾರೆ. ಅದನ್ನೇ ದಂಧೆಯನ್ನಾಗಿ, ಉದ್ಯೋಗವನ್ನಾಗಿ ಮಾಡಿಕೊಂಡವರಿದ್ದಾರೆ. ಕ್ಯಾಸನೂರು ಮಾರ್‍ಯಾ (ಮಾರಪ್ಪ)ನಂತೂ ಫೇಮಸ್ಸು ನಮ್ಮ ಕಡೆ! ಸಾಗರದ ಪುರುಷೋತ್ತಮ ಎಮ್ಮೆ ದಲ್ಲಾಳಿ ಮಾಡಿ ಮಾಡಿಯೇ ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದಾನೆ! ಒಳ್ಳೆಯ ಶುಲ್ಟಿ (ಸುರುಟಿ) ಎಮ್ಮೆಗಳಿಗೆ, ಜರ್ಸಿ ಆಕಳುಗಳಿಗೆ ತುಂಬಾನೇ ರೇಟ್ ಇದೆ.

ನಾನು ಇಲ್ಲಿ ಬರೆದದ್ದೆಲ್ಲಾ ದನ-ಎಮ್ಮೆಗಳ ಕತೆಯಾಯಿತು. ಗದ್ದೆ ಇರುವ ಮನೆಗಳಲ್ಲಿ ಕೋಣ, ಎತ್ತುಗಳನ್ನೂ ಸಾಕಿರುತ್ತಾರೆ. ಎತ್ತುಗಳು ಗದ್ದೆ ಉಳುಮೆಗೆ, ಗಾಡಿಯಲ್ಲಿ ಸರಂಜಾಮುಗಳನ್ನು ಸಾಗಿಸುವುದಕ್ಕೆ ಬಳಸಲ್ಪಡುತ್ತವೆ. ಕೋಣಗಳು ಆಲೆಮನೆಯಲ್ಲಿ ಗಾಣ ತಿರುಗಿಸಲಿಕ್ಕೆ ಬಳಸಲ್ಪಡುತ್ತವೆ. ಗದ್ದೆ ಇಲ್ಲದ ಮನೆಯಲ್ಲಿ ಗಂಡು ಕರುಗಳು ಜನಿಸಿದರೆ ಅವಕ್ಕೆ ಒಂದೆರಡು ವರ್ಷ ವಯಸ್ಸಾಗುತ್ತಿದ್ದಂತೆಯೇ ಮಾರಿಬಿಡುತ್ತಾರೆ. 'ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕು; ಮನೆಯಲ್ಲಿ ಗಂಡು ಹುಟ್ಟಬೇಕು' ಎಂಬುದು ನಮ್ಮ ಕಡೆ ನಾಣ್ಣುಡಿ.

ಮನುಷ್ಯರಿಗೆ ಇಷ್ಟೆಲ್ಲಾ ಉಪಕಾರ ಮಾಡುವ ದನಕರುಗಳಿಗೆ ಹಳ್ಳಿಗರು ದೀಪಾವಳಿಯ ಸಮಯದಲ್ಲಿ ವಿಶೇಷ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಗೋವುಗಳಿಗೆ ಎಣ್ಣೆ ಸ್ನಾನ ಮಾಡಿಸಿ, ಬಣ್ಣ ಹಚ್ಚಿ, ಹೂಮಾಲೆ ಕಟ್ಟಿ ಸಿಂಗರಿಸಿ, ಭರ್ಜರಿ ಪೂಜೆ ಮಾಡಿ, ಹೋಳಿಗೆ-ಗೋಗ್ರಾಸ ಕೊಟ್ಟು ಸಂಭ್ರಮಿಸುತ್ತಾರೆ. ಗೋವುಗಳನ್ನು ದೇವರೆಂದೇ ಪೂಜಿಸುತ್ತಾರೆ. ಗೋಮಾತಾ ಎಂದೇ ಕರೆಯುತ್ತಾರೆ. ಆದರೆ ಗೋವಿಗೆ ಸಿಗುವ ಈ ವಿಶೇಷ ಆದರ ಎಮ್ಮೆ-ಕೋಣಗಳಿಗೆ ಅಷ್ಟಾಗಿ ಸಿಕ್ಕುವುದಿಲ್ಲ.

ಬೆಂಗಳೂರಿನಿಂದ ಊರಿಗೆ ಹೋದಾಗೆಲ್ಲಾ, ನನ್ನನ್ನು ಎಂದೂ ಮರೆಯದ ಮಂಗಳ, ನನ್ನನ್ನು ಕಾಣುತ್ತಿದ್ದಂತೆ ಕಣ್ಣಿ ಕಿತ್ತು ಬರುವಂತೆ, ನನ್ನನ್ನು ಮುಟ್ಟಲು ಬಾಗುತ್ತಾ ಹಾತೊರೆಯುತ್ತದೆ. ಕಾಲೇಜಿನ ಮಂಗಳಳ ಪ್ರೀತಿ ದಕ್ಕದಿದ್ದರೂ ಕೊಟ್ಟಿಗೆಯ ಮಂಗಳಳ ಪ್ರೀತಿ ಸಿಕ್ಕತಲ್ಲ, ನಾನು ಧನ್ಯ! ಅದರ ಪ್ರೀತಿಗೆ ನನ್ನ ಮರುಪ್ರೀತಿಯ ಶರಣು.

Monday, March 05, 2007

ಹೀಗೊಂದು ವೀಕೆಂಡು

ಈ ಸಲದ ವೀಕೆಂಡನ್ನು ಬಹಳ ಚೆನ್ನಾಗಿ ಕಳೆದೆ. ಇಷ್ಟೊಳ್ಳೆಯ ವೀಕೆಂಡ್ ಅನುಭವಿಸದೇ ತಿಂಗಳುಗಳೇ ಆಗಿದ್ದವೇನೋ? ಈ ಪರಿ ಭಾವಾವೇಶಕ್ಕೆ ಒಳಗಾಗದೆಯೂ.

ಮೊನ್ನೆ ಶನಿವಾರ ಬೆಂಗಳೂರಿಗರೆಲ್ಲ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಮಜಾ ಮಾಡುತ್ತಿದ್ದರು. ನನಗೆ ಯಾರೂ ಎರಚಲಿಲ್ಲವಾದರೂ ನಾನೂ ಎರಚಿಸಿಕೊಂಡವನಷ್ಟೇ ಉನ್ಮಾದದಲ್ಲಿ ತೇಲುತ್ತಿದ್ದೆ. ಈ ಬೆಂಗಳೂರಿಗರು ಎಲ್ಲದರಲ್ಲೂ ಸ್ವಲ್ಪ ಓವರ್ರು. ಇವರು ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಡೀ ಆಚರಿಸುತ್ತಾರೆ (ಕೆಲವೊಮ್ಮೆ ತಿಂಗಳು ಮುಗಿದರೂ ಆರ್ಕೆಸ್ಟ್ರಾದವರ ಮೈಕು ಕೇಳಿಸುತ್ತಿರುತ್ತದೆ). ಚೌತಿ ಮುಗಿದು ಎರಡು ತಿಂಗಳಾದರೂ 'ಗಾಯತ್ರಿನಗರ ಗೆಳೆಯರ ಬಳಗದ ೧೫ನೇ ವರ್ಷದ ಗಣಪತಿ ಉತ್ಸವ' ನಡೆಯುತ್ತಿರುತ್ತದೆ. ಹಬ್ಬಗಳನ್ನಂತೂ ಒಂದನ್ನೂ ಬಿಡದೇ ಆಚರಿಸುತ್ತಾರೆ. ಹೋಳಿಹಬ್ಬ ಆಗಿ ಮೂರು ದಿನ ಆದರೂ ಇವರ ಬಣ್ಣ ಎರಚುವ ಸಂಭ್ರಮ ಮುಗಿದಿರುವುದಿಲ್ಲ. ಇವತ್ತು ಆಫೀಸಿಗೆ ಬರುವಾಗ ಕಾಲೇಜ್ ಹುಡುಗರು ಮುಖಕ್ಕೆಲ್ಲಾ ಬಣ್ಣ ಮೆತ್ತಿಕೊಂಡು ಕುಣಿದಾಡುತ್ತಿರುವುದನ್ನು ನೋಡಿದೆ. ಹುಡುಗಿಯರು ಅಂಜಿಕೊಂಡು ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟುಕೊಂಡು ಬರುತ್ತಿದ್ದರು (ಪಾಪ!).

ಶನಿವಾರ ರಾತ್ರಿಯ ಹೊತ್ತಿಗೆ ಬೆಂಗಳೂರಿಗರು ತಮ್ಮ ಮುಖಗಳಿಗೆ ಎಣ್ಣೆ ಹಚ್ಚಿಕೊಂಡು, ಲಕ್ಸ್ ಸೋಪಿನಿಂದ ಬಣ್ಣ ತೊಳೆದುಕೊಳ್ಳುತ್ತಿರುವಾಗ ನಾನು ಟೆರೇಸಿನ ಮೇಲೆ ಚಾಪೆ ಹಾಸಿ ಆಕಾಶ ನೋಡುತ್ತಾ ಮಲಗಿಕೊಂಡಿದ್ದೆ. ಗೆಳೆಯ ಶ್ರೀನಿಧಿಗೆ ಫೋನಾಯಿಸಿದರೆ ಅವನು ಅದೆಲ್ಲೋ ಭುವನಗಿರಿಯ ಬೆಟ್ಟದ ಮೇಲೆ ಚಂದ್ರವೀಕ್ಷಣೆಯಲ್ಲಿ ತೊಡಗಿರುವುದಾಗಿ ಹೇಳಿದ. ನಾವು ಭಾವಜೀವಿಗಳದ್ದು ಇದೊಂದು ಕರ್ಮ! ಬಣ್ಣ ಹಚ್ಚಿಕೊಂಡು ವಿಕಾರಗೊಂಡ ಮುಖಗಳಲ್ಲೂ ಸೌಂದರ್ಯ ಕಾಣುತ್ತದಾ ಅಂತ ಹುಡುಕುತ್ತಿರುತ್ತೇವೆ, ಚಂದ್ರಗ್ರಹಣ ಇದೆ ಇವತ್ತು ರಾತ್ರಿ ಎಂದರೆ -ಅದು ಎಷ್ಟೊತ್ತಿಗಾದರೂ ಇರಲಿ- ಕಣ್ಣಿಗೆ ಎಣ್ಣೆ ಹಾಕಿಕೊಂಡು ನಿದ್ದೆ ಮಾಡದೇ ಆಕಾಶ ನೋಡುತ್ತಾ ಕಾಯುತ್ತೇವೆ! ಮೊನ್ನೆಯ ಚಂದ್ರಗ್ರಹಣ ಇದ್ದದ್ದು ಬೆಳಗಿನ ಜಾವ ಮೂರಕ್ಕೆ. ಅಲ್ಲಿಯವರೆಗೆ ಮಲಗಿ ಅಲಾರ್ಮ್ ಇಟ್ಟುಕೊಂಡು ಎದ್ದು ವೀಕ್ಷಿಸೋಣ ಅಂದುಕೊಂಡೆ. ಆದರೆ ಕಾದಂಬರಿಯೊಂದು ಅರ್ಧ ಓದಿದ ಸ್ಥಿತಿಯಲ್ಲಿತ್ತು. ಸರಿ ಹಾಗಾದ್ರೆ, ಅದನ್ನು ಪೂರ್ತಿ ಮಾಡಿಬಿಡೋಣ ಅಂತ ಅಂದುಕೊಂಡು, ಒಳಬಂದು, ಕಾದಂಬರಿಯ ಪುಟಗಳಲ್ಲಿ ಕಣ್ಣು ಹುದುಗಿಸಿ ಮಲಗಿಕೊಂಡೆ. ಹಾಗೇ ಓದ್ತಾ ಓದ್ತಾ ಅಕಸ್ಮಾತಾಗಿ ನಿದ್ದೆ ಬಂದುಬಿಟ್ಟರೆ ಕಷ್ಟ ಅಂತ ಅಲಾರ್ಮನ್ನೂ ಮೂರು ಗಂಟೆಗೆ ಸೆಟ್ ಮಾಡಿಟ್ಟಿದ್ದೆ.

ಕಾದಂಬರಿ ಮುಗಿದಾಗ ಎರಡು ಗಂಟೆ ನಲವತ್ತೇಳು ನಿಮಿಷ. ಹೊರಬಂದು ನೋಡಿದೆ. ಚಂದಿರನಿಗೆ ಇನ್ನೂ ಯಾರ ನೆರಳೂ ತಾಗಿರಲಿಲ್ಲ. ಮತ್ತೆ ಟೆರೇಸಿನಲ್ಲಿ ಚಾಪೆ ಹಾಸಿ ನನ್ನ ಚಂದ್ರನನ್ನು ವೀಕ್ಷಿಸುತ್ತಾ ಮಲಗಿದೆ. ಕೆಲ ಗೆಳೆಯರಿಗೆ ಮಿಸ್-ಕಾಲ್ ಕೊಟ್ಟು ಎಚ್ಚರ ಮಾಡಿದೆ. ಕೆಲವರಿಂದ ಬೈಗುಳದ ಎಸ್ಸೆಮ್ಮೆಸ್ ವಾಪಸ್ ಬಂತು. ಮಧ್ಯರಾತ್ರಿ ನಿದ್ರೆ ಕೆಡಿಸಿದರೆ ಯಾರಿಗಾದರೂ ನಖಶಿಖಾಂತ ಕೋಪ ಬರುತ್ತದೆ. ಕನಿಷ್ಟ ಮಳ್ಳಂಡೆಯಿಂದ ಮುಖದವರೆಗಂತೂ ಬರುತ್ತದೆ. 'ಒಳ್ಳೆಯ' ಭಾಷೆ ಬಳಸಿದ ಬೈಗುಳ ದೊರೆಯುತ್ತದೆ. ಅವರ ಬೈಗುಳವನ್ನು ನಾನು ಎಂಜಾಯ್ ಮಾಡಿದೆ. ಭಾಷಾಬಳಕೆಯ ಸಾಮರ್ಥ್ಯವನ್ನು ಮೆಚ್ಚಿಕೊಂಡೆ.

ತಿಂಗಳ ಬೆಳಕ ತುಂತುರು ಚೆಲ್ಲುತ್ತಿರುವ ಶಶಿ... ಯಾವುದೋ ದೂರದ ದೇಶಕ್ಕೆ ಬೆಳಕು ಕೊಡುತ್ತಿರುವ ರವಿ... ತಿರುಗುತ್ತಿರುವ ಭುವಿ... ಅಲ್ಲೆಲ್ಲೋ ಭುವನಗಿರಿಯ ಬೆಟ್ಟದ ಮೇಲೆ ಕುಳಿತಿರುವ ನಿಧಿ... ಇಲ್ಲಿ 'ಟೆರೇಸುಶಯನ'ನಾಗಿರುವ ನಾನು... ಎಲ್ಲಕ್ಕೂ ಬಂಧವನ್ನು ಬೆಸೆಯುತ್ತಿರುವ ಈ ರಾತ್ರಿ...

ಸದಾ ಸೂರ್ಯನನ್ನು ನೋಡುತ್ತಲೇ ಇರಬೇಕಂತೆ ಚಂದ್ರನಿಗೆ. ಆದರೆ ಈ ಭೂಮಿಗೆ ಅದೇನು ಹೊಟ್ಟೆಕಿಚ್ಚೋ ಅವನ ಮೇಲೆ? 'ಏಯ್, ಇವತ್ತು ನಿಂಗೆ ನೋಡ್ಲಿಕ್ಕೆ ಬಿಡಲ್ಲ' ಅಂತಂದು, ಸೂರ್ಯ-ಚಂದ್ರರ ಮಧ್ಯೆ ತಾನು ಅಡ್ಡ ಬರುತ್ತಾಳಂತೆ ಧಾರಿಣಿ...

ಚಂದ್ರನನ್ನು ಭೂಮಿಯ ನೆರಳು ಪೂರ್ತಿ ಕವಿಯುವವರೆಗೂ ನಾನು ಎಚ್ಚರಿದ್ದು ಆಕಾಶ ನೋಡುತ್ತಿದ್ದೆ. ನಾಲ್ಕೂ ಮುಕ್ಕಾಲರ ಹೊತ್ತಿಗೆ 'ಇನ್ನು ಸಾಕು' ಅನ್ನಿಸಿ, "ಗ್ರಹಣ ಬಿಡದೇ ಏನಾದ್ರೂ ಹೆಚ್ಚು-ಕಮ್ಮಿ ಆದ್ರೆ ನಂಗೆ ತಿಳ್ಸಿ" ಅಂತ ಗೆಳೆಯರಿಗೆ ಒಂದು ಮೆಸೇಜು ಕಳಿಸಿ, ಒಳಬಂದು ಮಲಗಿದೆ.

ಹಾಗೆ ಮಲಗಿದವನಿಗೆ ಎಚ್ಚರಾದದ್ದು ಭಾನುವಾರ ಮಧ್ಯಾಹ್ನ ಹನ್ನೊಂದಕ್ಕೆ ಅಂತ ಎದ್ದ ಕೂಡಲೇ ಗೊತ್ತಾಯಿತು. ಚುರುಗುಡುತ್ತಿರುವ ಹೊಟ್ಟೆಯನ್ನು ಸಮಾಧಾನಗೊಳಿಸಲು ತಿಂಡಿ ತಿನ್ನುವುದೊಂದೇ ಪರಿಹಾರವಾಗಿತ್ತಾದ್ದರಿಂದ, ಹಲ್ಲುಜ್ಜಿ, ಮುಖ ತೊಳೆದು, ಕೆಳಗಿಳಿದು ಹೋಗಿ, ಹೋಟೆಲ್ಲಿನಲ್ಲಿ ತಿಂಡಿ ತಿಂದು, ಒಂದು 'ವಿಜಯ ಕರ್ನಾಟಕ' ಪೇಪರು ತಗೊಂಡು ಬಂದೆ. 'ಎಲ್ಲಿ ಏನು' ಕಾಲಮ್ಮಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ೪.೩೦ಕ್ಕೆ ಸಿ. ಅಶ್ವತ್ಥ್, ಎಸ್.ಪಿ.ಬಿ. ಸಂಗಡಿಗರಿಂದ ಸುಗಮ ಸಂಗೀತ ಅಂತ ಇತ್ತು. ಮಿಸ್ ಮಾಡಿಕೊಳ್ಳಬಾರದು ಅಂತ ತೀರ್ಮಾನಿಸಿ ಹೋಗಲು ತಯಾರಾದೆ.

ಕಲಾಕ್ಷೇತ್ರದ ಬಾಗಿಲಲ್ಲಿ ನನ್ನನ್ನು ತಡೆದು ನಿಲ್ಲಿಸಿದರು: 'ಎಂಟ್ರಿ ವಿತ್ ಪಾಸ್ ಓನ್ಲೀ!' ಅಯ್ಯೋ ಇಲ್ಲಿಯವರೆಗೆ ಬಂದು ವಾಪಾಸ್ ಹೋಗುವಂತಾಯಿತಲ್ಲ ಅಂತ ಬೇಜಾರಾಯಿತು. ಕಲಾಕ್ಷೇತ್ರದ ಪಕ್ಕದಲ್ಲಿ ಒಂದು ಸ್ಕ್ರೀನ್ ಹಾಕಿದ್ದರು. ಆದರೆ ಇನ್ನೂ ಹೊರಗಡೆ ಬಿಸಿಲಿತ್ತಾದ್ದರಿಂದ ಪ್ರಾಜೆಕ್ಟರಿನ ಬೆಳಕು ಸ್ಕ್ರೀನಿನ ಮೇಲೆ ಕಾಣುತ್ತಲೇ ಇರಲಿಲ್ಲ. ಸೌಂಡ್ ಮಾತ್ರ ಕೇಳುತ್ತಿತ್ತು. ಮತ್ತೇನು ಮಾಡುವುದು, ಸ್ವಲ್ಪ ಹೊತ್ತು ಇಲ್ಲಿಯೇ ಕುಳಿತು ನೋಡಿ (ಕೇಳಿ) ಹೋಗೋಣ ಅಂತ ಕುಳಿತೆ. ನನ್ನಂತಹ ಇನ್ನೂ ಅನೇಕ ನಿರ್ಭಾಗ್ಯವಂತರು ಅಲ್ಲಿದ್ದರು. ಅಷ್ಟೊತ್ತಿಗೆ ಗೆಳೆಯ ಸಂತೋಷ ಬಂದ. ಅವನು ಬಂದಮೇಲೆ ನನಗೆ ಮತ್ತೊಮ್ಮೆ ಹುಮ್ಮಸ್ಸು ಬಂತು. ಇಬ್ಬರೂ ಹೋಗಿ ದ್ವಾರಪಾಲಕನ ಬಳಿ ರಿಕ್ವೆಸ್ಟ್ ಮಾಡಿಕೊಂಡೆವು. 'ಸೀಟಿಲ್ಲ ಸಾರ್, ಬೇಕಾದ್ರೆ ನಿಂತ್ಕೊಂಡು ನೋಡಿ. ನಿಮ್ಮಿಬ್ರನ್ನೇ ಒಳಗಡೆ ಬಿಡ್ತಿದೀನಿ ಮತ್ತೆ' ಅಂತಂದು ನಮ್ಮನ್ನು ಒಳಗಡೆ ಬಿಟ್ಟ. ಅವನಿಗೊಂದು ದೊಡ್ಡ ಥ್ಯಾಂಕ್ಸ್ ಹೇಳಿ ನಾವು ಕಲಾಕ್ಷೇತ್ರದ ಉಪ್ಪರಿಗೆ ಏರಿದೆವು. ಅವನು ಹೇಳಿದಂತೆ ಸೀಟೆಲ್ಲ ಭರ್ತಿಯಾಗಿದ್ದವು. ನಾವು ಮೆಟ್ಟಿಲ ಮೇಲೆ ಕುಳಿತೆವು.

ಕಾರ್ಯಕ್ರಮದ ಹೆಸರು 'ಸ್ವರ ಸಮರ್ಪಣೆ'. ಅದು ಸಿ. ಅಶ್ವತ್ಥ್ ತಮ್ಮ ಕುಟುಂಬದವರೊಂದಿಗೆ ತಮ್ಮ ಪ್ರೀತಿಯ ಕವಿಗಳಿಗೋಸ್ಕರ ಏರ್ಪಡಿಸಿದ್ದ ಸನ್ಮಾನ ಸಮಾರಂಭ. ಜಿ.ಎಸ್. ಶಿವರುದ್ರಪ್ಪ, ಚಂದ್ರಶೇಖರ ಕಂಬಾರ, ಬಿ.ಆರ್. ಲಕ್ಷ್ಮಣರಾವ್, ಎಚ್.ಎಸ್. ವೆಂಕಟೇಶಮೂರ್ತಿ, ಡುಂಡಿರಾಜ್, ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್, ಸುಬ್ರಾಯ ಚೊಕ್ಕಾಡಿ, ಎಂ.ಆರ್. ಕಮಲ -ಇವರುಗಳನ್ನು ಅಶ್ವತ್ಥ್ ತಮ್ಮ ಕುಟುಂಬದ ಸದಸ್ಯರಿಂದಲೇ ಸನ್ಮಾನಿಸಿದರು. ಹಿರಿಯರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದ ಮೊದಲ ಹಂತದ ಈ ಆಪ್ತ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ನರಹಳ್ಳಿ ಬಾಲಸುಬ್ರಹ್ಮಣ್ಯ, ಮತ್ತಿತರು ಭಾಗವಹಿಸಿದ್ದರು. ಪುಸ್ತಕಗಳು, ಸಿಡಿಗಳು ಬಿಡುಗಡೆಯಾದವು.

ಉಪ್ಪಿಟ್ಟು-ಕಾಫಿಯ ನಂತರ ಏಳೂ ಹದಿನೈದಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಶುರುವಾಯಿತು. ಅಶ್ವತ್ಥ್, ಎಸ್.ಪಿ., ಸಂಗೀತಾ ಕಟ್ಟಿ, ಎಮ್.ಡಿ. ಪಲ್ಲವಿ, ಸುಪ್ರಿಯಾ ಆಚಾರ್ಯ ಮತ್ತಿತರರು ಗಾನಸುಧೆ ಉಣಿಸಿದರು. ಪ್ರತಿ ಹಾಡು ಮುಗಿದ ಮೇಲೂ ಬೀಳುತ್ತಿದ್ದ ಚಪ್ಪಾಳೆಯ ಜೋರು ಶಬ್ದ ಕಲಾಕ್ಷೇತ್ರದ ಟೆರೇಸಿಗೆ ಹೊಡೆದು ಅಲ್ಲಿ ಗಾಯಗಳಾಗುತ್ತಿದ್ದವು. ಅಶ್ವತ್ಥರ 'ಖದರಿ'ಗೆ ಎಸ್ಪಿಯೇ ದಂಗಾಗಿಹೋದರು. 'ಹೀಗೆ ಹಾಡ್ಲಿಕ್ಕೆ ನನಗೇ ಭಯವಾಗುತ್ತೆ' ಅಂತ ಒಪ್ಪಿಕೊಂಡುಬಿಟ್ಟರು. ಸುಮಾರು ಹತ್ತು-ಹನ್ನೆರಡು ಹಾಡುಗಳಾದ ಮೇಲೆ ಎಸ್.ಪಿ. 'ಮಾವು ಬೇವು' ಅಲ್ಬಮ್ಮಿನ 'ಯಾರಿಗುಂಟು ಯಾರಿಗಿಲ್ಲ' ಗೀತೆಯನ್ನು ಹಾಡಲು ಬಂದರು. ಅರ್ಧ ಹಾಡನ್ನು ತಾವೊಬ್ಬರೇ ಹಾಡಿದಮೇಲೆ ಅಶ್ವತ್ಥರನ್ನೂ 'ಕಮ್ ಅಶ್ವತ್ಥ್‍ಜೀ' ಅಂತ ಕರೆದು, ಇಬ್ಬರೂ ಸೇರಿ ಹಾಡಲು ಶುರುವಿಟ್ಟರು ನೋಡಿ? ಜನಗಳ ಉನ್ಮಾದ ತಾರಕ್ಕೇರಿಬಿಟ್ಟಿತು. ಚಪ್ಪಾಳೆ, ಸಿಳ್ಳೆ, ಕೇಕೆ... ಓಹ್! ಅಶ್ವತ್ಥ್-ಎಸ್.ಪಿ.ಬಿ.ಯವರ ಜುಗಲ್‍ಬಂದಿ ಅದಿನ್ಯಾವ ಪರಿ ಜನರನ್ನು ಖುಷಿಗೊಳಿಸಿತೆಂದರೆ, ಎಲ್ಲರೂ 'ಒನ್ಸ್ ಮೋರ್' 'ಒನ್ಸ್ ಮೋರ್' ಎಂದು ಕೂಗಹತ್ತಿದರು. 'ಜಾಸ್ತಿ ಆದ್ರೆ ಅಜೀರ್ಣ ಆಗೊತ್ತೆ ಸುಮ್ನಿರಿ' ಅಂದು ಸುಮ್ಮನಾಗಿಸಿದರು ಎಸ್ಪಿ. 'ಬಾ ಇಲ್ಲಿ ಸಂಭವಿಸು...' ಕೊನೆಯ ಹಾಡಿನಲ್ಲಂತೂ ಅಶ್ವತ್ಥ್ ಹುಚ್ಚೆಬ್ಬಿಸಿಬಿಟ್ಟರು. ಅವರು ಧ್ವನಿ ಏರಿಸುವ ರೀತಿ, ಧ್ವನಿಯನ್ನು ಹಿಡಿದಿಡುವ ರೀತಿ... ಉಫ್! ಜಸ್ಟ್ ಅಮೇಜ಼ಿಂಗ್. ಹರ್ಷವನ್ನು, ಭಾವಾವೇಶವನ್ನು ತಡೆಯಲಾಗದೆ ನಾವೆಲ್ಲಾ ಕುಣಿದಾಡಿಬಿಟ್ಟೆವು.

ವಾಪಸು ಬರುವ ದಾರಿಯಲ್ಲಿ ನನಗನ್ನಿಸಿತು: ಕನ್ನಡಿಗರಿಗೆ ಕನ್ನಡದ ಬಗ್ಗೆ ಪ್ರೀತಿಯಿಲ್ಲ ಎಂಬುದೆಲ್ಲಾ ಸುಳ್ಳೇ ಸರಿ. ಹಿಂದೆ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮಕ್ಕೂ ನಾನು ಹೋಗಿದ್ದೆ. ಪ್ಯಾಲೇಸ್ ಗ್ರೌಂಡ್ಸ್ ತುಂಬಿ ಹೋಗಿತ್ತು: ಅಷ್ಟು ಜನ! ಸುಮಾರು ಎಪ್ಪತ್ತೈದು ಸಾವಿರ ಜನ ಸೇರಿದ್ದರು. ಮತ್ತೆ ಆ ಕಾರ್ಯಕ್ರಮಕ್ಕೇನು ಯಾವುದೇ ರಾಜಕೀಯ ಮುಖಂಡರಾಗಲೀ, ಚಿತ್ರನಟ-ನಟಿಯರಾಗಲೀ ಬಂದಿರಲಿಲ್ಲ. ಆದರೂ ಅಷ್ಟೊಂದು ಜನ, ಭಾವಗೀತೆಗಳನ್ನು ಕೇಳಲೆಂದೇ ಬಂದಿದ್ದರು. ಇತ್ತೀಚೆಗೆ ಬೇಂದ್ರೆ, ಅಡಿಗ, ನಿಸಾರ್‌ರ ಕಾವ್ಯ ವಾಚನ ಕಾರ್ಯಕ್ರಮಗಳು ನಡೆದವಲ್ಲ? ಅದಕ್ಕೂ ಜನ ಕಿಕ್ಕಿರಿದು ಸೇರಿದ್ದರು. 'ಕನ್ನಡ ಅಳಿದು ಹೋಗುತ್ತದೆ' ಎಂಬ ಭಯಗಳೆಲ್ಲಾ ಸುಳ್ಳೇನೇನೋ ಅನ್ನಿಸುತ್ತದೆ ಕೆಲವೊಮ್ಮೆ. ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ನೋಡುವುದಿಲ್ಲ ಅನ್ನುತ್ತಾರೆ ಕೆಲವರು. ಯಾಕೆ ನೋಡುವುದಿಲ್ಲ? 'ಮುಂಗಾರು ಮಳೆ'ಯಂತಹ ಒಳ್ಳೆಯ ಚಿತ್ರಗಳು ಬಂದರೆ ನೋಡಿಯೇ ನೋಡುತ್ತಾರೆ. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಯಾಗಿ ತಿಂಗಳೊಳಗೆ ನಾಲ್ಕು ಬಾರಿ ಮರುಮುದ್ರಣ ಕಂಡಿದೆ ಅಂದರೆ ಏನು ತಮಾಷೆಯೇ? ಸದಭಿರುಚಿಯ, ಒಳ್ಳೆಯ, ಮುದ ನೀಡುವ, ಖುಷಿ ಕೊಡುವ ಏನನ್ನು ಕೊಟ್ಟರೂ ಜನ ಸ್ವೀಕರಿಸುತ್ತಾರೆ. ಕೊಡಬೇಕಾದರೆ ನೋಡಿಕೊಂಡು ಕೊಡಬೇಕಷ್ಟೇ.

'ಸ್ವರ ಸಮರ್ಪಣೆ'ಯಲ್ಲಿ ಹೊಡೆದ ಚಪ್ಪಾಳೆಯಿಂದಾಗಿ ನನ್ನ ಕೈ ಇನ್ನೂ ಉರಿಯುತ್ತಿದೆ. ತುಂಬಿಕೊಂಡಿರುವ ಭಾವೋನ್ಮಾದ ಬಹಳ ದಿನಗಳಿಗೆ ಸಾಕಾಗುವಷ್ಟಿದೆ. ಒಂದು ಒಳ್ಳೆಯ ವೀಕೆಂಡು ಕಳೆದ ಖುಷಿಯಲ್ಲಿ ಮನೆಯ ಮೆಟ್ಟಿಲು ಹತ್ತಿದೆ. ಬಟ್ಟೆ ತೊಳೆಯುವುದಿತ್ತು.

- - - - - - - - - - - -
Related article: ಗ್ರಹಣ ಮತ್ತು ಚಂದ್ರ

Friday, March 02, 2007

ಮೂರುಸಂಜೆಗೆ ಮೂರು ಹಾಡುಗಳು

"ಸಂಜೆಗೂ ಬೇಸರಕ್ಕೂ ಬಿಡಿಸಲಾಗದ ನಂಟು..."

ಹೌದಲ್ಲ? ಯಾಕೆ ಹಾಗೆ? "ಪಶ್ಚಿಮ ದಿಗಂತದ ಬಣ್ಣ ಕಣ್ಣನ್ನೇ ದಣಿಸುವಷ್ಟು ಮೋಹಕವಾಗಿ ಹಬ್ಬಿದೆ. ಸೂರ್ಯರಶ್ಮಿ ಮಣ್ಣನ್ನೂ ಚಿನ್ನವಾಗಿಸಿದೆ. ಆದರೆ ಒಂದೇ ಕೊರಗು: ಸಂಗಾತಿ ಇಲ್ಲದಿರುವುದು!"

ನಿಸಾರ್ ಅಹ್ಮದರ ಲೇಖನಿಯಿಂದ ಬರೆಯಲ್ಪಟ್ಟ ಈ ಹಾಡು, 'ನಿತ್ಯೋತ್ಸವ' ಕ್ಯಾಸೆಟ್ಟಿನಲ್ಲಿ ಮೈಸೂರು ಅನಂತಸ್ವಾಮಿಯವರ ದನಿಯಲ್ಲಿ ಹಾರ್ಮೋನಿಯಂ ನಾದದೊಂದಿಗೆ ಹೊಮ್ಮುತ್ತಿದ್ದರೆ, ಅದು ಸಂಜೆಯಲ್ಲದಿದ್ದರೂ ಅಲ್ಲಿ ಸಂಜೆ ಕವಿಯುತ್ತದೆ. ಖುಷಿಯಲ್ಲಿದ್ದರೂ ಬೇಸರ ಆವರಿಸಿಕೊಳ್ಳುತ್ತದೆ.

ಸಂಜೆಗೆ ಸಂಗಾತಿ ಇರಬೇಕು. ರಾತ್ರಿಗೆ ಇರದಿದ್ದರೂ ನಡೆಯುತ್ತದೆ, ಸಂಜೆಗೆ ಬೇಕೇ ಬೇಕು. ಅದರಲ್ಲೂ ಜೀವನದ ಸಂಜೆಗೆ. ದಿನವೆಲ್ಲ ದುಡಿದು ದಣಿದಾಗಿದೆ. ಸಂಜೆ ಮನೆಗೆ ಬಂದಾಗ ಕುಡಿಯಲೊಂದು ಬೆಚ್ಚನೆ ಕಾಫಿಯನ್ನು ಅವಳು ತನ್ನ ಅಮೃತ ಹಸ್ತದಿಂದ ಕೊಡಬೇಕು. ಕೊಡುವಾಗ ಅವಳ ಕೈಯ ಹಸಿರು ಗಾಜಿನ ಬಳೆಗಳಲ್ಲಿ ಮುಳುಗುತ್ತಿರುವ ಕೆಂಪು ಸೂರ್ಯನ ರಶ್ಮಿ ಕಣ್ಣು ಹೊಡೆಯಬೇಕು. ಸಂಜೆಯಲೆ ರಾತ್ರಿ ಇಳಿಯಬೇಕು.

ಹಳೆಯ ಕಾಲವೆನ್ನಬೇಡಿ, ಈಗಲಾದರೂ ಅಷ್ಟೆ. ವಾರವೆಲ್ಲ ಆಫೀಸು, ಬ್ಯುಸಿ, ವರ್ಕ್‍ಲೋಡು. ಸಿಕ್ಕುವುದೊಂದು ಭಾನುವಾರ. ಮನೆ ಕ್ಲೀನ್ ಮಾಡುವುದು, ಬಟ್ಟೆ ವಾಶ್ ಮಾಡುವುದು, ಐರನ್ ಮಾಡುವುದು, ಮಧ್ಯಾಹ್ನದ 'ಸ್ಪೆಶಲ್' ಅಡುಗೆ, ಉಂಡಾದಮೇಲೆ ತೆಗೆದ 'ಮದ್ಧಿನ್ ಮೇಲಿನ್ ನಿದ್ದೆ', ನಂತರ ಕುಡಿದ ಕಾಫಿ... ಹೀಗೇ ಸಂಜೆಯಾಗಿದೆ. ಈಗೇನು ಮಾಡುವುದು? ಟಿವಿಯಲ್ಲಿ ಒಂದೂ ಒಳ್ಳೆಯ ಪ್ರೋಗ್ರಾಮ್ ಇಲ್ಲ. ರೂಂಮೇಟ್ ಸಹ ಎಲ್ಲಿಗೋ ಹೊರಟು ನಿಂತಿದ್ದಾನೆ. ಮುಳುಗಿತ್ತಿರುವ ಸೂರ್ಯನನ್ನು ನೋಡುತ್ತಾ ಸುಮ್ಮನೆ ಕುಳಿತಿರಲು ಆಗುವುದಿಲ್ಲ. ಸಿಗುತ್ತಾಳಾ ಅವಳು ಇವತ್ತು? ಬರಬಹುದಾ ಅವಳು ಇವತ್ತು? ಲಗುಬಗೆಯಿಂದ ಸಿದ್ಧಗೊಂಡು, ತಲೆ ಬಾಚಿಗೊಂಡು, ಕಂಕುಳಿಗೆ ಪೌಡರ್ ಹಾಕಿಕೊಂಡು, ಟೀಶರ್ಟ್-ಜೀನ್ಸ್ ತೊಟ್ಟು.. ಪ್ರತಿ ವಾರವೂ ಇದೇ ಕೆಲಸವಾಗಿದೆ. ಹಾಗಾದರೆ ಏನಾದಳು ಅವಳು? ಮೊಬೈಲು ಸ್ವಿಚ್ ಆಫ್. ಬರುತ್ತಾಳೋ ಇಲ್ಲವೋ, ಏನಾದರಾಗಲಿ ನಾನು ಹೋಗುವುದು ಹೋಗುತ್ತೇನೆ...

ಮೂರುಸಂಜೆ: ಅದು ಮೂರು ಬೆಳಕುಗಳ ಸಂಗಮ. ಸೂರ್ಯ ಇನ್ನೂ ಪೂರ್ತಿ ಮುಳುಗಿಲ್ಲ. ಚಂದಿರನ ತಿಂಗಳ ಬೆಳಕಿನ ತುಂತುರು ಅದಾಗಲೇ ಶುರುವಾಗಿದೆ. ಮತ್ತು, ಮನೆ-ಬೀದಿಯ ದೀಪಗಳು ಹೊತ್ತಿಕೊಳ್ಳುತ್ತಿವೆ. ಪಕ್ಕದ ಮನೆಯ ಗೃಹಿಣಿ ತುಳಸಿಕಟ್ಟೆಯ ಎದುರಿಗೆ ಹಣತೆಯನ್ನು ಹಚ್ಚಿಡುತ್ತಿದ್ದಾಳೆ.

ಲಾಲ್‍ಬಾಗು ಪ್ರೇಮಿಗಳಿಂದಲೇ ತುಂಬಿದೆ. ಎಲ್ಲರೂ ಅವರವರ ಸಂಗಾತಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಾರೆ. ಆದರೆ ನನ್ನ ಸಂಗಾತಿ ಎಲ್ಲಿ? ಸಂಗಾತಿಯ ಬರವಿಗಾಗಿ ಕಾದೂ ಕಾದೂ ಬೇಸತ್ತ ಜೀವಗಳ ಹೃದಯೋದ್ಘಾರ ಈ ಪದ್ಯ:

ಮತ್ತದೇ ಬೇಸರ; ಅದೇ ಸಂಜೆ; ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ!

ಕಣ್ಣನೇ ತಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ
ಚಿನ್ನ, ನೀನಿಲ್ಲದೆ ಭಿಮ್ಮೆನ್ನುತಿದೆ ರಮ್ಯೋದ್ಯಾನ!

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಹಾ! ಸಂದೇಹ
ಮುತ್ತಿದಾಲಸ್ಯವ, ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆ ಹಿರಿ ಬೇಲಿಯ ಸರಿ ನಿಲ್ಲಿಸು ಬಾ

ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ
ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ..
ವೆಚ್ಚವಾಗುತ್ತಿದೆ ಸವಿಚಣಗಳ ಧನ ದುಂದಾಗಿ
ನಲಿವಿನ ಗಳಿಕೆಗೆ ಬಳಸವುಗಳನು ಒಂದೊಂದಾಗಿ

//ಹಾಡು ಕೇಳಿ//

* * *

ಸಂಜೆಯ ಬಗ್ಗೆ ಒಳ್ಳೊಳ್ಳೆಯ ಪದ್ಯಗಳಿವೆ. ಕವಿ ಎಚ್.ಎಸ್. ವೆಂಕಟೇಶಮೂರ್ತಿ ದ್ವಾಪರಯುಗಕ್ಕೇ ಕರೆದೊಯ್ಯುತ್ತಾರೆ ಈ ಕವಿತೆಯಲ್ಲಿ:

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ
ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ
ಅಂಜಿಕೆಯಾಗುವ ಮುನ್ನವೆ ಸಾಗುವ ಬೃಂದಾವನದ ಕಡೆ

ದಟ್ಟಡವಿಯಲಿ ಪುಟ್ಟ ಬಾಲಕರು; ಕತ್ತಲು ಇಳಿಯುತಿದೆ
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ ಕಪ್ಪನು ಬಳಿಯುತಿದೆ
ಕೃಷ್ಣ ಕಪಿಲೆಯರು ಕಾಣುವುದಿಲ್ಲ; ಅಂಜಿಕೆ ಬೆಳೆಯುತ್ತಿದೆ

ಅಂಜದಿರೆನುವನು ನಂದಕುಮಾರ ಮುರಳಿಯ ತುಟಿಗಿಡುತ
ಅಭಯ ನಾದವನು ಬಯಲಲಿ ತುಂಬಿದ ಕೊಳಲ ಉಸಿರು ಬಿಡುತ
ಇರುಳ ಬಾನಿನಲಿ ತೇಲುತ ಬಂತು ಹುಣ್ಣಿಮೆ ಬೆಳ್ಳಿ ರಥ

ಎಲ್ಲಿ ನೋಡಿದರೂ ಬೆಳದಿಂಗಳ ಮಳೆ ಮಿದುವಾಯಿತು ನೆಲವು
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ ಕೂ ಎನ್ನುತ ಕೊಳವು
ಬೆಣ್ಣೆಯ ಮೆತ್ತಿದ ತುಟಿಯನೊರೆಸುತಿದೆ ಆ ಯಮುನಾಂಚಲವು

ಗೋಪಬಾಲಕರು ಕುಣಿಯುತಲಿಹರು ಕೊಳಲುಲಿ ಕೇಳುತ್ತಾ
ಮರೆತ ಸಾಲುಗಳ ಒರತೆಯ ಬಗೆದು ಗೀತವ ಪಲುಕುತ್ತಾ
ಹಸುಗಳ ಕೊರಳಿನ ಗಂಟೆಯಲುದಿಸಿ ನಾದಕೆ ಸಿಲುಕುತ್ತಾ;
ತಾರಾಲೋಕವ ನಿಲುಕುತ್ತಾ

//ಹಾಡು ಕೇಳಿ//

* * *

ಅಡಿಗರಂತೂ ಅಡಿಗಡಿಗೂ ನೆನಪಾಗಿ ಕಾಡುತ್ತಾರೆ. 'ಆವರಣ'ದಿಂದ ಹೊರಬರುವ ಪ್ರಯತ್ನವಾಗಿ ಮೊನ್ನೆ 'ಅಂಕಿತ'ದಿಂದ ಗೋಪಾಲಕೃಷ್ಣ ಅಡಿಗರ ಸಮಗ್ರ ಕಾವ್ಯವನ್ನು ಕೊಂಡುತಂದೆ. ಎಷ್ಟೊಂದು ಉದ್ದುದ್ದ ಕವಿತೆಗಳನ್ನು ಬರೆದಿದ್ದಾರೆ ಅಡಿಗರು. ಅಲ್ಲದೇ ಅವರು ಒಂದೊಂದು ಕವಿತೆಯನ್ನೂ ಬರೆಯಲಿಕ್ಕೆ ತೆಗೆದುಕೊಂಡ ಸಮಯ ಅಚ್ಚರಿಗೊಳಿಸುತ್ತದೆ. ಕೆಲವೊಂದು ಕವಿತೆ ಬರೆಯಲಿಕ್ಕೆ ಅವರು ಮೂರು-ನಾಲ್ಕು ತಿಂಗಳು ತೆಗೆದುಕೊಂಡಿದ್ದಾರೆ! ಆದರೆ ಅವು ಎಷ್ಟೊಂದು ಅದ್ಭುತವಾಗಿವೆ. ಸಂಕಲನದಿಂದ ಆಯ್ದ ಒಂದು ಕವಿತೆ ಇಲ್ಲಿದೆ. ಶೀರ್ಷಿಕೆ: 'ಒಂದು ಸಂಜೆ'.

ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸರಿಯಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು

//ಹಾಡು ಕೇಳಿ//

ಅದೆಷ್ಟು ಚೆನ್ನಾಗಿ ಬರೆಯುತ್ತಾರೆ ಅಡಿಗರು! ಒಂದು ಸಂಜೆ ಮೌನ ನೆಲವನ್ನು ತಬ್ಬಿತಂತೆ. ನೆಲ ಪುಳಕಗೊಂಡಿತಂತೆ. ಅದನ್ನು ನೋಡಿ ಬಾನು ನಾಚಿತಂತೆ. ಸಂಜೆಯ ಕೆಂಪಿನಡಿಯಲ್ಲಿ ಅಡಗಿತಂತೆ. ಹಕ್ಕಿಗಳು 'ಸೋಬಾನ' ಹಾಡಿದವಂತೆ..... ನೆಲವು ತಣಿಯಿತು, ಬೆವರು ಹನಿಯಿತು, ಭಾಷ್ಪ ನೆನೆಸಿತು ಹುಲ್ಲನು...

ಇಲ್ಲ, ಸಂಗಾತಿ ಇರಲೇಬೇಕು ಸಂಜೆಗೆ.