Saturday, June 25, 2011

ಟಂಗ್‌ಸ್ಟನ್ ಎಂದರೆ ಪ್ರೀತಿ

ಎಷ್ಟು ಸಣ್ಣ ಎಳೆ ಅದು ಹಿಡಿದಿಟ್ಟಿದ್ದು
ಅದೆಷ್ಟು ಬೆಳಕು, ಜುಮ್ಮೆನಿಸುವ ವಿದ್ಯುತ್ತು
ವಿರುದ್ಧ ಧ್ರುವಗಳನೂ ಜತೆಮಾಡಿದ ತಂತಿ
ಸಂಚರಿಸಿದ ಕಿರಣಗಳು, ಯಾರು ಕಟ್ಟಿದರು ಬಿಲ್ಲು?

ಅಳಿಸಿಬಿಡಬಹುದೇ ಹಾಗೆ ನೆನಪುಗಳನ್ನು, ಕರಿ-
ಹಲಗೆಯ ಮೇಲೆ ಬರೆದ ಚಿತ್ರವನ್ನು ಒರೆಸಿದಂತೆ ವಸ್ತ್ರ
ಮರೆಯಾಗಿಸಬಹುದೇ ಹಾಗೆ ಮರಳದಿಣ್ಣೆಯ ಮೇಲೆ
ಕೊರೆದ ಅಕ್ಷರಗಳನ್ನು ಒಂದೇ ಭರತದ ಅಲೆ
ತೊಳೆಯಬಹುದೇ ಹಾಗೆ ಹೋಳಿಯ ಬಣ್ಣ ಮೆತ್ತಿದ
ಅಂಗಿಯನ್ನು ನೆನೆಸಿಟ್ಟಲ್ಲೇ ಬುರುಗಿನ ನೀರು

ಎಷ್ಟೆಲ್ಲ ಕೆಲಸವಿದೆ- ಆರ್ಕುಟ್ಟಿನಲ್ಲಿನ ನಿನ್ನ ಸ್ಕ್ರಾಪು,
ಫೇಸ್‌ಬುಕ್ಕಿನಲ್ಲಿನ ಮೆಸೇಜು, ಜಿಮೇಲಿನಲ್ಲಿನ ಇಮೇಲು,
ಬ್ಲಾಗುಗಳಲ್ಲಿನ ಕಮೆಂಟು, ಮೊಬೈಲಿನಲ್ಲಿನ ಎಸ್ಸೆಮ್ಮೆಸ್ಸು...
ಎಲ್ಲವನ್ನು ಡಿಲೀಟು ಮಾಡಿ, ನೀನು ಕೊಟ್ಟ ಕೀಚೈನು,
ಪುಟ್ಟ ಟೆಡ್ಡಿಬೇರು, ಆರೇ ಸಾಲಿನ ಪತ್ರ, ಬಿಳಿನವಿಲಿನ ಚಿತ್ರ...
ಎಲ್ಲ ಒಯ್ದು ಎಲ್ಲಿಡಲಿ? ಊರಾಚೆ ಅಷ್ಟೆಲ್ಲ ಜಾಗವಿಲ್ಲ.

ನಕ್ಷತ್ರಗಳೆಲ್ಲ ಮಿಂಚುಹುಳುಗಳಾದರೆ
ಚಂದ್ರ ಎಲ್ಲಿಗೆ ಹೋಗಬೇಕು ಪಾಪ?
ಮೀನುಗಳೆಲ್ಲ ಸಮುದ್ರವನ್ನೇ ಬಯಸಿದರೆ
ನದಿಯ ಕಲ್ಲಿನ ಏಕಾಂತಕ್ಯಾರು ಜೊತೆ?

ಕತ್ತಲೆಗೆ ಹೆದರಿದವನಲ್ಲ ನಾನು,
ಆದರೂ ಇವತ್ಯಾಕೋ ಹೆಜ್ಜೆ ಮುಂದಾಗುತ್ತಿಲ್ಲ;
ಬಲ್ಬು ಹೋಗಿದೆ ಅಂತ ಗೊತ್ತಿದೆ,
ಆದರೂ ಸ್ವಿಚ್ ಒತ್ತುವುದು ಬಿಡುವುದಿಲ್ಲ.

[Eternal Sunshine of the Spotless Mind ಸಿನೆಮಾ ನೋಡಿ..]

Tuesday, June 14, 2011

ಅಮ್ಮನಿಗೆ

ಅವರು ಹೀಗಂದುದಕ್ಕೆ
ನಾನು ಹೀಗಂದೆ
ಎನ್ನುವಳು ಅಮ್ಮ

ಯಾರಿಗಾಗಿ ಈ ಸಮರ್ಥನೆ ಅಮ್ಮಾ..
ನನಗೆ ನೀನು ಗೊತ್ತು
ನಿನಗೆ ನಾನು ಗೊತ್ತು
ಅವರಿಗೂ ತಿಳಿದಿಲ್ಲವೆಂದಲ್ಲ
ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ
ಅದರ ಉತ್ತರಕ್ರಿಯೆಯೂ ಆಗಿರುತ್ತದೆ
ಆದರೂ ಕೇಳುತ್ತಾರೆ

ರಿಂಗಣವಾಗಿರಬಹುದು ಚಪ್ಪಾಳೆಯ ಮೊಳಗು
ಸಭೆಯ ಸರ್ವರ ಮುಂದೆ
ಮೆಚ್ಚಿರಬಹುದು ಅಹುದಹುದು ಎಂದು
ಆದರೆ ಮುಚ್ಚಿದ ಹೊದರಿನ ಕೆಳಗಿರುವ ಮಿತಿಗಳೂ
ಕದವಿಕ್ಕಿದ ಮನೆಯೊಳಗಿನ ಕತ್ತಲೆಯ ಕತೆಗಳೂ
ಮರೆತ ಸಾಲು, ತಪ್ಪಿ ತಗ್ಗಿದ ಶೃತಿಗಳೂ
ನಿನಗಷ್ಟೇ ಗೊತ್ತು.

ಮಗ ಕಾರ್ನೆಟೋ ಕೊಡಿಸುವಾಗ
ಐದನೇ ಕ್ಲಾಸಿನಲ್ಲಿ ರೇಖಾಗಣಿತದ ಮೇಷ್ಟ್ರು
ಬರೆಸಿದ್ದ ಶಂಕುವಿನ ಚಿತ್ರ ನೆನಪಾಗಿದ್ದು
ನಿನಗೇ ಹೊರತು ಅವರಿಗಲ್ಲ.
ಆದರೂ ಹೇಳುತ್ತಾರೆ: ‘ಎಂಥಾ ರಸಭಂಗ!’

ನೀನು ಅಲ್ಲಿಂದೀಚೆ ಬರುತ್ತಿದ್ದಂತೆಯೇ ಪ್ಲೇಟಿಗೆ ಹೊಯ್ದ
ಹಲ್ವಾವನ್ನು ನೀಟಾಗಿ ಕತ್ತರಿಸಿ ಎತ್ತಿ
ಕೈಗೆ ಬಾಯಿಗೆ ಹಲ್ಲಿಗೆ ಮೆತ್ತಿಕೊಳ್ಳುತ್ತ ಮೆಲ್ಲುತ್ತಾರೆ.
ಕೆಂಪುಗಾರೆಯ ನೆಲದ ಮೇಲೆ ಓಡಾಡುವ ಇರುವೆಗಳು
ತಲೆಯೆತ್ತಿ ನೊಡುತ್ತವೆ. ದಂಡುಪಾಳ್ಯದ
ಗ್ಯಾಂಗಿನಲ್ಲಿ ಸಾಲು ಸಾಲು ಸಂಚಲನ.

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ,
ನೀ ಸುಮ್ಮನಿರು ಎಂದರೆ ಅಮ್ಮ ಕೇಳುವುದಿಲ್ಲ.
ನಾಳೆ ನಮ್ಮ ಮನೆಯಲ್ಲೂ ಮಾಡುತ್ತಾಳಂತೆ
ಗೋಧಿ ಹಲ್ವಾ.

Saturday, June 04, 2011

ಅಪ್ಪ ಅಮ್ಮನ ಮದುವೆಯ ಅಲ್ಬಮ್

ನಿಮ್ಮ ಮದುವೆಯ ಮಾಸಲು ಮುಖಪುಟದ ಅಲ್ಬಮ್ ಸವರುವಾಗ
ಕಾಟನ್ ಶರ್ಟು-ಕಚ್ಚೆಪಂಚೆಯ ದೊಡ್ಡಜ್ಜ
ಜಗುಲಿಕಟ್ಟೆಯ ಆ ಹಳೇ ಮರದ ಖುರ್ಚಿಯಲ್ಲಿ ಕೂತು
ಕವಳ ಹಾಕುತ್ತಿದ್ದ ನೆನಪು.

ನಿಮ್ಮ ಮದುವೆ ಅಲ್ಬಮ್ಮಿನ ಅಂಟಿಕೊಂಡ ಪುಟಗಳನ್ನು ಬಿಡಿಸುವಾಗ
ಕೇಜಿಗಟ್ಟಲೆ ಮೂಸಂಬಿ-ದ್ರಾಕ್ಷಿ ಹಿಡಿದು ಮಾವ
ಉಳವಿಯಿಂದ ಬಾಡಿಗೆ ಸೈಕಲ್ ಹೊಡೆದುಕೊಂಡು
ನಡುಮಧ್ಯಾಹ್ನ ಕೆಂಪಾಗಿ ಬರುತ್ತಿದ್ದ ನೆನಪು.

ನಿಮ್ಮ ಮದುವೆ ಅಲ್ಬಮ್ಮಿನ ಬ್ಲಾಕ್ ಅಂಡ್ ವ್ಹೈಟ್ ಫೋಟೋಗಳನ್ನು
ಕವರಿನಿಂದ ಹುಷಾರಾಗಿ ಹೊರತೆಗೆಯುವಾಗ
ಆ ನಶ್ಯದ ಡಬ್ಬಿಯ ಪುರೋಹಿತ ಭಟ್ಟರು ಒಮ್ಮೆ ನನ್ನ ಕೈ ನೋಡಿ
ಭಾರೀ ಉಜ್ವಲ ದಿನಗಳ ಭವಿಷ್ಯ ಹೇಳಿದ ನೆನಪು.

ನಿಮ್ಮ ಮದುವೆಯ ಆ ಫೋಟೋಗಳನ್ನು ಸ್ಕ್ಯಾನ್ ಮಾಡುವಾಗ
ತನ್ನ ಯೌವನದ ದಿನಗಳಲ್ಲಿ ಕನ್ನಡಿ ಮುಂದೆ ನಿಂತ ಅಪ್ಪ
ಮೀಸೆಯನ್ನು ಚೂಪಗೆ ಟ್ರಿಮ್ ಮಾಡಿಕೊಂಡು, ಮುಖಕ್ಕೆ ಪೌಡರ್
ಹಚ್ಚಿಕೊಳ್ಳುತ್ತಿದ್ದ ಬೆಳ್ಳನೆ ನೆನಪು.

ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಆ ಫೋಟೋಗಳಿಗೆ
ಟಚ್-ಅಪ್ ಕೊಟ್ಟು ರಕ್ಷಿಸಿ ಇಡುವಾಗ, ಅಮ್ಮ ನೈಟಿ ತೊಡಲೋ ಬೇಡವೋ
ಅಂತ ವಾರಗಟ್ಟಲೆ ಯೋಚಿಸಿ ಪಕ್ಕದ ಮನೆಯವಳ ಬಳಿ ಚರ್ಚಿಸಿ
ಕೊನೆಗೂ ಸೀರೆಯನ್ನೇ ಖಾಯಂ ಮಾಡಿದ ಹಚ್ಚನೆ ನೆನಪು.

ಅಪ್ಪ-ಅಮ್ಮನ ಮದುವೆಯ ಫೋಟೋಗಳಲ್ಲಿ ನಾನಿಲ್ಲ
ನನ್ನ ನೆನಪಿನ ಅಲ್ಬಮ್ಮಿನಲ್ಲಿ ಅಪ್ಪ, ಅಮ್ಮ ಮತ್ತು ಎಲ್ಲ.