Thursday, July 15, 2010

ನಾನೂ ಪಾಕಕ್ರಾಂತಿ ಮಾಡಿದೆ!

ಹೆಚ್ಚುಕಮ್ಮಿ ಎರಡೂವರೆ ವರ್ಷಗಳಿಂದ ಜೊತೆಗಿದ್ದ ನನ್ನ ರೂಂಮೇಟು ರೂಮ್ ಬಿಟ್ಟು ಹೋದದ್ದು ಎಲ್ಲದಕ್ಕೂ ನಾಂದಿ. ಊರಲ್ಲಿ ಅಂಗಡಿ ತೆರೆಯುವುದಾಗಿ ಹೇಳಿ ಬೆಂಗಳೂರು ಬಿಟ್ಟುಹೊರಟ ಅವನನ್ನು ನಾನೂ ಖುಶಿಯಿಂದಲೇ ಕಳುಹಿಸಿಕೊಟ್ಟೆ. ಖುಶಿ ಯಾಕಪ್ಪಾ ಅಂದ್ರೆ, ಎಲ್ಲರೂ ಊರು ಬಿಟ್ಟು ಬೆಂಗಳೂರು ಸೇರಿಕೊಳ್ಳುತ್ತಿರುವಾಗ ಇವನೊಬ್ಬ ಧೈರ್ಯ ಮಾಡಿ ವಾಪಸು ಊರಿಗೆ ಹೋಗುತ್ತೀನಿ ಎನ್ನುತ್ತಿದ್ದಾನಲ್ಲಾ ಅಂತ. ಊರಿಗೆ ಹೊರಡುವ ಹಿಂದಿನ ದಿನ ಅವನು ಕೇಳಿದ್ದ: "ನಾ ಬಿಟ್ ಹೋದ್ಮೇಲೆ ನಿನ್ ಗತಿ ಏನು? ಬೇರ್ ರೂಂಮೇಟ್ ಹುಡುಕ್ಕೊಳ್ತೀಯೋ ಅಥವಾ ಒಬ್ಬನೇ ಇರ್ತೀಯೋ?" ಅಂತ. ಅದಕ್ಕೆ ನಾನು, "ಅದೇನಯ್ಯಾ ಪಿಚ್ಚರ್ರಲ್ಲಿ ಮೊದಲನೇ ಹೆರಿಗೆ ಟೈಮಲ್ಲಿ ಹೆಂಡ್ತಿ ಕೇಳ್ದಂಗೆ ಕೇಳ್ತಿದೀಯಾ? ಯಾರನ್ನಾದ್ರೂ ಸೇರಿಸಿಕೊಳ್ತೇನಪ್ಪಾ, ಒಬ್ಬನೇ ಯಾಕೆ ಇಷ್ಟೆಲ್ಲ ರೆಂಟ್ ಪೇ ಮಾಡ್ಕೊಂಡ್ ಇರ್ಲಿ? ಯಾರಾದ್ರೂ ಸಿಗೋವರೆಗೆ ಒಬ್ಬನೇ ಇರ್ತೀನಿ" ಅಂತ ಹೇಳಿ ಜೋಶಲ್ಲೇ ಕಳುಹಿಸಿಕೊಟ್ಟಿದ್ದೆ.

ಆದರೆ ಆತ ಅದೇನು ಶಾಪ ಹಾಕಿ ಹೋಗಿದ್ದನೋ ಏನೋ, ಸುಮಾರು ಮೂರು ತಿಂಗಳಾದರೂ ನನಗೊಬ್ಬ ಹೊಸ ರೂಂಮೇಟ್ ಸಿಗಲಿಲ್ಲ. ಬೆಂಗಳೂರಿನಲ್ಲಿ ಕೆಲಸ ಸಿಗುವುದು ಕಷ್ಟ, ಒಳ್ಳೆಯ ಬಾಡಿಗೆ ಮನೆ ಸಿಗುವುದು ಕಷ್ಟ, ಸೂಪರ್ರಾಗಿರೋ ಹುಡುಗಿ ಸಿಗುವುದು ಕಷ್ಟ ಅಂತೆಲ್ಲ ಗೊತ್ತಿತ್ತು; ಆದರೆ ಒಬ್ಬ ಪುಟಗೋಸಿ ರೂಂಮೇಟ್ ಸಿಗುವುದು ಇಷ್ಟೊಂದು ಕಷ್ಟ ಅಂತ ಖಂಡಿತ ಗೊತ್ತಿರಲಿಲ್ಲ. ಸುಮಾರು ಫ್ರೆಂಡ್ಸಿಗೆ ಹೇಳಿದೆ, ಎಸ್ಸೆಮ್ಮೆಸ್ ಕಳುಹಿಸಿದೆ, ಗೂಗಲ್ಲಿನಲ್ಲಿ ಸ್ಟೇಟಸ್ ಮೆಸೇಜ್ ಮಾಡ್ಕೊಂಡೆ... ಊಹುಂ, ಏನೂ ಉಪಯೋಗ ಆಗಲಿಲ್ಲ. ಇನ್ನು ವಿಜಯ ಕರ್ನಾಟಕದಲ್ಲಿ ಜಾಹೀರಾತು ಕೊಡೋದೊಂದೇ ಉಳಿದ ಮಾರ್ಗ ಅನ್ನೋ ಹಂತ ಹೆಚ್ಚುಕಮ್ಮಿ ತಲುಪಿಯೇಬಿಟ್ಟಿದ್ದೆ.

ನನ್ನ ಹುಡುಕಾಟದ ಸಂದರ್ಭದಲ್ಲಿ ಕೆಲವರು ಹೇಳಿದ್ರು, ‘ಇನ್ನೂ ಎಂಥಾ ರೂಂಮೇಟ್ ಹುಡುಕ್ತಾ ಕೂರ್ತೀಯಾ? ಮದ್ವೆ ಆಗ್ಬಿಡು’ ಅಂತ. ಅಲ್ಲ ಸಾರ್, ಒಬ್ನೇ ಇದ್ರೆ ಖರ್ಚು ಜಾಸ್ತಿ ಅಂತ ರೂಂಮೇಟ್ ಹುಡುಕ್ತಾ ಇದ್ರೆ, ಇವ್ರು ಖರ್ಚು ಡಬಲ್ ಆಗೋ ದಾರಿ ಹೇಳ್ತಿದಾರಲ್ಲಾ..? ಅದ್ಯಾಕೆ ಎಲ್ಲರೂ ಮತ್ತೊಬ್ಬರನ್ನು ಗುಂಡಿಗೆ ತಳ್ಳಲಿಕ್ಕೇ ನೋಡ್ತಾರೆ? ನಾನು ಸುಖವಾಗಿರೋದು ಜನಕ್ಕೆ ಬೇಕಾಗೇ ಇಲ್ಲ. ಇದೊಂದು ಪಾಪಿ ಜನರ ಹಾಳು ದುನಿಯಾ -ಅಂತೆಲ್ಲ ಜನಗಳಿಗೆ, ಈ ಜಗತ್ತಿಗೆ ಹಿಡಿ ಶಾಪ ಹಾಕಿದ್ದೆ.

ಹಾಗಂತ ರೂಂಮೇಟ್ ಇಲ್ಲದಿದ್ದುದಕ್ಕೆ ಅಷ್ಟೆಲ್ಲ ವ್ಯಥೆ ಪಡುವ ಅವಶ್ಯಕತೆಯೇನೂ ನನಗಿರಲಿಲ್ಲ. ಏಕಾಂಗಿತನವನ್ನೇ ಬಹುವಾಗಿ ಇಷ್ಟಪಡುವ ನಾನು, ಅವನು ಹೊರಡುತ್ತಿದ್ದೇನೆ ಎಂದಾಗ ನನಗೆ ಸಿಗಬಹುದಾದ ಅಲ್ಟಿಮೇಟ್ ಪ್ರೈವೆಸಿಯನ್ನು ನೆನೆದು ಖುಶಿ ಪಟ್ಟಿದ್ದೆ ಸಹ. ಆದರೆ ಅವನು ಊರಿಗೆ ಹೋದದ್ದರ ಪರಿಣಾಮ ಆದ ದೊಡ್ಡ ನಷ್ಟವೆಂದರೆ, ಕನಿಷ್ಟ ರಾತ್ರಿಯಾದರೂ ನಮ್ಮ ಮನೆಯಲ್ಲಿ ಮಾಡಲ್ಪಡುತ್ತಿದ್ದ ನಳಪಾಕಕಾರ್ಯ ನಿಂತುಹೋಯಿತು!

ನನ್ನ ರೂಂಮೇಟು ತುಂಬಾ ಒಳ್ಳೆಯ ಕುಕ್ ಆಗಿದ್ದ. ಸಾರು ಸಾಂಬಾರುಗಳಲ್ಲದೇ, ತಂಬುಳಿ, ಗೊಜ್ಜು, ಸಾಸ್ವೆ ಇತ್ಯಾದಿ ನಮ್ಮೂರ ಕಡೆ ಅಡುಗೆ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಹೇಗೆ ಕೆಟ್ಟ ಚಟಗಳ ದಾಸನಾಗಿ ಹಾದಿತಪ್ಪಿದ ಹುಡುಗನೊಬ್ಬ ಮದುವೆಯಾದಮೇಲೆ ಹೆಂಡತಿಯ ದೆಸೆಯಿಂದ ಸದ್ಗೃಹಸ್ತನಾಗಿ ಬದಲಾಗಿಬಿಡುತ್ತಾನೋ ಹಾಗೆ ಹೋಟೆಲ್ ಊಟದ ಪ್ರೀತಿಯಲ್ಲಿ ಕುರುಡನಾಗಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡುವುದರಲ್ಲಿ ಈತ ಯಶಸ್ವಿಯಾಗಿದ್ದ. ಕಟ್ಟು ಸಾರು, ತೊವ್ವೆ, ಮಾವಿನ್‌ಕಾಯಿ ನೀರ್ಗೊಜ್ಜು, ಕೆಂಪು ಹರಿವೆಸೊಪ್ಪಿನ ಮುಧುಳಿ, ಟೊಮೆಟೋ ಸಾಸ್ವೆ, ಸೌತೆಕಾಯಿ ಬೀಸ್ಗೊಜ್ಜುಗಳೇ ಮೊದಲಾದ ಹಳ್ಳಿ ಅಡುಗೆ ಮಾಡಿ ಬಡಿಸಿ ನನ್ನನ್ನು ಮೋಡಿ ಮಾಡಿದ್ದ. ಮದುವೆಯಾದರೆ ಇವನಂಥವಳನ್ನೇ -ಐ ಮೀನ್, ಇವನ ಹಾಗೆ ಅಡುಗೆ ಮಾಡುವವಳನ್ನೇ ಮದುವೆಯಾಗಬೇಕು ಎಂಬ ತೀರ್ಮಾನಕ್ಕೆ ನಾನು ಬರುವಂತೆ ಮಾಡಿದ್ದ.

ಹಾಗಂತ ನಾನೇನು ಅವನ ನಳಪಾಕದ ಮೋಡಿಗೆ ಮರುಳಾಗಿ ಪೂರ್ತಿ ಶರಣಾಗಿ ಹೋಗಿದ್ದೆನೆಂದುಕೊಳ್ಳಬೇಡಿ.. ಹೇಗೆ ನಾಲ್ಕು ಪೋಲಿಗಳ ಮಧ್ಯೆ ಒಬ್ಬ ಸಭ್ಯ ಹುಡುಗನಿದ್ದರೆ ಅವನನ್ನೂ ತಮ್ಮೆಡೆಗೇ ಎಳೆದುಕೊಳ್ಳಲು ಪೋಲಿಗಳು ಗಾಳ ಹಾಕುತ್ತಿರುತ್ತಾರೋ ಹಾಗೇ ನಾಲ್ಕು ಜನ ಒಳ್ಳೆಯವರ ಮಧ್ಯೆ ಒಬ್ಬ ಕೆಟ್ಟು ಹೋದವನಿದ್ದರೆ ಅವನನ್ನೂ ತಮ್ಮೆಡೆಗೇ ಎಳೆದುಕೊಂಡು ತಮ್ಮಂತೆಯೇ ಸಜ್ಜನನನ್ನಾಗಿ ಮಾಡುವ ಹವಣಿಕೆಯಲ್ಲಿರುತ್ತಾರೆ ಒಳ್ಳೆಯವರು. ಈ ಸದ್ಗೃಹಸ್ತನಾಗುವುದು, ಸಭ್ಯಸಾಚಿಯಾಗುವುದು, ಒಳ್ಳೆಯ ಮಾಣಿಯಾಗುವುದು ಸಹ ಅತ್ಯಂತ ಡೇಂಜರಸ್ ನಡೆ. ಏಕೆಂದರೆ ಒಮ್ಮೆ ನೀವು ‘ಒಳ್ಳೇ ಜನ’ ಅಂತ ಪೇಟೆಂಟ್ ಆಗಿಬಿಟ್ಟಿರಿ ಎಂದರೆ, ಆಮೇಲೆ ಒಳ್ಳೆಯವರಾಗೇ ಇರಬೇಕಾಗುತ್ತದೆ! ಒಳ್ಳೆಯವನಾಗಿರುವ ಕಷ್ಟಗಳು ಅಷ್ಟಿಷ್ಟಲ್ಲ. ಆ ಮೃತ್ಯುಕೂಪದಿಂದ ಕಷ್ಟಪಟ್ಟು ಹೊರಬಂದಿದ್ದ ನನಗೆ ಮತ್ತೆ ಅದಕ್ಕೇ ಬೀಳುವ ಮನಸ್ಸಿರಲಿಲ್ಲ. ಹೀಗಾಗಿ, ನನ್ನ ರೂಂಮೇಟು ರಾತ್ರಿ ಮಲಗುವ ಮುನ್ನ ‘ಕಷಾಯ ಕುಡಿತ್ಯೇನಲೇ ಭಟ್ಟಾ?’ ಅಂತೇನಾದರೂ ಕೇಳಿದರೆ, ನಾನು ಸುತಾರಾಂ ನಿರಾಕರಿಸುತ್ತಿದ್ದೆ. ಕಷಾಯ ಕುಡಿಯುವುದು ನನ್ನ ಪ್ರಕಾರ ಅತ್ಯಂತ ಕಡು-ಒಳ್ಳೆಯವರ ಲಕ್ಷಣ. ಕಾಫಿಯನ್ನೋ, ಕೋಲಾವನ್ನೋ ಅಥವಾ ಯು ನೋ, ಇನ್ನೇನನ್ನೋ ಕುಡಿಯುವುದು ನನ್ನಂಥವರಿಗೆ ಹೇಳಿಸಿದ್ದು ಎಂಬುದು ನನ್ನ ನಂಬುಗೆಯಾಗಿತ್ತು. ಆದ್ದರಿಂದ, ಅವನು ಬಾರ್ಲಿ ಹಾಲುನೀರು, ಅತ್ತಿಚಕ್ಕೆ ಕಷಾಯ, ಜೀರ್ಗೆ ಬಿಸ್ನೀರು ಅಂತೆಲ್ಲ ಘಮಘಮದ ಪೇಯಗಳನ್ನು ಮಾಡಿಕೊಂಡು ಕುಡಿಯುವಾಗ ನನಗೂ ಟೇಸ್ಟ್ ನೋಡುವ ಆಶೆಯಾಗುತ್ತಿತ್ತಾದರೂ ‘ಒಳ್ಳೆಯವ’ನಾಗಿಬಿಡುವ ಭಯಕ್ಕೆ ತಡೆದುಕೊಂಡು ಸುಮ್ಮನಿರುತ್ತಿದ್ದೆ.

ಇವನು ಬಿಟ್ಟುಹೋದಮೇಲೆ ನಾನು ಡೈವೊರ್ಸ್ ಪಡೆದ ಗಂಡನಂತಾದೆ. ಹಳೇ ಫ್ರೆಂಡುಗಳ ಪಡ್ಡೆ ಗ್ಯಾಂಗ್ ಹುಡುಕಿಕೊಂಡು ಹೋಗುವವನಂತೆ ಮತ್ತೆ ಹೋಟೆಲುಗಳತ್ತ ಮುಖ ಮಾಡಿದೆ. ಆದರೆ ಇಷ್ಟು ದಿನ ತಮ್ಮನ್ನು ನಿರ್ಲಕ್ಷಿಸಿದ್ದಕ್ಕೆ ನನ್ನ ಮೇಲೆ ಕೋಪಗೊಂಡಿದ್ದ ಹೋಟೆಲ್ ಫುಡ್ಡು, ನನಗೆ ಅವು ರುಚಿಯೇ ಅಲ್ಲ ಎನಿಸುವಂತೆ ಮಾಡಿದುವು. ಮನೆ ಊಟಕ್ಕಾಗಿ ಹಾತೊರೆಯುವಂತಾಯಿತು. ರೂಂಮೇಟನ್ನು ಮಿಸ್ ಮಾಡಿಕೊಳ್ಳತೊಡಗಿದೆ.

ಆದರೆ ನಾನೇನು ತೀರಾ ಪಾಕಶಾಸ್ತ್ರವೆಂಬ ಸಬ್ಜೆಕ್ಟಿನಲ್ಲಿ ಫೇಲ್ ಆದವನೇನಲ್ಲ. ಡಿಸ್ಟಿಂಕ್ಷನ್ನು, ಫಸ್ಟ್‌ಕ್ಲಾಸು ಅಲ್ಲದಿದ್ದರೂ ಜಸ್ಟ್ ಪಾಸಿಗಿಂತ ಸ್ವಲ್ಪ ಮೇಲೇ ಇದ್ದೆ. ಚಿಕ್ಕವನಿದ್ದಾಗಲೇ ಮನೆಯಲ್ಲಿ ಬೆಲ್ಲ ಕಾಯಿಸಿ ಚಾಕಲೇಟ್ ತಯಾರಿಸಿ ಊರ ಹುಡುಗರ ಮೆಚ್ಚುಗೆ ಗಳಿಸಿದ್ದೆ. ಬೆಂಗಳೂರಿಗೆ ಬಂದಮೇಲೂ ನನ್ನ ರೂಂಮೇಟ್ ಆಫೀಸಿನಿಂದ ಬರುವುದು ತಡವೆಂದಾದಾಗಲೆಲ್ಲ ನಾನೇ ಅಡುಗೆ ಮಾಡುವ ಅನಿವಾರ್ಯತೆಗೆ ಬಿದ್ದು, ಎಂಟಿ‌ಆರ್ ರಸಂ, ಬೀಟ್‌ರೂಟ್ ಹುಳಿ, ಹುಣಿಸೇಹಣ್ಣಿನ ಗೊಜ್ಜು, ಇತ್ಯಾದಿ ಪಾಕಗಳಲ್ಲಿ ಸೈ ಎನಿಸಿಕೊಂಡಿದ್ದೆ. ಅಷ್ಟೇ ಅಲ್ಲ; ಹಾಲು ಕಾಯಿಸಲು ಇಟ್ಟು ಏನನ್ನೋ ಓದುತ್ತಾ ಮೈಮರೆತು ಅದು ಅಲ್ಲಿ ಉಕ್ಕಿ ಪಾತ್ರೆ ಪೂರ್ತಿ ಸೀದುಹೋದಮೇಲೂ, ಒಲೆ, ಗ್ಯಾಸ್‌ಕಟ್ಟೆ, ಪಾತ್ರೆಯನ್ನೆಲ್ಲ ಕ್ಲೀನ್ ಮಾಡಿ ರೂಂಮೇಟ್ ಬರುವುದರೊಳಗೆ ಮತ್ತರ್ಧ ಲೀಟರ್ ಹಾಲು ತಂದು ಕಾಯಿಸಿಟ್ಟು ಏನೂ ಆಗದವನಂತೆ ನಾಟಕ ಮಾಡುವ ಕಲೆ ಕರಗತ ಮಾಡಿಕೊಂಡಿದ್ದೆ. ಪೂರ್ಣಚಂದ್ರ ತೇಜಸ್ವಿಯವರ ಪಾಕಕ್ರಾಂತಿಯಿಂದ ಪಾಠ ಕಲಿತಿದ್ದ ನಾನು, ಅವರು ಮಾಡಿದ ತಪ್ಪುಗಳೊಂದನ್ನೂ ಮಾಡಬಾರದು ಅಂತ ನಿರ್ಧಸಿದ್ದೆ.

ಕುಕ್ಕರ್ ಇಡುವಾಗ ತಳದಲ್ಲಿ ನೀರು ಸರಿಯಾಗಿ ಹಾಕದೆ ಇಟ್ಟೋ ಅಥವಾ ಅಡಿಯ ಪ್ಲೇಟ್ ಇಡದೆಯೋ ಅಥವಾ ಗ್ಯಾಸ್ಕೆಟ್ ಹಾಕುವುದನ್ನು ಮರೆತೋ ಹೋಗಿ ಆಮೇಲೆ ಅನಾಹುತವಾದಮೇಲೆ ತಲೆಯ ಮೇಲೆ ಕೈ ಹೊತ್ತು ಕೂರುವ ಸಾಮಾನ್ಯ ಅರೆಪಾಕತಜ್ಞರಂಥವ ನಾನಾಗಿರಲಿಲ್ಲ. ಬದಲಿಗೆ, ಕುಕ್ಕರ್ ಒಲೆಯ ಮೇಲಿಟ್ಟು ಬಂದು ಅರ್ಧ ಗಂಟೆಯಾದರೂ ಅದು ಕೂಗದಿದ್ದಾಗ -ಕನಿಷ್ಟ ಬುಸುಬುಸು ಸದ್ದು ಮಾಡುವುದಕ್ಕೂ ಶುರುವಿಡದಿದ್ದಾಗ- ಅರೆ, ಇದೇನಾಯ್ತೆಂದು ಒಳಗೆ ಹೋಗಿ ನೋಡಿದರೆ, ಸ್ಟೊವ್ ಆನ್ ಮಾಡುವುದನ್ನೇ ಮರೆತಿದ್ದೆ! ಸ್ಟೊವ್ ಹಚ್ಚದಿದ್ದರೂ ಕೂಗುವುದಕ್ಕೆ ಅದೇನು ಸೋಲಾರ್ ಕುಕ್ಕರ್ರೇ? ಅಥವಾ ಸೋಲಾರ್ ಕುಕ್ಕರ್ ಆಗಿದ್ದರೂ ಕೂಗುವುದಕ್ಕೆ ಇದೇನು ಹಗಲೇ? ಅಥವಾ ರಾತ್ರಿಯಾಗಿದ್ದರೂ ಬೆಳಗುವುದಕ್ಕೆ ಸೂರ್ಯನಿಗೇನು ಮರುಳೇ? ಇರಲಿ, ಆದರೂ ತಪ್ಪು ಮಾಡಿ ಮರುಳಾಗುವ ಉಳಿದ ನಳರಿಗಿಂತ ನಾನು ಕಡಿಮೆ ಬೆಪ್ಪನಾಗಿದ್ದಕ್ಕೆ ಖುಶಿ ಪಟ್ಟೆ.

ಅಂದು ಸಂಜೆ ಆಫೀಸಿನಿಂದ ಬಂದವನು, ತರಕಾರಿ ಕೊಳ್ಳಲೆಂದು ಅಂಗಡಿ ಮುಂದೆ ನಿಂತಿದ್ದಾಗ ವಿನಾಯಕ ಕೋಡ್ಸರ ಎಂಬ ಗೆಳೆಯ ಫೋನ್ ಮಾಡಿದ. “ಏನಯ್ಯಾ ಮಾಡ್ತಿದೀಯಾ?” ಅಂತ ಕೇಳಿದ. “ತರಕಾರಿ ಕೊಳ್ಳೋಕೆ ಅಂತ ಬಂದಿದೀನಿ ಮಾರಾಯ. ಇಲ್ಲಿ ಹತ್ತಾರು ಶೆಲ್ಫುಗಳಲ್ಲಿ ನೂರಾರು ಜಾತಿಯ ಹಲವಾರು ಬಣ್ಣದ ತರಕಾರಿಗಳನ್ನ ಇಟ್ಟಿದಾರೆ. ಯಾವ್ದುನ್ನ ತಗಳೋದು ಯಾವ್ದುನ್ನ ಬಿಡೋದು ಗೊತ್ತಾಗ್ತಾ ಇಲ್ಲ. ಎಲ್ಲಾ ಸಿಕ್ಕಾಪಟ್ಟೆ ರೇಟ್ ಬೇರೆ” ಅಂತ ಹೇಳಿದೆ. ಅದಕ್ಕೆ ಅವನು, “ಒಂದು ಕೋಸ್ಗೆಡ್ಡೆ ತಗೊಂಬಿಡಪ್ಪಾ.. ನಿಂಗೆ ಎರಡು ದಿನಕ್ಕೆ ಸಾಕು. ಚೀಪ್ ಅಂಡ್ ಬೆಸ್ಟ್” ಅಂತ ಸಲಹೆ ಕೊಟ್ಟ. ಹಾಗೆ ಹೇಳುವುದರ ಮೂಲಕ ಅವನು ನನ್ನನ್ನು ಎಂತಹ ತಪ್ಪು ದಾರಿಗೆ ಎಳೆಯುತ್ತಿದ್ದಾನೆ ಎಂಬ ಅರಿವು ನನಗೆ ಆ ಕ್ಷಣದಲ್ಲಿ ಆಗಲಿಲ್ಲ. ಎಲೆಕೋಸಿನ ಗೆಡ್ಡೆ ಕೊಂಡು ತಂದುಬಿಟ್ಟೆ.

ಮನೆಗೆ ಬಂದು ಕತ್ತರಿಸಿ, ಅದರ ಸ್ವಲ್ಪ ಭಾಗವನ್ನು ಬಳಸಿ, ಅವತ್ತಿಗೆ ಒಂದು ಭರ್ಜರಿ ಸಾಂಬಾರು ಮಾಡಿ ಉಂಡುಬಿಟ್ಟೆ. ಮರುದಿನ ಮತ್ತೆ ತರಕಾರಿ ಕೊಳ್ಳುವ ಗೋಜಿಲ್ಲದಿದ್ದುದರಿಂದ ಆಫೀಸಿನಿಂದ ನೇರವಾಗಿ ಮನೆಗೆ ಬಂದೆ. ತರಕಾರಿ ಬಾಸ್ಕೆಟ್ಟಿನಲ್ಲಿ ಎಲೆಕೋಸು ಮುದ್ದಾಗಿ ಕೂತಿತ್ತು. ಮತ್ತಷ್ಟು ಕತ್ತರಿಸಿ ಈ ಸಲ ಪಲ್ಯ ಮಾಡಿದೆ. ಬರೀ ಪಲ್ಯ ಕಲಸಿಕೊಂಡು ತಿನ್ನಲಿಕ್ಕಾಗುತ್ತದೆಯೇ? ಮಜ್ಜಿಗೆ ತಂಬುಳಿ ಮಾಡಿಕೊಂಡೆ. ಮರುದಿನ ಬಂದು ಬಾಸ್ಕೆಟ್ ನೋಡಿದರೆ ಕೋಸುಗೆಡ್ಡೆ ಇನ್ನೂ ಹಾಗೇ ಇದೆ! ನನಗೆ ಎಲೆಕೋಸಿನ ಗೆಡ್ಡೆ ಒಂದು ಮುಗಿಯದ ಸಂಪತ್ತಾಗಿ ಕಂಡಿತು. ಒಂದೇ ಒಂದು ಗೆಡ್ಡೆ ಕೊಂಡುತಂದರೆ ಮೂರ್ನಾಲ್ಕು ದಿನಕ್ಕಾಗುವ ಇದು ಅತ್ಯಂತ ಒಳ್ಳೆಯ ತರಕಾರಿ ಅಂತ ತೀರ್ಮಾನಿಸಿದೆ. ಯಾಕೋ ಜನರಿಗೆ ಇದರ ಅರಿವೇ ಇಲ್ಲ, ಇದನ್ನು ಸರಿಯಾಗಿ ಪ್ರಮೋಟ್ ಮಾಡಿದ್ದೇ ಹೌದಾದರೆ ನಮ್ಮ ದೇಶದ ಬಡತನ ನಿವಾರಣೆ ಶೀಘ್ರದಲ್ಲೇ ಆಗುತ್ತದೆ, ಯಾರೂ ಹಸಿವಿನಿಂದ ಸಾಯುವುದು ಬೇಕಿಲ್ಲ ಅನ್ನಿಸಿತು. ದ್ರೌಪದಿಯ ಸೀರೆಯಂತೆ ಎಷ್ಟು ಬಿಡಿಸಿದರೂ ಮುಗಿಯದ ಇದರ ಪದರಗಳನ್ನು ಬಿಡಿಸುತ್ತಾ ಭವ್ಯ ಭಾರತದ ಕನಸು ಕಂಡೆ. ಮೊಸರು ಬೆರೆಸಿ ಸಾಸ್ವೆ ಮಾಡುವುದರೊಂದಿಗೆ, ನನ್ನ ರೂಮಿನಲ್ಲಿ ಮೂರನೇ ದಿನವೂ ಕೋಸ್ಗೆಡ್ಡೆ ಅಮೋಘ ಪ್ರದರ್ಶನ ಕಂಡಿತು.

ಸಮಸ್ಯೆ ಶುರುವಾದದ್ದು ನಾಲ್ಕನೇ ದಿನ ಬೆಳಗ್ಗೆ! ಸಾಮಾನ್ಯವಾಗಿ ಏಳುತ್ತಿದ್ದಂತೆಯೇ ಹಸಿವಾಗುವ ಹೊಟ್ಟೆ, ಇವತ್ಯಾಕೋ ತುಂಬಿಕೊಂಡೇ ಇದ್ದಂತೆ, ಭಾರ ಭಾರ ಅನ್ನಿಸಿತು. ಒಂದು ಕಾಫಿ ಕುಡಿದರೆ ಸರಿಯಾದೀತು ಅಂತ ನೋಡಿದರೆ, ಎರಡು ಸಿಪ್ ಕುಡಿಯುವಷ್ಟರಲ್ಲಿ ಮುಂದೆ ಕುಡಿಯುವುದು ಸಾಧ್ಯವೇ ಇಲ್ಲ ಎಂಬಂತೆ ವಾಕರಿಕೆ ಬರಲಾರಂಭಿಸಿತು. ಸರಿ, ಟಾಯ್ಲೆಟ್ಟಿಗೆ ಹೋಗಿಬಂದೆ. ಯಾಕೋ ಕಾರಣವೇ ಇಲ್ಲದೆ ತೀರಾ ಆಲಸಿತನದ ಭಾಸವಾದರೂ ತಯಾರಾಗಿ ಆಫೀಸಿಗೆ ಹೊರಟೆ. ಮಧ್ಯೆ ಹೋಟೆಲ್ಲಿನಲ್ಲಿ ತಿಂಡಿ ತಿನ್ನಲು ಪ್ರಯತ್ನಿಸಿದರೆ ಅದೂ ಸಾಧ್ಯವಾಗಲಿಲ್ಲ. ಮಧ್ಯಾಹ್ನ ಊಟಕ್ಕೆ ಅಂತ ಹೋಗಿ, ಒಂದು ತುತ್ತು ತಿನ್ನುವಷ್ಟರಲ್ಲಿ ತೇಗು ಬಂತು! ಅದರ ಮೇಲೆ ಮತ್ತೆರಡು ತೇಗು! ಆಗ ಅರ್ಥವಾಯಿತು, ನನ್ನ ಹೊಟ್ಟೆಯೊಳಗೆ ಪೂರ್ತಿ ಗ್ಯಾಸ್ ತುಂಬಿಕೊಂಡಿದೆ!

ಗೋಬರ್ ಗ್ಯಾಸು, ಸಿಲಿಂಡರ್ ಗ್ಯಾಸು, ಹೈಡ್ರೋಜನ್ ಗ್ಯಾಸು, ಟಿಯರ್ ಗ್ಯಾಸುಗಳಂತೆ ಈ ಹೊಟ್ಟೆಯೊಳಗೆ ತುಂಬಿಕೊಳ್ಳುವ ಗ್ಯಾಸೂ ಒಂದು. ಆದರೆ ಅವೆಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೊಳಗಾಗುತ್ತವಾದರೆ, ಈ ಗ್ಯಾಸಿನಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ, ಟ್ರಬಲ್ಲೇ ಹೆಚ್ಚು! ಉದಾನವಾಯು, ಅಪಾನವಾಯುಗಳಂತಹ ಕ್ರಿಯೆಗಳಿಂದ ಮಾತ್ರ ಇದನ್ನು ಹೊರಹಾಕಲಿಕ್ಕೆ ಸಾಧ್ಯ. ಸರಿ, ಮೊದಲಿಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನನಗೇ ಗೊತ್ತಿದ್ದ ಒಂದೆರಡು ಮಾತ್ರೆ ನುಂಗಿದೆ. ಸರಿ ಹೋದೀತೆಂದು ಕಾದೆ. ಆದರೆ ಊಹುಂ, ತೇಗಮೊರೆತ ಮುಂದುವರೆಯಿತು. ಮನೆಗೆ ಫೋನ್ ಮಾಡಿ ಹೇಳೋಣವೆನಿಸಿದರೂ ಸುಮ್ಮನೆ ಅವರಿಗೂ ಟೆನ್ಷನ್ ಕೊಡೋದು ಬೇಡ ಅಂತ ಸುಮ್ಮನಾದೆ. ಕಷ್ಟ ಪಟ್ಟು ಆ ರಾತ್ರಿ ಕಳೆದೆದ್ದರೆ, ಮರುದಿನ ಬೆಳಗ್ಗೆ ಹೊಟ್ಟೆನೋವು ಸಹ ಸೇರಿಕೊಂಡಿತು. ಅದಕ್ಕೂ ಮಾತ್ರೆಗಳನ್ನು ನುಂಗಿದೆ. ಎರಡನೇ ದಿನ ಸಂಜೆಯೂ ಸಮಸ್ಯೆ ಗುಣವಾಗುವ ಲಕ್ಷಣ ಕಾಣದೇ ಹೋದ್ದರಿಂದ, ಇದು ಯಾಕೋ ಗ್ರಹಚಾರ ಕೆಟ್ತಲ್ಲಪ್ಪಾ ಅಂತ, ಸೀದಾ ಅಮ್ಮನಿಗೆ ಫೋನ್ ಮಾಡಿದೆ:

ನಾನು: ಎಂಥಕ್ ಹಿಂಗಾತು ಅಂತ ಗೊತ್ತಿಲ್ಲೆ ಅಮ್ಮ, ಹೊಟ್ಟೇಲಿ ಗ್ಯಾಸ್ ತುಂಬಿಕೊಂಡಿದ್ದು ಅನ್‌ಸ್ತು, ಬರೀ ತೇಗು.
ಅಮ್ಮ: ಏನು ತಿಂದೆ ನಿನ್ನೆ?
ನಾನು: ಕೋಸುಗೆಡ್ಡೆ ಸಾಸ್ವೆ
ಅಮ್ಮ: ಮೊನ್ನೆ?
ನಾನು: ಕೋಸುಗೆಡ್ಡೆ ಪಲ್ಯ, ತಂಬ್ಳಿ
ಅಮ್ಮ: ಆಚೆ ಮೊನ್ನೆ?
ನಾನು: ಕೋಸುಗೆಡ್ಡೆ ಹುಳಿ

‘ನಿಂಗೇನಾದ್ರೂ ತಲೆ ಸರಿ ಇದ್ದಾ?’ ಅಂತ ಬೈದಳು ಅಮ್ಮ. ನನ್ನ ತಲೆ ಸರಿಯಿರುವುದರ ಬಗ್ಗೆ ಅಮ್ಮನಿಗೆ ಅನುಮಾನಗಳಿರುವುದು ನನಗೆ ಗೊತ್ತಿರಲಿಲ್ಲ. ಈಗ ಆತಂಕವಾಯಿತು: ಮಗನ ತಲೆಯ ಬಗ್ಗೆ ಅಮ್ಮನಿಗೇ ಅನುಮಾನಗಳಿದ್ದುಬಿಟ್ಟರೆ, ಮೊದಲೇ ಮದುವೆಯಾಗದ ಹುಡುಗ, ಇನ್ನು ಬೇರೆಯವರನ್ನು ಹೇಗಪ್ಪಾ ನಂಬಿಸೋದು ಅಂತ.. ಅಮ್ಮ ಮುಂದುವರಿಸಿದಳು: ‘ಎಲೆಕೋಸು ಅಜೀರ್ಣಕ್ಕೆ ನಂಬರ್ ವನ್ನು. ಒಂದು ದಿನ ತಿಂದ್ರೇ ಕಷ್ಟ; ಇನ್ನು ನೀನು ಮೂರ್ಮೂರ್ ದಿನ ಅದನ್ನೇ ತಿಂದಿದ್ಯಲ, ಆರೋಗ್ಯ ಹಾಳಾಗ್ದೇ ಮತ್ತಿನೆಂತಾಗ್ತು?’ ಈಗ ನನಗೆ ಅರ್ಥವಾಯಿತು. ಹೊಟ್ಟೆಯೊಂದೇ ನನಗೆ ಸರಿಯಿಲ್ಲದಿರುವುದು, ತಲೆ ಸರಿಯಿದೆ ಅಂತ ಸಮಾಧಾನ ಮಾಡಿಕೊಂಡೆ. 'ಎಲೆಲೆ ಕೋಸೇ!' ಅಂದುಕೊಂಡೆ. ಆಮೇಲೆ ಅಮ್ಮ, ಓಮಿನ ಕಾಳು ಬತ್ತಿಸಿದ ನೀರು ಕುಡಿಯುವಂತೆ, ಬೆಳ್ಳುಳ್ಳಿ-ಶುಂಟಿ ಜಜ್ಜಿ ಮೊಸರಿಗೆ ಹಾಕಿಕೊಂಡು ಉಣ್ಣುವಂತೆ, ಹೆಸರುಬೇಳೆ ಬೇಯಿಸಿ ಹಾಲು-ಸಕ್ಕರೆ ಬೆರೆಸಿ ಸೇವಿಸುವಂತೆ, ಇಷ್ಟೆಲ್ಲ ಮಾಡಿದಮೇಲೂ ಹುಷಾರಾಗದಿದ್ದರೆ ಹೋಗಿ ಡಾಕ್ಟರನ್ನು ಕಾಣುವಂತೆ ಸೂಚಿಸಿ ಫೋನಿಟ್ಟಳು. ಇಷ್ಟೆಲ್ಲ ಮಾಡಿದ ಮೇಲೆ ಗುಣವಾಗದಿರುವುದಕ್ಕೆ ಛಾನ್ಸೇ ಇಲ್ಲ ಅಂತ ನನಗನ್ನಿಸಿತು.

ಈ ಹಿಂದೆಯೂ ಇಂಥದೇನಾದರೂ ತೊಂದರೆಯಾದರೆ ನಾನು ರೂಂಮೇಟಿಗೂ ಹೇಳದೆ ಇಂಗ್ಲೀಷ್ ಮಾತ್ರೆ ನುಂಗಿ ಹುಷಾರು ಮಾಡಿಕೊಳ್ಳುತ್ತಿದ್ದೆ. ಅವನಿಗೆ ಹೇಳಿದರೆ ಅಮ್ಮನ ಹಾಗೆಯೇ, ಒಳ್ಳೆಯವರ ಹುಟ್ಟುಲಕ್ಷಣದಂತೆ, ಏನೇನೋ ಹಳ್ಳಿ ಔಷದಿ ಮಾಡಿಕೊಂಡು ಕುಡಿಯುವಂತೆ ಹೇಳುತ್ತಿದ್ದ. ಹಾಗಾಗಿ ನಾನು ಅವನಿಗೆ ಹೇಳಲಿಕ್ಕೇ ಹೋಗುತ್ತಿರಲಿಲ್ಲ. ಆದರೆ ಈ ಸಲದ ಖಾಯಿಲೆ ಇಂಗ್ಲೀಷ್ ಔಷಧಿಗಳಲ್ಲಿ ಹುಷಾರಾಗುವ ಹಾಗೆ ಕಾಣಲಿಲ್ಲ. ಅಮ್ಮ ಹೇಳಿದ ಸಲಹೆಗಳನ್ನು ಜಾರಿಗೆ ತರಲೆಂದು ನಾನು ಅಡುಗೆ ಮನೆಗೆ ಹೋದೆ. ಓಮಿನ ಕಾಳಿನ ಕಷಾಯ, ಶುಂಟಿ ಕಷಾಯ, ಬೆಳ್ಳುಳ್ಳಿ ಗೊಜ್ಜು -ಇವನ್ನೆಲ್ಲ ಮಾಡಲಿಕ್ಕೆ ಐಟೆಮ್ ಎಲ್ಲಿದೆಯಪ್ಪಾ ಅಂತ ಶೆಲ್ಫಿನ ಡಬ್ಬಿಗಳಲ್ಲಿ ತಡಕಾಡತೊಡಗಿದೆ. ನನ್ನ ರೂಂಮೇಟು ಬಿಟ್ಟು ಹೋಗಿದ್ದ ಸರಕಿನಲ್ಲಿ ಅವೆಲ್ಲ ಇರಲೇಬೇಕೆಂಬುದು ನನ್ನ ಅಂದಾಜು. ಸರಿಯಾದ ಟೈಮಿಗೆ ಅವನೇ ಫೋನ್ ಮಾಡಿದ:

"ಎಂಥ ಮಾಡ್ತಿದ್ಯೋ? ಡಬ್ಬಿ ಮುಚ್ಚಳ ತೆಗ್ದು-ಹಾಕಿ ಮಾಡೋ ಸೌಂಡ್ ಬರ್ತಾ ಇದ್ದು?" ಕೇಳಿದ.

"ಹೆಹೆ.. ಎಂತಿಲ್ಲೆ ಮಾರಾಯಾ.. ಈ ಓಮಿನ್ ಕಾಳು ಮತ್ತೆ ಶುಂಟಿ ಎಲ್ಲಿದ್ದು ಅಂತ ಹುಡುಕ್ತಿದ್ದಿ.." ಎಂದೆ.

"ಏನಂದೇ..?! ಓಮಿನ್ ಕಾಳಾ? ನಿಂಗಾ? ನಾನು ಯಾರ ಹತ್ರ ಮಾತಾಡ್ತಾ ಇದ್ದಿ ಅಂತ ಕನ್‌ಫ್ಯೂಸ್ ಆಗ್ತಾ ಇದ್ದು.. ಹಲೋ..?" ಬೇಕಂತಲೇ ನಾಟಕ ಮಾಡಿದ.

ಅವನಿಗೆ ವಿಷಯ ಹೇಳದೇ ವಿಧಿಯಿರಲಿಲ್ಲ; ಹೇಳಿದೆ. ನಾನೂ ತೇಜಸ್ವಿಯವರಂತೆ ಪಾಕಕ್ರಾಂತಿ ಮಾಡುವುದಕ್ಕೆ ಮುಂದಾದದ್ದು, ಆ ಕ್ರಾಂತಿಯಿಂದಾದ ಪರಿಣಾಮಗಳು, ಈಗ ಉಂಟಾಗಿರುವ ಕರುಣಾಜನಕ ಸ್ಥಿತಿ, ಎಲ್ಲಾ.

ಆ ಕಡೆಯಿಂದ ಗಹಗಹ ನಗು: "ನನ್ ಮಗನೇ, ನಾ ಇದ್ದಾವಾಗ ಒಂದು ದಿನ ಕಷಾಯ ಕುಡಿ ಅಂದ್ರೆ ಕುಡಿತಿರ್ಲೆ ಹೌದಾ? ಈಗ ನೋಡು.. ಹೆಂಗಾತು ಧಗಡಿ! ಹಹ್ಹಹ್ಹಾ..!"

ನನಗೆ ವಿಪರೀತ ಕೋಪ ಬಂದರೂ ಈ ಅಸಹಾಯಕತೆಯಲ್ಲಿ ಏನೂ ಹೇಳಲಿಕ್ಕೆ ಮನಸು ಬರಲಿಲ್ಲ. ಕೊನೆಗೆ ಅವನೇ ತಡೆದುಕೊಂಡು, ನೋಡು ಇಂಥಾ ಸಣ್ಣ ಕರಡಿಗೆಯಲ್ಲಿ ಇದೆ ಓಮಿನ್ ಕಾಳು ಅಂತ ಹೇಳಿದ. ಅಲ್ಲೇ ಇತ್ತು. ಬತ್ತಿಸಿಕೊಂಡು ಕುಡಿದೆ. ಇವತ್ತು ಮುಂಜಾನೆ ಏಳುವ ಹೊತ್ತಿಗೆ ಸಮಸ್ಯೆಯೆಲ್ಲ ಮಾಯ!

ಪ್ರೀತಿಯುಕ್ಕಿ, ರೂಂಮೇಟಿಗೆ ಎಸ್ಸೆಮೆಸ್ ಮಾಡಿದೆ: "ಥ್ಯಾಂಕ್ಯೂ ದೋಸ್ತಾ.. ಹುಷಾರಾತು.. ಎಲ್ಲಾ ಓಮಿನ್ ಕಾಳಿನ ದೆಸೆ." ನಿಮಿಷದೊಳಗೆ ಅವನಿಂದ ರಿಪ್ಲೇ: "ಯು ಆರ್ ವೆಲ್ಕಮ್ಮು. ಬರೀ ಅಡುಗೆ ಮಾಡಕ್ಕೆ ಬಂದ್ರೆ ಆಗಲ್ಲೆ, ಯಾವ್ದುನ್ನ ಎಷ್ಟ್ ಮಾಡವು ಅಂತಾನೂ ಗೊತ್ತಿರವು. ತಿಳ್ಕ: ಕೋಸು ಮತ್ತು ಕೂಸು -ಈ ಎರಡೂ ವಿಷ್ಯಗಳಲ್ಲಿ ಭಾಳಾ ಹುಷಾರಾಗಿರವು. ಇನ್ಮೇಲಿಂದ ಡೈಲೀ ರಾತ್ರಿ ಮಲ್ಗಕ್ಕರೆ ಕಷಾಯ ಮಾಡ್ಕ್ಯಂಡ್ ಕುಡಿ. ಯಾವ ಖಾಯಿಲೆಯೂ ಬರದಿಲ್ಲೆ."

ಈಗ ರಾತ್ರಿಯಾಗಿದೆ. ನಾನು ಮನೆಯಲ್ಲಿ ಒಬ್ಬನೇ ಇದ್ದೇನೆ. ಅಕ್ಕಪಕ್ಕದ ಮನೆಯವರೆಲ್ಲ ಮಲಗಿದ್ದಾರೆ. ನಿಧಾನಕ್ಕೆ ಅಡುಗೆ ಮನೆಗೆ ಹೋಗುತ್ತೇನೆ. ಎರಡನೇ ಶೆಲ್ಫಿನ ಮೂಲೆಯಲ್ಲಿರುವ ಪುಟ್ಟ ಕರಡಿಗೆಯ ಮುಚ್ಚಳ ತೆರೆಯುತ್ತೇನೆ. ಯಾವುದೋ ಮರದ ಚಕ್ಕೆ. ಕಲ್ಲಿನ ಮೇಲಿಟ್ಟು ಜಜ್ಜಿ ಹಾಲಿಗೆ ಹಾಕಿ ಕುದಿಸುತ್ತೇನೆ. ಉದ್ದ ಲೋಟಕ್ಕೆ ಬಗ್ಗಿಸಿಕೊಂಡು ಬಂದು ಖುರ್ಚಿಯಲ್ಲಿ ಕೂತು ಒಂದೊಂದೆ ಗುಟುಕು ಕುಡಿಯುತ್ತೇನೆ. ಕಿಟಕಿ-ಬಾಗಿಲುಗಳು ಮುಚ್ಚಿವೆ. ಯಾರೂ ನೋಡುತ್ತಿಲ್ಲ, ನಾನು ಒಳ್ಳೆಯವನಾದದ್ದು ಯಾರಿಗೂ ಗೊತ್ತಾಗಲಿಲ್ಲ ಅಂತ ಧೈರ್ಯ ತಂದುಕೊಳ್ಳುತ್ತೇನೆ. ಬಿಸಿಬಿಸಿ ಕಷಾಯದ ಲೋಟದಿಂದ ಹೊಮ್ಮುತ್ತಿರುವ ಘಮಘಮ ಹಬೆಯ ಹಿಂದೆ ತೇಲುತ್ತಿರುವ ವಿಧವಿಧ ಚಿತ್ರಗಳು: ಪದರ ಪದರದ ಕೋಸು, ಅದನ್ನು ರೆಕಮಂಡ್ ಮಾಡಿದ ಮಾಣಿ, ಫೋನ್ ಹಿಡಿದ ಅಮ್ಮ, ಗಹಗಹ ನಕ್ಕ ರೂಂಮೇಟ್, ಇವೆಲ್ಲವನ್ನೂ ದಾಟಿ ಬರುತ್ತಿರುವ ಅದ್ಯಾವುದೋ ಸೂಪ್-ಸೂಪರ್ ಕೂಸು... ಕಷಾಯ ಭಲೇ ರುಚಿಯೆನಿಸುತ್ತದೆ. ಮತ್ತೆ ಅಡುಗೆ ಮನೆಗೆ ಹೋಗಿ, ಖಾಲಿ ಲೋಟಕ್ಕೆ ಪಾತ್ರೆಯ ತಳದಲ್ಲಿದ್ದ ಚೂರು ದ್ರವವನ್ನೂ ಬಗ್ಗಿಸಿಕೊಂಡು... ...

[ಮಾರ್ಚ್ ೨೦, ೨೦೧೦]

Wednesday, July 07, 2010

ರೇಶಿಮೆ ಸೀರೆ

ಬೆರಳು ಮಾಡಿ ತೋರಿಸಿದ ಸೀರೆಯನ್ನು
ಮೆತ್ತೆ ತುಂಬ ಹಾಸಿ ತೋರಿಸಿ
ಸರಭರ ಸದ್ದಿಗೆ ಪಟಪಟ ಮಾತು ಬೆರೆಸುವ
ಸೆರಗಿನ ಬಂಗಾರು ಶಂಕುಗಳನ್ನು
ಸವರಿ ನವಿರಲಿ ನೆರಿಗೆ
ಮೂಡದ ಹಾಗೆ ಇಡುವವ
ಕನಸು ಕಂಗಳ ಹುಡುಗನೇ ಇರಬೇಕು
ಎಂದೆನಿಸಿದ ಕ್ಷಣವೇ ಕಚ್ಚಿಕೊಂಡದ್ದು
ನಾಲಗೆ.

ಎಲ್ಲಾ ಸರಿ, ನೀನು ಹೀಗೆ,
ಹಣೆಯ ಮೇಲೆ, ಬೈತಲೆ ದಾರಿ
ಶುರುವಿಗೂ ಮುನ್ನ, ಒಂದು ಹುಂಡಿ
ಹುಡಿ ಕುಂಕುಮ ಇಟ್ಟುಕೊಂಡರೆ
ಲಕ್ಷಣವಾಗಿ ಕಾಣುತ್ತೀ-
ನನ್ನಮ್ಮನ ಹಾಗೆ
ಎಂದ ನಿನ್ನ ಬೆನ್ನಿಗೆ ಸದಾ
ಕಾಮನಬಿಲ್ಲಿತ್ತು.
ಬಿಸಿಲಲ್ಲೇ ಸುರಿಯತೊಡಗಬೇಕಾದರೆ
ಮಳೆಗೆ ಹುಚ್ಚೆಷ್ಟಿರಬೇಡ ಹೇಳು?

ಶಾರೆ ನೀರು ಸಾಕು;
ಹಸಿಹಸಿರು ಹೆಸರುಕಾಳು, ಸೆಖೆಯುಬ್ಬೆಯಲ್ಲೂ
ಬಿಳಿ ಹೊಟ್ಟೆಯೊಡೆದು
ಇಷ್ಟುದ್ದ ಬಯಕೆ ಮೊಳಕೆ.
ಇಷಾರೆ ನೋಟ ಸಾಕಾಯ್ತು;
ಪ್ರೀತಿಯುಕ್ಕಿ, ಕೆಂಪು ಹಳದಿ
ಸೀರೆ ತೆರೆ ಮರೆ ಅಟ್ಟಣಿಗೆ ಕುಲುಕು
ಪಿಸುಮಾತು.

ನಂಬಿ ಬಂದಿದ್ದೇನೆ ಹುಡುಗಾ..
'ಒಂದಲ್ಲಾ ಒಂದು ದಿನ, ಈ
ದುಡಿದ ಚಿಲ್ಲರೆ ಕಾಸಿನಿಂದಲೇ
ಅಮ್ಮನಿಗೊಂದು ರೇಶಿಮೆ ಸೀರೆ ಕೊಂಡೊಯ್ತೇನೆ ನೋಡು'
ಎಂಬ ನಿನ್ನ ಒದ್ದೆ ಆಶೆ ಕೇಳಿದಾಗಲೇ
ಚಿತ್ತೈಸಿಹೋದದ್ದು ಈ ಸಂಲಗ್ನ.

'ಬಾಯಿ ಮುಚ್ಚೇ ಬೋಸುಡಿ'
ಎಂಬ ನನ್ನಮ್ಮನ ಬೈಗುಳಕ್ಕೆ
ಬಾಗಿಲನ್ನೇ ಮುಚ್ಚಿ ಬಂದಿದ್ದೇನೆ..
ಈಗ ನೀನೇ ಗತಿ, ನೀನೇ ಧೃತಿ.
ಅತ್ತೆಯ ಬಳಿಗೆ ಕರೆದೊಯ್ಯಿ,
ಕಾಲು ಮುಟ್ಟಿ ನಮಸ್ಕಾರ ಮಾಡುತ್ತೇನೆ.