ತಿರುವುತ್ತ ತಿರುವುತ್ತ ಕ್ಯಾಲೆಂಡರಿನ ಪುಟಗಳು
ಖಾಲಿಯಾಗಿ ಕೊನೆಯ ಎರಡು ಹಾಳೆಗಳು ಉಳಿಯಿತು ಎನ್ನುವಾಗ ಚಳಿಗಾಲ ಇಳೆಗೆ ಕಾಲಿಡುತ್ತದೆ. ಕಂಬಳಿ
ಮಾರುವ ಅಂಗಡಿಗಳಲ್ಲಿ ಹೊಸ ಸ್ಟಾಕು ತರಿಸುತ್ತಾರೆ. ಬೀದಿಬದಿಗಳಲ್ಲಿ ಬೆಚ್ಚನೆಯ
ಸ್ವೆಟರು-ಜಾಕೆಟ್ಟುಗಳ ಮಾರಾಟ ಶುರುವಾಗುತ್ತದೆ. ರಾತ್ರಿಯ ಸಮಯ ಅಲ್ಲಲ್ಲಿ ಹೊಡಚಲು ಹಾಕಿ ಬೆಂಕಿ
ಕಾಯಿಸುವ ಜನಗಳು ಕಾಣತೊಡಗುತ್ತಾರೆ. ಫ್ಯಾನುಗಳು ಸಂಜೆಯ ಹೊತ್ತಿಗೇ ಆಫ್ ಆಗಿ ಪಂಕಗಳಿಂದ ಆಕಳಿಕೆಯ
ಸದ್ದು ಕೇಳಿಬರುತ್ತದೆ. ‘ಮಾಘಮಾಸ
ಬಂತಯ್ಯಾ ಪ್ರೇಮಿಗಳಿಗಿನ್ನು ಹಬ್ಬವಯ್ಯಾ’
ಅಂತೆಲ್ಲ ಕವಿತೆ ಬರೆಯಬಹುದು ಎಂದು ಕಲ್ಪಿಸಿಕೊಂಡು ಕವಿಗಳು ರೋಮಾಂಚಿತರಾಗುತ್ತಾರೆ. ಬಾಟಲಿಯಲ್ಲಿನ
ಕೊಬ್ರಿ ಎಣ್ಣೆ ಇಟ್ಟಲ್ಲೆ ಗಟ್ಟಿಯಾಗುತ್ತದೆ. ಐಸ್‌ಕ್ರೀಮ್ ಅಂಗಡಿಯವನು ಸಂಜೆಗೇ ಶಟರ್ ಎಳೆದು
ಋತುವನ್ನು ಬೈದುಕೊಳ್ಳುತ್ತ ಮನೆಯತ್ತ ಧಾವಿಸುತ್ತಾನೆ.
ಸರಿಸುಮಾರು ಇದೇ ಹೊತ್ತಿಗೆ ನನ್ನಂತಹ ನತದೃಷ್ಟ
ಜನರ ಗುಂಪೊಂದು ಸಣ್ಣಗೆ ಕುಂಟುತ್ತಲೋ, ಕಾಲನ್ನು
ವಕ್ರಪಕ್ರವಾಗಿ ಹಾಕುತ್ತಲೋ ನಡೆಯತೊಡಗುತ್ತದೆ. ಆಗಾಗ ಮೈಕೈಯನ್ನು ಕೆರೆದುಕೊಳ್ಳುವುದೋ, ಉರಿ ಉರಿ ಅಂತ
ಗೊಣಗಿಕೊಳ್ಳುವುದೋ ಶುರುವಾಗುತ್ತದೆ. ಈ ಇಂತಹ ನಮ್ಮನ್ನು ನೋಡಿ ‘ಇವರಿಗೇನೋ ಮಹತ್ತರ
ಖಾಯಿಲೆಯಿದೆ’
ಎಂದು ನೀವು ಭಾವಿಸಬೇಕಿಲ್ಲ;
ನಮಗಿರುವ ಸಮಸ್ಯೆ ಒಂದೇ: ಒಣ ಚರ್ಮ ಅಥವಾ ಡ್ರೈ ಸ್ಕಿನ್!
ಈ ಒಣ ಚರ್ಮ ಎಂಬುದು ಅಂತಹ ಗಂಡಾಂತರಕಾರಿ
ಸಮಸ್ಯೆಯೇನೂ ಅಲ್ಲದಿರುವುದರಿಂದ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಎಲ್ಲೋ ಚಳಿಯ
ದಿನಗಳಲ್ಲಿ ಅದು ಸ್ವಲ್ಪ ಗಂಭೀರ ಸ್ವರೂಪ ತಾಳುವುದಾದರೂ ಹೇಗೋ ಸಂಬಾಳಿಸಿಕೊಂಡು ಹೋಗಬಹುದು. ಹೀಗಾಗಿ
ಜನ ಅದನ್ನು ಕಡೆಗಣಿಸುವುದೇ ಹೆಚ್ಚು.
ಆದರೆ ನನ್ನಂತಹ ಕೆಲವರಿಗೆ ವರ್ಷಪೂರ್ತಿ ಈ
ಸಮಸ್ಯೆ ಕಾಡುವುದರಿಂದ,
ನಾವು ನೂರಾರು ಕ್ರೀಮು-ತೈಲ-ಲೋಷನ್ನುಗಳ ಮೊರೆ ಹೋಗುವುದು ಅನಿವಾರ್ಯ. ನನ್ನ ಅಮ್ಮ ಹೇಳುವ ಪ್ರಕಾರ, ನಾನು ಮಗುವಾಗಿದ್ದಾಗ ‘ಕೆಂಪಿನ ಕಜ್ಜಿ’ ಎಂಬ ಹೆಸರಿನ
ಸಮಸ್ಯೆಯಾಗಿ, ಸುಮಾರು
ವೈದ್ಯರುಗಳ ಬಳಿಗೆ ನನ್ನನ್ನು ಕರೆದೊಯ್ದು, ಅವರು
ಬೇರೆಬೇರೆ ಥರದ ಮುಲಾಮುಗಳನ್ನು ಕೊಟ್ಟು, ಅವನ್ನೆಲ್ಲಾ
ಪ್ರಯೋಗಿಸೀ ಪ್ರಯೋಗಿಸೀ ನನ್ನ ಮೈ ಚರ್ಮ ಈಗ ಇಷ್ಟೊಂದು ಒರಟಾಗಿಹೋಗಿದೆ ಎಂಬುದು. ಆದರೆ ಅದೇನು
ಪೂರ್ತಿ ಸತ್ಯದ ಮಾತಲ್ಲ. ಏಕೆಂದರೆ, ಹಾಗೆ
ಹೇಳುವ ಅಮ್ಮನದೂ ಒಡಕು ಚರ್ಮವೇ! ಹೀಗಾಗಿ ನಮ್ಮ ಮನೆಯಲ್ಲಿ ಕೆಜಿಗಟ್ಟಲೆ ವ್ಯಾಸಲೀನು ಸದಾ
ದಾಸ್ತಾನಿರುವುದು. ಅದನ್ನು ಪ್ರತಿ ರಾತ್ರಿ ಮಲಗುವಾಗ ಹಿಮ್ಮಡಿಗೆ ಸವರಿಕೊಂಡು ಮಲಗದಿದ್ದರೆ
ಮರುದಿನ ಎದ್ದು ಓಡಾಡಲೂ ಆಗುವುದಿಲ್ಲ ಎನ್ನುವ ಪರಿಸ್ಥಿತಿ.
ಈ ಒಣಚರ್ಮ ಎಂಬುದು ವಂಶಪಾರಂಪರ್ಯವಾಗಿ
ಜೀನಿನಲ್ಲೇ ಹರಿದು ಬರುವ ಸಮಸ್ಯೆ ಎಂಬುದು ನನ್ನ ಭಾವನೆ. ನನ್ನ ಅಮ್ಮನ ತವರು ಮನೆಯಲ್ಲಿ, ಅವಳ ತಂದೆ, ಅಣ್ಣ-ತಮ್ಮಂದಿರೆಲ್ಲ
ಒಣಚರ್ಮದವರೇ. ಅದು ಅಮ್ಮನಿಗೂ, ಅಮ್ಮನಿಂದ
ನನಗೂ ಬಳುವಳಿಯಾಗಿ ಬಂದಿದೆ. ನಿಜ ಹೇಳಬೇಕೆಂದರೆ, ಮಲೆನಾಡಿನ
ಕಡೆ ನೀವು ಬಂದು ನೋಡಿದರೆ, ಅರ್ಧದಷ್ಟು
ಜನ ಈ ಸಮಸ್ಯೆಯಿಂದ ಒದ್ದಾಡುತ್ತಿರುವುದನ್ನು ನೋಡಬಹುದು. ಬರಗಾಲದ ಬಯಲುಗಳಲ್ಲಿ ಬಿರಿದ ಭೂಮಿಯ
ಹಾಗೆ ಕಾಣುವ ಇವರ ಹಿಮ್ಮಡಿಯನ್ನು ನೋಡಿದರೆ ನೀವು ಬೆಚ್ಚಿಬೀಳುವಿರಿ.
ಚಳಿಗಾಲಕ್ಕೆ ಸರಿಯಾಗಿ ಶುರುವಾಗುವ ಅಡಿಕೆ
ಸುಗ್ಗಿ, ಹಸಿಯಡಿಕೆ
ಸಿಪ್ಪೆಯ ವಿಲೇವಾರಿ, ತೋಟಕ್ಕೆ
ಹೆಚ್ಚೆಚ್ಚು ಓಡಾಟ, ತೊಗರು
ಅಡಿಕೆಯನ್ನು ಬೇಯಿಸಿ ಹರವಿ ಒಣಗಿಸುವ ಕೆಲಸಗಳಲ್ಲಿ ತೊಡಗಿಕೊಳ್ಳುವ ಮಲೆನಾಡ ಮಂದಿ, ಈ ಒಡೆದ
ಹಿಮ್ಮಡಿಯಿಂದಾಗಿ ಅನುಭವಿಸುವ ಪಾಡು ಅಷ್ಟಿಷ್ಟಲ್ಲ. ಇದರ ಜತೆಗೆ ಗದ್ದೆಯ ಕೆಲಸ-ಕೊಟ್ಟಿಗೆ
ಚಾಕರಿಯೂ ಇದ್ದುಬಿಟ್ಟರಂತೂ ಮುಗಿಯಿತು. ಕೆಸರು-ಸಗಣಿಗಳೆಲ್ಲ ಈ ಒಡಕಿನೊಳಗೆ ಸೇರಿಕೊಂಡು
ಚಿತ್ರಹಿಂಸೆ ಕೊಡುವುದು.
ನಾನು ಚಿಕ್ಕವನಿದ್ದಾಗ ಅಮ್ಮ ಈ ವ್ಯಾಸಲೀನು
ಮುಂತಾದ ಮುಲಾಮುಗಳನ್ನು ದುಡ್ಡು ಕೊಟ್ಟು ತಂದು ಪೂರೈಸಲಾಗುವುದಿಲ್ಲ ಎಂದು ಮೇಣದ ಬತ್ತಿಗಳನ್ನು
ಕೊಬ್ರಿ ಎಣ್ಣೆಯ ಜೊತೆ ಕರಗಿಸಿ ಮಿಶ್ರ ಮಾಡಿ ಇಟ್ಟಿರುತ್ತಿದ್ದಳು. ಪ್ರತಿ ರಾತ್ರಿ ನಾವು ಅದನ್ನೇ
ಸವರಿಕೊಂಡು ಮಲಗುತ್ತಿದ್ದೆವು. ಒಮ್ಮೆ ಮೇಣದ ಬತ್ತಿಯೂ ದುಬಾರಿಯೆಂದೂ, ಅದೂ ಅಷ್ಟು
ಪರಿಣಾಮಕಾರಿಯಾಗಿಲ್ಲವೆಂದೂ ತೀರ್ಮಾನಿಸಿ, ಅಪ್ಪ
ನಮಗೆ ಈ ವಾಹನಗಳ ಕೀಲುಗಳಿಗೆ ಸವರುವ ಗ್ರೀಸ್ ತಂದುಕೊಟ್ಟಿದ್ದ. ‘ಕೆಟ್ಟ ವಾಸನೆ, ಆದರೆ ಸಖತ್ ಸ್ಟ್ರಾಂಗ್
ಇದೆ’ ಅಂತ
ಗೊಣಗಿಕೊಂಡು ನಾನು-ಅಮ್ಮ ಅದನ್ನೇ ಹಿಮ್ಮಡಿಗೆ ಸವರಿಕೊಂಡು ಮಲಗುತ್ತಿದ್ದೆವು. ಹೀಗೆ ರಾತ್ರಿಯ ಹೊತ್ತು ಕೈಕಾಲುಗಳಿಗೆ ಔಷಧಿ
ಹಚ್ಚಿಕೊಂಡು ಮಲಗುವ ಸಮಸ್ಯೆ ಎಂದರೆ ಹಾಸಿಗೆ-ವಸ್ತ್ರವೆಲ್ಲ ವಾಸನೆಯಾಗಿ-ಜಿಡ್ಡಾಗಿ ಗಬ್ಬೆದ್ದು
ಹೋಗುವುದು. ಅದಕ್ಕೂ ಒಂದು ಉಪಾಯ ಕಂಡುಹಿಡಿದ ನಾವು,
ಔಷಧಿ ಹಚ್ಚಿಕೊಂಡಾದಮೇಲೆ, ಹಳೆಯ
ಪ್ಲಾಸ್ಟಿಕ್ ಕವರುಗಳನ್ನು ಸಾಕ್ಸಿನಂತೆ ಕಾಲಿಗೆ ಧರಿಸಿ ಮಲಗಿಕೊಳ್ಳುತ್ತಿದ್ದೆವು. ಈ
ಪ್ಲಾಸ್ಟಿಕ್ ಸಾಕ್ಸು ಚರಪರ ಸದ್ದು ಮಾಡುತ್ತಾ ಎಷ್ಟೋ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ.
ಒಮ್ಮೆ ಅಪ್ಪ, ಪಕ್ಕದೂರಿನ ಒಂದು
ಮನೆಯವರು ತಮ್ಮ ಒಡೆದ ಹಿಮ್ಮಡಿಯ ಸುತ್ತ ಇರುವ ನಿಷ್ಪ್ರಯೋಜಕ ಒಣ ಚರ್ಮವನ್ನು ಬ್ರಶ್ಶಿನಂತರ
ಸಾಧವೊಂದರಿಂದ ತಿಕ್ಕಿತಿಕ್ಕಿ ಕೆರೆದು ತೆಗೆದು ಸ್ವಚ್ಛ ಮಾಡಿಕೊಂಡು ನಂತರ ಔಷಧಿ
ಸವರಿಕೊಳ್ಳುತ್ತಾರೆಂದೂ, ಅದರಿಂದ
ಅವರಿಗೆ ಅನುಕೂಲವಾಗಿರುವಾಗಿ ಹೇಳಿದರೆಂದೂ, ಅಂತಹುದೇ
ಒಂದು ಬ್ರಶ್ ಕೊಂಡು ತಂದಿದ್ದ. ಆಮೇಲೆ ನಾನು-ಅಮ್ಮ ಪ್ರತಿ ಸಂಜೆ ಹಿಮ್ಮಡಿಗೆ ಈ ಬ್ರಶ್ ಹಾಕಿ
ತಿಕ್ಕತೊಡಗಿದೆವು. ತರಿತರಿಯಾದ ಮೇಲ್ಮೈ ಹೊಂದಿದ್ದ ಈ ಸ್ಟೀಲಿನ ಬ್ರಶ್ಶು ನಮ್ಮ ತಿಕ್ಕುವ
ರಭಸಕ್ಕೆ ಒಣಚರ್ಮವನ್ನೆಲ್ಲ ಕಿತ್ತು ಹಾಕಿ ಹಿಮ್ಮಡಿಯನ್ನು ನುಣುಪಾಗಿಸುತ್ತಿತ್ತು. ಅಕ್ಕಪಕ್ಕದ ಮನೆಯವರೋ ನೆಂಟರೋ ಆ ಸಮಯದಲ್ಲಿ ನಮ್ಮ
ಮನೆಗೇನಾದರೂ ಬಂದರೆ ನಮ್ಮ ಈ ವಿಚಿತ್ರ ಪರಿಯನ್ನು ನೋಡಿ ಅವಾಕ್ಕಾಗುತ್ತಿದ್ದರು. ವಿಷಯ ಎಂದರೆ, ಮೃದು ಚರ್ಮದ ಜನಗಳಿಗೆ
ನಮ್ಮ ಗೊಡ್ಡು ಚರ್ಮದ ಸಮಸ್ಯೆಯ ತೀವ್ರತೆಯ ಕಲ್ಪನೆಯೇ ಇಲ್ಲದಿರುವುದು. ಹೀಗಾಗಿ, ನಾವು ಮಾಡುವ ಚಿತ್ರವಿಚಿತ್ರ
ಪ್ರಯೋಗಗಳು ಅವರಿಗೆ ಪರಿಹಾಸದಂತೆ ಕಂಡು, ನಮಗೆ
ಮತಿಭ್ರಮಣೆಯಾಗಿದೆ ಎಂದು ಭಾವಿಸಿರಲಿಕ್ಕೂ ಸೈ.
ಈ ಒಣ ಚರ್ಮದ ತೀವ್ರತೆಯ ಪರಾಕಾಷ್ಟೆ ನನಗೆ
ಅರಿವಾದದ್ದು ನಾನು ಆಧಾರ್ ಕಾರ್ಡ್ ಮಾಡಿಸಲು ಆಧಾರ್ ಕೇಂದ್ರಕ್ಕೆ ಹೋದಾಗ. ಭಾರತ ಸರ್ಕಾರವು ದೇಶದ
ಪ್ರತಿಯೊಬ್ಬ ನಾಗರೀಕನೂ ಆಧಾರ್ ಹೊಂದಿರುವುದು ಒಳ್ಳೆಯದು ಎನ್ನುವ ಘೋಷಣೆ ಮಾಡಿದಾಗ, ಅಲ್ಲಿಯವರೆಗೂ ಅಲಕ್ಷ್ಯ
ತೋರಿದ್ದ ನಾನು ಆಧಾರ್ ಕೇಂದ್ರಕ್ಕೆ ನುಗ್ಗಿದೆ. ಹೆಸರು ನೋಂದಣಿ, ವಿಳಾಸ ಧೃಢೀಕರಣ, ಭಾವಚಿತ್ರ ತೆಗೆಯುವುದು
ಇತ್ಯಾದಿಗಳೆಲ್ಲ ಮುಗಿದಮೇಲೆ, ಅಲ್ಲಿನ
ಅಧಿಕಾರಿ ‘ಫಿಂಗರ್‌ಪ್ರಿಂಟ್
ತಗೋಬೇಕು, ಕೈ
ಇದದ ಮೇಲೆ ಇಡಿ ಸಾರ್’ ಅಂತ
ಕೇಳಿದಾಗ,
ಆ ಅಧಿಕಾರಿಯೇ ತಬ್ಬಿಬ್ಬಾಗುವ ಘಟನೆ ನಡೆಯಿತು. ಈ ಆಧಾರ್ ನೋಂದಣಿಗೆ ಹತ್ತೂ ಕೈಬೆರಳುಗಳ
ಮೆಟ್ರಿಕ್ಸ್ ಕೊಡಬೇಕಷ್ಟೇ? ನಾನು
ನನ್ನ ಬೆರಳುಗಳನ್ನು ಎತ್ತೆತ್ತಿ ಆ ಕಡೆ ಈ ಕಡೆ ತಿರುಗಿಸಿ ಮತ್ತೆಮತ್ತೆ ಆ ಪ್ಯಾಡಿನ ಮೇಲೆ
ಇಟ್ಟರೂ ಆ ಯಂತ್ರಕ್ಕೆ ನನ್ನ ಬೆರಳಚ್ಚನ್ನು ಗುರುತಿಸಲು ಆಗಲೇ ಇಲ್ಲ. ನನ್ನ ಮುಖವನ್ನೂ, ವಯಸ್ಸನ್ನೂ ಮತ್ತೊಮ್ಮೆ
ಪರಿಶೀಲಿಸಿದ ಆ ಅಧಿಕಾರಿ, ‘ಏನ್
ಸಾರ್, ಇಷ್ಟು
ಚಿಕ್ಕ ಪ್ರಾಯಕ್ಕೇ ಹಿಂಗಾಗಿದೆ ನಿಮಗೆ’ ಅಂತ
ಆಶ್ಚರ್ಯ ವ್ಯಕ್ತಪಡಿಸಿದ. ನಂತರ ಯಾವುದೋ ದ್ರಾವಣದಲ್ಲಿ ಕೈ ತೊಳೆಸಿ, ಹಲವು ಸಲ ಪ್ರಯತ್ನಿಸಿದರೂ
ಕೊನೆಗೂ ನನ್ನ ಅಷ್ಟೂ ಬೆರಳುಗಳ ಅಚ್ಚು ಪಡೆಯುವುದಕ್ಕೆ ಸಾಧ್ಯವೇ ಆಗಲಿಲ್ಲ. ಕ್ಯೂನಲ್ಲಿ ಕಾಯುತ್ತಿದ್ದ ಜನಗಳು ಬೇರೆ ಬೈಯಲು ಶುರು
ಮಾಡಿದ್ದರು. ಅಂತೂ ಕಸರತ್ತು ಮಾಡಿ ಆರು ಬೆರಳುಗಳ ಅಚ್ಚನ್ನು ಪಡೆದುಕೊಂಡು, ಇನ್ನುಳಿದವಕ್ಕೆ ಅದೇನೋ
ಷರಾ ಬರೆದುಕೊಂಡು ಆ ಅಧಿಕಾರಿ ನನ್ನನ್ನು ಬೀಳ್ಕೊಟ್ಟ. ಡ್ರೈ ಸ್ಕಿನ್ ಎಂಬ ತೊಡಕಿನಿಂದ ನಾನು
ಭಾರತದ ಪ್ರಜೆಯಾಗಿರುವುದಕ್ಕೇ ಕುತ್ತು ಬಂದುಬಿಟ್ಟಿತ್ತಲ್ಲಪ್ಪಾ ಅಂತ ಬೆವರುತ್ತ ನಾನು ಆಧಾರ್
ಕೇಂದ್ರದಿಂದ ಹೊರಬಿದ್ದಿದ್ದೆ.
ಕೆಲವೊಂದು ಚಳಿಗಾಲಗಳಲ್ಲಿ ಈ ಸಮಸ್ಯೆ ಎಷ್ಟರ
ಮಟ್ಟಿಗೆ ಉಲ್ಬಣಿಸುತ್ತದೆ ಎಂದರೆ, ಕೈ-ಕಾಲು-ತುಟಿಗಳ
ಒಡಕಿನಿಂದ ರಕ್ತವೇ ಒಸರತೊಡಗುತ್ತದೆ. ಅದಕ್ಕೆ ಸೂಕ್ತ ಔಷಧಿ ಹಚ್ಚಿ ಆರೈಕೆ ಮಾಡದಿದ್ದರೆ
ಬೇರೆಯವರಿಗೆ ನಮ್ಮ ಮುಖ ನೋಡಲೂ ಭಯವಾಗುವ ಹಾಗಾಗುತ್ತದೆ. ಪ್ರತಿದಿನ ಸ್ನಾನದ ನಂತರ ಮೈಕೈಗೆಲ್ಲ
ಸರಿಯಾದ ಲೋಷನ್ ಸವರಿಕೊಳ್ಳದಿದ್ದರೆ ಚರ್ಮವೇ ಪುಡಿಪುಡಿಯಾಗಿ ಉದುರತೊಡಗುತ್ತದೆ. ಮೈಕೈಯೆಲ್ಲ
ಪಟ್ಟೆಪಟ್ಟೆಯಾಗಿ ಹಾವಿನ ಪೊರೆಯಂತೆ ಕಾಣತೊಡಗುತ್ತದೆ. ‘ನೀನು
ಹುಡುಗ ಆಗಿದ್ದಕ್ಕೆ ಬಚಾವಾದೆ. ಹುಡುಗಿ ಏನಾದ್ರೂ
ಆಗಿದ್ದಿದ್ರೆ, ಈ
ಒಡಕು ಮೈ ನೋಡಿ ನಿನ್ನನ್ನ ಯಾರು ಮದುವೆ ಆಗ್ತಿದ್ರು?’
ಅಂತ ಅಮ್ಮ ಕೆಲವೊಮ್ಮೆ ಉದ್ಘರಿಸಿದ್ದಿದೆ. ಅದ್ಯಾಕೋ ಹುಡುಗರು ರಫ್ ಅಂಡ್ ಟಫ್ ಆಗಿದ್ದರೂ
ಪರವಾಗಿಲ್ಲ, ಹುಡುಗಿಯರು
ಮಾತ್ರ ಸುಕೋಮಲ ಸುಂದರಿಯರಾಗಿರಬೇಕು ಎಂಬುದು ನಮ್ಮ ಸಮಾಜದಲ್ಲಿನ ನಂಬುಗೆ. ನಾನು ಇದನ್ನು
ಆಕ್ಷೇಪಿಸಿದ್ದಕ್ಕೆ, ‘ಹಾಗಲ್ಲ
ಕಣೋ, ನೀವು
ಹುಡುಗರು ಗಡ್ಡ ಬಿಟ್ರೆ ಸಾಕು, ಮುಖ
ಒಡೆದಿದ್ದೂ ಗೊತ್ತಾಗಲ್ಲ; ಹುಡುಗಿಯರಿಗಾದ್ರೆ
ಹಾಗಾಗತ್ತಾ?’ ಅಂತ
ಸಮರ್ಥನೆ ಕೊಟ್ಟಳು ಅಮ್ಮ.
ಮದುವೆಯಾದಮೇಲೆ ನನ್ನ ಹೆಂಡತಿ, ‘ನಾವು ಆಯ್ಲೀ ಸ್ಕಿನ್
ಇರೋರಿಗೆ ಮೊಡವೆ ಆಗುತ್ತೆ, ಬಿಸಿಲಿಗೆ
ಹೋದ್ರೆ ಮುಖ ಎಲ್ಲಾ ಎಣ್ಣೆಣ್ಣೆಯಾಗಿ ಕಪ್ಪಾಗುತ್ತೆ. ಸೌಂದರ್ಯವರ್ದಕ ಅಂತ ಜಾಹೀರಾತಲ್ಲಿ ತೋರಿಸಿದಾರೆ ಅಂತ
ಕ್ರೀಮು ಹಚ್ಕೊಂಡ್ರೆ ಮುಖ ಮತ್ತೂ ಡಲ್ಲಾಗಿ ಕಾಣುತ್ತೆ. ನೀವು ಡ್ರೈ ಸ್ಕಿನ್ ಇರೋರಿಗೇ ಆರಾಮು’ ಅಂತ ಹೇಳಿ, ನನಗೂ ಈ ಭೂಮಿಯಲ್ಲಿ
ಮೂರು ಕಾಸಿನ ಬೆಲೆ ಇದೆ ಎನಿಸುವಂತೆ ಮಾಡಿದಳು. ಕ್ರೀಮ್ ಏನು, ಕೊಬ್ರಿ ಎಣ್ಣೆಯ ಕೊಪ್ಪರಿಗೆಯಲ್ಲೇ
ಮುಳುಗೆದ್ದರೂ ಕ್ಷಣಮಾತ್ರದಲ್ಲಿ ನನ್ನ ಚರ್ಮ ಎಣ್ಣೆಯನ್ನೆಲ್ಲ ಹೀರಿಕೊಂಡು ಮತ್ತೆ ಒಣಕಲಾಗುವುದು
ಈಗ ಹೆಮ್ಮೆಯ ವಿಷಯವಾಗಿ ಕಂಡಿತು. ಅದೇ
ಹಿಗ್ಗಿನಲ್ಲಿ ಹೀರೇಕಾಯಿಯಾಗಿದ್ದವನಿಗೆ ಮರುಕ್ಷಣವೇ,
‘ಆದರೆ ಮುಂದೆ
ನಮ್ಮ ಮಗೂಗೆ ಮಾತ್ರ ಈ ಥರ ಡ್ರೈ ಸ್ಕಿನ್ ಇರದೇ ಇರ್ಲಪ್ಪಾ’ ಅಂತಂದು ತಣ್ಣೀರೂ ಎರಚಿದಳು.
ಈಗ ಕೊವಿಡ್ ಕಾಲ ಬಂದು ಎಲ್ಲರೂ ಆಗಾಗ ಕೈಗೆ
ಸ್ಯಾನಿಟೈಸರ್ ಹಚ್ಚಿಕೊಳ್ಳುತ್ತಾ ಇರಬೇಕು ಅಂತ ಆದಮೇಲೆ ಒಣಚರ್ಮದ ನಾವು ಮತ್ತಷ್ಟು ಸಂಕಷ್ಟಕ್ಕೆ
ಸಿಲುಕಿರುವುದು ನಿಜ. ಈ ಸ್ಯಾನಿಟೈಸರಿನಲ್ಲಿ ಇರುವ ಕೆಮಿಕಲ್ಲುಗಳು ನಮ್ಮ ಒಣ ಅಂಗೈಯನ್ನು
ಮತ್ತಷ್ಟು ಒಣಗಿಸುವುದರಿಂದ,
ಇತ್ತೀಚಿನ ದಿನಗಳಲ್ಲಿ ನನ್ನ ಮೊಬೈಲಿನ ಫಿಂಗರ್‌ಪ್ರಿಂಟ್ ಸೆನ್ಸಾರು ಸಹ ನನ್ನನ್ನು
ಗುರುತಿಸುವುದನ್ನು ಬಿಟ್ಟುಬಿಟ್ಟಿದೆ. ಎಷ್ಟೇ ಸಲ ಸೆನ್ಸಾರಿನ ಮೇಲೆ ಬೆರಳಿಟ್ಟರೂ ‘ನೀನು ಅವನಲ್ಲ’ ಎಂಬಂತೆ ಗರಗರ ವೈಬ್ರೇಟ್
ಆಗಿ,
ನಾನು ಯಾರದೋ ಮೊಬೈಲ್ ಕಳ್ಳತನ ಮಾಡಿ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದೀನೇನೋ ಅಂತ ನನಗೇ ಅನುಮಾನ
ಬರುವಂತೆ ಆಗಿದೆ. ಇದು ನನ್ನ ಮೊಬೈಲೇ ಹೌದಾ ಅಲ್ಲವಾ ಅಂತ ಕೆಲವೊಮ್ಮೆ ತಿರುಗಿಸಿ-ಮುರುಗಿಸಿ
ಪರಿಶೀಲಿಸುವ ಹಾಗೆ ಆಗಿದೆ.
ನಮ್ಮ ಒಣಗಿದ ತ್ವಚೆಯನ್ನೇ ಬಂಡವಾಳ
ಮಾಡಿಕೊಂಡಿರುವ ಹಲವು ಕಂಪನಿಗಳು ಇದರ ಪರಿಹಾರಕ್ಕೆ ಔಷಧಗಳನ್ನೂ-ಕ್ರೀಮುಗಳನ್ನೂ-ಲೋಷನ್ನುಗಳನ್ನೂ ಮಾರುಕಟ್ಟೆಗೆ
ಬಿಟ್ಟಿರುವುದು ನಿಜ. ನಾನು ಮೆಡಿಕಲ್ ಶಾಪುಗಳಿಗೆ –
ಸೂಪರ್ ಮಾರ್ಕೆಟ್ಟುಗಳಿಗೆ ಭೇಟಿಯಿತ್ತಾಗ ಇಂತಹ ಡಬ್ಬಿ-ಬಾಟಲಿಗಳು ನನ್ನನ್ನು ಕಂಡ ಕೂಡಲೇ ‘ಗಿರಾಕಿ ಸಿಕ್ಕಿದ’ ಎಂದು ಹಲ್ಕಿರಿಯುವಂತೆ
ಭಾಸವಾಗುತ್ತದೆ. ಒಡೆದ ಹಿಮ್ಮಡಿಯನ್ನು ಕೆಲವೇ
ದಿನಗಳಲ್ಲಿ ನಯವಾಗಿಸುವ ಕ್ರೀಮುಗಳ ಜಾಹೀರಾತುಗಳನ್ನು ನೋಡಿದರೆ ಸಾಕು, ನಾನು ಹಾಗೇ
ಕುರ್ಚಿಗೊರಗಿ ಕನಸಿನ ಲೋಕಕ್ಕೆ ಹೋಗಿಬಿಡುತ್ತೇನೆ. ಆ ಕ್ರೀಮು ಹಚ್ಚಿ ಇನ್ನೇನು ಮೈಕೈಯೆಲ್ಲ ನುಣುಪಾದಂತೆ
ಕನಸು ಕಾಣುತ್ತಿರುವನನ್ನು ಹೆಂಡತಿ ಬಂದು ತಟ್ಟಿ ಎಬ್ಬಿಸುತ್ತಾಳೆ. ವಾಸ್ತವಕ್ಕೆ ಬಂದು, ಎದ್ದು ಕನ್ನಡಿ ಮುಂದೆ ಹೋಗಿ ನಿಂತರೆ, ಸುಲಿದ ಚರ್ಮದ
ಮೋರೆಯಂದದಿ, ಒಡೆದ
ಹಿಮ್ಮಡಿ ಕಾಲಿನಂದದಿ, ಬಿರಿದ
ಅಂಗೈ ಬೆರಳಿನಂದದಿ ಎದುರು ನಿಂತಿರ್ಪ ನನ್ನದೇ ಪ್ರತಿಬಿಂಬ ‘ಇದು ಈ ಜನ್ಮದಲ್ಲಿ ಸರಿ ಹೋಗುವುದಲ್ಲ ಕಣಪ್ಪಾ, ಕನಸು ಕಾಣೋದು ನಿಲ್ಲಿಸಪ್ಪಾ’ ಎಂದು ಹೇಳಿ
ಅಣಕಿಸುತ್ತದೆ.
[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ]