Friday, December 29, 2006

ಹೊಸ ವರ್ಷದ ಶುಭಾಶಯ"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."

* * *

ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...

ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್‍ಶ್‍ಶ್‍ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...

ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...


ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...


ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...

*
* *

ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.

ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:


"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."

ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.

ನೂತನ ವರ್ಷದ ಶುಭಾಶಯಗಳು.

Monday, December 18, 2006

ಹೊಸ ವರ್ಷದ ಆಶಯ

ನಿನ್ನೆ ರಾತ್ರಿಯ ಕನಸಿನಲ್ಲಿ ಹೊಸವರ್ಷ ಬಂದಿತ್ತು.

ನಾನು ಸುಳ್ಳು ಹೇಳ್ತಿದೀನಿ, ನಾಟಕ ಮಾಡ್ತಿದೀನಿ ಅಂದ್ಕೊಂಡ್ರೇನು? ಇಲ್ರೀ, ನಿಜವಾಗಿಯೂ ಬಂದಿತ್ತು. ನನಗೆ ಆನಂದಾಶ್ಚರ್ಯಗಳು ಒಟ್ಟಿಗೇ ಆದ್ವು. ಒಂಥರಾ ದಿಗ್ಭ್ರಮೆ. ಇದೇನು ನನಸೋ ಕನಸೋ ಅಂತ ಗೊಂದಲ.

ನಾನು ಹೊಸವರ್ಷದ ಬಳಿ ಕೇಳಿದೆ, 'ಇದೇನಿದು, ಇಷ್ಟು ಮುಂಚೆ ಬಂದ್ಬಿಟ್ಯಲ್ಲ?' ಅಂತ. ಅದಕ್ಕೆ ಹೊಸವರ್ಷ 'ಅದಕ್ಕೇನೀಗ? ಏನೋ ಒಂದೆರಡು ವಾರ ಮುಂಚೆ ಬಂದಿದೀನಿ. ಬೆಂಗಳೂರಿನಲ್ಲಿ ಭಯಂಕರ ಟ್ರಾಫಿಕ್ಕು ಅಂತ ಕೇಳಿದ್ದೆ. ಹಾಗಾಗಿ ಸ್ವಲ್ಪ ಮುಂಚೇನೇ ಹೊರಟುಬಿಟ್ಟೆ. ಆದ್ರೆ ಮಜಾ ನೋಡು, ನಂಗೆ ಎಲ್ಲೂ ಟ್ರಾಫಿಕ್ಕೇ ಸಿಗಲಿಲ್ಲ! ಹಾಗಾಗಿ... ಹೆಹ್ಹೆ! ಲೇಟಾಗಿ ಬರೋದಕ್ಕಿಂತ ಮುಂಚೆ ಬಂದಿರೋದು ಒಳ್ಳೇದಲ್ವಾ?' ಎಂದು ಹೇಳಿ ಪ್ಯಾಲಿ ನಗೆಯಾಡಿತು.

ಆದರೆ ನನಗೆ ಕೋಪ ಬಂತು. 'ಛೇ! ನೀನು ಇಷ್ಟು ಬೇಗ ಬರ್ತೀಯ ಅಂತ ಗೊತ್ತಿರ್ಲಿಲ್ಲ. ನಾನು ನಿನ್ನನ್ನು ಸ್ವಾಗತಿಸಲಿಕ್ಕೇಂತ ಎಷ್ಟು ತಯಾರಿ ಮಾಡ್ಕೊಂಡಿದ್ದೆ ಗೊತ್ತಾ? ಎಲ್ಲಾ ಹಾಳು ಮಾಡಿಬಿಟ್ಟೆ' ಅಂತ ಬೈದೆ. ಅದಕ್ಕೆ ಹೊಸವರ್ಷ, 'ಹೌದಾ? ಏನೇನು ತಯಾರಿ ಮಾಡ್ಕೊಂಡಿದ್ದೆ?' ಅಂತ ಕೇಳ್ತು. ನಾನೆಂದೆ: 'ಈ ವರ್ಷ ಇಯರೆಂಡನ್ನು ಗ್ರಾಂಡ್ ಆಗಿ ಆಚರಿಸ್ಬೇಕೂಂತ ಮೈಸೂರ್ ರೋಡಲ್ಲಿ ಒಂದು ರೆಸಾರ್ಟ್‍ಗೆ ಬುಕ್ ಮಾಡಿದ್ವಿ ನಾನೂ ನನ್ನ ಫ್ರೆಂಡ್ಸೂ. ಥರ್ಟಿಫಸ್ಟ್ ಇವನಿಂಗೇ ಅಲ್ಲಿಗೆ ಹೋಗಿ, ಎರಡು ಲಾರ್ಜ್ ವ್ಹಿಸ್ಕಿ ಆರ್ಡರ್ ಮಾಡಿ, ಅದರಳೊಗೆ ಐಸನ್ನು ಕರಗಿಸಿ, ನಿಧನಿಧಾನವಾಗಿ ಹೀರ್ತಾ... ತೇಲಿ ಬರೋ ವೆಸ್ಟರ್ನ್ ಮ್ಯೂಸಿಕ್ಕಿನಲ್ಲಿ ಒಂದಾಗ್ತಾ... ಸುಂದರ ಸ್ಲೀವ್‍ಲೆಸ್‍ ಹುಡುಗೀರ ಜೊತೆ ಡಾನ್ಸ್ ಮಾಡ್ತಾ... ಆಹಾ! ಅದರಲ್ಲಿರೋ ಮಜಾ ನಿಂಗೇನು ಗೊತ್ತು? ಗಡಿಯಾರದ ಮುಳ್ಳು ಹನ್ನೆರಡನ್ನು ಮುಟ್ಟುತ್ತಿದ್ದಂತೆಯೇ ಎಲ್ಲರೂ 'ಹೋ' ಎಂದು ಜೋರಾಗಿ ಕೂಗಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಎಲ್ರೂ ಎಲ್ರಿಗೂ 'ಹ್ಯಾಪಿ ನ್ಯೂ ಇಯರ್' ಹೇಳಿ, ತಬ್ಕೊಂಡು..... ಓಹ್! ನಮ್ಮ ಯೋಜನೆಗಳನ್ನೆಲ್ಲಾ ಹಾಳು ಮಾಡಿಬಿಟ್ಟೆ' ಅಂದೆ.

ನನ್ನ ಮಾತನ್ನು ಕೇಳಿ ಹೊಸವರ್ಷ ನಸು ನಕ್ಕಿತು. ಅದರ ನಗು ನನಗೆ ವ್ಯಂಗ್ಯಭರಿತವಾಗಿದ್ದಂತೆ, ಒಂಥರಾ ನಿಗೂಢವಾಗಿದ್ದಂತೆ ಅನ್ನಿಸಿತು. 'ಅಲ್ಲಿಂದ ನಡಕೊಂಡು ಬಂದಿದೀನಿ. ಸುಸ್ತಾಗಿದೆ. ತಣ್ಣಗೆ ಒಂದು ಸ್ನಾನ ಮಾಡಿ ಬರ್ತೀನಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ, ಕೂತಿರು' ಅಂತಂದು ಹೊಸವರ್ಷ ನನ್ನ ಟವೆಲನ್ನು ಎತ್ತಿಕೊಂಡು ಬಾತ್‍ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿತು. ನಾನು ತಕ್ಷಣ ಮೊಬೈಲೆತ್ತಿಕೊಂಡು ಗೆಳೆಯರಿಗೆಲ್ಲ ಫೋನ್ ಮಾಡಿ 'ಅಯ್ಯೋ ಕೆಲಸ ಕೆಟ್‍ಹೋಯ್ತು ಕಣ್ರೋ.. ಹೊಸವರ್ಷ ಆಗಲೇ ಬಂದುಬಿಟ್ಟಿದೆ. ರೆಸಾರ್ಟಿಗೆ ಬುಕ್ ಮಾಡಿದ್ದೆಲ್ಲಾ ಕ್ಯಾನ್ಸೆಲ್ ಮಾಡ್ಸಿ. ಪಟಾಕಿ ತಗೋಳ್ಲಿಕ್ಕೆ ಹೋಗ್ಬೇಡಿ' ಅಂತೆಲ್ಲಾ ಅಂದೆ. ಗೆಳೆಯರು 'ಯಾಕೋ ಹುಚ್ಚು-ಗಿಚ್ಚು ಹಿಡಿದಿದೆಯೇನೋ?' ಅಂತ ಗೇಲಿ ಮಾಡಿ ನಕ್ಕುಬಿಟ್ಟರು. ಇವರಿಗೆ ಹೇಗೆ ಅರ್ಥ ಮಾಡಿಸಬಹುದು ಅಂತಲೇ ನನಗೆ ತಿಳಿಯಲಿಲ್ಲ. ಅಷ್ಟರಲ್ಲಿ ಹೊಸವರ್ಷದ ಸ್ನಾನ ಮುಗಿದು, ಬಾತ್‍ರೂಮಿನಿಂದ ಹೊರಬಂತು. ನಾನು ಫೋನ್ ಕಟ್ ಮಾಡಿ, ಹುಳ್ಳಹುಳ್ಳಗೆ ನಗೆಯಾಡುತ್ತಾ, ಯಥಾಸ್ಥಾನದಲ್ಲಿ ಕುಳಿತೆ.

ಹೊಸವರ್ಷ ನನ್ನ ಎದುರಿಗೆ ಬಂದು ಕುಳಿತುಕೊಂಡು ಮಾತನಾಡಲಾರಂಭಿಸಿತು: 'ನೋಡು ಗೆಳೆಯಾ, ಈ ತರಹದ ಆಡಂಭರಗಳೆಲ್ಲ ನಿಮ್ಮಂಥವರಿಗೆ ಮಾತ್ರ. ಫೂಟ್‍ಪಾತಿನ ಮೇಲೆ ಸೆಕೆಂಡ್ಸ್ ಮಾರುವವರು, ಮೆಜೆಸ್ಟಿಕ್ಕಿನ ಫ್ಲೈಓವರಿನ ಮೇಲೆ ಬ್ಯಾಟರಿ, ಕೀಚೈನು, ಮೊಬೈಲ್ ಕವರ್ರು, ಕರ್ಚೀಫು, ಬೂಟಿನ ಹಿಮ್ಮಡ, ಬೇಯಿಸಿದ ಮೊಟ್ಟೆ, ಕಡಲೆಕಾಯಿಗಳನ್ನು ಮಾರುವವರನ್ನು ಹೋಗಿ ನೋಡು. ಕೆ.ಆರ್. ಮಾರ್ಕೆಟ್ಟಿನ ಇಕ್ಕಟ್ಟಿನಲ್ಲಿ ತರಕಾರಿ ಮಾರುವವರನ್ನು ನೋಡು. ಹೋಟೆಲ್ಲುಗಳಲ್ಲಿ ಟೇಬಲ್ ಕ್ಲೀನ್ ಮಾಡುವ ಹುಡುಗರನ್ನು ನೋಡು. ಕಸ ಎತ್ತುವ, ಚರಂಡಿ ದುರಸ್ಥಿ ಮಾಡುವ ಕಾರ್ಪೋರೇಷನ್ ಕೆಲಸಗಾರನ್ನು ನೋಡು. ಅವರುಗಳ ಬಳಿ ಹೋಗಿ ಕೇಳು: 'ನೀವು ಹೊಸವರ್ಷವನ್ನು ಹೇಗೆ ಸ್ವಾಗತಿಸುತ್ತೀರಿ?' ಅಂತ. ಅವರು ಜೋರಾಗಿ ನಕ್ಕುಬಿಡುತ್ತಾರೆ. ಅವರು ನಿಮ್ಮಂತೆ ರೆಸಾರ್ಟುಗಳಲ್ಲಿ ಚಿಲ್ಡ್ ಬಿಯರ್ ಕುಡಿಯುವವರಲ್ಲ, ಕೇಕ್ ಕತ್ತರಿಸುವವರಲ್ಲ, ರಾಕೆಟ್ಟುಗಳನ್ನು ಹಾರಿಸಿ 'ಹೋ' ಎಂದು ಕೂಗುವವರಲ್ಲ. ಹೊಸವರ್ಷದ ದಿನ ಅವರ ಮನೆಯಲ್ಲಿ ಸ್ವೀಟ್ ಮಾಡುವುದಿಲ್ಲ. ಅವರು ಹೊಸವರ್ಷಕ್ಕೇಂತ ಕ್ಯಾಲೆಂಡರು ಸಹ ಕೊಳ್ಳುವುದಿಲ್ಲ. ನಿನಗೆ ಗೊತ್ತಾ ಬ್ರದರ್, ನೀನು ಹೊಸವರ್ಷದ ಸಂಭ್ರಮಕ್ಕೆಂದು ಖರ್ಚು ಮಾಡುವ ಹಣವನ್ನು ಒಬ್ಬೊಬ್ಬರಿಗೆ ಒಂದೊಂದು ರೂಪಾಯಿಯಂತೆ ಹಂಚುತ್ತಾ ಬಂದರೂ ಸಾಕಾಗದಷ್ಟು ಭಿಕ್ಷುಕರು ಬರೀ ಈ ಬೆಂಗಳೂರಿನಲ್ಲಿದ್ದಾರೆ...'

ನಾನು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದೆ. ಏನೋ ತಪ್ಪು ಮಾಡಲು ಹೊರಟಿದ್ದ ನನ್ನನ್ನು ತಡೆದಂತಾಯಿತು. ನನ್ನ ಕೋಪ, ಆವೇಶ, ಅಸಮಾಧಾನಗಳೆಲ್ಲಾ ತಣ್ಣಗಾಗಿದ್ದವು. 'ಹಾಗಾದರೆ ನನ್ನನ್ನು ಈಗ ಏನು ಮಾಡು ಅಂತೀಯಾ?' ತಗ್ಗಿದ ದನಿಯಲ್ಲಿ ಕೇಳಿದೆ.

'ಅದನ್ನೂ ನಾನೇ ಹೇಳಬೇಕಾ?' ಎಂದು ಹೊಸವರ್ಷ ಎದ್ದು ನಿಂತಿತು. 'ಅರೆ, ತಾಳು ಹೊರಡಬೇಡ...' ಅಂದೆ. 'ಇಲ್ಲ, ನಾನು ಹೊರಟೆ. ನಿನ್ನಂತಹ ಇನ್ನೊಂದಿಷ್ಟು ಜನರಿಗೆ ಇದೇ ಮಾತುಗಳನ್ನು ಹೇಳಬೇಕಿದೆ. ನೀನೂ ನಿನ್ನ ಗೆಳೆಯರಿಗೆ ತಿಳಿಹೇಳು. ಮತ್ತೆ ಸಿಗೋಣ. ಒಂದನೇ ತಾರೀಖು ಬರ್ತೀನಲ್ಲ!' ಎಂದು ಹೇಳಿ ಹೊರಟೇಬಿಟ್ಟಿತು. 'ಏ.. ನಿಲ್ಲು..' ಅಂತ ನಾನು ಕೂಗಿಕೊಂಡೆ.

ನನಗೆ ತಟ್ಟನೆ ಎಚ್ಚರಾಯಿತು. ದಢಬಡಿಸಿ ಎದ್ದು ಕುಳಿತೆ. ಕಿಟಕಿಯಲ್ಲಿ ಹೊಸ ಬೆಳಗಿನ ಬಿಸಿಲು ಕಾಣಿಸಿತು. ಕ್ಯಾಲೆಂಡರು ನೋಡಿದೆ: ಇನ್ನೂ ಡಿಸೆಂಬರಿನಲ್ಲಿಯೇ ಇತ್ತು. ಗಡಿಯಾರ ನೋಡಿದೆ: ಏಳು ಗಂಟೆಯನ್ನೂ ದಾಟಿ ಓಡುತ್ತಿತ್ತು ಮುಳ್ಳು.

[ಈ ಲೇಖ, 'ವಿಕ್ರಾಂತ ಕರ್ನಾಟಕ ' ಪತ್ರಿಕೆಯ ಈ ವಾರದ (22.12.2006) ಸಂಚಿಕೆಯಲ್ಲಿ ಪ್ರಕಟವಾಗಿದೆ. ಅವರಿಗೆ ನನ್ನ ಕೃತಜ್ಞತೆಗಳು.]

Thursday, December 14, 2006

ಸುಗ್ಗಿ ವ್ಯಾಳ್ಯಾಗ...

ಅಹಹಹ ಚಳಿ...! ಮೈ ಕೊರೆಯುವ ಚಳಿ. ಗಡಗಡ ನಡುಗಿಸುವ ಚಳಿ. ಹಲ್ಲುಗಳನ್ನು ಕಟಕಟ ಅನ್ನಿಸುವ ಚಳಿ. ಮಾಘಿ ಚಳಿ. ಚಳಿ ಚಳಿ! ಬೆಂಗಳೂರಿನಲ್ಲಿ ಕಮ್ಮಗೆ ಚಳಿ ಬಿದ್ದಿದೆ.

ಊರಿನಲ್ಲಿ ಸುಗ್ಗಿ ಶುರುವಾಗಿದೆಯಂತೆ. ಪ್ರತಿ ವರ್ಷವೂ ಹೀಗೆಯೇ. ಚಳಿ ಬೀಳುತ್ತಿದ್ದಂತೆಯೇ ಸುಗ್ಗಿಯೂ ಶುರುವಾಗುತ್ತದೆ. ಚಳಿಗಾಲ ಶುರುವಾಗುತ್ತಿದ್ದಂತೆಯೇ ಅಡಿಕೆಕಾಯಿಗಳು ಬೆಳೆದು ಹಣ್ಣಾಗಿ ಉದುರಲಾರಂಭಿಸುತ್ತವೆ. ಚಾಲಿ ಮಾಡುವ ಆಲೋಚನೆ ಇದ್ದವರು ಸ್ವಲ್ಪ ತಡವಾಗಿ ಕೊನೆ ಕೊಯ್ಲು ಶುರುಮಾಡುತ್ತಾರೆ. ಕೆಂಪಡಿಕೆ ಮಾಡುವವರು, ಚಳಿ ಬೀಳುತ್ತಿದ್ದಂತೆಯೇ, ಒಂದೆರಡು ಮರಗಳಲ್ಲಿ ಹಣ್ಣಡಿಕೆಗಳು ಉದುರಲು ಶುರುವಿಡುತ್ತದ್ದಂತೆಯೇ, ಅಡಿಕೆ ಬೆಳೆದದ್ದು ಗೊತ್ತಾಗಿ ಕೊನೆಕಾರನಿಗೆ ಬರಲು ಹೇಳಿಬಿಡುತ್ತಾರೆ.

ಈಗ ಚಾಲಿ ಅಡಿಕೆಗೆ ರೇಟ್ ಇಲ್ಲವಾದ್ದರಿಂದ ಕೆಂಪಡಿಕೆ ಮಾಡುವವರೇ ಜಾಸ್ತಿ. ಅಲ್ಲದೇ, ಅಡಿಕೆ ಹಣ್ಣಾಗಿ, ಆಮೇಲೆ ಅದನ್ನು ಒಣಗಿಸಿ, ಆಮೇಲೆ ಸುಲಿಸಿ, ಮಂಡಿಗೆ ಒಯ್ದು ಹಾಕಿ... ಅಷ್ಟೆಲ್ಲಾ ಆಗಲಿಕ್ಕೆ ಮತ್ತೆರಡು-ಮೂರು ತಿಂಗಳು ಕಾಯಬೇಕು. ಅಲ್ಲಿಯವರೆಗೆ ಕಾಯುವ ಚೈತನ್ಯವಿದ್ದವರು ಕಾಯುತ್ತಾರೆ. ಆದರೆ ಅರ್ಧ-ಒಂದು ಎಕರೆ ತೋಟ ಇರುವವರಿಗೆ ಅಷ್ಟೊಂದು ಕಾಯಲಿಕ್ಕೆ ಆಗುವುದಿಲ್ಲ. ಏಕೆಂದರೆ ಈಗಾಗಲೇ 'ಕೈ' ಖಾಲಿಯಾಗಿರೊತ್ತೆ. ಮಂಡಿಯವರು 'ಇನ್ನು ಅಡಿಕೆ ತಂದು ಹಾಕುವವರೆಗೂ ದುಡ್ಡು ಕೊಡುವುದಿಲ್ಲ' ಅಂದಿರುತ್ತಾರೆ. ಆದ್ದರಿಂದ, ಅಡಿಕೆ ಬೆಳೆಯುತ್ತಿದ್ದಂತೆಯೇ ಕೊಯ್ಲು ಮಾಡಿ, ಕೆಂಪಡಿಕೆ ಮಾಡಿ, ಮಂಡಿಗೆ ಸಾಗಿಸಿ, ಸುಗ್ಗಿ ಮುಗಿಸಿಕೊಂಡುಬಿಡುತ್ತಾರೆ ಬಹಳಷ್ಟು ಬೆಳೆಗಾರರು.

ಸುಗ್ಗಿ ಸಾಮಾನ್ಯವಾಗಿ ದೀಪಾವಳಿಯ ಎಡ-ಬಲಕ್ಕೆ ಬರುತ್ತದೆ. ಅಂಗಳದಲ್ಲಿ ಬೆಳೆದಿದ್ದ ಕಳೆ-ಜಡ್ಡನ್ನೆಲ್ಲಾ ಕೆತ್ತಿಸಿ ಚೊಕ್ಕು ಮಾಡಿ 'ದೊಡ್ಡಬ್ಬಕ್ಕೂ ಆತು - ಸುಗ್ಗಿಗೂ ಆತು' ಅನ್ನುವುದರೊಂದಿಗೆ ಸುಗ್ಗಿಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗುತ್ತವೆ. ತೋಟದಲ್ಲಿ ಗೋಟಡಿಕೆಗಳು ಬೀಳುವುದು ಶುರುವಾಯಿತೆಂದರೆ ಅಪ್ಪ ಕೊನೆಕಾರನಿಗೆ ಹೇಳಿ ನಮ್ಮ ಮನೆಯ ಕೊಯ್ಲಿನ 'ಡೇಟ್ ಫಿಕ್ಸ್' ಮಾಡಿಕೊಂಡು ಬರುತ್ತಾನೆ. ಸರಿ, ಹೇಳಿದ ದಿನ ಕೊನೆಕಾರ ತನ್ನ ಊದ್ದನೆಯ ದೋಟಿ, ನೇಣಿನ ಹಗ್ಗ, ಕಡಿಕೆ ಮಣೆ.. ಎಲ್ಲಾ ಹಿಡಿದುಕೊಂಡು, ತನ್ನ ಸೈಕಲ್ಲನ್ನು ತಳ್ಳಿಕೊಂಡು, ತನ್ನ ಜೊತೆ ಮತ್ತೆ ನಾಲ್ಕಾರು ಜನ ಆಳುಗಳನ್ನು ಕರೆದುಕೊಂಡು ಬೆಳಗ್ಗೆ ೮.೩೦ಕ್ಕೆಲ್ಲ ಬಂದುಬಿಡುತ್ತಾನೆ. ಆಳುಗಳಲ್ಲಿ ಹೆಣ್ಣಾಳು-ಗಂಡಾಳು ಇಬ್ಬರೂ ಇರುತ್ತಾರೆ. ಕೆಲವೊಮ್ಮೆ ಕೊನೆಕಾರ ತನ್ನ ಮಕ್ಕಳನ್ನೂ ಕರೆತರುವುದುಂಟು. ಈ ಮಕ್ಕಳು ತಮ್ಮ ತಾಯಂದಿರ ಜೊತೆ ಕೊನೆಕಾರ ಉದುರಿಸಿದ ಅಡಿಕೆಗಳನ್ನು ಒಟ್ಟುಮಾಡುತ್ತಾರೆ. ದೊಡ್ಡವರು, ಗಂಡಸರು ಕೊನೆಯನ್ನು ಕಲ್ಲಿ / ಹೆಡಿಗೆಯಲ್ಲಿ ತುಂಬಿ ತೋಟದಿಂದ ಮನೆಯ ಅಂಗಳಕ್ಕೆ ಹೊತ್ತು ತಂದು ಹಾಕುತ್ತಾರೆ. ಇವರಲ್ಲೇ ಒಬ್ಬ ನೇಣು (ಮಿಣಿ) ಹಿಡಿಯುತ್ತಾನೆ.

ಕೊನೆಕಾರ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ, ಕೇವಲ ಲಂಗೋಟಿ, ಹಾಳೆಟೊಪ್ಪಿ ಮತ್ತು ಕೊರಳಿಗೊಂದು ಹಾಳೆಯ ಪಟ್ಟಿಯನ್ನು ನೇತುಬಿಟ್ಟುಕೊಂಡು ಮರ ಹತ್ತುತ್ತಾನೆ. ಒಮ್ಮೆ ಬೀಡಿ ಎಳೆದು ಮರ ಹತ್ತಿದನೆಂದರೆ ಸುತ್ತಮುತ್ತಲಿನ ಎಲ್ಲಾ ಮರಗಳ ಕೊನೆಗಳನ್ನೂ, ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುತ್ತಾ, ಕೊಯ್ದು ಮುಗಿಸಿಬಿಡುತ್ತಾನೆ.

ಅಪ್ಪ, ಹತ್ತೂ ವರೆ ಹೊತ್ತಿಗೆ, ಅಮ್ಮನ ಬಳಿ ಚಹ ಮಾಡಿಸಿಕೊಂಡು ಒಂದು ಗಿಂಡಿಯಲ್ಲಿ ತುಂಬಿಕೊಂಡು, ಒಂದು ದೊಡ್ಡ ಕ್ಯಾನಿನಲ್ಲಿ ನೀರು ತುಂಬಿಕೊಂಡು, ಸ್ವಲ್ಪ ಬೆಲ್ಲವನ್ನೂ ತಗೊಂಡು, ತೋಟಕ್ಕೆ ಧಾವಿಸುತ್ತಾನೆ. ಅಪ್ಪನ ಜೊತೆ, ಮೂರನೇ ಕ್ಲಾಸಿಗೆ ಹೋಗುವ ಪುಟ್ಟನೂ ಬರುತ್ತಾನೆ. ಈ ಪುಟ್ಟ 'ಇವತ್ತು ಕೊನೆಕೊಯ್ಲು' ಅಂತ ಹೇಳಿ ಮೇಷ್ಟ್ರಿಂದ ರಜೆ ಪಡೆದು ಬಂದಿದ್ದಾನೆ. ಅಪ್ಪ, 'ಕೊನೆ ಕೊಯ್ಯದು ಅವ್ವು, ಇಲ್ಲಿ ಅಡುಗೆ ಮಾಡದು ಅಮ್ಮ, ನಿಂಗೆಂತಾ ಕೆಲ್ಸ? ಸುಮ್ನೇ ಶಾಲಿಗೆ ಹೋಗದು ಬಿಟ್ಟು.. ಸರಿ, ಬಾ ತೋಟಕ್ಕೆ, ಒಂದು ಹೆಡಿಗೆ ಹೊರುಸ್ತಿ, ಹೊತ್ಕಂಡು ಬರ್ಲಕ್ಕಡ..' ಅನ್ನುತ್ತಲೇ ಮಗನನ್ನೂ ಕರೆದುಕೊಂಡು ತೋಟಕ್ಕೆ ಹೊರಟಿದ್ದಾನೆ. 'ಅಪ್ಪ ತಮಾಷೆಗೆ ಹೇಳ್ತಿದ್ದಾನೆ' ಅಂತ ಗೊತ್ತಿದ್ದರೂ ಪುಟ್ಟನಿಗೆ ಒಳಗೊಳಗೇ ಭಯ. ಅಂವ ಸುಮ್ಮನೆ ಅಪ್ಪನನ್ನು ಹಿಂಬಾಲಿಸಿದ್ದಾನೆ. ಸಾರ ದಾಟುವಾಗ, ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಮೀನು ನೋಡಲು ಹೋಗಿ, ಒಮ್ಮೆ ಓಲಾಡಿ, ಮೈಯೆಲ್ಲಾ ನಡುಗಿ, ಅಪ್ಪನ ಕೈ ಹಿಡಕೊಂಡಿದ್ದಾನೆ.

'ನಿಧಾನಕ್ಕೆ ಕಾಲ್ಬುಡ ನೋಡ್ಕ್ಯೋತ ಬಾ, ಹಾವು-ಹುಳ ಇರ್ತು... ಮೇಲೆ ನೋಡಡ, ಕಣ್ಣಿಗೆ ಕಸ ಬೀಳ್ತು' ಎಂದೆಲ್ಲಾ ಪುಟ್ಟನಿಗೆ ಅಪ್ಪ 'ಇನ್‍ಸ್ಟ್ರಕ್ಷನ್ಸ್' ಕೊಡುತ್ತಾ ಬರುತ್ತಿದ್ದಾನೆ. ಕೊನೆ ಕೊಯ್ಯುತ್ತಿರುವಲ್ಲಿಗೆ ಬರುತ್ತಿದ್ದಂತೆಯೇ ನೇಣು ಹಿಡಿಯುತ್ತಿದ್ದ ಮಾದೇವ 'ಓಹೋ.. ಸಣ್ ಹೆಗಡೇರು ಬಂದ್ಬುಟ್ಯಾರೆ.. ಏನು ಸಾಲಿಗೆ ಹೋಗ್ನಲ್ಲಾ?' ಎಂದಿದ್ದಾನೆ. ಪುಟ್ಟ ಮೇಲೆ ನೋಡಿದರೆ ಕೊನೆಕಾರ ಒಂದು ಕೋತಿಯಂತೆ ಕಾಣಿಸುತ್ತಾನೆ. ಅಂವ ಒಂದು ಮರದಿಂದ ಒಂದು ಮರಕ್ಕೆ ಹಾರಿದಾಕ್ಷಣ ಮರ ಸುಂಯ್ಯನೆ ತೂಗುತ್ತಾ ವಾಪಸು ಬರುವುದನ್ನು ಬೆರಗುಗಣ್ಣಿನಿಂದ ನೋಡುತ್ತಾನೆ. ಅಪ್ಪ ಈಗಾಗಲೆ ಎಷ್ಟು ಕೊಯ್ದಾಗಿದೆ, ಆಚೆ ತುಂಡಿಗೆ ಹೋಗಲಿಕ್ಕೆ ಇನ್ನೂ ಎಷ್ಟು ಹೊತ್ತು ಬೇಕು, ಇವತ್ತು ಆಚೆ ಬಣ್ಣ ಮುಗಿಯಬಹುದೇ, ಈ ವರ್ಷ ಕೊನೆಯಲ್ಲಿ 'ಹಿಡಿಪು' ಇದೆಯೇ, ಅಥವಾ ಪೀಚೇ? -ಅಂತೆಲ್ಲಾ ನೋಡಿಕೊಂಡು, ಲೆಕ್ಕ ಹಾಕಿಕೊಂಡು, ಪುಟ್ಟನೊಂದಿಗೆ ಮನೆಗೆ ಮರಳುತ್ತಾನೆ. ಅದಾಗಲೇ ಮನೆಯ ಅಂಗಳದಲ್ಲಿ ಕೊನೆ, ಉದುರಡಿಕೆಗಳನ್ನು ತಂದು ಸುರಿದು ಅಂಗಳದ ತುಂಬಾ ಸುಗ್ಗಿಯ ಕಳೆ ತುಂಬಿರುತ್ತದೆ.

ಅಮ್ಮ ಕೊನೆಕೊಯ್ಲಿನವರಿಗಾಗಿಯೇ ಇವತ್ತು ಚಿತ್ರಾನ್ನ ಮಾಡುತ್ತಾಳೆ. ರವೆ ಉಂಡೆ ಮಾಡುತ್ತಾಳೆ. ಅಪ್ಪ ನಾಲ್ಕು ಬಲಿಷ್ಟ ಕೊನೆಗಳನ್ನು ತಂದು ದೇವರ ಮುಂದಿಟ್ಟು, ತನಗಿನ್ನೂ ಸ್ನಾನವಾಗದೇ ಇದ್ದುದರಿಂದ 'ಆನು ಇವತ್ತು ಸಂಜೆ ಸ್ನಾನ ಮಾಡ್ತಿ; ನೀನೇ ಒಂಚೂರು ಪೂಜೆ ಮಾಡ್ಬುಡೇ' ಎಂದು ಅಮ್ಮನ ಬಳಿ ಹೇಳುತ್ತಾನೆ. ಅಮ್ಮ, ದೇವರಿಗೂ, ಅಡಿಕೆ ಕೊನೆಗಳಿಗೂ ಕುಂಕುಮ-ಗಿಂಕುಮ ಹಾಕಿ, ಊದುಬತ್ತಿ ಹಚ್ಚಿ ಪೂಜೆ ಮಾಡುತ್ತಾಳೆ. ತುಪ್ಪದ ದೀಪ ಹಚ್ಚಿಟ್ಟು, 'ನಮ್ಮನೆ ಅಡಿಕೆಗೆ ಈ ವರ್ಷ ಒಳ್ಳೇ ರೇಟು ಸಿಗ್ಲಿ ದೇವ್ರೇ' ಎಂದು ಪ್ರಾರ್ಥಿಸುತ್ತಾಳೆ. ಶುಭ್ರವಾಗಿ ಬೆಳಗುತ್ತದೆ ದೇವರ ಗೂಡಿನಲ್ಲಿ ದೀಪ.

ಮಧ್ಯಾಹ್ನ ಒಂದೂ ವರೆ ಹೊತ್ತಿಗೆ ಕೊನೆ ಹೊರುವ ಒಬ್ಬ ಆಳು, ಅಮ್ಮ 'ಇಲ್ಲೇ ಹಾಕ್ತೀನಿ ಊಟ ಮಾಡ್ರೋ' ಅಂದರೂ ಕೇಳದೇ, 'ತ್ವಾಟದಾಗೇ ಉಣ್ತೀನಿ ಅಮ್ಮಾವ್ರೇ' ಅಂತಂದು, ಚಿತ್ರಾನ್ನ-ರವೆ ಉಂಡೆ-ನೀರು ಇತ್ಯಾದಿಗಳನ್ನೆಲ್ಲಾ ತೋಟಕ್ಕೆ ಒಯ್ದುಬಿಡುತ್ತಾನೆ. ಅವರು ಅಲ್ಲಿ ತೋಟದ ತಂಪಿನಲ್ಲಿ ಊಟ ಮಾಡುತ್ತಿರಬೇಕಾದರೆ ಇಲ್ಲಿ ಅಪ್ಪ-ಅಮ್ಮ-ಪುಟ್ಟ ಮನೆಯಲ್ಲಿ ಉಂಡು ಮುಗಿಸುತ್ತಾರೆ.

ಸಂಜೆ ಐದೂ ವರೆ ಹೊತ್ತಿಗೆ ಅವತ್ತಿನ ಕೊಯ್ಲು ಮುಗಿಸಿ ಆಳುಗಳೆಲ್ಲಾ ತೋಟದಿಂದ ಮರಳುತ್ತಾರೆ. 'ಕೊನೆ, ಉದುರು ಏನನ್ನೂ ತೋಟದಲ್ಲಿ ಬಿಟ್ಟಿಲ್ಲ ತಾನೆ?' ಅಂತ ಅಪ್ಪ ಕೇಳುತ್ತಾನೆ. ಆಮೇಲೆ ಅವತ್ತು ಕೊಯ್ದ ಕೊನೆಗಳನ್ನು ಎಣಿಸಬೇಕು. ಏಕೆಂದರೆ ಕೊನೆಕಾರನಿಗೆ 'ಪೇಮೆಂಟ್' ಮಾಡುವುದು ಕೊನೆಯ ಲೆಕ್ಕದ ಮೇಲೆ. 'ಒಂದು ಕೊನೆಗೆ ಇಷ್ಟು' ಅಂತ. ಲೆಕ್ಕವೆಲ್ಲ ಮುಗಿದ ಮೇಲೆ, ಅಪ್ಪ 'ಲೆಕ್ಕದ ಪುಸ್ತಕ'ದಲ್ಲಿ ನಮೂದಿಸಿಯಾದ ಮೇಲೆ, ಆಳುಗಳು ನಾಳೆ ಬೆಳಗ್ಗೆ ಬರುವುದಾಗಿ ಹೇಳಿ ಹೊರಟುಹೋಗುತ್ತಾರೆ.

ಮುಂದಿನ ಕೆಲಸವೆಂದರೆ, ಉದುರಡಿಕೆಯಲ್ಲಿ ಗೋಟು-ಹಸಿರಡಿಕೆಗಳನ್ನು 'ಸೆಪರೇಟ್' ಮಾಡುವುದು. ಬೇಗಬೇಗ ಮಾಡಬೇಕು. ಏಕೆಂದರೆ ಇನ್ನು ಸ್ವಲ್ಪೇ ಹೊತ್ತಿಗೆ ಅಡಿಕೆ ಸುಲಿಯುವವರು ಬಂದುಬಿಡುತ್ತಾರೆ. ಈ ಕೆಲಸಕ್ಕೆ ಅಮ್ಮ, ಪುಟ್ಟ ಎಲ್ಲರೂ ಕೈಜೋಡಿಸುತ್ತಾರೆ -ಅಪ್ಪನ ಜೊತೆ. ಉದುರಡಿಕೆಯೇ ಸಾಕಷ್ಟಿರುವುದರಿಂದ ಇವತ್ತು ಕೊನೆ ಬಡಿಯುವುದೇನು ಬೇಡ. ನಾಳೆ ಆಳಿಗೆ ಬರಲಿಕ್ಕೆ ಹೇಳಿ ಬಡಿಸಿದರಾಯಿತು.

ಈಗ ಅಡಿಕೆ ಸುಲಿಯುವವರು ಬಂದಿದ್ದಾರೆ. ಜ್ಯೋತಿ ಬಂದ್ಲು, ಜಲಜ ಬಂದ್ಲು, ಸುಮಿತ್ರ ಬಂದ್ಲು, ಬಾಕರ ಬಂದ... ಎಲ್ಲರೂ ತಮ್ಮ ಮೆಟಗತ್ತಿಯನ್ನು (ಮೆಟ್ಟುಗತ್ತಿ) ಮಣೆಗೆ ಬಡಿದು ಸಿದ್ಧಪಡಿಸಿಕೊಂಡು ಕುಳಿತಿದ್ದಾರೆ. ಅಪ್ಪ ಅಂಗಳಕ್ಕೆ ಒಂದು ತಾತ್ಕಾಲಿಕ ವೈರೆಳೆದು ನೂರು ಕ್ಯಾಂಡಲಿನ ಬಲ್ಬು ಹಾಕಿ ಬೆಳಕು ಮಾಡಿಕೊಟ್ಟಿದ್ದಾನೆ. ಈಗ ಅಂಗಳದಲ್ಲಿ 'ಕ್ಚ್ ಕ್ಚ್ ಕಟ್ ಕಟ್' ಶಬ್ದ ಶುರುವಾಗಿದೆ. ರಾತ್ರಿ ಒಂಬತ್ತರವರೆಗೆ ಸುಲಿದು, ಗಿದ್ನ (ಅಥವಾ ಡಬ್ಬಿ) ಯಲ್ಲಿ ಅಳೆದು, ಲೆಕ್ಕದ ಪುಸ್ತಕದಲ್ಲಿ ಬರೆಸಿ, ಅವರೆಲ್ಲ ಮನೆಗೆ ಹೋಗುತ್ತಾರೆ. (ಕೆಲವೊಂದು ಊರುಗಳಲ್ಲಿ ರಾತ್ರಿ-ಬೆಳಗು ಸುಲಿಯುತ್ತಾರೆ) ನಂತರ, ಸುಲಿದ ಅಡಕೆಯ ಬುಟ್ಟಿಗಳನ್ನು ಅಪ್ಪ-ಅಮ್ಮ ಇಬ್ಬರೂ ಆಚೆ-ಈಚೆ ಹಿಡಿದುಕೊಂಡು ಮನೆಯೊಳಗೆ ತಂದು ಇಡುತ್ತಾರೆ. ಇವತ್ತು ಹೆಚ್ಚು ಅಡಿಕೆ ಆಗಿಲ್ಲವಾದ್ದರಿಂದ, ನಾಳೆ ಎಲ್ಲಾ ಸೇರಿ ಬೇಯಿಸಿದರಾಯಿತು ಅಂದುಕೊಂಡಿದ್ದಾನೆ ಅಪ್ಪ.

ಮರುದಿನ ಮತ್ತೆ ಕೊನೆಕೊಯ್ಲು, ಅಡಿಕೆ ಸುಲಿಯುವುದು ನಡೆಯುತ್ತದೆ. ಅಪ್ಪ ಅಂಗಳದಲ್ಲೇ ಒಂದು ಮೂಲೆಯಲ್ಲಿ ಅಡಿಕೆ ಬೇಯಿಸುವುದಕ್ಕೆ ದೊಡ್ಡ ಎರಡು ಜಂಬಿಟ್ಟಿಗೆ ಕಲ್ಲುಗಳಿಂದ ಒಲೆ ಹೂಡುತ್ತಾನೆ. ಅದರ ಮೇಲೆ ಹಂಡೆ ತಂದಿಡುತ್ತಾನೆ. ರಾತ್ರಿ ಅಡಿಕೆ ಸುಲಿಯುವವರು ಹೋದಮೇಲೆ ಅಪ್ಪ ಒಲೆಗೆ ಬೆಂಕಿ ಕೊಟ್ಟು, ಹಂಡೆಯಲ್ಲಿ ನೀರು ಸುರಿದು, ಕಳೆದ ವರ್ಷದ ತೊಗರು (ಅಡಿಕೆ ಬೇಯಿಸಿಯಾದ ಮೇಲೆ ಉಳಿಯುವ ಕೆಂಪಗಿನ ನೀರು; 'ಚೊಗರು' ಅಂತಲೂ ಕೆಲವಡೆ ಕರೆಯುತ್ತಾರೆ) ಉಳಿದಿದ್ದರೆ ಅದನ್ನು ಸ್ವಲ್ಪ 'ಮಿಕ್ಸ್' ಮಾಡಿ, ಬುಟ್ಟಿಗಳಲ್ಲಿನ ಸುಲಿದ ಅಡಿಕೆಗಳನ್ನು ತಂದು ಸುರಿಯುತ್ತಾನೆ. ಚಳಿ ಕಾಯಿಸಲಿಕ್ಕೆ ಈ ಅಡಿಕೆ ಬೇಯಿಸುವ ಒಲೆ ಹೇಳಿ ಮಾಡಿಸಿದಂತಿರುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದ ಗಣಪತಣ್ಣ, ಪಕ್ಕದ ಕಣವನ್ನು ಕಾಯಲು ಬರುವ ಮಾಬ್ಲಜ್ಜ ಎಲ್ಲರೂ ಈ ಒಲೆಯೆಡೆಗೆ ಆಕರ್ಷಿತರಾಗಿ ಒಬ್ಬೊಬ್ಬರೇ ಬರುತ್ತಾರೆ... 'ಹೂಂ, ಈ ವರ್ಷ ಏನು ಭಾರೀ ತೇಜಿ ಕಾಣ್ತಲೋ.. ಶ್ರೀಪಾದನ ಮನೆ ಅಡಿಕೆ ಹನ್ನೆರಡು ಸಾವ್ರಕ್ಕೆ ಹೋತಡ..' ಎನ್ನುತ್ತಾ ಮಾಬ್ಲಜ್ಜ ಕವಳ ಉಗಿದು, ಅಂಗಳದ ಮೂಲೆಗೆ ಹೋಗಿ ವಂದಕ್ಕೆ ಕೂರುತ್ತಾನೆ. 'ಓಹ..? ಆದ್ರೂ ನಮ್ಮನೆ ಅಡಿಕೆ ರೆಡಿಯಾಗ ಹೊತ್ತಿಗೆ ಎಂತಾಗ್ತೇನ' ಎನ್ನುತ್ತಾನೆ ಅಪ್ಪ. 'ಹೂಂ, ಜಾಸ್ತಿ ತೆರಿಬೆಟ್ಟೆ ಬರ್ಲೆ ಅಲ್ದಾ?' ಅನ್ನುತ್ತಾನೆ ನಾರಣಣ್ಣ ಬುಟ್ಟಿಯಲ್ಲಿದ್ದ ಅಡಿಕೆಯಲ್ಲಿ ಒಮ್ಮೆ ಕೈಯಾಡಿಸಿ. 'ಏನಂದ್ರೂ ಇನ್ನೂ ನಾಕು ಒಬ್ಬೆ ಆಗ್ತೇನ' ಅನ್ನುತ್ತಾನೆ ಗಣಪತಣ್ಣ. ಅಷ್ಟೊತ್ತಿಗೆ ಲಕ್ಷ್ಮೀ ಬಸ್ಸು ನಿಂತುಹೋದ ಸದ್ದು ಕೇಳಿಸುತ್ತದೆ. 'ಬಸ್ಸಿಗೆ ಯಾರೋ ಬಂದ ಕಾಣ್ತು.' 'ಹೂಂ, ಯಾರು ಬಂದ್ರೂ ಇನ್ನು ಎರಡು ನಿಮಿಷದಾಗೆ ಗೊತ್ತಾಗ್ತಲ..' 'ಯಾರೋ ಪ್ಯಾಂಟು-ಶರಟು ಹಾಕ್ಯಂಡವರ ಥರ ಕಾಣ್ತಪ.. ಸ್ಟ್ರೀಟ್‍ಲೈಟ್ ಬೆಳಕಗೆ' 'ಓ, ಹಂಗರೆ ಪಟೇಲರ ಮನೆ ಗಣೇಶನೇ ಸಯ್ಯಿ ತಗ..!' ಅವರ ಹರಟೆ ಮುಂದುವರಿಯುತ್ತದೆ. ಅಮ್ಮ ಎಲ್ಲರಿಗೂ ಕಷಾಯ ಮಾಡಿಕೊಟ್ಟು, ತಾನು ಮಲಗಲು ಕೋಣೆಗೆ ಹೋಗುತ್ತಾಳೆ. ಪುಟ್ಟ ಅದಾಗಲೇ ನಿದ್ದೆ ಹೋಗಿರುತ್ತಾನೆ.

ಕೊನೆಕೊಯ್ಲು ಮೂರ್ನಾಲ್ಕು ದಿನಗಳ ವರೆಗೆ ಮುಂದುವರೆಯುತ್ತದೆ: ತೋಟದ ವಿಸ್ತೀರ್ಣವನ್ನು ಅವಲಂಭಿಸಿ. ಬೇಯಿಸಿದ ಅಡಿಕೆಯನ್ನು ಚಾಪೆ (ಅಥವಾ ತಟ್ಟಿ)ಯ ಮೇಲೆ ಒಣಗಿಸಲಾಗುತ್ತದೆ. ಒಳ್ಳೆಯ ಬಿಸಿಲಿದ್ದರೆ ಐದಾರು ದಿನಗಳಲ್ಲಿ ಅಡಿಕೆ ಒಣಗುತ್ತದೆ. ಈ ಮಧ್ಯೆ ತೆರಿಬೆಟ್ಟೆ-ಗೋಟಡಿಕೆಗಳನ್ನು ಹೆರೆಯುವುದು, ಇತ್ಯಾದಿ ಕೆಲಸಗಳು ನಡೆದಿರುತ್ತವೆ. ಒಣಗಿದ ಅಡಿಕೆಯನ್ನು ದೊಡ್ಡ ಗೋಣಿಚೀಲಗಳಲ್ಲಿ ತುಂಬಿ ಅಪ್ಪ ಬಾಯಿ ಹೊಲೆಯುತ್ತಾನೆ. ಸುಬ್ಬಣ್ಣನ ಮನೆ ವ್ಯಾನು ಪೇಟೆಗೆ ಹೋಗುವಾಗ ಅದರಲ್ಲಿ ಹೇರಿ ಮಂಡಿಗೆ ಸಾಗಿಸಲಾಗುತ್ತದೆ. ವ್ಯಾಪಾರಿಗಳು ಒಳ್ಳೆಯ ರೇಟು ನಿಗಧಿಪಡಿಸಿದ ದಿನ ಅಪ್ಪ ಅದನ್ನು ಕೊಡುತ್ತಾನೆ.

ಎಷ್ಟೇ ಮುಂಚೆ ಕೊಯ್ಲು ಮಾಡಿಸಿ ಕೆಂಪಡಿಕೆ ಮಾಡಿದ್ದರೂ ಸಹ ಒಂದಷ್ಟು ಅಡಿಕೆ ಹಣ್ಣಾಗಿರುತ್ತದಾದ್ದರಿಂದ ಅವು ಅಂಗಳದಲ್ಲಿ ಒಣಗುತ್ತಿರುತ್ತವೆ. ಸುಮಾರು ನಲವತ್ತು ದಿನಗಳಲ್ಲಿ ಅದೂ ಒಣಗುತ್ತದೆ. ಆಮೇಲೆ ಅದನ್ನು ಸುಲಿಸಿ ಮಂಡಿಗೆ ಕಳಿಸಲಾಗುತ್ತದೆ.

ಹೀಗೆ ಅಡಿಕೆ ಬೆಳೆಗಾರ ಹವ್ಯಕರ ಮನೆಗಳಲ್ಲಿ ಸುಗ್ಗಿಯೆಂದರೆ ಹಬ್ಬವೇ. ಆ ಒಂದಷ್ಟು ದಿನ ಗುದ್ದಾಡಿಕೊಂಡು ಬಿಟ್ಟರೆ, ಒಳ್ಳೆಯ ಬೆಲೆಗೆ ಅಡಿಕೆ ಮಾರಾಟವಾಗಿಬಿಟ್ಟರೆ, ಉಳಿದಂತೆ ಇಡೀ ವರ್ಷ ಆರಾಮಾಗಿರಬಹುದು. ತೋಟಕ್ಕೆ ದಿನಕ್ಕೊಮ್ಮೆ ಹೋಗಿ-ಬಂದು ಮಾಡಿಕೊಂಡು ಇದ್ದರೆ ಆಯಿತು. ಮಳೆಗಾಲದಲ್ಲಿ ಒಮ್ಮೆ ಗೊಬ್ಬರ ಹಾಕಿಸಬೇಕು. ಮಳೆ ಮುಗಿದಮೇಲೆ ಕಳೆ ತೆಗೆಸಬೇಕು. ಅಷ್ಟೇ! ಉಳಿದಂತೆ ಅಡಿಕೆ ಬೆಳೆಗಾರನ ಜೀವನವೆಂದರೆ ಸುಖಜೀವನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಸಿಕ್ಕಾಪಟ್ಟೆ ಏರುಪೇರು ಆಗುತ್ತಿರುವುದರಿಂದ, ಮತ್ತು ಮಳೆ ಸರಿಯಾಗಿ ಆಗದೆ ಸಿಂಗಾರ ಒಣಗುವುದರಿಂದ, ಮರಗಳೇ ಸಾಯುತ್ತಿರುವುದರಿಂದ, ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು. ಮಳೆ ಸರಿಯಾಗಿ ಆಗಿ, ಅಡಿಕೆಗೆ ಒಳ್ಳೆಯ ರೇಟ್ ಬಂದು, ಬರೆಯದಿರುವಂತೆ ಆದರಂತೂ ಒಳ್ಳೆಯದೇ!