Friday, October 27, 2023

ಸಹಿ

ಎಂದೋ ಗೀಚಿದ್ದು ಪೆನ್ನಿನ ಮೂತಿತುದಿಗೆ ಬೆರಳಿರಿಸಿ
ಅದೇ ಜೀವನಪರ್ಯಂತ ಬದಲಿಸಲಾಗದ
ಸಂಗಾತಿಯಾಗುವುದೆಂಬ ಅರಿವೇ ಇರಲಿಲ್ಲ?

ಒಪ್ಪಿದ್ದಕ್ಕೆ, ತಪ್ಪಿದ್ದಕ್ಕೆ, ಮತ್ಯಾರಿಗೋ ಸಾಕ್ಷಿಯಾದುದಕ್ಕೆ
ಪಡೆದುದಕ್ಕೆ, ಕೊಟ್ಟಿದ್ದಕ್ಕೆ, ಜೀವವನ್ನೇ ಗಿರವಿಯಿಟ್ಟದ್ದಕ್ಕೆ
ಯಾರದೋ ಒತ್ತಾಯಕ್ಕೆ ಇನ್ಯಾವುದೋ ಅನಿವಾರ್ಯಕ್ಕೆ
ಬರಿಮಾತು ಸಾಲದು ಎಂದವರಿಗೆ ಭರವಸೆಯ ಕೊಡಲಿಕ್ಕೆ

ಹಾಕಿದ್ದೇವೆ ಸಹಿ
ನೀಲಿ ಕಪ್ಪು ಹಸಿರು ಕೆಲವೊಮ್ಮೆ ಕೆಂಪು ಶಾಯಿಯಲ್ಲೂ

ನಿಂತದ್ದಿದೆ ಗಂಟೆಗಟ್ಟಲೆ ಒಂದು ಸಹಿಗಾಗಿ ಕಾದು-
ಕಡಿಮೆ ಅಂಕದ ಪಟ್ಟಿ ಹಿಡಿದು ಥರಗುಡುತ್ತ, ಅಪ್ಪನ ಮುಂದೆ
ಝೆರಾಕ್ಸು ಮಾಡಿಸಿದ ರೆಕಾರ್ಡು ಹಿಡಿದು, ಅಧಿಕಾರಿಯ ಮುಂದೆ
ಮಾಸಾಂತ್ಯದ ಖರ್ಚಿಗೆ ಕೈಯೊಡ್ಡಿ, ಧಣಿಯ ಮುಂದೆ
ಒಲವಿನ ಪತ್ರ ಹಿಡಿದು, ಪ್ರಿಯತಮೆಯ ಮುಂದೆ

ಅಲೆದಾಡಿದ್ದೇವೆ ಎಷ್ಟೋ ಮೈಲಿ ಮಾಡದ ತಪ್ಪಿಗೆ
ಹತ್ತಿಳಿದಿದ್ದೇವೆ ಅದೆಷ್ಟೋ ಮೆಟ್ಟಿಲು ಯಾರದೋ ಮುಲಾಜಿಗೆ
ಕೋರ್ಟು ಕಛೇರಿ ಪೋಲೀಸು ದಸ್ತಗಿರಿ
ಬೆರಗಾಗಿದ್ದೇವೆ ಕಂಡು, ಒಂದು ಸಹಿಗಿರುವ ಶಕ್ತಿ

ದೇಶದೇಶಗಳು ನಿಂತಿವೆ ಒಂದು ಸಹಿಯ ಒಪ್ಪಂದದ ಮೇಲೆ
ಉರುಳದೆ ಉಳಿದಿವೆ ತಲೆಗಳು ಒಂದು ಸಹಿಯ ಕರುಣೆಯ ಮೇಲೆ
ಮನೆ ಮಠ ಆಸ್ತಿ ಪಾಸ್ತಿ ನೀರು ದಾರಿ ಗಡಿ ಯುದ್ಧ ಸಂಬಂಧಗಳನು
ಕಾದಿಟ್ಟಿದೆ ಒಂದಿಂಚುದ್ದದೀ ಗೀಚು, ಕಲಕದಂತೆ ಸಾಮರಸ್ಯದ ತಿಳಿ

ಒಂದು ಸಹಿಯ ಸತ್ಯಾಸತ್ಯತೆಯ ಪರಿಶೀಲಿಸಲು
ತಜ್ಞರು ಕಿರಿಹಿಡಿದು ನೋಡುತ್ತಿದ್ದಾರೆ ಭೂತಕನ್ನಡಿಯಲ್ಲಿ
ತಾಳೆಯಾಗದ ಸಹಿಗಳು ಬಿಚ್ಚಿಡುತ್ತಿವೆ ನಕಲಿಗಳ ಅಸಲಿಯತ್ತು

ಇಷ್ಟದ ತಾರೆಯಿಂದ ನಮ್ಮಿಷ್ಟದ ವಸ್ತುವಿನ ಮೇಲೆ ಪಡೆದ ಸಹಿ
ಬೋಳುಬೆಟ್ಟದ ಮೇಲಿನ ಹೆಬ್ಬಂಡೆಯಲಿ ಅನಾಮಿಕ ಸಾಹಸಿಯ ಸಹಿ
ಉದುರಿದ ಅವಳ ಒದ್ದೆಕೂದಲು ಬಿಳಿನೆಲದ ಮೇಲೆ ಸೃಷ್ಟಿಸಿದ ಸಹಿ
ರಸಋಷಿಗೆ ಹಾರುಹಕ್ಕಿಗುಂಪಲ್ಲಿ ಕಂಡ ದೇವರ ಸಹಿ
ಪ್ರತಿಯೋರ್ವರ ಚಿತ್ತಭಿತ್ತಿಯ ಮೇಲೆ ಬಂದುಹೋದವರೆಲ್ಲರ ಸಹಿ

ವರುಷಗಳುರುಳಿವೆ...
ಹಳೆಯ ದಫ್ತರು ತೆಗೆದು ಸೂಕ್ಷ್ಮವಾಗಿ ನೋಡಿದರೆ
ಬದಲಾಗಿದೆ ನನ್ನದೇ ಸಹಿ.
ಹೇಳು: ಇದರಲ್ಲಿ ಯಾವುದು ಅಸಲಿ, ಯಾವುದು ನಕಲಿ?

Saturday, September 02, 2023

ಮೂರು ಡಬ್ಬಿಗಳು ಮತ್ತು...

ಅಜ್ಜ-ಅಜ್ಜಿಯ ಕಾಲದಿಂದಲೂ ನಮ್ಮ ಮನೆಯಲ್ಲಿ ಮೂರು ಡಬ್ಬಿಗಳು ಸದಾ ಇದ್ದವು: ಔಷಧಿ ಡಬ್ಬಿ, ರಿಪೇರಿ ಡಬ್ಬಿ ಮತ್ತು ಸೂಜಿ ಡಬ್ಬಿ. 


ಆಸ್ಪತ್ರೆ-ಮೆಡಿಕಲ್ ಶಾಪುಗಳು ದೂರವಿರುವ ಹಳ್ಳಿಯ ಮನೆಯಾದ್ದರಿಂದ, ಯಾರಿಗಾದರೂ ಹುಷಾರು ತಪ್ಪಿದರೆ ಬೇಕಾಗುವ ಪ್ರಥಮ ಚಿಕಿತ್ಸಾ ಔಷಧಿಗಳು ನಮ್ಮ ಮನೆಯ ಫಸ್ಟ್ ಏಡ್ ಕಿಟ್‌ನಲ್ಲಿ ಯಾವತ್ತೂ ಇರುತ್ತಿದ್ದವು. ನೆಗಡಿ, ಜ್ವರ, ಕೆಮ್ಮು, ಮೈಕೈ ನೋವು, ವಾಂತಿ-ಭೇದಿಗಳಂತಹ ಯಾವುದೇ ಸಮಸ್ಯೆಯಾದರೂ ವೈದ್ಯರ ಬಳಿ ಹೋಗುವ ಮೊದಲು ನಮ್ಮ ಬಳಿಯಿದ್ದ ಮಾತ್ರೆ-ಔಷಧಿಗಳನ್ನು ಪ್ರಯೋಗಿಸಿ ಒಂದೆರಡು ದಿನ ನೋಡಿ, ಅದರಿಂದ ವಾಸಿಯಾಗಲಿಲ್ಲವೆಂದರೆ ಆಸ್ಪತ್ರೆಗೆ ಓಡುವುದು. ಹಾಗೆಯೇ ಅಕಸ್ಮಾತ್ ಯಾರಿಗಾದರೂ ಗಾಯವಾದರೆ ಹಚ್ಚಲು ಆಯಿಂಟ್‌ಮೆಂಟುಗಳೂ, ಬ್ಯಾಂಡೇಜುಗಳೂ ಆ ಡಬ್ಬಿಯಲ್ಲಿರುತ್ತಿದ್ದವು. ಇಂಗ್ಲೀಷು ಓದಲು ಬಾರದ ನನ್ನ ಅಜ್ಜಿ, ಅಪ್ಪನನ್ನೋ ನನ್ನನ್ನೋ ಕೇಳಿ ತಿಳಿದುಕೊಂಡು, ಆ ಮಾತ್ರೆಗಳ ಸ್ಟ್ರಿಪ್ಪಿನ ಮೇಲೆ ‘ಜ್ವರದ ಮಾತ್ರೆ’, ‘ಮೈಕೈ ನೋವಿನ ಮಾತ್ರೆ’ ಎಂದೆಲ್ಲ ಕನ್ನಡದಲ್ಲಿ ಲೇಬಲ್ಲು ಬರೆದು ಇಟ್ಟಿರುತ್ತಿದ್ದಳು. ಸದಾ ಬರೆಯುವ ಹುಮ್ಮಸ್ಸಿನ ನಾನೇನಾದರೂ ಬರೆಯಲು ಮುಂದಾದರೆ ಅಜ್ಜಿ ನನ್ನನ್ನು ಸುಮ್ಮನೆ ಕುಳ್ಳಿರಿಸಿ, “ನಿಂಗೆ ಗೊತ್ತಾಗ್ತಲ್ಲೆ. ಬರೀ ‘ಭೇದಿ ಮಾತ್ರೆ’ ಅಂತ ಬರೆಯಲಾಗ; ‘ಭೇದಿ ನಿಲ್ಲುವ ಮಾತ್ರೆ’ / ‘ಭೇದಿ ಆಗುವ ಮಾತ್ರೆ’ ಅಂತ ಸರಿಯಾಗಿ ಬರೆಯವು. ಯಾವ್ಯಾವ್ದಕ್ಕೆ ಎಂತೆಂತೋ ಮಾತ್ರೆ ತಗಂಡು ಕೊನಿಗೆ ಡಾಕ್ಟ್ರ ಹತ್ರ ಓಡದು ಆಗ್ತು!” ಅಂತ ಬೈಯುತ್ತಿದ್ದಳು.  ನನ್ನ ಅತ್ತೆಯನ್ನು ಹೊಳೆಯಾಚಿನ ಊರಿಗೆ ಮದುವೆ ಮಾಡಿ ಕಳುಹಿಸಿ ಕೊಡುವಾಗ, “ನಿಂಗಕೆ ಹುಷಾರ್-ಗಿಷಾರ್ ಇಲ್ಲೆ ಅಂದ್ರೆ ಕಷ್ಟ.  ಲಾಂಚೆಲ್ಲ ಹತ್ಗ್ಯಂಡು ಅಷ್ಟ್ ದೂರದಿಂದ ಪ್ಯಾಟಿಗೆ ಬರವು. ಎಲ್ಲಾ ಥರದ್ ಔಷಧೀನೂ ಕಟ್ಟಿ ಕೊಡ್ತಿ. ತಗಂಡ್ ಹೋಕ್ಯ” ಅಂತ ಅಜ್ಜಿ, ಅತಿಯಾದ ಮುತುವರ್ಜಿಯಿಂದ, ಪ್ರಥಮ ಚಿಕಿತ್ಸೆಗೆ ಬೇಕಾದ ಮಾತ್ರೆಗಳನ್ನು ತನ್ನ ಲೇಬಲ್ಲುಗಳ ಸಮೇತ ಬಳುವಳಿ ಸಾಮಗ್ರಿಗಳ ಜತೆ ಕಳುಹಿಸಿಕೊಟ್ಟಿದ್ದಳು. 


ಎರಡನೇ ಡಬ್ಬಿ ಸ್ಪಾನರು, ಟೆಸ್ಟರು, ಸ್ಕ್ರೂಡ್ರೈವರು, ಇಕ್ಕಳ, ರಿಂಚು ಮೊದಲಾದ ಉಪಕರಣಗಳಿರುತ್ತಿದ್ದ ಟೂಲ್ಸ್ ಕಿಟ್. ಇದು ಹೆಚ್ಚಾಗಿ ಬಳಸಲ್ಪಡುತ್ತಿದ್ದುದು ಅಪ್ಪನಿಂದ.  ಊರಲ್ಲಿ ಯಾರ ಮನೆಯಲ್ಲಿ ಏನು ಹಾಳಾಗಲಿ, ಅಪ್ಪನಿಗೆ ಬುಲಾವ್ ಬರುವುದು.  ಮಿಕ್ಸಿ ತಿರುಗುತ್ತಿಲ್ಲ, ಲೈಟ್ ಆನ್ ಆಗ್ತಿಲ್ಲ, ಮಜ್ಜಿಗೆ ಕಡೆಯುವ ಮಷಿನ್ ಕೈ ಕೊಟ್ಟಿದೆ, ಬೈಕು ಎಷ್ಟು ಕಿಕ್ ಹೊಡೆದರೂ ಸ್ಟಾರ್ಟ್ ಆಗ್ತಿಲ್ಲ –ಮುಂತಾದ ಯಾವುದೇ ಸಮಸ್ಯೆಯಾದರೂ ಅಪ್ಪ ಸ್ಕ್ರೂಡ್ರೈವರೋ – ಸ್ಪಾನರೋ ಹಿಡಿದು ಅಲ್ಲಿಗೆ ಓಡುತ್ತಿದ್ದ. ಊರಿನ ಟ್ರಾನ್ಸ್‌ಫಾರ್ಮರಿನಲ್ಲಿ ಫ್ಯೂಸೋ ಡೀವಿಯಲ್ಲೋ ಹೋದರೂ ಅಪ್ಪ ಮತ್ತೆರಡು ಗಂಡಸರೊಂದಿಗೆ ಹೋಗಿ ಸರಿ ಮಾಡಿ ಬರುವನು. “ಹೊರಬೈಲಿಗೆ ಫೋನ್ ಮಾಡಿದಿದ್ದಿ, ಅಲ್ಲಿ ಕರೆಂಟ್ ಇದ್ದಡ, ನಮ್ಮೂರಗೇ ಫ್ಯೂಸ್ ಹೋಯ್ದು ಕಾಣ್ತು” ಅಂತ ಶ್ರೀಮತಕ್ಕ ಅಲವತ್ತುಕೊಂಡರೆ, “ಪುಟ್ಟಣ್ಣ - ಶ್ರೀಧರಮೂರ್ತಿ ಆಗ್ಲೇ ಇಕ್ಳ ಹಿಡ್ಕಂಡ್ ಹೋದಂಗ್ ಕಾಣ್ಚು. ಇನ್ನೇನ್ ಬತ್ತು ತಗ” ಅಂತ ಸುಜಾತಕ್ಕ ಸಮಾಧಾನ ಮಾಡುವಳು.  ಈ ಅಪ್ಪನ ರಿಪೇರಿ ಕೆಲಸಗಳನ್ನು ನೋಡೀನೋಡೀ, ಆ ತಲುಬು ನನಗೂ ತಗುಲಿಕೊಂಡಿತು. ಮನೆಯ ಯಾವ ವಸ್ತು ಹಾಳಾದರೂ ಅದನ್ನೊಮ್ಮೆ ಬಿಚ್ಚಿ ನೋಡದೇ ರಿಪೇರಿಗೆ ಒಯ್ದಿದ್ದು ಇಲ್ಲವೇ ಇಲ್ಲ. ಹಳೆಯ ಮನೆಯ ಇಡೀ ವೈರಿಂಗನ್ನು ನಾನೇ ಮಾಡಿದ್ದೆ. ಹೊಸ ಮನೆ ಕಟ್ಟಿಸಿದಮೇಲೆ ಅಲ್ಲಿ ಯಾವುದೇ ರಿಪೇರಿ ಕೆಲಸವಿಲ್ಲದೇ ಕೈ ಕಟ್ಟಿ ಹಾಕಿದಂತಾಗಿತ್ತು. 


ಮೂರನೇ ಡಬ್ಬಿಯಲ್ಲಿ ದಬ್ಬಣ, ಸೂಜಿ, ಗುಂಡುಪಿನ್, ಕಪ್ಪು ಮತ್ತು ಬಿಳಿಯ ದಾರಗಳು, ವಿವಿಧ ಬಣ್ಣದ ಗುಂಡಿಗಳು, ಒಂದೆರಡು ಹುಕ್ಕುಗಳು ಇದ್ದವು. ಈ ಡಬ್ಬಿ ಹೆಚ್ಚಾಗಿ ಬಳಸಲ್ಪಡುತ್ತಿದ್ದುದು ಅಮ್ಮನಿಂದ. ಶಾಲೆಗೆ ಹೋಗುತ್ತಿದ್ದ ನನ್ನ ಅಂಗಿಯ ಗುಂಡಿಗಳು ಕಳಚಿ ಬಂದರೆ ಅದನ್ನು ಮತ್ತೆ ಜೋಡಿಸಿ ಹೊಲಿಯುವುದು, ಪ್ಯಾಂಟಿನ ಜೇಬು ತೂತಾದರೆ ಹೊಲಿದು ಸರಿ ಮಾಡುವುದು, ರವಿಕೆ ಬಿಗಿಯಾದರೆ ಒಂದು ಹೊಲಿಗೆ ಬಿಚ್ಚಿ ಸರಿಮಾಡಿಕೊಳ್ಳುವುದು, ಲುಂಗಿಯ ಅಂಚು ಹೊಲಿಯುವುದು –ಹೀಗೆ ಹಲವು ಕಾರ್ಯಗಳಿಗೆ ಈ ಡಬ್ಬಿಯ ಉಪಕರಣಗಳು ಉಪಯೋಗಿಸಲ್ಪಡುತ್ತಿದ್ದವು. ಹೊಲಿಗೆ ಯಂತ್ರವೇನೂ ನಮ್ಮ ಮನೆಯಲ್ಲಿಲ್ಲದ್ದರಿಂದ ಕೈಯಲ್ಲಿ ಎಷ್ಟು ರಿಪೇರಿ ಮಾಡಲು ಸಾಧ್ಯವೋ ಅಷ್ಟು ರಿಪೇರಿ ನಮ್ಮ ಬಟ್ಟೆಗಳಿಗೆ ಮನೆಯಲ್ಲೇ ಸಿಗುತ್ತಿತ್ತು. ಅಮ್ಮ ಮತ್ತು ಅಜ್ಜಿ ಸೇರಿ ಹಳೆಯ ಸೀರೆಗಳನ್ನೆಲ್ಲ ಸೇರಿಸಿ, ದಬ್ಬಣ ಮತ್ತು ದಪ್ಪ ದಾರ ಬಳಸಿ ಹೊಲಿದು ಸುಮಾರು ರಜಾಯಿಗಳನ್ನೂ ಮಾಡಿದ್ದರು.  ತನ್ನ ಮದುವೆ ನಿಕ್ಕಿಯಾದಾಗ ಅತ್ತೆಯು, ನಮ್ಮ ಹಳೆಯ ಮನೆಯ ಕೋಳನ್ನು ಕೆಳಗಿನಿಂದ ನೋಡಿದರೆ ನೆಂಟರಿಗೆ ಭಯವಾಗುವಂತಿದೆಯೆಂದೂ ಅದಕ್ಕೇನಾದರೂ ವ್ಯವಸ್ಥೆ ಮಾಡಬೇಕು ಅಂತಲೂ ಹೇಳಿದಾಗ, ನಾವು ಬಿಳಿಯ ಬಣ್ಣದ ಸಿಮೆಂಟು-ಗೊಬ್ಬರದ ಖಾಲಿಚೀಲಗಳನ್ನೆಲ್ಲ ಎಲ್ಲೆಲ್ಲಿಂದಲೋ ಸಂಗ್ರಹಿಸಿ, ಅವನ್ನೆಲ್ಲಾ ಬಿಚ್ಚಿ ಒಂದರ ಪಕ್ಕ ಒಂದು ಜೋಡಿಸಿ, ಇಡೀ ಮನೆಯ ಅಂಕಣಕ್ಕಾಗುವಷ್ಟು ದೊಡ್ಡಕೆ ಹೊಲಿದು, ಆ ಹಳೆಯ ಮನೆಗೆ ‘ಫಾಲ್ಸ್ ಸೀಲಿಂಗ್’ ಥರ ಹೊಡೆದು ಕೂರಿಸಿದ್ದೆವು. ನೆಂಟರೆಲ್ಲ ನಮ್ಮ ಕಲೆಯನ್ನೂ-ತಲೆಯನ್ನೂ ಮೆಚ್ಚಿದ್ದರು. ಹೊಲಿದ ದಬ್ಬಣ ಡಬ್ಬಿಯಲ್ಲಿ ಹೆಮ್ಮೆಯಿಂದ ಟಣ್ ಟಣ್ ಎಂದಿತ್ತು. 


ಈಗ ಆರೇಳು ವರ್ಷದ ಹಿಂದೆ, ‘ಒಂದು ಒಳ್ಳೇ ಹೊಲಿಗೆ ಮಷಿನ್ ತಗೋಳೋಣಾರೀ’ ಅಂತ ಹೆಂಡತಿ ಕೇಳಿದಾಗ, ನಾನು ಅರೆಮನಸಿನಿಂದಲೇ ಒಪ್ಪಿದ್ದೆ. ಏಕೆಂದರೆ ಅದಕ್ಕೂ ಮುಂಚೆ ಆನ್‌ಲೈನಿನಲ್ಲಿ ಒಂದು ಪೋರ್ಟೆಬಲ್-ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಕೊಂಡು ಅದು ಒಂದೆರಡು ತಿಂಗಳೂ ಬಾಳಿಕೆ ಬರದೇ ಹಾಳಾಗಿತ್ತು. ‘ಈ ಚೈನೀಸ್ ಮಾಲು ಇನ್ಮೇಲಿಂದ ಒಂದೂ ತಗೋಬಾರ್ದು ನೋಡು, ಸುಮ್ನೇ ದುಡ್ ದಂಡ’ ಅಂತ ನಾನು, ಚೀನಾ ಮೂಲದ ಟೀವಿಯ ಮುಂದೆ ಕುಳಿತು, ಚೀನಾ ಮೂಲದ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಹೇಳಿದ್ದೆ. ಅದಕ್ಕವಳು, ‘ಅದಕ್ಕೇ ಈ ಸಲ ಮೇಡ್ ಇನ್ ಇಂಡಿಯಾ ಮೇಕ್ ಇನ್ ಇಂಡಿಯಾ ಇರೋ ಗಟ್ಟಿಮುಟ್ಟಾದ ಕಬ್ಬಿಣದ ಟ್ರಡೀಶನಲ್ ಹೊಲಿಗೆ ಮಷಿನ್ನನ್ನ ಲೋಕಲ್ ಅಂಗಡಿಗೇ ಹೋಗಿ ಕೊಳ್ಳೋಣ’ ಅಂದಳು. ಹೆಂಡತಿಯ ಆಜ್ಞೆಯನ್ನು ಮೀರಲುಂಟೇ? ಕಪ್ಪಗೆ ಮಿರುಗುವ ಹೊಲಿಗೆ ಯಂತ್ರ ನಮ್ಮ ಮನೆಗೆ ಬಂದು ಕೋಣೆಯ ಮೂಲೆಯಲ್ಲಿ ತನ್ನ ಹಕ್ಕು ಸ್ಥಾಪಿಸಿತು. 


ಆದರೆ ಆ ಯಂತ್ರ ಬಂದು ಒಂದು ವರ್ಷವಾದರೂ ಹೆಂಡತಿಯೇನು ಅದನ್ನು ಹೆಚ್ಚಾಗಿ ಬಳಸಿದ್ದು ಗಮನಕ್ಕೆ ಬರಲಿಲ್ಲವಾದ್ದರಿಂದ ನನ್ನ ಕೆಂಗಣ್ಣು ಆಗಾಗ ಅದರ ಮೇಲೆ ಬೀಳುತ್ತಿತ್ತು: ‘ಅಷ್ಟೆಲ್ಲಾ ದುಡ್ ಕುಟ್ಟು ತಂದಾತು. ಒಂದು ದಿನವೂ ನೀನು ಸರಿಯಾಗಿ ಬಳಸಿದ್ದು ಕಾಣಲ್ಲೆ. ಸುಮ್ನೇ ಜಾಗ ತಿಂತಾ ಕೂತಿದ್ದು’ ಅಂತೆಲ್ಲ ಹೆಂಡತಿಯಿಂದ ಸುರಕ್ಷಿತ ಅಂತರದಲ್ಲಿ ನಿಂತು ಗೊಣಗಿದೆ.  ‘ನೋಡಿ, ಒಂದಲ್ಲಾ ಒಂದು ದಿನ ಅದನ್ನ ಬಳಸ್ತೇನೆ’ ಅಂತ ಆಕೆಯೂ ನನ್ನ ಮಾತನ್ನು ಬದಿಗೆ ಸರಿಸುತ್ತಿದ್ದಳು.  


ಕೊನೆಗೊಂದು ದಿನ, ಆ ಹೊಲಿಗೆ ಯಂತ್ರವನ್ನು ಬಳಸಿಕೊಂಡು ತಾನಿನ್ನು ಪರ್ಸು /ಪೌಚುಗಳನ್ನು ಮಾಡುವುದಾಗಿಯೂ, ಅವನ್ನು ಮಾರಲು ಆಗುವುದೋ ನೋಡುತ್ತೇನೆಂದೂ ಹೇಳಿದಳು. ಡಿಜೈನು-ಡಿಜೈನಿನ ಬಣ್ಣ-ಬಣ್ಣದ ಬಟ್ಟೆಗಳನ್ನು ತಂದು ವಿಧವಿಧದ ಪರ್ಸು, ಪೌಚು, ಬ್ಯಾಗುಗಳನ್ನು ಮಾಡಿ, ಆನ್‌ಲೈನ್ ಮಾರುಕಟ್ಟೆಗಳ ಸಹಾಯದಿಂದ ಸುಮಾರು ಮಾರಾಟವನ್ನೂ ಮಾಡಿದಳು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಆರ್ಡರು ಬಂದರೆ, ಮನೆ ಮತ್ತು ಮಗಳನ್ನು ಸಂಬಾಳಿಸಿಕೊಂಡು, ಇದನ್ನೂ ಮಾಡಿಕೊಡುವುದು ಅವಳಿಗೆ ಕಷ್ಟವಾಗತೊಡಗಿತು. ಮತ್ತೆ ಪ್ರತಿ ಸಲ ಆರ್ಡರ್ ಬಂದಾಗ ಹೊಸಹೊಸ ತರಹದ ಬಟ್ಟೆಗಳನ್ನು ಮಾರುಕಟ್ಟೆಗೆ ಹೋಗಿ ತರುವುದು, ಸಮಯಕ್ಕೆ ಸರಿಯಾಗಿ ಅದನ್ನು ತಯಾರಿಸಿ ಕೊಡುವುದು, ನಂತರ ಪ್ಯಾಕಿಂಗ್-ಕೊರಿಯರ್ -ಎಲ್ಲವೂ ಬಹಳ ಸಮಯ ಬೇಡುವ ಕೆಲಸವಾದ್ದರಿಂದ ಆಕೆ ಇದರಿಂದ ಸ್ವಲ್ಪ ಹಿಂದೆ ಸರಿದಳು. 


ನಂತರ ಈ ಹೊಲಿಗೆ ಯಂತ್ರವನ್ನು ಸದಾ ಚಟುವಟಿಕೆಯಲ್ಲಿಡಲು ಆಕೆ ಕಂಡುಕೊಂಡ ಮಾರ್ಗ ಟ್ಯುಟೋರಿಯಲ್ ವೀಡಿಯೋಗಳು. ಈಗಾಗಲೇ ‘ಪಾಕಸ್ವಾದ’ ಎಂಬ ಯುಟೂಬ್ ಚಾನೆಲ್ ನಡೆಸಿ ಅನುಭವವಿದ್ದಿದ್ದ ಅವಳು, ‘ನೂಲು’ ಎಂಬ ಹೊಸ ಚಾನೆಲ್ ಶುರು ಮಾಡಿ, ಅದರಲ್ಲಿ ಇದೇ ಪರ್ಸು, ಪೌಚು, ಬ್ಯಾಗು, ಕೌದಿ, ಮಕ್ಕಳ ಬಟ್ಟೆಗಳು –ಹೀಗೆ ವಿವಿಧ ಉಪಯೋಗೀ ವಸ್ತ್ರ /ವಸ್ತುಗಳನ್ನು ತಯಾರಿಸುವುದನ್ನು ಹೇಳಿಕೊಡುವ ವೀಡಿಯೋಗಳನ್ನು ಹಾಕತೊಡಗಿದಳು. ಆ ಚಾನೆಲ್ ಈಗ ಹತ್ತು ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರುಗಳನ್ನು ಹೊಂದಿದೆ.  ಹಾಗೆಯೇ, ಅದೇ ‘ನೂಲು’ ಹೆಸರಿನ ಫೇಸ್‌ಬುಕ್ ಪೇಜ್ ಈಗ ಐದು ಸಾವಿರ ಫಾಲೋವರುಗಳನ್ನು ಮುಟ್ಟುವ ಹಂತದಲ್ಲಿದೆ. 


‘ನೀವೂ ಒಂದಷ್ಟು ಜನಕ್ಕೆ ರಿಕ್ವೆಸ್ಟ್ ಕಳ್ಸಿದ್ರೆ ಬೇಗ ಐದು ಸಾವಿರ ಆಗ್ತಿತ್ತೇನೋ’ ಅಂದಳು ಇವತ್ತು.  ತೀರಾ ನೇರವಾಗಿ ನಾನಾದರೂ ಹೇಗೆ ಕೇಳಲಿ? ಅದಕ್ಕಾಗಿಯೇ ಇಷ್ಟೆಲ್ಲ ಬರೆದೆ ಅಂತಲ್ಲ; ಅವಳ ಹೊಲಿಗೆ ಯಂತ್ರದ ಜೊತೆಗೆ ನಮ್ಮ ಮನೆಯ ಸೂಜಿ ಡಬ್ಬಿಯೂ, ಅದರ ಜೊತೆಗಿರುತ್ತಿದ್ದ ಇನ್ನೆರಡು ಡಬ್ಬಿಗಳೂ ನೆನಪಾದವು. ಹಾಗಾಗಿ.... 


ಕೆಳಗೆ ಹೆಂಡತಿಯ ‘ನೂಲು’ ಪೇಜಿನ ಲಿಂಕ್ ಇದೆ. ಫಾಲೋ ಮಾಡಿ: 

'ನೂಲು' ಎಫ್ಬಿ ಪೇಜ್ ಬೈ ದಿವ್ಯಾ: https://www.facebook.com/nooludivyahegde

Monday, April 10, 2023

ದರ್ಶಿನಿ ಹೋಟೆಲುಗಳೆಂಬ ಅನ್ನಪೂರ್ಣೆಯರು

ಸಣ್ಣ ಊರಿನಿಂದ ಮಹಾನಗರಕ್ಕೆ ಬರುವವರಿಗೆ ಅಚ್ಚರಿಯೆನಿಸುವ ಹಲವು ಸಂಗತಿಗಳು ಇಲ್ಲಿ ಅಡಿಗಡಿಗೂ ಕಾಣಸಿಗುತ್ತವೆ. ಅಬ್ಬಾ ಎನಿಸುವಂತಹ ಇಲ್ಲಿನ ಟ್ರಾಫಿಕ್ಕು, ರಸ್ತೆಯಿಕ್ಕೆಲದ ಥಳಥಳ ಕಟ್ಟಡಗಳು, ಐಷಾರಾಮಿ ಬಂಗಲೆಯಿಂದ ಹೊರಬಂದು ಸುಂಯ್ಯನೆ ಕಣ್ಮುಂದೆ ಹಾಯುವ ಕಾರುಗಳು, ತರಾತುರಿಯೇ ಜೀವನಕ್ರಮವೆಂಬಂತೆ ಓಡುತ್ತಲೇ ಇರುವ ಜನ, ಮಾಲುಗಳ ಎಸ್ಕಲೇಟರುಗಳು, ಪಾರ್ಕುಗಳಲ್ಲಿನ ನಗೆಕ್ಲಬ್ಬುಗಳು.... ಹೀಗೆ ನಮ್ಮೂರಲ್ಲಿಲ್ಲದ ಸಂಗತಿಗಳೆಲ್ಲ ಇಲ್ಲಿ ವಿಸ್ಮಯದ ಚಿತ್ರಗಳಾಗಿ ಕಾಣುವವು. ಇಂತಹ ನಗರದಲ್ಲಿ ಹೊಸದೆನ್ನಿಸಿದ ವಿಷಯಗಳ ಪಟ್ಟಿಗೇ ಸೇರಿಸಬಹುದಾದ ಇನ್ನೊಂದು ವಿಶೇಷವೆಂದರೆ ಇಲ್ಲಿನ ಗಲ್ಲಿಗಲ್ಲಿಯಲ್ಲೂ ಇರುವ ದರ್ಶಿನಿ ಹೋಟೆಲುಗಳು.
 
ಹಳ್ಳಿ ಅಥವಾ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದವರಿಗೆ, ಚಿಕ್ಕವರಿದ್ದಾಗ ಎಂದೋ ಅಪ್ಪ-ಅಮ್ಮರ ಜೊತೆ ಪೇಟೆಗೆ ಹೋದಾಗ ಅವರಿಗೆ ಉಮೇದು ಬಂದು ಕಾಫಿಯನ್ನೋ ಚಹಾವನ್ನೋ ಕುಡಿಯಲು ಹೋಟೆಲು ಅಥವಾ ಖಾನಾವಳಿಗೆ ಕರೆದೊಯ್ದರೆ, ಅಲ್ಲಿದ್ದ ರಾಶಿರಾಶಿ ಕುರ್ಚಿಗಳು ನಮ್ಮನ್ನು ಸ್ವಾಗತಿಸುತ್ತಿದ್ದ ನೆನಪು ಇದ್ದೇ ಇರುತ್ತದೆ. ಸ್ವಲ್ಪ ದೊಡ್ಡವರಾಗಿ ಶಾಲೆ-ಕಾಲೇಜುಗಳಿಗೆ ಹೋಗುವವರಾಗಿ, ನಾವೇ ಪೇಟೆ ಸುತ್ತಿ ಸಾಮಾನು ತರುವವರಾದಮೇಲೆ, ಉಳಿಸಿದ ದುಡ್ಡಲ್ಲಿ ಆಗಾಗ ಹೋಟೆಲಿಗೆ ಹೋದರೂ ಬೇಕಾದಷ್ಟು ಕುರ್ಚಿಗಳು ಅಲ್ಲಿದ್ದೇ ಇರುತ್ತಿದ್ದವು. ನಾವು ಘನಗಾಂಭೀರ್ಯದಿಂದ ಆ ಕುರ್ಚಿಯನ್ನಲಂಕರಿಸುವುದೂ, ಸರ್ವರ್ ಬಂದು ನಮ್ಮ ಆರ್ಡರ್ ಪಡೆದು ಹೋಗುವುದೂ, ರಾಗವಾಗಿ ಎರಡ್ ಮಸ್ಸಾಲೆಅಂತಲೋ ಒಂದ್ ಪ್ಲೇಟ್ ಇಡ್ಲಿ ವಡಾಅಂತಲೋ ಕೂಗಿ ಹೇಳುವುದೂ, ನಮಗೆ ಅರೆಬರೆಯಷ್ಟೇ ಕಾಣುವಂತಿದ್ದ ಅಡುಗೆಮನೆಯಿಂದ ಚಶ್ಎಂದು ಮಸಾಲೆ ದೋಸೆಯನ್ನು ಕಾವಲಿಗೆ ಹೊಯ್ದ ಸದ್ದು ಕೇಳುವುದೂ ಸರ್ವೇಸಾಮಾನ್ಯವಾಗಿತ್ತು. ದೂರದ ಗಲ್ಲಾಪೆಟ್ಟಿಗೆಯಲ್ಲಿ ಗರಿಗರಿ ವಸ್ತ್ರ ಧರಿಸಿ ಕೂತಿದ್ದ ಹೋಟೆಲಿನ ಮಾಲೀಕರು ಸದಾ ದುಡ್ಡು ಎಣಿಸುತ್ತಲೇ ಇರುತ್ತಿದ್ದರು.  ಅವರ ಹಿಂದಿದ್ದ ದೇವರ ಫೋಟೋಗಳ ಸುತ್ತ ಇರುತ್ತಿದ್ದ ಪಿಳಿಪಿಳಿ ದೀಪಗಳ ಸರಮಾಲೆ ಮತ್ತು ಅಲ್ಲೇ ಸಿಕ್ಕಿಸಿದ್ದ ಊದಿನಕಡ್ಡಿಯಿಂದ ಹೊರಟ ಹೊಗೆ, ಆ ಮಾಲೀಕರ ಮೇಲೊಂದು ದೈವೀಕ ಕಳೆಯನ್ನು ಕಲ್ಪಿಸಿ, ಅವರ ಮೇಲೆ ಭಯ-ಭಕ್ತಿ ಹೊಮ್ಮಿಸುವಂತೆ ಮಾಡುತ್ತಿದ್ದವು.  ನಾವು ಆರ್ಡರ್ ಮಾಡಿದ ಭಕ್ಷ್ಯ ಬರುವವರೆಗೆ ಕುರ್ಚಿಯ ತುದಿಯಲ್ಲಿ ಕೂತು ಚಡಪಡಿಸುತ್ತಾ, ಪಕ್ಕದವರದು ಮೊದಲೇ ಬಂದರೆ ನಮಗೆ ಇದ್ದಕ್ಕಿದ್ದಂತೆ ಹಸಿವು ಜಾಸ್ತಿಯಾದಂತಾಗಿ ಗಡಿಬಿಡಿಯನ್ನು ವ್ಯಕ್ತಪಡಿಸುತ್ತಾ, ಸರ್ವರು ತಿಂಡಿಯನ್ನು ಟ್ರೇನಲ್ಲಿಟ್ಟು ಬೇರೆ ಯಾವುದೋ ಟೇಬಲಿಗೆ ಸರ್ವ್ ಮಾಡಲು ಬರುವಾಗ ನಮಗೇ ತಂದನೆಂದು ಭ್ರಮಿಸುತ್ತಾ ಕಾಯುತ್ತಿದ್ದೆವು.  ಇನ್ನೇನು ಪ್ರಳಯವಾಗುತ್ತೆ ಅನ್ನುವಾಗ ಅವನು ನಮ್ಮ ತಿಂಡಿ ತಂದುಕೊಡುತ್ತಿದ್ದ. ನಾವೂ ಮುಗಿಲು ಕಳಚಿ ಬಿದ್ದವರಂತೆ ಅದನ್ನು ಮುಕ್ಕುತ್ತಿದ್ದೆವು. ಹಣ ಕೊಟ್ಟು ತಿನ್ನುವ ಕಾರಣಕ್ಕೋ ಏನೋ, ಹೋಟೆಲಿನ ಆಹಾರ ಸದಾ ರುಚಿಯೆನಿಸುತ್ತಿತ್ತು.  ಮತ್ತೇನಾದ್ರೂ ಬೇಕಾ ಸರ್?’ ಅಂತ ಸರ್ವರ್ ಕೇಳಿದಾಗ, ಇನ್ನೂ ಸಾಕಷ್ಟು ತಿನ್ನುವಷ್ಟು ಜಾಗ ಹೊಟ್ಟೆಯಲ್ಲಿದ್ದರೂ, ಬರಲಿರುವ ಬಿಲ್ಲಿಗೆ ಹೆದರಿ ಹೆಹೆ, ಏನೂ ಬೇಡ. ಬಿಲ್ ಕೊಡಿಎನ್ನುತ್ತಿದ್ದೆವು. ಇಷ್ಟೇ ಸಣ್ಣ ಚೀಟಿಯಾದರೂ, ದ್ರೌಪದಿಯ ಸ್ವಯಂವರದಲ್ಲಿ ರಾಜಾಧಿರಾಜರೆಲ್ಲ ಎತ್ತಲು ವಿಫಲರಾಗುವ ಬಿಲ್ಲಿನಷ್ಟೇ ಭಾರವಾದ ಮೊತ್ತವಿರುವ ಬಿಲ್ಲನ್ನು ಆ ಸರ್ವರ್ ಸೋಂಪು ತುಂಬಿದ ತಟ್ಟೆಯಲ್ಲಿಟ್ಟು ತರುವಾಗ, ಈತ ಟಿಪ್ಸ್ ಪಡೆಯಲೆಂದೇ ಅತಿವಿನಯದಿಂದ ವರ್ತಿಸುತ್ತಿದ್ದಾನೇನೋ ಎಂಬ ಅನುಮಾನ ಬರುತ್ತಿದ್ದುದು ಸುಳ್ಳಲ್ಲ. ಆಡಿಟರುಗಳು ಅಕೌಂಟ್ಸ್ ಮಾಡುವಾಗಲಾದರೂ ಅಷ್ಟೆಲ್ಲಾ ಪರಿಶೀಲಿಸುತ್ತಾರೋ ಇಲ್ಲವೋ, ಈ ಹೋಟೆಲಿನ ಬಿಲ್ಲನ್ನು ಮಾತ್ರ ಸರಿಯಾಗಿದೆಯೇ ಎಂದು ಮೇಲಿಂದ ಕೆಳಗೆ ನೋಡುವುದು ನಾವು ತಪ್ಪಿಸುತ್ತಿರಲಿಲ್ಲ. ಕಷ್ಟ ಪಟ್ಟು ಕಿಸೆಯಿಂದ ಹಣ ತೆಗೆದು ಆ ತಟ್ಟೆಯಲ್ಲಿರಿಸಿ, ಸರ್ವರ್ ಅದನ್ನು ಪಡೆದು ಹೋಗಿ, ಚಿಲ್ಲರೆ ವಾಪಸು ತಂದಿಟ್ಟಾಗ, ಅವನಿಗೆ ಟಿಪ್ಸ್ ಕೊಡಬೇಕೋ ಬೇಡವೋ ಎಂಬ ಗೊಂದಲ. ಈ ಟಿಪ್ಸ್ ಕೊಡುವ ಮೊತ್ತವೂ ಯಾರ ಜೊತೆಗೆ ಹೋಟೆಲಿಗೆ ಹೋಗಿದ್ದೇವೆ, ಅವರಿವರು ಗಮನಿಸುತ್ತಿದ್ದಾರೆಯೇ ಎಂಬುದರ ಮೇಲೆ ಅವಲಂಬಿತ. ಕೊಟ್ಟ ಟಿಪ್ಸ್ ಕಮ್ಮಿಯಾಯಿತೋ ಜಾಸ್ತಿಯಾಯಿತೋ ಅಂತ ತಲೆ ಕೆಡಿಸಿಕೊಳ್ಳುತ್ತ ಹೋಟೆಲಿನಿಂದ ಹೊರಬೀಳುವಷ್ಟರಲ್ಲಿ ಸಾಕಷ್ಟು ಸಮಯ ಕಳೆದುಹೋಗಿರುತ್ತಿತ್ತು ಮತ್ತು ಎಷ್ಟೋ ಸಲ ತಿಂದ ತಿಂಡಿಯ ರುಚಿಯೂ ಮರೆತುಹೋಗಿರುತ್ತಿತ್ತು.
 
ಈ ತರಹದ ಸಮಸ್ಯೆಗಳೆಲ್ಲ ಬಗೆಹರಿದುದು ದರ್ಶಿನಿ ಹೋಟೆಲುಗಳ ದರ್ಬಾರು ಶುರುವಾದಮೇಲೆ.  ರೆಸ್ಟುರೆಂಟುಗಳಷ್ಟು ಜಾಗವನ್ನೂ ಬೇಡದ ಈ ದರ್ಶಿನಿಗಳು ಸಣ್ಣ ಜಾಗದಲ್ಲಿ ಚಿಕ್ಕದಾಗಿ ಚೊಕ್ಕವಾಗಿ ತಮ್ಮಿಡೀ ಹರಹನ್ನು ತೆರೆದಿಟ್ಟು ಹಸಿದವರನ್ನು ಆಕರ್ಷಿಸುವವು. ಇಲ್ಲಿ ಕೌಂಟರಿನಲ್ಲಿ ಕುಳಿತ ಕ್ಯಾಶಿಯರ್ ಚುರುಕಾದ ವ್ಯಕ್ತಿ. ಅವನ ಹಿಂದೆ ದರ್ಶಿನಿಯಲ್ಲಿ ದೊರಕುವ ತಿಂಡಿಯ ಪಟ್ಟಿ ಮತ್ತು ಪ್ರತಿ ತಿಂಡಿಯ ಬೆಲೆ. ಕೇಳಿದ ತಿಂಡಿಯ ಚೀಟಿಯನ್ನು ಟಕ್ಕಟಕ್ಕನೆ ಮುದ್ರಿಸಿ, ಹಣ ಪಡೆದು ಚಿಲ್ಲರೆ ಕೊಡುವ. ಆ ಚೀಟಿಯನ್ನೊಯ್ದು, ಗಾಜಿನ ಕಿಟಕಿಗಳ ಹಿಂದೆ ನಮಗೆಂದೇ ಕಾಯುತ್ತಿರುವ ಅಣ್ಣನಿಗೆ ಕೊಟ್ಟರೆ ಸಾಕು, ಬಿಸಿಬಿಸಿ ತಿಂಡಿ ಕ್ಷಣಮಾತ್ರದಲ್ಲಿ ನಮ್ಮೆದುರಲ್ಲಿ. ಅದನ್ನೆತ್ತಿಕೊಂಡು ಹೋಗಿ, ಎತ್ತರದ ಕಟ್ಟೆಗಳ ಮೇಲಿಟ್ಟುಕೊಂಡು ಮೆಲ್ಲತೊಡಗಿದರೆ, ಅಕ್ಕಪಕ್ಕದವರೆಲ್ಲ ಅದೃಶ್ಯರಾಗಿ ನಮ್ಮ ತಿಂಡಿ ಮಾತ್ರ ನಮ್ಮ ಕಣ್ಣೆದುರಿದ್ದು, ಕೈಗೂ ಬಾಯಿಗೂ ಪರಿಚಿತವಾದ ಕೆಲಸ ಶುರುವಾಗುತ್ತಿತ್ತು.
 
ಈ ಸ್ವಯಂಸಹಾಯ ಪದ್ಧತಿಯು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಮಯವನ್ನು ಉಳಿಸುವಲ್ಲಿ ನೆರವಾಯಿತು. ಈ ಮಹಾನಗರದಲ್ಲಂತೂ ವೀಕೆಂಡು ಅಥವಾ ರಜಾದಿನಗಳಲ್ಲಿ ಪ್ರಸಿದ್ಧ ಹೋಟೆಲುಗಳಿಗೆ ಹೋಗಿಬಿಟ್ಟರೆ ಕುರ್ಚಿ ಹಿಡಿಯಲೂ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ.  ಕೆಲವು ಹೋಟೆಲುಗಳಲ್ಲಿ ಹೆಸರು ಬರೆಸಿ ಕಾಯಬೇಕು.  ಇನ್ನು ಕೆಲವು ಹೋಟೆಲುಗಳಲ್ಲಿ, ನಾವು ಕುಳಿತು ಉಣ್ಣುತ್ತಿರುವಾಗಲೇ ನಮ್ಮ ಹಿಂದೆ ಬಂದು ನಿಂತು ನಾವು ಏಳುವುದನ್ನೇ ಕಾಯುವ ಜನ. ಅಂತೂ ನಮ್ಮ ಸರದಿ ಬಂದು, ಆ ಹೆಸರು ಬರೆದುಕೊಳ್ಳುವವ ನಮ್ಮ ಹೆಸರನ್ನು ಕೋರ್ಟಿನಲ್ಲಿ ಕಟಕಟೆಗೆ ಕರೆಯುವ ದನಿಯಲ್ಲಿ ಕರೆದು, ನಾವು ಒಳಹೊಕ್ಕು, ಕುರ್ಚಿಯೊಂದನ್ನು ಅಲಂಕರಿಸಿ, ಎಷ್ಟೋ ಸಮಯದ ನಂತರ ಆ ಟಿಪ್‌ಟಾಪ್ ಮನುಷ್ಯ ಬಂದು ಮೆನುಕಾರ್ಡ್ ಕೊಟ್ಟುಹೋಗಿ, ಮತ್ತೆಷ್ಟೋ ಸಮಯದ ತರುವಾಯ ಅವನು ವಾಪಸು ಬಂದು ನಮಗೆ ಬೇಕಾದ ಆಹಾರವನ್ನು ಬರೆದುಕೊಂಡು ಹೋಗಿ, ಎನ್ನೂ ಎಷ್ಟೋ ಘಳಿಗೆ ಕಳೆದಮೇಲೆ ಆ ಆಹಾರವನ್ನೆಲ್ಲ ಸಪ್ಲಾಯರೆಂಬ ಮಹಾಶಯ ತಂದುಕೊಟ್ಟು, ನಾವು ಮೊದಲ ತುತ್ತು ಬಾಯಿಗಿಡುವಷ್ಟರಲ್ಲಿ ಹಲವು ಶತಮಾನಗಳೇ ಕಳೆದುಹೋಗಿರುತ್ತದೆ.  ಒಂದು ಒಳ್ಳೆಯ ಹೋಟೆಲಿಗೆ ಹೋಗಿ ಕುಳಿತು ಊಟ ಮಾಡಿ ಬರಬೇಕು ಎಂದರೆ ಅದಕ್ಕೆಂದೇ ಕನಿಷ್ಟ ಎರಡು ತಾಸು ಮೀಸಲಿಡಬೇಕು. ಆ ಅವಧಿಯಲ್ಲಿ ಮನೆಯಲ್ಲೇ ಅಡುಗೆ ತಯಾರಿಸಿ ಉಣ್ಣಬಹುದು!
 
ಆದರೆ ದರ್ಶನಿಗಳಲ್ಲಿ ಹಾಗಲ್ಲ. ಹೆಚ್ಚು ರಶ್ ಇದ್ದರೆ ಸ್ವಲ್ಪ ತಡವಾಗಬಹುದಾದರೂ, ಸರ್ವೀಸ್ ಸೆಕ್ಷನ್ನಿನಲ್ಲಿಯಷ್ಟು ತಡವಾಗಲಿಕ್ಕೆ ಶಕ್ಯವೇ ಇಲ್ಲ. ಇನ್ನೊಂದು ಮುಖ್ಯ ಅಂಶವೆಂದರೆ, ಇಲ್ಲಿನ ಬಿಲ್ ಭಾರವೂ ಕಡಿಮೆ. ಸ್ವಯಂಸಹಾಯ ಪದ್ಧತಿಯಲ್ಲಿ ನಿಂತು ತಿನ್ನಲು ತೆರುವ ಹಣಕ್ಕಿಂತ ಜಾಸ್ತಿ ಹಣವನ್ನು ಅದೇ ಹೋಟೆಲಿನ ಸರ್ವೀಸ್ ಸೆಕ್ಷನ್ನಿನಲ್ಲಿ ಕುಳಿತು ಅದೇ ಭಕ್ಷ್ಯವನ್ನು ತಿಂದರೆ ತೆರಬೇಕು. ಹವಾನಿಯಂತ್ರಿತ ವ್ಯವಸ್ಥೆಯ ವಿಭಾಗದಲ್ಲಾದರೆ ಅದರ ಬೆಲೆ ಇನ್ನೂ ಹೆಚ್ಚು.  ಹೀಗಾಗಿ, ಕಿಸೆಗೆ ಹಗುರವೆನಿಸುವ, ಹೊಟ್ಟೆಯನ್ನು ತುಂಬಿಸುವ, ಸಮಯವನ್ನೂ ಉಳಿಸುವ ದರ್ಶಿನಿಗಳು ಇಲ್ಲಿ ಹೆಚ್ಚೆಚ್ಚು ಜನಪ್ರಿಯವಾದವು ಎನಿಸುತ್ತೆ.
 
ಏಕೆಂದರೆ ಮಹಾನಗರದಲ್ಲಿ ಈ ಮೂರೂ ಬಹಳ ಮುಖ್ಯವಾದವು: ಹಣ, ಹಸಿವು ಮತ್ತು ಸಮಯ. ಹಣ ಗಳಿಸಬೇಕು, ಹಸಿವು ತಣಿಸಬೇಕು, ಸಮಯ ಉಳಿಸಬೇಕು. ಏನೇನೋ ಕನಸುಗಳನ್ನು ಹೊತ್ತು ಬಂದವರಿಂದಲೇ ತುಂಬಿದೆ ನಗರ. ಕ್ಯಾಂಪಸ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗಿ, ನೌಕರಿ-ಸಂಬಳ-ಇರಲೊಂದು ತಾವುಗಳೆಲ್ಲ ಖಾಯಂ ಆದಮೇಲೇ ಇಲ್ಲಿಗೆ ಬರುವ ಅದೃಷ್ಟವಂತರಿಂದ ಹಿಡಿದು, ಏನಾದರೂ ಉದ್ಯೋಗ ಸಿಕ್ಕರೆ ಸಾಕಪ್ಪಾ ದೇವರೇ ಎಂದು ಬರುವ ಆರ್ತರವರೆಗೆ ನಗರ ಎಲ್ಲರನ್ನೂ ಸ್ವಾಗತಿಸುತ್ತದೆ. ಎಷ್ಟೋ ಜನ, ಅದರಲ್ಲೂ ಮೊದಲ ಸಲ ಮಹಾನಗರಕ್ಕೆ ಬಂದವರು ಇಲ್ಲಿಯ ಅಗಾಧತೆಯನ್ನು ಕಂಡು ಅವಾಕ್ಕಾಗುತ್ತಾರೆ. ಬೆನ್ನಿನ ಚೀಲದೊಂದಿಗೆ ಬಸ್ಸಿನಿಂದಲೋ ರೈಲಿನಿಂದಲೋ ಇಳಿಯುವ ಈ ಡವಡವ ಎದೆಯ ಬಿಡುಗಣ್ಣಿನ ಯುವಕ-ಯುವತಿಯರು, ದೂರದೂರಿನಿಂದ ದಿನವಿಡೀ ಪಯಣಿಸಿ ಹೊಟ್ಟೆ ಹಸಿಯುತ್ತಿದ್ದರೂ ಹೋಟೆಲಿಗೆ ನುಗ್ಗಲು ಹಿಂಜರಿಯುವರು. ಇಂತವರಿಗೆಂದೇ ತೆರೆದಿರುವವು ದರ್ಶಿನಿಗಳು ಮತ್ತು ಮೊಬೈಲ್ ಕ್ಯಾಂಟೀನುಗಳೆಂಬ ಅನ್ನಪೂರ್ಣೆಯರು. ಮಹಾನಗರದ ವ್ಯವಸ್ಥೆಯಲ್ಲಿನ ಒಂದು ಬಹಳ ದೊಡ್ಡ ಖುಷಿಯ ಅಂಶವೆಂದರೆ, ಇಲ್ಲಿ ಥಳಥಳ ಫೈವ್ ಸ್ಟಾರ್ ಹೋಟೆಲುಗಳೂ  ಇವೆ; ಬೀದಿಬದಿ ತಳ್ಳುಗಡಿಯಲ್ಲಿ ದೊರಕುವ ಆಹಾರವೂ ಇದೆ. ತಳ್ಳುಗಾಡಿಯ ಅಣ್ಣ ಕೊಡುವ ಅನ್ನ-ಸಾಂಬಾರು, ಎಗ್‌ರೈಸು, ತಟ್ಟೆ ಇಡ್ಲಿಗಳು ಹಣದ ಮುಗ್ಗಟ್ಟಿರುವವನ ಹೊಟ್ಟೆ ತುಂಬಿಸುತ್ತದೆ. ಅಲ್ಲೇ ಪಕ್ಕದ ಗೂಡಂಗಡಿಯಲ್ಲಿ ಸಿಗುವ ಚಹಾ ಕರುಳನ್ನು ಬೆಚ್ಚಗಾಗಿಸುತ್ತೆ.  ಜಗ್ಗಿನಲ್ಲಿಟ್ಟಿರುವ ನೀರನ್ನು ನೀವು ಎಷ್ಟು ಎತ್ತಿ ಕುಡಿದರೂ ನಯಾಪೈಸೆ ಕೊಡಬೇಕಿಲ್ಲ. ನಾರ್ಮಲ್ ವಾಟರ್ರಾ ಮಿನರಲ್ ವಾಟರ್ರಾ?’ ಅಂತ ಯಾವ ವೇಯ್ಟರೂ ಕೇಳಿ ನಿಮ್ಮನ್ನಿಲ್ಲಿ ಬೆಚ್ಚಿ ಬೀಳಿಸುವುದಿಲ್ಲ.
 
ನಗರಕ್ಕೆ ವಲಸೆ ಬಂದು ಕೆಲಸಕ್ಕೆ ಸೇರಿದವರಿಗೆಲ್ಲ ಸೆಂಟ್ರಲೈಸ್ಡ್ ಏಸಿ ಇರುವ ಆಫೀಸೂ, ಮೇಲ್ಗಡೆ ಮಹಡಿಯಲ್ಲಿ ಕೆಫೆಟೇರಿಯಾವೂ ಇರುವ ವ್ಯವಸ್ಥೆ ಸಿಗುವುದಿಲ್ಲವಷ್ಟೇ? ಇಲ್ಲಿನ ಅರ್ಧ ಜನಕ್ಕೆ ಓಡುವುದೇ ಕೆಲಸ. ಸೇಲ್ಸ್‌ಮೆನ್ನುಗಳು, ಡೆಲಿವರಿ ಬಾಯ್ಸು, ಒಂದು ಕಛೇರಿಯಿಂದ ಮತ್ತೊಂದು ಕಛೇರಿಗೆ ಓಡಾಡುವ ಕೆಲಸವಿರುವವರು, ಹಗಲು ಒಂದು ಕಡೆ ಕೆಲಸ ಸಂಜೆ ಮತ್ತೊಂದು ಕಡೆ ಪಾರ್ಟ್ ಟೈಮ್ ಜಾಬ್ ಇರುವ ಜನರು ಹೀಗೆ ಇಲ್ಲಿ ಇರುವ ಇಪ್ಪತ್ನಾಲ್ಕು ಗಂಟೆಯಲ್ಲಿ ಸಮಯವನ್ನು ಹೊಂದಿಸುವುದೇ ಕಷ್ಟ. ಹೀಗಾಗಿ ವಾರದ ದಿನಗಳಲ್ಲಿ ಆರಾಮಾಗಿ ಕುಳಿತು ಉಣ್ಣಲೂ ಇವರಿಗೆ ಪುರುಸೊತ್ತಿಲ್ಲ. ಸಿಕ್ಕ ಆಹಾರವನ್ನು ಕಣ್ಣಿಗೋ ಮೂಗಿಗೋ ಬಾಯಿಗೋ ತುರುಕಿಕೊಂಡು ಹೊಟ್ಟೆ ತುಂಬಿಸಿಕೊಂಡರೆ ಅದೇ ದೊಡ್ಡ ವಿಷಯ. ಆಮೇಲೆ ಮತ್ತೆ ಬೈಕು ಹತ್ತಿಯೋ ಬಸ್ಸಿಗೆ ನೇತಾಡಿಕೊಂಡೋ ಆಟೋ ಹಿಡಿದೋ ಓಡುವುದೇ. ಇವರಿಗೆಲ್ಲ ದರ್ಶಿನಿಗಳು ನಿಜವಾದ ವರದಾನ. ಅಕೋ ಅಲ್ಲಿ ದಡಬಡನೆ ಒಂದು ರೈಸ್‌ಬಾತ್ ತಿಂದು, ಮೂಲೆಯ ಸಿಂಕಿನಲ್ಲಿ ಕೈ ತೊಳೆದುಕೊಂಡು, ಕರ್ಚೀಫಿನಲ್ಲಿ ಕೈ-ಬಾಯಿ ಒರೆಸಿಕೊಳ್ಳುತ್ತಾ ಓಡುತ್ತಿರುವ ಅಂಕಲ್ ಕ್ಷಣಮಾತ್ರದಲ್ಲಿ ರಸ್ತೆ ದಾಟಿ ಮಾಯವಾದರಲ್ಲ, ಅವರಿಗೆ ಮಧ್ಯಾಹ್ನ ಎರಡೂ ಇಪ್ಪತ್ತಕ್ಕೆ ಸರಿಯಾಗಿ ಯಾರೋ ದೊಡ್ಡ ಮನುಷ್ಯರು ಅಪಾಯಿಂಟ್‌ಮೆಂಟ್ ಕೊಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಿ ಅವರನ್ನು ಒಪ್ಪಿಸಿ ಒಂದು ಇನ್ಷುರೆನ್ಸ್ ಪಾಲಿಸಿ ಮಾಡಿಸಬೇಕಿದೆ. ಅದು ಸಫಲವಾದರೆ ಈ ತಿಂಗಳ ಮನೆಯ ಬಾಡಿಗೆಯನ್ನು ಸರಿಯಾದ ಸಮಯಕ್ಕೆ ಕೊಡಲು ಸಾಧ್ಯವಾಗುತ್ತದೆ.
 
ದರ್ಶಿನಿ ಹೋಟೆಲುಗಳಲ್ಲಿನ ಪಾರ್ಸೆಲ್ ವ್ಯವಸ್ಥೆಯೂ ಅಷ್ಟೇ ಜನಪ್ರಿಯವಾದುದು. ಕುಳಿತು ತಿನ್ನುವುದಿರಲಿ, ನಿಂತು ತಿನ್ನಲೂ ಪುರುಸೊತ್ತಿಲ್ಲದವರು ಆಹಾರವನ್ನು ಪಾರ್ಸೆಲ್ ಮಾಡಿಸಿ ಒಯ್ಯುವರು. ಅದನ್ನವರು ತಮ್ಮ ಕೆಲಸದ ಸ್ಥಳಕ್ಕೆ ಒಯ್ದು ಕೆಲಸ ಮಾಡುತ್ತಲೇ ತಿನ್ನುವರು.  ಇನ್ನು ಕೆಲವರು ಮನೆಯಲ್ಲಿ ಆರಾಮಾಗಿ ಕುಳಿತು ತಿನ್ನುವ ಸಲುವಾಗಿ, ಮನೆಯಲ್ಲಿರುವ - ಹೊರಗೆ ಬರಲಾಗದವರ ಸಲುವಾಗಿ, ಆಸ್ಪತ್ರೆಯಲ್ಲಿ ದಾಖಲಾಗಿರುವ ಆಪ್ತರ ಸಲುವಾಗಿ ಪಾರ್ಸೆಲ್ ಒಯ್ಯುವರು. ಇತ್ತೀಚಿಗೆ ಜನಪ್ರಿಯವಾಗಿರುವ ಸ್ವಿಗ್ಗಿ, ಜೊಮ್ಯಾಟೋ ತರಹದ ಮನೆಗೇ ಆಹಾರ ತಲುಪಿಸುವ ವ್ಯವಸ್ಥೆಗಳಿಗೂ ಇದೇ ಪಾರ್ಸೆಲ್ ಕೌಂಟರುಗಳಲ್ಲಿ ಡಬ್ಬಿಗಳು ಕಟ್ಟಲ್ಪಡುವುದು. ದಿನವೂ ತನ್ನ ರೂಮಿನಲ್ಲಿ ಅನ್ನ ಮಾತ್ರ ಬೇಯಿಸಿಕೊಂಡು ಸಾಂಬಾರನ್ನು ಹತ್ತಿರದ ದರ್ಶಿನಿಯಿಂದ ಒಯ್ಯುವ ಬ್ಯಾಚುಲರ್ ಹುಡುಗನಿಗೆ ಪಾರ್ಸೆಲ್ ಕಟ್ಟಿಕೊಡುವವನು ಈ ಹಬ್ಬದ ದಿನ ಒಂದು ಜಹಾಂಗೀರನ್ನೂ - ಒಂದು ಮಸಾಲೆವಡೆಯನ್ನೂ ಉಚಿತವಾಗಿ ಕಟ್ಟಿಕೊಟ್ಟಿದ್ದಾನೆ. ಇದರಿಂದಾಗಿ, ಬ್ಯಾಚುಲರ್ ರೂಮಿನಲ್ಲಿಂದು ಮೃಷ್ಟಾನ್ನ ಭೋಜನವಾಗಿದೆ. 
 
ಉಳ್ಳವರನ್ನೂ ಏನೂ ಇರದವರನ್ನೂ ಸಮಾನಾಸ್ಥೆಯಿಂದ ಮಡಿಲಲ್ಲಿಟ್ಟುಕೊಂಡು ಸಲಹುವ ಸಂಕಲ್ಪ ತೊಟ್ಟಿರುವ ನಗರ ತನ್ನ ಫೈವ್ ಸ್ಟಾರ್ ಹೋಟೆಲುಗಳು, ಮಲ್ಟಿ ಕ್ಯುಸಿನ್ ರೆಸ್ಟುರೆಂಟುಗಳು, ದರ್ಶಿನಿ ಹೋಟೆಲುಗಳು, ಮೊಬೈಲ್ ಕ್ಯಾಂಟೀನುಗಳು, ತಳ್ಳುಗಾಡಿಗಳಲ್ಲಿನ ಆಹಾರ ವ್ಯಾಪಾರ ವ್ಯವಸ್ಥೆಯ ಮೂಲಕ ಎಲ್ಲರ ಹೊಟ್ಟೆ ತುಂಬಿಸುತ್ತಿದೆ. ಇನ್ನೂ ಇಬ್ಬನಿ ಬೀಳುತ್ತಿರುವ ಮುಂಜಾನೆ, ವಾಕಿಂಗು ಮುಗಿಸಿದ ಗಡಿಬಿಡಿಯ ನಾಗರೀಕರನ್ನು ಸ್ವಾಗತಿಸಲು ರೆಸ್ಟುರೆಂಟುಗಳು ತಮ್ಮ ಸಣ್ಣ ಬಾಗಿಲು ತೆರೆದು ನಿಂತಿದ್ದರೆ, ದರ್ಶಿನಿಗಳು ನಿಚ್ಛಳ ಗಾಳಿ-ಬೆಳಕುಗಳಿಗೆ ಪೂರ್ತಿಯಾಗಿ ತೆರೆದುಕೊಂಡು ಸಜ್ಜಾಗಿ ನಿಂತಿವೆ. ಬಿಳಿ ಶೂ ತಲೆಗೊಂದು ಕ್ಯಾಪ್ ಧರಿಸಿದ ನೀವು ದಡಬಡಾಯಿಸಿ ಈ ಹೋಟೆಲಿಗೆ ನುಗ್ಗಿ ಒಂದು ಪ್ಲೇಟು ಇಡ್ಲಿ-ವಡೆಗೆ ಚೀಟಿ ಪಡೆದು ಕೌಂಟರಿನಲ್ಲಿ ಕೊಡುತ್ತಿದ್ದೀರಿ.  ಸಾಂಬಾರ್ ಡಿಪ್ಪಾ ಸೆಪರೇಟಾ?’ -ಕೇಳುತ್ತಿದ್ದಾನೆ ಕೌಂಟರಿನ ಸಮವಸ್ತ್ರಧಾರೀ ಅಣ್ಣ. ಎರಡು ಇಡ್ಲಿ, ಒಂದು ಗರಿಗರಿ ವಡೆ, ಮೇಲೆ ಸುರಿದ ಕೆಂಪನೆ ಸಾಂಬಾರು ಈಗ ನಿಮ್ಮ ಕೈಯಲ್ಲಿದೆ. ಕುದಿಕುದಿ ನೀರಲ್ಲಿರುವ ಚಮಚವನ್ನು ತೆಗೆದುಕೊಂಡು, ತಟ್ಟೆಯನ್ನು ಎತ್ತರದ ಟೇಬಲ್ಲಿನ ಮೇಲಿಟ್ಟುಕೊಂಡು ಚೂರ್ಚೂರೇ ಮುರಿದು ಮೆಲ್ಲತೊಡಗಿದರೆ, ಚುರುಗುಟ್ಟುವ ಹೊಟ್ಟೆಯಿಂದಾಗಿ ಕ್ರುದ್ಧನಾಗಿದ್ದ ಪರಮಾತ್ಮ ನಿಧನಿಧಾನವಾಗಿ ಶಾಂತನಾಗುತ್ತಾನೆ. ಮೂಲೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಈ ಎಲ್ಲ ಚಟುವಟಿಕೆಗಳನ್ನು ದಾಖಲಿಸುತ್ತಾ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದೆ. 
 
[ಕನ್ನಡಪ್ರಭ ಯುಗಾದಿ ವಿಶೇಷಾಂಕ-2023ರಲ್ಲಿ ಪ್ರಕಟಿತ]

Monday, February 20, 2023

ಅನವರತ -ಒಂದು ನೀಳ್ಗವಿತೆ

[ಈ ನೀಳ್ಗವಿತೆ ಅಥವಾ ಸರಣಿ ಕವಿತೆಗಳು ಮೊಮ್ಮಗನ ನೋಟದಲ್ಲಿ ಬೆಳಗಿದ ಅಜ್ಜ-ಅಜ್ಜಿಯ ದಾಂಪತ್ಯಜೀವನದ ಕತೆಯಾಗಿದೆ. ಸುಮಾರು ಎರಡು ವರುಷಗೂಡಿ ಬರೆದು ಮುಗಿಸಿದ ಈ ನೀಳ್ಗವಿತೆ 2015ರಲ್ಲಿ ಚುಕ್ಕು-ಬುಕ್ಕುವಿನಲ್ಲಿ ಪ್ರಕಟವಾಗಿತ್ತು. ಆಗ ಚುಕ್ಕು-ಬುಕ್ಕುವಿಗೆ ಹಿರಿಯ ಕವಿ ಎಚ್ಚೆಸ್ವಿಯವರು ಸಂಪಾದಕರಾಗಿದ್ದರು. ರಘು ಅಪಾರ ಚಂದದ ಚಿತ್ರಗಳನ್ನು ಬಿಡಿಸಿದ್ದರು. ಈಗ ಚುಕ್ಕು-ಬುಕ್ಕು ಇಲ್ಲವಾದ್ದರಿಂದ, ದಾಖಲೆಗಿರಲಿ ಅಂತ, ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ಇದು ನಾನು ಕೇಳಿದ-ನೋಡಿದ ನನ್ನ ಅಜ್ಜ-ಅಜ್ಜಿಯರ ಕತೆಯೇ ಆಗಿದ್ದರೂ, ನನ್ನ ಬರೆಯುವ ಸ್ವಾತಂತ್ರ್ಯದಲ್ಲಿ ಮತ್ತು ಕಾವ್ಯಕ್ಕೆ ಒಗ್ಗಿಸುವ ಅನಿವಾರ್ಯತೆಯಲ್ಲಿ ಅಷ್ಟಿಷ್ಟು ಬದಲಾಗಿರುವ-ವರ್ಣಮಯವಾಗಿರುವ ಸಾಧ್ಯತೆ ಇರುವುದರಿಂದ, ಇದನ್ನು ಯಾರದೋ ಕಥೆ’ (work of fiction) ಎಂದೇ ಭಾವಿಸಿ ಓದಿಕೊಳ್ಳುವುದು ಸೂಕ್ತ.]

 

ಅನವರತ

ಸಂಜೆ ಕಟ್ಟೆಯ ಮೇಲೆ ಕುಳಿತರೆ
ಬರೀ ಇಂಥವೇ ಯೋಚನೆಗಳು
ಕಣ್ಣ ಗೊಂಬೆಗಳಿಗೇ ಬಂದು
ಮುತ್ತಿಕ್ಕುವ ಗುಂಗುರು ಹುಳಗಳು
ರೆಪ್ಪೆ ಆಡಿಸಿದರೆ ಸಾಕು,
ಗಾಭರಿಗೊಂಡು ಅತ್ತಿತ್ತ ಚೆದುರಿ
ಕ್ಷಣ ಅಷ್ಟೇ- ಮತ್ತೆ ಅದೇ ಆಟ;
ಥೋ, ಅಜ್ಜನಿಗೆ ಕಾಟ.
 
ಕವಳದ ತಬಕಿನಲ್ಲಿ ಹೊಗೆಸೊಪ್ಪು
ಖಾಲಿಯಾದರೆ ಮಾತ್ರ ಹತ್ತಿರ ಬರುತ್ತಾಳೆ ಮಡದಿ:
ಆಸೆ ಆಕೆಗೆ, ಸಂಚಿಯಲ್ಲಿರಬಹುದು ಅಂತ
ತಾಕುವ ಕೈಯ ಸುಕ್ಕುಗಳು ವಯಸ್ಸನ್ನು
ಮರೆಮಾಚುವುದಿಲ್ಲ. ಕನ್ನಡಕದ ಕಣ್ಣಲ್ಲಿ
ಕಾಲನ ಕಾಯುವುದು ಎಷ್ಟು ದುರ್ಬರ!
 
* * *
 
ಕಲ್ಲಿ ತುಂಬ ತುಂಬಿಕೊಂಡ ಅಡಕೆಯ ಕೊನೆ ಹೊತ್ತು
ತೋಟದ ಧರೆ ಏರುವಾಗ ಏದುಸಿರು..
ಲಂಗದಾವಣಿಯ ಶೆಟ್ಟರ ಹುಡುಗಿ
ಸಣ್ ಹೆಗಡೇರ ನೋಡಿ ನಕ್ಕರೆ ಪುಳಕ
ಸುಸ್ತಾಗಿ ಮೈಬೆವರಿ ನೀರು ಕುಡಿವಾಗ
ಅಮ್ಮ ಕೊಟ್ಟ ಬೆಲ್ಲದ ಚೂರನ್ನು ಅವಳಿಗೂ
ಕೊಟ್ಟರೆ ಮುಚ್ಚಿಟ್ಟು, ಓರೆಗಣ್ಣಲ್ಲೇ ಗಮನಿಸಿದ
ಅಪ್ಪನಿಗೆ ಮಗ ದಾರಿ ತಪ್ಪುವ ಆತಂಕ
 
ಮರಳ ಮೇಲೆ ಬರೆಸಿದ ಅಕ್ಷರಗಳು
ತಲೆಗೆ ಹತ್ತಲಿಲ್ಲ
ಮುರಳಿ-ರಾಧೆಯರ ಭಾಗವತ
ತರಲೆ ಆಲೋಚನೆಗಳಿಗೆ ಕೊಂಕಾಯ್ತು
ಮರುಳು ಮಾಡುವ ಹದವಯಸಿನಲ್ಲಿ
ತರಳೆಯರಷ್ಟೇ ಬರುವ ಕನಸುಗಳು
 
ಬಯಕೆಬಿಂಬದ ಲಕ್ಷಣದಂತೆ ಮೊದಲ ಮೊಡವೆ
ಇನ್ನೂ ಮುಗಿಯದ ಯವ್ವನದ ಅಪ್ಪ-ಅಮ್ಮರ
ಕೋಣೆಯಿಂದ ಬರುವ ಸದ್ದು ಕೇಳಿ ಮೈಬಿಸಿಯೇರಿ...
ಅಡಕೆ ಕೊನೆ ಹೊತ್ತಷ್ಟು ಸುಲಭವಲ್ಲ
ಸಂಸಾರ ಹೊರುವುದು ಎಂಬ ಅರಿವು ಆದದ್ದು
ಎಷ್ಟು ತಡವಾಗಿ!
 
ಶುಭದಿನ ಮುಹೂರ್ತಗಳು ಸ್ವರ್ಗದಲ್ಲೇ ನಿಗದಿ-
ಯಾಗಿರುತ್ತವಂತೆ. ಋಣಾನುಬಂಧದ ಎಳೆ
ಎಲ್ಲೆಲ್ಲಿಗೋ ಎಳೆದೊಯ್ಯುತ್ತದಂತೆ. ನೆಂಟಸ್ಥನದ
ಪ್ರಸ್ತಾಪ ಹಿಡಿದು ಬಂದವರ್ಯಾರು?
ಜಾತಕಗಳ ಮನೆಯಲ್ಲಿ ಹೊಂದಾಣಿಕೆ ಕಂಡ
ಪುರೋಹಿತರ್ಯಾರು?
 
ಅಕೋ, ಆಗಲೇ ಓಲಗದ ಸದ್ದು!
ನಿಶ್ಚಿತಾರ್ಥದ ದಿನ ನೋಡಿದ್ದ ಕಣ್ಣುಗಳೇ
ಇರುವುದೇ ಆಚೆ ಕಡೆ ನೆಲ ನಿರುಕಿಸುತ?
ಅದ್ಯಾವಾಗ ಸರಿಯುವುದು ಈ ಪರದೆ?
ಯಾಕೆ ಸುಮುಹೂರ್ತೇ ಸಾವಧಾನ?
ಯಾರೀ ನಾಟಕದ ಸೂತ್ರಧಾರ?
 
* * *
 
ಕೆಂಪು ಲಂಗದ ಹುಡುಗಿಗೆ
ಕೌಳಿಹಣ್ಣಿನ ಮೇಲೆ ವ್ಯಾಮೋಹ
ಎತ್ತುಗಲ್ಲಾಡಲಿಕ್ಕೆ ನಿಮ್ಮೂರಲ್ಲೂ ಗೆಳತಿಯರು
ಮೇಲೆ ಹಾರಿದ ಕಲ್ಲು
ಕೆಳಗಿಳಿಯುವುದರೊಳಗೆ
ಚಿಗುರು ಬೆರಳುಗಳ ಮುಷ್ಟಿಯಲ್ಲಿ.
ಆಟಕ್ಕೆ ಬಂದರೆ ಗಂಡನ ಮೇಲೂ ಹುಂಡಿ!
 
ಇಳಕಲ್ಲೋ ಬಿಳಕಲ್ಲೋ-
ಸೀರೆಯಂತೂ ಮಾರು ಉದ್ದವಿತ್ತು
ಸುತ್ತಿ ಸುತ್ತಿ ಸುತ್ತಿ
ಮಡಿಚಿ ಮಡಿಚಿ ಮಡಿಚಿ
ಸಿಕ್ಕಿಸುವಾಗ ಸೊಂಟಕ್ಕೆ ಇನ್ನೂ
ನಾಚಿಕೆಯೂ ಆಗದ ವಯಸು
ಕಚಗುಳಿಗೇ ಅರಳಿ ಮನಸು.
 
ತಾಳಿ ಕಟ್ಟಿಸಿಕೊಂಡದ್ದೂ ಒಂದು ಆಟ
ಧಾರೆ ಎರೆಸಿಕೊಂಡದ್ದೂ ಒಂದು ಆಟ
ಎತ್ತಿನ ಗಾಡಿಯಲ್ಲಿ ಮುಚ್ಚಿದ ಸೆರಗಲಿ
ದಿಬ್ಬಣ ದಾಂಗುಡಿ ಕುಲುಕಾಟದಲ್ಲಿ
ಅಷ್ಟು ದೂರದ ನಿಮ್ಮೂರಿಗೆ ಬಂದದ್ದೂ ಒಂದು ಮಜ
ಕಷ್ಟವೆನಿಸಿದ್ದು, ತರಕಾರಿ ಹೆಚ್ಚಿಕೊಡು ಅಂತ
ಅತ್ತೆ ಕೇಳಿದಾಗ; ಬಳಿದಂಗಳದಲ್ಲಿ
ತಪ್ಪಿ ಹೋಗುವ ಚುಕ್ಕಿಗಳನು ಸರೀ
ಇಟ್ಟು ರಂಗೋಲಿ ಹಾಕುವಾಗ ಮಾತ್ರ.
 
ಗೆಳತಿಯರಿಗೂ ಗೊತ್ತಿರಲಿಲ್ಲ ಹೆಣ್ತನದ ಗುಟ್ಟು
ಅಮ್ಮನನ್ನು ಕೇಳಲು ಹಿಂಜರಿಕೆ; ಅಪ್ಪ ಬಿಡಿ, ಗಂಡಸು.
ನಾನೇ ನೋಡಿಕೊಂಡಿರಲಿಲ್ಲ ನನ್ನ ಮೈ ಸರಿಯಾಗಿ
ಎಲ್ಲಿ ಏರು? ಎಲ್ಲಿ ತಗ್ಗು? ಅಲ್ಲ, ಅಲ್ಲಲ್ಲೇ ಯಾಕೆ?
ನೀವೇ ತೋರಿಸಿದಿರಿ. ಸದ್ದುಗಳನ್ನು ತಡೆಯಲು
ಇಳಿಬಿಟ್ಟ ಕಂಬಳಿಯೇನು ಗಾಜಿನ ಗೋಡೆಯೇ?
ಕತ್ತಲೆಯಲ್ಲೂ ನಾಚಿದ್ದು, ಏದುಸಿರಲ್ಲೂ ಅತ್ತಿದ್ದು,
ಆಚೆ ಮಲಗಿರುವವರಿಗೆ ಕೇಳಿಸೀತೆಂದು ಭಯ ಪಟ್ಟದ್ದು
ನಿಮಗೆ ಕೊನೆಗೂ ತಿಳಿಯಲಿಲ್ಲ. ಬೆವರಿನ ವಾಸನೆಗೆ
ಹಿಂದೆ ಸರಿಯುವ ಸಮಯವೋ ಪ್ರಾಯವೋ ಅದಲ್ಲವಲ್ಲ?
 
ಕೂಡುಸಂಸಾರದ ಬೀಸುಗಲ್ಲಿನಲ್ಲಿ ಅರೆದ ಅಕ್ಕಿಯ
ಲೆಕ್ಕವಾದರೂ ಸಿಕ್ಕೀತು, ಸವೆದ ಕೈಯದಲ್ಲ.
ಹೆಪ್ಪು ಹಾಕಿಟ್ಟ ಹಾಲು ಮೊಸರಾಗದಿದ್ದರೂ ಹೊಣೆ ನಾನೇ
ಮಣೆಮೇಲೆ ಹರಿದ ಗೆದ್ದಲಿಗೂ ಕಾರಣ ಕಿರಿಸೊಸೆಯೇ.
ಹಿತ್ತಿಲ ಕಟ್ಟೆಯ ಚಳಿಗೆ ಎರಡು ಗೋಣಿಚೀಲ ಸಾಕಾಗಲಿಲ್ಲ
ಇಸಪೀಟು ವಾಲೆಗಳಿಂದ ಕಣ್ಣೂ ಕೀಲಿಸದೆ ಕಷಾಯ
ಕುಡಿವಾಗ ನಿಮಗೆ ಈ ಪಾಂಶುಲೆಯ ನೆನಪೇ ಆಗಲಿಲ್ಲ
 
ಹಡೆದ ಮಕ್ಕಳಿಗೆಲ್ಲ ನೀವು ಹೆಸರಿಟ್ಟಿರಿ
ಸಂಜೆ ಭಜನೆಯ ಗಳಿಗೆಯಲೂ ಕೈಹಿಡಿದೆಳೆದು
ಮುಜುಗರ ತಂದಿರಿ.  ಬಚ್ಚಲ ತಟ್ಟಿ ಎತ್ತರಿಸಿಕೊಡಿ
ಎಂದರೆ ನನ್ನಣ್ಣನ ಮೇಲೇ ಅನುಮಾನವಾ?
ಅಂತ ಕೈ ಮಾಡಿದಿರಿ. ಹೆಣ್ತದ ಗುಟ್ಟು ತಿಳಿಯುವಷ್ಟರಲ್ಲಿ
ನಾವೆಲ್ಲ ಗೆಳತಿಯರು ಗರತಿಯರಾಗಿದ್ದೆವು.
 
ಆದರೂ ದೇವರ ನೈವೇದ್ಯದ ಪಂಚಾಮೃತ
ಒಬ್ಬಳೇ ಕದ್ದು ಕುಡಿವಾಗ ಕೆಟ್ಟ ಖುಷಿ.
ಎದೆಭಾರ ಇಳಿವ ಮುನ್ನವೇ ಮತ್ತೆ ಗರ್ಭಭಾರ,
ಆದರೂ ಈ ಓಕರಿಕೆಯಲ್ಲಿದೆಂತ ಹಿಗ್ಗು?
ತವರಿಂದ ಕಳಿಸಿದ ಅಣ್ಣ ಹಬ್ಬ ಕರೆಯಲು ಬಂದನೇನೇ?
ಸಂಭ್ರಮದ ಹಾಡನ್ನು ಮನದಲ್ಲೆ ಗುನುಗಿದೆನೇನೆ?
 
* * *
 
ಆಟದ ಕರೆಗಳು ಮುಗಿವುದರೊಳಗೇ ಪೇಟೆಯ ಕರೆ ಬಂತು
ಆಲಾಪದ ಜೋಂಪಳಿವುದರೊಳಗೇ ಕೀರ್ತನೆ ಕೊನೆಯಾಯ್ತು
 
ಎಡವಿದ ಕಲ್ಲನು ನೋಡುತ ನಡೆದರೆ ಎದುರಿಗೆ ಹೆಬ್ಬಂಡೆ
ಕಡಲಿನ ಅಬ್ಬರ ತಣಿವುದರೊಳಗೇ ಪೂರ್ಣಿಮೆ ಬಂದಂತೆ
 
ಗುಲಾಬಿಯೆಂಬುದು ಬರಿ ಹೂವಲ್ಲ, ಪರಿಮಳ ರೂಪಿತ ಬಣ್ಣ
ತೇರಿನ ಹಗ್ಗದ ಬುಡದಲೇ ಇರುವುದು ಎಳೆಯುವ ತಾಕತ್ತಿನ ಮರ್ಮ
 
ಭೃಂಗಾಮಲಕದ ತೈಲದ ಶೆಟ್ಟಿಗು ಮಂಡಿಯ ನೋವಂತೆ
ಶೃಂಗಾರದ ಪದ ಲೋಲುಪತೆಯಲೇ ಮುಗಿದ ಪ್ರಾಯಸಂತೆ
 
ಪಾಠಗಳೇನೋ ಬಹಳವಿದ್ದವು ಕಲಿಯಲೇ ಒಲವಿರಲಿಲ್ಲ
ದಾಟಿದ ಮೇಲೆ ಸಂತೆಯ ಅಂಗಡಿ ಮತ್ತೆ ಕರೆಯಿತಲ್ಲ!
 
* * *
 
ಪುಕಾರು ಹೇಳುವವಳು ಹೊರಗಿನವಳು; ಕೇಳುವವಳು ಒಳಗಿನವಳು
ಇಬ್ಬರೂ ನನ್ನೊಳಗೇ.
ಇನ್ಯಾರಿದ್ದರು ಅಲ್ಲಿ ಹೇಳಲು, ಕೇಳಲು?
ಸಣ್ಣ ಸಾಸಿವೆ ಡಬ್ಬದಲ್ಲಿ ಕಾಸು ಕಾಣೆಯಾದರೂ
ನಿಮ್ಮ ಶರಟಿನ ಜೇಬಿನೊಳಗೆ ಕೈ ಹಾಕಲಿಲ್ಲ.
ಪ್ರಶ್ನೆಗಳನ್ನೇನು ಗಟ್ಟಿ ಕೇಳಲಿಲ್ಲ
ಬಡಿಸಿದೆ ಬಿಳಿಯಗುಳುಗಳ ಬಂದವರಿಗೆಲ್ಲ.
ಪಾತ್ರೆಯ ತಳ ಬಳುಗುವಾಗಿನ ಸದ್ದು
ಆ ಹೋ ನಗೆಗಳಬ್ಬರದ ನಡುವೆ ನಿಮಗೆಲ್ಲಿ ಕೇಳೀತು?
 
ಸೂಕ್ಷ್ಮಜತೆಯ ಸಹನೆಯ ತಾಳುವಿಕೆಯ ಕಟ್ಟೆ
ಒಡೆದ ದಿನ ನಾನು ಜಗಜಟ್ಟಿಯಾದೆ.
ಊರ ಲೋಲುಪರ ಜೊಲ್ಲಸೊಲ್ಲುಗಳು ನನ್ನ ಕೆಂಗಣ್ಣಿಗೆ ಹೆದರಿದವು.
ಕಾಲು ಕೆರೆಯುವರ ಶಿಳ್ಳೆ ಸದ್ದುಗಳು ನನ್ನ ಬಾಯ್ಮುಂದೆ ಮುಗ್ಗುಮ್ಮಾದವು.
ನೀರು ಕುದಿಯುತಿದ್ದರೂ ಅಷ್ಟೇ, ಅತಿಶೀತವಾದರೂ ಅಷ್ಟೇ:
ಜನ ಮುಟ್ಟಲು ಹೆದರುತ್ತಾರೆ.
 
* * *
 
ಇಲ್ಲೇ ಇದ್ದೀನಿ, ಹುಡುಕಲು ಬಾಪ್ಪಾ -ಕರೆದರು ಹುಡುಗರು.
ಯಾಕೋ ಕಂಬವನ್ನು ಬಿಟ್ಟು ಹೋಗುವ ಮನಸೇ ಆಗಲಿಲ್ಲ.
ಕಣ್ಮುಚ್ಚಿದರೆ ಕಾಡು ಗೂಡು ಉದ್ದಿನ ಮೂಟೆ...
ತೆರೆದರೆ- ಹರಿದ ಜೋಡು, ಕುಸಿದ ಮಾಡು, ಖಾಲಿ ಸಿಲಾವರದ ತಟ್ಟೆ.
ಮುಖವೊತ್ತಿಹಿಡಿದೆ ಕಂಬಕೆ.
ಜೂಟ್ ಹೇಳಿ ಎಷ್ಟೊತ್ತು ಆಯ್ತಪ್ಪಾ,
ಹುಡುಕೋಕೆ ಬಾರಪ್ಪಾ.. ಮತ್ತದೋ ಆಟಕ್ಕೆ ಕರೆ.
ಕದಲಲಿಲ್ಲ.
ಹೊರಡಬೇಕಿತ್ತು, ನಿಜ: ಹುಡುಕಿ ದುಡಿಮೆಯ ದಾರಿ,
ತರಬೇಕಿತ್ತು ಒಲುಮೆಯೊಡತಿಗೆ ಒಂದು ಪದುಳದ ಸೀರೆ,
ಎತ್ತಿ ನಿಲ್ಲಿಸಬೇಕಿತ್ತು ವಾಲಿದ ತೊಲೆಗೆ ಕೊಟ್ಟು ಕವಲು.
ಊಹೂಂ, ಕಂಬ ಬಳಸಿ ನಿಂತುಬಿಟ್ಟೆ ಅಳುತ್ತ, ಹೇಡಿಯಂತೆ.
ಅದೂ ಮುಗಿದ ದಿನ ಕಂಬವನ್ನೇ ಕಿತ್ತು ಮಾರಿ
ನನ್ನ ಬೀಡಿಗೆ ಬೆಂಕಿಪೊಟ್ಟಣ ಕೊಂಡುಕೊಂಡೆ.
 
* * *
 
ಗದ್ದವನ್ನೊತ್ತಿ ಹಿಡಿದು ಹೇಳಿದಳು
ಮುದ್ದುಮಗಳು: ನೋಯುತಿರುವೀ ಹಲ್ಲು
ಕಿತ್ತು ಹಾಕಿಬಿಡಬೇಕಿನಿಸುತಿದೆ.
ಎಷ್ಟು ಸುಲಭವಿತ್ತು ಹಾಗಿದ್ದಿದ್ದರೆ!
ನೋವು ಕಾಣಿಸಿಕೊಂಡಾಕ್ಷಣ ಒಂದಿಕ್ಕಳದಿಂದೆಳೆದು
ಕಿತ್ತೆಸೆದು, ಎರಡು ಗಳಿಗೆ ನೋವು; ಆಮೇಲೆ ನಿರಾಳ.
ಆದರೆ ಇಲ್ಲಿ ಹಾಗಲ್ಲ: ಹುಳುಕುಗಳನು ಮುಚ್ಚಿಡಬೇಕು
ಬೆಳ್ಳಿ ತುಂಬಿಸಿ, ಬೇಗಡೆ ಹಾಕಿಸಿ, ಕುಳಿಗಳನೆಲ್ಲ
ಸಪಾಟು ಮಾಡಿ, ನೋಡುವವರ ಕಣ್ಣಿಗೆ ಅಂದ ಸಾಲು
ಕರಕಲಾಗಿದ್ದರೂ ಹೊತ್ತಿ ತಳ, ಮೇಲೆ ಬಿಳಿಯೆ ಹಾಲು
 
ಹೇಳಿದೆ: ಮಗಳೇ, ಕಿತ್ತೊಗೆಯುವ ಆಯ್ಕೆ ನಿನ್ನ ಕಾಲದಲ್ಲಿರಲಿ
ಹಾರೈಸಿದೆ, ಉತ್ತುಂಗದ ದಿಕ್ಕೇ ನಿನ್ನ ಕಾಲುದಾರಿಯಾಗಿರಲಿ.
 
* * *
 
ಧಾರೆಯೆರೆದ ಜನಕಾ.. ಜಾನಕಿಯನು..
ಮುಷ್ಟಿಯಕ್ಕಿಯನು ಹೊಯ್ವಾಗ ಹಿಂದೆರೆಯಲಿ ಹಾಡು.
ಯಾರೋ ಕಾರು ಕಳುಹಿಸಿದರು. ಮತ್ಯಾರೋ ಅಕ್ಕಿಮೂಟೆ ಕೊಟ್ಟರು.
ಮಗ ಕರೆ ಕಳುಹಿಸಿದ್ದ, ನಿನ್ನ ಮಗಳ ಮದುವೆ, ಬಾ ಎಂದು.
ತಲೆಗೆ ಯಾರೋ ಪೇಟ ಸುತ್ತಿದರು. ಮಡಿಶಲ್ಯ ಹೊದ್ದು ನಿಂತು
ಬೀಗರೋಪಚಾರದಲಿ ಪಾಲ್ಗೊಂಡು ತಂದೆತನದಲಿ ಬೀಗಿದೆ.
ಹೊರಟು ನಿಂತ ಮಗಳು ಕಾಲ್ಮುಟ್ಟಿ ಎದ್ದು ನಿಂತಾಗ
ನನ್ನ ತುಂಬಿದ ಕಣ್ಗಳೆಡೆಗೆ ಅದೆಂತಹ ತಿರಸ್ಕಾರ!
ಹೇಳುವವಳಂತೆ ಉರಿವ್ಯಂಗ್ಯದಲೆ ದೊಡ್ಡ ನಮಸ್ಕಾರ!
 
ಜನಕನಾದರೆ ಆಗಲಿಲ್ಲವೋ ಸೀತೆಗೆ ತಂದೆಯೂ ಆಗಬೇಕು
ಸೀರೆಯುಟ್ಟ ಮಗಳ ಹತ್ತು ಸಮಸ್ತರ ನಡುವೆ ನಿಲ್ಲಿಸಿ
ವಿಜ್ರಂಭಿಸಬೇಕು ಸ್ವಯಂವರವ ಕಲ್ಪಿಸಿ. ಸುತ್ತ ಹತ್ತೂರ
ದೊರೆಗಳಿಗೆ ಕಳುಹಿಸಿ ಕರೆಯೋಲೆ, ಸಿಂಗರಿಸಿ ಅರಮನೆ ಕಟ್ಟಿ ತೋರಣ
ಓಲಗವೂದಿಸಿ ಭಾಜಾಭಜಂತ್ರಿ ಬಾರಿಸಿ ವಿವಾಹದೌತಣವಿದು
ವಿಚಿತ್ರ ಭಕ್ಷಗಳಿವು ಅಹಹ್ಹಹಹ್ಹಹಾ ಎಂದು ಜನ ತಲೆ-
ದೂಗುವಂತೆ, ಮೆರೆದು ರೇಶ್ಮೆಯುಡುಗೆಯಲಿ, ಬೀಗನಾಗಿ ಬೀಗಿ.
 
ಆಗಲೇ ಜಾನಕಿ ಅಳುವಳು ಕುಂಕುಮಸೌಭಾಗ್ಯವತಿಯರ ಹಾಡಿಗೆ;
ನೆನೆದು ತವರ ಸುಖ, ಬೆಳೆದ ಮನೆ, ಬೆಳೆಸಿದವರ- ಕೈಯೊಡ್ಡುವ ಮುನ್ನ ಧಾರೆಗೆ.
 
* * *
 
ಸುಮ್ಮನೆ ಕೂತು ಜಡೆ ಹೆಣೆಸಿಕೊಳ್ಳುತ್ತಿದ್ದ ಮಗಳು
ಇವತ್ತು, ಎದ್ದು ಹಿಂದಿನಿಂದ ಬಂದು
ತಾನೇ ಚುಕ್ಕಾಣಿ ಹಿಡಿದು ನಿಂತಳು!
ಇದೇನೇ ಅಮ್ಮಾ ಇಷ್ಟೊಂದುದುರುವ ಕೂದಲು!
-ಉದ್ಘರಿಸಿದಳು. ಬಿಳಿಯ ಕೂದಲೊಂದ
ಹಿಡಿದೆಳೆದು ಅಮ್ಮನಿಗೆ ವಯಸ್ಸಾಯಿತು
ಎಂದು ತೀರ್ಮಾನ ಕೊಟ್ಟಳು.
 
ಹಿರಿಮಗಳ ಕೂಸು ಅಜ್ಜೀ ಎಂದು ಕರೆದುದು
ಕರ್ಣಾನುರಣನವಾಯ್ತು. ಇನ್ನೇನು ಬರಲಿರುವ ಸೊಸೆಗೆ
ಅಂಕುಶವ ಒಪ್ಪಿಸುವ ಭಯದಲ್ಲಿ ಕಂಪಿಸಿದೆ.
ಅಮ್ಮಾ, ಅವರ ಮನೆಯಲ್ಲೊಪ್ಪಿದರು ಎಂದ ಮಗನ
ಇಷ್ಟೆತ್ತರ ಕಣ್ತುಂಬ ನೋಡಿದೆ.
ನಾನನುಭವಿಸಿದ ಕಷ್ಟಗಳು ಹೊಸಹೆಣ್ಣಿಗೆ
ಸೋಂಕದಂತಿರಲು ನಿರ್ಧರಿಸಿದೆ. ಸಂತೆಯಿಂದೊಂದು
ಚೌರಿ ತಂದು ಧರಿಸಿ ಕನ್ನಡಿಯಲ್ಲೊಮ್ಮೆ ನೋಡಿಕೊಂಡೆ.
 
* * *
 
ಜಗಲಿಯಲ್ಲೇ ಒಂದು ಕೋಣೆಯಾಯಿತು.
ಸೋಗೆಯ ಮನೆಗೊಂದು ಹಂಚಿನ ಮಾಡು ಬಂತು.
ಮಗ ತೆಗೆಸಿದ ಹೊಸ ಬಾವಿಯ ಹೊಸ ನೀರ
ಮೊಗೆಮೊಗೆದು ಹಂಡೆಯಿಂದ ಹೊಯ್ದುಕೊಳ್ಳುವಾಗ
ಇದ್ಯಾಕೋ ನನ್ನದಲ್ಲ ನನ್ನದಲ್ಲ ಎಂಬ ಭಾವ..
ನಮ್ಮದೆಂದುಕೊಂಡದ್ದೆಂತದ್ದನ್ನೋ ಯಾರೋ ಕಿತ್ತುಕೊಂಡ ಹಾಗೆ.
ಬಚ್ಚಲೊಲೆಯಿಂದೆದ್ದ ಹೊಗೆ ಸೋಕಿ ಕಣ್ಣೀರು.
ಸ್ನಾನ ಮುಗಿದರೂ ಹೊರಬರಲು ಹಿಂಜರಿಕೆ.
 
ಕನಿಷ್ಟ ಹೊಸ ಸೊಸೆಯೆದುರು ಮಗನಿಂದ
ಬೈಸಿಕೊಳ್ಳದಷ್ಟು ಗೌರವ ಯಜಮಾನ
ಉಳಿಸಿಕೊಂಡಿರಬೇಕು -ಹೊತ್ತುಗೊತ್ತಿಲ್ಲದೆ ನೆನಪಾಗುವ
ಎಂದೋ ಕೇಳಿದ ವೇದವಾಕ್ಯಗಳು.
ಸಾಕು, ಒಂದು ತಾಸಾತು ಸ್ನಾನ ಮಾಡ್ತಾ -ಗುರುಗುಡುವ ಹೆಂಡತಿ.
ಯಾಜಮಾನ್ಯ ಕಳೆದುಕೊಂಡು ಕಾಲವೇ ಆಗಿತ್ತು;
ಇನ್ನುಳಿದದ್ದು ತಂದೆತನ ಅಷ್ಟೇ.
ಕರ್ತವ್ಯಗಳ ಅನಿವಾರ್ಯ ನಿರ್ವಹಣೆಗೆ ನಿಂತ ಅವರು-
ಮತ್ತು ನಾನು.
 
ಹಾಗೂ-
ಎದ್ದು ಜಾಡಿಸಿಬಿಡಬೆಕು ಒಮ್ಮೆ ಎಂಬ,
ಆಗೀಗ ಏಳುವ ಉನ್ಮಾದ.
ಅರೆ, ಈ ಮನೆಯಲ್ಲಿ ನಾನು ಸ್ವತಂತ್ರವಾಗಿ ಸ್ನಾನ
ಮಾಡೋ ಹಾಗೂ ಇಲ್ವಾ?
ಈ ಮನೆಯಲ್ಲಿ ನನಗೂ ಹಕ್ಕಿದೆ
ಈ ಈ ಈ ಇವಕ್ಕೆಲ್ಲ ನಾನೇ ಕಾರಣ,
ನಾನಿಲ್ಲದೇ ಹೋಗಿದ್ರೆ ನೀವೆಲ್ಲ ನೀವೆಲ್ಲ..
ಈ ಮನೆ ಕೂಳು ಬ್ಯಾಡ, ನಾನು ಈಗಲೇ ಹೊರಟೆ
ಭುಗಿಲೇಳುವ ಆಕ್ರೋಶದ ಜ್ವಾಲೆಗಳು
ಬೆನ್ನಲ್ಲೇ ತಣ್ಣಗಾಗಿಸುವ ಅಸಹಾಯಕತೆಯ ಅಲೆಗಳು
ಪರಿತಾಪದ ನಿಖರ ಹಿರಿಮಲೆಗಳು.
 
ನಗರದ ದಾರಿ ಹಿಡಿದು ಹೊರಟೆ.
 
* * *
 
ಈಗ ಪ್ರತಿ ಆಶಾಢಕ್ಕೊಮ್ಮೆ ಬರುತ್ತಾರೆ ಇವರು
ಮಂಡೆ ಹಣ್ಣಾದಜ್ಜನ ಬಳಿ ಮೊಮ್ಮಗ ಬೆರಗಿಲೆ ಸುಳಿವಾಗ
ಸವೆದ ಹಾದಿಬದಿಯ ಝರಿಗಳ ಉಮ್ಮಳದ ನೆನಪು
ಬಳೆಗಾರನೋ ಪ್ರತಿ ಹಬ್ಬಕ್ಕೂ ಬರುತ್ತಾನೆ
ಕೇಳುತ್ತಾನೆ: ಹಳತಾಗಿವೆ ಬಳೆಗಳು, ಇಡಲೇ ಅಮ್ಮಾ ಹೊಸದು?
ಮಗ ಕೇಳಿದ್ದು ಕೊಡಿಸುತ್ತಾನೆ, ಸೊಸೆಯದೂ ಒತ್ತಾಯ
ಹೇಳುವೆ ಚೆನ್ನಯ್ಯನಿಗಿನಿದನಿಯಲ್ಲೇ, ಬೇಡ ಮಾರಾಯ ಆ ಸರಭರ
ಮನವೇ ಕುಣಿಯದು, ಇನ್ನು ಘಲ್ ಘಲ್ ಏಕೆ?
 
ಅಣ್ಣ ದಮ್ಮಿನ ಖಾಯಿಲೆ ಹಿಡಿದು ಹೊರಟುಹೋದ
ಸುದ್ದಿ ಬಂತು. ನೋಡಿಕೊಂಡು ಬರಲು ಹೋಗಿದ್ದೆ.
ಶೋಕಕ್ಕೂ ಹೆಚ್ಚು ನಿಟ್ಟುಸಿರು. ಮೊಮ್ಮಗನ ಕೈ ಹಿಡಿದು ತವರ
ಬಳ್ಳಿಯ ನೆನಪು ಮಾಡಿಕೊಂಡೆ:
 
ನೋಡೋ ಪೋರ, ಇಗೋ ಈ ಮನೆಯಿದೆಯಲ್ಲ, ಇಲ್ಲೊಂದು ನೇರಳೆ ಮರವಿತ್ತು
ಅಣ್ಣ ಮರವೇರಿ ಗಲಗಲ ಅಲುಗಿಸಿದರೆ ಹೆರೆ, ನೀಲಿಮಳೆ
ರಾಮಶೆಟ್ಟಿಯ ಮನೆಯಂಗಳದಲ್ಲಿ ಯಾವಾಗಲೂ ಒಣಗುತಿರುತಿತ್ತು ವಾಟೆಸಿಪ್ಪೆ
ಪುಟ್ಟಮ್ಮಿ ಕದ್ದೆತ್ತಿಕೊಂಡರೆ ಅವನದು ಸುಳ್ಳೇ ಗದರಿಕೆ.
ದನಕಾಯುವ ಮರಿಯನ ಮನೆಯಿದ್ದದ್ದು ಇಲ್ಲೇ
ಪೆಟ್ಲು ಮಾಡಿಕೊಟ್ಟದ್ದಲ್ಲದೆ ಪೆಟ್ಲಕಾಯಿಗಳನ್ನೂ ತಂದುಕೊಟ್ಟಿದ್ದ.
ನಮ್ಮನೆಯ ಮೇಲ್ಮೆತ್ತಿನಲ್ಲಿ ಭೂತವಿದೆ ಅಂತ ಹೆದರಿಸಿದ್ದರು:
ಒಮ್ಮೆ ಮಾತ್ರ, ಬೆಕ್ಕು ಹಾಕಿಕೊಂಡ ಮರಿ ನೋಡಲು ಹೋದದ್ದು ಅಷ್ಟೇ.
 
ಫಲಾಪೇಕ್ಷೆಯಿಲ್ಲದೆ ಪ್ರೀತಿ ಕೊಟ್ಟಿದ್ದು ತವರು
ಪ್ರತಿ ಸಂಕ್ರಾತಿಗೆ ಬರುತ್ತಿದ್ದೆ ಅಮ್ಮನಿಗೆ ಬಾಗಿನವರ್ಪಿಸಲು
ಅಪ್ಪನ ಬೀಡಿಯ ಹೊಗೆಯಾಡುವವರೆಗೂ ಇರುತ್ತಿತ್ತು ಆಗಾಗ ಭೇಟಿ
ಅಣ್ಣನ ಮರಣದೊಂದಿಗೆ ತವರ ಬಂಧವೂ ಮುಗಿಯಿತು
ಮನದ ತೆರವು ಮತ್ತೂ ವಿಶಾಲವಾಯಿತು.
 
* * *
 
ಮೊಮ್ಮಗ ಬರೆದ ಪತ್ರವನ್ನೋದುವುದು ಎಂದರೆ ನನಗೆ
ಎಲ್ಲಿಲ್ಲದ ಪ್ರೀತಿ. ಪುಟ್ಟ ಬೆರಳುಗಳ ನಡುವೆಯಿಟ್ಟುಕೊಂಡ
ಪುಟ್ಟ ಪೆನ್ನಿನಿಂದ ಬರೆದ ಒತ್ತೊತ್ತೊಕ್ಷರಗಳಲ್ಲಿ ಅದೆಂಥ ಮುಗ್ಧತೆ!
ಮಧ್ಯರಾತ್ರಿಯಲ್ಲಿ ಎದ್ದು ಕೂತು ಮತ್ತೆ ಓದಬೇಕೆನಿಸುತ್ತೆ.
ಉಕ್ಕಿ ಬರುತ್ತದೆ ಮುದ್ದು. ಕಣ್ಣಿಂದ ಸುಮ್ಮನೆ ನೀರು.
ಅಜ್ಜಾ ನೀನ್ಯಾವಾಗ ಬರುತ್ತೀ? ಅಲ್ಲೇನು ಮಾಡುತ್ತೀ?
ದನ ಚೊಚ್ಚಿಲು ಕರ ಹಾಕಿದೆ ಗೊತ್ತೇ? ಗಿಣ್ಣಹಾಲು ಕುಡಿಯಲು ಬಾ..
 
ಹೌದಲ್ಲಾ, ಗಿಣ್ಣಹಾಲು ಕುಡಿಯದೇ ಅದ್ಯಾವ ಕಾಲವಾಯಿತು
ದೊಡ್ಡ ಮಗಳ ಮಗಳು, ಅವಳ ಹೆಸರೇನಾಯಿತು, ನೋಡಿದ್ದೇ ಮರೆತುಹೋಗಿದೆ
ಏನಾಗಿದೆ ಊರು? ಪಾಪಣ್ಣ, ಪುಟ್ಟಣ್ಣ, ಗುಂಡಣ್ಣ, ಮಂಜಣ್ಣ?
ಇದ್ಯಾವ ಹಟ ನನಗೆ? ಏನಿದೆ ಇಲ್ಲಿಯೇ ಕಾಲ ನೂಕುವ ಜರೂರತ್ತು?
ಸಂಸಾರ ವ್ಯಾಮೋಹಕ್ಕಿಂತ ಹೆಚ್ಚೇ ಅಪರಿಚಿತರ ನಡುವಿನ ಪ್ರೀತಿ?
ತೊಡರನೆಲ್ಲ ತೊರೆದು ಬಂದರೂ ಸಿಗದಲ್ಲ ಇದಕ್ಕೆ ವಿಮುಕ್ತಿ..
 
ಇತ್ತೀಚಿಗೆ ಮಂಡಿನೋವು ಜಾಸ್ತಿ.
ರಸ್ತೆ ದಾಟುವಾಗ ನಡುಗುವ ಕಾಲು.
ಸಣ್ಣಕ್ಷರಗಳನ್ನೋದುವಾಗ ಮಂಜು ಕಣ್ಣು.
ಆಗಾಗ ಝಲ್ಲೆನ್ನುವ ಎದೆ.
ಹಾಳು ಮರೆವು. ಏನೋ ಮಂಕು.
 
* * *
 
ತೋಟದ ಕಾದಿಗೆಯಲ್ಲಿ ಕಾಲಿಟ್ಟು ಕೂತಿದ್ದೇನೆ
ಕಾಲಿನಿಂದೇರಿ ತುಂಬಿಕೊಳ್ಳುತ್ತದೆ ಪಾದರಸದಂತೆ
ಪಕ್ಕಿರವಗಳ ನಡುವಿನ ನೀರ ಹಾಡು ಮನದ ನೀರವವ
 
ತಂಗಿಗೆಂದು ವರ ಹುಡುಕುತ್ತಿದ್ದಾನೆ ಮಗ.
ಇವರಿದ್ದಿದ್ದರೆ.. ಎಂಬ ನಿಡುಸುಯ್ಲು ಕಳೆದು ಕಾಲವಾಯ್ತು.
ಮಗನೇ ನಿರ್ವಹಿಸುತ್ತಾನೆ ಮನೆ, ಎಲ್ಲರ ಮನ
ರಂಪ, ಹುಡುಗಾಟ, ಕೀಟಲೆಗಳನೆಲ್ಲ ದಾಟಿ
ಅದೆಷ್ಟು ದೊಡ್ಡವರಾಗಿಬಿಟ್ಟರು ಮಕ್ಕಳು
ಹೊಳೆಯಾಚಿನ ಸಂಬಂಧವಂತೆ, ಅಲ್ಲಾಕೆಯದೇ ಸಾಮ್ರಾಜ್ಯವಂತೆ
ಕನಸು ಕಟ್ಟುತ್ತಿದ್ದಾಳೆ ಕಿರಿಮಗಳು
ಆಹ್, ಇದ್ಯಾವ ಹಕ್ಕಿಯ ಕೂಜನ ಈ ತೋಟದಲ್ಲಿ
 
ಧಾರೆಯೆರೆಯಲು ಬಾ ಎಂದು ಕರೆದರೆ ಸೆಟಗೊಂಡು
ಒಲ್ಲೆನೆಂದರಂತೆ ಇವರು. ವಯಸ್ಸು ಮಾಗಿದಂತೆ ಬುದ್ದಿಯೂ
ಮಾಗುವುದೆಂಬುದೆಲ್ಲ ಸುಳ್ಳು. ಮತ್ತೆ ಮಗುವಾಗುತ್ತಾರೆಂಬುದು ನೆಪ.
ಸೊಟ್ಟಗಿದ್ದ ವರ್ತನೆಗಳು ನೆಟ್ಟಗಾಗುವುದು ಅಪರೂಪ
 
ಅಗೋ, ಅಲ್ಲೊಂದು ಸೋಗೆ ಬಿತ್ತು: ಬೆಚ್ಚಿ ಬೀಳಿಸುವಂತೆ
ಕರ್ತವ್ಯಗಳ ಕರೆ ಮಿದುಳಲ್ಲೇ: ಕೂತಲ್ಲಿಂದ ಮತ್ತೆ ಏಳಿಸುವಂತೆ.
 
* * *
 
ಟೇಪ್‌ರೆಕಾರ್ಡರಿನಿಂದ ಬರುತ್ತಿದೆ ಯಕ್ಷಗಾನದ ಹೊಯ್ಲು:
ಇವಳ್ಯಾವ ಲೋಕದ ಸತಿಯೋ..
ಮತ್ತೀ ಯುವತಿಯ ಪಡೆದವ ಏನ್ ಪುಣ್ಯಮತಿಯೋ..
ಚಂಡೆ ಸದ್ದು ಕೇಳಿದರೆ ಸಾಕು, ಮತ್ತೆ ಯವ್ವನ
ಹಾಕಲೇ ಎರಡು ಹೆಜ್ಜೆ? ಕುಣಿವುದು ಮನ
 
ಚಿಕ್ಕಮಗಳ ಲಗ್ನವೂ ಆಯಿತು
ಮಗನೇ ನಿರ್ವಾಹಕನಾಗಿದ್ದರೂ
ಸಾರಥಿಯಾಗಿ ನನ್ನನ್ನು ಕೂರಿಸಿದ್ದರು
ಮಗಳನ್ನು ಸುಖವಾಗಿ ಹೊಳೆ ದಾಟಿಸಿ ಬಂದೆ
ಎಂದು ಎಲ್ಲರೂ ಹೊಗಳಿದರು
ಕುದುರೆ ಎಲ್ಲಿಂದ ಬಂತು, ಅದಕೆ ಮೇವೆಲ್ಲಿಂದ ತಂದರು,
ದಾರಿ ಖರ್ಚಿಗೆ ಹಣ ಹೇಗೆ ವ್ಯವಸ್ತೆ ಮಾಡಿದರು,
ರಥದಲಂಕಾರಕ್ಕೆಲ್ಲಿ ಹೊಂಚಿದರು ಬಣ್ಣ-
ಒಂದೂ ತಿಳಿಯದ ನನಗೆ ಸಾರಥಿಯ ಪಟ್ಟ!
ಮೈಸೂರು ಪೇಟ ತಲೆಯ ಮೇಲಿತ್ತು,
ಜರಿ ಶಲ್ಯ ಹೆಗಲ ಮೇಲಿತ್ತು
ಕಚ್ಚೆಪಂಚೆಯನ್ನೇ ಉಡಬೇಕು ಎಂದರು ಪುರೋಹಿತರು
ಸ್ವಾಹಾ ಎನ್ನುವಾಗ ಬಲಗೈ ಮುಟ್ಟಿಕೊಳ್ಳಲಿಕ್ಕೆ
ರೇಶ್ಮೆಸೀರೆಯುಟ್ಟ ಅಡ್ಡಕುಂಕುಮದ ಮಡದಿ
ಕನ್ಯಾದಾನದ ನನ್ನ ಪುಣ್ಯದಲ್ಲಿ ಇವಳಿಗೂ ಅರ್ಧವಂತೆ
ಪಾಪದಲ್ಲಿ ಮಾತ್ರ ಪಾಲಿಲ್ಲ- ಯಾರು ಮಾಡಿದರೋ ನಿಯಮ?
 
ಬೆಟ್ಟನಾಡಿನ ನಟ್ಟನಡುವಿನ ಪುಟ್ಟಮನೆಯಲ್ಲಿ
ಮಗಳು ಹೇಗೆ ಬಾಳುವಳೋ ಎಂಬಾಲೋಚನೆ ಕ್ಷಣ ಬಂದು-
ಹೋಯಿತು.
 
* * *
 
ಅಟ್ಟಕ್ಕೆಂದು ಕಳೆದ ವರ್ಷ ಹುಗಿದ ಕಂಬ
ಹಾಗೇ ಉಳಿದುಹೋಗಿದೆ ಅಂಗಳದಲ್ಲಿ
ಅದರ ಮೇಲೆ ರಣಬಿಸಿಲು, ಮಾಘೀಚಳಿ
ಹಳೆಮಳೆಗಳ ಹಾವಳಿಯೇ ಆಗಿದೆ
ಬುಡದಲ್ಲಿ ಹುಲ್ಲು ಬೆಳೆದು, ಮಳೆಗಾಲದಲ್ಲಿ
ಹಬ್ಬಿದ ಸೌತೆಬಳ್ಳಿಯ ಕಿಲ್ಲೊಂದು ತನ್ನ
ಸುರುಳಿ ಚಾಚಿ ಕಂಬಕಾಂಡವ ತಬ್ಬಿದೆ
ಪಕ್ಕದ ದಾಸವಾಳದಲ್ಲಿ ಬಿಟ್ಟ ಕೆಂಪಿಹೂವ ಶಲಾಕೆಯು
ಗಾಳಿ ಬಂದಾಗಲೆಲ್ಲ ಬಾಗಿ ಮುತ್ತಿಡುತ್ತದೆ.
ಚತುರ್ಥಿಯ ಚಂದಿರನ ಮುಟ್ಟಲು ಕಂಬಕ್ಕಾಸೆ
ಇನ್ನೂ ಶಾಲೆಯ ಯುನಿಫಾರ್ಮಿನಲೇ ಇರುವ
ಇಜ್ಜಡೆಯ ಮೊಮ್ಮಗಳು ಕಟ್ಟೆಯ ಮೇಲೆ ಕೂತು
ಕೊರಡು ಕೊನರುವ ಕತೆಯನ್ನೋದುತ್ತಿದ್ದರೆ
ಕಂಬ ಕಿವಿಯಾಗಿ ಕೇಳುತ್ತದೆ.
 
ಕಂಬ ನಾಲ್ಕಿದ್ದರೆ, ಹುಡುಗರು ಐವರಿದ್ದರೆ ಕಂಬಕಂಬದಾಟ.
ಒಂಟಿಕಂಬ ಆಟಕ್ಕಿಲ್ಲ, ಲೆಕ್ಕಕ್ಕೂ ಇಲ್ಲ.
 
ಒಂದೇ ಮಗು ಸಾಕು ಅಂತ ಎಲ್ಲ ಮಕ್ಕಳದೂ ಹಟ.
ನಿನ್ನ ಕಾಲವಲ್ಲ ಇದು ಅಂತ ತಿರುಗುಮಾತು.
ಹೆಗಲಲ್ಲೊಂದು-ಬಗಲಲ್ಲೊಂದು ಹೊತ್ತುಕೊಂಡು
ದೂರ ಬಾವಿಯಿಂದ ನೀರು ತರುತ್ತಿದ್ದ ನನ್ನದೇ ಚಿತ್ರ
ಕಣ್ಮುಂದೆ ಬಂತು. ಈಗ ಮನೆಯಲ್ಲೇ ಬಾವಿಯಿದೆ.
ಗುಂಡಿಯದುಮಿದರೆ ಸಾಕು, ಚಿಮ್ಮಿ ಬರುತ್ತದೆ ನೀರು-
ಪಾತಾಳದಿಂದ.
 
* * *
ಮಣ್ಣ ಗೋಡೆಯ ದಪ್ಪ ತೊಲೆಯ ಗಾರೆ ನೆಲದ ಮನೆ
ತಳ್ಳಿ ಕೆಡವಿದರಂತೆ ಆಳುಗಳು. ದಿಬ್ಬದಂತಿದ್ದ ರಾಶಿಮಣ್ಣ
ಹಾರೆಕೋಲು-ಗುದ್ದಲಿಗಳಿಂದ ಅಗೆದಗೆದು ತುಂಬಿಸಿದರಂತೆ ಬುಟ್ಟಿ.
ನೂರು ಕೆಲಸಗಾರರು ಹತ್ತು ಕುಶಲಕರ್ಮಿಗಳು ಕಟ್ಟಿದರಂತೆ
ಇಟ್ಟಿಗೆ ಇಟ್ಟಿಗೆ ಜೋಡಿಸಿ ಎತ್ತೆತ್ತರ. ಭದ್ರವಾಗಿರಲೆಂದು ತುಂಬಿಸಿ
ಸಿಮೆಂಟು ನಡುನಡುವೆ. ಮಟಗೋಲಿಟ್ಟು ಅಳೆದರಂತೆ ನೇರದೂರವ.
ಕೆತ್ತಿದರಂತೆ ವಾಸ್ತುಬಾಗಿಲಿಗೆ ಮಲ್ಲೆಹೂಬಳ್ಳಿ. ಇಣುಕಿದರೂ ಕಾಣದಂತೆ
ಕಿಟಕಿ ಬಾಗಿಲುಗಳಿಗೆ ಅಪಾರದರ್ಶಕ ಗಾಜು ಕೂರಿಸಿ
ಬಳಿದರಂತೆ ಬಣ್ಣ ಚಂದ ಕಾಣುವವರೆಗೆ. ಸಿಂಗರಿಸಿದರಂತೆ
ಅರಮನೆಯ ಹಾಗೆ, ಹಾಸಿದರಂತೆ ಹೊಸ ಕಂಬಳಿ ನೆಲಕೆ.
ಮಗ ಕಟ್ಟಿಸಿದ ಹೊಸಮನೆಯಲ್ಲಿ ನನಗೂ ಒಂದು ಕೋಣೆಯಂತೆ.
 
ಜಿಜ್ಞಾಸೆಯಿಷ್ಟೇ: ನಾನು ಕಟ್ಟಿಸಿದ್ದ ಮುರುಕಲು ಗುಡಿಸಲು
ನಿಷ್ಕರುಣೆಯಿಂದ ಕೆಡವಿದರು ಎಂದು ಸೆಡವು ತೋರಲೋ?
ಮಗನ ಸಾಹಸ ಕಂಡು ಹೆಮ್ಮೆ ಪಡಲೋ?
 
ಹೇಳುವ ಕಾಲ ಮುಗಿದು ಹೋಗಿತ್ತು. ಈಗೇನಿದ್ದರೂ ಕೇಳುವ ಕಾಲ.
ಆಹ್ವಾನ ಪತ್ರಿಕೆಯಲ್ಲಿ ನನ್ನದೇ ಹೆಸರಿದೆ:
ನಾನೇ ಕರೆದಂತೆ ಎಲ್ಲ ನೆಂಟರ ಹೊಸ ತಾವು ನೋಡಲು.
ಬಂದ ನೆಂಟರು ಮಾತ್ರ ಅವನನ್ನೇ ಅಭಿನಂದಿಸಿದರು.
 
* * *
 
ಹಳೆಮನೆಯ ಕೆಡವಿ, ಹೊಸಮನೆಗೆ ಒಕ್ಕಲಾಗಬಹುದು.
ಆದರೆ ಹಳೆನೆನಪ ಮುಚ್ಚಿ, ಹೊಸ ಬದುಕಿಗಡಿಯಿಡಬಹುದೇ?
 
ಸಮೃದ್ಧಿಯೆಂಬುದೊಂದು ಭ್ರಮೆ ಎಂದರೆ ಒಪ್ಪುವುದಿಲ್ಲ ನಾನು.
ಬೀದಿಪಾಲಾಗಿದ್ದಾಗ ಒದ್ದು ಮುನ್ನಡೆದಿದ್ದ ಜನ
ಹಸಿವೆಯಾಗಿದ್ದಾಗ ನಕ್ಕು ಅಣಕಿಸಿದ್ದ ಜನ
ಅರಿವೆಗೆಡೆಯಿಲ್ಲದಿದ್ದಾಗ ತಿರುಗಿಯೂ ನೋಡದ ಜನ
ಈಗ ಸಹಾಯ ಕೇಳಿಕೊಂಡು ಬರುವರು ನಮ್ಮ ಮನೆಗೇ.
 
ಹಳೆಯದನ್ನೆಲ್ಲ ಮರೆಯಬೇಕು ಎಂದು ಮಕ್ಕಳ ವಾದ.
ಅದು ಹೇಗೆ ಸಾಧ್ಯ? ಕಣ್ಣ ಮುಂದೆಯೇ ಇವೆ ಎಲ್ಲ ಚಿತ್ರ.
ಅವೇ ಅವವೇ ಮುಖಗಳು: ದೇಹಗಳು ಬೆಳೆದಿವೆ.
ಗಡ್ಡ ಮೀಸೆ ಮೂಡಿವೆ. ತೊಗಲು ಸುಕ್ಕುಗಟ್ಟಿದೆ.
ಬೊಜ್ಜು ಬಂದೇರಿದೆ. ಬೆನ್ನು ಮುಡುಗಿ ಬಾಗಿದೆ.
ಆದರೆ ಅದೇ ಜನ. ಅದದೇ ಜನ. ಕ್ಷಮಿಸುವುದು ಹೇಗೆ?
 
ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಪೂಜ್ಯೇಷು ಮಾತಾ,
ಭೋಗೇಷು ಲಕ್ಷ್ಮೀ, ಕ್ಷಮಯಾಧರಿತ್ರಿ, ಶಯನೇಷು ರಂಭಾ
ಓಹೋ! ಯಾರೋ ಕಾರ್ಯಸಾಧಕರು ಸುಪ್ಪತ್ತಿಗೆಯಲ್ಲಿ ಕೂತು ಬರೆದ ಸಾಲು.
ಹೇ ಸಮಾಜವೇ, ಸಿಡಿದೇಳುವ ಕಾಳಿಯೂ, ಸಂಹರಿಸುವ ದುರ್ಗೆಯೂ,
ಹೂಂಕರಿಸುವ ಜಟ್ಟಿಯೂ, ಛಲ ಬಿಡದ ಪ್ರಾಂಜಲೆಯೂ ಹೌದು- ಹೆಣ್ಣು.
ಹೇಳಬೇಕಿತ್ತು ನನಗೆ. ತೋರಿಸಬೇಕಿತ್ತು ನನಗೆ.
ನಾನು ಮೊಂಡು ಬಿಡಲಿಲ್ಲ. ಚಂಡಿ ಹಿಡಿದೆ.
 
* * *
 
ಮೊದಲಿಂದಲೂ ಅಷ್ಟೇ, ಖಾರ ಪದಾರ್ಥವೆಂದರಾಯಿತು ನನಗೆ.
ಸೂಜಿಮೆಣಸು ನುರಿದ ಮಂದನಗೊಜ್ಜು, ಖಟ್ಟಗೆ ಬೀಸಿದ
ನೆಲಮಾವಿನಸೊಪ್ಪಿನ ಚಟ್ನಿ, ಕೊನೆಗೆ ಏನೂ ಇಲ್ಲದಿದ್ದರೆ
ಜಾರಿಯಿಂದೀಗಷ್ಟೆ ತೆಗೆದ ಉಪ್ಪಿನಕಾಯಿ-
ಹಾಕಿ ಕಮ್ಮಗೆ ಬಸಿದನ್ನಕೆ ಚೂರೇಚೂರು ಕೊಬ್ಬರಿಯೆಣ್ಣೆ ಜತೆ
ಕಲಸಿ ಗಟ್ಟಿ ಕಟ್ಟಿ ಕಟ್ಟೆ ಮಧ್ಯದಲ್ಲಿ ಸುರಿಯಲು ತಿಳಿಸಾರೋ
ಕಾಯಿತಂಬುಳಿಯೋ ಕಡಮಜ್ಜಿಗೆಯೋ. ಕತ್ತರಿಸಿಯೇ ಊಟ ಮಾದಿದವ ತಾನು.
 
ಮದುವೆಯಾದ ಹೊಸದರಲ್ಲಿ ಮಾವನ ಮನೆಗೆ ಹೋದಾಗ
ನನ್ನೂಟದ ಶೈಲಿ ನೋಡಿ ಕಟ್ಟೇಭಟ್ಟರು ಅಂತ ಕರೆದಿದ್ದರು ಮಾವ!
ನೆನೆದರೀಗ ನಗು. ನಾಲಿಗೆಯ ರುಚಿಯೇನು ಕ್ಷೀಣಿಸಿಲ್ಲ ಈಗಲೂ.
ಜಿಹ್ವಾಜ್ವಾಲೆಗಾಗಿಯೇ ಎಲ್ಲ ಕಸರತ್ತು.
 
ಈಗೀಗ ಅರ್ಥವಾಗುತ್ತಿದೆ: ಊಟ, ಆಟ, ನೋಟಗಳ ಅಭಿ-
ರುಚಿ ಸಭ್ಯವಾಗಿರುವವನನ್ನು ಕೂರಿಸಿ ಸನ್ಮಾನಿಸುವುದು ಲೋಕ.
 
ಆದರೂ ಸತ್ಯ: ಕಾಲ ಮಿಂಚಿದ ಮೇಲೆ
ಸುಳ್ಳಿಗಾಗಿ ಮತ್ತೊಂದು ಸುಳ್ಳು ಹೇಳಲೇಬೇಕು
ತಪ್ಪಿಗಾಗಿ ಮತ್ತೊಂದು ತಪ್ಪು ಮಾಡಲೇಬೇಕು
ಎರಡು ಮೊಂಡುಗಳು ಒಂದೆಡೆ ಬದುಕಲು ಸಾಧ್ಯವಿಲ್ಲ.
 
* * *
 
ಸಂತಸದ ದಿನಗಳು ಎಂದರೆ ಇವೇ.
ಟೀವಿಯಲ್ಲಿ ಯಾರದೋ ಮದುವೆ ಸಂಭ್ರಮ.
ಹಬ್ಬಕ್ಕೆ ಬರುವ ಮಗಳು. ಹುಳುಕಿಲ್ಲದ ಎಲೆಗಳನ್ನೇ
ಆಯ್ದು ಮಾಡಿದ ಮಾವಿನ ತೋರಣ.
ಹದವಾಗಿ ಶರೆಬಂದ ಕಣಿಕೆಯೊಳಗೆ ಮಟ್ಟಸವಾಗಿ ಕೂರುವ ಹೂರಣ.
ತುಪ್ಪದ ದೀಪದ ಸೊಡರಿಗೆ ತಾಕಿಸಿ ಹಚ್ಚಿದ ಊದುಬತ್ತಿ.
ಝಾಂಗಟೆ ಹೊಡೆಯಲು ಮೊಮ್ಮಕ್ಕಳ ಪೈಪೋಟಿ.
ಸಿಡಿಮದ್ದುಗಳ ಸದ್ದು.
ಎಡೆಶೃಂಗಾರದಿಂದಲೇ ತುಂಬಿದ ಬಾಳೆಯೆಲೆ.
ನೆಲಕ್ಕೆ ಕೂರಲಾಗುವುದಿಲ್ಲ ಎಂದರೆ ಕುರ್ಚಿಯ ವ್ಯವಸ್ಥೆ.
 
ಖುಷಿಯಲ್ಲೇ ಮರೆಯಬೇಕು ಎಡರುಗಳನ್ನು.
ಕಟ್ಟಿ ಬರುವ ದಮ್ಮನ್ನು. ನಡುಗುವ ಕೈಗಳನ್ನು.
ಆಗೀಗ ಕಣ್ಕತ್ತಲಾಗಿ ವಾಲುವಂತಾಗುವುದನ್ನು.
ತಿವಿಯುವ ಹಳೆಯ ನೋವುಗಳನ್ನು. ಸಾವಿನ ಕರೆಯನ್ನು.
 
* * *
 
ಕಾವಿಗೆ ಕೂತ ಹೆಣ್ಣು ಮಂಗಟ್ಟೆ ಹಕ್ಕಿ
ಗೂಡಿನಲ್ಲೇ ಬಂಧಿ. ಗಂಡ ತರುವವರೆಗೂ ಕಾಳು
ಬಾಯ್ತೆರೆದು ಸಣ್ಣ ಕಿಂಡಿಯಲ್ಲಿ ಆಕಾಶ ನೋಡುವುದು.
ಬೇಟೆಗಾರನ ಕೋವಿಗೆ ಬಲಿಯಾದರೆ ಗಂಡು,
ಗೂಡಿನೊಳಗೇ ಇದರ ಸಾವು. ಮೊಟ್ಟೆಯೊಳಗೇ ಭ್ರೂಣಹತ್ಯೆ.
ಕಾಯುವವನೇ ಕಾಯಬೇಕು- ಕಾಯುವವಳ,
ಕಾವಿಗೆ ಕಾದವರ.
 
ಕೂಪ ಮಂಡೂಕಕ್ಕೋ ಬೇರೆ ಜಗತ್ತೇ ಇಲ್ಲ.
ತಲೆಯೆತ್ತಿ ನೋಡಿದಾಗ ಕಾಣುವ ಗಡಗಡೆಯೇ ಸೂರ್ಯ-ಚಂದ್ರ.
ಆಗೀಗ ಬರುವ ಕೊಡಪಾನ ಸೃಷ್ಟಿಸುವ ಪ್ರವಾಹ ದೇವರಾಟ.
ಬಿಂದಿಗೆ ಮೇಲೇರುವಾಗ ಬೀಳುವ ನೀರೇ ಮಳೆ.
ನೀರು ಕಮ್ಮಿಯಾದರೆ ಬರ. ಜಲವೊಡೆದರೆ ಜೀವ ಮೇಲು.
 
ಈಗ ಬೆಕ್ಕೂ ಬಲು ಚಾಲಾಕಿ. ನಾವೆಲ್ಲ ಇರುವಂತೆಯೇ
ಪಂಜರದೊಳಗಿನ ಗಿಳಿಗೆ ಚಂದದ ಮಾತಿಂದ ಮರುಳು ಮಾಡಿ
ಒಂಬತ್ತು ಬಾಗಿಲ ಮನೆಯಿಂದ ಅನಾಮತ್ತೆತ್ತೊಯ್ವುದು.
ನೋಡನೋಡುತ್ತಿದ್ದಂತೆಯೇ ಮೂಗ ಹೊಳ್ಳೆಗಳ ಸುಯ್ಗುಡು
ಕ್ಷೀಣವಾಗುತ್ತ ಕೊನೆಗೆ ನಿಶ್ಯಬ್ದವಾವರಿಸುವುದು.
 
ಆಮೇಲೆ ರಾಮ ರಾಮನೆನ್ನುತ್ತ ಹಗುರಗೊಂಡ ನಿನ್ನನ್ನು
ಆರಾಮವಾಗೆತ್ತಿ ಜಗಲಿಯಲ್ಲಿ ತಂದು ಮಲಗಿಸುವರು.
ತಲೆಯ ಬುಡದಲ್ಲೊಂದು ದೀಪ. ಬೆಳಗೊರೆಗೂ ಉರಿವಂತೆ
ಅದಕೆರೆಯಲು ಪಕ್ಕದಲ್ಲಿ ಪುಟ್ಟದೊಂದು ಎಣ್ಣೆಡಬ್ಬಿ.
ಚಮಚದಲ್ಲೆತ್ತಿ ಹಾಕಲು ಪಕ್ಕದಲ್ಲೊಬ್ಬ ಕಾವಲುಗಾರ.
 
ಜೀವ ಇರುವಾಗ ಯಾರೂ ಯಾರನ್ನೂ ಕಾಯುವುದಿಲ್ಲ
ಜೀವ ಹೋದಮೇಲೆ ಬರಿದೇಹವನ್ನೂ ಬಳಿಕೂತು ಕಾಯುವರು
 
* * *
 
ಮಣಿಯಲಿಲ್ಲ ಯಾರಿಗೂ.  ಕೈಮುಗಿಯಲಿಲ್ಲ ದೇವರಿಗೂ.
ಬಿಡಲಿಲ್ಲ ಮನೆಯ ವ್ಯಾಮೋಹ. ನೋಡಲಿತ್ತು ಇನ್ನೂ ಇಲ್ಲೇ ಏನೇನೋ.
ಆದರೆ ಆಗಲೇ ಕರೆ ಬಂದಿದೆ. ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಎಂದ ಮಹಾತ್ಮರೇ ಹೊರಡು ಕರೆ ಬರಲ್‌ ಅಳದೆ ಅಂತಲೂ ಹೇಳಿದ್ದಾರೆ.
ನಗುತ್ತಲೇ ಹೊರಟಿದ್ದೇನೆ: ಹೆಬ್ಬಾಗಿಲಿನಿಂದ.
ಸ್ವರ್ಗಪ್ರಾಪ್ತಿ ಬೇಕೆಂದರೆ ಧರ್ಮ ಅರ್ಥ ಕಾಮ ಮೋಕ್ಷಗಳ ಸರಿಯಾಗಾಚರಿಸಿ,
ಕರಣಶುದ್ಧಿ, ಇಂದ್ರಿಯಶುದ್ಧಿ, ದೈವಾರಾಧನೆ... ಓಹೋಹೋ!
ಮೋಕ್ಷಸಿದ್ಧಿ ಬಯಸಿದವರಾರು? ಭೌತಿಕದಾಸೆಗಳು ಕ್ಷಣಭಂಗುರವಾದರೂ
ಅತ್ಯಾಕರ್ಷಕವಾಗಿದ್ದಾಗ. ಬಿಡಲಾರೆ, ಯಕ್ಷನಿಗೂ ಕಾದಿದೆ ಒಂದಿಷ್ಟು ಪ್ರಶ್ನೆ.
ಛಲದಿಂದಲೇ ನಡೆದಿದ್ದೇನೆ ದೂತರೊಡನೆ.
 
* * *
 
ಇಳಿಸಂಜೆ ಕಟ್ಟೆ ಮೇಲೆ ಕೂತರೆ ಬರೀ ಇಂಥವೇ ಯೋಚನೆಗಳು.
ಕಣ್ಣ ಗೊಂಬೆಗಳಿಗೇ ಬಂದು ಮುತ್ತಿಕ್ಕುವ ಗುಂಗುರು ಹುಳಗಳು
ತಬಕಿನ ಹೊಗೆಸೊಪ್ಪಿಗೀಗ ಮಡದಿ ಬರುವುದಿಲ್ಲ
ಮಗನೋ ಸೊಸೆಯೋ ಮೊಮ್ಮಗನೋ ಆಗೀಗ ತಂದುಕೊಡುವ ಕಷಾಯ
ಕರುಳ ಬೆಚ್ಚಗಾಗಿಸುತ್ತದೆ. ಹಿತ್ತಿಲಿಂದೆಲ್ಲಿಂದಲೋ ಸರಕ್ಕನೆ ಹಾರಿಬಂದ
ಬಾಳೆಕಾಯಿ ಶೆಟ್ಟಿ ಸಾಟಿಪಂಚೆಯ ಮೇಲೆ ಕೂತು ಕಚಗುಳಿಯಲ್ಲೇ ಹಿಂಸಿಸುತ್ತದೆ.
ನಿನ್ನೆ ರಾತ್ರಿ ಶಿಕ್ಕಳನ ಹಕ್ಕಿ ಸಿಕ್‌ಸಿಕ್ಕಿದ್ರೋ ಅಂತ ಕೂಗುತ್ತಿತ್ತು.
ನನಗೇ ಇರಬೇಕು ಈ ಸಲಿಯ ಪಾಶ. ಹುರಿ ಹಾಕಿ ಎಳೆದರೆ ಸಾಕು,
ಗಂಟಲಲ್ಲುಸಿರು ಸಿಕ್ಕಿ ನಿನ್ನ ಮನೆಯೆಡೆಗೆ ನನ್ನ ಪಯಣ.
 
ನನ್ನಮ್ಮನ ಸಾವು-ಬದುಕಿನಂಥ ನೋವಲ್ಲಿ ಹುಟ್ಟಿ,
ಸಾವೆಂದರೇನೆಂದು ತಿಳಿಯುವಷ್ಟು ಬುದ್ಧಿ ಬಲಿತು,
ಸಾವೆಂಬುದಿದೆಯೆಂಬುದ ನಿರ್ಲಕ್ಷಿಸಿ ಹೂಂಕರಿಸಿ ನಡೆದು,
ಸ್ವಂತ ಕಂದಮ್ಮಗಳದೇ ಸಾವುಗಳ ನೋಡಿ,
ನಿನ್ನನೂ ಕಳೆದುಕೊಂಡು,
ಸಾಯುವ ಭಯ ನನಗೂ ಕಾಡತೊಡಗಿ ನಡುಗಿ,
ಈಗ ಸಾವಿಗೆ ಆಸೆಪಡುತ್ತಿರುವ ದಿನಗಳು.
 
ಕರೆಸಿಕೋ ಅಂತ ಕೇಳಲು ನನಗೂ ಬಾಯಿಯಿಲ್ಲ.
ಇಲ್ಲಿ ಕೈಹಿಡಿದು ನಡೆಸದವನ ಅಲ್ಲೂ ಧಿಕ್ಕರಿಸೀಯೆ ನೀನು.
ಪಿತ್ತಕ್ಕುದುರುವ ಜಡಕಲು ಬಿಳಿಮಂಡೆ ಬಾಚಿ
ಚಿತ್ತಕ್ಕೊಪ್ಪುವ ರಂಗಿನ ಸೀರೆಯುಡಿಸಿ
ಮುತ್ತಿಕ್ಕುವಂತಃಕರಣ ಎನಗೀಗಿದೆ ಎಂದರೆ
ಒಪ್ಪುವುದಿಲ್ಲ ನೀನು. ಏನು ಮಾಡಲಿ,
ಕ್ಷಮಿಸು ಎಂಬ ಶಬ್ದಕ್ಕೆ ಮೂರೇ ಅಕ್ಷರ.
 
ಯಮದೂತರು ಪಾಶ ಹಾಕಿ ಎಳೆಯುವರಂತೆ.
ಭಟರ ಛಾಟಿಯೇಟಿಗೆ ಹೃದಯ ಛಿದ್ರಗೊಳುವುದಂತೆ.
ವೈತರಿಣೀ ನದಿಯನ್ನು ಹೊರತುಪಡಿಸಿ,
ಯಮಲೋಕದ ದೂರ ಎಂಭತ್ತಾರು ಸಾವಿರ ಯೋಜನಗಳಂತೆ.
ಇಹದೇಹವನ್ನು ತ್ಯಜಿಸಿದ ಹದಿಮೂರನೇ ದಿನ
ಪೂರ್ಣಕಾಯವ ಪಡೆದ ಪ್ರೇತಾತ್ಮವಾಗಿ
ಪ್ರತಿನಿತ್ಯ ಇನ್ನೂರಾ ನಲವತ್ತೇಳು ಯೋಜನದಂತೆ
ದುರ್ಗಮ ಹಾದಿಯಲ್ಲಿ ನಡೆದು ನಿನ್ನ ತಲುಪಬೇಕಿದೆ.
ಈ ಕುಂಟುಕಾಲಲ್ಲಿ ಹೇಗೆ ನಡೆಯಲಿ ಮಾರಾಯ್ತಿ?
ಆದರೂ ಹೊರಡಲೇಬೇಕಿದೆ. ಬರುತ್ತಿರುವೆ.
ಸ್ವಾಗತಿಸಲಣಿಯಾಗು. 
 
* * *
 
ಅಜ್ಜ ಇನ್ನಿಲ್ಲ ಎಂದು ಕರೆ ಬಂದಿದೆ ಮನೆಯಿಂದ.
ಬಸ್ಸು ತೂಗುತ್ತಿದೆ ಹೊಂಡಹಂಪುಗಳ ದಾರಿಯಲ್ಲಿ
ಎಷ್ಟೊಂದು ಸಹ ಪಯಣಿಗರು ಸೀಟಿಗೊರಗಿ
ಕೆಲವರು ತೂಕಡಿಸುತ್ತ, ಕೆಲವರು ಪೇಪರೋದುತ್ತ
ಕೆಲವರು ಫೋನಿನಲ್ಲಿ ಮಾತಾಡುತ್ತಾ, ಕೆಲವರು...
ಅಕ್ಕಪಕ್ಕ ಹಾಯುವ ವಾಹನಗಳು, ಅವುಗಳಲ್ಲೂ ಭರ್ತಿ ಜನಗಳು
ಎತ್ತಲೋ ಹೊರಟವರು, ಎಲ್ಲಿಂದಲೋ ಬರುವವರು
ಎಲ್ಲರೂ ನಮ್ಮನಮ್ಮದೇ ಲೋಕದಲ್ಲಿದ್ದೇವೆ
ಎಲ್ಲರಿಗೂ ಎಲ್ಲಿಗೋ ಹೋಗುವುದಿದೆ.
ಕೆಲವರು ಮಧ್ಯದಲ್ಲೇ ಇಳಿದಿದ್ದಾರೆ. ಅವರೂರ ನಿಲ್ದಾಣವಿರಬೇಕು.
ಇನ್ನು ಕೆಲವರು ಕೈ ಮಾಡಿ ಹತ್ತಿಕೊಂಡಿದ್ದಾರೆ.
ಬಸ್ಸು ಸಾಗುವ ವೇಗಕ್ಕೆ ಇಕ್ಕೆಲದ ಚಿತ್ರಗಳು ಅಸ್ಪಷ್ಟವಾಗಿದೆ.
ಗಮನಿಸಿ ನೋಡಿದರೆ ಅವೂ ಓಡುತ್ತಿವೆ. ಅಥವಾ ಓಡುತ್ತಿರುವಂತೆನಿಸುತ್ತಿದೆ.
ಹಣ ಕೊಟ್ಟಿದ್ದಕ್ಕೆ ನಿರ್ವಾಹಕ ಟಿಕೀಟು ಕೊಟ್ಟಿದ್ದಾನೆ:
ಎಲ್ಲಿಂದ ಎಂಬ ಪಟ್ಟಿಗೆ ಎರಡು ತೂತು
ಎಲ್ಲಿಗೆ ಎಂಬ ಪಟ್ಟಿಗೆ ಎರಡು ತೂತು ಚುಚ್ಚಿ
ಅದೇನು ಪಟ್ಟಿಯೋ ಅದಕೇನರ್ಥವೋ ಅವನಿಗೆ ಮಾತ್ರ ಗೊತ್ತು
ಚಾಲಕನೋ, ಹಿಂದೆ ತಿರುಗಿ ಸಹ ನೋಡುತ್ತಿಲ್ಲ
ಎಲ್ಲಿಗೆ ಹೋಗಬೇಕು, ಹೇಗೆ ಹೋಗಬೇಕು, ಎಷ್ಟೊತ್ತಿಗೆ ಹೋಗಬೇಕು
ಎಂಬುದೆಲ್ಲ ಅವನಿಗಷ್ಟೇ ತಿಳಿದಂತಿದೆ.
ಅವನನ್ನೇ ನಂಬಿ ಕೂತಿದ್ದೇವೆ ಎಲ್ಲಾ.
ಯಾರು ಇಳಿದರೂ ಯಾರು ಹತ್ತಿದರೂ ಯಾತ್ರೆ
ಮುಂದುವರೆಯುತ್ತಲೇ ಇದೆ. ಬಹುಶಃ
ನಿಲ್ಮನೆಯ ನಿಯೋಗಿ ನಿಲ್ಲಿಸಿ ಇಳಿಸಿಕೊಳ್ಳುವವರೆಗೆ
ಈ ಪರ್ಯಟನ ಅನವರತ.

 

* * *

-ಮುಕ್ತಾಯ-