ಆಫೀಸಿಗೆ ಹೊರಟ ಅಪ್ಪನ ಚೀಲಕ್ಕೆ
ಮಗಳು ತಿಂಡಿ ತುಂಬಿದ ಡಬ್ಬಿ ಹಾಕಿದಳು
ಪುಟ್ಟ ಪುಟ್ಟ ಪಡ್ಡುಗಳನು
ಪುಟ್ಟ ಪುಟ್ಟ ಕೈಗಳಲಿ ಹಿಡಿದು
ಸಣ್ಣ ದನಿಯಲ್ಲವನು ಎಣಿಸುತ
ತುಂಬುವಷ್ಟರಲ್ಲಿ ಡಬ್ಬಿ ಎಣಿಕೆ ತಪ್ಪಿ
ಮತ್ತೆ ಎಣಿಸಿ ಮತ್ಮತ್ತೆ ಎಣಿಸಿ
ಮುಚ್ಚಳ ಹಾಕುವಷ್ಟರಲ್ಲಿ
ಅಪ್ಪನಿಗೆ ಗಡಿಬಿಡಿಯಾಗಿ ಗಲಿಬಿಲಿ
ಖಾರದ ಚಟ್ನಿಯನು ಸುತಾರಾಂ
ತಾನು ಮುಟ್ಟದೆ ಅಮ್ಮನಿಂದಲೇ
ಡಬ್ಬಿಗೆ ತುಂಬಿಸಿ ಚೀಲದಲಿರಿಸಿ
ಮಧ್ಯಾಹ್ನ ಹಸಿದ ಅಪ್ಪ ಚೀಲ ತೆರೆಯಲು
ಊಟದ ಡಬ್ಬಿಯೊಂದಿಗೆ ಯಾವುದೋ ಮಾಯೆಯಲಿ
ಮಗಳು ಚೀಲದೊಳಗಿರಿಸಿರುವ ಒಂದು
ಆಟಿಕೆ ಸಾಮಗ್ರಿಯೂ ಸಿಕ್ಕು
ಈಗ ಊಟ ಮಾಡುವುದೋ ಆಟವಾಡುವುದೋ
ತಿಳಿಯದೆ ಮತ್ತೆ ಗಲಿಬಿಲಿ
ಆಟದೊಂದಿಗೆ ಪಾಠ ಎಂಬೊಕ್ಕಣೆಯೊಂದಿಗೆ
ಶುರುವಾಗುತ್ತಿದ್ದ ಶಾಲೆಗೆ
ಅಮ್ಮ ತುಂಬಿ ಕಳುಹಿಸುತ್ತಿದ್ದ ಬುತ್ತಿ
ಮದುವೆಯ ನಂತರ
ಸಂಗಾತಿ ತುಂಬಿ ಕೊಡುತ್ತಿದ್ದ ಬುತ್ತಿ
ಈಗ ಕೊಂಚವೇ ದೊಡ್ಡವಳಾಗಿರುವ
ಮಗಳು ಕಳುಹಿಸಿರುವ ಬುತ್ತಿ
ಕೆಫೆಟೇರಿಯಾದ ಟೇಬಲ್ಲಿನ ಮೇಲೀಗ
ಎಷ್ಟು ತರಹದ ಬುತ್ತಿಯ ಡಬ್ಬಿಗಳು
ಒಬ್ಬೊಬ್ಬರ ಮನೆಯಲ್ಲೊಬ್ಬೊಬ್ಬರು
ಲಟ್ಟಣಿಗೆ ಲೊಟಗುಡಿಸುತ್ತೊರೆದ ಚಪಾತಿ
ಜಾವದಲ್ಲಿ ಬಡಿದ ರೊಟ್ಟಿ
ಕುಕ್ಕರಿನ ಶೀಟಿ ಕೂಗಿಸಿ ಬೆಂದನ್ನ
ಬುರುಬುರು ಉಬ್ಬಿದ ಪೂರಿ
ಎಲ್ಲದರೊಳಗೆ ತುಂಬಿರುವ
ಅವರವರ ಹಿತೈಶಿಗಳ ಅಕ್ಕರಾಸ್ತೆ:
ತೆರೆದುಕೊಂಡಿದೆಯೀಗ ಈ ಲಂಚ್ ಅವರಿನಲ್ಲಿ
ಬಣ್ಣಬಣ್ಣದ ಡಬ್ಬಿಗಳೊಡಲಿಂದ
ನೋಡುತ್ತಿದೆ ಮಗಳು ಕಳುಹಿಸಿರುವ ಆಟಿಕೆ
ಎಲ್ಲರ ಬುತ್ತಿಯ ಬಟ್ಟಲುಗಳ
ನೆನಪಾಗುತ್ತಿರಬಹುದೇ ಅದಕ್ಕೆ
ತನ್ನನು ರೂಪಿಸಿದವರ ಹಸಿವು?
Wednesday, December 01, 2021
ಲಂಚ್ ಅವರ್
ಬಿಸಿಲು-ನೆರಳು
ಅಪ್ಪನೊಂದಿಗೇ ಬಟ್ಟೆಯೊಣಗಿಸಲು ಕ್ಲಿಪ್ಪಿನ ಸಂಗಡ
ಟೆರೇಸಿಗೆ ಬಂದ ಮಗಳು, ತನ್ನೆರಡು ಅಂಗಿ
ಹಾಗೆಯೇ ಉಳಿದುದು ಕಂಡು ಮುಖ ಸಣ್ಣದಾಗಿ
ಬಿಸಿಲು ಸುರಿಸುವ ಸೂರ್ಯನಿಗೂ ದಿಗಿಲು
ಚಪ್ಪಲಿ ಹಾಕಿಕೋ ಎಂದರೂ ಹಾಗೆಯೇ ಬಂದ ಮಗಳು, ಕಾದ ನೆಲ,
ಕಣ್ಣಿಂದೆರಡು ಹನಿ ಜಾರಿದರೂ ಅದು ಕ್ಷಣದಲ್ಲೇ ಇಂಗಬಹುದು
ಅಪ್ಪನೀಗ ತನ್ನ ಚಪ್ಪಲಿಯನ್ನೇ ಕೊಟ್ಟು, ಮಗಳಿಗೆ ನೆರಳಾಗಿ ನಿಂತು
ಮುಂದೇನೆಂದು ನೋಡಲಾಗಿ
ಬೇರೆ ನ್ಯಾಲೆಗಳಲ್ಲಿ ಬೇರೆ ಮನೆಯವರ ಬಟ್ಟೆಗಳು
ಅಂಗಿ ಚಡ್ಡಿ ಪ್ಯಾಂಟು ಟಾಪು ಸೀರೆ ರವಿಕೆ ಬನೀನು
ಮನುಜರ ಮೈ ಮುಚ್ಚಲು ಎಷ್ಟೆಲ್ಲ ಪಡಿಪಾಟಲು
ಮೂಲೆಯಲ್ಲಿರುವ ಪಾಟಿನಲ್ಲಿ ನಳನಳಿಸುತ್ತಿರುವ ದೊಡ್ಡಪತ್ರೆ
ಮೈತುಂಬ ನೀರು ತುಂಬಿಕೊಂಡಿರುವ ಕರಿಯ ಟ್ಯಾಂಕು
ಅಲ್ಲಿಂದಿಳಿದಿರುವ ನೂರಾರು ಪೈಪುಗಳು
ಉಪಗ್ರಹಗಳತ್ತ ಬೊಗಸೆಯೊಡ್ಡಿರುವ ಡಿಶ್ಶುಗಳು
ಎಲ್ಲ ಕಣ್ಬಿಟ್ಟು ನಮ್ಮತ್ತಲೇ ನೋಡುತ್ತಿರುವ ಈ ಘಳಿಗೆ
ಮಗಳೇ ಹೇಳುತ್ತಾಳೆ: ಅಪ್ಪಾ, ನಿನ್ನ ಒಂದು ಅಂಗಿ ತೆಗೆದರೆ
ನನ್ನ ಎರಡು ಅಂಗಿಗಾದೀತು ಜಾಗ.
ಹೌದಲ್ಲ, ಎಷ್ಟು ಸುಲಭದ ಪರಿಹಾರ!
ಅಪ್ಪನ ತೆಳು ಅಂಗಿಗೇನು, ಕೆಳಗೊಯ್ದು ಕುರ್ಚಿಯ
ಮೇಲೆ ಹರವಿದರೆ ಒಣಗುವುದು ಫ್ಯಾನಿನ ಗಾಳಿಗೆ
ಕ್ಲಿಪ್ಪು ತೆಗೆದು ಅಪ್ಪನಂಗಿ ತೆಗೆದು ಮಗಳ ಎರಡೂ ಅಂಗಿ ಹಾಕಿ
ಓಹೋ ಎಂದು ಗೆದ್ದ ಖುಷಿಯಲ್ಲಿ ಚಪ್ಪಾಳೆ ತಟ್ಟಿ
ದೊಡ್ಡ ಚಪ್ಪಲಿಯ ಕಾಲಲಿ ದಡಬಡಾಯಿಸುತ್ತ
ಮೆಟ್ಟಿಲಿಳಿಯುವಾಗ ಮಗಳು ಹೇಳಿದಳು:
ಆಫೀಸಿಗೆ ಬಿಸಿಲಲ್ಲಿ ಹೋಗುವ ನಿನ್ನಂಗಿ
ಹೀಗೇ ತಣ್ಣಗಿರಬೇಕು;
ಮನೆಯೊಳಗಿನ ತಂಪಲ್ಲಿರುವ ನನ್ನಂಗಿ
ಬೆಚ್ಚಗಿರಬೇಕು. ಸರಿಯಲ್ವಾ ಅಪ್ಪಾ?
ಜೀವ
ಪುಷ್ಯ ಮಾಸದ ಆಕಾಶ ಕಡುನೀಲಿ
ರಾತ್ರಿ ಕಟ್ಟಿಕೊಂಡಿದ್ದ ಇಬ್ಬನಿ ಮೋಡಗಳೂ ಕರಗಿ
ರವಿ ಮೂರಾಳೆತ್ತರಕ್ಕೇರುವ ವೇಳೆಗೆ
ಎಲ್ಲಾ ಶುಭ್ರ ನಿರಭ್ರ
ಬೇಕಿದ್ದರೆ ಒಂದು ಕುಂಚ ಹಿಡಿದು
ಇದೇ ನೀಲಿಗದ್ದಿ ತೆಗೆದು
ಮಣ್ಣ ಮೂರುತಿಗೆ ಬಳಿದು
ಅದನು ಕೃಷ್ಣನನ್ನಾಗಿಸಬಹುದು
ಆಮೇಲಾ ಕೃಷ್ಣನಿಗೆ ಊದಲು ಕೊಡಲು
ಬೇಕೊಂದು ಕೊಳಲು
ಈಗಷ್ಟೆ ಕಳೆದ ಮಳೆಗಾಲದ ನೀರು ಕುಡಿದು
ಮೊಳೆತು ಚಿಗುರಿದೆ ಬಿದಿರು
ನುಗ್ಗಿ ಮೆಳೆಯೊಳಗೆ ತೆಗೆದು ಸಿಗುರು
ಇಟ್ಟಾಗಿದೆಯೀಗ ಶ್ಯಾಮನ ಕೈಗೆ
ಇನ್ನು ಭುವಿಯ ಜನರೆಲ್ಲ ಮರುಳು
ನವಿಲುಗರಿಯದೇ ಸಮಸ್ಯೆ
ಮೋಡವಿದ್ದರೆ ಹಿತ್ತಿಲಿಗೆ ಬಂದ ನವಿಲು
ಉನ್ಮಾದದಲಿ ಕುಣಿದು
ಒಂದಷ್ಟು ಗರಿಗಳನುದುರಿಸಿ ಹೋಗುತ್ತಿತ್ತು
ಹೊಸ ಗರಿಯಿಲ್ಲದಿರೆಯೇನು,
ನಾಗಂದಿಗೆಯಲಿದೆ ಒಂದಿಡೀ ಕಟ್ಟು
ತೆಗೆದು ಜುಟ್ಟಿಗೆ ಸಿಕ್ಕಿಸಿದರಾಯ್ತು
ಬೃಂದಾವನದ ಜೌಗುಮಣ್ಣಲಿ ಶಿಲ್ಪ ರಚಿಸಿ
ಆಗಸದ ನೀಲಿಯ ಮೈಗೆ ಬಳಿದು
ಹಸಿಹಸಿ ಗಾಳಿಯ ಪುಪ್ಪುಸಕೆ ತುಂಬಿ
ಯಮುನೆಯ ನೀರು ಕುಡಿಸಿ
ತನ್ನೆದೆಯದೇ ಪ್ರೇಮಾಗ್ನಿಯಲಿ ಬೇಯಿಸಿ
ಪಂಚಭೂತಗಳಿಂದಾದ ಚಿತ್ರಕ್ಕೆ
ಜೀವ ತುಂಬಿದ್ದಾಗಿದೆಯೀಗ
ನಿದ್ದೆಯಿಂದೆಚ್ಚರವಾದವನಂತೆ
ಎದ್ದು ನಿಂತ ಕೃಷ್ಣ ತಕ್ಷಣವೇ
ಹೊರಟು ನಿಂತಿದ್ದಾನೆ
ದಿಟ್ಟತನದಲಿ ಮಥುರೆಯೆಡೆಗೆ
ಪೋಗದಿರೆಂದರೂ ಕೇಳದೆ
ಇತ್ತ ರಾಧೆ ಅಲವತ್ತುಕೊಳ್ಳುತ್ತಿದ್ದಾಳೆ:
ಹೀಗೆಂದು ಮೊದಲೇ ತಿಳಿದಿದ್ದರೆ
ಬಾಲಕೃಷ್ಣನನ್ನೇ ರಚಿಸುತ್ತಿದ್ದೆ
ಕನಿಷ್ಟ ಬಾಲ್ಯ ಕಳೆವವರೆಗಾದರೂ ಸಿಗುತ್ತಿತ್ತು ಸಖ್ಯ
ಬೆಣ್ಣೆ ಮೆದ್ದುಕೊಂಡು, ಸೀರೆ ಕದ್ದುಕೊಂಡು,
ಗೋಪಿಕೆಯರಿಂದ ಮುದ್ದಾಡಿಸಿಕೊಂಡು,
ದನಕರುಗಳ ಮೇಯಿಸಿಕೊಂಡು
ಕೊಳಲ ನಾದದಲೆಲ್ಲರ ತೇಲಿಸಿಕೊಂಡು
ಇರುತ್ತಿದ್ದ ಕಣ್ಣೆದುರೇ ಓಡಾಡಿಕೊಂಡು
ಕುಳಿತಿದ್ದಾಳೆ ರಾಧೆ ಪಡಸಾಲೆಯಲ್ಲಿ ದಿಗ್ಭ್ರಮೆಯಲ್ಲಿ
ಉಳಿದ ಒಂದಷ್ಟು ಮಣ್ಣು, ಬಣ್ಣ,
ಬಿಂದಿಗೆಯಲ್ಲಿನ ನೀರು, ಅಲಂಕಾರಕ್ಕೆಂದು
ತಂದಿಟ್ಟುಕೊಂಡಿದ್ದ ಸಾಮಗ್ರಿಗಳ ನಡುವೆ
ತನ್ನ ಮೂರ್ಖತನಕ್ಕೆ ತನ್ನನೇ ಹಳಿದುಕೊಳ್ಳುತ್ತ
ಜೀವದಂಶವೊಂದು ಎದ್ದು ನಡೆದ ದಿಕ್ಕ ದಿಟ್ಟಿಸುತ್ತ
[ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]
Wednesday, November 24, 2021
ಟಿವಿಯೆಂಬ ಮಾಯಾಪೆಟ್ಟಿಗೆ ಸೂಸುವ ಬೆಳಕಲ್ಲಿ...
[World Television Day ನಿಮಿತ್ತ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ]
Thursday, July 08, 2021
‘ಲೀವ್ ಕ್ವೈಟ್ಲೀ’
ಬುದ್ಧನಿಗದು ಸಾಧ್ಯವಾಗಿರಬಹುದು
ಆದರೆ ನಮಗೆ? ಕೊನೆಗೆ ಬಾಗಿಲಾದರೂ ಕಿರುಗುಡುವುದು
ಏನಿರಬಹುದೆಂದು ಕುತೂಹಲದಿಂದ ಇಣುಕಿದ್ದೇ ಸೈ
ನೂರಾರು ಗಮನಿಸುವ ಕಣ್ಣುಗಳು ಇತ್ತಲೇ ನೋಡಿ
‘ಓಹೋ, ಇವರು ಬಂದರು’ ಎಂದು
ಜೈಕಾರ ಹಾಕಿ ಸ್ವಾಗತಿಸಿ
ಸ್ವಲ್ಪ ಹೊತ್ತಾದರೂ ಆಸೀನರಾಗಿರಲೇಬೇಕು
ಮೂಲೆಯಲ್ಲೊಂದು ಕುರ್ಚಿ ಹಿಡಿದು.
ಎಲ್ಲರೂ ಘನಗಾಂಭೀರ್ಯದಿಂದ ಕುಳಿತಿರುವಾಗ
ಥಟ್ಟನೆ ಎದ್ದು ಹೊರಡುವುದು ಸಭ್ಯತೆಯೇ?
ಸಭೆಯ ಗೌರವದ ಗತಿಯೇನಾಗಬೇಕು
ಸುಮ್ಮನೆ ಆಲಿಸುತ್ತ ತೂಕಡಿಸುತ್ತ ಕೂತಿರಲೂ ಆಗದು
‘ಬನ್ನಿ ಬನ್ನಿ, ನಾಲ್ಕು ಮಾತಾಡಿ’ ಅಂತ ಆಹ್ವಾನಿಸುವರು.
ಕೈ ಎತ್ತಿ ನಾ ಮುಂದು ತಾ ಮುಂದು ಎಂದು
ಮುನ್ನುಗ್ಗುತ್ತಿರುವ ಮಲ್ಲರ ನಡುವೆ ಈ ಪರದೇಸಿ
ಮತ್ತಷ್ಟು ಮುಜುಗರದ ಮುದ್ದೆಯಾಗಿ
ಏನೋ ಹೇಳಲು ಹೋಗಿ ಏನೋ ಆಗಿ
ಎಬ್ಬೆಬ್ಬೆ ಬೆಬ್ಬೆಬ್ಬೆ ತೊದಲಿ ಗಂಟಲು ಕಟ್ಟಿ
ಸ್ವಾಮೀ ಇದು ನಮಗಲ್ಲ ಬಿಟ್ಟುಬಿಡಿ
ಮಾತಿನರಮನೆಯಲ್ಲಿ ಮೌನಿಗೇನು ಕೆಲಸ
ಅಕೋ ಆ ಕೊಳದ ಬದಿಯ ನೀರವದಲ್ಲಿ
ಕವಿತೆಯೊಂದು ಕಾಯುತ್ತಿದೆ
ಭೆಟ್ಟಿಯಾಗಲು ಹೋಗಬೇಕಿದೆ
ಬಿಟ್ಟುಬಿಡಿ ನನ್ನನ್ನು, ದಯವಿಟ್ಟು ಬಿಟ್ಟುಬಿಡಿ
-ಎಂದರೂ ಕೇಳದೇ ಕಟ್ಟಿಹಾಕಿ ಕೂರಿಸಿದ್ದಾರೆ
ಅಂಟಿಸಿಕೊಂಡದ್ದಾವುದನ್ನೂ ಅಷ್ಟು ಸುಲಭಕ್ಕೆ
ಬಿಟ್ಟುಹೋಗಲಾಗದು ಕಣಾ...
ಸಂಬಂಧ ಸಂಸಾರ ಹವ್ಯಾಸ ವ್ಯಸನ
ಯಾವುದೂ ಅಲ್ಲದಿದ್ದರೆ ಹಾಳು ಕುತೂಹಲ:
ಹಿಡಿದಿಡುವವು ವ್ಯಾಮೋಹದ ಸಂಕೋಲೆ ಹಾಕಿ
ಒಂದಡಿ ಆಚೆಯಿಟ್ಟರೂ ಹೆಜ್ಜೆ ಸಪ್ಪಳ ಕೇಳಿ
ಎಲ್ಲರೂ ನಮ್ಮತ್ತಲೇ ನೋಡುತ್ತಿರುವಂತೆನಿಸಿ
ಹಿಂಜರಿದು ಮತ್ತದೇ ಕುರ್ಚಿಗೊರಗಿ ಕೂತು
ಇದೇ ಸುಖವೆನ್ನುತ್ತ ಇದೇ ಸರಿಯೆನ್ನುತ್ತ.
Monday, June 28, 2021
ಪ್ರಸಾಧನ
ಕುದಿಯುತ್ತಿರುವ ನೀರು ಪನ್ನೀರಾಗಿ ನಳದಲಿಳಿದು
ಬಕೆಟ್ಟಿನಲಿ ಹಬೆಯಾಡುತ್ತ ತುಂಬಿಕೊಳ್ಳಲು
ಎಣ್ಣೆ ಸವರಿದ ಮೈಯ ಮಗಳು ಬಲಗಾಲಿಟ್ಟು
ಬಚ್ಚಲಿಗೆ ಕಾಲಿಡುವಾಗ ಮಲೆನಾಡ ನೆಲ
ಬರಮಾಡಿಕೊಳ್ಳುವುದು ಘಮಗುಡುವ ಸಾಬೂನು ಹಿಡಿದು
ದಿನಾ ಅಮ್ಮನಿಂದಲೇ ಸ್ನಾನಗೊಳುವ ಮಗಳಿಗೆ
ಭಾನುವಾರದ ಈ ದಿನ ಅಪ್ಪನ ಕೈಯ ಕಚಗುಳಿ
ಅನನುಭವಿ ಅಪ್ಪನಿಗೆ ಮಗಳೇ ಹೇಳಬೇಕು
ಕಣ್ಣುರಿಯದಂತೆ ಮುಖಕೆ ಸೋಪು ಸವರುವ ರೀತಿ
ಸ್ವಲ್ಪ ಒತ್ತಿದರೂ ಜಾಸ್ತಿ ಕೈಗೆ ಬರುವ ಶಾಂಪೂ
ಏನು ಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾದ ಅಪ್ಪನಿಗೆ
ಅದನು ಕಮೋಡಿಗೆ ಸುರಿಯುವ ಟಿಪ್ ಮಗಳೇ ಕೊಡಬೇಕು
ಕಡಿಮೆಯಾದರೆ ಚಳಿಚಳಿಯೆಂದು ಕುಣಿದಾಡುವ
ಮಗಳ ಸಂಬಾಳಿಸಲಾಗದೆ ಒದ್ದಾಡುತ್ತಿರುವ ಅಪ್ಪ;
ಮಗಳಿಗೆ ಸ್ನಾನ ಮಾಡಿಸುವ ನೆಪದಲಿ ತಾನೂ
ಪೂರ್ತಿ ಒದ್ದೆಯಾಗಿ ಮಿಕಮಿಕ ನೋಡುವ ಬೆಪ್ಪ;
ಬಚ್ಚಲ ಈ ಪ್ರಹಸನಕೆ ಬ್ರಶ್ಶು ಪೇಸ್ಟು ಶಾಂಪೂಗಳೇ
ಮೊದಲಾದ ಪ್ರೇಕ್ಷಕರಿಗೆ ಇವತ್ತು ಪುಕ್ಕಟೆ ಮನರಂಜನೆ
ನೀರಾಟ ಜಾಸ್ತಿಯಾಗಿ ತಂಡಿಯಾಗಿ ಜ್ವರ ಬಂದು
ಅಪ್ಪನಿಗೆ ಅಮ್ಮ ಬೈದು ಭಾರೀ ಗಂಡಾಂತರ!
ತಾನೇ ಹೊಯ್ದುಕೊಳ್ಳಲಿರುವ ಕೊನೆಯ
ಎರಡು ಬಿಂದಿಗೆಯೊಂದಿಗೆ ಸ್ನಾನ ಮುಗಿಸಿ
ಹಬೆಹಬೆ ಸೆಖೆಸೆಖೆಯಲ್ಲೇ ಹೊರಬಂದು
ಮೆತ್ತನೆ ಬಟ್ಟೆಯಲಿ ಮೈಯೊರೆಸಿ
ತಲೆಗೆ ಬಿಸಿಗಾಳಿ ಹರಿಸಿ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ-
ವ ಮನದಲ್ಲೆ ಗುನುಗಿ ಸಾಕಪ್ಪಾ ಸಾಕೆನಿಸಿ ಉಸ್ಸೆನ್ನುತ್ತ
ಕೋಣೆಯಿಂದ ಬೆವರುತ್ತ ಹೊರಬರುತ್ತಿರುವ
ಈ ಜಗದೇಕವೀರನ ಅಡುಗೆಮನೆಯ ಬಾಗಿಲಿಗೊರಗಿ
ನೋಡುತ್ತ ನಸುನಗುತ್ತಿರುವ ಅಮ್ಮ
ಬೆಳಕಿನೆಡೆಗೆ ಹೆಜ್ಜೆಯಿಡುತ್ತಿರುವ ತಾಜಾ
ಸುರಾಸುಂದರಿಯ ನೋಡಿ ಕೈಲಟಿಕೆ ತೆಗೆದು
ದೃಷ್ಟಿ ಬಳಿಯುತ್ತಿರುವ ದೇವರಮನೆಯ ಮೂರುತಿಗಳು
ಸಿಂಗರಿಸಿಕೊಂಡು ಸಂಪನ್ನಗೊಳುವುದು:
ಮಗಳಿರುವ ಮನೆಗಳ ಸಿರಿಯ ನೋಡುತ್ತ.
Tuesday, March 16, 2021
ಅಜ್ಜ-ಅಜ್ಜಿ ಬಂದ ದಿನ
ಮೊಮ್ಮಗಳಿಗೆ ಬೇಗನೆ ಎಚ್ಚರ
ರಾತ್ರಿ ನಿದ್ರೆಯಾವರಿಸುವವರೆಗೂ ಮಾಡಿದ
ಅವರದೇ ಧ್ಯಾನ - ಬೆಳಗ್ಗೆ ಎದುರಿಗೇ ಪ್ರತ್ಯಕ್ಷವಾದಾಗ
ಮಾತು ಹೊರಡದೇ ಹಾಸಿಗೆಯಲ್ಲಿ ಕಕ್ಕಾಬಿಕ್ಕಿ
ಎತ್ತಿ ಇಳಿಸಿ ಮುದ್ದು ಮಾಡಿ
ಬ್ಯಾಗಿನ ಬಳಿಗೆ ಕರೆದೊಯ್ದು
ಉದ್ದನೆಯ ಜಿಪ್ಪನು ಎಳೆದು ತೆಗೆವಾಗ
ಹಕ್ಕಿಯೊಂದು ನಿಧಾನಕೆ ರೆಕ್ಕೆ ಬಿಚ್ಚುವ ಪವಾಡವ
ರೆಪ್ಪೆ ಬಡಿಯದೆ ನೋಡುವೆರಡು ಕಣ್ಣುಗಳು
ಮತ್ತು ಅಲ್ಲೀಗ ಮೊಮ್ಮಗಳಿಗೆಂದೇ ಅನಾವರಣಗೊಳ್ಳುವ
ವಿಧವಿಧ ವಸ್ತುಗಳ ಮಾಯಾಲೋಕ:
ಕಾಕಾ ಅಂಗಿ, ಜಾತ್ರೆಯ ಕಾರು,
ಹೊಸ ಬಳೆ, ಕಾಯಿಹೋಳಿಗೆ,
ಬಸ್ಸಿನ ನುಗ್ಗಿಗೆ ಸ್ವಲ್ಪವೇ ಗುಳುಚಲಾದ ಹಿತ್ತಿಲ ಹಣ್ಣು,
ಯಾರೋ ತಂದುಕೊಟ್ಟಿದ್ದ ಹಳೆಯ ಬಿಸ್ಕತ್ತಿನ ಪೊಟ್ಟಣ...
ಹಲ್ಲು ಉಜ್ಜಿಸಲು ಸ್ನಾನ ಮಾಡಿಸಲು
ಊಟ ಮಾಡಿಸಲು ಹಾಲು ಕುಡಿಸಲು
ಜೋಜಿ ಮಾಡಿಸಲು ಕುಂಡೆ ತೊಳೆಸಲು
ವಿವಿಧ ಮನೋರಂಜನೆಗಳ ಪ್ರದರ್ಶನ
ಡಬ್ಬಿಯ ತುಂಬ ಇರುವ ಆಟಿಕೆಗಳ ಪರಿಚಯ
ಕಲಿತಿರುವ ಇಪ್ಪತ್ತಕ್ಷರಗಳ ಬರೆದು ತೋರಿಸುವ ಖುಷಿ
ಬಣ್ಣಚಿತ್ತಾರ ಪುಸ್ತಕದಲಿ ಬೆರೆಯುವ ಕೆಂಪು ಹಸಿರು ನೀಲಿ
ಹೊಸ ಹಾಡು ಹೊಸ ಡಾನ್ಸು ಹೊಸ ಕಥೆ ವರ್ಣಮಾಲೆ
ಸಂಜೆ ಕೈಕಾಲು ತೊಳೆಸಿ ದೇವರ ಮುಂದೆ ಭಜನೆ ಮಾಡಿಸುವ ಅಜ್ಜಿ
ಈ ನಡುವೆ ಎಲ್ಲಿ ಹೋದರು ಅಪ್ಪ-ಅಮ್ಮ?
ಇಷ್ಟು ಸಣ್ಣಗಾದ ಮುಖ
ಅವರಿಲ್ಲೇ ಇರಬೇಕೆಂದು ಹಟ
ಕಣ್ಣಿಂದುದುರುವ ಹನಿಗಳು
ಬಸ್ಸು ಹೋದಮೇಲೆ ಮುಖ ಊದಿಸಿಕೊಂಡು
ಮನೆಗೆ ಬಂದು ಅದೇ ಮುನಿಸಲ್ಲಿ ನಿದ್ದೆ ಹೋಗಿ
ಒಂದು ವಾರದಿಂದ ಮೊಮ್ಮಗಳಿಗಾಗಿ ಅಜ್ಜಿ ಹಾಡುತ್ತಿದ್ದ
ಲಾಲಿಯ ಕಂಪಲ್ಲಿ ತಾನೂ ನಿದ್ರೆ ಹೋಗುತ್ತಿದ್ದ
ಅಜ್ಜಿಯ ಮಗನಿಗೆ ಈ ರಾತ್ರಿ ನಿದ್ರೆಯೇ ಬರುತ್ತಿಲ್ಲ.
Monday, February 22, 2021
ಬೇಗ ಮನೆಗೆ ಹೋದರೆ
ಕೇಳಿದರು ಆಫೀಸಿನಲ್ಲಿ ಕಲೀಗುಗಳು.
ಎಲ್ಲರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಂತಿಲ್ಲ;
ಆದರೆ ಬಾಯ್ಬಿಟ್ಟು ಹೇಳದೆಯೂ ಕೆಲವೊಮ್ಮೆ
ಉತ್ತರಗಳು ಹೊಳೆಯುತ್ತವೆ
ಕಿಟಕಿಯಿಂದ ಕಾಣುವ ಪುಕ್ಕಟೆ ಸಿನೆಮಾಗಳ ಹಾಗೆ
ಮುಂಚೆ ಮನೆಗೆ ಹೊರಟರೆ
ಬೀದಿಬದಿಯ ಗಾಡಿಯವ
ಸೂರ್ಯಾಸ್ತದ ಗುಲಾಬಿಯಿಂದ ಮಾಡಿದ
ಬಾಂಬೆಮಿಠಾಯಿಯ ಕಟ್ಟಿಸಿ ಒಯ್ಯಬಹುದು
ಬಾಯ್ಗಿಟ್ಟರೆ ಕರಗುವ ಸೋಜಿಗವು
ಮಗಳ ಕಣ್ಣಲಿ ಹೊಳೆಹೊಳೆವಾಗ
ನಾನದನು ನೋಡಿ ಖುಷಿ ಪಡಬಹುದು
ಬಣ್ಣಚಿತ್ರಗಳ ತೋರಿಸುವಾಗ
ಹಕ್ಕಿಯನು ಇಲಿಯೆಂದೂ
ರೈಲನು ಬಾಳೆಹಣ್ಣೆಂದೂ
ತಪ್ಪಾಗಿ ಗುರುತಿಸಿ
ನಂತರ ಅವಳಿಂದ ನನ್ನನು ತಿದ್ದಿಸಿಕೊಳ್ಳಬಹುದು
ತಲೆಗೆ ತಾಕುವ ಮಂಚದಡಿಗೆ ನುಸುಳಿ ಬಚ್ಚಿಟ್ಟುಕೊಂಡು
ಕಣ್ಣಾಮುಚ್ಚೇ ಕಾಡೇಗೂಡೇ
ಮುಗಿಯುವುದ ಕಾದು
ಉಸಿರು ಬಿಗಿಹಿಡಿದು ಕೂರಬಹುದು
ಬೇಡದ ಊಟವ ಹೇಗೋ ಉಣಿಸಿ
ಅವಳೊಂದಿಗೆ ನಾನೂ ಉಂಡು
ಇಡೀದಿನ ಕುಣಿದ ಕಾಲಿಗೆ ಎಣ್ಣೆ ಸವರಿ
ಬಾರದ ನಿದ್ರೆಗೆ ಜೋಗುಳ ಹಾಡಿ
ಅವಳಿಗಿಂತ ಮೊದಲು ನಾನು ನಿದ್ರೆ ಹೋಗಿ
ಹೇಗೆ ತ್ರಾಣ ಬರುವುದು ಅಂತ ಕೇಳಿದ
ಕಲೀಗುಗಳಿಗೆ ಹೇಳಿದೆ:
ಅವಳೇ ತಿದ್ದಿದ ನನ್ನ ತಪ್ಪುಗಳು
ಮಂಚದಡಿಗಿನ ಪ್ರಾಣಾಯಾಮ
ಕಾಲಿಗೆ ಸವರಿದ ಕೊಬ್ಬರಿ ಎಣ್ಣೆ
ರೂಮಿನಲ್ಲಿ ಧ್ವನಿಸುತ್ತಿದ್ದ ಜೋಗುಳ
ಮತ್ತೆ ಕಸುವು ತುಂಬಲು ಎಷ್ಟೊಂದು ಕಾರಣಗಳು...
ಅದಕ್ಕೇ ನಿಮ್ಮ ಕಣ್ಣಲ್ಲಿ ಇಷ್ಟೊಂದು ಹೊಳಪು.
Monday, February 08, 2021
ಆಲೆಮನೆ ಎಂಬ ಸಂಸ್ಕೃತಿ ಶಿಬಿರ
ಈಗ ಇಡೀ ಊರಿಗೇ ಆಲೆಮನೆಯ ಸಂಭ್ರಮ. ಸೈಕಲ್ಲೇರಿ ಗದ್ದೆಯ ಕಡೆ ಹೊರಟ ಹುಡುಗರ ದಂಡು, ಕಬ್ಬಿನ ಹಾಲು ತರಲು ಉಗ್ಗ ಹಿಡಿದು ಹೊರಟ ಶಾಂತಕ್ಕ, ಬಿಸಿಬೆಲ್ಲ ತಿನ್ನುವ ಆಸೆಯಿಂದ ಬೀಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಪಂಚೆ ಏರಿಸಿ ಹೊರಟ ಕಿಟ್ಟೂಭಟ್ರು, ಎರಡು ಡಬ್ಬಿ ಒಳ್ಳೇ ಬೆಲ್ಲ ಬುಕ್ ಮಾಡಿ ಬರಬೇಕೆಂದು ಹೊರಟ ಕೆಳಗಿನಮನೆ ಶಂಕರ... ಹೀಗೆ ಎಲ್ಲರೂ ಆಲೆಮನೆಯೆಡೆ ದೌಡಾಯಿಸುತ್ತಾರೆ. ರಸ್ತೆಯಿಂದ ಅನತಿದೂರದಲ್ಲಿ ಆಗಲೇ ಒಲೆ ಹೂಡಿ, ಬೆಂಕಿ ಹೊತ್ತಿಸಿದ್ದಾಗಿ ಎದ್ದ ಹೊಗೆ ‘ಆಲೆಮನೆ ಇಲ್ಲೇ ಇದೆ’ ಅಂತ ಗುರುತು ಹೇಳುತ್ತಿದೆ. ರಸ್ತೆ ಬದಿ ಬೇಲಿಯ ಸಣ್ಣ ದಣಪೆ ದಾಟಿ ಬದುವಿನ ಮೇಲೆ ನಡೆದು ಜೋನಿಬೆಲ್ಲದ ಕಂಪಿನ ಜಾಡು ಹಿಡಿದು ಆಲೆಮನೆಯೆಡೆ ನಡೆಯುತ್ತಿದ್ದರೆ ಅಕೋ ಆಗಲೇ ಕೇಳಿಬರುತ್ತಿದೆ ಕೋಣ ಹೊಡೆಯುವವನ ರಾಗಬದ್ಧ ಹಾಡು: “ನೆಡೀ ಕ್ವಾಣಾ... ಓಓಓ... ಅರೀ ಕಣಾ.. ಓಓಓ.. ನೆಡೀ ಬ್ಯಾಗಾ... ಹೈ.. ಹ್ವಾಯ್.”
ಆಲೆಮನೆಯಲ್ಲಾಗಲೇ ತುರುಸಿನ ಚಟುವಟಿಕೆಗಳು ಶುರುವಾಗಿವೆ. ಜನವೆಲ್ಲ ಲಗುಬಗೆಯಿಂದ ಓಡಾಡುತ್ತಿದ್ದಾರೆ. ದೂರದಲ್ಲಿ ಕಾಣುವ ಗದ್ದೆಯಲ್ಲಿ ಕಬ್ಬಿನ ಕಟಾವು ನಡೆಯುತ್ತಿದೆ. ಕಡಿದ ಕಬ್ಬನ್ನು ಹೊರೆ ಕಟ್ಟಿ ಹೊತ್ತು ತಂದು ಆಲೆಮನೆಯ ಬಳಿ ರಾಶಿ ಹಾಕುತ್ತಿದ್ದಾರೆ. ಕಣೆಯ ಬಳಿ ಕೂತ ಯುವಕನೊಬ್ಬ ಒಳ್ಳೊಳ್ಳೆಯ ಕಬ್ಬುಗಳನ್ನು ರಾಶಿಯಿಂದ ಎಳೆದೆಳೆದು ಗಾಣಕ್ಕೆ ಕೊಡುತ್ತಿದ್ದಾನೆ. ಮತ್ತೊಬ್ಬ ಆ ಕಡೆ ಸಂಗ್ರಹವಾಗುತ್ತಿರುವ ಚರಟವನ್ನು ಬುಟ್ಟಿಯಲ್ಲಿ ತುಂಬಿಕೊಂಡು ಗದ್ದೆಯ ಮತ್ತೊಂದೆಡೆ ಸುರಿಯುತ್ತಿದ್ದಾನೆ. ಯಂತ್ರದಿಂದ ಹೊರಬಿದ್ದ ಕಬ್ಬಿನರಸ ಪೈಪಿನಲ್ಲಿ ಸಾಗಿ ಸ್ವಲ್ಪ ದೂರದಲ್ಲಿರುವ ಬಾನಿಗೆ ಬೀಳುತ್ತಿದೆ. ಆ ಬಾನಿಗೆ ಒಂದು ಸಾಟಿಪಂಚೆಯನ್ನು ಜರಡಿಯಂತೆ ಮುಚ್ಚಲಾಗಿದೆ. ಮತ್ತೊಂದೆಡೆ ಹೊತ್ತಿ ಉರಿಯುತ್ತಿರುವ ಬೃಹತ್ ಒಲೆಯಿಂದ ಭಾರೀ ಶಾಕ ಹೊಮ್ಮುತ್ತಿದೆ. “ಮಕ್ಳು-ಮರೀನ ದೂರ ಕರ್ಕಂಡ್ ಹೋಗೀ.. ಒಲೆ ಹತ್ರ ಬರ್ಬೇಡೀ” ಅಂತ ಹಿರಿಯರು ಎಚ್ಚರಿಸುತ್ತಿದ್ದಾರೆ. ಭಾರದ ಕೊಪ್ಪರಿಗೆಯ ಹಿಡಿಕೈಗಳಿಗೆ ಎರಡು ಗಟ್ಟಿ ಬಿದಿರಿನಗಳ ತೂರಿಸಿ, ಆ ಗಳದ ಸಹಾಯದಿಂದ ನಾಲ್ಕು ಜನ ಕೊಪ್ಪರಿಗೆಯನ್ನು ತಂದು ಒಲೆಯ ಮೇಲೆ ಇಡುತ್ತಿದ್ದಾರೆ. ಹಾಗೆ ಇಟ್ಟ ಕೊಪ್ಪರಿಗೆಗೆ ಬಾನಿಯಲ್ಲಿ ಸಂಗ್ರಹವಾದ ಕಬ್ಬಿನ ಹಾಲನ್ನು ತಂದು ಸುರಿಯುತ್ತಿದ್ದಾರೆ. ಮತ್ಯಾರೋ ಊದ್ದದೊಂದು ಕೋಲಿನಿಂದ ಒಲೆಯ ಬೆಂಕಿಯನ್ನು ಸರಿ ಮಾಡುತ್ತಿದ್ದಾರೆ. ಕೆನ್ನಾಲಿಗೆ ಚಾಚುತ್ತ ನಿಗಿನಿಗಿ ಉರಿಯುತ್ತಿರುವ ಬೆಂಕಿಯ ಕಾವಿಗೆ ಕಬ್ಬಿನ ಹಾಲು ಕೊತಕೊತ ಕುದಿಯುತ್ತಿದೆ. ಇನ್ನೊಬ್ಬರು ಉದ್ದ ಹಿಡಿಕೆಯ ಜರಡಿ ಬಳಸಿ ಕುದಿವ ಹಾಲು ಹೊರಹಾಕುವ ಜೊಂಡು ತೆಗೆಯುತ್ತಿದ್ದಾರೆ. “ಪಾಕ ಬಂತಾ ನೋಡ್ರೋ” ಅಂತ ಮತ್ಯಾರೋ ಕೂಗುತ್ತಾರೆ. ಕಬ್ಬಿನ ರಸ ಕುದ್ದು ಪಾಕಗಟ್ಟಿದ ಹದ ತಿಳಿಯಲು ಅನುಭವಸ್ಥರೇ ಬೇಕು. ಎಳೇಪಾಕಕ್ಕೆ ಕೊಪ್ಪರಿಗೆಯನ್ನು ಒಲೆಯಿಂದ ಎತ್ತಿಬಿಟ್ಟರೆ, ಅಥವಾ ಏರುಪಾಕವಾಗಲು ಬಿಟ್ಟರೆ ಬೆಲ್ಲ ಚೆನ್ನಾಗಿ ಆಗುವುದಿಲ್ಲ. ವರ್ಷಪೂರ್ತಿ ಬಾಳಿಕೆ ಬರುವುದಿಲ್ಲ. ಒಂದೆರಡು ತಿಂಗಳಲ್ಲೇ ಹುಳಿ ಬಂದುಬಿಡುತ್ತದೆ. ಹೀಗಾಗಿ ಬಹಳ ವರ್ಷಗಳಿಂದ ಆಲೆ ಮಾಡಿ ಅನುಭವವಿರುವವರು ಕೊಪ್ಪರಿಗೆಯನ್ನು ಇಳಿಸುವ ಸಮಯಕ್ಕೆ ಹಾಜರಿರುತ್ತಾರೆ. ಅವರು ನೋಡಿ ಸಮ್ಮತಿ ಕೊಟ್ಟಮೇಲಷ್ಟೇ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಇಳಿಸುವುದು ಮತ್ತು ತಂದು ಮರಿಗೆಗೆ ಸುರಿಯುವುದು.
ಮಲೆನಾಡಿನ ಆಲೆಮನೆಗೆ ಬಂದ ಅತಿಥಿಗಳಿಗೆ ಯಾವಾಗಲೂ ಭರ್ಜರಿ ಸ್ವಾಗತವೇ ದೊರಕುವುದು. ಬಾನಿಗೆ ಬೀಳುತ್ತಿರುವ ಕಬ್ಬಿನ ಹಾಲನ್ನು ಚೊಂಬಿನಿಂದ ಹಿಡಿದು, ಲೋಟಕ್ಕೆ ಬಗ್ಗಿಸಿ “ಎಷ್ಟ್ ಕುಡೀತಿರೋ ಕುಡೀರಿ” ಅಂತ ಹಂಚುತ್ತಾರೆ ಯಜಮಾನರು. “ಬೇಕಿದ್ರೆ ನಿಂಬೆ ಹಣ್ಣು ಹಿಂಡಿಕೊಳ್ಳಿ” ಅಂತ ಉಪಚಾರ ಮಾಡುತ್ತಾರೆ. ತಂಪಾದ ಸಿಹಿಯಾದ ತಾಜಾ ಹಾಲನ್ನು ಕತ್ತೇರಿಸಿ ಗಟಗಟ ಕುಡಿಯುತ್ತಿದ್ದರೆ ಎಷ್ಟು ಕುಡಿದೆವೆಂಬ ಲೆಕ್ಕವೇ ಸಿಗುವುದಿಲ್ಲ. ಹೊಟ್ಟೆ ತುಂಬಿ ಕುಲುಕುಲುಗುಟ್ಟುವಾಗ ಅವರು, “ಬಿಸಿ ಬೆಲ್ಲ ತಿನ್ತೀರೇನು?” ಅಂತ ಕೇಳುತ್ತ, ಚಪ್ಪರದಡಿಗೆ ಕರೆದೊಯ್ದು, ಅಲ್ಲಿ ಮರಿಗೆಯಲ್ಲಿ ಆಗಷ್ಟೆ ಬಗ್ಗಿಸಿ ಆರಲು ಇಟ್ಟಿರುವ ಬೆಲ್ಲವನ್ನು ಬಾಳೆಯೆಲೆಗೆ ಹಾಕಿ, ಸಣ್ಣದೊಂದು ಕಬ್ಬಿನ ಸಿಪ್ಪೆಯನ್ನು ಚಮಚದಂತೆ ಮಾಡಿಕೊಡುತ್ತಾರೆ. ಮುಳುಗುತ್ತಿರುವ ಸೂರ್ಯ, ತಣ್ಣಗೆ ಬೀಸುತ್ತಿರುವ ಸಂಜೆಗಾಳಿ, ಓಡಾಡುವ ಜನರ ಸರಬರ, ಕೋಣ ಹೊಡೆಯುವವನ ಹಾಡು… ಎಲ್ಲ ಬೆರೆತ ಈ ಸಾಯಂಕಾಲ ಗದ್ದೆಬಯಲಿನಲ್ಲಿ ನಿಂತು ಬಿಸಿಬೆಲ್ಲ ತಿನ್ನುತ್ತಿದ್ದರೆ, ಈ ರುಚಿಗೆ ಸರಿಸಮನಾದ್ದು ಮತ್ತೊಂದಿಲ್ಲವೇ ಇಲ್ಲ ಎನಿಸಿಬಿಡುತ್ತದೆ. ಆಲೆಮನೆಯಿಂದ ವಾಪಸು ಬರುವಾಗ ಒಂದಷ್ಟು ಬೆಳೆದ ಕಬ್ಬುಗಳನ್ನು ಸೈಕಲ್ಲಿಗೆ ಕಟ್ಟಿಕೊಂಡು ಬಂದು ಮನೆಯಲ್ಲಿ ಎರಡ್ಮೂರು ದಿನ ಕಬ್ಬು ಸಿಗಿಯುವ ಹಬ್ಬ ಮಾಡುತ್ತವೆ ಮಕ್ಕಳು.
ಆಲೆಮನೆಯ ರೀತಿ-ರಿವಾಜುಗಳು ಇತ್ತೀಚಿನ ವರ್ಷಗಳಲ್ಲಿ ಬಹಳವೇ ಬದಲಾಗಿವೆ. ಕಬ್ಬು ಬೆಳೆಯುವುದು – ಬೆಲ್ಲ ಮಾಡಿ ಮಾರುವುದು ಸಣ್ಣ ಜಮೀನುದಾರರಿಗೆ ಲಾಭದಾಯಕ ಉದ್ದಿಮೆಯೇನು ಅಲ್ಲ. ಸಾಮಾನ್ಯವಾಗಿ ಅವರೆಲ್ಲ ಗದ್ದೆಯ ಒಂದು ಭಾಗದಲ್ಲಿ ಕಬ್ಬು ಬೆಳೆದು ತಮ್ಮ ಮನೆಗೆ, ಅಕ್ಕ-ಪಕ್ಕದ ಮನೆಯವರಿಗೆ, ನೆಂಟರಿಷ್ಟರಿಗೆ ಆಗುವಷ್ಟು ಮಾತ್ರ ಬೆಲ್ಲ ಮಾಡಿಕೊಂಡು ಸುಮ್ಮನಾಗುತ್ತಾರೆ. ಕಬ್ಬಿನ ಬೆಳೆಗೆ ಬರುವ ರೋಗಗಳು, ಕಾಡುಪ್ರಾಣಿಗಳ ಕಾಟ, ಆಲೆಯ ಕಣೆಯ ಬಾಡಿಗೆ, ದುಬಾರಿ ಗುತ್ತಿಗೆದಾರರು, ಅಸ್ಥಿರವಾದ ಬೆಲ್ಲದ ಬೆಲೆ... ಇತ್ಯಾದಿ ಸಮಸ್ಯೆಗಳಿಂದ ಬೆಳೆಗಾರರು ಬೇಸತ್ತಿದ್ದಾರೆ. ಅಲ್ಲದೇ ಗಾಣ ಕಟ್ಟಿ ಕೋಣಗಳನ್ನು ಬಳಸಿ ಮಾಡುವ ಆಲೆಮನೆಗಳ ಸಂಖ್ಯೆಯೂ ವಿರಳವಾಗಿದೆ. ಪೆಟ್ರೋಲ್ ಅಥವಾ ಡೀಸಲ್ ಎಂಜಿನ್ನಿನ ದೊಡ್ಡ ಯಂತ್ರಗಳು ರಾಶಿಗಟ್ಟಲೆ ಕಬ್ಬನ್ನು ಒಂದು ದಿನದಲ್ಲಿ ಅರೆದುಬಿಡುತ್ತವೆ. ರಾತ್ರಿಯಿಡೀ ನಿದ್ರೆಗೆಟ್ಟು ಮೂರ್ನಾಲ್ಕು ದಿನ ಆಲೆ ಮಾಡುವ ಜರೂರತ್ತಿಲ್ಲ. ಹೀಗಾಗಿ ಆಲೆಮನೆಗಳೂ ಆಧುನಿಕಗೊಂಡಿವೆ.
ನಗರದ ಮೋಹಕ್ಕೋ ಅನಿವಾರ್ಯತೆಗೋ ಸಿಲುಕಿ ಹಳ್ಳಿ ಬಿಟ್ಟು ಪೇಟೆ ಸೇರುತ್ತಿರುವ ಯುವ ಜನಾಂಗಕ್ಕೆ ಊರಿನ ಆಲೆಮನೆಯ ನೆನಪು ಆಗಾಗ ಧುತ್ತನೆ ಆವರಿಸಿಬಿಡುತ್ತದೆ. ಏಕೆಂದರೆ ಆಲೆಮನೆಯೆಂಬುದು ಕೇವಲ ಕಬ್ಬು ಬೆಳೆದು ಬೆಲ್ಲ ಮಾಡಿ ಮಾರುವ ಉದ್ಯಮವಲ್ಲ... ಅದೊಂದು ಸಂಸ್ಕೃತಿ ಶಿಬಿರ. ವರ್ಷವಿಡೀ ಜತನ ಮಾಡಿ ಬೆಳೆದ ಬೆಳೆ, ಆಲೆಮನೆಗೆ ಮಾಡುವ ತಯಾರಿ, ಅಹೋರಾತ್ರಿ ನಡೆವ ಆಲೆ, ಕಿಡಿಯೆಬ್ಬಿಸುತ್ತ ಉರಿವ ಬೆಂಕಿ, ತಿರುಗುವ ಕೋಣಗಳು, ಹಾಡು-ಹಾಸ್ಯಗಳ ನಡುವೆ ಗದ್ದೆಬಯಲಲ್ಲಿ ತಂಗುವ ದಿನಗಳು, ಗ್ರಾಮಸ್ಥರು-ನೆಂಟರಿಷ್ಟರ ಸಮಾಗಮ, ಕೊಡು-ಕೊಳ್ಳುವ, ಮತ್ತೊಬ್ಬರಿಗೆ ತೃಪ್ತಿಯಾಗುವಷ್ಟು ಉಣಿಸುವ ಖುಷಿ… ಹೀಗೆ ಅದೊಂದು ಸಂಭ್ರಮದ ಹಬ್ಬ. ಅದಕ್ಕಾಗಿಯೇ ಇತ್ತೀಚೆಗೆ ‘ಆಲೆಮನೆ ಉತ್ಸವ’ಗಳನ್ನು ಆಯೋಜಿಸಲಾಗುತ್ತಿದೆ. ಹಳೆಯ ಸಂಸ್ಕೃತಿಯೊಂದನ್ನು ಉಳಿಸುವಲ್ಲಿ – ಕನಿಷ್ಟ ನೆನಪಿಟ್ಟುಕೊಳ್ಳುವಲ್ಲಿ ಇಂತಹ ಉತ್ಸವಗಳು ಕಿಂಚಿತ್ತಾದರೂ ನೆರವಾಗುತ್ತವೆ. ಪಟ್ಟಣ-ನಗರವಾಸಿಗಳಿಗೆ ಆಲೆಮನೆಯನ್ನು ಪರಿಚಯಿಸಿದಂತೆಯೂ ಆಗುತ್ತದೆ.
ಎಷ್ಟೇ ಕಾಲ ಬದಲಾದರೂ ಪಾರಂಪರಿಕ ಆಲೆಮನೆಗಳು ಅಲ್ಲಲ್ಲಿ ನಡೆಯುತ್ತವೆ. ಗದ್ದೆಯ ಮೂಲೆಯಲ್ಲಿ ಕೊಪ್ಪರಿಗೆಗೆ ಹಾಕಿದ ಒಲೆಯಿಂದ ಹೊಗೆಯೇಳುತ್ತಿರುವುದು ಕಾಣುತ್ತದೆ. ಪಕ್ಕದಲ್ಲಿ ಹಾಕಿರುವ ಚಪ್ಪರ ದಾರಿಹೋಕರನ್ನು ಕರೆಯುತ್ತದೆ. ತಿರುಗುತ್ತಿರುವ ಕೋಣಗಳಿಗೆ ತಲೆಸುತ್ತು ಬಾರದಂತೆ ಆಗಾಗ ತಣ್ಣೀರು ಸೋಕುತ್ತ ಕೋಲು ಹಿಡಿದು ಅವುಗಳ ಹಿಂದೆ ಸುತ್ತುತ್ತಿರುವವ ತನ್ನ ಕೀರಲು ಕಂಠದಲ್ಲಿ ಹಾಡುತ್ತಿರುತ್ತಾನೆ: “ಅರೆ ಕ್ವಾಣಾ.. ಓಓಓ.. ಕರಿ ಕ್ವಾಣಾ.. ಓಓಓ..”
Tuesday, February 02, 2021
ದಿಂಬುಗಳು
ಅನ್ಯಥಾ ಭಾವಿಸಬೇಡಿ
ನೀವು ಯಾವತ್ತಾದರೂ ಹಾಸಿಗೆ ಕೊಳ್ಳಲು ಹೋದಾಗ
ಹಾಸಿಗೆಯಿದ್ದಷ್ಟೇ ದಿಂಬು ಕೊಡಿ ಎಂದು ಹೇಳಬೇಡಿ;
ಖರ್ಚಿನ ಜೊತೆಗೆ ಖರ್ಚು,
ಎರಡು ದಿಂಬುಗಳನ್ನು ಎಕ್ಸ್‌ಟ್ರಾ ಕೊಳ್ಳಿ
ದಿಂಬುಗಳು ಹೆಚ್ಚಿದ್ದಷ್ಟೂ ಒಳ್ಳೆಯದು
ಯಾಕೇಂತ ಹೇಳ್ತೇನೆ ಕೇಳಿ
ಮನೆಗೆ ನೆಂಟರು ಬಂದ ಮಧ್ಯಾಹ್ನ
ಜಗಲಿಯಲ್ಲೊಂದು ಕಂಬಳಿ ಹಾಸಿ
ಈ ಎಕ್ಸ್‌ಟ್ರಾ ದಿಂಬುಗಳನ್ನು ಅವರಿಗೆ ಕೊಡಿ
ಅವರು ಹಾಗೇ ಅಡ್ಡಾಗುವರು
ನಿಮ್ಮ ಮಕ್ಕಳ ಜೊತೆ ಸೇರಿ
ಅದೇ ದಿಂಬುಗಳನ್ನು ಒಂದರ ಮೇಲೊಂದು ಪೇರಿಸಿ
ಆಟವಾಡಿ ನಿಮ್ಮ ಮನರಂಜಿಸುವರು
ಶುಭಕಾರ್ಯದ ಮನೆಯ ಅಂಗಳಕ್ಕೆ
ಇಸ್ಪೀಟು ಮಂಡಲದ ಭೂಪರು ಒರಗಲಿಕ್ಕೆ
ಜೋಮು ಬಂದ ಅಜ್ಜನ ಕೈಯಡಿಗೆ ಇಡಲಿಕ್ಕೆ
ನೀವು ಇದೇ ದಿಂಬು ಬಳಸಬಹುದು
ಮಲಗಿ ವಿರಹವ ಕಳೆಯಬಹುದು
ಎಷ್ಟತ್ತರೂ ಮುಗಿಯದ ದುಃಖವ
ದಿಂಬಿನ ಮೈಯೊದ್ದೆ ಮಾಡಿ ತೀರಿಸಿಕೊಳ್ಳಬಹುದು
ಈ ಜಗತ್ತಲ್ಲಿ ಕರ್ಚೀಫು ಬಿಟ್ಟರೆ
ಅಷ್ಟೊಂದು ಕಣ್ಣೀರು ಕುಡಿದ ವಸ್ತ್ರ
ದಿಂಬಿನ ಕವರು ಮಾತ್ರ
ಅದೆಷ್ಟೋ ಜನರ ಉಸಿರು ತುಂಬಿದ
ದಿಂಬುಗಳ ಬಲದ ಮೇಲೆಯೇ
ರೈಲೊಂದು ಸಾವಿರ ಮೈಲಿ ಸಾಗುತ್ತದೆ
ಖರ್ಚಿನ ಜೊತೆಗೆ ಖರ್ಚು
ಎರಡು ದಿಂಬು ಎಕ್ಸ್‌ಟ್ರಾ ಕೊಳ್ಳಿ.
Wednesday, January 20, 2021
ಕಂಪನ
ವಿಲ್ ಬರೆಸುವವರ ಕೈ ಸಣ್ಣಗೆ ನಡುಗುತ್ತಿರುತ್ತದೆ
ಅಂಬಾಸಿಡರ್ ಕಾರಿನ ಗೇರಿನಂತೆ
ಅವರ ಬಳಿ ಗಟ್ಟಿಯಾಗಿ ಮಾತಾಡಬೇಡಿ
ಗಾಜಿನ ಕವಚದ ಅವರ ಹೃದಯ
ಫಳ್ಳನೆ ಒಡೆದು ಹೋಗಬಹುದು
ಕುರ್ಚಿಗೊರಗದೆ ಕೂತು ತುಸುವೆ ಬಾಗಿ
ಮೆಲುದನಿಯಲವರಾಡುವ ಮಾತು ಕೇಳಿಸಿಕೊಳ್ಳಿ:
ಅಷ್ಟೆಲ್ಲ ಮಾಡಿದರೂ ತನ್ನನು ತಾತ್ಸಾರ ಮಾಡುವ
ಹಿರಿಮಗನ ಬಗೆಗಿನ ಅವರ ಅಸಮಾಧಾನ
ವಿದೇಶದಲ್ಲಿದ್ದರೂ ಆಗೀಗ ಫೋನು ಮಾಡುವ
ಕಿರಿಮಗನೆಡೆಗೆ ಅದೇನೋ ಅಭಿಮಾನ
ಈಗಾಗಲೇ ಹಿಸ್ಸೆ ತೆಗೆದುಕೊಂಡು ಬೇರಾಗಿರುವ
ಮಧ್ಯದ ಮಗನ ಬಗ್ಗೆ ಸಿಡುಕು
ಹೆಣ್ಣುಮಕ್ಕಳನ್ನೆಲ್ಲ ಒಳ್ಳೇ ಕಡೆ ಸೇರಿಸಿದ್ದೇನೆ
ಎನ್ನುವಾಗ ನೆಮ್ಮದಿಯ ಸಣ್ಣನಗೆ
ಯಾವುದಕ್ಕೂ ಟಿಶ್ಯೂ ರೆಡಿಯಿಟ್ಟುಕೊಂಡಿರಿ:
ನಾಲ್ಕು ವರ್ಷದ ಹಿಂದೆ ಗತಿಸಿದ
ಹೆಂಡತಿಯ ಬಗ್ಗೆ ಹೇಳುವಾಗ
ಫಕ್ಕನೆ ಕಣ್ಣೀರೂ ಉಕ್ಕೀತು
ಆ ಟಿಶ್ಯೂವನ್ನೇನು ಅವರು ಬಳಸುವುದಿಲ್ಲ
ಮಂಜುಗಟ್ಟಿದ ಕನ್ನಡಕ ತೆಗೆದು
ತಮ್ಮದೇ ಕರವಸ್ತ್ರದಿಂದ ಒರೆಸಿಕೊಂಡು...
ನಿಮ್ಮ ಕತೆ ಬೇಡ, ಆಸ್ತಿ ವಿಲೇವಾರಿ ಬಗ್ಗೆ
ಹೇಳಿ ಸಾಕು ಅಂತೆಲ್ಲ ರೇಗಬೇಡಿ
ರಿಟೈರಾದ ದಿನ ಸಹೋದ್ಯೋಗಿಗಳು
ಹಾರ ಹಾಕಿ ಮಾಡಿದ ಸನ್ಮಾನದ ಬಗ್ಗೆ
ಅವರಿಗೆ ಹೇಳಿಕೊಳ್ಳಬೇಕಿದೆ, ಕೇಳಿಸಿಕೊಳ್ಳಿ
ಕೆಲಸ ಮುಗಿಸಿ ನಿಮ್ಮ ಕಚೇರಿಯಿಂದ
ಹೊರಟಾಗ ಅವರ ಜತೆಗೇ ತೆರಳಿ
ಮೆಟ್ಟಿಲು ಇಳಿಯುವಾಗ ಕೈ ಹಿಡಿದುಕೊಳ್ಳಿ
ಬೇಡ ಬೇಡ ಎನ್ನುತ್ತಲೇ ವಾಲುದೇಹವನ್ನು
ಸಂಬಾಳಿಸಿಕೊಳ್ಳುತ್ತ ಕೈಚೀಲದಲ್ಲಿನ
ಕಾಗದ ಪತ್ರಗಳನ್ನು ಜೋಪಾನ ಮಾಡುತ್ತಾ...
ಆಮೇಲವರು ರಸ್ತೆಯ ತಿರುವಿನಲ್ಲಿ
ಕರಗಿಹೋಗುವರು ಪಶ್ಚಿಮದ ರವಿಯ ಹಾಗೆ
ನೀವು ವಾಪಸು ಕಚೇರಿಗೆ ಬಂದಾಗ
ಅರೆ, ಅದ್ಯಾಕೆ ನಿಮ್ಮ ಕೈ ಸಣ್ಣಗೆ ನಡುಗುತ್ತಿದೆ
ಅದ್ಯಾಕೆ ಹಾಗೆ ನಿರ್ವಾತವನ್ನು ತುಂಬಿಸಿಬಿಡುವವರ ಹಾಗೆ
ಹಳೆಯ ಹಿಂದಿ ಹಾಡುಗಳಿಗೆ ತಡಕಾಡುತ್ತಿದ್ದೀರಿ
ಎಂದೂ ಇಲ್ಲದವರು ಅದ್ಯಾಕೆ ಲಗುಬಗೆಯಿಂದ ಹೆಂಡತಿಗೆ
ಫೋನು ಮಾಡಿ ಏನು ಮಾಡ್ತಿದೀ ಅಂತೆಲ್ಲ ವಿಚಾರಿಸ್ತಿದೀರಿ
ಅದ್ಯಾಕೆ ಮಕ್ಕಳ ಫೋಟೋಗಳನ್ನು
ಸ್ಕ್ರಾಲ್ ಮಾಡಿ ಮಾಡಿ ನೋಡುತ್ತಿದ್ದೀರಿ
ಅದ್ಯಾಕೆ ಹಾಗೆ ನೀರು ಕುಡಿಯುತ್ತಿದ್ದೀರಿ
ಅದ್ಯಾಕೆ ಅದ್ಯಾಕೆ...