ನಮಸ್ಕಾರ. ನನ್ನ ಹೆಸರು ಕಮಲ. 'ಇವರು' ನನ್ನನ್ನು 'ಕಮಲು' ಅಂತ ಕರೀತಾರೆ. ಆಗ ನನಗೆ ಒಂಥರಾ ನಾಚಿಕೆಯಾಗುತ್ತೆ. ಯಾಕೆಂದರೆ, ಎಲ್ಲರೆದುರಿಗೆ ಇವರು 'ಕಮಲಾ..' ಅಂತಲೇ ಕೂಗುವುದು; ಆದರೆ ಯಾರೂ ಇಲ್ಲವೆಂದಾಗ, ನಾವಿಬ್ಬರೇ ಇರುವ ಏಕಾಂತ ಸಮಯಗಳಲ್ಲಿ ಮಾತ್ರ, ಒಲುಮೆ ದೇವತೆ ನದಿಯಾಗಿ ಮೈಯಲ್ಲಿ ಸಂಚರಿಸುವಂತೆ 'ಕಮಲೂ..' ಎಂದು ಕೂಗುತ್ತಾರೆ. ಈ ಅಡುಗೆ ಮನೆಯ ಅಗ್ಗಿಷ್ಟಿಕೆಗೂ ಗೊತ್ತು: ಆ ಕರೆಗೂ ಪ್ರೀತಿಗೂ ವ್ಯತ್ಯಾಸವಿಲ್ಲವೆಂದು. ಅದಕ್ಕೇ, ಒಲೆಯ ಮೇಲಿಂದ ಅನ್ನದ ಚರಿಗೆಯನ್ನು ಇಳಿಸುವಾಗಲೂ, ಆ ಹಬೆಯ ದಗೆಯಲ್ಲೂ ರೋಮಾಂಚಿತಳಾಗುತ್ತೇನೆ ನಾನು. ಸಾರಿನಲ್ಲಿ ತೇಲುತ್ತಿರುವ ಈ ಸಣ್ಣ ಮೀನುಗಳು ಹೊಟ್ಟೆ ಸೇರಿಬಿಟ್ಟರೆ ಆಯಿತು: ಚಿಮಣಿ ದೀಪ ಆರಿಸಿ ನಾವು ಮಲಗಿಬಿಡುತ್ತೇವೆ. ಹೊದ್ದ ಕಂಬಳಿಯಡಿಯಲ್ಲಿ ದೊಡ್ಡ ಮೀನೊಂದು ಎಚ್ಚರಗೊಳ್ಳುತ್ತದೆ.
ಪೇಟೆಗೆ ಹೋಗಿ ನಾಲ್ಕು ದಿವಸವಾಗಿದ್ದ ಇವರು ಇವತ್ತು ತಾನೇ ವಾಪಸಾಗಿದ್ದಾರೆ. ಬರುವಾಗ ಇನ್ನು ಮೂರ್‍ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಸಾಮಾನುಗಳನ್ನು ತಂದಿದ್ದಾರೆ. ಈ ಊರಿನವರೆಲ್ಲ ಹೀಗೇ. ಪೇಟೆಗೆ ಹೋಗುವುದೇ ಎರಡೋ-ಮೂರೋ ತಿಂಗಳಿಗೊಮ್ಮೆ. ಮೈಲಿ ನಡೆದು, ಹೊಳೆದಂಡೆ ತಲುಪಿ, ದೋಣಿ ಆಚೆ ದಡದಲ್ಲಿದ್ದರೆ 'ಕೂಹೂಯ್..' ಎಂದು ಕೂಗಿ-ಕಿರುಚಿ ಕರೆದು ಈಚೆ ದಡಕ್ಕೆ, ಅದರಲ್ಲಿ ಕೂತು ಹೊಳೆ ದಾಟಿ, ಮತ್ತೆ ಮೈಲಿ ನಡೆದು.... ದಿನಕ್ಕೊಂದೇ ಬಸ್ಸು ನಮ್ಮೂರಿಗೆ ಇರುವುದು.. ಅದು ತಪ್ಪಿದರೆ ಪೂರ್ತಿ ಹನ್ನೆರಡು ಮೈಲಿ ನಡೆಯಬೇಕು.. ಸುತ್ತ ಗುಡ್ಡ; ಮಧ್ಯೆ ಈ ಊರು..
ಈ ಬಾರಿ ಪೇಟೆಯಿಂದ ಬರುವಾಗ ಇವರು ನನಗೊಂದು ಹೊಸ ಸೀರೆ ತಂದಿದ್ದಾರೆ. ಹೊರಡುವಾಗಲೇ ಕೇಳಿದ್ದರು: 'ಪ್ಯಾಟಿಂದ ನಿಂಗೇನು ತರ್‍ಬೇಕೇ ಕಮಲೂ?' ಅಂತ. 'ನಂಗೇನೂ ಬ್ಯಾಡ' ಅಂದಿದ್ದೆ. ಆದರೂ ತಂದಿದ್ದಾರೆ. ಗೊತ್ತಿತ್ತು ನನಗೆ -ಮೊನ್ನೆ ಅಡುಗೆ ಮಾಡುತ್ತಿದ್ದ ನಾನು ಇದ್ದಕ್ಕಿದ್ದಂತೆ ಎದ್ದು ಗದ್ದೆ ಹಳುವಿಗೆ ಓಡಿ ಬಗ್ಗಿ ಕಾರಿಕೊಂಡ ಮೇಲೆ, ಮತ್ತೆ ನಾಲ್ಕೈದು ಬಾರಿ ವಾಂತಿಯಾದದ್ದು ನೋಡಿದ ಮೇಲೆ ರಾಯರ ಮುಖದಲ್ಲಿ ಮೂಡಿ ಸ್ಥಾಪಿತವಾಗಿದ್ದ ಮುಗುಳ್ನಗೆಯ ರಾಜ್ಯಭಾರ ಗಮನಿಸಿದಾಗಲೇ ಅಂದುಕೊಂಡಿದ್ದೆ- ತಂದೇ ತರುತ್ತಾರೆ ಪೇಟೆಯಿಂದ ನನಗಾಗಿ ಏನಾದರೂ ಅಂತ. ನಾನು ಚೊಚ್ಚಿಲ ಬಸುರಿ.. ಮದುವೆಯಾಗಿ ನಾಲ್ಕು ತಿಂಗಳಾಯಿತು.
ಇವರು ಹೀಗೆ ಪೇಟೆಗೆ ಹೋದಾಗಲೆಲ್ಲ ನಾನು ಇವರ ಅಣ್ಣ -ನನ್ನ ಭಾವಮೈದುನ- ನ ಮನೆಯಲ್ಲಿ ತಂಗಿರುತ್ತೇನೆ. ಅಕ್ಕ ಒಳ್ಳೆಯವಳು. ಅವಳಿಗೆ ಎರಡು ಮಕ್ಕಳು. ಮೊನ್ನೆ ಅಲ್ಲಿಗೆ ಬೆಂಗಳೂರಿನಿಂದ ಆರು ಜನ ಹುಡುಗರು ಬಂದಿದ್ದರು. ಎಲ್ಲಾ ಸಾಗರ-ಶಿರಸಿ-ಶಿವಮೊಗ್ಗದ ಕಡೆಯವರಂತೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವುದಂತೆ. ಅವರಲ್ಲೊಬ್ಬಾತ ಕಳೆದ ವರ್ಷ ಇಲ್ಲಿಗೆ ಬಂದಿದ್ದನಂತೆ. ನಮ್ಮೂರು ಎಂದರೆ ಅವನಿಗೇನೋ ಆಕರ್ಷಣೆಯಂತೆ. ತನ್ನ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಬಂದಿದ್ದ.
ನಮ್ಮೂರಿಗೆ ಹೀಗೆ ಪ್ರವಾಸಿಗರು ಬಂದುಹೋಗುವುದು ಹೊಸದಾಗಿಯೇನು ಉಳಿದಿಲ್ಲ. "ಈಗ ನಾಲ್ಕು ವರ್ಷವಾಯ್ತು, ತಿಂಗಳಾ ಎರಡ್ಮೂರು ತಂಡ ಬರ್ತದೆ ಹೀಂಗೆ.." ಅನ್ನುತ್ತಿದ್ದರು ಭಾವ. ನಮ್ಮೂರಿನ ಹಿಂದೆ, ಇದೇ ಹೀಗೇ ನಮ್ಮ ಮನೆಯ ಹಿಂದಿನಿಂದ ಗುಡ್ಡ ಹತ್ತಿ, ಮೂರ್ನಾಕು ಮೈಲಿ ನಡೆದು ಹೋದರೆ, ಅಲ್ಲೊಂದು ಜಲಪಾತವಿದೆಯಂತೆ. ನಾನಿನ್ನೂ ನೋಡಿಲ್ಲ. ನನ್ನ ಮದುವೆಯಾಗಿ ಇನ್ನೂ ನಾಲ್ಕು ತಿಂಗಳಾಯಿತು ಅಷ್ಟೇ ಅಂತ ಹೇಳಿದೆನಲ್ಲವೇ? ಇವರ ಬಳಿ ಸುಮಾರು ಸಲ ಕೇಳಿದೆ; ಆದರೆ ಒಮ್ಮೆಯೂ ನನ್ನನ್ನು ಕರೆದುಕೊಂಡು ಹೋಗುವ ಮನಸು ಮಾಡಲಿಲ್ಲ. ನನಗೆ ಒಬ್ಬಳೇ ಹೋಗಲಿಕ್ಕೆ ಭಯ. ಅಕ್ಕನನ್ನು ಕರೆದರೆ ಅವಳು ಯಾವಾಗಲೂ ಏನಾದರೂ ಕೆಲಸವಿದೆ ಅನ್ನುತ್ತಾಳೆ. ಕಾಡಿನಲ್ಲಿ ಹುಲಿ, ಕಾಡೆಮ್ಮೆಗಳು ಬೇರೆ ಇವೆಯಂತೆ. ಹೌದು, ಈಗೊಂದು ಹದಿನೈದು ದಿನದ ಹಿಂದೆ -ರಾತ್ರಿ ಹನ್ನೆರಡರ ಜಾವ- ಹುಲಿ ಗುರುಗುಡುತ್ತಿದ್ದುದನ್ನು ನಾನೇ ಕೇಳಿದ್ದೇನೆ.. ಬೆಚ್ಚಿ ಇವರನ್ನು ತಬ್ಬಿದ್ದೇನೆ...
ನಮ್ಮೂರಿಗೆ ಜಲಪಾತ ನೋಡಲಿಕ್ಕೆ ಮಾತ್ರವಲ್ಲ ಹೀಗೆ ಪ್ರವಾಸಿಗರು ಬರುವುದು.. ಅವರಿಗೆ ಈ ಊರೊಂದು ಶಾಪಗ್ರಸ್ತ ಗಂಧರ್ವರ ಸ್ವರ್ಗದಂತೆ ಭಾಸವಾಗುತ್ತದಂತೆ. ಶಾಪವೇ? ಏನು ಶಾಪ ಎಂದಿರಾ? ಈ ಊರೆಂಬ ಊರು ಇನ್ನು ಕೆಲವೇ ತಿಂಗಳಲ್ಲಿ ನಾಮಾವಶೇಷವಾಗಲಿದೆ. ಸರ್ಕಾರದವರು ಇದನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇಗೋ, ಇಲ್ಲೇ ಪಕ್ಕದಲ್ಲೇ ಎದ್ದು ನಿಂತಿದೆಯಲ್ಲಾ ಅಣು ವಿದ್ಯುತ್ ಸ್ಥಾವರ, ಆಚೆ ಪಕ್ಕ ದೊಡ್ಡದೊಂದು ಡ್ಯಾಮ್, ಅದಕ್ಕಾಗಿ ಈ ಊರೂ, ಅಕ್ಕಪಕ್ಕದ ಹಳ್ಳಿಗಳೂ ಬಲಿಯಾಗುತ್ತಿವೆ.
ಬೆಂಗಳೂರಿನಿಂದ ಬಂದ ಹುಡುಗರಿಗೆ ಭಾವ ಹೇಳುತ್ತಿದ್ದರು "ಈ ಊರಲ್ಲಿ ಮೊದಲು ನೂರ್-ನೂರೈವತ್ತು ಮನೆಗಳಿದ್ವು.. ಈಗ ಒಂದೊಂದೆ ಮನೆಗಳವರು ಬಿಟ್ ಹೋಗ್ತಾ, ನಿಧಾನಕ್ಕೆ ಊರು ಖಾಲಿಯಾಗ್ತಿದೆ.. ಸಧ್ಯಕ್ಕೆ ಒಂದು ನಲ್ವತ್ತು ಮನೆಗಳಿಗೆ ಜೀವ ಇರ್ಬವ್ದು.. ಅವೂ ಇನ್ನೊಂದು ನಾಕೈದು ತಿಂಗ್ಳೊಳಗೆ ಖಾಲಿಯಾಗ್ತಾವೆ.. ಎಲ್ಲಾ ಖಾಲಿ ಮನೆಗ್ಳು.. ನಮ್ಗೆ ನಾಟ್ಕ ಪ್ರಾಕ್ಟೀಸ್ ಮಾಡಕ್ಕೆ ಚೊಲೋ ಆಗಿದೆ.. ಹಹ್ಹ!"
"ಗೌರ್ಮೆಂಟು ಪರಿಹಾರ ಸಿಗ್ತಾ?" ಕೇಳಿದರು ಅವರಲ್ಯಾರೋ.
"ಹುಂ! ಎಕರೆಗೆ ಇಪ್ಪತ್ನಾಕು ಸಾವ್ರ ಅಂತ ಪಿಕ್ಸ್ ಮಾಡಿದಾರೆ. ನಮ್ದು ಗದ್ದೆ, ಈ ಮನೆ ಜಾಗ ಎಲ್ಲಾ ಕೊಟ್ರೆ ಒಂದು ಐವತ್ ಸಾವ್ರ ಸಿಗ್ಬಹುದೇನೋ.. ಅದನ್ನ ತಗೊಂಡು ಊರು ಬಿಡ್ಬೇಕಂತೆ. ಹುಂ! ಐವತ್ ಸಾವ್ರ ಇಟ್ಕೊಂಡು ಏನ್ ಮಾಡ್ಲಿಕ್ಕಾಗ್ತದೆ ಈಗಿನ ಕಾಲದಲ್ಲಿ..? ನಮ್ ತಾತ-ಮುತ್ತಾತನ ಕಾಲದಿಂದಲೂ ವಾಸವಾಗಿರೋ ಊರು ಇದು.. ಇದನ್ನ ಬಿಟ್ಟು ಈಗ ಏಕಾಏಕಿ ಎಲ್ಲಿಗೇಂತ ಹೋಗೋದು?"
ಹುಡುಗರು ಭಾವನ ಮಾತಿಗೆ ಹೌದೌದೆಂದು ಹೇಳಿ, ನಾಲ್ಕು ಸಮಾಧಾನದ ಮಾತು ಸೇರಿಸುತ್ತಿದ್ದರು: "ನಿಮ್ಗೆಲ್ಲ ಅಲ್ಲಿ ಕೆಲಸನಾದ್ರೂ ಕೊಡಬಹುದಿತ್ತು.." "ಅಯ್ಯೋ..! ಅಲ್ಲಿರೋರೆಲ್ಲ ತಮಿಳ್‍ನಾಡು, ಕೇರ್‍ಅಳ ಕಡ್ಯೋರು.. ಇಲ್ಲಿಯೋರಿಗೆ ಏನೂ ಕೆಲ್ಸ ಕೊಡಲ್ಲ.."
ರಾತ್ರಿ ಅವರೆಲ್ಲ ಭಾವನ ಮನೆಯ ಜಗುಲಿಯಲ್ಲೇ ಮಲಗಿದ್ದರು. ಈ ಊರಿನ ಕೊನೆಕೊನೆಯ ನೆಂಟರಂತೆ ಕಾಣಿಸುವ ಅವರಿಗೆ ನಾನು-ಅಕ್ಕ ಸೇರಿ ಅಡುಗೆ ಮಾಡಿ ಹಾಕಿದೆವು. ನಮ್ಮ ಮನೆಯ ಕುಚ್ಚುಲಕ್ಕಿ ಅನ್ನವನ್ನೇ, ಬೇಳೆಯಿಲ್ಲದೇ ಬರೀ ಕಾಯಿ ಬೀಸಿ ಹಾಕಿ ಮಾಡಿದ್ದ ಹುಳಿಯನ್ನೇ, ರುಚಿರುಚಿಯೆಂದುಕೊಂಡು ಉಂಡರು.
ನಿನ್ನೆ ಬೆಳಗ್ಗೆ ಅವರೆಲ್ಲ ಜಲಪಾತ ನೋಡಲಿಕ್ಕೆಂದು ಹೊರಟರು. ಮಧ್ಯಾಹ್ನ ಒಂದರ ಒಳಗೆ ಬರುತ್ತೇವೆ ಎಂದಿದ್ದವರು ಮೂರಾದರೂ ಬಾರದ್ದು ನೋಡಿ ಭಾವ ಆತಂಕ ಮಾಡಿಕೊಂಡಿದ್ದರು. ಅಂತೂ ಮೂರೂವರೆ ಹೊತ್ತಿಗೆ ಅವರೆಲ್ಲ ವಾಪಸು ಬಂದರು. ದಾರಿಯಲ್ಲಿ ಎರಡ್ಮೂರು ಕಡೆ ದೊಡ್ಡ ದೊಡ್ಡ ಬಂಡೆಗಳನ್ನು ಹತ್ತುವುದು ತುಂಬಾ ಕಷ್ಟವಾಯಿತೆಂದು ಹೇಳಿದರು ಭಾವನ ಬಳಿ. ಜಲಪಾತ ಅದ್ಭುತ, ಅಮರಾವತಿಯ ಸದೃಶ ಎಂದೆಲ್ಲ ಹೊಗಳಿದರು. ತಮ್ಮ ಕ್ಯಾಮೆರಾದಲ್ಲಿ ತೆಗೆದಿದ್ದ ಫೋಟೋಗಳನ್ನು ನಮಗೆಲ್ಲ ತೋರಿಸಿದರು. ಟೀವಿಯಲ್ಲಿ ಕಾಣುವಂತೆ ನೀರು ಬೀಳುವುದನ್ನೂ ತೋರಿಸಿದರು. ನನಗಂತೂ ಅದನ್ನು ನೋಡಿದ ಮೇಲೆ, ಈ ಊರು ಬಿಡುವುದರೊಳಗೆ ಒಮ್ಮೆ ಆ ಜಲಪಾತವನ್ನು ನೋಡಲೇಬೇಕೆಂಬ ಆಸೆಯಾಗಿದೆ. ಹೇಳಬೇಕು ಇವರ ಬಳಿ...
ಬಿಗಿಯಪ್ಪುಗೆಯಿಂದ ಕೊಂಚ ಸಡಿಲಿಸಿಕೊಂಡು ಹೇಳುತ್ತೇನೆ: "ಹೋಯ್.. ಮೊನ್ನೆ ಬೆಂಗ್ಳೂರಿಂದ ಆರು ಜನ ಹುಡುಗ್ರು ಬಂದಿದ್ರು.. ಭಾವನ್ ಮನೇಲಿ ಉಳ್ಕೊಂಡಿದ್ರು.. ಅವ್ರು ಜಲಪಾತದ ಫೋಟ ಎಲ್ಲ ತೋರ್ಸಿದ್ರು.. ಎಷ್ಟು ಚನಾಗದೆ! ಅಲ್ಲಾ, ಎಲ್ಲೆಲ್ಲಿಂದೆಲ್ಲ ಇದ್ನ ನೋಡಕ್ಕೇಂತ ಬರ್ತಾರೆ; ಇನ್ನೂ ನಾವೇ ನೋಡಿಲ್ಲಾಂದ್ರೆ ಹೇಗೆ?"
ಇವರು ಸಿಡುಕುತ್ತಾರೆ "ಥೋ ನಿಂದೊಳ್ಳೆ ಕಾಟ ಮಾರಾಯ್ತಿ..! ಅಲ್ಲಿ ಏನಿದೆ ಅಂತ? ಸುಮ್ನೆ ಎತ್ರದಿಂದ ನೀರು ಬೀಳ್ತದೆ ಅಷ್ಟೆ. ಅದ್ನ ನೋಡಕ್ಕೆ ಅಲ್ಲಿಗೆ ಹೋಗ್ಬೇಕಾ? ನೋಡು, ಅದೇ ನೀರೇ ಇಲ್ಲಿಗೆ ಹರಿದು ಬರೋದು.. ನೀನು ದಿನಾ ಕುಡಿಯೋದು ಅದೇ ನೀರು.. ಅಲ್ದೇ ನೀವು ಹೆಂಗಸ್ರೆಲ್ಲ ಹೋಗೋಂತ ದಾರೀನೇ ಅಲ್ಲ ಅದು.. ಆ ದೊಡ್‍ದೊಡ್ ಬಂಡೇನೆಲ್ಲ ಹತ್ತಿಳ್ದು ನೀನು ಹೋಗ್ಯಾತು ಉದ್ಧಾರ.. ಅದೂ ಅಲ್ದೇ ಈ ಸ್ಥಿತೀಲಿ.." ಎನ್ನುತ್ತಾ ನನ್ನ ಹೊಟ್ಟೆಯ ಮೇಲೆ ಕೈಯಾಡಿಸಿದರು. ನಾನು ಮಗ್ಗುಲಾದೆ.
ನನಗ್ಯಾಕೋ ಇವತ್ತು ನಿದ್ರೆಯೇ ಬರುತ್ತಿಲ್ಲ.. ಆ ಹುಡುಗರೇನೋ ಸರಿಯಾಗಿ ಉಂಡು, ಇಲ್ಲಿಯ ಎಲ್ಲವನ್ನೂ ಹೊಗಳಿ, ನಮ್ಮ ಪರಿಸ್ಥಿತಿ-ಭವಿಷ್ಯದ ಬಗ್ಗೆ ಎರಡು ವಿಷಾದದ ಮಾತಾಡಿ, ನಮ್ಮ ಫೋಟೋಗಳನ್ನೂ ತೆಗೆದುಕೊಂಡು, ಟಾಟಾ ಮಾಡಿ, ದೋಣಿ ಹತ್ತಿ ನಡೆದುಬಿಟ್ಟರು. ಇಷ್ಟು ಹೊತ್ತಿಗೆ ನಮ್ಮೂರು ಅವರಿಗೆ ಮರೆತೇ ಹೋಗಿರಬಹುದು. ಅಥವಾ ಗೆಳೆಯರ ಬಳಿ ಹೇಳಿಕೊಂಡು ನೆನಪನ್ನೇ ಕಮ್ಮಗೆ ಮೆಲ್ಲುತ್ತಿರಬಹುದು. ಅಥವಾ ನಿದ್ರೆ ಹೋಗಿರಬಹುದು. ಅವರ್‍ಯಾರಿಗೂ ಭವಿಷ್ಯದ ಬಗ್ಗೆ, ನೆಲೆಯ ಬಗ್ಗೆ ಚಿಂತೆಯಿಲ್ಲ.. ಈ ಊರು ಅವರಿಗೊಂದು ಪ್ರವಾಸೀ ಸ್ಥಳ; ಅಷ್ಟೇ. ಊಟ ಮಾಡುವಾಗ ಅವರಲ್ಲೊಬ್ಬ ಹೇಳುತ್ತಿದ್ದ, ಪಕ್ಕದವನಿಗೆ: "ಬದುಕು ಸುಂದರ, ಅಲ್ಲವೇ ದೋಸ್ತಾ?" ಆದರೆ.... ನಮ್ಮ ಬದುಕು?
ಅಷ್ಟಿಷ್ಟು ಓದಿಕೊಂಡಿರುವ, ತೀರಾ ದೊಡ್ಡದಲ್ಲದಿದ್ದರೂ ಸಣ್ಣ ಪೇಟೆಯಲ್ಲಿ ಹುಟ್ಟಿ ಬೆಳೆದಿರುವ ನನ್ನನ್ನು, ಇಂತಹ ಮುಳುಗುತ್ತಿರುವ ಹಳ್ಳಿಯೊಂದಕ್ಕೆ ಮದುವೆ ಮಾಡಿಕೊಡುವ ಮುನ್ನ ಅಪ್ಪ ಯೋಚಿಸಿರಲಿಲ್ಲವೆಂದಲ್ಲ.. ಒಂದು ಬೆಂಕಿಪೊಟ್ಟಣ ಬೇಕೆಂದರೂ ಹನ್ನೆರಡು ಮೈಲಿ ಸಾಗಬೇಕು ಇಲ್ಲಿ. ಕರೆಂಟೇ ಇಲ್ಲ; ಚಿಮಣಿ ದೀಪ. ಆದರೆ ಅಪ್ಪನ ಯೋಜನೆಯೇ ಬೇರೆಯಿತ್ತು: "ಹೆಂಗಿದ್ರೂ ನಮ್ಮೊಬ್ಳೇ ಮಗಳು ನೀನು.. ಮನೆಯಾಳ್ತನ.. ಇನ್ನು ಮೂರ್ನಾಕು ತಿಂಗಳು ಅಷ್ಟೇ. ಆಮೇಲೆ ಎಲ್ಲಾ ಆ ಹಳ್ಳೀನ ಬಿಟ್ಟು ಹೊರಡ್ತಾರೆ. ನೀನೂ-ನಿನ್ ಗಂಡ ಇಲ್ಲೇ ಬಂದು ಇರುವಂತ್ರಿ. ಪರಿಹಾರದ ದುಡ್ಡಲ್ಲಿ ನಿನ್ ಗಂಡ ಒಂದು ಅಂಗಡಿ ಹಾಕ್ಕೊಳ್ಲಿ. ಜೀವನಕ್ಕೇನೂ ತೊಂದ್ರೆ ಇಲ್ಲ" ನನಗೂ ಈ ಯೋಜನೆ ಸರಿಯೆನಿಸಿತ್ತು. ದೂರದ ನೆಂಟರದೇ ಸಂಬಂಧ. ಅಲ್ಲದೇ ನಾನು ಹುಟ್ಟಿದ ಮನೆಯಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇರಬಹುದಲ್ಲಾ ಎಂಬ ಖುಷಿ ಬೇರೆ.
ಆದರೆ ಇವರ ಸ್ವಾಭಿಮಾನವೇ ಅದಕ್ಕೀಗ ಅಡ್ಡಿಯಾಗಿದೆ. ಹೆಂಡತಿಯ ಮನೆಯಲ್ಲಿರುವುದಕ್ಕೆ ಇವರಿಗೆ ಅವಮಾನವಂತೆ. ಬೇರೆಲ್ಲಿಗಾದರೂ ಹೋಗಿ ಹೇಗಾದರೂ ಬದುಕೋಣ ಎನ್ನುತ್ತಿದ್ದಾರೆ. ಈ ಊರವರೆಲ್ಲ ಸೇರಿ ಆಗೀಗ ನಾಟಕ ಆಡುತ್ತಾರೆ. ಅದರಲ್ಲಿ ಇವರೂ ಪಾತ್ರ ಮಾಡುತ್ತಾರೆ. ಆ ನಾಟಕಗಳಲ್ಲಿ ಆಡುವ ನಾಯಕನ ಆದರ್ಶದ ಮಾತುಗಳನ್ನೇ ತಮಗೂ ಆರೋಪಿಸಿಕೊಂಡುಬಿಟ್ಟಿದ್ದಾರೆ ಇವರು.. ನೆಲೆಯೇ ನಾಶವಾಗುತ್ತಿದ್ದರೂ ಸ್ವಾಭಿಮಾನ ಬಿಡದು. ಎಲ್ಲಿಗಾದರೂ ಎಂದರೆ ಎಲ್ಲಿಗೆ ಹೋಗುವುದು? ಹೋಗಿ ಏನು ಮಾಡುವುದು? ಪುಸಲಾಯಿಸಿ ಕೇಳಿದರೆ ಸುಮ್ಮನೆ ಸಿಡುಕುತ್ತಾರೆ.
ಯಾವುದೋ ಊರುಗಳವರಿಗೆ ಕರೆಂಟು ಕೊಡುವ ಭರದಲ್ಲಿ ನಾವು ನಮ್ಮ ಊರನ್ನು ಕಳೆದುಕೊಳ್ಳುತ್ತಿದ್ದೇವೆ... ನಮ್ಮ ಮನೆಗಳ ಚಿಮಣಿ ದೀಪಗಳನ್ನು ನಂದಿಸಿ, ಅದನ್ನೂ ಚೀಲದೊಳಗೆ ತುಂಬಿಕೊಂಡು ಹೊರಡಬೇಕಿದೆ ನಾವು... ಎಲ್ಲಿಗೆ? ಯೋಚಿಸಿದಷ್ಟೂ ಕತ್ತಲೆ ದಟ್ಟವಾಗುತ್ತದೆ.. ಇವರು ನನ್ನನ್ನು ತಮ್ಮ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತಾರೆ.. ನಾನು ಕಳೆದುಹೋಗುತ್ತೇನೆ.