Friday, December 20, 2019

ಅಟ್ಟಣಿಗೆ

ವಾಪಸು ಬರುವಾಗ ಪ್ರಶಾಂತ ಅನ್ಯಮನಸ್ಕನಾಗಿದ್ದ. ಯಾವುದೋ ಎಫ್ಫೆಮ್ ಛಾನೆಲ್ಲಿನಲ್ಲಿ ಆರ್ಜೆಯೊಬ್ಬಳು ‘ಡು ಯು ಥಿಂಕ್ ವಿ ನೀಡ್ ಟು ಛೇಂಜ್ ಅವರ್ ಲೈಫ್‌ಸ್ಟೈಲ್?  ಮೆಸೇಜ್ ಮಿ ಆನ್.....’ ಅಂತೇನೋ ಉಲಿಯುತ್ತಿದ್ದಳು. ಸಿಟ್ಟು ಬಂದು ಎಫ್ಫೆಮ್ ಆಫ್ ಮಾಡಿದ. ಕಾರಿನ ತುಂಬ ಮೌನ ಆವರಿಸಿತು. ಆದರೂ ಆ ಆರ್ಜೆ ಕೇಳಿದ ಪ್ರಶ್ನೆ ಕಿವಿಯಲ್ಲಿ ಕೊರೆಯತೊಡಗಿತು. ಜೀವನಶೈಲಿ ಬದಲಾಯಿಸೋದು ಅಂದ್ರೆ ಏನು? ಈಗ ನಾನು ಬದುಕ್ತಿರೋ ಶೈಲಿ ಸರಿಯಿಲ್ವಾ? ಹೇಗೆ ಬದುಕೋದು ಸರಿ?

ಮನೆ ಮುಟ್ಟಿದರೆ ಮೊಬೈಲ್ ಹಿಡಿದಿದ್ದ ರೇಖಾ ಯಾವುದೋ ಶಾಪಿಂಗ್ ಸೈಟಿನಲ್ಲಿ ಒಂದಷ್ಟು ವಸ್ತುಗಳನ್ನು ಕಾರ್ಟಿಗೆ ಹಾಕಿಕೊಂಡು ‘ನೋಡು ಪ್ರಶ್, ಈ ಕಲರ್ ಟಾಪ್ ನಂಗೆ ಒಪ್ಪುತ್ತಾ?’ ಅಂದಳು. ‘ಏ.. ಹೊತ್ತುಗೊತ್ತು ಇಲ್ವಾ ನಿಂಗೆ? ಯಾವಾಗ ನೋಡಿದ್ರೂ ಶಾಪಿಂಗು. ತಗೊಂಡಾದ್ರೂ ತಗೊಳ್ತೀಯಾ? ಅದೂ ಇಲ್ಲ. ಕಾರ್ಟಿಗೆ ಹಾಕೋದು, ಕೊನೆಗೆ ರಿಮೋವ್ ಮಾಡೋದು.. ಇಪ್ಪತ್ನಾಲ್ಕು ಗಂಟೆ ಆ ಮೊಬೈಲ್ ಹಿಡ್ಕಂಡಿರ್ತೀಯ.  ಮೊದ್ಲು ತೆಗ್ದು ಪಕ್ಕಕ್ಕಿಡು ಅದನ್ನ’ ರೇಗಿದ.  ಗಂಡನ ಮೂಡು ಸರಿಯಿಲ್ಲ ಎಂಬುದು ಹೆಂಡತಿಗೆ ಅರ್ಥವಾಯಿತು.  ಜತೆಗೇ ಬೆಳಿಗ್ಗೆ ನಡೆದ ಘಟನೆಯೂ ನೆನಪಾಯಿತು.  ‘ಸಾರಿ, ಹೋದ ಕೆಲಸ ಏನಾಯ್ತು? ಅಡ್ಮಿಟ್ ಮಾಡ್ಕೊಂಡ್ರಾ? ಹೆಚ್ಚಿಗೆ ಏನೂ ಪೆಟ್ಟು ಆಗಿಲ್ವಂತಾ?’ ಕೇಳಿದಳು. ‘ಮಾಡ್ಕೊಂಡ್ರು. ತುಂಬಾ ನೋವು ಅನುಭವಿಸ್ತಿರೋದು ನೋಡಿದ್ರೆ ಸ್ಪೈನಲ್ ಕಾರ್ಡಿಗೆ ಏಟು ಬಿದ್ದಿದೆಯಾ ಟೆಸ್ಟ್ ಮಾಡ್ಬೇಕು. ಮೊದಲು ಇಷ್ಟು ಟೆಸ್ಟ್ ಮಾಡಿಸಿ ಅಂತ ಎಕ್ಸರೇ, ಸ್ಕಾನಿಂಗ್, ಬ್ಲಡ್ ಟೆಸ್ಟ್ ಅಂತ ಸುಮಾರೆಲ್ಲ ಪಟ್ಟಿ ಬರ್ಕೊಟ್ರು. ಮೊದಲಿಗೆ ಹತ್ತು ಸಾವಿರ ರೂಪಾಯಿ ಕಟ್ಟಬೇಕು ಅಂದ್ರು. ಅಷ್ಟರಲ್ಲಿ ಅವನ ಸಂಬಂಧಿಕರೋ-ಊರವರೋ ಯಾರೋ ಮೂರ್ನಾಲ್ಕು ಜನ ಬಂದ್ರು. ಅವರೆಲ್ಲ ಹೊಂಚಿ ಕಲೆ ಹಾಕಿದರೂ ಒಟ್ಟು ಆರು ಸಾವಿರ ಇತ್ತು ಅವರ ಬಳಿ. ಅವನ ಹೆಂಡತಿ ಒಂದೇ ಸಮನೆ ಅಳ್ತಾ ಇದ್ಲು. ಪಾಪ ಅನ್ನಿಸ್ತು. ಮತ್ತೇನ್ ಮಾಡೋದು? ನಾನೇ ಇನ್ನು ನಾಲ್ಕು ಸಾವಿರಕ್ಕೆ ಕಾರ್ಡ್ ಸ್ವೈಪ್ ಮಾಡಿ ಬಂದೆ’ ಅಂತ ಹೇಳಿದ. ‘ನಾಲ್ಕು ಸಾವಿರ ಕೊಟ್ಯಾ? ಇಟ್ಸ್ ಅ ಬಿಗ್ ಅಮೌಂಟ್!’ ಅಂದ ರೇಖಾಗೆ, ‘ಆ ಪಕ್ಕದಮನೆ ಓನರ್ ಬರ್ಲಿ ಬಡ್ಡಿಮಗ, ಜಬರದಸ್ತಿ ಮಾಡಿಯಾದ್ರೂ ವಸೂಲಿ ಮಾಡ್ತೀನಿ’ ಅಂದ.  

ಹಣ ಹಾಗೆ ಖರ್ಚಾದುದಕ್ಕೆ ತಲೆಬಿಸಿಯಾಗಿದ್ದಕ್ಕಿಂತಲೂ ಪ್ರಶಾಂತನಿಗೆ ಬೆಳಗಿನ ಆ ಘಟನೆಯ ಶಾಕ್‌ನಿಂದ ಹೊರಬರಲು ಆಗಲೇ ಇಲ್ಲ. ರೂಮಿಗೆ ಹೋಗಿ ಬಟ್ಟೆ ಬದಲಿಸಿದ. ಆಫೀಸಿಗೆ ಬರೋದಿಲ್ಲ ಅಂತ ಮ್ಯಾನೇಜರಿಗೆ ಮೆಸೇಜು ಮಾಡಿದ. ರೇಖಾ ತಿಂಡಿ ಕೊಡಲು ಬಂದರೆ ಹಸಿವಿಲ್ಲ ಅಂತ ತಟ್ಟೆಯನ್ನು ದೂರ ತಳ್ಳಿದ. ‘ಕಮಾನ್ ಪ್ರಶ್.. ಎವೆರಿಥಿಂಗ್ ವಿಲ್ ಬಿ ಆಲ್ರೈಟ್.. ಅವನು ಹುಷಾರಾಗಿ ವಾಪಸ್ ಬರ್ತಾನೆ. ಯಾರೋ ನಮಗೆ ಸಂಬಂಧವಿಲ್ಲದವರಿಗೆ ಏನೋ ಆಗಿದ್ದಕ್ಕೆ ಇಷ್ಟೊಂದು ತಲೆ ಹಾಳು ಮಾಡ್ಕೊಂಡಿದೀಯಲ್ಲ.. ಆ ಸಮಯದಲ್ಲಿ ಏನು ಮಾಡಬಹುದಿತ್ತೋ ಅದನ್ನ ನಾವು ಮಾಡಿದೀವಿ. ಹೌದು, ಅದು ಕರ್ತವ್ಯ, ಮಾನವೀಯತೆ.  ಸಹಾಯ ಮಾಡಿದ್ವಿ. ಅದಕ್ಕಿಂತ ಜಾಸ್ತಿ ನಾವು ಇನ್ನೇನೂ ಮಾಡೋಕೆ ಸಾಧ್ಯ ಇರ್ಲಿಲ್ಲ..’ ಅಂತೆಲ್ಲ ರೇಖಾ ಸಮಾಧಾನ ಮಾಡಿದರೂ, ಬೆಳಿಗ್ಗೆ ಕೇಳಿದ ಆ ‘ಧಡಾರ್’ ಶಬ್ದ ಪ್ರಶಾಂತನ ತಲೆಯಿಂದ ಇಳಿಯಲಿಲ್ಲ. 

ಆದದ್ದಿಷ್ಟು: ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ತಯಾರಾದ ಪ್ರಶಾಂತನಿಗೆ ಹೆಂಡತಿ ತಟ್ಟೆಯಲ್ಲಿ ಪಾಸ್ತಾ ತಂದುಕೊಟ್ಟಳು. ತಟ್ಟೆಯನ್ನು ಟೇಬಲ್ಲಿನ ಮೇಲಿಟ್ಟುಕೊಂಡು, ಒಂದು ಕೈಯಲ್ಲಿ ಮೊಬೈಲು ಇನ್ನೊಂದು ಕೈಯಲ್ಲಿ ಚಮಚ ಹಿಡಿದು ತಿಂಡಿಯ ಶಾಸ್ತ್ರ ನಡೆಸುತ್ತಿದ್ದಾಗ ಹೊರಗಿನಿಂದ ಧಡಾರನೆ ಶಬ್ದ ಕೇಳಿಸಿತು. ಇಬ್ಬರೂ ಹೊರಹೋಗಿ ಬಗ್ಗಿ ಕೆಳಗೆ ನೋಡಿದರೆ, ವ್ಯಕ್ತಿಯೊಬ್ಬ ಹೋ ಅಂತ ನರಳುತ್ತಿದ್ದ.  ಪಕ್ಕದ ಸೈಟಿನಲ್ಲಿ ಮನೆ ಕಟ್ಟುತ್ತಿದ್ದ ಮೇಸ್ತ್ರಿಗಳು ಎರಡನೇ ಫ್ಲೋರಿನ ಸೆಂಟ್ರಿಂಗ್ ಹಾಕಲು ಅಟ್ಟಣಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ತಮಿಳಿನಲ್ಲಿ ದೊಡ್ಡ ದನಿಯಲ್ಲಿ ಮಾತಾಡಿಕೊಳ್ಳುತ್ತಾ, ಕರಣೆ-ಬಾಣಲಿ-ಇನ್ನಿತರ ಸಲಕರಣೆಗಳಿಂದ ಸದ್ದು ಮಾಡುತ್ತಾ, ಎರಡು ತಿಂಗಳಿನಿಂದ ಅಲ್ಲೇ ಕೆಳಗಡೆ ಹಾಕಿಕೊಂಡಿದ್ದ ಸಣ್ಣದೊಂದು ಬಿಡಾರದಲ್ಲಿ ಮೂರ್ನಾಲ್ಕು ಜನರ ಸಂಸಾರ ವಾಸವಾಗಿತ್ತು. ‘ಬೆಳಗಾದರೆ ಇವರದ್ದೊಂದು ರಗಳೆ’ ಅಂತ ಎಷ್ಟೋ ದಿನ ರೇಖಾ ಸಿಡಿಮಿಡಿ ಮಾಡುವುದೂ ಇತ್ತು.  ಇಷ್ಟೇ ಸಣ್ಣ ಜಾಗದಲ್ಲಿ ಮರಳು-ಸಿಮೆಂಟು-ಇಟ್ಟಿಗೆಗಳನ್ನು ಸಾಗಿಸುತ್ತಾ, ಅಷ್ಟೆತ್ತರದಲ್ಲಿ ಅಟ್ಟಣಿಗೆಗಳನ್ನು ಹಾಕಿಕೊಂಡು ಅವರು ಕಟ್ಟಡ ಕಟ್ಟಲು ಮಾಡುವ ಸಾಹಸ ಯಾವ ಸರ್ಕಸ್ಸಿಗೂ ಕಮ್ಮಿಯಿರಲಿಲ್ಲ.  ಆದರೆ ಈ ದಿನ ಬೆಳಗ್ಗೆ ಅದು ಹೇಗೋ ಅಟ್ಟಣಿಗೆಯ ಕಂಬವೊಂದು ಮುರಿದುಕೊಂಡು, ಅಷ್ಟು ಎತ್ತರದಿಂದ ಆ ಮೇಸ್ತ್ರಿ ಆಯ ತಪ್ಪಿ ಬಿದ್ದಿದ್ದಾನೆ. ಹೊರಗೋಡಿ ಬಂದ ರೇಖಾ-ಪ್ರಶಾಂತರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಬಿದ್ದವನು ಒಂದೇ ಸಮನೆ ಹೊಯ್ದುಕೊಳ್ಳುತ್ತಿದ್ದ. ಅವನ ಹೆಂಡತಿಯೂ-ಸಹಕೆಲಸಗಾರರು ಅಯ್ಯಯ್ಯೋ ಅಂತ ಬಾಯಿ ಬಡಿದುಕೊಂಡು ಅಳತೊಡಗಿದರು. ಕೆಳಗಡೆ ಒಂದಷ್ಟು ಜನ ಸೇರಿದರು. ರೇಖಾ-ಪ್ರಶಾಂತರೂ ಕೆಳಗಿಳಿದು ಹೋದರು.  ಯಾರೋ ‘ಆಂಬುಲೆನ್ಸಿಗೆ ಫೋನ್ ಮಾಡ್ರೀ ಆಂಬುಲೆನ್ಸಿಗೆ ಫೋನ್ ಮಾಡ್ರೀ’ ಅಂದರು. ಎಲ್ಲರೂ ಮುಖಮುಖ ನೋಡಿಕೊಂಡರು. ‘ವನ್ ಜೀರೋ ಏಟ್ ಕಣ್ರೀ.. ಬೇಗ ಮಾಡ್ರೀ’ ಅಂದರು ಮತ್ಯಾರೋ. ‘ಓನರ್ ಕರೆಸ್ರೀ.. ನಂಬರ್ ಇದೆಯೇನ್ರೀ ಯಾರ ಹತ್ರನಾದ್ರೂ.. ಕಾಂಟ್ರಾಕ್ಟರ್‌ಗೆ ಹೇಳ್ಬೇಕು’ ಅಂತೆಲ್ಲ ಕೆಲವರು ಬಡಬಡಿಸುತ್ತಿದ್ದರು.  ಪ್ರಶಾಂತ ತನ್ನ ಮೊಬೈಲಿನಿಂದ ಆಂಬುಲೆನ್ಸಿಗೆ ಫೋನು ಮಾಡಿದ.  ಅವರು ಯಾವ ಏರಿಯಾ ಅಂತ ಕೇಳಿಕೊಂಡು ‘ಹತ್ತಿರದ ಆಂಬುಲೆನ್ಸಿಗೆ ಕನೆಕ್ಟ್ ಮಾಡ್ತೀವಿ, ಲೈನಿನಲ್ಲೇ ಇರಿ’ ಅಂದರು.  ಮೂರ್ನಾಲ್ಕು ನಿಮಿಷ ಆದರೂ ಕನೆಕ್ಟ್ ಆದಹಾಗೆ ಕಾಣಲಿಲ್ಲ.  'ಆಂಬುಲೆನ್ಸ್ ಬರೋತನಕ ಕಾಯಕ್ಕಾಗತ್ತೇನ್ರೀ? ಯಾವುದಾದ್ರೂ ಆಟೋ ಬಂದ್ರೆ ಹತ್ತಿರದ ಆಸ್ಪತ್ರೆಗೆ ಒಯ್ದು ಬಿಡೋಕೆ ಹೇಳ್ಬಹುದಿತ್ತು’ ಅಂದರು ಮತ್ಯಾರೋ. ಅಲ್ಲಿದ್ದವರ್ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವಂತೆ ಕಾಣಲಿಲ್ಲ. ತಮಗ್ಯಾಕೆ ಇಲ್ಲದ ಉಸಾಬರಿ ಅಂತ ಎಲ್ಲರೂ ಹೆದರಿಕೊಂಡಂತೆ ಕಂಡರು.  ಪ್ರಶಾಂತನ ತಾಳ್ಮೆ ಮೀರುತ್ತಿತ್ತು. ರೇಖಾಳ ಬಳಿ ‘ಮೇಲೆ ಹೋಗಿ ಕಾರ್ ಕೀ ಬೀಸಾಕು’ ಅಂದವನೇ, ಅಲ್ಲಿದ್ದವರೊಂದಿಗೆ ಕೈ ಜೋಡಿಸಿ, ಒದ್ದಾಡುತ್ತಿದ್ದ ವ್ಯಕ್ತಿಯನ್ನು ಹೊತ್ತುತಂದು ತನ್ನ ಕಾರಿನ ಹಿಂದಿನ ಸೀಟಲ್ಲಿ ಮಲಗಿಸಿದ.  ಮೇಸ್ತ್ರಿಯ ಹೆಂಡತಿಯೂ ಮತ್ತೊಂದಿಬ್ಬರು ಕೆಲಸಗಾರರೂ ಕಾರು ಹತ್ತಿ ಮುದುಡಿ ಕುಳಿತುಕೊಂಡರು. ವ್ಯಕ್ತಿ ನರಳುತ್ತಲೇ ಇದ್ದ. ಹತ್ತಿರದ ಆಸ್ಪತ್ರೆಗೆ ಕರೆತಂದು, ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಸ್ಟ್ರೆಚರಿನಲ್ಲಿ ಎಮರ್ಜೆನ್ಸಿ ವಾರ್ಡಿಗೆ ಸೇರಿಸುವಷ್ಟರಲ್ಲಿ ಪ್ರಶಾಂತ ಪೂರ್ತಿ ಬೆವರಿಹೋಗಿದ್ದ.

ಹಾಗೆ ಸೇರಿಸುವಾಗ ಅದೊಂದು ದುಬಾರಿ ಆಸ್ಪತ್ರೆ ಎಂಬುದೂ, ಅಲ್ಲಿಗೆ ಸೇರಿಸಿದರೆ ಅಲ್ಲಾಗುವ ವೆಚ್ಛವನ್ನು ಈ ಬಡ ಕೂಲಿ ಕಾರ್ಮಿಕರಿಗೆ ಭರಿಸಲು ಆಗುತ್ತದಾ ಎಂಬುದೂ ಪ್ರಶಾಂತನಿಗೆ ಹೊಳೆಯಲಿಲ್ಲ.  ಹೊಳೆದಿದ್ದರೂ ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆ ಹುಡುಕಿಕೊಂಡು ಅಲೆಯುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಅವರ ಬಳಿ ಹಣ ಕಮ್ಮಿ ಬಿದ್ದಾಗ ಇದು ತನ್ನದೇ ಜವಾಬ್ದಾರಿಯೇನೋ ಎಂಬಂತೆ ಹಿಂದೆಮುಂದೆ ನೋಡದೇ ಕಾರ್ಡ್ ಉಜ್ಜಿ ಬಂದಿದ್ದ.

ಪ್ರಶಾಂತನಿಗೆ ಬೆಳಗಾಮುಂಚೆ ನಡೆದ ಆ ಘಟನೆಯಿಂದ ಅದೆಷ್ಟು ಆಘಾತವಾಯಿತು ಎಂದರೆ, ದಿನವಿಡೀ ಹುಚ್ಚುಚ್ಚಾಗಿ ಮನೆಯಿಡೀ ಓಡಾಡುತ್ತಾ ಇದ್ದುಬಿಟ್ಟ. ತಾನು, ತನ್ನ ಸಂಸಾರ, ಕೈತುಂಬ ಸಂಬಳ ಬರುವ ಕೆಲಸ, ವೀಕೆಂಡು ಬಂತೆಂದರೆ ಪಾರ್ಟಿ-ಸಿನೆಮಾ-ಶಾಪಿಂಗ್ ಎಂದು ನಗರವನ್ನು ಸುತ್ತುವ ಚಾಳಿ, ಬಿಡುಗಡೆಯಾದ ಹೊಸ ಫೋನುಗಳನ್ನು ಕೊಳ್ಳುವ ರೀತಿ, ನೆಟ್ಫ್ಲಿಕ್ಸು-ಹಾಟ್ಸ್ಟಾರ್ ಅಂತ ಇದ್ದಬದ್ದ ಪ್ಯಾಕೇಜುಗಳನ್ನು ಹಾಕಿಕೊಂಡು ದಿನಕ್ಕೊಂದು ಸಿನೆಮಾ ನೋಡುವ ಸೌಲಭ್ಯ, ಬೇಕಾದ ಪುಸ್ತಕಗಳನ್ನು ಖರೀದಿಸಿಯೇ ಓದುವ ಗತ್ತು... ಹೀಗೆ ಹಣದಿಂದ ಕೊಳ್ಳಲಾಗುವ ಸುಖವನ್ನೆಲ್ಲ ಖರೀದಿಸಿ ಅನುಭವಿಸುತ್ತಿರುವ ತಾನು ಮತ್ತು ಒಪ್ಪೊತ್ತಿನ ಊಟಕ್ಕಾಗಿ ಮುಗಿಲೆತ್ತರದ ಅಟ್ಟಣಿಗೆಯ ಮೇಲೆ ಸರ್ಕಸ್ ಮಾಡುವ ಆ ಮೇಸ್ತ್ರಿ –ಎಷ್ಟೊಂದು ವ್ಯತ್ಯಾಸ ನಮ್ಮ ನಡುವೆ! ನನಗೆ ಇಂತಹದ್ದೇನಾದರೂ ಅಪಘಾತವಾಗಿ ಆಸ್ಪತ್ರೆ ಸೇರಿದ್ದರೆ ಕಂಪನಿ ಆಸ್ಪತ್ರೆಯ ಅಷ್ಟೂ ವೆಚ್ಛವನ್ನು ಭರಿಸುತ್ತಿತ್ತು. ಅಷ್ಟರ ಮಟ್ಟಿನ ಲೈಫ್ ಸೆಕ್ಯುರಿಟಿ ತನಗಿದೆ. ಆದರೆ ಆ ಮೇಸ್ತ್ರಿಗೆ?

ಪ್ರಶಾಂತನಿಗೆ ತಾನು ಬದುಕುತ್ತಿರುವ ರೀತಿಯೇ ಸರಿಯಿಲ್ಲ ಎನ್ನಿಸಿಬಿಟ್ಟಿತು. ಆಸ್ಪತ್ರೆಯ ವೆಚ್ಛವನ್ನೂ ಭರಿಸಲಾಗದ ಆ ಮೇಸ್ತ್ರಿಯ ಕುಟುಂಬಕ್ಕೆ ತನ್ನ ಆಡಂಬರದ ಜೀವನಶೈಲಿಯಿಂದ ಅವಮಾನ ಮಾಡುತ್ತಿದ್ದೇನೆ ಅನ್ನಿಸಿತು. ಥಳಥಳ ಹೊಳೆವ ನೆಲದ ಡಬಲ್ ಬೆಡ್ರೂಮ್ ಫ್ಲಾಟಿನ ತನ್ನ ಮನೆಯ ಪಕ್ಕದಲ್ಲಿ ಇಷ್ಟೇ ಸಣ್ಣ ಗೂಡಿನಲ್ಲಿ ಮತ್ತೊಂದು ಕುಟುಂಬವೂ ಬಾಳುತ್ತಿರುವುದು ಈ ಮಹಾನಗರದ ವ್ಯಂಗ್ಯದಂತೆ ಭಾಸವಾಯಿತು. ಎಫ್ಫೆಮ್ಮಿನ ಆರ್ಜೆ ಹೇಳುತ್ತಿದ್ದುದು ನೆನಪಾಯ್ತು: ನನ್ನ ಜೀವನಶೈಲಿ ಬದಲಿಸಿಕೊಳ್ಳಬೇಕಾ ಹಾಗಾದರೇ?

ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಪ್ರಶಾಂತ, ಕಾರು ಹತ್ತಿ ನೇರ ಆಸ್ಪತ್ರೆಯೆಡೆಗೆ ಧಾವಿಸಿದ. ಯಾವ ವಾರ್ಡಿನಲ್ಲಿದ್ದಾರೆಂದು ವಿಚಾರಿಸೋಣವೆಂದರೆ ಆ ಮೇಸ್ತ್ರಿಯ ಹೆಸರೂ ಕೇಳಿಕೊಂಡಿರಲಿಲ್ಲ. ರಿಸೆಪ್ಷನ್ನಿನಲ್ಲಿ ಹೀಗೆ ನಿನ್ನೆ ಎಮರ್ಜನ್ಸಿಯೆಂದು ತಾನು ಒಬ್ಬನನ್ನು ತಂದು ಸೇರಿಸಿದ್ದಾಗಿ ಹೇಳಿಕೊಂಡಾಗ ಆ ರಿಸೆಪ್ಷನಿಸ್ಟ್, ‘ಓಹ್ ಅವರಾ? ಅವರು ನಿನ್ನೆಯೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋದ್ರಲ್ಲಾ.. ಇಲ್ಲಿ ನಮಗೆ ಆಗಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗ್ತೇವೆ ಅಂತ ಹೇಳಿ ಸಂಜೆಯೇ ಹೊರಟುಹೋದರು’ ಅಂದಳು. ಪ್ರಶಾಂತನಿಗೆ ನಿರಾಶೆಯಾಯಿತು. ಯಾವ ಆಸ್ಪತ್ರೆಗೆ ಹೋದರೋ ಏನೋ, ಹುಡುಕಿಕೊಂಡು ಹೋಗುವುದಂತೂ ಸಾಧ್ಯವಿರಲಿಲ್ಲ. ಸುಮ್ಮನೆ ಮನೆಗೆ ಮರಳಿದ.

ಇಷ್ಟೆಲ್ಲ ಆದರೂ ಆ ಪಕ್ಕದ ಮನೆಯ ಮಾಲೀಕನಾಗಲೀ, ಗುತ್ತಿಗೆದಾರನಾಗಲೀ ಈ ಕಡೆ ಸುಳಿದಿರಲಿಲ್ಲ. ತನ್ನೆದುರೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಈಗ ಎಲ್ಲಿದ್ದಾನೆಂಬುದೂ ತಿಳಿಯುವಂತಿರಲಿಲ್ಲ.  ಪ್ರಶಾಂತನಿಗೆ ಎಲ್ಲವೂ ಖಾಲಿಖಾಲಿ, ಯಾವುದಕ್ಕೂ ಅರ್ಥವಿಲ್ಲ ಎನಿಸಿತು. ರೇಖಾ ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಪ್ರಶಾಂತ ಸರಿಯಾಗಲಿಲ್ಲ.

ಸುಮಾರು ಹದಿನೈದು ದಿನ ಕಳೆದಮೇಲೆ, ಸ್ಥಗಿತವಾಗಿದ್ದ ಪಕ್ಕದ ಕಟ್ಟಡದ ಕೆಲಸಗಳು ಮತ್ತೆ ಶುರುವಾದ ಸೂಚನೆಯಂತೆ ಟಣಟಣ ಸದ್ದುಗಳು ಬೆಳಗ್ಗೆಯೇ ತೇಲಿಬರತೊಡಗಿದವು. ಲಘುಬಗೆಯಿಂದ ಎದ್ದ ಪ್ರಶಾಂತ ಹೊರಹೋಗಿ ನೋಡಿದ. ಮೇಸ್ತ್ರಿಗಳು ಮುರಿದುಬಿದ್ದಿದ್ದ ಅಟ್ಟಣಿಗೆಯನ್ನು ಮತ್ತೆ ಜೋಡಿಸುತ್ತಿದ್ದರು.  ಅಂದು ಬಿದ್ದು ಪೆಟ್ಟುಮಾಡಿಕೊಂಡಿದ್ದ ಆ ಮೇಸ್ತ್ರಿಯೂ ಅಲ್ಲಿದ್ದ. ಅವನ ಬಲಗೈಗೆ ಬೆಳ್ಳನೆ ಬ್ಯಾಂಡೇಜ್ ಇತ್ತು. ಇವನನ್ನು ಕಂಡವನೇ, ‘ಸಾರ್.. ನಮಸ್ಕಾರ ಸಾರ್.. ನೀವು ಅವತ್ತು ಎಂಥಾ ಉಪಕಾರ ಮಾಡಿದ್ರಿ ಸಾರ್.. ನೀವು ಟೇಮಿಗೆ ಸರಿಯಾಗಿ ಕಾರಲ್ಲಿ ಕರ್ಕಂಡ್ ಹೋಗದಿದ್ರೆ ನನ್ ಕಥೆ ಏನಾಗ್ತಿತ್ತೋ ಏನೋ.. ತುಂಬಾ ಹೆಲ್ಪ್ ಆಯ್ತು ಸಾರ್.. ತುಂಬಾ ಥ್ಯಾಕ್ಸ್ ಸಾರ್’ ಅಂತ ಒಂದೇ ಸಮನೆ ಹೇಳಿದ. ಅವನ ಹೆಂಡತಿಯೂ ಕಣ್ಣೀರು ಸುರಿಸುತ್ತಾ ತಮಿಳಿನಲ್ಲಿ ಏನೇನೋ ಹೇಳಿದಳು.  ‘ಅಲ್ಲಪ್ಪಾ, ನಾನು ಅಷ್ಟೆಲ್ಲಾ ಮಾಡಿ ಆ ಆಸ್ಪತ್ರೆಗೆ ಸೇರಿಸಿದ್ರೆ ನೀವು ಹೇಳದೇಕೇಳದೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋಗಿಬಿಟ್ಟಿದೀರಲ್ಲಪ್ಪಾ.. ನಾನು ಮರುದಿನ ಹೋಗಿ ವಿಚಾರಿಸಿದ್ರೆ ನೀವು ಅಲ್ಲಿಲ್ಲ’ ಕೇಳಿದ ಪ್ರಶಾಂತ. ‘ಅಯ್ಯೋ ಅಂಥಾ ಆಸ್ಪತ್ರೆಲೆಲ್ಲಾ ನಮ್ಮಂತೋರು ಇರಕ್ಕಾಯ್ತದಾ ಸಾರ್.. ಅದುಕ್ಕೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೇರ್ಕಂಡ್ವಿ. ಅಲ್ಲಿ ಎಲ್ಲಾ ಫ್ರೀ ಸಾರ್.. ನಮ್ದು ಕಾರ್ಡ್ ಇರ್ತದಲ್ಲಾ, ಪಿ‌ಎಂದು ಅದೆಂಥದೋ ಸ್ಕೀಮಿಂದು, ಅದ್ರಲ್ಲಿ ಎಲ್ಲಾ ಫ್ರೀಯಾಗಿ ಆಯ್ತು ಸಾರ್. ದೇವ್ರು ದೊಡ್ಡೋನು ಸಾರ್.. ಅಷ್ಟು ಎತ್ರದಿಂದ ಬಿದ್ರೂ ಕೈ ಒಂದು ಮುರ್ದಿದ್ದು ಬಿಟ್ರೆ ಮತ್ತೇನೂ ಆಗ್ಲಿಲ್ಲ’ ಅಂದ ಮೇಸ್ತ್ರಿ.

ಪ್ರಶಾಂತನಿಗೆ ಸ್ವಲ್ಪ ನಿರಾಳವಾಯಿತು. ಅಟ್ಟಣಿಗೆಯ ಅಡ್ಡಗಂಬಗಳ ನಡುವಿಂದ ತಂಗಾಳಿ ತೇಲಿಬಂತು. ಮನೆಯೊಳಗೆ ಬಂದು ಉಲ್ಲಾಸದಿಂದ ಅತ್ತಿತ್ತ ಓಡಾಡಿದ. ಸುಮಾರು ದಿನಗಳ ನಂತರ ಪಾಸ್ತಾ ರುಚಿಯೆನಿಸಿತು. ರೇಖಾ ಅವನ ಭುಜ ತಟ್ಟಿ, ಕಿಟಕಿಯಿಂದ ಹೊರಗಡೆ ನೋಡು ಅಂತ ಸೂಚಿಸಿದಳು. ಅಲ್ಲಿ ಆ ಮೇಸ್ತ್ರಿ ಅಟ್ಟಣಿಗೆಯ ಮೇಲೆ ನಿಂತುಕೊಂಡು, ಬ್ಯಾಂಡೇಜು ಸುತ್ತಿದ ಒಂದು ಕೈಯನ್ನು ಗೋಡೆಗೆ ಆನಿಸಿಕೊಂಡು, ಇನ್ನೊಂದು ಕೈಯಲ್ಲಿ ಫೋನು ಹಿಡಕೊಂಡು ಯಾವುದೋ ವೀಡಿಯೋ ನೋಡುತ್ತಿದ್ದ. ಗಮನಿಸಿದರೆ ಅದೊಂದು ಒಳ್ಳೆಯ ಹೊಸ ಸ್ಮಾರ್ಟ್‌ಫೋನ್ ಹಾಗೆ ಕಾಣುತ್ತಿತ್ತು. ಪ್ರಶಾಂತನಿಗೆ ಕುತೂಹಲ ತಡೆಯಲಾಗದೆ ಹೊರಗಡೆ ಹೋಗಿ, ‘ಏನಪ್ಪಾ, ಹೊಸ ಫೋನ್ ತಗಂಡಂಗಿದೆ?’ ಅಂತ ಕೇಳಿದ. ‘ಹೌದೂ ಸಾರ್. ಆಸ್ಪತ್ರೆಗೆ ನೋಡಕ್ಕೆ ಬರ್ತಾರಲ್ಲ ಸಾರ್ ತುಂಬಾ ಜನ, ಅವ್ರೆಲ್ಲ ಅಷ್ಟಿಷ್ಟು ಕಾಸು ಕೊಡ್ತಾರೆ ಸಾರ್.. ನಾನು ಅಡ್ಮಿಟ್ ಆಗಿದ್ದಾಗ ಯಾರೋ ದೊಡ್ ಮನುಸ್ರು ಬಂದು ಐದು ಸಾವ್ರ ಕೊಟ್ರು ಸಾರ್.. ಎಲ್ಲಾ ಸೇರಿ ಹತ್ತನ್ನೆರ್ಡ್ ಸಾವ್ರ ಆಯ್ತು ಸಾರ್.. ಈಗ ಕೈಗೆ ಸುತ್ತಿರೋ ಬ್ಯಾಂಡೇಜ್ ಬಿಚ್ಚಗಂಟ ಕೆಲ್ಸ ಮಾಡ್ದೇ ಸುಮ್ನೇ ಕೂತಿರ್ಬೇಕಲ್ಲ ಸಾರ್, ಅದ್ಕೇ ಮೊಬೈಲಾಗೆ ವೀಡ್ಯ ಆದ್ರೂ ನೋಡನ ಅಂತ ತಗಂಡೆ ಸಾರ್.. ನಮ್ ಹೆಂಗುಸ್ರು ಬೈದ್ರು ಸಾರ್, ಆದ್ರೂ ನಾನು ತಗಂಡೆ ಸಾರ್’ ಅಂದ. ಪ್ರಶಾಂತ ಮನಸಿನಲ್ಲೇ ‘ಎಲಾ ಇವನಾ!’ ಅಂದುಕೊಂಡ. ತಾನು ಆವತ್ತು ಇವನ ಹೆಸರಲ್ಲಿ ಹಣ ಕಟ್ಟಿದ್ದು ತಪ್ಪಾಯಿತಾ, ಇವನು ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡುತ್ತಿಲ್ಲವಲ್ಲ, ಅಥವಾ ಇವನಿಗೆ ಅದು ಗೊತ್ತೇ ಇಲ್ಲವಾ.. ಏನಾದರಾಗಲಿ, ನಾನಾಗೇ ಕೇಳಿ ಸಣ್ಣವನಾಗುವುದು ಬೇಡ ಅಂತ ಪ್ರಶಾಂತ ಸುಮ್ಮನಾದ.

ಒಳಬಂದಾಗ ರೇಖಾ ಹೇಳಿದಳು: ‘ಗೊತ್ತಾಯ್ತಾ ಪ್ರಶ್, ಇಷ್ಟೇ ಲೈಫು. ನಾವು ಸುಮ್ಮನೇ ಏನೇನೋ ತಲೆಕೆಡಿಸ್ಕೊಂಡು ಕೂತ್ಕೋತೀವಿ. ನಮಗಿರೋದು ಅವರಿಗಿಲ್ಲ, ನಾವು ಹೀಗಿರೋದು ತಪ್ಪು ಅಂತೆಲ್ಲ. ಆದ್ರೆ ಎವೆರಿವನ್ ಎಂಜಾಯ್ಸ್ ಲಕ್ಷುರಿ ಇನ್ ದೇರ್ ಓನ್ ಲಿಮಿಟ್ಸ್.. ನಮಗೆ ಇದು ಲಕ್ಷುರಿ, ಅವರಿಗೆ ಅದು ಲಕ್ಷುರಿ. ಎಲ್ಲರದ್ದೂ ಜೀವನ ಹೇಗೋ ಸಾಗುತ್ತೆ. ಅವನು ಅಟ್ಟಣಿಗೆಯಲ್ಲಿ ನಿಂತು ಮೊಬೈಲು ನೋಡ್ತಾನೆ, ನಾವು ಸೋಫಾದಲ್ಲಿ ಕೂತು ನೋಡ್ತೀವಿ; ಅಷ್ಟೇ ವ್ಯತ್ಯಾಸ. ಎಲ್ಲರೂ ಒಂದು ಎತ್ತರದಲ್ಲಿ ಬದುಕ್ತಾರೆ. ನಾಳೆ ನಿನ್ನ ಕೆಲಸ ಹೋದ್ರೆ ನಾವೂ ಈ ಅಟ್ಟಣಿಗೆಯಿಂದ ಕೆಳಗೆ ಬೀಳ್ತೀವಿ. ಸೋ, ತುಂಬಾ ಯೋಚನೆ ಮಾಡೋಕೆ ಹೋಗಬಾರದು.’

ಯಾವಾಗ ನೋಡಿದರೂ ಶಾಪಿಂಗು, ಕಿಟ್ಟಿಪಾರ್ಟಿ, ನೇಲ್‌ಪಾಲೀಶಿನ ಶೇಡುಗಳಲ್ಲಿ ಮುಳುಗಿರುವ ರೇಖಾ ಇವತ್ತು ದೊಡ್ಡ ದಾರ್ಶನಿಕಳಂತೆ ಭಾಸವಾದಳು. ಪ್ರಶಾಂತ ಅವಳನ್ನು ಅಭಿಮಾನದಿಂದ ನೋಡಿದ. ಫೇಸ್‌ಬುಕ್ಕಿನ ಇವೆಂಟ್ ರಿಮೈಂಡರ್ ಇವತ್ತಿನಿಂದ ‘ಬೆಂಗಳೂರು ಪುಸ್ತಕ ಪರಿಷೆ ಶುರು’ ಅಂತ ತೋರಿಸುತ್ತಿತ್ತು.  ಒಬ್ಬನೇ ಡ್ರೈವ್ ಮಾಡಿಕೊಂಡು ಅರಮನೆ ಮೈದಾನಕ್ಕೆ ಬಂದ. ಸಾವಿರ ಸಾವಿರ ಪುಸ್ತಕಗಳು ಪ್ರದರ್ಶನದಲ್ಲಿದ್ದವು.  ಮಳಿಗೆಯೊಂದಕ್ಕೆ ನುಗ್ಗಿದವನೇ ಹೊಸದಾಗಿ ಬಂದ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ಅತ್ಯಾದರದಿಂದ ಅದರ ಮುಖಪುಟವನ್ನು ಸವರಿ, ಹಣದ ಚೀಟಿಯತ್ತ ನೋಡದೇ ವ್ಯಾಲೆಟ್ಟಿಗೆ ಕೈ ಹಾಕಿದ.

[ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]

Wednesday, December 18, 2019

ವಿಮಲ್ ಚೀಲ

ಎಲ್ಲ ಕೆಟ್ಟದ್ದರ ಹಿಂದೆಯೂ ಒಂಚೂರು ಒಳ್ಳೆಯದ್ದೂ ಇರುತ್ತದೆ ಎಂಬ ಮಾತಿದೆ. ನಮ್ಮ ಮಹಾಕಾವ್ಯಗಳ ವಿಲನ್ಸ್ ರಾವಣ - ದುರ್ಯೋಧನರಲ್ಲೂ ಒಳ್ಳೆಯ ಗುಣಗಳನ್ನು ಕಂಡವರಿದ್ದಾರೆ. ಕತ್ತಲೆಯ ಆಚೆಕಡೆ ಬೆಳಕಿದೆ.

ಹಾಗೆಯೇ ಈ ವಿಮಲ್ ಚೀಲ! ಗುಟ್ಕಾ - ಪಾನ್ ಮಸಾಲಾ ಕೆಟ್ಟದು, ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗೊಂದಿಷ್ಟು ವರ್ಷಗಳ ಹಿಂದೆ ಸರ್ಕಾರ ಗುಟ್ಕಾವನ್ನು ಬ್ಯಾನ್ ಮಾಡಿದರೂ, ಆ ಬ್ಯಾನ್‌ನ ನಿಯಮಾವಳಿಗಳಲ್ಲಿದ್ದ ದೋಷದ ಲಾಭ ಪಡೆದ ಗುಟ್ಕಾ ತಯಾರಿಕಾ ಕಂಪನಿಗಳು ಪಾನ್ ಮಸಾಲಾ ಮತ್ತು ತಂಬಾಕುಗಳನ್ನು ಬೇರೆಬೇರೆ ಪೊಟ್ಟಣಗಳಲ್ಲಿ ಮಾರತೊಡಗಿದವು. ಹೀಗಾಗಿ ಗುಟ್ಕಾ ಜಗಿಯುವವರಿಗೆ ಎರಡು ಸ್ಯಾಚೆಗಳನ್ನು ಒಡೆದು ಮಿಕ್ಸ್ ಮಾಡಿಕೊಳ್ಳುವ ಕಷ್ಟ ಬಿಟ್ಟರೆ ಮತ್ತಿನ್ಯಾವ ಹಿನ್ನಡೆಯೂ ಆಗಲಿಲ್ಲ. ನಾವು ಸಿನೆಮಾ ನೋಡಲು ಥಿಯೇಟರಿಗೆ ಹೋದಾಗಲೆಲ್ಲ ವಿಕಾರ ಮುಖ-ದವಡೆಗಳನ್ನು ತೋರಿಸುತ್ತ ರಾಹುಲ್ ದ್ರಾವಿಡ್ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ವಿವರಿಸುವುದನ್ನು ನೋಡುವುದು ತಪ್ಪಲಿಲ್ಲ.

ಈ ವಿಮಲ್-ಸ್ಟಾರ್ ಮುಂತಾದ ಗುಟ್ಕಾ ಕಂಪನಿಗಳು ತಮ್ಮ ಪಾನ್ ಮಸಾಲಾ ಮತ್ತು ತಂಬಾಕುಗಳ ಸರಗಳ ಬಂಡಲುಗಳನ್ನು ಸಗಟು ವ್ಯಾಪಾರಿಗಳಿಂದ ಅಂಗಡಿಗಳಿಗೆ ತಲುಪಿಸಲು ಈ ಥರದ ದೊಡ್ಡದೊಡ್ಡ ಚೀಲಗಳಲ್ಲಿ ತುಂಬಿ ಕಳುಹಿಸುತ್ತವಷ್ಟೇ. ಹಾಗೆ ಅಂಗಡಿಗಳಿಗೆ ತಲುಪಿದ ಈ ಚೀಲಗಳ ಒಡಲ ವಸ್ತುಗಳು ಬರಿದಾದಮೇಲೆ ಖಾಲೀಚೀಲಗಳು ಮಾರಾಟಕ್ಕೊಳಗಾಗುತ್ತವೆ. ಸಾಗರ-ಸೊರಬದಂತಹ ಪೇಟೆಗಳ ಜನರಲ್ ಸ್ಟೋರುಗಳಲ್ಲೂ, ಸಿಗರೇಟ್-ಪಾನ್‌ಮಸಾಲಾಗಳ ಸಗಟು ವ್ಯಾಪಾರಿಗಳಲ್ಲೂ ಈ ಚೀಲಗಳು ಐವತ್ತು-ಅರವತ್ತು ರೂಪಾಯಿಗೆ ಸಿಗುತ್ತವೆ. ಗಟ್ಟಿ ಬಟ್ಟೆಯಿಂದ ಮಾಡಲ್ಪಟ್ಟ ಈ ಚೀಲಗಳು ಗಟ್ಟಿಮುಟ್ಟಾದ ಹಿಡಿಕೆಯನ್ನೂ ಹೊಂದಿ ಬಹುಪಯೋಗಿಯಾಗಿವೆ ಎಂಬುದು ಸತ್ಯ. ಕಣಕಣದಲ್ಲೂ ಕೇಸರಿಯ ಶಕ್ತಿ ಹೊಂದಿರುವ ಈ ಚೀಲಗಳು, ದಿನಸಿ ಸಾಮಾನು ಒಯ್ಯಲು, ಸಂತೆಗೆ ಹೋಗಲು, ಎಷ್ಟೇ ಭಾರವಾದ ವಸ್ತುಗಳನ್ನು ಸಾಗಿಸಲು ಮಹೋಪಕಾರಿಗಳು. ನೀವು ನಮ್ಮೂರ ಕಡೆ ಬಂದು ನೋಡಿದರೆ, ಪ್ರತಿ ಮನೆಯಲ್ಲೂ ಇಂತಹ ಒಂದೆರಡಾದರೂ ಚೀಲಗಳು ಕಾಣುತ್ತವೆ. ನಮ್ಮಂಥ 'ಹಳ್ಳೀಮೂಲ-ಪೇಟೆವಾಸಿ' ಹಣೆಪಟ್ಟಿಯ ಅಬ್ಬೇಪಾರಿಗಳು ಪ್ರತಿಸಲ ಊರಿನಿಂದ ಬರುವಾಗ ಬೆಲ್ಲ-ತುಪ್ಪ-ಉಪ್ಪಿನಕಾಯಿ-ತೆಂಗಿನಕಾಯಿ ಇತ್ಯಾದಿಗಳನ್ನು ತುಂಬಿ ತುಂಬಿ ಬಸ್ಸಿಗೇರಿಸಲು ಇವು ಮಾಡುವ ಸಹಾಯಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಊರಿನಿಂದ ಹೊರಡುವಾಗ ನಮ್ಮ ನಾಜೂಕಿನ ಏರ್‌ಬ್ಯಾಗುಗಳು ತುಂಬಿದವೋ, ಉಳಿದ ವಸ್ತುಗಳನ್ನು ತುಂಬಿಸಲು "ಏ, ವಿಮಲ್ ಚೀಲ ತಗಳಾ" ಅಂತ ಹೇಳುವುದು ಸಾಮಾನ್ಯ.

ನೋಡಿ, ಗುಟ್ಕಾ ಆರೋಗ್ಯಕ್ಕೆ ಎಷ್ಟೇ ಮಾರಕವಾಗಿರಬಹುದು, ಅದರ ಬಿಡಿಪೊಟ್ಟಣಗಳಿಂದ ಪರಿಸರ ನಾಶವಾಗುತ್ತಿರುವುದೂ ಸರಿ, ಆದರೆ ಗುಟ್ಕಾ ಚೀಲ ಮಾತ್ರ ಬಟ್ಟೆಯಿಂದ ತಯಾರಿಸಲ್ಪಟ್ಟು ಪರಿಸರಸ್ನೇಹಿಯಾಗಿದೆ! ಅಲ್ಲದೇ ಪ್ಲಾಸ್ಟಿಕ್ ಕೈಚೀಲಗಳ ನಿಷೇಧ ಭಾಗಶಃ ಜಾರಿಯಾಗಿರುವ ಈ ದಿನಗಳಲ್ಲಂತೂ ಇವು ಬಹು ಉಪಕಾರಿಯಾಗಿವೆ. ನಿನ್ನೆ ಬೆಂಗಳೂರಿನ ನಮ್ಮ ಮನೆ ಹತ್ತಿರದ ಒಂದು ಅಂಗಡಿಯಲ್ಲಿ ಸಂತೆಚೀಲ ನೇತಾಡುತ್ತಿರೋದು ನೋಡಿದೆ. ದಿನಸಿ-ತರಕಾರಿ ಕೊಳ್ಳಲು ಅನುಕೂಲವಾಗುತ್ತೆ, ಕೊಳ್ಳೋಣ ಅಂತ ಹೋಗಿ ಕೇಳಿದರೆ, ಅಂಗಡಿಯವ ಒಂದು ಚೀಲಕ್ಕೆ 150 ರೂಪಾಯಿ ಹೇಳೋದಾ! "ಏ ಹೋಗಯ್ಯಾ, ಮನೇಲಿ ಬೇಕಾದಷ್ಟು ವಿಮಲ್ ಚೀಲ ಇದಾವೆ, ನಿನ್ ಚೀಲ ಯಾವನಿಗ್ ಬೇಕು" ಅಂತ ಗೊಣಗಿಕೊಂಡು ಬಂದೆ.