Monday, December 17, 2018

ಅವಳು ಇತ್ತೀಚೆಗೆ

ಮಗಳು ಮಲಗಿದ ಸಮಯದಲ್ಲಿ ಅವಳು ಚಪಾತಿ ಒರೆಯುತ್ತಾಳೆ
ಲೊಟಗುಡುವ ಮಣೆಯ ಮನದಲ್ಲೆ ಬೈದುಕೊಳ್ಳುತ್ತಾಳೆ
ಲಟ್ಟಣಿಗೆಯ ನೆಲಕ್ಕಿಡುವಾಗ ಸದ್ದಾಗದಂತೆ ಎಚ್ಚರ ವಹಿಸುತ್ತಾಳೆ
ತೆಳುಲಯದ ಮೆದುಹಾಳೆಯ ಕಾವಲಿಯ ಮೇಲೆ ಹಾಕುವಾಗ
ಅಕಸ್ಮಾತ್ ಕಟ್ಟಿದ ನೆರಿಗೆಯ ಸಾವಕಾಶ ಬಿಡಿಸುತ್ತಾಳೆ
ಉಬ್ಬುಬ್ಬಿ ಬರುವ ಚಪಾತಿ ಕರಕಲಾಗದಂತೆ ಸಟ್ಟುಗದಿಂದ
ತಿರುವುವಾಗ ನೀರವವರ ಪಾಲಿಸೆಂದು ಪ್ರಾರ್ಥಿಸುತ್ತಾಳೆ-
ಕೆಲಹೊತ್ತಿನ ಹಿಂದಷ್ಟೆ ಹಿಟ್ಟನ್ನು ದಬರಿಗೆ ಸುರಿವಾಗ
ಪಾರಿಜಾತಪಾತಕ್ಕೆ ಮೈಮರೆತು ನಿಂತಿದ್ದ ಹುಡುಗಿ.

ಏಕಿಷ್ಟು ನಯ ಏಕಿಷ್ಟು ನಿಧಾನ ಏಕಿಷ್ಟು ಹುಷಾರು
ಮಗಳ ಮಲಗಿಸಲು ಪಟ್ಟ ಹರಸಾಹಸದ ಕತೆಯೇ ಇದೆ ಹಿಂದೆ
ಕೂತಲ್ಲೆ ಕೂತು ತೂಗಿತೂಗಿತೂಗಿದ ನೋವು ಇನ್ನೂ
ಹಾಗೆಯೇ ಇದೆ ಬೆನ್ನಲ್ಲಿ ಪಣುವಾಗಿ
ಗುನುಗಿದ ನೂರಾರು ಲಾಲಿಹಾಡುಗಳು ಇನ್ನೂ
ಸುಳಿದಾಡುತ್ತಿವೆ ಕೋಣೆಯಲ್ಲಿ, ಅಂಟಿಕೊಂಡಿವೆ ಗೋಡೆಯಲ್ಲಿ
ಕಥೆಗಳ ಖಜಾನೆಯಿಂದ ರಾಜ-ರಾಣಿ-ಗುಲಾಮರೆಲ್ಲ
ಬಂದುಹೋಗಿದ್ದಾರೆ ಕಾಗಕ್ಕ-ಗುಬ್ಬಕ್ಕರ ಜೊತೆಗೆ
ನಂಬಿಸಿದ್ದಾಗಿದೆ ನಿದ್ದೆಯಿಂದೆದ್ದಾದಮೇಲೆ ಸಿಗಲಿರುವ
ವಿಧವಿಧ ತಿಂಡಿ ಆಟಿಕೆ ಆಟಗಳ ಆಮಿಶವೊಡ್ಡಿ

ಚಪಾತಿಯಾದರೆ ಆಯಿತೆ? ಅದಕೊಂದು ಸಬ್ಜಿ
ಮನೆಯ ತುಂಬ ಹರಡಿರುವ ವಸ್ತುಗಳ ಹೆಕ್ಕಿ
ಗುಡಿಸಿ ಸಾರಿಸಿ ಮೈಗೊಂದಿಷ್ಟು ನೀರೆರೆದುಕೊಂಡು
ಕಿಣಿಗುಡುವ ಮೊಬೈಲಿನ ಸಂದೇಶಗಳಿಗುತ್ತರಿಸಿ
ದಿನದ ಸುದ್ದಿಗಳ ಗಾಸಿಪ್ಪುಗಳ ಕಡೆಗೊಂದು ಕಣ್ಣು ಹರಿಸಿ
ಒಣಗಿದ ಬಟ್ಟೆಗಳ ಮಡಿಚಿಟ್ಟು ಒಳಗೆ

ಹಾರಿಹೋಗುತ್ತಿರುವ ಸಮಯದಲ್ಲಿ ತನ್ನ ಸಮಯವ
ಹಿಡಿಯಲು ಹಾತೊರೆಯುತ್ತಾಳೆ ಚಡಪಡಿಸುತ್ತಾಳೆ
ಕಿವಿಗೆ ಹಾಡೊಂದನು ತುರುಕಿಕೊಂಡು
ಪೆನ್ನು ಹಾಳೆ ಹಿಡಿದು ಒರಗಿ ಕೂತು ಕುರ್ಚಿಗೆ
ಚಿತ್ರ ಬಿಡಿಸುತ್ತಾಳೆ, ಮುಳುಗುತ್ತಾಳೆ ಗೆರೆಗಳೊಳಗೆ
ಇನ್ನೇನು ಏಳಲಿರುವ ಕಂದ ಸೃಷ್ಟಿಸಲಿರುವ
ಪ್ರಳಯವನೆದುರಿಸಲು ತಯಾರಾಗುತ್ತಾಳೆ ಅಲ್ಲಿಂದಲೇ.

Monday, December 03, 2018

ಕೊಲ್ಲುವ ಸುಲಭ ವಿಧಾನ

ನೀವೆಷ್ಟೇ ಸ್ಕೆಚ್ಚು ಹಾಕಿ ಏನೇ ಪ್ಲಾನು ಮಾಡಿ
ಯಾರ್ಯಾರಿಗೂ ಕಾಣದಂತೆ ಚಾಣಾಕ್ಷತನದಿಂದ
ರಿವಾಲ್ವರಿನಿಂದ ಗುಂಡು ಹಾರಿಸಿ ಕೊಲ್ಲಿರಿ
ಆಮೇಲದನ್ನು ಯಾರಿಗೂ ಕಾಣದಂತೆ ಅಡಗಿಸಿಡಿ
ಹುಡುಕಬೇಕು ಎಂದಾದರೆ ಹುಡುಕುತ್ತಾರೆ ಹುಡುಕುವವರು
ಯಾವ ಕಂಪನಿಯ ರಿವಾಲ್ವರಿನಿಂದ
ಯಾವ ಅಳತೆಯ ಗುಂಡು ಬಳಸಿ
ಎಷ್ಟು ಹೊತ್ತಿಗೆ ಎಷ್ಟು ದೂರದಲ್ಲಿ ಎಷ್ಟು ಎತ್ತರದಲ್ಲಿ
ನಿಂತು ಹೊಡೆದು ಎತ್ತ ಪರಾರಿಯಾದಿರೆಂದು
ಪತ್ತೆ ಹಚ್ಚುತ್ತಾರೆ ಇಂಚಿಂಚು ವಿವರ ಸಮೇತ

ಬೇಡ, ಹರಿತ ಚಾಕುವಿನಿಂದ ಇರಿಯಿರಿ
ಕರುಳಿನೊಂದಿಗೆ ಹೊರಬಂದ ರಕ್ತ ಸೋರುವ ಚಾಕು
ಸಿಂಕಿನಲ್ಲಿ ತೊಳೆಯಿರಿ ಕೆಂಪು ಹೋಗುವವರೆಗೆ
ಬೆರಳಚ್ಚನ್ನು ಅತಿನಾಜೂಕಿನಿಂದ ಅಳಿಸಿಹಾಕಿ
ಬಿಸಿರುಧಿರದ ಕಮಟು ಹೋಗುವಂತೆ ಪರಿಮಳ ಪೂಸಿ
ಸಿಸಿಟಿವಿ ಪಿಸಿಟಿವಿ ಮಣ್ಣು ಮಸಿ ಲವಲೇಶವನೂ ಬಿಡದೆ
ಹೊತ್ತೊಯ್ಯಿರಿ ಅನುಮಾನ ಬರದಂತೆ ಮಾಯವಾಗಿ
ಹಿಡಿಯಬೇಕೆಂದರೆ ಕಂಡುಹಿಡಿಯುತ್ತಾರೆ ಕಂಡುಹಿಡಿಯುವವರು
ಇದೇ ಇವರದೇ ಅಂಗಡಿಯಲ್ಲಿ ಕೊಂಡ ಚಾಕು
ಇಂಥದೇ ಬಣ್ಣದ ಹಿಡಿಕೆ ಅದಕೆ ಇಷ್ಟುದ್ದದ ಫಳಫಳ ಮೈ
ಹೀಗೆ ನಿಂತು ಹೀಗೆ ಬಾಗಿ ಇಷ್ಟೆತ್ತರ ಕೈಯೆತ್ತಿ ಹೀಗೆ ಇರಿದು
ಕರಾರುವಾಕ್ ಬಿಡಿಸಿಡುತ್ತಾರೆ ಕ್ಷಣಕ್ಷಣದ ಚಿತ್ರ

ಯಾಕೆ‌ ತಲೆಬಿಸಿ? ಒಂದು ಹಗ್ಗದಿಂದ ಕೊರಳಿಗೆ ಬಿಗಿದು
ಉಸಿರುಗಟ್ಟಿಸಿ ಗಟ್ಟಿಯಾಗಿ ಹಿಡಿದು ಕೊಂದುಬಿಡಿ
ಆಮೇಲೆ ಆ ಹಗ್ಗವನ್ನು ಸುರುಳಿ ಸುತ್ತಿ
ನಿರ್ಜನ ಪ್ರದೇಶಕ್ಕೊಯ್ದು ಸುಟ್ಟುಹಾಕಿಬಿಡಿ
ತಲೆಮರೆಸಿಕೊಂಡಿರಿ ಒಂದಷ್ಟು ಕಾಲ
ಆದರೂ ಬಚಾವಾಗುವುದು ಸುಲಭವಲ್ಲ ಸಾರ್
ನೀವಿದ್ದಲ್ಲಿಗೇ ಬರುತ್ತಾರೆ ಹುಡುಕಿಕೊಂಡು
ಬೂದಿ ಕೆದಕಿದಂತೆ ಕೆದಕುತ್ತಾರೆ ಹಿಂದಿನದನ್ನೆಲ್ಲ
ಪ್ರಶ್ನೆಯ ಮೇಲೆ ಪ್ರಶ್ನೆಯೆಸೆದು ಸಿಕ್ಕಿಹಾಕಿಸುತ್ತಾರೆ
ನಿಮ್ಮದೇ ಬಲೆಯಲ್ಲಿ ನಿಮ್ಮನು, ಹಾಗೇ ಹೊತ್ತೊಯ್ಯುತ್ತಾರೆ

ಕೊಲ್ಲುವ ಸುಲಭ ಮಾರ್ಗ ಹೇಳುವೆ ಕೇಳಿ
ಅವರು ಬಯಸಿದ್ದನ್ನು ಅವರಿಗೆ ಕೊಡಬೇಡಿ
ನಿರೀಕ್ಷೆಯ ಉತ್ತುಂಗದಲ್ಲವರು ಕರಗಿ ಮೆತ್ತಗಾಗಿದ್ದಾಗ
ಮುಖ ತಿರುಗಿಸಿ ಹೊರಟುಬಿಡಿ
ಏನನೋ ಹೇಳಲವರು ಬಾಯ್ತೆರೆದು ಗೊಣಗುಟ್ಟಿದಾಗ
ಕಿವಿ ಕೇಳದವರಂತೆ ಮುನ್ನಡೆಯಿರಿ
ಕಣ್ಣಹನಿಗಳ ಕಂಡೂ ಕಾಣದವರಂತೆ ಮುಗುಮ್ಮಾಗಿರಿ
ಚಾಚಿದ ಕೈ ಅಲಕ್ಷಿಸಿ ಧಿಮಾಕು ತೋರಿ

ಅಷ್ಟೇ. ಪುಪ್ಪಸದಲ್ಲಿದ್ದ ಚೂರು ಉಸಿರೂ ಇಂಗಿಹೋಗಿ
ಹಾಗೇ ಮೂಕರಾಗಿ ಕೃಷರಾಗಿ ಖಾಲಿಯಾಗಿ ಸತ್ತುಹೋಗುವರು
ಅವರೆದೆಯೊಳಗಿದ್ದ ಗುಟ್ಟು ಸಹ ಹೊರಬರಲಾಗದೆ ಮಣ್ಣಾಗುವುದು
ಯಾರಿಗೂ ಯಾರ್ಯಾರಿಗೂ ತಿಳಿಯದೆ ನೀವು ಬಚಾವಾಗುವಿರಿ
ಅಯ್ಯೋ, ಪಾಪಪ್ರಜ್ಞೆಯ ಬಗ್ಗೆಯೆಲ್ಲಾ ಹೆದರಲೇಬೇಡಿ
ಅದು ಈ ಶಹರದ ಟ್ರಾಫಿಕ್ಕಿನಲ್ಲಿ ಸಾವಿರ ವಾಹನಗಳ
ತುಳಿತಕ್ಕೊಳಗಾಗಿ ಕೆಲವೇ ದಿನಗಳಲ್ಲಿ ನಾಮಾವಶೇಷವಾಗುವುದು.

ಈ ಸಲದ ದೀಪಾವಳಿ

ಹದಿನೈದು ದಿನದ ಹಿಂದೆ ಅಮ್ಮ ಹೇಳಿದ್ದಳು ಫೋನಿನಲ್ಲಿ
ನಮ್ಮನೆ ಹಿತ್ತಲಿಗೆ ಜಿಂಕೆಗಳು ಬಂದಿದ್ದವಂತೆ
ಕೋತಿಗಳೇ ಹೆಚ್ಚಿರುವ ನಮ್ಮೂರ ಕಾಡಿನಲ್ಲಿ
ಜಿಂಕೆಗಳೂ ಇರುವುದು ಗೊತ್ತೇ ಇರಲಿಲ್ಲ ನನಗೆ
ಅಪ್ಪನ ಕರೆದು ಫೋಟೋ ತೆಗೆಯಲು ಹೇಳುವಷ್ಟರಲ್ಲಿ
ಮಾಯವಾದವಂತೆ ಅವು
ಬಂದಿದ್ದವು ಮಾಯಾಜಿಂಕೆಗಳೇ ಹಾಗಾದರೆ
ಅಂತ ಕೇಳಿದೆ; ರಾಮರಾಮಾ, ಗೊತ್ತಿಲ್ಲ ಎಂದಿದ್ದಳು ಅಮ್ಮ

ದೀಪಾವಳಿಗೆ‌ ಊರಿಗೆ ಹೋದಾಗ ಆ ಜಿಂಕೆಗಳು
ಮತ್ತೆ ಬರಬಹುದು ಅಂತ ಕಣ್ಣು-ಕಿವಿಗಳ ಹಿತ್ತಿಲಲ್ಲಿಟ್ಟು ಕಾದೆ
ಗೋಪೂಜೆಯ ದಿನ ಜಿಂಕೆಯ ಚಿಂತ್ಯಾಕೋ ಅಂದ ಅಪ್ಪ
ಹಾಗೂ ಅವೇನಾದರೂ ಬಂದಿದ್ದರೆ
ಇನ್ನೂ ನಾಯಿಮರಿಗಳಿಗೂ ಜಿಂಕೆಗಳಿಗೂ
ವ್ಯತ್ಯಾಸ ಗುರುತಿಸದ ಮಗಳು ಅವನ್ನು ನೋಡಿದ್ದರೆ
ಬೌಬೌ ಎಂದು ಖುಷಿ ಪಡುತ್ತಿದ್ದಳು
ಬಾಬಾ ಎಂದು ಕರೆದು ಸಂಭ್ರಮಿಸುತ್ತಿದ್ದಳು
ಮಗಳು ಕರೆದರೆ ಅವು ಬಂದೇ ಬರುತ್ತಿದ್ದವು
ಆಗ ಅವಕ್ಕೆ ಚಿಗುರುಹುಲ್ಲು ತಿನ್ನಿಸಬಹುದಿತ್ತು

ಆಮೇಲೆ ನಾನು ಮಗಳಿಗೆ ಮಾರೀಚನೆಂಬ ರಾಕ್ಷಸ
ಜಿಂಕೆಯ ರೂಪದಲ್ಲಿ ಬಂದುದನ್ನೂ
ರಾಮ ಅದರ ಬೆನ್ನಟ್ಟಿ ಹೋದುದನ್ನೂ
ಆಗ ರಾವಣ ಸೀತೆಯನ್ನು ಹೊತ್ತೊಯ್ದುದನ್ನೂ
ನಂತರ ರಾಮ-ಲಕ್ಷ್ಮಣ-ವಾನರರೆಲ್ಲ ಲಂಕೆಗೆ
ದಂಡೆತ್ತಿ ಹೋದುದನ್ನೂ ರಾವಣನನ್ನು ಸಂಹರಿಸಿದ
ಕಥೆಯನ್ನೂ ಹೇಳಬಹುದಿತ್ತು

ಆದರೆ ಆಗ ಅವಳಿಗೆ ಜಿಂಕೆಗಳ ಬಗೆಗಿದ್ದ
ನೋಟವೇ ಬದಲಾಗಿಹೋಗುತ್ತಿತ್ತು ಎನಿಸಿ ಬೆವರಿದೆ
ಜಿಂಕೆಗಳು ಬಾರದೇ ಇದ್ದುದೇ ಒಳ್ಳೆಯದಾಯಿತು
ಎನಿಸಿ ನಿಟ್ಟುಸಿರುಬಿಟ್ಟೆ
ಯಾವ ಕಥೆ ಯಾವಾಗ ಹೇಗೆ ಹೇಳಬೇಕೋ
ಹಾಗೇ ಹೇಳಬೇಕು ಎಂಬುದು ಹೊಳೆದು
ಹಣತೆಗೆ ಎರಡು ಹುಟ್ಟು ಜಾಸ್ತಿ ಎಣ್ಣೆಯೆರೆದೆ.

ಪಾತ್ರ ನಿರ್ವಹಣೆ

ಮಗಳು ಹೋಗಿದ್ದಾಳೆ ಅಜ್ಜನ ಮನೆಗೆ

ಅವಳ ಗೊಂಬೆಗಳೀಗ ಬಾಕ್ಸಿನಲಿ ಬಿಕ್ಕುತ್ತಿರಬಹುದೇ?
ಮಿಸ್ ಮಾಡಿಕೊಳ್ಳುತ್ತಿರಬಹುದೇ ಅವಳನ್ನು
ಚಿಂಟು ಟೀವಿಯ ಕರಡಿಗಳು?
ಬೆಲ್ಲದ ಡಬ್ಬಿ ಅಲ್ಲಾಡದ ಸುಳಿವರಿತು
ಮುತ್ತಲು ಧೈರ್ಯ ಮಾಡಿರಬಹುದೇ ಇರುವೆಗಳು?
ಫ್ರಿಜ್ಜಿನಲ್ಲಿನ ದಾಳಿಂಬೆಯೊಳಗಿನ ಕಾಳುಗಳು
ಕೆಂಪಗೆ ಹಲ್ಲು ಗಿಂಜುತ್ತಿರಬಹುದೇ?
ಹರಿಯದೇ ಉಳಿದ ಇಂದಿನ ನ್ಯೂಸ್‌ಪೇಪರು
ತನ್ನೊಳಗಿನ ಸುದ್ದಿಗಳ ತಾನೇ ಓದುತ್ತಿರಬಹುದೇ?
ಮೌನ ಬೇಸರ ಬಂದು ಆಕಳಿಸುತ್ತಿರಬಹುದೇ
ಚೀಂವ್‌ಚೀಂವ್ ಚಪ್ಪಲಿಯೊಳಗಿನ ಪುಟ್ಟ ಪೀಪಿ?

ಎಂದೆಲ್ಲ ಅನಿಸಿ ಈ ನಡುರಾತ್ರಿ ಚಡಪಡಿಸಿಹೋಗಿ
ಅವಳ ಆಟಿಕೆಗಳನೆಲ್ಲ ಹರವಿ
ಟೀವಿ ಹಚ್ಚಿ ಕಾರ್ಟೂನಿಗೆ ಟ್ಯೂನು ಮಾಡಿ
ಬೆಲ್ಲದ ಡಬ್ಬಿ ಕೆಳಗಿಳಿಸಿ ದಾಳಿಂಬೆ ಬಿಡಿಸಿ
ಪೇಪರು ಹರಿದು ಚೂರ್ಚೂರು ಮಾಡಿ
ಚಪ್ಪಲಿಯ ಕೈಯಿಂದ ಒತ್ತಿ ಶಬ್ದ ಬರಿಸಿ

ಏನೆಲ್ಲ ಮಾಡಿ ಅವಕ್ಕೆ ಸಮಾಧಾನ ಮಾಡಿ
ನಾನು ಸಮಾಧಾನಗೊಳ್ಳುವ ಸಲುವಾಗಿ

ಆದರೆ ಅವಂದವು:
ನಮಗೆ ಪುಟ್ಪುಟ್ಟ ಬೆರಳುಗಳು ಬೇಕು
ಮೃದುಪಾದ ಬೇಕು
ಮುದ್ದುಮಾತು ಬೇಕು
ಸಣ್ಣ ಮುಷ್ಠಿಯಲಿ ಬರಗಿ ತಿನ್ನಬೇಕು
ಬೆರಗಲಿ ನೋಡಬೇಕು ನಮ್ಮನು ನಿಜಜೀವಿಗಳೆಂದು ಬಗೆದು

ನಾನು ಮಗಳಾಗಲಾಗದೆ ಸೋತು
ಈ ರಾತ್ರಿ ಜಾಗರ.

ಆ ವೃದ್ಧೆಗೆ

ನಿನ್ನನ್ನು ಮುಟ್ಟದೇ ನಿನ್ನ ಬಗ್ಗೆ ಬರೆಯಲಾರೆ
ಅದು ಅಪಚಾರವಾದೀತು

ಫೋಟೋಫ್ರೇಮಿನ ಅಂಗಡಿಯವ ಪೇಪರಿನಲ್ಲಿ
ಫೋಟೋ ಸುತ್ತಿಕೊಡುವಾಗ
ನಿನ್ನ ದಪ್ಪ ಕನ್ನಡಕದ ಹಿಂದಿನ ಕಣ್ಣಿನಲ್ಲಿ
ಪಸೆಯಿತ್ತೆಂದ ಮಾತ್ರಕ್ಕೆ
ಸಣ್ಣ ಪರ್ಸಿನಿಂದ ದುಡ್ಡು ತೆಗೆದುಕೊಡುವಾಗ
ನಿನ್ನ ಸುಕ್ಕುಗಟ್ಟಿದ ಕೈ ನಡುಗುತ್ತಿತ್ತೆಂಬ ಮಾತ್ರಕ್ಕೆ
ಅಲ್ಲಿಂದ ಹೊರಬೀಳುವಾಗ ನಿನ್ನ ಹೆಜ್ಜೆಗಳು
ಭಾರವಾಗಿದ್ದವೆಂಬ ಮಾತ್ರಕ್ಕೆ
ಆ ಫೋಟೋದಲ್ಲಿದ್ದ ನೀಲಿ ಜುಬ್ಬಾದ ವೃದ್ಧ
ನಿನ್ನ ಗಂಡನೇ ಎಂದು ಊಹಿಸಿ
ಅವರು ಈಗಿಲ್ಲವೆಂದೂ, ಅವರ ಫೋಟೋಗೆ
ನೀನೇ ಫ್ರೇಮು ಹಾಕಿಸಿ ದುಡ್ಡು ಕೊಟ್ಟು
ಇಸಕೊಂಡು ಬಂದೆಯೆಂದೂ
ಈಗ ಮನೆಗೆ ತೆರಳಿ ಆ ಫೋಟೋವನ್ನು
ಹಳೆಯ ಮೊಳೆಯೊಂದಕ್ಕೆ ನೇತುಹಾಕಿ
ಕುಂಕುಮ ಹಚ್ಚುತ್ತೀಯೆಂದೂ
ಈ ಕ್ಷಣದಲ್ಲೂ ಹತ್ತಿರವಿಲ್ಲದ ಮಕ್ಕಳ ನೆನೆದು
ಒಂಟಿಮನೆಯ ಬೆತ್ತದ ಕುರ್ಚಿಯಲ್ಲಿ ಕೂತು
ಅಳುತ್ತೀಯೆಂದೂ ಪದ್ಯ ಬರೆದು ಚಪ್ಪಾಳೆ ಗಿಟ್ಟಿಸಲಾರೆ

ಮಳೆ ಬಂದುಹೋದ ಈ ಸಂಜೆ
ರಸ್ತೆಬದಿ ನಿಂತ ನೀರನ್ನು ನಿನ್ನ ಮೇಲೆ ಅನಾಮತ್
ಹಾರಿಸಿ ಹೋದ ಕಾರಿನವನ್ನು ಬೈಯದೇ
ಛತ್ರಿಯರಳಿಸಿ ಪಶ್ಚಿಮದತ್ತ ನಡೆಯುತ್ತಿರುವ ನಿನ್ನ
ಕೈ ಹಿಡಿದು ಮನೆವರೆಗೆ ತಲುಪಿಸಲಾರದ ನಾನು

ಹೀಗೆ ಫುಟ್‌ಪಾತಿನ ಮೇಲೆ ನಿಂತು
ಪರಿಚಯವೇ ಇಲ್ಲದ ನಿನ್ನ ಜೀವನದ ಕಥೆಯನ್ನು
ಪೂರ್ತಿ ತಿಳಿದವನಂತೆ ಬರೆಯಲು ಕುಳಿತರೆ
ನಿನ್ನನ್ನು ನನ್ನ ಕಲ್ಪನೆಯ ಫ್ರೇಮಿನೊಳಗೆ ಬಂಧಿಸಿಡಲು
ಹವಣಿಸಿದರೆ ಅದಕ್ಕಿಂತ ಆತ್ಮದ್ರೋಹ ಮತ್ತೊಂದಿಲ್ಲ

ಸ್ಪರ್ಶಕ್ಕೆ ಸಿಲುಕದ ವಸ್ತುಗಳ ಬಗ್ಗೆ ಕವಿತೆ ಬರೆಯುವ ಚಾಳಿ
ಇನ್ನಾದರೂ ಬಿಡಬೇಕೆಂದಿದ್ದೇನೆ.

ಒಳ್ಳೆಯ ಸುದ್ದಿ

ವಾರ್ತಾಪ್ರಸಾರದ ಕೊನೆಯಲ್ಲಿ ಬರುತ್ತಿದ್ದ ಹವಾ ವರ್ತಮಾನ
ಈಗ ದಿನವಿಡೀ ಬಿತ್ತರವಾಗುತ್ತಿದೆ
ಕೆಂಪಗೆ ಹರಿವ ನೀರು, ಕುಸಿದ ಗುಡ್ಡಗಳು, ನಿರಾಶ್ರಿತ ಜನಗಳು,
ಸಹಾಯ ಮಾಡೀ ಎನ್ನುತ್ತಿರುವವರ ಭಯಗ್ರಸ್ತ ಕಂಗಳು
ಹೊರಗೆ ನೋಡಿದರೆ ಮ್ಲಾನ ಕವಿದ ವಾತಾವರಣ
ಮನೆಯ ಒಳಗೂ ಕತ್ತಲೆ ಕತ್ತಲೆ

ಇಂತಹ ಮುಂಜಾನೆ ಬಂದು ನೀನು ಬಾಗಿಲು ತಟ್ಟಿದ್ದೀ
ಕೈಯಲ್ಲೊಂದು ಚೀಲ, ಕಂದು ಸ್ವೆಟರು, ಕೆದರಿದ ಕೂದಲು
ಟೀವಿಯಲ್ಲಿ ಕಾಣುತ್ತಿರುವ ಆ ಆರ್ತರಲ್ಲೊಬ್ಬನೇ
ಎದ್ದು ಬಂದಂತೆ, ದಿಢೀರೆಂದು ಹೀಗೆ ಎದುರಿಗೆ ನಿಂತಿದ್ದೀ
ಮನೆಯಲ್ಲೆಲ್ಲ ಕ್ಷೇಮ ತಾನೇ? ಊರಿಗೇನೂ ಆಗಿಲ್ಲವಷ್ಟೇ?
ಬಾ, ಕುಳಿತುಕೋ ಗೆಳೆಯಾ, ಕೈಚೀಲವನ್ನಿತ್ತ ಕೊಡು

ಮಬ್ಬು ತುಂಬಿಕೊಂಡಿರುವ ಈ ಋತುವಿನಲ್ಲಿ
ಕಳೆಗುಂದಿರುವ ಮನಸಿಗೆ ಹಿತವಾಗುವಂತಹ
ಒಳ್ಳೆಯ ಸುದ್ದಿಗಳ ಹೇಳು
ಬಿಸಿಯಾದ ಚಹಾ ಮಾಡಿಸುವೆ
ಡೇರೆಯ ಗಿಡದಲಿ ಹೂವರಳಿರುವ
ಡೊಂಬರ ಲೋಕೇಶ ಶಾಲೆಗೆ ಹೊರಟಿರುವ
ಮಂಜಿ ಗದ್ದೆಗೆ ತಂದ ಬುತ್ತಿಯಲ್ಲಿ ಎಳ್ಳುಂಡೆಯಿದ್ದ
ಕೆಳಮನೆ ದ್ಯಾವ ಹೊಸ ಜೋಡೆತ್ತು ಕೊಂಡ
ನಲವತ್ತರ ಮಾಲತಿಗೆ ಮದುವೆ ನಿಕ್ಕಿಯಾಗಿರುವ
ಸಂತೆ ಮೈದಾನದ ಮಳಿಗೆಗಳ ಹೆಂಚು ಬದಲಿಸಿದ
ಸಿಹಿ ಸುದ್ದಿಗಳ ಹಂಚಿಕೋ

ಬೇಕಿದ್ದರೆ ನೀನು ತಂದಿರುವ ಹಲಸಿನಕಾಯಿಯ ಚಿಪ್ಸು ಸೀಸನಲ್ಲು,
ಅದು ನಮ್ಮನೆ ಆಲೂಗಡ್ಡೆ ಚಿಪ್ಸಿಗಿಂತ ಶ್ರೇಷ್ಠ ಅಂತ
ಜಗಳಾಡು
ಹಳೆಯ ಗೆಳೆಯರ, ಮಾಡಿದ ಕೀಟಲೆಗಳ ನೆನೆದು
ನಗೋಣ
ಆದರೆ ಹಾಗೆ ನಿಗೂಢವಾಗಿ ನೋಡಬೇಡ
ಯಾವುದೋ ದುಃಖದ ಸುದ್ದಿಯನ್ನೇ ಹೇಳಲು ಬಂದವನಂತೆ
ಮೌನ ಮುರಿಯಲು ಒದ್ದಾಡುತ್ತಿರುವವನಂತೆ ವರ್ತಿಸಬೇಡ
ಈ ವೆದರಿನಲ್ಲಿ ಕಣ್ಣೀರೂ ಬೇಗ ಒಣಗುವುದಿಲ್ಲ ಮಾರಾಯಾ

ಇಕೋ ಟವೆಲು, ಗೀಸರಿನಲ್ಲಿ ನೀರು ಬಿಸಿಯಿದೆ,
ಬೆಚ್ಚಗೆ ಸ್ನಾನ ಮಾಡಿಬಂದು ಈ ಖಿನ್ನಹವೆಯ
ತಿಳಿಗೊಳಿಸುವಂತಹ ಒಳ್ಳೊಳ್ಳೆಯ ಸುದ್ದಿಗಳ ಹೇಳು.


ಹೀಗೇ ಅಲ್ಲವೇ

ಇದುವರೆಗೆ ನಡೆಯುವಾಗ ಹೊಸ್ತಿಲ ಬಳಿ ಕುಳಿತು ದಾಟುತ್ತಿದ್ದ
ಮೆಟ್ಟಿಲ ಬಳಿ ಕುಳಿತು ಹತ್ತುತ್ತಿದ್ದ ಮಗಳು
ಮೊನ್ನೆಯಿಂದ ಬಗ್ಗದೆ ತಗ್ಗದೆ ಮುಂದರಿಯುತ್ತಿದ್ದಾಳೆ
ಅದು ಹೇಗೆ ಧೈರ್ಯ ಮಾಡಿದೆ ಮಗಳೇ ಎಂದರೆ
ಎದೆಯುಬ್ಬಿಸಿ ನಗೆಯಾಡುತ್ತಾಳೆ
ಏನೋ ಸಮಜಾಯಿಷಿ ನೀಡುತ್ತಾಳೆ
ಅವಳದೇ ಭಾಷೆಯಲ್ಲಿ

ಆದರೂ ನನಗದರ್ಥವಾಗುತ್ತದೆ
ಹೀಗೇ ಅಲ್ಲವೇ ನಾನೂ ಮೊದಲ ಸಲ
ಸೈಕಲ್ಲಿನ ಪೆಡಲಿನ ಮೇಲೆ ಹೆಜ್ಜೆಯಿಟ್ಟಿದ್ದು
ಒಳಪೆಡ್ಲಿನಿಂದ ಬಂಪರಿಗೆ
ಬಂಪರಿನಿಂದ ಸೀಟಿಗೆ ಏರಿದ್ದು
ಢವಗುಡುವೆದೆಯ ಸದ್ದನು
ಟ್ರಿಣ್‌ಟ್ರಿಣ್ ಬೆಲ್ ಮಾಡಿಯೇ ಮರೆಸಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಪೇರಲೆ ಮರದ ಕೆಳರೆಂಬೆಗಳ ದಾಟಿ ಮೇಲೇರಿದ್ದು
ತುದಿಯಲಿ ಜೋತ ಹಣ್ಣುಗಳ ಬಗ್ಗಿ ಹಿಡಿದದ್ದು
ಇಡೀ ಗಿಡವೇ ಬಾಗಿ ಹೆರೆಯೇ ಮುರಿಯಿತೆನಿಸಿ 
ಕಣ್ಣು ಮೇಲಾದಾಗಲೂ ಉಸಿರು ಬಿಗಿಹಿಡಿದುಕೊಂಡದ್ದು
ಕೆಳಗಿಳಿಯಲು ಕಾಲು ಸಿಗದೇ ಮೇಲಿಂದಲೇ ಹಾರಿದ್ದು
ಆದ ಗಾಯದ ಉರಿಯನು ಹಣ್ಣಿನ ರುಚಿಯಲಿ ಮಾಯಿಸಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಮಹಾನಗರದ ಬಸ್ಸು ಹತ್ತಿದ್ದು
ಮೆಜೆಸ್ಟಿಕ್ಕಿನ ನುಣ್ಣನೆ ಕಾಂಕ್ರೀಟು ನೆಲದಲಿ ಪಾದವೂರಿದ್ದು
ಹವಾಯಿ ಗಂಧರ್ವ ಪುಟುಪುಟು ಕಾಲೆತ್ತಿಟ್ಟಿದ್ದು 
ಅತ್ತಿತ್ತ ನೋಡುತ್ತ ಹುಸಿನಗೆಯಾಡುತ್ತ
ಎಲ್ಲ ತಿಳಿದವನಂತೆ ತಿಳಿಯದ ದಾರಿಯಲಿ ನಡೆದದ್ದು
ಸಿಗ್ನಲ್ಲು ಬಿದ್ದಾಗ ಪಕ್ಕದವನೊಂದಿಗೇ ರಸ್ತೆ ದಾಟಿದ್ದು

ಹೀಗೇ ಅಲ್ಲವೇ ನಾನೂ ಮೊದಲ ಸಲ
ಫಳಫಳ ಹೊಳೆವ ರಿಸೆಪ್ಷನ್ನಿನಲ್ಲಿ ಸರತಿಯಲ್ಲಿ ಕಾದದ್ದು
ಹೆಸರು ಕರೆದಾಗ ರೆಸ್ಯೂಮ್ ಹಿಡಿದು ಕದ ತಳ್ಳಿದ್ದು
ಗರಿಗರಿ ಇಸ್ತ್ರಿಯಂಗಿಗಳ ಇಂಗ್ಲೀಷು ವಾಗ್ಝರಿಗೆ
ಹರುಕುಮುರುಕು ಪದಗಳ ಜೋಡಿಸಿ ಉತ್ತರಿಸಿದ್ದು 
ಕೆಲಸದ ಮೊದಲ ದಿನ ತಿರುಗುಕುರ್ಚಿಯಲಿ ಕುಳಿತು
ಮೆಲ್ಲಗೆ ಒರಗಿದ್ದು, ಸುತ್ತಲೂ ನೋಡಿ ನಕ್ಕಿದ್ದು 

ಸರಿಯಿದೆ ಮಗಳೇ
ಹೀಗೇ ನಿನಗೆ ನೀನೇ ಧೈರ್ಯವಾಗಿ
ನಿನಗೆ ನೀನೇ ಸಾಟಿಯಾಗಿ
ಹುಸಿನಗೆ ಮೊಂಡೆದೆ ದೃಢದನಿಯಲಿ
ಇಡುವೆ ಇಂತಹ ಹೆಜ್ಜೆಗಳ ಮುಂದೆಯೂ
ದಡ ಸೇರಿ ಖುಷಿಪಡುವೆ ನಿನ್ನ ಬಗೆಗೇ ನೀನು 
ಚಪ್ಪಾಳೆ ತಟ್ಟುವೆ ನೋಡುತ್ತ ಕನ್ನಡಿಯಲಿ ನಾನು.