ನಿನ್ನೆ ಮನೆಗೆ ಫೋನ್ ಮಾಡಿದ್ದಾಗ ಅಮ್ಮ 'ಅವಳ' ಮದುವೆ ಫಿಕ್ಸಾಗಿರುವ ಸುದ್ದಿ ಹೇಳಿದಳು. ತಕ್ಷಣ ನನ್ನ ನೆನಪಿನಾಳದಿಂದ ಹರಿದು ಬಂತಲ್ಲ ನೀರು..?
ನಾನು ನನ್ನ ಹೈಸ್ಕೂಲು ಓದಿದ್ದು ನಮ್ಮೂರಿನಿಂದ ನಾಲ್ಕು ಮೈಲು ದೂರದಲ್ಲಿರುವ ನಿಸರಾಣಿಯ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯಲ್ಲಿ. ಏಳನೇ ತರಗತಿ ಮುಗಿದದ್ದೇ ನನ್ನನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಬೇಕು ಎಂದು ಅನೇಕರು ಸಲಹೆಯಿತ್ತರಾದರೂ ನನ್ನ ಅಪ್ಪ ಅದಕ್ಕೆ ಮನಸು ಮಾಡಲಿಲ್ಲ. 'ಓದೋವ್ರಿಗೆ ಎಲ್ಲಾದರೆ ಏನು? ನಿಸರಾಣಿ ಶಾಲೆಯಲ್ಲಿ ತುಂಬಾ ಚೆನ್ನಾಗಿ ಪಾಠ ನಡೆಯುತ್ತೆ. ಮೇಷ್ಟ್ರುಗಳೆಲ್ಲ ನಮ್ಮವರೇ. ನಾವೆಲ್ಲ ಹಿಂದೆ ಓದಿದ್ದು ಅಲ್ಲೇ ಅಲ್ವೇನು? ಅಲ್ಲಿ ಓದಿದ ಎಷ್ಟೊಂದು ಜನ ಈಗ ಎಲ್ಲೆಲ್ಲೋ ದೊಡ್ಡ ದೊಡ್ಡ ಕೆಲಸದಲ್ಲಿ ಇಲ್ವೇನು?' ಅಂತೆಲ್ಲಾ ಮಾತುಕತೆಯಾಗಿ ನಾನು ನಿಸರಾಣಿ ಶಾಲೆಗೇ ಸೇರುವುದು ಅಂತ ಆಯ್ತು. ಇಂಗ್ಲೀಷ್ ಮೀಡಿಯಂ ಶಾಲೆ ಎಂದರೆ ಸಾಗರದಲ್ಲಿತ್ತು. ದಿನವೂ ಓಡಾಡುವುದು ತೊಂದರೆ. ಅಲ್ಲದೆ ನಾನು ಆಗ ತುಂಬಾ ಚಿಕ್ಕವನಿದ್ದೆ ಬೇರೆಯವರಿಗೆ compare ಮಾಡಿದ್ರೆ. ಹೀಗಾಗಿ, 'ಇಂವ ಸಾಗರದ ಭಯಂಕರ ಟ್ರಾಫಿಕ್ಕಿನ (!) ರಸ್ತೆಯಲ್ಲಿ ಓಡಾಡಿ ಜಯಿಸಿಕೊಂಡು ಬರುವುದು ಸುಳ್ಳೇ ಸರಿ, ಬ್ಯಾಡೇ ಬ್ಯಾಡ ಸಾಗರ, ಇಲ್ಲೇ ನಿಸರಾಣಿಗೆ ಹೋಗಲಿ ಸಾಕು' ಅಂತ ಅಮ್ಮ ಅಜ್ಜಿಯರೂ ಸೇರಿಸಿದರು. ಅಲ್ಲಿಗೆ ಸರಿಯಾಯಿತು. ನನಗಂತೂ ಆಗ ಏನೆಂದರೆ ಏನೂ ತಿಳಿಯುತ್ತಿರಲಿಲ್ಲ. ಸಾಗರವಾದರೆ ಸಾಗರ, ನಿಸರಾಣಿಯಾದರೆ ನಿಸರಾಣಿ ಅಂತ ಇದ್ದವನು ನಾನು.
ಸರಿ, ನನ್ನನ್ನು ನಿಸರಾಣಿಯ ಶಾಲೆಗೆ ಸೇರಿಸಿದರು. ನಾನು ದಿನವೂ ನಾಲ್ಕು ಮೈಲು ಸೈಕಲ್ಲು ಹೊಡೆಯತೊಡಗಿದೆ. ಏರಲ್ಲೂ ಇಳಿಯದೇ ತುಳಿಯುತ್ತಿದ್ದೆ. ನನ್ನ ಜೊತೆ ಅಣ್ಣಪ್ಪ, ದುರ್ಗಪ್ಪರೇ ಮೊದಲಾದ ಸಹೃದಯ ಗೆಳೆಯರು ಸಿಕ್ಕಿದರು. ಈ ಲೋಕಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗದ ಮಾತುಗಳನ್ನು ಲೋಕಾಭಿರಾಮವಾಗಿ ಆಡುತ್ತಾ ಸಾಗುತ್ತಿದ್ದರೆ ಶಾಲೆ ಬಂದದ್ದೇ ಗೊತ್ತಾಗುತ್ತಿರಲಿಲ್ಲ.
ನಿಸರಾಣಿ ಶಾಲೆ ಹಿಂದೊಂದು ಕಾಲದಲ್ಲಿ ತುಂಬಾ ಚೆನ್ನಾಗಿದ್ದ ಶಾಲೆ. ಇಡೀ ಸೊರಬ ತಾಲೂಕಿಗೆ, ಅಷ್ಟೇ ಏಕೆ, ಜಿಲ್ಲೆಯಲ್ಲೇ ಹೆಸರು ಮಾಡಿದ್ದ ಶಾಲೆ. ನಿಸರಾಣಿ ಹೈಸ್ಕೂಲಿನಲ್ಲಿ ಎಸ್‍ಎಸ್‍ಎಲ್‍ಸಿ ಮಾಡಿಕೊಂಡು ಬಂದವರಿಗೆ ಯಾವ ಕಾಲೇಜಿನವರೂ ಸೀಟಿಲ್ಲ ಅನ್ನುತ್ತಿರಲಿಲ್ಲ. ಅಲ್ಲಿಯ ವಿಜ್ಞಾನ ಕೊಠಡಿಯಲ್ಲಿ ಇರುವ ಉಪಕರಣಗಳು ಮತ್ಯಾವುದೇ ಉತ್ತಮ ಶಾಲೆಗೆ ಹೋಲಿಸಬಹುದಾದಷ್ಟಿದ್ದವು. ಆಗ ಶಿಕ್ಷಕವರ್ಗವೂ ಹಾಗೆಯೇ ಇತ್ತು. ನನ್ನ ಅಪ್ಪ, ಅತ್ತೆಯರೆಲ್ಲರೂ ಓದಿದ್ದು ಅದೇ ಶಾಲೆಯಲ್ಲಿ. ನನ್ನ ಅಜ್ಜ ಶಾಲೆಯ ಪಕ್ಕ ಒಂದು ಕ್ಯಾಂಟೀನೂ ಇಟ್ಟಿದ್ದನಂತೆ.
ಆದರೆ ನಾನು ಸೇರುವ ಹೊತ್ತಿಗೆ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. Retirement ಸಮೀಪಿಸಿದ್ದ ಶಿಕ್ಷಕವರ್ಗ. ಯಾವ ಮೇಷ್ಟ್ರಿಗೂ ಪಾಟ ಮಾಡಬೇಕು ಅನ್ನುವ ಹುಮ್ಮಸ್ಸೇ ಇರಲಿಲ್ಲ. ಕೆಲ ಹಳೆಯ ಶಿಕ್ಷಕರು ಮತ್ತು ಆಗ ತಾನೇ ಸೇರಿದ್ದ ಒಂದಿಬ್ಬರು ಯುವ ಶಿಕ್ಷಕರನ್ನು ಬಿಟ್ಟರೆ ಉಳಿದವರೆಲ್ಲ ಕಾಟಾಚಾರಕ್ಕೆ ಶಾಲೆಗೆ ಬರುತ್ತಿದ್ದವರೇ. ನಮ್ಮ ಕನ್ನಡ ಪಂಡಿತರು ಕ್ಲಾಸಿಗೆ ಬಂದು ನಮಗೆ ಓದಿಕೊಳ್ಳಲು ಹೇಳಿ ತಾವು ಕಾಫಿಪುಡಿ ಲೆಕ್ಕ ಬರೆಯುತ್ತಾ ಕುಳಿತುಬಿಡುತ್ತಿದ್ದರು. ಹೆಡ್‍ಮಾಸ್ತರಂತೂ ಬಾಯಿ ತುಂಬಾ ಜರದಾ ತುಂಬಿಕೊಂಡು ಬರುತ್ತಿದ್ದರು. 'ಕೆಲವೊಂದು ದಿನ ಕುಡಿದುಕೊಂಡೇ ಬರ್ತಾರೆ' ಎಂದು ಕೆಲ ಗೆಳೆಯರು ಮೂದಲಿಸುತ್ತಿದ್ದರಾದರೂ ನನಗೆ ಆಗ ಅಷ್ಟೆಲ್ಲ ಮೂಗು ಚುರುಕಿರಲಿಲ್ಲ, ಮೇಲಾಗಿ ತಿಳಿಯುತ್ತಲೂ ಇರಲಿಲ್ಲ.
ಶಾಲೆಯಲ್ಲಿ ಹೆಣ್ಣು ಮಕ್ಕಳು ಬಲಗಡೆಯ ಬೆಂಚುಗಳಲ್ಲಿ, ಗಂಡುಮಕ್ಕಳು ಎಡಗಡೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಧ್ಯದಲ್ಲಿ ಓಡಾಡಲಿಕ್ಕೆ ದಾರಿ. ಹೆಣ್ಣು ಮಕ್ಕಳೂ ಗಂಡು ಮಕ್ಕಳೂ ಪರಸ್ಪರ ಮಾತನಾಡುವುದನ್ನು ನಿಷೇಧಿಸಲಾಗಿತ್ತು. ನಾವು ಗೆಳೆಯರು ಕಾರಿಡಾರಿನಲ್ಲಿ ಗುಂಪಾಗಿ ಮಾತನಾಡುತ್ತ ನಿಂತಿದ್ದಾಗ ಹುಡುಗಿಯರು ಬಂದರೆ 'ಹುಡುಗ್ರು ದಾರಿ ಬಿಡ್ಬೇಕು!' ಅಂತ ಹೇಳುತ್ತಿದ್ದರು. ನಾವು ಆ 'ಸಶರೀರವಾಣಿ'ಗೆ ಹೆದರಿ ತಕ್ಷಣ ಪಕ್ಕಕ್ಕೆ, ಅಂಗಳಕ್ಕೆ ಇಳಿದುಬಿಡುತ್ತಿದ್ದೆವು. ಯಾರಾದರೂ ಹುಡುಗರು ಕೀಟಲೆ ಮಾಡಿದರೆ ಹುಡುಗಿಯರು ಹೋಗಿ class teacherಗೆ complaint ಮಾಡುತ್ತಿದ್ದರು. ಹೀಗಾಗಿ ಹುಡುಗಿಯರೆಡೆಗೆ ನಮಗೆ ಒಂದು ತರಹದ ಭಯಮಿಶ್ರಿತ ದ್ವೇಷವಿತ್ತು.
ಆದರೆ ದ್ವೇಷವಿದ್ದಲ್ಲೇ ಪ್ರೀತಿ ಮೊಳೆಯುವ ಸಂಭವಗಳು ಜಾಸ್ತಿ. ನಮಗೆ ಅಷ್ಟೆಲ್ಲಾ restrictions ಇದ್ದರೂ ಹುಡುಗಿಯರೆಡೆಗೆ ಒಂದು 'ಹುಡುಗಸಹಜ'ವಾದ ಕುತೂಹಲ ಇದ್ದೇ ಇತ್ತು. ಸಿನಿಮಾ-ಗಿನಿಮಾ ನೋಡಿ ಅಷ್ಟಿಷ್ಟು ಪ್ರೀತಿ-ಪ್ರೇಮಗಳ ಬಗ್ಗೆ ಅರಿತಿದ್ದ ನಾವು, ನಮ್ಮ ನಮ್ಮ ಹೀರೋಯಿನ್ನುಗಳಿಗಾಗಿ ತಲಾಷೆ ನಡೆಸಿದ್ದೆವು. ಚಂದದ ಹುಡುಗಿಯನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನು ತಲೆಯಲ್ಲಿಟ್ಟುಕೊಳ್ಳದೇ ಮಾಸಿಕ ಟೆಸ್ಟುಗಳಲ್ಲಿ ಫೇಲಾಗುವ ಕಲೆಯನ್ನು ಅದಾಗಲೇ ಸಿದ್ಧಿಸಿಕೊಂಡಿದ್ದೆವು. 'ನನಗೆ ಆ ಹುಡುಗಿ, ನಿನಗೆ ಈ ಹುಡುಗಿ' ಎಂಬಂತೆ ನಮ್ಮನಮ್ಮಲ್ಲೇ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದ ನಾವು, ಈ ವಿಷಯ ಮಾತ್ರ ಆ ಹುಡುಗಿಯರಿಗಾಗಲೀ, ಮೇಷ್ಟ್ರುಗಳಿಗಾಗಲೀ, ಮುಖ್ಯವಾಗಿ ನಮ್ಮ ತಂದೆ-ತಾಯಿಯರಿಗಾಗಲೀ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದೆವು.
ಏಳುತ್ತಾ ಬೀಳುತ್ತಾ ಅಂತೂ ಹತ್ತನೇ ತರಗತಿಯ ಕೊನೆಯ ಹಂತಕ್ಕೆ ಬಂದಿದ್ದೆವು. ಶಾಲೆ ಬಿಟ್ಟುಹೋಗುವಾಗ ಆಟೋಗ್ರಾಫ್ ಬರೆಸಿಕೊಳ್ಳಬೇಕು ಅಂತಾಯಿತು. ಮನೆಯಲ್ಲಿ ಅಣ್ಣ-ಅಕ್ಕಂದಿರನ್ನು ಹೊಂದಿದ ಕೆಲ ಗೆಳೆಯರು ಈ ಬಗ್ಗೆ ಸ್ವಲ್ಪ ಜ್ಞಾನವುಳ್ಳವರಾಗಿದ್ದರು. ಏಕೆಂದರೆ ಅವರು ತಮ್ಮ ಅಣ್ಣ-ಅಕ್ಕಂದಿರು ಶಾಲೆ ಬಿಡುವಾಗ ಬರೆಸಿಕೊಂಡ ಆಟೋಗ್ರಾಫ್ ಪುಸ್ತಕಗಳನ್ನು ನೋಡಿದ್ದರು. ಹಾಗಾದರೆ ನಾವೂ ಬರೆಸಬೇಕು ಅಂತಾಯಿತು. ಅಲ್ಲದೇ ನಮ್ಮ ಆಟೋಗ್ರಾಫ್ ಪುಸ್ತಕದವನ್ನು ಹುಡುಗಿಯರಿಗೆ ಕೊಟ್ಟು (ಕೊಡುವಾಗ ಸಿಗಬಹುದಾದ ಅವರ ಹಸ್ತಸ್ಪರ್ಷವನ್ನು ಅನುಭವಿಸುವ ಅಭಿಲಾಷೆ ಇರುವಷ್ಟು ವಯಸ್ಸಾಗಿರಲಿಲ್ಲ ನಮಗೆ), ಅವರು ನಮಗೆ ಏನು ಬರೆದುಕೊಡುತ್ತಾರೆ ಎಂದು ನೋಡುವ ಕುತೂಹಲ ಬೇರೆ! ಸರಿ, ಬರೆಸಬೇಕು, ಅದಕ್ಕಿಂತ ಮುಂಚೆ ಆಟೋಗ್ರಾಫ್ ಪುಸ್ತಕವನ್ನು ತರಬೇಕಲ್ಲ? ಸೊರಬ ಪೇಟೆಯಿಂದ ತರುವುದು ಎಂದಾಯಿತು. ಅದಕ್ಕಾಗಿ ಸೊರಬ ಪೇಟೆಯ ಬಗ್ಗೆ ತಿಳಿದಿದ್ದ ಎರಡು ಹುಡುಗರು ಮುಂದೆಬಂದರು. ಆಟೋಗ್ರಾಫ್ ಬರೆಸುವ ಹುಕಿ ಇದ್ದವರೆಲ್ಲಾ ಅವರಿಗೆ ದುಡ್ಡು ಕೊಟ್ಟೆವು. ಒಂದು ಶನಿವಾರ ಅವರು ರಾಘವೇಂದ್ರ ಬಸ್ಸಿಗೆ ಸೊರಬಕ್ಕೆ ಹೋಗಿ ಆಟೋಗ್ರಾಫ್ ಪುಸ್ತಕಗಳನ್ನು ತಂದೇಬಿಟ್ಟರು!
ಬಣ್ಣದ ಕವರನ್ನು ಹೊದ್ದುಕೊಂಡಿದ್ದ ಈ ಪುಟ್ಟ ಆಟೋಗ್ರಾಫ್ ಪುಸ್ತಕ ನೋಡಲಿಕ್ಕೇ ಖುಷಿಯಾಗುವಂತಿತ್ತು. ಅದರೊಳಗೆ ಸ್ಕೆಚ್‍ಪೆನ್ನಿನಿಂದ ನನ್ನ ಹೆಸರು ಬರೆದೆ. 'ಸ್ನೇಹವೇ ಸಂಪದ' ಅಂತ ಮೊದಲ ಪುಟದಲ್ಲಿ ನನ್ನ artistic styleನಲ್ಲಿ ಬರೆದೆ. ನಾನು ಬರೆದಿದ್ದನ್ನು ನೋಡಿದ ನನ್ನ ಕೆಲ ಗೆಳೆಯರು ತಮಗೂ ಬರೆದುಕೊಡುವಂತೆ ಕೋರಿದರು. ಚಾಕ್ಲೇಟಿನ ಆಮಿಷ ಒಡ್ಡಿದರು. ಅವರಿಗೂ ಬರೆದುಕೊಟ್ಟೆ. ಅಂತೂ ಸುಂದರವಾಗಿದ್ದ ಪುಸ್ತಕವನ್ನು ಸಿಂಗಾರ-ಬಂಗಾರ ಮಾಡಿ ಮತ್ತಷ್ಟು ಸುಂದರಗೊಳಿಸಿ ಸುಂದರ ಹುಡುಗಿಯರ ಕಡೆಗೆ ವರ್ಗಾಯಿಸಿ 'ಎಲ್ಲರೂ ಬರ್ದುಕೊಟ್ಬಿಡಿ' ಅಂದು ಕೃಥಾರ್ತನಾದೆ!
ಹುಡುಗಿಯರು ಎಲ್ಲರೂ ಬರೆದುಕೊಡುವುದಕ್ಕೆ ಮೂರು ದಿನ ತೆಗೆದುಕೊಂಡರು. ಈ ಮಧ್ಯೆ ನಾವೂ ಅವರು ಕೊಟ್ಟ ಪುಸ್ತಕಗಳಿಗೆ ನಮ್ಮ ಆಟೋ ಬರೆಯುವದರಲ್ಲಿ ಬ್ಯುಸಿಯಾಗಿದ್ದೆವು. ಎಲ್ಲೆಲ್ಲೋ ತಡಕಾಡಿ ಹೊಂದಿಸಿದ ಸಾಲುಗಳನ್ನು, ಕೆಲವರಿಗೆ ನಮ್ಮದೇ 'own' ವ್ಯಾಕ್ಯೆಗಳನ್ನೂ, ಹಿತವಚನಗಳನ್ನೂ ಬರೆದುಕೊಟ್ಟದ್ದಾಯ್ತು. ಮೂರು ದಿನಗಳ ನಂತರ ಎಲ್ಲಾ ಹುಡುಗಿಯರೂ ಬರೆದಾದಮೇಲೆ ನನ್ನ ಆಟೋಗ್ರಾಫ್ ಬುಕ್ಕು ಕೈಗೆ ವಾಪಸು ಬಂತು. ಬಂದಮೇಲೆ ಅದನ್ನು ಅಲ್ಲಿಯೇ ಬಿಚ್ಚಿ ನೋಡಲಾದೀತೆ? ಎಲ್ಲಾ ಗೆಳೆಯರೂ ಮುತ್ತಿಕೊಂಡಿರುತ್ತಿದ್ದರು. ಅಕಸ್ಮಾತಾಗಿ ಯಾವುದಾದರೂ ಹುಡುಗಿ 'ಏನಾದ್ರೂ' ಬರೆದುಕೊಟ್ಟುಬಿಟ್ಟಿದ್ದರೆ....? ಹಾ! ಇಷ್ಟೆಲ್ಲಾ ಹುಡುಗರ ಎದುರಿಗೆ ಅದನ್ನು ಓಪನ್ನು ಮಾಡಲು ಮನಸಾಗದೆ (ಅಥವಾ ಧೈರ್ಯ ಸಾಲದೆ), ಮನೆಗೆ ಬಂದು, ಕೋಣೆ ಸೇರಿಕೊಂಡು, ಬೆಚ್ಚಗೆ ಕುಳಿತು ಬಿಚ್ಚಿ ನೋಡಿದೆ...
ಆದರೆ excite ಆಗುವಂತಹ ಯಾವ ಆಟೋಗ್ರಾಫೂ ಅದರಲ್ಲಿ ನನಗೆ ಕಾಣಲಿಲ್ಲ. 'ಪರೀಕ್ಷೆ ಎಂಬ ಯುದ್ಧದಲ್ಲಿ, ಪೆನ್ನು ಎಂಬ ಖಡ್ಗ ಹಿಡಿದು...' ಎಂಬಿತ್ಯಾದಿ ಪರೀಕ್ಷೆಯನ್ನು ನೆನಪಿಸಿ ಭಯ ಹುಟ್ಟಿಸುತ್ತಿದ್ದ ಆಟೋಗಳೂ, 'ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ನಶ್ವರವಾಗುವ ಈ ದೇಹಕ್ಕೆ ಸ್ನೇಹವೊಂದೇ ಶಾಶ್ವತ' ಎಂಬಿತ್ಯಾದಿ ಸ್ನೇಹಪರ ಸಾಲುಗಳೂ, 'ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವಾಗ ಉಳಿಯುವ ನೆನಪೇ ಸ್ನೇಹ' ಎಂಬಂತಹ ಗಜಾನನ ಬಸ್ಸಿನ ಹಿಂದಿನಿಂದ ಕದ್ದ ಸಾಲುಗಳೂ, 'Life is a game, play it!' ಎಂದು ಜೀವನವನ್ನು ಆಟಕ್ಕೆ ಹೋಲಿಸಿ ನಮ್ಮನ್ನು confuse ಮಾಡುವಂತಹ ಸಾಲುಗಳೂ ಇದ್ದವು. ಅದರಲ್ಲಿ ಸಹಸ್ರಾರು spelling mistakeಗಳೂ, ಕಾಟು-ಚಿತ್ತುಗಳೂ ಇದ್ದವು. ಎಲ್ಲಕ್ಕಿಂತ ಬೇಜಾರಾದ ಸಂಗತಿಯೆಂದರೆ ಎಲ್ಲಾ ಹುಡುಗಿಯರೂ ಮೊದಲ ಸಾಲಿನಲ್ಲಿ 'ಪ್ರಿಯ ಸಹೋದರನಾದ .....ನಿಗೆ' ಅಂತಲೋ 'My dear brother ....' ಅಂತಲೋ ಶುರುಮಾಡಿರುತ್ತಿದ್ದುದು. ನಾನು ಆಶಾಭಂಗವಾದವನಂತೆ ಸುಮ್ಮನೆ ಪುಟ ತಿರುವುತ್ತಾ ಮುನ್ನಡೆದೆ.
ಆದರೆ ಮತ್ತೆ ಮೂರ್ನಾಲ್ಕು ಪುಟಗಳನ್ನು ತಿರುವುತ್ತಿದ್ದಂತೆ ನನಗೆ ಒಂದು ಆಘಾತ ಕಾದಿತ್ತು. ಬೇರೆಲ್ಲಾ ಆಟೋಗಳಂತೆಯೇ 'My dear brother ....' ಅಂತಲೇ ಅದು ಶುರುವಾಗಿತ್ತಾದರೂ, ಅದರ ಮುಂದಿನ ಸಾಲುಗಳು ನನ್ನನ್ನು ತಬ್ಬಿಬ್ಬು ಮಾಡುವಂತಿದ್ದವು. ಅದನ್ನು ಯಥಾವತ್ತಾಗಿ, ಅದರ spelling mistakeಗಳ ಜೊತೆಗೆ, ಇಲ್ಲಿ ಕೊಡುತ್ತಿದ್ದೇನೆ:
"You are in mine heart like photograph
Then wat yuo to write in my autougraph
Your loving,
........."
ಮುಗಿಯಿತಲ್ಲಪ್ಪಾ? ನಮಗೋ, ಆಗ ಈ ಇಂಗ್ಲೀಷ್ ಭಾಷೆಯೆಂದರೆ ಭಯವಾಗುತ್ತಿದ್ದಂತಹ ಕಾಲ. ನಾವು ಅದನ್ನು ಪರಕೀಯ ಭಾಷೆಯೆಂದು ಪರಿಗಣಿಸಿ ಹೊರಗಿಟ್ಟಿದ್ದ ಕಾಲ. ಇಂಗ್ಲೀಷ್ ಟೀಚರ್ರು ಸಹ ನಮಗೆ ಪ್ರಿಯರಾಗಿರಲಿಲ್ಲ. ಇಂಗ್ಲೀಷ್ ಟೀಚರ್ರು ನಮಗೆ ಪಾಠ ಕಲಿಸಲು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ; ನಮಗೇ ಅವರ ಮೇಲೆ ಕರುಣೆ ಉಕ್ಕುವಷ್ಟು. ಹುಡುಗಿಯರೂ ಏನು ಇಂಗ್ಲೀಷಿನಲ್ಲಿ ಚುರುಕಾಗಿರಲಿಲ್ಲ. ಈ ಆಟೋಗ್ರಾಫ್ ಬರೆದುಕೊಟ್ಟ ಹುಡುಗಿಯೂ ಅದಕ್ಕೆ ಹೊರತಾಗಿರಲಿಲ್ಲ. ಅದು ಅವಳು ಸ್ವತಃ ರಚಿಸಿದ ಆಟೋಗ್ರಾಫ್ ಆಗಿರಲಿಕ್ಕಂತೂ ಶಕ್ಯವೇ ಇರಲಿಲ್ಲ. ಬಹುಶಃ ತನ್ನ ಅಕ್ಕನ ಆಟೋಗ್ರಾಫ್ ಪುಸ್ತಕದಿಂದ ಕದ್ದ ವಾಕ್ಯವಿರಬೇಕು. ಏನೇ ಆಗಿರಲಿ. ನಾನು ಅದನ್ನು ಹೀಗೆ ಅರ್ಥ ಮಾಡಿಕೊಂಡೆ:
"ನೀನು ನನ್ನ ಹೃದಯದಲ್ಲಿ ಒಂದು ಚಿತ್ರದಂತೆ ಇದ್ದೀಯ;
ಇನ್ನು ನೀನು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ ಏನು ಬರೆಯುತ್ತೀಯ ಎಂದು ಕಾಯುತ್ತಿರುತ್ತೇನೆ" !!!
ಅಬ್ಬ! ಅರ್ಥವಾದದ್ದೇ ನಾನು ಬೆವೆಯತೊಡಗಿದೆ...! ಮತ್ತೆ ಮತ್ತೆ ಓದಿಕೊಂಡೆ.. ಕೊನೆಯಲ್ಲಿ 'Your loving' ಅಂತ ಬೇರೆ! ಸೆಖೆ ಜಾಸ್ತಿಯಾಯಿತು. ಮನೆಯಲ್ಲಿ ಫ್ಯಾನ್ ಬೇರೆ ಇರಲಿಲ್ಲ.. ಆಟೋಗ್ರಾಫ್ ಪುಸ್ತಕವನ್ನು ರಪ್ಪನೆ ಮುಚ್ಚಿಟ್ಟು ಮನೆಯಿಂದ ಹೊರಬಿದ್ದೆ.. ತಂಗಾಳಿ ಸೋಕಿ ಮೈಪುಳಕವಾಯಿತು.. ದೂರದ ಸ್ಟ್ರೀಟ್‍ಲೈಟ್‍ನ ಬೆಳಕು ನನ್ನ ಮೈಮೇಲೆ ಬೀಳುತ್ತಿತ್ತು.. ಆ ಬೆಳಕಿನಲ್ಲಿ ಅಂತೂ ಒಂದು ಹುಡುಗಿಯನ್ನು 'ಬೀಳಿಸಿಕೊಂಡ' ನನ್ನ ಬಾಡಿಯನ್ನೇ ನೋಡಿಕೊಂಡೆ.. ನನಗೂ ಒಬ್ಬ ಹುಡುಗಿ.. ನನಗೂ ಒಬ್ಬ ಹೀರೋಯಿನ್..! ಇನ್ನು ನಾನೂ-ಅವಳೂ ಹಾಡು ಹೇಳುತ್ತಾ ಮರ ಸುತ್ತುತ್ತಾ.... ಅಷ್ಟರಲ್ಲಿ... ಅಮ್ಮ ಮನೆಯ ಒಳಗಿಂದ ಕೂಗಿದಳು: 'ಓದ್‍ಕ್ಯಾ ಅಂದ್ರೆ ಅದೇನು ಅಂಗಳದಲ್ಲಿ ಸುತ್‍ತಾ ಇದೀಯ? ಒಳಗೆ ಬಂದು ಓದ್‍ಕ್ಯಾ..!' ಆಹ್! ನಾನು ದುಃಸ್ವಪ್ನ ಕಂಡವನಂತೆ ಕಲ್ಪನಾಲೋಕದಿಂದ ಹೊರಬಂದೆ. ಮನೆಯ ಒಳಬಂದೆ. ನನ್ನನ್ನೇ ಮನಸಿನಲ್ಲಿಟ್ಟುಕೊಂಡು ಕರಗುತ್ತಿರುವ, ಕೊರಗುತ್ತಿರುವ ಆ ಹುಡುಗಿಯ ಬಗ್ಗೆ ಪ್ರೀತಿಯುಂಟಾಯಿತು.. ಆದರೆ ಫಕ್ಕನೆ ಭಯವಾಯಿತು.. ಏನಾದ್ರೂ ಈ ವಿಷಯ ಮನೆಯವರಿಗೆ ಗೊತ್ತಾದ್ರೆ? ಹೋಗಲಿ, ಅವಳ ಮನೆಯಲ್ಲಿ ಈ ಬಗ್ಗೆ ಗೊತ್ತಿದೆಯಾ? ಗೊತ್ತಾದರೆ, ಅವಳ ಅಣ್ಣ ನನ್ನನ್ನು ಹೊಡೆಯಲಿಕ್ಕೆ ಅಂತ ಬಂದ್ರೆ? ...ನಾನು ಫೈಟ್ ಮಾಡಿ.. ಅವನನ್ನು ಮಾರಣಾಂತಿಕ ಗಾಯಗಳಿಗೆ ತುತ್ತುಮಾಡಿ... ಪೋಲೀಸರು ಬಂದು ನನಗೆ ಕೋಳ ಹಾಕಿ... ಸಿನಿಮಾಗಳಲ್ಲಿ ಆಗುವಂತೆ ನಿಜಜೀವನದಲ್ಲೂ ಆಗುತ್ತದೆ ಅಂದುಕೊಂಡೆ.. ಈ ರಗಳೆಗಳೆಲ್ಲ ಬೇಡವೇ ಬೇಡ, ಪ್ರೀತಿ-ಪ್ರೇಮಗಳಿಗೆಲ್ಲ ಗೋಲಿ ಹೊಡೀಲಿ. ಅವಳಾಗೇ ಬಂದು propose ಮಾಡಿದರೂ 'ಇಲ್ಲ' ಅಂದು ತಿರಸ್ಕರಿಸಬೇಕು ಅಂದುಕೊಂಡೆ!
ಇಷ್ಟಕ್ಕೂ ಆ ಹುಡುಗಿ ನಮ್ಮ ಊರಿನ ಪಕ್ಕದ ಊರಿನವಳು. ಶ್ರೀಮಂತರ ಮನೆಯ ಹುಡುಗಿ. ಒಂಥರಾ ಕೀರಲು ದನಿ ಅವಳದು. ಅದಕ್ಕಾಗಿಯೇ ಅವಳನ್ನು ನಾವು 'ಕೀರ್ವಾಣಿ' ಅಂತ ಕರೆಯುತ್ತಿದ್ದೆವು! ಅವಳಾಗಿಯೇ ಆ ಆಟೋಗ್ರಾಫನ್ನು ಉದ್ದೇಶಪೂರ್ವಕವಾಗಿ ಬರೆದಿರಲಿಕ್ಕಂತೂ ಸಾಧ್ಯವಿರಲಿಲ್ಲ. ಆದರೆ ನನ್ನ ಹುಚ್ಚು ಮನಸ್ಸು ಕೇಳಬೇಕಲ್ಲ? ಅಲ್ಲದೇ ಅವಳು ತನ್ನ ಆಟೋಗ್ರಾಫ್ ಬುಕ್ಕಿನಲ್ಲಿ ನಾನು ಏನು ಬರೆಯುತ್ತೀನಿ ಅಂತ ಕಾಯುತ್ತಾ ಇರುತ್ತಾಳೆ... ಅಥವಾ ಇವೆಲ್ಲಾ ಕೇವಲ ನನ್ನ ಹುಚ್ಚು ಭ್ರಮೆಯೇ? ಗೊಂದಲದಲ್ಲಿದ್ದೆ.
ಅಷ್ಟರಲ್ಲಿ ಮತ್ತೊಂದು ಘಟನೆಯಾಯಿತು! ನಮ್ಮೂರಿನಲ್ಲಿ ಒಬ್ಬರ ಮನೆಗೆ ಗುರುಗಳು (ಸ್ವಾಮೀಜಿ) ಬಂದಿದ್ದರು. ಅವರ ಮನೆಯಲ್ಲಿ ಸ್ವಾಮಿಗಳ 'ಭಿಕ್ಷಾ' ಇತ್ತು. ನಾನು ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ. ಅಲ್ಲಿಗೆ ಕೀರ್ವಾಣಿಯ ಪಕ್ಕದ ಮನೆಯ ಒಬ್ಬ ಹುಡುಗ ಕೂಡ ಬಂದಿದ್ದ. ಸುಮಾರು ಐದನೇ ಕ್ಲಾಸು ಓದುತ್ತಿರಬಹುದಾದ ತುಂಬಾ ಕೀಟಲೆ ಹುಡುಗ ಅವನು. ಊಟಕ್ಕೆ ಪಂಕ್ತಿಯಲ್ಲಿ ನಾನೂ-ಅವನು ಒಟ್ಟಿಗೇ ಕುಳಿತುಕೊಳ್ಳುವಂತಾಯಿತು. ಊಟ ಮಾಡುತ್ತಿರುವಾಗ ನನ್ನ ಗೊಂದಲಗಳು ಹೆಚ್ಚಾಗುವಂತಹ ಒಂದು ಮಾತನ್ನು ಆ ಹುಡುಗ ಆಡಿದ. "ನಮ್ಮನೆ ಪಕ್ಕದ್ಮನೆ ಅಕ್ಕ ಇದಾಳಲ್ಲ, ಅವ್ಳು ನಿಂದು ಒಂದು ಫೋಟೋ ಕಟ್ ಮಾಡಿ ಇಟ್ಕೊಂಡ್ ಬಿಟ್ಟಿದಾಳೆ ಮಾರಾಯ.. ನಾವು ಎಷ್ಟು ಕೊಡು ಅಂದ್ರೂ ಕೊಡೋದಿಲ್ಲ.." ಅಂದುಬಿಟ್ಟ! ಅಲ್ಲಿಗೆ ಮುಗಿಯಿತಲ್ಲ? ಊಟ ಮಾಡುತ್ತಿದ್ದವನು ದಂಗಾಗಿಬಿಟ್ಟೆ. ಒಂದು ಕ್ಷಣ ಸುಮ್ಮನೆ ಕುಳಿತುಬಿಟ್ಟೆ. ಅಷ್ಟಂದು ಅವನೇನೋ ಸುಗ್ರಾಸ ಭೋಜನ ಮುಂದುವರಿಸಿದ. ಆದರೆ ನನಗೆ ಗಂಟಲಲ್ಲಿ ಅನ್ನ ಹಿಡಿಯಲಿಕ್ಕೆ ಶುರುವಾಯಿತು. ಪಲ್ಯ ಬಡಿಸುತ್ತಿದ್ದ ರಾಘವೇಂದ್ರಣ್ಣ 'ಪಲ್ಯ ಪಲ್ಯ ಪಲ್ಯ' ಎಂದು ನನ್ನ ಎದುರು ಮೂರು ಮೂರು ಸಲ ಕೇಳಿದರೂ ನಾನು ಸುಮ್ಮನಿದ್ದುದ್ದು ನೋಡಿ ಎರಡು ಸೌಟು ಸರಿಯಾಗಿ ಪಾಯಸದ ಮೇಲೆ ಹಾಕಿ ಹೋಗಿಬಿಟ್ಟ!
ಇಷ್ಟೆಲ್ಲಾ ಗೊಂದಲಗಳು ನನ್ನ ತಲೆಯಲ್ಲಿ ಆಗುತ್ತಿದ್ದರೂ ಆ ಹುಡುಗಿ ಮಾತ್ರ ಮಾಮೂಲಿನಂತೆಯೇ ಇದ್ದಳು. ಹಾಗೇ ತಲೆ ತಗ್ಗಿಸಿಕೊಂಡು ಶಾಲೆಗೆ ಬರುತ್ತಿದ್ದಳು. ತನ್ನ ಗೆಳತಿಯರೊಡನೆ ಕೀರಲು ದನಿಯಲ್ಲಿ ಮಾತನಾಡುತ್ತಿರುತ್ತಿದ್ದಳು. ಒಟ್ಟಿನಲ್ಲಿ ನನಗಂತೂ ತಲೆ ಕೆಟ್ಟು ಹೋಯಿತು. ನನ್ನ ಬಳಿ ಮಾತನಾಡಿ 'ಮುಂದುವರಿಸ'ಬಹುದು ಅಂದುಕೊಂಡೆ. ಆದರೆ ಆಕೆ ನನ್ನ ಕಡೆ at least ಓರೆ ನೋಟವನ್ನೂ ಬೀರಲಿಲ್ಲ. ನನಗೆ ಆಗುತ್ತಿದ್ದುದ್ದು ಹತಾಶೆಯೋ, ನಿರಾಶೆಯೋ, ಭ್ರಮನಿರಸನವೋ ತಿಳಿಯದಾದೆ.
ಅಂತೂ ಮೂರ್ನಾಲ್ಕು ವಾರಗಳ ನಂತರ ಅವಳು ತನ್ನ ಆಟೋಗ್ರಾಫ್ ಪುಸ್ತಕವನ್ನು ನನಗೆ ಬರೆಯಲು ಕೊಟ್ಟಳು. ನಾನೂ ಇದಕ್ಕೇ ಕಾಯುತ್ತಿದ್ದವನಂತೆ, ಹಿಂದೆ ಮುಂದೆ ಯೋಚಿಸದೆ 'What is the real meaning of your autograph?' ಅಂತ ಒಂದೇ ಲೈನು ಬರೆದುಕೊಟ್ಟೆ. ಆದರೆ ಅದಕ್ಕೂ ಅವಳಿಂದ reply ಬರಲಿಲ್ಲ. ಬಹುಶಃ ಅವಳಿಗೆ ಅದು ಅರ್ಥವೇ ಆಗಲಿಲ್ಲವೇನೋ!
ನೋಡುನೋಡುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಹತ್ತಿರಾದವು. ನಾವು ಬರೆದದ್ದೂ ಆಯಿತು. ರಿಸಲ್ಟು ಬಂದದ್ದೂ ಆಯಿತು. ಆಕೆ ಫೇಲ್ ಆಗಿದ್ದಳು; ನಾನು ಆ ಗಂಢಾಂತರದಿಂದ ಕೆಲವೇ ಮಾರ್ಕುಗಳ ಅಂತರದಿಂದ ಪಾರಾಗಿದ್ದೆ. ಹಾಗೆ ನಮ್ಮ ಹೈಸ್ಕೂಲು ಜೀವನ ಮುಗಿದುಹೋಯಿತು.
ಕೊನೆಗೆ ನಾನೆಲ್ಲೋ ಅವಳೆಲ್ಲೋ ಆದೆವು. ನಮ್ಮ ಪಕ್ಕದ ಊರಿನಲ್ಲೇ ಇರುತ್ತಿದ್ದಳಾದರೂ ಒಬ್ಬರಿಗೊಬ್ಬರು ಭೇಟಿ ಆಗುವಂತಹ ಸನ್ನಿವೇಶಗಳು ಕೂಡಿಬರಲಿಲ್ಲ. ಒಂದೆರಡು ಬಾರಿ ಕಂಡಿದ್ದಳಾದರೂ ಸುಮ್ನೆ 'ಅರಾಮಿದೀಯ?' 'ಏನ್ಮಾಡ್ತಿದೀಯ ಈಗ?' ಇತ್ಯಾದಿ ಪ್ರಶ್ನೋತ್ತರಗಳಲ್ಲಿ ಮಾತುಕತೆ ಮುಗಿದು ಹೋಗುತ್ತಿತ್ತು. 'ಇಷ್ಟಕ್ಕೂ ನೀನು ನನ್ನನ್ನು ಪ್ರೀತಿಸಿದ್ದು ಹೌದಾ?' ಅಂತ ಕೇಳಬೇಕೆಂದುಕೊಳ್ಳುತ್ತಿದ್ದೆ. ಆದರೆ ಧೈರ್ಯ ಸಾಲುತ್ತಿರಲಿಲ್ಲ. ಅಥವಾ ಮುಜುಗರವಾಗುತ್ತಿತ್ತು.
ಈಗ ನೋಡಿದರೆ ಕೀರ್ವಾಣಿಯ ಮದುವೆಯ ಸುದ್ದಿ ಬಂದಿದೆ. ಎಲ್ಲಾ ನೆನಪಾಗುತ್ತಿದೆ... ಇಷ್ಟಕ್ಕೂ ಕೀರ್ವಾಣಿಗೆ ನನ್ನ ಮೇಲೆ ಒಲವಿತ್ತಾ? ಆ ಪ್ರಶ್ನೆ ಮಾತ್ರ ನನ್ನಲ್ಲೇ ಉಳಿದುಹೋಗಿದೆ: ಸವಿನೆನಪುಗಳನ್ನು ಕೆದಕಲು ಗುದ್ದಲಿಯಾಗಿ.
Wednesday, November 29, 2006
Monday, November 27, 2006
ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ
'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ, ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ. ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?" ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ: "ಶ್...! ನಾನು ಹ್ಯಾಂಗ ಸುಮ್ಮನಿದ್ದೀನಿ, ಹಾಗೆ ಸ್ವಲ್ಪ ಸುಮ್ಮನಿರು." ಸುಮ್ಮನಿದ್ದಾಗ ಕಾಣುವಂಥಾದ್ದು- ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆ ದೀಪಶಿಖೆ!
-ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಈ ಗದ್ಯಸಾಲುಗಳನ್ನು ಓದಿ ಹೇಳಿದವರು ಜಯಂತ ಕಾಯ್ಕಿಣಿ- ಭಾನುವಾರ, ೨೬.೧೧.೨೦೦೬ ರಂದು 'ಯವನಿಕಾ'ದಲ್ಲಿ ನಡೆದ ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮ 'ನಾದಲೀಲೆ'ಯಲ್ಲಿ. ಹಿಂದೊಮ್ಮೆ ಅವರು ಇದೇ ಸಾಲುಗಳನ್ನು ತಮ್ಮ 'ಭಾವನಾ' ಮಾಸಿಕದ ಸಂಪಾದಕೀಯದಲ್ಲಿ ಬರೆದಿದ್ದರು.
'ದೇಶಕಾಲ' (ವಿವೇಕ ಶಾನಭಾಗ್ ಸಂಪಾದಕತ್ವದ ಸಾಹಿತ್ಯಿಕ ತ್ರೈಮಾಸಿಕ) ಮತ್ತು 'ಅಷ್ಟದಿಕ್ಕು' (ಅಶೋಕ ಹೆಗಡೆ, ಗೋಪಲಕೃಷ್ಣ ಪೈ ಮತ್ತು ಎಸ್. ದಿವಾಕರ್ ನೇತೃತ್ವದ ಪ್ರಕಾಶನ) -ಸಂಯೋಜಿಸಿದ್ದ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂತು. ಪಂಡಿತ್ ಪರಮೇಶ್ವರ ಹೆಗಡೆ, ಯು.ಆರ್. ಅನಂತಮೂರ್ತಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಸಿ.ಆರ್. ಸಿಂಹ, ಸಿದ್ದಲಿಂಗಯ್ಯ, ಬಿ. ಜಯಶ್ರೀ, ಕಿ.ರಂ. ನಾಗರಾಜ, ರವಿ ಬೆಳಗೆರೆ, ಪ್ರತಿಭಾ ನಂದಕುಮಾರ್, ಪವಿತ್ರಾ ಲೋಕೇಶ್, ಕೆ.ಎಚ್. ಶ್ರೀನಿವಾಸ, ರಘುನಂದನ, ಎಚ್.ಜಿ. ಸೋಮಶೇಖರ್ ರಾವ್, ಶ್ರೀನಿವಾಸ್ ಜಿ. ಕಪ್ಪಣ್ಣ, ವಿಶ್ವೇಶ್ವರ ಭಟ್, ವಿಜಯ ಭಾರದ್ವಾಜ್, ಚಿರಂಜೀವಿ ಸಿಂಗ್, ಟಿ.ಎನ್. ಸೀತಾರಾಂ, ರೇಖಾ ಹೆಬ್ಬಾರ್, ಎಸ್.ಜಿ. ವಾಸುದೇವ್, ಶ್ರೀಕಾಂತ -ಹೀಗೆ ವಿವಿಧ ಕ್ಷೇತ್ರಗಳ ಇಪ್ಪತ್ತಕ್ಕೂ ಹೆಚ್ಚು ಗಣ್ಯರಿಂದ ಬೇಂದ್ರೆ ಕಾವ್ಯಗಳ ವಾಚನವಾಯಿತು. ಬೇಂದ್ರೆಯವರ ದ್ವನಿಯಲ್ಲಿನ ಅವರ ಕವನ ವಾಚನಗಳ ಅಪರೂಪದ ಧ್ವನಿಮುದ್ರಣವನ್ನು ಮಧ್ಯೆ ಮಧ್ಯೆ ಕೇಳಿಸಿದರು. ಬೇಂದ್ರೆಯವರ ಅಪರೂಪದ ಛಾಯಾಚಿತ್ರ, ರೇಖಾಚಿತ್ರಗಳ ಪ್ರದರ್ಶನವಿತ್ತು. ಕೊನೆಯಲ್ಲಿ ಗಿರೀಶ್ ಕಾರ್ನಾಡ್ ಬೇಂದ್ರೆಯವರ ಕುರಿತು ಚಿತ್ರಿಸಿದ ಸಾಕ್ಷ್ಯಚಿತ್ರವೊಂದರ ಪ್ರದರ್ಶನವೂ ಇತ್ತು.
ಭಾನುವಾರ ಬೆಳಗ್ಗೆ ೯.೩೦ಕ್ಕೆ 'ಯವನಿಕಾ' ಪ್ರೇಕ್ಷಕರಿಂದ ತುಂಬಿಹೋಗಿತ್ತು. ಬಹುಶಃ ಅಷ್ಟೊಂದು ಜನ ಸೇರುತ್ತಾರೆ ಎನ್ನುವ ಕಲ್ಪನೆ ಸಂಘಟಕರಿಗೆ ಇರಲಿಲ್ಲವೇನೋ? ಬಂದಿದ್ದ ಅನೇಕ ಸಾಹಿತಿಗಳಿಗೇ ಕುಳಿತುಕೊಳ್ಳಲಿಕ್ಕೆ ಜಾಗ ಸಿಗಲಿಲ್ಲ. ಬಂದವರೆಲ್ಲರಿಗೂ ಬೆಳಗ್ಗೆ ತಿಂಡಿ-ಕಾಫಿ ಕೊಟ್ಟು, ಕಾವ್ಯ ಕೇಳಿಸಿ, ವಾಪಸು ಹೋಗುವಾಗ ಊಟವನ್ನೂ ಕೊಟ್ಟು ಕಳುಹಿಸಿದರು. 'ಹೀಗೆಲ್ಲ ಮಾಡುತ್ತಿದ್ದೀವಿ ಬನ್ನಿ' ಅಂತ ಕರೆದು ಇನ್ನೂ ಸ್ವಲ್ಪ ಪ್ರಚಾರವನ್ನೂ ಕೊಟ್ಟಿದ್ದರೆ ಬಹುಶಃ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಜನ ತುಂಬಿಕೊಳ್ಳುತ್ತಿದ್ದರೇನೋ? ಕನ್ನಡದ ಕಾವ್ಯಾಸಕ್ತರಿಗೇನು ಕೊರತೆಯೇ?
***
ವಾಪಸು ಬರುವಾಗ ನನಗೆ ಹಾಗೇ ಅನ್ನಿಸಿತು. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ನಮ್ಮಂತಹ ಈಗಿನ ಕಾಲದವರಿಗೆ ಬೇಂದ್ರೆ ಕಾವ್ಯದ ಪರಿಚಯ ಅಷ್ಟಾಗಿ ಇಲ್ಲ. ಏಕೆಂದರೆ ಬೇಂದ್ರೆಯವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಉದಾಹರಣೆಗೆ, ಅವರ 'ನಾಕುತಂತಿ' ಸಂಕಲನದ 'ನಾಕುತಂತಿ' ಕವನದಲ್ಲಿ ಈ ಸ್ಟಾಂಜ಼ಾ ಬರುತ್ತದೆ: 'ನಾನು ನೀನು ಆನು ತಾನು ನಾಕೇ ನಾಕು ತಂತಿ' -ಈ ಸಾಲುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಗಣಿತ (ಸಂಖ್ಯಾಶಾಸ್ತ್ರ)ದ ಮೇಲೆ ಹಿಡಿತವಿರಬೇಕು ಮತ್ತು ಸಂಗೀತ ತಿಳಿದಿರಬೇಕು. ಅದಿಲ್ಲದಿದ್ದರೆ ಅರ್ಥವಾಗುವುದೇ ಇಲ್ಲ. ಸಂಗೀತ ಕಲಿತು, ಗಣಿತದಲ್ಲಿ ಪಾಂಡಿತ್ಯ ಗಳಿಸಿ, ಆಮೇಲೆ ಈ ಕವಿತೆ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ನಮಗಿಲ್ಲ. ಅಷ್ಟೊಂದು ಕಷ್ಟವಲ್ಲದ ಕವಿತೆಗಳನ್ನೂ ಬೇಂದ್ರೆ ಬರೆದಿದ್ದಾರೆ. ಅವುಗಳಲ್ಲಿ ಅನೇಕ ಕವಿತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಆದರೆ ಭಾವಗೀತೆಗಳಾಗದ ಅನೇಕ ಅದ್ಭುತ ಕವನಗಳು ಇವೆಯಲ್ಲ, ಅವನ್ನು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಬಲ್ಲವರಿಂದ ಓದಿಸಿ, ಅದರ ಅರ್ಥ - ಬರೆದ ಸಂದರ್ಭಗಳನ್ನು ಹೇಳಿಸಿದರೆ ನಮ್ಮಂತಹ ಯುವ ಪೀಳಿಗೆಗೆ ಅನುಕೂಲವಾಗುತ್ತದೆ. ಕನ್ನಡ ಕಾವ್ಯಪ್ರೇಮಿಗಳ ಸಂಖ್ಯೆಯೂ ಹೆಚ್ಚುತ್ತದೆ.
ಇತ್ತೀಚೆಗೊಂದು ದಿನ ನನ್ನ ನೆಂಟರ ಮನೆಗೆ ಹೋಗಿದ್ದಾಗ ಕನ್ನಡ ಟೀವಿ ಚಾನೆಲ್ಲೊಂದರಲ್ಲಿ ಕಾರ್ಯಕ್ರಮ ಬರುತ್ತಿತ್ತು. ಟೀವಿ ಸಂದರ್ಶಕಿ ಮೈಕು ಹಿಡಿದುಕೊಂಡು ಸಾರ್ವಜನಿಕರನ್ನು ಮಾತಾಡಿಸಿ, ಒಂದೆರಡು ಪ್ರಶ್ನೆ ಕೇಳಿ, ಸರಿಯುತ್ತರ ಕೊಟ್ಟವರಿಗೆ ಸೋಪಿನ ಬಾಕ್ಸನ್ನೋ, ಊದುಬತ್ತಿ ಬಂಡಲನ್ನೋ ಕೊಡುವ ಕಾರ್ಯಕ್ರಮ ಅದು. ಅಂದು ಆ ಸಂದರ್ಶಕಿ ಬೇಂದ್ರೆಯವರ ರೇಖಾಚಿತ್ರವೊಂದನ್ನು ಜನರಿಗೆ ತೋರಿಸಿ 'ಇವರು ಯಾರು ಗುರುತಿಸಿ?' ಅಂತ ಕೇಳುತ್ತಿದ್ದಳು. ಯಾರೂ ಸರಿಯುತ್ತರ ಕೊಡಲಿಲ್ಲ. ಅನೇಕರು 'ಗೊತ್ತಿಲ್ಲ' ಅಂದರು. ಸುಮಾರು ಹದಿನೈದಿಪ್ಪತ್ತು ಜನರನ್ನು ಸಂದರ್ಶಿಸಿದರೂ ಸರಿಯುತ್ತರ ಸಿಗದಿದ್ದುದು ನೋಡಿ ನನಗೆ ಆಶ್ಚರ್ಯವಾಯಿತು. ಕೊನೆಗೆ ಸಂದರ್ಶಕಿಯೇ 'ಅದು ದ.ರಾ. ಬೇಂದ್ರೆ' ಎಂದು ಉತ್ತರವನ್ನು ಹೇಳಿದಳು. ನನಗೆ ಮತ್ತೂ ಆಶ್ಚರ್ಯವಾದದ್ದೆಂದರೆ, ಅವಳು ಉತ್ತರ ಹೇಳುತ್ತಿದ್ದಂತೆಯೇ ನನ್ನ ಜೊತೆ ಟೀವಿ ನೋಡುತ್ತಿದ್ದವರೂ 'ಓ, ಬೇಂದ್ರೆನಾ?' ಅಂದಿದ್ದು! 'ನಿಮಗ್ಯಾರಿಗೂ ಗೊತ್ತೇ ಇರಲಿಲ್ವಾ?' ಅಂದೆ. 'ಇಲ್ಲ!' ಅಂದರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಎಲ್ಲ ಕನ್ನಡ ಭಾಷಾ ಪಠ್ಯದಲ್ಲೂ 'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು' ಎಂಬ ಪಟ್ಟಿಯಲ್ಲಿ ಬೇಂದ್ರೆಯವರ ಇದೇ ರೇಖಾಚಿತ್ರ್ರ ಇದೆ. (ನಾನು ಓದಬೇಕಾದರಂತೂ ಇತ್ತು; ಈಗ ಇದೆಯೋ ಇಲ್ಲವೋ ಗೊತ್ತಿಲ್ಲ). ಅಂಥಾದ್ದರಲ್ಲಿ ಗುರುತಿಸಲಾಗಲಿಲ್ಲ ಎಂದರೆ ಏನನ್ನೋಣ?
'ನಾದಲೀಲೆ'ಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದು, ಅವು ಟೀವಿ-ರೇಡಿಯೋಗಳಲ್ಲಿ ಪ್ರಸಾರವಾಗುವಂತಾದರೆ ಚೆನ್ನಾಗಿರುತ್ತಿತ್ತಲ್ಲವೇ?

Monday, November 20, 2006
ಸಾವನದುರ್ಗದ ಬೆಟ್ಟದ ಮೇಲೊಂದು ನಂದಿ.. (A trip to Savandurga)
ಆ ನಂದಿ ಸುಮ್ಮನಿತ್ತು.
ಕಲ್ಗಾರ್ ಗಿರಿಯ ಕಿರುಚಾಟ - ಫೋಟೋ ಹುಚ್ಚು, ಸಂದೀಪನ ಶೇರು ಹಗರಣ, ಬಪ್ಪನ ಐರಿಷ್ ಸಂಭಾಷಣೆ.... ಎಲ್ಲವನ್ನೂ ಕೇಳಿಕೊಂಡೂ ಸುಮ್ಮನೇ ಇತ್ತು. ಬೆಳಗ್ಗೆ ಯಾರೋ ಪೂಜೆ ಮಾಡಿಹೋದ ಕುರುಹಾಗಿ ಅದರ ಕೊರಳಲ್ಲಿ ಇನ್ನೂ ಬಾಡದ ಹೂವಿನ ಹಾರ, ಹಣೆಯಲ್ಲಿ ಕುಂಕುಮ ಇದ್ದವು. ಗೆಳೆಯರು ಹೇಳಿದ ಪೋಲಿ ಜೋಕುಗಳಿಗೊಂದಕ್ಕೂ ಅದು ನಗಲಿಲ್ಲ. ಬಹುಶಃ ಆ ಜೋಕುಗಳನ್ನೆಲ್ಲಾ ಅದು ಮೊದಲೇ ಕೇಳಿತ್ತೇನೋ? ಇವೆಲ್ಲಾ 'ಓಲ್ಡ್ ಜೋಕ್ಸ್' ಆಗಿದ್ದವೇನೋ ಅದಕ್ಕೆ... ನಾವು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ತಾನು ಒಂದೂ ಮಾತಾಡದೆ ಸುಮ್ಮನೆ ಕುಳಿತಿತ್ತು.. ಬೀಸುಗಾಳಿಗೆ ಮೈಯೊಡ್ಡಿ..
***
ಈಗ ಮೂರು ದಿನಗಳ ಹಿಂದೆ ಸಂದೀಪ ಫೋನ್ ಮಾಡಿ 'ಈ ಭಾನುವಾರ ಏನೂ ಪ್ರೋಗ್ರಾಮ್ ಫಿಕ್ಸ್ ಮಾಡ್ಕೋಬೇಡ. ಸಾವನದುರ್ಗಕ್ಕೆ ಹೋಗೋಣ. ಹಿಂದೆ ಶಿವನಸಮುದ್ರಕ್ಕೆ ಹೋದದ್ದೇ ಟೀಮು; ಪ್ಲಸ್ ಇನ್ನೊಂದಷ್ಟು ಜನ' ಅಂತ ಹೇಳಿದಾಗ, ನಾನು ಮರುಯೋಚನೆ ಮಾಡದೆ 'ಓಕೆ' ಅಂದುಬಿಟ್ಟೆ. ನಂತರ googleನಲ್ಲಿ ಸಾವನದುರ್ಗದ ಬಗ್ಗೆ search ಮಾಡಿದಾಗ ಅದೊಂದು ಏಕಶಿಲೆಯ ಪರ್ವತ, ಅಲ್ಲಿ ಸಾಮಂತರಾಯನ ಕೋಟೆಯ ಅಳಿದುಳಿದ ಅವಶೇಷಗಳು ಇವೆ ಅಂತಲೂ, ಅದು ಕೆಂಪೇಗೌಡನ ಉಪ-ರಾಜಧಾನಿಯಾಗಿತ್ತು ಅಂತಲೂ, ಆ ಬೆಟ್ಟ ಕಾಡಿನಿಂದ ಆವರಿಸಲ್ಪಟ್ಟಿದೆ, ಕಾಡಿನಲ್ಲಿ ಕ್ರೂರ ಮೃಗಗಳು ಇವೆ ಅಂತಲೂ ಮಾಹಿತಿಗಳು ದೊರೆತವು.
ಭಾನುವಾರ ಬೆಳಗ್ಗೆ ಆರೂ ಮುಕ್ಕಾಲಿಗೆಲ್ಲಾ ರೆಡಿಯಾಗಿ ಸಂದೀಪನಿಗಾಗಿ ಕಾಯುತ್ತಿದ್ದಾಗ ಚಾರಣಿಗ ಶ್ರೀನಿಧಿಯಿಂದ ಮೆಸೇಜು ಬಂತು: "ಬೆಳಗಿನೆಳೆ ಕಿರಣಗಳ ಜೊತೆ ಸಾಗೋದು ಅಂದರೆ, ಏನೋ ಸಂತಸ.. ಬದುಕು ಸುಂದರವಾಗಿದೆ..!" ನಾನು reply ಒತ್ತಿ: "ನೇಸರನು ಮೀಸೆ ತಿರುವುತ ನುಸುಳುತ್ತಿರಲು, ಸಾವನದುರ್ಗದ ಹೆಸರರಿಯದ ದೇವರು ಕರೆಯುತ್ತಿರಲು, ನಸುಕಿಗೇ ಹೊಸ ಬಣ್ಣ ಬಂದಿರಲು.." ಅಂತ type ಮಾಡಿದೆ; ಅಷ್ಟರಲ್ಲಿ ಸಂದೀಪ ಬಂದ. ಅರ್ಧ ಟೈಪಿಸಿದ್ದ ಮೆಸೇಜನ್ನು ಹಾಗೆಯೇ ಚಾರಣಿಗನಿಗೆ ಕಳಿಸಿ ಮನೆಯ ಮೆಟ್ಟಿಲಿಳಿಯತೊಡಗಿದೆ.
ಗಿರಿಯ ಮನೆಯಿಂದ ನಮ್ಮ ಪಯಣ 'ಅಧಿಕೃತವಾಗಿ' ಶುರುವಾಯಿತು. ಒಟ್ಟು ಹದಿನೇಳು ಹುಡುಗರು. ಒಂಬತ್ತು ಬೈಕುಗಳ ಗಾಲಿಗಳಲ್ಲೂ ಹುಮ್ಮಸ್ಸಿನ ಗಾಳಿ ತುಂಬಿತ್ತು. ಮಾಗಡಿ ರಸ್ತೆಯಲ್ಲಿ ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ಸಾವನದುರ್ಗ ಬೆಟ್ಟ ಕಾಣಲಾರಂಭಿಸಿತು: ಗಮ್ಯದಂತೆ. ಅದನ್ನೇ ನೋಡುತ್ತಾ, ಮಧ್ಯದಲ್ಲೊಮ್ಮೆ ಚಹ ಕುಡಿದು, 'ದುಸ್ಥಿತಿ'ಯಲ್ಲಿದ್ದ ರಸ್ತೆಯಲ್ಲಿ ಸಾಗಿದೆವು...
ಸಾವನದುರ್ಗ ತಲುಪಿದಾಗ ಹತ್ತು ಗಂಟೆ. ಬೈಕು ಪಾರ್ಕ್ ಮಾಡಿ, ಅಲ್ಲೇ ಮಾರುತ್ತಿದ್ದ ನೀರಾ ಕೊಂಡುಕೊಂಡು, ಬ್ಯಾಗೇರಿಸಿ ಬೆಟ್ಟ ಹತ್ತತೊಡಗಿದೆವು. ಏದುಸಿರು ಬಂದು ಅಲ್ಲಲ್ಲಿ ಕುಂತು ಸುಧಾರಿಸಿಕೊಂಡೆವು. ಸುಮಾರು ಅರ್ಧ ಹತ್ತಿದೆವು ಅನ್ನಿಸಿದಾಗ, ಒಂದು ಕಡೆ 'ಕೂರಬಹುದಾದಂತಹ ಜಾಗ' ಕಂಡಾಗ ಕುಂತು, ಕಟ್ಟಿಸಿಕೊಂಡು ಹೋಗಿದ್ದ ಚಪಾತಿ-ಪಲ್ಯ ತಿಂದೆವು. ನೀರು ಕುಡಿದೆವು. ಮತ್ತೆ ಹತ್ತತೊಡಗಿದೆವು. ಹತ್ತಿದಷ್ಟೂ ಬೆಟ್ಟ; ಮುಗಿಯದ ದಾರಿ; ದಾರಿಯಲ್ಲದ ದಾರಿ; ಎಲ್ಲೆಲ್ಲೂ ಕಲ್ಲುಬಂಡೆ; ಒಂದಷ್ಟು ಹಸಿರು ಚಿಗುರು, ಪಾಪಸು ಕಳ್ಳಿ, ನಿಂತ ನೀರು ಅಲ್ಲಲ್ಲಿ.... ಬೆಟ್ಟ ಅದೆಷ್ಟು ಕಡಿದಾಗಿದೆಯೆಂದರೆ... ಹೆಚ್ಚುಕಮ್ಮಿಯಾಗಿ ಜಾರಿ ಬಿದ್ದರೆ ಪುಡಿಪುಡಿ; ಹೆಣ ಸಿಗುವುದೂ ಡೌಟು.. ಕೆಲವೊಂದೆಡೆ ತೆವಳಿಕೊಂಡು ಸಾಗಬೇಕು.
ಬೆಟ್ಟದ ಮೇಲೆ ತಲುಪಿದಾಗ ಹನ್ನೆರಡೂ ಕಾಲು. ಅಲ್ಲೊಂದು ಮಂಟಪದಲ್ಲಿ ನಂದಿ. ತಣ್ಣಗೆ ಬೀಸುವ ಗಾಳಿ. ಒಂದು ತಾಸು ಅಲ್ಲೇ ಕುಳಿತು, ಮಲಗಿ, ಫೋಟೋ ತೆಗಿಸಿಕೊಂಡು, ಜೋಕ್ಸ್ ಹೇಳಿಕೊಂಡು, ನಕ್ಕು, ಹಗುರಾದೆವು. ನಂತರ ಊಟ ಮಾಡಿದೆವು. 'ಮಿತವಾಗಿ' ನೀರು ಕುಡಿದೆವು. ಎರಡೂ ವರೆ ಹೊತ್ತಿಗೆ ಗುಂಪುಗುಂಪಾಗಿ ಅವರೋಹಣ ಶುರುಮಾಡಿದೆವು.
ನಿಧಾನಕ್ಕೆ ಇಳಿದು 'ಭೂಮಿ'ಯನ್ನು ತಲುಪಿದೆವು. ಎಳನೀರು ಕುಡಿದೆವು. ಮಳೆ ಬರುವ ಸಾಧ್ಯತೆ ಇತ್ತು. ಬೇಗ ಮನೆ ಮುಟ್ಟಿಕೊಳ್ಳೋಣ ಎಂದುಕೊಂಡು ಹೊರಟೆವು. ಮಧ್ಯದಲ್ಲೊಮ್ಮೆ ನಿಲ್ಲಿಸಿ, ಉಳಿದಿದ್ದ ಚಪಾತಿ ತಿಂದು ಖಾಲಿ ಮಾಡಿದೆವು. ಮತ್ತೆ ಮುಂದೆ ನಿಲ್ಲಿಸಿ ಕಾಫಿ ಕುಡಿದೆವು. 'ಮತ್ತೆ ಸಿಗೋಣ' ಅಂತಂದು ಎಲ್ಲರೂ ಬೇರಾದೆವು.
***
ರಾತ್ರಿ ಲೈಟಾರಿಸಿ ಮಲಗಿದರೆ ಕಣ್ಣಿನಲ್ಲಿ ಅದೇ ಬಿಂಬ: ಸಾವನದುರ್ಗ ಬೆಟ್ಟದ ಮೇಲಿನ ನಂದಿ ಚಳಿ, ಗಾಳಿ, ಮಳೆಗಳಿಗೆ ಹೆದರದೇ ಮೌನವಾಗಿ ನಿಂತಿದೆ. ಇಲ್ಲ, ಕುಳಿತಿದೆ. ಇಲ್ಲ, ಮಲಗಿದೆ. ಗಂಭೀರವಾಗಿ ಮಲಗಿದೆ. ಬಹುಶಃ ಅದಕ್ಕೆ ಭ್ರಮೆ: ಬರುವ ಜನರೆಲ್ಲಾ ಇಷ್ಟೆತ್ತರದ ಬೆಟ್ಟ ಹತ್ತಿ ತನ್ನನ್ನು ನೋಡಲೇ ಬರುತ್ತಾರೆ ಅಂತ! ಅದಕ್ಕೇ ಅಷ್ಟೊಂದು ಗತ್ತು. ಗೋಣು ಸಹ ಅಲ್ಲಾಡಿಸುವುದಿಲ್ಲ. ಅದರ ಪೂಜಾರಿಯ ಮನೆ ಎಲ್ಲಿದೆ? ಆತ ದಿನವೂ ಬೆಳಗ್ಗೆ ಎದ್ದು, ಬೆಟ್ಟ ಹತ್ತಿ ಬಂದು ಪೂಜೆ ಮಾಡಿ ಹೋಗುತ್ತಾನೆಯೇ?
ಉತ್ತರ ಗೊತ್ತಿರದ ಪ್ರಶ್ನೆಗಳು ಕಾಡುತ್ತಿರಲು, ಸುಸ್ತಿಗೇ ನಿದ್ದೆ ಹತ್ತಿತು.
(For more photos, click here / here)

Monday, November 13, 2006
ಒಂದು ಹುಟ್ಟು, ಒಂದು ಮದುವೆ ಮತ್ತು ಒಂದು ಸಾವು..
"ಚೆಲುವ ಬಿದಿರ ತೊಟ್ಟಿಲಲ್ಲಿ
ನಗುವ ಮಗುವ ಕಂಡೆ"
ಅಂತ ಬರೆದರು ಕೆಎಸ್‍ನ. ಮೊನ್ನೆ ನಮ್ಮ ಬಾಸ್ ತಂದೆಯಾದರು. ಮಗುವನ್ನು ನೋಡಿಕೊಂಡುಬರಲು ನಾನು ನನ್ನ colleagues ಜೊತೆ ಆಸ್ಪತ್ರೆಗೆ ಹೋಗಿದ್ದೆ. ಬಾಸ್ ತುಂಬಾ ಖುಷಿಯಲ್ಲಿದ್ದರು. ಸ್ವೀಟ್ ಕೊಟ್ಟರು. ನಾನು ಇದೇ ಸಂದರ್ಭ ಅಂತ 'ಸರ್, ಸ್ವೀಟ್ ಸಾಕಾಗಲ್ಲ, ಟ್ರೀಟ್ ಬೇಕು' ಅಂದೆ. 'ಓ, ಅದಕ್ಕೇನಂತೆ, ಕೊಡುಸ್ತೀನಿ' ಅಂದ್ರು. ಬೆಡ್ಡಿನಲ್ಲಿ ಮಲಗಿದ್ದ ಬಾಸ್-ಮಿಸ್ಸಸ್‍ಗೆ ಕಂಗ್ರಾಟ್ಸ್ ಹೇಳಿದೆ. ತೊಟ್ಟಿಲಲ್ಲಿ ಮಗು ನಿದ್ದೆ ಹೋಗಿತ್ತು. 'ಯಾರ ಹಾಗಿದಾಳಪ್ಪ?' ಅಂದ್ರು ಬಾಸ್ ಅತ್ತೆ. ಹೆಚ್ಚೆಸ್ವಿ ತಮ್ಮ ಮೊಮ್ಮೊಗಳ ಕುರಿತು ಬರೆದ 'ಸೋನಿ ಪದ್ಯಗಳು' ನೆನಪಾಗುತ್ತಿತ್ತು ನನಗೆ...
***
ಮೊನ್ನೆ ಸಿಂಧು ಅಕ್ಕನ ಮದುವೆಯ receptionಗೆ ಹೋಗಿದ್ದೆ. ತನ್ನನ್ನು ತಾನೇ 'ಅಕ್ಕ' ಅಂತ ಕರೆದುಕೊಂಡ ಮಹಾದೇವಿ ಈಕೆ! ಮದುವೆಗೆ ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿ ಬಂದಿದ್ದರು. ಊಟದ ಸಮಯದಲ್ಲಿ ಜಯಂತ್ ಮಾತಿಗೆ ಸಿಕ್ಕಿದರು. ಈ ಮೊದಲು ಒಮ್ಮೆ ಸಪ್ನಾ ಬುಕ್‍ಹೌಸ್‍ನಲ್ಲಿ ಜಯಂತ್ ಸಿಕ್ಕಿದ್ದರು. ಅದನ್ನು ನೆನಪಿಸಿ, 'ನಾನು..ಸುಶ್ರುತ.. ಅವತ್ತು ಸಪ್ನಾದಲ್ಲಿ ಸಿಕ್ಕಿದ್ನಲ್ಲ...' ಅಂದೆ. 'ಓಹ್, ಹೌದು, ಕರೆಕ್ಟ್!' ಅಂದ್ರು. (ನಿಜವಾಗ್ಯೂ ನೆನಪಾಯ್ತೋ ಸುಳ್ಳೇ ಹೂಂ ಅಂದ್ರೋ ನಂಗಂತೂ ಡೌಟು!). ಕೊನೆಗೆ ಜಯಂತ್ ಜೊತೆಯೇ ತುಂಬಾ ಹೊತ್ತು ಮಾತಾಡಿದೆ. 'ಸರ್ ನೀವು ನಮಗೆ continuous ಆಗಿ ಓದ್ಲಿಕ್ಕೆ ಸಿಗ್ಬೇಕು, ಯಾವ್ದಾದ್ರೂ ಪತ್ರಿಕೆಗೆ ಬರೀರಿ' ಅಂದೆ. 'ಸಧ್ಯದಲ್ಲೇ ಪ್ರಜಾವಾಣಿಗೆ ಬರೀತೀನಿ. ಡಾ| ರಾಜಕುಮಾರ್ ಬಗ್ಗೆ 'ನಮಸ್ಕಾರ' ಸರಣಿಯಲ್ಲಿ ಈಟೀವಿಯಲ್ಲಿ ನಾಡಿದ್ದು ಭಾನುವಾರದಿಂದ ನನ್ನ ಪ್ರೋಗ್ರಾಮ್ ಒಂದು ಬರುತ್ತೆ, ನೋಡಿ' ಅಂದರು. ಅದೂ ಇದು ಮಾತಾಡಿದ್ವಿ.
ಅಕ್ಕನ ಮದುವೆಯ reception hallನಲ್ಲಿ ಕೇಳಿಬರುತ್ತಿದ್ದ 'ಮೈಸೂರು ಮಲ್ಲಿಗೆ' ಮತ್ತಿತರ ಭಾವಗೀತೆಗಳು ಕಿವಿಗಿಂಪಾಗಿದ್ದವು. ಅಕ್ಕನಿಗೆ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಪುಸ್ತಕವನ್ನು present ಮಾಡಿದೆ.
***
ಮೊನ್ನೆ Bangalore Book Fairನಿಂದ ಒಂದಷ್ಟು ಪುಸ್ತಕಗಳನ್ನು ಕೊಂಡುತಂದೆ. ತಂದ ಪುಸ್ತಕಗಳಿಗೆಲ್ಲ ಬೈಂಡ್ ಹಾಕಿ, ಮೇಲೆ ಹೆಸರು ಬರೆದು ಇಡುವುದು ನನ್ನ ರೂಢಿ. ನಿನ್ನೆ ಹಾಗೇ ಹೆಸರು ಬರೆಯುತ್ತಾ ಕೂತಿದ್ದೆ. ಅಷ್ಟರಲ್ಲಿ ನಮ್ಮ ಕೆಳಗಡೆ ಮನೆಯ ಆಂಟಿ 'ಸುಪ್ರೇಶ್' ಅಂತ ಕರೆದರು. ಅವರು ನನ್ನನ್ನು ಕರೆಯುವುದೇ ಹಾಗೆ. ನಾನೂ ಅದನ್ನು rectify ಮಾಡಲು ಹೋಗಿಲ್ಲ. ಏಕೆಂದರೆ 'ಸುಶ್ರುತ' ಎಂಬ ನನ್ನ ಹೆಸರನ್ನು ಸರಿಯಾಗಿ ಕರೆಯುವವರ ಸಂಖ್ಯೆ ತುಂಬಾ ಕಮ್ಮಿ. Pronunciation problem! ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ. ನಾನೂ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗುವುದಿಲ್ಲ. (ಎಷ್ಟೂಂತ ಕೆಡಿಸಿಕೊಳ್ಳಲಿ ನಾನಾದರೂ!)
ಆಂಟಿ ಕರೆದಾಗ ನಾನು ಕಾರಂತರ 'ಅಳಿದ ಮೇಲೆ' ಕಾದಂಬರಿಗೆ ಸ್ಕೆಚ್‍ಪೆನ್ನಿನ್ನಲ್ಲಿ ಹೆಸರು ಬರೆಯುತ್ತಿದ್ದೆ. 'ಏನ್ ಆಂಟಿ?' ಎನ್ನುತ್ತಾ ಹೊರಬಂದೆ. ಆಂಟಿ ನನ್ನನ್ನೇ ದುರುದುರು ನೋಡಿದರು. 'ಅಂಕಲ್ ಹೋಗ್ಬಿಟ್ರು ಗೊತ್ತಾಗ್ಲಿಲ್ವಾ ನಿಮ್ಗೆ?' ಅಂದ್ರು. ನನಗೆ ಒಮ್ಮೆಲೇ ಅರ್ಥವಾಗಲಿಲ್ಲ. ಈ ಆಂಟಿ ಮತ್ತು ಅಂಕಲ್ (actually ಅವರು ಅಜ್ಜ-ಅಜ್ಜಿ: ಅಂಕಲ್‍ಗೆ ಸುಮಾರು ಅರವತ್ತು ವರ್ಷ; ಆಂಟಿಗೆ ಐವತ್ತು ಛೇಂಜ್) ನಮ್ಮ ಮನೆಯ ಥರ್ಡ್ ಫ್ಲೋರಿನಲ್ಲಿರುವ ಒಂಡು ಡಬ್ಬಲ್ ಬೆಡ್‍ರೂಮ್ ಹೌಸಿನಲ್ಲಿ ಬಾಡಿಗೆಗಿದ್ದಾರೆ. ಅವರಿಗೆ ಗಂಡುಮಕ್ಕಳು ಇಲ್ಲದ್ದರಿಂದ ಮತ್ತು ಹೆಣ್ಣುಮಕ್ಕಳಿಗೆ ಮದುವೆಯಾಗಿದೆಯಾದ್ದರಿಂದ, ಅಂಕಲ್ ಮತ್ತೆ ಆಂಟಿ ಇಬ್ಬರೇ ಇಲ್ಲಿ ಇರುವುದು. ಅಂಕಲ್ ಆದ್ರೂ ತುಂಬಾ ಉತ್ಸಾಹದಿಂದಿರುವವರು. ಮನೆಗೆ Worldspace Radio, Tata Sky TV ಎಲ್ಲಾ ಹಾಕಿಸಿಕೊಂಡಿದ್ದಾರೆ. 'ರಿಟೈರ್ಡ್ ಲೈಫಪ್ಪ. ಅವಾಗ್ಲಂತೂ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ; ಈಗ ಎಲ್ಲಾ ಇದೆ, ಎಂಜಾಯ್ ಮಾಡೋಣ ಅಂತಿದೀನಿ' ಅಂದಿದ್ರು ನನ್ಹತ್ರ ಒಮ್ಮೆ.
ಆಂಟಿ ನನ್ನ ಬಳಿ 'ಅಂಕಲ್ ಹೋಗಿದ್ದು ನಿಮಗೆ ಗೊತ್ತೇ ಇಲ್ವಾ, ಮೊನ್ನೇನೆ ಹೋಗ್ಬಿಟ್ರು' ಅಂದ್ರು. 'ಎಲ್ಲಿಗೆ?' ಅಂತ ಕೇಳ್ಲಿಕ್ಕೆ ಹೊರಟವನು ಬಾಯಿಗೆ ಬೀಗ ಹಾಕಿಕೊಂಡೆ. ನನಗೆ ಅವರು ಸತ್ತುಹೋಗಿರಬಹುದು ಎಂಬ ಕಲ್ಪನೆಯೇ ಬರಲಿಲ್ಲ. ಏಕೆಂದರೆ ಆಂಟಿಯ ಹಣೆಯ ಕುಂಕುಮ, ಕೊರಳ ಕರಿಮಣಿ ಸರ ಎಲ್ಲಾ ಹಾಗೇ ಇತ್ತು. ಅಲ್ಲದೇ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ನಾನು ಮತ್ತೆ ಮತ್ತೆ ಆಂಟಿಯನ್ನೇ ನೋಡಿದೆ. 'ಮೊನ್ನೆ ಬೆಳಗ್ಗೆ ಒಂಬತ್ತೂ ವರೆ ಹೊತ್ತಿಗೆ ಹೋಗ್ಬಿಟ್ರಪ್ಪ. ತುಂಬಾ ಜನಗಳು ಸೇರಿದ್ರು, ನಿಮಗೆ ನಿಜವಾಗ್ಯೂ ಗೊತ್ತೇ ಇಲ್ವಾ?' ಅಂದ್ರು. ಈಗ ನಾನು ಸ್ವಲ್ಪ convince ಆದೆ. 'ಓ, ಹೌದಾ ಆಂಟಿ... ಅಯ್ಯೋ, ನಂಗೆ ಗೊತ್ತೇ ಇಲ್ವಲ್ಲ... ಅರೆ.. ಹೆಂಗಾಯ್ತು..' ಅಂತೆಲ್ಲ ಹಲುಬಿದೆ.
ಈ ಬೆಂಗಳೂರು ಇದೆಂತಾ ಊರೋ ಏನೋ. ಕೆಳಗಡೆ ಮನೆಯಲ್ಲಿ ಒಂದು ಸಾವು ಸಂಭವಿಸಿದರೆ ಮೇಲ್ಗಡೆ ಮನೆಯಲ್ಲಿರುವವರಿಗೆ ಅದು ತಿಳಿಯುವುದು ಮೂರು ದಿನಗಳ ನಂತರ! ನಾನು ಬೆಳಗ್ಗೆ ಎಂಟೂ ಮೂಕ್ಕಾಲಿಗೆ ಆಫೀಸಿಗೆ ಹೊರಟುಬಿಡುತ್ತೇನೆ. ಮತ್ತೆ ವಾಪಸು ಬರುವಷ್ಟರಲ್ಲಿ ಎಂಟಾಗಿರುತ್ತದೆ. ಅಲ್ಲದೇ ನಾನು ಈಗ ಮೂರು ದಿನಗಳಿಂದ ಸ್ವಲ್ಪ ಬ್ಯುಸಿ ಇದ್ದುದರಿಂದ ರೂಮಿನಲ್ಲಿರುತ್ತಿದ್ದುದೇ ಕಮ್ಮಿ. ಹೀಗಾಗಿ ನನಗೆ ಅಂಕಲ್ ತೀರಿಕೊಂಡ ಸುದ್ದಿ ತಿಳಿದೇ ಇರಲಿಲ್ಲ. ಅಂಕಲ್‍ಗೆ ಸ್ವಲ್ಪ ಅರಾಮಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಮನೆಯ ಹೊರಗಡೆ ಮೊನ್ನೆ ತುಂಬಾ ಚಪ್ಪಲಿಗಳು ಕಂಡರೂ ಯಾರೋ ನೆಂಟರು ಬಂದಿರಬಹುದು ಅಂತಷ್ಟೇ ಅಂದುಕೊಂಡಿದ್ದೆ.
ಆಂಟಿ 'ಇವರೇನು ನಗುನಗ್ತಾ ಇದಾರಲ ಅಂದ್ಕೋಬೇಡಪ್ಪಾ.. ಮೂರು ದಿನಗಳಿಂದ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋಗಿದೆ' ಅಂದ್ರು. 'ಅಯ್ಯೋ ಹಾಗೇನಿಲ್ಲ ಬಿಡಿ ಆಂಟಿ.. ಸಮಾಧಾನ ಮಾಡ್ಕೋಬೇಕು.. ಏನ್ಮಾಡ್ಲಿಕ್ಕಾಗೊತ್ತೆ...' ಅಂತ ಏನೇನೋ ಅಂದೆ. ನನಗೆ ಇಂತಹ ಸಂದರ್ಭಗಳಲ್ಲಿ ಮಾತನಾಡುವುದಕ್ಕೆ ತೋಚುವುದೇ ಇಲ್ಲ. 'ಇನ್ನು ನೀವು ಒಬ್ರೇ ಇರ್ತೀರ ಆಂಟಿ?' ಅಂತ ಕೇಳಿದೆ. 'ನನ್ನ ಹೆಣ್ಣುಮಕ್ಳು ತಮ್ಮನೇಲೇ ಇರು ಬಾ ಅಂತ ಕರೀತಿದಾರೆ... ಏನ್ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ..' ಅಂದರು. ಅಷ್ಟರಲ್ಲಿ ಅವರ ಹೆಣ್ಣುಮಗಳೊಬ್ಬರು ಮೇಲೆ ಬಂದು ಅವರನ್ನು ಕರೆದುಕೊಂಡು ಕೆಳಗೆ ಹೋದರು.
ಕಾರಂತರ 'ಅಳಿದ ಮೇಲೆ' ಪುಸ್ತಕ ನನ್ನ ಕೈಯಲ್ಲೇ ಇತ್ತು.
***
ಈ ಬ್ಲಾಗ್ ಶುರುಮಾಡುವಾಗ ಇಂತಹ personal ಆದ ವಿಷಯಗಳನ್ನು ಇಲ್ಲಿ ಬರೆಯಬಾರದು ಅಂತ ಅಂದುಕೊಂಡಿದ್ದೆ. ಈ ಬ್ಲಾಗನ್ನು ನನ್ನ ಖಾಸ್‍ಬಾತ್ ಮಾಡಬಾರದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಇವತ್ತು ಬೆಳಗ್ಗೆ ಒಂದು ಎಸ್ಸೆಮ್ಮೆಸ್ ಬಂತು: ಸಂತೋಷ ಮತ್ತು ದುಃಖಗಳು ಇರುವುದೇ ಹಂಚಿಕೊಳ್ಳುವುದಕ್ಕಾಗಿ ಅಂತ. ಆಮೇಲೆ ಇದನ್ನೆಲ್ಲಾ ಟೈಪ್ ಮಾಡಿ upload ಮಾಡಿದೆ.

Tuesday, November 07, 2006
ಹೋಳಿಗೆಯ ಮೆಲುಕು
ಹೋಳಿಗೆ ಮಾಡುವುದು ಹೇಗೆ ಗೊತ್ತಾ?
ಮೊದಲು ಕಡಲೆ ಬೇಳೆಯನ್ನು ತೊಳೆದು, ನೆನೆಸಿಡಬೇಕು. ಆಮೇಲೆ ಅದನ್ನು ಬೆಲ್ಲದೊಂದಿಗೆ ಬೇಯಿಸಬೇಕು. ಅದು ಬೆಂದಾದಮೇಲೆ ಸಿದ್ದವಾಗುವ ಖಾದ್ಯವೇ ಹಯಗ್ರೀವ. ಆಮೇಲೆ ಅದನ್ನು ಬೀಸಬೇಕು. ಈಗ ಹೂರಣ ಸಿದ್ದ. ಈ ಮಧ್ಯೆ ಹೋಳಿಗೆ ರವೆ (ಅಥವಾ ಗೋಧಿ/ಮೈದಾ ಹಿಟ್ಟು) ಯನ್ನು ಎಣ್ಣೆ/ನೀರಿನೊಂದಿಗೆ ಕಲಸಿ, ಮೆದ್ದು, ಸರಿಯಾಗಿ ಹದ ಮಾಡಿಟ್ಟುಕೊಳ್ಳಬೇಕು. ರಬ್ಬರಿನಂತೆ flexible ಆಗಿರಬೇಕು ಅದು. ಈಗ ಕಣಿಕೆ ಸಿದ್ದ. ಈಗ ಏನು ಮಾಡಬೇಕೆಂದರೆ.. ಕಣಿಕೆಯನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಆಮೇಲೆ ಹೂರಣವನ್ನೂ ಉಂಡೆ ಕಟ್ಟಬೇಕು. ಈ ಹೂರಣದ ಉಂಡೆಗಳು ಕಣಿಕೆ ಉಂಡೆಗಳಿಗಿಂತ ದೊಡ್ಡವು. ಕಣಿಕೆಯ ಉಂಡೆಗಳು ಮತ್ತು ಹೂರಣದ ಉಂಡೆಗಳು ಸಮಸಂಖ್ಯೆಯಲ್ಲಿರಬೇಕು. (ಕಣಿಕೆ ಸ್ವಲ್ಪ ಉಳಿದುಬಿಟ್ಟರೆ ಕೊನೆಯಲ್ಲಿ 'ಕಣಿಕೆ ರೊಟ್ಟಿ' ಮಾಡಬಹುದು, ಚಿಂತೆಯಿಲ್ಲ!). ಕಾವಲಿ ಕಾದಿದೆಯಾ ನೋಡಿ... ಹಾಂ, ಕಾದಿದೆ. ಈಗ ಕಾವಲಿಗೆ ಎಣ್ಣೆ ಸವರಿ. ಹಾಂ, ಇನ್ನು ಕಣಿಕೆಯನ್ನು ಒತ್ತಿ (ಅಥವಾ ತಟ್ಟಿ) ಚಪ್ಪಟೆ ಮಾಡಿ, ಅದರೊಳಗೆ ಹೂರಣದ ಉಂಡೆಯನ್ನು ಇಟ್ಟು, ಕಣಿಕೆಯಿಂದ ಮುಚ್ಚಿಬಿಡಿ. ಈಗ ಅದನ್ನು ಮಣೆಯ ಮೇಲಿಟ್ಟು, (ಮಣೆಯ ಮೇಲೆ ಕವರು ಹಾಸಿಕೊಂಡಿದ್ದೀರ ತಾನೆ?), ಲಟ್ಟಣಿಗೆಯಿಂದ ತೆಳ್ಳಗೆ ವರೆಯಬೇಕು... ಕಣಿಕೆ transparent ಆಗಿ ಒಳಗಿನ ಹೂರಣ ಎದ್ದುಬರುವಂತಾಗುವವರೆಗೆ ವರೆಯಬೇಕು. ಈಗ ಇದನ್ನು ಕಾದ ಕಾವಲಿಯ ಮೇಲೆ ಹಾಕಬೇಕು. ಹತ್ತಿ ಕರಕಲಾಗದಂತೆ ಆಗಾಗ ಮಗುಚಿಹಾಕುತ್ತಿರಬೇಕು. ಬೆಂದಮೇಲೆ ತೆಗೆದು ಪೇಪರ್ ಮೇಲೆ ಆರಲು ಹಾಕಬೇಕು... ಇಗೋ, ಇದೀಗ ಹೋಳಿಗೆ ತಿನ್ನಲು ಸಿದ್ದ! ನೋಡಿ, ಎಷ್ಟು ಕಷ್ಟ ಹೋಳಿಗೆ ಮಾಡುವುದು...!
ಮನುಷ್ಯನಿಗೆ ಬೇಳೆ, ಬೆಲ್ಲ, ರವೆ, ಹಿಟ್ಟುಗಳನ್ನು ಹಾಗ್-ಹಾಗೇ ತಿನ್ನಲಾಗುವುದಿಲ್ಲ ಅದಕ್ಕಾಗಿ ಇಷ್ಟೆಲ್ಲ ಕಷ್ಟ ಪಡುತ್ತಾನೆ! ಅದ್ಸರಿ, ಈ ಹೋಳಿಗೆ ಮಾಡುವುದನ್ನು ಕಂಡುಹಿಡಿದವರು ಯಾರು?
ಮರೆತದ್ದು: ಹಯಗ್ರೀವವನ್ನು ಬೀಸುವ ಮುಂಚೆ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿದರೆ ಹೋಳಿಗೆಗೆ ಪರಿಮಳವೂ, ಜಾಸ್ತಿ ರುಚಿಯೂ ಲಭ್ಯವಾಗುತ್ತದೆ!
***
ಯಾಕೆ ಬರೆದೆ ಇದನ್ನ ಇಲ್ಲಿ ಅಂದ್ರೆ...
ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದೆ. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಹೆಣ್ಣುಮಕ್ಕಳು ಇಲ್ಲದ ಕಾರಣ ನಾನೇ ಅಮ್ಮನಿಗೆ ಹೋಳಿಗೆ ಮಾಡುವಲ್ಲಿ assist ಮಾಡುವುದು. ಕಳೆದ ವರ್ಷದವರೆಗೆ ಅಜ್ಜಿ ಇದ್ದಳು. ಅವಳಿಗೆ ಏನನ್ನೂ ಮಾಡಲು ಆಗುತ್ತಿರಲಿಲ್ಲವಾದರೂ, ಒಂದಷ್ಟು ಹೊತ್ತು ಒಲೆ ಬುಡದಲ್ಲಿ ಕೂತು ಹೋಳಿಗೆ ಮಗುಚಿಹಾಕುವ ಕೆಲಸವನ್ನು ಮಾಡುತ್ತಿದ್ದಳು. ಅವಳು ತೀರಿಕೊಂಡಮೇಲೆ ಈ ವರ್ಷ ಹೂರಣದ ಉಂಡೆ ಕಟ್ಟುವುದು, ಬೆಂಕಿಯ ಕಾವು ಹೆಚ್ಚುಕಮ್ಮಿಯಾಗದಂತೆ manage ಮಾಡುವುದು, ಹೋಳಿಗೆ ಮಗುಚಿಹಾಕುವುದು ಎಲ್ಲಾ ನಾನೇ. ಅಮ್ಮ ಕಣಿಕೆಯ ಉಂಡೆ ಕಟ್ಟುವುದು, ಹೂರಣದ ಉಂಡೆಯನ್ನು ಕಣಿಕೆಯ ಒಳಗಿಟ್ಟು ಹೋಳಿಗೆ ವರೆಯುವುದು, ಆಮೇಲೆ ಅದನ್ನು ಕೈಮೇಲೆ ಹಾಕಿಕೊಂಡು ಹರಿದುಹೋಗದಂತೆ ಕಾದ ಕಾವಲಿಯ ಮೇಲೆ ವರ್ಗಾಯಿಸುವುದು, ಹೋಳಿಗೆ ಬೆಂದಿತಾ ಅಂತ ಚೆಕ್ ಮಾಡುವುದು.. ಎಲ್ಲಾ ಮಾಡುತ್ತಾಳೆ.
ನನಗೆ ಮೊದಲಿನಿಂದಲೂ ಅಮ್ಮನಿಗೆ ಸಹಾಯ ಮಾಡುವ ಇಂತಹ ಕೆಲಸಗಳಲ್ಲಿ ಆಸಕ್ತಿ. ಏಕೆಂದರೆ ಒಲೆಯ ಹಳದಿ ಬೆಳಕು ಅಮ್ಮನ ಮುಖದ ಮೇಲೆ ಲಾಸ್ಯವಾಡುತ್ತಿರುವಾಗ ನಾನು ಉಂಡೆ ಕಟ್ಟಿಕೊಡುತ್ತಾ ಅದೆಷ್ಟು ಮಾತಾಡಬಹುದು...! ಊರ ಕಥೆಯನ್ನೆಲ್ಲಾ ಅಮ್ಮ ಹೇಳುತ್ತಾಳೆ. ಯಾರ್‍ಯಾರ ಮನೆಯಲ್ಲಿ ಏನೇನಾಯ್ತು, ಪಾರಕ್ಕ ಗಂಡ-ಹೆಂಡ್ತಿ ಕಾಶೀಯಾತ್ರೆಗೆ ಹೋಗಿಬಂದದ್ದು, ಹೊಸವರ್ಷದ ಹಿಂದಿನ ದಿನ ಊರವರೆಲ್ಲಾ ಸೇರಿ ಕಂಬಳ ಮಾಡಿದ್ದು, ಪ್ರಕಾಶಣ್ಣನ ಮನೆಯ ಹುಲ್ಲು ಗೊಣಬೆಗೆ ಬೆಂಕಿ ಬಿದ್ದುಬಿಟ್ಟದ್ದು, (ಬೆಂಕಿ ಹಾಕಿದ್ದು ಇಂಥವನೇ ಇರಬೇಕು ಅಂತ ಊರವರೆಲ್ಲ ಗುಸುಗುಸು ಮಾತಾಡಿಕೊಳ್ಳುತ್ತಿರುವುದು), ಸರೋಜಕ್ಕನೂ ಶ್ರೀಲಕ್ಷ್ಮಕ್ಕನೂ ಮಾಡಿಕೊಂಡ ಜಗಳ, ಗುಂಡ ಹೊಸ ಬೈಕಿನಿಂದ ಬಿದ್ದು ಕಾಲು ಮುರಿದುಕೊಂಡದ್ದು... ಎಲ್ಲ.
ಇವನ್ನೆಲ್ಲ ಫೋನಿನಲ್ಲಿ ಮಾತನಾಡಲು ಆಗುವುದಿಲ್ಲ. ಏಕೆಂದರೆ ಬಹಳ ಸಲ ನಮ್ಮನೆಯ ಫೋನಿನಲ್ಲಿ ಮಾತಾಡುತ್ತಿರುವುದನ್ನು ಬೇರೆಯವರ ಮನೆಯವರು ಫೋನೆತ್ತಿದರೆ ಕೇಳಿಸಿಕೊಳ್ಳಬಹುದು! ಆದ್ದರಿಂದ, ಇದಕ್ಕೆ ಹಿತ್ಲಕಡೆ ಲಾಯದಲ್ಲಿ ಹೋಳಿಗೆ ಮಾಡಲಿಕ್ಕೆಂದು ಹೂಡಿದ ವಿಶೇಷ ಒಲೆಯ ಎದುರೇ ಆಗಬೇಕು. ನಾನು ಹಿಂದಿನ ಸಲ ಊರಿಗೆ ಬಂದುಹೋದಂದಿನಿಂದ ಈ ಸಲ ಬರುವವರೆಗೆ ಊರಿನಲ್ಲಿ, ನಮ್ಮ ನೆಂಟರಿಷ್ಟರ ಕುಟುಂಬಗಳಲ್ಲಿ ಏನೇನಾಯ್ತೋ ಎಲ್ಲದರ ವರದಿ ಈ ಒಲೆಯ ಮುಂದೆ ನನಗೆ ಸಿಗುತ್ತದೆ ಅಮ್ಮನಿಂದ. ನಾನು ಹೂರಣದ ಉಂಡೆ ಕಟ್ಟಿಕೊಡುತ್ತಾ, ಆ ಉಂಡೆ ಅಮ್ಮನ ಪುಟ್ಟ ಕಣಿಕೆಯ ಉಂಡೆಯೊಳಗೆ ಬೆಚ್ಚಗೆ ಮುಚ್ಚಿಹೋಗುವುದನ್ನು ವಿಸ್ಮಯದಿಂದ ನೋಡುತ್ತಾ, ಈ ಕಥೆಯನ್ನೆಲ್ಲಾ ಕೇಳುತ್ತೇನೆ... ಆಗಾಗ ಬೆಂಕಿ ಮುಂದೂಡುತ್ತಾ, ಕಾವು ಜಾಸ್ತಿಯಾದರೆ ಕಟ್ಟಿಗೆಯನ್ನು ಹಿಂದಕ್ಕೆಳೆಯುತ್ತಾ, ಕಣಿಕೆಯ ಉಂಡೆ ಮತ್ತು ನನ್ನ ಹೂರಣದ ಉಂಡೆ -ಎರಡೂ ಸಮಸಂಖ್ಯೆಯಲ್ಲಿದೆಯಾ ಅಂತ ಲೆಕ್ಕ ಮಾಡುತ್ತಾ ನಾನು ಕುಳಿತಿರುವಾಗ ಲಟ್ಟಣಿಗೆಯ ಕೆಳಗೆ ಕಣಿಕೆಯೊಳಗಣ ಹೂರಣ ಅಗಲವಾಗುತ್ತಾ ಹೋಗುತ್ತದೆ. ಕಣಿಕೆ ತಾನು ಪಾರದರ್ಶಕವಾಗುತ್ತಾ, ಹೂರಣವನ್ನು ಅಗಲವಾಗಲು ಬಿಡುತ್ತದೆ. ಹೂರಣಕ್ಕೆ ಕಣಿಕೆಯನ್ನೂ ಮೀರಿ ಬೆಳೆಯುವ ಧೈರ್ಯ. ಆದರೆ ಅಷ್ಟರಲ್ಲಿ ಅಮ್ಮ ವರೆಯುವುದನ್ನು ನಿಲ್ಲಿಸಿಬಿಡುತ್ತಾಳೆ.
ನಾನು ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಆಟವಾಡಿದ್ದು ಎಲ್ಲ ಈ ಹಳ್ಳಿಯಲ್ಲೇ, ಅಮ್ಮ-ಅಪ್ಪ-ಅಜ್ಜಿಯರ ಸಂಗಡವೇ. ನನ್ನ ಜೀವನದ ಮೊದಲ ಹದಿನೆಂಟು ವರ್ಷಗಳನ್ನು ಇಲ್ಲೇ ಕಳೆದುಬಿಟ್ಟೆ. ಓದಿನಲ್ಲಿ ಮುಂದಿದ್ದ ಕಾರಣ, ನಾನೇ ಊರಿಗೆಲ್ಲ ಹೀರೋ ಆಗಿದ್ದೆ. ಅಲ್ಲದೆ ಏನೇನೂ ಕೀಟಲೆ ಮಾಡದೆ, ಹೆಚ್ಚು ಮಾತೂ ಆಡದೆ, decent ಆಗಿ ಇರುತ್ತಿದ್ದೆನಾದ್ದರಿಂದ ನನಗೆ 'ತುಂಬಾ ಒಳ್ಳೇ ಮಾಣಿ' ಎಂಬ ಬಿರುದೂ ಬಂದುಬಿಟ್ಟಿತ್ತು! ಆದರೆ ಕೊನೆಕೊನೆಗೆ ಆ ಪಟ್ಟ ಬೇರೆಯವರಿಗೆ ವರ್ಗಾವಣೆಯಾಗುವ ಸಂಭವ ಬಂತು. ಓದುವುದರಲ್ಲಿ dull ಹೊಡೆಯಲು ಶುರು ಮಾಡಿದೆ. ನನ್ನ ಉಳಿದ ಸ್ನೇಹಿತರಿಗೆ ಬೇರೆಬೇರೆ ಕ್ಷೇತ್ರಗಳಲ್ಲಿ 'ಮನ್ನಣೆ' ಸಿಗಲಿಕ್ಕೆ ಪ್ರಾರಂಭವಾಗಿತ್ತು. ಹೀಗಾಗಿ ನಾನು ಏನೂ ಇಲ್ಲದೆ, ತೀರ ಪೇಲವನಂತಾಗಿಬಿಟ್ಟೆ. ಇಲ್ಲೇ ಇದ್ದರೆ ನಾನು ಇನ್ನು ಕೊಳೆತುಹೋಗಿಬಿಡುತ್ತೇನೆ ಅನ್ನಿಸಲು ಶುರುವಾಯಿತು ನನಗೆ... So, ನನ್ನ ಡಿಪ್ಲೋಮಾ ಮುಗಿದದ್ದೇ ಬೆಂಗಳೂರಿಗೆ ಹತ್ತಿಬಿಟ್ಟೆ.
ಇಲ್ಲಿಗೆ ಬರುವ ಮುನ್ನ ಕಟ್ಟಿದ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ಅವನ್ನೆಲ್ಲಾ achieve ಮಾಡಿಕೊಳ್ಳಲು ಬೇಕಾದ ಸಮಯ ಮತ್ತು ಅವಕಾಶವನ್ನು ಈ ಬೆಂಗಳೂರಿನ busyನೆಸ್ಸು ತಿಂದುಹಾಕುತ್ತಿದೆ. ಮೆಜೆಸ್ಟಿಕ್ಕಿನ ಬಳಿಯ ಫ್ಲೈಓವರಿನ ಮೇಲೆ ನಿಂತು ಕೆಳಗೆ ನೋಡಿದರೆ ಜನಸಾಗರ. ಎಲ್ಲಾ ಸರಸರನೆ ಓಡಾಡುತ್ತಿದ್ದಾರೆ. ಇವರೆಲ್ಲ ಯಾರು? ಎಲ್ಲಿಗೆ ಹೋಗುತ್ತಿದ್ದಾರೆ? ಏನದು ತರಾತುರಿ? ಒಂದೂ ಅರ್ಥವಾಗುತ್ತಿಲ್ಲ. ಸುಮ್ಮನೇ ಎಲ್ಲರೂ ಓಡುತ್ತಿದ್ದಾರೆ. ಗಮನಿಸಿ ನೋಡಿದರೆ, ನಾನೂ ಓಡುತ್ತಿದ್ದೇನೆ -ಇವರಂತೆಯೇ, ಇವರೊಂದಿಗೇ. ಹೀಗೇ ಓಡುತ್ತಿದ್ದರೆ ಮುಂದೊಂದು ದಿನ ಎಲ್ಲಿಗೆ ಹೋಗಿ ಮುಟ್ಟುತ್ತೇನೋ ಅನ್ನಿಸಿದಾಗ ಭಯವಾಗುತ್ತದೆ.
***
I am sorry. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಕ್ಕೆ ಬಂದರೂ, ಅದೆಷ್ಟೇ ನಗರೀಕೃತಗೊಂಡಿದ್ದೇನೆಂದರೂ, ಇನ್ನೂ ಊರಲ್ಲೇ ಇದ್ದೇನೆ ಅನ್ನಿಸುತ್ತದೆ. ಅಮ್ಮನನ್ನೂ, ಊರನ್ನೂ, ಬೆಚ್ಚನೆಯ ಆ ಒಲೆಯ ಎದುರನ್ನೂ ಬಿಟ್ಟಿರಲು ಆಗುವುದೇ ಇಲ್ಲ. ಅಮ್ಮ ಕೊಟ್ಟುಕಳುಹಿಸಿದ ಹೋಳಿಗೆಯನ್ನು ಮೆಲ್ಲುವಾಗ ಎಲ್ಲಾ ನೆನಪಾಗುತ್ತದೆ...

Saturday, November 04, 2006
ಮಳೆಗಾಲದ ನೆನಪು
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ, ಸಂಜೆ ಹೊತ್ತಿಗೆ ಮಳೆ. ಮನಸು ಪ್ರಫುಲ್ಲವಾಗಿರಬೇಕೆಂದರೆ ಆಗಸ ಶುಭ್ರವಾಗಿರಬೇಕು. ಬೆಳಗ್ಗೆ ಎದ್ದು ಹೊರಬಂದಾಗ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು ಕಂಡರೆ ಆ ದಿನವೆಲ್ಲಾ ಏನೋ ಹುಮ್ಮಸ್ಸು. ಬೆಳಗು ಚೆನ್ನಾಗಿ ಆಗಲಿಲ್ಲ ಆ ದಿನವೆಲ್ಲ mood out.
ಇವತ್ತು ಬೆಳಗ್ಗೆ ಎದ್ದಾಗ ಎಂಟೂ ಕಾಲು. ಮಬ್ಬು ವಾತಾವರಣವಾದ್ದರಿಂದ ಎಚ್ಚರೇ ಆಗಲಿಲ್ಲ. ಮೊಬೈಲಿನ ಅಲಾರಾಂ ಕೂಗಿದರೂ ಹಾಗೇ ಮುಸುಕು ಹಾಕಿ ಮಲಗಿಕೊಂಡಿರುವ ಮನಸು. ಆದರೂ ಆಫೀಸಿಗೆ ಹೋಗಬೇಕಾದ್ದರಿಂದ ಎದ್ದೆ. ಸ್ನಾನಕ್ಕೆ ಅಣಿ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಊರಿಗೆ ಹೋಗಿದ್ದ ಗೆಳೆಯ ಶ್ರೀನಿಧಿಯಿಂದ ಎಸ್ಸೆಮ್ಮೆಸ್ಸು ಬಂತು:
"ಗುಡ್ಡೆಗೆ ದನ ಕಟ್ಟಿ ಬರಲು ಹೋಗಿದ್ದೆ.
ಚೆನ್ನಾದ ಐದಾರು ನವಿಲುಗರಿಗಳು ಸಿಕ್ಕಿದವು.
ಕೈಗೆ ಖುಷಿಯೇ ವಸ್ತುರೂಪ ಧರಿಸಿ ಸಿಕ್ಕಂತಾಯ್ತು"
-ಅಂತ ಇತ್ತು. ಮೆಸೇಜು ಓದಿಯಾದಮೇಲೆ ಮನಸ್ಸು ಉಲ್ಲಾಸದಿಂದ ತುಂಬಿಕೊಂಡಿತು. ಆ ಕ್ಷಣದಲ್ಲಿ ನವಿಲು, ನವಿಲುಗರಿ, ಗುಡ್ಡೆ (ನಮ್ಮೂರಿನ ಕಡೆ ಅದು ಹಿತ್ಲು ಅಥವಾ ಹಕ್ಲು), ದನ, ಅದನ್ನು ಮೇಯಲು ಬಿಟ್ಟುಬರಲು ಹೋಗುವುದು ....ಎಲ್ಲಾ ಕಣ್ಣಮುಂದೆ ಬಂದು, ಊರು ನೆನಪಾಗಿ, ಓಹ್! ನನ್ನ ದಿನವನ್ನು ಹಸನುಗೊಳಿಸಲು ಒಂದು ಮೆಸೇಜು ಸಾಕು. ಶ್ರೀನಿಧಿಯ ಕೈಗೆ ಸಿಕ್ಕ 'ಖುಷಿ' ಮೊಬೈಲಿನ ಮೂಲಕ ನನ್ನ ಕೈಗೆ ವರ್ಗಾವಣೆಯಾಗಿತ್ತು!
ಆಗಸದ ಬಣ್ಣ ನಮ್ಮ ಮೂಡನ್ನು ಹೇಗೆ ನಿರ್ಧರಿಸುತ್ತದೋ ಊರಿನ ನೆನಪೂ ಹಾಗೇ. ಈ ಬೆಂಗಳೂರಿನಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಿಗೆ ವ್ಯತ್ಯಾಸವೇ ಇಲ್ಲ. ಯಾವಾಗ ಬೇಕೆಂದರೆ ಅವಾಗ ಮಳೆ ಬರುತ್ತದೆ. ಮಳೆಗಾಲದಲ್ಲೂ ಬಿಸಿಲಿರುತ್ತದೆ, ಎಲ್ಲೋ ಸಂಜೆ ಹೊತ್ತಿಗೆ ಒಂದು ಮಳೆ ಬಂದು ಹೋಗುತ್ತದೆ. ಆದರೆ ಊರಿನಲ್ಲಿ ಮಳೆಗಾಲ ಎಂದರೆ ಹೀಗಲ್ಲ. ಊರಿನಲ್ಲಿ ಮಳೆಗಾಲ ಎಂದರೆ... ಧೋ ಎಂದು ದಿನವಿಡೀ ಸುರಿಯುತ್ತಿರುತ್ತದೆ ಮಳೆ.. ಮಳೆ ನೀರು ಕುಡಿದು ಕುಡಿದು ಧರೆ ತಣಿಯುತ್ತದೆ... ಎಲ್ಲೆಂದರಲ್ಲಿ ಜಲ ಒಡೆದು, ಜವಳಾಗಿ, ಕೆರೆ ತುಂಬಿ, ಕೋಡಿ ಬಿದ್ದು, ವಟರುಗಪ್ಪೆ ಕೂಗಿ, ಕಂಬಳಿಕೊಪ್ಪೆ ಹಾಕಿಕೊಂಡ ರೈತರು ಉಗ್ಗ ಹಿಡಿದು ಗದ್ದೆಗಳಿಗೆ ತೆರಳಿ, ತೋಟದಲ್ಲಿ ಕಳೆ ಹುಟ್ಟಿ, ಹಿತ್ತಿಲಲ್ಲಿ ಹುಲ್ಲು ಚಿಗುರಿ, ಅಪ್ಪ ಹುಲ್ಲು ಕೊಯ್ದು ತಂದು ಹಾಕಿ, ಅಮ್ಮ ಸೌತೆ-ಚೀನಿ-ಕುಂಬಳ ಬೀಜಗಳನ್ನು ಅಲ್ಲಲ್ಲಿ ಹಾಕಿ... ಓಹೋಹೋ..! ಊರಿನಲ್ಲಿ ಮಳೆಗಾಲ ಎಂದರೆ ಏನೆಲ್ಲ... ಹೊರಗೆ ಜೋರು ಮಳೆಯಾಗುತ್ತಿದ್ದರೆ ಒಳಗೆ ಹಲಸಿನಕಾಯಿ ಹಪ್ಪಳವನ್ನು ಕರಿದುಕೊಂಡೋ, ಗೇರುಬೀಜ ಸುಟ್ಟುಕೊಂಡೋ ಬೆಚ್ಚಗೆ ತಿನ್ನುವುದರಲ್ಲಿರುವ ಸ್ವರ್ಗಸುಖ ಈ ಬೆಂಗಳೂರಿನ ಯಾವ ಡಿಸ್ಕೋಥೆಕ್ಕಿನಲ್ಲಿದೆ?
ಅಂಥಾ ಸುಂದರ 'ಕೈಬರಹ'ದಂತಹ ಊರನ್ನು ಬಿಟ್ಟುಬಂದು ಈ 'ಪ್ರಿಂಟೆಡ್'ನಂತಹ ಬೆಂಗಳೂರಿನಲ್ಲಿ ಬದುಕುತ್ತಿರುವ ನಮ್ಮದು ಇದೆಂತಹ ದುರಾದೃಷ್ಟ... ಊರು, I miss you.

Thursday, November 02, 2006
ಹೆಸರು ಬದಲಾವಣೆ ಮತ್ತು ರಾಜ್ಯೋತ್ಸವ ಶುಭಾಷಯ
ನನ್ನ ಬ್ಲಾಗಾಭಿಮಾನಿಗಳೇ,
ನನ್ನ ಬ್ಲಾಗಿನ ಹೆಸರನ್ನು ಬದಲಿಸಿದ್ದೇನೆ. 'ಬರೆಯುವುದೆಲ್ಲಾ ಕನ್ನಡದಲ್ಲಿ, ಟೈಟಲ್ ಮಾತ್ರ ಯಾಕೆ ಇಂಗ್ಲಿಷಿನಲ್ಲಿ?' ಅಂತ ಕೆಲವು ಗೆಳೆಯರು ಆಕ್ಷೇಪಿಸಿದ್ದರು. ನಾನೋ, ಈ ಬ್ಲಾಗ್ ಶುರುಮಾಡುವಾಗ ಅಷ್ಟೊಂದು ಯೋಚಿಸಿರಲಿಲ್ಲ. ಆದರೆ ಇವರೆಲ್ಲಾ ಹೇಳಿದ ಮೇಲೆ ನನಗೂ ಹೌದು ಅನ್ನಿಸಿತು. ಅಲ್ಲದೇ ಸುವರ್ಣ ಕರ್ನಾಟಕದ ಸಂಭ್ರಮ ಬೇರೆ. ಈ ಸುಸಂದರ್ಭದಲ್ಲಿ ನನ್ನ ಬ್ಲಾಗಿನ ಹೆಸರನ್ನು ಕನ್ನಡೀಕರಿಸಲು ತುಂಬಾ ಖುಷಿಯಾಗುತ್ತಿದೆ.
ಅಂದಹಾಗೆ, ಈ ಟೈಟಲ್ 'ಮೌನಗಾಳ' -ನಾನು ತುಂಬಾ ಇಷ್ಟ ಪಡುವ ಕವಯತ್ರಿ ಪ್ರತಿಭಾ ನಂದಕುಮಾರರ ಕವನವೊಂದರಿಂದ ಆಯ್ದುಕೊಂಡದ್ದು. 'ಕವಿ ಕಾಲಾತೀತದಲ್ಲಿ ಗಾಳ ಹಾಕಿ ಕೂತ ಬೆಸ್ತ' ಎನ್ನುತ್ತಾರೆ ಎ.ಕೆ. ರಾಮಾನುಜನ್. ಕವಿತೆಗಳ ವಿಷಯದಲ್ಲಂತೂ ಇದು ಅಕ್ಷರಶಃ ಸತ್ಯ. ಕರೆದಾಗ ಬಾರದೇ, ತಡಕಾಡಿದಾಗ ಎಡತಾಕದೇ ಚಡಪಡಿಸುವಂತೆ ಮಾಡುತ್ತದೆ ಕವಿತೆ. ಮೂಡಿಲ್ಲದಾಗ ಮೂಡುವುದೇ ಇಲ್ಲ ಕವಿತೆ. ಅದು ಮೂಡಣ ಮನೆಯ ಮುತ್ತಿನ ನೀರನ್ನು ಆಕಸ್ಮಿಕವಾಗಿ ನೋಡಿದಾಗ ತನ್ನಿಂದ ತಾನೇ ಹೊಮ್ಮಿಬರುತ್ತದೆಯೇ ಹೊರತು, ಕವಿತೆ ಬರೆಯಲೆಂದೇ ಮನೆಯ ಮಾಡನ್ನು ಏರಿ ಮೂಡುತ್ತಿರುವ ಸೂರ್ಯನನ್ನು ನಿರೀಕ್ಷಿಸುತ್ತಾ ಕುಳಿತರೆ ಹತ್ತಿರವೇ ಸುಳಿಯದು. ನದಿಯ ತೀರದಲ್ಲಿ, ನೀರಿನಲ್ಲಿ ಕಾಲಿಳಿಸಿ ಕುಳಿತಿರಲು, ಪಕ್ಕದಲ್ಲೊಂದು ಜೀವವಿರಲು, ಮೀನಾಗಿ ಬಂದು ಕಾಲ್ತೊಡಕಾಗುತ್ತದೆ ಕವಿತೆ. ಗದ್ಯದ ವಿಷಯದಲ್ಲೂ ಇದು ಸತ್ಯ.
ಇದೇ ಹೆಸರನ್ನು ಆಯಲು ಮತ್ತೊಂದು ಕಾರಣವಿದೆ. ನಾನೊಬ್ಬ ಮೌನಿ. ಮಾತು ತುಂಬಾ ಕಮ್ಮಿ. ಗುಂಪಿನಲ್ಲಂತೂ ಮಾತೇ ಆಡುವುದಿಲ್ಲ. ನನ್ನ ಗೆಳೆಯರ ಆಕ್ಷೇಪವೂ ಅದೇ: ನೀನು ಹೀಗೆ ಮಾತೇ ಆಡದಿದ್ರೆ ಹ್ಯಾಗೆ? ಆದರೆ ನನಗೆ ಮಾತಿಗಿಂತ ಮೌನ ಇಷ್ಟ. ಯಾವುದೋ ಒಂದು ನಿರ್ದಿಷ್ಟ ವಿಷಯ ಕೊಟ್ಟರೆ ಮಾತಾಡಿಯೇನು, ಅಥವಾ ನನ್ನ ಜೊತೆ ಯಾರಾದರೂ ಒಬ್ಬರೇ ಇದ್ದಾಗ ಅವರೊಂದಿಗೆ ತುಂಬಾ ಮಾತಾಡುತ್ತೇನೆ, ಆದರೆ ಗುಂಪಿನಲ್ಲಿ ಮಾತ್ರ ನಾನು ಮಾತಾಡಲೊಲ್ಲೆ. ಮಾತಾಡಲು ಬರುವುದಿಲ್ಲ ಅಂತಲ್ಲ, (ಸ್ಕೂಲು, ಕಾಲೇಜುಗಳಲ್ಲಿ ಆಶುಭಾಷಣ, ಚರ್ಚಾಸ್ಪರ್ಧೆಗಳಲ್ಲಿ ನನಗೇ ಬರುತ್ತಿದ್ದುದು ಫಸ್ಟ್ ಪ್ರೈಜ್ ಕಣ್ರಪಾ!), ಆದರೆ 'ಆಡಬಾರದು' ಅಂತ ತೀರ್ಮಾನಿಸಿರುವಾಗ ಹೇಗೆ ಆಡಲಿ?! 'ಹೀಗಿದ್ದರೆ ನೀನು ಉದ್ಧಾರವಾಗೊಲ್ಲ' ಎಂಬ ಎಚ್ಚರಿಕೆಯನ್ನು ಮನೆಮಂದಿಯಿಂದಲೂ, ಸ್ನೇಹಿತರಿಂದಲೂ ಪದೇಪದೇ ಕೇಳುತ್ತಾ ಬಂದಿದ್ದೇನೆ, ಆದರೂ ನಾನು ನನ್ನ ನಿರ್ಧಾರ ಬದಲಿಸಿಲ್ಲ ಮತ್ತು ಆ 'ಉದ್ಧಾರ'ದತ್ತ ದಿನೇದಿನೇ ದಾಪುಗಾಲಿಡುತ್ತಲೇ ಇದ್ದೇನೆ. ಮಾತು ಬೆಳ್ಳಿ, ಮೌನ ಬಂಗಾರ ಅಲ್ವಾ?
ನಿನ್ನೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಸಮಾರಂಭದಲ್ಲಿ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾನು ಇದ್ದೆ. ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮ ಎಂಬಂತೆ ತೋರಲೇ ಇಲ್ಲ. ಮೊದಲಿಗೆ ಹೆಲಿಕಾಪ್ಟರ್ ಎಲ್ಲರ ಮೇಲೂ ಗುಲಾಬಿಯ ಪುಷ್ಪವೃಷ್ಠಿಗೈದು ಹೋಯಿತು. ನಂತರ ಈ ಸಂಭ್ರಮಕ್ಕಾಗಿಯೇ ಎಂಬಂತೆ ಮೋಡಗಳು ಮಳೆ ಸುರಿಸಿದವು. ಬಿಸಿಲು-ಮಳೆ ಹೊಯ್ದಿದ್ದರಿಂದ ಆಗಸದಲ್ಲಿ ಕಾಮನಬಿಲ್ಲು ಮೂಡಿ ಸುವರ್ಣ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಕೃತಿಯೇ ಸಿಳ್ಳೆ ಗಿಟ್ಟಿಸಿತು. ನಂತರ ಯಕ್ಷಗಾನ, ಡೊಳ್ಳುಕುಣಿತ, ಕರಡಿ ಮಜಲು, ಕೋಲಾಟ, ಅದೆಷ್ಟೋ ಸಾವಿರ ಮಕ್ಕಳಿಂದ ನೃತ್ಯ, ವೃಂದಗಾನ..... ಓಹೋಹೋ! ಒಂದೇ ಎರಡೇ? ರಾಜ್ಯೋತ್ಸವ, ಏಕೀಕರಣ ಪ್ರಶಸ್ತಿಗಳ ಪ್ರಧಾನವಾಯಿತು. ಮುಖ್ಯಮಂತ್ರಿಗಳು ಅದ್ಭುತವಾದ ಭಾಷಣವೊಂದನ್ನು ಓದಿ ಹೇಳಿದರು. ಕೊನೆಗೆ ಲೇಸರ್ ಬೆಳಕಿನ ಹೊಯ್ದಾಟ, ಬಾಣ-ಬಿರುಸುಗಳ ಢಾಂಢೂಂ... "ಕನ್ನಡಕ್ಕೇ" "ಕರ್ನಾಟಕಕ್ಕೇ" "ಕನ್ನಡಾಂಬೆಗೇ" ಎಂದು ಕೂಗಿದಾಗ ನಮ್ಮ ಎದೆಯಾಳದಿಂದ ಹೊಮ್ಮಿಬರುತ್ತಿದ್ದ "ಜೈ"ಕಾರದಲ್ಲಿ ಅದೆಷ್ಟು ಸಂಭ್ರಮವಿತ್ತು! ಅದೆಷ್ಟು ಹೆಮ್ಮೆಯಿತ್ತು!
ಓ ಕನ್ನಡಮ್ಮ, ನಿನಗೆ ನಾನು ಚಿರಋಣಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಕನ್ನಡ ಬರುವವರೊಂದಿಗೆ ಕನ್ನಡದಲ್ಲೇ ಮಾತಾಡುವ ಪಣ ತೊಡೋಣ.
ಧನ್ಯವಾದಗಳು.

Subscribe to:
Posts (Atom)