Monday, April 26, 2010

ನಾಲ್ಕು ವರ್ಷಗಳ ಕೊನೆಗೆ ನಾಲ್ಕು ಮಾತು

ಕೈಯಲ್ಲಿ ಅಕ್ಷರಗಳ ಮೂಟೆಯಿದೆ. ಅದನ್ನು ತೂಗಲಿಕ್ಕೆ, ಅದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವೇ ಇಲ್ಲ. ಏ-ಫೋರ್ ಅಳತೆಯ, ಅತ್ಯುತ್ತಮ ಗುಣಮಟ್ಟದ ಹಾಳೆ ಬಳಸಿದ, ಮುನ್ನೂರಾ ಇಪ್ಪತ್ತು ಪುಟಗಳ ಈ ಬೃಹತ್ ಪುಸ್ತಕದ ಪುಟಗಳನ್ನು ತೆರೆದರೆ, ಕನ್ನಡ ಸಾರಸ್ವತ ಲೋಕದ ಅಷ್ಟೂ ಮುಂಚೂಣಿ ಮಂದಿ ಅಲ್ಲಿದ್ದಾರೆ. ಕುವೆಂಪು-ಬೇಂದ್ರೆ-ಮಾಸ್ತಿಯವರ ಕೈಬರಹಗಳನ್ನು ನೋಡಿ ತೆರೆದ ಪುಟದಲ್ಲೇ ಪುಳಕಗೊಂಡು ನಿಂತುಬಿಡುವ ಮನವನ್ನು ತಹಬಂದಿಗೆ ತಂದುಕೊಳ್ಳುತ್ತಾ ಮುಂದೆ ಹೋದರೆ, ಅನಂತಮೂರ್ತಿ, ಕಾರ್ನಾಡ, ಕಾಯ್ಕಿಣಿ, ಚಿತ್ತಾಲ, ಕಾಗಿನೆಲೆ, ರಶೀದ್, ಸುನಂದಾ, ಜೋಗಿ, ನುಗಡೋಣಿ, ವಸುಧೇಂದ್ರ, ವೈದೇಹಿ, ಪ್ರತಿಭಾ, ಕುಂವೀ, ಎಚ್ಚೆಸ್ವಿ, ಕಂಬಾರ, ಬಿ‌ಆರ್‌ಎಲ್.... ಹೀಗೆ ನೀವು ಅತಿ ಪ್ರೀತಿ ಪಟ್ಟು ಓದುವ ಅಷ್ಟೂ ಬರಹಗಾರರು ಇಲ್ಲಿ ಒಟ್ಟಿಗೇ ಎದುರುಗೊಂಡು ನಿಮಗೆ ಎಚ್ಚರ ತಪ್ಪುವಂತೆ ಮಾಡುತ್ತಾರೆ. ನಿಮಗೆ ಇಷ್ಟವಾಗುವ ಎಲ್ಲದೂ ಇಲ್ಲಿದೆ. ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಪರಿಚಯ, ಚಿತ್ರ, ಸಂವಾದ, ಲೇಖನ.... ಯಾವುದೇ ಭಾಷೆಯ ಸಾಹಿತ್ಯ ಪ್ರಾಕಾರವೊಂದರಲ್ಲಿ ಏನೇನು ಇರಲಿಕ್ಕೆ ಸಾಧ್ಯವೋ ಅಷ್ಟೂ ಇಲ್ಲಿವೆ. ಪುಟಗಳ ಸಂಯೋಜನೆಯಂತೂ ಅದೆಷ್ಟು ಮುದ್ದಾಗಿದೆಯೆಂದರೆ, ಓದುವುದು ಹಾಗಿರಲಿ; ಈ ಪುಸ್ತಕವನ್ನು ನೋಡಿ ಮುಗಿಸಲಿಕ್ಕೇ ಒಂದು ತಾಸು ಬೇಕು! ಕಷ್ಟಸಾಧ್ಯವಲ್ಲ; ವರ್ಣಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿನ ಪುಸ್ತಿಕೆಯೊಂದನ್ನು ಕೈಗೆ ಬಂದಿದೆ. ಇಂಥದೊಂದು ಅದ್ಭುತ ಕೆಲಸವೊಂದು ಕನ್ನಡದಲ್ಲಿ ಆಗಿದೆ, ಅದರ ಬಿಡುಗಡೆಗೆ ನಾವು ಸಾಕ್ಷಿಯಾಗಿದ್ದೇವೆ, ಆ ಗ್ರಂಥವನ್ನು ಗರಿಗರಿಯಾಗಿ ಪಡೆಯುವಲ್ಲಿ - ಅದರ ಮೈ ಸವರುವಲ್ಲಿ - ಪುಟಗಳ ಹೊಸ ಪರಿಮಳದೊಂದಿಗೆ ಓದುವ ಆನಂದದಲ್ಲಿ ಭಾಗಿಯಾಗಿದ್ದೇವೆ ಎನ್ನುವುದು ಬಹುಶಃ ನಮ್ಮ ಭಾಗ್ಯ ಎಂತಲೇ ನನಗನಿಸುತ್ತದೆ. ಇಷ್ಟೊಂದು ಖುಶಿ-ಉದ್ವೇಗಗಳನ್ನು ನಮಗೆ ಕೊಟ್ಟಿರುವ, ಇಂಥದೊಂದು ಹೆಮ್ಮೆ ಪಡಬಹುದಾದ ಅಕ್ಷರಗುಚ್ಛವನ್ನು ಕೈಗಿಟ್ಟಿರುವ ವಿವೇಕ ಶಾನಭಾಗ್ ಮತ್ತು ಬಳಗದವರಿಗೆ ಹ್ಯಾಟ್ಸ್ ಆಫ್! ಇದು ‘ದೇಶ ಕಾಲ’ ಪತ್ರಿಕೆಯ ವಿಶೇಷ ಸಂಚಿಕೆ.

* * *

ಪ್ರತಿಯೊಂದರಲ್ಲೂ ಮನರಂಜನೆಯೇ ಮೂಲಮಂತ್ರವಾಗಿರುವ ಇಂದಿನ ಮನುಜ ಮನಸ್ಥಿತಿಯ ನಡುವೆ ಇಂಥ ಅಪರೂಪಗಳೇ ಇರಬೇಕು ನಮ್ಮನ್ನು ಇನ್ನೂ ಸೃಜನಶೀಲವಾಗಿ ಇಟ್ಟಿರುವ ಆಕರಗಳು. ಒಂದು ಕತೆ ಓದಿದಾಗ ಆಗುವ ಖುಶಿ, ಒಂದು ಕವಿತೆ ಓದುವಾಗ ಆಗುವ ಅನುಭವ, ಒಂದು ಕಾದಂಬರಿ ಓದಿ ಮುಗಿಸಿದಾಗ ಆಗುವ ಬದಲಾವಣೆ, ಒಂದು ಒಳ್ಳೆಯ ಸಿನೆಮಾ ನೋಡಿದಾಗ ಆಗುವ ಆನಂದ, ಒಂದು ಅತ್ಯುತ್ತಮ ಕಲಾಕೃತಿ ನೋಡುತ್ತಾ ಮೈಮರೆಯುವ ಸುಖ, ಒಂದ್ಯಾವುದೋ ಹಾಡು ಕೇಳುತ್ತಾ ಕಳೆದುಹೋಗುವುದರಲ್ಲಿನ ಮಜ... ಇವನ್ನು ಅನುಭವಿಸದ ಮನುಷ್ಯ ನಿಜಕ್ಕೂ ಅದೃಷ್ಟಹೀನ. ಇವು ಕೇವಲ ನಮ್ಮ ದಿನದ ಭವಗಳನ್ನು ಗೆಲ್ಲುವ ಮನರಂಜನೆಯ ಸಾಧನಗಳಾಗಿರದೆ ನಮ್ಮ ನಾಳೆಯ ನಡಿಗೆಗೆ ಕಿಂಚಿತ್ತು ಉತ್ಸಾಹ ತುಂಬುವ ಮಾನಸೋಲ್ಲಾಸದಾಯಕ ಔಷಧಿಗಳಾಗಿವೆ.

ಇವನ್ನು ನಮಗೆ ಕೊಡಮಾಡುವ ಮಂದಿ ನಮ್ಮಿಂದ ಆದಷ್ಟೂ ದೂರವಿದ್ದಷ್ಟೂ ಒಳ್ಳೆಯದು ಅಂತ ಗೆಳೆಯ ಕಾರ್ತಿಕ್ ಪರಾಡ್ಕರ್ ಬರೆದಿದ್ದ. ಎಷ್ಟು ಸತ್ಯ! ಲೇಖಕನಿರಬಹುದು, ನಟನಿರಬಹುದು, ಆಟಗಾರನಿರಬಹುದು, ಹಾಡುಗಾರನಿರಬಹುದು- ಆತ ನಮ್ಮಿಂದ ತುಸು ದೂರದ ವೇದಿಕೆಯ ಮೇಲೇ ನಿಂತು ಯಕ್ಷಿಣಿ ಮಾಡುತ್ತಿರಬೇಕು. ಆಗಲೇ ಅದು ಚಂದ. ಆಗಲೇ ಅದಕ್ಕೊಂದು ಮಾಂತ್ರಿಕ ಪುಳಕ. ಆಗಲೇ ಅದರೆಡೆಗೊಂದು ಕಾತರ. ಅದೇ ಆ ವ್ಯಕ್ತಿಯೊಂದಿಗೆ ನಾವು ಒಡನಾಡುತ್ತಿದ್ದೆವಾದರೆ ಅಥವಾ ಆತನ ವೈಯಕ್ತಿಕ ಬದುಕಿನ ಫ್ಯಾಂಟಸಿಗಳು ಜಾಹೀರಾಗಿಬಿಟ್ಟವೆಂದರೆ ಆಗುವ ನಿರಾಶೆಯಿದೆಯಲ್ಲ, ಅದು ಹೇಳತೀರದ್ದು.

ಮೊನ್ನೆ ರಾಜಾಜಿನಗರದ ಟಿವಿ ಶೋರೂಮ್ ಒಂದನ್ನು ಹಾದುಹೋಗುತ್ತಿದ್ದೆ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಚಾಂಪಿಯನ್ಸ್ ಲೀಗ್ ಅರ್ಹತಾ ಸುತ್ತಿನ - ಆರ್‌ಸಿಬಿ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಿನ ಪಂದ್ಯ ನಡೆಯುತ್ತಿತ್ತು. ಶೋರೂಮಿನವನು ರಸ್ತೆಗೆ ಅಭಿಮುಖವಾಗಿ ಇಟ್ಟಿದ್ದ ದೊಡ್ಡ ಸ್ಕ್ರೀನಿನ ಟೀವಿಯಲ್ಲಿ ಈ ಪಂದ್ಯವನ್ನು ನೋಡುತ್ತ ಸುಮಾರು ಜನ ಫುಟ್‌ಪಾತಿನಲ್ಲಿ ನಿಂತಿದ್ದರು. ನಾನೂ ನಿಂತುಕೊಂಡೆ. ಹಿಂದಿನ ದಿನವಷ್ಟೇ ಐಪಿ‌ಎಲ್‌ನಲ್ಲಿನ ಹಗರಣಗಳು, ಮ್ಯಾಚ್ ಫಿಕ್ಸಿಂಗಿನ ಅವ್ಯವಹಾರಗಳು ಸುದ್ದಿಯಾಗಿದ್ದವಷ್ಟೇ? ಡೆಕ್ಕನ್ ಚಾರ್ಜರ್ಸ್ ತಂಡದ ವಿಕೆಟ್ಟುಗಳು ಒಂದರ ಹಿಂದೆ ಒಂದು ಬೀಳತೊಡಗಿದಂತೆ ಅಲ್ಲಿದ್ದ ಗುಂಪಿನಲ್ಲಿದ್ದವನೊಬ್ಬ "ಥೂ, ಎಲ್ಲಾ ಫಿಕ್ಸಿಂಗು ಕಣ್ರೋ.. ಎಲ್ಲಾ ಮೋಸ. ನಾವ್ ಒಳ್ಳೇ ಬಕರಾಗಳ ಥರ ಅವರ ವಿಕೆಟ್ ಹೋದ್ರೆ ಖುಶಿ ಪಡ್ತಾ ನಮ್ಮವರದ್ದು ಹೋದ್ರೆ ಬೇಜಾರ್ ಮಾಡ್ಕೊಳ್ತಾ, ಅವರು ಸೋತ್ರೆ ಪಟಾಕಿ ಹೊಡೀತಾ ನಮ್ಮವರು ಸೋತ್ರೆ ಸಿಗರೇಟು ಸೇದ್ತಾ ಮನಸಿಗೆಲ್ಲ ಹಚ್ಕೊಂಡು ಫೀಲ್ ಮಾಡ್ಕೊಳ್ತಾ ಇರ್ತೀವಿ. ಆದ್ರೆ ಅಲ್ಲಿ ನಡೆಯೋದು ಎಲ್ಲಾ ಮುಂಚೇನೇ ಡಿಸೈಡೆಡ್ಡು. ಕರ್ಮ, ನಮಗೆ ಬುದ್ಧಿ ಇಲ್ಲ" ಅಂತಂದು, ಗುಂಪಿನಿಂದ ಅಗಲಿ ದಢದಢನೆ ನಡೆದು ಹೋಗಿಬಿಟ್ಟ!

ಕ್ರೀಡೆ- ಆಡುವವನಿಗೆ ಮಾತ್ರ ಪಂದ್ಯ, ದುಡ್ಡು ತರುವ ಜಾಬ್; ನೋಡುವವನಿಗೆ ಯಾವತ್ತೂ ಮನರಂಜನೆ. ಸಿನೆಮಾ ಅಥವಾ ಧಾರಾವಾಹಿ- ಅಭಿನೇತ್ರುವಿಗೆ ಅದೊಂದು ವೃತ್ತಿ, ಅನ್ನ ಕೊಡುವ ಉದ್ಯಮ; ಅದೇ ನೋಡುವವನಿಗೆ ಅದರಲ್ಲಿನ ಕತೆ, ತಿರುವು, ಸಂಭಾಷಣೆ -ಎಲ್ಲಾ ನಿತ್ಯಸಂತೋಷ ಕರುಣಿಸುವ ಸಾಧನಗಳು. ಕತೆ, ಕವಿತೆ, ಹಾಡು- ಅವುಗಳ ಕರ್ತೃವಿಗೆ ತನ್ನ ಸೃಜನಶೀಲತೆಯನ್ನು ಹೊರಹಾಕುವ ಮಾರ್ಗಗಳು; ಅದೇ ಅವನ್ನು ಓದುವ-ಆಲಿಸುವ ಸಾಮಾನ್ಯ ಮನುಷ್ಯನಿಗೆ ಅವು ಮನಸ್ಸಂಪ್ರೀತಿಗೊಳಿಸುವ ಕೇಂದ್ರಗಳು. ಆದರೆ ನಮ್ಮನ್ನು ಮರುಳು ಮಾಡುವ ಇವೆಲ್ಲಕ್ಕೂ ಕೇವಲ ಯಕ್ಷಿಣಿಗಾರನ ಮೇಲೆ ಬೀಳುವ ಒಂದು ಕಲ್ಲು ಮಸುಕು ತೊಡಿಸಿಬಿಡುತ್ತದೆ. ನಮ್ಮನ್ನು ಎಚ್ಚರಗೊಳಿಸುತ್ತದೆ, ಆದರೆ ಅಷ್ಟೇ ಮಟ್ಟಿಗೆ ಅದರಿಂದಾಗಿ ನಾವು ಅನುಭವಿಸುತ್ತಿದ್ದ ಮುಗ್ಧಸುಖ ಇಲ್ಲವಾಗುತ್ತದೆ.

* * *

ಊರಲ್ಲಿದ್ದಾಗ, ಮನೆಗೆ ಬರುತ್ತಿದ್ದ ಪತ್ರಿಕೆಗಳಲ್ಲಿರುತ್ತಿದ್ದ ಕತೆಗಳು, ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳನ್ನು ಓದುವಾಗ ನನ್ನಲ್ಲಿ ಇರುತ್ತಿದ್ದ ಮುಗ್ಧತೆ ಈಗ ಇಲ್ಲವಾಗಿದೆ. ಅದಕ್ಕೂ ಮುಂಚೆ ಬಾಲಮಂಗಳ-ಚಂದಮಾಮ ಓದುತ್ತಿದ್ದಾಗಿನ ದಿನಗಳಂತೂ ಬಿಡಿ. ಡಿಂಗ, ಫಕ್ರು, ಲಂಬೋದರರು ನನ್ನ ಹೀರೋಗಳಾಗಿದ್ದರು. ಕಿಂಕಿಣಿ ಹಕ್ಕಿ ನನ್ನ ಫ್ರೆಂಡ್ ಆಗಿತ್ತು. ವಿಕ್ರಮಾದಿತ್ಯನ ರಾಜಧಿರಿಸು ಕಣ್ಮುಂದೆ ಬರುತ್ತಿತ್ತು. ಬೇತಾಳ ರಾತ್ರಿಯ ಕನಸಲ್ಲೂ ಬಂದು ಎಚ್ಚರಾಗಿಸುತ್ತಿತ್ತು. ಆಮೇಲೆ ಸ್ವಲ್ಪ ದೊಡ್ಡವನಾದಮೇಲೆ ಓದತೊಡಗಿದ ಕತೆಗಳೆಲ್ಲ ಸುಮ್ಮನೆ ಖುಶಿ ಕೊಡುತ್ತಿದ್ದವು. ಕಾದಂಬರಿಯೊಂದನ್ನು ಓದಿ ಅದರ ನಾಯಕ/ನಾಯಕಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ, ಹಾಗೆಯೇ ಆಗುವ ಕನಸು ಕಾಣುತ್ತಿದ್ದೆ. ಯಾವುದೋ ಪಾತ್ರವನ್ನು ನನ್ನೊಂದಿಗೆ ಹೋಲಿಸಿ ಖುಶಿಸಬಹುದಾದ-ದುಃಖಿಸಬಹುದಾದ ಸಾಧ್ಯತೆ ಇತ್ತು ಆಗ.

ಆದರೆ ದೊಡ್ಡವನಾಗುತ್ತ ಹೋದಂತೆ, ಮುಗ್ಧತೆಯನ್ನು ಕಳೆದುಕೊಳ್ಳುತ್ತ ಹೋದಂತೆ - ದಿನಗಳಲ್ಲಿದ್ದ ಸ್ವಾರಸ್ಯವೂ ಇಲ್ಲವಾಗತೊಡಗಿದೆ. ಬಹುಶಃ ಬದುಕೇ ಬೇರೆ ಕಲೆಯೇ ಬೇರೆ ಎಂಬ ಅರಿವೇ ಇದಕ್ಕೆ ಕಾರಣವಿರಬೇಕು. ಈಗ ಎಲ್ಲವೂ ಸ್ವಲ್ಪೇ ದಿನಕ್ಕೆ, ಸ್ವಲ್ಪೇ ಹೊತ್ತಿಗೆ ಬೇಸರ ಬರುತ್ತದೆ. ಬೆಂಗಳೂರು, ಕೆಲಸ, ಟ್ರಾಫಿಕ್ಕು, ಮಾಲುಗಳು, ಶಾಪಿಂಗು, ಪಾರ್ಟಿಗಳು, ಟಿವಿ, ಇಂಟರ್ನೆಟ್ಟು, ಮೊಬೈಲು, ಫ್ಲರ್ಟಿಂಗು, ಬ್ಲಾಗಿಂಗು, ಕಾರ್ಟೂನು, ಪಾರ್ನು.... ಎಲ್ಲವೂ ಬೇಸರ ಬಂದು - ಅಥವಾ ಕೇವಲ ಆ ಕ್ಷಣಕ್ಕೆ ಸುಖ ಕೊಡುವ, ಮುಗುಳ್ನಗೆ ಹೊಮ್ಮಿಸುವ ಸಾಧನಗಳಷ್ಟೇ ಆಗಿ ಉಳಿದುಬಿಟ್ಟಿರುವ ಈ ದಿನಗಳಲ್ಲಿ, ನನ್ನನ್ನು ಇನ್ನೂ ಆಶಾವಾದಿಯಾಗಿಯೇ ಉಳಿಸಲು ಇರುವ ಉಪಕರಗಳೇನು? ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದಂತೆ ಹೆಚ್ಚೆಚ್ಚು ಗೊಂದಲಗಳಿಗೀಡಾಗುತ್ತಿರುವ ನನ್ನನ್ನು ಕೂರಿಸಿಕೊಂಡು ಸಮಾಧಾನ ಹೇಳುವ ಪ್ರವಾದಿ ಹಿಮಾಲಯದ ಯಾವ ತಪ್ಪಲಲ್ಲಿದ್ದಾನೆ?

ಕನಿಷ್ಟ ನನ್ನ ವಿಷಯದಲ್ಲಿ ಇನ್ನೂ ಸಾಹಿತ್ಯ ಈ ಕೆಲಸವನ್ನು ಮಾಡುತ್ತಿದೆ. ಮೊದಲಿನ ಮುಗ್ಧತೆಯಿಂದಲ್ಲದಿದ್ದರೂ, ಈಗಲೂ ಕತೆ ಓದಿ ಕಣ್ತುಂಬಿಸಿಕೊಳ್ಳುತ್ತೇನೆ. ಕವಿತೆಯ ಕಾಡುವಿಕೆಗೆ ಮನಸೋಲುತ್ತೇನೆ. ಪ್ರಬಂಧದ ಗುಂಗನ್ನು ಮನಸಾ ಅನುಭವಿಸುತ್ತೇನೆ. ಪ್ರವಾಸಕಥನದ ನಾಯಕನೊಂದಿಗೆ ಗುಡ್ಡವೇರುತ್ತೇನೆ. ಲಹರಿಗಳ ಝರಿಯಲ್ಲಿ ತೇಲುತ್ತೇನೆ.

ಈ ನನ್ನ ಸಂತೋಷವಾದರೂ ಚಿರವಾಗಿರಲಿ. ಯಕ್ಷಿಣಿಗಾರನ ಇಂದ್ರಜಾಲ ಮೋಡಿ ಮಾಡುತ್ತಿರಲಿ ಎಂಬುದಷ್ಟೇ ಸಧ್ಯದ ಪ್ರಾರ್ಥನೆ.

* * *

ಬ್ಲಾಗು ಶುರುಮಾಡಿ ನಾಲ್ಕು ವರ್ಷ ಆಗಿದೆ! ಎಲ್ಲದರಂತೆ ಇದರಲ್ಲೂ ಉತ್ಸಾಹ ಕಮ್ಮಿಯಾಗಿದ್ದು ನಿಜ. ಈ ವರ್ಷ ನಾನು ಮಾಡಿದ ಒಟ್ಟು ಪೋಸ್ಟುಗಳ ಸಂಖ್ಯೆ ಕೇವಲ ಮೂವತ್ತು. ಅದರಲ್ಲಿ ಕವಿತೆಗಳೇ ಹನ್ನೊಂದು. ಈಗಲೂ ಪೆನ್ನು ಹಿಡಿದರೆ ಯಾಕೋ ಕವಿತೆಯೇ ಮೂಡುತ್ತದೆ. ಉಳಿದಂತೆ ಆರು ಪ್ರಬಂಧ, ಮೂರ್ನಾಲ್ಕು ಲಹರಿ, ಒಂದಷ್ಟು ಸಾಂದರ್ಭಿಕ ಬರಹಗಳನ್ನು ಬರೆದಿದ್ದೇನೆ. ಈ ವರ್ಷ ಒಂದೇ ಒಂದೂ ಕತೆ ಬರೆಯಲಾಗಲಿಲ್ಲ ಎಂಬುದು ಸಾಧನೆ! ಹಾಗೆಯೇ ಈ ವರ್ಷ ಒಂದೇ ಒಂದು ಚಾರಣವನ್ನೂ ಮಾಡಲಿಲ್ಲ ಎಂಬುದೂ! ‘ಹೊಳೆಬಾಗಿಲು’ -ನನ್ನ ಮೊದಲ ಪ್ರಬಂಧ ಸಂಕಲನ ಹೊರಬಂದಿದ್ದು, ಸುಮಾರು ಜನ ಅದನ್ನೋದಿ ‘ಚನಾಗಿದೆ’ ಅಂದದ್ದು ಖುಶಿ ಕೊಟ್ಟ ಸಂಗತಿ. ‘ಪ್ರಣತಿ’ಯಿಂದಲೂ ಈ ವರ್ಷ ಹೆಚ್ಚು ಕಾರ್ಯಕ್ರಮ ಮಾಡಲಾಗಲಿಲ್ಲ. ನನ್ನ-ಶ್ರೀನಿಧಿಯ ಪುಸ್ತಕ ಬಿಡುಗಡೆ, ನಂತರದ್ದೊಂದು ಗಮಕ ಕಾರ್ಯಕ್ರಮ ಬಿಟ್ಟರೆ, ಆಮೇಲೇನೂ ನಡೆದಿಲ್ಲ. ಕನಿಷ್ಟ ನಮ್ಮ ಟೀಮ್‍ಗೆ ತಿಂಗಳಿಗೊಮ್ಮೆ ಒಟ್ಟಿಗೆ ಸೇರಲೂ ಆಗುತ್ತಿಲ್ಲವೆಂಬುದು ಕಹಿಸತ್ಯ.

ಆದರೂ ದಕ್ಕಿರುವ ಗೆಳೆಯರ ಪ್ರೀತಿ ಹಾಗೆಯೇ ಇದೆ ಎಂಬುದೊಂದು ಸಮಾಧಾನ. ಸಿಗುತ್ತಿರುವ ಹೊಸ ಗೆಳೆಯರು ಮತ್ತು, ನಾಳೆ ಏನಾದರೂ ಆಗಿಬಿಡಬಹುದೇನೋ ಎಂಬ ಕ್ಷೀಣ ಆಸೆಯೊಂದಿಗೆ ಬದುಕು ಮುಂದುವರೆದಿದೆ. ಬಿರುಬಿಸಿಲಿನ ದಿನಗಳಲ್ಲೇ ಸಂಜೆಹೊತ್ತಿಗೊಂದು ಸಣ್ಣಮಳೆ, ಕೆಲವೊಮ್ಮೆ ಗಾಳಿ - ಬೀಳುವ ಮರಗಳು, ಗುಡುಗಿಗೆ ನಡುಗುವ - ಮಿಂಚಿಗೆ ಹೊಳೆಯುವ ಭೂಮಿ. ತೇಲಿ ಬರುವ ಎಂಡಿ ಪಲ್ಲವಿ ಹಾಡು, ನೆನಪಾಗುವ ಜಯಂತ ಕಾಯ್ಕಿಣಿ ಕತೆ, ಬರೆಯಲು ಬೇಡುವ ಕವಿತೆ.

ಬದುಕು ಸಾಗಿದೆ. ನಿಮ್ಮ ಪ್ರೀತಿಗೆ ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ದಗಳು ಇಲ್ಲವಾಗಿದೆ. ಥ್ಯಾಂಕ್ಯೂ. :-)

Monday, April 19, 2010

ಗೋಕುಲ ವಿರಹ

ರಾತ್ರಿ ಅಂಥಾ ಮಳೆ ಬಂದಿತ್ತು ಅಂತ
ಗೊತ್ತಾಗಿದ್ದು ಬೆಳಗ್ಗೆ ಎದ್ದಮೇಲೇ.

ನಂಬಲಿಲ್ಲ ನಾನು,
ಚೂರೂ
ಒದ್ದೆಯಾಗಿರಲಿಲ್ಲವಲ್ಲ ನೀನು
ನಡೆದು ಬರುವಾಗ ತಡರಾತ್ರಿ
ಕನಸಿನಲ್ಲಿ?

ನೆಂದಿದ್ದರೆ, ಮೆತ್ತನೆ ವಸ್ತ್ರದಲ್ಲಿ
ನಿನ್ನ ತಲೆ ಒರೆಸಿ
ಗರಿಗರಿ ಷರಾಯಿ ತೊಡಿಸಿ
ಬೆಚ್ಚನೆ ಹಾಲು ಕುಡಿಸಿ
ಅಂತಃಪುರದ ಸೋಪಾನದಲ್ಲಿ
ರಜಾಯಿ ಸಮೇತ ಬಳಸಿ
ತಟ್ಟುತ್ತಿದ್ದೆ ಚುಕ್ಕು.

ಆದರೆ, ಬಂದ ನೀನು
ಒದ್ದೆಯಾಗಿರಲೇ ಇಲ್ಲವಲ್ಲ..?
ಹಾಗಾದರೆ ಗಂಧವತೀ ಭೂಮಿ
ಸುಳ್ಳು ಹೇಳುತಿದೆಯೇ?
ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?
ಭವಂತಿ ಅಂಗಳದಲ್ಲಿ ನೀರು ಹೇಗೆ?

ಎಚ್ಚರಾದಾಕ್ಷಣ ಪಕ್ಕದಲ್ಲಿ ತಡವಿ
ನೀನಿಲ್ಲದ್ದು ತಿಳಿದು ಬಾಗಿಲಿಗೆ ಓಡೋಡಿ ಬಂದು
ಎಲ್ಲಿ ಹೋದ ನನ್ನಿನಿಯ ಎಲ್ಲಿ ಹೋದ ಕಾಂತ
ಅಂತ ಅರಮನೆಯನ್ನೆಲ್ಲ ಹುಚ್ಚಿಯಂತೆ ಹುಡುಕುವಾಗ
ಸಖಿಯರು ಬಂದು ಸಮಾಧಾನ ಮಾಡುತ್ತಾರೆ:
ಬಿಡು, ಬಿದ್ದದ್ದು ಎಂದಿನಂತೆ ಒಣ ಕನಸು ಅಂತ.

ಹೌದು, ಬಿಡದ ಭ್ರಮೆ ನನಗೆ..
ಕೃಷ್ಣ ಬಿಟ್ಟುಹೋದಮೇಲೆ
ಗೋಕುಲದಲ್ಲಿ ಮಳೆಯೆಲ್ಲಿ ಆಗಿದೆ?
ಈ ಒದ್ದೆ, ಈ ಒಸರು ಎಲ್ಲ
ರಾಧೆ ಮತ್ತವಳ ಸಖಿಯರ
ಕಣ್ಣೀರ ಹರಿವಿನ ಕುರುಹು
ಎಂಬುದು ಹೊಳೆಯದೆ ಹೋಯಿತಲ್ಲ..

Monday, April 12, 2010

ಬಿಸಿಲಿದು ಬರಿ ಬಿಸಿಲಲ್ಲವೋ..

ಬಿಸಿಲು.. ಹಂಸತೂಲಿಕಾತಲ್ಪದ ಮೇಲೆ ಮುದುಡಿ ಮಲಗಿದ್ದ ರಾಜಕುವರಿಯಂಥ ಚೆಲುವೆಯ ಕೆನ್ನೆ ಮೇಲೆ ಎಳೆಕಿರಣಗಳನ್ನು ಹೊಳೆಸಿ ಎಬ್ಬಿಸಿ ಬೆಳಗಾಗಿಸಿದ ಬಿಸಿಲು.. ಬೆಚ್ಚನೆಯ ಗೂಡಿನ ಮೆತ್ತನೆಯ ಹಾಸಿನ ಮೇಲೆ ಕಂದಮ್ಮಗಳೊಂದಿಗೆ ತಂಗಿದ್ದ ಅಮ್ಮ ಹಕ್ಕಿಗೆ ಕಾಳು ತರುವ ನೆನಪು ತರಿಸಿದ ಬಿಸಿಲು.. ರಾತ್ರಿಯಿಡೀ ಕತ್ತು ತಿರುಗಿಸಿ ತಿರುಗಿಸಿ ದಣಿದಿದ್ದ ಮುದಿ ಗೂಬೆ ಹಕ್ಕಿಗೆ ಬೆಳಗಾದ ಸುದ್ದಿ ಹೇಳಿ ವಿರಾಮ ಒದಗಿಸಿದ ಬಿಸಿಲು.. ಪ್ರತಿದಿನ ಬರುವ ಬಿಸಿಲು. ಪ್ರತಿ ರಾತ್ರಿಗೆ ಇತಿಶ್ರೀ ಹಾಡುವ ಬಿಸಿಲು. ಪ್ರತಿ ಪರ್ಣದಲ್ಲಿ ಪತ್ರಹರಿತ್ತು ತುಂಬುವ ಬಿಸಿಲು.

ಮಳೆಯ ಹಾಗಲ್ಲ ಬಿಸಿಲು. ಚಳಿಯ ಹಾಗಲ್ಲ ಬಿಸಿಲು. ಮಳೆ ಬಾರದೆ ಹೋಗಬಹುದು. ಚಳಿ ಬೀಳದೆ ಹೋಗಬಹುದು. ಆದರೆ ಬಿಸಿಲು ಹಾಗಲ್ಲ. ಅದು ಎಲ್ಲ ದಿನ ಬರುತ್ತದೆ ಕಿರಣಗಳನ್ನು ಹೊತ್ತು. ಅದು ಸೂರ್ಯನಿಷ್ಠೆ. ಕುವೆಂಪು ಹಾಡಿದಂತೆ: ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ..

ಸೂರ್ಯೋದಯಕ್ಕಿಂತ ಮೊದಲು ಅರುಣೋದಯ. ಮೂಡಲ ಮನೆಯ ಗೋಡೆಗೆ ಕೆಂಬಣ್ಣ ಬಳಿಯುತ್ತ ಬರುವ ಅವ.. ಆ ಕೆಂಪ ಹಿನ್ನೆಲೆಯಲ್ಲಿ ಗಿಳಿವಿಂಡು ಹಾರುತ್ತ ಹೋದಂತೆ, ತಾನ್ ಮೇಲೇರಿ ಬರುತ್ತಾನೆ ರವಿ.. ದಿನವರಳಿದ ಜಗದ ತುಂಬ ಅವಸರ ಈಗ. ಎಲ್ಲರಿಗು ತರಾತುರಿ. ಪೇಪರ್ ಹುಡುಗರು, ಹಾಲಿನ ಹುಡುಗರು, ಹೂವಿನ ಹುಡುಗಿಯರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳದಂತೆ ಕಾಯುತ್ತದೆ ಬಿಸಿಲು. ಪಾರ್ಕಿನ ಗಾರ್ಡುಗಳು ಜಾಗಿಂಗ್‌ಗೆ ಬರುವ ದಪ್ಪ ಮನುಷ್ಯರನ್ನು ಆಕಳಿಸುತ್ತ ಒಳಬಿಟ್ಟುಕೊಳ್ಳುವಾಗ ಅವರ ಬಾಯೊಳಗೂ ಪ್ರವೇಶಿಸುತ್ತದೆ ಬಿಸಿಲು. ದೊಡ್ಡ ಅಪಾರ್ಟ್‌ಮೆಂಟ್ ಬಿಲ್ಡಿಂಗಿನ ಬೇಸ್‌ಮೆಂಟ್ ಫ್ಲೋರಿನ ಕಾರ್ ಗರಾಜಿನಲ್ಲಿ ಮಲಗಿದ್ದ ಸೆಕ್ಯುರಿಟಿಯವನ ಮೈಮೇಲೂ ಬಿದ್ದು ಅವನನ್ನೂ ಎಚ್ಚರಿಸುತ್ತದೆ ಬಿಸಿಲು. ಕೋಲು ಹಿಡಿದ ಗೊಲ್ಲ ಕೂಗುತ್ತ ಹೋಗುತ್ತಾನೆ ಹಳ್ಳಿಯ ಮನೆ ಮನೆ ಮುಂದೆ: ದನ ಹೊಡಿರೋ...

ದನದ ಮಂದೆ ಬೆಟ್ಟದ ಹುಲ್ಲುಗಾವಲಿನತ್ತ ಸಾಗುತ್ತ ಸಾಗುತ್ತ ಹೋದಹಾಗೆ ಬಿಸಿಲು ಏರುತ್ತ ಏರುತ್ತ ಹೋಗುತ್ತದೆ. ಸೂರ್ಯ ಮೇಲೇರಿದಷ್ಟೂ ಬಿಸಿಲಿನ ಪ್ರಖರತೆ ಹೆಚ್ಚು. ಅಮ್ಮ ಈಗ ಸಂಡಿಗೆ ಹಚ್ಚಿದ ಚಾಪೆಯನ್ನು ಅಂಗಳದಲ್ಲಿ ತಂದು ಹಾಸುತ್ತಿದ್ದಾಳೆ. ತೊಳೆದ ಬಟ್ಟೆಗಳನ್ನು ತಂದು ಟೆರೇಸಿನಲ್ಲಿ ಒಣಗಿಸುತ್ತಿದ್ದಾಳೆ ಕೆಲಸದವಳು. ತನ್ನ ಕ್ಯಾಬಿನ್ನಿನ ಎ.ಸಿ. ಆನ್ ಮಾಡುವಂತೆ ಹೇಳುತ್ತಿದ್ದಾನೆ ಬಾಸ್ ಆಫೀಸ್ ಬಾಯ್‌ಗೆ. "ಅರೆ, ಇದೇನಣ್ಣ ಬಿಸಿಲು ಹಿಂಗೆ ಏರ್ತಿದೆ?" ಕೇಳುತ್ತಾನೆ ದಾರಿಹೋಕ ಎಳನೀರಿನವನಿಗೆ. ದೊಡ್ಡ ರಾಶಿಯಿಂದ ಸರೀ ಸೀಯಾಳ ಹುಡುಕಿ ತೆಗೆಯುತ್ತ ಉತ್ತರಿಸುತ್ತಾನೆ ಎಳನೀರಿನವ: "ಬೇಸಿಗೆ ಅಲ್ವೇನಣ್ಣೋ.."

ಬಿಸಿಲಿಗೆ ಬೇಸಗೆಯಲ್ಲಿ ಹಬ್ಬ. ಎಲ್ಲರೂ ತನಗೆ ಹೆದರುವವರೇ! ಮೀಸೆ ತಿರುವುತ್ತಾನೆ ಸೂರ್ಯ. ಆತ ವರ್ಷ, ಶರದ್, ಹೇಮಂತ, ಶಿಶಿರ -ಅಂತ ಹೆಚ್ಚುಕಮ್ಮಿ ನಾಲ್ಕು ಋತು ಕಾದಿದ್ದಾನೆ. ಇದೀಗ ತನ್ನ ಮಹಿಮೆಯನ್ನು ತೋರಿಸುವ ಸಮಯ. "ಈ ಸಲ ಮಳೆ ಸರಿಯಾಗಿ ಆಗ್ಲೇ ಇಲ್ಲ", "ಯಾಕೋಪ್ಪ, ಈ ವರ್ಷ ಚಳೀನೇ ಬೀಳ್ಲಿಲ್ಲ" ಇತ್ಯಾದಿ ದೂರುಗಳು ಅವನಿಗೂ ಕೇಳಿಸಿವೆ. ಹಾಗಂತ ಆತ ಹಿಂಜರಿದು ಕೂತಾನೆಯೇ? ಇಲ್ಲ.. ಮಳೆಗಾಲದಲ್ಲಿ ಮಳೆ ಬರಲಿ ಬಾರದಿರಲಿ, ಚಳಿಗಾಲದಲ್ಲಿ ಚಳಿ ಬೀಳಲಿ ಬೀಳದಿರಲಿ; ಆದರೆ ಬೇಸಗೆಯಲ್ಲಿ ಬಿಸಿಲು ಮಾತ್ರ ಇರಲೇಬೇಕು. ಅದು ಸೂರ್ಯನಿಷ್ಠೆ!

ವಾಚು ನೋಡಿಕೊಳ್ಳುತ್ತಿರುವ ಸೂರ್ಯ, ಗಂಟೆ ಹನ್ನೆರಡು ದಾಟಿದ್ದೇ ಈಗ ಸೀದ ನೆತ್ತಿಗೆ ಬಂದಿದ್ದಾನೆ. ಕಟ್ಟಿಗೆ ಒಡೆಯುತ್ತಿರುವ ಆಳಿನ ಬರಿಮೈಯಿಂದ ಅದೇನದು ಹಾಗೆ ದಂಡಿದಂಡಿ ಇಳಿಯುತ್ತಿರುವುದು? ಬಸ್ಸಿಗಾಗಿ ಗಂಟೆಯಿಂದ ಕಾಯುತ್ತಿರುವ ಗೃಹಿಣಿ ಅದೇನದು ನಿಮಿಷಕ್ಕೊಮ್ಮೆ ಕರ್ಚೀಫಿನಿಂದ ಒರೆಸಿಕೊಳ್ಳುತ್ತಿರುವುದು? ಬೈಕಿನಲ್ಲಿ ಊರೆಲ್ಲ ಸುತ್ತಿದ ಸೇಲ್ಸ್‌ಬಾಯ್‌ನ ಅಂಗಿಯೇಕೆ ಹಾಗೆ ಒದ್ದೆಮುದ್ದೆಯಾಗಿದೆ? ಎಲ್ಲಕ್ಕು ಉತ್ತರ ಬೆವರು! ಎಲ್ಲಕ್ಕು ಕಾರಣ ಅಗೋ, ಅಲ್ಲಿ ನೆತ್ತಿಯಲ್ಲಿ ಉರಿಯುತ್ತಿರುವ ಬೆಂಕಿಯುಂಡೆ. ಕಣ್ಬಿಟ್ಟು ನೋಡಲೂ ಆಗದಷ್ಟು ಪ್ರಜ್ವಲತೆ.

ಜ್ಯೂಸ್ ಅಂಗಡಿಯವನ ಮಿಕ್ಸರುಗಳಿಗೀಗ ಬಿಡುವೇ ಇಲ್ಲ. ಒಂದಾದ ತಕ್ಷಣ ಮತ್ತೊಂದು ಜಾರ್ ತೊಳೆದು, ಕತ್ತರಿಸಿದ ಹಣ್ಣು ಹಾಕಿ ಗುರ್‌ಗುಡಿಸುತ್ತಾರೆ ಹುಡುಗರು. ಐಸ್‌ಕ್ಯಾಂಡಿಯವನ ನೀಲಿಡಬ್ಬಿ ನೋಡನೋಡುತ್ತಲೇ ಖಾಲಿಯಾಗಿದೆ. ರಸ್ತೆಬದಿಯಲ್ಲಿ ಹಾಕಿಕೊಂಡಿರುವ ಕಲ್ಲಂಗಡಿ ರಾಶಿ ಮುಂದೆ ಜನವೋ ಜನ. ನಂದಿನಿ ಕೌಂಟರಿನವನು ನಿನ್ನೆಯೇ ಹೇಳಿ ತರಿಸಿದ್ದಾನೆ ನೂರು ಪ್ಯಾಕ್ ಎಕ್ಸ್‌ಟ್ರಾ ಮಸಾಲಮಜ್ಜಿಗೆ. "ಕೋಲ್ಡ್ ಬಿಸ್ಲೇರಿ ಖಾಲಿಯಾಗಿದೆ" ಅಂದಿದ್ದಕ್ಕೆ "ಇಟ್ಸೋಕೆ. ವಾರ್ಮೇ ಕೊಡಿ" ಅಂತ ಇಸಕೊಂಡು, ಅಲ್ಲೇ ಬಾಟಲಿಯ ಮುಚ್ಚಳವನ್ನು ಕರಕರನೆ ತಿರುಗಿಸಿ ತೆರೆದು ಕುಡಿಯುತ್ತಿದ್ದಾನೆ ಗ್ರಾಹಕ. ಐಪಿ‌ಎಲ್ ಟ್ವೆಂಟಿಟ್ವೆಂಟಿಯ ಟೈಮ್‌ಔಟಿನಲ್ಲಿ ಸ್ಲೈಸು, ಮಾಜಾಗಳನ್ನು ‘ಸರ್ ಉಠಾಕೆ’ ಕುಡಿಯುತ್ತಿದ್ದಾರೆ ಕ್ರೀಡಾಪಟುಗಳು. ಆದರೂ ಹಿಂಗುತ್ತಿಲ್ಲವಲ್ಲ ದಾಹ, ಇದೆಂತಹ ಬಿಸಿಲು..

ಪಾರ್ಕಿನಲ್ಲಿ ಚಿಮ್ಮುತ್ತಿರುವ ಕಾರಂಜಿಯಲ್ಲಿ ರೆಕ್ಕೆಗಳನ್ನು ಫಡಫಡಿಸುತ್ತ ಮೀಯುತ್ತಿದೆ ಯಾವುದೋ ಒಂದು ಹಕ್ಕಿ. ಆ ತುಂತುರಿಂದ ಹಾದ ಬೆಳಕು ಪಕ್ಕದ ಮರದ ಗೆಲ್ಲುಗಳ ಮೇಲೆ ಮೂಡಿಸಿರುವ ಸಣ್ಣ ಕಾಮನಬಿಲ್ಲು ಯಾರ ಕಣ್ಣಿಗೂ ಬೀಳದೆಹೋಗುತ್ತಿದೆ. ಮಕ್ಕಳೆಲ್ಲ ಹಾರಿಕೊಂಡಿದ್ದಾರೆ ಈಜುಕೊಳದಲ್ಲಿ. ಬಿಂದಿಗೆ ಬಿಂದಿಗೆ ತಣ್ಣೀರನ್ನು ಮೈಮೇಲೆ ಹೊಯ್ದುಕೊಳ್ಳುತ್ತ ಕುಣಿದಾಡುತ್ತಿದ್ದಾನೆ ರಜೆಯ ಮಜದಲ್ಲಿರುವ ಯುವಕ. ಕಾಗೆ ಹಾರಿಸಲು ಬಂದಿದ್ದ ಗೃಹಿಣಿ ಒಂದೆರಡು ಹಪ್ಪಳ ಮುಟ್ಟಿನೋಡಿ ಇವತ್ತು ಸಂಜೆಯೇ ತೆಗೆಯಬಹುದು ಅಂತ ತೀರ್ಮಾನಿಸಿದ್ದಾಳೆ. ಕತ್ತಲ ಒಳಮನೆಯಲ್ಲೀಗ ನೆಲದಿಂದ ಸೂರಿನ ಗವಾಕ್ಷಿಯವರೆಗೆ ಒಂದು ಬೆಳಕಕೋಲು ನೆಟ್ಟುನಿಂತಿದೆ. ಸ್ನಾನ ಮಾಡಿ ಮಲಗಿಸಿದ್ದ ಹಸಿಗೂಸಿಗೆ ಎಚ್ಚರಾಗಿ ಅಂಬೆ ಹರಿದುಕೊಂಡು ಬಂದು ಈ ಬಿಸಿಲಕೋಲನ್ನು ಕೈಚಾಚಿ ಅಚ್ಚರಿಯಿಂದ ಮುಟ್ಟುತ್ತಿದೆ. ಬತ್ತುತ್ತಿರುವ ಈ ನದಿಯಿಂದ ಬೇರೆ ದೊಡ್ಡ ನದಿಗೆ ಆದಷ್ಟು ಬೇಗ ಸೇರಿಕೊಳ್ಳುವ ತವಕದಲ್ಲಿ ಈಜುತ್ತಿದೆ ಒಂದು ಒಂಟಿಮೀನು. ವಿಧಾನಮಂಡಳದ ಕಲಾಪದ ನಡುವೆಯೇ ದಣಿವಿಗೆ ನಿದ್ರೆ ಹೋಗಿದ್ದಾರೆ ಯಾರೋ ಸಚಿವರು. ಇದೇ ಅವಕಾಶ ನೋಡಿ ಅವರ ಫೋಟೋ ತೆಗೆಯುತ್ತಿದ್ದಾನೆ ಫೋಟೋ ಜರ್ನಲಿಸ್ಟ್.

ಗಂಟೆಯೀಗ ಮೂರಾಗಿದೆ. ಪಶ್ಚಿಮದತ್ತ ಜಾರಲೋ ಬೇಡವೋ ಎಂದು ಯೋಚಿಸುತ್ತಿರುವ ಸೂರ್ಯನ ಬ್ಯಾಟಿಂಗ್ ಇನ್ನೂ ಬಿರುಸಿನಿಂದಲೇ ಸಾಗಿದೆ. ಗೊಲ್ಲರ ಹುಡುಗ ಈಗ ದನಕರುಗಳನ್ನೆಲ್ಲ ತಪ್ಪಲಲ್ಲಿ ಮೇಯಲು ಬಿಟ್ಟು ತಾನೊಂದು ಮರದ ತಣ್ಣೆಳಲ್ಲಿ ಮಲಗಿ ನಿದ್ದೆ ಹೋಗಿದ್ದಾನೆ. ಇಂದಾದರೂ ಮಳೆ ಬಂದೀತೆ ಎಂದು ಮುಗಿಲಿನತ್ತ ಕೈ ಅಡ್ಡ ಹಿಡಿದು ತಲೆಯಿತ್ತಿ ನೋಡುತ್ತಿದ್ದಾನೆ ಉತ್ತರ ಕರ್ನಾಟಕದ ರೈತ. ಊಹುಂ, ಮೋಡಗಳ ಸುಳಿವೇ ಇಲ್ಲ. ಮರದ ಒಂದೆಲೆಯೂ ಅಲ್ಲಾಡುತ್ತಿಲ್ಲ. ಮದುವೆಗೆ ಹೆದರಿದ ಕಪ್ಪೆಗಳು ಎಲ್ಲೋ ಕಲ್ಲಸಂದಿಯಲ್ಲಿ ಅಡಗಿ ಕೂತಿವೆ. ಆಫೀಸಿನಲ್ಲಿರುವವರಿಗೂ ತೂಕಡಿಕೆ ಬರುತ್ತಿದೆ. ಯಾಕೋ ಸುಮ್ಮನೆ ಸುಸ್ತು. ಮಧ್ಯಾಹ್ನ ಊಟ ಮಾಡಲೂ ಸೇರಲಿಲ್ಲ. ತುಂಬಿ ತಂದಿಟ್ಟುಕೊಂಡ ಬಾಟಲಿಯಲ್ಲಿನ ನೀರು ಇದ್ದಲ್ಲೇ ಬಿಸಿಯಾಗಿದೆ. ದೇವಸ್ಥಾನದ ಕಲ್ಲು ಹಾಸಿನಮೇಲೆ ಬರಿಗಾಲಲ್ಲಿ ನಡೆಯುತ್ತಿರುವ ದಂಪತಿಗಳ ಕಾಲು ಚುರುಕ್ ಎಂದಿದೆ. ಭಟ್ಟರು ಪರ್ಜನ್ಯ ಮಾಡಿಸುವ ಯೋಚನೆ ಮಾಡುತ್ತಿದ್ದಾರೆ. ಸ್ಕೂಲ್ ಮುಗಿಸಿ ಹೊರಟ ಹುಡುಗನ ಸೈಕಲ್ಲಿನ ಚಕ್ರಕ್ಕೆಲ್ಲ ಟಾರು ರಸ್ತೆಯ ಡಾಂಬರು ಕರಗಿ ಅಂಟಿದೆ. ರಸ್ತೆ ಬದಿಯಲ್ಲಿ ನಿಂತು ಬಗ್ಗಿ ನೋಡಿದರೆ ದೂರ, ಭುವಿಯೊಳಗಿನ ನೀರೇ ಆವಿಯಾಗುತ್ತಿರುವಂತೆ ಹಬೆಯಾಡುವುದು ಕಾಣಿಸುತ್ತದೆ.

ಸಂಜೆಯಾಗುವ ಲಕ್ಷಣಗಳು ಈಗ.. ಊಹುಂ, ಸೂರ್ಯನ ಪ್ರತಾಪವಿನ್ನೂ ಮುಗಿದಿಲ್ಲ. ಒಂದು ನಕ್ಷತ್ರದ ಒಡಲಲ್ಲಿ ಅದೆಷ್ಟು ಬೆಂಕಿ ಹಾಗಾದರೆ? ಅಳಿದುಳಿದ ಕಿರಣಗಳನ್ನೆಲ್ಲ ಬೀಸುತ್ತಿದ್ದಾನೆ ಸೂರ್ಯ.. ಉದುರಿದ ಎಲೆಗಳ ಮೇಲೆ ಭಾರ ಹೆಜ್ಜೆಗಳನ್ನಿಡುತ್ತ ನಡೆದಿರುವ ಮುದುಕನೇ, ಪಡುವಣ ಬಾನಂಚಿನಲ್ಲಿ ಹೊಳೆಯುತ್ತಿರುವ ದಿನಕರನನ್ನು ನೋಡದಿರು.. ಮೊದಲೇ ಮಂಜಾಗಿರುವ ನಿನ್ನ ಕಣ್ಣು ಸುಟ್ಟುಹೋದೀತು. ಒಂದು ಬೇಸಗೆಯ ಈ ಒಂದು ದಿನ ಅದೆಷ್ಟು ನೀರು ಕುಡಿದರು ಜನ? ಎಷ್ಟು ಬೆವರು ಹರಿಸಿದರು? ಅವರು ಹಾಕಿದ ಶಾಪಗಳೆಲ್ಲ ಸೂರ್ಯನ ಯಜ್ಞಕುಂಡಕ್ಕೆ ತುಪ್ಪವಾಯಿತೆ? ಅವರು ಬಿಟ್ಟ ನಿಟ್ಟುಸಿರೆಲ್ಲ ಉರಿವ ಬೆಂಕಿಗೆ ಧೂಪವಾಯಿತೆ? ಪ್ರಶ್ನೆಗಳು ಮುಗಿಯುವ ಮೊದಲೇ ಮರೆಯಾಗುತ್ತಿದ್ದಾನೆ ಸೂರ್ಯ..

ಕತ್ತಲಾವರಿಸಿದರೂ ಸೆಖೆಯೇನು ಕಮ್ಮಿಯಾಗಿಲ್ಲ.. ಕೊಟ್ಟಿಗೆಗೆ ಮರಳಿದ ಜಾನುವಾರು ಬಕೀಟುಗಟ್ಟಲೆ ನೀರು ಕುಡಿಯುತ್ತಿವೆ. ಕೆಲಸ ಮುಗಿಸಿ ಮನೆಗೆ ಬಂದವರೆಲ್ಲ ಬೆವರ ವಾಸನೆಯ ಬಟ್ಟೆ ಬಿಚ್ಚೊಗೆದು ಫ್ಯಾನಿನ ಕೆಳಗೆ ಅಂಗಾತ ಬಿದ್ದಿದ್ದಾರೆ. ಇಂದು ರಾತ್ರಿಯ ಊಟಕ್ಕೆ ನೀರುಮಜ್ಜಿಗೆ ಸಾಕು. ಹೆಚ್ಚೆಂದರೆ ಒಂದು ಹುಣಸೇಹಣ್ಣಿನ ಗೊಜ್ಜು. ಬಿಸಿಬಿಸಿಯ ಸಾರು-ಹುಳಿ ಯಾರಿಗೂ ಬೇಡ. ಜ್ವರ ಬರುತ್ತೆ ಅಂತ ಹೆದರಿಸಿದರೂ ಕೇಳುತ್ತಿಲ್ಲ, ಮಗಳು ಫ್ರಿಜ್ ವಾಟರೇ ಬೇಕೆಂದು ಹಟ ಮಾಡುತ್ತಿದ್ದಾಳೆ. ರಸ್ತೆಯ ಮೇಲೆ ಕಾರ್ಪೋರೇಶನ್ ನೀರಿಗೆ ಕಾದ ಸಾಲು ಕೊಡಗಳು. ಪಕ್ಕದ ಮನೆಯ ಬ್ಯಾಚುಲರ್ ಹುಡುಗರು ಟೆರೇಸಿನ ಮೇಲೆ ಚಾಪೆ ಹಾಸಿ ಮಲಗುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಅಂತೆ, ಕರೆಂಟ್ ಹೋಯ್ತು. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಳೆ ಕೊಡಬೇಕಿರುವ ಲೆಕ್ಚರಿಗೆ ತಯಾರಾಗುತ್ತಿದ್ದ ಪ್ರೊಫೆಸರ್ ಉಫ್ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಸಿಗಾಳಿ ಬೀಸುತ್ತಿದ್ದ ಫ್ಯಾನೂ ಇಲ್ಲ ಈಗ. ನಿದ್ರೆ ಬಾರದೆ ಹೊರಳಾಡುತ್ತಿರುವ ಎಲ್ಲ ಜೀವಗಳ ತಪನೆ ಒಂದೇ: ಬೀಸಿಬರಬಾರದೆ ಒಂದು ಹೊಯ್ಲು ತಣ್ಣನೆ ಗಾಳಿ? ಇದ್ದಕ್ಕಿದ್ದಂತೆ ಸುರಿಯಲು ಶುರುವಿಡಬಾರದೇ ಒಂದು ಅಡ್ಡಮಳೆ?

ಊಹುಂ, ಬೇಸಗೆಯ ಬವಣೆಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮರುಮುಂಜಾನೆ ಮತ್ತೆ ಅದೇ ಹಾಳು ಸೂರ್ಯ ಹುಟ್ಟುತ್ತಿದ್ದಾನೆ. ಬಿದ್ದ ಇಬ್ಬನಿಯಿಂದ ಕೊಂಚ ತಣ್ಣಗಾಗಿದ್ದ ಭುವಿಯ ತಂಪು ಕಸಿಯಲು ಮತ್ತೆ ಬರುತ್ತಿದ್ದಾನೆ. ಇನ್ನೇನು, ಬಿಸಿಲ ಬಲೆ ಬೀಸಲಿದ್ದಾನೆ..

[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ]

Tuesday, April 06, 2010

ಬೆಳಕ ಹೆಜ್ಜೆಯನರಸಿ...

ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನನ್ನ ಕಥೆ ಓದಿ, ಅದು ಹೇಗೋ ವಿಳಾಸ ಪತ್ತೆ ಮಾಡಿ ಪತ್ರ ಬರೆದಿದ್ದ, ಸಿರಗುಪ್ಪದ ವಿ. ಹರಿನಾಥ ಬಾಬು ತಮ್ಮ ಚೊಚ್ಚಿಲ ಕವನ ಸಂಕಲನ 'ಬೆಳಕ ಹೆಜ್ಜೆಯನರಸಿ' ಕಳುಹಿಸಿಕೊಟ್ಟಿದ್ದಾರೆ. ಸಧ್ಯ ಗಂಗಾವತಿಯಲ್ಲಿ ಉಪ ಖಜಾನಧಿಕಾರಿಯಾಗಿರುವ ಬಾಬು ಅವರ ಕವಿತೆಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಲ್ಲ ಉತ್ತರ ಕರ್ನಾಟಕದ ಕವಿಗಳಂತೆ ಬಾಬು ಅವರ ಕವಿತೆಗಳಲ್ಲೂ ಬಿಸಿಲು, ಕರಿಮಣ್ಣು, ಅವ್ವ, ರೊಟ್ಟಿ, ಬಡತನ, ಹಟ್ಟಿ, ಹಸಿವು, ಜಾತಿ, ಜೀತಗಳಿವೆ. ರಾಜಕಾರಣಿಗಳ ಭ್ರಷ್ಟತೆಯೆಡೆಗಿನ ಪ್ರತಿಭಟನೆಯಿದೆ. ಮತ-ಧರ್ಮಗಳಂಥ ವಿಷಯಗಳ ಮುಂದೆ ಮೌಲ್ಯ ಕಳೆದುಕೊಳ್ಳುತ್ತಿರುವ ಮಾನವೀಯತೆಯ ಬಗ್ಗೆ ತುಡಿತವಿದೆ. ದೊಡ್ಡ ದೇಶಗಳು ಯುದ್ಧದಂಥ 'ಆಟ' ಆಡಿಸುವುದರಿಂದ ಆಗುವ ಹಾನಿಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನವಿದೆ.

"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.

ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.

ಅಮ್ಮ ಸುಟ್ಟ ರೊಟ್ಟಿ
  • ವಿ. ಹರಿನಾಥ ಬಾಬು

ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ
ನಮಗೆ ಪಂಚಪ್ರಾಣ

ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್ರಗಾದ
ಬಿಳಿ ಮೂರು ಕಲ್ಲು,
ಮೇಲೊಂದು ಕರ್ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು

ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಒರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನುಣ್ಣನೆಯ
ಮೂರ್ತಿ ಮಾಡಿದವಳು

ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಎದೆಯ ತುಡಿತಗಳ ಮಿಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು

ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯ
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು

ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಕಟ್ಟಿಗೆಯೊಟ್ಟಿಗೆ ಸುಟ್ಟು
ಹೊಗೆಯೊಳಗೆ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!

['ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.]