Tuesday, February 02, 2010

ಚಿತ್ರಸಂತೆ

ಬೆಳಗಿನಿಂದ ಸಂಜೆಯವರೆಗೆ
ಮರವೊಂದರ ಕೆಳಗೆ ನಿಂತಿದ್ದ
ತನ್ನ ಬೆತ್ತಲೆ ಬೆಡಗಿ
ಈಗ ಈ ಮಬ್ಬುಗತ್ತಲಲ್ಲಿ
ಚೌಕಾಶಿ ಗ್ರಾಹಕನಿಗೆ
ವಿಕ್ರಯವಾಗುತ್ತಿರುವಾಗ
ಕುಂಚದ ಕುಸುಮಗಳು
ಬಿಕ್ಕಳಿಸಿದ ಸದ್ದು
ಕಲಾವಿದನ ಜೋಳಿಗೆಯ ಒಳಗೆ
ಭದ್ರ.

ಮಟಮಟ ಮಧ್ಯಾಹ್ನ
ಈ ಬೆಡಗಿಯ ತೆರೆದ
ಎದೆಯ ಮೇಲೆ ಬಿದ್ದೊಂದು
ಹಣ್ಣೆಲೆಯನ್ನು ಕಲಾವಿದ
ಬೇಷರತ್ ಪಕ್ಕಕ್ಕೆ ಸರಿಸಿದ್ದು
ಹಾಯುವ ಸಾವಿರ
ಕಾಲುಗಳ ನೆರಳಲ್ಲಿ
ಮರೆ.

ಲಕ್ಷ ಕಣ್ಣುಗಳ
ತಿನ್ನುವ ನೋಟಕ್ಕೆ ಬೆದರಿದ
ಬೆಡಗಿಯ ಎದೆಯ ಹಿಂದಿನ ತನ್ನದೇ
ಹೃದಯದ ಕಣ್ಣೀರು
ಅಭಿಧಮನಿಯಿಂದ
ಅಪಧಮನಿಗೆ ತೊಟ್ಟಿಕ್ಕಿದ್ದು
ಕಲಾವಿದನ ಜುಬ್ಬದ ತೆರೆಯಲ್ಲಿ
ಆಶ್ರಿತ.

ಮಗಳ ಮಾರಿ ಸಿಕ್ಕ ನೋಟು
ಜೋಳಿಗೆಯಲ್ಲಿ ತುರುಕುವಾಗ
ನಡುಗಿದ ಕಲಾವಿದನ
ಕೈಯ ಬೆರಳುಗಳ ನಡುವೆ
ಈಗ ಸಿಗರೇಟೊಂದು
ಕುಬ್ಜವಾಗುವಾಗುತ್ತಿರುವಾಗಲೇ
ಸಂತೆಗೆ ಕತ್ತಲು ಕವಿದು

ಓಕಳೀಪುರದ ಹಳೇ
ಸೇತುವೆಯ ಪಕ್ಕ
ಅದೇ ಭಂಗಿಯ
ತೆರೆದೆದೆಯ ಬೆಡಗಿಯ
ನಿತ್ಯಚಿತ್ರವನ್ನು
ನಗರಿಯ ಕುಂಚ
ಅನಾವರಣಗೊಳಿಸುತ್ತಿತ್ತು.