Friday, February 28, 2020

ಮಾರಿಜಾತ್ರೆ ಎಂಬ ಸಂಭ್ರಮ


ಒಂದು ಅನಿರ್ದಿಷ್ಟ ಮಧ್ಯಾಹ್ನ ಕಾಫಿ ಕುಡಿಯುವಾಗ ಯಾರೋ ವಿಷಯ ಪ್ರಸ್ತಾಪ ಮಾಡುತ್ತಾರೆ: "ಈ ವರ್ಷ ಸಾಗರದಲ್ಲಿ ಮಾರಿಜಾತ್ರೆ".  ತಕ್ಷಣ ಎಲ್ಲರಿಂದಲೂ ಉದ್ಘಾರ: "ಓಹ್ ಹೌದಲಾ.. ಅದಕ್ಕೇ, ರಸ್ತೆಗಳನ್ನೆಲ್ಲಾ ರಿಪೇರಿ ಮಾಡ್ತಿರೋದು. ಮಾರಿಗುಡಿ ರೋಡು ಬಂದ್ ಮಾಡಿರೋದು. ಮೊನ್ನೆ ವಿನಾಯಕರಾಯರ ಅಂಗಡೀಲಿ ಹೇಳ್ತಿದ್ರು, ಭಾನುವಾರ ಅಂಗಡಿ ಮುಚ್ಚಿ ಎಲ್ಲಾ ಕ್ಲೀನ್ ಮಾಡ್ಬೇಕು ಅಂತ.. ಯಾಕಪ್ಪಾ ಅಂದ್ಕಂಡಿದ್ದೆ.. ಮಾರಿಜಾತ್ರೆ ಅಂದ್ಮೇಲೆ ಒಂದು ರೌಂಡು ಎಲ್ಲಾ ಚಂದ ಮಾಡ್ಲೇಬೇಕಲ್ಲ!".  ದೊಡ್ಡವರ ಮಾತು ಕೇಳುತ್ತ ಅಲ್ಲೇ ಓಡಾಡುತ್ತಿದ್ದ ಚಿಣ್ಣರಿಗೆ ಆಗಲೇ ಸಂಭ್ರಮ ಶುರುವಾಗುತ್ತದೆ. ಕಣ್ಣಲ್ಲಿ ನಕ್ಷತ್ರಪಟಾಕಿ. ಜಾತ್ರೆಯಲ್ಲಿ ತಾವು ಏನೇನು ಕೊಳ್ಳಬಹುದು, ಹೇಗೆಲ್ಲ ಮಜಾ ಮಾಡಬಹುದು, ಎಷ್ಟೆಲ್ಲ ತಿನ್ನಬಹುದು.. ಅಮ್ಮನೂ ಮನಸಲ್ಲೇ ಪಟ್ಟಿ ಮಾಡತೊಡಗುತ್ತಾಳೆ: ಜಗುಲಿಗೆ ಒಂದು ಕನ್ನಡಿ ಸ್ಟಾಂಡು, ಸೇವಂತಿಗೆ ಗಿಡ ನೆಡಲು ಐದಾರು ಪಾಟುಗಳು, ಕಡಿಮೆ ಬೆಲೆಗೆ ಸಿಕ್ಕರೆ ಒಂದು ಕುಟ್ಟಾಣಿ, ತಮ್ಮನ ಮಗಳಿಗೆ ಬಣ್ಣದ ಹೇರ್‌ಬ್ಯಾಂಡು, ಶೋಕೇಸಿನಲ್ಲಿಡಲು ಚಂದದ ಗೊಂಬೆಗಳು..  ಅಜ್ಜಿಗೂ ಈ ಸಲದ ಜಾತ್ರೆಗೆ ಒಂದು ಸಂಜೆ ಹೋಗಿಬರಬೇಕೆಂಬ ತಲುಬು: "ಸಾಗರದ ಜಾತ್ರೆಗೆ ಹೋಗದೇ ಯಾವ ಕಾಲ ಆಯ್ತು.. ಈ ವರ್ಷನಾದ್ರೂ ಹೋಗಿ, ಒಂದು ಚೌರಿ ತಂದ್ಕೋಬೇಕು" -ತನಗೇ ತಾನೇ ಗೊಣಗಿಕೊಳ್ಳುತ್ತಾಳೆ.  ಅಪ್ಪನೋ, ಅದಾಗಲೇ ಮನೆಗೆ ಬಂದು ಬಿದ್ದಿರುವ ಯಕ್ಷಗಾನದ ಪ್ಯಾಂಪ್ಲೆಟ್ಟುಗಳನ್ನು ಓದುವುದರಲ್ಲಿ ಮಗ್ನ: "ಗುರುವಾರ ಸಂಜೆ ಹೋದ್ರೆ, ಜಾತ್ರೆ ಪೂರೈಸಿಕೊಂಡು, ಆಟ ನೋಡಿಕೊಂಡು ಬರಬಹುದು. ತೆಂಕು-ಬಡಗು ಕೂಡಾಟ. ಒಳ್ಳೊಳ್ಳೇ ಕಲಾವಿದರೂ ಇದಾರೆ. ಹೊಸಕೊಪ್ಪದ ರಾಘು ಹೋಗ್ತಾನೆ ಅಂತಾದ್ರೆ ಅವನ ಕಾರಲ್ಲೇ ಹೋಗಿ ಬರಬಹುದು" -ಕ್ಯಾಲೆಂಡರಿನಲ್ಲಿ ಗುರುತು ಹಾಕಿಕೊಳ್ಳುತ್ತಾನೆ.

ಜಾತ್ರೆಗೆ ಇನ್ನೂ ಒಂದು ತಿಂಗಳಿದೆ ಎನ್ನುವಾಗಲೇ ಸಾಗರ ಸಂಭ್ರಮಕ್ಕೆ ಸಿದ್ಧವಾಗುತ್ತದೆ. ಅಂಗಡಿಯವರೆಲ್ಲ ತಮ್ಮ ಸಾಮಗ್ರಿಗಳನ್ನು ಕೆಳಗಿಳಿಸಿ, ಅರೆಗಳನ್ನು ಸ್ವಚ್ಛಗೊಳಿಸಿ, ಧೂಳು ಕೂತ ಫ್ಯಾನಿನ ಪಂಕಗಳನ್ನು ಒರೆಸಿ, ಗಾಜಿನ ಬಾಟಲಿಗಳನ್ನು ತೊಳೆದೊಣಗಿಸಿ, ಬಣ್ಣ ಹೋದ ಗೋಡೆಗಳಿಗೆ ತೇಪೆ ಹಚ್ಚಿ ಸಿಂಗರಿಸುತ್ತಾರೆ. ಮುನಿಸಿಪಾಲಿಟಿಯವರೂ ಎಚ್ಚರಗೊಂಡು ಕಿತ್ತುಹೋದ ಟಾರು ರಸ್ತೆಗಳನ್ನು ಮುಚ್ಚಿ ಸಪಾಟು ಮಾಡುತ್ತಾರೆ. ಮಾರಿಗುಡಿಯ ಅರ್ಚಕರು ಹೊಸ ಮಡಿ ಕೊಳ್ಳುತ್ತಾರೆ. ಅಕ್ಕಪಕ್ಕದ ಗ್ರಂಥಿಕೆ ಅಂಗಡಿಗಳಲ್ಲಿ ತೆಂಗಿನಕಾಯಿ, ಅರಿಶಿಣ-ಕುಂಕುಮ, ಅಗರಬತ್ತಿ-ಕರ್ಪೂರಗಳ ದಾಸ್ತಾನು ಜಾಸ್ತಿಯಾಗುತ್ತದೆ. ಬರುವ ವಾಹನಗಳನ್ನೂ-ಜನಗಳನ್ನೂ ಹೇಗೆ ಸಂಬಾಳಿಸಬೇಕು, ಎಲ್ಲೆಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು, ಎಲ್ಲೆಲ್ಲಿ ಬ್ಯಾರಿಕೇಡ್ ಹಾಕಬೇಕು ಎಂಬುದಾಗಿ ಪೋಲೀಸರು ತಾಲೀಮು ನಡೆಸುತ್ತಾರೆ. "ಈ ಸಲದ ಜಾತ್ರೆಯಲ್ಲಿ ಒಂದು ದೋಸೆ ಕೌಂಟರ್ ಮಾಡ್ಲೇಬೇಕು" ಅಂತ ಪ್ಲಾನ್ ಮಾಡಿರುವ ಶ್ರೀಧರನಾಯ್ಕ, ಸ್ಟಾಲ್ ಇಡಲು ಬಾಡಿಗೆ ಎಷ್ಟು ಅಂತ ಅವರಿವರನ್ನು ವಿಚಾರಿಸುತ್ತಾನೆ. ಈಗಾಗಲೇ ರಚನೆಯಾಗಿರುವ ಜಾತ್ರಾ ಕಮಿಟಿಯಲ್ಲಿ, ಮಾಡಬೇಕಿರುವ ವ್ಯವಸ್ಥೆಗಳ ಬಗ್ಗೆ, ರಥೋತ್ಸವದ ಸಿದ್ಧತೆಯ ಬಗ್ಗೆ ಚರ್ಚೆ ನಡೆಯುತ್ತದೆ.

ಶಾಲಾಪರೀಕ್ಷೆಗಳಿಗೆ ಇನ್ನೊಂದು ತಿಂಗಳು ಇದೆ ಎನ್ನುವಾಗ ಬರುತ್ತದೆ ಜಾತ್ರೆ. ಒಂದು ಕಡೆ ಪರೀಕ್ಷೆಗೆ ಓದಿಕೊಳ್ಳಬೇಕಾದ ಅನಿವಾರ್ಯತೆ, ಇನ್ನೊಂದು ಕಡೆ ಜಾತ್ರೆಗೆ ತಪ್ಪಿಸಲಾಗದ ಇಕ್ಕಟ್ಟು.  ಗೆಳೆಯರೆಲ್ಲ ಸೇರಿ ಶನಿವಾರ ಸಂಜೆ ಹೋಗುವುದು ಅಂತ ತೀರ್ಮಾನವಾಗಿದೆ. ಅಪ್ಪ-ಅಮ್ಮರ ಬಳಿ ದುಂಬಾಲು ಬಿದ್ದು ಹತ್ತತ್ತು ರೂಪಾಯಿಯಂತೆ ಹಣ ಸಂಗ್ರಹ ಈಗಿನಿಂದಲೇ ಶುರುವಾಗಿದೆ. ಕೊನೇ ಘಳಿಗೆಯಲ್ಲಿ ಅಜ್ಜನ ಬಳಿ ಕೇಳಿದರೆ ಐವತ್ತು ರೂಪಾಯಿಯಾದರೂ ಕೊಡದೇ ಇರನು. ತೊಟ್ಟಿಲಿಗೆ ಮೂವತ್ತು, ದೋಣಿಗೆ ಇಪ್ಪತ್ತು, ಮೃತ್ಯುಕೂಪಕ್ಕೆ ಹದಿನೈದು, ಐಸ್‌ಕ್ರೀಮು-ಮಸಾಲ ಮಂಡಕ್ಕಿ-ಬತ್ತಾಸು ತಿನ್ನಲು ಇಂತಿಷ್ಟು, ನಾಟಕ ನೋಡಲು ಎಷ್ಟಿದೆಯೋ.. ಎಲ್ಲಾ ಅಂದಾಜು ಮಾಡಿ ಲೆಕ್ಕ ಹಾಕಿ, ಹಣ ಉಳಿದರೆ ಇನ್ನೊಂದು ರೌಂಡು ಪೇಟೆ ಸುತ್ತಲಾದೀತೇ ಎಂಬ ಯೋಚನೆಯೂ ಇದೆ. ಅಂಗಡಿಯಿಂದ ಸಾಮಾನು ತರಲು ಹೋದ ಪುಟ್ಟಪೋರ, ಅಮ್ಮನಿಗೆ ಸುಳ್ಳು ಲೆಕ್ಕ ತೋರಿಸಿ ಹತ್ತು ರೂಪಾಯಿ ಉಳಿಸಿದ್ದಾನೆ ಜಾತ್ರೆಯಲ್ಲಿ ಕೋನ್ ಐಸ್‌ಕ್ರೀಮ್ ಕೊಳ್ಳಲು.

ಅಂತೂ ಎಲ್ಲರೂ ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿತು.  ಜಾತ್ರೆ ನಾಳೆಯೆಂದರೆ, ಇವನಿಗೆ ಹಿಂದಿನ ರಾತ್ರಿಯಿಂದಲೇ ತವಕ. ನಾಳೆ ಏನೆಲ್ಲ ಮಾಡಬಹುದೆಂಬ ಕಲ್ಪನೆಯಲ್ಲಿ ರಾತ್ರಿಯಿಡೀ ನಿದ್ರೆಯಿಲ್ಲ.  ಹೌದೂ, ಇಷ್ಟಕ್ಕೂ ಅವಳು ಬರಬಹುದಾ? ತಿಂಗಳ ಹಿಂದೆ ಸಿಕ್ಕಿದ್ದಳು. ಕೇಳಿದರೆ, ಬಟ್ಟಲುಗಂಗಳ ಮಿಟುಕಿಸುತ್ತ, "ಅಮ್ಮ ಹೋಗು ಅಂದ್ರೆ ಬರ್ತೀನಿ" ಅಂದಿದ್ಲು ನಾಚುತ್ತಾ. ಬಂದರೆ ಆ ನೂಕುನುಗ್ಗಲಿನಲ್ಲಿ ಸಿಗುತ್ತಾಳೋ ಇಲ್ಲವೋ? ಸಿಕ್ಕರೆ ಎಷ್ಟು ಚಂದ.. ಜಾತ್ರೆಪೇಟೆಯ ಜಂಗುಳಿಯಲ್ಲಿ ಕೈಕೈ ಹಿಡಿದು ನಡೆಯಬಹುದು. ತೊಟ್ಟಿಲಿನ ಗೂಡಿನಲ್ಲಿ ಇಬ್ಬರೇ ಕೂತು ಆಕಾಶಕ್ಕೇರಬಹುದು. ತೊಟ್ಟಿಲು ಧಿಗ್ಗನೆ ಕೆಳಗಿಳಿಯುವಾಗ, ಅವಳೆದೆ ಢವಗುಟ್ಟುವಾಗ, ಕೈಯದುಮಿ ಬೆಚ್ಚಗೆ ಧೈರ್ಯ ತುಂಬಬಹುದು. ಗೂಡಂಗಡಿಯಲ್ಲಿ ಅವಳಿಷ್ಟದ ಬಣ್ಣದ ಬಳೆ ಕೊಡಿಸಿ, ನೋಯುವ ಕೈ ಲೆಕ್ಕಿಸದೆ ಬಳೆಗಾರ ಬಳೆ ಅವಳಿಗೆ ತೊಡಿಸುವಾಗ, ಸಣ್ಣ ಕಣ್ಣೀರ ಹನಿಯಲ್ಲಿ ಜತೆಯಾಗಬಹುದು. ಬಂಗಾರಬಣ್ಣದ ಕಿವಿಯೋಲೆಯನ್ನವಳು ಆಸೆ ಪಟ್ಟು ಕೊಂಡಾಗ ನಾನೇ ಹಣ ಕೊಟ್ಟು ಯಜಮಾನನಂತೆ ಮೆರೆಯಬಹುದು. ಆ ರಾತ್ರಿ ಸುದೀರ್ಘವೆನಿಸುತ್ತದೆ.

ಬೆಳಿಗ್ಗೆ ಎದ್ದು ತಯಾರಾಗಿ ಹೊರಟರೆ ಬಸ್ಸುಗಳೆಲ್ಲ ತುಂಬಿ ತುಳುಕುತ್ತಿವೆ. ಟಾಪಿನಲ್ಲೂ ಜನ! ಹೊಸದಾಗಿ ಹತ್ತು 'ಜಾತ್ರಾ ವಿಶೇಷ'  ಬಸ್ಸುಗಳನ್ನು ಬಿಟ್ಟಿದ್ದರೂ ಎಲ್ಲ ಬಸ್ಸುಗಳೂ ರಶ್ಶು. ಜತೆಗೆ ಒಂದರ ಹಿಂದೆ ಒಂದರಂತೆ ಹೋಗುತ್ತಿರುವ ಬೈಕುಗಳು.  ಪಕ್ಕದೂರಿನ ಗೋಪಾಲ ಪೂಜಾರಿಯಂತೂ ತನ್ನ ಟ್ರಾಕ್ಟರಿನಲ್ಲಿ ಊರವರನ್ನೆಲ್ಲ ಕೂರಿಸಿಕೊಂಡು ಹೊರಟಿದ್ದಾನೆ. ಅಲ್ಲದೇ ಆ ಟ್ರಾಕ್ಟರಿನ ಇಕ್ಕೆಲಕ್ಕೂ ಬಾಳೆಕಂದಿನ ಸಿಂಗಾರ ಬೇರೆ! ಬಸ್‌ಸ್ಟಾಂಡಿನಲ್ಲಿ ನಿಂತವರಿಗೆ ಕೈ ಮಾಡುತ್ತ ಅವರೆಲ್ಲ ಹೋ!ಎಂದು ಕೂಗುತ್ತಿದ್ದಾರೆ. ಅಂತೂ ಗುದ್ದಾಡಿಕೊಂಡು ಸಾಗರ ತಲುಪಿದ್ದಾಗಿದೆ.

ಜಾತ್ರೆಪೇಟೆಗೆ ಬಂದು ನೋಡಿದರೆ, ನಿಲ್ಲಲೆಲ್ಲಿ ಜಾಗವಿದೆ! ಸಾಗರದ ತುಂಬ ಜನಸಾಗರ! ಎಲ್ಲರೂ ತಳ್ಳಿಕೊಂಡು ಹೋಗುವವರೇ. ರಸ್ತೆಯ ಎರಡೂ ಬದಿಗೆ ಸಾಲು ಸಾಲು ಅಂಗಡಿಗಳು. ಎಲ್ಲೆಲ್ಲೂ ಝಗಮಗ ದೀಪಗಳು. ಮಕ್ಕಳ ಆಟಿಕೆಗಳ ಅಂಗಡಿಗಳು, ಅಲಂಕಾರಿಕ ವಸ್ತುಗಳ ದುಖಾನುಗಳು, ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳು, ತಿಂಡಿ-ತಿನಿಸುಗಳ ಮುಂಗಟ್ಟುಗಳು, ಅಲ್ಲಲ್ಲಿ ಉಚಿತ ನೀರು-ಮಜ್ಜಿಗೆ ಹಂಚುವ ಕಾರ್ಯಕರ್ತರು... ಓಹೋಹೋ! ಎಲ್ಲಿ ನೋಡಿದರೂ ಜನ ಎಲ್ಲಿ ನೋಡಿದರೂ ಜಂಗುಳಿ. ಕಿವಿಗಡಚಿಕ್ಕುವ ಪೀಪಿಯ ಶಬ್ದ. ಯಾರೋ ನೆಂಟರು ಸಿಕ್ಕರು ಅಂತ ಅಲ್ಲೇ ಮಾತಾಡಿಸುತ್ತ ನಿಂತವರು, ಎರಡು ಬಕೆಟ್ಟು ನೂರು ರೂಪಾಯಿಗೆ ಕೊಡಿ ಅಂತ ಅಂಗಡಿಯವನ ಬಳಿ ಬಗ್ಗಿ ಚೌಕಾಶಿ ಮಾಡುತ್ತಿರುವವರು, ಮಿರ್ಚಿ ತಿಂದು ಖಾರ ನೆತ್ತಿಗೇರಿ ಚಹಾ ಕುಡಿಯುತ್ತಿರುವವರು, ಹಾಕಿಸಿಕೊಂಡಿದ್ದ ತೆಳು ಕವರು ಒಡೆದು ಬೀದಿ ತುಂಬ ಮಂಡಕ್ಕಿ ಚೆಲ್ಲಿಕೊಂಡು ತಬ್ಬಿಬ್ಬಾದವರು.. ಒಬ್ಬರೇ ಇಬ್ಬರೇ! ಇವರೆಲ್ಲರ ನಡುವೆಯೇ ತೂರಿಕೊಂಡು ಹೋಗಬೇಕಿದೆ ನಾವೂ.

ಮಾರಿಕಾಂಬಾ ದೇವಸ್ಥಾನದ ಎದುರು ಸಾವಿರ ಜನಗಳ ಕ್ಯೂ ಇದೆ. ದೊಡ್ಡ ಪೆಂಡಾಲಿನ ಕೆಳಗೆ ನಿಂತ ಎಲ್ಲರ ಕೈಯಲ್ಲೂ ಹಣ್ಣು-ಕಾಯಿಯ ಕೈಚೀಲ. ಮೈತುಂಬ ಭಕ್ತಿ. ಎಲ್ಲರಿಗೂ ಅಮ್ಮನ ಕೆಂಪು ಮೊಗವ ಕಣ್ತುಂಬಿಕೊಂಡು ಕೈ ಮುಗಿದು ಬರುವ ತವಕ. ಮನೆಯಲ್ಲಿ ಯಾರಿಗೂ ಖಾಯಿಲೆ-ಕಸಾಲೆ ಬರದಂತೆ ಕಾಪಾಡಮ್ಮಾ ಅಂತ ಬೇಡಿಕೊಂಡು, ಕೈಲಾದಷ್ಟು ಕಾಣಿಕೆ ಹಾಕಬೇಕಿದೆ. ಪ್ರಸಾದದ ಹೂವನ್ನು ತಲೆಮೇಲೆ ಹಾಕಿಕೊಂಡು ಧನ್ಯತೆಯನ್ನನುಭವಿಸಬೇಕಿದೆ.

ಆಮೇಲೆ ಜಾತ್ರೆಬೀದಿಯ ಸುತ್ತುವುದು ಇದ್ದಿದ್ದೇ.  ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು, ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು, ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು, ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು.. ಅಮ್ಮನ ಒರಟು ಕೈ ಸೇರಲೆಂದೇ ಕಾಯುತ್ತಿರುವ ಹಸಿರು ಬಳೆಗಳು, ಅಜ್ಜನ ಚಳಿಗಾಗಲು ತಯಾರಿರುವ ಕೆಂಪು ಮಂಕಿಕ್ಯಾಪು, ತಂಗಿ ವರ್ಷಗಳಿಂದ ಹುಡುಕುತ್ತಿದ್ದ ನವಿಲಿನ ಚಿತ್ರದ ಕ್ಲಿಪ್ಪು, ಅಕ್ಕನ ಮಗನಿಗೆ ಆಡಲು ಜೆಸಿಬಿ, ಹಟ ಮಾಡಿದ ಅವನ ಅಣ್ಣನಿಗೆ ಕೆಂಪು ದೀಪದ ಕೊಂಬುಗಳು.. ಆದರೆ ಅದ್ಯಾಕೋ ಅಪ್ಪ ಮಾತ್ರ ಏನನ್ನೂ ಕೊಳ್ಳುವುದೇ ಇಲ್ಲ ಜಾತ್ರೆಯಲ್ಲಿ. ಇಂತವನ್ನೆಲ್ಲ ಎಷ್ಟೋ ನೋಡಿದವನಂತೆ, ತಾನು ಇದನ್ನೆಲ್ಲ ಮೀರಿದವನಂತೆ, ಗಂಭೀರವಾಗಿ ಎಲ್ಲರನ್ನೂ ಕರೆದುಕೊಂಡು ಜಾತ್ರೆಬೀದಿ ಸುತ್ತುತ್ತಿದ್ದಾನೆ.

ಅತ್ತ ನೆಹರು ಮೈದಾನದಲ್ಲಿ ಅಷ್ಟೆತ್ತರದಲ್ಲಿ ಸುತ್ತುತ್ತಿರುವ ಜಿಯಾಂಟ್ ವೀಲು ಎಲ್ಲರನ್ನೂ ಕರೆಯುತ್ತಿದೆ. "ನಾನು ಹತ್ತೋದಿಲ್ಲ, ನಂಗೆ ತಲೆ ತಿರುಗುತ್ತೆ" ಅಂದ ಹೆಂಡತಿಯನ್ನೂ ಬಿಡದೇ ಎಳಕೊಂಡು ಹೋಗಿದ್ದಾನೆ ಹೊಸಬಿಸಿಯ ಗಂಡ. ಅತ್ತಿತ್ತ ತೂಗುತ್ತಿರುವ ದೋಣಿಯಲ್ಲಿ ಜನಗಳ ಕೇಕೆ. ಕೆಲವರಿಗೆ ಟೊರಾಟೊರಾವನ್ನು ಹತ್ತಿ ಒಂದು ಕೈ ನೋಡಿಯೇಬಿಡುವ ತಲುಬಾದರೆ, ಇನ್ನು ಕೆಲವರಿಗೆ ಆಟವಾಡುತ್ತಿರುವ ತಮ್ಮ ಮಕ್ಕಳನ್ನು ದೂರದಲ್ಲಿ ನಿಂತು ನೋಡುವುದರಲ್ಲೇ ಖುಷಿ. ಮೃತ್ಯುಕೂಪದಲ್ಲಿ ಜೀವದ ಹಂಗು ತೊರೆದು ಕೈ ಬಿಟ್ಟು ಬೈಕು ಓಡಿಸುವವರನ್ನು ನೋಡಿ ಹಲವರು ಬೆರಗಾದರೆ, ಮಿನಿ ಸರ್ಕಸ್ಸಿನಲ್ಲಿ ಹಗ್ಗ ಹಿಡಿದು ತೇಲುವ ನೀಳಕಾಯದ ಬೆಡಗಿಯರ ನೋಡಿ ಹಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶಂಕರ ಭಟ್ಟರು ಇಪ್ಪತ್ತು ರೂಪಾಯಿ ಖರ್ಚು ಮಾಡಿ ರಿಂಗ್ ಎಸೆದು ಒಂದು ಸೋಪಿನ ಡಬ್ಬಿ ಗೆದ್ದು ಸಾಧನೆ ಮಾಡಿದ್ದಾರೆ. ಮಾಯಾಕನ್ನಡಿಯೆದುರು ನಿಂತು ತನ್ನದೇ ಕುಬ್ಜರೂಪ ನೋಡಿ ಪಕ್ಕದ ಮನೆ ರಾಧಕ್ಕ ಬಿದ್ದುಬಿದ್ದು ನಕ್ಕಿದ್ದಾಳೆ. ಕೊಂಡ ಬಲೂನನ್ನು ಹತ್ತು ನಿಮಿಷದೊಳಗೆ ಒಡೆದುಕೊಂಡದ್ದಕ್ಕೆ ಪುಟ್ಟ ಅಮ್ಮನಿಂದ ಸರಿಯಾಗಿ ಬೈಸಿಕೊಂಡಿದ್ದಾನೆ.

ಕತ್ತಲಾದಂತೆ ಜಂಗುಳಿ ಇನ್ನಷ್ಟು ಜಾಸ್ತಿಯಾಗಿದೆ. ಈಗಷ್ಟೆ ಬಂದ ಕೆಲವರಿಗೆ ಜಾತ್ರೆಯನ್ನೆಲ್ಲ ನೋಡಿ ಮುಗಿಸಬೇಕಿರುವ ತರಾತುರಿಯಾದರೆ, ಮಧ್ಯಾಹ್ನವೇ ಬಂದವರಿಗೆ ಊರಿಗೆ ಹೊರಡುವ ಗಡಿಬಿಡಿ. ಆ ನೂಕಿನಲ್ಲಿ ಪಿಕ್‌ಪಾಕೆಟ್ ಮಾಡುವವರಿಂದ ಪರ್ಸು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವವರು, ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಗಟ್ಟಿಯಾಗಿ ಅವರ ಕೈ ಹಿಡಕೊಂಡವರು, ಇಂಥಲ್ಲಿ ಸಿಗುತ್ತೇನೆಂದು ಹೇಳಿದವರ ಕಾಯುತ್ತ ನಿಂತವರು, ರಾತ್ರಿಯ ನಾಟಕ ಶುರುವಾಗಲು ಇನ್ನೂ ಸಮಯವಿದೆಯೆಂದು ಸುಮ್ಮನೆ ಕಟ್ಟೆಯ ಮೇಲೆ ಕೂತವರು.. ಹೀಗೆ ಕಾವಳಕ್ಕೆ ಇನ್ನಷ್ಟು ಮೆರುಗು ನೀಡುತ್ತ ಜಾತ್ರೆಬೀದಿ ಜನಗಳನ್ನು ಪೊರೆಯುತ್ತಿದೆ. ಸಾವಿರ ದೀಪಗಳಿಂದ ಇರುಳನ್ನು ಬೆಳಗುತ್ತಿದೆ. ನಡುರಾತ್ರಿಯಾದರೂ ತೆರೆದಿರುವ ಅಂಗಡಿಗಳು, ಕಾವಲಿಯ ಮೇಲೆ ಸೃಷ್ಟಿಯಾಗುತ್ತಿರುವ ನೂರು ವಿಧದ ದೋಸೆಗಳ ವೃತ್ತಗಳು, ಬೆಂಡು-ಬತ್ತಾಸು ಕಟ್ಟಿಸಿಕೊಳ್ಳಲು ಮುಗಿಬಿದ್ದಿರುವ ಜನಗಳು, ಮ್ಯಾಜಿಕ್ ಶೋ ನೋಡಿ ತಲೆದೂಗುತ್ತ ಹೊರಬರುತ್ತಿರುವವರು... ಭಕ್ತಿ ಖುಷಿ ಉನ್ಮಾದ ಆತಂಕ ಎಲ್ಲವೂ ತುಂಬಿರುವ ಜಾತ್ರೆ ನಸುಕಿನವರೆಗೂ ಎಚ್ಚರಿರುತ್ತದೆ ಕಣ್ಣು ಸಹ ಮುಚ್ಚೊಡೆಯದೆ.

ಅಷ್ಟು ಸಂಭ್ರಮದ, ಅಂತಹ ಸಡಗರದ, ಆ ಪರಿ ಗದ್ದಲದ, ಎಷ್ಟೋ ದಿನಗಳ ಕಾತರದ, ಲಕ್ಷ ಲಕ್ಷ ಜನಗಳು ಪಾಲ್ಗೊಂಡ ಜಾತ್ರೆ ಎಂಟು ದಿನಗಳಲ್ಲಿ ಮುಗಿಯುತ್ತದೆ. ಜಾತ್ರೆ ಮುಗಿದಮೇಲೂ ಒಂದಷ್ಟು ದಿನ ಬೀದಿಬದಿಯ ಅಂಗಡಿಗಳು ಹಾಗೆಯೇ ಇರುತ್ತವೆ. ಈಗ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಎಂದು ಕೊಳ್ಳಲು ಕೆಲವರು ಪೇಟೆಗೆ ಬರುವರು. ಮೈದಾನದಲ್ಲಿನ ಮನರಂಜನಾ ಆಟಗಳು ಇನ್ನೂ ಇವೆ. ತೊಟ್ಟಿಲು ಇನ್ನೂ ತಿರುಗುತ್ತಿದೆ. ಕಾಲೇಜು ಹುಡುಗರು ಕ್ಲಾಸು ಬಂಕ್ ಮಾಡಿ ಬಿರುಬಿಸಿಲ ಮಧ್ಯಾಹ್ನವೇ ತೊಟ್ಟಿಲು ಹತ್ತಿ ಕುಣಿಯುತ್ತಿದ್ದಾರೆ. ಅತ್ತ ಅಗ್ಗಕ್ಕೆ ಸಿಕ್ಕಿತು ಅಂತ ತಂದುಕೊಂಡ ಬಕೇಟಿನ ಹಿಡಿಕೈ ಎರಡೇ ದಿನಕ್ಕೆ ಮುರಿದು ಮನೆಯೊಡತಿ ಪೆಚ್ಚುಮೋರೆ ಹಾಕಿಕೊಂಡಿದ್ದಾಳೆ.  ಜಾತ್ರೆಯಿಂದ ತಂದಿದ್ದ ಆಟದ ಸಾಮಾನು ವಾರದೊಳಗೆ ಬೇಸರ ಬಂದು ಹುಡುಗರು ಕ್ರಿಕೆಟ್ಟು-ವೀಡಿಯೋ ಗೇಮುಗಳಿಗೆ ಮರಳಿದ್ದಾರೆ.

ಜಾತ್ರೆ ಮುಗಿದ ಬೀದಿಯಲ್ಲೀಗ ಮೌನ. ವ್ಯಾಪಾರಿಗಳೆಲ್ಲ ತಮ್ಮ ಗುಡಾರದೊಂದಿಗೆ ಗದ್ದಲವನ್ನೂ ಬಳುಗಿ ಕೊಂಡೊಯ್ದರೋ ಎನ್ನುವಂತೆ.  ಜಾತ್ರೆ ನಡೆದಿತ್ತೆಂಬುದಕ್ಕೆ ಕುರುಹಾಗಿ ಬೀದಿಯ ತುಂಬ ಕಸ. ಅಂಗಡಿಯವರು ಮಳಿಗೆ ಹಾಕಲು ತೋಡಿದ ಸಣ್ಣ ಗುಂಡಿಗಳು, ಪಕ್ಕದಲ್ಲೆದ್ದ ಮಣ್ಣ ಹೆಂಟೆ. ಮಾರಮ್ಮನೂ ದೈನಿಕದ ಮಂಗಳರಾತಿಗೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದಾಳೆ. ಅವಳ ಗುಡಿಯೆದುರು ಹಾಕಿದ್ದ ಶಾಮಿಯಾನಾ ಈಗ ತೆರವಾಗಿ ಬೀದಿಗೆ ಬಿಸಿಲು ರಾಚುತ್ತಿದೆ.  ವಾಹನಗಳು ಯಾವಾಗಿನಂತೆ ರಸ್ತೆಯಲ್ಲಿ ಓಡಾಡತೊಡಗಿವೆ. ಪೇಟೆ ಮೈಮುರಿದುಕೊಂಡು ಮತ್ತೆ ನಿತ್ಯವ್ಯಾಪಾರಕ್ಕೆ ತೆರೆದುಕೊಂಡಿದೆ. ಹಕ್ಕಿಗಳು ಮರಗಳಿಗೆ ಮರಳಿವೆ.  ಜಾತ್ರೆಗೆ ಸಂಭ್ರಮವನ್ನು ಹೊತ್ತುತಂದಿದ್ದ ವ್ಯಾಪಾರಿಗಳೆಲ್ಲ ಈಗ ಮತ್ತಾವುದೋ ಊರಿನಲ್ಲಿ ಡೇರೆ ಹಾಕಿದ್ದಾರೆ. ಅವರು ಮತ್ತೆ ಯಾವಾಗ ಬರುವರೋ, ಎಷ್ಟು ಬೇಗ ಮೂರು ವರ್ಷ ಕಳೆವುದೋ ಎಂದು ಸಾಗರ ಕಾಯುತ್ತದೆ.

[ಸಾಗರ ವಾರ್ತಾ ಪತ್ರಿಕೆಯ ವಿಶೇಷಾಂಕದಲ್ಲಿ ಪ್ರಕಟಿತ]