Wednesday, December 31, 2014

2014 ಎಂಬ ಡಾರ್ಕ್ ಚಾಕಲೇಟ್..


೨೦೧೪ ಎಂಬ ಡಾರ್ಕ್ ಚಾಕಲೇಟ್ ಬಾರ್ ಮುಗಿಯಲು ಬಂದಿದೆ. ಕಳೆದ ವರ್ಷ ಇದೇ ಹೊತ್ತಿಗೆ ಇಷ್ಟುದ್ದಕೆ ಕಂಡಿದ್ದ ಚಾಕಲೇಟ್, ಚೂರುಚೂರೇ ತಿನ್ನುತ್ತ ತಿನ್ನುತ್ತ ಈಗ ಕೊನೆಯ ಬೈಟ್ ಮಾತ್ರ ಉಳಿದಿದೆ. 2014 ಹೇಗಿತ್ತು? ಥೇಟ್ ಡಾರ್ಕ್ ಚಾಕಲೇಟಿನಂತೆಯೇ ಇತ್ತು: ಸ್ವಲ್ಪ ಸಿಹಿ, ಸ್ವಲ್ಪ ಕಹಿ, ಅಲ್ಲಲ್ಲಿ ಒಂದೆರಡು ದ್ರಾಕ್ಷಿ, ಗೋಡಂಬಿ! ಕೆಲವರಿಗೆ ಚಾಕಲೇಟ್ ಬಾರ್ ಜೊತೆ ಸರ್‌ಪ್ರೈಸ್ ಗಿಫ್ಟ್ ಐಟಮ್ ಸಹ ಸಿಕ್ಕಿದ್ದುಂಟು. ಇನ್ನು ಕೆಲವರ ಚಾಕಲೇಟ್ ತಿನ್ನುವಾಗಲೇ ಕೈಜಾರಿ ಬಿದ್ದು ಸಮಸ್ಯೆಗೆ ಸಿಲುಕಿದ್ದೂ ಉಂಟು.

ಕಳೆದ ವರ್ಷ ನಿಜಕ್ಕೂ ರಂಗುರಂಗಾಗಿತ್ತು. ಹಲವು ಬದಲಾವಣೆಗಳು, ಹೊಸತುಗಳು, ಹೆಮ್ಮೆ ಪಡಬಹುದಾದ ಸಾಧನೆಗಳು, ಗೆಲುವುಗಳು, ಪ್ರಶಸ್ತಿಗಳು, ಸಂತೋಷದ ಸುದ್ದಿಗಳು ಇದ್ದವು. ಹಾಗೆಯೇ, ಒಂದಷ್ಟು ಹಿನ್ನಡೆಗಳು, ಸೋಲುಗಳು, ಅವಮಾನಗಳು, ನೋವಿನ ಸಂಗತಿಗಳೂ ಇದ್ದವು.

2014ನೇ ಇಸವಿಯನ್ನು ಭಾರತದ ಮಹಾಚುನಾವಣಾ ವರ್ಷ ಅಂತಲೇ ಕರೆಯಲಾಗಿತ್ತು. ಒಂಭತ್ತು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಹೊಸ ಭರವಸೆ, ಅಪಾರ ನಿರೀಕ್ಷೆ ಮತ್ತೆ ಒಂದಷ್ಟು ಅನುಮಾನಗಳನ್ನು ಹೊತ್ತ ಹೊಸ ಸರ್ಕಾರದ ಆಡಳಿತ ಶುರುವಾಯಿತು. ವಿದೇಶಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ದನಿ ಮೊಳಗಿತು. ರಾಜಕೀಯ ಲೋಕದಲ್ಲಾದ ಬದಲಾವಣೆಯಿಂದ, ವಿಶ್ವದ ಬಲಾಡ್ಯ ರಾಷ್ಟ್ರಗಳು ದೊಡ್ಡ ಮಟ್ಟದಲ್ಲಿ ಭಾರತದ ಕಡೆ ದೃಷ್ಟಿ ಹರಿಸಿದ ವರ್ಷ ಇದು. ಹೊಸ ಸರ್ಕಾರದ ಯೋಜನೆ ಸ್ವಚ್ಛ ಭಾರತ ಅಭಿಯಾನ ಸಾಕಷ್ಟು ಸುದ್ದಿ ಮಾಡಿತು. ಕರ್ನಾಟಕದ ಸರ್ಕಾರವೂ ತನ್ನ ಕೆಲವು ಹೊಸ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸಿತು. ಹಾಗೆಯೇ ಎರಡೂ ಸರಕಾರಗಳು ಕೆಲವು ವಿವಾದ, ಈಡೇರಿಸಲಾಗದ ಭರವಸೆಗಳಿಂದ ಮಾತಿಗೀಡಾದವು. ಆಂಧ್ರ ಪ್ರದೇಶವು ಇಬ್ಭಾಗವಾಗಿ ತೆಲಂಗಾಣವೆಂಬ ಹೊಸ ರಾಜ್ಯ ರಚನೆಯಾಯಿತು. ಮಂತ್ರಿ ಶಶಿ ತರೂರರ ಪತ್ನಿಯ ನಿಗೂಢ ಸಾವು ವರ್ಷಾರಂಭದಲ್ಲಿ ಸಾಕಷ್ಟು ಚರ್ಚೆಗೀಡಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಸಂಬಂಧಿತ ಕೋರ್ಟ್ ಆದೇಶದಿಂದ ಬಂಧನಕ್ಕೊಳಗಾದರು. ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಕಾರು ಅಪಘಾತದಲ್ಲಿ ನಿಧನರಾದರು.

ಮಾಮ್ ನೌಕೆಯನ್ನು ಮಂಗಳ ಗ್ರಹದ ಕಕ್ಷೆ ಸೇರಿಸುವುದರ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು. ಹಾಗೆಯೇ ಮಾನವಸಹಿತ ಬಾಹ್ಯಾಕಾಶ ಪಯಣಕ್ಕೆ ಮೊದಲ ಹೆಜ್ಜೆಯಾಗಿ ಮಾಡಿದ ಪ್ರಾಯೋಗಿಕ ಉಡಾವಣೆ ಸಹ ಯಶಸ್ವಿಯಾಗುವುದರೊಂದಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಸಾಧನೆ ಮೆರೆಯಿತು. ಈ ವರ್ಷದಲ್ಲಿ ವಿಶ್ವಾದ್ಯಂತ ಹಲವು ಹೊಸ ಆವಿಷ್ಕಾರಗಳು ಆದವು.  ಸ್ಮಾರ್ಟ್‍ಫೋನುಗಳು ಎಲ್ಲರ ಕೈಯಲ್ಲಿ ನಲಿದಾಡುವಷ್ಟು ಜನರೂ ತಂತ್ರಜ್ಞಾನಕ್ಕೆ ಹೊಂದಿಕೊಂಡರು. 240ಕ್ಕೂ ಹೆಚ್ಚು ಜನರಿದ್ದ ಮಲೇಶಿಯಾದ ವಿಮಾನವೊಂದು ಹೇಳಹೆಸರಿಲ್ಲದಂತೆ ಕಣ್ಮರೆಯಾದದ್ದು ಟೆಕ್ನಾಲಜಿ ಇಷ್ಟು ಮುಂದುವರೆದಿರುವ ಈ ಕಾಲದಲ್ಲೂ ಹೇಗೆ ಸಾಧ್ಯ ಅಂತ ಜನ ಕೇಳಿಕೊಳ್ಳುವಂತಾಯ್ತು.

ಭಯೋತ್ಪಾದನೆಯೆಂಬುದು ಈ ವರ್ಷವೂ ತನ್ನ ಕರಾಳ ಮುದ್ರೆಯನ್ನು ಛಾಪಿಸಿತು. ವಿಶ್ವದ ಹಲವೆಡೆ ಉಗ್ರರು ಅಟ್ಟಹಾಸ ಮೆರೆದರು. ಪೇಶಾವರದ ಶಾಲೆಯೊಂದರಲ್ಲೇ ನೂರಾರು ಅಮಾಯಕ ಮಕ್ಕಳ ರಕ್ತ ಹರಿದು ಜಗತ್ತೇ ಬೆಚ್ಚಿ ಬೀಳುವಂತಾಯಿತು.  ದೇಶದಲ್ಲಿ ಅನೇಕ ಭಾಗಗಳಲ್ಲಿ ನಕ್ಸಲ್ ದಾಳಿಗಳಾದವು. ದೇಶ-ದೇಶಗಳ, ರಾಜ್ಯ-ರಾಜ್ಯಗಳ ಗಡಿ ಗಲಾಟೆ ಅಂತ್ಯವನ್ನೇನು ಕಾಣಲಿಲ್ಲ.  ದೇಶದೆಲ್ಲೆಡೆ ದಾಖಲಾದ ಅತ್ಯಾಚಾರ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿದ್ದಷ್ಟೇ ಅಲ್ಲ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ ಬೀದಿಗಿಳಿದು ಪ್ರತಿಭಟಿಸಿದರು. ಮಹಿಳೆಯರ, ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಪಡುವಂತಹ ಸ್ಥಿತಿಗೆ ಕೊನೆ ಯಾವಾಗ ಎಂದು ಜನ ಮೇಲೆ ನೋಡುವಂತಾಯಿತು. ಕಾಶ್ಮೀರದಲ್ಲಿ ಉಂಟಾದ ಪ್ರವಾಹಕ್ಕೆ ನೂರಾರು ಜನ ಸಾವಿಗೀಡಾದರೆ ಸಾವಿರಾರು ಜನ ವಸತಿ-ವಸ್ತುಗಳನ್ನು ಕಳೆದುಕೊಂಡರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅನೇಕ ಬಹುಮತಿಗಳು, ಗೌರವಗಳು ಈ ವರ್ಷ ದೊರಕಿದವು. ಭೈರಪ್ಪನವರಿಗೆ ಘೋಷಣೆಯಾದ ರಾಷ್ಟ್ರೀಯ ಪ್ರಾಧ್ಯಾಪಕ ಗೌರವ, ನಾ. ಡಿಸೋಜಾರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಕುಂವೀಯವರಿಗೆ ಬಂದ ನೃಪತುಂಬ ಪ್ರಶಸ್ತಿ, ಕಿಞ್ಞಣ್ಣ ರೈರವರಿಗೆ ಸಿಕ್ಕ ಪಂಪ ಪ್ರಶಸ್ತಿ... ಹೀಗೆ ಹಲವು ಹಿರಿ-ಕಿರಿಯ ಸಾಹಿತಿಗಳಿಗೆ ಪ್ರಶಸ್ತಿ-ಮನ್ನಣೆಗಳು ದೊರೆತವು. ಹಾಗೆಯೇ ಯು.ಆರ್. ಅನಂತಮೂರ್ತಿ, ಯಶವಂತ ಚಿತ್ತಾಲರಂತ ಹಿರಿಯ ಸಾಹಿತಿಗಳ ನಿಧನ ಕನ್ನಡ ನಾಡಿಗೆ ದುಃಖ ತಂದಿತು. ದೇವರ ಕಲ್ಲಿನ ಮೇಲೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಹೇಳಿಕೆಯಂತಹ ಕೆಲವು ಮಾತುಗಳು ಸಭೆ-ಸಮಾರಂಭಗಳಲ್ಲಿ ಹೊರಬಿದ್ದು ವಿವಾದವನ್ನೂ ಸೃಷ್ಟಿಸಿದವು. ದೇವನೂರು ಮಹಾದೇವ ಅವರು ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡದ ಸರ್ಕಾರದ ನೀತಿಯನ್ನು ವಿರೋಧಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದರು. 

ಕನ್ನಡದಲ್ಲಿ ನೂರಾರು ಹೊಸ ಸಿನಿಮಾಗಳು ಬಿಡುಗಡೆಯಾದವು. ಕೆಲವು ರೀಮೇಕ್, ಕೆಲವು ಸ್ವಮೇಕ್. ಕೆಲವು ಗೆದ್ದವು, ಕೆಲವು ಸೋತವು. ‘ಉಳಿದವರು ಕಂಡಂತೆ’ ತರಹದ ಹೊಸ ಪ್ರಯತ್ನವನ್ನು ಜನ ಮೆಚ್ಚಿಕೊಂಡರು. ರಂಗಭೂಮಿಯಲ್ಲೂ ಅನೇಕ ಪ್ರಯೋಗಗಳಾದವು. ಸಿ.ಆರ್. ಸಿಂಹ, ವಿ.ಕೆ. ಮೂರ್ತಿ, ಮಾಯಾ ರಾವ್ ಸೇರಿದಂತೆ ಕೆಲವು ಕಲಾವಿದರು ನಮ್ಮನ್ನಗಲಿದರು. ಬಾಲಿವುಡ್ಡಿನಲ್ಲಿ ಹ್ಯಾಪಿ ನ್ಯೂ ಇಯರ್, ಬ್ಯಾಂಗ್ ಬ್ಯಾಂಗ್ ಮುಂತಾದ ಚಿತ್ರಗಳು ಸದ್ದು ಮಾಡಿದರೆ, ರಜನೀಕಾಂತ್ ತಮ್ಮ ಲಿಂಗಾ ಮೂಲಕ ಸೂಪರ್‌ಸ್ಟಾರ್‌ಗಿರಿ ಮೆರೆದರು.

ಇಲ್ಲಿ ಕ್ರಿಕೆಟ್ಟಿಗೆ ಮಾತ್ರ ಮನ್ನಣೆ, ಜನ ಕ್ರಿಕೆಟ್ ಬಿಟ್ಟು ಬೇರೆ ಏನೂ ನೋಡೋದೇ ಇಲ್ಲ ಈ ದೇಶದಲ್ಲಿ ಅನ್ನೋ ಮಾತಿಗೆ ಅಪವಾದದಂತೆ ಈ ವರ್ಷ ಕಬಡ್ಡಿ ಆಟ ಜನಪ್ರಿಯವಾಯಿತು. ಒಂದು ಕಡೆ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ಗಳ ವಿರುದ್ಧದ ಏಕದಿನ ಸರಣಿಗಳನ್ನು ಗೆಲ್ಲುತ್ತಿದ್ದರೆ, ಇತ್ತ ಸ್ಪೋರ್ಟ್ಸ್ ಛಾನೆಲ್ಲುಗಳು ಪ್ರೊ-ಕಬಡ್ಡಿ ಸರಣಿಯನ್ನು ನಿರಂತರ ಪ್ರಸಾರ ಮಾಡಿದವು.  ಜನ ಎರಡನ್ನೂ ಮುಗಿಬಿದ್ದು ನೋಡಿದರು. ವರ್ಷಾಂತ್ಯದಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳೆರಡೂ ಕಬಡ್ಡಿ ವಿಶ್ವಕಪ್ ಗೆದ್ದುಕೊಂಡವು. ಮೇರಿ ಕೋಮ್ ಏಶಿಯನ್ ಗೇಮ್ಸ್ ಬಾಕ್ಸಿಂಗಿನಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್ವೆಲ್ತ್ ಗೇಮ್ಸಿನಲ್ಲಿ ಭಾರತ 64 ಪದಕಗಳನ್ನು ಬಾಚಿಕೊಂಡಿತು. ಸೈನಾ ನೆಹವಾಲ್, ಜೋಕೋವಿಕ್‌ರ ವಿಕ್ರಮಗಳನ್ನೂ ನಾವೆಲ್ಲ ನೋಡಿ ಖುಷಿಪಟ್ಟೆವು.

...ಹೀಗೇ ಹಿಂದೆ ನೋಡುತ್ತ ಹೋದರೆ ಅದೆಷ್ಟೋ ಖುಷಿಯ ಸುದ್ದಿಗಳು, ಹಿಗ್ಗಿನ ನಡೆಗಳು, ಗೆಲುವಿನ ಕುಣಿತಗಳು, ಕಳಿತು ಸಿಹಿಯಾದ ಫಲಗಳು, ಇಂಥದ್ದೂಂತ ಅರ್ಥೈಸಲಾಗದ ಘಟನೆಗಳು, ವಿಷಾದದ ಕ್ಷಣಗಳು, ಜರ್ಜರಿತರಾಗಿ ಕುಸಿದ ಗಳಿಗೆಗಳು, ಯಾರೋ ಹಿಡಿದೆತ್ತಿ ಕೂರಿಸಿದ ನಿಸ್ವಾರ್ಥ ಕ್ಷಣಗಳು, ಆವರಿಸಿದ ದಟ್ಟ ಕಾರ್ಮೋಡದ ನಡುವೆಯೂ ಹೊಳೆದ ಬೆಳ್ಳಿಗೆರೆಗಳು... ಪಾಕಿಸ್ತಾನದ ಮಲಾಲಾ, ಭಾರತದ ಕೈಲಾಶ್ ಸತ್ಯಾರ್ಥಿ ಇವರುಗಳಿಗೆ ಪ್ರತಿಷ್ಠಿತ ನೋಬೆಲ್ ಶಾಂತಿ ಪುರಸ್ಕಾರ ದೊರೆತಿದ್ದು ಈ ವರ್ಷದ ಬೆಳ್ಳಿಚುಕ್ಕಿಗಳಲ್ಲೊಂದು.

ಇವೆಲ್ಲ ಲೋಕದ ಸುಖ-ದುಃಖಗಳಾದವು. ನಾವು ನೋಡಿದ, ಕೇಳಿದ, ಓದಿದ ಸುದ್ದಿಗಳಾದವು. ನಮ್ಮೆದುರಿನವರ ಕತೆಯಾಯಿತು. ಆದರೆ ನಮ್ಮ ಬದುಕಿನಲ್ಲಿ ಏನಾಯಿತು? ನಮ್ಮ ವೈಯಕ್ತಿಕ ಬದುಕಿನಲ್ಲಿ ಮೇಲೇರಿದ್ದು, ಕೆಳಗಿಳಿದದ್ದು, ಸಂಭ್ರಮಾಚರಣೆ ಮಾಡಿದ್ದು, ಶೋಕದಲ್ಲಿ ಮಿಂದೆದ್ದದ್ದು, ನಕ್ಕಿದ್ದು, ಬಿಕ್ಕಳಿಸಿದ್ದು, ಮುಂದೇನೆಂದು ತೋಚದೆ ನಿಂತಿದ್ದು, ಮೌನದಲಿ ಆಲೋಚಿಸಿದ್ದು... ಕಾಣುವವರ, ಕಾಣದವರ ನಲಿವು-ನೋವುಗಳಿಗೆ ಸ್ಪಂದಿಸುತ್ತಾ ನಾವೂ ಒಂದು ವರ್ಷ ಹಳಬರಾದೆವು. ನಮ್ಮಿಷ್ಟದವರು ಗೆದ್ದಾಗ ನಾವೂ ಪ್ರಫುಲ್ಲಗೊಂಡೆವು, ಅವರ ನಗು ನೋಡಿ ನಾವೂ ಮುಖವರಳಿಸಿದೆವು; ನೋವು ಕಂಡಾಗ ನಾವೂ ಮುಗುಮ್ಮಾದೆವು, ಸಹಾಯ ಹಸ್ತ ಚಾಚಿದೆವು; ಅನ್ಯಾಯ ಕಂಡಾಗ ಪ್ರತಿಭಟಿಸಿದೆವು: ಕೆಲವೊಮ್ಮೆ ಬೀದಿಗಿಳಿದು, ಕೆಲವೊಮ್ಮೆ ಫೇಸ್‌ಬುಕ್ಕಿನ ಗೋಡೆಯಲ್ಲಿ, ಇನ್ನು ಕೆಲವೊಮ್ಮೆ ಮೌನದಲ್ಲಿ.

ಕಾಲದ ಹಕ್ಕಿ ಹಾರುತ್ತ ಹಾರುತ್ತ ಒಂದು ದೊಡ್ಡ ಯೋಜನವನ್ನೇ ದಾಟಿದೆ. ಈಗ ಮುಂದೆ ನೋಡಿದರೆ 2015 ಎಂಬ ಹೊಸದೇ ಆದ ಚಾಕಲೇಟ್ ಬಾರ್ ಚಂದದ ಝರಿ ಹೊದ್ದು ಫಳಫಳ ಹೊಳೆಯುತ್ತ ನಿಂತಿದೆ. ಹೊಸ ವರ್ಷದೆಡೆಗೆ ಆಶಾವಾದಿಗಳಾಗಿ ಹೆಜ್ಜೆ ಹಾಕಬೇಕಿದೆ. ಹೊಸ ಚಾಕಲೇಟಿನ ರ್ಯಾಪರ್ ಬಿಚ್ಚಿ ತೆರೆದು, ಹೊಸ ರುಚಿಯ ಆಸ್ವಾದಿಸಲು ತಯಾರಾಗಬೇಕಿದೆ. ಹೊಸ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ಹೊಸ ಕನಸು ಕಾಣಬೇಕಿದೆ.

‘ಹೊಸ ವರ್ಷವಾ, ಏನಿದೆ ಅದರಲ್ಲಿ, ಏನಿದೆ ಹೊಸತನ’ –ಎನ್ನದೇ, ಹೊಸ ಕ್ಯಾಲೆಂಡರ್ ತಂದು ಜಗುಲಿಯಲ್ಲಿ ನೇತುಹಾಕಬೇಕಿದೆ. ಹೊಸ ವರ್ಷ ಎಂದಾಕ್ಷಣ ಎಲ್ಲ ವಸ್ತು, ಊರು, ಕೆಲಸ, ಒಡನಾಡುವ ವ್ಯಕ್ತಿಗಳೂ ಹೊಸದೇ ಆಗಬೇಕಿಲ್ಲ. ಹೊಸತನಕ್ಕೆ ಹಂಬಲಿಸುವ ಮನಕ್ಕೆ ಮತ್ತೇನೂ ಬೇಡ: ಅದೇ ಹಳೇ ಪುಸ್ತಕಕ್ಕೆ ಒಂದು ಹೊಸ ಬೈಂಡ್, ಕಳೆದ ವರ್ಷದ ಆಕಾಶಬುಟ್ಟಿಗೆ ಬೇರೆ ಬಣ್ಣದ ಬಲ್ಬ್, ಹಳೆಯ ಕನ್ನಡಕಕ್ಕೆ ಹೊಸ ಫ್ರೇಮ್, ಮೊಬೈಲಿಗೊಂದು ಕಲರ್ ಕಲರ್ ಕವರ್, ಹೊಲದ ಬೇಲಿಯ ಗೂಟಗಳಿಗೆ ಹೊಸದಾಗಿ ಕಟ್ಟಿದ ದಬ್ಬೆ, ಒಗ್ಗರೆಣೆಗೆ ಸ್ವಲ್ಪ ವ್ಯತ್ಯಾಸ ಮಾಡಿ ಹಾಕಿದ ಸಂಬಾರ ಪದಾರ್ಥ, ದಿನಚರಿಯಲ್ಲಿ ಮಾಡಿಕೊಂಡ ಕೊಂಚ ಬದಲಾವಣೆ, ಡೆಸ್ಕ್‍ಟಾಪಿಗೆ ಹೊಸದೊಂದು ವಾಲ್‌ಪೇಪರ್ ಹಾಕಿದರೂ ಸಾಕು- ಏನೋ ಹೊಸತನ ನಮ್ಮನ್ನಾವರಿಸುತ್ತದೆ. ಹೊಸ ಉಲ್ಲಾಸದ ಹೂಮಳೆಯಾಗುತ್ತದೆ. ಹೊಸ ಉತ್ಸಾಹಕ್ಕದು ನಾಂದಿಯಾಗುತ್ತದೆ.

ಅಂತಹ ಸಣ್ಣಸಣ್ಣ ಹೊಸತನಗಳನ್ನು ಬೆರೆಸಿ ತಯಾರಿಸಿದ ಚಾಕಲೇಟನ್ನು ಹೊಸ ವರ್ಷವೆಂಬ ಬಣ್ಣದ ಬುಟ್ಟಿಯಲ್ಲಿಟ್ಟುಕೊಂಡು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಬರುತ್ತಿರುವ ಕಾಲದ ಹಕ್ಕಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳೋಣ. ಹೊಸ ಚಾಕಲೇಟಿನಲ್ಲಿ ಜಾಸ್ತಿ ಸಿಹಿಯಿರಲಿ, ಕಮ್ಮಿ ಕಹಿಯಿರಲಿ, ಹೆಚ್ಚೆಚ್ಚು ಗೋಡಂಬಿ-ದ್ರಾಕ್ಷಿಗಳು ಸಿಗಲಿ ಅಂತ ಹಾರೈಸೋಣ. ಹೊಸ ವರುಷದ ಶುಭಾಶಯಗಳು.

[ಉದಯವಾಣಿ  ಸಾಪ್ತಾಹಿಕಕ್ಕಾಗಿ ಬರೆದುಕೊಟ್ಟಿದ್ದು. 'ಹಕ್ಕಿ ಹಾರುತಿದೆ ನೋಡಿದಿರಾ? ಅದು ಕಾಲದ ಹಕ್ಕಿ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು.]

Saturday, December 20, 2014

ಪರಿತ್ಯಕ್ತನ ಪರಿಷೆ

ಪರಿಷೆಯ ನಂತರ ವ್ಯಾಪಾರಿಗಳೆಲ್ಲ ತಮ್ಮ ಗುಡಾರದೊಂದಿಗೆ
ಗದ್ದಲವನ್ನೂ ಬಳುಗಿ ಕೊಂಡೊಯ್ವರು.  ಜಾತ್ರೆ ನಡೆದಿತ್ತೆಂಬುದಕ್ಕೆ ಕುರುಹಾಗಿ
ಅಲ್ಲಲ್ಲಿ ಉಳಿದ ಕಡಲೆಕಾಯಿಯ ಸಿಪ್ಪೆ, ಬೋಂಡ ತಿಂದೆಸೆದ ಕಾಗದದ
ಚೂರುಗಳನ್ನೂ ಮರುದಿನ ಕಸ ಗುಡಿಸುವವರು ಎತ್ತೊಯ್ದು
ಪೇಟೆ ಬೀದಿಯಲ್ಲೀಗ ಬರೀ ಮೌನ. ಮತ್ತು ಅಂಗಡಿಯವರು ಟಾರ್ಪಲ್
ಕಟ್ಟಲು ತೋಡಿದ ಸಣ್ಣ ಗುಂಡಿಗಳು, ಪಕ್ಕದಲ್ಲೆದ್ದ ಮಣ್ಣ ಹೆಂಟೆ.

ಪರಿಷೆಯಲ್ಲಿ ಮೊಮ್ಮಗನಿಗೆ ಅಜ್ಜ ಕೊಡಿಸಿದ ಆಪಲ್ ಬಲೂನು
ಮನೆಗೆ ಬರುವಷ್ಟರಲ್ಲಿ ಒಡೆದಿದೆ. ಬೊಗಸೆ ಜಾಸ್ತಿಯೇ ಹಾಕಿಸಿಕೊಂಡು ತಂದ
ಖಾರಾ-ಮಂಡಕ್ಕಿ ಎರಡು ದಿನಕ್ಕೆ ಮೆತ್ತಗಾಗಿದೆ. ದೊಡ್ಡ ತೊಟ್ಟಿಲಲ್ಲಿ ಕೂತು
ಅಷ್ಟು ನಕ್ಕಿದ್ದ ದಂಪತಿ ಮನೆಗೆ ಬಂದಮೇಲೆ ನಗುವನ್ನೇ ಮರೆತಂತಿದ್ದಾರೆ.
ತೊಟ್ಟು ನೋಡಿದ ಹೊಸ ಸರ ಕನ್ನಡಿಯ ಬಿಂಬಕ್ಕಾಗಲೇ ಬೇಸರ ಬಂದಿದೆ.

ಪರಿತ್ಯಕ್ತನಿಗೆ ಪರಿಷೆಯಲ್ಲಿ ನೂರಾರು ನೆಂಟರು. ಪರಸ್ಪರ ಪರಿಚಯವೇ
ಇಲ್ಲದವರ ಆಸುಪಾಸು ಮೈಕೈ ತಗುಲಿಸುತ್ತ ತನ್ನದೇ ಪೋಷಾಕಿನಲ್ಲಿ
ಓಡಾಡುವ ಅವನು ಹೊದ್ದಿದ್ದ ಉನ್ಮಾದಗಂಬಳಿ ಜಾತ್ರೆಯಂಗಳದ ಗಡಿ ದಾಟುತ್ತಲೇ
ಮೈಯಿಂದ ಕಳಚಿ ಬೀಳ್ವುದು. ಮತ್ತೆ ಮೂಲೆ ದರ್ಶಿನಿಯ ತಟ್ಟೆಯಿಡ್ಲಿ,
ನಾಲ್ಕನೇ ಫ್ಲೋರಿನ ಸಿಂಗಲ್ ರೂಮಿನ ಸುಗ್ಗಿದ ಹಾಸಿಗೆ, ನಿದ್ದೆ ಮಾಡಗೊಡದ
ಕಿವಿಯಲ್ಲಿ ಮೊರೆಯುವ ಸಾವಿರ ಪೀಪಿಗಳ ಸದ್ದು.

ಒಂಟಿ ಬಕೀಟು ಒಂಟಿ ಜಗ್ಗಿನ ಪುಟ್ಟ ಬಚ್ಚಲಲ್ಲಿ ನಿಂತು
ಅದೆಷ್ಟು ನೀರೆರೆದುಕೊಂಡರೂ ತೊಲಗದ ಈ ಪೀಪಿಮೊರೆತ,
ಸಿಟಿಬಸ್ಸಿನ ಸದ್ದು, ತನ್ನ ಗಾರ್ಮೆಂಟ್ಸ್ ಫ್ಯಾಕ್ಟರಿಯ ಸಾಲುಸಾಲು
ಹೊಲಿಗೆ ಯಂತ್ರಗಳ ಗಲಾಟೆಯ ನಡುವೆಯೂ ಕಳೆಯದೆ ಬರುವುದು.
ಮಧ್ಯಾಹ್ನದ ತಿಂಡಿಡಬ್ಬಿಗಳ ಟಿಂಟಿಣಿಗಳೆದುರೂ ಜ್ಯೇಷ್ಠತೆ ಮೆರೆವುದು.

ಊಟವಾದದ್ದೇ ತೇಲಿಬರುವ ನಿದ್ದೆಜೋಂಪು ಎಲ್ಲರನ್ನಾವರಿಸುವಾಗ,
ಪರಿಷೆಯ ಹೋಕರೆಲ್ಲ ಎತ್ತಲೋ ನೋಡುತ್ತಿದ್ದಾಗ ಚೌಕಾಶಿ ಮಾಡದೇ ಕೊಂಡಿದ್ದ
ನವಿಲ ಚಿತ್ರದ ಹೇರ್‌ಬ್ಯಾಂಡನ್ನು ಪರಿತ್ಯಕ್ತ ಈಗ ತನ್ನ ಟೇಬಲ್ಲಿನ ಮೇಲಿಡುವನು.
ಅಲ್ಲೇ ಬಟ್ಟೆರಾಶಿಯ ನಡುವೆಯೆಲ್ಲೋ ಕೂತಿರುವ ಹಳೆಹುಡುಗಿ
ಇತ್ತ ಹಾಯ್ವುದನ್ನೇ ಕಾಯುತ್ತ ಕಿವಿಗಳೆರಡನ್ನೂ ಗಟ್ಟಿಮುಚ್ಚಿ ಕೂರುವನು.

Monday, December 08, 2014

ಮಾಗಿ

ಚಳಿಗುಳ್ಳೆ ಹೊತ್ತ ಮಾಗಿ ಕೆಂಪು ರಗ್ಗಿನ ಸಂದಿಯಿಂದ ತೂರಿ ಬಂದಿದೆ 
ದೋಸೆಗೆಂದು ಬೀಸಿದ ಕಾಯಿಚಟ್ನಿಯಲ್ಲಿ ಬೆಣ್ಣೆ ಬಂದು ನೆಂಟರೆದುರು ಮುಜುಗರವಾಗಿದೆ
ಗೆಳೆಯ ಕೊಡಿಸಿದ ಕ್ಯಾಡ್ಬರೀ ಸಿಲ್ಕು ಬಚ್ಚಿಟ್ಟ ಗೂಡಲ್ಲೇ ಕಲ್ಲಾಗಿದೆ
ಬಾಟಲಿಯಲ್ಲಿನ ಪ್ಯಾರಶೂಟು ಎಷ್ಟು ಕೊಡವಿದರೂ ಬೀಳದಷ್ಟು ಹೆರೆಗಟ್ಟಿದೆ

ಮುಂಜಾನೆ ಬರುವರ್ಚಕನ ತಣ್ಣನೆ ಕ್ಷೀರಾಭಿಷೇಕವ ನೆನೆದು
ರಾತ್ರಿಯೇ ಹೆದರಿದ ವಿಗ್ರಹವನ್ನು ಗರ್ಭಗುಡಿಯ ನಂದಾದೀಪ ಸಂತೈಸುತ್ತಿದೆ
ಹೊರಗಿನ ಚಳಿ ತಾಳದೆ ಫಾರೆಸ್ಟ್ ರೆಸಾರ್ಟಿನ ಕಿಚನ್ನಿಗೆ ನುಗ್ಗಿದ ಮಿಂಚುಹುಳ
ತನ್ನಂತೆಯೇ ಹೊಟ್ಟೆಯೊಳಗೆ ದೀಪವಿಟ್ಟುಕೊಂಡ ಫ್ರಿಜ್ಜನ್ನು ಕಂಡು ಚಕಿತಗೊಂಡಿದೆ

ಅಜ್ಜನ ಬೊಚ್ಚುಬಾಯಿಂದ ಗೂರಲು ಕೆಮ್ಮಿನೊಡನೆಯೇ ಹೊರಟ ಬೀಡಿಹೊಗೆ
ವಾಕಿಂಗಿಗೆ ಬಂದು ದಿಕ್ಕು ತಪ್ಪಿದ ಕನ್ನಡಕದಜ್ಜಿಯ ಬೆಚ್ಚಗಾಗಿಸಿದೆ
ಹಾಟ್‌ಚಿಪ್ಸ್ ಅಂಗಡಿಯ ದೊಡ್ಡ ಬಾಣಲಿಯ ಕಾದೆಣ್ಣೆಯಲಿ ಸಳಸಳ
ಬೇಯುತ್ತಿರುವ ತೆಳ್ಳಗಿನಾಲೂ ಎಸಳುಗಳು ಸುತ್ತ ನಿಂತವರಿಗೆ ಹಿತವಾಗಿದೆ

ಸಿಗ್ನಲ್ಲಿನಲ್ಲಿ ನಿಂತ ಜಾಕೆಟ್ ಮರೆತ ಬೈಕ್ ಸವಾರನ ನಡುಗುವ ಮೈಯನ್ನು
ಪಕ್ಕ ಬಂದು ನಿಂತ ದಢೂತಿ ಲಾರಿಯ ಎಂಜಿನ್ ಬಿಸಿಗಾಳಿಯಿಂದ ಸವರುತ್ತಿದೆ
ಸುಗ್ಗಿಯ ಭರಾಟೆಯ ಅಂಗಳದಲ್ಲಿ ಅಡಕೆ ಕುಚ್ಚುತ್ತಿರುವಪ್ಪನನ್ನು
ಹಂಡೆ ಕೆಳಗಿನ ಉರಿಸೌದೆಗಳಿಂದೆದ್ದ ಕಿಡಿಗಳು ಚುರುಕಾಗಿಟ್ಟಿವೆ

ಈಗಷ್ಟೆ ಬಿರಿದ ಮೊಗ್ಗಿನೊಳಗೆ ಬಿದ್ದ ಹನಿಯಿಬ್ಬನಿ ಶಲಾಕೆಗೆ ತಾಕಿ
ಪರಾಗರೇಣುಗಳುದ್ರೇಕಗೊಂಡು ತುಂಬಿಯಾಗಮನಕೆ ಕ್ಷಣಗಣನೆ ಶುರುವಾಗಿದೆ
ದೂರದೂರಿನ ಒಂಟಿ ಮನೆಯಲ್ಲಿ ಕೂತ ಗೃಹಿಣಿಯ ಮಡಿಲಲ್ಲೊಂದು ಉಲ್ಲನಿನುಂಡೆಯಿದೆ
ತೀಕ್ಷ್ಣ ಬೆರಳಿನಾಕೆಯ ಕ್ರೋಷಾ ಕಡ್ಡಿಯಲ್ಲಿ ಇಡೀ ಜಗದ ಚಳಿಗೆ ಚಿಕಿತ್ಸೆಯಿದೆ.

Monday, December 01, 2014

ಹೋಮ್ ನರ್ಸ್

ಪ್ರತಿದಿನದ ಪದ್ದತಿಯಂತೆ ಬೆಳಿಗ್ಗೆ ಹತ್ತು ಗಂಟೆಗೆ ಮನೆ ಬಿಟ್ಟು, ಹತ್ತೂವರೆಗೆ ಬಂದ ಗಜಾನನ ಬಸ್ಸು ಹತ್ತಿ, ಸಾಗರದ ಪ್ರೈವೇಟ್ ಬಸ್‍ಸ್ಟಾಂಡಿನಲ್ಲಿ ಇಳಿದುಕೊಂಡು, ಪೈ ಐಸ್‍ಲ್ಯಾಂಡ್ ಬಳಿಯ ತನ್ನ ಪರಿಚಯದವರ ಅಂಗಡಿಯಲ್ಲಿ ಪುಕ್ಕಟೆ ನ್ಯೂಸ್‍ಪೇಪರ್ ಇಸಿದುಕೊಂಡು ಅದೇ ಅಂಗಡಿಯ ಗೋಡೆಗೆ ಒರಗಿ ನಿಂತಿದ್ದಾಗಲೇ ತ್ರಯಂಬಕನಿಗೆ ಕೆರೆಹಳ್ಳಿ ವೆಂಕಟೇಶ ಕಂಡಿದ್ದು. ಕೆರೆಹಳ್ಳಿ ವೆಂಕಟೇಶ ತ್ರಯಂಬಕನಿಗೆ ಹತ್ತಾರು ವರ್ಷಗಳಿಂದ ಪರಿಚಯ. ಇಬ್ಬರೂ ದೇಶಾವರಿ ಮನುಷ್ಯರು. ಇಬ್ಬರೂ ಪಾಪರ್‍ಚೀಟಿ ಪೇಪರ್‍ಮೆಂಟುಗಳು. ಓಸಿ ಆಟದಲ್ಲಿ ಇಬ್ಬರೂ ಮಾತಾಡಿಕೊಂಡೇ ಬಿಡ್ ಮಾಡುತ್ತಿದ್ದುದು. ‘ನೀನು ಇಪ್ಪತ್ತಾರಕ್ಕೆ ಹಾಕ್ತ್ಯನಾ, ಹಂಗಾರೆ ನಾನು ಐವತ್ತೆರಡಕ್ಕೆ ಹಾಕ್ತಿ’ ಅಂತ ದೊಡ್ಡ ದನಿಯಲ್ಲಿ ಹೇಳಿಕೊಂಡು ಇಬ್ಬರೂ ಕುಣಿಗೆ ಬೀಳುತ್ತಿದ್ದರು. ಮಧುರಾ ಹೋಟೆಲಿನ ನೊರೆಕಾಫಿ ಇವರಿಗಾಗಿಯೇ ಬೈಟೂ ಆಗುತ್ತಿತ್ತು.


ಆದರೆ ಕೆರೆಹಳ್ಳಿ ವೆಂಕಟೇಶ ಇವತ್ತು ಯಾವುದೋ ತರಾತುರಿಯಲ್ಲಿದ್ದಂತೆ ಕಂಡ. ‘ಏನೋ ವೆಂಕಿ, ಭಾರೀ ಅರ್ಜೆಂಟಲ್ಲಿ ಇದ್ದಂಗೆ ಕಾಣ್ತು?’ ಅಂತ ಕೇಳಿದ ತ್ರಯಂಬಕನಿಗೆ ವೆಂಕಟೇಶ, ‘ಇಲ್ಲೆ ಇಲ್ಲೆ. ನಿನ್ನನ್ನೇ ಕಾಣನ ಅಂತ ಬಂದಿ. ಎಂಥಾತು ಅಂದ್ರೆ, ನಿನ್ನೆ ಯಾವುದೋ ಮದುವೆಮನೆಗೆ ಹೋಗಿದ್ದವಾಗ ಭಾಗವತ್ ನರ್ಸಿಂಗ್ ಹೋಮಿನ ಡಾಕ್ಟ್ರು ಸಿಕ್ಕಿದ. ನಿಂಗೆ ಗೊತ್ತಿದಲ, ನಮಗೆ ಅವರು ದೂರದಿಂದ ನೆಂಟರು. ನಾನು ಸರಿಯಾದ ಕೆಲಸ ಇಲ್ದೇ ಸಾಗರದಲ್ಲಿ ಪ್ಯಾಟೆ ಅಲೆಯೋದು ಅವರಿಗೂ ಗೊತ್ತಿದ್ದು. ಅವರು ನನ್ನನ್ನ ಒಬ್ಬವನ್ನೇ ಹೊರಗಡೆ ಕರ್ಕಂಡ್ ಹೋಗಿ, ಒಂದು ಕೆಲಸದ ವಿಷಯ ಹೇಳಿದ...’ ತ್ರಯಂಬಕ ಕುತೂಹಲಗೊಂಡ. ಭಾಗವತ್ ನರ್ಸಿಂಗ್ ಹೋಮಿನ ಡಾಕ್ಟ್ರು ವೆಂಕಟೇಶನಿಗೆ ಹೇಳಿದ ಉದ್ಯೋಗದ ವಿವರ ಹೀಗಿತ್ತು:

ಸಾಗರದಿಂದ ಹನ್ನೆರಡು ಕಿಲೋಮೀಟರ್ ದೂರವಿರುವ ಉಳ್ಳೂರಿನಲ್ಲಿ ಬಸವೇಗೌಡರು ಎಂಬುವವರಿದ್ದಾರೆ. ಅವರಿಗೆ ಒಬ್ಬ ಮಗ - ಒಬ್ಬ ಮಗಳು. ಮಗಳಿಗೆ ಮದುವೆಯಾಗಿ ಬೆಂಗಳೂರು ಸೇರಿದ್ದರೆ ಮಗ ಓದಿಕೊಂಡು ಅಮೆರಿಕಾ ಹಾರಿದ್ದಾನೆ. ಹೆಂಡತಿ ತೀರಿಕೊಂಡು ಆರೇಳು ವರ್ಷವಾಯ್ತು. ಬಸವೇಗೌಡರು ತಮ್ಮ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ದಮ್ಮಿನ ಖಾಯಿಲೆ ಮತ್ತು ಡಯಾಬಿಟೀಸ್. ಅದಕ್ಕಂಟಿಕೊಂಡಂತೆ ದಿನಕ್ಕೊಂದು ಕಾಣಿಸಿಕೊಳ್ಳುವ ವೃದ್ಧಾಪ್ಯದ ತೊಂದರೆಗಳು. ಮಗಳು ಮನೆಗೆಲಸಕ್ಕೆ ಅಂತ ಅದೇ ಊರಿನ ಒಬ್ಬ ಹೆಂಗಸನ್ನು ನೇಮಿಸಿ ಹೋಗಿದ್ದಾಳೆ. ಆ ಹೆಂಗಸು ಪ್ರತಿದಿನ ಬೆಳಿಗ್ಗೆ ಬಂದು ಮನೆ ಸ್ವಚ್ಛಗೊಳಿಸಿ, ಅಡುಗೆ ಮಾಡಿಟ್ಟು ಹೋಗುತ್ತಾಳೆ. ಆದರೆ ಬಸವೇಗೌಡರಿಗೆ ದಿನೇದಿನೇ ಶಕ್ತಿ ಕುಂದುತ್ತಿರುವುದರಿಂದ ಎದ್ದು ಓಡಾಡುವುದೂ ಕಷ್ಟವಾಗುತ್ತಿದೆ. ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲೂ ಆಗದಂತಹ ಪರಿಸ್ಥಿತಿ. ಮಗಳು ತಂದೆಯನ್ನು ಬೆಂಗಳೂರಿನ ತಮ್ಮ ಮನೆಗೇ ಬಂದು ಇರಲು ಎಷ್ಟೇ ಒತ್ತಾಯ ಮಾಡಿದರೂ ಹುಟ್ಟಿ ಬೆಳೆದ ಮನೆ ಬಿಟ್ಟು ಬರಲು ಗೌಡರು ಒಪ್ಪರು. ಮಗನಂತೂ ಇವರ ಬೇಕುಬೇಡಗಳನ್ನು ವಿಚಾರಿಸಿಕೊಳ್ಳಲೂ ಆಗದಷ್ಟು ದೂರವಿದ್ದಾನೆ. ವಾರಕ್ಕೊಮ್ಮೆ ಫೋನ್ ಮಾಡಿದರೆ ಅದೇ ದೊಡ್ಡದು.

ಬಸವೇಗೌಡರಿಗೆ ಭಾಗವತ್ ಆಸ್ಪತ್ರೆಯ ಡಾಕ್ಟರು ಫ್ಯಾಮಿಲಿ ಡಾಕ್ಟರ್. ಗೌಡರು ಶುಗರು, ಬೀಪಿ ಪರೀಕ್ಷೆ ಮಾಡಿಸಲು ಭಾಗವತ್ ಆಸ್ಪತ್ರೆಗೇ ಹೋಗುವರು. ಆದರೆ ಇತ್ತೀಚಿಗೆ ಆಟೋ ಮಾಡಿಸಿಕೊಂಡು ಸಾಗರಕ್ಕೆ ಬಂದು ಟೆಸ್ಟ್ ಮಾಡಿಸಿಕೊಂಡು ಹೋಗಲಾಗದೇ ಇರುವುದರಿಂದ ಭಾಗವತ್ ಡಾಕ್ಟ್ರು ಗೌಡರ ಮನೆಗೇ ತಮ್ಮ ಜೂನಿಯರ್ ಒಬ್ಬರನ್ನು ಕಳುಹಿಸುತ್ತಿದ್ದಾರೆ. ಆದರೆ ಬಸವೇಗೌಡರ ಆರೈಕೆಗೆ ಒಬ್ಬ ಖಾಯಂ ವೈದ್ಯರ ನೆರವು ಬೇಕಾಗಿದೆ. ಮುದುಕರಿಗೆ ಆಹಾರದಲ್ಲಿ ಪಥ್ಯ ಮಾಡುವುದು ಆಗುವುದಿಲ್ಲ. ಹಠ ಮಾಡುತ್ತಾರೆ. ಕೆಲಸದವಳ ಬಳಿ ಸಿಹಿತಿಂಡಿ, ಕುರುಕಲು ತಿಂಡಿ ಮಾಡಿಸಿಕೊಂಡು ತಿಂದುಬಿಡುತ್ತಾರೆ. ಆಮೇಲೆ ತೊಂದರೆಯಾಗಿ ಒದ್ದಾಡುತ್ತಾರೆ. ಅವರಿಗೆ ಈಗ ಪ್ರತಿದಿನ ಇಂಜೆಕ್ಷನ್ ಕೊಡಬೇಕಾದ ಪರಿಸ್ಥಿತಿ ಇದೆ. ಅವರನ್ನು ನೋಡಿಕೊಳ್ಳಲು ಒಬ್ಬರು ವೈದ್ಯಕೀಯ ಪರಿಣಿತಿ ಇರುವವರು ಬೇಕು.

‘ಬಸವೇಗೌಡರ ಮಗಳು ಹೋದವಾರ ಬಂದು ತನ್ನಪ್ಪನಿಗೆ ಒಬ್ಬ ಹೋಮ್ ನರ್ಸ್ ನೇಮಿಸಿಕೊಡಿ ಅಂತ ಕೇಳಿಕೊಂಡಿದ್ಲು. ನಿನ್ನನ್ನ ನೋಡ್ತಿದ್ದ ಹಾಗೇ ನೆನಪಾಯ್ತು. ನೀನು ಬಸವೇಗೌಡರ ಮನೆಗೆ ಹೋಗಿ ಇರು. ಮನೆ ಕೆಲಸ ಏನೂ ನೀನು ಮಾಡ್ಬೇಕಿಲ್ಲ, ಅದಕ್ಕೆ ಕೆಲಸದವರು ಇದಾರೆ.  ಗೌಡರ ಆರೋಗ್ಯ ನೋಡಿಕೊಂಡರೆ ಆಯ್ತು. ನಾವು ಎಲ್ಲಾ ಹೇಳಿಕೊಡ್ತೀವಿ: ಅವರಿಗೆ ಕೊಡಬೇಕಾದ ಮೆಡಿಕೇಶನ್ಸ್, ಆಹಾರ ಕ್ರಮ, ವಾಕಿಂಗ್ ಕರೆದುಕೊಂಡು ಹೋಗೋದು, ಎಲ್ಲಾ. ಮೊದಲು ಒಂದಷ್ಟು ದಿನ ನಮ್ಮ ಆಸ್ಪತ್ರೆಯ ಡಾಕ್ಟರೇ ಬಂದು ಹೋಗ್ತಾರೆ. ಆಮೇಲೆ ನಿನಗೇ ಇಂಜೆಕ್ಷನ್ ಕೊಡೋದನ್ನೂ ಹೇಳಿಕೊಡ್ತಾರೆ. ನೋಡು, ನಿಂಗೂ ಒಂದು ಕೆಲಸ ಅಂತ ಆಗುತ್ತೆ. ಒಳ್ಳೆಯ ಸಂಬಳ ಕೊಡಿಸ್ತೇನೆ. ನಿನ್ನ ಊಟಾನೂ ಕಳೆಯೊತ್ತೆ. ಯೋಚನೆ ಮಾಡು, ನಾಳೆ-ನಾಡಿದ್ದರಲ್ಲಿ ಆಸ್ಪತ್ರೆಗೆ ಬಂದು ಹೇಳು’ ಅಂತ ಭಾಗವತ್ ಡಾಕ್ಟರು ಹೇಳಿದ್ದಾಗಿ ವೆಂಕಟೇಶ ಹೇಳಿದ.

‘ಓಹ್, ಚೊಲೋನೇ ಆತಲ? ಈಗ ಎಂಥ ಮಾಡ್ತೆ? ಒಪ್ಗೆ ಕೊಟ್ಯಾ?’ ಕೇಳಿದ ತ್ರಯಂಬಕ.

‘ನಾನೂ ಯೋಚನೆ ಮಾಡಿದಿ. ನಂಗೇನೋ ಅಡ್ಡಿಲ್ಲೆ ಅನ್ನಿಸ್ಚು. ಆದ್ರೆ ಮನೇಲಿ ಒಪ್ಪಲ್ಲೆ. ಅಪ್ಪಯ್ಯ ಬೈದ. ಬಾಹ್ಮಣ ಆಕ್ಯಂಡು ಗೌಡ್ರು ಮನೇಲಿ ಹೋಗಿ ಇರ್ತ್ಯಾ? ಬೇರೆ ಜಾತಿಯೋರ ಸೇವೆ ಮಾಡ್ತ್ಯಾ? ಆ ಮುದುಕಂಗೆ ನಾಳೆ ಖಾಯಿಲೆ ಜೋರಾತು ಅಂದ್ರೆ ಅವನ ಹೇಲು-ಉಚ್ಚೇನೂ ನೀನೇ ಬಳಿಯಕ್ಕಾಗ್ತು, ಮಾಡ್ತ್ಯಾ? -ಅಂತ ಕೇಳಿದ. ಕೊನಿಗೆ ನಂಗೂ ಯಾಕೋ ಇದೆಲ್ಲಾ ನನ್ ಕೈಯಲ್ಲಿ ಆಪ್ದಲ್ಲ ಅನ್ನಿಸ್ಚು. ಅದಕ್ಕೇ ನಿಂಗೆ ಒಂದು ಮಾತು ಹೇಳನ ಅಂದ್ಕಂಡಿ. ನೋಡು, ನಿಂಗೆ ಅಡ್ಡಿಲ್ಲೆ ಅಂದ್ರೆ ಭಾಗವತ್ ಡಾಕ್ಟ್ರ ಹತ್ರ ಕರ್ಕಂಡ್ ಹೋಗ್ತಿ’ ಹೇಳಿದ ವೆಂಕಟೇಶ.

ತ್ರಯಂಬಕ ಯೋಚಿಸಿದ. ಕೆಲಸವೇನೂ ಕಷ್ಟದ್ದಲ್ಲ ಎನಿಸಿತು. ಶ್ರೀಮಂತರು, ಮಕ್ಕಳು ಹೊರಗಡೆ ಇರುವವರು ಅಂದಮೇಲೆ ತಿಂಗಳಿಗೆ ನಾಲ್ಕೈದು ಸಾವಿರ ಸಂಬಳಕ್ಕಂತೂ ಮೋಸವಿಲ್ಲ. ಆದರೆ ಮನೆ, ಹೆಂಡತಿ, ಮಗಳನ್ನು ಬಿಟ್ಟು ಇರಬೇಕಲ್ಲಾ ಅಂತ ಯೋಚನೆಯಾಯಿತು. ಯಾವುದಕ್ಕೂ ಹೆಂಡತಿಯನ್ನು ಒಂದು ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳೋಣ ಎನಿಸಿ, ವೆಂಕಟೇಶನಿಗೆ ನಾಳೆ ತಿಳಿಸುವುದಾಗಿ ಹೇಳಿ, ತ್ರಯಂಬಕ ಊರಿಗೆ ವಾಪಸಾದ.

* * *

ಹಾಗೆ ನೋಡಿದರೆ, ತ್ರಯಂಬಕನಿಗೆ ಹೀಗೆ ಹೊಸ ಸಾಹಸಗಳನ್ನು ಮೈಮೇಲೆಳೆದುಕೊಳ್ಳುವುದು ಹೊಸದೇನಲ್ಲ. ವರ್ಷದ ಅಡಿಕೆ ಫಸಲಿನ ಆದಾಯ ಮಂಡಿಯಿಂದ ಸಿಕ್ಕ ತಿಂಗಳೊಳಗೇ ಓಸಿ ಆಟಕ್ಕೋ ಅಥವಾ ಮತ್ತಿನ್ಯಾವುದೋ ಕೈಂಕರ್ಯಕ್ಕೋ ಖರ್ಚಾಗಿಹೋಗಿ ಇನ್ನುಳಿದ ಹನ್ನೊಂದು ತಿಂಗಳಿಗೆ ಹಣ ಹೊಂದಿಸುವುದಕ್ಕೆ ಏನಾದರೂ ಒಂದು ಕಸರತ್ತು ನಡೆಸುವುದು ಅವನಿಗೆ ಅಭ್ಯಾಸವಾಗಿಹೋಗಿತ್ತು. ಪ್ರತಿಸಲ ಓಸಿ ಆಟದಲ್ಲಿ ಹಣ ಬಂದಾಗ ಇನ್ನು ಮತ್ತೆ ಕಟ್ಟಬಾರದು ಎಂದು ಗಟ್ಟಿ ಮನಸು ಮಾಡಿಕೊಂಡರೂ ಪೇಟೆಗೆ ಹೋಗಿ ಜೋಗಪ್ಪನ ಅಂಗಡಿ ಮುಂದೆ ನಿಲ್ಲುವ ಹೊತ್ತಿಗೆ ಆ ನಿರ್ಧಾರ ಮಧುರಾ ಹೋಟಿಲಿನ ಮೃದು ದೋಸೆಯಂತೆ ಕರಗಿಹೋಗಿರುತ್ತಿತ್ತು. ಹಿಂದಿನ ರಾತ್ರಿ ಬಿದ್ದ ಕನಸು, ಬೆಳಿಗ್ಗೆ ನ್ಯೂಸ್‍ಪೇಪರಿನಲ್ಲಿ ನೋಡಿದ್ದ ವ್ಯಂಗ್ಯಚಿತ್ರ, ದಾರಿಯಲ್ಲಿ ಕಂಡ ದೃಶ್ಯಗಳು -ಎಲ್ಲವೂ ತೋರುತ್ತಿದ್ದ ಅದೇನೋ ಸಂಜ್ಞೆ ತ್ರಯಂಬಕನನ್ನು ಜೂಜಿನ ಮಾಯಾಲೋಕದೊಳಗೆ ಅನಾಯಾಸ ಸೆಳೆದೊಯ್ಯುತ್ತಿದ್ದವು.

ತ್ರಯಂಬಕನ ಈ ಚಾಳಿ ಅವನ ಹೆಂಡತಿ ಭಾರತಿಗೆ ನುಂಗಲಾರದ ತುತ್ತೇನು ಆಗಿರಲಿಲ್ಲ. ದುಡ್ಡೆಲ್ಲ ಕಳೆದುಕೊಂಡು ದಿನಸಿ ಸಾಮಗ್ರಿ ತರಲೂ ಆಗದಷ್ಟು ಬರಿಗೈ ದಾಸನಾಗಿ ಗಂಡ ಮನೆಗೆ ಮರಳಿದಾಗ ಮಾತ್ರ ಗಂಟಲೇರಿಸಿ -ಆದರೂ ಅಕ್ಕಪಕ್ಕದ ಮನೆಗೆ ಕೇಳದಷ್ಟು ಗಟ್ಟಿಯಾಗಿ- ನಾಲ್ಕು ಮಾತಾಡುತ್ತಿದ್ದಳಾದರೂ ತ್ರಯಂಬಕ ಅಂತಹ ಸನ್ನಿವೇಶಗಳಿಗೆ ಹೆಚ್ಚಾಗಿ ಸಿಲುಕಿದವನಲ್ಲ. ಸಂಸಾರ ತೂಗಿಸಲು ಸಾಕಾಗುವಷ್ಟು ಹಣ ಅದು ಹೇಗೋ ಹೊಂದಿಸುವುದು ಅವನಿಗೆ ಕರಗತವಾಗಿಬಿಟ್ಟಿತ್ತು. ಅಲ್ಲದೇ ಓಸಿಯಾಟದಲ್ಲಿ ಹಣ ಜಾಸ್ತಿ ಬಂದಾಗ ಮನೆಗೂ ಮಡದಿಗೂ ಒಪ್ಪುವಂತೆ ಆಡಂಬರದ ಸಾಮಗ್ರಿಗಳನ್ನು ತಂದುಬಿಡುತ್ತಿದ್ದ ಅಥವಾ ಭಾರತಿಗೆ ‘ಇವತ್ತು ಇಷ್ಟು ಬಂತು ತಗಳೇ’ ಅಂತ ತನ್ನ ಕೈಯಾರೆ ಒಂದು ಮೊತ್ತದ ಕಂತೆ ಕೊಟ್ಟುಬಿಡುತ್ತಿದ್ದ. ಹೀಗಾಗಿ ಗಂಡ ಆಡುತ್ತಿರುವ ಆಟ, ನಡೆಯುತ್ತಿರುವ ದಾರಿ ಸರಿಯೋ ತಪ್ಪೋ ಎಂದು ಹೇಳುವ ಧೈರ್ಯವಾಗಲೀ  ವಿವೇಚನೆಯಾಗಲೀ ಭಾರತಿಗೆ ಬರಲೇ ಇಲ್ಲ. ಇನ್ನು ಹೈಸ್ಕೂಲಿಗೆ ಹೋಗುವ ಮಗಳು ಶಾಲಿನಿ ತನ್ನದೇ ಕನಸಿನ ಲೋಕದಲ್ಲಿ ತೇಲುತ್ತ, ಹೊಸ ಚೂಡಿದಾರಿನ ಡಿಸೈನಿನ ವೈಯಾರದಲ್ಲಿ ಮಾಗುತ್ತ ಇದ್ದುಬಿಡುತ್ತಿದ್ದಳು. ಅವಳ ಖರ್ಚಿಗಾಗುವಷ್ಟು ಹಣ ಅಮ್ಮನಿಂದ ಅವಳಿಗೆ ಸಿಕ್ಕೇ ಸಿಗುತ್ತಿತ್ತು.

ತ್ರಯಂಬಕ, ತನ್ನ ಈ ಮುಗ್ಧ ಸಂಸಾರದ ಲಾಭವನ್ನು ಅನುಭವಿಸುತ್ತಲೇ ತನ್ನ ಬಹುತರವಾದ ಖರ್ಚುಗಳನ್ನು ನಿಭಾಯಿಸಲು ಹೊಸ ಹೊಸ ಉದ್ಯೋಗಗಳನ್ನೂ ಕಾರ್ಯತಂತ್ರಗಳನ್ನೂ ಹುಡುಕುತ್ತಿರುತ್ತಿದ್ದ. ಅಣಬೆ ಬೇಸಾಯ, ನ್ಯೂಸ್?ಪೇಪರ್ ಏಜೆನ್ಸಿ, ದೊನ್ನೆ ತಯಾರಿಕೆ, ಏಲಕ್ಕಿ ವ್ಯಾಪಾರ, ಹೀಗೆ ತರಹೇವಾರಿ ಖಾತೆಗಳನ್ನು ನಿಭಾಯಿಸಲು ಪ್ರಯತ್ನಿಸಿದರೂ ಯಾಕೋ ಯಾವುದೂ ಅವನ ಕೈ ಹಿಡಿಯಲಿಲ್ಲ. ಅವನು ಪ್ರತಿ ಪ್ರಯತ್ನದಲ್ಲಿ ಸೋತಾಗಲೂ ಊರ ಜನ ‘ಈ ತ್ರಯಂಬಕಂಗೆ ಮಳ್ಳು. ಒಂದು ಕೆಲಸನೂ ಸರಿಯಾಗಿ ಮಾಡಕ್ಕೆ ಬರದಿಲ್ಲೆ’ ಎಂದು ಮಾತಾಡಿಕೊಳ್ಳುವರು.

ಇಂತಹ ತ್ರಯಂಬಕ, ಅಂದು ಸಂಜೆಗೂ ಮುಂಚಿನ ಬಸ್ಸಿಗೇ ಮನೆಗೆ ವಾಪಸಾಗಿ, ಕೆರೆಹಳ್ಳಿ ವೆಂಕಟೇಶ ಹೇಳಿದ ಹೊಸ ಉದ್ಯೋಗದ ಬಗ್ಗೆ ಹೇಳಿಕೊಂಡಾಗ, ಭಾರತಿಗೆ ಅದು ಮಾಡಬಾರದ ಕೆಲಸವೆಂದೇನೆನಿಸಲಿಲ್ಲ. ಇನ್ನು ಗಂಡ ಮನೆ ಬಿಟ್ಟು ಇರುವುದು ಅವಳಿಗೆ ಹೊಸದೂ ಅಲ್ಲ. ಪ್ರತಿದಿನ ಬೆಳಗ್ಗೆ ಹತ್ತು ಗಂಟೆಯಾದರೆ ಮನೆ ಬಿಡುವ ಗಂಡ ಮರಳಿ ಮನೆ ಸೇರುತ್ತಿದ್ದುದು ರಾತ್ರಿ ಎಂಟರ ಮೇಲೆ. ರಾತ್ರಿ ಧೈರ್ಯಕ್ಕೆ ಒಬ್ಬರಿರುತ್ತಾರೆ ಎಂಬುದನ್ನು ಬಿಟ್ಟರೆ ಗಂಡನಿಲ್ಲದೇ ಹೇಗಪ್ಪಾ ಎಂದು ಚಿಂತೆಗೊಳಗಾಗುವಂತಹ ಪ್ರಮೇಯವೇನು ಭಾರತಿಗಿರಲಿಲ್ಲ. ಅಲ್ಲದೇ ಒಳ್ಳೆಯ ಆದಾಯ ಬರುವ ಉದ್ಯೋಗವೊಂದು ತಮ್ಮನ್ನೇ ಹುಡುಕಿಕೊಂಡು ಬಂದಿರುವಾಗ ಅವಳಿಗೆ ಇಲ್ಲ ಎನ್ನುವ ಮನಸಾಗಲಿಲ್ಲ. ‘ನೋಡಿ, ಒಂದೆರಡು ತಿಂಗಳು ಮಾಡಿ. ನಿಮಗೆ ಒಗ್ಗಿರೆ ಮುಂದುವರೆಸಿ, ಇಲ್ಲೇಂದ್ರೆ ಆಗದಿಲ್ಲೆ ಅಂತ ಭಾಗವತ್ ಡಾಕ್ಟ್ರಿಗೆ ಹೇಳಿದ್ರಾತು. ಸುಗ್ಗಿಯಂತೂ ಮುಗದ್ದು. ಮನೆ ಬದಿಗಂತು ಎಂತೂ ಕೆಲಸ ಇಲ್ಲೆ’ ಎಂದು ಭಾರತಿ ತನ್ನ ಒಪ್ಪಿಗೆ ಕೊಟ್ಟಳು.

ಮರುದಿನವೇ ತ್ರಯಂಬಕ ವೆಂಕಟೇಶನೊಂದಿಗೆ ಭಾಗವತ್ ಡಾಕ್ಟರನ್ನು ಕಂಡು, ಕೆಲಸವನ್ನು ಒಪ್ಪಿ ಪಡೆದುಕೊಂಡ. ಭಾಗವತ್ ಡಾಕ್ಟರೇ ತ್ರಯಂಬಕನನ್ನು ತಮ್ಮ ಕಾರಿನಲ್ಲಿ ಉಳ್ಳೂರಿಗೆ ಕರೆದುಕೊಂಡು ಹೋಗಿ ಬಸವೇಗೌಡರನ್ನು ಪರಿಚಯಿಸಿಕೊಟ್ಟರು. ಅವರಿಗೆ ದಿನವೂ ಕೊಡಬೇಕಾದ ಮಾತ್ರೆ, ಔಷಧಿ, ಮಾಡಿಸಬೇಕಾದ ಪಥ್ಯಗಳ ಕ್ರಮ ಹೇಳಿಕೊಟ್ಟರು. ತಿಂಗಳಿಗೆ ನಾಲ್ಕೂವರೆ ಸಾವಿರ ರೂಪಾಯಿ ಸಂಬಳ ಕೊಡಿಸುವುದಕ್ಕೂ ಗೌಡರ ಮಗಳಿಗೆ ಅಲ್ಲಿಂದಲೇ ಫೋನ್ ಮಾಡಿ ಒಪ್ಪಿಸಿದರು. ತ್ರಯಂಬಕ ಮರುದಿನ ತನ್ನ ಸಣ್ಣದೊಂದು ಚೀಲದೊಂದಿಗೆ ಗೌಡರ ಮನೆಗೆ ಬಂದು ಸೇರಿಕೊಂಡ.

* * *

ಬಸವೇಗೌಡರ ಮನೆಯ ಹಜಾರದ ಗೋಡೆಗೆ ನೇತುಬಿಟ್ಟಿದ್ದ ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋ,  ಪತ್ನಿಯ ಪಕ್ಕ ನಿಂತಿದ್ದ ಮುಂಡಾಸದ ಗೌಡರ ಮುಖದಲ್ಲಿನ ಆರೋಗ್ಯವನ್ನೂ, ಕಟ್ಟುಮಸ್ತಾಗಿದ್ದ ಅವರ ದೇಹವನ್ನೂ, ಗಡುಸಾಗಿದ್ದ ಹುರಿಮೀಸೆಯನ್ನೂ ತೋರಿಸುತ್ತಿತ್ತು. ಗೌಡರು ತಮ್ಮ ತಂದೆ ತೀರಿಕೊಂಡಮೇಲೆ ಅಣ್ಣ-ತಮ್ಮಂದಿರು ಬೇರಾಗಿ, ತಾವು ಸ್ವತಃ ಈ ಮನೆ ಕಟ್ಟಿಕೊಂಡು, ಪಾಲಿಗೆ ಬಂದ ಆರು ಎಕರೆ ಜಮೀನನ್ನು ಉಳುಮೆ ಮಾಡಿಕೊಂಡು ಚಿನ್ನ ಬೆಳೆದುದನ್ನೂ, ಒಂದು ಎಕರೆ ಒತ್ತುವರಿಯಲ್ಲಿ ಅಡಿಕೆಯನ್ನೂ ಹಾಕಿ ಫಲ ಕಂಡುದನ್ನೂ, ಓದಿಸಿದ ಮಕ್ಕಳು ಈಗ ಕೈಗೆ ಸಿಗದಂತಾದುದ್ದನ್ನೂ ತ್ರಯಂಬಕನ ಬಳಿ ಹೇಳಿಕೊಂಡರು. ‘ಮಗನ ಹತ್ರ ವಾಪಾಸ್ ಮನೆಗೆ ಬಂದಿರು ಅಂತಂದ್ರೆ ನಗ್ತಾನೆ. ಮಗಳ ಮನೆಗೆ ಹೋಗಿರಕ್ಕೆ ನಂಗೆ ಮನಸಿಲ್ಲ.  ಗದ್ದೆ ಮಾಡೋದನ್ನೂ ಈಗ ಬಿಟ್ಟಿದೀನಿ. ತೋಟದಿಂದ ಬರೋ ಆದಾಯಾನೇ ಸಾಕು ನನ್ನ ಜೀವನಕ್ಕೆ. ಇನ್ನೂ ಬೇಕಂದ್ರೆ ಮಕ್ಳುನ್ನ ಕೇಳಿದ್ರೆ ಇಲ್ಲಾ ಅನ್ನಲ್ಲ. ಈಗೀಗ ತೋಟಕ್ಕೆ ಹೋಗ್ಬರಕ್ಕೂ ಆಗಲ್ಲ ನನ್ ಕೈಲಿ.  ಧರೆ ಹತ್ಬೇಕಾದ್ರೆ ಉಸಿರು ಕಟ್ತದೆ’ ಅಂತ ಹೇಳುವಾಗ ಗೌಡರ ಉಸಿರು ನಿಡಿದಾಗಿತ್ತು.

ತ್ರಯಂಬಕ ಬಸವೇಗೌಡರನ್ನು ಚೆನ್ನಾಗಿಯೇ ನೋಡಿಕೊಂಡ. ಹೊತ್ತುಹೊತ್ತಿಗೆ ಊಟ ಮಾಡಿಸಿದ. ಔಷಧಿಗಳನ್ನು ಕೊಟ್ಟ. ಆಸ್ಪತ್ರೆಯಿಂದ ಬರುವ ಡಾಕ್ಟರ ಬಳಿ ಇಂಜೆಕ್ಷನ್ ಕೊಡುವುದನ್ನು ಕಲಿತುಕೊಂಡ. ಗೌಡರು ‘ಅಯ್ಯೋ, ನೋಯುತ್ತೆ, ಇವತ್ತು ಬೇಡವೋ’ ಎಂದರೆ, ನಗುತ್ತಲೇ ಅವರನ್ನು ಸಂಭಾಳಿಸಿ ನೋವಾಗದಂತೆ ಸೂಜಿ ಚುಚ್ಚಿದ. ಮನೆ ಕೆಲಸಕ್ಕೆ ಬರುವ ಹೆಂಗಸಿಗೆ ಬೇಡವೆಂದು ಹೇಳಿ ತಾನೇ ಮನೆ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಮಾಡತೊಡಗಿದ. ಅವಳಿಗೆ ಕೊಡುವ ಸಂಬಳವನ್ನು ತನಗೇ ಕೊಡಿ ಅಂತ ಗೌಡರ ಮಗಳ ಬಳಿ ಕೇಳಿಕೊಂಡ. ತೋಟಕ್ಕೆ ಹೋಗಿ ಅಡಿಕೆ ಹೆಕ್ಕಿಕೊಂಡು ಬಂದ. ಹಾಗೆ ಹೆಕ್ಕಿಕೊಂಡು ಬಂದ ಅಡಿಕೆಯಲ್ಲಿ ಒಂದೆರಡು ಕೇಜಿಯನ್ನು ಸುಮ್ಮನೆ ಚೀಲದಲ್ಲಿಟ್ಟುಕೊಂಡು, ಗೌಡರಿಗೆ ಇನ್ನೆರಡು ತಾಸಿನಲ್ಲಿ ಬರುವುದಾಗಿ ಹೇಳಿ ಸಾಗರಕ್ಕೆ ಓಡಿ, ಚಿಲ್ಲರೆ ಸಾಬರಿಗೆ ಆ ಅಡಿಕೆಯನ್ನು ಮಾರಿ, ಬಂದ ಹಣವನ್ನು ಓಸಿ ನಂಬರಿಗೆ ಕಟ್ಟಿ, ಕೈ ತೊಳೆದುಕೊಂಡು ಬಂದ. ಗೌಡರ ಮನೆಗೆ ಯಾರಾದರೂ ಬಂದು ನೀವ್ಯಾರು ಅಂತ ಕೇಳಿದರೆ, ‘ನಾನು ಬಸವೇಗೌಡರ ಹೋಮ್‍ ನರ್ಸ್’ ಅಂತ ಬಿಗುಮಾನದಿಂದ ಹೇಳಿದ.  ಆಳುಗಳನ್ನು ಕರೆಸಿ ಹಿತ್ತಿಲಿನ ಬೇಲಿ ಸರಿ ಮಾಡಿಸಿದ, ತೋಟದ ಕಾದಿಗೆ ತೆಗೆಸಿದ.

ಗೌಡರಿಗೂ ತ್ರಯಂಬಕ ಹಿಡಿಸಿದ. ಮನೆಯ ಎಲ್ಲಾ ಕೆಲಸವನ್ನೂ ಅವನೇ ನಿಭಾಯಿಸುವುದನ್ನು ನೋಡಿ ಅವರಿಗೆ ಅಭಿಮಾನ ಮೂಡಿತು. ಒಮ್ಮೊಮ್ಮೆ ಗೌಡರಿಗೆ ವಿಪರೀತ ಕೆಮ್ಮು ಬಂದು ಗಂಟೆಗಟ್ಟಲೆ ಕೆಮ್ಮುತ್ತಾ ಕೂತುಬಿಡುತ್ತಿದ್ದರು. ಆಗ ಅವರ ಪಕ್ಕದಲ್ಲೇ ಕೂತು ತ್ರಯಂಬಕ ಅವರಿಗೊಂದು ತಟ್ಟೆ ಕೊಟ್ಟು ಅದರಲ್ಲೇ ಕಫ ಉಗುಳುವಂತೆ ಹೇಳುತ್ತಿದ್ದ. ಆಮೇಲೆ ಆ ತಟ್ಟೆಯನ್ನೂ ಅವನೇ ತೊಳೆಯುತ್ತಿದ್ದ. ಗೌಡರಿಗೆ ಪ್ರಿಯವಾಗುವಂತೆ ಒಂದೆರಡು ಸಲ ಸಾಗರದಿಂದ ರುಚಿರುಚಿಯಾಗಿ ಖಾರಾ-ಮಂಡಕ್ಕಿ ಕಟ್ಟಿಸಿ ತಂದು ಕೊಟ್ಟ. ಆಮೇಲೆ ರಾತ್ರಿಯಿಡೀ ಉಸಿರು ಸೊಂಯ್‍ಗುಡಿಸುತ್ತಾ ಅವರು ಹಾಸಿಗೆಯಲ್ಲಿ ಎದ್ದು ಕೂತಿರುವುದನ್ನು ಇವನು ಕಾಯಬೇಕಾಯಿತು. ಗೌಡರ ಮಗ-ಮಗಳು ಫೋನ್ ಮಾಡಿ ವಿಚಾರಿಸಿದಾಗ ‘ಏನೂ ತೊಂದ್ರೆ ಇಲ್ಲ. ನೀವೇನೂ ಕಾಳಜಿ ಮಾಡ್ಬೇಡಿ. ನಾನೆಲ್ಲ ನೋಡ್ಕೋತೇನೆ’ ಎಂದು ಭರವಸೆ ನೀಡಿದ. ತಮ್ಮನ್ನು ಇಷ್ಟೆಲ್ಲ ನಿಷ್ಟೆಯಿಂದ ನೋಡಿಕೊಳ್ಳುತ್ತಿರುವ ತ್ರಯಂಬಕನ ಬಗ್ಗೆ ಗೌಡರಿಗೆ ಸಹಜವಾಗಿಯೇ ಪ್ರೀತಿಯಾಯಿತು. ಅವನು ಮಾಡುತ್ತಿದ್ದ ಸಣ್ಣಪುಟ್ಟ ಖದೀಮತನದ ಅರಿವೇನು ಗೌಡರಿಗೆ ಆಗುತ್ತಿರಲಿಲ್ಲವಷ್ಟೇ? ‘ಯಾವ ಜನ್ಮದ ಮಗನೋ ಏನೋ, ಎಷ್ಟೆಲ್ಲ ಸೇವೆ ಮಾಡ್ತೀಯ ನಂಗೆ’ ಅಂತ ಗೌಡರು ಒಂದು ದಿನ ಕಣ್ತುಂಬಿಕೊಂಡು ಹೇಳಿದರು. ಗೌಡರ ಮಗಳು ತಿಂಗಳ ಕೊನೆಯಲ್ಲಿ ಬಂದು, ತಂದೆಯನ್ನು ಮಾತಾಡಿಸಿಕೊಂಡು, ತ್ರಯಂಬಕನಿಗೆ ಕೊಡಬೇಕಾದ ಸಂಬಳವನ್ನು ಕೊಟ್ಟು ಹೋದಳು. ಆಳುಗಳಿಗೆ ಕೊಡಬೇಕಿದ್ದ ಕೂಲಿಯ ಹಣವನ್ನೂ ಅವರ ಬಳಿ ಇಸಿದುಕೊಳ್ಳುವಾಗ ಲೆಕ್ಕದಲ್ಲಿ ಸ್ವಲ್ಪ ಜಾಸ್ತಿ ಸೇರಿಸುವುದನ್ನು ತ್ರಯಂಬಕ ಮರೆಯಲಿಲ್ಲ.

ಹೀಗಿರುವಾಗ, ಒಂದು ದಿನ ಅಮೆರಿಕೆಯಿಂದ ಬಂದ ಗೌಡರ ಮಗ ಎರಡು ದಿವಸ ಮನೆಯಲ್ಲಿ ಇದ್ದು ಹೋದ. ಅವನು ಅತ್ತ ಹೋದಮೇಲೆ ತ್ರಯಂಬಕನಿಗೆ ಅಚಾನಕ್ಕಾಗಿ ಒಂದು ವಿಚಾರ ತಲೆಗೆ ಬಂತು: ಗೌಡರ ಮಗ, ತಂದೆಯನ್ನು ವಿಚಾರಿಸಿಕೊಂಡು ಹೋಗುವುದು ಒಂದು ಕರ್ತವ್ಯ ಎಂಬಂತೆ ನಡೆದುಕೊಂಡನೇ ಹೊರತು ತಂದೆಯ ಬಗ್ಗೆ ವಿಶೇಷ ಕಾಳಜಿಯೇನು ಅವನಿಗೆ ಇದ್ದಂತೆ ಕಾಣಲಿಲ್ಲ. ಗೌಡರಿಗೂ ಮಗನ ಬಗ್ಗೆ ಅಂತಹ ಮಮಕಾರ ಯಾವತ್ತೂ ಕಂಡಿಲ್ಲ. ಇನ್ನು ಮಗಳು, ಮದುವೆಯಾದವಳು, ಅವಳ ಸಂಸಾರ-ತಾಪತ್ರಯ ಅವಳಿಗೆ, ಅವಳ ಬಗ್ಗೆಯೂ ಗೌಡರಿಗೆ ವಿಪರೀತ ಪ್ರೀತಿಯಿದ್ದಂತೆ ಅನಿಸಲಿಲ್ಲ. ಮತ್ತೆ ಈ ಮಗನಾಗಲೀ-ಮಗಳಾಗಲೀ, ಊರಿಗೆ ಬಂದಾಗ ತೋಟ-ಗದ್ದೆಗಳ ಕಡೆ ತಲೆ ಹಾಕುವುದಿರಲಿ, ತೋಟದಿಂದ ಎಷ್ಟು ಆದಾಯ ಬಂತು, ಕೃಷಿ ಕತೆ ಏನು, ನೀರು-ಗೊಬ್ಬರ ಸರಿಯಾಗಿ ಹಾಕಲಾಗುತ್ತಿದೆಯಾ ಅಂತ ವಿಚಾರಿಸುವ ಗೊಡವೆಗೂ ಹೋಗಲಿಲ್ಲ. ತ್ರಯಂಬಕ ಹೇಳಿದ್ದನ್ನು ಕೇಳಿಕೊಂಡು, ತಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ, ಅನಾಸಕ್ತರಾಗಿ ಹೋದರು. ಅವರುಗಳಿಗೆ ಇವ್ಯಾವುವೂ ಬೇಡವಾಗಿದೆ ಎಂಬುದು ತ್ರಯಂಬಕನಿಗೆ ಅರ್ಥವಾಯಿತು.

ಹಾಗಾದರೆ ಗೌಡರು ಹೋದಮೇಲೆ ಇವೆಲ್ಲಾ ಯಾರಿಗೆ? ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುವ ತೋಟ, ಸರಿಯಾಗಿ ಕೃಷಿ ಮಾಡಿದರೆ ಒಳ್ಳೆಯ ಬೆಳೆ ಕೊಡಬಹುದಾದ ಗದ್ದೆ, ಹಳೆಯದಾಗಿದ್ದರೂ ಗಟ್ಟಿಮುಟ್ಟಾಗಿಯೇ ಇರುವ ಮನೆ -ಎಲ್ಲಾ ಅನಾಥವಾಗುತ್ತದೆ. ಪರಿಸ್ಥಿತಿ ನೋಡಿದರೆ ಗೌಡರು ಸದ್ಯದಲ್ಲೇ ಕೈಲಾಸ ಸೇರುವುದಂತೂ ಖಚಿತ. ಆಮೇಲೆ ಆ ಮಗನಂತೂ ಮನೆಗೆ ಬಂದು ಇರುವವನಲ್ಲ. ಮಗಳಿಗೆ ಅವಳ ಗಂಡನ ಮನೆಯಲ್ಲೇ ಸಾಕಷ್ಟಿದೆ. ಅವರುಗಳಿಗೆ ಇತ್ತ ಕಡೆ ಏನಾಗುತ್ತಿದೆ ಎಂದೂ ತಿಳಿಯದು. ತನ್ನನ್ನು ಸಂಪೂರ್ಣ ನಂಬಿದ್ದಾರೆ. ಗೌಡರನ್ನು ಹೇಗಾದರೂ ಪುಸಲಾಯಿಸಿ ಮನವೊಲಿಸಿ ಇವನ್ನೆಲ್ಲಾ ತನ್ನ ಹೆಸರಿಗೇ ಬರೆಸಿಕೊಂಡುಬಿಟ್ಟರೆ ಹೇಗೆ?

ಈ ಯೋಚನೆ ಬಂದದ್ದೇ ತ್ರಯಂಬಕನಿಗೆ ಮೈ ಜುಮ್ಮೆಂದಿತು. ಪರರ ಆಸ್ತಿ ತನಗ್ಯಾಕೆ ಎಂದು ಅನಿಸಿತಾದರೂ ಮಗ್ಗುಲಲ್ಲೇ ತನ್ನ ಮನೆ, ಸಂಸಾರ, ಆರ್ಥಿಕ ಸ್ಥಿತಿ ಎಲ್ಲವೂ ನೆನಪಾಯಿತು. ಗೌಡರ ಮಕ್ಕಳಿಗೆ ಈ ಆಸ್ತಿಯಿಂದ ಬರುವ ಆದಾಯದಿಂದ ಆಗಬೇಕಾದ್ದು ಏನೂ ಇಲ್ಲ. ಸಮುದ್ರಕ್ಕೆ ಒಂದು ಬಕೆಟ್ ನೀರು ಸುರಿದರೆ ಏನು ಮಹಾ ವ್ಯತ್ಯಾಸವಾಗುತ್ತದೆ? ಯಾರಿಗೂ ಬೇಡವಾದದ್ದನ್ನು ತಾನು ಪಡೆದುಕೊಂಡರೆ ಅದರಲ್ಲಿ ತಪ್ಪೇನಿದೆ? ಬಡವನೊಬ್ಬನ ಉದ್ಧಾರವಾದಂತಾಗುತ್ತದೆ. ಅಲ್ಲದೇ ಸ್ವಂತ ತಂದೆಗಿಂತ ಹೆಚ್ಚಾಗಿ ಇಷ್ಟು ದಿನ ಇವರನ್ನು ನೋಡಿಕೊಂಡಿದ್ದಕ್ಕೆ ಅಷ್ಟು ಸಂಭಾವನೆಯಾದರೂ ಬೇಡವೇ? ಆದರೆ ಗೌಡರ ಬಳಿ ಹೀಗಂತ ಹೇಳಿ ತನ್ನ ಹೆಸರಿಗೇ ಆಸ್ತಿ ಬರೆದುಕೊಡಿ ಅಂತ ಕೇಳಲಿಕ್ಕಾಗದು. ತಾನು ಅದೆಷ್ಟೇ ಅವರಿಗೆ ಪ್ರಿಯನಾಗಿದ್ದರೂ ಗೌಡರು ತಾವಾಗಿಯೇ ಹಾಗೆ ಮಾಡುವುದಂತೂ ಸುಳ್ಳು. ಅವರಿಗೆ ಆ ಬಗ್ಗೆ ಯೋಚನೆಯೂ ಬಂದಿರಲಾರದು. ಹಾಗಾದರೆ ಏನು ಮಾಡುವುದು?

ತ್ರಯಂಬಕನಿಗೆ ಇದು ತಲೆಗೆ ಹತ್ತಿದಾಗಿನಿಂದ ನಿಂತಲ್ಲಿ ನಿಲ್ಲಲಾಗಲಿಲ್ಲ, ಕೂತಲ್ಲಿ ಕೂರಲಾಗಲಿಲ್ಲ. ಇದನ್ನು ಯಾರ ಬಳಿ ಹೇಳಿಕೊಳ್ಳುವುದು ಅಂತಲೂ ತಿಳಿಯಲಿಲ್ಲ. ಮತ್ತೆ ಇದು ಎಲ್ಲರ ಬಳಿ ಹೇಳುವ ವಿಷಯವೂ ಆಗಿರಲಿಲ್ಲ. ಕೊನೆಗೆ ತನ್ನ ಗೆಳೆಯ ಕೆರೆಹಳ್ಳಿ ವೆಂಕಟೇಶನೇ ಇದಕ್ಕೆ ಸೂಕ್ತ, ನಂಬಿಕಸ್ತ ವ್ಯಕ್ತಿ ಎನಿಸಿತು.

ಸಾಗರದ ಮಧುರಾ ಹೋಟೆಲಿನಲ್ಲಿ ಬೈಟೂ ಕಾಫಿ ಕುಡಿಯುತ್ತ ತ್ರಯಂಬಕ ವೆಂಕಟೇಶನಿಗೆ ಈ ಗುಟ್ಟು ಹೇಳಿದ. ತಾನೇ ಉದ್ಯೋಗ ಹುಡುಕಿಕೊಟ್ಟ ತನ್ನ ಗೆಳೆಯ ಅಲ್ಲಿಯೇ ಇದ್ದು ಮಸಲತ್ತು ಮಾಡಿ ಲಕ್ಷಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಹೊಂಚು ಹಾಕಿರುವುದು ತಿಳಿದು ವೆಂಕಟೇಶ ನಿಬ್ಬೆರಗಾದನಾದರೂ ತ್ರಯಂಬಕನೆದುರಿಗೆ ತೋರಿಸಿಕೊಳ್ಳಲಿಲ್ಲ. ‘ಬಸವೇಗೌಡರಿಗೆ ತಿಳಿಯದಂತೆ ಅವರಿಂದ ನಿನ್ನ ಹೆಸರಿಗೆ ಒಂದು ವಿಲ್ ಬರೆಸಿ ಸೈನ್ ಮಾಡ್ಸಿದ್ರೆ ಎಲ್ಲಾ ನಿಂದೇ ಆಗ್ತು ಅನ್ನಿಸ್ತು. ನಂಗೂ ಸರಿಯಾಗಿ ಗೊತ್ತಿಲ್ಲೆ. ಒಂದ್ಸಲ ಯಾವುದಾದ್ರೂ ಲಾಯರ್ ಕಾಣು. ಆದ್ರೆ ಉಳ್ಳೂರಿನ ಆಸುಪಾಸಿನವರು ಯಾರೂ ಬ್ಯಾಡ. ಗೌಡರ ಪರಿಚಯ ಇರೋವ್ರು ಆದ್ರೆ ಅವರೇ ಪಿತೂರಿ ಮಾಡೋ ಛಾನ್ಸ್ ಇರ್ತು. ನೀನು ಒಂದು ಕೆಲಸ ಮಾಡು, ಗೌಡರನ್ನ ನಿಮ್ಮೂರಿಗೆ ಕರ್ಕಂಡು ಹೋಗು. ಒಂದು ನಾಲ್ಕು ದಿನ, ಹವಾ ಬದಲಾದ್ರೆ ನಿಮಗೆ ಒಳ್ಳೇದಾಗತ್ತೆ ಅಂತ ಹೇಳಿ ಅವರನ್ನ ಒಪ್ಸು. ಆಮೇಲೆ ಅಲ್ಲೇ ಯಾವ್ದಾದ್ರೂ ಲಾಯರ್ ಹಿಡಿದು ನಿನ್ ಕೆಲಸ ಮಾಡಿಸ್ಕೋ’ ಅಂತ ವೆಂಕಟೇಶ ತ್ರಯಂಬಕನಿಗೆ ಉಪಾಯ ಹೇಳಿದ.

ಮುಂದಿನ ಒಂದೆರಡು ವಾರಗಳಲ್ಲಿ, ವೆಂಕಟೇಶ ಹೇಳಿದಂತೆಯೇ ಮಾಡಿ, ‘ಒಂದು ನಾಲ್ಕು ದಿನ ಅಷ್ಟೇ ಗೌಡ್ರೇ, ಮತ್ತೆ ಇಲ್ಲಿಗೇ ಬಂದುಬಿಡುವಾ’ ಅಂತ ಪುಸಲಾಯಿಸಿ ಗೌಡರನ್ನು ಒಪ್ಪಿಸಿದ ತ್ರಯಂಬಕ. ಗೌಡರ ಮಗಳಿಗೂ ಫೋನಿನಲ್ಲಿ ಹೇಳಿದ. ಹೆಂಡತಿಗೆ ಫೋನ್ ಮಾಡಿ, ‘ಎಂಥಕ್ಕೆ ಏನು ಅಂತ ಕೇಳಡ.  ಗೌಡರನ್ನ ಕರ್ಕಂಡು ಬರ್ತಾ ಇದ್ದಿ. ನಾಕು ದಿನ ನಮ್ಮನೇಲೆ ಇರ್ತ. ನೀನೇನು ಅವರ ಸೇವೆ ಮಾಡದು ಬೇಕಾಗಿಲ್ಲೆ. ನಾ ಎಲ್ಲಾ ನೋಡ್ಕ್ಯಳ್ತಿ’ ಅಂತ ಹೇಳಿದ. ಗೌಡರ ಬಟ್ಟೆ, ಔಷಧಿಗಳನ್ನು ಒಂದು ಚೀಲಕ್ಕೆ ತುಂಬಿಕೊಂಡು, ಅಂದು ಬೆಳಗಾಮುಂಚೆ ಅವರನ್ನೆಬ್ಬಿಸಿ ಹೊರಟುಬಿಟ್ಟ.

ಊರ ಬಸ್‍ಸ್ಟಾಂಡಿನಲ್ಲಿ ಮುದುಕರನ್ನು ಇಳಿಸಿಕೊಂಡು, ಮಣ್ಣ ರಸ್ತೆಯಲ್ಲಿ ನಿಧಾನಕ್ಕೆ ಇಳಿಜಾರಿನಲ್ಲಿ ನಡೆಸುವಾಗ, ಇನ್ನು ಯಾವ ಲಾಯರನ್ನು ಕಾಣುವುದು ಅಂತ ತ್ರಯಂಬಕ ಯೋಚಿಸಿದ. ಮತ್ತಿಮನೆ ರಾಮಣ್ಣನೇ ಇದಕ್ಕೆಲ್ಲ ಲಾಯಕ್ಕು ಅಂತ ಹೊಳೆಯಿತು. ಮನೆಯಲ್ಲಿ ಭಾರತಿಯೂ ಹೆಚ್ಚು ಅಸಹನೆ ತೋರದೆ ಇವರನ್ನು ಸ್ವಾಗತಿಸಿದಳು. ಹೆಂಡತಿಯನ್ನು ಕೋಣೆಗೆ ಕರೆದು ಗುಟ್ಟಾಗಿ ವಿಷಯವನ್ನು ಇವನು ಹೇಳಿದ ಮೇಲಂತೂ ಗೌಡರನ್ನು ಅವಳು ಹೆಚ್ಚಾಗೇ ಉಪಚರಿಸತೊಡಗಿದಳು.

ಮರುದಿನದ ಹೊತ್ತಿಗೆ ಗೌಡರಿಗೆ ಪ್ರಯಾಣದ ಆಯಾಸ ಮತ್ತು ವಾತಾವರಣದ ಬದಲಾವಣೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು. ಒಂದೇ ಸಮನೆ ಕೆಮ್ಮುತ್ತಿದ್ದರು. ಸೊಂಯ್ ಸೊಂಯ್ ಎಂದು ದೊಡ್ಡದಾಗಿ ಉಸಿರು ಬಿಡುತ್ತಿದ್ದರು. ಆದರೂ ತ್ರಯಂಬಕ ಭಾರತಿಯ ಬಳಿ ಹುಷಾರಾಗಿ ನೋಡಿಕೊಳ್ಳಲು ಹೇಳಿ ಸಾಗರಕ್ಕೆ ಹೊರಟ. ಕೋರ್ಟಿನ ಬಳಿ ಮತ್ತಿಮನೆ ರಾಮಣ್ಣನನ್ನು ಕಂಡು, ತನ್ನ ಪರಿಚಯದವರೊಬ್ಬರು ತಮ್ಮ ಆಸ್ತಿಯನ್ನೆಲ್ಲ ತನ್ನ ಹೆಸರಿಗೇ ಬರೆಯಲಿಕ್ಕೆ ಇಚ್ಛಿಸುತ್ತಿರುವುದಾಗಿಯೂ, ಅದಕ್ಕೆ ಒಂದು ವಿಲ್ ತಯಾರಿಸಿಕೊಡಬೇಕಾಗಿಯೂ ಕೇಳಿಕೊಂಡ. ಲಾಯರ್ ರಾಮಣ್ಣ ಒಪ್ಪಿದರು. ಅವರೊಂದಿಗೆ ತಹಶೀಲ್ದಾರ್ ಆಫೀಸಿಗೆ ಹೋಗಿ ವಿಚಾರಿಸಿ ಆಸ್ತಿಗೆ ಸಂಬಂಧಿಸಿದ ಪಹಣಿ ಪ್ರತಿಗಳನ್ನು ತೆಗೆಸಿದ. ಆದರೆ ಡಾಕ್ಯುಮೆಂಟ್ ಪೇಪರ್ ಮೇಲೆ ಸ್ಟಾಂಪ್ ಪಡೆಯಲು ಸಬ್-ರಿಜಿಸ್ಟ್ರಾರ್ ಆಫೀಸಿಗೆ ಹೋದಾಗ ಅವರಿಗೆ ಒಂದು ಆಘಾತ ಕಾದಿತ್ತು:

‘ನೋಡ್ರೀ, ಈ ಆಸ್ತಿ ಮೇಲೆ ಏನಾದ್ರೂ ಎನ್‍ಕಂಬ್ರೆನ್ಸ್ ಇದೆಯಾ ಅಂತ’ ಎಂದು ಲೋಕಾಭಿರಾಮವಾಗಿ ಲಾಯರ್ ರಾಮಣ್ಣ ಸಬ್-ರಿಜಿಸ್ಟ್ರಾರ್ ಮುಂದೆ ಪಹಣಿಗಳನ್ನು ಇಟ್ಟಿದ್ದೇ, ಅವರು ‘ಅರೇ! ಇದು ಉಳ್ಳೂರು ಬಸವೇಗೌಡರದ್ದು ಅಲ್ಲವೇ? ಮೊನ್ನೆಯಷ್ಟೇ ಅವರು ಬಂದು ತಮ್ಮ ಅಷ್ಟೂ ಆಸ್ತಿ ಮಗ ಮತ್ತು ಮಗಳ ಹೆಸರಿಗೆ ಸೇರುವಂತೆ ವಿಲ್ ಮಾಡಿಸಿ ರಿಜಿಸ್ಟ್ರು ಸಹ ಮಾಡ್ಸಿ ಹೋದ್ರಲ್ಲಾ? ಈಗೇನು ನೀವು ಬಂದ್ರಿ?’ ಎಂದು ಕೇಳಿದರು.

ತ್ರಯಂಬಕನಿಗೆ ಶಾಕ್ ಹೊಡೆದಂತಾಯಿತು. ‘ಗೌಡ್ರು ಇಲ್ಲಿಗೆ ಬಂದಿದ್ರಾ? ಏನು ಹೇಳ್ತಿದೀರಿ ನೀವು? ಅವರಿಗೆ ಒಬ್ಬರಿಗೇ ಓಡಾಡಲಿಕ್ಕೇ ಆಗಲ್ಲ’ ಅಂತ ದಡಬಡಿಸಿದ.

‘ಒಬ್ಬರೇ ಬಂದಿರ್ಲಿಲ್ರೀ. ಅದ್ಯಾರೋ ವೆಂಕಟೇಶ್ ಅಂತ, ಕೆರೆಹಳ್ಳಿಯವರು, ಮೊನ್ನೆ ಮಂಗಳವಾರ ಕರ್ಕೊಂಡ್ ಬಂದಿದ್ರು. ನೀವೇ ವಿಲ್ ಬರೆಸಿಕೊಡಿ ಅಂದ್ರು. ನಾನು ನಮ್ಮದೇ ರೈಟರ್ಸ್ ಹತ್ರ ಬರೆಸಿ, ರಿಜಿಸ್ಟರ್ ಮಾಡಿ ಕೊಟ್ಟೆ’ ಎಂದು ಸಬ್-ರಿಜಿಸ್ಟ್ರಾರ್ ದೃಢಪಡಿಸಿದರು.

ತ್ರಯಂಬಕನಿಗೆ ಮತ್ತೂ ಶಾಕ್ ಆಯಿತು. ತನ್ನ ಗೆಳೆಯ ವೆಂಕಟೇಶ ಇಂತಹ ಕೆಲಸ ಮಾಡುವವನೇ? ಮೊನ್ನೆ ಮಂಗಳವಾರ ಭಾಗವತ್ ಡಾಕ್ಟರು ಬರೆದುಕೊಟ್ಟಿದ್ದ ಔಷಧಿ ತರಲು ತಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಬಂದು ಇಷ್ಟು ಕೆಲಸ ಮಾಡಿದ್ದಾನೆ. ನಯವಂಚಕ. ವಿಶ್ವಾಸದ್ರೋಹಿ. ಆದರೆ ಗೌಡರೂ ಈ ವಿಷಯವನ್ನು ತನ್ನ ಬಳಿ ಬಾಯಿ ಬಿಡಲಿಲ್ಲವಲ್ಲಾ? ಇಷ್ಟು ದಿನ ತಾನು ಅವರ ಸೇವೆ ಮಾಡಿ, ನಂಬಿಕೆ ಗಿಟ್ಟಿಸಿದ್ದೆಲ್ಲ ದಂಡವಾಯಿತೇ? ತನಗೆ ಒಂದು ಮಾತು ಹೇಳಬಹುದಿತ್ತು. ಇಲ್ಲ, ಇನ್ನು ಅವರ ಬಳಿ ಕೆಲಸ ಮಾಡುವುದಿಲ್ಲ. ಆ ಮುದುಕನ ಹೇಲು ಬಳಿಯುವುದಿಲ್ಲ. ಸೇವೆ ಮಾಡುವವರಿಲ್ಲದೇ ಸಾಯಲಿ. ಆದರೆ, ಅರೆ! ಅವರಿಗೆ ಇವೆಲ್ಲ ಗೊತ್ತಿದ್ದೂ ತನ್ನ ಜೊತೆ ಊರಿಗೆ ಬಂದರೇ? ವೆಂಕಟೇಶ ಏನೇನು ಹೇಳಿದ್ದಾನೋ? ಈಗ ಅವರಿಗೆ ತಾನು ಹೇಗೆ ಮುಖ ತೋರಿಸುವುದು? ತ್ರಯಂಬಕನಿಗೆ ತಿಳಿಯಲಾರದ ಗೊಂದಲವಾಯಿತು.

ಲಾಯರ್ ರಾಮಣ್ಣನವರಿಗೆ ಏನೋ ಸಬೂಬು ಹೇಳಿ ಫೀಸು ಕೊಟ್ಟು ತಪ್ಪಿಸಿಕೊಂಡು, ಸಿಕ್ಕಿದ ಬಸ್ಸು ಹತ್ತಿ ಊರಿಗೆ ಬಂದ. ನಿರಾಸೆ, ಸಿಟ್ಟು, ಅವಮಾನ, ಗೊಂದಲ ಎಲ್ಲಾ ಸೇರಿಕೊಂಡು ತ್ರಯಂಬಕನ ಮುಖ ಕೆಂಪಾಗಿತ್ತು. ಮನೆಯ ಬಳಿ ಬಂದು ನೋಡಿದರೆ ಊರವರೆಲ್ಲ ಸೇರಿದ್ದರು.  ತ್ರಯಂಬಕನ ಕಳವಳ ಮತ್ತೂ ಜಾಸ್ತಿಯಾಗಿ, ಜನರನ್ನು ಸರಿಸಿಕೊಂಡು ಮನೆಯೊಳಗೆ ನುಗ್ಗಿದ. ಬಸವೇಗೌಡರು ಅಲ್ಲಿ ಕೊನೆಯುಸಿರೆಳೆದಿದ್ದರು.

‘ಈ ತ್ರಯಂಬಕಂಗೆ ಇವೆಲ್ಲಾ ಎಂಥಕ್ಕೆ ಬೇಕಿತ್ತು? ತಮ್ಮೂರಲ್ಲಿ ಅರಾಮಾಗಿ ಇದ್ದಿದ್ದ ಗೌಡರನ್ನ ಇಲ್ಲಿಗೆ ಕರ್ಕಂಡು ಬಂದು, ಅವರಿಗೆ ಉಸಿರಾಟದ ತೊಂದರೆ ಜಾಸ್ತಿಯಾಗಿ, ಇಲ್ಲಿ ಪ್ರಾಣ ಬಿಡಹಂಗೆ ಮಾಡಿದ’, ‘ಇನ್ನು ಅವರ ಮಕ್ಕಳಿಗೆ ಫೋನ್ ಮಾಡಿ ಕರೆಸೋದು ಹೆಂಗೆ, ಅವರಿಗೆ ಏನು ಹೇಳೋದು, ಉಳ್ಳೂರಿಗೆ ವಾಪಸ್ ಕರ್ಕಂಡ್ ಹೋಗೋದು ಯಾವಾಗ.. ಈ ತ್ರಯಂಬಕ ಇಲ್ದೇ ಇರೋ ಉಸಾಬರಿ ಮೈಮೇಲೆ ಎಳಕಂಡ’, ‘ಒಂದು ನಾಲ್ಕು ಕಾಸು ಸಂಪಾದನೆ ಆಗ್ತಿತ್ತು, ಅದನ್ನೂ ಕಳ್ಕಂಡ...’ -ಜನ ತರಹೇವಾರಿ ಮಾತಾಡಿಕೊಳ್ಳುತ್ತಿದ್ದರು. ಜಗುಲಿಯಲ್ಲಿ ಊದ್ದಕೆ ಮಲಗಿದ್ದ ಬಸವೇಗೌಡರ ಪಾರ್ಥಿವ ಶರೀರದೆದುರು ತ್ರಯಂಬಕ ಕುಸಿದು ಕುಳಿತ. 

[30.11.2014ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]

Monday, October 06, 2014

ರೋಟೀರೋಬೋ

‘ಮದುವೆಯಾದಮೇಲೆ ಹೆಂಗಸರಾಗುತ್ತಾರೆ ದಪ್ಪ, ಗಂಡಸರಾಗುತ್ತಾರೆ ಬರೀ ಹೌದಪ್ಪ’ ಎಂಬ ಡುಂಡೀರಾಜರ ಕವನ ಓದಿದಾಗ ನಾನೇನು ಅದನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಹನಿಗವನ ಓದಿ ಯಾರಾದರೂ ತಲೆಬಿಸಿ ಮಾಡಿಕೊಳ್ತಾರೆಯೇ? ಎಲ್ಲರ ಹಾಗೆ ನಾನೂ ನಕ್ಕು ಸುಮ್ಮನಾಗಿದ್ದೆ.  ಹಾಗಂತ ನಾನು ಪ್ರೀತಿಸುವ ಹುಡುಗಿ ‘ನಮ್ ಫ್ಯಾಮಿಲೀಲಿ ಕೆಲವರು ಸ್ವಲ್ಪ ದಪ್ಪ ಇರೋದುಂಟು. ನಾನೂ ಮದುವೆ ಆದಮೇಲೆ ಸ್ವಲ್ಪ ದಪ್ಪಗಾದ್ರೆ ನಿಂಗೆ ತೊಂದ್ರೆ ಇಲ್ಲ ಅಲ್ವಾ?’ ಅಂತ ಕೇಳಿದಾಗ ಸ್ವಲ್ಪ ಸೀರಿಯಸ್ಸಾಗಿದ್ದೆ. ‘ದಪ್ಪಗಾಗೋದಾ? ನೋವೇ ನೋವೇ! ಈಗ ಇರೋದು ಸರೀ ಇದೀಯಾ. ಮದುವೆ ಆದ್ಮೇಲೂ ಹಿಂಗೇ ಮೇಂಟೇನ್ ಮಾಡ್ಬೇಕು’ ಅಂತ ಹೇಳಿದ್ದಿದ್ದೆ. ಹೌದು ಮತ್ತೆ, ನಾನಿರೋದು ಹೀಗೆ ತೆಳ್ಳಗೆ, ಅವಳು ಫುಲ್ ದಪ್ಪಗೆ ಡ್ರಮ್ಮಿನಂತಾಗಿ, ಆಮೇಲೆ ನಾವು ಒಟ್ಟಿಗೆ ತಿರುಗಾಡುವುದಾದರೂ ಹೇಗೆ? ನೋಡಿದವರು ಇದೆಂಥಾ ಜೋಡಿ ಅಂತ ನಗೋದಿಲ್ಲವೇ? ಅದಕ್ಕೇ ನಾನು ಈ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್ ಎಂಬಂತೆ ವರ್ತಿಸಿದ್ದೆ. ಆದರೆ ಅವಳು ಅಷ್ಟು ಕೇಳಿಕೊಂಡು ಸುಮ್ಮನಾಗಲಿಲ್ಲ: ‘ಹಾಗಲ್ಲ, ಈ ದಪ್ಪಗಾಗೋದು-ತೆಳ್ಳಗಾಗೋದು ನಮ್ಮ ಕೈಲಿಲ್ಲ ಅಲ್ವಾ? ಕೆಲವೊಬ್ರು ಮದುವೆ ಆದ್ಮೇಲೆ ತಮಗೆ ಗೊತ್ತಿಲ್ದೇನೇ ದಪ್ಪಗಾಗ್ತಾರಂತೆ’ ಅಂತ, ಮನುಷ್ಯನ ದೇಹದ ಗಾತ್ರ ಹೆಚ್ಚು-ಕಮ್ಮಿಯಾಗೋದು ಒಂದು ವಿಧಿಯ ಆಟ, ಅದೊಂದು ಆಟೋಮ್ಯಾಟಿಕ್ ನೈಸರ್ಗಿಕ ಕ್ರಿಯೆ ಎಂಬಂತೆ ಹೇಳಿದಳು. ನಾನೇನು ಅದನ್ನು ಒಪ್ಪಲಿಲ್ಲ: ‘ಏಯ್, ಅವೆಲ್ಲ ಸುಳ್ಳು. ಈ ಸಿನೆಮಾ ನಟಿಯರೆಲ್ಲ ಎಷ್ಟು ವಯಸ್ಸಾದ್ರೂ ಹೆಂಗೆ ಬಳುಕೋ ಬಳ್ಳಿ ಥರ ಇರಲ್ವೇನೇ? ನೀನೂ ಅವರ ಹಾಗೇ ಇರ್ಬೇಕಪ್ಪ’ ಅಂತ ವಾದಿಸಿದೆ. ಇದಕ್ಕೆ ಸ್ವಲ್ಪ ಮಣಿದಂತೆ ಕಂಡ ಅವಳು, ‘ಹೋಗ್ಲಿ, ಅಕಸ್ಮಾತ್ ನಾನು ಮದುವೆ ಆದ್ಮೇಲೆ ದಪ್ಪ ಆಗ್ಬಿಟ್ಟೆ ಅಂತ ಇಟ್ಕೋ. ಆಗ ಏನ್ಮಾಡ್ತೀಯ?’ ಅಂತ ಕೇಳಿದಳು. ‘ಏನ್ ಮಾಡ್ತೀನಾ? ವಾಕಿಂಗು, ಜಾಗಿಂಗು, ಎಕ್ಸರ್ಸೈಸು, ಡಯಟ್ಟು ಅಂತೆಲ್ಲ ಏನಾದ್ರೂ ಮಾಡ್ಸಿ, ನೀನು ತೆಳ್ಳಗಾಗೋ ಹಂಗೆ ಮಾಡ್ತೀನಿ’ ಎಂದಿದ್ದೆ ಗಟ್ಟಿಯಾಗಿ. ಹಾಗೆ ಹೇಳುವಾಗ ನನಗೆ ಡುಂಡೀರಾಜರ ಕವನದ ಮೊದಲರ್ಧ ಮಾತ್ರ ನೆನಪಿತ್ತೇ ಹೊರತು ದ್ವಿತೀಯಾರ್ಧ ಮರೆತೇ ಹೋಗಿತ್ತು.

ಆದರೆ ಈ ದಪ್ಪಗಾಗೋದು-ತೆಳ್ಳಗಾಗೋದು ವಿಧಿಯ ಕೈವಾಡವೇ ಇರಬೇಕು. ಯಾಕೆಂದರೆ, ಮದುವೆಯಾದಮೇಲೆ ಹೆಂಡತಿಯ ಜೊತೆ ನಾನೂ ದಪ್ಪಗಾಗಲು ಶುರುವಾಗಿದ್ದು! ನನ್ನ ಭಾವೀ ಪತ್ನಿಯ ದೇಹಸೌಷ್ಠವದ ಬಗ್ಗೆ ರಿಸ್ಟ್ರಿಕ್ಷನ್ನು ಹಾಕುವಾಗ ನಾನು ನನ್ನ ಗಾತ್ರದ ಬಗ್ಗೆ ಯೋಚಿಸಿರಲೇ ಇಲ್ಲ. ನಾನು ದಪ್ಪಗಾಗೋದು ಸಾಧ್ಯವೇ ಇಲ್ಲ ಅನ್ನುವುದು ನನ್ನ ನಂಬಿಕೆ. ಕಡ್ಡಿ ಪೈಲ್ವಾನ್ ಎಂದೇ ಕರೆಯಲ್ಪಡುತ್ತಿದ್ದ ನಾನು, ಆ ನಾಮಾಂಕಿತದಿಂದ ಹೊರಬರಲೋಸುಗ ಸುಮಾರು ಪ್ರಯೋಗಗಳನ್ನು ಮಾಡಿದ್ದೆ. ‘ಪ್ರತಿ ರಾತ್ರಿ ಊಟ ಆದ್ಮೇಲೆ ಎರಡು ಪಚ್ಚಬಾಳೆ ಹಣ್ಣು ತಿನ್ನು’, ‘ನಾನ್ವೆಜ್! ನಾನ್ವೆಜ್ ತಿನ್ರೀ’, ‘ಬೇಕರಿ ಫುಡ್ ತಿನ್-ಬೇಕ್ರೀ’, ‘ದಿನಾ ಒಂದು ಬಿಯರ್ ಕುಡಿಯಪ್ಪಾ, ಅದು ಹೆಂಗ್ ದಪ್ಪಗಾಗಲ್ವೋ ನೋಡ್ತೀನಿ’, ‘ಜಿಮ್ಮಿಗೆ ಸೇರ್ಕೋ ಗುರೂ.. ನಿನ್ ಬಾಡಿ ಹೆಂಗ್ ಬೇಕೋ ಹಂಗೆ ತಯಾರಾಗತ್ತೆ’ ಅಂತೆಲ್ಲ ನೂರಾರು ಸಲಹೆಗಳನ್ನು ನಾನು ಸ್ವೀಕರಿಸೀ ಸ್ವೀಕರಿಸಿ, ಅವುಗಳಲ್ಲಿ ಕೆಲವನ್ನು ಪ್ರಯೋಗಿಸಿಯೂ ನೋಡಿ, ಯಾವುದೂ ವರ್ಕೌಟ್ ಆಗದೇ ಬಸವಳಿದು ಹೋಗಿದ್ದೆ. ಇದು ದಪ್ಪಗಾಗೋ ದೇಹವೇ ಅಲ್ಲ ಬಿಡು ಅನ್ನೋ ತೀರ್ಮಾನಕ್ಕೆ ಬಂದಿದ್ದೆ.

ಆದರೆ ಮದುವೆಯಾದಮೇಲೆ ಅದೇನು ಕಮಾಲ್ ನಡೆಯಿತೋ, ಐವತ್ತೆಂಟು ಕಿಲೊ ಇದ್ದ ನಾನು ಅರವತ್ತೆರಡಾಗಿ, ಅರವತ್ತೈದಾಗಿ, ಅರವತ್ತೆಂಟಾಗಿ, ಎಪ್ಪತ್ತೆರಡಾಗಿ... ರೂಪಾಯಿ ಮೌಲ್ಯ ಡಾಲರಿನ ಮುಂದೆ ಕುಸಿದಿದ್ದರೇನಂತೆ? ನಾನು ಪ್ರತಿ ಸಲ ತೂಕ ನೋಡಲೆಂದು ಮಶಿನ್ನಿನ ಮೇಲೆ ನಿಂತು ಒಂದು ರೂಪಾಯಿ ನಾಣ್ಯ ಹಾಕಿದಾಗಲೂ ಅದು ಹೆಚ್ಚೆಚ್ಚೇ ತೋರಿಸತೊಡಗಿತು. ಈಗ, ಹಿಂದೆಲ್ಲ ನೋಡಿ ಉಪೇಕ್ಷಿಸುತ್ತಿದ್ದ, ಅದೇ ಮಶಿನ್ನಿನ ಮೇಲೆ ಬರೆದಿರುತ್ತಿದ್ದ ಎಷ್ಟು ಎತ್ತರಕ್ಕೆ ಎಷ್ಟು ತೂಕವಿರಬೇಕು ಎಂಬ ಲೆಕ್ಕಾಚಾರದ ಪಟ್ಟಿಯನ್ನು ಸ್ವಲ್ಪ ಹುಬ್ಬೇರಿಸಿ ನೋಡಬೇಕಾಯಿತು. ದಪ್ಪಗಾಗಬೇಕು ಅಂತ ಹಿಂದೆ ಮಾಡಿದ್ದ ಅಷ್ಟೆಲ್ಲ ಸಾಹಸಗಳು ವಿಫಲವಾದಮೇಲೆ, ಈಗ ಸಾಹಸವನ್ನೇ ಮಾಡದೇ ದಪ್ಪಗಾಗುತ್ತಿರುವ ನನ್ನೀ ದೇಹದ ಪರಿ ಕಂಡು ಆಶ್ಚರ್ಯವಾಯಿತು. ಇನ್ನು ಯಾರಾದರೂ ಕಡ್ಡಿ ಪೈಲ್ವಾನರು ಸಿಕ್ಕರೆ ಮದುವೆಯಾಗುವ ಸಲಹೆ ಕೊಡಬೇಕು ಅಂತ ತೀರ್ಮಾನಿಸಿದೆ. ಸ್ವಲ್ಪ ದುಬಾರಿ ಪ್ರಯೋಗವಾದರೂ, ಫಲಿತಾಂಶದಲ್ಲಿ ಗೆಲುವು ನಿಗದಿಯಿದೆಯಲ್ಲ!

ಹಾಗಂತ ನಾನೇನು ಹೀಗೆ ದಪ್ಪಗಾಗುತ್ತಿರುವುದನ್ನು ಕಂಡು ಎದೆಗುಂದಲಿಲ್ಲ. ನನ್ನ ಎತ್ತರಕ್ಕೆ ಸರಿಯಾದ ತೂಕಕ್ಕೆ ಬರುತ್ತಿರುವುದಕ್ಕೆ ಖುಶಿ ಪಟ್ಟೆ. ಯಾರೋ ಒಂದಿಬ್ಬರು ಸಿಕ್ಕು, ‘ಹಾಂ, ಈಗ ನೀನು ಸರಿಯಾದ ಅಳತೆಗೆ ಬರ್ತಿದೀಯ ನೋಡು. ಹ್ಯಾಂಡ್‌ಸಮ್ ಕಾಣ್ತಿದೀಯ’ ಅಂತ ಹೇಳಿದಾಗ ಮೀಸೆ ತಿರುವಿದೆ. ಮುಂಚೆ ಕಣ್ಣೆತ್ತಿಯೂ ನೋಡದಿದ್ದ ಹುಡುಗಿಯರು ಈಗ ನನ್ನೆಡೆಗೆ ದೃಷ್ಟಿ ಹಾಯಿಸುವುದು ಕಂಡು ಎಂಜಲು ನುಂಗಿಕೊಂಡೆ. ಮದುವೆಯಾಗದೇ ಸ್ಮಾರ್ಟ್ ಆಗೋದಿಲ್ಲ, ಸ್ಮಾರ್ಟ್ ಆಗದೇ ಹುಡುಗಿಯರು ನೋಡೋದಿಲ್ಲ, ಮದುವೆಯಾದಮೇಲೆ ಸ್ಮಾರ್ಟ್ ಆದರೆ ಅವರು ನೋಡಿಯೂ ಉಪಯೋಗವಿಲ್ಲ! ಇದೇನು ಜಗತ್ತಪ್ಪಾ, ಏನಯ್ಯಾ ನಿನ್ನ ಲೀಲೆ ಅಂತೆಲ್ಲ ಸಿನೆಮಾ ಹೀರೋಗಳ ಶೈಲಿಯಲ್ಲಿ ನನಗೆ ನಾನೇ ಹೇಳಿಕೊಂಡೆ. ಹಾಗೆಯೇ ಹೆಂಡತಿಯೆಡೆಗೆ ಈಗ ಸ್ವಲ್ಪ ಗಮನ ಹರಿಸಿದೆ. ಅಪ್ಪ ಚೇನ್ ಸ್ಮೋಕರ್ ಆಗಿದ್ದರೇನು- ಮಗ ಮೋಟುಬೀಡಿ ಸೇದಿ ಸಿಕ್ಕುಬಿದ್ದಾಗ ಹಿಡಿದು ಸರಿಯಾಗಿ ಜಾಡಿಸುವುದಿಲ್ಲವೇ? ಹಾಗೆಯೇ ನಾನೂ ಹೆಂಡತಿ ದಪ್ಪಗಾಗುತ್ತಿರುವುದಕ್ಕೆ ಆಕ್ಷೇಪಿಸಿದೆ. ಆದರೆ ಅವಳು ಅದಕ್ಕೆ ಕ್ಯಾರೇ ಎನ್ನಲಿಲ್ಲ. ಮೂಗು ಮುರಿದು ಮುನ್ನಡೆದಳು. ನಾನೂ ಜೋರಾಗಿ ಮಾತನಾಡುವ ಧೈರ್ಯ ಮಾಡಲಿಲ್ಲ. ಯಾಕೆಂದರೆ ನಾನಾಗಲೇ ಡುಂಡೀರಾಜರ ಕವನದ ಗಂಡನಾಗಿದ್ದೆನಲ್ಲ!

ಇದು ಇಷ್ಟಕ್ಕೇ ನಿಂತಿದ್ದರೆ ಚೆನ್ನಿತ್ತು. ಆದರೆ ಸಮಸ್ಯೆಯಾದದ್ದು ನಮ್ಮ ದೇಹಗಳ ತೂಕವೇರುವಿಕೆ ಹಾಗೇ ಹೆಚ್ಚುತ್ತ ಹೋದಾಗ. ವೇಯಿಂಗ್ ಮಶಿನ್ನು ಒಂದೊಂದೇ ರೂಪಾಯಿಯಂತೆ ನುಂಗುತ್ತ ದುಡ್ಡು ಮಾಡತೊಡಗಿತು. ಅದರ ಜೊತೆಜೊತೆಗೇ ಗಾರ್ಮೆಂಟ್ ಇಂಡಸ್ಟ್ರಿಯವರೂ ಸಿರಿವಂತರಾಗತೊಡಗಿದರು. ಏಕೆಂದರೆ, ಇಪ್ಪತ್ತೆಂಟಿದ್ದ ನನ್ನ ಸೊಂಟದ ಸುತ್ತಳತೆ, ಮೂವತ್ತಾಗಿ, ಮೂವತ್ತೆರಡಾಗಿ, ಈಗ ಮೂವತ್ನಾಲ್ಕೂ ಯಾಕೋ ಟೈಟು ಅನ್ನೋ ಹಂತಕ್ಕೆ ತಲುಪಿತ್ತು. ಇರೋ ಪ್ಯಾಂಟೆಲ್ಲಾ ತುಂಬಾ ಬಿಗಿಯಾಯಿತು ಅಂತ ಕಳೆದ ತಿಂಗಳಷ್ಟೇ ತಂದುಕೊಂಡ ಹೊಸ ಪ್ಯಾಂಟುಗಳೂ ಹುಕ್ ಹಾಕಲು ಬರದಂತಾದವು. ಸರಿ ಅಂತ ಮತ್ತೆರಡು ಹೊಸ ಪ್ಯಾಂಟ್ ತಂದುಕೊಂಡರೆ ಮರು ತಿಂಗಳಿಗೆ ಅವೂ ಹಿಡಿಸದಾದವು. ನಮ್ಮ ಮನೆಯ ವಾರ್ಡ್‌ರೋಬಿನಲ್ಲಿ ಬಳಸಲಾಗದ ಬಟ್ಟೆಗಳ ರಾಶಿಯೇ ದೊಡ್ಡದಾಗುತ್ತ ಹೋದಾಗ ನಿಜಕ್ಕೂ ನಾವು ಯೋಚಿಸುವಂತಾಯಿತು. ‘ಸ್ಮಾರ್ಟಾಗಿ ಕಾಣ್ತಿದೀಯಾ’ ಅಂತಿದ್ದ ಗೆಳೆಯರು ಈಗ ‘ಯಾಕಲೇ ಮಗನೇ, ಪೂರಿ ಹಂಗೆ ಉಬ್ತಿದೀಯಾ’ ಅನ್ನಲು ಶುರು ಮಾಡಿದರು.  ಮೂರನೇ ಮಹಡಿಗೆ ಏರುವಾಗ ಏದುಸಿರು ಬಂದು ನಿಲ್ಲುವ ಹಾಗೆಲ್ಲ ಆದಾಗ ನಾವು ಇನ್ನು ತಡ ಮಾಡಿದರೆ ಆಗಲಿಲ್ಲ ಅನ್ನಿಸಿತು. ‘ಯು ಹ್ಯಾವ್ ಪುಟ್ಟಾನ್ ವೇಯ್ಟ್ ಯಾರ್’ ಅಂತ ನನ್ನ ಹೆಂಡತಿಗೆ ಅವಳ ಕಲೀಗುಗಳೂ ರಾಗವೆಳೆದು ಹೇಳಿದಮೇಲೆ ಅವಳೂ ಸೀರಿಯಸ್ಸಾದಳು. ಚೆನ್ನಾಗಿ ಕಾಣ್ತಾ ಇಲ್ಲ ಅಂತ ಯಾರಾದರೂ ಹೇಳಿಬಿಟ್ಟರೆ ಸಾಕು, ಹುಡುಗಿಯರು ಅಲರ್ಟ್ ಆಗುತ್ತಾರೆ.

ಎಂತಹ ಕಷ್ಟದ ಸಮಯದಲ್ಲೂ ಕೈ ಹಿಡಿಯುವವರೇ ನಿಜವಾದ ಗೆಳೆಯರು ಅಲ್ಲವೇ? ಆ ಮಾತನ್ನು ನಿಜ ಮಾಡಲೆಂದೇ ಕಾಯುತ್ತಿರುವ ನನ್ನ ಅದೆಷ್ಟೋ ಗೆಳೆಯರು ಈಗಲೂ ಆಪತ್ಭಾಂಧವರಂತೆ ಸಹಾಯಕ್ಕೆ ಧಾವಿಸಿದರು. ಮುಂಚೆ ದಪ್ಪಗಾಗಲು ನಾನಾ ಥರದ ಸಲಹೆ ಕೊಡುತ್ತಿದ್ದವರು ಈಗ ತೆಳ್ಳಗಾಗುವ ಟಿಪ್ಪುಗಳ ಪಟ್ಟಿ ಹಿಡಿದು ಬಂದರು. ಹಾಗೆ ನೋಡಿದರೆ, ದಪ್ಪಗಾಗಲು ಇರುವ ವಿಧಾನಗಳಿಗಿಂತ ತೆಳ್ಳಗಾಗುವ ಐಡಿಯಾಗಳು ಸುಲಭವಾಗಿ ಸಿಗುತ್ತವೆ. ಟೀವಿ, ಎಫ್ಫೆಮ್, ರಸ್ತೆ ಬದಿಯ ದೊಡ್ಡ ಫಲಕಗಳು, ಮೆಡಿಕಲ್ ಶಾಪಿನ ಬಾಗಿಲಿಗಂಟಿಸಿದ ಚೀಟಿಗಳು -ಎಲ್ಲೆಡೆ ಕಾಣುವ ವೇಯ್ಟ್ ಲಾಸ್ ಔಷಧಿ ಅಥವಾ ಶಿಬಿರಗಳ ಜಾಹೀರಾತುಗಳು ಒಂದು ತೂಕದವಾದರೆ, ಆಪತ್ಭಾಂಧವರು ಕೊಡುವ ಸಲಹೆಗಳು ಇನ್ನೊಂದೇ ವಜನಿನವು. ಬೆಳಗ್ಗೆ ಮುಂಚೆ ಎದ್ದು ಜಾಗಿಂಗ್ ಹೋಗುವುದು, ದಿನಾಲೂ ಎರಡು ಮೈಲಿ ಬಿರುಸಾದ ವಾಕ್ ಮಾಡುವುದು, ಜಿಮ್‌ಗೆ ಸೇರಿ ವ್ಯಾಯಾಮದಲ್ಲಿ ತೊಡಗುವುದು, ಜಂಕ್‌ಫುಡ್ ಕಮ್ಮಿ ಮಾಡುವುದು, ಗ್ರೀನ್ ಟೀ ಕುಡಿಯುವುದು... ಹೀಗೆ ನಮ್ಮ ದೇಹವನ್ನೂ ನಾಲಿಗೆಯನ್ನೂ ಕಷ್ಟಕ್ಕೆ ತಳ್ಳುವ ಸಲಹೆಗಳೇ ಎಲ್ಲಾ. ಈ ಗೆಳೆಯರೆಲ್ಲ ನಾವು ಕಷ್ಟ ಪಡುವುದನ್ನು ನೋಡಿ ಮಜಾ ತೆಗೆದುಕೊಳ್ಳಲು ತಂತ್ರ ಹೂಡುತ್ತಿರುವಂತೆ ಅನ್ನಿಸಿ ಅವರನ್ನೆಲ್ಲ ಮನಸಿನಲ್ಲೇ ಬೈದುಕೊಂಡೆ. ಈ ಸಂದರ್ಭದಲ್ಲೇ ಬಂದಿದ್ದು ನಾವು ಅನ್ನ ತಿನ್ನುವುದು ಬಿಟ್ಟು ಚಪಾತಿ ತಿನ್ನಬೇಕು ಎನ್ನುವ ಸಲಹೆ.

ಉಳಿದೆಲ್ಲ ಸಲಹೆಗಳಿಗಿಂತ ಇದು ಸುಲಭದ್ದು, ಸ್ವಲ್ಪವಾದರೂ ಮಾನವೀಯತೆ ಉಳ್ಳದ್ದು ಅಂತ ನಮಗನಿಸಿತು. ಪೂರಿಯಂತೆ ಉಬ್ಬಿದ್ದಕ್ಕೆ ಚಪಾತಿ ತಿನ್ನುವುದೇ ಪರಿಹಾರ, ಅನ್ನದಲ್ಲಿರುವ ಕೊಬ್ಬಿನ ಅಂಶ ನಾವು ರಾತ್ರಿ ಮಲಗಿದಾಗ ಕಾರ್ಯಾಚರಣೆ ಮಾಡಿ ದೇಹವನ್ನು ದಪ್ಪಗೆ ಮಾಡುವುದರಿಂದ, ರಾತ್ರಿಯೂಟಕ್ಕೆ ಚಪಾತಿಯೇ ಸೂಕ್ತ ಎಂಬುದು ಸರಳ ಸೂತ್ರ. ಸರಿ, ಇನ್ನು ಪ್ರತಿ ರಾತ್ರಿ ಅನ್ನದ ಬದಲು ಚಪಾತಿ ತಿನ್ನುವುದು ಅಂತ ತೀರ್ಮಾನಿಸಿದೆವು. ನಾನು ಮರುದಿನವೇ ಹೋಗಿ ಐದು ಕೆಜಿ ಗೋಧಿಹಿಟ್ಟು ಹೊತ್ತು ತಂದೆ. ಹೆಂಡತಿ ಹುಮ್ಮಸ್ಸಿನಿಂದ ಲಟ್ಟಿಸಿ ಚಪಾತಿ ಮಾಡಿದಳು. ಅದಕ್ಕೊಂದು ಪಲ್ಯವೂ ತಯಾರಾಯಿತು. ನಾವು ಅದನ್ನೇ ಹೊಟ್ಟೆ ತುಂಬಾ ತಿಂದೆವು. ಇನ್ನೇನು ಕೆಲವೇ ದಿನಗಳಲ್ಲಿ ತೆಳ್ಳಗಾಗುವ ಕನಸು ಕಾಣತೊಡಗಿದೆವು.

ಹೀಗೇ ಒಂದು ವಾರ ಕಳೆಯಿತು. ಅಷ್ಟರಲ್ಲಿ ಹೆಂಡತಿಯ ಆಫೀಸಿನ ಸಮಯ ಬದಲಾದ್ದರಿಂದ ಆಕೆ ಮನೆಗೆ ಬರುವುದು ತಡವಾಗತೊಡಗಿತು. ಈಗ ಅಡುಗೆ ಮಾಡುವ ಜವಾಬ್ದಾರಿ ನನ್ನ ಮೇಲೆ ಬಂತು. ಬ್ಯಾಚುಲರ್ ಆಗಿದ್ದಾಗ ಸಂಪಾದಿಸಿದ್ದ ಪಾಕಪ್ರಾವೀಣ್ಯತೆಯನ್ನೆಲ್ಲ ಮತ್ತೆ ಪ್ರಯೋಗಿಸುವ ಸಮಯ ಬಂದಿದ್ದರಿಂದ ನಾನದನ್ನು ಉತ್ಸಾಹದಿಂದಲೇ ಸ್ವಾಗತಿಸಿದೆ. ಆದರೆ, ಅಡುಗೆ ಮಾಡುವುದರಲ್ಲಿ ನಾನು ಅದೆಷ್ಟೇ ಅನುಭವ ಹೊಂದಿದ್ದರೂ ಚಪಾತಿ ಒರೆಯುವುದು ಮಾತ್ರ ನನಗೆ ಕರಗತವಾಗಿರಲಿಲ್ಲ. ಹಾಗೂ ಏನಾದರಾಗಲಿ ಅಂತ ಲಟ್ಟಿಸಲು ಕುಳಿತರೆ, ಎರಡು ತಾಸು ಪ್ರಯತ್ನಿಸಿದರೂ ಒಂದು ಚಪಾತಿಯನ್ನೂ ಗೋಲಾಕಾರಕ್ಕೆ ತರಲು ಆಗಲಿಲ್ಲ. ಈ ವ್ಯರ್ಥ ಪ್ರಯತ್ನವನ್ನು ಇಲ್ಲಿಗೇ ಬಿಟ್ಟು, ಹೆಂಡತಿ ಬರುವವರೆಗೆ ಕಾಯೋಣವೇ ಅಂತ ಯೋಚಿಸಿದೆ. ಆದರೆ ಮೊದಲೇ ಆಫೀಸಿನಿಂದ ಸುಸ್ತಾಗಿ ಬರುವ ಅವಳಿಗೆ ಆ ಮಧ್ಯರಾತ್ರಿಯಲ್ಲಿ ಲಟ್ಟಣಿಗೆ ಕೊಟ್ಟು ಲಟ್ಟಿಸು ಎನ್ನುವುದು ಸರಿ ಕಾಣಲಿಲ್ಲ. ಲಟ್ಟಣಿಗೆ ಹಿಡಿದ ಹೆಂಡತಿ-ತಲೆ ಮೇಲೆ ಉಬ್ಬಿರುವ ಗಂಡಂದಿರ ನೂರಾರು ವ್ಯಂಗ್ಯಚಿತ್ರಗಳನ್ನು ನೋಡಿದ್ದ ನನಗೆ ಈ ರಿಸ್ಕು ತೆಗೆದುಕೊಳ್ಳಲು ಇಷ್ಟವಿರಲಿಲ್ಲ.  ಹೇಗೋ ಕಷ್ಟ ಪಟ್ಟು ಎಂಟ್ಹತ್ತು ಚಪಾತಿ ಒರೆದೆನಾದರೂ ಅವು ಒಂದೊಂದೂ ಒಂದೊಂದು ಆಕಾರದಲ್ಲಿದ್ದವು. ಅಷ್ಟೆಲ್ಲ ಸಲ ಲಟ್ಟಿಸಿದ್ದರಿಂದ ಕೈ ಬೇರೆ ನೋವು ಬಂದಿತ್ತು. ಬಹುಶಃ ಈ ತೆಳ್ಳಗಾಗುವುದು ಎಂಬುದು ಚಪಾತಿಯನ್ನು ತಿನ್ನುವುದರಿಂದ ಅಲ್ಲ, ಚಪಾತಿ ತಯಾರಿಸುವ ಕ್ರಿಯೆಯಲ್ಲಿ ನಮ್ಮ ದೇಹಕ್ಕಾಗುವ ವ್ಯಾಯಾಮದಿಂದಲೇ ನಾವು ತೆಳ್ಳಗಾಗುತ್ತೇವೇನೋ ಅಂತ ನನಗನಿಸಿತು. ಹೌದು ಮತ್ತೆ, ಹಿಟ್ಟನ್ನು ದಬರಿಗೆ ಹಾಕಿಕೊಂಡು, ಅದಕ್ಕೆ ನೀರು ಹಾಕಿ ಕಲಸುತ್ತ ಕಲಸುತ್ತ ಹದಕ್ಕೆ ತಂದು, ಉಂಡೆ ಕಟ್ಟಿ, ಆಮೇಲದನ್ನು ಮಣೆಯ ಮೇಲಿಟ್ಟು ಲಟ್ಟಿಸುತ್ತ, ತೆಳ್ಳಗೂ ದುಂಡಗೂ ಮಾಡಲು ಹೆಣಗಾಡುತ್ತ, ನಂತರ ಅದನ್ನಲ್ಲಿಂದ ಎತ್ತಿ ಕಾವಲಿಯ ಮೇಲೆ ಹಾಕಿ, ಸೀದು ಹೋಗದಂತೆ ತಿರುವಿ ಹಾಕುತ್ತ ಬೇಯಿಸಿ... ಇಷ್ಟೆಲ್ಲ ಮಾಡುವುದೂ ಒಂದೇ ಪಾರ್ಕಿನಲ್ಲಿ ನಾಲ್ಕು ರೌಂಡು ವಾಕ್ ಮಾಡುವುದೂ ಒಂದೇ! ಆಫೀಸಿನಿಂದ ಬಂದ ಹೆಂಡತಿ ‘ಆಕಾರ ಹೆಂಗಿದ್ರೆ ಏನು, ನಾವಿಬ್ರೇ ತಾನೇ, ಮುರಕೊಂಡೇ ತಿನ್ನೋದು ತಾನೆ’ ಅಂತೆಲ್ಲ ಹೇಳಿ ನನಗೆ ಸಮಾಧಾನ ಮಾಡಿ, ನನ್ನ ಪ್ರಯತ್ನವನ್ನು ಶ್ಲಾಘಿಸಿದಳಾದರೂ ನನಗೇಕೋ ಈ ಚಪಾತಿ ಮಾಡುವ ಪ್ರಕ್ರಿಯೆ ಬಹಳ ಉದ್ದ ಮತ್ತು ಕಠಿಣ ಎನಿಸಿತು.

ಮರುದಿನ ಗೆಳೆಯರ ಬಳಿ ನನ್ನೀ ಸಮಸ್ಯೆಯನ್ನು ಹೇಳಿಕೊಂಡೆ. ಅವರ ಬಳಿ ಇದಕ್ಕೇನಾದರೂ ಒಂದು ಪರಿಹಾರ ಇದ್ದೇ ಇರುತ್ತದೆ ಎಂಬುದು ನನ್ನ ನಂಬಿಕೆ.  ನನ್ನ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ ಅವರು: ‘ಅಷ್ಟೇನಾ, ಒಂದು ಚಪಾತಿ ಮೇಕರ್ ತಗೊಂಡ್ಬಿಡ್ರೀ’ ಅಂದರು. ‘ಚಪಾತಿ ಮೇಕರ್ರಾ? ಏನ್ರೀ ಅದು?’ -ಕೇಳಿದೆ. ‘ಅಯ್ಯೋ, ಗೊತ್ತಿಲ್ವಾ? ಚಪಾತಿ ಮೇಕರ್ರು.. ಮಶಿನ್ನು.. ಹಿಟ್ಟು ಕಲಸಿದ್ರೆ ಆಯ್ತು, ಅದ್ರಲ್ಲಿ ಇಟ್ರೆ ಆಯ್ತು, ಚಪಾತಿ ರೆಡಿ!’ -ಅಂದರು. ಚಪಾತಿ ಮಾಡುವುದು ಇಷ್ಟು ಸರಳವಾದದ್ದು ನನಗೆ ಖುಷಿಯಾಯಿತು. ಹಿಟ್ಟು ಕಲಸಿಟ್ಟರೆ ಸಾಕು, ಚಪಾತಿಯೇ ತಯಾರಾಗಿ ಬೀಳುತ್ತದೆ ಎಂದರೆ ಇನ್ನೇನು ಕೆಲಸ ಉಳಿಯಿತು? ತಿನ್ನುವುದು, ತೆಳ್ಳಗಾಗುವುದು, ಅಷ್ಟೇ!

ನಾವು ಆ ವಾರಾಂತ್ಯವೇ ಅಂಗಡಿಗೆ ಹೋಗಿ, ಹೆಚ್ಚಿಗೆ ಚೌಕಾಶಿಯನ್ನೂ ಮಾಡದೇ ಒಂದು ಚಪಾತಿ ಮೇಕರ್ ಕೊಂಡುತಂದೆವು. ತಂದವರೇ ಪೆಟ್ಟಿಗೆಯನ್ನು ಬಿಚ್ಚಿ ಮಶಿನ್ನನ್ನು ಹೊರತೆಗೆದೆವು. ಕೈ-ಕಾಲು-ಹೊಟ್ಟೆ-ಕಣ್ಣನ್ನೂ ಹೊಂದಿದ್ದ ಇದು ನಮ್ಮನ್ನು ತೆಳ್ಳಗೆ ಮಾಡಲೆಂದೇ ಬಂದ ಯಂತ್ರಮಾನವನಂತೆ ಕಂಡಿತು. ಮಶಿನ್ನಿನ ಜೊತೆ ಅದನ್ನು ಬಳಸಿ ಚಪಾತಿ ಮಾಡುವ ಪ್ರಾತ್ಯಕ್ಷಿಕೆಯ ಒಂದು ಡಿವಿಡಿ ಸಹ ಇಟ್ಟಿದ್ದರು. ಲ್ಯಾಪ್‌ಟಾಪಿನಲ್ಲಿ ಅದನ್ನು ಪ್ಲೇ ಮಾಡುವಾಗಲಂತೂ ಇನ್ನೇನು ಒಳ್ಳೆಯ ದಿನಗಳು ಬಂದೇಬಿಟ್ಟವು ಅನ್ನುವಷ್ಟು ಆನಂದ ನಮಗೆ! ಆ ವೀಡಿಯೋದಲ್ಲಿದ್ದ ಹೆಣ್ಣುಮಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಒಂದೊಂದು ಚಪಾತಿ ಮಾಡುತ್ತಿದ್ದಳು! ಜಗತ್ತು ಇಷ್ಟೆಲ್ಲ ಮುಂದುವರೆದಿರುವ ಬಗ್ಗೆ ತಿಳಿದುಕೊಳ್ಳದೇ ಇಷ್ಟು ದಿನ ಮೂರ್ಖರಂತೆ ಚಪಾತಿ ಲಟ್ಟಿಸುತ್ತಾ ಕೂತು ಎಂಥಾ ತಪ್ಪು ಮಾಡಿದೆವು ಅನ್ನಿಸಿತು. ಥಳಥಳನೆ ಹೊಳೆಯುವ ದೇಹವನ್ನು ಹೊಂದಿದ್ದ ಆ ಚಪಾತಿ ಮೇಕರ್ ಬಗ್ಗೆ ಪ್ರೀತಿಯೂ, ಅಭಿಮಾನವೂ ಬಂತು. ಅದಕ್ಕೊಂದು ಹೆಸರಿಡಬೇಕು ಎನಿಸಿತು. ಇಂಡಿಯನ್ ಸೂಪರ್‌ಮ್ಯಾನ್ ರಜನೀಕಾಂತರನ್ನು ನೆನೆಸಿಕೊಂಡು ‘ರೋಟೀರೋಬೋ’ ಅಂತ ನಾಮಕರಣ ಮಾಡಿದೆವು.

ಆದರೆ ಈ ರೋಟೀರೋಬೋ ಬಳಸಿ ಚಪಾತಿ ಮಾಡುವುದು ಆ ವೀಡಿಯೋದಲ್ಲಿ ತೋರಿಸಿದಷ್ಟು ಸುಲಭವಾಗಿರಲಿಲ್ಲ. ಹಿಟ್ಟು ಅವರು ಹೇಳಿದ ಹದದಲ್ಲೇ ಇರಬೇಕಿತ್ತು, ಮಶಿನ್ನು ಅವರು ಹೇಳಿದಷ್ಟೇ ಕಾದಿರಬೇಕಿತ್ತು, ಉಂಡೆ ನಿಗದಿತ ಗಾತ್ರದಲ್ಲಿರಬೇಕಿತ್ತು, ಅದನ್ನು ರೋಬೋನಲ್ಲಿಟ್ಟು ಒತ್ತುವಾಗ ಸರಿಯಾದ ಒತ್ತಡವನ್ನೇ ಹಾಕಬೇಕಿತ್ತು.... ಹೀಗೆಲ್ಲ ಆಗಿ ನಾವು ಮೊದಲ ದಿನ ಮಾಡಿದ ಚಪಾತಿಗಳಲ್ಲಿ ಮುಕ್ಕಾಲು ಪಾಲು ತಿನ್ನಲು ಬಾರದಾದವು. ನಾವು ಆ ವೀಡಿಯೋವನ್ನು ಮತ್ತೆ ಮತ್ತೆ ಹಾಕಿ ನೋಡಿದರೂ ಅವಳಷ್ಟು ಸಲೀಸಾಗಿ ಒಂದು ಚಪಾತಿಯನ್ನೂ ಮಾಡಲಾಗಲಿಲ್ಲ. ಒಂದೋ ಚಪಾತಿ ಪುಡಿಪುಡಿಯಾಗುತ್ತಿತ್ತು, ಇಲ್ಲವೇ ದಪ್ಪಗಾಗುತ್ತಿತ್ತು, ಇಲ್ಲವೇ ಸೀದುಹೋಗುತ್ತಿತ್ತು, ಇಲ್ಲವೇ ನಾವು ಒತ್ತುವಾಗ ಹಿಟ್ಟಿನುಂಡೆಯನ್ನೇ ರೋಬೋ ಹೊರಹಾಕಿಬಿಡುತ್ತಿತ್ತು. ‘ಅವಳು ಅಷ್ಟು ಈಜಿಯಾಗಿ ಮಾಡ್ತಾಳಲ್ಲೇ?’ ಅಂತ ಹೆಂಡತಿಗೆ ಹೇಳಿದರೆ, ‘ಅವಳನ್ನೇ ಸ್ವಲ್ಪ ಕರ್ಕೊಂಡ್ ಬನ್ನಿ ಇಲ್ಲಿಗೆ. ಮಾಡಿ ತೋರಿಸ್ಲಿ’ ಅಂತ ರೇಗಿದಳು.

ಆದರೂ ನಾವು ಪ್ರಯತ್ನ ಕೈಬಿಡಲಿಲ್ಲ. ಎಷ್ಟಂದರೂ ದುಡ್ಡು ಕೊಟ್ಟು ತಂದ ವಸ್ತುವಲ್ಲವೇ! ಮರಳಿ ಯತ್ನವ ಮಾಡು ಅಂತ ಜಪಿಸಿಕೊಂಡು ಮರುದಿನ ನಾನು ಮತ್ತೆ ಹಿಟ್ಟು ಕಲಸಿ ರೋಬೋ ಜೊತೆ ಚಪಾತಿ ಮಾಡಲು ಯತ್ನಿಸಿದೆ. ಆದರೆ ಈ ಸಲವೂ ತಿನ್ನಲು ನಾಲ್ಕು ಚಪಾತಿಯೂ ಸಿಗಲಿಲ್ಲ. ನಮ್ಮ ಈ ಪ್ರಯತ್ನ ಎರಡ್ಮೂರು ವಾರದವರೆಗೂ ಮುಂದುವರೆಯಿತು. ಆದರೆ ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಸಫಲತೆ ಕಾಣಲಿಲ್ಲ. ನಮಗೆ ನಿಧಾನಕ್ಕೆ ಈ ಯಂತ್ರದ ಬಗ್ಗೆ, ದಿನಾಲೂ ಅರೆಬೆರೆ ಬೆಂದ ಅಥವಾ ಕರಕಲಾದ ಚಪಾತಿ ತಿನ್ನುವುದರ ಬಗ್ಗೆ, ಮತ್ತೆ ಈ ಡಯಟಿಂಗ್‌ನ ಬಗ್ಗೆಯೇ ಬೇಸರ ಬರಲು ಶುರುವಾಗಿತ್ತು. ನಾಲಿಗೆ ರುಚಿಯಾದ ಆಹಾರ ಬಯಸುತ್ತಿತ್ತು. ಅಷ್ಟರಲ್ಲಿ ಒಂದು ಬೆಳಗ್ಗೆ ನನ್ನ ಹೆಂಡತಿ ಅವಸರದಲ್ಲಿ ಈ ರೋಬೋನ ಕಾದ ಮೈಗೆ ಕೈ ತಾಕಿಸಿ ಸುಟ್ಟುಕೊಂಡಮೇಲಂತೂ ರೋಟೀರೋಬೋನ ಮೇಲೆ ಸಿಟ್ಟೇ ಬಂದುಬಿಟ್ಟಿತು. ಅಂದು ಹೀರೋ ಥರ ಕಂಡಿದ್ದ ರೋಬೋ ಇಂದು ವಿಲನ್ನಿನಂತೆ ಕಾಣತೊಡಗಿದ. ಊರಿಗೆ ಫೋನ್ ಮಾಡಿ ಹೇಳಿದಾಗ, ‘ಚಪಾತಿ ಮಾಡಕ್ಕೆಲ್ಲ ಎಂಥಾ ಮಶಿನ್ನು? ಒಂಚೂರು ಕಷ್ಟ ಪಟ್ಟು ಒರಕೊಂಡ್ರೆ ಆಯ್ತಪ್ಪ. ನೀವು ಎಲ್ಲಾದ್ರಲ್ಲೂ ಅರಾಂ ಹುಡುಕ್ತೀರಿ. ಅದಕ್ಕೇ ಮೈಯೂ ಬೆಳೀತಿದೆ. ಸ್ವಲ್ಪ ಮೈಕೈ ನುಗ್ಗುಮಾಡಿಕೊಂಡು ಕೆಲಸ ಮಾಡಿದರೆ ಸಣ್ಣಗೂ ಆಗ್ತೀರ, ಚಪಾತಿಯೂ ರುಚಿಯಾಗೊತ್ತೆ’ ಅಂತ ಬೈದರು. ಹೆಂಡತಿ ತಾನಿನ್ನು ಆ ಹಾಳು ರೋಬೋನ ಹತ್ತಿರಕ್ಕೂ ಹೋಗೋದಿಲ್ಲ ಅಂತ ಶಪಥ ಮಾಡಿದಳು. ನನಗೂ ರೋಬೋನ ಸಹವಾಸ ಸಾಕಾಗಿತ್ತು. ಇನ್ನೇನು ಮಾಡುವುದು? ಓ‌ಎಲ್ಲೆಕ್ಸಿನಲ್ಲಿ ಅದನ್ನು ಮಾರಿಬಿಡುವುದು ಅಂತ ತೀರ್ಮಾನಿಸಿದೆ.

ಓಲ್ಲೆಕ್ಸಿನಲ್ಲಿ ಮಾರುವುದು ‘ಫೋಟೋ ತೆಗೆಯಿರಿ, ಅಪ್‌ಲೋಡ್ ಮಾಡಿರಿ, ಮಾರಿಬಿಡಿ!’ ಅನ್ನುವ ಅವರ ಜಾಹೀರಾತಿನಷ್ಟೇನು ಸುಲಭವಾಗಿರಲಿಲ್ಲ. ನಾನು ಜಾಹೀರಾತು ಪ್ರಕಟಿಸಿದ ವಾರದಮೇಲೆ ಒಂದು ಫೋನ್ ಬಂತು. ಉತ್ತರ ಭಾರತದಿಂದ ಬಂದವನಾಗಿದ್ದ ಅವನು ನಾನು ಕೊಂಡಿದ್ದ ಬೆಲೆಯ ಅರ್ಧಕ್ಕೆ ಕೇಳಿದ. ಕೊಡೋದಿಲ್ಲ ಅಂತ ಫೋನಿಟ್ಟೆ. ಆಮೇಲೆ ಬಂದ ಮೂರ್ನಾಲ್ಕು ಕರೆಗಳೂ ಅಂಥವೇ. ನಾವು ಕೊಂಡು ತಿಂಗಳೂ ಆಗಿಲ್ಲಪ್ಪ, ಇನ್ನೂ ಹನ್ನೊಂದು ತಿಂಗಳು ವಾರಂಟಿ ಇದೆಯಪ್ಪಾ, ಸ್ವಲ್ಪವೂ ಹಾಳಾಗಿಲ್ಲಪ್ಪಾ ಅಂತೆಲ್ಲ ಅಂಗಲಾಚಿದರೂ ಯಾರೂ ಬಗ್ಗಲಿಲ್ಲ. ಕೊನೆಗೂ ಒಬ್ಬನಿಗೆ ನಾನದನ್ನು ಅರ್ಧ ಬೆಲೆಗೇ ಮಾರಲು ಒಪ್ಪಬೇಕಾಯಿತು. ಇಂಥಾ ಸ್ಥಳಕ್ಕೆ ಇಂಥಾ ಹೊತ್ತಿಗೆ ಬಂದು ತೆಗೆದುಕೊಂಡು ಹೋಗುವುದಾಗಿ ಹೇಳಿದ.

ರೋಬೋನನ್ನು ಮೊದಲಿನಂತೆಯೇ ಬಾಕ್ಸಿಗೆ ಹಾಕಿ ಪ್ಯಾಕ್ ಮಾಡಿ, ನಿಗದಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಹೋಗಿ ನಾನು ಕಾದುನಿಂತೆ. ಯಾರೋ ಭಯಂಕರ ದಪ್ಪಗಿರುವ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದ ನನಗೆ ಒಬ್ಬ ಸಣಕಲ ಬಂದು ಕೈಕುಲುಕಿ ನಾನೇ ಅವನು ಅಂತ ಪರಿಚಯ ಮಾಡಿಕೊಂಡ. ಕೇವಲ ದಪ್ಪಗಿರುವವರೇ ಚಪಾತಿ ತಿನ್ನುವುದು ಅಂತ ಅಂದುಕೊಂಡಿದ್ದ ನನಗೆ, ಇಷ್ಟೊಂದು ಕೃಶದೇಹಿಯಾದ, ಸುಮಾರು ಇಪ್ಪತ್ತೈದು ವಯಸ್ಸಿನ ಆಸುಪಾಸಿನ ಇವನಿಗೇಕೆ ಚಪಾತಿ ಮೇಕರ್ ಬೇಕಪ್ಪಾ ಅಂತ ಆಶ್ಚರ್ಯವಾಯಿತು. ಬಹುಶಃ ಇವನ ಮನೆಯಲ್ಯಾರೋ ಬಹಳ ದಪ್ಪಗಿರುವವರು ಇರಬೇಕು ಅನ್ನಿಸಿತು. ಕುತೂಹಲ ತಡೆಯಲಾಗದೇ ಕೇಳಿಯೇಬಿಟ್ಟೆ. ಅವನು ಆ ಕಡೆ ಈ ಕಡೆ ನೋಡಿ, ಒಂದೆರಡು ನಿಮಿಷ ಬಿಟ್ಟು, ‘ನೋಡಿ ಸಾರ್, ನೀವು ಒಳ್ಳೆಯವರ ಹಾಗೆ ಕಾಣ್ತೀರಿ, ಅದಕ್ಕೇ ಹೇಳ್ತಿದೀನಿ. ನೀವು ಯಾರಿಗೂ ಹೇಳ್ಬಾರ್ದು. ನಾನು ಗೃಹಬಳಕೆ ವಸ್ತುಗಳನ್ನ ಡೋರ್ ಟು ಡೋರ್ ಮಾರಾಟ ಮಾಡುವವನು. ಮಿಕ್ಸರ್, ವೋವನ್, ಟೋಸ್ಟರ್, ಇಸ್ತ್ರಿ ಪೆಟ್ಟಿಗೆ, ರಿಛಾರ್ಜೆಬಲ್ ಲ್ಯಾಂಪ್.... ಹೀಗೆ. ಸ್ವಲ್ಪ ದಿನ ಮಾತ್ರ ಬಳಸಿರೋ, ಹೀಗೆ ಹಾಳಾಗದೇ ಇರೋ ವಸ್ತುಗಳನ್ನ ನಿಮ್ಮಂಥ ದೊಡ್ ಮನುಷ್ಯರ ಹತ್ರ ಕಡಿಮೆ ರೇಟಿಗೆ ತಗೊಂಡು, ಅದನ್ನ ಇನ್ನೂ ಸ್ವಲ್ಪ ಕ್ಲೀನ್ ಮಾಡಿ ಹೊಸದರಂತೆ ಕಾಣೋಹಾಗೆ ಮಾಡಿ, ನಾನು ಇನ್ನೂರು-ಮುನ್ನೂರು ರೂಪಾಯಿ ಲಾಭ ಬರೋಹಾಗೆ ಮಾರ್ತೀನಿ. ಮಿಡಲ್ ಕ್ಲಾಸ್ ಏರಿಯಾಗಳಲ್ಲಿ, ಹಗಲು ಹೊತ್ತು ಮನೇಲಿ ಲೇಡೀಸು ಒಬ್ರೇ ಇರ್ತಾರಲ್ಲ ಸಾರ್, ಅವರಿಗೆ ಹೊಸದಕ್ಕೂ ಸೆಕೆಂಡ್ ಹ್ಯಾಂಡ್‌ಗೂ ವ್ಯತ್ಯಾಸ ಅಷ್ಟಾಗಿ ಗೊತ್ತಾಗಲ್ಲ. ದೇಹ ದಪ್ಪಗಾಗಿರತ್ತೇ ಹೊರತು ಬುದ್ಧಿ ಬೆಳೆದಿರಲ್ಲ. ವಾರಂಟಿ ಕಾರ್ಡಲ್ಲಿ ಸ್ವಲ್ಪ ತಿದ್ದಿ ಕೊಟ್ರೆ ಗೊತ್ತಾಗಲ್ಲ. ಮರುಳಾಗಿ ತಗೋತಾರೆ. ಮುಂಚೆಯೆಲ್ಲಾ ಶ್ರೀಮಂತರ ಮನೆಗಳಿಗೆ ಹೋಗಿ ಇಂಥಾ ವಸ್ತು ಇದ್ರೆ ಕೇಳಿ ತಗೋತಿದ್ದೆ. ಕೆಲವರಂತೂ ಮಿಕ್ಸರ್ ಏನೋ ಸ್ವಲ್ಪ ಹಾಳಾಯ್ತು ಅಂದ್ರೆ ಮಾರಿಯೇಬಿಡ್ತಾರೆ. ರಿಪೇರಿ ಮಾಡಿಸ್ಲಿಕ್ಕೂ ನೋಡಲ್ಲ. ಅಂತವ್ರ ಹತ್ರ ನಾನು ತಗೋತಿದ್ದೆ. ಈಗ ಈ ಓ‌ಎಲ್ಲೆಕ್ಸ್ ಥರದ ವೆಬ್‌ಸೈಟ್ ಕಂಡುಕೊಂಡಿದೀನಿ’ ಅಂತ ಹೇಳಿದ.

ಎಲಾ ಇವನಾ ಎನ್ನಿಸಿ, ‘ಆದರೆ ಇದು ಚೀಟಿಂಗ್ ಅಲ್ವೇನಯ್ಯಾ? ನೋಡಿದ್ರೆ ಓದಿಕೊಂಡವನ ಥರ ಕಾಣ್ತೀಯಾ?’ ಅಂತ ಕೇಳಿದೆ. ‘ಹೌದು ಸಾರ್. ಓದಿಕೊಂಡಿದ್ದೇನೋ ಹೌದು. ಆದರೆ ಸರಿಯಾದ ಕೆಲಸ ಸಿಗಲಿಲ್ಲ. ಒಂದು ಬಸ್ ಟಿಕೆಟ್ ಬುಕ್ ಮಾಡೋ ಆಫೀಸಲ್ಲಿ ಕೆಲಸ ಮಾಡ್ಕೊಂಡಿದ್ದೆ. ಒಂದ್ಸಲ ಅದರ ಓನರ್ರು ತಾವು ಮನೆ ಶಿಫ್ಟ್ ಮಾಡ್ತಿದೀವಿ, ನಮ್ಮನೇಲಿರೋ ಫ್ರಿಜ್ಜು, ವಾಶಿಂಗ್ ಮಶಿನ್ನು, ಸೀಲಿಂಗ್ ಫ್ಯಾನು ಎಲ್ಲಾ ಇಲ್ಲೇ ಬಿಟ್ಟು ಹೋಗ್ತಿದೀವಿ. ನನಗೆ ಬೇಕಾದರೆ ತಗೋಬಹುದು ಅಂತ ಹೇಳಿದ. ನಾನು ಅದನ್ನ ಇಟ್ಕೊಂಡು ಏನ್ ಮಾಡ್ಲಿ? ತಗೊಂಡು ಎಲ್ಲಾನೂ ಯಾರಿಗೋ ಒಳ್ಳೇ ರೇಟಿಗೆ ಮಾರಿಬಿಟ್ಟೆ. ಆಮೇಲೆ ಇದನ್ನೇ ನನ್ನ ಬಿಜಿನೆಸ್ ಮಾಡಿಕೊಂಡ್ರೆ ಹೇಗೆ ಅನ್ನೋ ಐಡಿಯಾ ಬಂತು. ಚೀಟಿಂಗ್ ಇರಬಹುದು ಸಾರ್, ಆದರೆ ನಮಗೂ ದುಡ್ಡು ಮಾಡ್ಬೇಕು, ದಪ್ಪಗಾಗ್ಬೇಕು, ಹುಡುಗೀರು ನೋಡ್ಬೇಕು, ಮದುವೆ ಆಗ್ಬೇಕು ಅಂತೆಲ್ಲ ಆಸೆ ಇರಲ್ವಾ ಸಾರ್?’ ಅಂತ ಕೇಳಿದ.

[ಎಂಟನೇ 'ಅಕ್ಕ' ಸಮ್ಮೇಳನ (2014)ದಲ್ಲಿ ಬಿಡುಗಡೆಗೊಂಡ ‘ಹರಟೆ ಕಟ್ಟೆ’ ಕೃತಿಯಲ್ಲಿ ಸೇರಿಕೊಂಡಿರುವ ನನ್ನ ಪ್ರಬಂಧ.]

Friday, June 20, 2014

ಅಕ್ಷತಾ

ಅಲ್ಲಿ ಅಕ್ಷತಾ ಹಾಗೆ ತಲೆಕೆಳಗಾಗಿ
ಕೊಳವೆ ಬಾವಿಯೊಳಗೆ ಬೀಳುವಾಗ
ನಾನು ಬೆಂಗಳೂರು ಟ್ರಾಫಿಕ್ಕನ್ನು ಬೈದುಕೊಳ್ಳುತ್ತ
ಮನೆಯತ್ತ ಧಾವಿಸುತ್ತಿದ್ದೆ.
ಟೀವಿ ಹಚ್ಚಿದರೆ ಅದಾಗಲೇ ನ್ಯೂಸು ಬ್ರೇಕಾಗಿತ್ತು.
ಛಾನೆಲ್ ತನ್ನ ವರದಿಗಾರರನ್ನು ಟ್ರೈಪಾಡ್ ಸಮೇತ
ಸ್ಥಳಕ್ಕೆ ಕಳುಹಿಸುತ್ತಿರುವಾಗಿ ಹೇಳುತ್ತಿತ್ತು.
ನಾನು ಊಟದ ಸಿದ್ಧತೆ ನಡೆಸುವ ಹೊತ್ತಿಗೆ
ವರದಿಗಾರರು ಅಲ್ಲಿಗೆ ತಲುಪಿ ವರದಿ ನೀಡಲಾರಂಭಿಸಿದ್ದರು
ಝಗಮಗ ದೀಪಗಳ ಬೆಳಕಲ್ಲಿ ರಕ್ಷಣಾ ಕಾರ್ಯಕರ್ತರ
ಹೆಲ್ಮೆಟ್ಟುಗಳು ಹೊಳೆಯುತ್ತಿದ್ದವು. ದೈತ್ಯ ಜೆಸಿಬಿ ಯಂತ್ರಗಳು
ಮಣ್ಣು ಕೆದಕುತ್ತಿದ್ದವು. ನಾನೂ ಹೆಂಡತಿಯೂ
ಅಕ್ಷತಾಳ ತಂದೆ ತಾಯಿಯರ ಆಕ್ರಂದನ ನೋಡುತ್ತಾ
ರೋಚಕವಾಗಿ ಊಟ ಮಾಡಿದೆವು. ದಿನವಿಡೀ ದುಡಿಯುವ ನಮಗೆ
ಅದೆಷ್ಟು ಸುಸ್ತೆಂದರೆ ದಿಂಬಿಗೆ ತಲೆ ಹಚ್ಚಿದರೆ ನಿದ್ರೆ ಬರುತ್ತದೆ.

ಕೊಳವೆಬಾವಿಯೊಳಗೆ ತಲೆಕೆಳಗಾಗಿ ಬೀಳುವುದು ಎಂದರೇನು
ಕೈಕಾಲಾಡಿಸಲಾಗದಂತೆ ಬಂಧಿಯಾಗುಗುವುದು ಎಂದರೇನು
ನಿಧನಿಧಾನವಾಗಿ ಇಂಚಿಂಚಾಗಿ ಕೆಳಗಿಳಿಯುವುದು ಎಂದರೇನು
ಕೂಗಿಕೊಂಡರೆ ನನ್ನ ದನಿಯೇ ನನಗೆ ಕೇಳುವುದು ಎಂದರೇನು
ಗಾಳಿಯಿಲ್ಲದೇ ಉಸಿರು ಕಟ್ಟುವುದು ಎಂದರೇನು
ಅಂತೆಲ್ಲ ನನಗೆ ಗೊತ್ತೇ ಇಲ್ಲ.
ನಾನ್ಯಾವತ್ತೂ ಕೊಳವೆಬಾವಿಯೊಳಗೆ ಬಿದ್ದಿಲ್ಲ.

* *

ಮರುದಿನ ಬೆಳಗ್ಗೆ ನ್ಯೂಸ್‌ಪೇಪರಿನಲ್ಲಿ
ಅಕ್ಷತಾಳ ಪುಟ್ಟ ಫೋಟೋ ಮುಖಪುಟದಲ್ಲೇ ಇತ್ತು
ಫೇಸ್‌ಬುಕ್ಕಿನ ಗೋಡೆಯಲ್ಲಿ ಅಲ್ಲಲ್ಲಿ ಪ್ರಾರ್ಥನೆಗಳಿದ್ದವು
ಆಫೀಸಿನಲ್ಲಿ ಅವತ್ತು ಕೆಲಸವೋ ಕೆಲಸ.

ಸಂಜೆ ಮನೆ ಮುಟ್ಟಿದರೆ ಟೀವಿಯಲ್ಲಿ ಇನ್ನೂ
ಜೆಸಿಬಿಗಳು ಮೊರೆಯುತ್ತಿದ್ದವು. ರಾಜ್ಯಾದ್ಯಂತ ಇರುವ
ತೆರೆದ ಕೊಳವೆ ಬಾವಿಗಳ ಬಗ್ಗೆ, ಅವುಗಳ ಮಾಲೀಕರ ಬಗ್ಗೆ,
ಅವನ್ನು ಕೊರೆದವರ ಬಗ್ಗೆ, ಹದಗೆಟ್ಟ ಜಿಲ್ಲಾಡಳಿತದ ಬಗ್ಗೆ
ಸಮೀಕ್ಷೆಗಳೂ ಚರ್ಚೆಗಳೂ ಆಕ್ರೋಶಗಳೂ ಇದ್ದವು.
ಅಕ್ಷತಾ ಎಷ್ಟು ಅಡಿ ಕೆಳಗಿರಬಹುದೆಂಬ ಲೆಕ್ಕಾಚಾರ ನಡೆದಿತ್ತು.
ಆಧುನಿಕ ರೋಬೋಗಳು ಅಕ್ಷತಾಳನ್ನು ಮೇಲೆತ್ತಲು ವಿಫಲವಾಗಿದ್ದವು.
ಪುಟ್ಟ ಪೈಪಿನಿಂದ ನಿರಂತರ ಆಮ್ಲಜನಕ ಪೂರೈಸುತ್ತಿರುವುದು
ಟೀವಿಯ ಪರದೆಯಲ್ಲಿ ಎಷ್ಟು ಚೆನ್ನಾಗಿ ಕಾಣುತ್ತಿತ್ತು.
ಪಾಲಕರ ಆರ್ತನಾದ ಮುಂದುವರೆದಿತ್ತು.
ಆ ಅಟ್ಟಿಸಿಕೊಂಡು ಬಂದ ನಾಯಿಯ ಬಗ್ಗೆ ಮುಂದೆ
ಚರ್ಚಿಸಬಹುದು ಅಂತ ಕಾದೆವು.

ಆಮೇಲೆ ನಮಗೆ ದೈನಂದಿನ ಧಾರಾವಾಹಿಗಳನ್ನು ನೋಡುವುದಿತ್ತು.
ರಾತ್ರಿ ಹತ್ತೂವರೆ ಮೇಲಂತೂ ಎಲ್ಲ ಛಾನೆಲ್ಲಿನಲ್ಲೂ
ಹಾಸ್ಯ ಧಾರಾವಾಹಿಗಳು. ನಕ್ಕು ನಕ್ಕು ಉಂಡಿದ್ದು ಜೀರ್ಣವಾದಮೇಲೇ
ಸುಖ ನಿದ್ರೆ.

ಕನಸಿನಲ್ಲಿ ನಾನು ಪುಟ್ಟ ಹುಡುಗನಾಗಿದ್ದೆ.
ಅದೇ ಕೊಳವೆಬಾವಿಯ ಪಕ್ಕ, ನುಣುಪಾದ ಮಣ್ಣಿನಲ್ಲಿ ಹುದುಗಿಕೊಂಡಿದ್ದ
ಗುಬ್ಬಚ್ಚಿ ಹುಳುವನ್ನು ಬಗೆದು ತೆಗೆಯುತ್ತಿದ್ದೆ.
ಆಗ ಪಾತಾಳದಿಂದ ಗಂಗಾಮಾತೆ ತಾನೇ
ಅಕ್ಷತಾಳನ್ನೆತ್ತಿಕೊಂಡು ಬಂದು ನನ್ನ ಪಕ್ಕ ಬಿಟ್ಟಳು.
ನಾನು-ಅಕ್ಷತಾ ಯಾವುದೋ ಆಟವಾಡಿದೆವು.
ಪುರಾಣ ಪುಣ್ಯಕಥೆಗಳೆಂದರೆ ನನಗೆ ಬಹಳ ಇಷ್ಟ.

* *

ಮರುದಿನ ಸಂಜೆಯ ಹೊತ್ತಿಗೆ
ಅಕ್ಷತಾ ಬದುಕಿರುವ ಬಗ್ಗೆ ಅನುಮಾನಗಳು
ಇನ್ನೇನು ಕೆಲವೇ ಕ್ಷಣದಲ್ಲಿ
ಅಕ್ಷತಾಳ ಬಳಿ ತಲುಪಲಿರುವ ರಕ್ಷಣಾ ಕಾರ್ಯಕರ್ತರು.
ಬಾವಿಯಿಂದ ಕೊಳೆತ ಹೆಣದ ವಾಸನೆ.
ಕ್ಷಣ ಎಂದದ್ದು ನಿಮಿಷಗಳಾದವು.
ನಿಮಿಷಗಳು ಗಂಟೆಗಳಾದವು.
ಯಾಕೋ ರಕ್ಷಣಾ ಕಾರ್ಯಾಚರಣೆ ತಡವಾಗುತ್ತಿತ್ತು.
ಟೀವಿಯಲ್ಲಿ ಲೈವ್ ಇತ್ತಲ್ಲ, ಏನೂ ತೊಂದರೆ ಇಲ್ಲ ಎಂದುಕೊಂಡೆ.
ಫೇಸ್‌ಬುಕ್ಕಿನಲ್ಲಿ ಪ್ರಾರ್ಥನೆಗಳು ವಿರಳವಾಗಿದ್ದವು.
ಯಾವುದೋ ಧಾರಾವಾಹಿಯ ಯಾವುದೋ ದೃಶ್ಯದ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಟ್ವಿಟರಿನಲ್ಲಿ ಫುಟ್‌ಬಾಲ್ ಫೀವರ್.
ಹೆಂಡತಿ ಮನೆಗೆ ಬಂದವಳೇ ಅತ್ಯಂತ ಕುತೂಹಲಕಾರಿ ಘಟ್ಟದಲ್ಲಿರುವ
ಧಾರಾವಾಹಿಯನ್ನು ನೋಡಲು ಛಾನೆಲ್ ಬದಲಿಸಿದಳು.
ಆಮೇಲೆ ಕಾಮೆಡಿ ಶೋಗಳು. ನಗು. ನಿದ್ರೆ.

* *

ಮರುದಿನದ ಪತ್ರಿಕೆಯಲ್ಲಿ ಬದುಕಿ ಬಾರದ ಅಕ್ಷತಾ
ಬಗ್ಗೆ ವರದಿಯಿತ್ತು. ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ,
ಬಾವಿಯಿಂದ ನೀರೆತ್ತುವಂತೆಯೇ ಕುಣಿಕೆ ಹಾಕಿ ಜೀವವನ್ನೆತ್ತಿಕೊಂಡು
ಹೋಗಿದ್ದರು. ಪುಟ ತಿರುಗಿಸಿದರೆ ಮುಖಂಡರ ವಿಷಾದಗಳೂ,
ಯಾರ್ಯಾರು ಎಷ್ಟೆಷ್ಟು ಪರಿಹಾರ ಘೋಷಿಸಿದರೆಂಬ ಪಟ್ಟಿಯೂ ಇತ್ತಿರಬೇಕು.

ಚಿಕ್ಕವನಿದ್ದಾಗ ನನ್ನನ್ನೂ ಒಂದು ನಾಯಿ ಹೀಗೇ
ಅಟ್ಟಿಸಿಕೊಂಡು ಬಂದಿತ್ತು. ಓಡೋಡಿ ಬಂದು ತಪ್ಪಿಸಿಕೊಂಡಿದ್ದೆ.
ಪುಣ್ಯಕ್ಕೆ ಆಗ ಕೊಳವೆ ಬಾವಿಗಳಿರಲಿಲ್ಲ.

Tuesday, March 18, 2014

ಗೋಲ್ಗಪ್ಪ ಗೋಪುರದ ಸುತ್ತ...

ಚುಮುಚುಮು ಚಳಿಯ ದಿನಗಳು ಮುಗಿದು ಇನ್ನೇನು ಹಬೆಹಬೆ ಸೆಖೆಯ ದಿನಗಳು ಶುರುವಾಗುತ್ತಿವೆ. ವಾರವಿಡೀ ದುಡಿದ ನಾಗರೀಕರಿಗೆ ಭಾನುವಾರವೊಂದು ಬಿಡುವಿನ ದಿನ. ಕೆಲವರಿಗೆ ಶನಿವಾರವೂ. ಬೆಳಗಿನಿಂದ ಸಂಜೆಯವರೆಗೆ ಹೆಂಡತಿ-ಮಕ್ಕಳೊಂದಿಗೆ ಸೋಮಾರಿತನದಲ್ಲಿ ಕಳೆದ ನಾಗರೀಕ, ಸಂಜೆಯ ಹೊತ್ತಿಗೆ ಮುಂದಿನ ವಾರಕ್ಕೆ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತರಲು ಹೊರ ಹೊರಡುತ್ತಾನೆ.  ಹಾಗೇನು ಸಾಮಗ್ರಿಗಳನ್ನು ತರಲೇ ಹೋಗಬೇಕೆಂದಿಲ್ಲ, ‘ಶಾಪಿಂಗ್’ ಎಂಬ ನೆಪ ಹೇಳಿಕೊಂಡು ಹೊರಟರೆ ಮಾಲುಗಳಲ್ಲಿ, ಥಳಥಳ ಹೊಳೆವ ಶೋರೂಮುಗಳಲ್ಲಿ, ಪಕ್ಕದಂಗಡಿಗಳಲ್ಲಿ, ಅಷ್ಟೇ ಏಕೆ, ರಸ್ತೆ ಬದಿಗಳಲ್ಲೂ ಕೊಳ್ಳಲು ಬೇಕಾದ್ದು-ಬೇಡವಾದ್ದು ಸಾಕಷ್ಟಿದೆ ನಾಗರೀಕನಿಗೆ. ಹಾಗೆ ಹೊರಟವ ಸಂಜೆ ಬಿಸಿಲಿಗೆ ದಣಿದಿದ್ದಾನೆ. ಅವನಿಗೆ ಏನಾದರೂ ತಿನ್ನಬೇಕು. ತಣ್ಣಗೆ ಕುಡಿಯಬೇಕು. ಹಾಗಂತ ತೀರಾ ಹಸಿವಾದರೆ ಹೋಟೆಲಿಗೆ ಹೋಗಬಹುದಿತ್ತು. ಬಾಯಾರಿದರೆ ಜ್ಯೂಸ್ ಸೆಂಟರುಗಳು ತಮ್ಮ ಹಣ್ಣಿನ ಕಣ್ಣುಗಳಿಂದಲೇ ಕರೆಯುತ್ತವೆ. ಆದರೆ ತೀವ್ರ ಹಸಿವೂ-ಬಾಯಾರಿಕೆಯೂ ಆಗದವನಿಗೆ ಒಂದು ನಿಮಿಷ ನಿಂತು ದಣಿವಾರಿಸಿಕೊಳ್ಳುವಾಗ ಬಾಯಾಡಲು ಏನಾದರೂ ಬೇಕೆಂದು ಹುಡುಕುತ್ತಿದ್ದಾಗ ಕಾಣುವವನೆಂದರೆ, ಗೋಲ್ಗಪ್ಪ ಮಾರುವವನು.

ಈತ ನಮ್ಮ-ನಿಮ್ಮಂತೆಯೇ ಒಂದು ಹಳೇ ಶರ್ಟು-ಪ್ಯಾಂಟು ತೊಟ್ಟಿದ್ದಾನೆ. ತನ್ನೆದುರು ಇಷ್ಟೆತ್ತರದ ಸ್ಟೂಲಿನಂತಹ ಒಂದು ಬೆತ್ತದ ಸ್ಟಾಂಡ್ ಇಟ್ಟುಕೊಂಡಿದ್ದಾನೆ. ಅದರ ಮೇಲೆ ಒಂದು ಬುಟ್ಟಿ. ಆ ಬುಟ್ಟಿಯ ತುಂಬ ಪುಟ್ಟ ಪುಟ್ಟ ಪೂರಿಗಳ ಗೋಪುರ. ಸ್ಟಾಂಡಿನಲ್ಲುಳಿದ ಜಾಗದಲ್ಲಿ ಒಂದು ಮಡಿಕೆ ತುಂಬ ಹುಳಿಹುಳಿ ಪಾನಿ. ಒಂದು ಪುಟ್ಟ ದಬರಿಯಲ್ಲಿ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಈರುಳ್ಳಿ, ಎಸಳು ಕೊತ್ತಂಬರಿ ಸೊಪ್ಪು. ಹಾಗೇ ಪುಟ್ಟ ಬಟ್ಟಲುಗಳಲ್ಲಿ ಬಣ್ಣಬಣ್ಣದ ಪುಡಿಗಳು- ಹುಳಿ, ಉಪ್ಪು, ಖಾರ, ಮಸಾಲೆ. ಉತ್ತರ ಭಾರತದ್ಯಾವುದೋ ಸಣ್ಣ ಶಹರದಿಂದ ಬಂದ ಈ ಅಣ್ಣನಿಗೆ ಕನ್ನಡ ಬಾರದು. ನಿಮಗೆ ಬರುವ ಹರುಕು-ಮುರುಕು ಹಿಂದಿಯಲ್ಲೇ ಎಲ್ಲ ಸಂಭಾಳಿಸಬೇಕು. ದಣಿದ ನಿಮಗೆ, ನಿಮ್ಮ ಬಾಯ್ಚಪಲಕ್ಕೆ ಸರಿಯಾದ ತಿನಿಸು ಈ ಗೋಲ್ಗಪ್ಪ.

ಈ ಪೂರಿಗಳೋ, ಬೆಳಗಿನ ತಿಂಡಿಗೆ ಹೋಟೆಲಿನಲ್ಲಿ ಕೊಡುವ ಪೂರಿಯಷ್ಟು ದೊಡ್ಡವಲ್ಲ. ಮಧ್ಯಾಹ್ನದ ಊಟದ ಜತೆ ಕೊಡುವ ಪೂರಿಯಷ್ಟೂ ದೊಡ್ಡವಲ್ಲ. ಚನ್ನ-ಬಟೂರಕ್ಕೆ ಕೊಡುವಷ್ಟು ಬೃಹತ್ ಗಾತ್ರದವಂತೂ ಅಲ್ಲವೇ ಅಲ್ಲ. ಈ ಪೂರಿಗಳು ಗೋಲ್ಗಪ್ಪಕ್ಕಾಗಿಯೇ ಇಂಚುಪಟ್ಟಿ ಹಿಡಿದು ಅಳತೆ ಮಾಡಿ ಕರಿದವು. ಒಂದು ಪೂರಿ ಸರಿಯಾಗಿ ನಿಮ್ಮ ಬಾಯಿ ತುಂಬಬಲ್ಲದು. ಇವುಗಳನ್ನು ತನ್ನ ಬೆತ್ತದ ಬುಟ್ಟಿಯಲ್ಲಿ ಗೋಪುರದಂತೆ ಜೋಡಿಸಿದ್ದಾನೆ ಈ ಗೋಲ್ಗಪ್ಪದಣ್ಣ. ಈ ಗೋಪುರದಿಂದ ಒಂದೊಂದೇ ಪೂರಿಯನ್ನು ತೆಗೆಯುವ ಕಲೆ ಅವನಿಗೆ ಮಾತ್ರ ಗೊತ್ತು. ನೀವೇನಾದರೂ ಪ್ರಯತ್ನಿಸಹೊರಟಿರೋ, ಇಡೀ ಪಿರಮಿಡ್ಡೇ ಕಳಚಿ ಬಿದ್ದೀತು. ಈ ಪೂರಿಯ ಒಂದು ಮೈಗೆ ತಟ್ಟಿ ತೂತು ಮಾಡುತ್ತಾನೆ ಗೋಲ್ಗಪ್ಪದಣ್ಣ. ಊಹೂಂ, ನೀವು ಪ್ರಯತ್ನಿಸಬೇಡಿ: ಪೂರ್ತಿ ಪೂರಿ ಒಡೆಯುವುದು ಖಚಿತ! ಇದರೊಳಗೆ ನುರಿದ ಆಲೂ, ಸಣ್ಣಗೆ ಹೆಚ್ಚಿದ ಈರುಳ್ಳಿ, ಇನ್ನೂ ಏನೋ ತುಂಬುತ್ತಾನೆ ಗೋಲ್ಗಪ್ಪದಣ್ಣ. ಈಗ ಆತ ನಿಮ್ಮ ಕೈಗೊಂದು ಎಲೆಯಿಂದಲೋ, ಕಾಗದಿಂದಲೋ ಮಾಡಿದ ಪುಟ್ಟ ಬೌಲ್ ಕೊಡುತ್ತಾನೆ. ಪುಟ್ಟ ಪೂರಿಯನ್ನು ಪಾನಿಯ ಮಡಿಕೆಯಲ್ಲಿ ಅದ್ದಿ ಈ ಬೌಲಿನಲ್ಲಿಡುತ್ತಾನೆ. ಇನ್ನು ನೀವು ಜರೂರು ಮಾಡಬೇಕು. ಆ ಪಾನಿ ತುಂಬಿದ ಇಡೀ ಪೂರಿಯನ್ನು ಹಾಗೇ ತೆಗೆದು ಬಾಯಲಿಟ್ಟುಕೊಳ್ಳಬೇಕು. ಹುಳಿ, ಉಪ್ಪು, ಖಾರ, ಘಾಟು -ಎಲ್ಲ ಇರುವ ಈ ತಿನಿಸು ನಾಲಿಗೆಗೆ ಚುರುಕು ಮುಟ್ಟಿಸಿ, ಗಂಟಲನ್ನು ತಣಿಸಿ, ಹೊಟ್ಟೆಯೊಳಗೆ ಹೋಗಿ ಬಿದ್ದ ಸದ್ದಾಗುವುದರೊಳಗೆ, ಅಕೋ ಮತ್ತೊಂದು ಪೂರಿ ನಿಮ್ಮ ಬೌಲಿನಲ್ಲಿ! ತಡ ಮಾಡುವಂತಿಲ್ಲ, ಕೈಗೂ-ಬಾಯಿಗೂ ಕೆಲಸ ಕೊಡಬೇಕು. ಮತ್ತೊಂದು ಪೂರಿ ಬರುವುದರೊಳಗೆ ನೀವಿದನ್ನು ಗುಳುಂ ಮಾಡಬೇಕು. ಬೀದಿಬದಿಯಲ್ಲಿ ನಿಂತು, ಹಾಯುವ ವಾಹನ, ಎಡವಿಕೊಂಡು ಹೋಗುವ ನೂರಾರು ಜನಗಳ ನಡುವೆಯೇ ನೀವು ಮತ್ತು ಗೋಲ್ಗಪ್ಪದಣ್ಣ ಮಾತ್ರ ಆಗಿ ನಿಂತಿರುವ ಈ ಕ್ಷಣ, ಜಗವನೆಲ್ಲ ಮರೆತ ಕ್ಷಣ! ನೀವು ಕೊಡುವ ಹತ್ತು ರೂಪಾಯಿಯ ಹರುಕು ನೋಟಿಗೆ ಆರು ಗೋಲ್ಗಪ್ಪ, ಕೊನೆಗೊಂದು ಸುಕ್ಕಾ. ಒಂದು ಪ್ಲೇಟ್ ಸಾಕಾಗಲಿಲ್ಲವೋ ಮತ್ತೊಂದು ಹೇಳಿ. ಇನ್ನೂ ಬೇಕೆನಿಸಿತೋ, ಗೋಲ್ಗಪ್ಪದಣ್ಣನಿಗೆ ‘ಓರ್ ಏಕ್ ಪ್ಲೇಟ್’ ಎನ್ನಿ. ನಿಮ್ಮ ಮನ ತಣಿಯುವವರೆಗೂ ತಿನಿಸಲು ಗೋಲ್ಗಪ್ಪದಣ್ಣ ಸಿದ್ದ.

ಹಳ್ಳಿಯಿಂದ ಬಂದ ನಮಗೆ ಈ ಗೋಲ್ಗಪ್ಪದ ಪರಿಚಯ ಇರಲಿಲ್ಲ. ಪಾನಿಪುರಿ-ಮಸಾಲ ಪುರಿಗಳು ಗೊತ್ತಿದ್ದವು. ಪೇಟೆಗೆ ಹೋದಾಗ ಒಂದು ಪ್ಲೇಟ್ ಮಸಾಲ ಪುರಿ, ಒಂದು ಪ್ಲೇಟ್ ಪಾನಿಪುರಿ ತಿಂದು ಬಂದದ್ದುಂಟು. ಆದರೆ ಗೋಲ್ಗಪ್ಪ ನೋಡಿದ್ದು ಈ ನಗರಕ್ಕೆ ಬಂದಮೇಲೇ. ಈ ನಗರದವರಾದರೂ ಇದರೊಂದಿಗೇ ಬೆಳೆದವರಲ್ಲ, ಉತ್ತರ ಭಾರತದಿಂದ ಬಂದಿದ್ದು ಈ ತಿಂಡಿ. ಒಂದು ದಿನ ಏಕಾ‌ಏಕಿ ಬಂದಿಳಿದ ಈ ಹುಡುಗರು ನಗರದ ಆಯಕಟ್ಟಿನ ಜಾಗಗಳಲ್ಲಿ ತಮ್ಮ ಪೂರಿಯ ಗೋಪುರದೊಂದಿಗೆ ನಿಂತುಬಿಟ್ಟರಾ ಅಂತ ಅನುಮಾನ. ಯಾವುದೋ ಓಣಿಯ ಪುಟ್ಟ ಮನೆಯ ಹಜಾರದಲ್ಲಿ ಕೂತ ನೈಟಿಯ ಅಕ್ಕ ಒರೆದೊರೆದು ಕೊಟ್ಟ ಪೂರಿ, ಸಾರ್ವಜನಿಕ ನಲ್ಲಿಯಲ್ಲಿ ದಿನಬಿಟ್ಟು ಬಂದ ನೀರು, ಬಿಸಿಬಿಸಿ ನೀರಿನಲ್ಲಿ ಬೆಂದ ಆಲೂಗಡ್ಡೆ, ದೂರದ ಹೊಲದಲ್ಲಿ ಬೆಳೆದ ಈರುಳ್ಳಿಗಳೆಲ್ಲ ಹೀಗೆ ಇಲ್ಲಿ ಸಂಗಮಿಸಿ ಗೋಲ್ಗಪ್ಪದಣ್ಣನ ಬೆತ್ತದ ಸ್ಟಾಂಡ್ ಏರಿ ಕೂತುಬಿಟ್ಟಂತೆ. ಹಾಯುವವರ ಕಣ್ಸೆಳೆದು, ಕಾಲೇಜು ಹುಡುಗ-ಹುಡುಗಿಯರಿಗೆ ರುಚಿ ಹಿಡಿಸಿ, ವಾಕಿಂಗೆ ಹೋದ ಅಜ್ಜನೂ ಒಂದು ಕೈ ನೋಡುವ ಹಾಗೆ ಮಾಡಿಬಿಟ್ಟಿತು ವರ್ಷಗಳಲ್ಲಿ ಗೋಲ್ಗಪ್ಪವೆಂಬ ತಿಂಡಿ.

ನ್ಯೂಸ್‌ಪೇಪರುಗಳಲ್ಲಿ, ನ್ಯೂಸ್ ಛಾನೆಲ್ಲುಗಳಲ್ಲಿ ಆಗಾಗ ಬರುವುದುಂಟು ಸುದ್ದಿ- ಬೀದಿಬದಿ ಪದಾರ್ಥ ತಿನ್ನಬೇಡಿ, ಗೋಲ್ಗಪ್ಪಕ್ಕೆ ಬಳಸುವ ನೀರು ಕಲುಷಿತವಾಗಿರಬಹುದು, ಇತ್ಯಾದಿ. ಆದರೆ ಕೇಳುವವರ್ಯಾರು? ಜಮಾಯಿಸಿದ್ದೇವೆ ಗೋಲ್ಗಪ್ಪ ಗೋಪುರದ ಸುತ್ತ. ಕೊಟ್ಟಿದ್ದೇವೆ ಹತ್ತು ರೂಪಾಯಿ. ಚಾಚಿದ ಬೌಲಿನಲ್ಲಿ ಮೊಗೆಮೊಗೆದು ಇಡುತ್ತಿದ್ದಾನೆ ಗೋಲ್ಗಪ್ಪದಣ್ಣ: ಆರು ಗೋಲ್ಗಪ್ಪ, ಕೊನೆಯಲ್ಲೊಂದು ಸುಕ್ಕಾ. ಇಷ್ಟೇ ಆಶಯ: ನಮ್ಮ ಗೋಲ್ಗಪ್ಪದ ಪೂರಿಗಳಲ್ಲಿ ತುಂಬ ಪಾನಿ ತುಂಬಿರಲಿ. ಆರೋಗ್ಯ ಕೆಡದಿರಲಿ. ದಾಹ ನೀಗಲಿ. ತಿನ್ನುವ ಮೋಹ ನಾಳೆಗೂ ಇರಲಿ.

[ವಿಜಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]

Saturday, February 08, 2014

ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು

ಈಗ ಶಾರ್ಪನರಿನ ಗಿರಣಿಗೊಡ್ಡಿದ ಪೆನ್ಸಿಲ್
ಸರಸರನೆ ಕೆತ್ತಬೇಕು. ಹೊರಬಂದ ಸುರುಳಿಯ
ಕೈಯಲ್ಲಿ ಹಿಡಿದು ಮೈಮರೆಯುವ ಹಾಗಿಲ್ಲ.
ಸೀಸದ ಚೂಪಿನ ಸ್ಪರ್ಶಕ್ಕೆಂದೇ ಕಾಯುತ್ತಿರುವ
ಬಿಳಿಹಾಳೆಯ ಕೆನ್ನೆಗೆ ಮೋಸ ಮಾಡುವುದು ಸಲ್ಲ.

ಈಗ ಆಮೆಯೂ ಬೇಗ ಬೇಗ ನಡೆಯಬೇಕು
ರಸ್ತೆ ಮೇಲೆ ಹಾಸಿದ ಅವರೆಯ ಕಾಳಿನ ಸಿಪ್ಪೆಯ
ಅಂದ ನೋಡುತ್ತ ನಿಂತರೆ ಕೆಟ್ಟಂತೆಯೇ ಕೆಲಸ
ಹಾಗೆಲ್ಲ ಕೈ ಮಾಡಿದ್ದಕ್ಕೆಲ್ಲ ನಿಲ್ಲಿಸುವುದಿಲ್ಲ ಬಸ್ಸು
ಅಲ್ಲೂ ಭಾರೀ ಪೈಪೋಟಿ; ಎರಡು ಟಿಕೀಟು
ಗೆದ್ದರೆ ಜಾಸ್ತಿ, ಅದೇ ಪರಮ ಆಸ್ತಿ.

ಅಂಜೂರದ ಹಣ್ಣನ್ನು ಬಿಡಿಸಿದಾಗ ಹುಳುವೊಂದು ಸಿಕ್ಕರೆ
ನಾನು ತಿನ್ನದೇ ಬಿಟ್ಟುಬಿಡುವುದಕ್ಕೆ ಹುಳು ಬದುಕಿಕೊಳ್ಳಲಿ
ಎಂಬ ಸಹಾನುಭೂತಿಯೇ ಕಾರಣ ಎಂದರೆ,
ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅಲೆಮಾರಿಯಾಗುವ ಕನಸೇಕೆ ಎಂದು ಪ್ರಶ್ನಿಸುತ್ತೀ ನೀನು.
ಉಲ್ಕೆಯೊಂದು ಜಾರಿ ಬೀಳುವಾಗ ಕಣ್ಮುಚ್ಚಿ ನಿಲ್ಲುವ
ನಾಸ್ತಿಕನನ್ನು ತೋರಿಸಿ ಮುಗುಳ್ನಗುತ್ತೇನೆ ನಾನು.

ನಿನ್ನ ಸ್ಥಾನದಲ್ಲಿ ನಾನು - ನನ್ನ ಸ್ಥಾನದಲ್ಲಿ ನೀನು
ನಿಂತು ನೋಡಬೇಕು ಎನ್ನುವುದೆಲ್ಲ ಬಾಯಿಮಾತಾಯ್ತು.
ನಿನ್ನಿಷ್ಟದ ಬದನೆಯ ಎಣ್ಣೆಗಾಯಿ ನನಗೆ ಅಲರ್ಜಿ
ನನ್ನಿಷ್ಟದ ಅರಿಶಿಣ ಕೊಂಬಿನ ತಂಬುಳಿ ನಿನಗೆ ಸೇರದು
ಸ್ಥಾನಮಾನಗಳ ಕತೆಯೆಲ್ಲ ಆಮೇಲೆ, ಮೊದಲು ಇವತ್ತಿನ
ಅಡುಗೆಗೆ ಏನು ಎಂಬುದಾಗಬೇಕು ನಿಷ್ಕರ್ಷೆ.

ತಿರುಮಲೇಶರು ಹೇಳಿದ್ದು, ಅಬೀಡ್ಸಿನಲ್ಲಿ ರಸ್ತೆಯನ್ನು
ದಾಟುವುದು ಕಷ್ಟ ಎಂದೇ ಹೊರತು
ವಾಹನಗಳಗುಂಟ ಬಿರಬಿರನೆ ನಡೆಯುವುದೇನಲ್ಲ
ಹೀಗೆ ನಡುರಸ್ತೆಯಲ್ಲಿ ವಾದ ಮಾಡುತ್ತ ನಿಂತರೆ ಹೇಗೆ?
ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು
ಸಿಕ್ಕ ತರಕಾರಿ ಕೊಂಡು ನಡೆಯೋಣ ಬೇಗ ಮನೆಗೆ
ಉಳಿದರೆ ಸಮಯ, ಇದ್ದೇ ಇದೆ ಮಾತು-ಕತೆ-ಕಲಾಪ
ಎಂದಿಗೂ ಮುಗಿಯದ ನಮ್ಮಿಬ್ಬರ ವ್ಯರ್ಥಾಲಾಪ.


[ಫೆಬ್ರವರಿ 2012ರ  'ಮುಗುಳು' ಪತ್ರಿಕೆಯಲ್ಲಿ ಪ್ರಕಟಿತ]

Friday, January 10, 2014

ಮಖ್ನಾ ಆನೆಯ ವಿರಹ

ಸಿನೆಮಾ ಮುಗಿದಮೇಲೆ ಎದ್ದು ಹೊರಗೆ ಬರಲೇಬೇಕು
ಕೊನೆಯ ಸೀಟಿನಲ್ಲಿ ಕೂತು ನಿದ್ದೆ ಹೋಗಿದ್ದವನನ್ನೂ
ಎಬ್ಬಿಸಿ ಕಳುಹಿಸುತ್ತಾನೆ ಕಸ ಗುಡಿಸುವ ಹುಡುಗ

ಹೊರಗೆ ನೋಡಿದರೆ ಜ್ವರ ಬಿಟ್ಟ ಬೆಳಗಿನಂತೆ ಎಲ್ಲ ಹೊಸದಿದೆ
ನಿಲ್ಲಬಹುದು ಅಂಗಳದಲ್ಲಿ ದಿಗ್ಮೂಢತೆಯಲ್ಲಿ ಐದು ನಿಮಿಷ
ಆಮೇಲೆ ಹೊರಡಲೇಬೇಕು: ಮಳೆ ಬರುತ್ತಿದ್ದರೆ ತೊಯ್ದುಕೊಂಡೋ,
ಚಳಿಯಾಗುತ್ತಿದ್ದರೆ ಒದ್ದುಕೊಂಡೋ, ಬಿಸಿಲಿದ್ದರೆ ಬೈದುಕೊಂಡೋ.

ಫರ್ಲಾಂಗು ಕಳೆದಮೇಲೆ ಅವರೆಲ್ಲ ಮತ್ತೆ ಮೂಡುವರು:
ಕಪ್ಪು ಸೂಟಿನ ಹೀರೋ ಬಂದು ತನ್ನ ರಿವಾಲ್ವರಿನಿಂದ
ಟ್ರಾಫಿಕ್ಕಿನಲ್ಲಿ ನಿಂತಿದ್ದವರನ್ನೆಲ್ಲ ಸರಿಸಿ ದಾರಿ ಮಾಡಿಕೊಡುವನು.
ಚಂದಕ್ಕೆ ಪುಟವಿಟ್ಟ ಚೆಲುವಿ ನಾಯಕಿ ಕೈ ಹಿಡಿದು
ಪಾರ್ಕಿಗೆ ಕರೆದೊಯ್ಯುವಳು. ಹುಟ್ಟಿನಿಂದಲೇ ತೊಟ್ಟಿದ್ದಾರೇನೋ
ಎನಿಸುವ ಕನ್ನಡಕದ ತಂದೆ ಬನಿಯನ್ನಿನಲ್ಲೇ ಬಂದು
ಬೆಂಚಿನಲ್ಲಿ ಕೂತು ಸಂತೈಸುವನು. ತಾಯಿ ಕೈತುತ್ತು ತಿನಿಸುವಳು.
ಐಟೆಮ್ ಸಾಂಗಿನ ಹುಡುಗಿ ನರ್ತಿಸಿ ರಂಜಿಸುವಳು.

ರಾತ್ರಿಯಾಗುತ್ತಿದ್ದಂತೆ ಆವರಿಸುವ ಕತ್ತಲೆ
ಕಂಬಳಿಯಂತೆ ಬೆಚ್ಚಗೆ ಮೈಗಂಟಿದ ಸಿನಿಮಾ ಕಣಗಳನ್ನೆಲ್ಲ ಉದುರಿಸಿ
ಥರಥರ ನಡುಗಿಸುವುದು. ರಸ್ತೆಬದಿಯ ಪ್ಲಾಸ್ಟಿಕ್ ರಾಶಿ
ಸುಡುತ್ತಿರುವ ಅಗ್ಗಿಷ್ಟಿಕೆ ಚಳಿಯ ನೀಗಿಸಬಲ್ಲುದೆ?
ಪೆಟ್ರೋಲು ಕುಡಿದ ಮತ್ತ ವಾಹನಗಳು ಹಾಯ್ವ ರಭಸದಿ
ಕಾವು ಮೂಡಬಹುದೇ? ಒಂದು ಕಣ್ಣಾದರೂ ಇತ್ತ ನೋಡಬಹುದೇ?

ನಿದ್ರೆ ಆವರಿಸುತ್ತಿದ್ದಂತೆ ಎಲ್ಲ ಮನೆ ಬಂಗಲೆ ಕೋಟೆ ಉದ್ಯಾನ
ನೀಲಿಯೀಜುಕೊಳ ಥಳಥಳ ಗಾಜಿನಂಗಡಿ
ಪ್ರಸೂತಿಯಾಸ್ಪತ್ರೆಗೂ ಗೇಟು ಹಾಕಲಾಗುವ ಈ ಭೂಮಿಯಲ್ಲಿ
ರಸ್ತೆಗಳೊಂದೇ ಮುಗಿಯದ ರತ್ನಗಂಬಳಿ
ಸ್ವಾಗತಿಸಲ್ಯಾರೂ ಇರದಿದ್ದರೂ ಮುಂದೆ
ಮಖ್ನಾ ಆನೆಯಂತೆ ಒಬ್ಬನೆ ನಡೆಯುತ್ತಾನೆ ವಿರಹಿ:
ಕತ್ತಲೆ ಚಳಿ ಭಯಕ್ಕೆ ಥೇಟರಿನ ಪರದೆ ಸಹ ಗಡಗುಟ್ಟುವಾಗ.