Showing posts with label Pranati. Show all posts
Showing posts with label Pranati. Show all posts

Monday, August 03, 2009

ಖುಶಿಯ ಕರೆಯೋಲೆ



ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು, ನಂಗೆ ಖುಶಿಯಾಗಿದೆ! :-)

ಯಾಕೇಂದ್ರೆ, ನನ್ನದೊಂದು ಲಲಿತ ಪ್ರಬಂಧಗಳ ಸಂಕಲನ ಹೊರಬರುತ್ತಿದೆ. 'ಹೊಳೆಬಾಗಿಲು' ಅಂತ ಹೆಸರಿಟ್ಟಿದ್ದೇನೆ. ನಮ್ಮೆಲ್ಲರ ಪ್ರೀತಿಯ ಜೋಗಿ, ಇದಕ್ಕೆ ಮುನ್ನುಡಿ ಬರೆದು ಕೊಟ್ಟಿದಾರೆ. 'ಪ್ರೀತಿಯ ಹುಡುಗಿ'ಯ ಪ್ರೀತಿಯ ಹುಡುಗ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡ್ತಾರೆ. ಪುಸ್ತಕದೊಳಗೆ ಗೆಳೆಯ ಕಲಾಕಾರ ರಾಘು ಬಿಡಿಸಿದ ರೇಖಾಚಿತ್ರಗಳಿವೆ. ನನ್ನ ಕಾಟ ಎಲ್ಲಾ ಸಹಿಸಿಕೊಂಡು ಮುಖಪುಟ ರೂಪಿಸಿಕೊಟ್ಟದ್ದು ನೆಂಟ ರವೀಶ. ನಮ್ಮದೇ ಸಂಸ್ಥೆ ಪ್ರಣತಿ ಪ್ರಕಟಿಸ್ತಿರೋ ಈ ಪುಸ್ತಕ, ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ಯೋಜನೆಯಲ್ಲಿ ಆಯ್ಕೆಯಾಗಿತ್ತು.

ಅವತ್ತೇ ಡಾರ್ಲಿಂಗ್ ಶ್ರೀನಿಧಿಯ ಕವನಗುಚ್ಛ 'ಹೂವು ಹೆಕ್ಕುವ ಸಮಯ'ವೂ ಬಿಡುಗಡೆಯಾಗ್ತಿದೆ. ಅದರ ಬಗ್ಗೆ ಮಾತಾಡೋರು ರಾಧಾ-ಮಾಧವರು ಹರಸಿಹರೇನೋ ಎಂಬಂತೆ ಬರೆವ ಕವಿ ಎಚ್ಚೆಸ್ವಿ. ಜೋಗಿ ಸರ್ ಆಗೋದೇ ಇಲ್ಲ ಅಂದ್ರೂನೂ "ನೀವು ವೇದಿಕೆ ಮೇಲೆ ಇರಲೇಬೇಕು" ಅಂತ ನಾವು ಹಟ ಮಾಡಿ ಒಪ್ಪಿಸಿದ್ದೇವೆ. ಅವರು ಒಪ್ಪಿಕೊಂಡಿದಾರೆ.

ಮನೆಗೆ ಫೋನ್ ಮಾಡಿ ಅಪ್ಪ-ಅಮ್ಮ ಇಬ್ರೂ ಬನ್ನಿ ಅಂತ ಹೇಳಿದ್ರೆ "ಮಗನೇ ಮಳೇ ಅಂದ್ರೆ ಮಳೆ. ತ್ವಾಟಕ್ಕೆ ಕೊಳೆ ಔಷಧಿ ಹೊಡೆಸ್ತಾ ಇದ್ದಿ. ಅಲ್ದೇ ಅಜ್ಜನ್ನ ಒಬ್ಬವನ್ನೇ ಬಿಟ್ಟಿಕ್ ಬರಕ್ಕೆ ಆಗದಿಲ್ಲೆ. ಯಾರಾದ್ರೂ ಒಬ್ಬರಾದ್ರೂ ಬರಕ್ಕೆ ಟ್ರೈ ಮಾಡ್ತ್ಯ" ಅಂತ ಹೇಳಿದ್ದಾರೆ.

ಇನ್ನೇನು ಉಳೀತು? ಈ ಖುಶಿಯೆಲ್ಲ ಡಬಲ್ ಆಗಲಿಕ್ಕೆ ನೀವು ಬರಬೇಕು. ಈ ಅಕ್ಷರಗಳನ್ನೇ ಅಕ್ಷತೆ ಅಂದ್ಕೊಂಡು ಸ್ವೀಕರಿಸಿ. ನಾನು, ನಿಧಿ ಮತ್ತು ಪ್ರಣತಿಯ ಗೆಳೆಯರೆಲ್ಲ ನಿಮ್ಮನ್ನ ಎದುರುಗೊಳ್ಳಲಿಕ್ಕೆ ಕಾಫಿ ಸಮೇತ ಕಾಯ್ತಿರ್ತೀವಿ. ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಹಾಲ್‌ನಲ್ಲಿ ಬರೋ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ. ಇನ್ವಿಟೇಶನ್ ಇಲ್ಲಿದೆ.

ತಪ್ಪಿಸಿದ್ರೆ ನಮಗೆ ಬೇಜಾರಾಗತ್ತೆ. ಹಾಗೆ ಮಾಡ್ಬೇಡಿ.

ಕಾಯುತ್ತಾ,

ಪ್ರೀತಿಯಿಂದ,

-ಸು

Monday, July 13, 2009

ಪ್ರಣತಿಯಿಂದ ಗಮಕ ಸುಧಾ ಧಾರೆ

"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು ಮುಂದುವರೆಸುತ್ತಿದ್ದರು:

"...ವಿಮಲ ರಾಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ಧಾತಾರ
ರಾವಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜಗವ ಗದುಗಿನ ವೀರನಾರಯಣ|

-ಎಂಬಲ್ಲಿಗೆ ಒಂದು ಕೆಮ್ಮು, ರಾಯರ ಪಕ್ಕ ವ್ಯಾಖ್ಯಾನಕ್ಕೆಂದು ಕೂತಿರುತ್ತಿದ್ದ ಸಾಗರದ ಮಧ್ಯಸ್ತರಿಂದ!

ಅದು ನಮ್ಮೂರಿನ ದೇವಸ್ಥಾನದ ಪ್ರಾಂಗಣ. ನಮ್ಮೂರಿನದು ಶ್ರೀಕೃಷ್ಣನ ದೇವಸ್ಥಾನವಾದ್ದರಿಂದ, ಪ್ರತಿವರ್ಷದ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ನಡೆಯುತ್ತಿತ್ತು. ಅಷ್ಟಮಿಯ ಮರುದಿನ, ಕೃಷ್ಣ ಜಯಂತಿಯಂದು ಸಂಜೆ, ಏನಾದರೂ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಸಾಮಾನ್ಯವಾಗಿ ಅದು 'ಗಮಕ ವಾಚನ ಮತ್ತು ವ್ಯಾಖ್ಯಾನ' ಕಾರ್ಯಕ್ರಮವೇ ಆಗಿರುತ್ತಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಗಮಕಿ ಹೊಸಬಾಳೆ ಸೀತಾರಾಮರಾಯರಿಂದ ಗಮಕ ವಾಚನ ಮತ್ತು ಸಾಗರದ ನೀ.ನಾ. ಮಧ್ಯಸ್ತರಿಂದ ಅದರ ವ್ಯಾಖ್ಯಾನ. ನಮ್ಮ ಮತ್ತು ಅಕ್ಕಪಕ್ಕದ ಗ್ರಾಮಸ್ಥರನ್ನೊಳಗೊಂಡ ಸುಮಾರು ನೂರು ಪ್ರೇಕ್ಷಕರು ಆ ಕಾರ್ಯಕ್ರಮದಲ್ಲಿ ಇರುತ್ತಿದ್ದರು. ಚಿಕ್ಕ ಮಕ್ಕಳಾಗಿದ್ದ ನಾವು, ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ'ಯ ಅನೇಕ ಭಾಗಗಳನ್ನು ಕೇಳಿದ್ದು ಹಾಗೆ.

ಆಮೇಲೆ ಒಂದೆರಡು ವರ್ಷ, ಕೆರೆಕೊಪ್ಪದ ನರಹರಿ ಶರ್ಮರ ವಾಚನ ಮತ್ತು ನಿಸರಾಣಿ ರಾಮಚಂದ್ರರ ವ್ಯಾಖ್ಯಾನದಲ್ಲಿ ಗಮಕ ಕಾರ್ಯಕ್ರಮ ನಡೆಯಿತು. ಈ ಹೊಸ-ಯುವ ಜೋಡಿಯನ್ನು ಗ್ರಾಮಸ್ಥರು ಮೆಚ್ಚಿಕೊಂಡರಾದರೂ, ಎಷ್ಟೋ ವರ್ಷಗಳಿಂದ ಗಮಕ ಕಾರ್ಯಕ್ರಮವನ್ನೇ ಕೇಳೀ ಕೇಳಿ ಬೇಸರ ಬಂದಿತ್ತು. ಹೀಗಾಗಿ, ಗಮಕದ ಬದಲು ಈಗ ಕೆಲ ವರ್ಷಗಳಿಂದ ಬೇರೆ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮೂರಿನ ದೇವಸ್ಥಾನದಲ್ಲಿ ನಡೆಯುತ್ತಿದೆ.

* * *

ನಾನು ಹೋಗುತ್ತಿದ್ದ ನಿಸರಾಣಿ ಹೈಸ್ಕೂಲಿನಲ್ಲಿ, ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಮಹತ್ವ ಕೊಡುತ್ತಿದ್ದರು. ಅಂದರೆ, ಮಕ್ಕಳಲ್ಲಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರತೆಗೆಯಲು ಅನೇಕ ಕಾರ್ಯಕ್ರಮಗಳು - ಸ್ಪರ್ಧೆಗಳು ಅಲ್ಲಿ ನಡೆಯುತ್ತಿದ್ದವು. ಅದರಲ್ಲಿ ಗಮಕ ತರಗತಿಯೂ ಒಂದು. 'ಗಮಕ ಕಲಾ ಪರಿಷತ್'ನ ಆಶ್ರಯದಲ್ಲಿ, ಆಸಕ್ತ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳುಗಳ ಗಮಕ ತರಗತಿ ಮತ್ತು ಕೊನೆಯಲ್ಲೊಂದು ಪರೀಕ್ಷೆ ಇರುತ್ತಿತ್ತು. ನರಹರಿ ಶರ್ಮರೇ ತರಗತಿ ತೆಗೆದುಕೊಳ್ಳುತ್ತಿದ್ದುದು. ನಾನೂ ಸೇರಿದ್ದೆ. ಹೇಳಿಕೊಳ್ಳಬಹುದಾದ ಒಂದು ಖುಶಿಯ ವಿಷಯ ಎಂದರೆ, ಆ ವರ್ಷದ ಗಮಕ ಪರೀಕ್ಷೆಯಲ್ಲಿ ನಾನೇ ಶಾಲೆಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದೆ! ಅದಾದಮೇಲೆ, ಎಸ್ಸೆಸ್ಸೆನ್ ಮೇಡಂ ಕ್ಲಾಸಿನಲ್ಲಿ ನನ್ನ ಕಾಲೆಳೆಯ ಬೇಕೆಂದೆನಿಸಿದಾಗಲೆಲ್ಲ 'ಸುಶ್ರುತ, ಒಂದು ಭಾವಗೀತೆ ಹಾಡೋ' ಅಂತಲೋ ಚಿತ್ರಗೀತೆ ಹಾಡೋ ಅಂತಲೋ ಜನಪದ ಗೀತೆ ಹಾಡೋ ಅಂತಲೋ ಹೇಳುತ್ತಿದ್ದರು. ಅದು ಹೇಗೋ ಗಮಕದಲ್ಲೊಂದು ಬಾಯ್ಕಳೆದು ಹಾಡಿ ಸರ್ಟಿಫಿಕೇಟು ಗಿಟ್ಟಿಸಿದ್ದು ಬಿಟ್ಟರೆ, ಈ ಭಾವಗೀತೆಯನ್ನಾಗಲೀ ಚಿತ್ರಗೀತೆಯನ್ನಾಗಲೀ ಜನಪದ ಗೀತೆಯನ್ನಾಗಲೀ ನಾನು ಬಾತ್‌ರೂಮು ಮತ್ತು ಏಕಾಂತದಲ್ಲಿ ಬಿಟ್ಟು ಬೇರೆಲ್ಲೂ ಹಾಡಿದ್ದೇ ಇಲ್ಲ. ಒಟ್ಟಿನಲ್ಲಿ ಎಸ್ಸೆಸ್ಸೆನ್ ಮೇಡಂರ ತಮಾಷೆಯಿಂದಾಗಿ ಕ್ಲಾಸು ಕಿಸಕಿಸ ನಗೆಯಲ್ಲಿ ಮುಳುಗುತ್ತಿತ್ತು.

* * *

ಈಗ ಇವೆಲ್ಲ ನೆನಪಾದದ್ದು ಪ್ರಣತಿಯಿಂದ ನಾವು ಆಯೋಜಿಸಿರುವ 'ಗಮಕ ಸುಧಾ ಧಾರೆ' ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ವಿಷಯ ಬಂದಾಗ. ಹೌದು, ಬರುವ ಶನಿವಾರ- ಜುಲೈ 18ರ ಸಂಜೆ 5 ಗಂಟೆಗೆ, ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ರಸಋಷಿ ಕುವೆಂಪು ನೆನಪಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ವಿರಳವಾಗುತ್ತಿರುವ ಈ ಕಲೆಯನ್ನು ಮತ್ತೆ ಪ್ರಚುರಪಡಿಸುವುದು ಪ್ರಣತಿಯ ಧ್ಯೇಯಗಳಲ್ಲೊಂದಾದ 'ಸಂಸ್ಕೃತಿ'ಯ ಕೆಲಸ. ಪ್ರಣತಿಗೆ ಇದು ಹೆಮ್ಮೆಯ ನಾಲ್ಕನೇ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ನೀವೆಲ್ಲ ಬರಲೇಬೇಕು ಅಂತ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.




Monday, March 17, 2008

ಪ್ರಣತಿಯ ಖುಷಿಗೊಂದು ಬ್ಲಾಗರ್ಸ್ ಮೀಟ್

ಮತ್ತೊಂದು ಖುಷಿಯ ದಿನ ನಿನ್ನೆ. ತಿಂಗಳಿಂದ ಪಟ್ಟಿದ್ದ ಶ್ರಮ ಸಾರ್ಥಕವಾಯ್ತು. ವಾರದಿಂದ ಮಾಡಿಕೊಂಡಿದ್ದ ಟೆನ್ಷನ್ನೆಲ್ಲ ಕಳೆದು ಒಂದು ಸುಧೀರ್ಘ ನಿಟ್ಟುಸಿರು ಬಿಡುವಂತಾಯ್ತು.

ನೂರಿಪ್ಪತ್ತಕ್ಕೂ ಹೆಚ್ಚು ಬ್ಲಾಗಿಗರಿಂದ, ಓದುಗರಿಂದ, ಸಾಹಿತ್ಯಪ್ರೇಮಿಗಳಿಂದ, ಕನ್ನಡಿಗರಿಂದ ತುಂಬಿ ತುಳುಕುತ್ತಿತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಸಭಾಂಗಣ. ನಮ್ಮೆಲ್ಲರ ಪ್ರೀತಿಯ ಪವನಜ, ನಾಡಿಗ್, ರಶೀದ್, ಶ್ಯಾಮ್ ತುಂಬಾ ಚೆನ್ನಾಗಿ ಮಾತಾಡಿದ್ರು. ನಂತರ ನಡೆದ ಚರ್ಚೆ ಸಹ ಫಲಪ್ರದವಾಗಿತ್ತು. ಚಹ, ಹವೆಗೆ ತಕ್ಕಷ್ಟೇ ಬಿಸಿ ಇತ್ತು. ಯಾರ್ಯಾರೆಲ್ಲ ಬಂದಿದ್ರು, ಎಷ್ಟೆಷ್ಟು 'ಹಾಯ್'ಗಳು ವಿನಿಮಯವಾದ್ವು, ಎಷ್ಟು ಜನ ಎಷ್ಟು ಜನರ ಕೈ ಕುಲುಕಿದ್ರು, ಆಹ್! ಒಂದು ಯಶಸ್ವೀ ಕಾರ್ಯಕ್ರಮ ಕೊಟ್ಟ ಸಂಭ್ರಮದಲ್ಲಿ ಪ್ರಣತಿ, ನೋಡಿ, ಹೇಗೆ ನರ್ತಿಸುತ್ತಾ ಬೆಳಗುತ್ತಿದೆ..!

ಬಂದವರಿಗೆ, ಬರಕ್ಕಾಗಲ್ಲ ಅಂತ ಎಲ್ಲೆಲ್ಲಿಂದಲೋ ವಿಶ್ ಮಾಡಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್.

ದಟ್ಸ್ ಕನ್ನಡದಲ್ಲಿ ವರದಿ
ಕೆಂಡಸಂಪಿಗೆಯಲ್ಲಿ ವರದಿ

Monday, March 10, 2008

ಆ ಸಂಜೆ, ನಾವೆಲ್ಲ ಸೇರ್ತಿದೀವಿ...

ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತೇನೆ: ನನ್ನ ಸ್ನೇಹಿತರ ಸಂಖ್ಯೆ ಹೆಚ್ಚಾಗಿದ್ದು ಇಂಟರ್ನೆಟ್ಟಿನ ಕೃಪೆಯಿಂದ! ನಾನೇನಾದರೂ 'ನೆಟ್ಟಿಗ'ನಾಗದೇ ಉಳಿದಿದ್ದರೆ ಅದೆಷ್ಟು ಚಿಕ್ಕ ಲೋಕದಲ್ಲಿರುತ್ತಿದ್ದೆನೋ ಎಂದು ಯೋಚಿಸಿದಾಗ ದಿಗ್ಭ್ರಾಂತಿಯೂ ಜತೆಗೇ ಹಿತಾನುಭವವೂ ಆಗುತ್ತದೆ. ಎಲ್ಲೋ ಯಾರೋ ತೋರಿಸಿಕೊಟ್ಟರು: ಜಿ-ಮೇಲು ಅಂತ ಬಂದಿದೆ ನೋಡು.. ಚನಾಗಿದೆ.. ಒಂದು ಅಕೌಂಟ್ ಕ್ರಿಯೇಟ್ ಮಾಡ್ಕೋ, ನಾನು ಇನ್ವಿಟೇಶನ್ ಕಳುಹಿಸ್ತೀನಿ ಅಂತ.. ಜಿ-ಮೇಲಿನಿಂದ ಆರ್ಕುಟ್ಟು, ಅದಾದಮೇಲೆ ಬ್ಲಾಗು ಎಲ್ಲಾ ಗೊತ್ತಾಯ್ತು.. ತೆರೆದದ್ದಾಯ್ತು, ಬರೆದದ್ದಾಯ್ತು.. ಯಾರ್ಯಾರೋ ನಾನು ಬರೆದದ್ದನ್ನೆಲ್ಲ ಓದಿ, ಕಂಡು ಕೇಳರಿಯದ ಲೋಕಗಳಿಂದೆಲ್ಲ ಫ್ರೆಂಡ್ ರಿಕ್ವೆಸ್ಟುಗಳು ಬರತೊಡಗಿದವಲ್ಲ..? ಯಾರ್ಯಾರೋ ನನಗೆ ಫ್ಯಾನಂತೆ, ಯಾರಿಗೋ ನನ್ನ ಮೇಲೆ ಕ್ರಶ್ಶಂತೆ... ಆಹ್! ಇದೇನಾಗಿ ಹೋದೆ ನಾನು ಅಂತ ನನಗೇ ಒಮ್ಮೊಮ್ಮೆ ಯೋಚನೆಯಾಗುತ್ತದೆ!

ಇಂಟರ್ನೆಟ್ಟಿನಲ್ಲೇ ಎಷ್ಟೊಂದು ಮಂದಿ ಪರಿಚಯವಾಯ್ತು.. ಸಿಕ್ಕ ಅಕ್ಕಂದಿರು, ಪ್ರೀತಿ ತಂಗಿಯರು, 'ಏಕವಚನದಲ್ಲಿ ಕರೆಯೋ' ಎಂದವರು, ಹೆಸರೇ ಹೇಳದೇ ಕಾಡಿದವರು, ಸುಳ್ಳೇ 'ನೀನಿಷ್ಟ' ಎಂದವರು... ಓಹ್! ಇಂಟರ್ನೆಟ್ಟಿನಲ್ಲೇ ಪ್ರೀತಿ, ಪ್ರಪೋಸಲ್ಲು, ಮೋಸ, ವಿರಹ, ಜಗಳ, ಶಾಪ, ದ್ವೇಷ, ಹಪಹಪಿ... ಎಲ್ಲವನ್ನೂ ನೋಡಿದ್ದಾಯ್ತು. ಏನೆಲ್ಲ ಮಾಡಿದ್ದಾಯ್ತು.

ಬರೆದದ್ದನ್ನೆಲ್ಲ ಸುಮ್ಮನೆ ಮುಚ್ಚಿ ಬಚ್ಚಿಡುತ್ತಿದ್ದ ನನ್ನಂಥವರಿಗೆ ಬ್ಲಾಗುಗಳು ತೆರೆದಿಟ್ಟ ಲೋಕ ನಿಜಕ್ಕೂ 'ಕೃತಜ್ಞತಾವರ್ತ್'. ಆದರೆ ಹೀಗೆ ಬರೆದುಕೊಳ್ಳುತ್ತಿರುವ ನಾವು, ನಮ್ಮಲ್ಲೆಷ್ಟೋ ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನಮ್ಮ ಪುಸ್ತಕ 'ಚಿತ್ರಚಾಪ'ವನ್ನ ಪ್ರಕಟಿಸಿತ್ತಲ್ಲ, 'ಪ್ರಣತಿ ಪ್ರಕಾಶನ', ಹಾಂ ಅದು, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, 'ವಿಶ್ವಕನ್ನಡ'ದ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಪ್ರೀತಿಯಿಂದ,

-ಸು

Monday, February 11, 2008

ನನಸಾದ ಕನಸುಗಳ ಪಟ್ಟಿಗೆ 'ಚಿತ್ರಚಾಪ'

ತೀರಾ ಎಂದಿನಂತೇನಿರಲಿಲ್ಲ ನಿನ್ನೆ ದಿನ. ಆರೂ ವರೆಗೆ ಅಲಾರ್ಮ್ ಕೂಗಿತು; ಕಾಯ್ಲ್ ಬಕೇಟಿನಲ್ಲಿದ್ದ ನೀರನ್ನು ಕಾಯಿಸಿತು; ಊರಿಂದ ಬಂದಿದ್ದ ಅಮ್ಮ ತಿಂಡಿ ಮಾಡಿಕೊಟ್ಟಳು; ಕುರ್ತಾದ ಕಂಕುಳಿಗೆ ಡಿಯೋಡರೆಂಟ್ ಸ್ಪ್ರೇ ಆಯಿತು; ಸ್ವಿಚ್ ಒತ್ತಿದ್ದಕ್ಕೇ ಗಾಡಿ ಸ್ಟಾರ್ಟ್ ಆಯಿತು; ಮುಕ್ಕಾಲು ಗಂಟೆಯ ನಂತರ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಣ್ಣೆದುರಿಗಿತ್ತು!

ಎಷ್ಟು ಬಾರಿ ಹೋಗಿಲ್ಲ ಅಲ್ಲಿಗೆ? ಯಾರ್ಯಾರದೋ ಪುಸ್ತಕ ಬಿಡುಗಡೆಗಳು, ಏನೋ ಘೋಷ್ಠಿ, ಮತ್ತೇನೋ ಸಂಗೀತ ಕಛೇರಿ... ಆಗೆಲ್ಲ ತಲೆಬಾಗಿಲಲ್ಲಿ ನಿಂತು ಯಾರೋ ನನ್ನನ್ನು 'ಬನ್ನಿ ಸಾರ್..' ಎನ್ನುತ್ತಾ ಮುಗುಳ್ನಗೆಯೊಂದಿಗೆ ಸ್ವಾಗತಿಸುತ್ತಿದ್ದರು. ಆದರೆ ಈ ಬಾರಿ ಹಾಗಲ್ಲ... ಇವತ್ತು ನಮ್ಮದೇ ಪುಸ್ತಕ ಬಿಡುಗಡೆ! ನಾವೇ ನಿಂತು ಸ್ವಾಗತಿಸಬೇಕು ಜನರನ್ನು! ಆಹ್!


ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು ಅಂತ ಎಲ್ಲರೂ ಹೇಳಿದರು. ನಿಮ್ಮಲ್ಲನೇಕರು ಬಂದಿದ್ದಿರಿ.. ಬರಲಿಕ್ಕಾಗದವರು ಶುಭಾಶಯ ಹೇಳಿದ್ದೀರಿ.. ಖುಷಿಯಾಯ್ತು ... ... ಇಷ್ಟೇ ಹೇಳಲಿಕ್ಕೆ ಸಾಧ್ಯವಾಗುತ್ತಿರುವುದು ನನಗೆ ಸಧ್ಯ. ಉಳಿದಿದ್ದನ್ನೆಲ್ಲ ಈ ಫೋಟೋಗಳು ಹೇಳುತ್ತಿವೆ. ಥ್ಯಾಂಕ್ಸ್.. ಥ್ಯಾಂಕ್ಸ್ ಒನ್ಸ್ ಅಗೇನ್!




ಥ್ಯಾಂಕ್ಸ್!

Thursday, February 07, 2008

ಚಿತ್ರಚಾಪ -ಇದು ಮೊದಲ ತೊದಲು

ಸೂರ್ಯ ತನ್ನತ್ತ ವಾಲುತ್ತಲೇ ಪಶ್ಚಿಮದ ದಿಗಂತ ನಾಚಿ ಕೆಂಪಾಗಿಬಿಟ್ಟಿತ್ತು. ಹಕ್ಕಿಗಳು ಗುಂಪುಗುಂಪಾಗಿ ಮನೆ ಕಡೆ ಹೊರಟಿದ್ದವು. ಸಂಜೆ, ತನ್ನ ಸೌಂದರ್ಯಕ್ಕೆ ತಾನೇ ಮೈಮರೆತಂತಿತ್ತು. ಗಂಧರ್ವ ಲೋಕದತ್ತ ನಡೆಯುವವರಂತೆ ಸುಮಂತ ಮತ್ತು ರಾಜಿ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದರು. ಸುಮಂತ ರಾಜಿಗಾಗಿ ಹಿತ್ತಿಲ ಬೇಲಿಯ ಗಿಡದಲ್ಲಿದ್ದ ಗೌರಿ ಹೂವನ್ನು ಕೊಯ್ದುಕೊಟ್ಟ. ಸಂಜೆ ಮುಗಿಲ ಬಣ್ಣ ಗೌರಿ ಹೂವಿನ ಬಣ್ಣಕ್ಕೇ ತಿರುಗಿತು. ಸ್ವಲ್ಪ ಮುಂದೆ ನಡೆದ ಸುಮಂತ, ಮುತ್ತುಗದ ಹೂವಿನ ಗೊಂಚಲೊಂದನ್ನು ಕೊಯ್ದು ತಾನೇ ರಾಜಿಯ ಮುಡಿಗೇರಿಸಿದಮೇಲಂತೂ ಸಂಜೆಗೆ ಅಲ್ಲೇ ರಾತ್ರಿಯ ಮಾದಕತೆ ಪ್ರಾಪ್ತವಾಗಿಬಿಟ್ಟಿತು.

ಶಾಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪುಗಳಲ್ಲಿ ಕೆಲಸ ಮಾಡಿ ಗೊತ್ತಿದ್ದ ಸುಮಂತ ರಾಜಿಗಾಗಿ ಮರ ಹತ್ತಿ ಸೀತೆಪೇರಲೆ ಹಣ್ಣನ್ನು ಕೊಯ್ದು ಕೊಟ್ಟ. ಮುಂದೆ ಅವರು ಪರಗಿ ಮಟ್ಟಿ ನುಗ್ಗಿ ಪುಟ್ಟ ಪುಟ್ಟ ಪರಗಿ ಹಣ್ಣುಗಳನ್ನು ಒಂದು ಮುಷ್ಟಿಯಾಗುವಷ್ಟು ಸಂಗ್ರಹಿಸಿದರು. ಒಂದೊಂದೇ ಹಣ್ಣನ್ನು ಬಾಯಿಗೆ ಎಸೆದುಕೊಳ್ಳುತ್ತಾ ಅವರು ಕಾಲುದಾರಿಯಲ್ಲಿ ಸಾಗಿದರು. ಒಂದು ದೊಡ್ಡ ಚಂದ್ರಪೇರಲೆ ಹಣ್ಣಿನ ಗಿಡ ಸಿಕ್ಕಿತು. ಮರದ ಮೇಲ್ಗಡೆ ಎತ್ತರದಲ್ಲಿ ಎರಡು ದೋರಗಾಯಿಗಳು ಕಂಡವು. ಸುಮಂತ ಬಡಿಗೆ ಬೀಸಿ ಒಂದನ್ನು ಕೆಡವಿದ. ‘ನಿಂಗಿಲ್ವಲ್ಲೋ?’ ಎಂದ ರಾಜಿಗೆ ‘ಪರ್ವಾಗಿಲ್ಲ, ನೀನು ತಿನ್ನು’ ಎಂದ. ಆದರೂ ರಾಜಿ ತಾನೇ ಬಡಿಗೆ ತಗೊಂಡು ಬೀಸಲಿಕ್ಕೆ ನೋಡಿದಳು. ಆದರೆ ಅವಳು ಎಸೆದದ್ದು ಆ ರೆಂಬೆಯ ಹತ್ತಿರಕ್ಕೂ ಹೋಗಲಿಲ್ಲ. ಸುಮಂತ ರಾಜಿಯನ್ನು ರೇಗಿಸಿದ. ಅದಕ್ಕೆ ರಾಜಿಯ ಮುಖ ಕೆಂಪಾದದ್ದು ಕಂಡು ಸಂಜೆ ತಾನು ಕಪ್ಪಾಗತೊಡಗಿತು.

ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ಒಡಗೂಡತೊಡಗಿದವು. ಮಳೆಗಾಲದಲ್ಲಿ ನೀರಾಗಿ ಸುರಿದೂ ಅಳಿದುಳಿದಿದ್ದ ಮೋಡಗಳು ಅದ್ಯಾವುದೋ ಮಾಯೆಯ ಗಾಳಿಗೆ ಒತ್ತಿಕೊಂಡು ಸೀದಾ ಇಲ್ಲಿಗೆ ಬಂದಿದ್ದವು. ಆಗಲೇ ಕತ್ತಲಾವರಿಸಲಾರಂಭಿಸಿದ್ದರಿಂದ ಸುಮಂತನಿಗಾಗಲೀ ರಾಜಿಗಾಗಲೀ ಈ ಪರಿಣಾಮ ತಕ್ಷಣ ಗೊತ್ತಾಗಲಿಲ್ಲ. ತಣ್ಣನೆಯ ಗಾಳಿ ಬೀಸಲಾರಂಭಿಸಿದಾಗ ಅವರು ಆಗಸದತ್ತ ನೋಡಿದರು.

“ಓಹ್! ಮಳೆ ಬರುವಂತಿದೆ ಕಣೇ ರಾಜೀ..” ಎಂದ ಸುಮಂತ.
“ಅಯ್ಯೋ.. ಬೇಗ ಬೇಗ ಮನೆ ಸೇರಿಕೊಳ್ಳೋಣ ಬನ್ನಿ..” ರಾಜಿ ಅವಸರಿಸಿದಳು.

ಅವರು ಕಾಡ ತಂಪು, ಹೂಗಳ ಕಂಪು, ಜೀರುಂಡೆಗಾನದ ಇಂಪು ಮತು ಸಂಜೆಯ ಕೆಂಪನ್ನು ಸವಿಯುತ್ತಾ ತುಂಬಾ ಮುಂದೆ ಬಂದುಬಿಟ್ಟಿದ್ದರು. ಈಗ ವಾಪಸು ಹೋಗಲಿಕ್ಕೆ ಕನಿಷ್ಟ ಅರ್ಧಗಂಟೆ ಹಾದಿ ಸವೆಸಬೇಕಿತ್ತು. ನಡೆಯತೊಡಗಿದರು. ಮಿಂಚು-ಗುಡುಗುಗಳು ಶುರುವಾದವು. ರಾಜಿ ಸುಮಂತನ ಕೈ ಹಿಡಕೊಂಡಳು. ಸರಸರನೆ ಹೆಜ್ಜೆ ಹಾಕಿದರು. ಮಳೆ ಹನಿಗಳು ಬೀಳತೊಡಗಿದವು...


* * *

ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.

ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ 'ಪುಸ್ತಕ ಲೋಕ'ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು... ಹೇಗೋ ಏನೋ ಅರಿಯೆವು... ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ...

ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ
ಸಮಯ: ಬೆಳಗ್ಗೆ 10:30
ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ನಿಮಗಾಗಿ ಕಾಯುತ್ತಿರುತ್ತೇನೆ.. ಯಾಕೇಂದ್ರೆ, ನೀವು ಬಂದೇ ಬರ್ತೀರಿ ಅಂತ ನಂಗೊತ್ತು...

ಪ್ರೀತಿಯಿಂದ,

-ಸು