Thursday, June 04, 2009

ನೀತಿ

ಮೊಟ್ಟೆಯೊಡೆದು ಹೊರಬಂದರೂ
ಚಿಪ್ಪಿನೊಳಗೆ ತೂರಿಕೊಳ್ಳುವ ಸವಲತ್ತು
ಸುಸ್ತಾದರೆ, ನಾಚಿಕೆಯಾದರೆ,
ನಿದ್ರೆ ಬಂದರೆ ಅಥವಾ ಬಂದರೆ ಆಪತ್ತು.

ಏಕೆ ಅರ್ಥವೇ ಆಗುವುದಿಲ್ಲ ನಿನಗೆ..?
ನನ್ನ ಕನಸುಗಳನ್ನು ನೀನೂ
ಕಾಣಬಲ್ಲೆಯಾದರೆ ಮಾತ್ರ
ನೀನು ನನ್ನವನು. ನಾವು ಒಂದು.

ಇಷ್ಟಕ್ಕೂ ಮೊಲದೊಂದಿಗೆ ನನಗೀಗ
ಸ್ಪರ್ಧೆಯೇ ಇಲ್ಲ. ಗೆದ್ದಾಗಿದೆ ಎಂದೋ.
ಮೊಲಕ್ಕೂ ಈಗ ಬುದ್ಧಿ ಬಂದಿದೆ;
ಹಾಗೆಲ್ಲ ನಿದ್ದೆ ಮಾಡುವುದಿಲ್ಲ.

ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ.

ಆಕಾಶದಲ್ಲಿದ್ದಾಗ ನೀನು
ಜನ ನಕ್ಕರೆಂದು ಸಿಡುಕಿ
ಕೆಳಗುರುಳಿದರೆ ಬಿಟ್ಟು ಕಚ್ಚಿದ ಕೊಕ್ಕೆ-
ಪಾಪ, ತಪ್ಪು ಹೊತ್ತೊಯ್ದ ಹಕ್ಕಿಗಳದಲ್ಲ.

ಎರಡು ಚಿಪ್ಪುಗಳನ್ನು ಒಂದಾಗಿಸಿದರೆ
ಅದೊಂದು ಗೋಲ. ಇರಬಹುದು ಒಳಗೆ ಸೆಖೆ.
ಸಹಿಸಬೇಕು ಮುತ್ತಾಗುವಾಗ ಹನಿ;
ಕಾಯಬೇಕು ಜೀವ ಬರುವವರೆಗೂ ಹೊರಗೆ.

Friday, May 29, 2009

ದೇವದಾಸ

ನನ್ನ ಕನಸುಗಳ ಲಲಾಟದಲ್ಲಿ
ಹುಟ್ಟುವಾಗಲೇ ಸಾವಿನ ಷರಾ
ಬರೆದಿರುತ್ತದೆ.
ಸತ್ತಾಗ ಆಗುವ ಶೋಕಕ್ಕೆ
ಒಂದು ಸಿಗರೇಟು ಸಾಕು.
ಸುಟ್ಟು ಉಳಿಯುವ ಅದರ
ಚಿತೆಯ ಬೂದಿಗೆ ಕಣ್ಣೀರ ಹನಿಗಳು ಸೇರಿ
ಹೊಸ ಚಿಗುರು ಒಡೆಯುತ್ತದೆ.
ಬೂದಿಯಿಂದ ಅರಳಿದ ಬಳ್ಳಿ
ಬೂದುಗುಂಬಳವಾಗಿ ಬೀದಿಯ ಜನವೆಲ್ಲ
ಬಿದ್ದೂ ಬಿದ್ದು ನಗುತ್ತಿದ್ದರೆ, ಈ
ಕಾಯಿಯನ್ನೇ ನೆಚ್ಚಿ ಇನ್ನೂ ತಬ್ಬಿ ಕುಳಿತಿರುವ ನಾನು
ಮದಿರೆಯ ನಶೆಯ ಜತೆ ನಿಧನಿಧಾನವಾಗಿ ಬಾಡಿ
ಕುಂಬಳದೊಂದಿಗೇ ಕೊಳೆತು
ಇಲ್ಲವಾಗುತ್ತೇನೆ.

ನನ್ನ ಹೃದಯದ ಒಳಗೆ
ಕನ್ನೆಯಾಗಿಯೆ ಇದ್ದ ಇನ್ನೆಷ್ಟೊ ಕನಸುಗಳು
ಕಮ್ಮಗರಳಿರೆ ಮೊಳಕೆ, ಅಣಿ-
ಬ್ರಹ್ಮಲಿಪಿ ಬರೆಯಲು ಅದೆಷ್ಟೊಂದು ಕೈಗಳು!

Wednesday, May 20, 2009

ರಿಂಗ್‌ರೋಡು

ಎಲ್ಲ ರಸ್ತೆಗಳೂ ನಗರಿಯ
ಕಣ್ಣು ಮೂಗು ಎದೆ ಹೊಕ್ಕುಳು ತೊಡೆ
ಸಂದಿ ಗೊಂದಿಗಳನ್ನು ಹೊಕ್ಕು ಹಾದು
ಹೋಗುತ್ತಿದ್ದರೆ ಇದು ಮಾತ್ರ ಹೊರಗೇ
ಉಳಿದಿದೆ. ಇಡೀ ನಗರಿಯನ್ನೇ
ತನ್ನ ಬಾಹುಗಳಿಂದ ಬಳಸಿ ನಿಂತಿದೆ.

ಇಲ್ಲಿ, ಇಲ್ಲಿಂದ ಹೊರಟರೆ ಇಲ್ಲಿಗೇ ಬರಬಹುದು..

ದಾರಿ ತಪ್ಪಿಸುವವರೇ ಹೆಚ್ಚಿರುವ ಈ ಊರಿನಲ್ಲಿ
ತಪ್ಪು ದಾರಿ ಹಿಡಿದರೂ ಮರಳಿ ಅಲ್ಲಿಗೇ ತಂದು
ಬಿಡುವ ಪುಣ್ಯಾತ್ಮ ಈ ರಸ್ತೆ.

ಮನೆಯಲ್ಲಿ ಅಮ್ಮ ಹೇಳಿ ಕಳುಹಿಸಿದ್ದಳು,
ಹಾಗೆ ಅಂತಹ ಒಳ್ಳೆಯವರ ಸಂಗ ಮಾಡು ಎಂದು..

ಆದರೆ ನನಗೆ ಜಯನಗರದಿಂದ ರಾಜಾಜಿನಗರಕ್ಕೆ
ಹೋಗಬೇಕಿದೆ,
ರಿಂಗ್‌ರೋಡು ಹಿಡಿದರೆ ಪ್ರಯೋಜನವಿಲ್ಲ.
ಎಂಜಿ ರೋಡಿನಲ್ಲಿ ಹೋದವರ್ಯಾರೂ ಮಹಾತ್ಮರಾಗಿಲ್ಲ;
ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಅಡ್ಡಾಡಿದವರು ದೊರೆಗಳಾಗಿಲ್ಲ.

ನಾಗರೀಕನಾಗ ಬಂದವನಿಗೆ ದಾರಿ ತಪ್ಪಿದರೂ ಚಿಂತಿಲ್ಲ;
ಹೊಸ ದಾರಿ ಸಿಕ್ಕಂತಾಗುತ್ತದೆ..
ಇದೇ-ಇಂಥದೇ ದಾರಿಯಲ್ಲಿ ಹೋಗಬೇಕೆನ್ನುವ ತಲೆಬಿಸಿಯೆಲ್ಲಾ
ಗುರಿಯಿದ್ದವನಿಗೆ.. ಅನಿಕೇತನನಿಗೆ ಯಾವ ದಾರಿಯಾದರೂ
ಆದೀತು: ರಿಂಗ್‌ರಸ್ತೆಯೊಂದನ್ನು ಬಿಟ್ಟು.

ತೀರಾ ತಪ್ಪಿಯೇ ಹೋದರೆ ದಾರಿ, ಮೆಜೆಸ್ಟಿಕ್ಕಿಗೆ ಹೋದರಾಯಿತು:
ಅಲ್ಲಿಂದ ಬದುಕನ್ನೇ ಪುನರಾರಂಭಿಸಬಹುದು.
ಗುಟ್ಟು: ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!

Wednesday, May 06, 2009

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ..

ಜಯಂತ್ ಬರೆದಿದ್ದರು ಒಮ್ಮೆ: "ನಗರಗಳಲ್ಲಿ ಊಳಿಗ ಮಾಡಿಕೊಂಡಿರುವ ಏಕಾಕಿ ಜೀವಿಗಳು ಹೆದರುವುದು ಯಾವುದಕ್ಕೆ? ಇದ್ದಕ್ಕಿದ್ದಂತೆ ಎದ್ದೇಳುವ ಕೋಮು ಗಲಭೆ, ಲಾಕೌಟ್, ಬಂದ್, ಕರ್ಫ್ಯೂಗಳಿಗೇ? ಊಹೂಂ, ಅದಕ್ಕೆಲ್ಲ ಅವರು ಹೆದರುವುದಿಲ್ಲ. ಹೋಟೆಲುಗಳೆಲ್ಲ ಮುಚ್ಚಿದ್ದರೆ ರಸ್ತೆಬದಿಯ ಶೇಂಗಾ ತಿಂದು ನೀರು ಕುಡಿದು ಬದುಕಿರಬಲ್ಲರು ಅವರು. ಊರಿನ ವಿಳಾಸದಿಂದ ಬರುವ ಹಠಾತ್ ಟೆಲಿಗ್ರಾಮುಗಳಿಗೆ? ಊಹುಂ, 'ತಂದೆ ತೀರಿಕೊಂಡಿದಾನೆ, ಹೊರಡು', 'ಅಮ್ಮನಿಗೆ ಸೀರಿಯಸ್, ಹೊರಡು' ಇಂತಹ ತಂತಿಗಳನ್ನು ಆತ ಊಹಿಸಿ ಊಹಿಸಿಯೇ ಗಟ್ಟಿಯಾಗಿಬಿಟ್ಟಿರುತ್ತಾನೆ. ರಸ್ತೆಯಲ್ಲೆದುರಾಗುವ ಆಕ್ಸಿಡೆಂಟ್‍ನಲ್ಲಿ ಸತ್ತ ಅನಾಥ ಶವಗಳನ್ನು ಕಂಡಾಗಲೇ? ಊಹುಂ, ನಿತ್ಯ ಕಾಣುವ ಇಂತಹ ದೃಶ್ಯಗಳನ್ನು ನೋಡೀ ನೋಡಿ ಆತ ತನ್ನ ಸಾವೂ ಇಂಥದ್ದರಲ್ಲೇ ಆಗೋದು ಅಂತ ಯಾವತ್ತೋ ಮನಸಿಗೆ ಹೇಳಿಕೊಂಡುಬಿಟ್ಟಿರುತ್ತಾನೆ. ಹೆದರುವುದಿಲ್ಲ.

ಹಾಗಾದರೆ ದೂರದೂರಿನಿಂದ ಬಂದು ನಗರದಲ್ಲಿ ಅಡ್ನಾಡಿ ಬದುಕು ಬಾಳಿಕೊಂಡಿರುವ ಈ ಮನುಷ್ಯ ಏನಕ್ಕೂ ಹೆದರುವುದೇ ಇಲ್ಲವೇ? ಇಲ್ಲ, ಆತ ಸಹ ಹೆದರುತ್ತಾನೆ. ಕೇವಲ ಒಂದೇ ವಿಷಯಕ್ಕೆ: ಕಾಯಿಲೆ ಬೀಳುವುದಕ್ಕೆ! ನಿಜ, ಕಾಯಿಲೆ ಬೀಳುವ ಕಲ್ಪನೆಗೆ ಸಹ ಆತ ಭಯದಿಂದ ಕಂಪಿಸಬಲ್ಲ. ಹೇಳುವವರಿಲ್ಲದ ಕೇಳುವವರಿಲ್ಲದ ಈ ಕುರೂಪಿ ನಗರಿಯಲ್ಲಿ ಕಾಯಿಲೆ ಬೀಳುವುದಕ್ಕಿಂತ ದೊಡ್ಡ ಯಾತನೆ ಮತ್ತೊಂದಿಲ್ಲ. ಇಡೀ ಜಗತ್ತೇ ತನ್ನನ್ನು ಬಿಟ್ಟು ಮುಂದೆ ಸಾಗಿದಂತೆನಿಸುತ್ತದೆ. ಯಾರಿಗೂ ಅವನ ಕೈ ಹಿಡಿದು ಆಸ್ಪತ್ರೆಗೆ ಕರೆದೊಯ್ಯುವ ದರ್ದಿಲ್ಲ. ಯಾರೂ ಅವನಿಗೆ ಗಂಜಿ ಬೇಯಿಸಿ ಹಾಕುವುದಿಲ್ಲ. ಯಾರೂ ಪಕ್ಕದಲ್ಲಿ ಕೂತು ಹಣೆಗೆ ಒದ್ದೆ ಬಟ್ಟೆ ಹಾಕಿ ತೆಗೆಯುವುದಿಲ್ಲ. ಕಾಯಿಲೆ ಬಿದ್ದ ಏಕಾಂಗಿ ಮನುಷ್ಯನಷ್ಟು ನತದೃಷ್ಟ ವ್ಯಕ್ತಿ ಶಹರದಲ್ಲಿ ಮತ್ಯಾರೂ ಇಲ್ಲ.."

ಮೊನ್ನೆ ಜ್ವರದ ಕಣ್ಣಲ್ಲಿ ಇದನ್ನು ಮತ್ತೆ ಓದುವಾಗ ಎಷ್ಟೊಂದು ಹೌದು ಹೌದು ಅನ್ನಿಸಿತು.. ಕಣ್ಣು ಸಹ ಬಿಡಲಾಗದಷ್ಟು ಜೋಂಪು. ಭಾರ ತಲೆ. ಮಂಪರು. ಎದ್ದು ಹೋಗಿ ಒಂದು ಲೋಟ ನೀರು ಕುಡಿಯೋಣವೆಂದರೆ ಇದೇನಿದು ಏಳಲಿಕ್ಕೇ ಆಗುತ್ತಿಲ್ಲ..? ಆಫೀಸಿಗೆ ಫೋನ್ ಮಾಡಿ ಬರಲಾಗುತ್ತಿಲ್ಲ ಎಂದರೆ "ನಿನ್ನೆ ಆರಾಮಾಗೇ ಇದ್ರಲ್ಲ, ಅದು ಹೇಗೆ ಇದ್ದಕ್ಕಿದ್ದಂಗೆ ಜ್ವರ ಬಂತು?" -ಸಂಶಯದ ಪ್ರಶ್ನೆ. ಹೌದು ಸಾರ್, ನಂಗೂ ಗೊತ್ತಿಲ್ಲ. ಆದರೆ ಜ್ವರ ಬಂದಿದೆ. ಸುಳ್ಳು ಹೇಳ್ತಿಲ್ಲ ಸಾರ್. ಬರಲಿಕ್ಕೆ ಆಗಲ್ಲ. ಲೀವ್ ಬೇಕು. ಅಯ್ಯೋ, ಯಾಕೆ ಅರ್ಥವೇ ಆಗ್ತಿಲ್ಲ ನಾನು ಹೇಳ್ತಿರೋದು?

ಛೇ, ಇವತ್ತೇ ಯಾಕೆ ಇಷ್ಟೊಂದು ಕ್ಲೈಂಟ್ ಕಾಲ್‌ಗಳು? ಯಾರು ಇವರಿಗೆಲ್ಲ ನನ್ನ ಮೊಬೈಲ್ ನಂಬರ್ ಕೊಟ್ಟಿದ್ದು? ಯಾವಾಗಲೂ ತಡವಾಗಿ ಹೋಗುವ ರೂಂಮೇಟ್ ಇವತ್ತೇ ಯಾಕೆ ಬೇಗ ಹೋದ ಆಫೀಸಿಗೆ? ಕಷ್ಟ ಪಟ್ಟು ಎದ್ದು ಹೋಗಿ ಎರಡು ಲೋಟ ನೀರು ಕುಡಿಯುತ್ತೇನೆ.. ಸ್ವಲ್ಪ ಚೈತನ್ಯ ಬಂದಂತೆನಿಸುತ್ತದೆ.. ಬೇಕರಿಗೆ ಹೋಗಿ ಬ್ರೆಡ್-ಜಾಮ್ ತಂದುಕೊಳ್ಳುತ್ತೇನೆ. ಹಸಿವೆನಿಸಿದರೂ ಎರಡು ಬ್ರೆಡ್ ಮೇಲೆ ತಿನ್ನಲಿಕ್ಕೇ ಆಗುತ್ತಿಲ್ಲವಲ್ಲ, ಏನಾಗಿದೆ ನನಗೆ? ಕಾಫಿ ಕುಡಿಯಬೇಕು. ಸ್ಟ್ರಾಂಗ್ ಕಾಫಿ. ಥೂ, ಕಹಿ ಕಹಿ. ಇಲ್ಲೇ ಇಟ್ಟಿದ್ದೆನಲ್ಲ ಕ್ರೋಸಿನ್ ಸ್ಟ್ರಿಪ್ಪು, ಎಲ್ಲಿ ಹೋಯ್ತು? ನುಂಗಿ ಬೆಚ್ಚಗೆ ಹೊದ್ದು ಮಲಗಿದರೆ ಮಧ್ಯಾಹ್ನದೊಳಗೆ ಎಲ್ಲಾ ವಾಸಿಯಾಗುತ್ತೆ.

ಎಷ್ಟೋ ಹೊತ್ತಿನ ಮೇಲೆ ಎಚ್ಚರಾಗೊತ್ತೆ.. ಎಲ್ಲಿದ್ದೇನೆ ನಾನು? ಏನಾಗಿದೆ ನನಗೆ? ಸಮಯವೆಷ್ಟು ಈಗ? ಆಂ, ನಾಲ್ಕೂವರೆಯೇ? ಆಗಲೇ ಸಂಜೆಯಾಯಿತಾ? ಮೈಯೇಕೆ ಹೀಗೆ ಸುಡುತ್ತಿದೆ ಇನ್ನೂ? ಥರ್ಮಾಮೀಟರ್ ಎಲ್ಲಿ? ಏನೂ, ನೂರಾಮೂರು ಡಿಗ್ರಿಯಾ? ಛೇಛೆ, ಕಣ್ಣೇ ಮಂಜಾಗಿರಬೇಕು ನನಗೆ..

ನಾಲ್ಕು ದಿವಸಗಳಾಗಿವೆ.. ಎರಡು ಬಾರಿ ಡಾಕ್ಟರ್ ಬಳಿ ಹೋಗಿ ಬಂದದ್ದಾಯ್ತು. ಇಂಜೆಕ್ಷನ್ ಬೇಡ, ಟ್ಯಾಬ್ಲೆಟ್ಸಲ್ಲೇ ಗುಣ ಆಗುತ್ತೆ, ವೈರಲ್ ಫೀವರ್ ಎಂದಿದ್ದರು ಡಾಕ್ಟರು. ಆದರೆ ಇದ್ಯಾಕೋ ನನಗೆ ಹುಷಾರಾಗುವ ಲಕ್ಷಣವೇ ಕಾಣುತ್ತಿಲ್ಲ.. ರೂಂಮೇಟು ಪಾಪ ಕಾದಾರಿದ ನೀರು ಕುಡಿ ಅಂತ ಕಾಯಿಸಿಟ್ಟು ಹೋಗಿದ್ದಾನೆ. ತಿಳಿಸಾರು, ಮೆತ್ತನೆ ಅನ್ನ ಮಾಡಿಕೊಟ್ಟಿದ್ದಾನೆ. ಗಂಜಿ ಬೇಕು ಎಂದರೆ ಕುಕ್ಕರನ್ನು ಐದು ಸಲ ಕೂಗಿಸಿದ್ದಾನೆ. ಮನೆಯಲ್ಲಿ ಒಬ್ಬನೇ ಭೂತದ ಥರ ಮಲಗಿಕೊಂಡಿದ್ದೇನೆ. ಯಾವುದಾದರೂ ಪುಸ್ತಕವನ್ನಾದರೂ ಓದೋಣವೆಂದರೆ ಅದನ್ನು ಹಿಡಿದುಕೊಳ್ಳಲೂ ತ್ರಾಣವಿಲ್ಲ. ಸ್ವಲ್ಪ ಓದುವಷ್ಟರಲ್ಲೇ ಸುಸ್ತು ಸುಸ್ತು. ಮನೆಗೆ ಇನ್ನೂ ಹೇಳಿಲ್ಲ. ಹೇಳಿದರೆ ಟೆನ್ಷನ್ ಮಾಡಿಕೊಳ್ಳುತ್ತಾರೆ. "ಈಗ್ಲೇ ಕಳುಸ್ತೀನಿ ಅಮ್ಮನ್ನ" ಅಂತಾನೆ ಅಪ್ಪ. ಬೇಡ, ಇನ್ನೂ ಒಂದೆರಡು ದಿನ ನೋಡೋಣ; ಹಾಗೇ ಆರಾಮಾಗಬಹುದು. ಒಂದಿಬ್ಬರು ಫ್ರೆಂಡ್ಸು ಬಂದು ನೋಡಿಕೊಂಡು ಹೋಗಿದ್ದಾರೆ. "ಗ್ಲುಕೋಸು, ಎಳನೀರು ಅಥ್ವಾ ಜ್ಯೂಸು ಕುಡೀತಿರು, ಅದಿಲ್ಲಾಂದ್ರೆ ಲಿಕ್ವಿಡ್ ಕಂಟೆಂಟ್ಸ್ ಇಲ್ದೇ ಡಿಹೈಡ್ರೇಷನ್ ಆಗುತ್ತೆ" ಎಂದಿದ್ದಾನೆ ಕಲೀಗು ಫೋನಿನಲ್ಲಿ. ಹೌದು, ವಿಪರೀತ ಬಾಯಾರಿಕೆ. ಹೀಟು. ಈ ಪರಿ ಡಜನ್‍ಗಟ್ಟಲೆ ಮಾತ್ರೆ ತಿಂದರೆ ಮತ್ತಿನ್ನೇನಾಗತ್ತೆ?

ಬಹುಶಃ ನನಗೆ ಜ್ವರ ಬಂದು ಏಳೆಂಟು ದಿನಗಳೇ ಆಗಿವೆ.. ಆಫೀಸಿಗೆ ಹೊರಟ ರೂಂಮೇಟು ಎಬ್ಬಿಸುತ್ತಿದ್ದಾನೆ: "ಏಯ್ ಏಳು.. ಏಳು ಸಾಕು.. ಇದ್ಯಾಕೋ ಟೈಫಾಯ್ಡಿಗೆ ಎಳೆಯೋ ಹಾಗಿದೆ. ಮೊದಲು ಹೋಗಿ ಬ್ಲಡ್ಡು, ಯೂರಿನ್ನು ಟೆಸ್ಟ್ ಮಾಡ್ಸೋಣ, ನಡಿ.." ಥೂ, ಈ ಆಟೋ ಯಾಕೆ ಹೀಗೆ ಕುಲುಕಾಡುತ್ತೆ? ಸಿರಿಂಜ್ ಚುಚ್ಚಿ ರಕ್ತವನ್ನು ಎಳೆದುಕೊಳ್ಳುತ್ತಿದ್ದಾರೆ ಸರ್ಜನ್.. ರಿಪೋರ್ಟು ಮಧ್ಯಾಹ್ನ ಸಿಗುತ್ತೆ ಅಂತಿದಾರೆ.. ಅಲ್ಲಿಯವರೆಗೆ ನಾನೇನು ಮಾಡಲಿ? ಇಲ್ಲೇ ಬೆಂಚಿನ ಮೇಲೆ ಮಲಗಿರಲಾ? "ಇದು ಪ್ಯಾರಾಟೈಫಾಯ್ಡ್. ತುಂಬಾನೇ ನಿಶ್ಯಕ್ತಿ ಆಗಿದೆ ನಿಮಗೆ. ಡ್ರಿಪ್ ಹಾಕ್ಬೇಕು. ಅಡ್ಮಿಟ್ ಆಗಿಬಿಡಿ ಈಗಲೇ" ಕನ್ನಡಕದ ಡಾಕ್ಟರು ಒಂದೇ ಸಮನೆ ಮಾತಾಡುತ್ತಿದ್ದಾರೆ. ಅಯ್ಯೋ ಬೇಡ ಡಾಕ್ಟ್ರೇ.. ಇಲ್ಲಿ ನಾನು ಅಡ್ಮಿಟ್ ಆಗಲ್ಲ.. ನನ್ನ ನೋಡ್ಕೊಳ್ಳೋರು ಯಾರೂ ಇಲ್ಲ.. ನಾನು ಊರಿಗೆ ಹೋಗ್ತೇನೆ.. ಬೇಕಾದ್ರೆ ಅಲ್ಲೇ ಯಾವುದಾದರೂ ಹಾಸ್ಪಿಟಲ್‍ಗೆ ಹೋಗ್ತೇನೆ.. ಊರಿಗೆ ಹೋದರೆ ಸಾಕು, ಅಮ್ಮನ ಕೈತುತ್ತೂಟ ಉಂಡರೆ ಎಲ್ಲ ಆರಾಮಾಗುತ್ತೆ.. ನನ್ನ ಬಿಟ್ಬಿಡಿ ಈಗ..

ಮನೆಗೆ ಫೋನ್ ಮಾಡಿ ಹೇಳ್ತಿದ್ದೇನೆ.. "ಯಾಕೆ ಇಷ್ಟೆಲ್ಲ ಆದ್ರೂ ಹೇಳ್ಲಿಲ್ಲ ನಮಗೆ? ನಾವೆಲ್ಲಾ ಇರೋದು ಏನಕ್ಕೆ? ಈಗ ಒಬ್ನೇ ಹ್ಯಾಗೆ ಬರ್ತೀಯಾ?" ಇಲ್ಲಮ್ಮಾ, ಸ್ಲೀಪರ್ ಕೋಚ್ ಬಸ್ಸು.. ಊರಿಗೆ ಹೋಗೋರು ಯಾರಾದ್ರೂ ಇದ್ದೇ ಇರ್ತಾರೆ.. ಅಪ್ಪಂಗೆ ಬಸ್‍ಸ್ಟಾಂಡ್ ಹತ್ರ ಬರ್ಲಿಕ್ಕೆ ಹೇಳು ಅಷ್ಟೇ.. ಏನು ಭಯ ಬೇಡ..

ನಾನು ಹೋಗುವಷ್ಟರಲ್ಲೇ ನನಗೆ ಟೈಫಾಯ್ಡ್ ಆಗಿರುವುದು ಊರಿಗೆಲ್ಲ ಸುದ್ದಿಯಾಗಿಬಿಟ್ಟಿದೆ! ಎಲ್ಲರೂ ಕೇಳುವವರೇ: ಜ್ವರನಂತೆ? ಈಗ ಹೇಗಿದೆ? ತುಂಬಾ ಕೇರ್ ತಗೋಬೇಕು.. ಖಾರದ ಪದಾರ್ಥ ಸ್ವಲ್ಪಾನು ತಿನ್ಬೇಡ.. ಛೇ ಪಾಪ, ಒಂದು ವಾರದಲ್ಲಿ ಹೆಂಗೆ ತೆಳ್ಳಗಾಗಿ ಹೋಗಿದೀಯ ನೋಡು.. "ಮದ್ದಾಲೆ ಚಕ್ಕೆ ಕಷಾಯ ಮಾಡಿಕೊಡಿ ಅವಂಗೆ, ಎಂಥಾ ಜ್ವರ ಇದ್ರೂ ಎರಡೇ ದಿನದಲ್ಲಿ ಓಡಿಹೋಗುತ್ತೆ.. ನಮ್ಮನೆ ಸರೋಜಂಗೆ ಅದ್ರಲ್ಲೇ ಹುಶಾರಾಗಿದ್ದು" ಗಣಪತಿ ಭಟ್ಟರು ಸಲಹೆ ಕೊಡುತ್ತಿದ್ದಾರೆ. ಅಮ್ಮನಿಗಂತೂ ಉಪಚಾರ ಮಾಡಿದಷ್ಟೂ ಸಾಕಾಗ್ತಿಲ್ಲ.. ರವೆಗಂಜಿ ಮಾಡ್ಕೊಡ್ಲಾ? ಬಾರ್ಲಿ ನೀರು ಬತ್ತಿಸಿದ್ದಿದೆ ಕುಡೀತೀಯಾ? ಇವತ್ತು ಮಧ್ಯಾಹ್ನದ ಅಡುಗೆಗೆ ಏನು ಮಾಡ್ಲಿ? ಒಂದೆಲಗನ ತಂಬುಳಿ ಪರ್ವಾಗಿಲ್ವಾ? ಇಲ್ಲೇ ಹಾಲಲ್ಲಿ ಮಲ್ಕೋ.. ರೂಮಲ್ಲಿ ಸೆಖೆ ಅಂದ್ರೆ ಸೆಖೆ.

ಆ ಕಡೆ ಈ ಕಡೆ ಶತಪತ ಮಾಡುವ ಅಪ್ಪ. ಪಿಸುಗಣ್ಣೀರು ಹಾಕುವ ಅಜ್ಜ. ಬರೀ ಗಲಾಟಿ ಮಾಡುವ ಬೇಸಿಗೆ ರಜೆಗೆ ಬಂದಿರುವ ನೆಂಟರ ಮಕ್ಕಳು. ಒಂದೇ ಸಮನೆ ರಿಂಗಾಗುವ ಫೋನು. ಬೆಂಕಟವಳ್ಳಿಯಿಂದ ಮಾವನಂತೆ.. ನಾನು ಈಗ ಹೇಗಿದ್ದೀನಿ ಅಂತ ಕೇಳೋಕೆ ಮಾಡಿದ್ದಂತೆ. ಅತ್ತೆ ನಾಳೆ ಬರ್ತಿದ್ದಾಳಂತೆ. ನನ್ನ ನೋಡಿಕೊಂಡು ಹೋಗಲಿಕ್ಕೆ. ಛೇ! ನಂಗೇನು ಮಾರಣಾಂತಿಕ ಕಾಯಿಲೆ ಬಂದಿದೆಯೇನಪ್ಪಾ? ಜ್ವರ ಅಷ್ಟೇ. ಯಾಕೆ ಈ ಆಪ್ತೇಷ್ಟರಿಗೆ ಈ ಪರಿ ಕಾಳಜಿ? ಕನಸಿನಲ್ಲಿ ಯಾರೋ ಹೇಳುತ್ತಿದ್ದಾರೆ: ಅದು ಹಾಗಲ್ಲ, ನೀನು ಆರಾಮಾಗಿದ್ದಾಗ ಯಾರೂ ಬಾರದೇ ಇದ್ರೂ ನಡೆಯುತ್ತೆ, ಆದರೆ ತೊಂದರೇಲಿ ಇದ್ದಾಗ ಬಂದು ವಿಚಾರಿಸಿಕೊಂಡು ಹೋಗಬೇಕು.. ಅದೇ ನಿಯಮ.. ಸ್ನೇಹ, ಬಂಧುತ್ವ, ನೆರೆಹೊರೆ ಅಂದರೆ ಅದು.. ಕಷ್ಟದಲ್ಲಿದ್ದಾಗ ನೆರವಾಗೋದು. ನಗರಗಳಲ್ಲಿ ಅದೆಲ್ಲ ಇಲ್ಲ. ನೀನು ವಾರಗಟ್ಟಲೆ ಮಲಗಿದ್ರೂ ಅಕ್ಕಪಕ್ಕದ ಮನೆಯ ಒಬ್ಬರಾದ್ರೂ ಬಂದು ಕೇಳಿದ್ರಾ- ಯಾಕಪ್ಪಾ ಏನಾಗಿದೆ ಯಾಕೆ ಆಫೀಸಿಗೆ ಹೋಗ್ತಿಲ್ಲ ಅಂತ? ಅಲ್ಲಿ ಜನಗಳಿಗೆ ಮನುಷ್ಯತ್ವವನ್ನು ಪ್ರಕಟಿಸಲಿಕ್ಕೆ ಸಮಯವೂ ಇಲ್ಲ; ಪ್ರಜ್ಞೆಯೂ ಇಲ್ಲ.

"ಥೂ ಅಮ್ಮಾ, ಇದೇನಿದು ಕಿಚಿಪಿಚಿ ಕಿರುಚಾಟ? ನಿದ್ರೆ ಮಾಡ್ಲಿಕ್ಕೇ ಬಿಡ್ತಿಲ್ಲ?" ಮಗ್ಗುಲಿನಲ್ಲಿ ಮಲಗಿದ ನಾನು ಅಂಗಾತವಾಗುತ್ತ ಗೊಣಗುತ್ತೇನೆ. "ಗುಬ್ಬಚ್ಚಿಗಳು ಕಣೋ.. ಪಾಪ ಗೂಡು ಕಟ್ಕೊಳ್ತಿವೆ.. ಎರಡು ದಿನದಿಂದ ಹುಲ್ಲು ಹೆಕ್ಕಿ ತರೋದು, ಜೋಡಿಸಿ ಜೋಡಿಸಿ ಇಡೋದು -ಇದೇ ಕೆಲಸ ಸರಭರ. ಅವು ನೆಲಕ್ಕೆ ಬೀಳಿಸಿದ ಹುಲ್ಲುಕಡ್ಡಿಗಳನ್ನ ಗುಡಿಸೋ ಕೆಲಸ ಒಂದು ನಂಗೆ ಹೆಚ್ಚಿಗೆ ಅಷ್ಟೇ!" ಅರೆ, ಈ ಅಮ್ಮನಿಗೇಕೆ ಈ ಗುಬ್ಬಚ್ಚಿಗಳ ಮೇಲೆ ಕರುಣೆ? ಬೇರೆ ಎಲ್ಲಾದ್ರೂ ಕಟ್ಟಿಕೋಬಹುದಪ್ಪ ಗೂಡು.. ನಮ್ಮನೆ ಸಜ್ಜಾನೇ ಬೇಕಾ? ಗಲಾಟೆ ಅಂದ್ರೆ ಗಲಾಟೆ. "ಬೇರೆ ಕಡೆ ಅಂದ್ರೆ ಎಲ್ಲಿಗೆ ಹೋಗ್ತಾವೋ ಪಾಪ? ಅದ್ರಲ್ಲಿ ಹೆಣ್ಣುಹಕ್ಕಿ ಬಸುರಿ ಇರ್ಬೇಕು.. ಹೊಟ್ಟೆ ನೋಡಿದ್ರೆ ಹಾಗೇ ಅನ್ಸುತ್ತಪ್ಪ.." ಸಂಭ್ರಮದ ದನಿಯಲ್ಲಿ ಹೇಳುತ್ತಿದ್ದಾಳೆ ಅಮ್ಮ.

ಹತ್ತು ದಿನ ಆದ್ರೂ ಇನ್ನೂ ಹೋಗಿಲ್ಲ ಜ್ವರ.. ನೂರಾ ಎರಡು ಡಿಗ್ರಿ.. ಸೊರಬದ ಡಾಕ್ಟರ್ ಬಳಿ ಹೋಗುವುದು ಅಂತ ತೀರ್ಮಾನವಾಗಿದೆ. "ಎರಡು ಡ್ರಿಪ್ ಹಾಕಿದ್ರೆ ಎಲ್ಲ ಸರಿ ಆಗುತ್ತೆ.. ನೀವ್ ಏನೂ ಹೆದರ್ಬೇಡಿ.. ನಾನು ಸರಿ ಮಾಡಿ ಕಳುಸ್ತೀನಿ ನಿಮ್ಮ ಮಗನ್ನ" ಡಾ| ಎಂ.ಕೆ. ಭಟ್ಟರು ಹುರುಪುನಿಂದಲೇ ಹೇಳುತ್ತಿದ್ದಾರೆ. ಸಲೈನಿನ ಹನಿಗಳು ಒಂದೊಂದೆ ಒಂದೊಂದೇ ಆಗಿ ಸೇರಿಕೊಳ್ಳುತ್ತಿವೆ ದೇಹದಲ್ಲಿ.. ಸ್ವಲ್ಪ ಚೇತರಿಕೆ ಕಾಣಿಸುತ್ತಿದೆ ಈಗ.. ಇನ್ನು ಎರಡು ದಿನ. ಇದೊಂದು ಕೋರ್ಸ್ ಟ್ಯಾಬ್ಲೆಟ್ ತಗೊಂಡ್ರೆ ಫುಲ್ ರೆಡಿಯಾಗ್ತೀನಿ. ಹಾಗಂತ ನಂಗೇ ಅನ್ನಿಸ್ತಿದೆ.

...ಒಂದು ದಿನ ಮುಂಜಾನೆ ಥಟ್ಟನೆ ಎಚ್ಚರಾದಂತಾಗಿ ಕಣ್ಣು ಬಿಡುತ್ತೇನೆ. ಆಹ್ಲಾದವೆನಿಸುವ ಹಾಗೆ ಸೂರ್ಯರಶ್ಮಿ ಕಣ್ಣಿಗೆ ಬೀಳುತ್ತಿದೆ. ಅಪ್ಪ ಹತ್ತಿರ ಬಂದು ಡಿಗ್ರಿ ಕಡ್ಡಿ ಇಟ್ಟು ನೋಡುತ್ತಿದ್ದಾನೆ. ಇಲ್ಲ, ಜ್ವರ ಇಲ್ಲ; ನಾರ್ಮಲ್ ಟೆಂಪರೇಚರ್! ಹೌದು, ಜ್ವರ ಹೊರಟುಹೋಗಿದೆ. ನಿಜವಾಗಿಯೂ. ಆಹ್, ಅಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಓಡುತ್ತಿದ್ದಾಳೆ. ಅಜ್ಜ ಉಟ್ಟ ಸಾಟಿಪಂಚೆಯಿಂದಲೇ ಒರೆಸಿಕೊಳ್ಳುತ್ತಿದ್ದಾನೆ ಕಂಬನಿ. ಸುತ್ತ ನಿಂತ ಮಕ್ಕಳು "ಹಂಗಾದ್ರೆ ಇವತ್ತಿಂದ ನಮ್ ಜೊತೆ ಕ್ರಿಕೆಟ್ ಆಡ್ಬಹುದು ನೀನು?" ಕೇಳುತ್ತಿದ್ದಾರೆ ಉತ್ಸಾಹದಲ್ಲಿ. "ಪೂರ್ತಿ ರಿಕವರ್ ಆಗ್ಲಿಕ್ಕೆ ಇನ್ನೂ ಒಂದು ತಿಂಗಳು ಬೇಕು ನಿಂಗೆ. ಈಗ್ಲೇ ಹೊರಡ್ತೀನಿ ಬೆಂಗಳೂರಿಗೆ ಅಂತೆಲ್ಲ ಹಟ ಮಾಡ್ಬೇಡ. ವಾರ ಬಿಟ್ಟು ಹೋಗು" -ತಾಕೀತು ಅಪ್ಪನಿಂದ.

ಮಂಚದಿಂದಿಳಿದು ಮುಚ್ಚೆಕಡೆ ಬಾಗಿಲಿನೆಡೆಗೆ ಹೊರಟಿದ್ದೇನೆ. ಫಕ್ಕನೆ ಮೈಮೇಲೆ ಏನೋ ಬಿದ್ದಂತಾಗಿದೆ. ಏನಿದು? ಒಂದು ಹುಲ್ಲುಕಡ್ಡಿ. ಮೇಲೆ ನೋಡುತ್ತೇನೆ. ಒತ್ತೊತ್ತಾಗಿ ಚಂದವಾಗಿ ಜೋಡಿಸಿ ನಿರ್ಮಿತವಾಗಿರುವ ಗೂಡಿನಿಂದ ಬಸುರಿ ಗುಬ್ಬಚ್ಚಿ ಹೊರಗಿಣುಕಿ ನೋಡುತ್ತಿದೆ ನನ್ನನ್ನೇ: "..ಚಿಲಿಪಿಲಿ ಚಿಲಿಪಿಲಿ.." ಹೇ... ನನಗೆ ಒಮ್ಮೆಲೆ ಖುಶಿ ಉಕ್ಕಿ ಬರುತ್ತಿದೆ.. ಎಲ್ಲಿಂದಲೋ ಪುರ್ರನೆ ಹಾರಿಬಂದ ಗಂಡುಹಕ್ಕಿ ಗೂಡಿನ ಬಳಿ ಕೂತು ಹೆಂಡತಿಗೆ ಅದೇನೋ ಹೇಳುತ್ತಿದೆ. ಅಂದು ಗಲಾಟೆಯಂತೆ ಕೇಳಿದ್ದ ಇವುಗಳ ಮಾತು ಇಂದು ಹಿತವಾಗಿ ಕಲರವದಂತೆ ಕೇಳಿಸುತ್ತಿದೆ. ಎವೆ ಬಡಿಯದೇ ನೋಡುತ್ತಿದ್ದೇನೆ ನಾನು. ಪುಟ್ಟ ಸಂಸಾರಕ್ಕೆ ಇನ್ನೇನು ಬಂದು ಸೇರಲಿರುವ ಹೊಸದೊಂದು ಜೀವಕ್ಕೆ ಸ್ವಾಗತ ಕೋರುವ ತಯಾರಿಯಲ್ಲಿವೆ ಗುಬ್ಬಚ್ಚಿ ದಂಪತಿಗಳು.

* * *

ಈ ನಡುವೆ, ಏಪ್ರಿಲ್ ೨೬ಕ್ಕೆ ನನ್ನ ಬ್ಲಾಗಿನ ಮೂರನೇ ವರ್ಷದ ಹುಟ್ಟುಹಬ್ಬ ಕಳೆದುಹೋಗಿದೆ! ಸಿಂಗಾರಬಂಗಾರವಾಗಿ ಕಂಗೊಳಿಸಬೇಕಿದ್ದ ನನ್ನ ಬ್ಲಾಗು, ಪಾಪ ಒಡೆಯನ ಅನಾರೋಗ್ಯದಿಂದ ಯಾವುದೇ ಆಚರಣೆಯಿಲ್ಲದೆ ಸೊರಗಿ ಬೇಸರದಲ್ಲಿ ನಿಂತಿದೆ. ಸಮಾಧಾನ ಮಾಡಲು ನಾನು ಕರ್ಚೀಫು ಹುಡುಕುತ್ತಿದ್ದೇನೆ.

ನಾನು ಬ್ಲಾಗು ಶುರು ಮಾಡುವಾಗ ಕನ್ನಡದಲ್ಲಿದ್ದ ಬ್ಲಾಗುಗಳು ಬೆರಳೆಣಿಕೆಯಷ್ಟು. ಬ್ಲಾಗು ಎಂದರೇನು, ಬರಹ ಎಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು, ಯುನಿಕೋಡ್ ಬಳಸುವುದು ಹೇಗೆ, ಲಿಂಕಿಂಗ್ ಮಾಡುವುದು ಹೇಗೆ, ಬೇರೆಯವರಿಗೆ ನನ್ನದೂ ಒಂದು ಬ್ಲಾಗ್ ಇದೆ ಅಂತ ತಿಳಿಸುವುದು ಹೇಗೆ -ಇತ್ಯಾದಿ ಸಹಸ್ರ ಪ್ರಶ್ನೆಗಳಿದ್ದವು ನನ್ನ ಮುಂದೆ.

ಹೈಸ್ಕೂಲು ಕಾಲದಿಂದ ಬರೆಯುತ್ತಿದ್ದರೂ ಅವನ್ನು ಯಾರಿಗೂ ತೋರಿಸದೇ ಮುಚ್ಚಿಡುತ್ತ ಬಂದಿದ್ದ ನನಗೆ, ನನ್ನ ಬರಹಗಳು ಬೇರೆಯವರೂ ಓದುವಂತಿದೆಯೋ ಇಲ್ಲವೋ ಎಂಬುದೇ ದೊಡ್ಡ ಕುತೂಹಲವಾಗಿತ್ತು. ಬಹುಶಃ ನಾನು ಬ್ಲಾಗ್ ಶುರು ಮಾಡಿದ್ದು ಅದನ್ನು ಪರೀಕ್ಷಿಸಲೆಂದೇ ಇರಬೇಕು! ತೀರಾ ಪತ್ರಿಕೆಗಳಿಗೆ ನಾನು ಬರೆದ ಕತೆ-ಕವನ ಕಳುಹಿಸಿ ಅವು ರಿಜೆಕ್ಟ್ ಆಗಿ ವಾಪಸು ಬರುವುದಕ್ಕಿಂತ ಈ ಬ್ಲಾಗಿಂಗು ಸೇಫು ಅನ್ನಿಸಿತು ನನಗೆ. ಇಲ್ಲಿ ಇದನ್ನು ಅಕಸ್ಮಾತಾಗಿ ಯಾರಾದರೂ ಓದಿ ಚೆನ್ನಾಗಿದೆ ಅಂದುಬಿಟ್ಟರೆ ನಾನು ಗೆದ್ದೆ; ಅದಿಲ್ಲದಿದ್ದರೆ ಬೇಸರವಂತೂ ಇಲ್ಲ. ಯಾರೂ ಓದಲೇ ಇಲ್ಲವೇನೋ ಅಂದುಕೊಂಡು ಸುಮ್ಮನಿದ್ದರಾಯಿತು! ಬ್ಲಾಗು, ನನ್ನ ಬರಹಗಳ ಪ್ರಯೋಗಕ್ಕೊಂದು ವೇದಿಕೆಯಾಗಲಿ - ಆದೀತು ಎಂಬುದು ನನ್ನ ಆಶಯವಾಗಿತ್ತು.

ನಾನು ಬ್ಲಾಗಿಂಗ್ ಶುರುಮಾಡುವಾಗ ಇದ್ದ ಕನ್ನಡ ಬ್ಲಾಗುಗಳಲ್ಲಿ ಹೆಚ್ಚಿನವು ಪರ್ಸನಲ್ ಬ್ಲಾಗುಗಳೇ ಆಗಿದ್ದವು. ಕೆಲವರು ಕತೆ-ಕವನ ಬರೆಯುತ್ತಿದ್ದರು. ಇನ್ನುಳಿದಂತೆ ಪ್ರವಾಸ ಕಥನಗಳು, ಲಹರಿಗಳು, ಲಲಿತ ಪ್ರಬಂಧಗಳು, ಹೆಚ್ಚೆಂದರೆ ಯಾವುದೋ ಕಾರ್ಯಕ್ರಮದ ವರದಿ. ಬ್ಲಾಗುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಂತೆ ಬ್ಲಾಗರುಗಳಲ್ಲೇ ಕ್ಲಾಸಿಫಿಕೇಶನ್ನುಗಳು, ಗುಂಪುಗಳು ಪ್ರಾರಂಭವಾದವು. ಬ್ಲಾಗ್ ಜಗತ್ತಿಗೆ ರಾಜಕೀಯ, ಸ್ತ್ರೀವಾದ, ಧೋರಣೆಗಳು, ಎಡಪಂಥ-ಬಲಪಂಥ, ವಿಚಾರವಾದ, ಕಮ್ಯೂನಲಿಸಮ್ಮು, ಟೆರರಿಸಮ್ಮು, ಪಾರ್ನು, ಸೆಲೆಬ್ರಿಟಿಗಳು(!), ಪರಸ್ಪರ ಆರೋಪಗಳು, ಕಚ್ಚಾಟಗಳು, ಪ್ರತಿಕ್ರಿಯಾ ಪ್ರತಿಭಟನೆ -ಇತ್ಯಾದಿ ಸಾಮಾನ್ಯ ಮನುಷ್ಯರಿಗೆ ಅರ್ಥವಾಗದ ಎಲ್ಲಾ ವಿಚಾರಗಳೂ ಕಾಲಿಟ್ಟವು.

ಒಬ್ಬ ಬರೆದ ಒಂದು ಬರಹವನ್ನೇ ಎದುರಿಗಿಟ್ಟುಕೊಂಡು "ಆತ ಇಂಥವ" ಅಂತ ಹಣೆಪಟ್ಟಿ ಕೊಡುವ ಪರಿ ಶುರುವಾಯ್ತು. ಅವನಿಗೊಂದು ವಿರೋಧಿ ಗುಂಪೇ ತಯಾರಾಗಿ ಹೋಗಿದೆಯೇನೋ ಎಂಬಂತೆ ಆತನ ಮುಂದಿನ ಬರಹಗಳಿಗೆಲ್ಲವಕ್ಕೂ ಬೈಗುಳಗಳ ಸುರಿಮಳೆಯೇ ಬೀಳತೊಡಗಿದವು. ಅನಾನಿಮಸ್ ಹೆಸರಿನಲ್ಲಿ, ಬೇರೆಯವರ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಜಾಸ್ತಿಯಾದವು. 'ರೆಸ್ಪಾನ್ಸಿಬಲ್ ಕಮೆಂಟಿಂಗ್'ಅನ್ನು ಕಲಿಯಲು ನಮಗಿನ್ನು ಕಾಲವೇ ಬೇಕೇನೋ ಅಂತ ನಾವು ಆಕಾಶ ನೋಡುವಂತಾಯಿತು. ಸಮಸ್ಯೆಯೆಂದರೆ, ಆವಾಗಿನಿಂದಲೂ ಕತೆ-ಕವನ-ಲಹರಿ ಅಂತ ಬರೆದುಕೊಂಡು ಬಂದಿದ್ದ ನನ್ನಂಥವರಿಗೆ, ಎಲ್ಲೋ ಆಫೀಸಿನ ಬಿಡುವಿನ ವೇಳೆಯಲ್ಲಿ ರಿಲಾಕ್ಸ್ ಆಗೋಣ ಅಂತ ಬ್ಲಾಗ್‍ಗಳ ಕಡೆಗೆ ಕಣ್ಣು ಹಾಯಿಸಿದರೆ, ಬರೀ ಇಂತಹ ಸೀರಿಯಸ್ಸಾದ ಚರ್ಚೆಗಳೋ, ಚರ್ಚೆಯಾಗಿ ಉಳಿದಿರದ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳೇ ಕಣ್ಣಿಗೆ ಬೀಳತೊಡಗಿ -ಛೇ, ಇದೇನಪ್ಪಾ ಆಗಿಹೋಯ್ತು ಕನ್ನಡ ಬ್ಲಾಗಿಂಗ್ ಪರಿಸ್ಥಿತಿ ಅಂತ ಬೇಸರ ಪಟ್ಟುಕೊಳ್ಳುವಂತಾಯ್ತು.

ಇರಲಿ, ಯಾವುದೇ ಮಾಧ್ಯಮದಲ್ಲಿ ಆಗುವಂತೆ ಇವೂ ಸಹ ಬ್ಲಾಗ್ ಮಾಧ್ಯಮದಲ್ಲಿ ಕನ್ನಡ ಬೆಳೆಯುತ್ತಿರುವ ಲಕ್ಷಣಗಳು ಅಂತ ಸಧ್ಯ ನಾನಂತೂ ಸಮಾಧಾನ ಮಾಡಿಕೊಂಡಿದ್ದೇನೆ.

ಇತ್ತೀಚೆಗೆ ಪ್ರತಿಕ್ರಿಯೆಗಳಿಗಾಗಿ ದಾಹ ಪಡುವ, ಒತ್ತಡ ಹೇರುವ ಬ್ಲಾಗರುಗಳು ಒಂದು ದೊಡ್ಡ ತಲೆನೋವಾಗಿದ್ದಾರೆ. ಬ್ಲಾಗರ್-ಬ್ಲಾಗರುಗಳ ನಡುವೆಯೇ ವೈಮನಸ್ಸುಗಳು ಉಂಟಾಗಿವೆ. ಬ್ಲಾಗರುಗಳಿಗಾಗಿ ಕಮ್ಯೂನಿಟಿಗಳಾಗಿವೆ, ಪರಸ್ಪರ ಪರಿಚಯಕ್ಕೆ-ಸ್ನೇಹಕ್ಕೆ ವೇದಿಕೆಗಳಾಗಿವೆ. ನನ್ನ ಗೂಗಲ್ ರೀಡರಿನಲ್ಲಿಯೇ ಹೆಚ್ಚುಕಮ್ಮಿ ಆರುನೂರು ಕನ್ನಡ ಬ್ಲಾಗುಗಳ ಫೀಡ್ ಇದೆ. ಇಪ್ಪತ್ತು ದಿನಗಳ ರಜೆಯಿಂದ ಮೊನ್ನೆ ವಾಪಸು ಬಂದು ನೋಡಿದರೆ ೧೦೦೦+ ಅಪ್‍ಡೇಟ್‍ಗಳನ್ನು ತೋರಿಸುತ್ತಿದೆ ರೀಡರ್! ಯಾವಾಗ ಓದಿ ಮುಗಿಸುತ್ತೇನೋ?

ಅವೆಲ್ಲ ಏನೇ ಇದ್ದರೂ, ಮುಂಬಯಿಯಲ್ಲಿ ಭಯೋತ್ಪಾದಕರ ದಾಳಿಯಾದಾಗ ಒಬ್ಬ ಬ್ಲಾಗರ್ ನೀಡಿದ ಕರೆಗೆ ಸ್ಪಂದಿಸಿ ನಾವು ಎಷ್ಟೊಂದು ಬ್ಲಾಗರುಗಳು ನಮ್ಮ ಬ್ಲಾಗುಗಳ ಹಣೆಗೆ ಕಪ್ಪುಪಟ್ಟಿ ಹಚ್ಚಿಕೊಂಡಿದ್ದು; ಯಾರದೋ ಬ್ಲಾಗಿನ ಹುಟ್ಟುಹಬ್ಬ ಎಂದರೆ ಅಲ್ಲಿ ಹೋಗಿ ಅವರಿಗೆ ಶುಭಾಶಯ ಹೇಳುವುದು; ಒಬ್ಬರ ಬ್ಲಾಗ್ ಮೆಚ್ಚಿ ಮತ್ತೊಬ್ಬರು ಬರೆಯುವುದು; ಕಮ್ಯೂನಿಟಿಗಳಲ್ಲಿ ಬ್ಲಾಗರುಗಳು ಪರಸ್ಪರ ಸ್ನೇಹ ಬಯಸಿ ರಿಕ್ವೆಸ್ಟ್ ಕಳುಹಿಸುವುದು -ಎಲ್ಲಾ ಖುಶಿ ಪಡಬೇಕಾದ ವಿಷಯಗಳೇ. ಎಷ್ಟೊಂದು ಬ್ಲಾಗರುಗಳು ಪೋಸ್ಟಿನಿಂದ ಪೋಸ್ಟಿಗೆ ಪಕ್ವವಾಗುತ್ತ ಹೋಗಿರುವುದು ನಮ್ಮ ಕಣ್ಮುಂದಿದೆ. ಯಾವಾಗ ಮುಂದಿನ ಪೋಸ್ಟು ಅಂತ ಕಾಯುವಂತೆ ಮಾಡುವ ಬಹಳಷ್ಟು ಬ್ಲಾಗರ್ ಗೆಳೆಯ-ಗೆಳತಿಯರು ನಮ್ಮೊಂದಿಗಿದ್ದಾರೆ. ಈಗೀಗ ಬ್ಲಾಗುಗಳು ಇವೆಂಟ್ ನೋಟಿಫಿಕೇಶನ್‍ನಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಪರಿಸರ, ಸಮಾಜ, ಪುಸ್ತಕ, ಸಂಗೀತ, ಸಿನೆಮಾಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಬ್ಲಾಗುಗಳು ಶುರುವಾಗಿವೆ. ಅನೇಕ ಹಿರಿಯರು ಉತ್ಸಾಹದಿಂದ ಬ್ಲಾಗಿಸುತ್ತಿದ್ದಾರೆ. ಸುಮಾರು ಬ್ಲಾಗರುಗಳು ಬ್ಲಾಗ್ ಮುಚ್ಚುತ್ತಿದ್ದೇನೆ, ಅಲ್ಪವಿರಾಮ, ಪೂರ್ಣವಿರಾಮ ಅಂತೆಲ್ಲ ಹೇಳಿಕೆ ಕೊಟ್ಟೂ ನಂತರ ಮತ್ತೆ ಬರೆಯಲು ಶುರು ಮಾಡಿದ್ದಾರೆ.. ಹಾಗೇ ಇದು: ಬಿಟ್ಟೇನೆಂದರೂ ಬಿಡದೀ ಮಾಯೆ!

ಬಹುಶಃ ಬ್ಲಾಗಿಂಗಿನ ದೊಡ್ಡ ಲಾಭವೆಂದರೆ ಇದು ನಮ್ಮ ಪ್ರತಿಭೆಗೆ ಕಲ್ಪಿಸಿಕೊಡುವ ವೇದಿಕೆ, ಆ ಪ್ರತಿಭೆಯನ್ನು ಮುಂದುವರೆಸಲು ಸಿಗುವ ಪ್ರೋತ್ಸಾಹ, ತಿದ್ದಿಕೊಳ್ಳಲು ಅವಕಾಶಗಳು, ಗಳಿಸಿಕೊಡುವ 'ಐಡೆಂಟಿಟಿ' ಮತ್ತು ಸಂಪಾದಿಸಿಕೊಡುವ ಹೊಸ ಸ್ನೇಹಗಳು. ಅದು ದುರುಪಯೋಗವಾಗದಂತೆ ಕಾಯ್ದುಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮೂರು ವರ್ಷಗಳಿಂದ ಕನ್ನಡ ಬ್ಲಾಗಿಂಗನ್ನು ಶ್ರದ್ಧೆಯಿಂದಲೇ ಗಮನಿಸಿಕೊಂಡು ಬರುತ್ತಿರುವ ಒಬ್ಬ ಬ್ಲಾಗರ್ ಆಗಿ ನಾನು ಇಷ್ಟೆಲ್ಲ ಬರೆಯಬೇಕಾಯ್ತು ಅಷ್ಟೇ.

ಒಂದೊಂದೇ ಹುಲ್ಲುಕಡ್ಡಿ ಸೇರಿಸುತ್ತ ನಾವೇ ಕಟ್ಟಿಕೊಂಡಿರುವ ಗುಬ್ಬಚ್ಚಿ ಗೂಡು ಇದು.. ಇಲ್ಲಿ ಕಚ್ಚಾಟಗಳು ಬೇಡ. ಪರಸ್ಪರ ಪ್ರೀತಿಯಿಂದ ಇರೋಣ. ಗುಬ್ಬಚ್ಚಿ ಗೂಡಿನಿಂದ ಹೊರಬೀಳುವ ಚಿಲಿಪಿಲಿ ಕಲರವ ಕೇಳುಗರ ಕಿವಿಗೆ ಇಂಪಾಗಿರಲಿ; ನಮ್ಮ ವರ್ತನೆ ನೋಡುಗರ ಕಣ್ಣಿಗೆ ತಂಪಾಗಿರಲಿ.

ಈ ಮೂರು ವರ್ಷದ ಹಾದಿಯಲ್ಲಿ ಸಿಕ್ಕ ಎಲ್ಲರಿಗೂ ನನ್ನ ಧನ್ಯವಾದ. ಪಯಣ ಮುಂದುವರೆಯುತ್ತದೆ. ಹ್ಯಾಪಿ ಬ್ಲಾಗಿಂಗ್. ಲವ್ಯೂ ಆಲ್!

Wednesday, April 15, 2009

ಮೀಸೆ ತೆಗೆದಾಗ..

ನನ್ನ ಮಹತ್ವದ ಯೋಜನೆಗಳಲ್ಲಿ ಇಂಥವು ಬಹಳ: ಹೇಗಾದರೂ ಮಾಡಿ, ಇನ್ನು ಯಾರೂ ‘ಕಡ್ಡಿ ಫೈಲ್ವಾನ್’ ಅಂತ ಕರೆಯದ ಹಾಗೆ ದಪ್‍ಪ್‍ಪ್ಪ ಆಗಬೇಕು (ಚಿಕನ್ ತಿನ್ನು, ಪ್ರತಿದಿನ ಒಂದೇ ಒಂದು ಪಿಂಟ್ ಬಿಯರ್ ಕುಡಿ -ಗೆಳೆಯರ ಸಲಹೆಗಳು). ಈ ತಿಂಗಳ ಒಂದನೇ ತಾರೀಖಿನಿಂದ ಜಿಮ್ಮಿಗೆ ಸೇರಿಕೊಂಡು ಬಿಡಬೇಕು (ಸುಮಾರು ಒಂದನೇ ತಾರೀಖುಗಳು ಕಳೆದುಹೋಗಿವೆ). ಇಷ್ಟರೊಳಗೆ ಯಾರಿಂದಲೂ ಕಂಡುಹಿಡಿಯಲಾಗದ ವಸ್ತುವೊಂದನ್ನು ಕಂಡುಹಿಡಿಯಬೇಕು (ಬಚಾವ್, ನಾನು ವಿಜ್ಞಾನಿಯಲ್ಲ). ಒಂದು ದಿನ, ಯಾರೆಂದರೆ ಯಾರಿಗೂ ಹೇಳದೇ, ಸಿಕ್ಕಿದ ಟ್ರೈನ್ ಹತ್ತಿ, ಗೊತ್ತೇ ಇಲ್ಲದ ಊರಿಗೆ ಹೋಗಿಬಿಡಬೇಕು. ಒಂದು ತಿಂಗಳು ಅಲ್ಲಿ ಭೂಗತನಾಗಿದ್ದು ವಾಪಸು ಬರಬೇಕು (ಇದನ್ನು ಮಾತ್ರ ಮಾಡಿಯೇ ತೀರುವವನಿದ್ದೇನೆ!).

ಇವುಗಳ ಸಾಲಿಗೇ ಸೇರುವ ನನ್ನ ಮತ್ತೊಂದು ಯೋಜನೆ ಎಂದರೆ, ‘ಒಮ್ಮೆ ಮೀಸೆ ಬೋಳಿಸಿ ನೋಡಬೇಕು’ ಎಂಬುದು! ನೀವು ಕೇಳಬಹುದು, ‘ಮೀಸೆ ತೆಗೆಯುವುದು ಅಂತಹ ಮಹತ್ವದ ಯೋಜನೆ ಹೇಗೆ? ಅದೇನು ಹಿಮಾಲಯ ಹತ್ತಿಳಿಯೋ ಹಾಗಾ?’ ಎಂದು. ನನ್ನ ಪ್ರಕಾರ ಅದು ಮಹತ್ವದ ಯೋಜನೆಯೇ. ಏಕೆಂದರೆ, ನನಗೆ ಬೋಳಿಸಬೇಕೆಂದಿರುವುದು ನನ್ನದೇ ಮೀಸೆ! (೧) ನೀವು ಯಾವಾಗಲೂ ಮೀಸೆ ತೆಗೆದಿರುವವರೇ ಆಗಿದ್ದರೆ ಅಥವಾ (೨) ನೀವು ಪದೇ ಪದೇ ಮೀಸೆ ತೆಗೆದು-ಮತ್ತೆ ಬಿಟ್ಟು-ಮತ್ತೆ ತೆಗೆದು -ನಿಮ್ಮ ಮುಖವನ್ನು ಫ್ರೆಂಚು, ಗಡ್ಡ, ಲಾಕು ಅಂತೆಲ್ಲ ಪ್ರಯೋಗಗಳಿಗೆ ಒಳಪಡಿಸುವ ಗುಂಪಿಗೆ ಸೇರಿದವರಾದರೆ ಅಥವಾ (೩) ನೀವು ಇನ್ನೂ ಮೀಸೆಯೇ ಬಂದಿಲ್ಲದ ಎಳೆಯ ಹುಡುಗನಾಗಿದ್ದರೆ ಅಥವಾ (೪) ನೀವು ಹೆಂಗಸಾಗಿದ್ದರೆ -ನಾನೀಗ ಹೇಳುತ್ತಿರುವುದು ಸರಿಯಾಗಿ ಅರ್ಥವಾಗದೇ ಹೋಗಬಹುದು. ಅಥವಾ ತಮಾಷೆ ಅನ್ನಿಸಬಹುದು. ಆದರೆ ನೀವು ‘ಮೀಸೆ ತೆಗೆದರೆ ನಾನು ಹೇಗೆ ಕಾಣುತ್ತೇನೋ’ ಎಂಬ ಭಯ ಇರುವ ನನ್ನಂಥವರ ಗುಂಪಿಗೆ ಸೇರಿದವರಾದರೆ ನನ್ನ ಕಷ್ಟ ನಿಮಗೆ ಅರ್ಥವಾಗುತ್ತದೆ.

ನನಗೆ ನನ್ನ ಮೂಗಿನ ಕೆಳಗೆ ಯಾವಾಗ ಈ ಕಪ್ಪು ಕೂದಲುಗಳು ಮೂಡಿದವೆಂಬ ದಿನಾಂಕ ನೆನಪಿಲ್ಲ. ನಮ್ಮ ಎಸ್ಸೆಸ್ಸೆಲ್ಸಿ ಬ್ಯಾಚಿನ ಗ್ರೂಪ್ ಫೋಟೋದಲ್ಲಿ ಹೌದೋ ಇಲ್ಲವೋ ಎಂಬಂತೆ ಕಾಣುವ ಇದು, ಕಾಲೇಜ್ ಗ್ರೂಪ್ ಫೋಟೋದಲ್ಲಿ ಸ್ವಲ್ಪ ಢಾಳಾಗೇ ಕಾಣುತ್ತೆ. ಬಹುಶಃ ನಾನು ಹೈಸ್ಕೂಲಿನ ಡೆಸ್ಕಿನ ಮೇಲೆ ಕೈವಾರದಿಂದ ಚಿತ್ರ ಕೊರೆಯುತ್ತಿದ್ದಾಗಲೇ ನನ್ನ ಮೇಲ್ದುಟಿಗಳ ಮೇಲೆ ಶುರುವಾದ ಈ ಶ್ಮಶ್ರುಬೆಳೆ, ಹಾಗೇ ಅವ್ಯಾಹತವಾಗಿ ಮುಂದುವರೆದು ಕಾಲೇಜಿನ ರಿಸಲ್ಟ್ ನೋಡಲು ಹೋಗುವ ವೇಳೆಗೆ ಕಟಾವಿಗೆ ಬಂದಿರಬೇಕು. ಅದಕ್ಕೇ ಮತ್ತೆ, ರಿಸಲ್ಟ್ ನೋಡಿ ವಾಪಸ್ ಬರುತ್ತಿದ್ದಾಗ ಸಿಕ್ಕ ಸದಾಶಿವನೆಂಬ ಹೈಸ್ಕೂಲು ಗೆಳೆಯ ನನ್ನನ್ನು ನಿಲ್ಲಿಸಿ ‘ಓಹ್, ಸುಶ್ರುತ ಅಲ್ಲೇ ನೀನು? ಗುರ್ತೇ ಸಿಕ್ಕದಿಲ್ಲಲಾ ಮಾರಾಯಾ! ಆವಾಗ ಸಣ್ಣಕ್ ಇದ್ದೆ; ಈಗ ಮೀಸೆ-ಗೀಸೆ ಬಂದು ಒಳ್ಳೇ ದೊಡ್ ಗಂಡ್ಸಿನ್ ಹಂಗೆ ಕಾಣ್ತಿದೀಯಾ’ ಅಂದದ್ದು!

ಮತ್ತು ಅವತ್ತೇ ನಾನು ಯಾರಿಗೂ ಕಾಣದಂತೆ ಅಪ್ಪನ ರೇಸರ್ ಸೆಟ್ಟಿನ ಜೊತೆಗಿದ್ದ ಪುಟ್ಟ ಕತ್ತರಿಯಿಂದ ಹಾಗೆ ಉದ್ದುದ್ದ ಬೆಳೆದಿದ್ದ ಮೀಸೆಯ ಕೂದಲುಗಳನ್ನು ಕತ್ತರಿಸಿ ‘ಟ್ರಿಮ್’ ಮಾಡಿಕೊಂಡದ್ದು! ಅಪ್ಪನಿಗೆ ಗೊತ್ತಾದರೂ ಸುಮ್ಮನಿದ್ದದ್ದು!

ಅದೆಲ್ಲಾ ಇರಲಿ, ಒಂದಂತೂ ಸತ್ಯ: ನನಗೆ ಬರಬೇಕಿದ್ದ ಕಾಲಕ್ಕೆ ಮೀಸೆ ಬಂದಿತ್ತು. ಕನ್ನಡಿ ನೋಡಿಕೊಂಡಾಗಲೆಲ್ಲ ‘ನೀನು ಗಂಡಸು ಕಣೋ’ ಅಂತ ಹೇಳುತ್ತಿತ್ತು. ಮತ್ತೆ, ಆವಾಗ ‘ಹವ್ಯಕ ಬ್ರಾಹ್ಮಣರಲ್ಲಿ ವಧುಗಳ ಕೊರತೆ’ ಇನ್ನೂ ಶುರುವಾಗಿರದಿದ್ದರಿಂದಲೋ ಏನೋ, ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ ಎಂಬ ಕಾಶಿನಾಥನ ಚಿತ್ರಗೀತೆ ನನ್ನ ಗುನುಗುಗಳಲ್ಲೊಂದಾಗಿತ್ತು.

ನಾನು ನೀವಿದ್ದಕ್ಕೇ ಖುಶಿಯಾಯ್ತೋ ಎಂಬಂತೆ ಮೀಸೆ ಬೆಳೆಯುತ್ತಾ ಹೋಯ್ತು. ಬೆಂಗಳೂರಿನಲ್ಲಿ ವಿವಿಧ ರೀತಿಯ ಮೀಸೆ ಬಿಟ್ಟವರೆಲ್ಲ ಕಾಣುತ್ತಿದ್ದರು. ರಾಜ್‌ಕುಮಾರ್ ಥರ ಸಣ್ಣಮೀಸೆ, ವೀರಪ್ಪನ್ ಥರ ಹುರಿಮೀಸೆ, ಚಾಪ್ಲಿನ್ ಥರ ಪುಟ್ಟ ಮೀಸೆ (ಪ್ಲೀಸ್, ಉದಾಹರಣೆಗಾಗಿ ಹೇಳಿದ್ದು ಅಷ್ಟೇ), ಹಾಗೇ ಚೂಪುಮೀಸೆ, ಚುಪುರುಮೀಸೆ, ಬಿಲ್ಲಿನಂತಹ ಮೀಸೆ, ಇನ್ನೂ ಏನೇನೋ. ಆದರೆ ಇವರೆಲ್ಲರಿಗಿಂತ ನನಗೆ ಈ ಮೀಸೆ ತೆಗೆದವರೇ ಗ್ರೇಟ್ ಗಂಡಸರಂತೆ ಕಾಣುತ್ತಿದ್ದರು. ಅವರಂತೆ ನಾನೂ ಒಮ್ಮೆ ಮೀಸೆಯನ್ನು ಪೂರ್ತಿಯಾಗಿ ತೆಗೆದು ನೋಡಬೇಕು ಅಂತ ಅನ್ನಿಸುತ್ತಿತ್ತು. ಆದರೆ ಧೈರ್ಯ ಸಾಲುತ್ತಿರಲಿಲ್ಲ.

ನನ್ನ ಹಳೆಯ ಆಫೀಸಿನ ಕಲೀಗು ವಿಕ್ರಮ್, ನಾನು ಜಾಬ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗದೇ ಇರುತ್ತಿದ್ದುದಕ್ಕೆ ಕಾರಣ ನನ್ನ ಮೀಸೆಯೇ ಅಂತ ವಾದಿಸುತ್ತಿದ್ದ. ಅವನ ಪ್ರಕಾರ ಮೀಸೆಯಿದ್ದವರು ಇನ್ನೂ ‘ಪ್ರೌಢತ್ವ ಪ್ರಾಪ್ತವಾಗದವರು’. ಮೀಸೆ ತೆಗೆದರೂ ಗಂಡಸಿನ ಹಾಗೆ ಕಾಣಿಸುವವನೇ ನಿಜವಾದ ಗಂಡಸು ಎಂಬುದವನ ತರ್ಕವಾಗಿತ್ತು. "ನೀವು ಒಮ್ಮೆ ಮೀಸೆ ತೆಗ್ದು ನೋಡಿ ಸುಶ್ರುತ್.. ಆಗ ಮುಖದಲ್ಲಿ ಸೀರಿಯಸ್‌ನೆಸ್ ಬರುತ್ತೆ. ಹ್ಯಾಗೆ ಪಟ್ಟಂತ ಸೆಲೆಕ್ಟ್ ಆಗ್ತೀರೋ ನೋಡಿ ಜಾಬ್‌ಗೆ!" ಅಂದಿದ್ದ ವಿಕ್ರಮ್.

ಆದರೆ ಮೀಸೆ ತೆಗೆದುಬಿಟ್ಟರೆ ನಾನೆಲ್ಲಿ ಹುಡುಗಿ ಥರ ಕಾಣ್ತೀನೋ ಎಂಬುದು ನನ್ನ ಭಯ. ಕನ್ನಡಿ ಮುಂದೆ ನಿಂತಾಗ ನನ್ನ ತೋರುಬೆರಳುಗಳಿಂದ ಮೀಸೆ ಮುಚ್ಚಿಕೊಂಡು ನಾನು ಮೀಸೆ ತೆಗೆದಾಗ ಹೇಗೆ ಕಾಣಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಕಲ್ಪನೆಯೇ ಸರಿಯಾಗಿ ಆಗುತ್ತಿರಲಿಲ್ಲ. ಕೊನೆಗೆ ಫೋಟೋಶಾಪಿನಲ್ಲಿ ನನ್ನ ಫೋಟೋದ ಮೀಸೆ ಅಳಿಸಿ ನೋಡಿದೆ. ಆಗ ಅದೊಂಥರಾ ಪ್ರೇತದ ಹಾಗೆ ಕಂಡಿತು. ನೋಡಿದ ನನ್ನ ಕಲೀಗುಗಳು ನಗಾಡಿಬಿಟ್ಟರು. ಇದರ ಸಹವಾಸವೇ ಬೇಡ ಅಂತ ಸುಮ್ಮನಾಗಿಬಿಟ್ಟೆ.

ಮೊನ್ನೆ ನನ್ನ ರೂಮ್‌ಮೇಟು ಊರಿಗೆ ಹೋಗಿದ್ದ ಭಾನುವಾರ ನಾನೊಬ್ಬನೇ ಮನೆಯಲ್ಲಿದ್ದೆ. ಮಾಡಲಿಕ್ಕೇನೂ ಕೆಲಸವಿರಲಿಲ್ಲ, ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಸ್ನಾನಕ್ಕೆ ಹೊರಟವನಿಗೆ ಕನ್ನಡಿ ಕಂಡಿದ್ದೇ ಅಪಶಕುನವಾಗಿಹೋಯಿತು. ಈ ಕನ್ನಡಿ ದಾಡಿ ಮಾಡದ ನನ್ನ ಮುಖವನ್ನು ಪ್ರಾಮಾಣಿಕವಾಗಿ ಹಾಗೇ ತೊರಿಸಿಬಿಟ್ಟಿತು. ತಕ್ಷಣ ‘ಓಹ್, ಶೇವಿಂಗ್ ಮಾಡ್ಕೋಬೇಕು’ ಎಂಬುದು ಹೊಳೆದುಬಿಟ್ಟಿತು. ಸರಿ, ಮುಖದ ತುಂಬ ಕ್ರೀಮ್ ಹಚ್ಚಿಕೊಂಡು, ‘ಜಿಲೆಟ್ಟಿ ಸಖತ್ತಾಗಿ ಬರುತ್ತೆ’ ಅಂದಿದ್ದ ಗೆಳೆಯನ ಮಾತು ಕೇಳಿ ತಂದುಕೊಂಡಿದ್ದ ರೇಸರಿನಿಂದ ಶೇವ್ ಮಾಡಿಕೊಳ್ಳತೊಡಗಿದೆ. ಈ ಏರ್?ಟೆಲ್ ಕಂಪನಿಯವರಿಗೆ ಭಾನುವಾರವೂ ರಜೆ ಇಲ್ಲವೋ ಅಥವಾ ಉಪೇಂದ್ರ ಮಾತಾಡಿದ ಕಾಲರ್‌ಟ್ಯೂನನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವವರೆಗೆ ನಿದ್ದೆ ಮಾಡುವುದಿಲ್ಲ ಅಂತ ಹರಕೆ ಹೊತ್ತುಕೊಂಡಿದ್ದಾರೋ ಏನೋ, ಸರಿಯಾಗಿ ನನ್ನ ರೇಸರ್ ಕಪಾಳದಿಂದ ಕೆಳಕ್ಕಿಳಿಯುತ್ತಿದ್ದಾಗ ರಿಂಗ್ ಮಾಡಿದರು. ಅದ್ಯಾವಾಗ ಆ ಪರಿ ಹೈ ವಾಲ್ಯೂಮಿನಲ್ಲಿಟ್ಟುಕೊಂಡಿದ್ದೆನೋ ಏನೋ, ಒಳ್ಳೇ ಅಕ್ಕಚ್ಚಿಗೆ ಕೊಡದ ಜರ್ಸಿ ದನದ ಥರ ಕೂಗಿಕೊಂಡಿತು ನನ್ನ ಮೊಬೈಲು. ಬೆಚ್ಚಿಬಿದ್ದವನಂತೆ ತಿರುಗಿ ನೋಡಿದೆ, ಓಡಿ ಹೋಗಿ ಟೀಪಾಯಿಯ ಮೇಲಿದ್ದ ಮೊಬೈಲನ್ನು ಕ್ರೀಮ್ ಹತ್ತದಂತೆ ಹುಷಾರಾಗಿ ಕಿವಿಗಿಟ್ಟುಕೊಂಡೆ, ಉಪ್ಪಿ ಶುರುಮಾಡುತ್ತಿದ್ದಂತೆಯೇ ‘ಥೂ, ಈ ಏರ್‌ಟೆಲ್ ಮನೆ ಹಾಳಾಗ!’ ಅಂತ ಬೈದುಕೊಂಡು ಕಟ್ ಮಾಡಿದೆ, ತಿರುಗಿ ಬಂದು ಕನ್ನಡಿಯೆದುರು ನಿಂತೆ. ಜಿಲೆಟ್ಟಿ ಒಂದು ಮಹತ್ಕಾರ್ಯ ಮಾಡಿತ್ತು.

ನನಗೆ ಅದುವರೆಗೆ ಕಲ್ಪನೆಯೇ ಇರಲಿಲ್ಲ: ಈ ಜಿಲೆಟ್ಟಿ, ಮೊಬೈಲು, ಉಪೇಂದ್ರ, ಏರ್‌ಟೆಲ್ಲು, ಕನ್ನಡಿ ಎಲ್ಲರಿಗೂ ನನ್ನ ಮೀಸೆಯ ಮೇಲೆ ಅದೆಂತಹ ಹೊಟ್ಟೆಕಿಚ್ಚಿತ್ತು ಅಂತ. ಅಷ್ಟು ವರ್ಷಗಳಿಂದ ಒಬ್ಬ ಮುತ್ತೈದೆ ಹಣೆಯ ಕುಂಕುಮವನ್ನು ಜೋಪಾನವಾಗಿ ಕಾಯ್ದುಕೊಂಡು ಬರುವಂತೆ ನಿಗಾ ವಹಿಸಿಕೊಂಡು ಬಂದಿದ್ದ ನನ್ನ ಮೀಸೆಯ ಬಲಭಾಗವನ್ನು ಜಿಲೆಟ್ಟಿ ಕ್ಷಣದಲ್ಲಿ ಸವರಿಹಾಕಿತ್ತು! ಕರೆಂಟ್ ಹೊಡೆದವನಂತೆ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿ ನೋಡಿಕೊಂಡೆ. ನನ್ನ ಪ್ರತಿಬಿಂಬವೂ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿತೇ ಹೊರತು ಮೀಸೆಯ ಸವರಿದ ಜಾಗದಲ್ಲಿ ಏನೂ ಬದಲಾವಣೆ ಆಗಲಿಲ್ಲ. ನನಗೆ ಸಿ‌ಇಟಿ ಫೇಲಾದಷ್ಟು ಬೇಸರವಾಗಿ ಕುಸಿದು ಕುಳಿತೆ.

ಸಿನಿಮಾಗಳಲ್ಲಿ ಇಂತಹ ಪ್ರಕರಣ ನಡೆದದ್ದು ನೋಡಿ ಗೊತ್ತಿತ್ತೇ ಹೊರತು ನನಗೆ ಇಷ್ಟು ಹತ್ತಿರದಲ್ಲಿ ದುರ್ಘಟನೆಯೊಂದು ಸಂಭವಿಸಿದಾಗ ಏನು ಮಾಡಬೇಕೆಂದೂ ಗೊತ್ತಿರಲಿಲ್ಲ. ಮೀಸೆಯೆಂದರೆ ಮುಖದ ಮೇಲಿನ ಕಪ್ಪು ಕಾಮನಬಿಲ್ಲಿನಂತೆ. ಅದಿದ್ದರೇನೇ ಗಂಡಸಿನ ಮುಖಕ್ಕೊಂದು ಲಕ್ಷಣ. ಅದೇ ಇಲ್ಲದಿದ್ದರೆ?

ಪಾರ್ಶ್ವವಾಯು ಹೊಡೆದವನಂತೆ ಕೂತಿದ್ದ ನನ್ನನ್ನು ಕರೆದೊಯ್ಯಲು ಯಾವ ಆಂಬುಲೆನ್ಸೂ ಬರುವ ಲಕ್ಷಣ ಕಾಣಲಿಲ್ಲ. ಒಂದೆರಡು ಹನಿ ಕಣ್ಣೀರಾದರೂ ಉದುರಿಸೋಣವೆಂದುಕೊಂಡವನು ಸೀನ್ ಸ್ವಲ್ಪ ಜಾಸ್ತಿ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. ಅರ್ಧ ಭಾಗ ಮಾತ್ರ ಉಳಿದಿದ್ದ ನನ್ನ ಮೀಸೆಯನ್ನು ಮತ್ತೊಮ್ಮೆ ಕಣ್ತುಂಬ ನೋಡಿಕೊಂಡೆ. ಜಿಲೆಟ್ಟಿಗೆ ಬಲಿಯ ಜೀವ ಪೂರ್ತಿ ತೆಗೆದುಕೊಳ್ಳುವಂತೆ ಸೂಚಿಸಿದೆ.

ಸ್ನಾನ ಮಾಡಿ ಹೊರಬರುವಾಗ ‘ಸಧ್ಯ, ಇವತ್ತು ರೂಮ್‌ಮೇಟ್ ಮನೇಲಿಲ್ಲ’ ಅಂತ ನಿಟ್ಟುಸಿರು ಬಿಟ್ಟೆ. ಒಬ್ಬನೇ ಇದ್ದಾಗ ಅವಮಾನವಾಗುವುದಕ್ಕೂ ನಾಲ್ಕು ಜನರ ಎದುರಿಗೇ ಆಗುವುದಕ್ಕೂ ವ್ಯತ್ಯಾಸವಿರುತ್ತದೆ. ಅವನಿದ್ದಿದ್ದರೆ ನನ್ನ ಶೇವಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಉಗಿಯುತ್ತಿದ್ದ. ಈಗಾದರೆ ಹಾಗಲ್ಲ; ನಾನು ಮನುಷ್ಯಲೋಕವನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧನಾಗಲಿಕ್ಕೆ ಸಮಯವಿದೆ. ಹಾಗಂದುಕೊಂಡು, ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತೆ. ಜಗತ್ತಿನ ಪೆಕರರ ಸಂಘದ ಅಧ್ಯಕ್ಷನೇ ನಾನಿರಬೇಕು ಅನ್ನಿಸಿತು. ಸಾವರಿಸಿಕೊಂಡೆ. ಸಮಾಧಾನ ಮಾಡಿಕೊಂಡೆ. ಒಂದಲ್ಲಾ ಒಂದು ದಿನ ಮೀಸೆ ತೆಗೆದು ನೋಡಬೇಕು ಅಂದುಕೊಂಡಿದ್ದ ನನ್ನ ಯೋಜನೆಯಂತೂ ಈಡೇರಿದೆ, ಇನ್ನು ಯಾರು ಏನೇ ಅಂದರೂ ಶಾಂತಚಿತ್ತದಿಂದ ಸ್ವೀಕರಿಸಬೇಕು ಅಂತ ತೀರ್ಮಾನಿಸಿದೆ. ನನಗೆ ನಾನೇ ‘ಬಾಲಿವುಡ್ ಹೀರೋ ಹಾಗೆ ಕಾಣ್ತಿದೀಯಾ ಬಿಡು’ ಅಂತ ಬೆನ್ತಟ್ಟಿಕೊಂಡೆ.

ದಿನವೂ ಹೋಗುವ ಹೋಟೆಲ್ಲಿಗೆ ಹೋಗಲು ಭಯವಾಗಿ ಹೊಸ ಹೋಟೆಲ್ಲಿಗೆ ಹೋದೆ. ಆದರೂ ಕ್ಯಾಶಿಯರ್ರಿನಿಂದ ಹಿಡಿದು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಆವತ್ತು ಯಾವ ಗೆಳೆಯರನ್ನೂ ಕಾಣಲು ಹೋಗಲಿಲ್ಲ. ಮರುದಿನ ಆಫೀಸಿಗೆ ಹಿಂಜರಿಯುತ್ತಲೇ ಹೋದೆ. ಕಲೀಗುಗಳ ಹೋ ನಗು. "ಗರ್ಲ್ ಫ್ರೆಂಡ್ ಚುಚ್ಚುತ್ತೆ ಅಂದ್ಲೇನ್ರೀ?"ಯಿಂದ "ಯಕ್ಷಗಾನದಲ್ಲಿ ಸ್ತ್ರೀಪಾತ್ರ ಮಾಡೋಕೆ ಹೋಗಿದ್ಯಾ?" ತನಕ ಪ್ರತಿಕ್ರಿಯೆಗಳು, ಹೀಯಾಳಿಕೆಗಳು, ಕಾಲೆಳೆಯುವಿಕೆಗಳು. ಅಷ್ಟು ದಿನ ಒಂದೂ ಮಾತಾಡದ ಕಲೀಗೊಬ್ಬಳು "ಐ ಲೈಕ್ ಗಯ್ಸ್ ವಿಥ್ ಮಸ್ಟಾಕ್" ಎಂದುಬಿಟ್ಟಳು. ಆದರೂ ‘ನೆನಪಿಗಿರಲಿ’ ಅಂತ ಒಂದೆರಡು ಫೋಟೋ ನಾನೇ ತೆಗೆದುಕೊಂಡೆ. ಧೈರ್ಯ ಮಾಡಿ ಆರ್ಕುಟ್ಟಿಗೂ ಹಾಕಿದೆ. ಕೆಲವರು ‘ಹಾರಿಬಲ್’ ಅಂದರು, ಕೆಲವರು ‘ಮದುವೆ ಯಾವಾಗ?’ ಕೇಳಿದರು, ಇನ್ನು ಕೆಲವರು ‘ಕೆಟ್ಟದಾಗಿ ಕಾಣ್ತೀಯ. ತಕ್ಷಣ ಛೇಂಜ್ ಮಾಡ್ದಿದ್ರೆ ಒದೆ ತಿಂತೀಯ’ ಅಂತ ಬೆದರಿಕೆ ಹಾಕಿದರು. ರೂಮ್‌ಮೇಟು ತಾನಿಲ್ಲದಾಗ ಇಂತಹ ಅಚಾತುರ್ಯವೊಂದು ಘಟಿಸಿದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ. ಮೊನ್ನೆ ಮೇಫ್ಲವರಿಗೆ ಹೋಗಿದ್ದಾಗ ಮೋಹನ್ ಸರ್ ಕೈಕುಲುಕಿ ‘ಬೇಗ ಮೀಸೆ ಬರ್ಲಿ’ ಅಂತ ಹಾರೈಸಿಬಿಟ್ಟರು!

ಕಳೆದುಕೊಂಡಾಗಲೇ ಇದ್ದುದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ.. ನನ್ನ ಮೀಸೆ, ಅದು ಇಲ್ಲವಾದಮೇಲೆ ಅದಕ್ಕೆ ಭಾರೀ ಡಿಮಾಂಡ್ ಶುರುವಾಗಿದೆ. ಆದಷ್ಟೂ ಬೇಗ ಬೆಳೆಯಲಪ್ಪಾ ಅಂತ ನಂಬದ ದೇವರಲ್ಲೆಲ್ಲಾ ಪ್ರಾರ್ಥಿಸುತ್ತಿದ್ದೇನೆ. ಮೊರೆ ಕೇಳಿದೆಯಿರಬೇಕು, ಈಗ ಈ ಮಾನಿಟರ್ ಆಫ್ ಮಾಡಿದರೆ ಕಾಣುವ ನನ್ನ ಬಿಳೀ ಮೋರೆಯ ಅಸ್ಪಷ್ಟ ಪ್ರತಿಬಿಂಬದಲ್ಲಿ, ಸಣ್ಣ ಸಣ್ಣ ಕಪ್ಪುಚುಕ್ಕಿಗಳು ಒತ್ತೊತ್ತಾಗಿ ಮೂಡಿರುವುದು ಗೋಚರಿಸುತ್ತಿದೆ. ರಾತ್ರಿಯ ಆಕಾಶವನ್ನು ‘ಇನ್ವರ್ಟ್ ಕಲರ್ಸ್’ ಮಾಡಿದ ಹಾಗೆ.