Friday, October 31, 2008

ಎಲ್ಲಾದರೂ ಇರು...

ರಚನೆ: ಕುವೆಂಪು; ರಾಗ ಸಂಯೋಜನೆ: ಸಿ. ಅಶ್ವತ್ಥ್; ಗಾಯಕ: ಡಾ| ರಾಜ್‍ಕುಮಾರ್; ನಿರ್ದೇಶನ ಮತ್ತು ಚಿತ್ರೀಕರಣ: ಟಿ.ಎಸ್. ನಾಗಾಭರಣ





ನನ್ನಿಷ್ಟದ ವೀಡಿಯೋ ಇದು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Thursday, October 23, 2008

ಆಕಾಶಬುಟ್ಟಿ

ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.

ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.

'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!

'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!

ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..

'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!

ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..

ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..

ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.

ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!

ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.

ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.

ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.

* *

ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.

Wednesday, September 24, 2008

ಪನ್ನೀರಿನ ಹುಡುಗಿ

ಶಹರದ ಛತ್ರದಿ ಗೆಳೆಯನ ಮದುವೆ
ಕರೆದಿಹ ತಪ್ಪದೇ ಬರಬೇಕೆಂದು
'ಆರತಕ್ಷತೆಗೂ ಬಾರದೆ ಇದ್ದರೆ
ಮಾತೇ ಆಡಿಸೆ' ಎಂದಿಹನು

ಗರಿಗರಿ ಜುಬ್ಬಾ, ಬಗಲಿಗೆ ಅತ್ತರು,
ಹೊಸ ಶೂಗೂನೂ ಪಾಲೀಶು!
ನಾನೂ ಭಾವೀ ಮದುಮಗನಲ್ಲವೇ?
ಇಷ್ಟೂ ಇರದಿರೆ ಬರಿ-ವೇಷ್ಟು!

ದಂಪತಿಗೆಂದೊಂದುಡುಗೊರೆ ಹಿಡಿದು
ಹೊರಟೆನು ನಯ ನಾಜೂಕಿನಲಿ
ಛತ್ರದ ತೋರಣ ಬಾಗಿಲು ಕೋರಿತು
ಸ್ವಾಗತ ಭಾರೀ ಸಂಭ್ರಮದಿ

ಬಾಗಿಲ ಪಕ್ಕದಿ ಗೆಳತಿಯರೊಡನೆ
ನಿಂತಿಹಳ್ಯಾರೋ ಸುಂದರಿಯು
ಬೆಳ್ಳಿಯ ಬಣ್ಣದ ದಾನಿಯ ತುಂಬಾ
ಹಿಡಿದು ಸಿಂಪಿಸಲ್ ಪನ್ನೀರು

ಸೋಕಿರೆ ನನಗೂ ಪರಿಮಳ ನೀರು
ಆಗಿದೆ ಮನಮೈ ರೋಮಾಂಚನವು
ಮುನಿಸನು ನಟಿಸುತ ದಿಟ್ಟಿಸೆ ನಾನು
ಚೆಲುವೆ ಕಿಲಾಡಿಗೆ ನಾಚಿಕೆಯು!

ಛತ್ರವೇ ಇದು? ಕಿನ್ನರ ಲೋಕವೇ?-
ನನಗೋ ದಿಗ್ಭ್ರಮೆ; ಅರೆ ಮರುಳು
ಮರೆತಿಹೆ ನಿಂತಿಹ ಸ್ಥಳವನೆ ಅರೆಚಣ;
ಈ ಚೆಲುವೆಗೋ, ನಗೆ-ಜೋರು!

ಹಂಸದ ಬಣ್ಣದ ಸೀರೆಯ ಹುಡುಗಿ,
ಕೈ ಬೆರಳುಗಳಿಗೆ ಮದರಂಗಿ
ಹಿಮಾಲಯದ ತರು ಬಿಟ್ಟರೆ ಕೆಂಪುಹೂ
ಹೀಗೆಯೆ ಕಾಣಲುಬಹುದೇನೋ?

ನೂಕುನುಗ್ಗಲಲಿ ಸರಿದೆಹೆ ನಾನೂ
ಛತ್ರದ ಸಭೆಯ ಅಂಗಳಕೆ
ಉಡುಗೊರೆ ಸಾಲೋ ಉದ್ದವೇ ಉದ್ದ
ಕಾಯಲೇಬೇಕು ಹಾ, ಆಕಳಿಕೆ!

ಯಾರಿರಬಹುದು ಆ ಎಳೆತರಳೆ-
ಗಂಡಿನ ಕಡೆಯವಳೆ? ಹೆಣ್ಣಿನ ಕಡೆಯವಳೆ?
ಸಭೆಯೊಳಗೊಮ್ಮೆ ಹಾದು ಹೋಗಿರೆ
ಓಹ್! ಕೋಲ್ಮಿಂಚೊಂದು ಹೊಳೆದಂತೆ

ಏನೋ ನೆವದಲಿ ಸುಳಿದಾಡುವಳು
ನನಗೆ ತಿಳಿಯದೆ ಇದರ ಒಳಗುಟ್ಟು?
'ಅಯ್ಯೋ ಹುಡುಗಿ, ನಾ ಮೆಚ್ಚಿಯಾಗಿದೆ
ಸಾಕು ಬಿಡು ನೀ ಈ ಕಸರತ್ತು!'

ಲಗ್ನದ ಗದ್ದಲ ತುಂಬಿದ ಮನೆಯಲಿ
ಇಬ್ಬರು ಕಳ್ಳರು ಇರುವವರೀಗ
ನೋಟವ ಕದ್ದರೆ ಸದ್ದೇ ಆಗದು
ಪ್ರೇಮ ಅರಳುವುದು ಬಲುಬೇಗ

ಮಂಟಪದಲ್ಲಿ ನಿಂತಿಹ ಜೋಡಿಯು
ನಾನು-ಅವಳೇ ಆದಂತೆ;
ಊಟದ ತಟ್ಟೆಯ ಹೋಳಿಗೆಯಲ್ಲೂ
ಅವಳಾ ಮುಖವೇ ಕಂಡಂತೆ!

ನನಗೂ ತಿಳಿದಿದೆ: ಇಂತಹ ಪ್ರೀತಿಗೆ
ಆಯಸ್ಸೆಂಬುದು ಬಲು ಕಮ್ಮಿ
ಛತ್ರದ ಹೊಸ್ತಿಲ ದಾಟಲು ಮರೆವುದು
ಅನಿವಾರ್ಯವೇ ಹೂಂ, ಸರಿಯೆನ್ನಿ.

ಆದರೂ ಈಕೆಯು ಬರುವಳು ಸಂಗಡ
ಜುಬ್ಬದ ವಸಂತ ಪರಿಮಳವಾಗಿ;
ಪನ್ನೀರಿನ ಘಮ ಸುಳಿದಾಗೆಲ್ಲ
ನೆನಪಾಗುವಳು ಕಾಡುವ ಕಣ್ಣಾಗಿ.

[ನನ್ನ ಬ್ಲಾಗಿನ ನೂರನೇ ಪೋಸ್ಟು]

Tuesday, September 02, 2008

ಚೌತಿಯ ಮುನ್ನಾದಿನ, ಗಣೇಶವಾಹನನ ನೆನೆದು...

ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ |

ಕುವೆಂಪುರವರ ಕಥನಕವನ 'ಬೊಮ್ಮನಹಳ್ಳಿಯ ಕಿಂದರಿಜೋಗಿ' ಶುರುವಾಗುವುದೇ ಹೀಗೆ. ಎಲ್ಲಾ ಹಳ್ಳಿಗಳಂತೆ ಅದೂ ಒಂದು ಹಳ್ಳಿ. ಆದರೆ ಅಲ್ಲಿ ಇಲಿಗಳ ಕಾಟ! ಇಲಿ ಯಾವೂರಲ್ಲಿಲ್ಲ ಹೇಳಿ? ಎಲ್ಲಾ ಊರಲ್ಲೂ ಎಲ್ಲರ ಮನೆಯಲ್ಲೂ ಇದ್ದದ್ದೇ ಇಲಿ ಕಾಟ. ಆದರೆ ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ ಮಿತಿ ಮೀರಿದೆ. ಎಷ್ಟು ಅಂತೀರಾ? ಅಲ್ಲಿನ ಇಲಿಗಳಿಗೆ ಹೆದರಿಕೆ ಬೆದರಿಕೆ ಒಂದೂ ಇಲ್ಲ.. ಅವು ನಾಯಿ, ಬೆಕ್ಕುಗಳನ್ನೇ ಕಡಿಯುತ್ತವೆ..! ಅಡುಗೆ ಭಟ್ಟನ ಕೈಯ ಸಟುಗವನ್ನು ಭೀತಿಯಿಲ್ಲದೇ ನೆಕ್ಕುತ್ತವೆ..! ಟೋಪಿ ಒಳಗೇ ಗೂಡು ಮಾಡಿಕೊಳ್ಳುತ್ತವೆ, ಪೇಟದ ಒಳಗೆ ಆಟವಾಡ್ತವೆ, ಗೋಡೆಗೆ ತಗುಲಿಸಿದಂಗಿಯ ಜೇಬನು ದಿನವೂ ಜಪ್ತಿಯ ಮಾಡುತ್ತವೆ..! ಮಲಗಿದ್ದ ಶೇಶಕ್ಕ ಬೆಳಗೆದ್ದು ನೋಡುವಾಗ ಕೇಶವೇ ಇಲ್ಲ! ಸಿದ್ದೋಜೈಗಳು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಅವರ ಜೇಬಿನಿಂದ ಇಲಿಯೊಂದು ಛಂಗನೆ ನೆಗೆದು, ಮಕ್ಕಳೆಲ್ಲಾ ಗೇಲಿ ಮಾಡಿ, ಮೇಷ್ಟರಿಗೆ ತುಂಬಾ ಅವಮಾನವಾಗುತ್ತದೆ.

ಇಲಿಗಳ ಕೊಲ್ಲಲು ಜನಗಳು ಮಾಡಿದ ನಾನಾ ಯತ್ನ ನಿಶ್ಫಲವಾಗಲು ಊರ ಗೌಡ ಈ ಇಲಿಗಳನ್ನು ಕೊಂದವರಿಗೆ ಆರು ಸಾವಿರ ನಾಣ್ಯಗಳನ್ನು ಕೊಡುವುದಾಗಿ ಘೋಶಿಸುತ್ತಾನೆ. ಆಗ ಬರುತ್ತಾನೆ ನಮ್ಮ ಕಿಂದರಿಜೋಗಿ.. ಅವನು ಕಿಂದರಿ ಊದಿದ್ದೇ ಇಲಿಗಳೆಲ್ಲ ಬುಳಬುಳನೆ ಹೊರಬರುತ್ತವೆ, ಜೋಗಿಯನ್ನೇ ಹಿಂಬಾಲಿಸುತ್ತವೆ. ಯಾವ್ಯಾವ ಥರದ ಇಲಿಗಳು ಅವು: ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ, ಸಣ್ಣಿಲಿ, ದೊಡ್ಡಿಲಿ, ಸುಂಡಿಲಿ, ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ -ಎಲ್ಲಾ ಬಂದುವಂತೆ ಓಡೋಡಿ... ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ, ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ, ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು... ಹೀಗೆ ಕುವೆಂಪುರವರ ಶಬ್ದ ಭಂಡಾರದೊಳಗಿದ್ದ ಇಲಿಗಳೆಲ್ಲ ಹೊರಬರುತ್ತವೆ.

ಜೋಗಿ ಕಿಂದರಿ ಊದುತ್ತಾ ಊದುತ್ತಾ ಇಲಿಗಳನ್ನೆಲ್ಲಾ ಮೋಡಿ ಮಾಡಿ ಅವೆಲ್ಲಾ ಹೊಳೆಯಲ್ಲಿ ಮುಳುಗಿ ಸಾಯುವಂತೆ ಮಾಡುತ್ತಾನೆ. ಆಮೇಲಿನ ಕಥೆ ನಿಮಗೆ ಗೊತ್ತೇ ಇದೆ: ಗೌಡ ಮಾತಿಗೆ ತಪ್ಪುತ್ತಾನೆ; ಹೇಳಿದಂತೆ ಆರು ಸಾವಿರ ನಾಣ್ಯ ಕೊಡುವುದಿಲ್ಲ. ಆಗ ಜೋಗಿ ಮತ್ತೆ ಕಿಂದರಿ ಊದುತ್ತಾನೆ, ಊರಿನ ಮಕ್ಕಳೆಲ್ಲಾ ಅವನ ಹಿಂದೆ ಹೋಗುತ್ತವೆ, ಬೆಟ್ಟವೊಂದು ಬಾಯಿ ತೆರೆಯುತ್ತದೆ, ಅದರೊಳಗೆ ಜೋಗಿ - ಅವನ ಹಿಂದೆಯೇ ಮಕ್ಕಳು - ಕೊನೆಗೆ ಉಳಿದವನೊಬ್ಬನೇ ಕುಂಟ. 'ಅಯ್ಯೋ ಹೋಯಿತೆ ಆ ನಾಕ! ಅಯ್ಯೋ ಬಂದಿತೆ ಈ ಲೋಕ!'

* * *

ಇಲಿಗಳ ಜೊತೆ ಗುದ್ದಾಡುವುದು ಕಷ್ಟ. ಮನೆಯೊಳಗೆ ಒಂದು ಇಲಿ ಹೊಕ್ಕಿಕೊಂಡಿತೆಂದರೇ ತಲೆಬಿಸಿ ನಿಭಾಯಿಸಲಿಕ್ಕಾಗುವುದಿಲ್ಲ; ಇನ್ನು ನೂರಾರು ಇಲಿಗಳು ಸೇರಿಬಿಟ್ಟರೆ ಗತಿಯೇನು ಹೇಳಿ? ಈ ಇಲಿಗಳ ವಾಸಕ್ಕೆ ಸಂದಿಗೊಂದಿಯೇ ಆಗಬೇಕು. ಓಡಾಟಕ್ಕೆ ಗೋಡೆಬದಿಯೇ ಆಗಬೇಕು. ರಾಜಾರೋಶವಾಗಿ ಕೋಣೆಯ ಮಧ್ಯದಲ್ಲಿ ಇವು ಓಡಾಡುವುದನ್ನು ನಾನು ಕಂಡಿದ್ದೇ ಇಲ್ಲ. ಉಗ್ರಾಣದಲ್ಲಿನ ಚೀಲಗಳನ್ನು ಕೊರೆಯುವುದು, ಸ್ಟ್ಯಾಂಡಿನಲ್ಲಿನ ಬಟ್ಟೆಗಳನ್ನು ತೂತು ಮಾಡುವುದು, ಗ್ಯಾಸ್‍ಕಟ್ಟೆಯ ಮೇಲಿದ್ದ ಕಾಯಿಕಡಿಯನ್ನು ಎತ್ತಿಕೊಂಡು ಹೋಗುವುದು -ಇತ್ಯಾದಿ ಕಿತಾಪತಿ ಕೆಲಸಗಳನ್ನು ಮಾಡುವುದೇ ಇವುಗಳ ಜಾಯಮಾನ. ಹಾಕಿದಷ್ಟನ್ನು ತಿಂದುಕೊಂಡು, ಶಿಸ್ತಾಗಿ ಓಡಾಡಿಕೊಂಡಿದ್ದು, ಕೋಣೆಯಲ್ಲಿ ಒಂದು ಕಡೆ ಮಲಗೆದ್ದು ಹೋಗುವಂತಿದ್ದರೆ ಇವನ್ನೂ ನಾಯಿ-ಬೆಕ್ಕುಗಳಂತೆ ಸಾಕಬಹುದಿತ್ತೇನೋ ಎಂದು ನಾನು ಯೋಚಿಸಿದ್ದಿದೆ.

ಈ ಇಲಿಗಳ ಮೂಗು ಬಹು ಚುರುಕು. ಹತ್ತಾರು ಮಾರು ದೂರದಲ್ಲಿ ಬಿದ್ದಿರುವ ಕಾಯಿಚೂರಿನ ಪರಿಮಳವನ್ನೂ ಇವು ಗ್ರಹಿಸಿ, ಅಲ್ಲಿಗೆ ಧಾವಿಸಿ, ಅದನ್ನು ಗುಳುಂ ಮಾಡಬಲ್ಲವು. ಬಹುಶಃ ಗಣೇಶ ಈ ಇಲಿಯನ್ನೇ ತನ್ನ ವಾಹನವನ್ನಾಗಿ ಆರಿಸಿಕೊಂಡಿರುವ ಹಿಂದೆ ಈ ಕಾರಣವೂ ಇದ್ದಿರಬಹುದು. ಸದಾ ಹಸಿದ ಹೊಟ್ಟೆಯ ಈ ಟೊಣಪನಿಗೆ ಆಹಾರ ಎಲ್ಲಿದೆ ಎಂದು ಪತ್ತೆಹಚ್ಚಿ, ಅಲ್ಲಿಗೆ ಕರೆದೊಯ್ದು ಕೊಡಿಸುವ ಆಶ್ವಾಸನೆಯನ್ನು ಇಲಿ ಕೊಟ್ಟಿರಬೇಕು. ಹಾಗಾಗೇ ಇವನು ಇಲಿಗೆ ತನ್ನ ಟ್ರಾವೆಲ್ ಕಾಂಟ್ರಾಕ್ಟ್ ವಹಿಸಿಕೊಟ್ಟಿರುವುದು. ಹಾಗೆ ನೋಡಿದರೆ, ಪ್ರಥಮಪೂಜಿತ ಗಣೇಶನ ವಾಹನವನ್ನು ನಾವೆಲ್ಲಾ ಅರ್ಚಿಸಿ ಗೌರವಿಸಬೇಕು. ಆಫ್ಟರಾಲ್ ಒಬ್ಬ ಮಂತ್ರಿಯ ಕಾರಿಗೆ - ಅದರ ಡ್ರೈವರಿಗೆ ಎಷ್ಟು ಗೌರವ ಇರುತ್ತದೆ ಯೋಚಿಸಿ? ಮೊದಲು ಅವನಿಗೆ ಸೆಲ್ಯೂಟ್ ಹೊಡೆದೇ 'ಸಾಯೇಬ್ರು ಯಾವ ಮೂಡಲ್ಲವ್ರೆ?' ಅಂತ ಕೇಳೋದಿಲ್ಲವಾ? ಅಂಥಾದ್ದರಲ್ಲಿ, ಗಜಮುಖನ ವಾಹನವೆಂದಾದರೂ ನಾವು ಇಲಿಗೆ ಸ್ವಲ್ಪ ಕನ್ಸಿಡರೇಶನ್ ಕೊಡಬಹುದಿತ್ತು. ಆದರೆ ಅದರದ್ದು ಅದೇನು ಕರ್ಮವೋ ಏನೋ, ಜನ ಅದನ್ನು ತಮ್ಮ ಆಜನ್ಮ ಶತ್ರುವೆಂಬಂತೆ ಪರಿಗಣಿಸಿಬಿಟ್ಟಿದ್ದಾರೆ. ಕಣ್ಣಿಗೆ ಬಿದ್ದರೆ ಹೊಡೆಯಲಿಕ್ಕೆ ದೊಣ್ಣೆ ಎಲ್ಲಿದೆ ಹುಡುಕುತ್ತಾರೆ.

ನಮ್ಮ ಹಳೆ ಮನೆಯಲ್ಲಿ ಇಲಿಗಳ ಕಾಟ ಜೋರಿತ್ತು. ಅದು ಮಣ್ಣುಗೋಡೆಯ ಮನೆಯಾಗಿದ್ದರಿಂದ ಇವಕ್ಕೆ ಬಿಲ ತೋಡಲಿಕ್ಕೆ ಬಹಳ ಸುಲಭವಾಗಿತ್ತು. ರಾತ್ರಿಯಾಯಿತೆಂದರೆ ಸಾಕು, ಕೊಟ್ಟಿಗೆ ಮನೆಯಿಂದಲೋ ಮತ್ತೆಲ್ಲಿಂದಲೋ ಮನೆಯೊಳಗೆ ಟುಕುಟುಕನೆ ಆಗಮಿಸುತ್ತಿದ್ದ ಇವು ಕಣ್ಣು ಮಿಟುಕಿಸುವುದರೊಳಗೆ ಒಳಗೆಲ್ಲೋ ಹೋಗಿ ಸೇರಿಕೊಂಡುಬಿಡುತ್ತಿದ್ದವು. ಮಂಚದಡಿಗೋ, ಕಪಾಟಿನ ಕೆಳಗೋ ಅಡಗಿಕೊಂಡಿರುತ್ತಿದ್ದ ಇವು ನಾವು ಲೈಟೆಲ್ಲಾ ಆಫ್ ಮಾಡಿ ಮಲಗಿದಮೇಲೆ ಕಾರ್ಯಾಚರಣೆಗೆ ಇಳಿಯುತ್ತಿದ್ದವು. ಸೀದಾ ಅಡುಗೆಮನೆಗೆ ಹೋಗಿ ಸ್ಟ್ಯಾಂಡ್ ಹತ್ತಿ ಢಣಾರನೆ ಯಾವುದಾದರೂ ಪಾತ್ರೆ ಕೆಡವುವುದೋ, ಗೋಡೌನಿಗೆ ಹೋಗಿ ಕೊರಕೊರ ಎಂದು ಹೊಸ ಕನ್ನ ಕೊರೆಯುವುದೋ ಮಾಡುತ್ತಾ, ತಮ್ಮತಮ್ಮಲ್ಲೇ ಕಿಚಪಿಚ ಎಂದು ಕಾನ್ವರ್ಸೇಶನ್ ಮಾಡಿಕೊಳ್ಳುತ್ತಾ ನಮ್ಮ ನಿದ್ದೆಗೆಡಿಸುತ್ತಿದ್ದವು. ಆಗ ಅಜ್ಜಿ "ಥೋ, ಈ ಇಲಿ ಕಾಲದಲ್ಲಿ ಆಗಲ್ಯೇ" ಎಂದು ಗೊಣಗುತ್ತಾ ಲೈಟ್ ಹಾಕಿದ್ದೇ ತಡ, ಸದ್ದು ಬಂದ್! ಅಡುಗೆಮನೆಗೆ ಹೋಗಿ ಬಿದ್ದಿದ್ದ ಪಾತ್ರೆ ಎತ್ತಿಟ್ಟು ಬಂದು, ದೀಪವಾರಿಸಿ ಮಲಗಿದ ಐದು ನಿಮಿಷಕ್ಕೆ ಮತ್ತೆ ಶುರುವಾಗುತ್ತಿತ್ತು ಸದ್ದು..!

ನೋಡೀ, ವಿನಾಕಾರಣ ಈ ಮಲಗಿದ್ದ ಮನುಷ್ಯನ ನಿದ್ದೆ ಕೆಡಿಸುವುದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಆಗ ಆತನ ಕೋಪ ನೆತ್ತಿಗೇರಿಬಿಡುತ್ತದೆ. ಆತ ತನ್ನ ನಿದ್ರಾಹರಣಕ್ಕೆ ಕಾರಣರಾದವರನ್ನು ಮುಗಿಸಲಿಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಅದಕ್ಕೆ ನನ್ನ ಅಜ್ಜಿಯೇ ಉದಾಹರಣೆ. ಅಜ್ಜಿಯ ಮಂಚದ ಪಕ್ಕದಲ್ಲಿ ಯಾವಾಗಲೂ ಒಂದು ದೊಣ್ಣೆ ಇರುತ್ತಿತ್ತು. ನಿದ್ದೆಗಣ್ಣ ಆಕೆ ಅದನ್ನು ಕೈಗೆತ್ತಿಕೊಳ್ಳುತ್ತಿದ್ದಳು. 'ಎಲಾ ಇಲಿಯೇ, ಎಲ್ಲಿರುವೆ ನೀನು? ನನ್ನ ಮುಂದೆ ನಿನ್ನಾಟವೇನೂ ನಡೆಯದು. ಇಗೋ, ನಿನ್ನ ಆಯುಷ್ಯ ಇಂದಿಗೆ ಮುಗಿಯಿತೆಂದೇ ತಿಳಿದುಕೋ' ಎಂದು ಮನಸಿನಲ್ಲಿಯೇ ಅಬ್ಬರಿಸಿ, ರಣಚಂಡಿ ಅವತಾರ ತಾಳಿ ಇಲಿ ಎಲ್ಲೈತೆ ಎಲ್ಲೈತೆ ಎಂದು ಹುಡುಕುತ್ತಾ ಮನೆಯನ್ನೆಲ್ಲಾ ಜಾಲಾಡಿ ಒಂದಾದರೂ ಇಲಿಯನ್ನು ಹೊಡೆದು ತನ್ನ ದೊಣ್ಣೆಗೆ ಸವರಿದ್ದ ನೆತ್ತರನ್ನು 'ಜೋಗಿ' ಚಿತ್ರದ ಶಿವರಾಜ್‍ಕುಮಾರ್ ಸ್ಟೈಲಲ್ಲಿ ನೋಡಿ ಸಂತೃಪ್ತಿ ಪಟ್ಟುಕೊಂಡ ನಂತರವೇ ಮಲಗುತ್ತಿದ್ದಳು. ಅಷ್ಟರಲ್ಲೇ ಒಂದೆರಡು ರೌಂಡು ಸಣ್ಣ ನಿದ್ರೆಗಳನ್ನು ಪೂರೈಸಿ ಎಚ್ಚರಾಗಿರುತ್ತಿದ್ದ ನಾನು, ಅಜ್ಜಿ ಈ ಹತ್ಯಾಕಾಂಡಕ್ಕೆ ಮುಂದಾಗುವಾಗ ಅವಳ ಹಿಂದೆಯೇ ಹೋಗಿ, ಅವಳು ಕೊಲೆ ಎಸಗುವುದನ್ನು ಕಣ್ತುಂಬ ನೋಡಿ, ಆಮೇಲಷ್ಟೇ 'ಕ್ರೈಂ ಡೈರಿ' ವೀಕ್ಷಕನಂತೆ ನಿದ್ರೆ ಹೋಗುತ್ತಿದ್ದೆ.

ಈ ದೇವರು ಎಂಬಾತ, ಪ್ರಾಣಿಗಳಿಗೆ ಬುದ್ಧಿಶಕ್ತಿಯನ್ನು ಅಲಾಟ್ ಮಾಡುವಾಗ ತುಂಬಾನೇ ಪಕ್ಷಪಾತ ಮಾಡಿಬಿಟ್ಟ. ಮನುಷ್ಯನಿಗೆ ಸಿಕ್ಕಾಪಟ್ಟೆ ಬುದ್ಧಿ ಕೊಟ್ಟು, ಉಳಿದ ಪ್ರಾಣಿಗಳಿಗೆ ತಮ್ಮ ಆಹಾರ ಹುಡುಕಿಕೊಳ್ಳಲಿಕ್ಕೆ - ಬದುಕಿಕೊಳ್ಳಲಿಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬುದ್ಧಿ ಕೊಟ್ಟ. ಈ ಮನುಷ್ಯ ಏನು ಮಾಡಿದಾ, ಇಲಿಗತ್ತರಿ - ಇಲಿಬೋನು ಇತ್ಯಾದಿ ಮಷಿನ್ನುಗಳನ್ನು ಕಂಡುಹಿಡಿದ. ಇಲಿಪಾಶಾಣದಂತಹ ವಿಷಗಳನ್ನು ಕಂಡುಹಿಡಿದ. 'ಪ್ರತಿದಿನ ನಿದ್ರೆ ಕೆಡಿಸಿಕೊಂಡು ಇಲಿ ಹೊಡೆಯುವುದ್ಯಾಕ? ಇಟ್ಟರೆ ಒಂದು ಹಿಡಿ ಪಾಶಾಣ ಸಾಕ!' ಎಂದು ಜಾಹೀರಾತು ಮಾದರಿಯಲ್ಲಿ ತನಗೆ ತಾನೇ ಹೇಳಿಕೊಂಡು, ಇಲಿಗೆ ಪ್ರಿಯವಾಗುವ ಯಾವುದೇ ತಿಂಡಿಯ ಜೊತೆ ಈ ಪುಡಿಯನ್ನು ಕಲಸಿ, ಅದು ಓಡಾಡುವ ದಾರಿಯಲ್ಲಿ ಇಟ್ಟುಬಿಟ್ಟ. ಇಲಿ ಪಾಪ ವಾಸನೆ ಗ್ರಹಿಸಿಕೊಂಡು ಬಂತು, 'ತನಗಾಗಿಯೇ' ಎಂಬಂತೆ ಇಟ್ಟಿರುವ ಆಹಾರವನ್ನು ತಿಂತು, ಅಟ್ಟದ ಮೇಲೋ ಗೋಡೌನಿನ ಮೂಲೆಗೋ ಹೋಗಿ ಸತ್ತಿತು. ಆಮೇಲೆ ಮನೆಯಿಡೀ ದುರ್ನಾತ! "ಓಹ್ ಎಲ್ಲೋ ಇಲಿ ಸತ್ತಿದ್ದು ಕಾಣ್ತು" ಎನ್ನುತ್ತಾ ಮೂಗಿಗೆ ಸೆರಗು ಮುಚ್ಚಿಕೊಳ್ಳುವ ಅಮ್ಮ; ಬ್ಯಾಟರಿ ಬಿಟ್ಟುಕೊಂಡು ಹುಡುಕುವ ಅಪ್ಪ; ಗೂಡಚರ ಸಂಸ್ಥೆಯ ವಕ್ತಾರನಂತೆ ಕತ್ತಲ ಮೂಲೆಯಲ್ಲಿ ಹಾರಾಡುವ ನೊಣಗಳಿಂದಾವೃತ ಹೆಣವನ್ನು ಪತ್ತೆಹಚ್ಚುತ್ತಿದ್ದ ನಾನು; ನಂತರ ಶವದ ವಿಲೇವಾರಿ.

ಇವೆಲ್ಲಾ ಸ್ವಲ್ಪ ರಗಳೆಯ ವಿಷಯ ಎನ್ನಿಸಿತು ನಮಗೆ. ಅಲ್ಲದೇ ಈ ಪಾಶಾಣವನ್ನು ತಿಂದಮೇಲೆ ಕುಡಿಯಲಿಕ್ಕೆ ನೀರೇನಾದರೂ ಸಿಕ್ಕಿಬಿಟ್ಟರೆ ಇಲಿ ಬದುಕಿಕೊಂಡುಬಿಡುತ್ತಿತ್ತು. ವಿಷ ತಿಂದೂ ಅರಗಿಸಿಕೊಂಡು ತನ್ನ ಬಾಸ್ ಗಣೇಶನ ಬಳಿ 'ನಿನ್ನಪ್ಪ ವಿಷಕಂಠನಿಗಿಂತ ನಾನೇನು ಕಮ್ಮಿ?' ಎಂಬಂತೆ ಮೀಸೆ ತಿರುವುತ್ತಿತ್ತು. ಈ ಬಾರಿ ಅಜ್ಜಿ ಇಲಿಗತ್ತರಿ ಎಂಬ ಹತಾರವನ್ನು ಉಪಯೋಗಿಸಿದಳು. ಒಂದು ಸಣ್ಣ ಕಾಯಿಚೂರನ್ನೋ, ಬೋಂಡವನ್ನೋ ಈ ಕತ್ತರಿಯ ಮಧ್ಯಕ್ಕೆ ಸಿಕ್ಕಿಸಬೇಕು. ಇದೊಂದು ಭಾರೀ ಅಪಾಯದ ಅಸ್ತ್ರ. ಇದನ್ನು ಹೂಡಿ ಇಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಕೈಯೇ ತುಂಡಾಗುವ ಸಾಧ್ಯತೆ ಇರುತ್ತದೆ. ತಿಂಡಿಯನ್ನು ತಿನ್ನಲಿಕ್ಕೆಂದು ಈ ಕತ್ತರಿಯನ್ನೇರಿ ಇಲಿ ಬಾಯಿ ಹಾಕಿದ್ದೇ ಇದರ ಎರಡಲಗುಗಳೂ ಮುಚ್ಚಿಕೊಂಡು, ಇಲಿ ಮಧ್ಯದಲ್ಲಿ ಸಿಕ್ಕಿಕೊಂಡು, 'ಸ್ಪಾಟ್ ಡೆತ್' ಆಗುತ್ತದೆ! ಅಜ್ಜಿ ಪರಮಾನಂದತುಂದಿಲಳಾಗಿ ಮರುದಿನ ಅದನ್ನು ಹೊರಗೆಸೆಯುತ್ತಾಳೆ. ಕಾಗೆಗಳು 'ಥ್ಯಾಂಕ್ಸ್ ಫಾರ್ ದಿ ಬ್ರೇಕ್‍ಫಾಸ್ಟ್' ಅಂತಂದು ಕಚ್ಚಿಕೊಂಡು ಹೋಗುತ್ತವೆ.

ಇಲಿಗತ್ತರಿಯ ನಂತರ ನಮ್ಮ ಮನೆಗೆ ಬಂದ ಇಲಿಸಂಹಾರೀ ಯಂತ್ರ ಇಲಿಬೋನು. ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದ ಇದು, ಶತ್ರುವನ್ನು ಕೊಲ್ಲುತ್ತಿರಲಿಲ್ಲ; ಸಜೀವ ಸೆರೆ ಹಿಡಿಯುತ್ತಿತ್ತು! ಅಗೇನ್ ಇದರ ಪ್ರಯೋಗಕ್ಕೆ ಬೇಕಾದ ಮದ್ದೂ ಒಂದು ಕಾಯಿಚೂರು ಅಥವಾ ಕರಿದ ತಿಂಡಿ. ಬೋನಿನೊಳಗೆ ಇಳಿಬಿಟ್ಟಿದ್ದ ಕೊಕ್ಕೆಗೆ ತಿಂಡಿಯನ್ನು ಸಿಕ್ಕಿಸಿಡುವುದು. ಕತ್ತಲಲ್ಲಿ ಇಲಿ ಇದರೊಳಗೆ ಹೋಗಿ ತಿಂಡಿಯನ್ನು ಕಚ್ಚಿದಾಕ್ಷಣ ಬೋನಿನ ಬಾಗಿಲು ಹಾಕಿಕೊಂಡು ಇಲಿ ಬಂಧಿಯಾಗಿಬಿಡುತ್ತಿತ್ತು! ಬೆಳಗ್ಗೆ ಎದ್ದು ನೋಡಿದರೆ, ದಿಕ್ಕೆಟ್ಟು ಜೈಲಿನೊಳಗೆ ಅತ್ತಿತ್ತ ಓಡಾಡುತ್ತಾ, ಕಿಂಡಿಗಳಿಂದ ತನ್ನ ಮೂತಿಯನ್ನು ಹೊರತೂರಿಸುತ್ತಾ ಒದ್ದಾಡುತ್ತಿರುವ ಇಲಿರಾಯ! ನನಗೆ ಖುಷಿಯೋ ಖುಷಿ. ಸದ್ಧಾಂ ಸಿಕ್ಕಿಬಿದ್ದಾಗ ಅಮೇರಿಕನ್ನರೂ ಅಷ್ಟು ಹಾರಾಡಿದ್ದರೋ ಇಲ್ಲವೋ, ನಾನಂತೂ ಬೋನೆತ್ತಿಕೊಂಡು ಕೇಕೆ ಹಾಕುತ್ತಾ ಇಡೀ ಮನೆಯೆಲ್ಲಾ ಹಾರಾಡುತ್ತಿದ್ದೆ. ನಂತರ ಒಂದು ಬಕೆಟ್ಟಿಗೆ ನೀರು ತುಂಬಿ ಅದರಳೊಗೆ ಬೋನನ್ನು ಮುಳುಗಿಸುವುದು. ಇಲಿ ಉಸಿರುಗಟ್ಟಿ ಸಾಯುತ್ತಿತ್ತು.

ಹಾಗಂತ ಇಲಿಗಳು ನಮ್ಮ ಯುದ್ಧತಂತ್ರಗಳಿಂದ ತಪ್ಪಿಸಿಕೊಂಡು ಹೋದ ಘಟನೆಗಳೂ ಇಲ್ಲದಿಲ್ಲ. ಇಲಿಗತ್ತರಿಯಂತಹ ಅಪಾಯಕಾರಿ ಶಸ್ತ್ರದಲ್ಲೂ ಸಿಕ್ಕಿ ಸಾಯದೇ ಅದರಲ್ಲಿಟ್ಟಿದ್ದ ತಿಂಡಿಯನ್ನಷ್ಟೇ ಇವು ಎಗರಿಸಿಕೊಂಡು ಹೋದದ್ದಿದೆ. ಇಲಿ ತುಂಬಾ ಲೈಟ್‍ವೆಯ್ಟ್ ಆಗಿದ್ದರೆ ಆಗ ಕತ್ತರಿ ಆಪರೇಟ್ ಆಗುತ್ತಲೇ ಇರಲಿಲ್ಲ. ಇಲಿ ಆರಾಮಾಗಿ ತಿಂಡಿ ತಿಂದುಕೊಂಡು ಹೋಗಿಬಿಡುತ್ತಿತ್ತು. (ಈ ಗುಟ್ಟು ಎಲ್ಲಾ ಇಲಿಗಳಿಗೂ ಗೊತ್ತಾಗಿದ್ದರೆ, ಅವೆಲ್ಲಾ ಡಯಟ್ ಮಾಡಿ ತೂಕ ಇಳಿಸಿಕೊಂಡು ಕತ್ತರಿಯನ್ನು ಒಂದು ನಿಶ್ಪ್ರಯೋಜಕ ಅಸ್ತ್ರವನ್ನಾಗಿ ಮಾಡಿಬಿಡುತ್ತಿದ್ದವೇನೋ?!) ಮತ್ತೆ ಕೆಲ ಶಕ್ತಿಶಾಲೀ ಹೆಗ್ಗಣಗಳು ಬೋನಿನ ಬಾಗಿಲನ್ನು ತಳ್ಳಿಕೊಂಡು ಹೊರಗೋಡಿಹೋದದ್ದೂ ಇದೆ. ಕೆಲ ಪುಟಾಣಿ ಇಲಿಗಳು ಬೋನಿನಲ್ಲಿ ಸಿಕ್ಕಿಬಿದ್ದರೂ, ಬೋನಿನ ಸಣ್ಣ ಕಿಂಡಿಯಿಂದಲೇ ತೂರಿ, ತಿಂಡಿಯನ್ನೂ ತಿಂದು ಪರಾರಿಯಾಗಿ ನಮಗೆ ಚಳ್ಳೇಹಣ್ಣು ತಿನ್ನಿಸಿದ್ದಿದೆ.

ಇಷ್ಟಕ್ಕೂ ಇಲಿ ಕಾಟದ ಪರಿಹಾರಕ್ಕೆ ಎಲ್ಲರಂತೆ ನಾವೂ ಬೆಕ್ಕು ಸಾಕಲಿಲ್ಲವೇ ಎಂದು ನೀವು ಯೋಚಿಸಬಹುದು. ನಮ್ಮ ಪಕ್ಕದ ಮನೆಯಲ್ಲಿ ಸಾಕಿದ್ದರು. ಆದರೆ ಅದು ಮರಿಬೆಕ್ಕು. ಅದಕ್ಕೆ ಯಾವ ಇಲಿಯೂ ಹೆದರುತ್ತಿರಲಿಲ್ಲ. ಅವು ಗುಂಪಾಗಿ ಬಂದು 'ಇಲಿಗೆ ಚೆಲ್ಲಾಟ; ಬೆಕ್ಕಿಗೆ ಪ್ರಾಣಸಂಕಟ' ಎಂಬಂತೆ ಬೆಕ್ಕನ್ನೇ ಹೆದರಿಸುತ್ತಿದ್ದವು. ದಡಿಯ ಹೆಗ್ಗಣಗಳನ್ನು ಕಂಡರಂತೂ ಈ ಬೆಕ್ಕಿನ ಮರಿ ತಾನೇ ಓಡಿ ಹೋಗುತ್ತಿತ್ತು. ಇದನ್ನು ನೋಡಿದ್ದ ನನಗೆ ಬೆಕ್ಕು ಸಾಕುವ ತಲುಬು ಬರಲೇ ಇಲ್ಲ. ಅಲ್ಲದೇ ಹಿಂದೊಮ್ಮೆ ನಾಯಿಮರಿ ಸಾಕಿ, ಅದು ನನಗೆ ಅತಿಯಾಗಿ ಹೊಂದಿಕೊಂಡುಬಿಟ್ಟು, ನಾನು ಹೋದಲ್ಲೆಲ್ಲಾ ಹಚ್ ನೆಟ್‍ವರ್ಕಿನಂತೆ ನನ್ನ ಹಿಂದೆಯೇ ಬರತೊಡಗಿ, ಒಂದು ದಿನ ತೋಟಕ್ಕೆ ಹೋಗುತ್ತಿದ್ದಾಗ ನನ್ನ ಹಿಂದೆ ಬಂದ ಇದನ್ನು ಪಟೇಲರ ಮನೆಯ ನಾಯಿ ಕಚ್ಚಿ ಕೊಂದು ಹಾಕಿದ ಮೇಲೆ ನಾನು ಇನ್ನು ಯಾವ ಪ್ರಾಣಿಯನ್ನೂ ಸಾಕಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೆ. ಪ್ರೀತಿಪಾತ್ರ ಸಾಕುಪ್ರಾಣಿಗಳನ್ನು ಕಳೆದುಕೊಳ್ಳುವ ದುಃಖ ಯಾವ ದುಃಖಕ್ಕೂ ಕಮ್ಮಿಯಲ್ಲ.

ನಾವು ಹೊಸ ಮನೆಗೆ ಬಂದಮೇಲೆ ಇಲಿಗಳ ಕಾಟ ಪ್ರಾಯಶಃ ನಿಂತೇ ಹೋಯಿತು. ಸಿಮೆಂಟ್ ಗೋಡೆ-ಟೈಲ್ಸ್ ನೆಲ ಅವಕ್ಕೆ ಸರಿ ಬರಲಿಲ್ಲವೇನೋ, 'ನಿಮ್ಮ ಹೊಸಮನೆ ನಿಮಗೇ ಇರ್ಲಿ' ಅಂತ ಬಿಟ್ಟುಕೊಟ್ಟು ಅವು ಹಳೆಯ ಕೊಟ್ಟಿಗೆ ಮನೆ, ಕಟ್ಟಿಗೆ ಮನೆ, ಬಚ್ಚಲು ಮನೆಗಳಲ್ಲೇ ಸಂಸಾರ ಹೂಡಿದವು. ಹಿಂಡಿಚೀಲಕ್ಕೆ ತೂತು ಮಾಡುವುದು, ಗೋಧಿಬೂಸ ಮೆಲ್ಲುವುದು, ಜಾನುವಾರುಗಳಿಗೆಂದು ಇಟ್ಟಿದ್ದ ಆಹಾರವನ್ನು ತಿನ್ನುವುದು -ಇತ್ಯಾದಿ ಕಡಿಮೆ ಪ್ರಮಾಣದ ಕಾಟ ಕೊಡುವುದರಲ್ಲಿ ನಿರತವಾದವು. ಕೊಟ್ಟಿಗೆ ಕಡೆ ಹೋದಾಗ ಎಲ್ಲೋ ಒಮ್ಮೊಮ್ಮೆ 'ಹಾಯ್' ಎಂದು ಕಣ್ಮರೆಯಾಗುತ್ತಿದ್ದ ಇವನ್ನು ನಾವೂ ಕಡೆಗಣಿಸಿದೆವು.

ಕಳೆದ ಬಾರಿ ಗಣೇಶ ಚತುರ್ಥಿಗೆ ನಾನು ಊರಿಗೆ ಹೋದಾಗ, ಅಮ್ಮ ಹೇಳಿದ ಮಜಾ ಘಟನೆಯೊಂದನ್ನು ಹಂಚಿಕೊಂಡು ನಾನು ಈ ಲೇಖನವನ್ನು ಮುಗಿಸುತ್ತೇನೆ. ಚೌತಿಗೆ ಒಂದು ವಾರವಿರಬೇಕಾದರೆ ಬಚ್ಚಲು ಮನೆಯಲ್ಲಿಟ್ಟಿದ್ದ ಅಪ್ಪನ ರೇಸರ್ ಸೆಟ್ ಕಾಣೆಯಾಯಿತಂತೆ. ಅಪ್ಪ ಅಲ್ಲಿಲ್ಲಿ ಹುಡುಕಿದ, ಸಿಗದಿದ್ದರಿಂದ ಹೊಸ ರೇಸರ್ ಕೊಂಡು ಶೇವಿಂಗ್ ಮಾಡಿಕೊಂಡ. ಮಾರನೇ ದಿನ ನೋಡಿದರೆ ಮೈಸೋಪು ಇಲ್ಲ! ಹೊಸ ಸೋಪು.. ನಿನ್ನೆ ತಾನೇ ಒಡೆದದ್ದು.. ಹನ್ನೆರಡು ರೂಪಾಯಿ.. ಶೋಧಿಸಿದರು. ಸಿಕ್ಕಲಿಲ್ಲ. ಹೊಸ ಸೋಪಿನ ಪ್ಯಾಕು ಒಡೆದರು. ಅದರ ಮರುದಿನ ಮೈ ತಿಕ್ಕುವ ಬ್ರಶ್ ಇಲ್ಲ! 'ಎಲಾ! ಇದು ಇಲಿಗಳದ್ದೇ ಕೆಲಸ' ಅಂತ ಗೊತ್ತಾಯಿತು. ಅಮ್ಮ-ಅಪ್ಪ ಸೇರಿ ಹುಡುಕಿದರು. ಬಾವಿಕಟ್ಟೆಯ ಸಂದಿಗೆ ಒಂದು ಬಿಲ. ಅದರ ಬಾಗಿಲಲ್ಲಿ ಕಳೆದುಹೋಗಿದ್ದ ರೇಸರ್ ಸೆಟ್ಟು, ಅರ್ಧಮರ್ಧ ಕೊರೆಯಲ್ಪಿಟ್ಟಿದ್ದ ಸೋಪು, ಹರಿದು ಕೆದರಿಹೋಗಿದ್ದ ಬ್ರಶ್ಶು!

ಕಥೆ ಕೇಳಿ ನನಗೆ ನಗುವೋ ನಗು. ಬಹುಶಃ ಚೌತಿಗೆ ಗಣೇಶಾರೂಢ ಇಲಿ, ಚಂದ ಶೇವಿಂಗ್-ಗೀವಿಂಗ್ ಮಾಡಿಕೊಂಡು, ಸ್ನಾನ ಮಾಡಿ ಫ್ರೆಶ್ಶಾಗಿ ಬರುತ್ತೇನೋ ಎಂದುಕೊಂಡು ಕಾಯತೊಡಗಿದೆವು... ಅಡುಗೆ ಮನೆಯಿಂದ ಕಾಯಿಕಡುಬು - ಚಕ್ಕುಲಿಯ ಪರಿಮಳ.

* * *

ಮೂಷಿಕವಾಹನನ ಆಗಮನ ನಿಮ್ಮ ಮನೆಗೆ ಸಂತಸ ತರಲಿ. ಶುಭಾಶಯಗಳು.

Monday, August 25, 2008

ಸಂಪಿಗೆ ಮರ

ನೀವು ಸಾಗರದಿಂದ ಗುಬ್ಬಗೋಡಿಗೆ ಹೋಗುವ ಟಾರ್ ರಸ್ತೆಯಲ್ಲಿ ಸುಮಾರು ಏಳು ಕಿಲೋಮೀಟರ್ ಸಾಗಿಬಂದ ನಂತರ, ರಸ್ತೆಯ ಎಡಗಡೆಗೆ ಒಂದು ತ್ರಿಕೋಣಾಕೃತಿಯ ಕಟ್ಟೆಯೂ, ಆ ಕಟ್ಟೆಯ ಗೋಡೆಯ ಮೇಲೆ ಕಪ್ಪಕ್ಷರದಿಂದ ಬರೆದ 'ಬೆಂಕಟವಳ್ಳಿ' ಎಂಬ ಬೋರ್ಡೂ ಕಾಣುತ್ತದೆ. ಅದೇ ನನ್ನ ಅಜ್ಜನ ಮನೆಯು. 'ಅದೇ' ಎಂದರೆ ಆ ಕಟ್ಟೆಯಲ್ಲ; ಆ ಕಟ್ಟೆಯ ಪಕ್ಕದ, ತಿರುವುಮುರುವಿನ, ಸೀದಾ ಇಳುಕಲಿನ, ಒಂದು ಕಡೆ ಬೆಟ್ಟವೂ ಇನ್ನೊಂದು ಕಡೆ ಪ್ರಪಾತವೂ ಇರುವ ಮಣ್ಣಿನ ರಸ್ತೆಯಲ್ಲಿ ಇಳಿದು ಹೋದರೆ ಸಿಗುವುದು ನನ್ನ ಅಜ್ಜನ ಮನೆ. ಅಜ್ಜನ ಮನೆಯ ಹಿಂದಿರುವ ಬೆಟ್ಟವನ್ನು ಈ ಕಡೆಯಿಂದ ಹತ್ತಿ ಆ ಕಡೆ ಇಳಿದರೆ ನೀವು ವರದಹಳ್ಳಿಯಲ್ಲಿರುತ್ತೀರಿ. ಹಿಂದೆಲ್ಲ ನನ್ನ ಅಮ್ಮ-ಮಾವಂದಿರೆಲ್ಲ ಪ್ರತಿ ಶನಿವಾರ-ಭಾನುವಾರ ಶ್ರೀಧರ ಸ್ವಾಮಿಗಳ ಪ್ರವಚನ ಕೇಳಲು ಇದೇ ಗುಡ್ಡ ಹತ್ತಿಳಿದು ವರದಹಳ್ಳಿಗೆ ಹೋಗುತ್ತಿದ್ದರಂತೆ. ಪ್ರವಚನ ಮುಗಿದ ನಂತರ ಶ್ರೀಧರ ಸ್ವಾಮಿಗಳು ಎಲ್ಲರಿಗೂ ಮಂತ್ರಾಕ್ಷತೆ ಕೊಡುತ್ತಿದ್ದರಂತೆ ಮತ್ತು ಅಮ್ಮ-ಮಾವರಂತಹ ಸಣ್ಣ ಮಕ್ಕಳಿಗೆ ತಮ್ಮ ಬಳಿಯಿದ್ದ ಹಣ್ಣು-ಹಂಪಲನ್ನೆಲ್ಲ ಕೊಡುತ್ತಿದ್ದರಂತೆ. "ಆವಾಗ ಪ್ರವಚನ ಎಲ್ಲಾ ನಮ್ಗೆ ಎಲ್ಲಿ ಅರ್ಥ ಆಗ್ತಿತ್ತು? ಹಣ್ಣು ಸಿಗ್ತಲಾ ಅಂತ ಗುಡ್ಡ ಹತ್ತಿಳ್ದು ವದ್ಧಳ್ಳಿಗೆ ಹೋಗ್ತಿದ್ಯ. ಈಗ ಹಣ್ಣು ಬಿಟ್ಟು ಏನು ಕೊಡ್ತಿ ಅಂದ್ರೂ ಗುಡ್ಡ ಹತ್ತಕ್ಕೆ ಹರಿಯದಿಲ್ಲೆ..!" ನೆನಪು ಮಾಡಿಕೊಳ್ಳುತ್ತಾ ಹೇಳುತ್ತಾಳೆ ಅಮ್ಮ.

ಅದಿರಲಿ, ನಾನಾಗ ಹೇಳಿದೆನಲ್ಲ, ಸಾಗರದಿಂದ ಏಳು ಕಿಲೋಮೀಟರ್ ಸಾಗಿಬಂದ ನಂತರ ಸಿಗುವ ಕಟ್ಟೆ, ಈ ಕಟ್ಟೆಯ ಬಾಜೂ, ಕಟ್ಟೆಗೆ ಸದಾ ನೆರಳಾಗಿ, ಒಂದು ಬೃಹತ್ ಸಂಪಿಗೆ ಮರವಿದೆ. ರಸ್ತೆಯ ಬಲಬದಿಗೆ ಲೋಕೋಪಯೋಗಿ ಇಲಾಖೆಯವರು ಕಟ್ಟಿಸಿದ ಬಸ್‌ಸ್ಟ್ಯಾಂಡ್ ಇದೆಯಾದರೂ ಯಾರೂ ಅದನ್ನು ಬಳಸುವುದಿಲ್ಲ. ಸದಾ ಅದರೊಳಗೆ ಹೇರಳ ಕಸ ಶೇಖರವಾಗಿರುತ್ತದೆ. ಬಿಂದಿಲು-ಬಲೆ ಕಟ್ಟಿಕೊಂಡಿರುತ್ತದೆ. ದನಕರುಗಳು ಅದನ್ನು ಕೊಟ್ಟಿಗೆ ಎಂದೇ ಭಾವಿಸಿ ಅಲ್ಲೇ ಮಲಗಿ ಮೆಲುಕು ಹಾಕುತ್ತಿರುವುದನ್ನೂ ಕಾಣಬಹುದು. ವರ್ಷ-ಎರಡು ವರ್ಷಕ್ಕೊಮ್ಮೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಬಸ್‌ಸ್ಟಾಂಡನ್ನು ನವೀಕರಣಗೊಳಿಸುವ ನೆಪದಲ್ಲಿ ಪೇಯಿಂಟ್ ಮಾಡಿಸಿ, ಒಡೆದ ಹಂಚುಗಳನ್ನು ಬದಲಿಸಿ, ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಾರೆ. ಬಸ್ಸಿಗೆ ಕಾಯುವ ಊರಿನ ಜನ ಯಾವಾಗಲೂ ನಿಲ್ಲುವುದು ಸಂಪಿಗೆ ಮರದ ಕೆಳಗೇ. ಬಸ್ ಬರುವುದು ತಡವಾಗಿ, ನಿಂತೂ ನಿಂತೂ ಸುಸ್ತಾದರೆ ಸಂಪಿಗೆ ಮರದ ಬುಡದಲ್ಲಿರುವ ತ್ರಿಕೋಣಾಕಾರದ ಕಟ್ಟೆಯ ಮೇಲೆ ಕೂರುತ್ತಾರೆ. ಕೆಲವರು ಮರದ ಬುಡದಲ್ಲೇ, ಮೇಲೆದ್ದು ಬಂದಿರುವ ಮರದ ಬೃಹತ್ ಬೇರುಗಳ ಮೇಲೇ ಅಂಡೂರುತ್ತಾರೆ. ಇನ್ನು ಕೆಲವರು ಟಾರ್ ರೋಡಿನ ಮೇಲೂ ಕೂರುವುದುಂಟು.

ಈ ಮರ ಯಾವುದೇ ಸಾಧಾರಣ ಸಂಪಿಗೆ ಮರದಂತೆ ಕಂಡರೂ ಇದಕ್ಕೊಂದು ಮಹತ್ವವಿದೆ. ಬೆಂಕಟವಳ್ಳಿ ಊರಿನ ಜನ ತಮ್ಮೂರಿನ ಬಸ್ ಇಳಿದು-ಹತ್ತುವ ಜಾಗವನ್ನು ಎಲ್ಲಾ ಊರಿನವರಂತೆ 'ಬಸ್‌ಸ್ಟ್ಯಾಂಡ್' ಎಂದು ಕರೆಯುವುದಿಲ್ಲ; 'ಸಂಪಿಗೆ ಮರ' ಅಂತ ಕರೆಯುತ್ತಾರೆ. ನಾವಾದರೆ 'ಬಸ್‌ಸ್ಟ್ಯಾಂಡಲ್ ಕಾದೂ ಕಾದೂ ಸಾಕಾಯ್ತು ಮಾರಾಯಾ, ಕೃಷ್ಣಾ ಬಸ್ ಬರಲೇ ಇಲ್ಲ!' ಎನ್ನುತ್ತೇವೆ. ಆದರೆ ಬೆಂಕಟವಳ್ಳಿಯ ಜನ 'ಬೇಗ್ ಬೇಗ ನಡೆ.. ಎರಡೂ ವರೆಗೆ ಕರೆಕ್ಟಾಗಿ ಬರತ್ತೆ ವರದಾ ಬಸ್ಸು ಸಂಪಿಗೆ ಮರದ ಹತ್ರ' ಎನ್ನುತ್ತಾರೆ. ಇವರು 'ಬಸ್‌ಸ್ಟ್ಯಾಂಡ್' ಶಬ್ದವನ್ನು ಬಳಸುವುದೇ ಇಲ್ಲ. ಅದರ ಜಾಗದಲ್ಲಿ ಸದಾ ಸಂಪಿಗೆ ಮರ ತೂಗುತ್ತಿರುತ್ತದೆ.

ವಸಂತ ಮಾಸದಲ್ಲಿ ನೀವೇನಾದರೂ ಇಲ್ಲಿಗೆ ಬಂದರೆ ಈ ಮರದ ಗೆಲ್ಲ ಮೇಲೆ ಕೋಗಿಲೆ ಕೂತು ಹಾಡುವುದನ್ನು ಕೇಳಬಹುದು. 'ಸಂಪಿಗೆಯೆಲ್ಲೋ ಕೋಗಿಲೆಯೆಲ್ಲೋ?' ಎಂಬ ಉದ್ಘಾರ ನಿಮ್ಮಿಂದ ಹೊರಬೀಳುವುದಂತೂ ಖಚಿತ. ಆದರೆ ಹಾಗೆ ಹಾಡು ಕೇಳಬೇಕೆಂದರೆ ನೀವು ಈ ಮರದಿಂದ ತುಸು ದೂರದಲ್ಲಿ, ಮರೆಯಲ್ಲಿ ನಿಂತಿರಬೇಕಾಗುತ್ತದೆ. ಮರದ ಕೆಳಗೇ ಇದ್ದರೆ ಕೋಗಿಲೆಗೆ ಸಂಕೋಚವಾಗಿ ಹಾಡುವುದಿಲ್ಲ. ಭಯಗೊಂಡು ಹಾರಿಹೋದರೂ ಹೋಗಬಹುದು. ನೀವು ದೂರದಲ್ಲಿ, ಅಗೋ, ಆ ಟ್ರಾನ್ಸ್‌ಫಾರ್ಮರ್ ಕಂಬದ ಬಳಿ ಒಂದು ಸಣ್ಣ ಗುಡ್ಡ ಇದೆಯಲ್ಲ, ಅದರ ಮೇಲೆ ಕುಳಿತುಕೊಳ್ಳಬೇಕು. ಆಗ ಈ ಕೋಗಿಲೆ, ವಧುವನ್ನು ನೋಡಲು ವರನ ಮನೆಯವರು ಹೋದಾಗ ತಲೆ ತಗ್ಗಿಸಿಕೊಂಡು ನಾಚುತ್ತಾ ಹಾಡುವ ಹುಡುಗಿಯಂತೆ, ಸುಮಧುರವಾಗಿ ಹಾಡುತ್ತದೆ. ಆ ಕೋಗಿಲೆ ಹಾಡು, ಪಕ್ಕದ ಗಹ್ವರದಲ್ಲಿಳಿದು, ಗಿರಿಗೆ ಬಡಿದು, ದೊಡ್ಡ ಮರಗಳ ಕಂಕುಳಲ್ಲಿ ಕಚಗುಳಿಯಾಗುವಂತೆ ಹಾದು ಪ್ರತಿಧ್ವನಿಸುವಾಗ ನಿಮಗದು ಹತ್ತಿರದಲ್ಲೆಲ್ಲೋ ಮತ್ತೊಂದು ಕೋಗಿಲೆ ಇದೆಯೇನೋ ಎಂಬ ಭ್ರಮೆ ತರಿಸುತ್ತದೆ. ಎರಡು ಕೋಗಿಲೆಗಳ ಜುಗಲ್‌ಬಂದಿಯಂತೆ ಭಾಸವಾಗುತ್ತದೆ.

ಸಂಪಿಗೆ ಮರ ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಆಗ ಈ ಮರದ ಸುತ್ತೆಲ್ಲ ಸಂಪಿಗೆಕಂಪು ಪೂಸಿಕೊಂಡಿರೊತ್ತೆ. ಬಸ್ಸಿಗೆ ಹೋಗಲೆಂದು ಬೆಂಕಟವಳ್ಳಿಯ ಮಣ್ಣು ರಸ್ತೆಯ ಏರು ಹತ್ತುತ್ತಿರುವವರು ಕೊನೆಯ ತಿರುವಿನಲ್ಲಿರುವಾಗಲೇ ಇದರ ಘಮ ಮೂಗಿಗಡರಿ ಅವರ ಏದುಸಿರೂ ಆಪ್ಯಾಯಮಾನವಾಗುತ್ತದೆ. ತಮ್ಮ ತಮ್ಮ ವಾಹನಗಳಲ್ಲಿ ಟಾರು ರಸ್ತೆಯಲ್ಲಿ ಗುಬ್ಬಗೋಡಿನ ಕಡೆ ಹೊರಟವರು, ಗುಬ್ಬಗೋಡಿನಿಂದ ಸಾಗರಕ್ಕೆ ಹೊರಟವರು ಸಂಪಿಗೆ ಮರ ಹೂ ಬಿಡುವ ಕಾಲದಲ್ಲಿ ಇಲ್ಲಿ ಐದು ನಿಮಿಷ ನಿಲ್ಲಿಸಿ, ಬಡಿಗೆಯಿಂದ ಬಡಿದು, ಒಂದೆರಡಾದರೂ ಹೂವುದುರಿಸಿಕೊಂಡು, ಅದರ ಪರಿಮಳ ಹೀರುತ್ತಾ ಮುಂದೆ ಸಾಗುತ್ತಾರೆ.

ನನ್ನ ಅಜ್ಜನ ಮನೆ ಊರಿನಲ್ಲಿ ಸಾಗರದ ಕಾಲೇಜಿಗೆ ಹೋಗುವ ಅತಿ ಚಂದದ ಹುಡುಗಿಯರು ಇದ್ದಾರೆ ಎಂದು ನಾನು ಹೇಳಿದರೆ ನೀವದನ್ನು ಆತ್ಮಪ್ರಶಂಸೆ ಎಂದು ಭಾವಿಸಬಾರದು. ಏಕೆಂದರೆ, ಹಾಗೆ ಹೇಳಿಕೊಳ್ಳುವುದರಿಂದ ನನಗೇನೂ ಲಾಭವಿಲ್ಲ. ಲಾಭವೇನಿದ್ದರೂ ಇರುವುದು ಬೆಂಕಟವಳ್ಳಿ ಮತ್ತು ಅಕ್ಕಪಕ್ಕದ ಊರಿನ ಹುಡುಗರಿಗೆ! ಬಸ್ಸು ಬರುವುದಕ್ಕೂ ಕನಿಷ್ಟ ಅರ್ಧ ಗಂಟೆ ಮುಂಚಿತವಾಗಿಯೇ ಇಲ್ಲಿಗೆ ಬಂದು ಸೇರುವ ಹುಡುಗರು, ಹುಡುಗಿಯರಿಗಾಗಿ ಕಾಯತೊಡಗುತ್ತಾರೆ. ಬೆಂಕಟವಳ್ಳಿಯ ಹಿಂದು-ಮುಂದಿನ ಊರಿನ ಹುಡುಗರೂ ಸಹ ಇಲ್ಲಿಗೇ ಬಂದು ಬಸ್ಸು ಹತ್ತುತ್ತಾರೆಂದರೆ ಅದರ ಹಿಂದೊಂದು ಗುಟ್ಟಿರಬೇಕಲ್ಲವೇ? ಅದು ಮತ್ತೇನೂ ಅಲ್ಲ: ಬಿಳಿ ಚೂಡಿದಾರು, ಮುಖಕ್ಕೆ ಕ್ರೀಮು-ಪೌಡರು, ಚಂದ ಬಾಚಿದ ಕೂದಲು, ಮ್ಯಾಚಿಂಗ್ ಕಲರ್ ಸ್ಲಿಪ್ಪರು -ಧರಿಸಿ ಚಂದದ ಬೊಂಬೆಗಳಂತೆ ತಯಾರಾಗಿ ಕಾಲೇಜಿಗೆ ಹೊರಟಿರುವ ಈ ಹುಡುಗಿಯರಿಗೆ ಸಂಪಿಗೆಯ ಪರಿಮಳ ಕೇಳಿ ಅದನ್ನು ಮುಡಿಯಬೇಕೆಂಬ ಆಸೆಯಾಗುತ್ತದಾದರೂ, ಬಡಿಗೆ ಹುಡುಕಿ, ಎತ್ತಿ ಎಸೆದು, ಹೂವು ಬೀಳಿಸಿ ಮುಡಿದುಕೊಳ್ಳಲಿಕ್ಕೆ -ತಮ್ಮ ಅಲಂಕಾರವೆಲ್ಲಾ ಎಲ್ಲಿ ಹಾಳಾಗುತ್ತದೋ ಎಂಬ ಹಿಂಜರಿಕೆ. ಇದನ್ನರಿತಿರುವ ಚಾಣಾಕ್ಷಮತಿ ಹುಡುಗರು, ಮುಂಚೆಯೇ ಇಲ್ಲಿಗೆ ಬಂದು ಹೂವನ್ನೆಲ್ಲಾ ಹುಡುಕಿ ಬಡಿದು ಕೆಡವಿ ಗುಡ್ಡೆ ಮಾಡಿ, ಹುಡುಗಿಯರು ಬರುವಷ್ಟರಲ್ಲಿ ಬೊಗಸೆ ತುಂಬ ಹೂ ಹಿಡಿದು ನಿಂತಿರುತ್ತಾರೆ. ಹೀಗಾಗಿ, ಸಂಪಿಗೆ ಹೂ ಬಿಡುವ ಕಾಲದಲ್ಲಿ ನೀವು ಈ ಕಡೆ ಬಂದರೆ, ಇನ್ನೂ ಮಂಜು ಮುಸುಕಿದ ಮುಂಜಾವಿನಲ್ಲಿ, ಮೊದಲ ಬಸ್ಸಿನ್ನೂ ಬರುವುದಕ್ಕೆ ಸಮಯವಿರಲು, ಬೆಂಕಟವಳ್ಳಿಯ ಸಂಪಿಗೆ ಮರದ ಕೆಳಗೆ ಹುಡುಗರು ಹುಡುಗಿಯರಿಗೆ ಹೂ ಕೊಟ್ಟು ಪ್ರತಿದಿನವೂ 'ಪ್ರಪೋಸ್' ಮಾಡುವ ಅಮೋಘ ಸಿನಿಮಾ ದೃಶ್ಯವನ್ನು ಕಾಣಬಹುದು!

ಹಾಂ, ಸಿನಿಮಾ ಎಂದಾಕ್ಷಣ ನೆನಪಾಯಿತು. ಪುಟ್ಟಣ್ಣ ಕಣಗಾಲರ 'ಅಮೃತ ಘಳಿಗೆ' ಸಿನಿಮಾ ಇದೆಯಲ್ಲಾ, ಆ ಸಿನಿಮಾ ಚಿತ್ರೀಕರಿಸಲ್ಪಟ್ಟಿರುವುದು ಇದೇ ಸಂಪಿಗೆ ಮರದ ಸುತ್ತಲಿನ ಪ್ರದೇಶದಲ್ಲಿ. ಈ ಸಂಪಿಗೆ ಮರವೂ ಆ ಚಿತ್ರದಲ್ಲಿ ಹಸಿರು ಸೀರೆ ಉಟ್ಟು ಚಂದ ಪೋಸ್ ಕೊಟ್ಟಿರುವುದನ್ನು ನೋಡಿದರೆ ಇದಕ್ಕೆ ಅಭಿನಯದಲ್ಲಿ ಆಸಕ್ತಿಯಿತ್ತೇ ಎಂಬ ಅನುಮಾನ ಬರುತ್ತದೆ. ಈ ಸಂಪಿಗೆ ಮರದಿಂದ ಸುಮಾರು ಒಂದೂ ವರೆ ಮೈಲಿ ದೂರದಲ್ಲಿರುವ 'ತುಂಬೆ' ಎಂಬ ಊರಿನಲ್ಲಿ ಒಬ್ಬ ಭಾರೀ ಶ್ರೀಮಂತರ ಮನೆಯಿದೆ. 'ತುಂಬೆ ಹೆಗ್ಡೇರು' ಅಂತಲೇ ಅವರು ಜನಜನಿತರು. ಅವರ ಮನೆಯಲ್ಲೇ ನಡೆದದ್ದು 'ಅಮೃತ ಘಳಿಗೆ'ಯ ಮುಕ್ಕಾಲು ಪಾಲು ಚಿತ್ರೀಕರಣ. ಅದು ನಡೆಯುವಾಗ ಅಮ್ಮ ತನ್ನ ಗೆಳತಿಯರೊಡಗೂಡಿ ಅಲ್ಲಿಗೆ ಹೋದದ್ದು, ಅಲ್ಲಿ ಶ್ರೀಧರ್, ರಾಮಕೃಷ್ಣ, ಪುಟ್ಟಣ್ಣ -ಮುಂತಾದವರನ್ನು ನೋಡಿದ್ದನ್ನು ನೆನಪಿಟ್ಟುಕೊಂಡಿದ್ದಾಳೆ. 'ಅಮೃತ ಘಳಿಗೆ' ಸಿನಿಮಾ ನಮ್ಮೂರ ಡಾ| ವೆಂಕಟಗಿರಿ ರಾವ್ ಅವರ 'ಅವಧಾನ' ಕಾದಂಬರಿಯನ್ನು ಆಧರಿಸಿದ್ದು ಎಂದೆಲ್ಲ ಹೇಳಿದರೆ ನಾನು ಸಂಪಿಗೆ ಮರ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತಿದ್ದೇನೆ ಎಂದು ನೀವು ಆಪಾದಿಸಬಾರದು. ಏನು ಮಾಡಲಿ? ಸಂಪಿಗೆ ಮರ ಎಂದಾಕ್ಷಣ ನನಗೆ ಅವೆಲ್ಲ ನೆನಪಾಗುತ್ತದೆ.

ಬೆಂಕಟವಳ್ಳಿ ಬಸ್‌ಸ್ಟ್ಯಾಂಡ್‌ನ ಹತ್ತಿರದಲ್ಲಿ ಯಾವುದೇ ಮನೆಯಾಗಲೀ, ಅಂಗಡಿಯಾಗಲೀ ಇಲ್ಲವಾದ್ದರಿಂದ - ಅದೊಂದು ನಿರ್ಜನ ಪ್ರದೇಶವಾದ್ದರಿಂದ, ಅದರ ಸುತ್ತ ಕೆಲವೊಂದು ನಿಗೂಢ ಘಟನೆಗಳೂ ನಡೆದ ಸುದ್ಧಿಗಳಿವೆ. ಉದಾಹರಣೆಗೆ, ಸಂಪಿಗೆ ಮರದ ಕೆಳಗೆ ಬಸ್ಸಿಗೆ ಕಾಯುತ್ತಿದ್ದ ಸುಜಾತಕ್ಕನನ್ನು ಯಾರೋ ಬೆದರಿಸಿ ದುಡ್ಡು ಕಿತ್ತುಕೊಂಡರಂತೆ ಎಂಬುದು; ಬಸ್‌ಸ್ಟ್ಯಾಂಡ್ ಒಳಗೆ ಪ್ರಕಾಶಣ್ಣ ಒಂದು ಮೂಟೆ ಕಂಡನೆಂದೂ - ಅದು ಕಳ್ಳಸಾಗಣೆದಾರರು ಬಚ್ಚಿಟ್ಟಿದ್ದ ಗಂಧವೆಂದೂ - ಮರುದಿನ ನೋಡುವಷ್ಟರಲ್ಲಿ ಇರಲಿಲ್ಲವೆಂದೂ; ಬಸ್‍ಸ್ಟ್ಯಾಂಡ್ ಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್ ಪದೇ ಪದೇ ಹೋಗುವುದಕ್ಕೆ ಕಾರಣ ಸಂಪಿಗೆ ಮರದಲ್ಲಿರುವ ಯಾವುದೋ ಕ್ಷುದ್ರಶಕ್ತಿಯೆಂದೂ -ಹೀಗೆ. ಮತ್ತೆ, ಇವೆಲ್ಲಕ್ಕಿಂತಲೂ ಆಸಕ್ತಿಕರವಾದ ಮತ್ತೊಂದು ಘಟನೆಗೆ ಕಣ್ಣು-ಕಿವಿಯಾಗುವ ಅವಕಾಶ ನನಗೊದಗಿ ಬಂತು.

ಈ ಸಂಪಿಗೆ ಮರದ ಬಳಿ ಒಬ್ಬ ಬೆತ್ತಲೆ ಹುಡುಗಿ ಓಡಾಡುತ್ತಿದ್ದಳು ಎಂಬ ಸುದ್ಧಿ ಸ್ಪೋಟವಾದದ್ದು ಬಿರುಬೇಸಿಗೆಯ ಸಂಜೆಯೊಂದರಲ್ಲಿ. ನಾನು ಬೇಸಿಗೆ ರಜೆಗೆಂದು ಅಜ್ಜನ ಮನೆಗೆ ಹೋಗಿದ್ದೆ. ಅದಾಗ ತಾನೆ ಆರೂವರೆ ಬಸ್ಸಿಗೆ ಸಾಗರದಿಂದ ಬಂದ ನನ್ನ ಮಾವನಿಗೆ, ಮಾವನೊಂದಿಗೇ ಬಸ್ಸಿಳಿದ ರಾಘವೇಂದ್ರಣ್ಣ ಬೆಳಗ್ಗೆ ತಾನು ಕಂಡ ದೃಶ್ಯವನ್ನು ವಿವರಿಸಿದನಂತೆ: "ಚಾಲಿ ಸುಲ್ಸಿದ್ದು ನಾಕು ಚೀಲ ಆಗಿತ್ತಾ.. ಮಂಡಿಗೆ ಸಾಗ್ಸಲೆ ಆನಂದ್ ಗೌಡನ ರಿಕ್ಷಾಕ್ಕೆ ಬರಕ್ ಹೇಳಿದಿದ್ದಿ.. ಅಂವ ಒಂಭತ್ ಗಂಟಿಗೆ ಬಂದ.. ಚೀಲ ಹೇರ್ಕ್ಯಂಡು, ಆನೂ ಹೊಂಟಿ ರಿಕ್ಷಾದ್ ಮೇಲೇ ಹೇಳ್ಯಾತು.. ಸಂಪ್ಗೆ ಮರದ್ ಬುಡಕ್ ಬಪ್ಪ ಹೊತ್ತಿಗೆ ಅಲ್ಲೊಂದು ಹೆಂಗ್ಸು ಮಾರಾಯಾ.. ಎಂಥಾ? ದುಂಡಗೆ!! ಫುಲ್ ದುಂಡಗ್ ನಿಂತಿದ್ಲಪಾ..! ಕೈ ಮಾಡಿದ ಯಂಗ್ಳ ರಿಕ್ಷಾಕ್ಕೆ.. ಯಂಗಂತು ಹೆದ್ರಿಕೆ ಆಗೀ.. ಆನಂದ ಜೋರಾಗ್ ಹೊಡ್ದ ನೋಡು ರಿಕ್ಷಾನಾ.. ಕರ್ಕಿಕೊಪ್ಪದ್ ಇಳುಕ್ಲು ಇಳಿಯಹೊತ್ತಿಗೆ ಇಬ್ರಿಗೂ ಬೆವ್ರು ಇಳ್ದ್ ಹೋಗಿತ್ತು! ಎಂಥಾ- ದುಂಡಗೆ ಮಾರಾಯಾ..!"

ಮಾವ, ರಾಘವೇಂದ್ರಣ್ಣ ತನಗೆ ಹೇಳಿದ್ದನ್ನು ಹಾಗೇ ಹೇಳಿದ. ಕೇಳಿದ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಸಂಪಿಗೆ ಮರದ ಬಳಿ! ಬೆತ್ತಲೆ ಹುಡುಗಿ! "ಯಾರೂಂತ ಏನಾರು ಗೊತ್ತಾತನಾ?" ಎಂದು ಮಾವ ರಾಘವೇಂದ್ರಣ್ಣನ ಬಳಿ ಕೇಳಿದನಂತೆ. ರಾಘವೇಂದ್ರಣ್ಣ "ಎಂಥೇನ, ಸರಿಯಾಗ್ ನೋಡಕ್ ಆಗಲ್ಲೆ. ಆದರೆ ನಮ್ಮ ಕಡೆಯೋರಂತೂ ಯಾರೂ ಅಲ್ಲ ನೋಡು" ಎಂದನಂತೆ. ಅದರಲ್ಲಿ 'ಸರಿಯಾಗಿ ನೋಡಕ್ಕಾಗಲ್ಲೆ' ಎಂಬ ಮಾತು ನನಗೆ ಮೋಟುಗೋಡೆಯಾಚೆಗಿನ ಆಲೋಚನೆಗಳಿಗೆ ಕೊಂಕಾಯಿತಾದರೂ, ದೇವರ ಮನೆಯಿಂದ ಬಂದ ಅಜ್ಜಿ "ಮಾಣೀ, ಮೂರ್ ಸಂಜೆ ದೀಪ ಹಚ್ಚೋ ಹೊತ್ತಿಗೆ ಎಂಥೆಂತೆಲ್ಲಾ ಹೇಳಡ.. ಮೊದ್ಲು ಕೈಕಾಲ್ ತೊಳ್ಕಂಡ್ ಬಂದು ಕಾಪಿ ಕುಡಿ" ಎಂದದ್ದರಿಂದ ನನ್ನ ಆಲೋಚನೆಗಳಿಗೆ ಕಡಿವಾಣ ಹಾಕಬೇಕಾಯಿತು. ಆದರೆ ಅಂತಹ ರೋಚಕ ಸುದ್ಧಿ ಪ್ರಕಟಗೊಂಡಾಗ ಅದರ ಬಗ್ಗೆ ನಾಲ್ಕು ಮಾತಾಡದೇ, ಚರ್ಚಿಸದೇ ಅಲ್ಲಿಗೇ ನಿಲ್ಲಿಸಲಿಕ್ಕೆ ಬರುತ್ತದೆಯೇ? ಮಾವ ಹಾಗೆ ಕಥೆ ಹೇಳುವಾಗ ಅಲ್ಲಿ ಏಳು ಗಂಟೆ ವಾರ್ತೆ ನೋಡಲಿಕ್ಕೆಂದು ಬಂದು ಕೂತಿದ್ದ ಅಕ್ಕಪಕ್ಕದ ಮನೆಯವರನೇಕರೂ ಇದ್ದರು. ಹೀಗಾಗಿ, ಅಜ್ಜಿಯ ಕಿವಿಮಾತು ಯಾರ ಕಿವಿಗೂ ಬೀಳಲಿಲ್ಲ. "ಅಲ್ದಾ, ಬದ್ಧನಡನಾ?" ಎಂದು ಅನಂತಣ್ಣ ಬಾಯಿ ಹಾಕಿದರೆ, "ಇಶೀ, ಅದು ಹೆಂಗ್ ಸಾಧ್ಯನಾ? ರಾಘವೇಂದ್ರಣ್ಣ ಏನ್ ನೋಡಿ ಏನ್ ತಿಳ್ಕಂಡ್ನಾ ಎಂಥೇನ!" ಎಂದು ಯಶೋಧಕ್ಕ ರಾಘವೇಂದ್ರಣ್ಣನ ಲೌಕಿಕ ಜ್ಞಾನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದಳು.

"ರಾಘವೇಂದ್ರಣ್ಣ ಒಬ್ನೇ ಏನು ಅಲ್ದಲಾ? ಆನಂದ್ ಗೌಡನೂ ನೋಡಿದ್ದ.. ರಿಕ್ಷಾದ ಹಿಂದಕೇ ಅದು ಸುಮಾರ್ ದೂರ ಓಡ್ಯೂ ಬಂತಡ.. ಕನ್ನಡೀಲಿ ಕಾಣ್ತಿತ್ತಡ ಆನಂದಂಗೆ.." ಎಂದ ಮಾವ. ನಾನಾಗ ಇನ್ನೂ ಮೊದಲ ವರ್ಷದ ಕಾಲೇಜು ಹುಡುಗನಾಗಿದ್ದರಿಂದ 'ಇಂತಹ' ವಿಷಯದ ಬಗ್ಗೆ ಆಸಕ್ತಿ ಇರುವವನಂತೆ ನಡೆದುಕೊಳ್ಳುವುದು ಉಚಿತವಲ್ಲೆಂದರಿತು ಸುಮ್ಮನಿದ್ದೆ. ಏಕೆಂದರೆ, ನಾನೇನಾದರೂ ಬಾಯಿ ಬಿಟ್ಟಿದ್ದರೆ, ತಕ್ಷಣ ಎಲ್ಲರೂ ನನ್ನೆಡೆಗೆ ನೋಡುತ್ತಿದ್ದರು ಮತ್ತು ಅಜ್ಜಿ "ಅಪ್ಪೀ ನಿಂಗೆ ಇವೆಲ್ಲ ಎಂಥೂ ಗೊತ್ತಾಗ್ತಲ್ಲೆ; ನೀ ಸುಮ್ಮನ್ ಕೂತ್ಗ" ಎಂದು ಬಾಯಿ ಮುಚ್ಚಿಸುತ್ತಿದ್ದಳು. ನಮ್ಮ ಮನೆಗೆ ಫೋನ್ ಮಾಡಿದಾಗ ಅಮ್ಮನ ಬಳಿ ಸೂಕ್ಷ್ಮವಾಗಿ 'ಅಪ್ಪಿಯ ಬಗ್ಗೆ ಒಂದು ಕಣ್ಣಿಟ್ಟರಲು' ಅಜ್ಜಿ ಸೂಚನೆ ಕೊಟ್ಟರೂ ಕೊಡುವ ಸಾಧ್ಯತೆ ಇತ್ತು. ಹೀಗಾಗಿ, ನಾನು ಏನೂ ಅರಿಯದವನಂತೆ ಸುಮ್ಮನಿದ್ದುಬಿಟ್ಟಿದ್ದೆ. ಒಟ್ಟಿನಲ್ಲಿ ಮರುದಿನ ಬೆಳಗಾಗುವುದರೊಳಗಾಗಿ ಈ ಪ್ರಕರಣ ಬೆಂಕಟವಳ್ಳಿ ಊರಲೆಲ್ಲ ಗುಸುಗುಸು ಸುದ್ಧಿಯಾಗಿತ್ತು. ರಾಘವೇಂದ್ರಣ್ಣನ ಹೆಂಡತಿ ಮಾತ್ರ ಯಾಕೋ ಸೆಟಗೊಂಡ ಮುಖದಲ್ಲಿ ಓಡಾಡುತ್ತಿರುವುದನ್ನೂ ನಾನು ಗಮನಿಸದಿರಲಿಲ್ಲ.

ಅದಾಗಿ ಮೂರ್ನಾಲ್ಕು ದಿನಗಳ ನಂತರ, ಕಲ್ಲುಕೊಪ್ಪದ ಬಳಿ ಹೀಗೇ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂದು ಸುದ್ಧಿಯಾಯಿತು. ಕಲ್ಲುಕೊಪ್ಪವೆಲ್ಲಿ ಬೆಂಕಟವಳ್ಳಿಯೆಲ್ಲಿ? ಕಲ್ಲುಕೊಪ್ಪ ಬೆಂಕಟವಳ್ಳಿಗೆ ಹದಿನೈದಿಪ್ಪತ್ತು ಮೈಲಿ ದೂರದಲ್ಲಿರುವ ಹಳ್ಳಿ. ಹಾಗಾದರೆ ಇದೂ ಅದೇ ಹುಡುಗಿಯೇ? ಅಥವಾ ಬೇರೆ ಹುಡುಗಿಯೇ? ಅರಳಿಕಟ್ಟೆ ಬಳಿ, ಅಡಿಕೆ ಸುಲಿಯುವಲ್ಲಿ, ರಸ್ತೆ-ತೋಟದಲ್ಲಿ ಯಾರಾದರೂ ಎದುರು ಸಿಕ್ಕಾಗ -ಹೀಗೆ ಎರಡು ಬಾಯಿ ಸೇರಿತೆಂದರೆ ಅಲ್ಲಿ ಬೆತ್ತಲೆ ಹುಡುಗಿ ಕಾಣಿಸಿಕೊಂಡ ಬಿಸಿಬಿಸಿ ಸುದ್ಧಿ ಚರ್ಚೆಯಾಯಿತು. 'ಜೋಗದಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆಯಂತೆ. ಅಲ್ಲಿಂದೊಬ್ಬ ನಟಿ ಕಾಣೆಯಾಗಿದ್ದಾಳಂತೆ. ಪೋಲೀಸರು ಹುಡುಕುತ್ತಿದ್ದಾರಂತೆ' ಎಂದು ಸಹ ಯಾರೋ ಹೇಳಿಬಿಟ್ಟರು. ಈ ಎಲ್ಲ ಸುದ್ಧಿಗಳು ಹವೆಗೆ ಭಯವನ್ನು ಬೆರೆಸಿಬಿಟ್ಟವು. ಜನ ಸಂಪಿಗೆ ಮರದ ಬಳಿ ಒಬ್ಬರೇ ಹೋಗುವುದಕ್ಕೆ ಹೆದರತೊಡಗಿದರು. ಹೆಂಗಸರನ್ನು ಬಸ್ ಹತ್ತಿಸಲಿಕ್ಕೆ ಜೊತೆಗೆ ಯಾರಾದರೂ ಗಂಡಸರು ಬರಬೇಕಾದಂತಹ ಪರಿಸ್ಥಿತಿ ಬಂತು. ಬಸ್ಸು ಹತ್ತಿದ ಹೆಂಗಸರು ತಮ್ಮ ಗಂಡಂದಿರಿಗೆ 'ಬೇಗ ಮನೆ ಮುಟ್ಕ್ಯಳಿ' ಎಂದು ಎಚ್ಚರಿಕೆ ನೀಡುವುದನ್ನೂ ಮರೆಯುತ್ತಿರಲಿಲ್ಲ.

ನಾನು ಈ ವಿದ್ಯಮಾನವನ್ನೆಲ್ಲಾ ಕಂಡೂ-ಕೇಳಿಯೂ ಸುಮ್ಮನೆ ಓಡಾಡಿಕೊಂಡಿದ್ದೆ. ಯಾರಿಗೂ ತಿಳಿಯದಂತೆ ನಾನೊಬ್ಬನೇ ಸಂಪಿಗೆ ಮರದ ಬಳಿ ಹೋಗಿ ಸುಮಾರು ಒಂದು ತಾಸು ಅಡ್ಡಾಡಿಕೊಂಡು ಬಂದಿದ್ದೆ. ಇದರ ಹಿಂದಿರುವ ರಹಸ್ಯವನ್ನು ಒಂಟಿಯಾಗಿ ಭೇದಿಸಿ ಭೇಷ್ ಎನಿಸಿಕೊಳ್ಳಬೇಕೆಂಬ ಇರಾದೆಯೂ ನನಗಿತ್ತೋ ಏನೋ ಈಗ ನೆನಪಿಲ್ಲ. ಆದರೆ ನನ್ನ ದುರಾದೃಷ್ಟಕ್ಕೆ ಆಗ ಯಾವ ನಗ್ನ ಸುಂದರಿಯ ದರ್ಶನವೂ ನನಗಾಗಲಿಲ್ಲ.

ಈ ಬಿಸಿಬಿಸಿ ಸುದ್ಧಿಯ ಗುಸುಗುಸು-ಪಿಸಪಿಸಗಳು ನಿಲ್ಲಬೇಕಾದರೆ ಮತ್ತೊಂದು ಗರಮಾಗರಂ ಸುದ್ಧಿ ಬರಬೇಕಾಯಿತು: ಸಂಪಿಗೆ ಮರದಿಂದ ಮೂವತ್ತು ಮೈಲಿಗೂ ಹೆಚ್ಚು ದೂರದಲ್ಲಿರುವ ಕಾನುಬೈಲು ಎಂಬ ಊರಿನ ಕೆರೆಯಲ್ಲಿ ಒಂದು ಹೆಣ್ಣಿನ ಶವ ಸಿಕ್ಕಿತಂತೆ, ಜನ ಸೇರಿ, ಪೋಲೀಸರು ಬಂದು, ಪೋಸ್ಟ್‌ಮಾರ್ಟೆಮ್ ಮಾಡಿ, ಶವವನ್ನು ಯಾರೂ ಗುರುತಿಸದಿದ್ದರಿಂದ, ಅವರೇ ಗುಂಡಿ ತೋಡಿ ಹುಗಿದುಬಿಟ್ಟರಂತೆ ಎಂಬುದೇ ಆ ಸುದ್ಧಿ. ಆದರೆ ಬೆಂಕಟವಳ್ಳಿ ಸಂಪಿಗೆ ಮರದ ಬಳಿ ಕಾಣಿಸಿಕೊಂಡ ಬೆತ್ತಲೆ ಹುಡುಗಿಗೂ, ಕಲ್ಲುಕೊಪ್ಪದ ಬಳಿಯೂ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂಬ ಸುದ್ಧಿಗೂ, ಕಾನುಬೈಲಿನ ಕೆರೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶವಕ್ಕೂ ಅದು ಹೇಗೆ ತಳಕು ಕಲ್ಪಿಸಿಕೊಂಡರೋ ಗೊತ್ತಿಲ್ಲ; ಅಂತೂ 'ರಾಘವೇಂದ್ರಣ್ಣ ನೋಡಿದ ಬೆತ್ತಲೆ ಹೆಂಗಸು ಕೊಲೆಯಾಗಿ ಸತ್ತು ಹೋದಳಂತೆ' ಎಂದು ಜನ ಮಾತಾಡಿಕೊಂಡರು. ಅವರಲ್ಲಡಗಿದ್ದ ಭಯವೂ ಹೋದಂತನಿಸಿತು. ನಾನು ಅಜ್ಜನ ಮನೆ ಪ್ರವಾಸ ಮುಗಿಸಿ ವಾಪಸು ಊರಿಗೆ ಹೊರಟಾಗ, ಯಾಕೋ ಈ ಸಂಪಿಗೆ ಮರವನ್ನು ಮೂರ್ನಾಲ್ಕು ಸುತ್ತು ಸುತ್ತಿ ಬಂದು, ಅದರ ಕಾಂಡವನ್ನು ತಡವಿ, ಅದರ ಎದ್ದು ಬಂದಿರುವ ಬೇರುಗಳ ಮೇಲೆಲ್ಲ ಓಡಾಡಿ, ಕೆಳಗೆ ಬಿದ್ದಿದ್ದ ಒಂದೆರಡು ತರಗೆಲೆಯನ್ನೆತ್ತಿ ಮೂಸಿ, ಬಿಸಾಕಿ ಬಂದಿದ್ದೆ. ಸಂಪಿಗೆ ಮರ ಮಾತ್ರ ನಿರುಮ್ಮಳವಾಗಿ ನೆರಳು ಸೂಸುತ್ತ ನಿಂತಿತ್ತು.

ಮೊನ್ನೆ ಊರಿಗೆ ಹೋದವನು ಅಪ್ಪನ ಬೈಕೆತ್ತಿಕೊಂಡು ಅಜ್ಜನ ಮನೆಗೆ ಹೋಗಿದ್ದೆ. ವಾಪಸು ಬರುವಾಗ ಸಂಪಿಗೆ ಮರ ಕಣ್ಣಿಗೆ ಬಿದ್ದದ್ದೇ ಹಳೆಯದೆಲ್ಲ ಕ್ಷಣದಲ್ಲಿ ನೆನಪಾಗಿ, ಹಳೇ ಪ್ರಿಯತಮೆಯನ್ನು ಕಂಡಂತಾಗಿ, ಬೈಕು ನಿಲ್ಲಿಸಿ, ಆಫ್ ಮಾಡಿದೆ. ಫಕ್ಕನೆ ಮೌನ ಕವಿಯಿತು. ಈ ಮರದ ಬಗ್ಗೆ ಏನಾದರೂ ಬರೆಯಬೇಕು ಎನಿಸಿತು ನನಗೆ... ಮೇಲೆ ಸೊಂಪಾಗಿ ಚಪ್ಪರದಂತೆ ಒತ್ತರಿಸಿಕೊಂಡಿರುವ ಇದರ ಹಸಿರೆಲೆರಾಶಿಯನ್ನು ನೋಡುತ್ತಿದ್ದೆ...

ಯಾರೋ ಕಿಟಾರನೆ ಕಿರುಚಿಕೊಂಡಂತಾಯಿತು. ಹೆಂಗಸಿನ ಧ್ವನಿ. ನನಗೆ ಒಮ್ಮೆಲೇ ಭಯವಾಗಿ, ಮೈನಡುಗಿ, ಒಂದೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಮಾಡಿ, ಎಂಭತ್ತರ ವೇಗದಲ್ಲಿ ಓಡಿಸತೊಡಗಿದೆ.