Thursday, November 02, 2006

ಹೆಸರು ಬದಲಾವಣೆ ಮತ್ತು ರಾಜ್ಯೋತ್ಸವ ಶುಭಾಷಯ

ನನ್ನ ಬ್ಲಾಗಾಭಿಮಾನಿಗಳೇ,

ನನ್ನ ಬ್ಲಾಗಿನ ಹೆಸರನ್ನು ಬದಲಿಸಿದ್ದೇನೆ. 'ಬರೆಯುವುದೆಲ್ಲಾ ಕನ್ನಡದಲ್ಲಿ, ಟೈಟಲ್ ಮಾತ್ರ ಯಾಕೆ ಇಂಗ್ಲಿಷಿನಲ್ಲಿ?' ಅಂತ ಕೆಲವು ಗೆಳೆಯರು ಆಕ್ಷೇಪಿಸಿದ್ದರು. ನಾನೋ, ಈ ಬ್ಲಾಗ್ ಶುರುಮಾಡುವಾಗ ಅಷ್ಟೊಂದು ಯೋಚಿಸಿರಲಿಲ್ಲ. ಆದರೆ ಇವರೆಲ್ಲಾ ಹೇಳಿದ ಮೇಲೆ ನನಗೂ ಹೌದು ಅನ್ನಿಸಿತು. ಅಲ್ಲದೇ ಸುವರ್ಣ ಕರ್ನಾಟಕದ ಸಂಭ್ರಮ ಬೇರೆ. ಈ ಸುಸಂದರ್ಭದಲ್ಲಿ ನನ್ನ ಬ್ಲಾಗಿನ ಹೆಸರನ್ನು ಕನ್ನಡೀಕರಿಸಲು ತುಂಬಾ ಖುಷಿಯಾಗುತ್ತಿದೆ.

ಅಂದಹಾಗೆ, ಈ ಟೈಟಲ್ 'ಮೌನಗಾಳ' -ನಾನು ತುಂಬಾ ಇಷ್ಟ ಪಡುವ ಕವಯತ್ರಿ ಪ್ರತಿಭಾ ನಂದಕುಮಾರರ ಕವನವೊಂದರಿಂದ ಆಯ್ದುಕೊಂಡದ್ದು. 'ಕವಿ ಕಾಲಾತೀತದಲ್ಲಿ ಗಾಳ ಹಾಕಿ ಕೂತ ಬೆಸ್ತ' ಎನ್ನುತ್ತಾರೆ ಎ.ಕೆ. ರಾಮಾನುಜನ್. ಕವಿತೆಗಳ ವಿಷಯದಲ್ಲಂತೂ ಇದು ಅಕ್ಷರಶಃ ಸತ್ಯ. ಕರೆದಾಗ ಬಾರದೇ, ತಡಕಾಡಿದಾಗ ಎಡತಾಕದೇ ಚಡಪಡಿಸುವಂತೆ ಮಾಡುತ್ತದೆ ಕವಿತೆ. ಮೂಡಿಲ್ಲದಾಗ ಮೂಡುವುದೇ ಇಲ್ಲ ಕವಿತೆ. ಅದು ಮೂಡಣ ಮನೆಯ ಮುತ್ತಿನ ನೀರನ್ನು ಆಕಸ್ಮಿಕವಾಗಿ ನೋಡಿದಾಗ ತನ್ನಿಂದ ತಾನೇ ಹೊಮ್ಮಿಬರುತ್ತದೆಯೇ ಹೊರತು, ಕವಿತೆ ಬರೆಯಲೆಂದೇ ಮನೆಯ ಮಾಡನ್ನು ಏರಿ ಮೂಡುತ್ತಿರುವ ಸೂರ್ಯನನ್ನು ನಿರೀಕ್ಷಿಸುತ್ತಾ ಕುಳಿತರೆ ಹತ್ತಿರವೇ ಸುಳಿಯದು. ನದಿಯ ತೀರದಲ್ಲಿ, ನೀರಿನಲ್ಲಿ ಕಾಲಿಳಿಸಿ ಕುಳಿತಿರಲು, ಪಕ್ಕದಲ್ಲೊಂದು ಜೀವವಿರಲು, ಮೀನಾಗಿ ಬಂದು ಕಾಲ್ತೊಡಕಾಗುತ್ತದೆ ಕವಿತೆ. ಗದ್ಯದ ವಿಷಯದಲ್ಲೂ ಇದು ಸತ್ಯ.

ಇದೇ ಹೆಸರನ್ನು ಆಯಲು ಮತ್ತೊಂದು ಕಾರಣವಿದೆ. ನಾನೊಬ್ಬ ಮೌನಿ. ಮಾತು ತುಂಬಾ ಕಮ್ಮಿ. ಗುಂಪಿನಲ್ಲಂತೂ ಮಾತೇ ಆಡುವುದಿಲ್ಲ. ನನ್ನ ಗೆಳೆಯರ ಆಕ್ಷೇಪವೂ ಅದೇ: ನೀನು ಹೀಗೆ ಮಾತೇ ಆಡದಿದ್ರೆ ಹ್ಯಾಗೆ? ಆದರೆ ನನಗೆ ಮಾತಿಗಿಂತ ಮೌನ ಇಷ್ಟ. ಯಾವುದೋ ಒಂದು ನಿರ್ದಿಷ್ಟ ವಿಷಯ ಕೊಟ್ಟರೆ ಮಾತಾಡಿಯೇನು, ಅಥವಾ ನನ್ನ ಜೊತೆ ಯಾರಾದರೂ ಒಬ್ಬರೇ ಇದ್ದಾಗ ಅವರೊಂದಿಗೆ ತುಂಬಾ ಮಾತಾಡುತ್ತೇನೆ, ಆದರೆ ಗುಂಪಿನಲ್ಲಿ ಮಾತ್ರ ನಾನು ಮಾತಾಡಲೊಲ್ಲೆ. ಮಾತಾಡಲು ಬರುವುದಿಲ್ಲ ಅಂತಲ್ಲ, (ಸ್ಕೂಲು, ಕಾಲೇಜುಗಳಲ್ಲಿ ಆಶುಭಾಷಣ, ಚರ್ಚಾಸ್ಪರ್ಧೆಗಳಲ್ಲಿ ನನಗೇ ಬರುತ್ತಿದ್ದುದು ಫಸ್ಟ್ ಪ್ರೈಜ್ ಕಣ್ರಪಾ!), ಆದರೆ 'ಆಡಬಾರದು' ಅಂತ ತೀರ್ಮಾನಿಸಿರುವಾಗ ಹೇಗೆ ಆಡಲಿ?! 'ಹೀಗಿದ್ದರೆ ನೀನು ಉದ್ಧಾರವಾಗೊಲ್ಲ' ಎಂಬ ಎಚ್ಚರಿಕೆಯನ್ನು ಮನೆಮಂದಿಯಿಂದಲೂ, ಸ್ನೇಹಿತರಿಂದಲೂ ಪದೇಪದೇ ಕೇಳುತ್ತಾ ಬಂದಿದ್ದೇನೆ, ಆದರೂ ನಾನು ನನ್ನ ನಿರ್ಧಾರ ಬದಲಿಸಿಲ್ಲ ಮತ್ತು ಆ 'ಉದ್ಧಾರ'ದತ್ತ ದಿನೇದಿನೇ ದಾಪುಗಾಲಿಡುತ್ತಲೇ ಇದ್ದೇನೆ. ಮಾತು ಬೆಳ್ಳಿ, ಮೌನ ಬಂಗಾರ ಅಲ್ವಾ?

ನಿನ್ನೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಸಮಾರಂಭದಲ್ಲಿ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾನು ಇದ್ದೆ. ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮ ಎಂಬಂತೆ ತೋರಲೇ ಇಲ್ಲ. ಮೊದಲಿಗೆ ಹೆಲಿಕಾಪ್ಟರ್ ಎಲ್ಲರ ಮೇಲೂ ಗುಲಾಬಿಯ ಪುಷ್ಪವೃಷ್ಠಿಗೈದು ಹೋಯಿತು. ನಂತರ ಈ ಸಂಭ್ರಮಕ್ಕಾಗಿಯೇ ಎಂಬಂತೆ ಮೋಡಗಳು ಮಳೆ ಸುರಿಸಿದವು. ಬಿಸಿಲು-ಮಳೆ ಹೊಯ್ದಿದ್ದರಿಂದ ಆಗಸದಲ್ಲಿ ಕಾಮನಬಿಲ್ಲು ಮೂಡಿ ಸುವರ್ಣ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಕೃತಿಯೇ ಸಿಳ್ಳೆ ಗಿಟ್ಟಿಸಿತು. ನಂತರ ಯಕ್ಷಗಾನ, ಡೊಳ್ಳುಕುಣಿತ, ಕರಡಿ ಮಜಲು, ಕೋಲಾಟ, ಅದೆಷ್ಟೋ ಸಾವಿರ ಮಕ್ಕಳಿಂದ ನೃತ್ಯ, ವೃಂದಗಾನ..... ಓಹೋಹೋ! ಒಂದೇ ಎರಡೇ? ರಾಜ್ಯೋತ್ಸವ, ಏಕೀಕರಣ ಪ್ರಶಸ್ತಿಗಳ ಪ್ರಧಾನವಾಯಿತು. ಮುಖ್ಯಮಂತ್ರಿಗಳು ಅದ್ಭುತವಾದ ಭಾಷಣವೊಂದನ್ನು ಓದಿ ಹೇಳಿದರು. ಕೊನೆಗೆ ಲೇಸರ್ ಬೆಳಕಿನ ಹೊಯ್ದಾಟ, ಬಾಣ-ಬಿರುಸುಗಳ ಢಾಂಢೂಂ... "ಕನ್ನಡಕ್ಕೇ" "ಕರ್ನಾಟಕಕ್ಕೇ" "ಕನ್ನಡಾಂಬೆಗೇ" ಎಂದು ಕೂಗಿದಾಗ ನಮ್ಮ ಎದೆಯಾಳದಿಂದ ಹೊಮ್ಮಿಬರುತ್ತಿದ್ದ "ಜೈ"ಕಾರದಲ್ಲಿ ಅದೆಷ್ಟು ಸಂಭ್ರಮವಿತ್ತು! ಅದೆಷ್ಟು ಹೆಮ್ಮೆಯಿತ್ತು!

ಓ ಕನ್ನಡಮ್ಮ, ನಿನಗೆ ನಾನು ಚಿರಋಣಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಕನ್ನಡ ಬರುವವರೊಂದಿಗೆ ಕನ್ನಡದಲ್ಲೇ ಮಾತಾಡುವ ಪಣ ತೊಡೋಣ.

ಧನ್ಯವಾದಗಳು.

6 comments:

ಶ್ರೀನಿಧಿ.ಡಿ.ಎಸ್ said...

ಕನ್ನಡ ಬರುವವರೊಂದಿಗೆ ಕನ್ನಡದಲ್ಲೇ ಮಾತಾಡುವ ಪಣ ತೊಡೋಣ - ಮತ್ತು, ಬರದವರಿಗೆ ಕಲಿಸುವ ಯತ್ನವನ್ನೂ ಮಾದೋಣ, ನಮ್ಮ ಪರಿಧಿಯೊಳಗೆ!

ಹೊಸ ಹೆಸರು ಚೆನ್ನಾಗಿದೆ ಮಿತ್ರ! ಮಾತು ಕಡ್ಮೆ ಆಡು ತೊಂದ್ರಿಲ್ಲೆ ಮಾರಾಯ!ಆದ್ರೆ ಬರಿಯದು ಜಾಸ್ತಿ ಮಾಡು ಅಷ್ಟೆ! :)

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ...

ಖಂಡಿತ. ಅವರೂ ಕಲಿಯುವ ಪಣ ತೊಟ್ಟದ್ದೇ ಹೌದಾದರೆ ಕಲಿಸಲಿಕ್ಕಿನ್ನೇನು?

ಧನ್ಯವಾದಗಳು.

Dodderi said...

write more!!! i disagree with Shrinidhi, instead experience more, read more, observe more , be more sensitive, write less, if you get chance read soem Anton Chekhov storeis/drama

ಸುಶ್ರುತ ದೊಡ್ಡೇರಿ said...

@ Dodderi

Thanx ಶಶಿಯಣ್ಣ. Sure shall read whatever u suggested if I get a chance.

ವಿಕಾಸ್ said...

-----"ಕನ್ನಡಾಂಬೆಗೇ" ಎಂದು ಕೂಗಿದಾಗ ಹೊಮ್ಮಿಬರುತ್ತಿದ್ದ "ಜೈ"ಕಾರದಲ್ಲಿ ಅದೆಷ್ಟು ಸಂಭ್ರಮವಿತ್ತು! ಅದೆಷ್ಟು ಹೆಮ್ಮೆಯಿತ್ತು!-------------

ಅದು ಮುಕ್ಕಾಲು ಭಾಗ ಕನ್ನಡಿಗರ ಕ್ಷಣಿಕ ಸಂಭ್ರಮ , ಅಭಿಮಾನ... ಹೊರಗೆ ಬಂದ ಕೂಡಲೇ ಅದೆಲ್ಲಾ ಮಾಯವಾಗಿ ಇಂಗ್ಲೀಷ್ ವ್ಯಾವೋಹ ಆವರಿಸುತ್ತದೆ.
ಎಲ್ಲಾ ಆಚರಣೆಗಳೂ ಅರ್ಥಹೀನವೆನಿಸಿಬಿಡುತ್ತದೆ. ಇನ್ನು ಕೆಲವೇ ವರುಷಗಳಲ್ಲಿ ಕನ್ನಡವೆಂಬುದು ಬರಿಯ ಮನೆಯೊಳಗಿನ ಮಾತಾಗಿ ಉಳಿದುಬಿಡುವ ಸಂಭವವಿದೆ.. :(

ಸುಶ್ರುತ ದೊಡ್ಡೇರಿ said...

@ ವಿಕಾಸ್

ನನಗೇನೋ ಅಷ್ಟೊಂದು ಆತಂಕ ಪಡುವ ಅಗತ್ಯ ಇಲ್ಲ ಅನ್ಸುತ್ತೆ. ಕುಮಾರಸ್ವಾಮಿಗಳು ಏನಾದ್ರೂ ಮಾಡ್ತಾರೇಂತ ಅಲ್ಲ, ನಾವು ಇಷ್ಟೆಲ್ಲ ಜನ ಇದೀವಿ, ಹಾಗೆಲ್ಲಾ ಆಗ್ಲಿಕ್ಕೆ ಬಿಡೊಲ್ಲ ಅಂತ...