Showing posts with label ಸಾಹಿತ್ಯ. Show all posts
Showing posts with label ಸಾಹಿತ್ಯ. Show all posts

Tuesday, September 22, 2020

ಅಕ್ಷಯ ಕಾವ್ಯದ ಅಕ್ಷಯ ಓದು

ಈ ದಿನ ಹೇಳಿಯೇಬಿಡುವೆನೆಂದು ಅವನೂ
ಈ ದಿನ ಹೇಳಿಯೇಬಿಡುವೆನೆಂದು ಅವಳೂ
ಎಷ್ಟೊಂದು ದೂರ ನಡೆದರು
ಅಣಬೆಗಳ ಹುಡುಕುತ್ತ

‘ಅಕ್ಷಯ ಕಾವ್ಯ’ ಎಂಬ ಈ ಹೊತ್ತಗೆಯನ್ನು ನಾನು ತಂದಿಟ್ಟುಕೊಂಡು ಎರಡು ವರ್ಷದ ಮೇಲಾಯಿತು. ಈ ದಿನ ಓದಿ ಮುಗಿಸಿಯೇಬಿಡುತ್ತೇನೆಂದು ಎಷ್ಟು ಸಲ ಅದನ್ನು ಕೈಗೆತ್ತಿಕೊಂಡಿಲ್ಲ... ಆದರೆ ಮುಗಿಸಲು ಸಾಧ್ಯವಾಗಿಯೇ ಇಲ್ಲ. ಮುಗಿಸುವುದಿರಲಿ, ಕೆಲವೊಂದು ಸಲ ಎರಡ್ಮೂರು ಪುಟದ ಮುಂದೆ ಹೋಗಲಿಕ್ಕೂ ಸಾಧ್ಯವಾಗಿಲ್ಲ. ಹಾಗಾದರೆ ಇದು ಅಷ್ಟೊಂದು ಸಂಕೀರ್ಣವಾದ ಗ್ರಂಥವೇ? ಹಾಗೂ ಅನಿಸಿಲ್ಲ. ಸರಳ ಶಬ್ದಗಳು, ಸರಳ ವಾಕ್ಯಗಳು, ಸರಳ ಪ್ರತಿಮೆಗಳು, ಎಲ್ಲೂ ಗಂಟಲಿಗೆ ಸಿಕ್ಕದ ಮೃದು ಆಹಾರವೇ. ಆದರೂ, ಈ ಎರಡು ವರ್ಷಗಳಲ್ಲಿ ಕನಿಷ್ಟ ನೂರು ಸಲ ಈ ಪುಸ್ತಕ ನನ್ನ ಕೈಗಳನ್ನಲಂಕರಿಸಿದ್ದರೂ, ‘ಓದಿ ಮುಗಿದ ಪುಸ್ತಕ’ಗಳ ಗುಂಪಿಗೆ ಇದನ್ನು ಸೇರಿಸಲಾಗುತ್ತಿಲ್ಲ ಯಾಕೆ?

ಬಹುಶಃ ಈ ಪುಸ್ತಕದ ಹೆಗ್ಗಳಿಕೆಯೇ ಅದು. ಗದ್ಯಸಾಹಿತ್ಯವನ್ನೇ ಹೆಚ್ಚು ನೆಚ್ಚಿಕೊಂಡಿದ್ದ ನಾನು ಈಗ ಏಳೆಂಟು ವರ್ಷಗಳಿಂದ ಕಾವ್ಯದ ಹುಚ್ಚಿಗೆ ಬಿದ್ದು, ‘ಹೊಸ ತರಹದ್ದು’ ಅಂತ ಕಂಡ ಕಾವ್ಯವನ್ನೆಲ್ಲ ಆಸೆ ಪಟ್ಟು ಕೊಂಡು ಓದಿ, ಕೆಲವಷ್ಟು ಸಲ ಅದರದೇ ಪ್ರಭಾವಕ್ಕೊಳಗಾಗಿ ಬರೆಯುತ್ತಿರುವವನು. ನವ್ಯದ ರುಚಿಗೆ ಮಾರುಹೋದವನು. ಆದಿಪ್ರಾಸ-ಅಂತ್ಯಪ್ರಾಸ-ಗಣ-ಪ್ರಸ್ತಾರಗಳ ಹಂಗು ಮುರಿದಮೇಲೂ ಕವಿ ಹೇಗೆ ಲಯ ಕಂಡುಕೊಂಡ ತನ್ನ ಕಾವ್ಯದಲ್ಲಿ? ಹೇಗೆ ತನ್ನ ರಚನೆ ಅಕಾವ್ಯವಾಗುವುದನ್ನು ತಪ್ಪಿಸಿದ? ಹೇಗೆ ವಸ್ತುವೊಂದು ಕವಿತೆಯಾಗಿ ರೂಪುಗೊಳ್ಳುತ್ತೆ? -ಎಂಬುದು ನನಗೆ ಇನ್ನೂ ಆಶ್ಚರ್ಯದ ವಿಷಯ. ಹೀಗಿರುವಾಗ, ಖಚಿತ ಸಂಗತಿಯಿಲ್ಲದ, ನಿಶ್ಚಿತ ವಾಹಿನಿಯಿಲ್ಲದ, ಲಿಖಿತ ಕ್ರಮವಿಲ್ಲದ, ಬದ್ಧ ರೂಪವಿಲ್ಲದ ಅಖಂಡ ಬರಹವೊಂದು ಹೇಗೆ ಕಾವ್ಯವಾಗಿ ಮೈತಳೆಯುತ್ತದೆ?

‘ಅಕ್ಷಯ ಕಾವ್ಯ’ವನ್ನು ಓದುವಾಗೆಲ್ಲ ನನ್ನನ್ನು ಕಾಡುವ ಪ್ರಶ್ನೆಗಳು ಇವು. ಇಲ್ಲಿ ಬರುವ ತೊಂಬತ್ತು ಪ್ರತಿಶತ ಕಥೆಗಳು-ಉಲ್ಲೇಖಗಳ ಪರಿಚಯ ನನಗಿಲ್ಲ. ಗೂಗಲ್ ಮಾಡಿದರೆ ತಿಳಿಯುತ್ತಿತ್ತೇನೋ, ಆದರೆ ಯಾವತ್ತೂ ಆ ಗೋಜಿಗೆ ಹೋಗಿಲ್ಲ. ತಿಳಿದುಕೊಳ್ಳಬೇಕು ಅಂತ ಅನಿಸಿಯೇ ಇಲ್ಲ. ಇಷ್ಟಕ್ಕೂ ಈ ಪುಸ್ತಕವನ್ನು ‘ಅರ್ಥ ಮಾಡಿಕೊಳ್ಳಬೇಕು’ ಅಂತಲೇ ನನಗೆ ಇದುವರೆಗೆ ಅನಿಸಿಲ್ಲ. ಆದಾಗ್ಯೂ ಇದು ನಿರರ್ಥಕ ಓದು ಎಂಬ ಭಾವನೆ ಬಂದಿಲ್ಲ!

ಕಸ ಪಿಪಾಯಿಯೊಳಗೆರಡು ನಾಯಿಗಳು
ಅಂಡ ಅಂಡಾಶಯ ಕಂಫೀಟುಗಳ ಜಾಲಾಡಿಸುತ್ತಿವೆ
ಸಕಲರೂ ಕಾಯುತ್ತ ಭಿಕ್ಷುಕರೂ ಹಾಗೇ
ಸೇಂಟ್ ಥಾಮಸ್ ಅಕ್ವಿನಾಸ್ ಹೇಳಿದ ಹಾಗೆ
ಕಾರಣ ವಿನಾ ಕಾರ್ಯವಿಲ್ಲ
ಮನುಷ್ಯರ ದೃಷ್ಟಿಗಳ ಕತ್ತರಿಸುವ ಹಾಗೆ
ಯುಗಾಂತರದ ಗಾಡಿ

-ಈ ಸಾಲುಗಳಲ್ಲಿ ಬರುವ ಸೇಂಟ್ ಥಾಮಸ್ ಅಕ್ವಿನಾಸ್ ಯಾರು? ನನಗೆ ಅದು ಮುಖ್ಯ ಅಂತ ಅನಿಸಿಯೇ ಇಲ್ಲ. ಹುಡುಕಿದರೆ ಅವನೊಬ್ಬ ಇಟಲಿ ದೇಶದ ಫಿಲಾಸಫರ್ ಅಂತ ಗೊತ್ತಾಗುತ್ತಿತ್ತು. ಅಂವ ಏನು ಬರೆದ, ಏನೇನು ಮಾಡಿದ, ಯಾಕೆ ಹಾಗೆ ಹೇಳಿದ –ಎಲ್ಲಾ ವಿಷಯ ಸಂಗ್ರಹಿಸಬಹುದಿತ್ತು. ಆದರೆ ಕವಿತೆಯ ಓದನ್ನು ಮುಂದರಿಸಿಕೊಂಡು ಹೋಗಲು ನನಗೆ ಯಾವ ತೊಡಕೂ ಆಗಲಿಲ್ಲ. ಹಾಗೆಯೇ ಈ ಪುಸ್ತಕದಲ್ಲಿ ಬರುವ ಅರಬೀ ಸಮುದ್ರವೋ, ಅರಾರತ್ ಪರ್ವತವೋ, ಮೆಡಿಟರೇನಿಯನ್ ಬಿಸಿಲೋ, ರೋಡಿನ್‌ನ ಶಿಲ್ಪವೋ, ಬಾಮಿಯಾನಿನ ಬುದ್ಧನೋ –ನಾನು ಕಂಡವಲ್ಲ. ಇದರೊಳಗೆ ಪ್ರಸ್ತಾಪ ಮಾಡಲಾಗಿರುವ ಯಾವ್ಯಾವುದೋ ದೇಶಗಳ ಯಾವ್ಯಾವುದೋ ಭಾಷೆಗಳ ಕವಿಗಳ ಸಾಲುಗಳು ನಾನೆಂದೂ ಓದಿದವಲ್ಲ. ಮೆಂಡೆಲ್‌ಸ್ಟಾಮ್ ಬರೆದ ಒಂದು ಕವಿತೆಯನ್ನೂ ನಾನು ಓದಿದಂತಿಲ್ಲ. ಹಾಗಿದ್ದೂ ನನ್ನ ಓದು ಆ ಸಾಲುಗಳಲ್ಲಿ ನಿಲ್ಲಲಿಲ್ಲ. ಯಾಕೆಂದರೆ, ಈ ಗುಚ್ಛಗಳಲ್ಲಿ ನನ್ನ ನಿಲುಕಿಗೆ ಸಿಗದ ಯಾವುದೋ ದೇಶಭಾಷೆಗಳ ದಾರ್ಶನಿಕರ ಜತೆ ನನ್ನದೇ ದೇಶದ ನನ್ನದೇ ಜನವೂ ಏಕಕಾಲದಲ್ಲಿ ಇದ್ದಾರೆ. ನನಗೆ ಅಷ್ಟೇನು ಪರಿಚಿತವಲ್ಲದ ಸೂಫಿ ಭಜನೆಯ ಕೆಳಸಾಲುಗಳಲ್ಲೇ ಡಿಸೆಂಬರ್ ಬಂದರೆ ನನ್ನ ಕಿವಿಗೆ ಬೀಳುವ ಅಯ್ಯಪ್ಪ ಭಕ್ತರ ಭಜನೆ ಸದ್ದು ಇದೆ. ಅಮೆರಿಕೆಯ ಅಪರಿಚಿತ ಓಣಿಯ ಜತೆಜತೆಗೇ ಪರ್ಕಳದ ಬೀದಿಯೂ ಇದೆ. ಜಪಾನೀ ನಾಟಕದ ದೃಶ್ಯದ ಬೆನ್ನ ಹಿಂದೆಯೇ ವಿವಿಧಭಾರತಿಯ ಗಾನವಿದೆ.

ಬಹುಶಃ ಇದೇ ಕಾರಣಕ್ಕೆ ಈ ಕೃತಿ ನನ್ನನ್ನು ಹಿಡಿದಿಟ್ಟುಕೊಂಡಿರುವುದು. ಪೂರ್ತಿ ಅರ್ಥವಾಗುವುದಿಲ್ಲ, ಆದರೆ ಇದರಲ್ಲೇನೋ ಅರ್ಥವಿದೆ ಅಂತ ಅನಿಸುತ್ತದೆ. ತಿಳಿದವರು ಹೇಳುವಂತೆ, ಕಾವ್ಯದ ಸಾರ್ಥಕತೆಯೂ ಅಷ್ಟೆಯೇ ಅಲ್ಲವೇ? ಯಾವುದೇ ಕವಿತೆ ಕಾಡಬೇಕಾದರೆ ಅದು ಪೂರ್ತಿ ಅರ್ಥವಾಗಬಾರದು: ಇದರಲ್ಲಿ ‘ಇನ್ನೇನೋ ಇದೆ, ಇನ್ನೇನೋ ಇದೆ’ ಅನ್ನಿಸುತ್ತಿರಬೇಕು!

ಒಂದು ದಿನ ನಾನೂ ಕೆಲವು ಮಹಾವಾಕ್ಯಗಳ ಬರೆಯುವೆ
ಬರೆದು ಸರ್ಕಸ್ ಡೇರೆಗಳ ಸುತ್ತ ಆಡಲು ಬಿಡುವೆ
ಅವು ಕಂಡವರ ಮನಸ್ಸುಗಳ ಸೇರಲಿ ಎನ್ನುವೆ
ಕೆಲವು ಅಲ್ಲೇ ಉಳಿದಾವು
ಕೆಲವು ವಾಪಸು ಬರುತ್ತವೆ
ಬಂದಾಗ ಅವಕ್ಕೆ ಗಾಯಗಳಾಗಿರುತ್ತವೆ

ಮಹಾವಾಕ್ಯಗಳು ಈ ಕಾವ್ಯದಲ್ಲಿ ಇಲ್ಲವೆಂದೇ ಹೇಳಬೇಕು. ಇಲ್ಲಿ ಉದುರಿದ ಹಕ್ಕಿಯ ಪುಕ್ಕವೂ ಹಾರುತ್ತದೆ. ಹಗ್ಗದ ಮೇಲೆ ಒಣಹಾಕಿದ ಅಂಗಿ ಗಾಳಿಗೆ ಅಲ್ಲಾಡುತ್ತದೆ. ಆಕಾಶ ನೋಡುತ್ತಾ ನಿಂತವಳ ಕಣ್ಣಲ್ಲಿ ನಕ್ಷತ್ರಗಳು ಮೆಲ್ಲಗೆ ತೇಲುತ್ತವೆ. ಕತ್ತಲೆ ಗಾಢವಾದಂತೆ ನೆರಳುಗಳು ಕರಗುತ್ತವೆ. ಓದುತ್ತಾ ಕುಳಿತ ನಾನು ಅದರಲ್ಲೇ ಮುಳುಗುತ್ತೇನೆ. ರಾಜಧಾನಿ ಎಕ್ಸ್‌ಪ್ರೆಸ್ ನನ್ನನ್ನು ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ಹುಸೇನ್‌ಸಾಗರದ ಬುದ್ಧನನ್ನು ತೋರಿಸುತ್ತದೆ. ಗಜಿಬಿಜಿಯ ಸಂತೆಯಲ್ಲಿ ಮಂಡಕ್ಕಿ ಕೊಳ್ಳುತ್ತೇನೆ. ಆಸ್ಪತ್ರೆ ಪಕ್ಕದ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತೇನೆ. ಹೂಗಳು ತುಂಬಿದ ಶೀತಲ ಕೊಳದಲ್ಲಿ ಸ್ನಾನ ಮಾಡುತ್ತೇನೆ. ದಟ್ಟಾರಣ್ಯದ ನಡುವಿನ ಕಣಿವೆಯ ಪಕ್ಕದಲ್ಲಿ ನಿಂತು ಬಟ್ಟೆ ಬದಲಿಸಿಕೊಳ್ಳುತ್ತೇನೆ. ರೋಡ್‌ರೋಲರ್ ಒಂದು ಮೈಮೇಲೆ ಹರಿದಂತಾಗುತ್ತದೆ. ಎಚ್ಚರಾದರೆ ನಮ್ಮೂರ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದೇನೆ.

ಈ ಕೃತಿಯ ಓದು ನನಗೆ ವಿಶಿಷ್ಟ ಅನುಭವ ನೀಡಿದೆ. ನಾನಿದನ್ನು ನಿದ್ರೆ ಬಾರದ ನಡುರಾತ್ರಿಗಳಲ್ಲಿ ಎದ್ದು ಕೂತು ಓದಿದ್ದೇನೆ, ಕುಟುಂಬದ ಜತೆ ಪ್ರವಾಸ ಹೋದಾಗ ಬ್ಯಾಗಿನಲ್ಲಿಟ್ಟುಕೊಂಡು ಹೋಗಿದ್ದೇನೆ, ಊರಿನ ಮಳೆ ನೋಡುತ್ತಾ ಇದನ್ನು ಧೇನಿಸಿದ್ದೇನೆ, ಲಾಕ್‌ಡೌನ್ ಕಾಲದ ತಳಮಳದ ದಿನಗಳಲ್ಲಿ ಕೈಗೆತ್ತಿಕೊಂಡಿದ್ದೇನೆ. ಯಾವುದೋ ಪುಟ ತೆರೆದು ಏನೂ ನಿರೀಕ್ಷೆಯಿಲ್ಲದೆ ಸುಮ್ಮನೆ ಕಣ್ಣಾಡಿಸುತ್ತಾ ಕೂತಿದ್ದೇನೆ. ಇಲ್ಲಿನ ಕೆಲ ಸಾಲುಗಳು ವಿನಾಕಾರಣ ಸುಖ ಕೊಟ್ಟಿವೆ:

ಕಾದೆ ನಾನು ಇಡೀ ವರುಷ ಒಂದು ಕಿರುನಗೆಗೆ
ಬ್ರಹ್ಮಕಮಲವಾದರೂ ಅರಳಬೇಕಿತ್ತು ಇಷ್ಟರೊಳಗೆ
ಯಾವೂರ ಕಮಲಿ ನೀನು
ಸಾವಿರ ವರುಷ ಕಾಯುವುದು ಹೇಗೆ ನಾನು

ಬಹುಶಃ ಈ ಪುಸ್ತಕವನ್ನು ನನಗೆ ಓದಿ ಮುಗಿಸಲು ಸಾಧ್ಯವಿಲ್ಲ. ಅಥವಾ ಯಾವತ್ತಾದರೂ ಇದನ್ನು ಓದಿ ಮುಗಿಸಿದ್ದೇನೆಂದು ಹೇಳುವ ಧೈರ್ಯ ಮಾಡಲಾರೆ. ಯಾರಾದರೂ ಇದರ ಬಗ್ಗೆ ಹೇಳು ಎಂದರೆ ಸರಿಯಾಗಿ ಹೇಳಲೂ ಸಾಧ್ಯವಾಗದು. ಮತ್ತು ಯಾರಾದರೂ ಇದನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಅವಡುಗಚ್ಚಿ ಹಿಡಿದು ಓದಿ ಮುಗಿಸಬಹುದು ಅಂತಲೂ ನನಗನಿಸುತ್ತಿಲ್ಲ. ಇದೊಂದು ಮುಗಿಯದ ಮುಂಜಾವು. ಪೂರೈಸಲಾಗದ ಅಪರಾಹ್ನ. ಸಂಪನ್ನವಾಗದ ಸಂಧ್ಯೆ. ಅಂತ್ಯವಿರದ ಇರುಳು.

ಪ್ರಯೋಗಶೀಲತೆಯ ಉತ್ತುಂಗದಂತಿರುವ ಈ ಕಾವ್ಯಧಾರೆ ನನ್ನನ್ನು ಸದಾ ಎಚ್ಚರದಲ್ಲಿಟ್ಟಿರುತ್ತದೆ ಅಂತ ನಾನು ನಂಬಿದ್ದೇನೆ. ಇಲ್ಲಿನ ಸಾಲುಗಳಿಂದ ಪ್ರೇರಿತನಾಗಿ ನಾನೂ ಏನೇನೋ ಗೀಚಿದ್ದೇನೆ. ಮತ್ತೇನನೋ ಓದುವಾಗ ಇಲ್ಲಿಯ ಸಾಲುಗಳನ್ನು ನೆನಪಿಸಿಕೊಂಡಿದ್ದೇನೆ. ಓದುವ ನನಗೇ ಇದು ಮುಗಿಯದ ತಪನೆಯಾಗಿರುವಾಗ, ಬರೆದ ಕವಿಗೆ ಇದು ಇನ್ನೆಷ್ಟು ಕಾಡಿರಬಹುದು ಅಂತ ಕಲ್ಪಿಸಿಕೊಂಡು ಅಚ್ಚರಿಯಲ್ಲಿ ಕಂಪಿಸಿದ್ದೇನೆ. ಇಂಥದ್ದೊಂದು ಪ್ರಯೋಗದ ಮೋಹಕ್ಕೆ ಸಿಲುಕಿದ ಕವಿಯ ಸ್ಥಿತಿಯನ್ನು ಊಹಿಸಿಕೊಂಡಿದ್ದೇನೆ. ಬರೆದೇ ತೀರಿಸಿಕೊಳ್ಳಬೇಕಾದ ಈ ದಾಹ ಬರೆದು ಮುಗಿಸಿದಮೇಲಾದರೂ ಅವರಿಗೆ ತೀರಿತಾ? ಗೊತ್ತಿಲ್ಲ. ಆದರೆ ಒಂದಂತೂ ಸತ್ಯ: ಇದೊಂದು ಬಗೆಹರಿಯದ ಬೇಗೆಯಂತೆ ನನ್ನೊಂದಿಗೇ ಇರಲಿದೆ ಬಹಳ ಕಾಲ ತಣ್ಣಗೆ. ಇಂಥದ್ದೊಂದು ಹೊರೆಯನ್ನು ನನಗೆ ದಾಟಿಸಿದ ಕವಿಗೆ ನಮಸ್ಕಾರ. ಆ ಕಾವ್ಯಶಕ್ತಿಗೆ ಶರಣು.

[ಕೆ.ವಿ. ತಿರುಮಲೇಶರಿಗೆ 80 ವರ್ಷ ತುಂಬಿದ ಸಂದರ್ಭ ಬರೆದದ್ದು. 'ಹೊಸ ದಿಗಂತ'ದಲ್ಲಿ ಪ್ರಕಟಿತ.]

Thursday, April 05, 2007

ತೇಜಸ್ವಿ ನನ್ನೊಂದಿಗೇ ಇದ್ದಾರೆ...

ಡಿಪ್ಲೋಮಾ ಎರಡನೇ ವರ್ಷ... ಮಧ್ಯಾಹ್ನದ ಪೀರಿಯಡ್ಡು... ನಿದ್ರೆ ಬರುತ್ತಿದ್ದರೂ ನಿದ್ರೆ ಮಾಡಬಾರದಂತಹ ಕ್ಲಾಸು. ಸಂಜೀವನ್ ಸರ್ ಕ್ಲಾಸು. ಸಂಜೀವನ್ ಸರ್ ಬರೀ ಲೆಕ್ಚರ್ ಕೊಡುತ್ತಿರಲಿಲ್ಲ; ಪಠ್ಯೇತರ ವಿಷಯಗಳ ಬಗ್ಗೆಯೂ ಹೇಳುತ್ತಿದ್ದರು. ಅಂದು ಅವರು ನಮ್ಮನ್ನು ಕೇಳಿದರು: 'ನಿಮ್ಮಲ್ಲಿ ಸಾಹಿತ್ಯಾಸಕ್ತರು ಯಾರಾದರೂ ಇದ್ದೀರಾ? ನೀವು ತೇಜಸ್ವಿಯವರನ್ನು ಓದಿದ್ದೀರಾ?' ಇನ್ನೂ ಓದಿರಲಿಲ್ಲ. ಮನೆಗೆ ಬರುತ್ತಿದ್ದ ಮ್ಯಾಗಜೀನುಗಳನ್ನು ಓದುತ್ತಿದ್ದೆ. ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳ ಮೇಲೆ ಕಣ್ಣು ಹಾಯಿಸುತ್ತಿದ್ದೆ. ತ್ರಿವೇಣಿಯನ್ನು ಓದಿದ್ದೆ. ಎಂ.ಕೆ. ಇಂದಿರಾರನ್ನು ಓದಿದ್ದೆ. ಭೈರಪ್ಪನವರ ಬಗ್ಗೆ ಕೇಳಿದ್ದರೂ ಎರಡು ಸಾಲು ಹೇಳುತ್ತಿದ್ದೆ. ಆದರೆ ತೇಜಸ್ವಿ ಇನ್ನೂ ನನಗೆ ಸಿಕ್ಕಿರಲೇ ಇಲ್ಲ.

ಆದರೆ ಅಂದಿನ ಕ್ಲಾಸು ಮುಗಿಸಿ ಮನೆಗೆ ಹೊರಡುವ ಮುನ್ನ ಲೈಬ್ರರಿಗೆ ಹೊಕ್ಕೆ. ಕಾಲೇಜಿನ ಎದುರಿಗೇ ಲೈಬ್ರರಿ. ಸೊರಬದ ಲೈಬ್ರರಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಜಾಲಾಡಿದಾಗ 'ಕಿರಗೂರಿನ ಗಯ್ಯಾಳಿಗಳು' ಪುಸ್ತಕ ಸಿಕ್ಕಿತು. ಮನೆಗೆ ಬಂದು ಇದ್ದಬದ್ದ ಪುಸ್ತಕಗಳನ್ನೆಲ್ಲ ಪಕ್ಕಕ್ಕಿಟ್ಟು ಇದನ್ನು ಓದುತ್ತಾ ಕುಳಿತರೆ ಸಂಜೆಯಾದದ್ದು ಯಾವಾಗ, ರಾತ್ರಿಯಾದದ್ದು ಯಾವಾಗ, ಊಟ ಮಾಡಿದ್ದು ಯಾವಾಗ, ಮಲಗಿದ್ದು ಯಾವಾಗ? ಕನಸಿನಲ್ಲೂ ಆ ಪುಸ್ತಕದ ಪಾತ್ರಗಳು. ಜೋರು ಗಾಳಿಗೆ ಮನೆಯ ಪಕ್ಕದ ಹೆಬ್ಬಲಸಿನ ಮರ ಉರುಳಿ ಬಿದ್ದಿತ್ತು. ಸೋನ್ಸ್ ಉರುಳಿಸಿದ ದಿಮ್ಮಿ ನನ್ನತ್ತಲೇ ಉರುಳಿ ಬರುತ್ತಿತ್ತು. ಅಪ್ಪನ ಸೊಂಟ ಉಳುಕಿಹೋಗಿತ್ತು... ರಹಸ್ಯ ವಿಶ್ವ ನಾನೂ ಕಂಡಿದ್ದೆ.

ಆಮೇಲೆ ತೇಜಸ್ವಿಯವರ ಪುಸ್ತಕಗಳನ್ನು ಒಂದರ ಮೇಲೊಂದರಂತೆ ಓದುತ್ತಾ ಹೋದೆ. ಅವರು ಕಟ್ಟಿಕೊಟ್ಟ, ಎಂದಿಗೂ ಮಾಸಲಾರದ ಚಿತ್ರಣಗಳು ಅವೆಷ್ಟೋ? ಪೇಟೆಯಲ್ಲಿ ವಲ್ಲಗೆ ನಡೆದುಕೊಂಡು ಹೋಗುತ್ತಿರುವ ಕೃಷ್ಣೇಗೌಡನ ಆನೆ, ಜೇನಿನ ಡಬ್ಬಿಯನ್ನೆಲ್ಲ ಮೈಮೇಲೆ ಕೆಡಗಿಕೊಂಡಿರುವ ಮಂದ, ಜೊಲ್ಲು ಸುರಿಸುತ್ತಾ ಮಲಗಿರುವ ಜೂಲುಜೂಲು ಕೂದಲಿನ ಕಿವಿ, ಈಚಲ ಬಯಲಿನಲ್ಲಿ ಸಾಗುತ್ತಾ ಇರುವ ಚಕ್ಕಡಿ, ಸಹ್ಯಾದ್ರಿಯ ಅಂಚಿನಲ್ಲಿ ಕೊನೆಗೂ ಕೈತಪ್ಪಿಹೋದ ಓತಿ.... ಒಂದೇ ಎರಡೇ? ಜುಗಾರಿ ಕ್ರಾಸಿನ ಸುರೇಶನ ಭಯ-ತಲ್ಲಣಗಳನ್ನು ನಾವೂ ಅನುಭವಿಸಿದ್ದು ಸುಳ್ಳೇ? ಬಿರಿಯಾನಿಯ ರುಚಿ ನೋಡಿರದಿದ್ದರೂ ಕರಿಯಪ್ಪ ಮಾಡಿದ ಬಿರಿಯಾನಿಯ ವಾಸನೆಯನ್ನು ಓದಿನಲ್ಲೇ ಆಸ್ವಾದಿಸಿದ್ದು ಸುಳ್ಳೇ? ಬೋಬಣ್ಣನ ಹತಾಶೆ ಕಂಡು ಕಣ್ಣು ತೇವ ಮಾಡಿಕೊಂಡದ್ದು ಸುಳ್ಳೇ? ತಬರನ ಕತೆಯಲ್ಲಿ ನಮ್ಮನ್ನೇ ಕಂಡದ್ದು ಸುಳ್ಳೇ?

ಇವತ್ತೂ ಅಂಥದೇ ಒಂದು ಮಧ್ಯಾಹ್ನ. ಆಗಷ್ಟೇ ಊಟ ಮಾಡಿ ಬಂದಿದ್ದೆ. ಉಳಿದ ಕೆಲಸಗಳನ್ನು ಬೇಗನೆ ಪೂರೈಸಿದರೆ ಅವರಿವರೊಂದಿಗೆ ಚಾಟಿಂಗಾದರೂ ಮಾಡಬಹುದು ಎಂದಾಲೋಚಿಸಿ ಬೇಗಬೇಗನೆ ಕೆಲಸ ಮಾಡುತ್ತಿದ್ದೆ. ಕೀಬೋರ್ಡಿನಲ್ಲಿ ಕುಟ್ಟಿದ್ದು ಮಾನಿಟರಿನ ಪರದೆಯ ಮೇಲೆ ಅಕ್ಷರವಾಗುತ್ತಿತ್ತು. ಫಕ್ಕನೆ ಒಂದು ಪಾಪ್-ಅಪ್ ವಿಂಡೋ ಉದ್ಭವವಾಯಿತು. ಮಾನಿಟರಿನ ಕೆಳಾಗಡೆ ಮೂಲೆಯಲ್ಲಿದ್ದ ಜೀಟಾಕಿನ ಪುಟ್ಟ ಐಕಾನಿನಿಂದ ಎದ್ದು ಬಂದಿದ್ದ ಆ ವಿಂಡೋದಲ್ಲಿ ಶ್ರೀನಿಧಿ ಅಂದ: 'ಬ್ಯಾಡ್ ನಿವ್ಸ್!'

'ಏನು?' ಅಂತ ಕೇಳಿದೆ.

'ತೇಜಸ್ವಿ ತೀರಿಕೊಂಡರಂತೆ!'

ಅರ್ಥವಾಗಲಿಲ್ಲ. ಮತ್ತೊಮ್ಮೆ ಕೇಳಿದೆ. ಮತ್ತೆ ಮತ್ತೆ ಕೇಳಿದೆ. ನನಗೆ ಆ ವಿಷಯ ಪೂರ್ತಿ ತಲೆಗೆ ಹೋಗುವಷ್ಟರಲ್ಲಿ ಮೂರ್ನಾಕು ವಿಂಡೋಗಳು ಪಾಪ್ ಆಗಿ 'ಬ್ಯಾಡ್ ನಿವ್ಸ್' 'ಬ್ಯಾಡ್ ನಿವ್ಸ್' ಅನ್ನತೊಡಗಿದವು. ಮೊಬೈಲೂ ವೈಬ್ರೇಟ್ ಆಗತೊಡಗಿತು.

ತೇಜಸ್ವಿ ಸತ್ತು ಹೋಗಿದ್ದಾರಾ? ಅದು ಹೇಗೆ ಸಾಧ್ಯ? ನನ್ನ ಕಣ್ಣ ಮುಂದೇ ಇದ್ದಾರಲ್ಲ ಇನ್ನೂ ಕುಬಿ, ಇಯಾಲ, ಗೌರಿ, ಪ್ಯಾರ, ಯೆಂಗ್ಟ, ದಾನಮ್ಮ, ಕರ್ವಾಲೋ, ಇಂಗ್ಲಿಷ್ ಗೌಡ... ಕಣ್ಣೆದುರಿಗೇ ಓಡುತ್ತಿದೆಯಲ್ಲಾ ಇನ್ನೂ ಖುದ್ದೂಸ್ ಎಕ್ಸ್‍ಪ್ರೆಸ್... ಇಡೀ ಊರಿಗೆ ಊರೇ ಹೊತ್ತಿ ಉರಿಯುತ್ತಿರುವಾಗ, ದಟ್ಟ ಹೊಗೆ ಕವಿದಿರುವಾಗ, ಇವರಿಬ್ಬರೇ ಪ್ರೇಮಿಗಳು ಬೆಟ್ಟದ ಮೇಲೆ.. ಮೇಲೆ....

ತೇಜಸ್ವಿ ನನ್ನೊಂದಿಗೆ ಅಮರವಾಗಿದ್ದಾರೆ... ಅವರು ಸೃಷ್ಟಿಸಿದ ಪಾತ್ರಗಳೊಂದಿಗೆ ಜೀವಂತವಾಗಿದ್ದಾರೆ... ಕಗ್ಗಾಡಿನ ಮಧ್ಯೆ ಹಸಿರಾಗಿದ್ದಾರೆ... ರತ್ನಮಾಲ ಹೊಳೆಯಲ್ಲಿನ ಕೆಂಪು ವಜ್ರದಂತೆ...

ಎಲ್ಲೋ ಓದಿದ್ದೆ: ಕುವೆಂಪುರವರ ಅತ್ಯುತ್ತಮ ಕೃತಿ 'ತೇಜಸ್ವಿ'ಯಂತೆ! ಅಲ್ಲ ಅನ್ನುವುದು ಹೇಗೆ? ಸರ್, ನಿಮಗೊಂದು ಭಾವಪೂರ್ಣ ಶ್ರದ್ಧಾಂಜಲಿ.