Thursday, June 21, 2007

ಹತ್ ಗಂಟೆ ಕರೆಂಟು

ಕಾದಂಬರಿ ಓದುತ್ತಿರುವ ಅಪ್ಪ, ಬತ್ತಿ ಹೊಸೆಯುತ್ತಿರುವ ಅಮ್ಮ, ಟೀವಿ ನೋಡುತ್ತಿರುವ ಅಜ್ಜಿ, ಹೋಮ್‍ವರ್ಕ್ ಮಾಡುತ್ತಿರುವ ನಾನು -ಎಲ್ಲರೂ ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಸ್ಥಬ್ಧವಾಗುತ್ತಿದ್ದೆವು. ಸರಿಯಾಗಿ ಹತ್ತು ಗಂಟೆಗೆ ಕರೆಂಟ್ ಹೋಗುತ್ತಿತ್ತು ನಮ್ಮಲ್ಲಿ! ಅದು ಹಾಗೆ ಹೋದಕೂಡಲೇ "ಓಹ್! ಹತ್ ಗಂಟೆ ಕರೆಂಟು.. ಎಲ್ಲಾ ಕೂತಲ್ಲೇ ಕೂತಿರಿ.. ಇನ್ನೊಂದು ನಿಮ್ಷಕ್ಕೆ ಬರ್ತು!" ಅಂತ ಅಜ್ಜಿ ಹೇಳುತ್ತಿದ್ದಳು. ಹೋದ ಕರೆಂಟು ಒಂದರಿಂದ ಎರಡು ನಿಮಿಷಗಳಲ್ಲಿ ವಾಪಸು ಬರುತ್ತಿತ್ತು. ಅಷ್ಟು ಬೇಗ ಅದೆಲ್ಲಿಗೆ ಹೋಗಿ ಬರುತ್ತಿತ್ತೋ ಅದು, ದೇವರೇ ಬಲ್ಲ! ಆದರೆ ಆ ಒಂದು ನಿಮಿಷದ ಅವಧಿಯಲ್ಲಿ, ನನಗೆ ನೆನಪಿದ್ದಂತೆ, ನಾವೆಲ್ಲಾ ಒಂದು ತೀರಾ ಆಪ್ತ ವಾತಾವರಣದಲ್ಲಿರುತ್ತಿದ್ದೆವು.

ಮನೆಯನ್ನೆಲ್ಲಾ ಧುತ್ ಎಂದು ಆವರಿಸಿರುವ ಕತ್ತಲೆ. ಓದುತ್ತಿದ್ದ ಕಾದಂಬರಿ ಆಗತಾನೇ ಪಡೆದುಕೊಳ್ಳ ಹೊರಟಿದ್ದ ಹೊಸ ತಿರುವು, ಹೊಸೆಯುತ್ತಿದ್ದ ಬತ್ತಿಯಲ್ಲಿದ್ದ ದೇವರೆಡೆಗಿನ ಭಕ್ತಿ, ಉರಿಯುತ್ತಿದ್ದ ಟೀವಿಯಲ್ಲಿ ಬರುತ್ತಿದ್ದ ಧಾರಾವಾಹಿ, ಮಾಡುತ್ತಿದ್ದ ಹೋಮ್‍ವರ್ಕ್‍ನೆಡೆಗಿನ ನನ್ನ ಶ್ರದ್ಧೆ -ಎಲ್ಲವೂ ಮಾಯವಾಗಿ ಸೀದಾ ವಾಸ್ತವಕ್ಕೆ ಬಂದಿಳಿಯುತ್ತಿದ್ದೆವು ನಾವೆಲ್ಲರೂ. ಇನ್ನೆರೆಡು ನಿಮಿಷಗಳಲ್ಲಿ ಕರೆಂಟು ಬಂದೇ ಬರುತ್ತದೆಂಬ ವಿಶ್ವಾಸ. ಲಾಟೀನು ಹಚ್ಚಲು ಏಳಲಿಕ್ಕೆ ಎಲ್ಲರಿಗೂ ಸೋಮಾರಿತನ. ಆ ಎರಡು ನಿಮಿಷ ನಾವು ಕತ್ತಲೆಯಲ್ಲಿ, ನಮ್ಮ ನಮ್ಮ ಜೊತೆ ಮಾತಾಡಿಕೊಳ್ಳುತ್ತಾ, ಏನೆಂದರೆ ಏನೂ ಮಾಡದೆ, ಶಪಿತ ಗಂಧರ್ವರಂತೆ ಸುಮ್ಮನೆ ಕುಳಿತಿರುತ್ತಿದ್ದೆವು.

ನನಗೆ ಆಗಲೇ ನಿದ್ರೆ ಬರುತ್ತಿರುತ್ತಿತ್ತು. ಬೇಗ ಕರೆಂಟ್ ಬಂದು ಬೇಗ ಹೋಮ್‍ವರ್ಕ್ ಮುಗಿಸಿ ಮಲಗುವ ಆತುರದಲ್ಲಿರುತ್ತಿದ್ದೆ. ಅಪ್ಪನಿಗೆ ಕತೆ ಮುಂದೇನಾಗುವುದೋ ಎಂಬ ಕುತೂಹಲ. ಅಮ್ಮನ ಕೈಗಳಿಗೆ ಬತ್ತಿ ಹೊಸೆದೂ ಹೊಸೆದೂ ಅಭ್ಯಾಸವಾಗಿಬಿಟ್ಟಿದ್ದರಿಂದ, ಹತ್ತಿಯನ್ನು ಬಿಡಿಸುವುದಕ್ಕಾಗಲೀ, ಮಣೆಯ ಮೇಲಿಟ್ಟು ಹೊಸೆಯುವುದಕ್ಕಾಗಲೀ ಬೆಳಕಿನ ಅಗತ್ಯವೇ ಇರಲಿಲ್ಲ. ಅವಳು ತನ್ನ ಪಾಡಿಗೆ ತಾನು ತನ್ನ ಕಾಯಕವನ್ನು ಮುಂದುವರೆಸಿರುತ್ತಿದ್ದಳಾದರೂ ಅಳತೆ ಸರಿಯಾಗಿ ಬರುತ್ತಿದೆಯಾ ಇಲ್ಲವಾ ಎಂಬ ಆತಂಕ. ಅಜ್ಜಿಗೆ ಕರೆಂಟ್ ಹೋದ ಸಂದರ್ಭದಲ್ಲಿ ಧಾರಾವಾಹಿ ಮುಂದೆ ಹೋಗಿಬಿಡುತ್ತದಲ್ಲಾ ಎಂಬ ಚಿಂತೆ: ಯಾರೋ ಬಾಗಿಲು ತಟ್ತಾ ಇದ್ದಿದ್ರು... ಇವಳು 'ಬಂದೇ' ಎನ್ನುತ್ತಾ ಬಾಗಿಲಿನತ್ತ ಧಾವಿಸುತ್ತಿದ್ದಳು... ಸರಿಯಾಗಿ ಅಷ್ಟೊತ್ತಿಗೆ ಹೋಗಬೇಕಾ ಕರೆಂಟು! ಇನ್ನು ಕರೆಂಟು ಬರುವುದರೊಳಗೆ ಏನೇನಾಗಿ ಹೋಗಿರುತ್ತದೋ ಏನೋ? ಛೇ!

ಆದರೆ ಅಜ್ಜಿಯ ಈ ಚಿಂತೆ ಅರ್ಥವಿಲ್ಲದ್ದಾಗಿ ಕಾಣುತ್ತಿತ್ತು ನನಗೆ. ನನ್ನ ಅಜ್ಜಿಗೆ ಟೀವಿ ಹುಚ್ಚು. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲವಾದರೂ ಅವಳು ಎಲ್ಲಾ ಭಾಷೆಯ ಕಾರ್ಯಕ್ರಮಗಳನ್ನೂ ನೋಡುತ್ತಿದ್ದಳು. ಆಕೆಗೆ ಛಾನೆಲ್ ಬದಲಿಸಲಿಕ್ಕಾಗಲೀ, ರಿಮೋಟ್ ಬಳಸಲಿಕ್ಕಾಗಲೀ ಗೊತ್ತಾಗುತ್ತಿರಲಿಲ್ಲ. ಟೀವಿ ಹಾಕಿಕೊಳ್ಳಲಿಕ್ಕೆ ಮಾತ್ರ ಬರುತ್ತಿತ್ತು. ಹೀಗಾಗಿ, ಟೀವಿ ಹಾಕಿದಾಗ ಯಾವ ಛಾನಲ್ ಬರುತ್ತಿರುತ್ತದೋ ಅದನ್ನೇ ನೋಡುತ್ತಾ ಕೂರುತ್ತಿದ್ದಳು. ಈ ಧಾರಾವಾಹಿಗಳ ವಿಷಯದಲ್ಲಂತೂ ಅವಳು ಸಾಕಷ್ಟು ಕನ್‍ಫ್ಯೂಶನ್ನುಗಳಿಗೆ ಒಳಗಾಗುತ್ತಿದ್ದಳು. ಈ ಛಾನಲ್ಲುಗಳವರು ಒಂದಾದ ನಂತರ ಒಂದು ಧಾರಾವಾಹಿ ಹಾಕುತ್ತಾರೆ. ಅಲ್ಲದೇ ಒಂದು ಧಾರಾವಾಹಿಯಲ್ಲಿನ ತಾರೆಗಳೇ ಮತ್ತೊಂದು ಧಾರಾವಾಹಿಯಲ್ಲೂ ಇರುತ್ತಾರೆ. ಹೀಗಾಗಿ, ಒಟ್ಟೊಟ್ಟಿಗೆ ಮೂರ್ನಾಲ್ಕು ಧಾರಾವಾಹಿಗಳನ್ನು ನೋಡುತ್ತಿದ್ದ ನನ್ನ ಅಜ್ಜಿ, ಅವೆಲ್ಲವನ್ನೂ ಸೇರಿಸಿ ಏನೋ ಒಂದು ಅರ್ಥ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ, ಕರೆಂಟ್ ಹೋದಾಗ ಧಾರಾವಾಹಿ ಮುಂದುವರೆದುದಕ್ಕೆ ಅಜ್ಜಿ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವಳಿಗೆ ಸಿನಿಮಾಗಳಲ್ಲಿ ಬರುವ ಫ್ಲಾಶ್‍ಬ್ಯಾಕುಗಳಂತೂ ದೇವರಾಣೆ ಅರ್ಥವಾಗುತ್ತಿರಲಿಲ್ಲ. 'ಈಗ ವಿಷ್ಣುವರ್ಧನ್ ಇದ್ದಿದ್ನಲ, ಅವ ಸಣ್ಣಕಿದ್ದಾಗ ಹೆಂಗಿದ್ದಿದ್ದ ಅಂತ ತೋರುಸ್ತಾ ಇದ್ದ' ಎಂದು ನಾವು ಎಕ್ಸ್‍ಪ್ಲನೇಶನ್ ಕೊಟ್ಟರೆ, 'ಹೂಂ ಸುಮ್ನಿರು! ಅಷ್ಟು ದೊಡ್ಡಕಿದ್ದ ಅಂವ ಅದು ಹೆಂಗೆ ಅಷ್ಟು ಸಣ್ಣಕಾಗಕ್ಕೆ ಸಾಧ್ಯ?' ಎನ್ನುತ್ತಿದ್ದಳು. ಅವಳ ಪ್ರಕಾರ ಆ ಹುಡುಗ ಬೇರೆಯವನು, ವಿಷ್ಣುವರ್ಧನ್ ಅಲ್ಲ! ಎಲ್ಲಾದರೂ ಮದುವೆಯ ಸೀನ್ ಬಂದರೆ ಅಡುಗೆಮನೆಯಲ್ಲಿರುತ್ತಿದ್ದ ನನ್ನ ಅಮ್ಮನನ್ನು ಕರೆಯುತ್ತಿದ್ದಳು: 'ಗೌರೀ ಬಾರೇ, ಮದ್ವೆ ತೋರುಸ್ತಾ ಇದ್ದ...!' ಅಂತ. ಅವಳಿಗೆ ಟೀವಿಯಲ್ಲಿ ಮದುವೆ-ಗಿದುವೆ ನೋಡುವುದೆಂದರೆ ಇನ್ನಿಲ್ಲದ ಸಂಭ್ರಮ. ಪುಣ್ಯಕ್ಷೇತ್ರಗಳನ್ನಾಗಲೀ, ವಿದೇಶವನ್ನಾಗಲೀ, ಬೆಂಗಳೂರಿನ ಟ್ರಾಫಿಕ್ಕನ್ನಾಗಲೀ ನೋಡಿ ತಾನೇ ಅಲ್ಲಿಗೆ ಹೋಗಿಬಂದಷ್ಟು ಖುಷಿ ಪಡುತ್ತಿದ್ದಳು. 'ಕಾಶಿಯೂ ಬ್ಯಾಡ ಏನೂ ಬ್ಯಾಡ. ಎಲ್ಲಾ ಇಲ್ಲೇ ಕೂತ್ಕಂಡು ನೋಡ್ಯಾತು ತಗ!' ಎನ್ನುತ್ತಿದ್ದಳು ಅಪ್ಪನ ಬಳಿ.

ನಾವು ಈ ಹತ್ತು ಗಂಟೆ ಕರೆಂಟಿಗೆ ಅದೆಷ್ಟು ಅಡಿಕ್ಟ್ ಆಗಿದ್ದೆವು ಅಂದ್ರೆ, ಒಂದು ದಿನ ಹತ್ತು ಗಂಟೆಗೆ ಕರೆಂಟ್ ಹೋಗಲಿಲ್ಲವೆಂದರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು. ಪ್ರತಿ ಮುಂಜಾನೆಯೂ ಬರುವ ಪೇಪರು ಒಂದು ದಿನ ಬಾರದೇ ಹೋದರೆ ಹೇಗಾಗುತ್ತದೋ ಹಾಗೆ, ಅಥವಾ ದಿನವೂ ಬರುವ ಹಾಲಿನವಳು ಇಂದು ಬಾರದಿದ್ದರೆ ಹೇಗಾಗುತ್ತದೋ ಹಾಗೆ, ಅಥವಾ ಪ್ರತಿದಿನ ಊಟದ ಸಮಯಕ್ಕೆ ಸರಿಯಾಗಿ 'ಮ್ಯಾಂವ್ ಮ್ಯಾಂವ್' ಎನ್ನುತ್ತಾ ಹಾಜರಾಗುತ್ತಿದ್ದ ಬೆಕ್ಕು ಇಂದು ಕಾಣಿಸಿಕೊಳ್ಳದಿದ್ದರೆ ಹೇಗಾಗುತ್ತದೋ ಹಾಗೆ -ನಾವು ಹತ್ ಗಂಟೆಗೆ ಕರೆಂಟ್ ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ ವ್ಯಥೆ ಪಡುತ್ತಿದ್ದೆವು.

ಬಹುಶಃ ಈ ಕರೆಂಟು ಹೋದ ಘಳಿಗೆಯಲ್ಲಿ ಆವರಿಸಿಕೊಳ್ಳೂತ್ತಿದ್ದ ಕತ್ತಲೆಯಲ್ಲಿ ನಮಗೇ ತಿಳಿಯದಂಥ ಅದೇನೋ ಮೋಡಿಯಿರುತ್ತಿತ್ತು. ಆಗ ಚಂದ್ರ ಬೆಳದಿಂಗಳಾಗಿ ಮನೆಯೊಳಗೆ ಬರುತ್ತಿದ್ದ. ಆ ಹಿತವಾದ ಮಂದ ತಿಂಗಳ ಬೆಳಕು ಕಿಟಕಿಯ ಸರಳುಗಳ ಚಿತ್ರವನ್ನು ನೆಲದ ಮೇಲೆ ಮೂಡಿಸುತ್ತಿತ್ತು. ನೆಲದ ಮೇಲೆ ಮೂಡಿದ ಆ ಬೆಳಕ ಚಿತ್ತಾರವೇ ಇಡೀ ಮನೆಗೆ ದೀಪವಾಗುತ್ತಿತ್ತು. ಆ ಬೆಳಕಿನಲ್ಲಿ ಅಮ್ಮನ ಮಂದಹಾಸಮಯ ಮುಖದಲ್ಲಿನ ಭಕ್ತಿ, ಅಜ್ಜಿಯ ಸುಕ್ಕುಗಟ್ಟಿದ ಮುಖದಲ್ಲಿನ ಚಡಪಡಿಕೆ, ಅಪ್ಪನ ಶೇವ್ ಮಾಡದ ಮುಖದಲ್ಲಿನ ಕುತೂಹಲ ನನಗೆ ಕಾಣಿಸುತ್ತಿತ್ತು.

ಒಮ್ಮೊಮ್ಮೆ, ತೀರಾ ಒಮ್ಮೊಮ್ಮೆ, ಹೀಗೆ ಹತ್ತು ಗಂಟೆಗೆ ಹೋದ ಕರೆಂಟು ಎಷ್ಟು ಹೊತ್ತಾದರೂ ಬರುತ್ತಲೇ ಇರಲಿಲ್ಲ. ಆಗ ನಮ್ಮಲ್ಲಿ ಯಾರಾದರೂ ಒಬ್ಬರು ಲಾಟೀನು ಹಚ್ಚಲಿಕ್ಕೆ ಏಳುವುದು ಅನಿವಾರ್ಯವಾಗುತ್ತಿತ್ತು. ತಡಕಾಡಿಕೊಂಡು ಹೋಗಿ ಲಾಟೀನು ತಂದು, ಬೆಂಕಿಪೊಟ್ಟಣ ಹುಡುಕಿ, ಕಡ್ಡಿ ಗೀರಿ, ಗ್ಲಾಸೇರಿಸಿ, ಬತ್ತಿಯ ಕಿಟ್ಟ ತೆಗೆದು... ಹಚ್ಚಿ ಗ್ಲಾಸು ಇಳಿಸಿದರೆ ಮನೆಯನ್ನೆಲ್ಲಾ ತುಂಬಿಕೊಳ್ಳುತ್ತಿದ್ದ ಹಳದಿ ಬೆಳಕು... ಬೆಳದಿಂಗಳ ಬೆಳ್ಳಿ ಬೆಳಕಿನೊಂದಿಗೆ ಬೆರೆಯುತ್ತಿದ್ದ ಈ ಸ್ವರ್ಣವರ್ಣದ ಬೆಳಕು ಅಮ್ಮನ ಮೂಗುತಿಯನ್ನೂ ಅಜ್ಜಿಯ ಕೈಬಳೆಯನ್ನೂ ಹೊಳೆಸುತ್ತಿತ್ತು.

ಇನ್ನು ಮಾಡಲಿಕ್ಕೇನೂ ಕೆಲಸವಿಲ್ಲ. ಎಲ್ಲಾ ಹಾಸಿಗೆ ಬಿಚ್ಚಿ ಮಲಗಿದರಾಯಿತು. ಮಲಗುವ ಮುನ್ನ ಅಮ್ಮ ಹಾಲಿಗೆ ಹೆಪ್ಪು ಹಾಕಬೇಕಿದೆ, ಅಜ್ಜಿ ಲ್ಯಾಟ್ರೀನಿಗೆ ಹೋಗಿ ಬರಬೇಕಿದೆ, ಅಪ್ಪ ಉಚ್ಚೆ ಹೊಯ್ದು ಬರಬೇಕು ಮತ್ತು ನಾನು ಅಮ್ಮ ತಂದುಕೊಟ್ಟ ಹಾಲನ್ನು ಕುಡಿಯಬೇಕು. ಆದಷ್ಟೂ ವೇಗದಲ್ಲಿ ಮಾಡುತ್ತಿದ್ದೆವು ನಾವು ಆ ಕೆಲಸಗಳನ್ನು... ಎಲ್ಲಾ ಮಾಡಿ ಮುಗಿಸಿ, ನಾನು ಪುಸ್ತಕವನ್ನೆಲ್ಲಾ ಮುಚ್ಚಿಟ್ಟು, ಇನ್ನೇನು ಮಲಗಲು ಹೊರಡಬೇಕು; ಅಷ್ಟರಲ್ಲಿ ಬರುತ್ತಿತ್ತು ಹಾಳು ಕರೆಂಟು! ಆಗ ಕರೆಂಟು ಹೋದುದಕ್ಕೆ ಬೈದುಕೊಂಡಿದ್ದ ನಾವು ಈಗ ಕರೆಂಟು ಬಂದುದಕ್ಕೆ ಶಪಿಸುತ್ತಿದ್ದೆವು ಮನಸಿನಲ್ಲೇ. ಏಕೆಂದರೆ, ಕರೆಂಟು ಬಾರದೇ ಇದ್ದರೆ ನಾವೆಲ್ಲಾ ಹಾಸಿಗೆ ಬಿಚ್ಚಿ ಹಾಯಾಗಿ ಮಲಗಿರುತ್ತಿದ್ದೆವು. ಆದರೆ ಈಗ ಕರೆಂಟು ಬಂದುಬಿಟ್ಟಿದ್ದರಿಂದ ಮತ್ತೆ ನಮ್ಮ ನಮ್ಮ 'ಕೆಲಸ'ಗಳಿಗೆ ವಾಪಸಾಗುವುದು ಅನಿವಾರ್ಯವಾಗಿತ್ತು. ಬಂದ ಕರೆಂಟನ್ನು ಮನದಲ್ಲೇ ಶಪಿಸುತ್ತಾ ಆದರೂ ಬಾಯಲ್ಲಿ 'ಅಬ್ಬ ಸಧ್ಯ! ಬಂತು!' ಎನ್ನುತ್ತಾ ಹುಸಿನಗೆಯಾಡುತ್ತಿದ್ದೆವು. ಮತ್ತೆ ಎಲ್ಲವೂ ಮುಂದುವರೆಯುತ್ತಿದ್ದವು: ಕಾದಂಬರಿ, ಧಾರಾವಾಹಿ, ಬತ್ತಿ ಹೊಸೆಯುವಿಕೆ ಮತ್ತು ಹೋಮ್‍ವರ್ಕ್!

[ನನ್ನ ಬ್ಲಾಗಿನ ಹಿಟ್ಟನ್ನು ಹತ್ತು ಸಾವಿರದ ಗಡಿ ಮುಟ್ಟಿಸುವಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ತುಂಬಾ ಪ್ರೀತಿಯ ಧನ್ಯವಾದಗಳು.]

24 comments:

ಶ್ರೀನಿಧಿ.ಡಿ.ಎಸ್ said...

love u! :)

Sushrutha Dodderi said...

ಶ್ರೀನಿಧಿ,
love u a lot darling.... :)

Harsha Bhat said...

Indiadalli Tendulkar dravid matte Gngguly iddidda ... 10000 datdavu eega Sush serkyanda helatu.


Congarats...... good work. keep it up

Anonymous said...

sushruth congrats!!! keep it going.....
"hath gante karentu" chennagidhe nanagu halliyalli idhagina nenapu banthu.

ಯಜ್ಞೇಶ್ (yajnesh) said...

congrts sushrutha....


Adastu bega Tendulkar record na break maadu :)

keep it up.

-Yajnesh

ಸಿಂಧು sindhu said...

congrats Su..
mattu idu inna kela dinagaLige chikkavishayavaagi.. laksha hits barali.. neenu jaasti bareayli, namagella odalu oLLeyadu sigali..

preetiyinda
akka

ರಾಜೇಶ್ ನಾಯ್ಕ said...

ಅಭಿನಂದನೆಗಳು ಹತ್ತು ಸಾವಿರ ದಾಟಿದಕ್ಕಾಗಿ.

ಯಾವುದೇ ಸಣ್ಣ ವಿಷಯ ಸಿಕ್ಕಿದರೂ ಅದರ ಬಗ್ಗೆ ಉತ್ತಮವಾಗಿ ಬರೆಯಬಲ್ಲ ನಿಮ್ಮಲ್ಲಿರುವ ನೈಪುಣ್ಯತೆಗೆ ಅಡ್ಡಬಿದ್ದೆ. ಗಾಳ ಹಾಕುತ್ತಾ ಇರಿ...ನಿರೀಕ್ಷಿಸುತ್ತಿರುವ ಮೀನು ಸಿಕ್ಕಿದರೂ...

Shrilatha Puthi said...

ತುಂಬಾ ಚೆನ್ನಾಗಿತ್ತು.. moreover i cud relate to it.. ನಾನು ಒಂದೊಂದು ಸಲ ಅಂದುಕೊಳ್ಳೋದು ಹಳ್ಳಿಯಲ್ಲಿ ಬೆಳೆದ ನಾವೆಲ್ಲಾ ಎಷ್ಟು ಅದೃಷ್ಟವಂತರು ಅಂತ, ಈ ತರ ಎಷ್ಟೊಂದು ಕತೆಗಳು, ನೆನಪುಗಳು ಇವೆ ನಮ್ಮ ಹತ್ರ..

btw, ಏನಿದು ನಿಮ್ಮ ಮತ್ತು ಶ್ರೀನಿಧಿ ಮಧ್ಯೆ ’love u' exchange?

just kidding.. :)

ಶ್ಯಾಮಾ said...

ಚೆನ್ನಾಗಿದ್ದು.. ಇದನ್ನ ಓದಿ ನಂಗೂ ಒಂದಿಷ್ಟು ನೆನಪಾತು.. ನಮ್ಮನೆಲ್ಲೂ ಹೀಗೆ ಇರ್ತಿತ್ತು ಕರೆಂಟ್ ಹೋದಾಗ ... ಒಂದು ವೇಳೆ ಕರೆಂಟ್ ಬರದು ಸ್ವಲ್ಪ ತಡವಾದರೆ ಅಪ್ಪ "ಕರೆಂಟ್ ಬರೋ ಹಾಗೆ ಕಾಣಸ್ತಾ ಇಲ್ಲೇ ಮಲಗಿ ಸಾಕು" ಅಂತ ಹೇಳ್ತಿದ್ದರು.. ಹಾಗೆ ಹೇಳೋದನ್ನೇ ಕಾಯ್ತಾ ಇರ್ತಿದ್ದ ನಾವು ಬೇಗ ಬೇಗ ಹೋಗಿ ಮಲಗಿಬಿಡ್ತಿದ್ವಿ ಎಲ್ಲಿ ಕರೆಂಟ್ ಬಂದು ಮತ್ತೆ ಹೋಮ್ ವರ್ಕ್ ಮಾಡಬೇಕಾಗುತ್ತೋ ಅಂತ. :)

ಅರ್ಚನ ಧಾಮಿ said...

ಚೆನ್ನಾಗಿ ಬಂದಿದೆ ಕರೆಂಟು ಕಥೆ. ಹೀಗೆ ಮಂದುವರೆಸಿ ನಿಮ್ಮ ಗಾಳಗಾರಿಕೆಯನ್ನು.

Anonymous said...

ನಮ್ಮ ಮನೆಲು ರಾತ್ರೆ ಹತ್ತು ಗಂಟೆಗೆ ಕರೆಂಟು ಹೋಕ್ತಿತ್ತು. ನಾನು ಅಷ್ಟೋ ತನಕ ಹೋಮ್ ವರ್ಕ್ ಮುಗುಸಿ ಓದಲೇ ಕುರ್ತಿದ್ದಿ. ಅದು ಹೋಪದೆ ತಡ ಹಂಗೆ ಪುಸ್ತಕನೆಲ್ಲಾ ಬದಿಗಿಟ್ಟು ಮಲಗಿ ಬಿಡ್ತಿದ್ದಿ. ಕರೆಂಟು ಬಂದ ತಕ್ಷಣ ಅಮ್ಮ ಎಬ್ಬಿಸಿದ್ರು ಓದಲೇ ನಿದ್ದೆ ಬಂದ ತರ ನಾಟಕ ಮಾಡ್ತಿದ್ದಿ.

ಸಣ್ಣ ವಿಷಯವನ್ನು ತುಂಬಾ ಚನ್ನಾಗಿ ಬರದ್ದೆ.
ಮದ್ಯೆ ಇವಳು ’ಬಂದೆ’ ಅಂತಾ ಹೇಳದು ಯಾರು ಅಮ್ಮನಾ ಅಜ್ಜಿನಾ ಗೊತ್ತಾಗಲ್ಲೆ.

ಇನ್ನು ಬರಿತಾ ಇರು. ನಂಗ ಎಲ್ಲಾ ಸೇರಿ ನಿನ್ನ ಬ್ಲಾಗ್ ಹಿಟ್ಟನ್ನಾ ೧೦,೦೦೦ ಗಡಿದಾಟಿಸಿದ್ಯ ನೀನು ನಿನ್ನ ಲೇಖನಗಳನ್ನಾ ಹಂಗೆ ೧೦,೦೦೦ ಗಡಿದಾಟಿಸು ಓಕೆ ನಾ ಪುಟ್ಟಣ್ಣ.

ಅದೇನೋ ನೀನು ಶ್ರೀನಿಧಿ love exchange ಮಾಡಿಕ್ಯಂದಿ ನಂಗನೂ ಎಲ್ಲಾ ನಿಂಗೆ ಹೇಳಲಕ್ಕಾ (kidding) ಹಿಃ ಹಿಃ.
- ರಂಜು.

Sushrutha Dodderi said...

ಎಲ್ರಿಗೂ ತುಂಬಾ ತುಂಬಾ ಥ್ಯಾಂಕ್ಸು ಥ್ಯಾಂಕ್ಸು ಥ್ಯಾಂಕ್ಸು..

ಶ್ರೀಲತಾ,

ನಂದು ಶ್ರೀನಿಧಿದೂ ಡೀಪ್ ಲವ್ವು!! ಶ್... ಯಾರಿಗೂ ಹೇಳ್ಬೇಡಿ... :)

ರಂಜು,

ಒಟ್ಟೊಟ್ಟಿಗೇ ಸುಮಾರು ಜನನ್ನ ಲವ್ ಮಾಡಿರೆ ತೊಂದ್ರೆ ಆಗದಿಲ್ಲೆ ಅಂತಾದ್ರೆ ಓಕೆ.. ಎಲ್ಲರೂ ಲವ್ ಮಾಡಿ, ಅದ್ಕೇನು! :) ;)

Anonymous said...

ರಂಜು-
ನಂಗೂ ತೊಂದ್ರೆ ಇಲ್ಲೆ. ಅಣ್ಣನ ಲವ್ ಮಾಡಕೆ ಏನು ಪ್ರಾಬ್ಲಮ್ ಇಲ್ಲೆ.
btw, ನಾನು ಯಾರನ್ನು ಲವ್ ಮಾಡ್ತಾ ಇಲ್ಲೆ.

Sushrutha Dodderi said...

@ ರಂಜು

ಅದ್ನೇ ನಾನೂ ಹೇಳಿದ್ದು! ತಂಗೀ ಐ ಲವ್ ಯೂ ಅಂತ... :-) ಆಮೇಲೇ, ಆಗ್ಲೆ ಹೇಳಕ್ ಮರ್ತ್ ಹೋತು:
>>ಮದ್ಯೆ ಇವಳು ’ಬಂದೆ’ ಅಂತಾ ಹೇಳದು ಯಾರು ಅಮ್ಮನಾ ಅಜ್ಜಿನಾ ಗೊತ್ತಾಗಲ್ಲೆ.
-ಅಮ್ಮಾನು ಅಲ್ಲ, ಅಜ್ಜಿನೂ ಅಲ್ಲ; ಅದು ಧಾರಾವಾಹಿಯ ಒಂದು ಪಾತ್ರ. ಟೀವೀಲಿ ಏನಾಗ್ತಿತ್ತು ಕರೆಂಟ್ ಹೋಗಕ್ಕರೆ ಅಂತ..

Anonymous said...

"ಬ್ಲಾಗಿನ ಹಿಟ್ಟನ್ನು ಹತ್ತು ಸಾವಿರದ ಗಡಿ ಮುಟ್ಟಿಸುವಲ್ಲಿ ಪಾತ್ರ ವಹಿಸಿದ..."

ಮೈದಾಹಿಟ್ಟು ಹಾಕಿ (ಇನ್ ಎಡಿಶನ್ ಟು ಗೋಧಿಹಿಟ್ಟು) ಚಪಾತಿ ಅಥವಾ ಪೂರಿ ಮಾಡಿದರೆ ಅದು ’ರಬ್ಬರ್ ಬ್ಯಾಂಡ್’ ಬ್ರ್ಯಾಂಡ್‍ನದು ಆಗುತ್ತದೆ ಎಂಬುದು ಎಲ್ಲರಿಗೂ (ಮುಖ್ಯವಾಗಿ ರೈಲ್ವೆ ಇಲಾಖೆಗೆ ಪೂರಿ ಸಪ್ಲ್ರೈಸುವವರಿಗೆ) ಗೊತ್ತಿರುವ ವಿಚಾರ.

ಹತ್ತುಸಾವಿರದ ಗಡಿ ಮುಟ್ಟುವಷ್ಟು elongate ಆಗಬೇಕಿದ್ದರೆ ಈ ಬ್ಲಾಗಿನಹಿಟ್ಟು ನಿಜವಾಗಿಯೂ ಮೈದಾಹಿಟ್ಟಿಗಿಂತಲೂ ಹೆಚ್ಚು ಎಲಾಸ್ಟಿಕ್ ಗುಣವುಳ್ಳದ್ದಾಗಿರಬೇಕು! :-)

ಅಭಿನಂದನೆಗಳು ಸುಶ್ರುತ ಮಹಾರಾಜ್!

Sushrutha Dodderi said...

@ ವಿಚಿತ್ರಾನ್ನ ಭಟ್ಟ

ಸಿಕ್ಕಾಪಟ್ಟೆ ಥ್ಯಾಂಕ್ಸ್ ಭಟ್ರೇ! ಅದೇನು ಹಿಟ್ಟೋ ಏನೋ ಮಾರಾಯ್ರೇ, ಸವಿದ ನಿಮಗೇ ಗೊತ್ತು. ತಟ್ಟುವ ನಾನು ಕೆಲವೊಮ್ಮೆ ರವೆ ಮಿಕ್ಸ್ ಮಾಡಿದ್ದೂ ಇದೆ. :)

Anonymous said...

"ತಟ್ಟುವ ನಾನು ಕೆಲವೊಮ್ಮೆ ರವೆ ಮಿಕ್ಸ್ ಮಾಡಿದ್ದೂ ಇದೆ.:)"

ರವೆ ಮಿಕ್ಸ್ ಮಾಡುವುದರಿಂದಲೇ ಬ್ಲಾಗ್‍ದಲ್ಲಿ ಕಲರವ ಹೆಚ್ಚುವುದು! ಹೀಗೆಯೇ ಮುಂದುವರೆಸಿ.

ಅನಂತ said...

ನಮಸ್ಕಾರ.. ಸುಮಾರು ದಿನಗಳ ಹಿಂದೆ ನಿಮ್ಮ ಸ್ನೇಹಿತರೊಬ್ಬರ ಕೃಪೆಯಿಂದ ನಿಮ್ಮ blog ವಿಳಾಸ ನನಗೆ orkut ಅಲ್ಲಿ ಸಿಕ್ತು. ಇಷ್ಟೊಂದು ಜನ ಹೀಗೆ ಕನ್ನಡದಲ್ಲಿ blogs ಬರಿತಿರ್ತಾರೆ ಅನ್ನೋ ಕಲ್ಪನೆನೇ ನನಗಿರ್ಲಿಲ್ಲ.. ಒಂದೊಂದೆ post ಓದ್ತಾ ಹೋದಾಗೆಲ್ಲಾ ನನಗೂ ಏನಾದ್ರೂ ಬರಿಬೇಕೆಂಬ ಆಸೆ ಹುಟ್ತು... ಬರೆದ ಮೇಲೆ ಎನೊ ಒಂದ್ತರ ಖುಶಿನೂ ಆಯ್ತು.. ;o) thanks to all of u..

ಹೀಗೆ ಬರಿತಾ ಇರಿ...

Archu said...

sushruta...
tumbaa chandada lekhana..
naanoo nanna balyada nenapugaLatta hode..
current hodaga..
doddavaru heLuttiddaru..'saamba sadashiva current barali' anta heLabekanta....
ottare chikka makkaLannu samadhana padisuttiddaddu hage..

kelavomme current barade hodaga, chimaNi deepada beLakalli copy , notes bareyuttiddaddu nenapaayitu..

andaa haage namma ooralli current hodare kelavomme 3-4 dina bittu baruttiddaddoo untu!!

nanna balyavannu nenapisiddakke thanks..

Sushrutha Dodderi said...

ಜೋಶಿ ಸರ್,

ಒಟ್ನಲ್ಲಿ ನೀವು ಅದ್ಯಾವ ಶಬ್ದ ಕಂಡ್ರೂ ಅದನ್ನ ಮತ್ತೆಲ್ಲೋ ಮಿಕ್ಸ್ ಮಾಡಿ ವಿಚಿತ್ರಾನ್ನ ತಯಾರು ಮಾಡ್ತೀರ.. ಹಹಾ..! ಗ್ರೇಟ್ ಸರ್.. ಸಖ್ಖತ್ ನೀವು!

ಅನಂತ,
ನಿಮ್ಮ ಬ್ಲಾಗ್ ನೋಡಿದೆ.. ಚೆನ್ನಾಗಿದೆ.. 'ಬರೆದ ಮೇಲೆ ನಂಗೂ ಖುಶಿ ಅನ್ಸ್ತು' ಅಂದ್ರಿ ನೋಡಿ, ಹ್ಮ್, thats the real joy of writing.. Continue..!

ಅರ್ಚನಾ,
ಚುಮ್ಣಿ ದೀಪದ ಬೆಳಕು... ಆಹಾ.. ಎಷ್ಟು ಆಪ್ಯಾಯಮಾನವಾಗಿರ್ತಿತ್ತು ಅಲ್ವಾ ಆಗ..?
ಥ್ಯಾಂಕ್ಸ್ ಜೀ..

Lanabhat said...

ಅಜ್ಜಿ ಕಥೆ ತುಂಬಾ ಇಷ್ಟ ಆಯ್ತು ಮರಾಯ್ರೆ :D

Sushrutha Dodderi said...

@ lana

ಥ್ಯಾಂಕ್ಸ್ ಮಾರಾಯ್ರೆ!

Anonymous said...

ಸೂಪರ್ರ್

Sushrutha Dodderi said...

@ ಹಿತೈಶಿ

ಥ್ಯಾಂಕ್ಸ್! ;)