Monday, August 13, 2007

ಮರ, ಬಳ್ಳಿ ಮತ್ತು ಕವಿ

ಆ ಬಳ್ಳಿಯನ್ನು ಮೊದಲ ಬಾರಿ ನೋಡಿದಾಗಲೇ
ಅದು ಮರವೊಂದರೆಡೆಗೆ ವಾಲುತ್ತಿರುವುದು
ನನಗೆ ಗೊತ್ತಾಗುತ್ತಿತ್ತು...

ಅದರ ಎಲೆ-ಕಣ್ಣುಗಳು ಇನ್ನೂ ಎಳೆಯವಿದ್ದವು.
ಪಕ್ಕದ ಮರವೊಂದನ್ನು ಬಿಟ್ಟು ಮತ್ತಿನ್ನೇನೂ ದಕ್ಕುತ್ತಿರಲಿಲ್ಲ
ಅದರ ನೋಟಕ್ಕೆ...

ಮರ ತನಗಾಗಿಯೇ ನೆರಳನ್ನು ಸೂಸುತ್ತಿದೆ,
ಮರ ತನಗಾಗಿಯೇ ಗಾಳಿಯನ್ನು ಬೀಸುತ್ತಿದೆ,
ಮರ ತನಗಾಗಿಯೇ ಪ್ರೇಮಪರ್ಣಗಳನ್ನು ಬೀಳಿಸುತ್ತಿದೆ-
ಎಂದೆಲ್ಲ ಭಾವಿಸಿ, ಮರವನ್ನು ಸಮೀಪಿಸಿತು.

ಮರವನ್ನು ತಾಕಿದಾಗ ಬಳ್ಳಿಗೆ ರೋಮಾಂಚನ.
ಮರದ ಕಾಂಡದ ಒರಟೊರಟು ತೊಗಟೆ,
ಅನುರಾಗದ ಕಂಪ ಹೊತ್ತ ಬೀಸುಗಾಳಿ,
ಆಗಾಗ ಮೈಗೆ ತಾಕುತ್ತಿದ್ದ ಉದುರೆಲೆಗಳು-
ಎಲ್ಲಾ ಬಳ್ಳಿಗೆ ಇಷ್ಟ ಇಷ್ಟ.
ಸಂಚರಿಸುತ್ತಿದ್ದ ಪಿಸುಮಾತಿನ ಸಂದೇಶಗಳು
ಬಳ್ಳಿಯ ಪತ್ರಹರಿತ್ತಿನ ಸಂವಹನ ವೇಗವನ್ನು ಹೆಚ್ಚಿಸುತ್ತಿದ್ದವು.

ಬಳ್ಳಿಗೆ ಗೊತ್ತಿಲ್ಲದ್ದೆಂದರೆ, ಮರದ ಆಚೆ
ಇನ್ನೂ ಅನೇಕ ಬಳ್ಳಿಗಳು ಹಬ್ಬಿರುವುದು,
ಮರ ಎಲ್ಲಾ ಬಳ್ಳಿಗಳಿಗೂ ಇವಿವೇ ರೋಮಾಂಚನ,
ನೆರಳು, ಸುಖ, ಜತೆಗಿರುವ ಅಭಯ, ಭರವಸೆಗಳನಿತ್ತಿರುವುದು.

ಕಾಲ ಸರಿಯುತ್ತಾ, ಬಳ್ಳಿ ಬೆಳೆಯುತ್ತಾ,
ಒಂದು ಕವಲೊಡೆದ ದಾರಿಯ ಬಳಿ ಬಂದಾಗ,
ರೆಂಬೆಯ ತೋಳು ತಪ್ಪಿ ಬೀಳುವಂತಾದಾಗ, ಮುಂದೇನೆಂದು ತಿಳಿಯದೆ,
ಕಾಡಿದ ಅಭದ್ರತೆಗೆ ಹೆದರಿ, ಕೇಳುತ್ತೆ ಅದು ಮರದ ಬಳಿ:
"ನೀನು ನನ್ನ ಪ್ರೀತಿಸ್ತೀಯಲ್ಲ? ನನ್ನನ್ನೆಂದೂ ಬಿಡೋಲ್ಲವಲ್ಲ?"

ಮರ ತಿರಸ್ಕರಿಸೊತ್ತೆ.

"ನನ್ನ ಪಾಡಿಗೆ ನಾನಿದ್ದೆ.
ನೀನಾಗೇ ಬಂದು ನನ್ನ ತಬ್ಬಿದೆ,
ಏನೇನೋ ಪರಿಕಲ್ಪಿಸಿಕೊಂಡೆ,
ಸ್ನೇಹವನ್ನೇ ಪ್ರೇಮವೆಂದು ಭಾವಿಸಿದರೆ,
ನನ್ನ ಸಹಜ ಅಭಿವ್ಯಕ್ತಿಗಳನ್ನೇ ಅನುರಾಗವೆಂದುಕೊಂಡುಬಿಟ್ಟರೆ
ಅದು ನನ್ನ ತಪ್ಪಾ?" ಎಂದೆಲ್ಲಾ ಗೊಣಗಿ
ಕಳ್ಳನಂತೆ ಸುಮ್ಮನಾಗುತ್ತದೆ.

ಬಳ್ಳಿಗೆ ಮರದ ಆಶ್ರಯ ಒಮ್ಮಿಂದೊಮ್ಮೆಲೇ ತಪ್ಪಿಹೋಗಿ,
ಬಾಗಿ, ಕತ್ತರಿಸಿ ಬೀಳುತ್ತದೆ.
ನೋವು ತಾಳಲಾರದೇ ಕಣ್ಣೆಲೆಗಳಿಂದ
ನೀರುದುರಿಸುತ್ತದೆ...
ಬಾಡತೊಡಗುತ್ತದೆ...
ಸಾಯುತ್ತೇನೆನ್ನುತ್ತದೆ...

ಅದರ ಕಷ್ಟವನ್ನು ನೋಡಲಾರದೆ ನಾನದರ ಬಳಿಸಾರುತ್ತೇನೆ...
ಸಮಾಧಾನ ಹೇಳುತ್ತೇನೆ...
ನೀರೆರೆಯುತ್ತೇನೆ...
ಗೊಬ್ಬರ ಹಾಕುತ್ತೇನೆ...
"ಆದದ್ದಾಯ್ತು, ಅದೇ ಮರದ ನೆನಪಲ್ಲಿ ಕೊರಗಬೇಡ,
ನೋಡಲ್ಲಿ, ಪಕ್ಕದಲ್ಲಿನ್ನೂ ಅನೇಕ ಮರಗಳಿವೆ" ಎನ್ನುತ್ತೇನೆ;
ಹೊಸ ಕನಸು ಕಾಣಲು ಪ್ರೇರೇಪಿಸುತ್ತೇನೆ.

"ಸಾಧ್ಯವೇ ಇಲ್ಲ...
ಹೇಗೆ ಮರೆಯಲಿ ಆ ಮರದ ಸ್ಪರ್ಶಸುಖವನ್ನು?
ಹೇಗೆ ಅಲ್ಲಗಳೆಯಲಿ ಅದರ ಸಂದೇಶಗಳಲ್ಲಿ ತುಂಬಿರುತ್ತಿದ್ದ ಅನುರಾಗವನ್ನು?
ಹೇಗೆ ಸುಳ್ಳೆನ್ನಲಿ ಅದು ಪ್ರೇಮವಾಗಿರಲೇ ಇಲ್ಲವೆಂದು?

ಅಥವಾ, ಉಹೂಂ, ಹೇಗೆ ಬಿಟ್ಟಿರಲಿ
ಇಷ್ಟು ದಿನ ಜತೆಗಿದ್ದ ಮರವನ್ನು?"

ಬಳ್ಳಿಯ ಹುಚ್ಚುತನವನ್ನು ನೋಡಿ ಬೇಸತ್ತ ನಾನು
ಒಂದು ನೀಳ ನಿಶ್ವಾಸ ಬಿಟ್ಟು ಈ ನೇವರಿಕೆಯಿಂದ ನಿವೃತ್ತನಾಗುತ್ತೇನೆ.
ಅದರ ಕನವರಿಕೆಗಳನ್ನು ಕಡೆಗಣಿಸುತ್ತೇನೆ.
ಕಾರುಣ್ಯದ ಕಣ್ಣನ್ನು ಕೊಂಚ ಬದಿಗೆ ಸರಿಸುತ್ತೇನೆ.

ಆದರೆ, ಎಂದಿನಂತೆ, ಕಾಲವೇ ಎಲ್ಲವನ್ನೂ ಸರಿಪಡಿಸುತ್ತದೆ:
ಒಂದು ಶುಭದಿನ, ತಾನು ಮತ್ತೆ ಚಿಗುರುತ್ತಿರುವ,
ಚೇತರಿಸಿಕೊಳ್ಳುತ್ತಿರುವ ಸುದ್ದಿಯನ್ನು ಬಳ್ಳಿ ಹೇಳಿಕೊಳ್ಳುತ್ತದೆ.
ನಾನು ಸಂಭ್ರಮಿಸಿ ಅಲ್ಲಿಗೆ ಧಾವಿಸಿ ನೋಡುತ್ತೇನೆ:

ನನ್ನ ಸಾಂತ್ವನದ ನೀರು-ಗೊಬ್ಬರಗಳ ಸಾರ್ಥಕತೆ
ಅಲ್ಲಿ ಕುಡಿಯಾಗಿ ಒಡೆದಿರುವುದು ಗೋಚರಿಸುತ್ತದೆ.
ಹರಿತ್ತಿನ ಹರಿವು, ಬಳ್ಳಿಯ ಹಸಿವು ಎಲ್ಲಾ ಸಹಜವಾಗುತ್ತಿರುವುದು ಕಾಣಿಸುತ್ತದೆ.
ಬಣ್ಣದ ಹೂವರಳಿಸಿಕೊಳ್ಳುವ ಹೊಸ ಕನಸನ್ನು ಬಳ್ಳಿಗೆ ಕೊಟ್ಟು,
ಶುಭ ಹರಸಿ, ಇವನ್ನೆಲ್ಲಾ ಬರೆಯಲು ಕೂತ ನಾನು
ಈ ಕವಿತೆಯ ಕವಿಯಷ್ಟೇ ಆಗಿ ಉಳಿದುಬಿಡುತ್ತೇನೆ.

25 comments:

ranju said...

ಪುಟ್ಟಣ್ಣ,
ತುಂಬಾ ಚನ್ನಾಗಿ ಇದೆ ಕವಿತೆ.
ಆ ಬಳ್ಳಿಯ ಅಸಹಾಯಕತೆ, ಮುಗ್ಧತೆ ನೋಡಿ ಮನಸ್ಸು ನೊಂದಿತು.
ಈ ಕವನ ಓದುವಾಗ ಹಲವಾರು ಪ್ರಶ್ನೆಗಳು ನನ್ನನ ಕಾಡಿತು.
ಆ ಬಳ್ಳಿ ತಾನೆ ತಾನಾಗಿ ಆ ಮರವನ್ನು ಹಬ್ಬಿದ್ದು ಬಳ್ಳಿಯ ತಪ್ಪು, ಮರ ಅದರ ಕರ್ತವ್ಯ, ಅದರ ಸಹಜ ಗುಣಗಳನ್ನು ಮಾಡಿದರೆ ಅದು ಕಳ್ಳ ಹೇಗಾಗುತ್ತದೆ?
ಆ ಮರ ಮತ್ತೊಂದು ಕಡೆ ಇರುವ ಬಳ್ಳಿಗಳಿಗೂ ಈ ರೀತಿಯೆ ಮಾಡುತ್ತದೆಯೇ?
ಆ ಮರ ಯಾರನ್ನು ಪ್ರೀತಿಸಲಾರದೆ?
ಬಳ್ಳಿಯ ಪ್ರೀತಿ ಅದಕ್ಕೆ ಅರ್ಥವಾಗಿ ಮತ್ತೆ ತನ್ನ ರೆಂಬೆಯ ತೆಕ್ಕೆಯಲ್ಲಿ ಬಂಧಿಸದೆ?

ಕವಿಯ ಸಹವಾಸದಿಂದ ಕವಿಯ ಭರವಸೆಯಿಂದ ಬಳ್ಳಿ ಮತ್ತೆ ಚಿಗುರುತ್ತಿರುವುದು ಸಂತಸದ ಸಂಗತಿ.

ನೀನು ಟ್ರಾಜಿಟಿಕ್ ಕಡೆಗೆ ಹೋಕ್ತಾ ಇದಿಯಲ್ಲಾ.
ನಿಜ ಕಾಲ ಎಲ್ಲವನ್ನು ಮರೆಸುತ್ತೆ. ನೆನಪುಗಳು, ನೋವುಗಳು ಇವತ್ತಿನ ತೀವ್ರತೆಯಲ್ಲಿ ನಾಳೆ ಇರಲಾರದು.

ಚಂದ ಬರದ್ದೆ. keep it up.

Shiv said...

ಸುಶ್,

ಸೂಪರ್ !

ಬಳ್ಳಿಗೆ ಹೊಸ ಕನಸು ಎರೆದು,ಕವಿಗಳು ತುಂಬಾ ಒಳ್ಳೆ ಕೆಲ್ಸ ಮಾಡಿದಿರಿ..

ಬಳ್ಳಿ ಚಿಗುರಿದ ನಂತರ ಮತ್ತೊಂದು ಮರದ ಕಡೆಗೆ ತೆರಳಿತೇ?

ಸುಶ್ರುತ ದೊಡ್ಡೇರಿ said...

@ ranju

ಮೆಚ್ಚುಗೆಗೆ ಥ್ಯಾಂಕ್ಸ್.

ನಿನ್ನ ಯಾವ ಪ್ರಶ್ನೆಗೂ ಕವಿಯ ಬಳಿ ಉತ್ತರವಿಲ್ಲ! ಬದಲಿಗೆ, ಅವು ಇನ್ನಷ್ಟು ಪ್ರಶ್ನೆಗಳನ್ನೂ, ಅನುಮಾನಗಳನ್ನೂ ಹುಟ್ಟು ಹಾಕುತ್ತವೆ:

ಬಳ್ಳಿಯ ಪ್ರಕಾರ ತಪ್ಪು ಮರದ್ದು; ಮರದ ಪ್ರಕಾರ ತನ್ನ ತಪ್ಪೇನೂ ಇಲ್ಲ. ತೆಪ್ಪಗೆ ತನ್ನಷ್ಟಕ್ಕೆ ತಾನು ನಿಂತಿದ್ದ ಮರಕ್ಕೆ ಹಬ್ಬಿದ ಬಳ್ಳಿ, ಆ ಮರದ ಸ್ನೇಹಸಹಜ ಮಾತುಗಳಿಗೆ, ಬೀಸುವ ಗಾಳಿಗೆ, ಸೂಸುವ ನೆರಳಿಗೆ 'ಏನೇನೋ' ಅರ್ಥ ಕಲ್ಪಿಸಿಕೊಂಡು ಮೈಮರೆತು ಅದೇ ಮರವನ್ನು ಪ್ರೀತಿಸತೊಡಗಿದರೆ, ಮರ ತನ್ನನ್ನು ಬಿಟ್ಟು ಮತ್ತಿನ್ಯಾರಿಗೂ ಆಶ್ರಯ ಕೊಡಬಾರದು ಎಂದು ಹಟ ಮಾಡಿದರೆ, ಮರವೂ ತನ್ನನ್ನು ಪ್ರೀತಿಸಬೇಕೆಂದು ಬಯಸಿದರೆ... ತಪ್ಪು ಬಳ್ಳಿಯದೇ!

ಆದ್ರೂ ಬಳ್ಳಿ ಅಷ್ಟೆಲ್ಲಾ ಮರದ ಮೋಹದಲ್ಲಿ ಮುಳುಗಿದೆ ಎಂದಮೇಲೆ ಮರ ಸಹ ಬಳ್ಳಿಯ ಪ್ರೀತಿಗೆ ಇಂಬು ಕೊಟ್ಟಿರಲೇಬೇಕಲ್ಲವೇ? ಅಥವಾ ಬಳ್ಳಿ ಅಷ್ಟೊಂದು ದಡ್ಡಿಯೇ? ಅಥವಾ ಪ್ರೀತಿ ಕುರುಡೇ?

ಮರ ಕಳ್ಳ ಅಥವಾ ತಪ್ಪಿತಸ್ಥ ಯಾವಾಗ ಆಗುತ್ತದೆಂದರೆ, ಬಳ್ಳಿ ತನ್ನೊಂದಿಗೆ ಪ್ರೀತಿಯಲ್ಲಿದೆ ಎಂದು ಗೊತ್ತಿದ್ದೂ ಅದಕ್ಕೊಂದು ಮಾತು ಹೇಳದೆ, ಅದರ ನೋಟ ಬದಲಿಸದೆ, ಎಚ್ಚರಿಕೆ ಕೊಡದೇ ತಾನೂ ಪ್ರೀತಿಯಲ್ಲಿರುವಂತೆ ನಟಿಸಿದಾಗ! ತನ್ನನ್ನು ಆಚೆಕಡೆಯಿಂದ ತಬ್ಬಿರುವ ಬಳ್ಳಿಗಳ ಪರಿಚಯ ಮಾಡಿಸಿಕೊಡದಿದ್ದಾಗ! ಅಷ್ಟೇ ಅಲ್ಲ, ಮರ ಏನನ್ನೂ ಮಾಡದೇ, ತಬ್ಬಿದ ಪ್ರೀತಿಬಳ್ಳಿಯನ್ನು ನೋಡುತ್ತಾ ಸುಮ್ಮನುಳಿದಾಗಲೂ ತಪ್ಪು ಮರದ್ದೇ! ಏಕೆಂದರೆ, ತಪ್ಪು ನಡೆಯುವುದನ್ನು ನೋಡುತ್ತಾ ಸುಮ್ಮನಿರುವುದು ದೊಡ್ಡ ತಪ್ಪು!

ಹ್ಮ್... ಆದ್ರೆ... ನಾವು ಏನೇನೇ ಅಂದರೂ ಮರದ ಸತ್ಯ ಮರಕ್ಕೆ, ಬಳ್ಳಿಯ ಸತ್ಯ ಬಳ್ಳಿಗೆ... ಅಲ್ವಾ?

ಕವಿ ಬರೆದದ್ದಾದರೂ ತನ್ನ ನೋಟಕ್ಕೆ ದಕ್ಕಿದ್ದು, ಮರ-ಬಳ್ಳಿಗಳಿಂದಲೇ ಸಿಕ್ಕ ಮಾಹಿತಿಯನ್ನಷ್ಟೇ ಅಲ್ವಾ? ಹೆಹ್ಹೆ!

ಸುಶ್ರುತ ದೊಡ್ಡೇರಿ said...

@ shiv

ಸೂಪರ್ ಥ್ಯಾಂಕ್ಸ್ ಗುರು..! ಬಳ್ಳಿ ಏನ್ಮಾಡತ್ತೆ ಅಂತ ಇನ್ನೂ ಕವಿಗೆ ಗೊತ್ತಿಲ್ಲ. ಬಳ್ಳಿಗೆ ತನ್ನಿಚ್ಚೆಯಂತೆ ವಾಲುವುದು ಗೊತ್ತಾ? ಗೊತ್ತಿದ್ದರೂ ಆಗೊತ್ತಾ? ಅಥವಾ ಗಾಳಿ (ಪರಿಸ್ಥಿತಿ) ಯಾವ ಕಡೆಗೆ ವಾಲಿಸೊತ್ತೋ ಹಾಗೇ ವಾಲುತ್ತೇನೆ ಅಂತಂದುಕೊಂಡು ಬಳ್ಳಿ ಸುಮ್ಮನಿದ್ದುಬಿಡೊತ್ತಾ? (ಹಾಗೆ ಮಾಡಿದರೆ ಮತ್ತೆ ತಪ್ಪು ಮಾಡಿದಂತಾಗುತ್ತದಲ್ವಾ?)

ಗೊತ್ತಿಲ್ಲ ಕಣ್ರೀ! ಬರೀ ಪ್ರಶ್ನೆಗಳು ನನ್ನ ಬಳಿ ಇರುವುದು! ಬಳ್ಳಿಗೇನಾದ್ರೂ ಖುಷಿಯಾದ್ರೆ, ಒಳ್ಳೇದಾದ್ರೆ ಕವಿ ಮತ್ತೆ ಪೆನ್ನೆತ್ತಿಕೊಂಡಾನು! ನಿರೀಕ್ಷಿಸೋಣ... :-)

nirmala said...

ಹಾಯ್ ಸುಶ್ರುತ.
ನಿಮ್ಮ ಕವನ ತುಂಬಾ ಚನ್ನಾಗಿ ಇದೆ. ಆದರೆ ಬಳ್ಳಿ ಮರವನ್ನೆ ತಾನೆ ಬಳಸುವುದು, ಅದೇ ಪ್ರಕೃತಿ ನಿಯಮ. ಮರದ ಕೆಲಸ ಕೂಡ ಅದೇ ಬಳ್ಳಿ ತನ್ನನ ತಬ್ಬಿಕೊಳ್ಳುವಂತೆ ಮಾಡುವುದು. ನೀವು ಮರದ ಪರ ವಹಿಸಿ ಮರ ತನ್ನ ಪಾಡಿಗೆ ತಾನು ಇರುವಂತೆ ಬಿಂಬಿಸಿದ್ದಿರಾ. ಬಳ್ಳಿ ನೆಲದಲ್ಲು ಹಬ್ಬುತ್ತೆ ಆದರೆ ಮರ ತನ್ನ ಕಡೆ ಅದನ್ನು ಸೆಳೆದಿದ್ದರಿಂದ ಬಳ್ಳಿ ಅದನ್ನು ತಬ್ಬಿದೆ.
ಮರಕ್ಕೆ ಆಚೆ ಕಡೆ ಮೊದಲೇ ಬಳ್ಳಿಗಳು ಹಬ್ಬಿತ್ತು ಆದರು ಈ ಬಳ್ಳಿಯನ್ನು ಕೇವಲ ತನ್ನ time pass ಗೆ ಬಳಸಿಕೊಂಡಿತು ಅಂತಲೇ ನನ್ನ ಭಾವನೆ.

ಭಾವಜೀವಿ... said...

ಸುಂದರ ಹಾಗು ನವಿರಾದ ಕವಿತೆಯಾದ ಕತೆ!
ಮುಗ್ಧತೆ ಹಾಗು ಪ್ರೌಢತೆಯ ನಡುವಿನ ತಾಕಲಾಟವನ್ನು ಬಿಂಬಿಸುವಂತದ್ದು...
ಸ್ನೇಹ ಹಾಗು ಪ್ರೀತಿಯ ನಡುವಿನ ಗೆರೆ ಅತೀ ತೆಳುವಾದದ್ದು.. ಇಬ್ಬರಿಗೂ ತಿಳಿದಿರುವುದಿಲ್ಲ ಅದು ಎಲ್ಲಿದೆ ಎಂದು.ಒಂದು ಇಬ್ಬರೂ ಗುರುತಿಸುವ ಒಂದು ಜನರಲ್ ಆದ ಸರಹದ್ದು ಇರುವುದೇ ಇಲ್ಲ.. ಒಬ್ಬರಿಗೆ ಗೊತ್ತಿರದೆ ಇನ್ನೊಬ್ಬರ ಪ್ರೀತಿ ಸೀಮೆ ಕಾಲಿಟ್ಟಿರುತ್ತಾರೆ. ಅದಕ್ಕೆ ಮರವಿನ್ನೂ ಸ್ನೇಹದ ಗುಂಗಿನಲ್ಲಿದ್ದರೆ, ಬಳ್ಳಿ ಪ್ರೀತಿಯ ಉನ್ಮತ್ತತೆಗೆ ತಲುಪಿರುತ್ತದೆ. ಇಲ್ಲಿ ತಪ್ಪು ಯಾರದ್ದು ಅನ್ನುವುದಕ್ಕಿಂತ ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲೇ ಇಲ್ಲ ಎನ್ನುವುದು ಈ ಸಂಬಂಧದ ವಿಪರ್ಯಾಸ ಅಷ್ಟೆ! ಒಡೆದ ಪ್ರೀತಿಯ ದುಃಖದಲ್ಲಿ ಬದುಕೇ ಒಂದು ಹುಣ್ಣಂತೆ ತೋರುತ್ತದೆ.. ಆದರೆ ಕೊನೆಗೆ, ಕಾಲವು ಎಲ್ಲವನೂ ಸರಿಪಡಿಸುತ್ತದೆ, ಬದುಕು ಸಹನೀಯವಾಗುತ್ತದೆ!
ಬಳ್ಳಿಗೆ ನಿರಂತರವಾಗಿ ಹಬ್ಬಿ ಬೆಳೆಯಲು ಇನ್ನೊಂದು ಮರ ಸಿಕ್ಕೆ ಸಿಗುತ್ತದೆ..
....."ಬಳ್ಳಿಗೆ ಗೊತ್ತಿಲ್ಲದ್ದೆಂದರೆ, ಮರದ ಆಚೆ
ಇನ್ನೂ ಅನೇಕ ಬಳ್ಳಿಗಳು ಹಬ್ಬಿರುವುದು,
ಮರ ಎಲ್ಲಾ ಬಳ್ಳಿಗಳಿಗೂ ಇವಿವೇ ರೋಮಾಂಚನ,
ನೆರಳು, ಸುಖ, ಜತೆಗಿರುವ ಅಭಯ, ಭರವಸೆಗಳನಿತ್ತಿರುವುದು"...
ಇದೇ ಕಟು ವಾಸ್ತವ..

ಸುಶ್ರುತ ದೊಡ್ಡೇರಿ said...

ನಿರ್ಮಲ,

ಪ್ರತಿಕ್ರಿಯೆಗೆ ಧನ್ಯವಾದಗಳು.

ನೋಡ್ರೀ, ಬೇಸಿಕಲೀ ನಾನೊಬ್ಬ ಕವಿ.ಮರ ಹೇಳಿದ್ದನ್ನೂ ಬಳ್ಳಿ ಹೇಳಿದ್ದನ್ನೂ ಕೇಳಿಸ್ಕೊಂಡು ನನಗೆ ತಿಳಿದಂತೆ ಕವಿತೆ ಬರಿಯೋನು ನಾನು. ಮರಾನೇ ಬಳ್ಳೀನ ತನ್ ಹತ್ರ ಸೆಳಕೊಂತೋ ಅಥ್ವಾ ಬಳ್ಳೀನೇ ತೊನೆದು ಮರದ ಬಳಿ ಹೋಯ್ತೋ ಬಲ್ಲವರಾರು? ನಾನಂತೂ ನೋಡಿಲ್ಲ. ;)
-ನಾನು 'ಮರದ ಪರವಹಿಸಿದ್ದೇನೆ' ಎಂಬ ನಿಮ್ಮ ಆರೋಪವನ್ನ ನಾನು ಒಪ್ಪೋಲ್ಲ. ಬಳ್ಳಿಯ ಬಗ್ಗೆ ನಂಗೆ ಪ್ರೀತಿ ಇಲ್ಲದಿದ್ದರೆ ಅದಕ್ಕೆ ನೀರೆರೆಯುತ್ತಲೂ ಇರಲಿಲ್ಲ; ಇಲ್ಲಿ ಕವಿತೆ ಬರೆಯುತ್ತಲೂ ಇರಲಿಲ್ಲ.

ಬಳ್ಳಿಗೆ ಆಶ್ರಯ ನೀಡುವುದು, ಹಬ್ಬಲಿಕ್ಕೆ ಬಿಡುವುದಷ್ಟೇ ಮರದ ಕೆಲಸ ಅಲ್ವಾ? 'ತಬ್ಬಿಕೊಳ್ಳುವಂತೆ ಮಾಡುವುದು' ಸಹ ಅದರ ಕೆಲಸ ಅಂತೀರಾ??? ಏನೋಪ್ಪಾ! ಮರ ಈ ಬಳ್ಳೀನ time pass ಗೆ ಬಳಸಿಕೊಳ್ತು ಅಂದ್ರೆ ಏನರ್ಥ? ಮರ (being a ಮರ) ತಾನೇನೂ ಮಾಡೇ ಇಲ್ಲ ಅನ್ನುತ್ತಲ್ಲ? (ಮರ usually ಸುಮ್ನೇ ಇರೋತ್ತಲ್ವಾ ?) ಅಥ್ವಾ ಅದು ಸುಳ್ಳು ಹೇಳ್ತಿದೆಯಾ? 'ಮರ ಮಾಡಿರುವುದು ಮರಾಮೋಸ' ಅಂತೀರಾ ನೀವು? ;) ಏನೋ ಮಾರಾಯ್ರೇ! ನಂಗಂತೂ ಒಂದೂ ತಲೆಗೆ ಹೋಗ್ತಿಲ್ಲ!

ಎಂಥೆಂಥಾ ಮರಗಳಿದಾವೋ ಭುವಿ ಮ್ಯಾಗೆ... ಸಿವನೇ..! :O

ಸುಶ್ರುತ ದೊಡ್ಡೇರಿ said...

ಭಾವಜೀವಿ,

"ಮರವಿನ್ನೂ ಸ್ನೇಹದ ಗುಂಗಿನಲ್ಲಿದ್ದರೆ, ಬಳ್ಳಿ ಪ್ರೀತಿಯ ಉನ್ಮತ್ತತೆಗೆ ತಲುಪಿರುತ್ತದೆ" ಹ್ಮ್.. ಈ ಮರ-ಬಳ್ಳಿ ಕೇಸಲ್ಲೂ ಅದೇ ಆಗಿದ್ದು ಅನ್ಸುತ್ತೆ! ಪರಸ್ಪರ ಅರ್ಥ ಮಾಡಿಕೊಳ್ಳಲೇ ಇಲ್ಲವೋ ಅಥವಾ ಅರ್ಥವಾಗುತ್ತಿದ್ದರೂ 'ಹಾಗಲ್ಲವಿರಬೇಕು, ಹೀಗಿರಬೇಕು; ಏನಾಗತ್ತೆ ನೋಡೋಣ ಬಿಡು' ಎಂದು ಅಲಕ್ಷಿಸಿ ಸುಮ್ಮನೇ ದುರಂತಕ್ಕೆ ಮುನ್ನುಡಿ ಬರೆದವೋ.. ಏನೋ..

"ಒಡೆದ ಪ್ರೀತಿಯ ದುಃಖದಲ್ಲಿ ಬದುಕೇ ಒಂದು ಹುಣ್ಣಂತೆ ತೋರುತ್ತದೆ" ಎಂಬ ನಿಮ್ಮ ಸುಂದರ ಮಾತು ಒಂದು ಕಹಿಸತ್ಯ. ಬಳ್ಳಿಯ ಕಣ್ಣೀರು ನೋಡಿದಾಗಲೆಲ್ಲ ನನಗೇ ಹಾಗೇ ಅನ್ನಿಸುತ್ತಿತ್ತು. ಬಳ್ಳಿಗೆ ಇನ್ನೊಂದು ಒಳ್ಳೇ ಮರ ಸಿಗಲಿ ಎಂದು ಹಾರೈಸುವುದಷ್ಟೇ ನಾವು ಮಾಡಬಹುದಾದ ಕೆಲಸ; ಅಲ್ವಾ?

ಕವಿತೆಯನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

December Stud said...

ಗುರುವೇ, ಬಳ್ಳಿ ಇನ್ನೊಂದು ಮರವನ್ನು ಅಪ್ಪಲೇಬೇಕು....ಅದು ಜೀವ ನಿಯಮ. ಆದ್ದರಿಂದ ಯೋಚನೆ ಇಲ್ಲ :)

ಅಂದ ಹಾಗೆ, ಕವಿಯೂ ಒಂದು ತ್ರಹ ಮರನೇ...ಗೊತ್ತಲ್ವಾ? :)

ಸಿಂಧು Sindhu said...

ಸು,

ಕವಿತೆ ಚೆನ್ನಾಗಿದೆ.
"ಇವನ್ನೆಲ್ಲಾ ಬರೆಯಲು ಕೂತ ನಾನು
ಈ ಕವಿತೆಯ ಕವಿಯಷ್ಟೇ ಆಗಿ ಉಳಿದುಬಿಡುತ್ತೇನೆ..."

ಒಮ್ಮೊಮ್ಮೆ ದಿಗಿಲಾಗುತ್ತೆ ಕಣೋ.. ನೀನು ಬಳಸುವ ಪದ ನೋಡಿದರೆ.. :) "ಹೊಸ ಕನಸನ್ನು ಬಳ್ಳಿಗೆ ಕೊಟ್ಟು.. ಶುಭ ಹರಸಿ,.."

ಭಾವಜೀವಿಯವರು ಬರೆದಿದ್ದು ಸತ್ಯ - "ಒಡೆದ ಪ್ರೀತಿಯ ದುಃಖದಲ್ಲಿ ಬದುಕೇ ಒಂದು ಹುಣ್ಣಂತೆ ತೋರುತ್ತದೆ"

ಸುಶ್ರುತ ದೊಡ್ಡೇರಿ said...

@ december stud

Welcome to my blog.
>>"ಬಳ್ಳಿ ಇನ್ನೊಂದು ಮರವನ್ನು ಅಪ್ಪಲೇಬೇಕು...." ಹೌದೌದು.. ಖಂಡಿತ.. ಅಪ್ಪಲೇಬೇಕು.

"ಕವಿಯೂ ಮರ"??! ಹ್ಮ್, ಅಲ್ಲ ಎನ್ನಲಾರೆ; ಆದರೆ ಇದೊಂಥರಾ ಓಡಾಡುವ ಮರ! ಬಳಲುತ್ತಿದ್ದ ಲತೆಗೆ ನೀರೆರೆಯುವ ತಪನೆ ಇದಕ್ಕೆ! ನೀರೆರೆದು, ಗೊಬ್ಬರ ಹಾಕಿ, ಉತ್ಸಾಹ ತುಂಬಿ (ತುಂಬಲು ಯತ್ನಿಸಿ).. .. .. .. ಎಲ್ಲಾ ಮಾಡಿ ಮರಕವಿ ಈಗ ಆ ಬಳ್ಳಿಯ 'ಪೋಷಕ'ನಾಗಿಬಿಟ್ಟಿದೆ! ;)

ಸುಶ್ರುತ ದೊಡ್ಡೇರಿ said...

@ ಸಿಂಧು

ಯಾಕಕ್ಕಾ ದಿಗಿಲು..?? ಬಳ್ಳಿ ಇಸ್ ಗೆಟ್ಟಿಂಗ್ ಓಕೇ. ಕವಿ ಇಸ್ ಆಲ್ರೈಟ್. ಮರ.. ಹ್ಮ್, ಎಂದಿನಂತೆ ತನ್ನ ಪಾಡಿಗೆ ತಾನಿದೆ.. ಇನ್ನೇನಕ್ಕೆ ದಿಗಿಲು..?

ಆದ್ರೆ ಈ 'ದಿಗಿಲು ' ಅನ್ನೋ ಶಬ್ದ ನೋಡ್ದಾಗ "ಮುಗಿಲು ಮುಗಿದಂತೆ ಕಂಡರೂ ಮುಗಿಯುವುದೇ ಇಲ್ಲ" ಅಂತ ಎಲ್ಲೋ ಓದಿದ ಲೈನು ನೆನಪಾಯ್ತು ನೋಡು! ಯಾಕೋ ಗೊತ್ತಿಲ್ಲ! :O ಥ್ಯಾಂಕ್ಸ್.. :O

Anonymous said...

ಕೊನೆಯ ಸಾಲು ಓದಿದಾಗ, ಕವಿಗೆ ಏನೋ expectationಹುಟ್ಟಿತ್ತು ಅನ್ನಿಸ್ತು, ಹೌದಾ ? ಪಾಲಿಸಿ, ಪೋಷಿಸಿದ ಕವಿಯ ಮನದಲ್ಲಿ ಭಾವನೆಗಳೇನಾದರು ಹುಟ್ಟಿದವೇನು? if so ಬಳ್ಳಿಯು ಮರವಾಗಿ, ಕವಿ ಬಳ್ಳಿಯಾಗೋ ಸಾಧ್ಯತೆ ಇದೆಯಲ್ಲವೆ? guess ಅಷ್ಟೆ, may be am taking up an line of argument that is not there at all.

December Stud said...

@ anon:
ಬಳ್ಳಿ ಮರ ಆಗಕ್ಕೆ ಸಾಧ್ಯ ಇಲ್ಲ. ಬಳ್ಳಿ ಬಳ್ಳಿಯಾಗೇ ಉಳಿಯತ್ತೆ. ಅದು ಪ್ರಕೃತಿಯ ಪರಿ.
ಆದರೆ ಕವಿಗೂ ಮರಕ್ಕೂ ತುಂಬಾ ತುಂಬಾ ತುಂಬಾ ಹೋಲಿಕೆ ಇದೆ. ಇಲ್ಲಿ ನಮ್ಮ ಕವಿ ಸಿಕ್ಕಾಪಟ್ಟೆ ವಿಶಾಲವಾಗಿದ್ದಾನೆ ಬೇರೆ. ಆದ್ದರಿಂದ ಮರ ಆಗಕ್ಕೆ ಸಕ್ಕತ್ ಲಾಯಕ್ಕು. ಬಳ್ಳಿಗಳಿಗೇನು ಕಡಿಮೆ ಇಲ್ಲ ಬಿಡಿ.

ಶ್ರೀ said...

ಸುಶ್ರುತರೆ,

ಇಲ್ಲಿ ನಿಮ್ಮ 'presentation' ಚೆನ್ನಾಗಿದೆ. ಪ್ರೀತಿಯಲ್ಲಿ ಸಿಲುಕಿದವರ ಅನುಭವ ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ.

ನನಗಿಲ್ಲಿ ಯಾರದೂ ತಪ್ಪು ಎನಿಸುತ್ತಿಲ್ಲ - ಬಳ್ಳಿಯದ್ದೂ ಅಲ್ಲ, ಮರದ್ದೂ ಅಲ್ಲ. ಈ ’ಪ್ರೀತಿ’ ಅನ್ನೋದು, ಯಾರೂ ಯೊಚಿಸಿ ಬರಿಸಿಕೊಳ್ಳುವಂಥಾದಲ್ಲ. ಅದು ತಾನಾಗಿಯೇ ನಮಗರಿವಿಲ್ಲದಂತೆ ಅಂಕುರಿಸುತ್ತೆ. ಅದು ಸಹಜ. ಒಬ್ಬರಿಗೆ ಇನ್ನೊಬ್ಬರಲ್ಲಿ ಪ್ರೀತಿಬಂದ ಮಾತ್ರಕ್ಕೆ ಅವರಿಗೂ ಪ್ರೀತಿ ಹುಟ್ಟಲೇಬೇಕೆಂಬ ಆಸೆ ಸಹಜವಾದರೂ ನಿಜವಾಗಬೇಕಿಲ್ಲ. ಮೇಲೆ ಕೆಲವರು ಅದನ್ನೇ ಪ್ರತಿಬಿಂಬಿಸಿದ್ದಾರೆ. ಆದರೆ ಈ ’rejection' ಅನ್ನೋದನ್ನ ಎಲ್ಲರಿಗೂ ತಗೋಳೊ ಶಕ್ತಿ ಇರೋದಿಲ್ಲ. ಆಲ್ಲೇ ನೀವು ಹೇಳಿದ ’ಕಾಲ’ ತನ್ನ ಆಟ ತೋರಿಸೋದು. ಎವೆಲ್ಲಾ ಜೀವನದ ಒಂದು ಅಂಗ - ಪಾಠಗಳು. ಕಲಿತಂತೆ ನಾವು ಪಕ್ವವಾಗುತ್ತೇವೆ. :)

ನಿಮಗೆ ಈ ಬಳ್ಳಿ ಮತ್ತು ಮರದೆ ಪರಿಚಯ ಮುಂಚಿನಿಂದನೇ ಇತ್ತೆ? ಹಾಗಿದ್ದಲ್ಲಿ, ನೀವೇಕೆ ಬಳ್ಳಿಗೆ ಎಚ್ಚರಿಸಲಿಲ್ಲ? :)

-- ಶ್ರೀ

ಸುಶ್ರುತ ದೊಡ್ಡೇರಿ said...

@ anonymous

'ಕವಿಯನ್ನು ಕಷ್ಟಕ್ಕೆ ಸಿಲುಕಿಸೋದು' ಅಂದ್ರೆ ಇದು ನೋಡಿ! :) ಕಷ್ಟದಲ್ಲಿದ್ದ ಬಳ್ಳಿಗೆ ಪಾಪ ಅಂತ ಸಹಾಯ ಮಾಡಿದ್ದಲ್ದೇ ಎಂಥೆಂಥಾ ಆರೋಪ ಎದುರಿಸಬೇಕಾಯ್ತು ನೋಡಿ! ಅಲ್ಲಲ್ಲ, ಸಹಾಯ ಮಾಡಿದ್ದು ತಪ್ಪಲ್ಲ; ಅದನ್ನೆಲ್ಲ ಬರೆದಿದ್ದು ಮತ್ತು ಬರೆದು ಜನರ ಮುಂದಿಟ್ಟದ್ದು ತಪ್ಪು! :)

ಏನು ಭಾವನೇನು ಇಲ್ಲ ಮಣ್ಣೂ ಇಲ್ಲ ಸುಮ್ನಿರ್ರೀ ಸಾಕು..! ಬಳ್ಳಿ ಮರಾನೂ ಆಗಲ್ಲ, ಕವಿ ಬಳ್ಳಿಯೂ ಆಗಲ್ಲ. ಪಕ್ಕದಲ್ಲಿನ್ನೂ ಅನೇಕ ಮರಗಳಿರೋದಾಗಿ ಬಳ್ಳಿಗೆ ತಿಳಿಹೇಳಿದ್ದೇನೆ, ಶುಭ ಹರಸಿದ್ದೇನೆ, ಇನ್ನೇನು ಮಾಡತ್ತೋ ಬಳ್ಳಿಗೆ ಬಿಟ್ಟದ್ದು! :D (ಮತ್ತೆ 'ಪಕ್ಕದಲ್ಲಿರುವ ಮರಗಳಲ್ಲಿ ಕವಿಯೂ ಒಂದಲ್ಲವೇ?' ಎನ್ನಬೇಡಿ; please..!)

And don't forget: ತಿರಸ್ಕರಿಸಿದ ಆ ಮರದ ಭಾವವೇ ಬದಲಾಗಿ, ಬಿಳಲುಗಳನ್ನು ಇಳಿಬಿಟ್ಟು ಬಳ್ಳಿಯನ್ನು ಮತ್ತೆ ತನ್ನೆಡೆಗೆ ಎಳೆದುಕೊಳ್ಳುವ ಸಾಧ್ಯತೆಯೂ ಇನ್ನೂ ಇಲ್ಲವಾಗಿಲ್ಲ. ಆದರೆ ಹಾಗಾದಾಗ ಬಳ್ಳಿ ಹೇಗೆ ಪ್ರತಿಸ್ಪಂದಿಸೊತ್ತೆ ಅನ್ನೋದು ಕುತೂಹಲದ ವಿಷಯ. ಬಳ್ಳಿಯ ಮುಂದಿರುವ ಸವಾಲು ಎಂದರೂ ತಪ್ಪಿಲ್ಲ. ;) ನೋಡೋಣ, ಏನಾಗತ್ತೆ ಅಂತ.. .. :-)

ಸುಶ್ರುತ ದೊಡ್ಡೇರಿ said...

@ ds

'ಬಳ್ಳಿಗಳಿಗೇನು ಕಡಿಮೆ ಇಲ್ಲ ಬಿಡಿ' ಎಂಬ ನಿಮ್ಮ ಸ್ಟೇಟ್‍ಮೆಂಟನ್ನು 'ಕವಿಮರಕ್ಕೆ ಹಬ್ಬಲಿಕ್ಕೆ ಇನ್ನೂ ಅನೇಕ ಬಳ್ಳಿಗಳಿವೆ ಬಿಡಿ' ಎಂದು ಅರ್ಥೈಸಿಕೊಳ್ಳುವುದರಿಂದ ಮತ್ತು ಇಲ್ಲಿ ಬರೆಯುವುದರಿಂದ ಕವಿ ಸಧ್ಯದ ಸಂಕಷ್ಟದಿಂದ ಪಾರಾಗಬಹುದು ಅನ್ಸುತ್ತೆ ಅಲ್ವಾ.. .. ?

ಸುಶ್ರುತ ದೊಡ್ಡೇರಿ said...

@ ಶ್ರೀ

ಹಾಂ, ನಂಗೆ ಮರ-ಬಳ್ಳಿ ಎರಡೂ ಮುಂಚಿಂದಲೂ ಪರಿಚಯ ಇತ್ತು. ಬಳ್ಳಿಗೆ ಆ ಕಡೆಯಿಂದಲೂ ಬಳ್ಳಿಗಳು ಹಬ್ಬಿರಬಹುದು ಎಂಬುದರ ಬಗ್ಗೆ, ಮರವೇನು ನಿನ್ನಷ್ಟು ನಿನ್ನಲ್ಲಿ ಒಲವಿನಲ್ಲಿಲ್ಲದಿರಬಹುದು ಎಂಬುದರ ಬಗ್ಗೆ ಎಚ್ಚರಿಸಿದ್ದೆ ಕೂಡ. ಹಾಗೇ ಮರಕ್ಕೆ, ಬಳ್ಳಿಯಲ್ಲಿ ಕನಸ ಚಿಗುರಿಸುವಂತೆ ವರ್ತಿಸಬೇಡವೆಂದು ವಿನಂತಿಸಿಕೊಂಡಿದ್ದೆ. ಆದರೆ... ಪ್ರೀತಿ ಕುರುಡಾದ್ದರಿಂದ ಬಳ್ಳಿ ನನ್ನ ಎಚ್ಚರಿಕೆಯನ್ನು ಗಮನಕ್ಕೇ ತೆಗೆದುಕೊಳ್ಳಲಿಲ್ಲ; ಇನ್ನು ಮರ... ಹ್ಮ್... I don't know: ಮರದ ಪ್ರಕಾರ ತನ್ನ ಪಾಡಿಗೆ ತಾನಿತ್ತು; ಬಳ್ಳಿಯ ಪ್ರಕಾರ ಪ್ರೀತಿ ನಾಟಕವನ್ನು ಮುಂದುವರೆಸಿತು.ಒಟ್ನಲ್ಲಿ ಈಗ.. .. .. :(

ಸಿಂಧು Sindhu said...

ಸು,

ನನಗೆ ದಿಗಿಲಾಗಿದ್ದು ನಿನ್ನ ಪದಪ್ರಯೋಗ ನೋಡಿ..
ಹೊಸಕನಸನ್ನು ಕೊಡುವುದು ಮತ್ತು ಹರಸುವುದು (ಹಾರೈಕೆ ಬೇರೆ ಹರಸುವುದು ಬೇರೆ) ತುಂಬ ದೊಡ್ಡ ಪದಗಳು.. its like almost playing god.. :D

ಸ್ನೇಹಿತರು, ಹಿತೈಷಿಗಳು ಆಗಿರುವುದು ಬೇರೆ. ನಾವೇ ದಾರಿ ತೋರಿಸಿ ಒಬ್ಬರ ಕೃತಿ ಮತ್ತು ಫಲಗಳಿಗೆ (cause n effect) ನೇರವಾಗಿ ಕಾರಣರಾಗುವುದು ಬೇರೆ. ವ್ಯತ್ಯಾಸ ಸೂಕ್ಷ್ಮವಿದೆ. ಹುಶಾರಾಗಿರು..

ಕವಿತೆ ಚೆನ್ನಾಗಿದೆ. ಆ ಪ್ರಯತ್ನ ಮತ್ತು ಹೊಸತನಗಳ ಬಗ್ಗೆ ಎರಡು ಮಾತಿಲ್ಲ. ನನ್ನ ಮಾತು ಕವಿತೆಯ ಆಶಯದ ಬಗ್ಗೆ ಅಷ್ಟೆ.n it is personal.. not a general opinion.

ಸುಪ್ರೀತ್.ಕೆ.ಎಸ್. said...

ತಪ್ಪು ಯಾರದು ಎಂದು ಹೇಳುವವರು ನಾವು ನೀವು ಮಾತ್ರ. ಮರದ ನೆರಳಿನಲ್ಲಿ ಸುಖವನ್ನು ಪಡೆದು,ಮರದ ಆಸರೆಯಲ್ಲಿ ಬಳ್ಳಿ ಮುಗಿಲೆತ್ತರಕ್ಕೆ ಹಬ್ಬುವಾಗ, ಬಳ್ಳಿಯ ಸಾನಿಧ್ಯದ ಸವಿಯನ್ನು, ಅಭಿಮಾನವನ್ನು ಮರವು ಮೂಕನಾಗಿ ಆಸ್ವಾದಿಸುವಾಗ ತಪ್ಪು ಯಾರದು ಎಂಬ ಪ್ರಶ್ನೆ ಹುಟ್ಟುವುದಿಲ್ಲ. ಬಳ್ಳಿಯ ಕನಸಿಗೆ ಆಸರೆಯಾದದ್ದೇ ಮರದ ತಪ್ಪೇ, ತನ್ನ ಸೀಮಿತ ದೃಷ್ಟಿಯಲ್ಲಿ ಮರವನ್ನು ಕಾಣಲು ಬಯಸಿದ ಬಳ್ಳಿಯದು ತಪ್ಪೇ?
ಕವಿಯಂತೆ ನಿರಾಳವಾಗಿ ಕುಳಿತು ಬಳ್ಳಿಯ ಕನಸನ್ನು, ಮರದ ಕಸುವನ್ನು ನೋಡುವುದು ಒಳಿತಲ್ಲವೇ?

VENU VINOD said...

ಆಹಾಹಾ ಸುಂದರ ಕಲ್ಪನೆ ಸುಶ್ರುತ, ಕೀಪ್ ಇಟ್ ಅಪ್

ಸುಶ್ರುತ ದೊಡ್ಡೇರಿ said...

@ ಸಿಂಧು

ಹ್ಮ್ ಹ್ಮ್.. Now I got it. ಹಾರೈಸುವುದಕ್ಕೂ ಹರಸುವುದಕ್ಕೂ ನಡುವಿದ್ದ ವ್ಯತ್ಯಾಸವನ್ನು ನಾನು ಗಮನಿಸಿಯೇ ಇರಲಿಲ್ಲ. ನೀನು ಹೇಳಿದ ಮೇಲೆ ಅರ್ಥವಾಯಿತು. Thanx for that.

ಅಂದಹಾಗೆ, ನಾನೇನು ಬಳ್ಳಿಗೆ 'ಹೀಗೇ ಮಾಡು', 'ಹೀಗೆ ಮಾಡಬೇಡ' ಅಂತೆಲ್ಲ ಯಾವತ್ತೂ direct ಮಾಡಿಲ್ಲ. ನಾನೊಬ್ಬ ಹಿತೈಶಿಯಂತೆಯೇ ದೂರದಲ್ಲಿ ನಿಂತು ಸಮಾಧಾನ ಮಾಡಿದ್ದು ಅಷ್ಟೆ. ಬಳ್ಳಿ ನನ್ನ ಸಾಂತ್ವನದಿಂದಲೇ ಚೇತರಿಸಿಕೊಂಡಿತೆಂಬ ಭ್ರಮೆಯಾಗಲೀ, ಆ ಕಾರಣಕ್ಕೆ ನನಗೆ ಬಳ್ಳಿಯಿಂದ ಏನಾದರೂ ಪ್ರತಿಫಲ ಸಿಗಬೇಕೆಂಬ ನಿರೀಕ್ಷೆಯಾಗಲೀ ಇಲ್ಲ. ಬಳ್ಳಿ ಕಷ್ಟದಲ್ಲಿತ್ತು, ಅದಕ್ಕೆ ಸಹಾಯ ಮಾಡಬೇಕೇನೋ ಅನ್ನಿಸಿತು, ಅದಕ್ಕೇ ಅಲ್ಲಿಗೆ ಧಾವಿಸಿದೆ ಅಷ್ಟೆ.

ಥ್ಯಾಂಕ್ಸ್..

ಸುಶ್ರುತ ದೊಡ್ಡೇರಿ said...

@ ಸುಪ್ರೀತ್

ನಿಮ್ಮ ದೃಷ್ಟಿಕೋನ ಒಂಥರಾ ಚೆನ್ನಾಗಿದೆ. ಹೌದು, ತಪ್ಪು ಯಾರದೂಂತ ಹೇಳುವುದು ನಿಜಕ್ಕೂ ಕಷ್ಟ ಕಷ್ಟ.

ಒಟ್ನಲ್ಲಿ ಕವಿಯದೇನೂ ತಪ್ಪಿಲ್ಲ ಅಂದ್ರಲ್ಲ ನೀವು, ಅದೇ ಸಮಾಧಾನ ನಂಗೆ! :D

ಥ್ಯಾಂಕ್ಸ್ ಸುಪ್ರೀತ್..

ಸುಶ್ರುತ ದೊಡ್ಡೇರಿ said...

@ Venu

ಧನ್ಯಾವದ ವೇಣು.. ..

December Stud said...

Yep, you hit the bull's eye :)