Thursday, September 13, 2007

ಗಣೇಶ ಬಂದು ಹೋದ

ಸರ್ವಜಿತು ಸಂವತ್ಸರದ ಭಾದೃಪದ ಶುಕ್ಲದ ಚೌತಿಯ ದಿನ. ಬೆಳಗ್ಗೆ ನಾಲ್ಕು ಗಂಟೆಯಾಗುತ್ತಿತ್ತು. ಈಶ್ವರ ಬಂದು ಗಣೇಶನನ್ನು ಎಬ್ಬಿಸಿದ:

“ಏಳು ಮಗನೇ.. ಗಂಟೆ ನಾಲ್ಕಾಗುತ್ತಿದೆ. ಇವತ್ತು ಚೌತಿ, ಭುವಿಗೆ ಹೋಗಬೇಕು ನೀನು. ಜನ ಎಲ್ಲಾ ಕಾಯ್ತಿರ್ತಾರೆ ಚಕ್ಲಿ, ಮೋದಕ, ಪಂಚಕಜ್ಜಾಯ, ಇನ್ನೂ ಏನೇನೋ ಮಾಡ್ಕೊಂಡು.. ಏಳು.. ಎದ್ದೇಳು.. ಡ್ರೆಸ್ ಮಾಡ್ಕೊಂಡು ಹೊರಡುವ ಹೊತ್ತಿಗೆ ತಡವಾಗೊತ್ತೆ..”

‘ಮೋದಕ’ ಶಬ್ದ ಕೇಳಿದ್ದೇ ತಡ, ಗಣೇಶ ದಡಬಡಿಸಿ ಎದ್ದ. ಅವನಿಗಾಗಲೇ ಹಸಿವಾಗಲಿಕ್ಕೆ ಶುರುವಾಯಿತು. ಅಲ್ಲೇ ಪಕ್ಕದ ಟೀಪಾಯಿಯ ಮೇಲಿಟ್ಟಿದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ. ತನ್ನ ತರಹದ್ದೇ ಸಾವಿರಾರು ರೂಪಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಂದೊಂದು ದಿಕ್ಕಿಗೂ ಒಬ್ಬೊಬ್ಬರು ಹೋಗುವಂತೆ ಪ್ಲಾನ್ ಮಾಡಿದ. ಅದರಲ್ಲೇ ಒಂದು ರೂಪ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಹೊರಟಿತು.

ಇಲಿ ಜೋರಾಗಿ ಓಡುತ್ತಿತ್ತು. ಗಣೇಶ ಬೈದ: "ಏಯ್ ಸ್ವಲ್ಪ ನಿಧಾನ ಹೋಗೋ.. ಸಿಕ್ಕಾಪಟ್ಟೆ ಜಂಪ್ ಆಗ್ತಿದೆ..!"

"ಹೂಂ ಕಣಣ್ಣ.. ಈ ವರ್ಷ ಮಳೆ ಜಾಸ್ತಿ ಆಗಿರೋದ್ರಿಂದ ರೋಡೆಲ್ಲ ಪೂರ್ತಿ ಹಾಳಾಗ್ ಹೋಗಿದೆ.. ಎಲ್ಲಾ ಆ ವರುಣಂದೇ ತಪ್ಪು!" ಇಲಿ ತಪ್ಪನ್ನು ವರುಣನ ಮೇಲೆ ಹೊರಿಸಿತು.

“ಅಲ್ಲಾ, ಇಷ್ಟು ವರ್ಷ ಮಳೆ ಇಲ್ಲ ಅಂತ ಜನ ಒದ್ದಾಡ್ತಿದ್ರು. ಸುಮಾರು ಜನ ನನ್ ಮುಂದೆ ಅಪ್ಲಿಕೇಶನ್ ಇಟ್ಟು ‘ವರುಣಂಗೆ ಸ್ವಲ್ಪ ಶಿಫಾರಸು ಮಾಡ್ಸಯ್ಯಾ’ ಅಂದಿದ್ರು. ನಂಗೂ ದೂರು ತಗೊಂಡೂ ತಗೊಂಡೂ ಬೇಜಾರ್ ಬಂದುಹೋಗಿತ್ತು. ಅದಕ್ಕೇ ನಾನೇ ವರುಣನ ಹತ್ರ ಹೇಳಿ ಈ ವರ್ಷ ಸ್ವಲ್ಪ ಜಾಸ್ತಿ ಮಳೆ ಗ್ರಾಂಟ್ ಮಾಡ್ಸಿದೆ. ಈಗ ನೋಡಿದ್ರೆ...”

“ಹ್ಮ್.. ಏನೂ ಮಾಡ್ಲಿಕ್ಕಾಗಲ್ಲ ಬಿಡಣ್ಣಾ.. ಆದ್ರೆ ಇಷ್ಟೆಲ್ಲಾ ರಸ್ತೆ ಹಾಳಾಗಿದ್ರೂ ಸರ್ಕಾರದವ್ರು ಇತ್ಲಾಗೆ ಗಮನಾನೇ ಕೊಡದೆ ಬರೀ ‘ಅಧಿಕಾರ ಹಸ್ತಾಂತರ’ ‘ಅಧಿಕಾರ ಹಸ್ತಾಂತರ’ ಅಂತ ಹೇಳ್ತಾ ಕೂತಿದಾರಲ್ಲಾ, ಏನ್ ಮಾಡೋಣ ಹೇಳು ಇವ್ರಿಗೆ?”

“ಏನದು ಅಧಿಕಾರ ಹಸ್ತಾಂತರ?”

“ಅದೇ ಕುಮಾರಸ್ವಾಮಿ ಇದಾರಲ್ಲಾ..?”

“ಯಾರು ನನ್ನ ಅಣ್ಣಾನಾ?”

“ಅವ್ರಲ್ಲ ಒಡೆಯಾ, ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕುಮಾರಸ್ವಾಮಿ, ಅವ್ರು ಯಡಿಯೂರಪ್ಪನವ್ರಿಗೆ ಎರಡೂವರೆ ವರ್ಷ ಆದ್ಮೇಲೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡ್ತೀನಿ ಅಂದಿದ್ರಂತೆ. ಈಗ ನೋಡಿದ್ರೆ ‘ಅಪ್ಪನ್ ಕೇಳ್ಬೇಕು’ ಅಂತಿದಾರಂತೆ!”

“ಅಯ್! ಹೌದಾ! ಹಾಗಾದ್ರೆ ಆ ಕುಮಾರಸ್ವಾಮಿಗೆ ಒಂದು ಶಾಪ ಕೊಟ್ಬಿಡ್ಲಾ?”

“ಸುಮ್ನಿರೀ ಒಡೆಯಾ.. ನಮಗ್ಯಾಕೆ ರಾಜಕೀಯ.. ಏನಾದ್ರೂ ಮಾಡ್ಕೊಂಡು ಸಾಯ್ಲಿ.. ಅವ್ರಪ್ಪ ದೇವೇಗೌಡ್ರು ಬೇರೆ ದಿನಾ ಯಾವ್ಯಾವ್ದೋ ದೇವ್ರಿಗೆಲ್ಲಾ ಹರಕೆ ಹೊತ್ಕೋತಿದಾರೆ.. ನೀನೀಗ ಶಾಪ ಕೊಡೋದು, ಕೊನೆಗೆ ಮತ್ತಿನ್ಯಾರೋ ಬಂದು ‘ಗೌಡ್ರು ನಂಗೆ ಹರಕೆ ಹೊತ್ಕೊಂಡಿದಾರೆ, ಅವ್ರ ಆಸೇನಾ ನಾನು ಈಡೇರಿಸ್ಲೇಬೇಕು, ನಿನ್ ಶಾಪ ಹಿಂದಕ್ ತಗೋ’ ಅಂದ್ರೆ ಕಷ್ಟ. ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”

“ಹ್ಮ್.. ನೀ ಹೇಳೋದೂ ಒಂದ್ರೀತಿ ಸರಿ ಇಲಿರಾಯ..”

ಬೆಂಗಳೂರಿನ ಬೀದಿಬೀದಿಗಳಲ್ಲೂ ಶಾಮಿಯಾನಾ ಹಾಕಿ, ಸ್ಟೇಜು ಕಟ್ಟಿ, ದೊಡ್ಡ ದೊಡ್ಡ ಬಣ್ಣಬಣ್ಣದ ಮಡಿ ಉಟ್ಟ ತನ್ನದೇ ಮೂರ್ತಿಗಳನ್ನಿಟ್ಟಿದುದನ್ನು ನೋಡುತ್ತಾ, ಖುಷಿ ಪಡುತ್ತಾ, ಗಣೇಶ ಮುಂದೆ ಸಾಗಿದ. ಒಂದೊಂದೇ ಭಕ್ತರ ಮನೆ ಮೆಟ್ಟಿಲು ಹತ್ತಿಳಿದು ಬರಲಾರಂಭಿಸಿದ. ಎಲ್ಲರ ಮನೆಯಲ್ಲೂ ಪೂಜೆ ನಡೆಯುತ್ತಿತ್ತು. ಭಟ್ಟರಿಗಂತೂ ಪುರುಸೊತ್ತೇ ಇರಲಿಲ್ಲ. ಐದೇ ನಿಮಿಷದಲ್ಲಿ ಮಿಣಿಮಿಣಿಮಿಣಿ ಮಂತ್ರ ಹೇಳಿ ಪೂಜೆ ಮುಗಿಸಿ, ದುಡ್ಡಿಸಕೊಂಡು, ಮುಂದಿನ ಮನೆಗೆ ಹೋಗುತ್ತಿದ್ದರು. ಯಾರದೋ ಮನೆಯಲ್ಲಿ ಗಣೇಶ ಮೊಬೈಲಿನಲ್ಲೇ ಮಂತ್ರ ಪಠಣ ಮಾಡಿಸಿಕೊಂಡು ಪೂಜೆ ಮುಗಿಸಿಕೊಂಡ. ಮತ್ತಿನ್ಯಾರೋ ಭೂಪ ಕಂಪ್ಯೂಟರ್ ಮುಂದೆ ಕೂತು ಗೂಗಲ್ಲಿನಲ್ಲಿ ಸರ್ಚ್ ಮಾಡಿ ಆನ್‌ಲೈನ್ ಪೂಜೆ ಮಾಡಿ ಮುಗಿಸಿಬಿಟ್ಟ! ಪರಮೇಶ್ವರ ಪುತ್ರನಿಗೆ ಪರಮಾಶ್ಚರ್ಯ! ದೇವಲೋಕಕ್ಕೆ ಮರಳಿದಮೇಲೆ ಸರಸ್ವತಿಯನ್ನು ಕಂಡು ‘ನಿನ್ನ ಆಶೀರ್ವಾದದಿಂದ ಭೂಲೋಕದಲ್ಲಿ ಜನ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ’ ಎಂದು ಹೇಳಬೇಕೆಂದುಕೊಂಡ.

ಸಂಜೆ ಹೊತ್ತಿಗೆ ಈ ಬೀದಿ ಶಾಮಿಯಾನಾ ಸ್ಟೇಜುಗಳಿಂದ ಕರ್ಕಶವಾದ ದನಿ ಕೇಳಿಬರುತ್ತಿತ್ತು. ಗಣೇಶ ಏನಾಯಿತೆಂದು ನೋಡಲಾಗಿ, ತನ್ನ ಮೂರುತಿಯ ಎದುರು ನಿಂತು ಒಂದಷ್ಟು ತರುಣಿಯರೂ-ತರುಣರೂ ‘ಕೆಂಚಾಲೋ ಮಂಚಾಲೋ..’ ಎಂದು ಹಾಡುತ್ತಿದ್ದರು. “ಇದ್ಯಾವ ಭಾಷೆ?” ಕೇಳಿದ ಗಣೇಶ ಇಲಿಯ ಬಳಿ. ಇಲಿ “ಗೊತ್ತಿಲ್ಲ” ಅಂತು. ಸ್ಲೀವ್‌ಲೆಸ್ ಹುಡುಗಿಯರನ್ನು ಬ್ರಹ್ಮಚಾರಿ ಗಣೇಶ ನೋಡದಾದ. ಮೈಕಿನ ದನಿ ಕೇಳೀ ಕೇಳೀ ಗಣೇಶನಿಗೆ ತಲೆನೋವು ಬಂತು.

ರಾತ್ರಿ ಹನ್ನೊಂದರ ಹೊತ್ತಿಗೆ ಲಾರಿಗಳ ಮೇಲೆ ಆ ದೊಡ್ಡ ದೊಡ್ಡ ಮೂರ್ತಿಗಳನ್ನೆಲ್ಲ ಇಟ್ಟುಕೊಂಡು ಜನ ಕೆರೆಯ ಕಡೆ ಹೊರಟರು. ಗಣೇಶನೂ ಇಲಿಯ ಮೇಲೆ ಕೂತು ಅವರನ್ನು ಫಾಲೋ ಮಾಡಿದ. ಲಾರಿಯ ಎದುರಿಗೆ ‘ಢಂಕಣಕ ಢಂಕಣಕ’ ಅಂತ ಬಡಿಯುತ್ತ ಒಂದಷ್ಟು ಜನ ತೈತೈ ಎಂದು ಕುಣಿದಾಡುತ್ತಿದ್ದರು. ತನ್ನಪ್ಪ ನಟರಾಜನಿಗಿಂತ ಜೋರಾಗಿ ಕುಣಿಯುತ್ತಿರುವ ಈ ಮಂದಿಯನ್ನು ನೋಡಿ ಗಣೇಶ ದಂಗಾದ. ಅವರೆಲ್ಲರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. “ಏನದು ವಾಸನೆ?” ಕೇಳಿದ ಗಣೇಶ. ಈ ಬಾರಿ ಹಾವು ಉತ್ತರಿಸಿತು: “ನೀವೆಲ್ಲಾ ಸಂತಸದ ಘಳಿಗೆಗಳಲ್ಲಿ ಮಧುಪಾನ ಮಾಡ್ತೀರಲ್ವಾ? ಹಾಗೇನೇ ಇವ್ರೂ ಮಾಡಿದಾರೆ.” “ಓಹ್ ಹಾಗಾ, ಎಲ್ಲಾ ಓಕೆ; ಆದ್ರೆ ವಾಸ್ನೆ ಯಾಕೆ?” “ಇದು ಆ ಮಧುವಿಗಿಂತ ಸ್ವಲ್ಪ ಸ್ಟ್ರಾಂಗು, ಅದಕ್ಕೇ ವಾಸ್ನೆ!”

ಮೂರ್ತಿಗಳನ್ನೆಲ್ಲಾ ಕೆರೆಯೊಳಗೆ ಮುಳುಗಿಸಿದರು. ಅವುಗಳ ಜೊತೆಗೇ ಹೂವು, ಹಣ್ಣು, ಕಾಯಿ, ಕುಂಕುಮ, ಅರಿಶಿಣ.. ಮಣ್ಣ ಗಣೇಶ ನಿಧನಿಧಾನವಾಗಿ ಕೆರೆಯ ನೀರಿನಲ್ಲಿ ಕರಗತೊಡಗಿದ. ಅವನ ಮೈಯ ಬಣ್ಣ ಕೆರೆಯ ನೀರಿನೊಂದಿಗೆ ಬೆರೆಯತೊಡಗಿತು. ಇಡೀ ಕೆರೆಗೆ ಕೆರೆ ಕೊಳಚೆ ಗುಂಡಿಯಂತೆ ಕಾಣತೊಡಗಿತು..

ಇಲಿಯೂ, ಹಾವೂ ಬೆರಗುಗಣ್ಣುಗಳಿಂದ ಇವನ್ನೆಲ್ಲಾ ನೋಡಿದವು.. ಗಣೇಶನಿಗಂತೂ ತಾನೇ ಆ ಕೆರೆಯ ನೀರಿನಲ್ಲಿ ಕರಗುತ್ತಿದ್ದಂತೆ, ತನ್ನ ಅಂತಃಸತ್ವವೇ ಅಲ್ಲಿ ಲೀನವಾಗುತ್ತಿದ್ದಂತೆ ಭಾಸವಾಗತೊಡಗಿತು.. ಹೊಟ್ಟೆ ತೊಳೆಸಲಾರಂಭಿಸಿತು.. ಇಲಿಗೆ ಆದೇಶವಿತ್ತ: “ಇಲ್ಲಿನ್ನು ಅರೆಕ್ಷಣ ಇರಲಾರೆ.. ಬೇಗ ನಡೆ.. ದೇವಲೋಕಕ್ಕೆ ಹೋಗೋಣ..” ಬೆಕ್ಕು ಕಂಡವನಂತೆ ಇಲಿರಾಯ ಓಡತೊಡಗಿದ.

ಗಣೇಶ ಮರುದಿನ ಬೆಳಗ್ಗೆ ಎದ್ದು ಭೂಲೋಕದತ್ತ ಬಗ್ಗಿ ನೋಡಿದರೆ ಒಂದಷ್ಟು ಜೆಸಿಬಿ ಯಂತ್ರಗಳು, ಮಿನಿ ಕ್ರೇನುಗಳು ಕೆರೆಯ ಹೂಳೆತ್ತುತ್ತಿದ್ದವು. ಅರೆಬರೆ ಕರಗಿದ ಗಣೇಶನ ಮೂರ್ತಿಗಳನ್ನು ದಡಕ್ಕೆಳೆದು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದವು. ಅವನ್ನೆಲ್ಲಾ ಒಡೆದು ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದಾಗಿ ಜನ ಮಾತಾಡಿಕೊಳ್ಳುತ್ತಿರುವುದು ದೇವಲೋಕದವರೆಗೂ ಕೇಳುತ್ತಿತ್ತು. ಹಿಂದಿನ ದಿನ ಹೊಟ್ಟೆಬಿರಿಯೆ ತಿಂದಿದ್ದ ತಿಂಡಿಗಳನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಗಣೇಶ ಟಾಯ್ಲೆಟ್ಟಿನತ್ತ ನಡೆದ.

[ಎಲ್ಲರಿಗೂ ಚೌತಿಯ ಶುಭಾಷಯಗಳು.]

27 comments:

Ranju said...

ಸಕತ್ ಕಲ್ಪನೆ ಪುಟ್ಟಣ್ಣಾ, ವಾವ್!
ಟ್ರಾಕ್ ಬಿಟ್ಟು ಬರೆದಿದ್ದಿಯಾ. ತುಂಬಾ ದಿನದ ಮೇಲೆ ನಿನ್ನ ಲೇಖನ ಓದಿ ತುಂಬಾ ಖುಷಿ ಆಯಿತು.
ಹೋದ ಸಾರಿ ಗಣೇಶ ಜೋಗಿ ಸಾಂಗ್ ಕೇಳಿ ತಲೆ ನೋವು ಬರಿಸಿಕೊಂಡಿದಿದ್ದಾ. ಈ ಸಾರಿ ಮುಂಗಾರು ಮಳೆ ಸಾಂಗ್.
ಬೆಂಗಳೂರಿನ ಟ್ರಾಫಿಕ್ ಗಣೇಶಂಗೆ ಹೆದರಿಕೆ ಆಗಿಲ್ವಾ ಬರಿ ರೋಡ್ ಮಾತ್ರಾನಾ ಸುಶ್.

ಗಣೇಶನ್ನ ಊರ ಕಡೆ ಕರೆದುಕೊಂಡು ಹೋಗನ ಮುಂದಿನ ಸಾರಿ ಈ ಬೆಂಗಳೂರಿನ ಸಹವಾಸ ಬೇಡ ಏನ್ ಹೇಳ್ತೆ?

ಅನಂತ said...

ಚೆನ್ನಾಗಿದೆ... ನಿಮಗೂ ಚೌತಿಯ ಶುಭಾಶಯಗಳು... ;)

Vikas said...

HA HA. VERY NICE.
ಚೌತಿ ಶುಭಾಶಯಗಳು

Anonymous said...

Baryoke vishya sigthaa ilva saar??? athva hab habbakke ondondu lekhana chachthini antha harake hotthideera???

ಸುಶ್ರುತ ದೊಡ್ಡೇರಿ said...

@ ranju

ಥ್ಯಾಂಕ್ಸ್ ಮಚ್ಚೀ. :)
ಹೌದೇ, ಮುಂದಿನ್ ಸಾರಿ ಗಣೇಶನ್ನ ನಮ್ಮೂರ್ ಕಡೆ ಕರ್ಕಂಡ್ ಹೋಪನ.

@ ಅನಂತ, vikas

ಧನ್ಯವಾದಗಳೂ.. :-)

@ anonymous

ಯಾಕ್ಸಾರ್ ಸಿಟ್ ಮಾಡ್ಕೋತಿದೀರಾ? ವಿಷ್ಯ ಇದೆ, ಬರೀಲಿಕ್ಕೆ ಪುರುಸೊತ್ತಿಲ್ಲ! :(
ನಾನು ಪ್ರತೀ ಹಬ್ಬಕ್ಕೂ ನನ್ನ ಸ್ನೇಹಿತರಿಗೆ, ನೆಂಟರಿಗೆ, ಗುರುಗಳಿಗೆ 'ಸ್ವಯಂ-ಪ್ರಿಪೇರಿತ' ಗ್ರೀಟಿಂಗ್ಸ್ ಕಳುಸ್ತೀನಿ. ಅದೇ ನೆಪದಲ್ಲಿ ಬರೆದಿದ್ದು ಇದು.
ಹಬ್-ಹಬ್ಬಕ್ಕಾದ್ರೂ ಬರೀತಿದೀನಲ್ಲ, ಖುಷಿ ಪಡಿ! :O
(ದಯವಿಟ್ಟು ನಿಮ್ಮ ಹೆಸರು ಹಾಕಿ ಪ್ರತಿಕ್ರಿಯಿಸಿ. ನೀವ್ಯಾರು ಅಂತ ಹೇಳ್ಕೊಳ್ಳೋಕೆ ಯಾಕೆ ಹಿಂಜರಿಕೆ?)

Ranju said...

ಮೊದಲು ಸುಶ್ ನಿನ್ನ ಕ್ಷಮೆ ಕೇಳುತ್ತಾ ಈ ಎನಾನಿಮಸ್ ಗೆ ನಾನು ರಿಪ್ಲೆ ಮಾಡ್ತೀನಿ. ಎನಾನಿಮಸ್ ಕಾಮೆಂಟ್ ಓದಿ ನಂಗೆ ಸುಮ್ನೆ ಇರಕೆ ಆಕ್ತಾ ಇಲ್ಲಾ.

@ Anonymous,
ರೀ ಮೊದಲು ನಿಮ್ಮ ಹೆಸರು ಹಾಕಿ ಕಾಮೆಂಟ್ ಮಾಡ್ರಿ. ಓದಿ ಎಂಜಾಯ್ ಮಾಡಕೆ ಆಗಲ್ಲಾ ಅಂದ್ರೆ ಸುಮ್ನೆ ಇದ್ದು ಬಿಡಿ. ಅದನ್ನ ಬಿಟ್ಟು ಈ ರೀತಿ ಕಾಮೆಂಟ್ ಮಾಡೋ ಅಗತ್ಯತೆ ಇಲ್ಲಾ. ಅವರ ಉತ್ಸಾಹವನ್ನ ಯಾಕ್ರಿ ಹಾಳು ಮಾಡ್ತೀರಾ. ನಿಮಗೆ ಆದ್ರೆ ಸುಶ್ರುತ ಮಾಡಿದಂತ ಒಂದು ಕಲ್ಪನೆಯನ್ನ ಮಾಡಿ ಒಂದು ಬ್ಲಾಗ್ ಬರೀರಿ.

Alpazna said...

Good one..

ನಿನ್ ಬ್ಲಾಗಲ್ಲಿ ಪಟಾಕಿ ಶಬ್ದ ಕೇಳಿ ಸ್ವಲ್ಪ ಆಶ್ಚರ್ಯ ಆತು!!

Keshav Kulkarni said...

ಚೆನ್ನಾಗಿದೆ, ನಕ್ಕು ಹೊಟ್ಟೆ ಒಡದೋಯ್ತು
ಗಣೇಶನ ಹಬ್ಬದ ಶುಭಾಶಯಗಳು
ಕೇಶವ
www.kannada-nudi.blogspot.com

ಅಸತ್ಯ ಅನ್ವೇಷಿ said...

ಸುಶ್... ಗಣೇಶನ ಸೊಂಟಕ್ಕೆ ಕಟ್ಟಿದ ಬೆಲ್ಟ್ ಭುಶ್... ಅಂತ ಸದ್ದು ಹೊರಡಿಸಿದ್ದು ಕೇಳಿ ಈ ಕಡೆ ಬಂದೆ. ನೋಡಿದ್ರೆ ನೀವು ಗಣಪಣ್ಣನನ್ನು ಇಲಿ ಮೇಲೆ ಎತ್ತಿ ಕುಕ್ಕಿ ಅಲುಗಾಡಿಸಿಬಿಟ್ಟಿದ್ದೀರಿ... ಗಣಪಣ್ಣ ಬೆಂಗಳೂರ ರಸ್ತೆಗಳನ್ನು ನೋಡೋಕೆ ಬಂದಿದ್ದು "ಸತ್ಯ"ಲೋಕಕ್ಕೆ ಕಣ್ರೀ...ಅಲ್ಲಿ ಬಂದ್ಮೇಲೇ ಸತ್ಯದ ಅರಿವಾಗಿದ್ದು. ಯಾಕಂದ್ರೆ ಇಲ್ಲಿ ರಾಜಕಾರಣಿಗಳು ಮತ್ತು ಗುತ್ತಿಗೆದಾರರ ಹೊಟ್ಟೆ ತನ್ನ ಹೊಟ್ಟೆಗಿಂತಲೂ ದೊಡ್ಡದು ಹೇಗೆ ಎಂಬ ಸತ್ಯವನ್ನು (ಈ ರೋಡ್‌ಗಳನ್ನು ನೋಡಿದ್ಮೇಲೇ) ತಿಳಿದ ಬಳಿಕ, ಗಣೇಶ ಅಲ್ಲಿಂದಲೇ ಇಲಿಯನ್ನು ಹಾರುವಂತೆ ಮಾಡಿ ಮುಂದುವರಿದ.

ನೀವು ಕೂಡ ಮಾಮೂಲಿ ರಸ್ತೆ ಮೇಲೆ ಹೋಗದೆ ಟ್ರ್ಯಾಕ್ ಚೇಂಜ್ ಮಾಡಿ ಇದನ್ನು ಬರ್ದಿದ್ದಕ್ಕೆ "ವಾವ್" ಅಂತ ಉದ್ಗಾರ ಹೊರಬಿದ್ದಿದೆ. :)

ಪುಷ್ಪಾ said...

ಚೆನ್ನಾಗಿ ಬರೆದಿದೀರಾ
ಕಥೆನೊ ಆಯ್ತು ನಿಜ ಜೀವನದ ಸನ್ನಿವೇಶನೊ ಇದೆ..
ಗಣೇಶ ಹಬ್ಬದ ಶುಭಾಶಯಗಳು

ಅರ್ಚನಾ said...

good one..

Sanath said...

sush,
tumba chenangide

ಸುಶ್ರುತ ದೊಡ್ಡೇರಿ said...

@ alpazna

ಥ್ಯಾಂಕ್ಸ್.

ನೀ ಹಿಂಗೆಲ್ಲ ಅಂದ್ರೆ ಪಟಾಕಿಗೆ ಖುಷಿಯಾಗಿ ಮತ್ತೂ ಜೋರಾಗಿ ಡಬ್ ಡಬ್ ಅನ್ನೋ ಛಾನ್ಸಸ್ ಇದ್ದು ನೋಡು! ;P

keshav,

ಅಯ್ಯೋ! ಹೊಟ್ಟೆ ಒಡೆದೋಯ್ತಾ? ಹಾಗಾದ್ರೆ ಅಲ್ಲೇ ಪಕ್ದಲ್ಲಿ ಯಾವ್ದಾದ್ರೂ ಹಾವಿದ್ರೆ ಎತ್ತಿ ಕಟ್ಕೊಳಿ ಫಸ್ಟು! ;O
(ಥ್ಯಾಂಕ್ಸ್..)

ಅನ್ವೇಷಿ,

ನಿಮ್ಮ 'ವಾವ್'ಗೆ ಧನ್ಯವಾದ್.
ರಾಜಕಾರಣಿಗಳ ಹೊಟ್ಟೆ ನೋಡಿ ಗಣೇಶನ ತಲೆ ತಿರುಗಿರ್ಲಿಕ್ಕೂ ಸಾಕು ಅಲ್ವಾ? ;)

ಪುಷ್ಪಾ, ಅರ್ಚನಾ, sanath

ಥ್ಯಾಂಕ್ಸ್ ಥ್ಯಾಂಕ್ಸ್ ಥ್ಯಾಂಕ್ಸ್! :-)

Anonymous said...

@ Ranju
elrigu avaravara abhipraya vyaktapadisoke hakku ide. nimge ishta aadre hange bardu sumnagi.
bere yaroo odi abhipraya helbardu antidre sushrutha avru matra odoke baro haage madkolli. comment nodi utsaha haalu madikondre adu avara moorkhatana. innu chennagi olle vishyagalanna baribeku antha nirdhara madidre adu avara jaanatana. elrigu avra haage kalpane madi bareyoke bandidre avrigu bereyavrigu vyatyasa enirtittu? bari odi 'enjoy' madodondkintha innu olledanna apekshe padodralli(avarige samarthya ide) tappenide?

Ranju said...

@Anonymous
ಥ್ಯಾಂಕ್ಸ್ ಕಣ್ರೀ ನಿಮ್ಮ ರಿಪ್ಲೆ ಓದಿ ಖುಷಿ ಆಯಿತು.
ಮತ್ತೆ ನಿಮ್ಮ ಹೆಸರು ಹಾಕಿಲ್ಲ. ಯಾಕ್ರಿ ಮುಜುಗರ. ನಿಮ್ಮ ಕಾಮೆಂಟ್ ಬಗ್ಗೆ ನೀವು ಇಷ್ಟೆಲ್ಲಾ ಜಸ್ಟಿಫಿಕೆಶನ್ ಕೊಟ್ಟಿದ್ದಿರಾ ಹೆಸರು ಹಾಕಕೆ ಯಾಕೆ ಭಯ. ಹ್ಮ್ ಇರಲಿ ಹೋಗ್ಲಿ ಬಿಡಿ.
ಹೌದು ನಿಮಗೆ ನಿಮ್ಮ ಅಭಿಪ್ರಾಯ ತಿಳಿಸುವ ಎಲ್ಲಾ ಹಕ್ಕು ಇದೆ.ಆದರೆ ಹೇಳೋ ರೀತಿಲಿ ಹೇಳ್ರಿ. ಅದೇನೋ ’chachthini’ ಅಂತೆಲ್ಲಾ ಬರೆದಿದ್ದಿರಾ..
ನಿಮ್ಮ ಕಾಮೆಂಟ್ ಓದಿ ಒಂದು ಕಥೆ ನೆನಪಾಗುತ್ತೆ ನಂಗೆ.
"ಹಿಂದೆ ಒಬ್ಬ ರಾಜ ಇದ್ನಂತೆ ಅವನಿಗೆ ಜ್ಯೋತಿಷ್ಯದ ಹುಚ್ಚು. ಅದಕ್ಕೆ ರಾಜ್ಯದಲ್ಲಿ ಇರೋ ಎಲ್ಲಾ ಜ್ಯೋತಿಷ್ಯರನ್ನೂ ಕರೆದು ಕರೆದು ಭವಿಷ್ಯ ಕೇಳ್ತಾ ಇದ್ನಂತೆ. ಎಲ್ಲಾರು ನಿಮ್ಮ ಕಣ್ಣ ಮುಂದೆ ನಿಮ್ಮ ಮಕ್ಕಳು ಸತ್ತು ಹೋಕ್ತಾರೆ ನಿಮ್ಮ ಮೊಮ್ಮಕ್ಕಳು ಆಡಳಿತ ನೇಡಿಸ್ತಾರೆ ಅಂತ ಹೇಳ್ತಿದ್ರಂತೆ. ಅದಕ್ಕೆ ರಾಜ ಕೋಪಗೊಂಡು ಅವರಿಗೆ ಮರಣದಂಡನೆ ಕೊಟ್ನಂತೆ , ಆದರೆ ಒಬ್ಬ ಜ್ಯೋತಿಷಿ ಮಾತ್ರ ನಿಮ್ಮ ಮೊಮ್ಮಕ್ಕಳಿಗೆ ನೀವೆ ಪಟ್ಟಾಭಿಷೆಕ ಮಾಡ್ತಿರಾ ನಿಮ್ಮ ನಂತರ ಮೊಮ್ಮಕ್ಕಳು ಆಡಳಿತಕ್ಕೆ ಬರ್ತಾರೆ ಅದ್ನಂತೆ ಅದಕ್ಕೆ ರಾಜಂಗೆ ಸಕತ್ ಖುಷಿ ಆಗಿ ಬಹುಮಾನ ಕೊಟ್ಟು ಕಳಿಸಿದ್ನಂತೆ"
ಸೋ ಹೆಳೋದನ್ನ ಹೇಳೊ ಹಾಗೆ ಹೆಳ್ರಿ.
ಓಕೆ. ನನ್ನ ರಿಪ್ಲೆ ಇಂದ ನಿಮಗೆ ಬೇಜಾರ್ ಆದರೆ ಕ್ಷಮಿಸಿ.
no more discussion plz.

Anonymous said...

@ranju
chachthini anno shabda bangalore li hege balasthaare antha gottha madam nimge? gotthilla andre yarannadru keli thilkoli.naavu sushruthana baravanigeli abhimaana ittavru, avru inna ollolle lekhana bareeli antha coment maadiddu ashte.nim thara khandiddakkella wow anno jaayamaana alla namdu. iddaddu idda haage helthivi.

ಸುಶ್ರುತ ದೊಡ್ಡೇರಿ said...

@ anonymous and ranju

ಯಾಕ್ರಪ್ಪಾ ಹೊಡೆದಾಡ್ತಿದೀರಾ? ಹೋಗ್ಲಿ ಬಿಡ್ರೀ, ಏನೀಗ? ಸಮಾಧಾನ ಮಾಡ್ಕೊಳಿ.

ರಂಜು ಬಹುಶಃ 'ಚಚ್ತೀನಿ' ಅನ್ನೋ ಶಬ್ದಾನ ಅಕ್ಷರಶಃ ಚಚ್ಚೋದು ಅಂತ ಅಂದ್ಕೊಂಡ್ರು ಅನ್ಸುತ್ತೆ! ಪಾಪದ ಹುಡುಗಿ ಅದು, ಬಿಟ್ಬಿಡ್ರೀ! :)

ಆದ್ರೂ ನೀವು ನಿಮ್ಮ ಹೆಸರು ಹಾಕದೇ ಇಷ್ಟೆಲ್ಲಾ ಮಾತಾಡ್ತಿರೋದು ಮಾತ್ರ ಸ್ವಲ್ಪಾನೂ ಚೆನ್ನಾಗಿಲ್ಲ ನೋಡಿ. ನನ್ ಬಗ್ಗೆ ಇಷ್ಟೆಲ್ಲಾ ಅಭಿಮಾನ ಇರೋರು ಯಾರು ಅಂತ ಗೊತ್ತಾದ್ರೆ ನಂಗೂ ಖುಷಿ ಆಗ್ತಿತ್ತು..

ಖಂಡಿತಾ, ಇಷ್ಟ ಆದ್ರೆ ಇಷ್ಟ ಆಯ್ತು ಅಂತ ಹೇಳಿ; ಆಗ್ಲಿಲ್ಲ ಅಂದ್ರೆ ಆಗ್ಲಿಲ್ಲ ಅನ್ನಿ. ನಂಗೇನೂ ಬೇಜಾರಿಲ್ಲ. ಆದ್ರೆ ಪದಪ್ರಯೋಗ ಮಾಡ್ಬೇಕಾದ್ರೆ ಸ್ವಲ್ಪ ಹುಷಾರಾಗಿರಿ. ಯಾಕೇಂದ್ರೆ, ಹಿಂದೆ ಡಾ| ರಾಜ್‍ಕುಮಾರ್ ಬಗ್ಗೆ ಯಾರಾದ್ರೂ ಏನಾದ್ರೂ ಅಂದ್ರೆ ಅವರ ಅಭಿಮಾನಿಗಳು ಹೊಡೆದಾಟಕ್ಕೇ ಹೋಗ್ತಿದ್ರು (ರಾಜ್ ತಮ್ ಪಾಡಿಗೆ ತಾವು ಸುಮ್ನೇ ಇರ್ತಿದ್ರು!), ಹಾಗೆ ಸುಶ್ರುತ ದೊಡ್ಡೇರಿಗೂ ಈಗ 'ಅಭಿಮಾನಿಗಳ ಬೆಂಬಲ' ಇದೆ! ಸೋ, ಬಿ ಕೇರ್‍ಫುಲ್!! ಹಹ್ಹಹ್ಹಹ್ಹ! :D

ನಿಮ್ಮಗಳ ಅಕ್ಕರೆಗೆ ಋಣಿ. ದಯವಿಟ್ಟು ಜಗಳ ನಿಲ್ಸಿ ಸಾಕು. :-)

ವಿಕಾಸ್ ಹೆಗಡೆ/ Vikas Hegde said...

ಇದು ಓದುಗರ ವೇದಿಕೆ ಆಗಿದ್ರಿಂದ ನಾನೂ(ಅಭಿಮಾನಿ ದೇವ್ರು) ಮಾತಾಡ್ಬೋದು.ನಿಮ್ಮಿಬ್ಬರ ಜಗಳವಲ್ಲದ ಜಗಳ ನೋಡಿ ಮಜಾ ತಗಂಡವ್ರಲ್ಲಿ ನಾನೂ ಒಬ್ಬ :)

ಇನ್ನು ಗಂಭೀರವಾಗಿ ಹೇಳೋದಾದ್ರೆ ಇಲ್ಲಿ ಒಬ್ಬರ ಅಭಿಪ್ರಾಯನ ಇನ್ನೊಬ್ರು ಬೈಯ್ಯೋದು ತಪ್ಪು. ಯಾಕಂದ್ರೆ ಇದು ಚರ್ಚೆ ಅಲ್ಲ.
ಅವರವರಿಗನಿಸಿದ್ದು ಅವರು ಹೇಳ್ತಾರೆ. ಅದನ್ನ ಬರಹಗಾರರು ನೋಡ್ಕೋತಾರೆ, ತಿದ್ಕೋತಾರೆ(ಮನಸ್ಸು ಇದ್ರೆ). ಅಷ್ಟಕ್ಕೂ
ಅವರು ಸುಶ್ರುತಂಗೆ ಚಚ್ತೀನಿ ಅಂತ ಎಲ್ಲೂ ಹೇಳಿಲ್ಲ. ಸುಶ್ರುತ ಅವರು ಲೇಖನ ಚಚ್ತಾರೆ ಅಂತ ಹೇಳಿದ್ದು. ಹಳೇ ಮೈಸೂರು ಭಾಷೆಯಲ್ಲಿ ಚಚ್ಚುವುದು ಅನ್ನುವುದನ್ನು 'ಯಾವುದಾದರೂ ಕೆಲಸವನ್ನು ಮಾಡಿ ಬಿಸಾಕುವುದು' ಅನ್ನೋ ಅರ್ಥದಲ್ಲಿ ಬಳಸ್ತಾರೆ. ಹೀಗೆ ಕೆಲಸ 'ಚಚ್ಚುವುದು' ಪರಿಣಿತರಿಗೆ ಮಾತ್ರ
ಸಾಧ್ಯ. ಆದ್ದರಿಂದ ಅದು ಒಂಥರಾ ಸುಶ್ರುತರಿಗೆ ಹೊಗಳಿಕೆ ಕೂಡ ಆಗಿದೆ. ಇನ್ನುಳಿದಂತ ಆ ಲೇಖನ ಅವರಿಗೆ ಅಷ್ಟು ಇಷ್ಟ ಆಗದಿದ್ದುದರಿಂದ ಅದನ್ನು ಅವರು(ಅನಾಮಧೇಯರು) ಹೇಳಿದ್ದಾರೆ. ಅಂಥಾ ರವಿ ಬೆಳಗೆರೆ ಕೂಡ ಹಲವು ಬಾರಿ ನೀರಸ, ಬಾಲಿಶ, ಹಳೇ ವಿಷಯಗಳ ಲೇಖನಗಳನ್ನು ಬರೆದುಬಿಡುವುದುಂಟು. ತೊಂದರೆಯಿಲ್ಲ. ಉಗ್ರ ರಜನೀಕಾಂತ್ ಅಭಿಮಾನಿಯೊಬ್ಬನಿಗೆ ರಜನಿಯ ಪ್ರತಿಯೊಂದು ಹಾವಭಾವವೂ great ಅನ್ನಿಸಿದರೆ ಇನ್ನೊಬ್ಬನಿಗೆ ಅದು
ಕಪಿಚೇಷ್ಟೆ ಯಂತೆ ಅನ್ನಿಸುವುದುಂಟು. ಆದ್ದರಿಂದ ಎಲ್ಲರ ಅಭಿಪ್ರಾಯಕ್ಕೂ ಮನ್ನಣೆಯಿರಲಿ. ವೈಯಕ್ತಿಕ ego ಬೇಡ. ಹೌದಾಗಿದ್ದರೆ ಹೌದು ಅನ್ನಬೇಕು. ತಮ್ಮ ತಪ್ಪಿದ್ದರೆ ಒಪ್ಪಿಕೊಳ್ಳಬೇಕು. ರಂಜನಾ ಅವರು ಒಳ್ಳೆಯ ಉದ್ದೇಶದಿಂದಲೇ ಹೇಳಿರಬಹುದು. ಅದು ಬೇರೆ ವಿಷ್ಯ.

----------------
ಈಗ ರಾಜಣ್ಣನವರೇ ಅಭಿಮಾನಿ ದೇವರುಗಳ ಜಗಳದ ಮಧ್ಯೆ ಬಂದು ಸಮಾಧಾನ ಮಾಡುತ್ತಿರುವುದರಿಂದ ಅಭಿಮಾನಿಗಳು
ಸುಮ್ಮನಾಗುವುದೊಳ್ಳೆಯದು.ರಾಜಣ್ಣ ಅವರು ಮುಂದಿನ ಚಿತ್ರದಲ್ಲಿ ಅಭಿಮಾನಗಳ ಮಾತನ್ನು ಪರಿಗಣಿಸುತ್ತಾರೋ ಅಥವಾ ತಾನಿರೋದೆ ಹಿಂಗೆ, ತನಗೆ ಬರುವುದೇ ಹಿಂಗೆ ಅಂತ ವರ್ತಿಸುತ್ತಾರೋ ಕಾದು ನೋಡೋಣ. :)

********

ಸುಶ್ರುತ ದೊಡ್ಡೇರಿ said...

ವಿಕಾಸರೇ,

ನಿಮ್ಮ ಮಧ್ಯಸ್ಥಿಕೆಗೆ ಧನ್ಯವಾದ. ರಾಜ್‍ಕುಮಾರ್ ಏನು ಮಾಡ್ತಾರೆ ಕಾದು ನೋಡೋಣ. ತಿದ್ದಿಕೊಳ್ಳುವ ಮನಸ್ಸಿದ್ದರೂ ಒಮ್ಮೊಮ್ಮೆ ತಿದ್ಕೊಳ್ಳೋಕೆ ಆಗಲ್ಲ.. ರಾಜ್‍ಗೆ ಹಾಗಾಗದಿರಲಿ. ;)

ಅಂದಹಾಗೆ ರೀ ಅನಾನಸ್, ನಿಮ್ಗೆ ಹೇಳ್ಲಿಕ್ಕೆ ಮರೆತೆ:
ರಂಜನಾ ಅವ್ರೂ ಏನು ಕಂಡಿದ್ದಕ್ಕೆಲ್ಲ 'ವಾವ್ ವಾವ್' ಅಂದಿಲ್ಲ. ಚನಾಗಿಲ್ಲ ಅನ್ಸಿದ್ದನ್ನ ಚನಾಗಿಲ್ಲ ಅಂದಿದಾರೆ ಈ ಹಿಂದೆ. ನಿಮ್ಮ ಸ್ಟೇಟ್‍ಮೆಂಟನ್ನ ಕರೆಕ್ಟ್ ಮಾಡ್ಕೊಳಿ. :)

ಸರಿ ಇಲ್ಲಿಗೆ ಸಾಕು.

Meera Krishnamurthy said...

ಸುಶ್ರುತ ದೊಡ್ಡೇರಿಯವರೇ,

ನಿಮ್ಮ ಬರಹಗಳನ್ನು ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬಳು. ಬರಹಗಳನ್ನು ಓದಿ ನನ್ನೊಳಗೇ ನಕ್ಕು ಸುಮ್ಮನಾಗುತ್ತಿದ್ದೆ ಏನೂ ಬರೆಯುತ್ತಿರಲಿಲ್ಲ, ಆದರೆ ಇವತ್ತು ನಿಮ್ಮ ’ಗಣೇಶ ಬಂದು ಹೋದ’ ಬರಹ ಓದಿ ಕಣ್ಣು ಮೂಗಲೆಲ್ಲಾ ನೀರು ಬರುವಷ್ಟು ನಕ್ಕಿದ್ದಾಯ್ತು,ಏನಾದರೂ ಬರೆಯಲೇ ಬೇಕೆನಿಸಿತು. ಉಚಿತವಾಗಿ ನಗೆಟಾನಿಕ್ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ದಯವಿಟ್ಟು ಹೀಗೇ ನಗಿಸುತ್ತಿರಿ.

ನಮಸ್ಕಾರಗಳು
ಮೀರಾಕೃಷ್ಣ

M G Harish said...

ಈ ಸಲ ಗಣಪತಿ ನನ್ ವಿಷ್ಯದಲ್ಲಂತೂ ಭಾರಿ ರಾಜಕೀಯ ಮಾಡಿದ್ದ... ಇಲಿ ದೇವಲೋಕದಲ್ಲೂ ಇಲ್ಲೆ, ಬೆಂಗಳೂರಲ್ಲೂ ಇಲ್ಲೆ.. ನಮ್ಮನೇಲಿ ಸೇರ್ಕ್ಯಂಡಿದ್ದು..

ಕಥೆ ತುಂಬಾ ಚೆನ್ನಾಗಿದ್ದು.. ಚೌತಿಯ ಶುಭಾಷಯಗಳು...

Anonymous said...

Chennagi baradde maaNi!

Regards
Dr.D.M.Sagar
Canada

ಸುಶ್ರುತ ದೊಡ್ಡೇರಿ said...

meera,

ತುಂಬಾ ಧನ್ಯವಾದ ಮೇಡಂ. ನಗಿಸೋಣಂತೆ ನಗಿಸೋಣಂತೆ.. :-)

harish,

ಅದೇನದು ಇಲಿ ಹೊಕ್ಕೈಂದಾ ಮನೇಲಿ? ಒಂದು ಬೋನು ತಂದು ಹಿಡಿದು ಹಾಕು ಮಾರಾಯಾ! :O

d.m. sagar,

Thank you very much Manjanna.. :-)

anu said...

hello Mr.Sushruta...I red ur "ಗಣೇಶ ಬಂದು ಹೋದ"....n i really enjoyed it...it's a nice article...u have added comic flavor to religious one...n it's really beautiful...nim Bolg ge 1st time Enter agta iddini...hope nim articles continue agi odtini...Good luck n keep good writing...

anu said...
This comment has been removed by a blog administrator.
Vinayaka Bhat said...

Tumba chennagide, manasaare nakkubitte :-)
"ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”
Bahushaha jagattina indina paristhithiyannu nodidare idu aksharashaha nija annisutte.

Vinayaka Bhat said...

Tumba chennagide, manasaare nakkubitte :-)
"ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”
Bahushaha jagattina indina paristhithiyannu nodidare idu aksharashaha nija annisutte.