Thursday, November 22, 2007

ಸಿಡಿಯಲಿರುವ ಪಟಾಕಿ

ಅಪ್ಪ ಪ್ರತಿ ಕವಳವನ್ನೂ ತುಂಬಾ ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ಹಾಕುತ್ತಿದ್ದ. ಅದು ಅವನ ಬಾಯಲ್ಲಿರುವುದು ಐದೇ ನಿಮಿಷವಿರಬಹುದು, ಆದರೆ ಮೊದಲು ಒಂದಿಡೀ ಕೆಂಪಡಿಕೆ ಕತ್ತರಿಸಿ ನಾಲ್ಕು ಹೋಳು ಮಾಡಿ ಬಾಯಿಗೆ ಹಾಕಿಕೊಂಡು, ಅದು ಹಲ್ಲ ಮಿಕ್ಸರಿಗೆ ಸಿಕ್ಕು ನಲವತ್ನಾಲ್ಕು ಹೋಳಾಗಿ, ನಂತರ ಲೆಕ್ಕಕ್ಕೇ ಸಿಗದಷ್ಟು ಸಂಖ್ಯೆಯಲ್ಲಿ ಪುಡಿಪುಡಿಯಾಗುತ್ತಿರುವಾಗ ಅಪ್ಪ ಒಂದು ಸುಂದರ ಅಂಬಡೆ ಎಲೆಯ ತೊಟ್ಟು ಮುರಿದು, ನಂತರ ಅದರ ಕೆಳತುದಿಯನ್ನು ಮುರಿದು ತಲೆ ಮೇಲೆಸೆದುಕೊಂಡು, ಎಲೆಯ ಹಿಂಬದಿಯ ದಪ್ಪ ಗೀರುಗಳನ್ನು ನಾಜೂಕಾಗಿ ಚರ್ಮದಂತೆ ಬಿಡಿಸಿ ಎಳೆದು ತೆಗೆದು, ನಂತರ ಸುಣ್ಣದ ಕರಡಿಗೆಯಿಂದ ಸುಣ್ಣ ತೆಗೆದು ಎಲೆಯ ಬೆನ್ನಿಗೆ ನೀಟಾಗಿ ಸವರಿ, ಸಾಲಂಕೃತ ಎಲೆಯನ್ನು ಮಡಿಚಿ ಮಡಿಚಿ ಮಡಿಚಿ ಬಾಯಿಗಿಟ್ಟುಕೊಳ್ಳುತ್ತಿದ್ದ. ಅಡಿಕೆಯ ಕೆಂಪು ರಸ ತುಂಬಿದ್ದ ಬಾಯೊಳಗೆ ಈ ಅಂಬಡೆ ಎಲೆ ತನ್ನ ಹಸಿರು ಕಂಪಿನೊಂದಿಗೆ ಬೆರೆತು ಸಾಮ್ರಾಜ್ಯ ಸ್ಥಾಪಿಸುವ ವೇಳೆಯಲ್ಲಿ ಅಪ್ಪ ಕಪ್ಪು ತಂಬಾಕಿನ ಎಸಳಿನಿಂದ ಚೂರೇ ಚೂರನ್ನು ಚಿವುಟಿ ಮುರಿದು, ಅದನ್ನು ಅಂಗೈಯಲ್ಲಿ ಸ್ವಲ್ಪ ಸುಣ್ಣದೊಂದಿಗೆ ತಿಕ್ಕಿ ಸಣ್ಣ ಉಂಡೆ ಮಾಡಿ ಬಾಯಿಗೆಸೆದುಕೊಳ್ಳುತ್ತಿದ್ದ. ಅಪ್ಪನ ಈ ಕವಳ ತಯಾರಿಕಾ ಕ್ರಮವನ್ನೂ, ನಂತರ ಆ ಕವಳ ಅಪ್ಪನನ್ನು ಅನಿರ್ವಚನೀಯ ಬ್ರಹ್ಮಾನಂದದಲ್ಲಿ ಐದಾರು ನಿಮಿಷಗಳ ಕಾಲ ತೇಲಿಸುತ್ತಿದ್ದ ವಿಸ್ಮಯವನ್ನೂ ಕಣ್ಣು ಮಿಟುಕಿಸದೇ ನೋಡುತ್ತಾ ಪಕ್ಕದಲ್ಲಿ ಕೂತಿರುತ್ತಿದ್ದ ನನಗೂ ಅಪ್ಪ ಒಮ್ಮೊಮ್ಮೆ ಪುಟ್ಟ ಸಿಹಿಗವಳ ಮಾಡಿಕೊಡುತ್ತಿದ್ದ. 'ಅವಂಗೆಂತಕೆ ಕವಳ ಮಾಡ್ಕೊಡ್ತಿ? ಕವಳ ಹಾಕಿರೆ ನಾಲ್ಗೆ ದಪ್ಪ ಆಗ್ತು. ಕೊನಿಗೆ ಶಾಲೆಲಿ ಮಗ್ಗಿ ಹೇಳಕ್ಕರೆ ತೊದಲೋ ಹಂಗೆ ಆಗ್ತು ಅಷ್ಟೆ' ಎಂಬ ಅಮ್ಮನ ಅಸಹನೆಯ ಕಿಸಿಮಾತನ್ನು ಅಪ್ಪ ಕವಳ ತುಂಬಿದ ಮುಚ್ಚಿದ ಬಾಯಿಂದಲೇ, ಅದರಿಂದಲೇ ಮೂಡಿಸುತ್ತಿದ್ದ ಮುಗುಳ್ನಗೆ ಬೆರೆತ ಅನೇಕ ಭಾವಸಂಜ್ಞೆಗಳಿಂದಲೇ ಸಂಭಾಳಿಸುತ್ತಿದ್ದ. ಅಪ್ಪ ಮಾಡಿಕೊಟ್ಟ ಸಿಹಿಗವಳ ಹದವಾಗಿರುತ್ತಿತ್ತು, ನನ್ನ ಮೈಯನ್ನು ಬಿಸಿ ಬಿಸಿ ಮಾಡುತ್ತಿತ್ತು.

ಅಪ್ಪ ಸದಾ ನನ್ನನ್ನು ಬೆಚ್ಚಗಿಟ್ಟಿರಲು ಪ್ರಯತ್ನಿಸುತ್ತಿದ್ದ. ಅಥವಾ, ಅಪ್ಪನೊಂದಿಗೆ ನಾನಿರುತ್ತಿದ್ದ ಸಂದರ್ಭವೆಲ್ಲ ಬೆಚ್ಚನೆಯ ಹವೆಯೇ ಸುತ್ತ ಇರುತ್ತಿತ್ತು. ಅಪ್ಪ ನನ್ನ ಚಳಿಗೊಂದು ಕೌದಿಯಂತಿದ್ದ.

ಮಲೆನಾಡಿನ - ಹೊಳೆಯಾಚೆಗಿನ ಊರು ನಮ್ಮದು. ದಟ್ಟ ಕಾಡು - ಬೆಟ್ಟಗಳ ನಡುವಿನ, ಎಂಟೇ ಎಂಟು ಮನೆಗಳ ಪುಟ್ಟ ಊರು. ಒಂದು ಮನೆಗೂ ಮತ್ತೊಂದು ಮನೆಗೂ ಕೂಗಳತೆಯ ಅಂತರ. ಸದಾ ಮಳೆ, ಇಲ್ಲವೇ ಇಬ್ಬನಿ, ಅಪರೂಪಕೊಮ್ಮೆ ಉರಿಬಿಸಿಲು. ದೊಡ್ಡ ಭವಂತಿ ಮನೆಯ ಆಚೆ ಕಡೆ ಕೊಟ್ಟಿಗೆ, ಅದರ ಪಕ್ಕದಲ್ಲೇ ಬಚ್ಚಲುಮನೆ, ನಡುವೆ ಹಾವಸೆಗಟ್ಟಿದ - ಜಾರುವ ಅಂಗಳ. ಅಪ್ಪ-ನಾನು ಕವಳದ ತಬಕು, ಚಿಮಣಿ ಬುರುಡೆಯೊಂದಿಗೆ ಬೆಳಗ್ಗೆ ಎದ್ದಕೂಡಲೇ ಬಚ್ಚಲು ಒಲೆಗೆ ಬೆಂಕಿ ಒಟ್ಟಲು ಹೋಗುತ್ತಿದ್ದೆವು. ಒಟ್ಟು ಕುಟುಂಬವೆಂದಮೇಲೆ ಸ್ನಾನಕ್ಕೆ ಎಷ್ಟು ಬಿಸಿ ನೀರಿದ್ದರೂ ಬೇಕು. ಹಂಡೆಯ ನೀರನ್ನು ಸದಾ ಬಿಸಿಯಾಗಿಡುವ ಕೆಲಸ ಸಾಮಾನ್ಯವಾಗಿ ಅಪ್ಪನದ್ದೇ. ಜಂಬೆಮರದ ಚಕ್ಕೆಯನ್ನು ಒಲೆಯೊಳಗೆ ಕೂಡಿ, ಚಿಮಣಿ ಬುರುಡೆಯಿಂದ ಹಾಳೆಭಾಗ ಅಥವಾ ತೆಂಗಿನ ಗರಿಯ ತುದಿಗೆ ಬೆಂಕಿ ಹತ್ತಿಸಿಕೊಂಡು ಒಲೆಯೊಳಗೆ ಕೂಡುತ್ತಿದ್ದೆವು. ಹಂಡೆಯ ಅಂಡಿನಿಂದ ವಿಸ್ತರಿಸುತ್ತಿದ್ದ ಶಾಖಕ್ಕೆ ಅದರೊಡಲ ನೀರೆಲ್ಲ ಬಿಸಿ ಬಿಸಿ ಬಿಸಿಯಾಗಿ ಕಾಲು ಗಂಟೆಯೊಳಗೆ ಕೊತ ಕೊತ! ಬೆಂಕಿ ಒಟ್ಟಲು ಕೂತ ನನ್ನ ಚಳಿ ಹಾರಿಹೋಗಿ, ಅಡುಗೆಮನೆಗೆ ಓಡಿಬಂದು ತಿಂಡಿ ತಿಂದು ಸ್ನಾನ ಮಾಡಿ ಶಾಲೆಗೆ ಹೊರಡಲು ತಯಾರಾಗುತ್ತಿದ್ದೆ.

ಅಣ್ಣ ಮಹೇಶನನ್ನು ದೊಡ್ಡಪ್ಪ ಸೈಕಲ್ಲಿನಲ್ಲಿ ಕೂರಿಸಿಕೊಂಡು ಬಂದು ಶಾಲೆಗೆ ಬಿಟ್ಟು ಹೋಗುತ್ತಿದ್ದ. ನಾನು ಮಾತ್ರ ರೈತರ ಕೇರಿಯ ಹುಡುಗರೊಂದಿಗೆ ನಡೆದೇ ಹೋಗುತ್ತಿದ್ದೆ. ಮಹೇಶನಿಗೆ ಪ್ರತಿವರ್ಷವೂ ಹೊಸ ಯುನಿಫಾರಂ ಹೊಲಿಸುತ್ತಿದ್ದ ದೊಡ್ಡಪ್ಪ. ನನಗೆ ಎರಡು ವರ್ಷಕ್ಕೊಮ್ಮೆ. 'ನಿನ್ ಯುನಿಫಾರ್ಂ ಹೊಸದರಂಗೆ ಚನಾಗೇ ಇದ್ದಲಾ.. ನಮ್ಮನೆ ಮಾಣಿಗೆ ಒಂದು ಬಟ್ಟೆಯೂ ತಡಿಯದಿಲ್ಲೆ.. ಹರಕೈಂದ ನೋಡು' ಎನ್ನುತ್ತ ನನ್ನ ಬಳಿ ಮಹೇಶನ ಬಗ್ಗೆ ಸುಳ್ಳೇ ಸಿಟ್ಟು ವ್ಯಕ್ತಪಡಿಸುತ್ತಿದ್ದ. ಮಹೇಶನ ಈ ವರ್ಷದ ಪಠ್ಯ ಪುಸ್ತಕಗಳೇ ನನಗೆ ಮುಂದಿನ ವರ್ಷಕ್ಕೆ. ಪೇಟೆಯಿಂದ ತಂದ ಬಿಸ್ಕೇಟ್ ಪ್ಯಾಕನ್ನು ಮಹೇಶ ಜಗಲಿ ಬಾಗಿಲಿನಲ್ಲೇ ಕಸಿದುಕೊಂಡು ನನಗೆ ಎರಡೇ ಎರಡು ಕೊಟ್ಟು ಉಳಿದಿದ್ದನ್ನು ಅವನೇ ಗುಳುಂ ಮಾಡುತ್ತಿದ್ದ. ಹಾಗಂತ ನನಗೇನು ಮಹೇಶನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ದಿನಾ ಸಂಜೆ ಒಟ್ಟಿಗೇ ಆಡಿಕೊಳ್ಳುತ್ತಿದ್ದೆವು. ಆದರೆ ಎಲ್ಲಾದರೊಮ್ಮೆ ದೊಡ್ಡಪ್ಪ-ದೊಡ್ಡಮ್ಮ ಹೀಗೆ ನನಗೂ-ಅವನಿಗೂ ಮಾಡುತ್ತಿದ್ದ ಆರೈಕೆಯಲ್ಲಿನ ವ್ಯತ್ಯಾಸ ನನ್ನ ಅರಿವಿಗೆ ಬೇಡವೆಂದರೂ ಬರುತ್ತಿತ್ತು.

ಅಮ್ಮ ಪ್ರತಿ ರಾತ್ರಿ ಕೋಣೆಯಲ್ಲಿ ಅಪ್ಪನೊಂದಿಗೆ ಗುಸುಗುಸು ಮಾಡುತ್ತಿದ್ದಳು. 'ಅಕ್ಕಯ್ಯ ಹಂಗೆ ಹಿಂಗೆ. ನಿಮಗೆ ಏನೂ ಗೊತ್ತಾಗ್ತಲ್ಲೆ, ಅಣ್ಣ ಅಂದ್ರೆ ದೇವ್ರು, ಅವ್ರು ಒಳಗಿಂದೊಳಗೇ ದುಡ್ಡು ಮಾಡಿಟ್ಕಳ್ತಿದ್ದ, ಅತ್ತೆಮ್ಮನೂ ಅವ್ರಿಗೇ ಸಪೋರ್ಟು, ಒಂದು ದಿನ ಹಿಸೆ ಮಾಡಿ ನಮ್ಮುನ್ನ ಬರಿಗೈಯಲ್ಲಿ ಹೊರಡುಸ್ತ ಅಷ್ಟೆ' ಇತ್ಯಾದಿ. ನನಗೆ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಆದರೆ ಎಲ್ಲರ ಕಿವಿ ತಪ್ಪಿಸಿ ಅಪ್ಪನ ಬಳಿ ಅಮ್ಮ ಆಡುತ್ತಿದ್ದ ಈ ಗುಸುಗುಸು-ಪಿಸಪಿಸಗಳೇ ನನಗೆ ದೊಡ್ಡಪ್ಪ-ದೊಡ್ಡಮ್ಮ ನಮಗೇನೋ ಮೋಸ ಮಾಡುತ್ತಿದ್ದಾರೆ ಎಂಬಂತಹ ಸೂಚನೆ ಕೊಟ್ಟು, ಅವರೆಡೆಗಿನ ನನ್ನ ನೋಟಕ್ಕೆ ಗುಮಾನಿಯ ಕನ್ನಡಕ ತೊಡಿಸುತ್ತಿತ್ತು. ಅಪ್ಪ ಮಾತ್ರ ಸದಾ ಮೌನಮೂರ್ತಿ. ಅಮ್ಮನ ಈ ರಾತ್ರಿಯ ಗುಸುಗುಸುಗಳಿಗೆ 'ಥೋ ಸಾಕು ಸುಮ್ನಿರೇ. ನಂಗೆಲ್ಲ ಗೊತ್ತಿದ್ದು' ಎಂದು ಸಿಡುಕಿದಂತೆ ಉತ್ತರಿಸಿ ಅತ್ತ ತಿರುಗಿ ಮಲಗುತ್ತಿದ್ದ. ಅಮ್ಮ ಇತ್ತ ತಿರುಗಿ ಮಲಗುತ್ತಿದ್ದಳು. ನಾನು ಕಣ್ಮುಚ್ಚಿ ನಿದ್ರೆ ಹೋಗುತ್ತಿದ್ದೆ.

ಅಪ್ಪ, ಈ ರಾತ್ರಿಯ ಗುಸುಗುಸುಗಳಿಂದ ತಪ್ಪಿಸಿಕೊಂಡಿರಲೇನೋ ಎಂಬಂತೆ, ಅವಕಾಶ ಸಿಕ್ಕಿದಾಗಲೆಲ್ಲ, ಯಕ್ಷಗಾನ - ತಾಳಮದ್ದಲೆ ಎಂದು ಹೋಗಿಬಿಡುತ್ತಿದ್ದ. ನಮ್ಮ ಸೀಮೆಯದೇ ಆದ 'ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಲಿ'ಯಲ್ಲಿ ಅಪ್ಪನೊಬ್ಬ ಮುಖ್ಯ ಭಾಗವತ. ಮರುದಿನ ರಜಾದಿನವಾಗಿದ್ದರೆ ನಾನೂ ಅಪ್ಪನೊಟ್ಟಿಗೆ ಹೋಗುತ್ತಿದ್ದೆ. ತುಮರಿ, ಬ್ಯಾಕೋಡು, ಸುಳ್ಳಳ್ಳಿ, ನಿಟ್ಟೂರು, ಸಂಪೆಕಟ್ಟೆ ಹೀಗೆ ತಿಂಗಳಿಕೆ ನಾಲ್ಕು ಬಯಲಾಟವೋ ತಾಳಮದ್ದಲೆಯೋ ಇದ್ದೇ ಇರುತ್ತಿತ್ತು. ಅಪ್ಪ ತಾಳ ಹಿಡಿದು ಮೈಕಿನ ಮುಂದೆ ಕೂತರೆ ಹಾರ್ಮೋನಿಯಂ ಎದುರು ನಾನು. ಕೈ ಸೋಲುವವರೆಗೆ ಅಥವಾ ನಿದ್ರೆ ಬರುವವರೆಗೆ ಹಾರ್ಮೋನಿಯಂನ ಬಾಟಿ ಎಳೆಯುವುದು. ನನಗೇನು ಯಕ್ಷಗಾನದ ಪದ್ಯಗಳಾಗಲೀ, ಪೂರ್ತಿ ಪ್ರಸಂಗವಾಗಲೀ ಅರ್ಥವಾಗುತ್ತಿತ್ತೆಂದಲ್ಲ, ಆದರೆ ಎಲ್ಲ ಕತೆಯೂ ಗೊತ್ತಿತ್ತು ಮತ್ತು, ಹಾಗೆ ಅಪ್ಪನ ಪಕ್ಕ ಸ್ವೆಟರು - ಜುಬ್ಬ ಹಾಕಿ ಕೂತಾಗ ತುಂಬಾ ಬೆಚ್ಚನೆ ಹಿತಾನುಭವವಾಗುತ್ತಿತ್ತು. ನಾಗೇಶಣ್ಣ ಚಂಡೆಯ ಮೇಲೆ ಆ ಎರಡು ಕಡ್ಡಿಗಳಿಂದ ಆಡುತ್ತಿದ್ದ ಆಟ, ಗಣಪಣ್ಣ ಮೃದಂಗದೊಂದಿಗೆ ತನ್ನ ಬೆರಳುಗಳಲ್ಲೇ ಮೂಡಿಸುತ್ತಿದ್ದ ಮಾಟ, ಸುರೇಶ ಶೆಟ್ಟಿ - ಮಂಜಪ್ಪಣ್ಣರ ಚಕ್ರಮಂಡಿ ಕುಣಿತಗಳೆಡೆಗೆ, ಆಟದ ಮಧ್ಯೆ ಮಧ್ಯೆ ನಮಗೆ ತಂದುಕೊಡುತ್ತಿದ್ದ ಬಿಸಿಬಿಸಿ ಚಹಾದಷ್ಟೇ ವಿಚಿತ್ರ ಸೆಳೆತವಿತ್ತು.

ಅಪ್ಪ ಈ ಯಕ್ಷಗಾನ - ತಾಳಮದ್ದಲೆಗಳಲ್ಲಿ ಸಿಗುತ್ತಿದ್ದ ನೂರು - ಇನ್ನೂರು ರೂಪಾಯಿ ಸಂಭಾವನೆಗಳಿಂದಾಗಿಯೋ ಏನೋ ತನ್ನ ಪಾಡಿಗೆ ತಾನು ನಿರುಮ್ಮಳವಾಗಿದ್ದುಬಿಡುತ್ತಿದ್ದ. ದೊಡ್ಡಪ್ಪ ಒಂದು ಕಡೆಯಿಂದ ಒಪ್ಪವಾಗಿ ನಮ್ಮೆಡೆಗೆ ಹೂಡುತ್ತಿದ್ದ ಸಂಚುಗಳು ಅವನಿಗೆ ತಿಳಿಯುತ್ತಲೇ ಇರಲಿಲ್ಲವೆನಿಸುತ್ತೆ. ಅಮ್ಮನಿಗೆ ತಿಳಿಯುತ್ತಿತ್ತು. ಆದರೆ ನನಗೆ ಮಾತ್ರ ಸದಾ ಅಪ್ಪನ ಮೇಲೆ ಸಿಡುಕುವ ಅವಳ ಬಗ್ಗೆ ಕೋಪವಿತ್ತು. ಅಪ್ಪ ತುಂಬಾ ಪಾಪ ಎನಿಸುತ್ತಿದ್ದ.

ಆ ವರ್ಷ ಜೋರು ಚಳಿಯಿತ್ತು. ಪ್ರತಿವರ್ಷಕ್ಕಿಂತ ಜಾಸ್ತಿಯೇ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಕಾರ್ತೀಕ ಮಾಸ. ಊರಲ್ಲೆಲ್ಲಾ ಅಡಿಕೆ ಸುಗ್ಗಿಯ ಭರಾಟೆ. 'ಮುಂದಿನ ವಾರ ನಮ್ಮನೇಲಿ ಕೊಯ್ಸವು. ಕೊನೆಕಾರಂಗೆ ಹೇಳಿಕ್ ಬೈಂದಿ' ಅಂತ ದೊಡ್ಡಪ್ಪ ಹೇಳುತ್ತಿದ್ದ. ಅವತ್ತು ತುಳಸೀಕಟ್ಟೆ ಕಾರ್ತೀಕವಿತ್ತು. ನಾನು-ಮಹೇಶ-ಅಮ್ಮ-ದೊಡ್ಡಮ್ಮ ಮನೆಮನೆಗೂ ಹೋಗಿ, ತುಳಸೀಕಟ್ಟೆ ಪೂಜೆಯಲ್ಲಿ ಪಾಲ್ಗೊಂಡು, ಮಂಗಳರಾತಿ ಸಮಯದಲ್ಲಿ ಝಾಂಗ್ಟೆ ಬಡಿದು, ಹಣತೆ ದೀಪಗಳ ಬೆಳಕಲ್ಲಿ ಕೋಸಂಬರಿ - ಚೀನಿಕಾಯಿ ಶೀಂಗಳ ಪನಿವಾರ ತಿಂದು, ರಾತ್ರಿ ಒಂಭತ್ತರ ಹೊತ್ತಿಗೆ ಮನೆ ತಲುಪುವಷ್ಟರಲ್ಲಿ ನಮಗೊಂದು ಆಘಾತ ಕಾದಿತ್ತು.

ಅಪ್ಪ ಎದೆನೋವು, ಹೊಟ್ಟೆಲೆಲ್ಲಾ ಸಂಕಟ, ಕರುಳು ಉರೀತಾ ಇದ್ದು ಎಂದೇನೇನೋ ಹೇಳುತ್ತಾ ಕೋಣೆಯಲ್ಲಿ ಮಲಗಿಕೊಂಡಿದ್ದ. ಅಮ್ಮ ಆತಂಕಗೊಂಡು ದೊಡ್ಡಪ್ಪನಿಗೆ ಹೇಳಿ, ಮನೆಯವರೆಲ್ಲಾ ಕೋಣೆಯಲ್ಲಿ ಸೇರಿದ್ದಾಯ್ತು. 'ಗ್ಯಾಸು ಆಗಿಕ್ಕು, ಸುಮ್ನೆ ಹೊಟ್ಟೆ ಮುರ್ವು ಕಾಣ್ತು, ಅದಾಗಿಕ್ಕು ಇದಾಗಿಕ್ಕು' ಅಂತೆಲ್ಲಾ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಏನೇನೋ ಕಷಾಯ ಅದೂ ಇದೂ ಕಾಸಿ ಬೀಸಿ ಅಪ್ಪನಿಗೆ ಕುಡಿಸಿದರು. ಕೊಲ್ಲೂರು ಮೂಕಾಂಬಿಕೆಗೆ ಕಾಯಿ ತೆಗೆದಿಟ್ಟದ್ದಾಯ್ತು. ಆದರೆ ರಾತ್ರಿ ಹನ್ನೊಂದರ ಹೊತ್ತಿಗೆ ಅಪ್ಪನ ನೋವು-ನರಳಾಟಗಳು ಜಾಸ್ತಿಯಾದವು. ದಡಬಡಾಯಿಸಿ, ಹೊಸಕೊಪ್ಪದಿಂದ ಸುಬ್ಬಣ್ಣನ ಜೀಪು ತರಿಸಿ, ಬ್ಯಾಕೋಡಿನ ಸರ್ಕಾರಿ ಆಸ್ಪತ್ರೆ ಕಾಂಪೌಂಡರಿನ ಬಳಿ ಅಪ್ಪನನ್ನು ಕರೆದೊಯ್ದದ್ದಾಯ್ತು. ದೊಡ್ಡಪ್ಪ, ಪಕ್ಕದಮನೆ ನಾಗೇಶಣ್ಣ, ಅಮ್ಮ, ಅಮ್ಮನನ್ನು ಬಿಟ್ಟಿರದ ನಾನೂ ಜೊತೆಗೆ. ಕಾಂಪೌಂಡರು ಅಲ್ಸರು, ಅಪೆಂಡಿಕ್ಸು ಎಂದೇನೇನೋ ಅಂದರು. ಇಲ್ಲಿ ಆಗುವುದಿಲ್ಲ, ಸಾಗರಕ್ಕೇ ಕರೆದೊಯ್ಯಬೇಕು ಎಂದರು. ಆಪರೇಶನ್ ಆಗಬೇಕು ಎಂದರು. ಸರಿ, ಬೆಳಗಿನ ಮೊದಲ ಲಾಂಚಿಗೇ ಹೋಗುವುದು ಎಂದಾಯಿತು. ಆದರೆ ರಾತ್ರಿ ಮೂರರ ಹೊತ್ತಿಗೆ, ಏನಾಯಿತು ಎಂತಾಯಿತು ಎಂಬುದು ಯಾರಿಗೂ ಸರಿಯಾಗಿ ಅರ್ಥವಾಗುವ ಮೊದಲೇ ಅಪ್ಪ ನರಳಾಡುವುದನ್ನೂ ಹೊರಳಾಡುವುದನ್ನೂ ನಿಲ್ಲಿಸಿ, ಕೊನೆಗೆ ಉಸಿರಾಡುವುದನ್ನೂ ನಿಲ್ಲಿಸಿಬಿಟ್ಟ. ಅಪ್ಪನ ಬಿಸಿ ದೇಹ ತಣ್ಣಗಾಗುತ್ತಾ ಆಗುತ್ತಾ, ಅಳು, ದಿಗ್ಭ್ರಮೆ, ಹೇಳಲಾರದ ನೋವು, ಮುಂದೇನೆಂದೇ ತಿಳಿಯದ ಮುಗ್ಧ-ಮೂಢತೆಯ ಸೂತಕ ನಮ್ಮನ್ನಾವರಿಸಿ, ಘೋರ ಚಳಿಯಂತೆ ಮೈ ಮರಗಟ್ಟಿಸಿಬಿಟ್ಟಿತು. ಅಪ್ಪನ ನಿಶ್ಚೇಷ್ಟಿತ ತಣ್ಣನೆ ದೇಹವನ್ನು ಜೀಪಿನ ಸದ್ದು ಬೆರೆತ ಮೌನದಲ್ಲಿ ಮನೆಗೆ ತಂದಾಗ, ತುಳಸೀಕಟ್ಟೆಯ ಸುತ್ತ ಹಚ್ಚಿಟ್ಟಿದ್ದ ದೀಪಗಳು ಆಗ ತಾನೇ ಆರಿದ್ದವು.

ನಂತರ ದೊಡ್ಡಪ್ಪನ ಯಜಮಾನಿಕೆ ಮತ್ತೂ ಜೋರಾಗಿದ್ದು, ವಿಧವೆ ಅಮ್ಮ ಬಾಯಿ ಬಿಡಲೂ ಆಗದಂತೆ ಕಟ್ಟಿ ಹಾಕಲ್ಪಟ್ಟಿದ್ದು, ಅದೇ ಕಲಕಿದ ವಾತಾವರಣದಲ್ಲೇ ನಾನು ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದು, ಇನ್ನು ಅಲ್ಲಿರಲಾಗದೇ ಈ ಬೆಂಗಳೂರಿಗೆ -ಚಿಕ್ಕ ಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲಿಕ್ಕೆ ಬಂದದ್ದು ...ಏನೆಲ್ಲ ಆಗಿ ಹೋಯಿತು! ಅಮ್ಮ ಮೊನ್ನೆ ಫೋನ್ ಮಾಡಿದ್ದಳು. 'ನಿನಗೆ ಮುಂದಿನ ತಿಂಗಳಿಗೆ ಹದಿನೆಂಟು ವರ್ಷ ತುಂಬುತ್ತದೆ. ಊರಿಗೆ ಬಾ. ದೊಡ್ಡಪ್ಪನ ಬಳಿ ಮಾತಾಡು. ಒಪ್ಪಲಿಲ್ಲ ಎಂದರೆ ಅವನ ಮೇಲೆ ದಾವೆ ಹೂಡೋಣ. ನಿನ್ನ ದೊಡ್ಡ ಮಾವ ಲಾಯರ್ ಹತ್ರ ಎಲ್ಲಾ ಮಾತಾಡಿದಾನಂತೆ. ಲಾಯರು ಕೇಸು ಗೆದ್ದುಕೋಡೋಣ ಎಂದಿದಾರಂತೆ. ಅಲ್ಲಿ ಇದ್ದು ನೀನು ಸಾಧಿಸೋದು ಅಷ್ಟರಲ್ಲೇ ಇದೆ. ನಮಗೆ ಸೇರಬೇಕಾದ ಆಸ್ತೀನ ನಾವು ಪಡೆದುಕೊಂಡು, ಒಂದು ಮನೆ-ಗಿನೆ ಕಟ್ಟಿಕೊಂಡು ಆರಾಮಾಗಿರೋಣ. ನಮಗೆ ಯಾರ ಹಂಗೂ ಬ್ಯಾಡ...' ಅಮ್ಮ ನಾನಾಗೇ ಫೋನಿಡುವವರೆಗೂ ಮಾತಾಡುತ್ತಲೇ ಇದ್ದಳು.

ಇಲ್ಲಿ ಇವತ್ತು ಮತ್ತೆ ತುಳಸೀಕಟ್ಟೆ ಕಾರ್ತೀಕ. ಅಂದರೆ ಅಪ್ಪ ಸತ್ತು ಇವತ್ತಿಗೆ ಹತ್ತು ವರ್ಷವಾಯ್ತು. ಹೊರಗಿನಿಂದ ಒಂದೇ ಸಮನೆ ಪಟಾಕಿಗಳ ಶಬ್ದ ಕೇಳಿಬರುತ್ತಿದೆ. ಪ್ರತಿ ಮನೆಯ ಎದುರೂ ಬಿರುಸಿನಕುಡಿಕೆಯ ಹೂಕುಂಡಗಳು. ತುಳಸೀಪಾಟಿನ ಸುತ್ತ ದೀಪಗಳು. ಒಂದು ನೆಲ್ಲಿರೆಂಬೆ. ಸುರುಸುರುಬತ್ತಿ ಹಿಡಿದ ಪುಟ್ಟ ಮಕ್ಕಳು... ಸಂಭ್ರಮವೋ ಸಂಭ್ರಮ.

ನಾನು ಯೋಚಿಸುತ್ತಿದ್ದೇನೆ: ಬೆಂಗಳೂರಿಗೆ ಬಂದು ಎರಡು ವರ್ಷವಾಯಿತು. ಇಷ್ಟಿಷ್ಟೇ ದುಡ್ದು ಮಾಡಿಕೊಳ್ಳುತ್ತಾ, ಇಲ್ಲಿ ನನ್ನದೇ ಆದ ಬದುಕೊಂದನ್ನು ರೂಪಿಸಿಕೊಳ್ಳುವ ಛಲ ಮೈದಾಳುತ್ತಿದೆ. ಬೆಂಗಳೂರು ಬದುಕುವುದನ್ನು ಕಲಿಸಿಬಿಟ್ಟಿದೆ. ಇಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುವಷ್ಟು ದೊಡ್ಡವ ನಾನಾದದ್ದಾದರೂ ಹೇಗೆ ಎಂದು ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಈ ಇಂತಹ ಸಂದರ್ಭದಲ್ಲಿ ಮತ್ತೆ ಊರಿಗೆ ಹೋಗಿ, ದೊಡ್ಡಪ್ಪನೆದುರು ಮಂಡಿಯೂರಿ ಕೂತು ಹಿಸೆ ಕೇಳುವುದು, ಅವನು ಒಪ್ಪದಿದ್ದರೆ ಅವನ ಮೇಲೇ ದಾವೆ ಹೂಡುವುದು ಎಲ್ಲಾ ಬೇಕಾ? ಜೊತೆಗೇ ಆಟವಾಡುತ್ತಿದ್ದ ಮಹೇಶನ ಜೊತೆಗೂ ಹಲ್ಲು ಮಸೆಯುವಂತಹ ದ್ವೇಷ ಕಟ್ಟಿಕೊಳ್ಳುವುದು ಬೇಕಾ? ಬೇಡವೆಂದು ಬಿಟ್ಟುಬಿಟ್ಟರೆ ಅಮ್ಮನ ಈ ಬೇಗುದಿಗೆ ಬಿಡುಗಡೆಯೆಂದು? ನಾನು ದುಡಿದು ದುಡ್ದು ಮಾಡಿ, ನನ್ನ ಕಾಲಮೇಲೆ ನಾನು ನಿಂತು, ಅಮ್ಮನನ್ನೂ ಸಾಕುವ, ಸಂಸಾರ ಸಂಭಾಳಿಸುವ ಹಂತ ತಲುಪಲಿಕ್ಕೆ ಇನ್ನೂ ಎಷ್ಟು ವರ್ಷ ಬೇಕಾಗಬಹುದು? ಇಷ್ಟೆಲ್ಲ ಸ್ವಾಭಿಮಾನ ಮೆರೆದು ಸಾಧಿಸುವುದಾದರೂ ಏನಿದೆ? ನ್ಯಾಯಯುತವಾಗಿ ನನಗೆ ಬರಬೇಕಾದ ಪಾಲನ್ನು ನಾನು ಕೇಳಿ ಪಡೆಯುವುದರಲ್ಲಿ ತಪ್ಪೇನಿದೆ? ಅದಿಲ್ಲದಿದ್ದರೆ ಜನರಿಂದ 'ಮಗನೂ ಅಪ್ಪನಂತೆ ದಡ್ಡ' ಎಂಬ ಹೀಯಾಳಿಕೆಗೆ ಗುರಿಯಾಗಬೇಕಾಗುತ್ತದಲ್ಲವೇ? ಹಾಗಾದರೆ ಈಗ ಊರಿಗೆ ಹೋಗಿ ದೊಡ್ಡಪ್ಪನೆದುರು ಪಟಾಕಿ ಸಿಡಿಸಿಯೇ ಬಿಡಲೇ?

ನಾನು ಸುಮ್ಮನೆ ನಿಂತಿರುವುದನ್ನು ನೋಡಿದ ನಮ್ಮನೆ ಓನರ್ರಿನ ಮೊಮ್ಮಗ ನಿಶಾಂತ್ ಓಡಿ ಬಂದು 'ಅಣ್ಣಾ ನೀನೂ ಪಟಾಕಿ ಹಚ್ಚು ಬಾ' ಎಂದು ಕೈ ಹಿಡಿದು ಎಳೆಯುತ್ತಿದ್ದಾನೆ. 'ನಾನು ಬರಲೊಲ್ಲೆ; ಇವತ್ತು ನನ್ನ ಅಪ್ಪನ ತಿ..' ಎಂದೇನೋ ಹೇಳಹೊರಟವನು ಅಲ್ಲಿಗೇ ತಡೆದು ಸುಮ್ಮನೆ ನಿಶಾಂತ್ ಜೊತೆ ಹೋಗುತ್ತೇನೆ. ಪಟಾಕಿಯ ಬತ್ತಿಯನ್ನು ಚೂರೇ ಸುಲಿದು, ಊದುಬತ್ತಿಯಿಂದ ಕಿಡಿ ತಾಕಿಸುತ್ತೇನೆ. ದೂರ ಬಂದು ನಿಶಾಂತ್ ಜೊತೆ ನಿಲ್ಲುತ್ತೇನೆ. ನಿಶಾಂತ್ ಎರಡೂ ಕೈಗಳಿಂದ ಕಿವಿ ಮುಚ್ಚಿಕೊಂಡು ಇನ್ನೇನು ಸಿಡಿಯಲಿರುವ ಆ ಪಟಾಕಿಯನ್ನೇ, ಅದರ ಬತ್ತಿಗುಂಟ ಸಾಗುತ್ತಿರುವ ಬೆಂಕಿಯ ಕಿಡಿಯನ್ನೇ ನೋಡುತ್ತಿದ್ದಾನೆ... ನನಗೆ ಹತ್ತು ವರ್ಷಗಳ ಹಿಂದೆ ಅಪ್ಪನ ಪಕ್ಕ ಹೀಗೇ ನಿಂತಿರುತ್ತಿದ್ದ ನನ್ನ ಚಿತ್ರದ ಕಲ್ಪನೆ ಕಣ್ಣಮುಂದೆ ಬರುತ್ತದೆ...

[ಈ ಕತೆ 'ಮಯೂರ' ಮಾಸಿಕದ ಮೇ 2008ರ ಸಂಚಿಕೆಯಲ್ಲಿ ಪ್ರಕಟವಾಗಿದೆ.]

32 comments:

ಸಿಂಧು sindhu said...

ಸುಶ್ರುತ

ತುಂಂಂಂಂಂಂಂಬ ಚೆನಾಆಆಆಆಆಆಆಆಆಆಗಿದ್ದು.

ನಿನ್ನ ವಿವರಣೆ - ಅಂಬಡೆ ಎಲೆಯ ಹಿಂಬದಿಯ ಗೀರಿನಷ್ಟೇ, ಅದನ್ನು ಎಳೆದು ತೆಗೆವಾಗ ನವಿರಾಗಿ ಏಳುವ ನಾರಿನಷ್ಟೇ ನಾಜೂಕು.

ಈ ಕತೆಯಲ್ಲಿ ಅಪ್ಪ ಹಾಕಿಕೊಟ್ಟ ಸಿಹಿಕವಳದಷ್ಟೆ ಹಿತವಾದ ಓದು, ಕವಳ ಖಾಲಿಯಾಗಿ ಬಾಯಲಿ ತುಂಬುವ ಒಗರಿನಂತ ಮಾರ್ದವತೆಯ ಕೊನೆ.. ಆಹ್ ಏನು ಹೇಳಲಿ.. ಏನು ಬಿಡಲಿ...

ತುಂಬ ಚೆನಾಆಆಆಆಆಆಆಆಆಆಆಆಆಅಗಿದ್ದು

ಪ್ರೀತಿಯಿಂದ
ಸಿಂಧು

ಮನಸ್ವಿನಿ said...

ಸುಶ್ರುತ,

:(

ಬರಹ ಚೆನ್ನಾಗಿದೆ...ಇನ್ನೇನೂ ಹೇಳಲಾರೆ

Anonymous said...

ಮನಸ್ಸಿಗೆ ತಟ್ಟೊ ಹಾಂಗೆ ಬರದ್ದೆ. ಮೊದಲಿನ ಕೆಲವು ಪ್ಯಾರಾ ಓದ್ತಾ ಎಲ್ಲೊ ನಮ್ಮ ಊರಿನ ಬದಿಗಿನ ವಿಷಯದ ಬಗ್ಗೆ ಇರವು ಅನ್ನಿಸ್ತು. ಕಡೆ ಕಡೆಗೆ ಟ್ರಜಿಡಿ ಓದ್ತಾ ಓದ್ತಾ ಮನಸ್ಸಿಗೆ ಒಂಥರ ಆತು. ಇರ್ಲಿ ನಿನಗೆ ಒಳ್ಳೆದಾಗ್ಲಿ.

-ಹೆಗಡೆ

Sushrutha Dodderi said...

ಸಿಂಧು ಅಕ್ಕ,

ತುಂಂಂಂಂಂಬಾ ಥ್ಯಾಂಕ್ಸ್ ಅಕ್ಕಾ...:-)

ಮನಸ್ವಿನಿ,

:( ?
ಥ್ಯಾಂಕ್ಸ್.

ಹೆಗಡೆ,

ಮೆಚ್ಚುಗೆಗೆ ಧನ್ಯವಾದ.

ಅಂದಹಾಗೇ, ಡಿಯರ್ ರೀಡರ್ಸ್, ಇದು ನೈಜ ಕತೆಯಲ್ಲ. ನನ್ನ ಕತೆಯಂತೂ ಅಲ್ಲ. ಕಲ್ಪನೆ ಅಷ್ಟೆ. ನೀವು ಕನ್‍ಫ್ಯೂಸ್ ಆಗದಿರಲು ಈ ಸೂಚನೆ.

Anonymous said...

ಸುಶ್ರುತ,
ನೀವು ಈ ಬರಹ ನಿಮ್ಮ ಅನುಭವವೆ, ಅಲ್ಲವೆ ಅನ್ನುವುದರ ಬಗ್ಗೆ ಸಮಜಾಯಿಶಿ ನೀಡಬೇಕಾಗೇ ಇಲ್ಲ. ಬರಹ ಲೇಖಕನ ಸ್ವಂತದ ಅನುಭವವೇ ಆಗಿರ್ಬಹುದು, ಇಲ್ಲ ಯಾರನ್ನೊ ಆವಾಹಿಸಿಕೊಂಡು ಬರೆದದ್ದಾಗಿರಬಹುದು.’ಮೌನಗಾಳ’ಕ್ಕೆ ಸಿಕ್ಕಿಕೊಂಡ ಮೇಲೆ ಅದಾವುದೂ ಬೇಕಾಗದು! ಕವಳದ ವರ್ಣನೆ ಓದಿದ ಮೇಲೆ ಹಲ್ಲುಗಳು ವಿಪರೀತ ಗಲಾಟೆ ಮಾಡಿದವು ಮಾರಾಯರೆ. ತಡೆಯಲಾರದೆ ಎದ್ದು ಹೋಗಿ ಎಲೆ ಅಡಿಕೆ ಸಕ್ಕರೆ ಸುಣ್ಣ ಹಾಕಿಕೊಂಡು ಮೆದ್ದೆ. ಪೂರ್ತಿ ಓದಿದ ಮೇಲೆ ಎರ್ಡು ನಿಮಿಷ ಸುಮ್ಮನೆ ಕೂತುಕೊಂಡೆ.

ಟೀನಾ.

Sanath said...

ಸುಶ್,
ಸಕ್ಕತ್ತಾಗಿ ಬರದ್ದೆ.
ಆ ಕವಳಾ ಹಾಕೋದರ ವಿವರಣೆ ಅಂತೂ ಕಣ್ಣಿಗೆ ಕಟ್ಟೋಹಾ೦ಗೆ ಬರದ್ದೆ.

Sushrutha Dodderi said...

ಟೀನಾ,

ನೀವಂದದ್ದು ಸರಿ. ಆದರೆ ಈಗಾಗಲೇ ಮೂರ್‍ನಾಲ್ಕು ಜನ ಪಿಂಗ್ / ಸ್ಕ್ರಾಪ್ ಮಾಡಿ 'ಇದು ನಿಂದೇ ಕತೇನಾ?' ಅಂತೆಲ್ಲಾ ಕೇಳಿದ ಮೇಲೆ ಈ ಸ್ಪಷ್ಟನೆ ಕೊಡಬೇಕು ಅನ್ನಿಸಿತು. ಒಬ್ಬರಂತೂ ಅದೆಷ್ಟು ಮೃದುವಾಗಿ ಕೇಳಿದರೆಂದರೆ, 'ಈ ಕತೆ ನಂದೇನಾಮತ್ತೆ?!' ಅಂತ ನಂಗೇ ಕನ್‍ಫ್ಯೂಸ್ ಆಗಲಿಕ್ಕೆ ಶುರುವಾಯಿತು! ಹೀಗಾಗಿ ಆ ನೋಟ್ ಕೊಟ್ಟೆ.
ಆದರೆ ಬಹುಶಃ ಈ ಕತೆ 'ನೈಜಕತೆ' ಅಲ್ಲ ಅಂತ ನಾನು ಹೇಳಿದ್ದು ತಪ್ಪಾಯ್ತು ಅನ್ಸುತ್ತೆ... ಯಾವ ಕತೆಯೂ ಪೂರ್ತಿ ಸುಳ್ಳಾಗಿರಲಿಕ್ಕೆ ಸಾಧ್ಯವಿಲ್ಲ ಅಲ್ವಾ?
ಥ್ಯಾಂಕ್ಸ್..

ಸನತ್,

ಥ್ಯಾಂಕ್ಯೂ ಬಾಸ್!

ರಾಜೇಶ್ ನಾಯ್ಕ said...

ಸುಶ್ರುತ,

ಅದ್ಭುತ ಬರವಣಿಗೆ. 'ಕವಳ' ವಿವರಣೆಗೆ ಸೋತುಹೋದೆ. ಅಲ್ಲಿಂದ ಮುಂದೆ ಮತ್ತೆ ಕೊನೆವರೆಗೂ ಪ್ರತಿ ವಾಕ್ಯ ಮಾಣಿಕ್ಯ.

ಸುಪ್ತದೀಪ್ತಿ suptadeepti said...

ಸುಶ್, ಗದ್ಯದ ಹಿಡಿತ ನಿನಗೆ ಚೆನ್ನಾಗಿದೆ. ಹಾಗೇ ಓದುಗರ ನಾಡಿಮಿಡಿತದ ಹಿಡಿತವೂ ಇದೆ. ವಿವರಣೆಗಳು ಹದ ಮೀರದೆ ಹಿತ ಕೊಡುತ್ತವೆ. ಕಾರ್ತೀಕದ ಛಳಿಯೊಳಗೆ ಅಪ್ಪನ ತೆಕ್ಕೆಯ ಬೆಚ್ಚನೆಯನ್ನು ಜಗದ ತುಂಬಾ ಹರಡಿದ್ದೀ. ಧನ್ಯವಾದಗಳು.

ಚೆನ್ನಾಗಿಯೇ ಗಾಳ ಹಾಕಿದ್ದೀ. ಬಿದ್ದಿರೋ ಮೀನುಗಳಲ್ಲಿ ಲೆಕ್ಕಕ್ಕೆ ನಾನೂ ಇದ್ದೇನೆ.

Anonymous said...

amEzing....

Malnadhudgi

ರಂಜನಾ ಹೆಗ್ಡೆ said...

ಪುಟ್ಟಣ್ಣ,
ನಿನ್ನ ಕಥೆ ಎಲೆ ಅಡಿಕೆ ಅಷ್ಟೆ ಸೊಗಸಾಗಿ ಇತ್ತು. ಅದರಲ್ಲು ಎಲೆ ಅಡಿಕೆ ಜಗಿದು ಲಾಸ್ಟ್ ನಲ್ಲಿ ಉಳಿಯುವ ಸ್ವಾದದ ಹಾಗಿತ್ತು.
ಹಿರೋ ಅಪ್ಪ ತುಂಬಾ ಇಷ್ಟ ಆಗಿ ಹೋದರು ಒಳ್ಳೆ ಪಾತ್ರನ create ಮಾಡಿದ್ದಿಯಾ.
ಹಿಂಗೆ ಕಥೆ ಬರಿತಾ ಇರು. keep it up.

ಶ್ರೀನಿಧಿ.ಡಿ.ಎಸ್ said...

ದೋಸ್ತಾ,
ಮಸ್ತ್ ಬರದ್ಯೋ ಮಾರಾಯಾ.. ಉಫ್!...

Seema S. Hegde said...

ಸುಶ್ರುತ,
ತುಂಬಾ... ತುಂಬಾ... ಚೆನ್ನಾಗಿದೆ.
ಇದು ಕಾಲ್ಪನಿಕ ಕಥೆಯೋ ಅಥವಾ ನೈಜ ಸನ್ನಿವೇಶವೋ ತಿಳಿಯುತ್ತಿಲ್ಲ. ಇದು ಬರಿಯ ಕಥೆ ಮಾತ್ರವೇ ಆಗಿರಲೆಂದು ನನ್ನ ಹಾರೈಕೆ. ಏಕೆಂದರೆ ಇಂಥ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಯಾರಿಗೂ ಇಂಥ ಪರಿಸ್ಥಿತಿ ಬಾರದೇ ಇರಲಿ ಅಲ್ವಾ?

Archu said...

odi nanna kaNNanchinalli kambani..

Sushrutha Dodderi said...

ರಾಜೇಶ್,

ಕವಳದ ತಬಕು ಎಂಬುದು ನಮ್ಮ ಹಳ್ಳಿ ಹವ್ಯಕ ಮನೆಗಳ ವ್ಯಾಕರಣ.. ಪ್ರತಿ ಮನೆಯಲ್ಲೂ ಒಬ್ಬರಾದರೂ ಕವಳ ಹಾಕುವವರು ಇರುತ್ತಾರೆ; ಇರದಿದ್ದರೂ 'ಬಂದವರಿಗೆ ಬೇಕಾಗತ್ತೆ' ಅಂತ ಒಂದು ತಬಕು ಮಾಡಿ ಇಟ್ಟಿರ್ತಾರೆ.. ಚಂದ ಕವಳ ಹಾಕುವುದೇ ಒಂದು ಕಲೆಯಂತಿರುತ್ತದೆ ನಮ್ಮ ಮನೆಗಳಲ್ಲಿ.. ವೀಳ್ಯದೆಲೆಯ ಹಿಂದಿನ ನಾರನ್ನು ಗೀರಿ ಎತ್ತಿ ತೆಗೆಯುವುದಿದೆಯಲ್ಲ, ಅದಕ್ಕೇ ಒಂದು ಸ್ಪೆಶಲ್ ಸಂಸ್ಕಾರ ಬೇಕಾಗತ್ತೆ; ನಂಗೇ ಇನ್ನೂ ಒಲಿದಿಲ್ಲ ಅದು..!

ಧನ್ಯವಾದ ರಾಜೇಶ್..

suptadeepti,

ಇನ್ನೂ ಸಿಗಬೇಕಾದ ಮೀನು ಸಿಕ್ಕಿಲ್ಲ ಜ್ಯೋತೀಜೀ... ;)

malnadhudgi,

Thanks hudgee...

Sushrutha Dodderi said...

ರಂಜನಾ,

'ಎಲೆ-ಅಡಿಕೆ ಜಗಿದು ಲಾಸ್ಟಲ್ಲಿ ಉಳಿಯುವ ಸ್ವಾದ..' ಹ್ಮ್ಮ್ಮ್ಮ್... ಥ್ಯಾಂಕ್ಸ್ ತಂಗೂ..

ಶ್ರೀನಿಧಿ,

ಥ್ಯಾಂಕ್ಸ್ ಡಿಯರ್..

seema,

ನಿಜ, ಇದು ಕಲ್ಪನಾ ಕತೆಯಷ್ಟೇ ಆಗಿರಲಿ ಎಂಬುದು ನನ್ನ ಹಾರೈಕೆಯೂ ಹೌದು..

ಅರ್ಚನಾ,

:,(

ಸುಧನ್ವಾ ದೇರಾಜೆ. said...

barad barad hakodu andre hingene !
keep it up.

Shrilatha Puthi said...

ತುಂಬಾ ಚೆನ್ನಾಗಿದೆ ಅಂತ ಹೇಳಿದ್ರೆ ಅದು understatement! ತುಂಬಾ ಆಪ್ತವಾಗಿದೆ.

ವಸುಮತಿ ಉಡುಪ, ವೈದೇಹಿ, ವಸುಧೇಂದ್ರ - ನನ್ನ ಮೆಚ್ಚಿನ ಕತೆಗಾರರು; ಅವ್ರ ಹಾಗೇ ಬರ್ದಿದೀರಿ. ಹೋಲಿಕೆ ಖಂಡಿತಾ ಅಲ್ಲ.. ಹೊಗಳಿಕೆ ಅಂದ್ಕೊಳ್ತೀರಿ ಅಂತ ನಾನಂದ್ಕೊಳ್ತೇನೆ!

Anonymous said...

As I mentioned before, Sushrutha can develop as a writer representing havyaka malenadu frame.

regards
D.M.Sagar (Original)
Canada

Jagali bhaagavata said...

ಕ್ರಿಸ್ಮಸ್ ಒಳಗೆ ಇನ್ನೊಂದ್ ಪೋಸ್ಟ್ ಬರಲ್ವಾ? :-(

Sushrutha Dodderi said...

ಸುಧನ್ವಾ,

andre bardiddu jaasthi aythu anthana boss?? matthe 'keep it up' antha bere helideera?! :O

shrilatha,

ವಸುಮತಿ ಉಡುಪ, ವೈದೇಹಿ, ವಸುಧೇಂದ್ರ -ಇವರುಗಳಿಗೆ ನೀವು ನನ್ನನ್ನ ಹೋಲಿಸ್ತೀರ ಅಂದ್ರೆ ಅದು ತುಂಬಾ ದೊಡ್ಡ ಹೊಗಳಿಕೆಯಾಯ್ತು. ಅವರೆಲ್ಲಾ ನನ್ನ ಇಷ್ಟದ ಕತೆಗಾರರೂ ಹೌದು. ನಾನು ತುಂಬಾ ಸಣ್ಣವ್ನು ಅವರುಗಳ ಮುಂದೆ.. ಮುಜುಗರವಾಗುತ್ತೆ.. :-|
ತುಂಬಾ ಥ್ಯಾಂಕ್ಸ್..

Original D.M. Sagar,

ಇದು ಇನ್ನೂ ಮುಜುಗರ ತರಿಸೋ ಮಾತಾಯ್ತು.. :-|
ಥ್ಯಾಂಕ್ಸ್ .. ..

ಭಾಗ್ವತಣ್ಣ,

ಶ್..! ಅಷ್ಟ್ ಮುಂಚೇನಾ? ನಾನೇನೋ ಹೊಸ ವರ್ಷದೊಳಗೆ ಕೊಡೋಣ ಅಂತಿದ್ದೆ.. ;P

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ...
ಇದೆಂತ ಎಲ್ಲ ಜನ ಇಲ್ಲೇ ಸೇರಿದ್ದ ಹೇಳಿ ಓಡೋಡಿಬಂದ್ರೆ ಇಲ್ಲಿ ನನ್ನ ತಮ್ಮ ಪಟಾಕಿ ಸಿಡಸ್ತಾ ಇದ್ದ! ಮತ್ತೂ ಮುಂದೆ ಹೋಗಿ ನೋಡಿದ್ರೆ ಪಟಾಕಿ ಚಂದ ಬಣ್ಣಬಣ್ಣವಾಗಿ ಸಿಡೀತಾ ಇದ್ದು.

ವ್ಹಾವ್...ಚಂದ ಲೇಖನ, ಓದಕ್ಕರೆ ಗಂಟಲೆಲ್ಲಾ ಕಟ್ಟಿಹೋತು.

Suma Udupa said...

Sushrutha,
Chennagi barediddiri. Idu nimma kate alla anta oodi samadhana aytu.
-Suma.

sritri said...

ಸುಶೃತ ಕಥೆ ಅಂದುಕೊಂಡು ಬೇಸ್ತು ಬಿದ್ದೆ ಕೊನೆಗೆ, ಸಧ್ಯ! ಕಥೆ ತಾನೇ ಅಂತ ನಿಟ್ಟಿಸಿರು ಕೂಡ!!!

Sheela Nayak said...

ಪ್ರಿಯ ಸುಶ್ರುತ,
ನನ್ನ ಚಿತ್ರಗಳನ್ನು ಮೆಚ್ಚಿದಕ್ಕೆ ಧನ್ಯವಾದಗಳು. ನನ್ನ ಕಲ್ಪನೆಯಲ್ಲಿ ನೀನು ( ಅಕ್ಕ ಅಂತ ಸಂಭೋದಿಸಿದ ಮೇಲೆ ಏಕವಚನ ಉಪಯೋಗಿಸಬಹುದಲ್ಲವಾ?) ಬರೆದ ಬರಹಗಳೇ ಮೀನುಗಳು ಎಂದು ಅದ್ಕೊಂಡಿದ್ದೆ. ಸರಿ ತಾನೆ! ನಾವೆಲ್ಲ ಓದುಗರು ನಿನ್ನ ಗಾಳಕ್ಕೆ ಬಿದ್ದುದನ್ನು ನೋಡಿ ಕೊಂಡ್ಕೊಳ್ಳುವರು. (ಓದುವವರು...ಗಣಕದಲಿ ಅಷ್ಟೇ ತಾನೆ ಸಾಧ್ಯ) ಶ್ರೀಲತ ಹೇಳಿದ ಹಾಗೆ ನಿಮ್ಮ ಬರಹ ಯಾವ ಪ್ರಮುಖ ಸಾಹಿತಿಗಳಿಗಿಂತ ಕಮ್ಮಿಯಿಲ್ಲ. ನಿನ್ನ ಬರಹಗಳು ಯಾವುದಾದರೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೆ ದಯವಿಟ್ಟು ತಿಳಿಸು.
ನಿನ್ನ ಬರವಣಿಗೆ ನಿಜಜೀವನಕ್ಕೆ ತುಂಬಾ ಹತ್ತಿರವಾಗಿದೆ. ದೊಡ್ಡಪ್ಪನ ದಬ್ಬಾಳಿಕೆ, ಅಪ್ಪನ ಸಹಿಷ್ಣುತೆ, ಅಮ್ಮನಿಗೆ ಮಗನ ಭವಿಷ್ಯದಚಿಂತೆ.......ಅಪ್ಪ ಮಗನ ಆತ್ಮೀಯತೆ.... ತುಂಬಾ ಮನ ತಟ್ಟಿತು. ಕಣ್ಣಾಲಿಗಳು ತುಂಬಿ ಬಂದವು.
ಅಂದ ಹಾಗೆ ನೀನು ನನ್ನ ಬ್ಲಾಗಿಗೆ ಬಂದೆಂತ ಬರೆದುದಲ್ಲ.... ಬಹುಶಃ ಈ ಮೂರು ತಿಂಗಳಿಂದ ನಿನ್ನ ಬರಹಗಳನ್ನು ಓದುತ್ತಿದ್ದೆ. ಪ್ರತಿಕ್ರಿಯಿಸರಿರಲಿಲ್ಲ ಅಷ್ಟೇ!
ತಮ್ಮನ ಸಾಹಿತ್ಯದ ಮೋಡಿಗೆ ಸಿಲುಕಿದ,
ಶೀಲಕ್ಕ

jomon varghese said...

ಕಥೆ ಓದಿ ಕಣ್ಣಂಚಲ್ಲಿ ನೀರು ಬಂತು. ಅಪ್ಪನ ಪ್ರೀತಿ ಸದಾ ಬೆಚ್ಚಗಿರಲಿ ಎನ್ನುತ್ತದೆ ಮನಸ್ಸು. ಯಾಕೋ ಅ ಭಾವನೆ ನೀಡುವ ಅನುಭೂತಿಯೇ ವಿಶಿಷ್ಠವಾದದ್ದು, ಇಂದು ನನ್ನನ್ನು ಸಹ ಮುನ್ನಡೆಸುತ್ತಿರುವುದು ನನ್ನಪ್ಪನ ಪ್ರೀತಿಯೇ....

Anonymous said...

ನಾಚ್ಕೆ ಆಗಲ್ವ ಇನ್ನೂ update ಮಾಡಿಲ್ಲ

ಮಲ್ನಡ್ ಹುಡ್ಗಿ

ಕಿರಣ್ said...

ಸುಶ್ರುತ,
ಬರಹ ತುಂಬಾ ಚೆನ್ನಾಗಿದೆ, ಅಪ್ಪ, ಅಮ್ಮ, ದೊಡ್ದಪ್ಪ ಎಲ್ಲ ಪಾತ್ರಗಳನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀಯ. ಮಲೆನಾಡಿನ ವಿವರಣೆಯು ಬಹಳ ಸುಂದರವಾಗಿದೆ.
ಹೀಗೆ ಉತ್ತಮ ಬರಹಗಳು ನಿನ್ನ ಲೇಖನಿಯಿಂದ(ಕೀಲಿ ಮಣೆಯಿಂದ) ಹೊರ ಬೀಳುತ್ತಿರಲಿ.

ಕಿರಣ್

ರಂಜನಾ ಹೆಗ್ಡೆ said...

ನಿಮ್ಮದೊಂದು ಬ್ಲಾಗ್ ಇದೆ ಅಂತಾ ನೆನಪು ಇದೆಯಾ ಸರ್.
ಇದ್ರೆ ಅಪ್ ಡೆಟ್ ಮಾಡಿ.

Sushrutha Dodderi said...

ಶಾಂತಲಕ್ಕ,

ನೀ ಓಡೋಡಿ ಬಂದಿದ್ದು ಖುಷೀ ವಿಷ್ಯ. ಥ್ಯಾಂಕ್ಸಕಾ..

suma,

Thanx.. h

sritri,

ತುಂಬಾ ಧನ್ಯವಾದ ತ್ರಿವೇಣಿ ಮೇಡಂ!

ಶೀಲಾ ಎಂಬ ಮತ್ತೊಂದು ಅಕ್ಕ,

'ತಮ್ಮ' ಅನ್ಲಿಕ್ಕೆ ನೋ ಅಬ್ಜೆಕ್ಷನ್! ನಿಮ್ಮ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಪತ್ರಿಕೆಗಳಲ್ಲಿ ನನ್ನ ಬರಹಾ... ಹ್ಮ್... ತೀರಾ ಕಳುಹಿಸಬಹುದು ಅನ್ನಿಸಿದರೆ ಕಳುಹಿಸುತ್ತೇನೆ.. ಎಲ್ಲೋ ಅಲ್ಲಲ್ಲಿ ಪ್ರಕಟವಾಗಿವೆ..

ಥಾಂಕ್ಸ್ ಶೀಲಕ್ಕ,

-ತಮ್ಮ

Sushrutha Dodderi said...

jomon,

ಥ್ಯಾಂಕ್ಸ್ ಜೋ.. "..ಅಪ್ಪನ ಪ್ರೀತಿಯೇ ನಮ್ಮನ್ನ ಮುನ್ನಡೆಸುವುದು" u r 100% right.
ನಿಮ್ ಬ್ಲಾಗ್ ಸೂಪರ್.

malnad hudgee,

ಏಯ್ ಏನೇ ಹೀಗ್ ಕೆಣಕ್ತಿದೀಯಾ..? ಬ್ಯಾಡಾ.. ಹೇಳಿದೀನಿ..

ಕಿರಣ್,

ತುಂಬಾ ಥ್ಯಾಂಕ್ಸ್. ಖಂಡಿತಾ ಬರೀತಿರ್ತೀನಿ.

ರಂಜ್,

ಏನ್ ಕೂಸೇ, ನೀನೂ ಮಲ್ನಾಡ್ ಹುಡ್ಗಿಗೆ ಸಪೋರ್ಟಾ? ಇರ್ಲಿ ಇರ್ಲಿ.. ತಗಳ್ತಿ ಕ್ಲಾಸು.. :x

Sushrutha Dodderi said...

ಇಷ್ಟಕ್ಕೂ, ಹೊಸ ಬರಹಕ್ಕಾಗಿ ಕಾಯುತ್ತಿದ್ದವರೆಲ್ಲರೂ ಕ್ಷಮಿಸಿ. ಬೆಂಗಳೂರಿನ ಚಳಿ-ಮಳೆ, ಆಫೀಸಿನಲ್ಲಿ ವರ್ಕ್ ಲೋಡು, ಅದೂ ಇದು ಪರ್ಸನಲ್ ಕೆಲಸಗಳ ಮಧ್ಯೆ ತುಂಬಾ ಬ್ಯುಸಿಯಾಗಿಬಿಟ್ಟಿದ್ದೆನಾದ್ದರಿಂದ ತಿಂಗಳಿಂದ ಬ್ಲಾಗ್ ಅಪ್‍ಡೇಟ್ ಮಾಡಲಿಕ್ಕೆ ಆಗಿರಲಿಲ್ಲ. ಇನ್ನು ಹೀಗಾಗಲ್ಲ ಅಂತ ರವಿ ಬೆಳಗೆರೆ ಸ್ಟೈಲಲ್ಲಿ ಭರವಸೆ ಕೊಡ್ತಿದೀನಿ. :D :D