Monday, February 04, 2008

ನೈಜ ಮತ್ತು ಕಾಲ್ಪನಿಕ ಕತೆಗಳು

ನನ್ನ 'ಬಿರ್‌ಗೇಡ್' ಕತೆ ಮುಂದುವರೆಯುವುದನ್ನು ನೀವೆಲ್ಲ ಕಾಯುತ್ತಿದ್ದಿರಬಹುದು. ನಾನೂ ಮುಂದುವರೆಸೋಣ ಅಂದುಕೊಂಡೆ. ಬರೆದೂ ಬರೆದೆ. ಆದರೆ ಯೋಚಿಸಿದಂತೆಲ್ಲ ನನ್ನ ಕಲ್ಪನೆಯಲ್ಲಿ ಆ ಕತೆ ಮುಂದುವರೆಯುತ್ತಲೇ ಇದೆ..! ಅದೆಲ್ಲಾದರೂ ಕಾದಂಬರಿ-ಗೀದಂಬರಿ ಆಗಿಬಿಟ್ಟೀತೇನೋ ಎಂಬ ಭಯ ನನಗೆ!

ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಕಟ್ಟಲ್ಪಡುತ್ತಿರುವುದು ಈ 'Brigade Gateway' ಎಂಬ ದೊಡ್ಡ apartment building. ಆವತ್ತೊಂದು ಶನಿವಾರ ಸಂಜೆ ಬೇರೇನೂ ಕೆಲಸವಿಲ್ಲದೆ, ಕಿಲೋಮೀಟರುಗಟ್ಟಲೆ ಅಗಲಕ್ಕಿರುವ ಅದರ ಸುತ್ತ, ಹೀಗೇ ಸುಮ್ಮನೆ ಒಂದು walk ಹೋಗಿಬಂದೆ. ಹಾಗೆ ಅದನ್ನು ಸುತ್ತುತ್ತಿದ್ದಾಗ ಮೂಡಿದ ಕತೆ ಅದು. ಅದು ಹೇಗೆ ಮೂಡಿತೋ ಎಷ್ಟು ಮೂಡಿತೋ ಅಷ್ಟನ್ನೇ ಮನೆಗೆ ಬಂದವನು ಬರೆದಿಟ್ಟುಬಿಟ್ಟೆ. ನನಗ್ಯಾಕೋ ಅದು incomplete ಅಂತ ಅನ್ನಿಸಲೇ ಇಲ್ಲ. ಹೀಗಾಗಿ ಅದನ್ನು ಮುಂದುವರೆಸಲಿಕ್ಕೆ ಹೋಗಲೇ ಇಲ್ಲ. ಬರೆದದ್ದನ್ನು ಹಾಗೇ ಟೈಪ್ ಮಾಡಿ ಬ್ಲಾಗಿಗೂ ಪೋಸ್ಟ್ ಮಾಡಿಬಿಟ್ಟೆ. ಆದರೆ ನಿಮ್ಮಲ್ಲನೇಕರು 'ಇದು incomplete ಅನ್ನಿಸ್ತಿದೆ' ಎನ್ನತೊಡಗಿದ ಮೇಲೆ ನನಗೂ ಹಾಗೇ ಎನಿಸಲು ಶುರುವಾಯಿತು! ಸರಿ, ನಾನು ಕಲ್ಪನೆಯಲ್ಲೇ ಆ ಕತೆಯನ್ನು ಬೆಳೆಸತೊಡಗಿದೆ.

ಹೇಗೆ ಬೇಕಾದರೂ ಬೆಳೆಸಬಹುದಿತ್ತು ನಾನು. ಪೂರ್ಣಿಮಾ ಬೆಂಗಳೂರಿಗೆ ಬಂದದ್ದು, ಅವಳಿಗೆ ನಗರದ ಏಕತಾನತೆ -ಇಷ್ಟು ದೊಡ್ಡ ಬಂಗಲೆಯಲ್ಲಿ ತಾನೊಬ್ಬಳೇ ಇರುವುದು- ಬೇಸರ ಬರುವುದು, ಒಂದು ದಿನ ಅಚಾನಕ್ಕಾಗಿ ಬಾಲ್ಯವೇ ಮರುಕಳಿಸಿದಂತೆ ನಾಗರತ್ನ ಅವಳ ಮನೆಗೆ ಬಂದದ್ದು, ಹಳೆಯ ನೆನಪುಗಳು ಮರುಕಳಿಸಿದ್ದು, ನಾಗರತ್ನಳ ಬದುಕಿಗೂ ತನ್ನ ಬದುಕಿಗೂ ಇರುವ ಕೇವಲ ಸಿರಿವಂತಿಕೆಯಲ್ಲಿನ ವ್ಯತ್ಯಾಸವನ್ನು ಬ್ರಿಗೇಡ್ ಗೇಟ್‌ವೇ ಅಪಾರ್ಟ್‍ಮೆಂಟಿನ ಗೋಡೆಗಳು ಪಿಸುಗುಡುವುದು... ಎಲ್ಲವನ್ನೂ ಬರೆಯಬಹುದಿತ್ತು. ಗಂಡನ 'party daily' ಸಂಸ್ಕೃತಿಯನ್ನು ಸಹಿಸದ ಪೂರ್ಣಿಮಾ, ಕುಡಿದು ಬರುವ ಗಂಡನ ಬಗ್ಗೆ ಸಿಟ್ಟು ತೋರುವ ನಾಗರತ್ನ... ಪೂರ್ಣಿಮಾಳ ಗಂಡ ಅಮೇರಿಕಾಗೆ ಹೋಗುವುದನ್ನೂ, ನಾಗರತ್ನಳ ಗಂಡ ಬೇರೆ ಯಾರೊಂದಿಗೋ ಸಂಬಂಧ ಬೆಳೆಸುವುದನ್ನೂ... ಹೇಗೆ ಬೇಕಾದರೂ ಬರೆಯಬಹುದಿತ್ತು.

ಅಷ್ಟೆಲ್ಲ ಬರೆದರೂ ಅದು 'complete' ಆಗುತ್ತಿತ್ತೇ? I doubt! 'ಕತೆ, ಹರಿಯುವ ನದಿಗೆ ಒಂದು ಚೌಕಟ್ಟು ಹಾಕುತ್ತದೆ' ಎಂದಿದ್ದರು ಯಾರೋ.. ಯಾರು ಜೋಗಿಯಾ? ಚಿತ್ತಾಲರಾ? ತೇಜಸ್ವಿಯಾ? ಯಾರೋ. ನಿಜ, ಯಾವ ಕತೆಯೂ ಮುಗಿಯುವುದಿಲ್ಲ. ನಾವೇ ಮುಗಿಸಬೇಕು. ಅದು ಕಾಲ್ಪನಿಕ ಕತೆಗಳ ದುರಂತ ಮತ್ತು ಲಾಭ.

ಆದರೆ ನೈಜ ಕತೆಗಳು ಕಲ್ಪನೆಯ ಕತೆಗಳಂತಲ್ಲ. ಇಲ್ಲಿ ವಾಸ್ತವಕ್ಕೆ ಅಪಚಾರವಾಗಬಾರದು. ಗೊತ್ತಿಲ್ಲದ ವಿವರಗಳಿಗೆ ಅಷ್ಟಿಷ್ಟು ಕಲ್ಪನೆಯನ್ನು ಬೆರೆಸಿದರೂ ಅದು ಸತ್ಯಕ್ಕೆ ದೂರವಾಗಬಾರದು. ಮತ್ತು ಬರೆದದ್ದು 'ವರದಿ'ಯಾಗದೇ 'ಕಥೆ'ಯಾಗಬೇಕು! ಕಷ್ಟ!

ಕಳೆದ ವಾರ ನಾವು ಆರು ಹುಡುಗರು ಮುಗಿದುಹೋಗುತ್ತಿರುವ ಹಳ್ಳಿಯೊಂದಕ್ಕೆ ಚಾರಣ ಹೋಗಿದ್ದೆವು. ಪಕ್ಕದಲ್ಲಿರುವ ಅಣು ವಿದ್ಯುತ್ ಸ್ಥಾವರ ಮತ್ತು ಡ್ಯಾಮ್ ಒಂದರ ಭದ್ರತಾ ದೃಷ್ಟಿಯಿಂದ ಸರ್ಕಾರ ಆ ಹಳ್ಳಿಯನ್ನು ವಶಪಡಿಸಿಕೊಳ್ಳುತ್ತಿದೆ. ಇನ್ನು ಐದಾರು ತಿಂಗಳೊಳಗೆ ಆ areaದ ಸುತ್ತ ಒಂದು compound ಏಳುತ್ತದೆ. ಅಲ್ಲಿಗೆ ಸಾರ್ವಜನಿಕ ಪ್ರವೇಶ ನಿಶೇಧವಾಗುತ್ತದೆ. ಅಲ್ಲಿನ ಮುಗ್ಧ ಜನಗಳ ಬದುಕು ಎತ್ತಂಗಡಿಯಾಗುತ್ತಿದೆ. ಅಲ್ಲಿನ ಸ್ನಿಗ್ಧ ಸೌಂದರ್ಯ ಮುಚ್ಚಿಹೋಗಲಿದೆ. ಜಲಪಾತದ ಹರಿವು ಮಾತ್ರ ಅನವರತವಾಗಿ ಉಳಿಯಲಿದೆ.

ಅದರ ಸುತ್ತ ಹೆಣೆದ ಕತೆಯಲ್ಲದ ಕತೆ ಈಗ ನಿಮ್ಮ ಮುಂದಿದೆ. ಇದೂ ನಿಮಗೆ incomplete ಅನ್ನಿಸಿದರೆ, I am sorry! ತಲುಬು ತೀರಾ ಕಾಡಿದರೆ 'ಬಿರ್‌ಗೇಡ್' ಕತೆಯ ಮುಂದುವರೆದ ಭಾಗವನ್ನು ಯಾವತ್ತಾದರೂ post ಮಾಡುತ್ತೇನೆ. ಆದರೆ 'ಕಮಲ ಹೇಳಿದ ಕತೆ'ಯನ್ನು ಮಾತ್ರ ನಾನು ಮುಂದುವರೆಸಲಾರೆ. ಏಕೆಂದರೆ, ಇದನ್ನು ಹೇಗೆ ಮುಂದುವರೆಸಬೇಕೆಂದು ನನಗೆ ಗೊತ್ತಿಲ್ಲ. ಏಕೆಂದರೆ, ಇದು ಹೇಗೆ ಮುಂದುವರೆಯುತ್ತದೆಂದು ಅವರಿಗೂ ಗೊತ್ತಿಲ್ಲ!

1 comment:

Supreeth.K.S said...

ಕತೆಗಳನ್ನು ಕಾಲ್ಪನಿಕ ಕತೆ, ನೈಜ ಕಥೆಗಳೆಂಬ ವರ್ಗಗಳಾಗಿ ವಿಂಗಡಿಸಲು ಸಾಧ್ಯವೇ? ಕಲ್ಪನೆಯ ಕನವರಿಕೆಗಳೆಲ್ಲಾ ಕಥೆಗಳಾಗುತ್ತವೆಯೇ ಇಲ್ಲ, ನೈಜ ಸಂಗತಿಗಳ ವರದಿ ಕತೆಗಳಾಗುತ್ತವೆಯಾ? ಗೊಂದಲದಲ್ಲಿದ್ದೇನೆ...
‘ಬಿರ್ ಗೇಡ್’ ಕಥೆಯ ಎಳೆಯನ್ನು ನೀವು ಬೆಳೆಸಿದ ರೀತಿ ನಿಜಕ್ಕೂ ಅದ್ಭುತ. ಆದರೆ ನೀವು ಕಥೆಯನ್ನು ಬೆಳೆಸುವಾಗ ಹೊಮ್ಮುವ ಭಾವಕ್ಕೂ, ನೀವೇ ಆಯಾಯ ಪಾತ್ರವಾಗುತ್ತಾ ಇನ್ನೊಂದರೊಂದಿಗೆ ಮುಖಾಮುಖಿಯಾಗುತ್ತಾ ಹೋಗುವುವಾಗ ಸೃಷ್ಠಿಯಾಗುವ ಕಥೆಗೂ ಬಹಳ ವ್ಯತ್ಯಾಸವಿದೆ ಎನ್ನುವುದು ನನ್ನ ಭಾವನೆ. ಇಂತಹ ಅನುಭವ ನನಗೆ ಎಷ್ಟೋ ಬಾರಿ ಆಗಿರುವುದುಂಟು. ನಾನು ಬರೆಯಬೇಕೆಂದುಕೊಂಡ ವಿಷಯವನ್ನು ವಿವವರಿಸುತ್ತಾ, ವಿವರಿಸುತ್ತಾ ಯಾವುದೋ ನಿಲ್ದಾಣಗಳೆಡೆಗೆ ನನಗೇ ತಿಳಿಯದ ಹಾಗೆ ನಡೆದುಬಿಟ್ಟಿರುತ್ತೇನೆ.