Monday, May 26, 2008

ಮಂಡೆಕಸ

ಅಜ್ಜಿ ಅದನ್ನು ಹಿತ್ಲಕಡೆ ಬಾಗಿಲಿನ ಚಿಲಕಕ್ಕೆ ಸಿಕ್ಕಿಸುತ್ತಿದ್ದಳು. ಅಮ್ಮನಿಗೆ ಅದಕ್ಕೇ ಸಿಟ್ಟು: “ಶೀ! ಅದೆಂತು ಬಾಗ್ಲು ಚಿಲ್ಕಕ್ ಸಿಕ್ಸಿಡ್‌ತ್ರಪ! ಒಂಥರಾ ಆಗ್ತು ಮುಟ್ಯೋದ್ರೆ! ಒಂಚೂರ್ ಮುಂದೆ ಹೋಗಿ ಬಿಸಾಕಿಕ್ ಬರ್ಲಕ್ಕು. ಯಾರರು ನೋಡಿರೆ ಚೊಲೋ ಕಾಣ್ತಲ್ಲೆ..” ಅಜ್ಜಿಗೆ ಹಾಗೆ ಹೇಳಿಸಿಕೊಂಡೂ ಹೇಳಿಸಿಕೊಂಡೂ ಅಭ್ಯಾಸವಾಗಿಬಿಟ್ಟಿತ್ತಾದ್ದರಿಂದ ಅಮ್ಮನ ಸಿಡುಕಿಗೆ ನಿರುಮ್ಮಳವಾಗಿ ಉತ್ತರಿಸುತ್ತಿದ್ದಳು: “ಹಾಕಿರ್ ಸೈ ತಗಳೇ! ಈಗ್ಯಾರ್ ಬರ್ತ ನಮ್ಮನಿಗೆ? ಎಲ್ಲರ ಕೂದ್ಲೂ ಉದುರ್ತು!” ಹಾಗನ್ನುತ್ತಾ ಅಜ್ಜಿ ತನ್ನ ತಲೆಕೂದಲ ಶಿಂಬಿಯನ್ನು ಚಿಲಕದಿಂದ ಎತ್ತಿಕೊಂಡು ಹೋಗಿ ಹೊರಗಡೆ ಎಸೆದು ಬರುತ್ತಿದ್ದಳು. ಅದನ್ನು ನಮ್ಮ ಮನೆಯಲ್ಲಿ ‘ಮಂಡೆಕಸ’ ಎಂದು ಕರೆಯಲಾಗುತ್ತಿತ್ತು.

ಅಜ್ಜಿಯ ಕೂದಲು ಎಷ್ಟು ಉದುರುತ್ತಿತ್ತು..! “ಥೋ, ಪಿತ್ತ ಕಾಣ್ತು! ಕಡಿತೂ ಅಂದ್ರೆ ಕಡಿತು! ಬಾಚ್‌ಕ್ಯಂಡ್ರೆ ಉದುರ್ತು! ಹಾಳ್ ಬೀಳ್ಳಿ!” -ತನ್ನ ತಲೆಕೂದಲಿಗೆ ತಾನೇ ಬೈದುಕೊಳ್ಳುತ್ತಿದ್ದಳು. ಅಜ್ಜಿ ಪ್ರತಿ ಸಂಜೆ, ಮದ್ದಿನ್ ಮೇಲಿನ್ ನಿದ್ದೆ ಮಾಡಿ ಎದ್ದಮೇಲೆ, ಒಂದು ನ್ಯೂಸ್‌ಪೇಪರ್ ಇಟ್ಟುಕೊಂಡು, ಹಿತ್ಲಕಡೆ ಮೆಟ್ಟಿಲ ಮೇಲೋ, ಹಾಲಿನ ನೆಲದ ಮೇಲೋ ಕೂತು, ತಲೆ ಬಾಚಿಕೊಳ್ಳುತ್ತಿದ್ದಳು. ಆಕೆ ತನ್ನ ಪ್ರಾಯದಲ್ಲಿ ಸಾಗರದ ಮಾರಿಜಾತ್ರೆಯಿಂದ ತಂದ ಸಣ್ಣ ಹೇನಿನ ಬಾಚಣಿಗೆ ಬಳಸುತ್ತಿದ್ದಳು. ಆ ಹಣಿಗೆಗೆ ಇಪ್ಪತ್ತಕ್ಕಿಂತಲೂ ಜಾಸ್ತಿ ವರ್ಷ ವಯಸ್ಸಾಗಿತ್ತು, ಅಜ್ಜಿಯ ತಲೆ ಬಾಚುವುದು ಅದಕ್ಕೆ ಕರ‘ತಲಾ'ಮಲಕವಾಗಿತ್ತು. ಕೆಂಪು-ಕಪ್ಪು ಬಣ್ಣವಿದ್ದ ಆ ಬಾಚಣಿಗೆ, ಅಜ್ಜಿಯ ತಲೆಗೂದಲು ಕಡುಗಪ್ಪು ಬಣ್ಣದಿಂದ ವಿರಳಗಪ್ಪು ಆಗತೊಡಗಿ ಕೊನೆಗೆ ಪೂರ್ತಿ ಬಿಳಿಯಾದುದಕ್ಕೆ ಸಾಕ್ಷಿಯಾಗಿತ್ತು. ಅದರೊಳಗೆ ಸಿಕ್ಕಿಕೊಂಡ ಕಸವನ್ನು ಅಜ್ಜಿ ಹದಿನೈದು ದಿನಕ್ಕೊಮ್ಮೆ ತನ್ನ ಬಳೆಗೆ ನೇತುಬಿಟ್ಟುಕೊಂಡಿರುತ್ತಿದ್ದ ಸೇಫ್ಟಿ ಪಿನ್ನಿನಿಂದ ತೆಗೆಯುತ್ತಿದ್ದಳು. ಹಾಗೆ ಚೊಕ್ಕಟಗೊಳಿಸಿದ ಬಾಚಣಿಗೆಯನ್ನು ತನ್ನ ಮಂಚದಲ್ಲಿ - ಹಾಸಿಗೆಯ ಕೆಳಗೆ ಜೋಪಾನ ಮಾಡಿ ಇಡುತ್ತಿದ್ದಳು. ಹಣಿಗೆ ಹಾಸಿಗೆಯಡಿ ಮರುಸಂಜೆಯವರೆಗೂ ಕುಂಭಕರ್ಣನಂತೆ ಬೆಚ್ಚಗೆ ನಿದ್ರೆ ಹೋಗುತ್ತಿತ್ತು.

ಊಟ ಮಾಡುವಾಗ ಒಮ್ಮೊಮ್ಮೆ ತಲೆಗೂದಲು ಸಿಕ್ಕಿಬಿಡುತ್ತಿತ್ತು. ಬಿಳಿ ಅನ್ನಕ್ಕೆ ಹುಳಿ ಹಾಕಿ ಕಲಸಿ ತುತ್ತು ಮಾಡಿ ಬಾಯ ಬಳಿ ತರುವಷ್ಟರಲ್ಲಿ ಅದು ತಟ್ಟೆಯಿಂದ ಬಾಯಿಯವರೆಗೂ ಬಾಲವಾಗಿ ಬಂದಿರುತ್ತಿತ್ತು. ಸಿಕ್ಕಿಬಿದ್ದ ಕಳ್ಳನಂತೆ ಅದನ್ನು ನೋಡಲಾಗುತ್ತಿತ್ತು. “ಏ ಏ ಏ..! ಯಾರದ್ದು ಇದು? ಬಿಳೀ ಕೂದ್ಲು! ಅಜ್ಜಿದೇಯ!” -ಸಿಕ್ಕಿಬಿದ್ದ ಕೂದಲನ್ನು ಕೈಯಲ್ಲಿ ಎತ್ತಿ ಹಿಡಿದು ಎಲ್ಲರಿಗೂ ತೋರಿಸಿ ಹೇಳುತ್ತಿದ್ದೆ. “ಓಹೊಹೋ! ಯಂದಂತು ಅಲ್ಲ. ಗೌರಿದೇ ಸೈ. ಆನು ಇವತ್ತು ಅಡುಗೆಮನೆ ಕಡೀಗೇ ಬರ್ಲೆ” -ಅಜ್ಜಿ ಅಮ್ಮನ ಮೇಲೆ ತಪ್ಪು ಹೊರಿಸುತ್ತಿದ್ದಳು. “ಹೂಂ! ಬಿಳೀ ಕೂದ್ಲು! ನೋಡಿರ್ ಕಾಣ್ತಲ್ಯಾ? ನಿಂಗ್ಳುದ್ದೇಯಾ! ಹಾರಿ ಬಂದು ಬಿದ್ದಿಕ್ಕು” -ಅಮ್ಮ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧಳಿರುತ್ತಿರಲಿಲ್ಲ. ಆ ಕೂದಲು ಅಪ್ಪನ ಬಾಳೆಯಲ್ಲೇನಾದರೂ ಸಿಕ್ಕಿದ್ದರೆ ಅವನು ಸಿಟ್ಟು ಮಾಡಿಕೊಂಡು ಅದಿಷ್ಟೂ ಅನ್ನವನ್ನು ಬಿಟ್ಟು ಬೇರೆ ಬಾಳೆ ಹಾಕಿಸಿಕೊಳ್ಳುತ್ತಿದ್ದ ಅಥವಾ ಆ ಹೊತ್ತು ಊಟವನ್ನೇ ಬಿಟ್ಟುಬಿಡುತ್ತಿದ್ದ. ಅಜ್ಜಿಗೋ ಅಮ್ಮನಿಗೋ ಹಾಗೆ ಕೂದಲು ಸಿಕ್ಕಿದರೆ ಅವರು ಯಾರಿಗೂ ಹೇಳುತ್ತಲೇ ಇರಲಿಲ್ಲ; ಸುಮ್ಮನೆ ತೆಗೆದಿಟ್ಟುಬಿಡುತ್ತಿದ್ದರು. ನನಗೆ ಸಿಕ್ಕಿದ್ದರಿಂದ ಎಲ್ಲರಿಗೂ ತೋರಿಸಿ, ಅಜ್ಜಿ-ಅಮ್ಮರನ್ನು ವಾದಕ್ಕೆ ಹಚ್ಚಿಸಿ, ಗೊಂದಲದ ವಾತಾವರಣ ಸೃಷ್ಟಿಸಿ, ಮಜಾ ತೆಗೆದುಕೊಳ್ಳುತ್ತಾ ನಾನು ಊಟ ಮುಂದುವರೆಸುತ್ತಿದ್ದೆ. ಸಿಕ್ಕಿಬಿದ್ದದ್ದು ಕರೀ ಕೂದಲು ಮತ್ತು ಸಣ್ಣ ಗಾತ್ರದ್ದು ಅಂತಾದರೆ ಮಾತ್ರ ತೊಂದರೆ ಜಾಸ್ತಿಯಾಗುತ್ತಿತ್ತು. ಏಕೆಂದರೆ, ಆಗ ಅಮ್ಮನೊಂದಿಗೆ ಅಪ್ಪ ಮತ್ತು ನಾನು -ಇಬ್ಬರೂ ತಪ್ಪಿತಸ್ಥರ ಗುಂಪು ಸೇರುತ್ತಿದ್ದೆವು!

ಅಮ್ಮನ ಕೂದಲೂ ಸಿಕ್ಕಾಪಟ್ಟೆ ಉದುರುತ್ತಿತ್ತು. ಅಮ್ಮ ಅದಕ್ಕೆ ಸಾಕಷ್ಟು ಪ್ರಯೋಗಗಳನ್ನೂ ಮಾಡುತ್ತಿದ್ದಳು. ಸೋಪು ಬದಲಿಸಿ ನೋಡಿದಳು, ಶೀಗೆಕಾಯಿ ಬಳಸಿ ನೋಡಿದಳು, ಕಡ್ಲೆಹಿಟ್ಟು ಹಚ್ಚಿಕೊಂಡು ನೋಡಿದಳು.. ಆದರೂ ‘ಹೇರ್ಪಾತ’ ಮುಂದುವರೆದೇ ಇತ್ತು. “ಹಿಂಗೇ ಉದುರ್ತಾ ಇದ್ರೆ ಒಂದ್ ದಿನ ಬೋಳ್ ಮಂಡೆ ಆಗ್ತೇನ ಅಪ್ಪೀ ನಂದು! ಹೊರಬೈಲಗೆ ಒಬ್ಳಿಗೆ ಹಂಗೇ ಆಯ್ದಡ ಪಾಪ!” ಎನ್ನುತ್ತಿದ್ದಳು ನನ್ನ ಬಳಿ. ಭಾಗ್ಯತ್ಗೆ ಮನೆಯಲ್ಲಿದ್ದಾಗಲಂತೂ ದಿನಕ್ಕೊಂದು ಹೆಸರಿನ ಶ್ಯಾಂಪೂ ತಂದು ನನ್ನ ಅಮ್ಮನಿಗೆ ಕೊಡುತ್ತಿದ್ದಳು. ಅಮ್ಮನಿಗೆಂದು ತಂದ ಶ್ಯಾಂಪೂವನ್ನು ತಾನೇ ಹೆಚ್ಚಾಗಿ ಬಳಸುತ್ತಿದ್ದಳು. ಮತ್ತೆ ಆಗ, ಒಂದು ಕಡೆ ಕಿವಿ ಕತ್ತರಿಸಿಕೊಂಡು ಬಚ್ಚಲು ಮನೆಯ ಗೂಡಿನಲ್ಲಿ ಸುಂದರಿಯಂತೆ ನಿಂತು ಕಂಗೊಳಿಸುತ್ತಾ ನನ್ನ ಚಿತ್ತವನ್ನಾಕರ್ಷಿಸುತ್ತಿದ್ದ ಆ ಬಣ್ಣ ಬಣ್ಣದ ಪಳಪಳನೆ ಹೊಳೆಯುವ ಶ್ಯಾಂಪೂ ಸ್ಯಾಚೆಟ್ಟುಗಳನ್ನು, ಅತ್ತಿಗೆಗಾಗಲೀ ಅಮ್ಮನಿಗಾಗಲೀ ಗೊತ್ತಾಗದಂತೆ ಮೃದುವಾಗಿ ಒತ್ತಿ, ಅದರೊಡಲ ಬಿಳೀ ದ್ರವವನ್ನು ಚೂರೇ ಚೂರು ಕೈಗೆ ಹಾಕಿಕೊಂಡು ಮೂಸಿ ನೋಡಿ ತಲೆಗೆ ತಿಕ್ಕಿಕೊಂಡು ನೊರೆ ನೊರೆ ನೊರೆ ಬರಿಸಿಕೊಂಡು ನೀರು ಹೊಯ್ದುಕೊಂಡು ಮಜಾ ಮಾಡುವ ಯೋಗ ನನ್ನದಾಗುತ್ತಿತ್ತು.

ಅಪ್ಪ ಎರಡು ತಿಂಗಳಿಗೊಮ್ಮೆ ಉಳವಿಗೆ ನನ್ನನ್ನು ಚೌರ ಮಾಡಿಸುವ ಸಲುವಾಗಿ ಸೈಕಲ್ಲಿನಲ್ಲಿ ಕರೆದೊಯ್ಯುತ್ತಿದ್ದ. ನನ್ನನ್ನು ರಾಜುವಿನ ಚೌರದಂಗಡಿಯಲ್ಲಿ ಬಿಟ್ಟು, ತಾನು ಅಕ್ಕಿಹಿಟ್ಟು ಮಾಡಿಸಿಕೊಂಡು ಅರ್ಧಗಂಟೆಯಲ್ಲಿ ಬರುವುದಾಗಿ ಹೇಳಿ ಹೋಗಿಬಿಡುತ್ತಿದ್ದ. ನಾನು ಕುಳಿತ ಬೆಂಚಿನಲ್ಲಿ ಇನ್ನೂ ಅನೇಕರು ತಮ್ಮ ಸರತಿ ಕಾಯುತ್ತಾ, ಪೇಪರ್ರೋದುತ್ತಾ ಕೂತಿರುತ್ತಿದ್ದರು. ಚುಕುಚುಕು ಸದ್ದು ಮಾಡುತ್ತಾ ರಾಜುವಿನ ಕತ್ತರಿ ಕನ್ನಡಿ ಮುಂದೆ ಕೂತವನ ತಲೆಯ ಮೇಲೆ ಓಡಾಡುತ್ತಿತ್ತು. ಹಾಗೆ ಕೂತವನ ತಲೆಗೂದಲು ಆ ಕುರ್ಚಿಯ ಸುತ್ತಲೂ, ಅವನ ಮೈಮೇಲೆ ಹೊಚ್ಚಿದ ಬಿಳೀ ವಸ್ತ್ರದ ಮೇಲೂ ಬಿದ್ದಿರುತ್ತಿತ್ತು. ಜಾಹೀರಾತುಗಳಲ್ಲಿ ಹೇಳುವ ‘ಕೇಶರಾಶಿ’ ಎಂಬ ಪದ ಬಹುಶಃ ಇದನ್ನು ನೋಡಿಯೇ ಚಾಲ್ತಿಗೆ ಬಂದದ್ದೇನೋ ಎಂದು ನಾನು ಅಂದುಕೊಳ್ಳುತ್ತಿದ್ದೆ. ಚೌರದಂಗಡಿಯ ಮೂಲೆಯಲ್ಲಿ ಒಂದು ಸಿಮೆಂಟಿನ ಚೀಲದ ತುಂಬಾ ವಾಕರಿಕೆ ಬರುವಷ್ಟು ಕೂದಲಿರುತ್ತಿತ್ತು. ಅದನ್ನು ಏನು ಮಾಡುತ್ತಾರೆ ಎಂದು ನನಗೆ ಚಿಂತೆಯಾಗುತ್ತಿತ್ತು. ಕನ್ನಡಿ ಮುಂದೆ ಕೂತಿದ್ದವನ ಚೌರ ಮುಗಿದು, ಅವನು ದರ್ಪದಿಂದೆಂಬಂತೆ ಎರಡ್ಮೂರು ಸಲ ‘ಎಲ್ಲಾ ಸರಿಯಾಗಿದೆಯೇ?’ ಎಂದು ಸಾವಿರ ಬಿಂಬಗಳಲ್ಲಿ ತನ್ನನ್ನು ನೋಡಿಕೊಂಡು, ಥೇಟು ರಾಜಕುಮಾರನಂತೆ ಸಿಂಹಾಸನದಿಂದ ಇಳಿದು ಹೋಗುತ್ತಿದ್ದಂತೆಯೇ, ಮತ್ತೊಬ್ಬ ಗದ್ದುಗೆ ಏರುತ್ತಿದ್ದ.

ಬಹಳ ಸಲ, ಅಪ್ಪ ವಾಪಸು ಬರುವವರೆಗೂ ರಾಜು ನನ್ನನ್ನು ಚೌರಕ್ಕೆ ಕರೆಯುತ್ತಲೇ ಇರಲಿಲ್ಲ. ‘ದೊಡ್ಡ ದೊಡ್ಡ’ ಜನಗಳೆಲ್ಲ ಬರುತ್ತಲೇ ಇರುತ್ತಿದ್ದುದರಿಂದ, ಸಣ್ಣಕಿದ್ದ ನಾನು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೆ. “ಅಪ್ಪ ಬರೂದು ಇನ್ನೂ ತಡ ಇತ್ತಲ ಮಾಣೀ? ನಿಂದು ಇವ್ರುದ್ದಾದ್ಮೇಲ್ ಮಾಡ್ತೆ” -ಎಂದು ರಾಜು ಮತ್ಯಾರನ್ನೋ ಕರೆದುಬಿಡುತ್ತಿದ್ದ. ಕಾದೂ ಕಾದೂ ನನಗಂತೂ ಆಕಳಿಕೆ ಬರುತ್ತಿತ್ತು. ಅಪ್ಪ ಬಂದು, “ಏ, ಒಂದು ತಾಸು ಆಯ್ತಲಾ ರಾಜೂ ಇವನ್ನ ಬಿಟ್ ಹೋಗಿ? ಬೇಗ ಕಟಿಂಗ್ ಮಾಡಿ ಕಳ್ಸು ಮಾರಾಯಾ” ಎಂದಮೇಲೆ, ನನಗೆ ಸಿಂಹಾಸನವೇರುವ ಅವಕಾಶ ಸಿಗುತ್ತಿತ್ತು. ರಾಜು, ತನ್ನ ಒಂದು ಕೈಯಲ್ಲಿ ಬಾಚಣಿಗೆ - ಮತ್ತೊಂದು ಕೈಯಲ್ಲಿ ಕತ್ತರಿ ಹಿಡಿದು, ಅಷ್ಟೆಲ್ಲಾ ಬುದ್ಧಿ, ದಡ್ಡತನ, ಯೋಚನೆ, ಭಾವನೆ ತುಂಬಿದ್ದ ನನ್ನ ತಲೆಯನ್ನು, ಯಕಃಶ್ಚಿತ್ ಒಂದು ಚೆಂಡಿನಂತೆ ಹೇಗೆ ಬೇಕೆಂದರೆ ಹಾಗೆ ಆಡಿಸುತ್ತಿದ್ದ. ಚೌರ ಮುಗಿದು ಅಪ್ಪ ದುಡ್ಡು ಕೊಡುವಾಗ, ನನ್ನ ತಲೆಕೂದಲೂ ಆ ಕೆಳಗೆ ಬಿದ್ದಿದ್ದ ಕೇಶರಾಶಿಯಲ್ಲಿ ಒಂದಾದುದನ್ನು ನೋಡುತ್ತಾ ಕ್ಲೇಶ ಮನಸ್ಸಿನಿಂದ ಸೈಕಲ್ಲೇರುತ್ತಿದ್ದೆ.

ಬೆಂಕಟವಳ್ಳಿಯಲ್ಲಿ ನನ್ನ ಅಜ್ಜ ಸತ್ತ ಸುದ್ದಿ ಬಂದಾಗ ಶಾಲೆಯಿಂದ ನೇರವಾಗಿ ಅಲ್ಲಿಗೆ ಹೋದೆ. ಹಿತ್ಲಕಡೆ ಲಾಯದಲ್ಲಿ ಅಮ್ಮ, ಅಜ್ಜಿ, ನೆಂಟರು, ಊರ ಹೆಂಗಸರು -ಎಲ್ಲಾ ಕೂತಿದ್ದರು. ಅಜ್ಜಿ ಅಳುತ್ತಿದ್ದಳು. ತುಂಬಾ ಸಂಪ್ರದಾಯಸ್ಥೆಯಾಗಿದ್ದ ನನ್ನ ಅಜ್ಜಿ, ತಾನು ಕೇಶಮುಂಡನ ಮಾಡಿಸಿಕೊಳ್ಳುವುದಾಗಿ, ‘ಮಡಿ’ ಮಾಡಿಕೊಳ್ಳುವುದಾಗಿ ಹಟಕ್ಕೆ ಬಿದ್ದಿದ್ದಳು. “ಈಗಿನ ಕಾಲದಲ್ಲಿ ಹಂಗೆಲ್ಲ ಯಾರೂ ಮಾಡ್‌ಸ್ಕ್ಯಳದಿಲ್ಲೆ. ಮಳ್ಳನು ನಿಂಗೆ?” ಎಂದು ಹೆಂಗಸರೆಲ್ಲಾ ಬೈದು ಸಮಾಧಾನ ಮಾಡಿದರು. ಅವರು ಆಡಿಕೊಳ್ಳುತ್ತಿದ್ದ ಮಾತುಗಳು ನನಗೆ ಸರಿಯಾಗಿ ಅರ್ಥವಾಗದೇ, ಅಮ್ಮನ ಬಳಿ ಹೋಗಿ “ಅಮ್ಮಾ ಅಜ್ಜಿಗೆ ಎಂಥ ಮಾಡ್ತ್ವಡ?” ಎಂದು ಕೇಳಿದೆ. “ಎಂಥೂ ಇಲ್ಲೆ. ಅವ್ಳಿಗೆ ಮುತ್ತಜ್ಜಿಗೆ ಇತ್ತಲಾ, ಹಂಗೇ ಬೋಳುಮಂಡೆ ಮಾಡ್ಕ್ಯಳವು ಅಂತ ಇತ್ತಡ, ನಾವೆಲ್ಲ ಬ್ಯಾಡ ಅಂದ್ಯ” ಎಂದಳು ಅಮ್ಮ. ಅಜ್ಜಿಯ ಜಡೆಯನ್ನೇ ಕತ್ತರಿಸಿ, ತಲೆ ಬೋಳಿಸಿಬಿಟ್ಟರೆ... ಆಹ್! ಅದೆಷ್ಟು ಭೀಕರವಾಗಿ ಕಾಣಬಹುದೆಂದು ಕಲ್ಪಿಸಿಕೊಂಡು ನಾನು ಹೆದರಿ ಹೊರಗೆ ಓಡಿಬಂದುಬಿಟ್ಟೆ. ಅಷ್ಟರಲ್ಲಾಗಲೇ ತಲೆ ಬೋಳಿಸಿಕೊಂಡು ಸ್ನಾನಕ್ಕೆ ಹೊರಟಿದ್ದ ಮಾವಂದಿರು “ಗುಂಡಾ, ಶಾಲೆಯಿಂದ ಬಂದ್ಯಾ? ಅಜ್ಜ ಹೋಗ್ಬುಟ!” ಎಂದರು.

ಬೆಂಗಳೂರಿಗೆ ಬಂದು ಜಾಬಿಗಾಗಿ ಅಲೆಯುತ್ತಿದ್ದೆ. ತಿಂಗಳಾದರೂ ಸಿಕ್ಕಿರಲಿಲ್ಲ. ‘ಹೆದ್ರಿಕೆ ಆಗೋ ಹಾಗೆ ಕಾಣ್ತಿದೀಯ. ನಾಳೆ ಯಾವುದೋ ಒಳ್ಳೇ ಕಂಪನೀಲಿ ಇಂಟರ್‌ವ್ಯೂ ಇದೆ ಅಂತ ಬೇರೆ ಹೇಳ್ತಿದೀಯ. ಹೋಗಿ ಕಟಿಂಗ್ ಆದ್ರೂ ಮಾಡಿಸ್ಕೊಂಡು ಬಾ’ ಎಂದರು ನಾನು ಉಳಿದುಕೊಂಡಿದ್ದ ನೆಂಟರ ಮನೆಯವರು. ಹೊರಟೆ. ‘ಮಾಡರ್ನ್ ಜೆಂಡ್ಸ್ ಸಲೂನ್’ -ಬೋರ್ಡು ಕಣ್ಣಿಗೆ ಬಿತ್ತು. ‘ಹೂಂ, ನಾನೂ ಮಾಡರ್ನ್ ಜೆಂಡ್ಸೇ’ ಎಂದುಕೊಂಡು ಶಾಪಿನ ಒಳಹೊಕ್ಕೆ. ಎಲ್ಲೆಲ್ಲೂ ಗ್ಲಾಸು, ಕನ್ನಡಿ. ಕಟಿಂಗ್ ಮಾಡಿಸಿಕೊಳ್ಳುತ್ತಿದ್ದವರು, ಡೈ ಮಾಡಿಸಿಕೊಳ್ಳುತ್ತಿದ್ದವರು, ಮುಖಕ್ಕೆ ಬೆಳ್ಳಗೆ ಏನನ್ನೋ ಮೆತ್ತಿಸಿಕೊಂಡು ಕೂತಿದ್ದವರು, ತಲೆಗೆ ಪರಿಮಳದೆಣ್ಣೆ ಹಾಕಿಸಿಕೊಂಡು ತಟ್ಟಿಸಿಕೊಳ್ಳುತ್ತಿದ್ದವರು... ನಾನೂ ಸಿಂಹಾಸನವನ್ನೇರಿ ಕೂತೆ.

ಇನ್‌ಶರ್ಟ್ ಮಾಡಿದ್ದ ಕಟಿಂಗ್‌ನವ “ಸಾರ್, ಶಾರ್ಟಾ ಮೀಡಿಯಮ್ಮಾ?” -ಕೇಳಿದ.
“ಊಮ್.. ಮೀಡಿಯಮ್ಮೇ ಇರ್ಲಿ” -ಉತ್ತರಿಸಿದೆ.
“ಲಾಕ್ ಬಿಡ್ಲಾ ಸರ್?”
“ಏನ್ರೀ ಅದು?”
“ಲಾಕು ಸರ್.. ಕಿವಿ ಪಕ್ಕ.. ಉದ್ದಕೆ..?” ಕತ್ತರಿಯನ್ನು ಕಿವಿಯ ಪಕ್ಕ ಆಡಿಸುತ್ತಾ ಕೇಳಿದ.
ನನಗೆ ಕಚಗುಳಿಯಾದಂತಾಗಿ “ರೀ, ಲಾಕೂ ಬ್ಯಾಡ ಕೀನೂ ಬ್ಯಾಡ! ಸುಮ್ನೇ ಕಟಿಂಗ್ ಮಾಡ್ರೀ!” ರೇಗಿದೆ.
“ಸರ್ ಶೇವಿಂಗೂ ಮಾಡ್ಲಾ?” ಕೇಳಿದ.
“ಹೂಂ ಮಾಡಿ” ಎಂದೆ.

ಹತ್ತು ನಿಮಿಷದಲ್ಲಿ ಎಲ್ಲಾ ಮುಗಿದು ಕೆಳಗಿಳಿದೆ. ಜೇಬಿನಿಂದ ಐವತ್ತರ ನೋಟು ತೆಗೆದು “ಹೆಹ್ಹೆ! ಛೇಂಜ್ ಇಲ್ಲ..” ಎನ್ನುತ್ತಾ ಕೊಟ್ಟೆ. ಅವನು ಐದು ರೂಪಾಯಿ ವಾಪಸು ಕೊಟ್ಟ. ಮತ್ತೊಬ್ಬರನ್ನು ಕುರ್ಚಿಗೆ ಕರೆದ. ನಾನು ನಿಂತೇ ಇದ್ದೆ. ಅವನು ನನ್ನನ್ನು ನೋಡಿದ. “ಮತ್ತೇನಾದ್ರೂ ಆಗ್ಬೇಕಿತ್ತಾ ಸಾರ್?” ಕೇಳಿದ. “ಏನಿಲ್ಲ, ಛೇಂಜ್ ಬರೀ ಐದು ರೂಪಾಯಿ ಕೊಟ್ರಿ..?” ಎಂದೆ. “ಸರಿ ಆಯ್ತಲ್ಲಾ ಸಾರ್! ಕಟಿಂಗು - ಶೇವಿಂಗು: ಫಾರ್ಟಿಫೈವ್ ರುಪೀಸ್!” ಮರುಮಾತಾಡದೇ ಹಿಂತಿರುಗಿ ಹೊರಟೆ. ‘ರಾಜು ಶಾಪಿನ ಏಳು ರೂಪಾಯಿ ಎಲ್ಲಿ, ಈ ನಲವತ್ತೈದು ರೂಪಾಯಿ ಎಲ್ಲಿ? ಅಬ್ಬಾ ಬೆಂಗಳೂರೇ!’ -ಎಂದುಕೊಳ್ಳುತ್ತಾ ತಲೆದೂಗಿದೆ. “ನಿಂಗೆ ಎಷ್ಟ್ ತಲೆ ಇದೆ! ಬೆಂಗ್ಳೂರಿಗೆ ಹೋದ್ರೆ ಏನಾದ್ರೂ ಒಂದು ಮಾಡಿ ದುಡ್ಡು ಮಾಡ್ತೀಯಾ ಬಿಡು” ಎಂದು ನಾನು ಇಲ್ಲಿಗೆ ಹೊರಡುವ ಮುನ್ನ ಕೆಲ ಗೆಳೆಯರು ಹೇಳಿದ್ದು ನೆನಪಾಯಿತು. ನಿಜಕ್ಕೂ ನನ್ನ ತಲೆಯ ಬೆಲೆ ನನಗೆ ಗೊತ್ತಾದದ್ದು ಈಗಲೇ! ‘ಹೌದಪ್ಪಾ ಹೌದು!’ ಎಂದುಕೊಂಡೆ. ಇನ್ನು ಈ ಬೆಂಗಳೂರಿನಲ್ಲಿ ಇಂತಹ ಅದೆಷ್ಟು ‘ಚೌರ’ ಮಾಡಿಸಿಕೊಳ್ಳಬೇಕಿದೆಯೋ ಎಂದುಕೊಳ್ಳುತ್ತಾ, ನಾಳೆಯ ಕೆಲಸವಾದರೂ ಆದರೆ, ಕನಿಷ್ಟ ಚೌರಕ್ಕೆ ಸಾಕಾಗುವಷ್ಟು ಸಂಬಳವನ್ನಾದರೂ ಅವರು ಕೊಟ್ಟರೆ ಸಾಕಪ್ಪಾ ಎಂದು ಆಶಿಸುತ್ತಾ, ನೆಂಟರ ಮನೆ ದಾರಿ ಹಿಡಿದೆ.

12 comments:

Harish - ಹರೀಶ said...

ಸರಿ ಶೇವ್ ಮಾಡಿಸ್ಕ್ಯೈಂದೆ ಬಿಡು...

Vijaya said...

hee hee ... 'hairpaata' pada chennagide :-)
Good one!!

ಅರ್ಚನಾ said...

hi..Sush..
chanda bardiddi..naanu chikkavaLiruvaaga nange amma eradu jade tight aagi kattidare bicchuvudu marudina beLagge..maneyoLage tale baachabaaradu amta ondu rule ittu..
koodalu aahaarada jate bandeetu emba kaaLajiye adakke kaaraNa.

eega tale koodlantoo bob cut :D maneyinda horage hogi koodalu bachoNavemdare..flat nalli naanu horage bandare innondu flat kaaNiseete horatu hitalalla..

neenu shave maadiskondaddu odi, howdu maharaya..idu bengaLooru!!
anistu!!

Preetiyinda,
Archu

ತೇಜಸ್ವಿನಿ ಹೆಗಡೆ said...

ಸುಶ್ರುತ,

ನಿನ್ನ ಸವಿ ನೆನೆಪುಗಳನ್ನು ಓದಿ ನನಗೆಷ್ಟೋ ಸವಿ ನೆನಪುಗಳ ನೆನಪಾದವು! ನನ್ನಜ್ಜಿಯ ಬಳಿಯೂ ಅಂತಹದೇ ಬಾಚಣಿಗೆಯಿತ್ತು.. ಅದೂ ಹಾಂಗೇ ಬಾಚ್ಕಂಡು ಲೇಪಿನಡಿ ಇಟ್ಕಂಡಿರ್ತಿತ್ತು.. ನಂಗಕಗೆ ಮುಟ್ಟಲೂ ಕೊಡ್ತಿತ್ತಿಲ್ಲೆ. ಆದ್ರೂ ನಾನು ಎಷ್ಟೋ ಸಲ ಅದು ಮಲ್ಗದಾಗ ಕದ್ದು ಬಾಚ್ಕಂಡಿದಿದ್ದು ಸುಮ್ನೆ ಮಜಕ್ಕೆ..;-) ತಲೆಕೂದಲು ನಂದೂ ಸಿಕ್ಕಾಪಟ್ಟೆ ಉದ್ರತು. ಮೊದ್ಲೂ ಉದ್ರತಿತ್ತು ಆವಾಗ ಟೆನ್ಷನ್ ನಿಂದ ಹೇಳ್ತಾ ಇದ್ದಿದ್ದೊ (ಅಜ್ಜಿಯಕ್ಕ), ಈಗ ಮಗು ಆದ್ಮೇಲೆ ಅದು ತಾಯಿ ಮುಖ ನೋಡಿ ನಗುದ್ರಿಂದ ಉದ್ರತು ಹೇಳ್ತ..;-) ಪಾಪ ಈ ಪುಟ್ಟಿನೂ ಕಾರಣ ಆಗ್ತು ನೋಡು ತಲೆಕೂದ್ಲು ಉದ್ರುದಕ್ಕೆ...!

venu said...

Vaerry gooodd maga... keep it up..

Suppperrrr aagithu...

ಆಟೋರಾಣಿ said...

ಲಲಿತೆ ಸರಾಗವಾಗಿ ಸಾಗಿದ್ದಾಳೆ.

Pramod P T said...

'ಮಂಡೆಕಸ'ದ ಬಗ್ಗೆನೂ ಇಷ್ಟೋಂದು ಬರೀಬಹುದಾ..ಸಕ್ಕತ್ ಆಗಿದೆ ಸುಶ್ರುತ!
ಮಂಡೆಕಸದ್ ಬಗ್ಗೆ ನಿಮ್ಮ ಸವಿನೆನೆಪುಗಳನ್ನ ಓದ್ತಾ ಓದ್ತಾ ನನ್ಗೂ ಮೊದಲಿನಿಂದ ಇದ್ದ ಒಂದು doubt ಗೆ solution ಸಿಗುತ್ತೇನೋ ಅಂತ ಹುಡುಕಾಡಿದೆ. doubt ಎನು ಅಂದ್ರೆ ಯಾರಿಗೆ ಊಟದಲ್ಲಿ ಆವಾಗಾವಾಗ ಕೂದ್ಲು ಸಿಗ್ತಾ ಇರುತ್ತೊ (ಹೆಚ್ಚಾಗಿ ಹೆಂಗಸರದ್ದು)ಅವರನ್ನ ಕಂಡರೆ ಹೆಣ್ಣು ಮಕ್ಕಳಿಗೆ ಇಷ್ಟವಂತೆ ಹೌದಾ!? (ನನ್ಗೊಮ್ಮೆ ನನ್ನ ಅಮ್ಮ ಹೀಗೆ ಹೇಳಿದ್ರು ....ಬಹುಶಃ ತಪ್ಪಿಸ್ಕೋಳ್ಳೊಕೆ ಹೇಳಿದ್ರೆನೋ..!!!?:) )

ಶ್ರಾವಣದಾ ಮಳೆ ಸುರಿದಿದೆಯಾದರೂ...... said...

ಸುಶ್ರುತ ಅವರೆ,
ಚೆನ್ನಾಗಿ ಬರೆದಿದ್ದೀರಾ, ತುಂಬ ಇಷ್ಟವಾಯ್ತು.
"ಮಂಡೆಕಸ" ಎಂಬ ತಲೆಬರಹವೇ ತೆಳು ಖುಷಿಯನಿತ್ತು ಹಾದು ಹೋಗುವಂತಿದೆ.

ಅಮರ said...

ಹೊಗ್ಲಿ ಬಿಡು ಮಾರಾಯ.... ಬರಿ ಕೂದಲು ಕಟ್ ಮಾಡಿ ದುಡ್ಡಿ ತಗೊಂಡಿದ್ದಾನೆ, ತಲೆ ಉಳ್ಸಿದ್ದಾನಲ್ಲ ಮತ್ತೆ ಸಂಪಾದನೆ ಮಾಡಿದರಾಯ್ತು... :P

ಬೆಂಗಳೂರಿನ ಸೆಲೂನ್ ನವರಿಗೆ ಹೇದ್ರಕಂಡೆ, ಇಲ್ಲಿಗೆ ಬಂದು ೩ ವರ್ಷ ಆದ್ರು ಇವತ್ತಿಗೂ ಮೈಸೂರಿಗೆ ಓಡೋದು :D

ನನ್ನ ಹೆಸರು ನವೀನ್ said...

Nice post...........

ಸುಶ್ರುತ ದೊಡ್ಡೇರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.

ಪ್ರಮೋದ್, ನಿಮ್ಮ ಡೌಟಿಗೆ ನನ್ನ ಬಳಿ ಉತ್ರ ಇಲ್ಲ. ಅದಿರ್ಲೀ, ಈಗ ನಿಮ್ಮುನ್ ಕಂಡ್ರೆ ಹೆಣ್ ಮಕ್ಳಿಗೆ ತುಂಬಾ ಇಷ್ಟಾನಾ ಅಂತ ಹೇಳಿ ಮೊದ್ಲು! ;)

chitra said...

’ಮಂಡೆಕಸ”
ಚೆನಾಗಿದ್ದು. ತಲೆ ಬಾಚಕಾದ್ರೆಲ್ಲಾ ’ ಹೇರ್ಪಾತ’ ನೋಡಿ ನಾನೂ ಎಷ್ಟೋ ಸಲ ನಿಮ್ಮಮ್ಮನ ಹಾಂಗೇ ಹೇಳ್ಕ್ಯತಾ ಇರ್ತಿ.
’ ಹೀಂಗೆ ಮಂಡೆ ಉದ್ರೀ ಉದ್ರೀ ಒಂದಿನ ಬೋಳಾಗೋಗ್ತೇನ ’ ಹೇಳಿ. ಆಗ ಎನ್ನ ಮಗಳು ಸಲಹೆ ಕೊಡ್ತ ’ ಅಮಾ, ಉದ್ರಿದ್ ಕೂದ್ಲೆಲ್ಲ ಎತ್ತಿ ಇಟ್ಗ . ಕಡೀಗೆ ವಿಗ್ ಆದ್ರೂ ಮಾಡ್ಸ್ಕ್ಯಳಲಾಗ್ತು . ನಿಂದೇ ಕೂದ್ಲಿಂದು ಹೇಳಿ ಸಮಾಧಾನ ಇರ್ತು ನೋಡು ’ ಹೇಳಿ .
ಓದಿ ಮಜಾ ಬಂತು.