Monday, July 14, 2008

ಕೀಟಾಣೂ, ಐ ಲವ್ ಯೂ!

ತಿಂಗಳು ಜೂನಿಗೆ ಕಾಲಿಡುತ್ತಿದ್ದ ಕಾಲ. ಬಂದ ಸಣ್ಣಮಳೆಯೊಂದು ಚಳಿಗೆ 'ಕೋ' ಕೊಟ್ಟು ಪರಾರಿಯಾಗಿತ್ತು. ಗಾಳಿಯೊಂದಿಗೆ ಸೇರಿಕೊಂಡ ಆ ಚಳಿ ನಮ್ಮನ್ನು ರ್‍ಯಾಗಿಂಗ್ ಮಾಡುತ್ತಿತ್ತು. ಸಂಜೆ ಏಳರ ಹೊತ್ತಿಗೆ ಆಫೀಸಿನಿಂದ ಬಂದ ನಾನೂ ನನ್ನ ರೂಂಮೇಟೂ ಪ್ಲಾಸ್ಟಿಕ್ ಕಪ್ಪಿನಲ್ಲಿ ಬೈಟೂ ಟೀ ಕುಡಿಯುತ್ತಾ, ‘ಅಂಬೊಡೆ’ ಎಂದು ರೋಡ್‌ಸೈಡ್ ಅಂಗಡಿಯವನು ಬಾಣಲಿಯಿಂದ ಎತ್ತಿಕೊಟ್ಟ ಗಟ್ಟಿಮುಟ್ಟಾದ ಬಿಸಿಬಿಸಿ ಪದಾರ್ಥವನ್ನು ಉಫು‌ಉಫು ಮಾಡಿಕೊಂಡು ಬಾಯೊಳಗಿಟ್ಟುಕೊಂಡು ಚಳಿಗೆ ಬುದ್ಧಿ ಕಲಿಸಿದ ಖುಶಿಯಲ್ಲಿ ಹಿಗ್ಗುತ್ತಿದ್ದೆವು.

ಅಂಬೊಡೆಯ ಖಾರಕ್ಕೆ ಬಾಯಿ ಸೆಳೆದುಕೊಳ್ಳುತ್ತಾ ರೂಂಮೇಟು “ದೋಸ್ತಾ, ಈ ಚಳೀಲಿ ಬಿಸಿಬಿಸಿ ಕರಿದ ಪದಾರ್ಥ ತಿನ್ನೋಕಿಂತ ಸುಖ ಪ್ರಪಂಚದಲ್ಲಿ ಮತ್ತಿನ್ನೇನೂ ಇಲ್ಲ ನೋಡು!” ಎಂದ. ಅವನು ಹಾಗೆ ಹೇಳುವುದರ ಮೂಲಕ ಮತ್ತೆರಡು ಅಂಬೊಡೆ ಆರ್ಡರ್ ಮಾಡುವುದಕ್ಕೆ ಪೀಠಿಕೆ ಹಾಕುತ್ತಿದ್ದಾನೆ ಎಂಬುದು ನನಗೆ ತಕ್ಷಣ ಹೊಳೆದರೂ “ಕರೆಕ್ಟ್ ಹೇಳ್ದೆ ನೋಡು” ಎಂದು ತಲೆಯಾಡಿಸಿದೆ. ಮತ್ತೆ, ಅಂಬೊಡೆ ರುಚಿರುಚಿಯಾಗಿತ್ತು. ಅಲ್ಲದೇ ಆ ಅಂಬೊಡೆ ಕರಿಯುತ್ತಿದ್ದ ದೊಡ್ಡ ಬಾಣಲಿಯ ಸುತ್ತಲಿನ ಸುಮಾರು ಜಾಗ ಬೆಚ್ಚಬೆಚ್ಚಗಿತ್ತು. ಆದರೂ ಉಳಿದಿದ್ದ ಚೂರುಪಾರು ಚಳಿಯನ್ನು ಓಡಿಸಲೆಂದು ರಸ್ತೆಯಲ್ಲಿ ಇಬ್ಬರು ಟೈಟ್ ಜೀನ್ಸಿನ ಹುಡುಗಿಯರು ಪಾಸಾಗುತ್ತಿದ್ದರು. ಹೀಗಾಗಿ ಚಳಿ, ಇನ್ನು ಇವರ ಬಳಿ ತನ್ನ ಆಟ ನಡೆಯುವುದಿಲ್ಲ ಎಂದರಿತು ಕಾಲಿಗೆ ಬುದ್ಧಿ ಹೇಳಲು ರೆಡಿಯಾಗಿತ್ತು.

ಚುಳ್ಳನೆ ನೋವಾಯಿತು. ಎಲ್ಲಿ ಅಂತ ಮೊದಲು ಗೊತ್ತಾದದ್ದು ಬಹುಶಃ ಕೈಗೆ. ಅದು ಹೋಗಿ ಗದ್ದವನ್ನು ಹಿಡಿದುಕೊಂಡಿತು. ಮುಖದ ಎಕ್ಸ್‌ಪ್ರೆಶನ್ನೂ ಬದಲಾಯಿತಿರಬೇಕು, ರೂಂಮೇಟು “ಏನಾಯ್ತೋ?” ಎಂದ. “ಹಲ್ಲು..” ಎಂದೆ. ಅವನಿಗೆ ವಿಷಯ ವಿಷದವಾಯಿತು. “ಮಗನೇ ಆ ಹಲ್ಲು ಹೋಗಿದೆ, ಡಾಕ್ಟರ್ ಹತ್ರ ತೋರಿಸ್ಕೊಂಡು ಬಾ ಅಂತ ಬಡ್ಕೋತಿದೀನಿ ಒಂದು ತಿಂಗ್ಳಿಂದ, ನೀನು ಹೋಗ್ಬೇಡ! ನೋಡು ಈಗ, ನೋವು ಬಂತು ಅನ್ಸುತ್ತೆ” ಬೈದ. ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾಶೆಯಾಯಿತಿರಬೇಕು. “ಸಾಕು ಬಾ ಹೋಗೋಣ” ಎಂದು, ಅಂಗಡಿಯವನಿಗೆ ದುಡ್ಡು, ಕರುಣಾಜನಕ ಸ್ಥಿತಿಯಲ್ಲಿದ್ದ ನನ್ನನ್ನು ಕರೆದುಕೊಂಡು ಮನೆಕಡೆ ಹೊರಟ.

ನಾನು ಯಾವಾಗಲೂ ಹಾಗೇ. ಬೇರೆಯವರು ಹೇಳಿದ ಮಾತನ್ನೆಲ್ಲಾ ಅಷ್ಟು ಸುಲಭವಾಗಿ ಕೇಳುವುದಿಲ್ಲ. ಅದರಲ್ಲೂ ಆರೋಗ್ಯಭಾಗ್ಯದ ವಿಷಯದಲ್ಲಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ನಾನು ಡಾಕ್ಟರ ಬಳಿಗೆ ಹೋಗುವುದಿಲ್ಲ. ನನಗೇ ಗೊತ್ತಿರುವ ಮಾತ್ರೆಗಳನ್ನು ತಿಂದುಕೊಂಡು ಹಾಯಾಗಿರುತ್ತೇನೆ. ಅಲ್ಲಿಗೆ ಹೋದಕೂಡಲೇ, ಏನೋ ಪುರುಸೊತ್ತು ಮಾಡಿಕೊಂಡು ಬಂದಿದ್ದಾರೆ ಪಾಪ ಅನ್ನುವ ಕರುಣೆಯನ್ನೂ ತೋರದೇ, ನೂರಾರು ಅಪರಿಚಿತ ಖಾಯಿಲೆಗಳ ಹೆಸರು ಹೇಳಿ ಹೆದರಿಸಿ, ‘ಹೀಗೆ ಮಾಡಿಸಿ, ಹಾಗೆ ಮಾಡಿಸಿ, ಅದಿಲ್ಲಾಂದ್ರೆ ಮುಂದೆ ತೊಂದ್ರೆ ಆಗತ್ತೆ’ ಅಂತೆಲ್ಲಾ ಹೇಳಿ, ದುಡ್ಡು ವಸೂಲಿ ಮಾಡುವ ಡಾಕ್ಟರನ್ನು ಕಂಡರೆ ಯಾರಿಗೇ ತಾನೇ ಇಷ್ಟವಾಗತ್ತೆ ಹೇಳಿ? ಆದರೂ ‘ಇಷ್ಟ’ ಪಡಬೇಕಾಗುವಂತಹ ಸಂದರ್ಭ ಸಧ್ಯದಲ್ಲೇ ನನಗೆ ಬರಲಿತ್ತು!

ಮನೆಗೆ ಬಂದವನೇ ನನಗೆ ಈ ಪರಿ ನೋವುಂಟು ಮಾಡುತ್ತಿರುವ ಹಲ್ಯಾವುದು ಅಂತ ಕನ್ನಡಿಯಲ್ಲಿ ನೋಡಿಕೊಂಡೆ. ಬೆಂಗಳೂರಿನ ರಸ್ತೆ ಕಂಡಂತಾಗಿ ಬೆಚ್ಚಿಬಿದ್ದೆ. ಕಪ್ಪು ಬಣ್ಣ. ಅಲ್ಲಲ್ಲಿ ಪಾತ್‌ಹೋಲ್‌ಗಳು. ಓಹೋ, ಈ ಗುಂಡಿಯನ್ನೆಲ್ಲಾ ಮುಚ್ಚಿಸುವಷ್ಟರಲ್ಲಿ ನನ್ನ ‘ಸರ್ಕಾರ’ ಮಗುಚಿಬೀಳುವುದಂತೂ ಗ್ಯಾರೆಂಟಿ ಅಂತ ಲೆಕ್ಕ ಹಾಕಿದೆ. ಆದರೂ ಈ ತಿಂಗಳ ಬಜೆಟ್ಟಿನಲ್ಲಿ ಒಂದೆರಡಾದರೂ ಗುಂಡಿ ತುಂಬಿಸದಿದ್ದರೆ ನಾನೆಂಬ ಪ್ರಜೆಗೆ ಊಟ ಮಾಡುವುದಕ್ಕೂ ತೊಂದರೆಯಾಗುವುದು ನಿಶ್ಚಿತವಿತ್ತು. ‘ಸಧ್ಯಕ್ಕಿರಲಿ’ ಅಂತ ಒಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿದವನೇ ನಾಳೆ ದಂತವೈದ್ಯರನ್ನು ಕಾಣುವುದೇ ಸೈ ಅಂತ ನಿರ್ಧರಿಸಿದೆ. ರೂಂಮೇಟಿಗೂ ಹೇಳಿದೆ. ಅವನು ‘ಗುಡ್ ಗುಡ್’ ಅಂದ. ಕಷ್ಟ ಪಟ್ಟು ಊಟ ಮಾಡಿ ಮಲಗಿದೆ. ನೋವಿನ ಮಧ್ಯೆಯೇ ಚೂರುಪಾರು ನಿದ್ರೆ.

* *

ಮರುದಿನ. ಆಫೀಸಿನಿಂದ ಬರುತ್ತಿದ್ದೇನೆ. ಪ್ಲಸ್ ಚಿಹ್ನೆಯ ಪಕ್ಕದ ‘ಡೆಂಟಲ್ ಕ್ಲಿನಿಕ್’ ಎಂಬ ಕೆಂಪಕ್ಷರದ ಬೋರ್ಡು ಕಂಡದ್ದೇ ಬೈಕು ನಿಲಿ ಸಿ ಒಳನುಗ್ಗಿದೆ. “ಕನ್ಸಲ್ಟೇಶನ್ನಾ ಸರ್?” ಎಂದು ತನ್ನ ಮೃದುವಾದ ದನಿಯಲ್ಲಿ ಕೇಳಿದ ರಿಸೆಪ್ಷನಿಸ್ಟು, ಒಂದು ರಿಜಿಸ್ಟರಿನಲ್ಲಿ ನನ್ನ ಹೆಸರು ನಮೂದಿಸಿಕೊಂಡು, ಕಾಯಲು ಹೇಳಿದಳು. ಸೋಫಾದಲ್ಲಿ ಕೂತು, ಟೀಪಾಯಿಯ ಮೇಲಿದ್ದ ಯಾವುದೋ ಮ್ಯಾಗಜೀನೆತ್ತಿಕೊಂಡು ಚಿತ್ರಗಳನ್ನು ನೋಡತೊಡಗಿದೆ. ನಿಶ್ಯಬ್ದ. ಆಸ್ಪತ್ರೆಯ ವಾಸನೆ. ಹತ್ತು ನಿಮಿಷದ ನಂತರ ನನಗೆ ಕರೆ ಬಂತು. ‘ಪುಶ್ ಮಿ’ ಡೋರು ತಳ್ಳಿಕೊಂಡು ಒಳಗೆ ಹೋದೆ.

ಏನನ್ನೋ ಬರೆಯುತ್ತ ಖುರ್ಚಿಯಲ್ಲಿ ಕೂತ್ತಿದ್ದ ಡಾಕ್ಟರು ತಲೆಯಿತ್ತಿದರು. ಹೇಳ್ತೀನಲ್ಲ, ಹುಡುಗಿಯರು ಅಷ್ಟೊಂದು ಚೆನ್ನಾಗಿ ಇರಬಾರದು. ಅವನೆಂಥಾ ಹುಡುಗನೇ ಇರಲೀರಿ, ಮೊದಲ ನೋಟಕ್ಕೇ, ನಾನು ಹೇಳ್ತೀನಲ್ಲ, ಮೊದಲ ನೋಟಕ್ಕೇ ಬಿದ್ದು ಹೋಗ್ಬೇಕು, ಅಷ್ಟು ಚೆನ್ನಾಗಿದ್ದರು ಆ ಡಾಕ್ಟರು. ಈ ಬೆಳದಿಂಗಳ ರಾತ್ರೀಲಿ ದೇವತೆಯೊಬ್ಬಳು ನಮ್ಮೆಡೆಗೇ ನಡೆದು ಬಂದಹಾಗೆ ನಮಗೆ ಆಗಾಗ ಕನಸು ಬೀಳುತ್ತೆ ನೋಡಿ, ಹಾಂ, ಆ ದೇವತೆಯ ಹಾಗಿದ್ದರು ಡಾಕ್ಟರು. ಬಾಬ್ ಮಾಡಿದ, ನನ್ನ ಹಲ್ಲಿನ ಬಣ್ಣದ್ದೇ ಕೂದಲು. ಪುಟ್ಟ ಫ್ರೇಮಿಲ್ಲದ ಕನ್ನಡಕ. ಅದರ ಹಿಂದೆ ಕೂದಲಿಗಿಂತ ಕಪ್ಪು ಬಣ್ಣದ ಪಿಳಿಪಿಳಿ ಕಣ್ಗಳು. ಪುಟ್ಟ ಮೂಗು. ಯು ನೋ, ಮುದ್ದು ಬರಬೇಕು, ಹಾಗೆ ಪುಟ್ಟ ಮೂಗು. ತುಟೀನಂತೂ ಕೇಳಲೇಬೇಡಿ. ನಾನು ಒಂದು ಕ್ಷಣ ಹಾಗೇ ನಿಂತುಬಿಟ್ಟೆ. ಡಾಕ್ಟರು ಮುಗುಳ್ನಕ್ಕರು. ನಾನು ಎಚ್ಚೆತ್ತುಕೊಂಡು ಮುಂದೆ ನಡೆದು, ‘ಹಲೋ ಡಾಕ್ಟರ್’ ಅಂತ ಕೈ ಚಾಚಿದೆ. ಮುಗುಳ್ನಗೆಗೆ ಮತ್ತಷ್ಟು ಪರ್ಸೆಂಟ್ ಸೇರಿಸಿ, ಮತ್ತಷ್ಟು ಚಂದ ಚಂದ ಕಾಣುತ್ತಾ, ಅವರೂ ‘ಹಲೋ’ ಅಂದು ಕೈ ಕುಲುಕಿದರು. ಆಹ್, ಈ ಡಾಕ್ಟರ ದನಿಯೂ ಎಷ್ಟು ಇನಿ..! ನಕ್ಕಾಗ ಕಂಡ ಅವರ ಹಲ್ಲನ್ನೂ ಗಮನಿಸಿದೆ. ಬಹುಶಃ ದಂತವೈದ್ಯರಾಗಲು ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅನಿಸೊತ್ತೆ- ಅವರ ಹಲ್ಲನ್ನು ಹುಣ್ಣಿಮೆ ಚಂದ್ರ ನೋಡಿದರೆ ಅವಮಾನಗೊಂಡು ನಾಳೆಯೇ ಅಮಾವಾಸ್ಯೆ ಘೋಷಿಸಬೇಕು -ಅಷ್ಟು ಬೆಳ್ಳಗಿದ್ದವು ಅವು. ಮತ್ತೆ ಕುಲುಕಿದ ಆ ಹಸ್ತ ಅದೆಷ್ಟು ಮೃದುವಾಗಿತ್ತು ಅಂದ್ರೆ, ಛೇ, ಹೋಗ್ಲಿ ಬಿಡಿ.

“ಸೋ, ವ್ಹಾಟೀಸ್ ಯುವರ್ ಪ್ರಾಬ್ಲಮ್?” ಕೇಳಿದರು. ಇಷ್ಟೊಂದು ಚಂದದ ಹುಡುಗಿಯೆದುರು ನನ್ನ ಪ್ರಾಬ್ಲಮ್ಸ್ ಹೇಳಿಕೊಳ್ಳುವುದು, ಬಾಯಿಬಿಟ್ಟು ನನ್ನ ಕೆಟ್ಟ ದಂತಪಂಕ್ತಿಯನ್ನು ತೋರಿಸುವುದು ನನಗೆ ಸರಿಯೆನಿಸಲಿಲ್ಲ. ಅವಮಾನವೆನಿಸಿತು. ಸಣ್ಣವನಿದ್ದಾಗ ಅಷ್ಟೊಂದು ಚಾಕ್ಲೇಟ್ ತಿನ್ನಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟುಕೊಂಡೆ. ಆದರೂ ಡಾಕ್ಟರು ಹಾಗೆ ಕೇಳುತ್ತಿರುವಾಗ ಏನು ಸುಳ್ಳು ಹೇಳುವುದು ಅಂತ ಹೊಳೆಯದೇ ನನ್ನ ಪ್ರಾಬ್ಲಮ್ಮುಗಳನ್ನೆಲ್ಲ ಹೇಳಿಕೊಂಡೆ. ಮತ್ತೆ ಮುಗುಳ್ನಕ್ಕ ಡಾಕ್ಟರು, “ಫೈನ್, ಕಮ್ ವಿತ್ ಮಿ. ಐ ವಿಲ್ ಚೆಕ್ ಇಟ್” ಎನ್ನುತ್ತಾ ನನ್ನನ್ನು ಒಳಗಡೆಗೆ ಕರೆದೊಯ್ದದು.

ಈ ಸಿನಿಮಾಗಳಲ್ಲಿ ತೋರಿಸುತ್ತಾರಲ್ಲ, ಆಪರೇಶನ್ ಥಿಯೇಟರ್, ಹಾಗಿದ್ದ ಕೋಣೆ. ಮಂಚದಂತಿದ್ದ ಖುರ್ಚಿಯನ್ನು ತೋರಿಸುತ್ತಾ, “ಪ್ಲೀಸ್ ಸಿಟ್” ಎಂದರು ಡಾಕ್ಟರು. ಸೆಲೂನಿನಲ್ಲಿ ಬಿಟ್ಟರೆ ಇಷ್ಟೊಳ್ಳೆ ಖುರ್ಚಿ ಇರುವುದು ದಂತವೈದ್ಯರಲ್ಲೇ ಇರಬೇಕು. ಈ ಖುರ್ಚಿಯಲ್ಲ್ಲಿ ಕೂತು ಒರಗಲು ನೋಡಿದರೆ ಇದು ನನ್ನನ್ನು ಮಲಗಿಸಿಕೊಂಡುಬಿಟ್ಟಿತು. ಇದಕ್ಕೆ ಅನೇಕ ಬಾಹುಗಳಿದ್ದವು. ಅವನ್ನೆಲ್ಲಾ ಡಾಕ್ಟರು ತಮ್ಮ ಕಡೆ ಎಳೆದುಕೊಂಡರು. ಮೇಲ್ಗಡೆ ಕೈಯಾಡಿಸಿ ಟಕ್ಕೆಂದು ಒಂದು ಸ್ವಿಚ್ಚದುಮಿದ್ದೇ ಲೈಟೊಂದು ಆನಾಗಿ ನನ್ನ ಕಣ್ಣಿಗೆ ಕುಕ್ಕಲಾರಂಭಿಸಿತು. ನಾನು ತಲೆ ಸರಿಸಿ ಡಾಕ್ಟರನ್ನೇ ನೋಡತೊಡಗಿದೆ. ಅವರೀಗ ತಮ್ಮ ಮೂಗು, ಬಾಯಿ ಮುಚ್ಚುವಂತೆ ಮಫ್ಲರಿನಂತಹ ಹಸಿರು ಬಟ್ಟೆಯೊಂದನ್ನು ಕಟ್ಟಿಕೊಂಡರು. ನನಗೀಗ ಅತೀವ ಅವಮಾನವಾಯಿತು.

ಹುಡುಗಿಯೊಬ್ಬಳು, ಅದರಲ್ಲೂ ಚಂದದ ಹುಡುಗಿಯೊಬ್ಬಳು, ನಾನು ಪ್ರಪೋಸ್ ಮಾಡಲಾ ಅಂತ ಯೋಚಿಸುತ್ತಿರುವವಳು, ನನ್ನೆಡೆಗೆ ಬಗ್ಗಿ, ನನ್ನನ್ನು ಮುಟ್ಟುವಂತಹ ಸಂದರ್ಭ... ಆಗ ಅವಳು ಈ ಹುಡುಗನ ಬಾಯಿಯಿಂದ ದುರ್ವಾಸನೆ ಬರಬಹುದೆಂದು ಬಗೆದು, ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದೆಂದರೆ... ಛೇ! ಹೀಗೇಂತ ಗೊತ್ತಿದ್ದರೆ ನಾನು ಮತ್ತೊಮ್ಮೆ ಬ್ರಶ್ ಮಾಡಿಕೊಂಡೇ ಬರುತ್ತಿರಲಿಲ್ಲವಾ ಕ್ಲಿನಿಕ್ಕಿಗೆ? “ಓಪನ್ ಯುವರ್ ಮೌತ್.. ಆ...” ಡಾಕ್ಟರು ನಿರ್ದೇಶಿಸಿದರು. ಎಲ್ಲ ಅವಮಾನಗಳನ್ನೂ ನುಂಗಿಕೊಂಡು, ಬ್ರಹ್ಮಾಂಡ ತೋರಿಸಲು ಅಣಿಯಾಗಿ ನಾನು ಬಾಯಿ ತೆರೆದೆ. ಲೈಟು ಸರಿಹೊಂದಿಸಿಕೊಂಡರು. ಟಿಣ್ ಟಿಣ್ ಶಬ್ದ ಮಾಡುತ್ತಾ ತಟ್ಟೆಯಲ್ಲಿದ್ದ ಅದ್ಯಾವುದೋ ಸ್ಟೀಲಿನ ಹತಾರವೊಂದನ್ನು ಹುಡುಕಿ ಹಿಡಿದು ನನ್ನೆಡೆಗೆ ಬಗ್ಗಿದರು. ನನ್ನ ಮುಖವನ್ನು ತಮ್ಮ ಎಡಗೈಯಲ್ಲಿ, ನಾನು ಬಾಯಿ ಮುಚ್ಚಲಾಗದಂತೆ ಹಿಡಿದುಕೊಂಡರು. ಸ್ಟೀಲಿನ ಉಪಕರಣವನ್ನು ನನ್ನ ಬಾಯೊಳಗೆ ಹಾಕಿ ಜಾಲಾಡಿದರು. ಒಂದೆರಡು ಹಲ್ಲಿಗೆ ಬಡಿದರು. ಕುಕ್ಕಿದರು. “ಓಹ್! ದೇರಾರ್ ಸೋ ಮೆನಿ ಡಿಕೇಸ್!” ಉದ್ಘರಿಸಿದರು. ನಾನು ಡಾಕ್ಟರ ಕನ್ನಡಕದ ಹಿಂದಿನ ಕಣ್ಣನ್ನೇ ನೋಡುತ್ತಿದ್ದೆ. ಮತ್ತೆ, ಅವರ ಕೆನ್ನೆ. ಈ ಪಾಲಿಶ್ ಮಾಡಿದ ಅಮೃತಶಿಲೆ ಇರುತ್ತಲ್ಲ, ಅಷ್ಟು ನುಣುಪಾಗಿತ್ತು ಅದು. ಕುಂಚದಿಂದ ಬರೆದಂತಹ ಕಡುಗಪ್ಪು ಹುಬ್ಬುಗಳ ಮಧ್ಯದಲ್ಲೊಂದು ಕಂಡೂ ಕಾಣದಷ್ಟು ಸಣ್ಣ ಕಪ್ಪು ಸ್ಟಿಕರ್. ಅವರು ಮಾತಾಡುವಾಗ ಅವರ ಮಿತಪಾರದರ್ಶಕ ಹಸಿರು ಬಟ್ಟೆಯ ಹಿಂದಿನ ತುಟಿಗಳು ಊಂ, ಚಂದ ಕಾಣುತ್ತಿದ್ದವು. ‘ಹೀಗೇ ನೀವು ನನ್ನ ಪಕ್ಕದಲ್ಲಿ, ಇಷ್ಟು ಹತ್ತಿರದಲ್ಲಿ ನಿಂತಿರ್ತೀರಾ ಅಂದ್ರೆ ಮೂವತ್ತೆರಡೂ ಹಲ್ಲು ಹಾಳು ಮಾಡಿಕೊಂಡು ಬರ್ತೀನಿ ಡಾಕ್ಟ್ರೇ’ ಅಂತ ಮನಸಿನಲ್ಲೇ ಹೇಳಿಕೊಂಡೆ. ಆದರೆ “ಓಹ್..” “ಟೂ ಬ್ಯಾಡ್..” “ಈವನ್ ದಿಸ್ ಟೀತ್” ಎಂದೆಲ್ಲ ಅವರು ಉದ್ಘರಿಸುವಾಗ ಕಟುವಾಸ್ತವ ನೆನಪಾಗಿ, ನನಗಾಗುತ್ತಿದ್ದ ಅವಮಾನವನ್ನು ಹೀಗೆ ಬಾಯಿ ಕಳೆದುಕೊಂಡು ವ್ಯಕ್ತಪಡಿಸುವುದು ಹೇಗೆಂದು ತಿಳಿಯದೇ, ಒದ್ದಾಡಿದೆ. ಸುಮಾರು ಐದು ನಿಮಿಷದ ನಂತರ, “ಓಕೆ. ಗೆಟಪ್” ಎಂದು ಹೇಳಿ, ಅಂತೂ ಆ ಸುಖಾಸನದಿಂದ ನನ್ನನ್ನೆಬ್ಬಿಸಿದರು.

ನನ್ನ ಊಹೆಯ ಪ್ರಕಾರ ಈ ಡಾಕ್ಟರುಗಳ ಹೃದಯ ತುಂಬಾ ಗಟ್ಟಿಯಿರುತ್ತದೆ. ಅಥವಾ ಅವರಿಗೆ ಹೃದಯವೇ ಇರುವುದಿಲ್ಲ. ಅವರು ಯಾರ ಮೈಯ ಯಾವ ಭಾಗವನ್ನು ಬೇಕಾದರೂ ಕತ್ತರಿಸಬಲ್ಲರು. ಅವರಿಗೆ ತರಕಾರಿಯೂ ಒಂದೇ ಮನುಷ್ಯರೂ ಒಂದೇ. ಎಲ್ಲಿಗೆ ಬೇಕಾದರೂ ಹೊಲಿಗೆ ಹಾಕಬಲ್ಲರು. ಅವರು ಏನಕ್ಕೂ ಅಂಜುವುದಿಲ್ಲ. ಸುಲಭಕ್ಕೆಲ್ಲ ಪೆಗ್ಗು ಬೀಳುವುದಿಲ್ಲ. ಮರುಳಾಗುವುದಿಲ್ಲ. ಮೃದುವಾಗುವುದಿಲ್ಲ. ಅವರಿಗೆ ತಮ್ಮದೇ ಆದ ಸ್ಪಷ್ಟ ನಿಲುವುಗಳಿರುತ್ತವೆ. ತುಂಬಾ ಗಂಭೀರ ಸ್ವಭಾವದವರು. ಹಾಗಿದ್ದಾಗ, ಸೀ, ಈಗ ಇವಳ ಮೇಲಂತೂ ನನಗೆ ಪ್ರೀತಿಯಾಗಿಬಿಟ್ಟಿದೆ, ಇನ್ನು ಒಲಿಸಿಕೊಳ್ಳುವುದು ಹೇಗೆ? ನಾನು ಚಿಂತೆಗೆ ಬಿದ್ದೆ. ನಾನು ಕ್ಲಿನಿಕ್ಕಿಗೆ ಹೊಕ್ಕ ಕ್ಷಣದಿಂದಲೂ ಇವಳ ಕಣ್ಣಿನಲ್ಲಿ ಅವಮಾನಿತ ಬೇರೆ. ನಾನು ಇವಳಿಗೆ ಒಬ್ಬ ಪೇಶೆಂಟು ಅಷ್ಟೇ. ಹಲ್ಲನ್ನೆಲ್ಲಾ ಹುಳುಕು ಹಿಡಿಸಿಕೊಂಡಿರುವ ಒಬ್ಬ ಬಾಯ್ಕುರೂಪಿ. ನನ್ನ ಪ್ರೀತಿಯನ್ನು ಇವಳು ಒಪ್ಪಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಇವಳೇನಾದರೂ ಪ್ರೀತಿಸಿದರೆ ಎಲ್ಲಾ ಮೂವತ್ತೆರಡೂ ಹಲ್ಲೂ ಸರಿಯಿರುವ, ಫಳಫಳನೆ ಹೊಳೆಯುವಂತಿರುವ, ದಿನಕ್ಕೆ ಕನಿಷ್ಟ ಐವತ್ತು ಸಲ ಬ್ರಶ್ ಮಾಡುವ ಹುಡುಗನನ್ನೇ ಪ್ರೀತಿಸುತ್ತಾಳೆ. ಬಹುಶಃ ಕೋಲ್ಗೇಟ್ ಕಂಪನಿ ಓನರ್ರಿನ ಮಗನನ್ನೇ ಮದುವೆಯಾಗಬಹುದು. ಗ್ಯಾರೆಂಟಿ. ನೋ ಡೌಟು.

ಡಾಕ್ಟರು ನನ್ನನ್ನು ಮತ್ತೆ ತಮ್ಮ ಛೇಂಬರಿಗೆ ಕರೆದೊಯ್ದರು. ತಮ್ಮ ಡ್ರಾವರಿನಿಂದ ಪುಸ್ತಕವೊಂದನ್ನು ಹೊರತೆಗೆದು ಬರೆದುಕೊಳ್ಳತೊಡಗಿದರು:

“ಯುವರ್ ನೇಮ್?”
“ಸುಶ್ರುತ”
“ಸುಶ್ರುತ? ಓಹ್.. ಇಫ್ ಯು ಡೋಂಟ್ ಮೈಂಡ್, ಕ್ಯಾನೈ ಆಸ್ಕ್ ಯೂ ಸಮ್‌ಥಿಂಗ್? ಯೂ ಆರ್ ದಿ ಸೇಮ್ ಸುಶ್ರುತ ಹೂ ರೈಟ್ ಇನ್ ಬ್ಲಾಗ್ಸ್? ಸುಶ್ರುತ ದೊಡ್ಡೇರಿ?”
“ಯೆಸ್! ನಾನೇ!” ಇಷ್ಟಗಲ ಕಣ್ಣು ಬಿಡುತ್ತಾ ನಾನು ಹೇಳಿದೆ.
“ಓಹ್! ನಾನು ನಿಮ್ಮ ಬ್ಲಾಗಿನ ದೊಡ್ಡ ಫ್ಯಾನು! ವೆರಿ ನೈಸ್ ಮೀಟಿಂಗ್ ಯೂ! ತುಂಬಾ ಚನಾಗ್ ಬರೀತೀರಾ ನೀವು..”, ಖುರ್ಚಿಯಲ್ಲಿ ಕೂತಿರಲಾಗದೇ ಜಿಗಿದಾಡುತ್ತಾ ಹೇಳಿದಳು, “ಐ ಯಾಮ್ ಸೋ ಎಕ್ಸೈಟೆಡ್!”
ನಾನೂ ಅದೇ ಆಗಿದ್ದೆ. “ಓಹ್ ಥ್ಯಾಂಕ್ಯೂ ವೆರಿ ಮಚ್! ಥ್ಯಾಂಕ್ಯೂ..!” ಏನು ಹೇಳುವುದು ಅಂತಲೇ ಗೊತ್ತಾಗದೇ ಒದ್ದಾಡಿದೆ.
“ನಿಮ್ಮ ರೀಸೆಂಟ್ ಆರ್ಟಿಕಲ್.. ..” ಅವಳು ಇನ್ನೂ ಏನೇನೋ ಹೇಳತೊಡಗಿದಳು. ನಾನಾಗಲೇ ಆಕಾಶದಲ್ಲಿದ್ದೆ.

ನೋಡಿ, ನಾನು ಈ ಅದೃಷ್ಟ ಪಿದೃಷ್ಟಗಳನ್ನೆಲ್ಲಾ ಯಾವಾಗಲೂ ನಂಬಿದವನಲ್ಲ. ಆದರೂ ಕೆಲವೊಮ್ಮೆ ನಂಬುವಂತಾಗುತ್ತದೆ. ನಾನು ಚಿಕ್ಕವನಿದ್ದಾಗ ಸಿಕ್ಕಾಪಟ್ಟೆ ಚಾಕ್ಲೇಟು ತಿನ್ನುತ್ತಿದ್ದುದು, ಕೀಟಾಣುಗಳೆಲ್ಲಾ ಸೇರಿ ನನ್ನ ಹಲ್ಲಿನ ಮೇಲೆ ದಾಳಿ ಮಾಡಿ ಕುಳಿ ತೋಡಿದ್ದು, ನಾನು ಸರಿಯಾಗಿ ಬ್ರಶ್ ಮಾಡದೇ ಇದ್ದುದು, ನಿನ್ನೆ ಅಂಬೊಡೆ ತಿಂದಿದ್ದು, ಆಗ ಅದರಲ್ಲಿದ್ದ ಕಡಲೆ ಬೇಳೆ ಒತ್ತಿ ಹಲ್ಲಿನಲ್ಲಿ ನೋವು ಕಾಣಿಸಿಕೊಂಡದ್ದು, ರೂಂಮೇಟಿನ ಸಲಹೆಗೆ ಗೌರವ ತೋರಿಸಿ ಡಾಕ್ಟರನ್ನು ನೋಡುವ ತೀರ್ಮಾನ ತೆಗೆದುಕೊಂಡದ್ದು, ಹುಡುಹುಡುಕಿಕೊಂಡು ಇದೇ ಕ್ಲಿನಿಕ್ಕಿಗೆ ಬಂದದ್ದು, ಇಲ್ಲಿ ಇದೇ ಡಾಕ್ಟರು ಇದ್ದದ್ದು, ಇವರು ನನ್ನ ಬರಹಗಳನ್ನೆಲ್ಲಾ ಓದಿದ್ದು... ಯು ನೋ, ದೇರೀಸ್ ಸಮ್‌ಥಿಂಗ್ ಯಾರ್! ಏನಿರಬಹುದು ಅದು?

“ಅದು ಏನೂ ಅಲ್ಲ” ನನಗಿಂತ ಮೊದಲು ವಾಸ್ತವಕ್ಕೆ ಬಂದ ಡಾಕ್ಟರು ಹೇಳಿದರು, “ಅದು ಕೀಟಾಣು. ಜರ್ಮ್ಸ್ ಅಷ್ಟೇ. ಐದು ಡಿಕೇಸ್ ಇವೆ. ಕ್ಯಾವಿಟಿ ಫಿಲ್ ಮಾಡಿದ್ರೆ ಆಯ್ತು; ಯು ವಿಲ್ ಬಿ ಆಲ್ರೈಟ್. ಐದು ದಿನ ಬರಬೇಕಾಗತ್ತೆ. ಒಂದೊಂದು ದಿನ ಒಂದೊಂದು ಹಲ್ಲು. ಯಾವಾಗ ಬರ್ತೀರಾ?”
“ಆಂ.. ಯಾವಾಗಾದ್ರೂ ಓಕೇ. ನಾಳೆ? ಸಂಜೆ ಆರರ ನಂತರವಾದರೆ ಉತ್ತಮ” -ಹೇಳಿದೆ.
“ಸರಿ ಹಾಗಾದ್ರೆ. ನಾಳೆ ಸಿಕ್ಸ್ ಥರ್ಟಿಗೆ ಬನ್ನಿ” -ತಮ್ಮ ಕಾರ್ಡೊಂದನ್ನು ತೆಗೆದು ಕೊಟ್ಟರು.
“ಥ್ಯಾಂಕ್ಯೂ ಡಾಕ್ಟರ್” ನಾನು ಎದ್ದು ನಿಂತು ಕುಲುಕಲಿಕ್ಕೆ ಕೈ ಚಾಚಿ ಹೇಳಿದೆ.
“ಅಯ್ಯೋ.. ಡಾಕ್ಟರ್ ಅಂತೆಲ್ಲ ಕರೀಬಾರದು ನೀವು. ಪ್ರೀತಿಯಿಂದ ಹೆಸರು ಹೇಳಿ ಕರೀರಿ. ನಿಮ್ಮನ್ನ ಮೀಟ್ ಮಾಡಿ ತುಂಬಾ ಖುಶಿಯಾಯ್ತು ನಂಗೆ..” ಈ ಸಲ ತುಂಬಾ ಹೊತ್ತು ಅವರ ಕೈ ನನ್ನ ಹಸ್ತದಲ್ಲಿತ್ತು. ಮತ್ತದು ಆಗಿನಕಿಂತ ಮೃದುವಾಗಿತ್ತು. ಅಲೆಲೆಲೆ! ‘ಪ್ರೀತಿಯಿಂದ ಕರೀರಿ’ -ಹೌದಲ್ವಾ, ಹಾಗೇ ಹೇಳಿದಳಲ್ವಾ? ಗುನುಗುನು ಹಾಡುತ್ತಾ ಹೊರಬಂದೆ. ಕಾಯುತ್ತಿದ್ದ ಪೇಶೆಂಟುಗಳಲ್ಲಿ ಕೆಲವರು ಗದ್ದದ ಮೇಲೆ ಕೈ ಇಟ್ಟುಕೊಂಡಿದ್ದರು, ಕೆಲವರ ಮುಖ ಇಷ್ಟು ದೊಡ್ಡಕೆ ಊದಿಕೊಂಡಿತ್ತು, ಕೆಲವರದು ಮುದುಕರ ಕೆನ್ನೆಯಂತೆ ಬೊಚ್ಚಾಗಿತ್ತು... ಛೇ, ಇವರಿಗೆಲ್ಲಾ ಹೋಲಿಸಿದರೆ ನನ್ನದು ಏನೂ ಅಲ್ಲ. ಐದಾರು ಕುಳಿಗಳು ಅಷ್ಟೇ. ಮುಚ್ಚಿಸಿಬಿಟ್ಟರೆ ಮುಗಿಯಿತು. ನಾನೇ ರಾಜಕುಮಾರ. ಮತ್ತೆ ಅವಳೇ ರಾಜಕುಮ್..? ಯಾ ಯಾ ಯಾ..! ಏನಂದಳು? ‘ಪ್ರೀತಿಯಿಂದ..’ ರೈಟ್? ಗೆದ್ದೆ ನಾನು.

ಕೀಟಾಣೂಗೆ ಜೈ. ಅಂಬೊಡೆ ಅಂಗಡಿಯವನಿಗೆ ಜೈ. ರೂಂಮೇಟಿಗೂ ಜೈ.

* *

“ಏಯ್ ಏನಾಯ್ತೋ? ಜೈ ಜೈ ಅಂತಿದೀಯಾ? ಯಾವುದೋ ಚಳುವಳೀಲಿ ಭಾಗವಹಿಸಿದ ಕನಸು ಬಿತ್ತಾ?” ರೂಂಮೇಟು ತಟ್ಟಿ ಎಬ್ಬಿಸಿ ಕೇಳಿದ.
ಕಣ್ಬಿಟ್ಟೆ. ಕತ್ತಲೆ. ಎದ್ದು ಕೂತು ಲೈಟ್ ಹಾಕಿದೆ. ಗದ್ದವನ್ನು ಒತ್ತಿ ನೋಡಿಕೊಂಡೆ. ಹಲ್ಲು ಇನ್ನೂ ನೋಯುತ್ತಿತ್ತು. “ಥೂ ಇದರಜ್ಜಿ! ನಾನು ನಾಳೆ ಡಾಕ್ಟರ್ ಹತ್ರ ಹೋಗಲ್ಲ ಕಣೋ. ಸುಮ್ನೇ ಎಲ್ಲಾ ಕನಸು. ಅವಳು ನನ್ನನ್ನ ಒಪ್ಪಲ್ಲ. ಯಾವ ಡಾಕ್ಟ್ರೂ ಹಲ್ಲು ಹುಳುಕಾಗಿರೋ ಪೇಶೆಂಟ್‌ನ ಲವ್ ಮಾಡಲ್ಲ. ಶಿಟ್!” ಎಂದು ಬೈದುಕೊಂಡು, ಗೂಡಿನಲ್ಲಿದ್ದ ಮತ್ತೊಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿ ನೀರು ಕುಡಿದೆ.
“ಲವ್ವಾ? ಎಲ್ಲೋ? ಯಾವ ಡಾಕ್ಟ್ರೋ? ಏನೋ ಹೇಳ್ತಿದೀಯಾ?” ರೂಂಮೇಟು ಎದ್ದು ಕೂತು ಕೇಳಿದ.
“ಏನೂ ಇಲ್ಲ” ನಾನು ಲೈಟ್ ಆಫ್ ಮಾಡಿದೆ.
“ನಿಂಗೆಲ್ಲೋ ತಲೆ ಕೆಟ್ಟಿದೆ! ಹಲ್ಲಿನ ಕೀಟಾಣು ತಲೇಗೂ ದಾಳಿ ಮಾಡಿರ್ಬೇಕು” ಅವನು ಗೊಣಗಿಕೊಂಡ. ನನಗೂ ಹಾಗೇ ಅನಿಸಿತು. ಆದರೂ ಕನಸಿನಲ್ಲಾದರೂ ಒಬ್ಬ ಇಷ್ಟು ಚಂದದ ಹುಡುಗಿ ನನ್ನನ್ನು ಮುಟ್ಟುವಂತೆ, ಇಷ್ಟ ಪಡುವಂತೆ, ಪ್ರೀತಿ ಮಾಡುವಂತೆ ಮಾಡಿದ ಕೀಟಾಣೂಗೆ ಮನಸಿನಲ್ಲೇ ಥ್ಯಾಂಕ್ಸ್ ಮತ್ತು ಲವ್ಯೂ ಹೇಳುತ್ತಾ, ನಿದ್ರೆ ಮಾಡಲು ಪ್ರಯತ್ನಿಸಿದೆ.

24 comments:

Vijaya said...

:-)
Now that you have posted this, you better start writing again soon!!
Actually travelogue bareeteeya antha expect maadtidde.

ಕನಸು said...

ಪಾಪಾ ಛೇ ನಿಜಕ್ಕೂ ನಿಮ್ಮ ಹಲ್ಲು ಅಷ್ಟೊಂದು ಹಾಳಾಗಿದೆಯಾ...
Anyway write up is too good, I enjoyed every bit of it.

chetana said...

ಜೈ... ಜೈ!!
~ ಚೇತನಾ

Harisha - ಹರೀಶ said...

ನೀ ಯಾವಾಗ ಹಾಸ್ಯ ಬರ್ಯಕ್ಕೆ ಶುರು ಮಾಡಿದ್ಯೋ??

ಕ್ಲಿನಿಕ್ ನಲ್ಲಿ ನಿನ್ನ (ನಿದ್ರಾ)ಅವಸ್ಥೆ ಕಂಡು ನಕ್ಕು ನಕ್ಕು ಸಾಕಾತು :-)

ಹಾಳಾದ ನಿದ್ದೆ... ಬೇಕು ಅಂದ್ರು ಒಂದು ಕನಸು ಬೀಳದಿಲ್ಲೇ ನಂಗೆ :-(

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
:) ಚೆನಾಗ್ ಬರದ್ದೆ.

ಹೀಗೆ ಬರೆಯಲು ಎಲ್ಲರಿಗೂ ಸಾಧ್ಯವಿಲ್ಲ. ಪುಟ್ಟ ಪುಟ್ಟ ಸನ್ನಿವೇಶಗಳನ್ನೂ ಕಣ್ಣೆದುರು ಬರುವಂತೆ ಬಿಂಬಿಸುವ ರೀತಿಗೆ ಮಾರುಹೋಗಲೇ ಬೇಕು.
ಇನ್ನೂ ಚೆನ್ನಾಗಿ ನಿದ್ರೆ ಬಂದು ಇನ್ನಷ್ಟು ಕನಸುಗಳ ತರಲಿ, ನನಸಾಗಲಿ.
ಅಷ್ಟೂ ಹಲ್ಲುಗಳು ಸರಿಯಾಗುವ ಹೊತ್ತಿಗೆ ಪ್ರೇಮ ಪಾಕವಾಗ್ಲಿ. :)

Lakshmi Shashidhar Chaitanya said...

ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾಶೆಯಾಯಿತಿರಬೇಕು.

ಆಂಬೊಡೆ ನ ಪಾರ್ಸೆಲ್ ಮಾಡಿಸಿಕೊಂಡು ಮನೆಗೆ ಬಂದು pain killer ಮಾತ್ರೆ ತಗೊಂಡು ಆಮೇಲೆ ಇಬ್ಬರೂ ತಿನ್ನಕ್ಕಾಗ್ಲಿಲ್ವೆನ್ರೀ ? ಅನ್ಯಾಯ ಪಾಪ, ಅವರಿಗೆ ನಿರಾಶೆ ಮಾಡಿಸಿದಿರಿ...

ಬೇರೆಯವರು ಹೇಳಿದ ಮಾತನ್ನೆಲ್ಲಾ ಅಷ್ಟು ಸುಲಭವಾಗಿ ಕೇಳುವುದಿಲ್ಲ.

ನನ್ನ ಹಾಗೇ ಇನ್ನೊಬ್ಬರು ಇದ್ದಾರಲ್ಲ ಸದ್ಯ...ಸಂತೋಷವಾಗಿಹೋಯ್ತು !!

ಅದರಲ್ಲೂ ಆರೋಗ್ಯಭಾಗ್ಯದ ವಿಷಯದಲ್ಲಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ನಾನು ಡಾಕ್ಟರ ಬಳಿಗೆ ಹೋಗುವುದಿಲ್ಲ.

ಆಹಾ !! ಥೇಟ್ ನನ್ನದೇ idealogy....ಆನಂದವಾಗೋಯ್ತು !

ಬೆಂಗಳೂರಿನ ರಸ್ತೆ ಕಂಡಂತಾಗಿ ಬೆಚ್ಚಿಬಿದ್ದೆ. ಕಪ್ಪು ಬಣ್ಣ. ಅಲ್ಲಲ್ಲಿ ಪಾತ್‌ಹೋಲ್‌ಗಳು. ಓಹೋ, ಈ ಗುಂಡಿಯನ್ನೆಲ್ಲಾ ಮುಚ್ಚಿಸುವಷ್ಟರಲ್ಲಿ ನನ್ನ ‘ಸರ್ಕಾರ’ ಮಗುಚಿಬೀಳುವುದಂತೂ ಗ್ಯಾರೆಂಟಿ ಅಂತ ಲೆಕ್ಕ ಹಾಕಿದೆ. ಆದರೂ ಈ ತಿಂಗಳ ಬಜೆಟ್ಟಿನಲ್ಲಿ ಒಂದೆರಡಾದರೂ ಗುಂಡಿ ತುಂಬಿಸದಿದ್ದರೆ ನಾನೆಂಬ ಪ್ರಜೆಗೆ ಊಟ ಮಾಡುವುದಕ್ಕೂ ತೊಂದರೆಯಾಗುವುದು ನಿಶ್ಚಿತವಿತ್ತು.

ಇಲ್ಲಿಂದ ಬರುವ ಎಲ್ಲ paragraphಗಳಿಗೂ ಸೇರಿಸಿ ಈ ಕಮೆಂಟು :

hilarious !!! :))

ವಿಶ್ರಾಂತಿ ಧಾಮಕ್ಕೆ ನಾನು ಭೇಟಿ ಕೊಟ್ಟಾಗ ಅಲ್ಲಿದ್ದ ಮೊಲವೊಂದಕ್ಕೆ ಐ ಲವ್ ಯೂ ಅಂದು ಅಪ್ಪ ಅಮ್ಮನ್ನ ಗಾಬರಿಗೊಳಿಸಿದ್ದೆ. ಭೇಷ್...ನೀವು ಕೀಟಾಣು ವರೆಗೂ ಹೋಗಿದ್ದೀರಿ...advancement ಅಂದ್ರೆ ಇದು ! ;)

ರಂಜನಾ ಹೆಗ್ಡೆ said...

hey super anna.

kanasa che annistu .

nange intha kanasu belade ilvalla. :(

Anonymous said...

heyyyy idu nanasAgididre eShtu chennagirthithalla? idu kanasu antha gothAdmele swlpa bejAr aaithu:(

overall hmm chennagide article!

Sushrutha Dodderi said...

vijaya madam,

bariyona bidree.. ;)
travelogueoo bariyonanthe!

ಕನಸು,

ನಾನು ಬರ್ದು ತಪ್ ಮಾಡ್ದೆ ಅನ್ನಿಸ್ತಿದೆ..! ಎಲ್ರೂ ನನ್ ಹಲ್ಲು ನಿಜಕ್ಕೂ ಇಷ್ಟೊಂದು ಹಾಳಾಗಿದೆ ಅಂದ್ಕೊಂಡು, ನನ್ನನ್ನ.. .. .. ..?!
ಪ್ಚ್.. :(

chetanakka,

ಜೈ ಜೈ ಜೈ! :D

ಹರೀಶ,

ಶುರು?! ಗೊತ್ತಿಲ್ಲೆ! ಇದ್ನ ಬರ್ದಿದ್ದು ಮೊನ್ನೆ!

ಕನ್ಸು ಬೀಳವು ಅಂದ್ರೆ ಮಿನಿಮಮ್ ಹತ್ತು ಗುಡ್ ನೈಟ್ ಎಸ್ಸೆಮ್ಮೆಸ್ ರಿಸೀವ್ ಮಾಡ್ಕ್ಯಂಡಿರವು. :D

Sushrutha Dodderi said...

ಪುಟ್ಟಕ್ಕ,

ಟೆಂಕೂ: ಹೊಗಳಿಕೆ, ಹಾರೈಕೆ ಎಲ್ಲಕ್ಕೂ. :-)

ಲಕ್ಷ್ಮೀ,

;P ಥ್ಯಾಂಕ್ಯೂ! ಕೊನೆಗೆ ಮೊಲ ನಿಮ್ ಪ್ರಪೋಸಲ್ ಒಪ್ಕೊಂಡ್ತಾ? ;)

ರಂಜ್,

ಇವತ್ ಬೀಳ್ತಡ ಆಂ? ಅಳ್ಬಾರ್ದು.. ;/

ಪುಷ್ಪ್,

ಅಲ್ಲಾ? ಎಷ್ಟ್ ಚನಾಗಿರ್ತಿತ್ತಲಾ? ;)

ತೇಜಸ್ವಿನಿ ಹೆಗಡೆ said...

ಸುಶ್ರುತ,

ಕೊನೆಯ ಪ್ಯಾರಾದವರೆಗೂ ಇದು ನಿಜ ಕಥೆ ಅಂದ್ಕಂಡೆ! ಯಾವ ಡಾಕ್ಟ್ರು? ಎಲ್ಲಿ ಕ್ಲಿನಿಕ್ ಹೇಳಿ ಎಲ್ಲಾ ನಿನ್ನ ಕೇಳವು ಹೇಳೂ ಮಾಡ್ಕಂಡಿಯಿದ್ದಿ. ಒಳ್ಳೆ ಕನಸ ಕಂಡಿ ಹೇಳ್ತ ಸಣ್ಣ ಶಾಕ್ ಕೊಟ್ಟೆ ಕೊನೆಗೆ :) ಆದ್ರೂ ಈ ನಿನ್ನ ಕನಸು ಬೇಗ ನನಸಾಗ್ಲಿ ಹೇಳಿ ಹಾರೈಸ್ತಿ. ಆದ್ರೆ ಅದ್ಕೆ ಮೊದ್ಲು ನಿನ್ನ ಹಲ್ಲು ಹಾಳಾಗ್ಲೇ ಬೇಕು ಅಲ್ದ? :)

ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಬರಹ.. ಕೊನೆಯ ಸಾಲುಗಳನ್ನು ಓದುತ್ತಲೇ ನಗೆ ಬುಗ್ಗೆಗಳನ್ನುಕ್ಕಿಸಿತು :)

Ultrafast laser said...

I feel there is no stuff in this writing, although the narration is good as usual. This article could have been made much more humorous if it had been written in second-person as oppose to first person.

I also feel, a writer shouldn't reveal all his personal stuffs. This will make the writer himself an open book. For instance, Ravi belagere is no doubtedly an excellent writer, however, his absolute openness is no more interesting. Once upon a time his openness attracted enormous number of readers, however, now people (of course with some intellect in them) think twice whether there is any new stuff in his writing nowadays.
The more you try to hide, more will be the curiosity!.

Regards
Dr.D.M.Sagar

ಮನಸ್ವಿನಿ said...

Nice. Mastaagide.

Lakshmi Shashidhar Chaitanya said...

ಮೊಲ ಕತ್ತೆತ್ತಿ ಏನೋ ಹೇಳಲು ಬಂದಿತ್ತು ಸುಶ್ರುತ...ನಾನು ಹಾಗೆ ಹೇಳಿದ್ದೇ ತಡ, ಎಳೆದುಕೊಂಡು ಬಂದುಬಿಟ್ಟರು ಅಪ್ಪ ಅಮ್ಮ...ಅದೇನು ಹೇಳಿತೋ ನನಗೆ ಕೇಳಲು ಆಗಲೇ ಇಲ್ಲ..:( ಆಧೀ ಅಧೂರಿ ಪ್ರೇಮ್ ಕಹಾನಿ ! :(

Pramod P T said...

ಇನ್ನೇನು ಆ ಡೆಂಟಲ್ ಕ್ಲಿನಿಕ್ ನ ಅಡ್ರೆಸ್ಸ್ ನ ಕೇಳ್ಬೇಕು ಅನ್ನೋವಾಗ್ಲೆ......climax ಎಲ್ಲಾ ಬದಲಾಯಿಸಿಬಿಟ್ಟಿತು.
(ನನ್ಗೇನೂ ಹಲ್ಲು ನೋವಿಲ್ಲಾ..:))

Sushrutha Dodderi said...

ತೇಜಕ್ಕಯ್ಯ,

ಹಿಹಿ.. ಎಂತ ಮಾಡ್ಲಿ ಹೇಳು.. ;/
ಥ್ಯಾಂಕ್ಸ್, ಹಾರೈಕೆಗೆ. :)

DMS,

Thanks for your honest comment. Don't know, whether we should expect 'some stuff' in every article? ಇದೊಂದು ಹಾಸ್ಯ ಬರಹ. If it had made you laugh, it meant that its purpose has been served.

ಉಳಿದಂತೆ.. I do agree with your point that one should not disclose everything about him with everybody.. ಮತ್ತೆ ನಂಗೆ ಆ ಬಗ್ಗೆ ಎಚ್ಚರಿಕೆ ಇದೆ. And here, 'personal' ಅಂತ ಹೇಳೋಂಥದ್ದೇನಿಲ್ಲ ಅನ್ನಿಸ್ತು, ಅದ್ಕೇ ಬರೆದೆ. ನಾವು ಪೇಚಿಗೆ ಒಳಗಾದ ಸನ್ನಿವೇಶಗಳನ್ನು ಹೇಳಿಕೊಂಡಾಗ ಅದು ಮತ್ತೊಬ್ಬರಿಗೆ ಹಾಸ್ಯವಾಗತ್ತೆ ಅಷ್ಟೇ.

Sushrutha Dodderi said...

ಮನಸ್ವಿನಿ,

Thanks! :-)

lakshmi,

ಛೇ! Pity..! :c

ಪ್ರಮೋದು,

ಹಲ್ನೋವಿಲ್ಲಾಂದ್ರೂ ಹಲ್ಡಾಕ್ಟ್ರತ್ರ ಹೋಗೋ ಪ್ಲಾನಾ? ಬ್ಯಾಡ್ ಬಾಯ್.. ;)

Sree said...

ಹ್ಹೆ ಹ್ಹೆ ಹ್ಹೆ! ಸಖತ್ ಮಜಾ ಬಂತು! ಮತ್ತೆ ತಮ್ಮ ಕಥೆ ಹೇಳೋ ಸ್ಟೈಲು ಎಂದಿನಂತೆ ಸೂಪರ್! ಈ ಫೋಸ್ಟ್‌ನಲ್ಲಿ ಏನಿಲ್ಲ ಅಂದ್ರೂ ಒಂದು ೨೦ ಸಾಲು ತುಂಬಾ ತುಂಬಾ ಚೆನ್ನಾಗಿವೆ! ಮಿಕ್ಕ ಸಾಲುಗಳು ತುಂಬಾ ಚೆನ್ನಾಗಿವೆ!:)) ಆಗೊಂದು ಈಗೊಂದು ಆಂಬೊಡೆಯ ಹಾಗೆ ಈ ಥರದ್ ಬರಹಗಳು ಇದ್ರೆ ಚೆನ್ನಾಗೇ ಇರುತ್ತೆ, ಅಂಥದ್ದೇನ್ ತೊಂದ್ರೆ ಇಲ್ಲ ಅಂತ ಅನ್ನಿಸುತ್ತೆ(ಮೇಲೆ ಇರೋ ಒಂದು ಕಾಮೆಂಟ್ ನೋಡಿದಾಗ ಅನ್ನಿಸಿದ್ದು)

mruganayanee said...

ಖರ್ಮ ಕಾಂಡ ಮೊದ್ಲು dental clinicಗೆ ಹೋಗಿ ಬಾ.. ಇಲ್ಲಾ ಅಂದ್ರೆ ಎಲ್ಲಾ ಹಲ್ಲು ಕೀಳ್ಬೇಕಾಗತ್ತೆ. ಆಮೇಲೆ ಆ ಕನಸಿನ ಹುಡುಗಿ ಅಲ್ಲ ಯಾವ ಹುಡುಗಿನೂ ಸಿಗಲ್ಲಾ... by the way ಚಂದ ಇದ್ದು... liked it

ಚಿತ್ರಾ said...

ಸುಶ್ರುತ,

ಪಾಪ , ನಿಮ್ಮ ಅವಸ್ಥೆ ಓದಿ ಜೋರಾಗಿ ನಕ್ಕಿದ್ದಕ್ಕೆ, ನನ್ನ ಪಕ್ಕದವಳು ನನ್ನನ್ನೇ ವಿಚಿತ್ರವಾಗಿ ನೋಡಿದಳು!
ಅಲ್ಲಾ , ಯಾವುದಕ್ಕೂ , ಒಂದು ಲೇಡಿ ಡೆಂಟಿಸ್ಟ್ ಹತ್ರ ಹೋಗಿ ಬಂದು ನೋಡಿ. ಬರೀ ಕನಸು ಕಾಣ್ತಾ ಇದ್ರೆ ಎಂತದೂ ಆಗದಿಲ್ಲೆ ! ಪ್ರಯತ್ನ ಇದ್ದರೆ ಫಲ ಅಲ್ದ?
ಅರ್ಧ ಪ್ರಯತ್ನ ಹೆಂಗೂ ಆಯ್ದಲಾ ( ಹಲ್ಲು ಹಾಳು ಮಾಡ್ಖ್ಯಳದು , ) ಇನ್ನರ್ಧ ಪ್ರಯತ್ನಾನೂ ಮಾಡಿ ನೋಡದಪ ! ಯಾರಿಗೆ ಗೊತ್ತಿದ್ದು , ಲಾಟರಿ ಹೊಡಿಯ ಚಾನ್ಸೂ ಇರ್ತು . ಏನು ಹೇಳ್ತ್ರಿ?

Sushrutha Dodderi said...

ಶ್ರೀಮಾತಾ,

ಥ್ಯಾಂಕ್ಯೂ! ನಂಗೂ ಹಂಗೇ ಅನ್ನಿಸ್ತಪ್ಪ..

ಮೃಗನಯನೀ,

ಏಯ್ ಹೆದ್ರಿಸ್ಬೇಡ್ವೇ.. ಹೋಗ್ಬರ್ತೀನಿ ಡಾಕ್ಟ್ರ ಹತ್ರ..

ಚಿತ್ರಾ,

ಲಾಟರಿ ಹೊಡಿತು ಅಂಬ್ಯಾ? ಅಂದ್ರೆ ಕನಸು ನನಸಾದಂಗೆ! ಹಹ್! ಟ್ರೈ ಮಾಡಿ ನೋಡ್ತಿ.. :-)

Archu said...

hey..sush..
chanda barediddi..odta irovaaga..kadego attige sikki bitleno ansittu ;)

che..kanasendu tiLidu koncha bejaaru :(

kanasu nanasaagirtidre eshtu chennagirtittu ..alwa..


neenu bareda lekhanada dhaati chennagide..upamegaLantoo super!!

bengaLoorina raste honda, ninna hallu :jai jai jai..

cheers,
archana

Unknown said...

Thanks for very good write up Sush,
Waiting on next one from you.

Sushrutha Dodderi said...

archu,

ಥ್ಯಾಂಕ್ಸ್, ಅತ್ಗೆ ಇಷ್ಟ್ ಬೇಗ ಎಲ್ಲ ಸಿಕ್ಕಿ ಬೀಳಲ್ಲ ಬಿಡಮ್ಮಾ.. ;-)

praveen,

Thanks man..