Thursday, November 27, 2008

ಮೋಡ ಕವಿದ ವಾತಾವರಣ

‘ಸ್ಥಳೀಯ ಹವಾ ಮುನ್ಸೂಚನೆಯಂತೆ, ಬೆಂಗಳೂರು ಮತ್ತು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ’ -ಊರಲ್ಲಿದ್ದಾಗ, ರೇಡಿಯೋ-ಟೀವಿಗಳ ಹವಾ ವರ್ತಮಾನದಲ್ಲಿ ಪ್ರತಿದಿನ ಕೇಳಿಬರುತ್ತಿದ್ದ ಸಾಲು. ‘ಇದೇನು ಬೆಂಗಳೂರಿನಲ್ಲಿ ಯಾವಾಗಲೂ ಮೋಡ ಕವಿದ ವಾತಾವರಣ ಇರುತ್ತದಾ?’ ಅಂತ ನಮಗೆ ಆಶ್ಚರ್ಯವಾಗುತ್ತಿತ್ತು. ಆದರೆ ನಾನು ಬೆಂಗಳೂರಿಗೆ ಬರುವಷ್ಟರಲ್ಲಿ ಬೆಂಗಳೂರು ‘ಉದ್ಯಾನನಗರಿ’ಯೆಂಬ ಬಿರುದಿಗೆ ತದ್ವಿರುದ್ಧವಾಗಿ ತನ್ನ ಹಸಿರು ಬಟ್ಟೆಯನ್ನೆಲ್ಲಾ ಬಿಚ್ಚಿಹಾಕಲು ಶುರು ಮಾಡಿತ್ತು. ಹಾಗಾಗಿ ನಾನು ಇಂಟರ್‌ವ್ಯೂಗೆಂದು ಕಂಪನಿ-ಕಂಪನಿ ಅಲೆಯುವಾಗ, ಬಿಸಿಲೆಂಬುದು ಇಂಟರ್‌ವ್ಯೂವರುಗಳಿಗಿಂತ ಭಯಾನಕವಾಗುವ ಹಂತಕ್ಕೆ ಮುಟ್ಟಿತ್ತು. ಈಗಂತೂ ಹಸಿರು ನೋಡಲು ಕಬ್ಬನ್ ಪಾರ್ಕು-ಲಾಲ್‌ಭಾಗುಗಳಿಗೇ ಹೋಗಬೇಕು ಎಂಬಂತಹ ಪರಿಸ್ಥಿತಿ. ಇಲ್ಲಿ ನನ್ನ ಆಫೀಸಿನ ಬಳಿ ರೇಸ್‌ಕೋರ್ಸ್ ರಸ್ತೆ ಅಗಲೀಕರಣ ಅಂತ ಅಷ್ಟೂ ಮರಗಳನ್ನು ಉರುಳಿಸಿದ್ದಾರೆ. ಅದನ್ನು ಮುಗಿಸಿ, ಪ್ಯಾಲೇಸ್ ರಸ್ತೆಯ ಕಡೆ ಹೋಗುತ್ತಿವೆ ಬುಲ್ಡೋಜರ್-ಜೆಸಿಬಿಗಳು. ಸಂಕಟವಾಗುತ್ತದೆ.

ಆದರೆ ಅದೇನೋ ತಮಿಳುನಾಡಿನಲ್ಲಿ ಡಿಪ್ರೆಶನ್ನಂತೆ, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸೂರ್ಯರಶ್ಮಿ ನಾಪತ್ತೆ! ‘ವ್ಹಾಟ್ ಎ ರೋಮಾಂಟಿಕ್ ವೆದರ್..! ಊಟೀಲಿ ಇದ್ದಹಾಗಿದೆ’ ಎನ್ನುವ ಫ್ರೆಂಡು, ‘ಸುಶ್ರುತ್, ಈ ವೆದರಲ್ಲಿ ಕೆಲಸ ಮಾಡಬಾರ್ದು ಕಣ್ರೀ.. ಒಂದು ಕ್ಯಾಂಪ್‌ಫೈರ್ ಹಾಕ್ಕೊಂಡು ಚಿಲ್ಲಾಗಿ ಕೂತು ವ್ಹಿಸ್ಕಿ ಹಾಕ್ಬೇಕು!’ ಎನ್ನುವ ಕಲೀಗು, ಒಂದೇ ಒಂದು ಮೆಸೇಜು ಸಹ ಕಳುಹಿಸದೇ ಜೀವ ತಿನ್ನುವ ಹುಡುಗಿ... ಛೇ! ಲೈಫು!

ಐಟಿ ಇಂಡಸ್ಟ್ರಿ ಕುಸಿತ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಎಂಪ್ಲಾಯ್‌ಮೆಂಟ್ ರೇಶಿಯೋ ಕುಸಿತ, ಶೇರ್‌ಮಾರ್ಕೆಟ್ ಕುಸಿತ -ಇತ್ಯಾದಿ ಕುಸಿತಗಳ್ಯಾವುವೂ ನಮ್ಮ ಲೀಗಲ್ ಇಂಡಸ್ಟ್ರಿಯ ಮೇಲೆ ಯಾವುದೇ ಪರಿಣಾಮ ಉಂಟುಮಾಡದಿದ್ದರೂ, ಈ ಇದೇನೋ ‘ವಾಯುಭಾರ ಕುಸಿತ’ ಮಾತ್ರ ನನ್ನೆಲ್ಲಾ ಕಲೀಗುಗಳನ್ನೂ ನಿರುತ್ಸಾಹಿಗಳನ್ನಾಗಿ ಮಾಡಿಬಿಟ್ಟಿದೆ! ಬೆಳಗ್ಗೆಯಿಂದ ಏನೆಂದರೆ ಏನೂ ಕೆಲಸ ಮಾಡದೇ ಕುಳಿತಿದ್ದೇವೆ ಎಲ್ಲರೂ. ಇದ್ದುದರಲ್ಲೇ ನಮ್ಮನ್ನು ಬೆಚ್ಚಗಿಟ್ಟಿರುವುದು ಎಂದರೆ, ಮುಂಬಯಿಯಲ್ಲಿ ಆಗಿರುವ ಸರಣಿ ಬಾಂಬ್ ಸ್ಪೋಟಗಳು. ನ್ಯೂಸ್ ಛಾನೆಲ್ ವರದಿಗಾರರ ಮೇಲಂತೂ ಒಂದು ತರಹದ ‘ಮೋದ ಕವಿದ ವಾತಾವರಣ’ ಸೃಷ್ಟಿಯಾಗಿಬಿಟ್ಟಿದೆ. ಸಿ‌ಎನ್ನೆನ್ ಐಬಿ‌ಎನ್, ಎನ್‌ಡಿಟಿವಿ ಮುಂತಾದ ಛಾನೆಲ್ಲುಗಳು ತಾಜ್, ಒಬೇರಾಯ್, ನಾರಿಮನ್ ಪಾಯಿಂಟುಗಳ ಪಕ್ಕದಲ್ಲಿ ನಿಂತು ಲೈವ್ ವರದಿ ಮಾಡುತ್ತಿವೆ: ‘ನಹೀ ಬತಾ ಸಕ್ತೇ.. ಒಳಗಡೆ ಎಷ್ಟು ಜನ ಇದಾರೆ ಅಂತ ಹೇಳಕ್ಕೇ ಆಗಲ್ಲ’.. ‘ಅದೋ ಸ್ಪೆಶಲ್ ಸ್ಕ್ವಾಡ್ ಬಂತು’.. ‘ಹಾಂ, ಗುಂಡಿನ ಶಬ್ದ ಕೇಳಿಸ್ತಿದೆಯಾ? ಕ್ಯಾನ್ಯೂ ಹಿಯರ್?’.. ‘ಇಗೋ, ಇದೀಗ ಎನ್‌ಕೌಂಟರ್ ಶುರು ಆಗ್ತಿದೆ’.. ‘ತಾಜ್ ಹೋಟೆಲಿನಲ್ಲಿ ಸಿಕ್ಕಿಹಾಕಿಕೊಂಡಿರೋರು ಒಬ್ಬರು ನಂಗೆ ಎಸ್ಸೆಮ್ಮೆಸ್ ಮಾಡಿದಾರೆ’... ಎಲ್ಲರೂ ಉಸಿರು ಬಿಗಿಹಿಡಿದು ನೋಡುತ್ತಿದ್ದೇವೆ.. ಅಬ್ಬ! ಈ ಟೆರರಿಸಂ ಮತ್ತು ಬಾಂಬ್ ಸ್ಪೋಟಗಳು ನಮ್ಮ ದೈನಂದಿನ ಜೀವನಕ್ಕೆ ಎಂತಹ ಒಂದು ‘ಥ್ರಿಲ್’ ತಂದುಬಿಟ್ಟವು! ಎಲ್ಲಿ ಯಾವಾಗ ಸಿಡಿಯೊತ್ತೆ ಅಂತಲೇ ಹೇಳಕ್ಕಾಗಲ್ಲ! ಕೋರ್ಟಿಗೆ ಹೋಗಿರೋ ಕಲೀಗು ವಾಪಸು ಬರ್ತಾನೋ ಇಲ್ವೋ ಯಾರಿಗ್ಗೊತ್ತು? ಇವತ್ತು ನಾನೇ ಆಫೀಸಿನಿಂದ ಮನೆಗೆ ವಾಪಸು ಹೋಗ್ತೀನೋ ಇಲ್ವೋ? ಹಹ್!

ಆದರೆ ಇನ್ನು ಸ್ವಲ್ಪ ಕಾಲಕ್ಕೆ ಇದೂ ನಮಗೆ ಅಭ್ಯಾಸವಾಗಿಬಿಡಬಹುದೇನೋ? ಮುಂಬಯಿಯ ಗೆಳತಿಯೊಬ್ಬಳಿಗೆ ಪಿಂಗ್ ಮಾಡಿ ‘ಪರಿಸ್ಥಿತಿ ಹೇಗಿದೆ ನೀನಿರೋ ಜಾಗದಲ್ಲಿ?’ ಅಂತ ಕೇಳಿದೆ. ‘ಯಾಸ್ ಎವೆರಿಡೇ! ನಾರ್ಮಲ್ ಇದೆ. ನಾನು ಆಫೀಸಿನಲ್ಲಿದೀನಿ. ನನ್ ಗಂಡನೂ ಆಫೀಸಿಗೆ ಹೋಗಿದಾನೆ. ಸ್ಕೂಲುಗಳಿಗೆ ರಜೆ ಕೊಟ್ಟಿರೋದ್ರಿಂದ ಕೆಲ ಮಕ್ಕಳು ಹೊರಗೆ ಆಡ್ತಿರೋದು ಇಲ್ಲಿ ಕಿಟಕಿಯಿಂದ ಕಾಣ್ತಿದೆ. ನೀವೆಲ್ಲಾ ನೋಡ್ತಿರೋ ಹಾಗೆ ನಾನೂ ಟೀವಿಯಲ್ಲಿ ನೋಡ್ತಿದೀನಿ’ ಅಂದಳು. ಅಚ್ಚರಿಯಾಯಿತು. ‘ಛೇ! ಮತ್ತೆ ನಾನ್ಯಾಕೆ ಬೆಳಗ್ಗೆಯಿಂದ ಒಳ್ಳೇ ಸಸ್ಪೆನ್ಸ್ ಪಿಚ್ಚರ್ ನೋಡಿದಹಾಗೆ ನ್ಯೂಸ್ ನೋಡುತ್ತಿದ್ದೇನೆ?’ ಅನ್ನಿಸಿ, ಸಿ‌ಎನ್ನೆನ್ ವೆಬ್‌ಸೈಟ್‌ನ ವಿಂಡೋವನ್ನು ತಟ್ಟನೆ ಕ್ಲೋಸ್ ಮಾಡಿದೆ.

ಮತ್ತೆ ಮೋಡ ಕವಿಯಿತು. ಕೊಂಚ ಎದ್ದು ಹೋಗಿ, ಪಕ್ಕದ ಕಿಟಕಿಯ ಗಾಜಿನ ಮೇಲೆ ನಿಂತಿರುವ ಮಳೆನೀರ ಹನಿಗಳ ಮೂಲಕ ಹೊರಗೆ ನೋಡಿದರೆ, ಕಪ್ಪು ಜಾಕೆಟ್ಟನ್ನು ಬೆಚ್ಚಗೆ ಹೊದ್ದುಕೊಂಡಿರುವ ಪಕ್ಕದ ಆಫೀಸಿನ ಹುಡುಗಿ ತನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವುದು ಕಾಣುತ್ತಿದೆ. ತಂಡಿಯಾಗಿರುವ ಅದರ ಎಂಜಿನ್ ಏನೆಂದರೂ ಸ್ಟಾರ್ಟ್ ಆಗುತ್ತಿಲ್ಲ. ‘ಕೆಳಗಿಳಿದು ಹೋಗಿ ಸಹಾಯ ಮಾಡಲಾ?’ ಅಂದುಕೊಳ್ಳುತ್ತೇನೆ. ಮತ್ತೆ, ‘ಮೈಯೆಲ್ಲಾ ಒದ್ದೆಯಾಗುತ್ತದೆ, ಬೇಡ’ ಅಂತ ಸುಮ್ಮನಾಗುತ್ತೇನೆ.

ವಾಪಸು ಬಂದು ಕಂಪ್ಯೂಟರ್ ಮುಂದೆ ಕೂತರೆ, ಯಾರೋ ಪಿಂಗ್ ಮಾಡುತ್ತಾರೆ: ‘ಶೇಮ್‌ಲೆಸ್ ಯಾರ್.. ಈ ಯುಪಿ‌ಎ ಸರ್ಕಾರ, ನಮ್ಮ ಪೋಲೀಸ್ ವ್ಯವಸ್ಥೆ.....’ ನಾನು ಸೈನ್‌ಔಟ್ ಆಗುತ್ತೇನೆ. ಗೂಗಲ್ ರೀಡರ್ ಹೊಸ ಬ್ಲಾಗ್ ಅಪ್‌ಡೇಟ್‌ಗಳನ್ನು ತೋರಿಸುತ್ತಿದೆ. ಅಲ್ಲೂ ಶುರುವಾಗಿಬಿಟ್ಟಿದೆ: ‘ಪ್ರತೀಕಾರ’, ‘ಪ್ರತಿಧಾಳಿ’, ‘ಪ್ರತಿಭಟನೆ’, ‘ಈ ಮುಸ್ಲಿಮರಿದ್ದಾರಲ್ಲಾ...’ ಚರ್ಚೆಗಳು. ವಾದಗಳು. ಬೆಚ್ಚಗೆ, ಅವರವರ ಆಫೀಸು-ಮನೆಗಳಲ್ಲಿ ಕೂತು.

ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ.

15 comments:

Lakshmi S said...

ಬೆಳಿಗ್ಗಿಂದ invisible ಆಗಿ ಬ್ಲಾಗ್ ಅಪ್ಡೇಟ್ ಮಾಡ್ತಿದ್ರಾ ಸಾರ್ ? ಭೇಷ್! ಬೆಂಗಳೂರಿನಲ್ಲಿ ದಿನಾ ಮೋಡ ಕವಿಯಲಪ್ಪಾ ದೇವ್ರೆ...ಬ್ಲಾಗ್ ಗಳು ಅಪ್ಡೇಟಾಗ್ಲಿ :)

ಆದ್ರೂ...ಹುಡುಗಿಗೆ ಹೋಗಿ ಹೆಲ್ಪ್ ಮಾಡ್ಬೇಕಿತ್ತು ನೀವು.

ಕಟ್ಟೆ ಶಂಕ್ರ said...

ಏನೇ ಆಗ್ಲಿ ಸುಶ್ರುತ, ಈಗ ನಡೆದಿರುವ ವಿದ್ಯಮಾನಕ್ಕೆ "ಛೆ, ಇಷ್ಟೇನಾ?" ಅನ್ನಲಾಗದು.
ಅಲ್ವೇ ?
ಕಟ್ಟೆ ಶಂಕ್ರ

ಜಿ ಎನ್ ಮೋಹನ್ said...

ಚೆನ್ನಾಗಿದೆ
ಮಾಧ್ಯಮವೇ ಜಗತ್ತಿನ ಏಕೈಕ ಕಿಟಕಿಯಾಗಿಬಿಟ್ಟರೆ ಹೇಗಿರುತ್ತದೆ ಎಂಬುದರ ಒಳ್ಳೆಯ ವಿವರಣೆ
ಒಂದು ಒಳ್ಳೆ ಲಲಿತ ಪ್ರಬಂಧ ಓದಿದಂತೆಯೂ ಆಯಿತು
-ಜಿ ಎನ್ ಮೋಹನ್

SHREE (ಶ್ರೀ) said...

ಹೌದು ಹೌದು, ಎಲ್ಲಾ ಕಡೆ ಮೋಡ ಕವಿದಿದೆ...
:-( :-( :-(

Parisarapremi said...

ನಾನು ಶಾಲೆಯಲ್ಲಿದ್ದಾಗ ಬೆಂಗಳೂರಿನಲ್ಲಿದ್ದ ಚಳಿಯ ನೆನಪು ನನಗೆ ಮುಳ್ಳಯ್ಯನಗಿರಿಯಲ್ಲಿ ಬೆಟ್ಟದ ಮೇಲೆ ಕ್ಯಾಂಪ್ ಮಾಡುವಾಗ ಆಯಿತು. ಈಗ ಅಷ್ಟು ಚಳಿಯಿಲ್ಲ ಬಿಡಿ. ಈ ವರ್ಷ ಸ್ವಲ್ಪ ಇದೆ ಅಷ್ಟೆ.

ವಿ.ಸೂ.: ಕೊನೆಯ ವಾಕ್ಯ ಯಾಕೋ ಮೋಟುಗೋಡೆ ವಾಕ್ಯ ಇದ್ದ ಹಾಗಿದೆ.

Vijaya said...

ee moda kavida vaatavaranadalli naanu ivattu raja haaki maneli bechchage hum hain raahi pyaar ke cinema nodde :-)
scooty nalli mostly petrol illa ansutte!

shreeshum said...

ಒಳ್ಳೆಯ ಟಾಂಗ್ ಎಲ್ಲರಿಗೂ, ಅದೂ ಒಂದಿಷ್ಟೇ ಅಕ್ಷರಗಳಲ್ಲಿ.

ಶ್ರೀನಿಧಿ.ಡಿ.ಎಸ್ said...

ಹೇಯ್, ಚನಾಗಿದ್ದು. ನಾನೂ ಬರಿಯಕು.. ಇರ್ಲಿ,

Ultrafast laser said...

ಹುಡುಗಿ ಗೆ ಹೆಲ್ಪ್ ಮಾಡಿದರೆ ನೀನು ಒದ್ದೆ ಆಗುತ್ತಿ ಎಂಬ ಭಯ ಪೀಡಿತ ಮುಂಜಾಗ್ರತಾ ಕ್ರಮ ಹಾಗು ಅದರಲ್ಲಿ ಅಡಗಿರುವ ಲಕ್ಷ್ಯಾರ್ಥ, ಭಾವಾರ್ಥ, ಸೂಚ್ಯಾರ್ಥ, ಹಾಗು ವಾಕ್ಯಾರ್ಥ ಇಷ್ಟವಾಯಿತು.
ಕೊನೆಗೆ, ಸಹಾಯ ಮಾಡಿ ಒದ್ದೆಯಾಗುವುದು ಮೇಲೋ ಅಥವಾ ಸಹಾಯ ಮಾಡದೆ ಒಣಗಿಕೊಂಡಿರುವುದೇ ಮೇಲೋ ನಿರ್ಧರಿಸುವ ಕಾಲ ಬೇಗ ಸಂನಿಹಿತವಾಗಲಿ ಎಂದು ಆಶಿಸುತ್ತಾ..! DMSagar

Ramesh BV (ಉನ್ಮುಖಿ) said...

ಯ್ಯಾರೇ ಕೂಗಾಡಲಿ.. ಊರೇ ಹೋರಾಡಲಿ.. ನಿನ್ನ ನೆಮ್ಮದಿಗೆ ಭಂಗವಿಲ್ಲ.. ಎಮ್ಮೇ ನಿನಗೆ ಸಾಟಿಯಿಲ್ಲ.. ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೇ ಮುಂದೇ ಸಾಗುವೇ.. ಅರೆ ಹುಂಯ್ ಅರೆ ಹುಂಯ್ ಅರೆ ಹುಂಯ್ ಅರೆ ಹುಂಯ್ ಟುರ್ರ್ರಾಆಆಅ..

ಇದು ಸರಿಹೋಗೋ ವಿಷ್ಯ ಅಲ್ಲಪ್ಪೋ..

Btw,
ಸುಶ್ರುತ, ಹೆಲ್ಪ್ ಮಾಡೋದಲ್ವಾ..:)

Suma Udupa said...

Nimma blog na soochyartha artha vaaytu. Navella namma manealle kulitu santaapa suchisuvavaru ... male yallu, bisilallu help mado biddi namge beega barali ...
-Thanks
Suma.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಪಾಪಜ್ಜಿ ಶುಶ್ರುತಣ್ಣ..ಹುಡುಗಿಗೆ ಹೆಲ್ಪ್ ಮಾಡೋ..!
-ಚಿತ್ರಾ

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ಸುಶ್ರುತ ದೊಡ್ಡೇರಿ said...

ಸ್ಪಂದಿಸಿದ, ಅರ್ಥ ಮಾಡಿಕೊಂಡ ಎಲ್ಲರಿಗೂ ಧನ್ಯವಾದ.

Harish - ಹರೀಶ said...

ಸೂಪರ್....