Monday, July 20, 2009

ಒಳಪೆಡ್ಲು

ಸೈಕಲ್ ಹೊಡೆಯುವುದು ನೀವಂದುಕೊಂಡಷ್ಟೇನು ಸಲೀಸಲ್ಲ
ಮೊದಲು ಟಯರ್ ಓಡಿಸುವುದನ್ನು ಕಲಿಯಬೇಕು
ಆ ಕಪ್ಪು ಸಣಕಲು ರಿಂಗಿನ ಬೆನ್ನು ಅಂಡುಗಳಿಗೆ ತಟ್ಟುತ್ತ
ಮೈಲಿ ದೂರದವರೆಗೆ ಅದರೊಂದಿಗೇ ಓಡಬೇಕು
ಸಣ್ಣ ಕಲ್ಲು-ಗುಂಡಿಗಳನ್ನು ಹಾರಿ ದಾಟುವಾಗ ಅದು
ದಿಕ್ಕು ತಪ್ಪದಂತೆ ಕಾಯಬೇಕು

ಆಮೇಲೆ ಅಣ್ಣನಿಂದಲೋ ಪಕ್ಕದ ಮನೆಯ
ಗೆಳೆಯನಿಂದಲೋ ಸೈಕಲ್ಲನ್ನು ಬೇಡಿ ಪಡೆದು
ಎಡಗೈಯಿಂದ ಹ್ಯಾಂಡಲು, ಬಲಗೈಯಿಂದ ಸೀಟು ಹಿಡಿದು
ವಾಲಿಸಿದರೂ ಬೀಳಿಸದಂತೆ ನಡೆಸುವುದನ್ನು ಕಲಿಯಬೇಕು.
ನಂತರ ಜಗದೆಲ್ಲ ದೇವರಿಂದ ಅಷ್ಟಿಷ್ಟೇ
ಧೈರ್ಯವನ್ನು ಪ್ರಾರ್ಥಿಸಿ ಪಡೆದು ನಿಧಾನವಾಗಿ
ಎಡಗಾಲನ್ನೆತ್ತಿ ಎಡ ಪೆಡಲಿನ ಮೇಲೆ ಇಟ್ಟು
ಜೀಕಿ ಜೀಕಿ ತೇಲಬೇಕು

ಬ್ಯಾಲೆನ್ಸ್ ತಪ್ಪಿ ಬಿದ್ದಾಗ ಗೆಳೆಯರು ಕೇಕೆ
ಹಾಕಿ ನಗುವುದನ್ನು ಸಹಿಸಿಕೊಳ್ಳಬೇಕು
ಆದ ಮಳ್ಳಂಡೆ ಗಾಯಕ್ಕೆ ಅಮ್ಮ ಕೊಬ್ರಿ ಎಣ್ಣೆ
ಹಚ್ಚಿಯಾದಮೇಲೆ, ಬಲಗಾಲನ್ನು ನಾಯಿ
ಉಚ್ಚೆ ಹೊಯ್ಯುವಾಗ ಮಾಡುವಂತೆ ಎತ್ತಿ,
ಬಂಪರಿನೊಳತೂರಿಸಿ ಬಲ ಪೆಡಲಿನ ಮೇಲಿಟ್ಟು-

ಎದುರು ಏನಾಗುತ್ತಿದೆ ಗಮನಿಸಬೇಕು.
ದಾರಿ ತಪ್ಪಿದ ಮಗನಂತೆ ಮಟ್ಟಿಯ
ಕಡೆ ಹೋಗುತ್ತಿರುವ ಸೈಕಲ್‌ರಾಯನಿಗೆ
ಬುದ್ಧಿ ಹೇಳಬೇಕು.

ಒಳಪೆಡ್ಲು ಕಲಿತ ಮೇಲಿನ್ನು ಬಂಪರು.
ಸೀಟಿನ ಮೂತಿಯಿಂದ ಹೊರಟ ಈ ಸರಳಿನ ಮೇಲಿಂದ
ಕಾಲನ್ನು ಬಳಸಿ ಪೆಡಲಿನ ಮೇಲಿಟ್ಟು
ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಕುಂಡೆಯನ್ನು
ಜರುಗಿಸುತ್ತಾ ತುಳಿಯಬೇಕು.
ಹಿಂಗಾಲಿಗೆ ಬಡಿಯುವ ಚೈನಿನ ಆಯಿಲ್ಲಿನ
ಕಪ್ಪನ್ನು ಸೀಮೆ ಎಣ್ಣೆ ಬಳಸಿ ತೊಳೆಯಬೇಕು

ಬಂಪರಿನಿಂದ ಸೀಟು ಬರೀ ಅರ್ಧ ಫೀಟು
ಕೂತುಬಿಟ್ಟರೆ ಸಾಕು, ಜಗವೇ ಡಿಫೀಟು
ಎಲ್ಲರಿಗಿಂತ ಎತ್ತರದಲ್ಲಿ ತಾನೇ ಕೂತಂತೆ.
ಆದರೂ, ಇಲ್ಲೂ ಟೆನ್ಷನ್ ತಪ್ಪಿದ್ದಲ್ಲ.
ಎಷ್ಟೇ ಸುಸ್ತಾದರೂ ತುಳಿಯುತ್ತಲೇ ಇರಬೇಕು
ಎದುರು ಸೀತಕ್ಕ ಅಡ್ಡ ಬಂದರೆ ಟ್ರಿಣ್‌ಟ್ರಿಣ್ ಮಾಡಬೇಕು.
ಕಾಲಿಗೆ ನೆಲ ಸಿಕ್ಕದ ಸವಾರನ ಅವಸ್ಥೆ ಕಂಡು
ಹೆದರಿ ಆಕೆ ಪಕ್ಕಕ್ಕೆ ಸರಿದರೆ ಬಚಾವು,
ಇಲ್ಲದಿದ್ದರೆ ಅಪ್ಪನಿಗೆ ಹೋಗುವ ಕಂಪ್ಲೇಂಟಿಗೆ,
ದಾಸಾಳ ಬರ್ಲಿನ ಚುರುಕ್ ಏಟಿಗೆ ತಯಾರಾಗಬೇಕು.

ಸೈಕಲ್ ಕಲಿಯುವುದು ನೀವಂದುಕೊಂಡಷ್ಟೇನು ಸುಲಭವಲ್ಲ.
ಇನ್ನು,
ಬದುಕಿನಲ್ಲಿ ಮೇಲೆ ಬರುವ ಬಗ್ಗೆ ಕವನ ಬರೆಯಬೇಕಿಲ್ಲ.

22 comments:

VENU VINOD said...

ಸೈಕಲ್ ಕಲಿತ ನಂತರ ಜಗತ್ತೇ ಗೆದ್ದ ಭಾವವೂ ಒಂದಿರುತ್ತದೆ...
ಸರಳ ಹಾಗೂ ಸೈಕಲ್ ಕಲಿಯುವವರ ಒಳತೋಟಿ ತೆರೆಯುವ ಮತ್ತು ನಾನೂ ಸೈಕಲ್ ಕಲಿತ ಪ್ರಸಂಗ ನೆನಪಿಸಿ ಸಾಲುಗಳಿಗೆ ವಂದನೆ

ಸುಪ್ತದೀಪ್ತಿ said...

ಆಹಾ ಒಳಪೆಡ್ಲಿನ ಆತಂಕಗಳೇ, ನಿಮಗೆ ನಮೋ ನಮೋ.
ಈಯೆಲ್ಲ ತೊಂದರೆ ತಾಪತ್ರಯಗಳು ಬೇಡೆಂತಲೇ ನಾ ತುಳಿಯಲಿಲ್ಲ ಸೈಕಲ್ಲು!

ಅನಂತ said...

:)

umesh desai said...

ಸುಶ್ರುತ ನಿಜವೇ ಆ ಅನುಭವ ಕೊಡುವ ಖುಷಿಯೇ ಬೇರೆ...ನನ್ನಂತಹವರಿಗಿಲ್ಲ ಆ ಭಾಗ್ಯ ಏನು ಮಾಡುವುದು ಮನೆಯಲ್ಲಿ ನಮ್ಮನ್ನು ಬಹಳ ಜೋಪಾನದಿಂದ ಬೆಳೆಸಿದ್ರು

ರಂಜನಾ ಹೆಗ್ಡೆ said...

ಹಾಃ ಹಾಃ ಸುಪರ್. ಒಂದ್ ಸಾರಿ ಸೈಕಲ್ ಕಲಿತಿದ್ದೆಲ್ಲ ನೆನಪಿಗೆ ಬಂತು... ನವ್ಯ ಕವಿತೆ.....

Archu said...

ಸುಶ್ ,
ಖುಷಿ ನೀಡಿದ ಸಾಲುಗಳು
"ಸೈಕಲ್ ಕಲಿಯುವುದು ನೀವಂದುಕೊಂಡಷ್ಟೇನು ಸುಲಭವಲ್ಲ.
ಇನ್ನು,
ಬದುಕಿನಲ್ಲಿ ಮೇಲೆ ಬರುವ ಬಗ್ಗೆ ಕವನ ಬರೆಯಬೇಕಿಲ್ಲ."

shivu.k said...

ಸುಶ್ರುತಾ,

ಬಂಪರನ್ನು ನಾವೆಲ್ಲಾ ಬಾರ್ ಅನ್ನುತ್ತಿದ್ದೆವು. ಮೊದಲ ಸಲ ಬಾರ್ ಮೇಲೆ ಕುಳಿತ[ಆಗ ಸೀಟಿನ ಮೇಲೆ ಕುಳಿತರೆ ಕಾಲು ಪೆಡ್ಲಿಗೆ ತಾಕುತ್ತಿರಲಿಲ್ಲ.]ಸಂಭ್ರಮದಲ್ಲಿ ಇಳೀಜಾರಿನಲ್ಲಿ ವೇಗವಾಗಿ ತೇಲಿಹೋಗುತ್ತಾ, ನನಗರಿವಿಲ್ಲದಂತೆ ಮುಂದಿನ ಚಕ್ರ ಚರಂಡಿ ಕಡೆಗೆ ತಿರುಗಿ....ಮರುಕ್ಷಣದಲ್ಲಿ "ದಡ್" ಆಷ್ಟೇ ಕೇಳಿಸಿದ್ದು. ನಾನು ಹಾರಿಬಿದ್ದದ್ದಷ್ಟೇ ಗೊತ್ತು. ಎರಡು ಮಂಡಿಗಳಿಗೆ ಮತ್ತು ಮೊಳಕೈಗಳಿಗೆ ಇಡ್ಲಿಯಗಲ ಗಾಯಾ....ರಕ್ತ.......ಎಲ್ಲಾ ನೆನಪಾಯಿತು..

ಇದು ಪದ್ಯವೋ ಗದ್ಯವೋ...ಆದರೂ ಸೊಗಸಾಗಿದೆ...

ಧನ್ಯವಾದಗಳು.

Vijaya said...

adakkeppa naanu ladies cycle nalli kaltiddu :-)

ಚಿತ್ರಾ said...

ಸುಶ್ರುತ,
' Learn cycling in simple steps '
ಹಂತ ಹಂತವಾಗಿ ಸೈಕಲ್ ಹೊಡೆಯುವುದನ್ನು ಕಲಿಸಿದ್ದಕ್ಕೆ ಧನ್ಯವಾದಗಳು. ಸೈಕಲ್ ನ ಗಾಲಿಯನ್ನು ತಟ್ಟುತ್ತಾ ಓಡುವ ಮೊದಲ ಸ್ಟೆಪ್ ಬಿಟ್ಟು ಉಳಿದೆಲ್ಲ ಹಂತಗಳನ್ನು ಪಾರು ಮಾಡಿದ್ದೇನೆ .ಹಾ, ಬೇಗ ಸೈಕಲ್ ಕಲಿಯುವ ಭರದಲ್ಲಿ , ಏರು ಹತ್ತಿ , ಸೈಕಲ್ ಮೇಲೆ ಕುಳಿತು ಬ್ರೇಕ್ ಬಿಟ್ಟಿದ್ದೇ , ಇಳುಕಲಿನಲ್ಲಿ ಜೋರಾಗಿ ಓಡಿದ ಸೈಕಲ್ ನ ಸ್ಪೀಡಿಗೆ , ಏನು ಮಾಡಬೇಕೆಂದು ತೋಚದೆ , ಜೋರಾಗಿ ಕಿರುಚಿದ್ದು...ಅಲ್ಲಿ ಬಸ್ ಸ್ಟಾಪ್ ನಲ್ಲ್ಲಿ ನಿಂತಿದ್ದ ಒಂದೆರಡು ಜನ ನನಗೇನೋ ಆಗಿಹೋಯ್ತು ಎಂದು ಗಾಬರಿಯಾಗಿ ನನ್ನ ಸೈಕಲ್ ನ ಹಿಂದೆ ಓಡಿಬಂದಿದ್ದು .... ಎಲ್ಲ ನೆನಪಾಯಿತು !
ಏನೆಂದರೂ ಮೊದಲ ಬಾರಿಗೆ ಸೈಕಲ್ ಸೀಟಿನ ಮೇಲೆ ಕುಳಿತಾಗ ಏನೋ ಸಾಧಿಸಿದ ಹೆಮ್ಮೆಯಾ ಭಾವ .. ಮರೆಯಲಾಗದ್ದು!
ಪದ್ಯ- ಗದ್ಯ ರೂಪದ ಸರಳ ಸುಂದರ ಬರಹ !

Parisarapremi said...

adakke pa naanu Vijaya kalitu bitta cycle alli kaltiddu!!! ;-) ;-) ;-)

Anonymous said...

simply superb :-)

Dr. Kanada Narahari (Kanada Raghava) said...

BAHALA KAALA CYCLE KALIYALU YATNISI SOTU KADEGONDU DINA MANCHIKERIYA DODDADONDU ILUKALINALLI CYCLE HATTI EMBHATTARA VEGADALLI BIDDU CONTROLL TAPPI, MOOLE MURIDUKONDIDDE. NENAPISIDDAKKE THANKS. OLLE BHAAVASPHURANE.

ಸಿಂಧು sindhu said...

ಸು,

ಇಂಟರೆಸ್ಟಿಂಗಾಗಿದೆ. ನಮ್ಮೂರ ಕಡೆಯ ಎಲ್ಲ ಕಲಿಯುವ ಸೈಕಲ್ಲುಗಳೂ ಏನೇ ಮಾಡಿದರೂ ಮಟ್ಟಿಯ ಕಡೆಗೇ ಹೋಗುವುದು ಮಾತ್ರ ವಿಚಿತ್ರ ಆದರೂ ನಿಜ :)

ಪ್ರತೀ ಪ್ಯಾರಾದ ಸಾಲುಗಳೂ ಮೊದಲಲ್ಲಿ ವಾಚ್ಯವೆನಿಸಿದರೂ ಕೊನೆಯ ಸಾಲುಗಳು ಎಲ್ಲವನ್ನೂ ಪದ್ಯದ ಅಂಕಣಕ್ಕೆ ಎಳೆದು ತಂದು ಬಿಟ್ಟಿವೆ. ಒಂದು ರೀತಿಯ ಸೈಕಲ್ ಬ್ಯಾಲನ್ಸೇ ಅದು.

ಚೆನಾಗಿದೆ. ಖುಶಿ ಕೊಡ್ತು.

ಇನ್ನು ಮೇಲೆ ಬರುವ ಕವನ ಬರೆಯದೆ ಇದ್ದರೂ ಪರ್ವಾಗಿಲ್ಲ.. ಮುಂದೆ ಹೋಗುವ ಕವಿತೆಗಳನ್ನ ಬರೆಯುತ್ತಿರು.. :)

ಪ್ರೀತಿಯಿಂದ
ಅಕ್ಕ

sunaath said...

ಇಷ್ಟೆಲ್ಲಾ ಕಲಿತಾದ ಮೇಲೂ
ಬ್ರೇಕ್ ಹಚ್ಚುವದನ್ನೇ ಕಲಿತಿರಲಿಲ್ಲನಾನು.
ಗುಂಡಿಯಲ್ಲಿ ಬಿದ್ದು ಮಂಡಿ ಕೆತ್ತಿದ ಮೇಲೇ
ಮಂಡೆಗೆ ಹೊಳೆದದ್ದು ಸೈಕಲ್ ಕಲಿಕೆ!

ಸಮುದ್ಯತಾ said...

nice one... I really enjoyed reading it.. made me nostalgic

ಹೆಸರು said...

ಓದಿ ಖುಷಿಯಾಯಿತು.
Cycle ಹೊಡೆಯಲು ಬರದವರಿಗೆ ತರಬೇತಿ ಕೊಡುವಾಗ ಅನುಭವಿಗಳಿಂದ ಏನೆಲ್ಲಾ ಸಲಹೆ ಸೂಚನೆಗಳು ಸಿಗುತ್ತವೋ ಅವನ್ನೆಲ್ಲಾ ಸುಂದರವಾಗಿ ಹಣೆದಿದ್ದೀರಿ.

ಅಂದಹಾಗೆ ನನಗಿನ್ನೂ Cycle ಹೊಡೆಯೋಕೇ ಬರೊಲ್ಲ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಸುಶ್- ಲವಲವಿಕೆ, ತತ್ವಜ್ಞಾನ, ತಿಳುವಳಿಕೆ ಎಲ್ಲ ಇದೆ ಈ ಕವಿತೆಯಂಥಾ ಕವಿತೆಯಲ್ಲಿ.. ಒಂಥರಾsss ಇಷ್ಟ ಆತು :-)

Annapoorna Daithota said...

ಹ್ಹ ಹ್ಹ ಹ್ಹ ಹ್ಹ ಹ್ಹಾ !! ಓದ್ತಾ ಓದ್ತಾ, ಬಾಯಿ ಅದಾಗೇ ಬಿಟ್ಕೊಂಡು, ನಗು ಬರೀ ತುಟಿಗಳ ಮೇಲೆ ಉಳೀಲಿಲ್ಲ, ತುಟಿ ಮೀರಿ, ಪಕ್ಕದ ಮನೆಗೂ ಕೇಳಿಸ್ತು :) :) :)

ಸಖತ್ತಾಗಿದೆ, ಕಣ್ಣಿಗೆ ಕಟ್ಟಿದಂತಿದೆ ಸೀತಕ್ಕ ಅಡ್ಡ ಬರೋದು, ಅಪ್ಪ ದಾಸವಾಳದ ಬರ್ಲು ತಗೊಳ್ಳೋದು, ಎಲ್ಲಾನೂ :)

btw, ನಾನು ಕ್ಯಾರಿಯರ್ ಮೇಲೆ ಕೂತ್ಕೊಂಡು ಕಲ್ತಿದ್ದು ಸೈಕಲ್, ಇಷ್ಟು ಕಷ್ಟ ಆಗಿಲ್ಲ ನಂಗೆ :D

ಪಾಚು-ಪ್ರಪಂಚ said...

ಸುಶ್ರುತ,

ಹಳೆಯ ನೆನಪೆಲ್ಲ ಒಮ್ಮೆಗೇ ಬಂದು ಹೋದ ಹಂಗಾತು...ಈ ಎಲ್ಲ ಸಂಕಷ್ಟ ಅನುಭವಿಸಿ, ಸೀಟ್ ಹತ್ತಿ ಕುಳಿತಾಗ ಏನೋ ಗೆದ್ದ ಅನುಭವ...! ತುಂಬಾ ಇಷ್ಟ ಆತು. Good one

ಏಕಾಂತ said...

ಹನ್ನೊಂದು ವರ್ಷಗಳ ಹಿಂದಾದ ಮೊಣಕಾಲಿನ ಗಾಯದ ಕಲೆ ಇನ್ನೂ ಮಾಸಿಲ್ಲ. ಅದರ ನೆನಪೂ ಕೂಡಾ.‘ಅಟ್ಟೆ ಕಾಲು’ ಹಾಕಿ ಸೈಕಲ್ ತುಳಿಯುತ್ತಾ ಕೆಳಗಿನ ಮನೆಯ ತೋಟದಿಂದ ಎಳನೀರು ಕದ್ದ ಮುದ್ದಾದ ಆ ದಿನಗಳು ಇನ್ನೆಲ್ಲಿ?! ಮತ್ತಷ್ಟು ಬರೆಯಿರಿ...

Sushrutha Dodderi said...

ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರತಿಕ್ರಿಯೆಗಳು ಕವನದ ಮೌಲ್ಯ ಹೆಚ್ಚಿಸುತ್ತವೆ.

Anonymous said...

tumba kushi atu sushruta blog nodi, tumba neatagi iddu. adru ola pedalu hodya kastakkinta dasvala barlina ete jasti kasta anta anstu.
Good job, keep it up.

Pradeepanna.