Saturday, September 05, 2009

ನೆನೆ ನೆನೆ ಈ ದಿನ

ನಾವು ಹೈಸ್ಕೂಲಿಂದ ಕಾಲೇಜಿಗೆ ಸೇರ್ತಿದ್ದ ಹಾಗೇ ಮೇಷ್ಟ್ರುಗಳೆಲ್ಲ ಲೆಕ್ಚರರುಗಳಾಗಿಬಿಟ್ಟಿದ್ದರು. ಆದರೆ ನಮಗೆ ಮಾತ್ರ ಇನ್ನೂ ಅವರನ್ನು ಲೆಕ್ಚರರ್ ಅಂತ ಕರೀಲಿಕ್ಕೆ ಮನಸು ಒಪ್ತಿರ್ಲಿಲ್ಲ. ಹಿಂದಿನವರ ಹಾಗೆ ಇವರೂ ಕಪ್ಪು ಬೋರ್ಡಿನ ಪಕ್ಕ ನಿಂತು ಏನೇನೋ ಹೇಳಿ ನಮ್ಮಂತ ಮುಗ್ಧ ಹುಡುಗರನ್ನು ಮರುಳು ಮಾಡಿ ನಿದ್ದೆಗೆ ನೂಕುತಿದ್ದರು. ಹಾಗಿದ್ದಾಗ, ನಾವು ಮಾತ್ರ ‘ಶಾಲೆ’ ಅಂತ ಹೋಗಲು ಶುರು ಮಾಡಿದಾಗಿಂದ ಸ್ಟುಡೆಂಟ್ಸು; ಇವರು ಹೇಗೆ ಮೇಷ್ಟ್ರಿಂದ ಹೆಡ್ ಮೇಷ್ಟ್ರಾಗಿ ಲೆಕ್ಚರರ್ರಾಗಿ ಪ್ರೊಫೆಸರ್ರಾಗಿ ಪ್ರಿನ್ಸಿಪಾಲಾಗಿ ಏನೇನೆಲ್ಲಾ ಆಗೋದು? ಓಹೋ, ಅದಕ್ಕೇ ನಾವು ಅವರನ್ನು ಮೇಷ್ಟ್ರು ಅಂತಲೇ ಕನ್ಸಿಡರ್ ಮಾಡ್ತಿದ್ವು. ವಯಸ್ಸಾಗಿದ್ದಕ್ಕೋ ಕಾಲ ಕಾಲದಿಂದ ಬೋಧಿಸುತ್ತಲೇ ಬಂದಿದ್ದಕ್ಕೋ ಏನೋ, ಅವರಿಗೂ ಬೋಧನೆಯಲ್ಲಿ ಅಂತಹ ಉತ್ಸಾಹ ಇರಲಿಲ್ಲ. ನಾವು ಕಪಿಚೇಷ್ಟೆ ಮಾಡಿದಾಗೆಲ್ಲ ಅವರು ಎಚ್ಚರಿಸ್ತಿದ್ರು: "ನೀವೀಗ ಮೊದ್ಲಿನಂಗೆ ಹೈಸ್ಕೂಲ್ ಸ್ಟುಡೆಂಟ್ಸ್ ಅಲ್ಲ, ಕಾಲೇಜು ಇದು. ಸೀರಿಯಸ್ಸಾಗಿರೋದನ್ನ ಕಲೀರಿ" ಅಂತ. ನಿದ್ದೇನಲ್ಲೂ ಸೀರಿಯಸ್‌ನೆಸ್ಸು ಅಂದ್ರೆ ಹ್ಯಾಗೆ ಸಾರ್? ಆದರೆ, ಹೈಸ್ಕೂಲಿನವರಿಗೂ ಇವರಿಗೂ ಇರ್ತಿದ್ದ ಒಂದೇ ವ್ಯತ್ಯಾಸ ಅಂದ್ರೆ, ಅವರು ಬರೀ ಕನ್ನಡದಲ್ಲಿ ಪಾಠ ಮಾಡೋರು; ಇವರು ಇಂಗ್ಲೀಷ್ ಬಳಸೋರು. ಹಳೆಯ ಜನ್ಮದಲ್ಲಿ ಮಾಡಿದ್ದ ಕರ್ಮಗಳಿಂದಾಗಿ ಇಂಗ್ಲೀಷು ನಮಗೆ ಅರ್ಥ ಆಗ್ತಿರಲಿಲ್ಲ. ಹೀಗಾಗಿ ನಿದ್ದೆ ಇನ್ನೂ ಸಲೀಸಾಗಿ ಬರ್ತಿತ್ತು.

ನನ್ನ ಹಾಗೇ ನನ್ನ ಸಹಪಾಠಿಗಳೂ ಸಹ ಸೈನ್ಸು ಸಿಗಲಿಲ್ಲ ಅಂತ ಕಾಮರ್ಸಿಗೆ ಸೇರಿದವರೇ ಆಗಿದ್ರು. ಸೇರಿದ ಮೇಲೆ, "ಇದೇ ಅರ್ಥ ಆಗ್ತಿಲ್ಲ, ಇನ್ನು ಅದು ಸಿಕ್ಕಿದ್ರೆ ಅಧೋಗತಿ" ಅಂತ ನಮಗೆ ನಾವೇ ಸಮಾಧಾನಾನೂ ಮಾಡ್ಕೊಂಡಿದ್ವಿ. ಓದು, ಪರೀಕ್ಷೆ, ಗುರುನಿಷ್ಠೆ, ಭವಿಷ್ಯ ಇತ್ಯಾದಿಯೆಲ್ಲವನ್ನೂ ಕಸದ ತೊಟ್ಟಿಯೊಳಗಿನ ಕಾಗದದ ಚೂರಿನೊಂದಿಗೆ ಮಲಗಿಸಿ ನಾವೂ ನಿರರ್ಗಳ ತೂಕಡಿಸುತ್ತಿದ್ದೆವು, ಎಚ್ಚರದಲ್ಲಿ ಕೀಟಲೆ ಮಾಡ್ತಾ ಇದ್ದೆವು. ಇಂತಹ ನಮ್ಮನ್ನು ನಿದ್ದೆಯಿಂದ ಬಡಿದೆಬ್ಬಿಸಿದ್ದು ಅಲೋಕ್ ಎಂಬ ಲೆಕ್ಚರರು.

ಬೋರು ಹೊಡೆಸ್ತಿದ್ದ ಸಿನಿಮಾದಲ್ಲಿ ಇದ್ದಕ್ಕಿದ್ದಂಗೆ ಹೀರೋ ಎಂಟ್ರಿ ಆಗೋ ಹಾಗೆ ಈ ಪಾರ್ಟ್-ಟೈಮ್ ಲೆಕ್ಚರರು ಬಂದದ್ದು ಕಾಲೇಜು ಶುರುವಾಗಿ ಹದಿನೈದು ದಿವಸಗಳ ನಂತರ. ಕಾಮರ್ಸ್ ವಿಷಯವನ್ನು ತೆಗೆದುಕೊಳ್ಳುತ್ತಿದ್ದೀನಿ ಅಂತ ಹೇಳಿದ ಅವರನ್ನು ನಾವು ಪಿಳಿಪಿಳಿ ಕಣ್ಣಿಂದ ನೋಡಿದೆವು. ಈ ಲೆಕ್ಚರರು ಇನ್ನೂ ಯುವಕರಿದ್ದರು, ಜೀನ್ಸ್ ಹಾಕಿಕೊಂಡಿದ್ದರು, ರಾಷ್ಟ್ರಗೀತೆ ಹಾಡುವವರಂತೆ ಬರೀ ಬ್ಲಾಕ್‌ಬೋರ್ಡಿನ ಬಳಿ ಅಟೆನ್ಷನ್ ಪೊಸಿಷನ್ನಿನಲ್ಲಿ ನಿಂತಿರದೆ ಇಡೀ ಕ್ಲಾಸ್‌ರೂಮ್ ತುಂಬಾ ಚಕಚಕನೆ ಓಡಾಡುತ್ತಿದ್ದರು. ಅವರ ಕಂಠದ ಮೋಡಿ ಎಂಥದಿತ್ತೆಂದರೆ, ನಮ್ಮಂಥಾ ನಮಗೂ ಇಂಗ್ಲೀಷು ಭಾಷೆಯ ಪಾಠ ಅರ್ಥವಾಗತೊಡಗಿ, ನಮ್ಮ ತಲೆಯ ಬಗ್ಗೆಯೇ ನಮಗೆ ಅಚ್ಚರಿ ಮೂಡಿ, ತೂಕಡಿಕೆಯಲ್ಲದ ಕಾರಣವೊಂದಕ್ಕೆ ಮೊದಲ ಬಾರಿ ತಲೆದೂಗುವಂತಾಯಿತು.

ಅಲೋಕ್, ನಮಗೆ ಸುಲಭವಾಗಿ ಅರ್ಥವಾಗಲಿ ಎಂಬುದ್ಧೇಶದಿಂದ ಪಾಠವನ್ನೆಲ್ಲಾ ಉದಾಹರಣೆಗಳ ಮೂಲಕವೇ ತೂಗಿಸುತ್ತಿದ್ದರು. ಒಂದು ದಿನ, ನಾವೆಲ್ಲ ವಿದ್ಯಾರ್ಥಿಗಳನ್ನೂ ಪಾರ್ಟ್‌ನರುಗಳನ್ನಾಗಿ ಮಾಡಿ ಒಂದು ಕಾಲ್ಪನಿಕ ಪಾರ್ಟ್‌ನರ್‌ಶಿಪ್ ಫರ್ಮ್ ಸ್ಥಾಪಿಸಿಸಿದರು. ನಾವೆಲ್ಲಾ ತಲಾ ಹತ್ತು ರೂಪಾಯಿ ಹಾಕಿದೆವು. ಹಾಗೆ ಕೂಡಿಸಿದ ಹಣ ಒಟ್ಟಾಗಿ ಸಂಸ್ಥೆಯ ‘ಕ್ಯಾಪಿಟಲ್’ ಆಯಿತು. ನಂತರ ಆ ಹಣದಿಂದ ನಾವು ಹೊಸದೊಂದು ಉದ್ಯೋಗ ಶುರು ಮಾಡುವುದು ಅಂತ ತೀರ್ಮಾನಿಸಿದೆವು. ನಮಗೆಲ್ಲ ಮನೆಯಲ್ಲಿ ಮಾಡುವುದನ್ನು ನೋಡಿ ಗೊತ್ತಿದ್ದ ಹಲಸಿನಕಾಯಿ ಹಪ್ಪಳ ಮತ್ತು ಸಂಡಿಗೆ ಮಾಡುವುದೇ ಆ ಉದ್ಯೋಗ! ಕ್ಯಾಪಿಟಲ್ಲಿಗೆ ಹಣ ಕೊಟ್ಟಿರದ ಸಹಪಾಠಿಯೊಬ್ಬ ತಾನು ಹಲಸಿನಕಾಯಿಯನ್ನೇ ತನ್ನ ‘ಶೇರ್’ ಆಗಿ ತರುವುದಾಗಿ ಹೇಳಿದ. ಮರುದಿನ ಆತ ಬ್ಯಾಗ್ ಬದಲು ದೊಡ್ಡದೆರಡು ಹಲಿಸಿನಕಾಯಿ ಹೆಗಲಿನ ಮೇಲೆ ಹೊತ್ತುಕೊಂಡು ಬರುವ ಅಮೋಘ ದೃಶ್ಯವನ್ನು ಕಾರಿಡಾರಿನಲ್ಲಿ ನಿಂತ ನಾವೆಲ್ಲ ಕಣ್ತುಂಬ ನೋಡಿದೆವು. ಬೇರೆ ಡಿಪಾರ್ಟ್‌ಮೆಂಟಿನ ಹುಡುಗರು ಚಪ್ಪಾಳೆ ತಟ್ಟಿ ನಗಾಡಿದರು.

ನಂತರ ಆ ಹಲಸಿನಕಾಯಿ ಕಡಿದು, ಮೈಕೈಯೆಲ್ಲ ಅಂಟು ಮಾಡಿಕೊಳ್ಳುತ್ತ ನಾವು ತೊಳೆ ಬಿಡಿಸಿದೆವು. ಕಾಲೇಜಿನ ಕ್ಯಾಂಟೀನ್ ಮ್ಯಾನೇಜರ್ ಸಮ್ಮತಿ ಪಡೆದು, ಅಡುಗೆ ಭಟ್ಟನಿಗೆ ಸ್ವಲ್ಪ ದುಡ್ಡು ಕೊಟ್ಟು, ಬಿಡಿಸಿದ ತೊಳೆಗಳನ್ನು ಗ್ರೈಂಡರಿಗೆ ಹಾಕಿ, ಉಪ್ಪು-ಹುಳಿ-ಖಾರ ಎಲ್ಲಾ ಬೆರೆಸಿ ಬೀಸಿದ್ದಾಯ್ತು. ಹದ ಹೇಳಲು ಹೋಗಿ ದೊಡ್ಡಸ್ತಿಕೆ ತೋರಿದ ಕೆಲ ಹುಡುಗರನ್ನು ಹುಡುಗಿಯರು ಬೆದರಿಸಿ ಓಡಿಸಿದರು. ಹಾಗೇ ಅಕ್ಕಿಯಿಂದ ಸಂಡಿಗೆ ಹಿಟ್ಟೂ ತಯಾರಿಸಿದೆವು. ನಂತರ ನಾಲ್ಕು ಮೀಟರ್ ಬಟ್ಟೆ ಖರೀದಿಸಿ ತಂದು, ತಯಾರಾದ ಖಾದ್ಯವನ್ನು ಹುಡುಗರೂ-ಹುಡುಗಿಯರೂ ಸೇರಿ, ಬಾಳೆಲೆಯಲ್ಲಿ ತಟ್ಟಿ ತಟ್ಟಿ ಆ ಬಟ್ಟೆಯ ಮೇಲೆ ಒಣಗಿಸಿದೆವು. ಒಣಗುವವರೆಗೆ ಕಾಗೆ, ನಾಯಿಗಳು ಅವನ್ನು ಹೊತ್ತೊಯ್ಯದಂತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಪೀರಿಯಡ್ಡಿಗೊಬ್ಬರಂತೆ ಹೊತ್ತುಕೊಂಡೆವು. ಎರಡು ದಿನದಲ್ಲಿ ಹಪ್ಪಳ ಒಣಗಿ ತಯಾರಾಯಿತು.

ಸರಿ, ಈಗ ತಯಾರಾದ ಉತ್ಪನ್ನಗಳನ್ನು ಮಾರಾಟ ಮಾಡಬೇಕಲ್ಲ? ಕಾಲೇಜಿನಲ್ಲೇ ನಾಳೆ ಸಂಜೆ ಒಂದು ಕೌಂಟರ್ ತೆರೆದು, ಹಪ್ಪಳ-ಸಂಡಿಗೆಗಳನ್ನು ಕರಿದು ಮಾರುವುದು ಅಂತ ತೀರ್ಮಾನವಾಯ್ತು. "ಬರೀ ಹಪ್ಳ-ಸಂಡಿಗಿ ಅಂದ್ರ ಯಾರ್ ತಗೋಂತಾರ? ಜತೀಗೆ ಮಿರ್ಚಿ-ಭಜಿನೂ ಇರ್ಬೇಕು" ಅಂತ ಧಾರವಾಡದ ಬಸವರಾಜ್ ಹೇಳಿದ. ಸರಿ, ಕರಿಯೋದೇ ಕರೀತಿದ್ದೇವೆ, ಅದೇ ಎಣ್ಣೇಲಿ ಇದ್ನೂ ಕರಿಯೋಣ ಅಂತ ಅವನ ಸಲಹೆ ಅಂಗೀಕರಿಸಿದೆವು. ಅಷ್ಟರಲ್ಲಿ ನಮ್ಮ ಅಕೌಂಟ್ಸ್ ನೋಡಿಕೊಳ್ಳುತ್ತಿದ್ದ ರಶ್ಮಿ "ಮಿರ್ಚಿ ಮಾಡೋಕೆ ಸಂಸ್ಥೆಯಲ್ಲಿ ಹಣ ಇಲ್ಲ" ಅಂದಳು. ಸಾಲ ಮಾಡುವುದು ಅನಿವಾರ್ಯವಾಯಿತು. ನಮಗಾದರೂ ಯಾರಿದ್ದಾರೆ? "ಪ್ರಿನ್ಸಿಪಾಲರನ್ನೇ ಕೇಳೋಣ ನಡೀರಿ" ಅಂತ ಅಲೋಕ್ ಸರ್ ಹೇಳಿದರು. ಪ್ರಿನ್ಸಿಪಾಲರ ಬಳಿ ಹೋಗಿ "ನೀವೇ ಬ್ಯಾಂಕು, ಸಾಲ ಕೊಡಿ" ಅಂತ ಕೇಳಿದೆವು. ಮೊದಲು ಅವರು ಕಕ್ಕಾಬಿಕ್ಕಿಯಾದರೂ ವಿಷಯ ತಿಳಿದ ಮೇಲೆ ನಗುತ್ತಾ ಐನೂರು ರೂಪಾಯಿ ಕೊಟ್ಟರು.

ಮರುದಿನ ಇದ್ದಕ್ಕಿದ್ದಂತೆ ಒಂದು ಸಣ್ಣ ಮಳೆ ಬಂದು ನಮ್ಮ ವ್ಯಾಪಾರಕ್ಕೆ ಶುಭ ಮುಹೂರ್ತ ಕಲ್ಪಿಸಿಕೊಟ್ಟಿತು. ಕ್ಯಾಂಟೀನಿನ ಅಡುಗೆ ಭಟ್ಟರು ಕಾರಿಡಾರಿನ ಮೂಲೆಯಲ್ಲೊಂದು ಒಲೆ ಹೂಡಿ, ದೊಡ್ಡ ಬಾಣಲಿ ಇಟ್ಟು ಎಣ್ಣೆ ಹೊಯ್ದು, ಹಪ್ಪಳ-ಸಂಡಿಗೆ-ಮಿರ್ಚಿ ಕರಿಯಲು ಶುರುವಿಟ್ಟೇಬಿಟ್ಟರು! ಅದರ ಪರಿಮಳವೆಂಬುದು ಎರಡು ಫ್ಲೋರುಗಳಲ್ಲಿದ್ದ ವಿವಿಧ ಡಿಪಾರ್ಟ್‌ಮೆಂಟಿನ ಮುನ್ನೂರೂ ಚಿಲ್ಲರೆ ಮೂಗುಗಳಿಗೆ ತಲುಪಿ, ಕ್ಲಾಸುಗಳಲ್ಲಿ ಸಂಚಲನ ಉಂಟುಮಾಡಿತು. ಲೆಕ್ಚರರುಗಳೂ ವಿಚಲಿತಗೊಂಡು ಬೇಗ ಬೇಗ ತರಗತಿ ಮುಗಿಸಿದರು. ಎಲ್ಲಾ ಧಡಧಡನೆ ಕೆಳಗಿಳಿದು ಬಂದು ನಾವು ಮಾಡಿಕೊಂಡಿದ್ದ ಕೌಂಟರಿಗೆ ಮುತ್ತಿಗೆ ಹಾಕಿದರು. ಈ ನೂಕಿನಲ್ಲಿ ನುಗ್ಗುವುದಕ್ಕಾಗದೇ ಹುಡುಗಿಯರು ಹೊರಗೇ ಉಳಿದದ್ದರಿಂದ ಅವರಿಗಾಗಿ ನಾವು ವಿಶೇಷ ಕೌಂಟರ್ ತೆರೆಯಬೇಕಾಯಿತು. ಲೆಕ್ಚರರುಗಳಿಗೆ ಸ್ಟಾಫ್ ರೂಮಿಗೇ ಸಪ್ಲೈ ಮಾಡಿದೆವು. ಎಲ್ಲರೂ ದುಡ್ಡು ಕೊಟ್ಟು ಖರೀದಿಸಿ, ನಂತರ ಕ್ಯಾಂಟೀನಿನಲ್ಲಿ ಟೀ ಕುಡಿದರು. ಅರ್ಧ ಗಂಟೆಯೊಳಗೆ, ನಮಗೆ ಸ್ವಲ್ಪವೂ ಉಳಿಯದಂತೆ ಎಲ್ಲ ಐಟೆಮ್ಮುಗಳೂ ಮಾರಾಟವಾಗಿಹೋದವು. ಮಿರ್ಚಿ ಸಿಗದಿದ್ದುದಕ್ಕೆ ಬಸವರಾಜನ ಮುಖವಂತೂ ಮೆಣಸಿನಕಾಯಿಯಷ್ಟೇ ಸಣ್ಣಗಾಯಿತು. ಕೊನೆಗೆ ಪಾತ್ರೆಯ ತಳದಲ್ಲಿದ್ದ ಚೂರುಗಳನ್ನೇ ಅವನಿಗೆ ತಿನ್ನಿಸಿ ಸಮಾಧಾನ ಮಾಡಿದೆವು.

ಅಂತೂ ಈ ಮಾರಾಟದಿಂದಾಗಿ ನಮಗೆ ದುಪ್ಪಟ್ಟು ಲಾಭವಾಯಿತು. ಲಾಭದ ಹಣದಲ್ಲಿ ಮೊದಲು ತೀರಿಸಿದ್ದು ಪ್ರಿನ್ಸಿಪಾಲರಿಂದ ಪಡೆದಿದ್ದ ಸಾಲ! ಅವರಂತೂ ಬ್ಯಾಂಕಿನ ನಿಯಮಗಳಿಗೆ ವಿರುದ್ಧವಾಗಿ, ಸಂಕೋಚದ ಪರಮಾವಧಿಯಂತೆ "ಪರ್ವಾಗಿಲ್ಲ ನೀವೇ ಇಟ್ಕೊಳಿ" ಅಂದುಬಿಟ್ಟರು! ಆಮೇಲೆ ಉಳಿದ ಹಣವನ್ನು ನಾವೆಲ್ಲ ನಮ್ಮ ನಮ್ಮ ಹೂಡಿಕೆಯ ಅನುಪಾತದಲ್ಲೇ ಹಂಚಿಕೊಂಡೆವು. ಅಂದಿನ ಕಾಲೇಜು ಮುಚ್ಚುವುದರೊಳಗೆ ಎಲ್ಲಾ ನಿಯಮಗಳನ್ನೂ ಪಾಲಿಸಿ ಸಂಸ್ಥೆಯನ್ನು ‘ವೈಂಡಪ್’ ಸಹ ಮಾಡಿದೆವು.

ಅಲೋಕ್ ಸರ್, ಇಂತಹ ಪ್ರಯೋಗಗಳನ್ನು ಮಾಡಿಸುವುದರೊಂದಿಗೆ, ನಮ್ಮೆಲ್ಲರ ಪ್ರೀತಿಗೆ ಪಾತ್ರರಾದರು. ಅವರ ಕ್ಲಾಸಿಗೆ ಒಬ್ಬರೂ ತಪ್ಪಿಸಿಕೊಳ್ಳುತ್ತಿರಲಿಲ್ಲ, ಕ್ಲಾಸಿನಲ್ಲಿ ಯಾರೂ ನಿದ್ದೆ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ, ಜಗದಚ್ಚರಿಯಂತೆ ಎರಡು ತಿಂಗಳಲ್ಲಿ ನಮ್ಮಲ್ಲನೇಕರಿಗೆ ನಮ್ಮ ಕೋರ್ಸಿನ ಬಗ್ಗೆ ಆಸಕ್ತಿ, ಆದರ, ಅಭಿಮಾನಗಳು ಮೂಡತೊಡಗಿ, ಕಾಲೇಜು, ಪ್ರಿನ್ಸಿಪಾಲರು ಮತ್ತು ಎಲ್ಲ ಲೆಕ್ಚರರುಗಳ ಬಗ್ಗೆಯೂ ಗೌರವ ಭಾವ ಬೆಳೆಯಿತು. ಅದು ವರ್ಷದ ಕೊನೆಯ ಪರೀಕ್ಷೆಯ ಫಲಿತಾಂಶದಲ್ಲೂ ಪ್ರತಿಫಲಿಸಿದ್ದು ಸುಳ್ಳಲ್ಲ.

[ವಿಜಯ ಕರ್ನಾಟಕ ಸಾಪ್ತಾಹಿಕ - ಶಿಕ್ಷಕರ ದಿನ ವಿಶೇಷ ಸಂಚಿಕೆಗಾಗಿ ಬರೆದದ್ದು]

14 comments:

Keshav.Kulkarni said...

ಸುಶ್ರುತ,
ನಿನ್ನ ಶಕ್ತಿ ಇರುವುದು ಚಂದದ ಇಂಥ ಪ್ರಬಂಧಗಳಲ್ಲೇ ಅನಿಸುತ್ತೆ. ಇನ್ನೂ ಹೆಚ್ಚು ಹೆಚ್ಚು ಬರೆ.
- ಕೇಶವ

Harisha - ಹರೀಶ said...

ನೆನೆ ನೆನೆ ಅಂದ್ಕೂಡ್ಲೆ ಬಟ್ಟೆ ನೆನೆ ಹಾಕದು ನೆನಪಾತು :-P

ಅದಿರ್ಲಿ... ಗುರವೇ ನಮಃ :-)

ಚಿತ್ರಾ said...

ಸುಶ್ರುತ ,
ನೀ ಹೇಳಿದ್ದು ನೂರರಷ್ಟು ನಿಜ. ನಾವುಗಳು ಶಾಲೆಗೆ ಹೋಗಲು ಶುರು ಮಾಡಿದಾಗಿಂದ Students ! ಅವರು ಮಾತ್ರ ಮೇಷ್ಟ್ರು, ಲೆಕ್ಚರರ್ ಪ್ರಿನ್ಸಿಪಾಲ್ ಇತ್ಯಾದಿ .. ಸರಿಯಾದ ತರ್ಕ .
ಒಳ್ಳೆಯ practical ನಿಮ್ಮ ಸರ್ ದು. ಅಂತೂ ಇಂತೂ ಕಾಮರ್ಸ್ ತಲೆಯೊಳಗೆ ಇಳತ್ತು ಹೇಳಾತು !
ಮಸ್ತ್ ಇದ್ದು ಬರಹ ! ನಿಜ ಹೇಳವು ಅಂದ್ರೆ , ನಿನ್ನ ಬರವಣಿಗೆಯೇ ಹಾಗೆ. ಹಲಸಿನಕಾಯಿ ಹಪ್ಪಳ , ಮಿರ್ಚಿ ಭಜಿ ತರ ! ಸವಿದಷ್ಟೂ ರುಚಿ .

ಸಾಗರದಾಚೆಯ ಇಂಚರ said...

ಸುಶ್ರುತ,
ಬಹಳ ಸೊಗಸಾದ ಬರಹ, ಶೈಲಿ ತುಂಬಾ ಸುಪೆರ್ರ್ರ್ರ್ರ್

Parisarapremi said...

ರೀ, ಲೆಕ್ಚರರ್ ಆಗ್ಲೀ, ಪ್ರೊಫೆಸರ್ ಆಗ್ಲೀ, ಸ್ಕೂಲ್ ಅಧ್ಯಾಪಕ ಆಗ್ಲೀ, ಎಲ್ರೂ ಮೇಷ್ಟ್ರೇ ಕಣ್ರೀ....

ಇರ‍್ಲಿ. ಚೆನ್ನಾಗಿದೆ ಓದೋದಕ್ಕೆ.. :-) ತಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

Dr. Kanada Narahari (Kanada Raghava) said...

Thumba aapyaayamaana annisthu, v k dalli odidaaga. sulalita shaili, sulalita bhaavaabhivyakti.

Annapoorna Daithota said...

ಸ್ಪೂರ್ತಿದಾಯಕ ಲೇಖನ :)

sunaath said...

ಮನೋಹರವಾದ ಲೇಖನ.
ಒಳ್ಳೆಯ ಗುರುಗಳು. ಶಿಕ್ಷಕರ ದಿನದಂದು ಅವರಿಗೆ ನನ್ನದೂ ಒಂದು ಸಲಾಮ್!

Vijaya said...

Super... aadre ninna neenu 'mugdha'ra gumpige serskolodu swalpa noo sareegilla ;-)

ವಿ.ರಾ.ಹೆ. said...

super. heege practicallaagi teach mADi, anubhavagaLannu koduva mEStrugaLa santati jAsTiyAgbEku..

ಸಿಂಧು sindhu said...

ಸು,

ಸಕ್ಕತ್ ಲೇಖನ.
ಓದಿ ಖುಶಿ, ಸಮಾಧಾನ ಎರಡೂ ಆಯಿತು.
ಅಲೋಕ್ ಸರ್’ಗೆ ನನ್ನದೊಂದು ನಮನ.

ಪ್ರೀತಿಯಿಂದ
ಸಿಂಧು

Unknown said...

ತಮ್ಮ ,
ಒಳ್ಳೆಯ ಬರಹ .ಅ೦ಥಹ ಶಿಕ್ಷಕರ ಸ೦ತತಿ ೧೦೦೦ ವಾಗಲಿ ಎ೦ದು ಹಾರೈಸುತ್ತೇನೆ .

Sushrutha Dodderi said...

ಸ್ಪಂದಿಸಿದ ಎಲ್ಲರಿಗೂ ಧನ್ಯವಾದ.

ಇಲ್ಲಿನ ಲೆಕ್ಚರರ್ ಅಲೋಕ್, ಅವರು ಮಾಡಿಸಿದ ಪ್ರಯೋಗ -ಎಲ್ಲವೂ ಕಾಲ್ಪನಿಕ ಅಷ್ಟೇ. ಇದರ ಎಳೆ ಕೊಟ್ಟದ್ದು ಪುಟ್ಟಿ ರಂಜನಾ. ಅವಳಿಗೊಂದು ಥ್ಯಾಂಕ್ಸ್.

ಅಲೋಕ್‌ರಂತಹ ಲೆಕ್ಚರರುಗಳು ಇರಲಿ, ಹೆಚ್ಚಾಗಲಿ ಎಂಬುದು ನನ್ನ ಹಾರೈಕೆ.

ಶರಣು.

Shiv said...

ಸುಶ್,

ಛೇ...ಮಿಸ್ ಮಾಡ್ಕೊಂಡು ಬಿಟ್ಟೇ ..ಹಪ್ಪಳ-ಮಿರ್ಚಿ..

ನೀನು ಸಲ್ಲಿಸಿದ ಗುರುನಮನ ಚೆನ್ನಾಗಿದೆ

-ಪಾತರಗಿತ್ತಿ