Tuesday, December 15, 2009

ಹೂಮಾಲೆ

-ಸಂಜೆ-

ಬಿಡಿ ಮುಡಿಯುವಂತಿಲ್ಲ
ಅಬ್ಬಲಿಗೆಯನ್ನು
ಕಟ್ಟಲೇಬೇಕು ಮಾಲೆ

ಹನಿಸಿದ ನೀರ
ತುಂತುರುಗಳಿನ್ನೂ
ಇರುವಾಗಲೇ ಗುಚ್ಚುಗಳ
ಸಂದಿಯಲಿ

ಕೀಳಬೇಕು ಹೂವ
ಬಿಡಿಸಿ ತೊಟ್ಟ ಬಂಧ
ತುಂಬುವನಕ ಬುಟ್ಟಿ


-ರಾತ್ರಿ-

ಕಚ್ಚಿ ಹಲ್ಲಿಂದ
ಕತ್ತರಿಸಿದ ದಾರ
ಸುತ್ತಿ ಬೆರಳಿಂದ ಮಾಡಿ
ಗಂಟು

ನಾಲ್ಕು ನಾಲ್ಕು
ಆಚೆ ಈಚೆ
ಒಟ್ಟು ನೂರು ಹೂವು

ಹಳದಿ-ಕೆಂಪು
ಮಾಲೆ ಮೇಲೆ
ಕರಗಿ ಚಿಮಣಿ
ದೀಪ ಬೆಳಕು

ಹೂವ ಬಣ್ಣ ಹೆಚ್ಚಿತೆ?
ಚಳಿಯ ರಾತ್ರಿ,
ಸೆಳೆವ ನಿದ್ರೆ
ಬೆರಳ ವೇಗ ಕಸಿಯಿತೆ?

ಎಷ್ಟು ಮಾಲೆ
ಒಟ್ಟು ಎಂಬ
ಲೆಕ್ಕ ತಪ್ಪಿ ಹೋಯಿತೆ?


-ಉಷೆ-

ಬಿಳಿಯಂಗಿ
ನೀಲಿ ಲಂಗ
ಕೆಂಪು ರಿಬ್ಬನ್ನು
ಎರಡೂ ಜುಟ್ಟಿಗೆ

ಹೆದ್ದಾರಿಯಲಿಹ ಶಾಲೆಗೆ
ಮೈಲಿಯೆರಡು
ಕಾಲ್ನಡಿಗೆ

ಹಾಯುವ ಕಾರು
ತುಂಬಿದ ಬಸ್ಸು
ಸೆಳೆಯಲೆಬೇಕು
ಎಲ್ಲರ ಕಣ್ಣು

ಬಾಗಿದಂತೆ
ಮರದ ಟೊಂಗೆ
ಎತ್ತರದಲಿ
ಹಿಡಿದು ಕೈ

ತೂಗಬೇಕು ಕೂಗಬೇಕು
'ಮಾಲೆ ಆಣಿಗೆರಡು'
ನಿಂತರೊಂದು ವಾಹನ,
ಕೇಳ್ದ ಬೆಲೆಗೆ ಕ್ರಯವು

'ನೂರು ಹೂವ ಮಾಲೆ
ಮುಡಿದು ಮುಂದೆ ದಾರಿ ಸಾಗಿರಿ
ಚೈತ್ರಗಂಧ ಹಿಂದೇ ಬರುವ
ಮೋಡಿಯನ್ನು ನೋಡಿರಿ'


-ಮಧ್ಯಾಹ್ನ-

ಶಾಲೆಯ ಊಟದ ಸಮಯದಿ
ಈಕೆಗೆ ಏಕೋ ಏನೋ
ತರಾತುರಿ

ಮೂಲೆಯಲಿರುವ ಅಂಗಡಿಯಲ್ಲಿ
ಕೂತಿಹ ನಸುನಗು
ವ್ಯಾಪಾರಿ

ಕೂಡಿಹ ಚಿಲ್ಲರೆ ಕಾಸಿಗೆ
ಸಿಕ್ಕದೆ ಹೊಸ ರಿಬ್ಬನ್,
ಹೇರ್‌ಕ್ಲಿಪ್, ಪ್ಲಾಸ್ಟಿಕ್
ಗುಲಾಬಿ?

15 comments:

ಸುಧೇಶ್ ಶೆಟ್ಟಿ said...

:) ಆಹಾ...! ಕವಿಸಮಯ....!

ಸಾಗರದಾಚೆಯ ಇಂಚರ said...

ಸುಶ್ರುತ ಸರ್,
ಸುಂದರ ಸಾಲುಗಳು
ಕ್ಷಣ ಮಾತ್ರದಲ್ಲಿ ಮನಸ್ಸಿಗೆ ಆಹ್ಲಾದ ನೀಡುತ್ತವೆ
ಸುಂದರ ಕವನಕ್ಕೆ ಅಭಿನಂದನೆಗಳು

sunaath said...

ಸುಶ್ರುತ,
ಕವನ ಬಹಳ ಲಾಯಕ್ ಆಯ್ತು.
ಯಾವ ಭಾವವೂ ಕವಿಯ ಮನಸ್ಸನ್ನು ಹೇಗೆ ಪ್ರೇರೇಪಿಸಬಹುದು,
ನಿಜವಾದ ಕವಿ ಅದನ್ನು ಹೇಗೆ ಕವನರೂಪದಲ್ಲಿ ತರಬಹುದು ಎನ್ನುವದಕ್ಕೆ ನಿಮ್ಮ ಕವನ ಉತ್ಕೃಷ್ಟ ನಿದರ್ಶನ.
ಇದು ಸುಂದರವಾದ ಆಬೋಲಿ ಹೂವುಗಳ ಮಾಲೆ!

ಅನಂತ said...

:)

ಯಜ್ಞೇಶ್ (yajnesh) said...

ತುಂಬಾ ಚೆಂದ ಬೈಂದು

ಚಿತ್ರಾ said...

ಸುಶ್ರುತ ,

ಈ ಕವನ
ಕೆಂಪು, ಕೇಸರಿ, ಹಳದಿ
ಅಬ್ಬಲಿಗೆಯ ಮಾಲೆ !
ತಾನು ಆಸ್ಥೆಯಿಂದ ಕೊಯ್ದು,
ರಾತ್ರಿ ಕೂತು ಕಟ್ಟಿದ
ನೂರು ಹೂಗಳ ಮಾಲೆ !
ಅದನ್ನು
ತಾನೇ ಮುಡಿಯದ ಬಾಲೆ !

ನಿಜವಾದ ಹೂವನ್ನು ಮಾರಿ ಬಂದ ಕಾಸಿಗೆ ಸಿಕ್ಕೀತೆ ಪ್ಲಾಸ್ಟಿಕ್ ಗುಲಾಬಿ ?

PARAANJAPE K.N. said...

ಸುಶ್
ಅಬ್ಬಲಿಗೆ ಮಾಲೆ ಚೆನ್ನಾಗಿದೆ

Raghu said...

:) tumba sundaravada salugalu...
--raaghu

ಆನಂದ said...

ಸಕ್ಕತ್ ! :)

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...

ಚಿಮಣಿ ಬೆಳಗ ರಂಗು ಕರಗಿ ಅಬ್ಬಲಿಗೆಯ ಕೆಂಪು-ಹಳದಿಯನು ದಟ್ಟವಾಗಿಸಿದ ಈ ಕವನದ ರಂಗೆಲ್ಲ ಕರಗಿ ಮನದೊಳಕ್ಕೆಲ್ಲ ಹರಿಯುತ್ತಿದೆಯಲ್ಲೋ.
ಹಸಿರು ಹಂಬಲದ ಇಂಥ ಹೂಗಳಿಗೆ, ಈಗಷ್ಟೇ ಅರಳಿದ ಹೊಸಹೂವ ಹಂಚುವರಿಗೆ ಬರೀ ಪ್ಲಾಸ್ಟಿಕ್ ಹೂ ಮಾತ್ರವಲ್ಲ ಕಣೋ, ಅದರ ಮೇಲೊಂದು ಫಳಫಳದ ಇಬ್ಬನಿಮುತ್ತಿರುವ ಚೆಂದದ ಹೂವೇ ಸಿಗಲಿ.

Pramod P T said...

ನಂಗಿಷ್ಟ ಆಯ್ತು ಕವನ :)

Nisha said...

Sogasada kavana

Anonymous said...

KAVANADALLINA PAATRADA CHITRANA HAAGU ADARA ASAHAYAKATE MANASSIGE MUTTUVANTHITTU.YELLO MANASSINALADALLI A PARIYA CHITRANAVANU NENESI KANNU ODDEYAGISITU.HOOVIGU HUDUGIGU YENTHA SAMBANDAH,GIDADINDA BIDISI BISILALI ONAGUVUDU HOOVU BISILALI ADDADI MAARI ONAGUVALU HUDUGI.IBBARADU ONDE BADUKU ONDE KATHE.

VENU VINOD said...

ಸಂಜೆ, ರಾತ್ರಿಯ ಸಾಲುಗಳು ತುಂಬಾ ಖುಷಿ ಕೊಟ್ಟವು....ಅಬ್ಬಲಿಗೆಯ ರೂಪಾಂತರದ ಕಲ್ಪನೆ ಚೆನ್ನಾಗಿದೆ

ashwath said...

ಸಂಜೆ, ರಾತ್ರಿ, ಸಾಲುಗಳು ನನ್ನ ಬಾಲ್ಯವನ್ನು ನೆನಪಿಸಿತು. ನಾ ಕಟ್ಟುತ್ತಿದ್ದ ಹಬ್ಬಲಿಗೆ ಹೂಮಾಲೆ(ಮುಡಿಯಲು) ಕಣ್ಣ ಮುಂದೆ ಬಂತು.ಧನ್ಯವಾದಗಳು
ಕುಸುಮ ಸಾಯಿಮನೆ