Monday, May 31, 2010

ಮಾವಿನ್‌ಕಾಯ್ ನೀರ್ಗೊಜ್ಜು ಎಂಬ ಅಮೃತಪಾನವು...

ಸುಖಗಳಲ್ಲಿ ಉತ್ಕೃಷ್ಟವಾದ ಸುಖಕ್ಕೆ ಪರಮಸುಖ ಅಂತಲೂ ರುಚಿಗಳಲ್ಲಿ ಶ್ರೇಷ್ಠವಾದ ರುಚಿಗೆ ಪರಮರುಚಿ ಅಂತಲೂ ಹೆಸರು. ಈ ಪರಮಸುಖ ಎಂಬುದು ಅತ್ಯಂತ ಕಾಸ್ಟ್ಲೀ ಐಟಮ್ ಆಗಿದ್ದು, ಇದನ್ನು ಪಡೆಯಲು ಕಠಿಣ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ವಿದಿತ. ಅಂದರೆ ಸಾಮಾನ್ಯ ಮನುಷ್ಯರಾದ ನಮಗೆ ಪರಮಸುಖವನ್ನು ಅನುಭವಿಸುವ ಯೋಗವಿಲ್ಲ ಎಂದಾಯಿತು. ಹಾಗೆಂದಾಗ, ಇದಕ್ಕೊಂದು ಶಾರ್ಟ್‌ಕಟ್ ಇರಬೇಕಲ್ಲವೇ? ತನಗೆ ದುರ್ಗಮವಾದ ಎಲ್ಲವಕ್ಕೂ ಶಾರ್ಟ್‌ಕಟ್ ಕಂಡುಹಿಡಿದಿರುವ ಮನುಷ್ಯ, ಇದಕ್ಕೂ ಒಂದು ಮಾರ್ಗವನ್ನು ಶೋಧಿಸಿದ್ದಾನೆ. ನನ್ನ ಪ್ರಕಾರ, ಪರಮಸುಖವನ್ನು ಪಡೆಯಲಿಕ್ಕಿರುವ ಸರಳವಾದ ಮಾರ್ಗ ಪರಮರುಚಿಯಾದ ಆಹಾರವನ್ನು ಸೇವಿಸುವುದು! ಇನ್ನೂ ನೇರವಾಗಿ ಹೇಳಬೇಕೆಂದರೆ, ಮಾವಿನ್‌ಕಾಯ್ ನೀರ್ಗೊಜ್ಜನ್ನು ನಿಧನಿಧನಿಧಾನವಾಗಿ ಕುಡಿಯುವುದು!

ನಾನೀಗ ಹೇಳುತ್ತಿರುವ ಮಾವಿನಕಾಯಿ ನೀರುಗೊಜ್ಜು ಎಂಬ ಪೇಯವನ್ನು ಇಷ್ಟರೊಳಗೆ ಸೇವಿಸಿಲ್ಲ ಎಂದಾದರೆ ಜಗತ್ತಿನ ಅತಿ ನತದೃಷ್ಟ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಎಳನೀರು, ಕಬ್ಬಿನಹಾಲು, ಕಾಫಿ, ಟೀ, ಜ್ಯೂಸು, ಕೋಕು -ಗಳಂತಹ ಪದಾರ್ಥಗಳನ್ನು ಕುಡಿಯುತ್ತಾ ಮೈಮರೆತಿರುವ ನೀವು, ಭಗವದ್ದರ್ಶನಕ್ಕೊಳಗಾಗಬಹುದಾದ ನೀರ್ಗೊಜ್ಜಿನಂತಹ ಪೇಯದ ರುಚಿಯಿಂದ ವಂಚಿತರಾಗಿದ್ದೀರಿ. ಬಿಯರು, ವಿಸ್ಕಿ, ರಮ್ಮು, ವೈನುಗಳೇ ಮೊದಲಾದ ಮಾದಕ ದ್ರವ್ಯಗಳಿಗೂ ಸಡ್ಡು ಹೊಡೆಯಬಲ್ಲಂತಹ ಕಿಕ್ಕು ನಮ್ಮ ಮಾವಿನಕಾಯಿ ನೀರ್ಗೊಜ್ಜು ಸೇವಿಸುವುದರಿಂದ ಸಿಗುತ್ತದೆ ಎಂದರೆ ನೀವು ನಂಬಲಾರಿರಿ.

ಹಾಗೆ ನೋಡಿದರೆ ಮಾವಿನಕಾಯಿ ನೀರುಗೊಜ್ಜು ಒಂದು ಪೇಯವಲ್ಲ. ಮೂಲತಃ ಇದು ಅನ್ನಕ್ಕೆ ಬೆರೆಸಿಕೊಂಡು ಉಣ್ಣಬೇಕಾದ ಪದಾರ್ಥ. ಬಿರುಬೇಸಗೆಯ ಮಧ್ಯಾಹ್ನಗಳಲ್ಲಿ, ಸಾಂಬಾರು-ಸಾರುಗಳಂತಹ ಬಿಸಿ ಪದಾರ್ಥಗಳನ್ನು ಉಣ್ಣಲು ನಿರಾಕರಿಸುವ ಬಾಯಿಗೆ, ಹಿತವೆನಿಸುವಂತಹ ತಣ್ಣನೆಯ ನೀರು-ನೀರು ಅಡುಗೆ ಇದು. ಚೂರೇ ಅನ್ನವಿದ್ದರೂ ತಟ್ಟೆತುಂಬ ಗೊಜ್ಜು ಹೊಯ್ದುಕೊಂಡು ಸುರಿಯುವುದು ಮಲೆನಾಡ ಮನೆಗಳ ಊಟದ ಸರ್ವೇಸಾಮಾನ್ಯ ದೃಶ್ಯ.

ವಸಂತ ಮಾಸ ಪ್ರಕೃತಿಗೆ ತರುವ ಸಿರಿಗಳಲ್ಲೊಂದು ಚಿಗುರಿದ ಮಾವು ಎನ್ನಬೇಕೋ ಅಥವಾ ಚಿಗುರಿದ ಮಾವಿನ ತರುವಿನ ಸಿರಿಯೇ ವಸಂತ ಮಾಸ ಎನ್ನಬೇಕೋ ಎಂಬ ಗೊಂದಲ ಕವನ ಬರೆಯಲು ಕುಳಿತ ಕವಿಗಳನ್ನು ಅದೆಷ್ಟೋ ವರ್ಷಗಳಿಂದ ಕಾಡುತ್ತ ಬಂದಿದೆ. ಆದರೆ, ಈ ಹಚ್ಚನೆ ಹಸುರಿನ ಮಾಮರದೆಲೆಗಳ ಮರೆಯಲಿ ಜೋತುಕೊಳ್ಳತೊಡಗುವ ಪುಟ್ಟಪುಟ್ಟ ಮಾವಿನ ಮಿಡಿಗಳು ಕೋಗಿಲೆ ಕೂಗಿಗೆ ಹುಳಿ ತುಂಬಿಕೊಳ್ಳುತ್ತಾ ಹಿಗ್ಗಿ ಹಿಗ್ಗಿ ಕಾಯಿಯಾಗುವ ಪರಿಯಿದೆಯಲ್ಲ, ಅದು ಈ ಕವಿಗಳ ಉಪಮೆ-ರೂಪಕ ಅಲಂಕಾರಗಳ ಮೇರೆ ಮೀರಿದ ಅದ್ಭುತ.

ಹೀಗೆ ಬೆಳೆದ ಎರಡು ಮಾವಿನಕಾಗಳನ್ನು ನೀವೀಗ ಕತ್ತರಿಸಿ ತರುತ್ತೀರಿ. ಹುಷಾರು: ಅಲ್ಲೂ ನಿಯಮವಿದೆ. ಮಾವಿನಕಾಯಿಯನ್ನು ನೀವು ತೊಟ್ಟಿನ ಸಮೇತ ಕತ್ತರಿಸಬೇಕು. ಏಕೆಂದರೆ, ಮಾವಿನಕಾಯಿಯ ಪರಿಮಳ ಇರುವುದು ಅದರ ತೊಟ್ಟಿನ ಬುಡದಲ್ಲಿ ಶೇಖರವಾಗಿರುವ ಸೊನೆಯಲ್ಲಿ. ಈ ಸೊನೆಯನ್ನು ನಾವು ಮುಂದೆ ಮಾಡಲಿರುವ ಗೊಜ್ಜಿಗೆ ಬೆರಸಿದರೇನೇ ದೊರೆಯುವುದು ನೀರ್ಗೊಜ್ಜಿನ ನಿಜವಾದ ಸೊಗಸು. ಹೀಗಾಗಿ, ಕೊಯ್ಯುವಾಗ ಮಾವಿನಕಾಯಿಯನ್ನು ಒಂದರ್ಧ ಅಡಿಯಷ್ಟು ತೊಟ್ಟನ್ನು ಬಿಟ್ಟೇ ಕೊಯ್ಯಬೇಕು. ಈಗ, ಕೊಯ್ದು ತಂದ ಮಾವಿನಕಾಯಿಯನ್ನು ಪಾತ್ರೆಯ ಮೇಲೆ ಹಿಡಿದು ತೊಟ್ಟಿನ ಬುಡದಲ್ಲಿ ಮುರಿಯಿರಿ. ಸೊನೆಯಷ್ಟೂ ಪಾತ್ರೆಗೆ ಸುರಿಯಿತಾ? ಈಗ ಮಾವಿನ ಕಾಯಿಯನ್ನು ಸಣ್ಣ ಸಣ್ಣ ಸ್ಲೈಸುಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಿ. ಹಾಗೇ ಸ್ವಲ್ಪ ತೆಂಗಿನಕಾಯಿಯನ್ನೂ ತುರಿದು ಹಾಕಿ. ಬೀಸಿ. ಹಸಿಮೆಣಸು ನುರಿಯಿರಿ. ಉಪ್ಪು ಹಾಕಿ. ನೀರು ಬೆರೆಸಿ. ಕೊಬ್ಬರಿ ಎಣ್ಣೆ-ಹಿಂಗು-ಸಾಸಿವೆ ಕಾಳಿನ ಒಗ್ಗರಣೆ ಕೊಡಿ. ಅಷ್ಟೇ: ಅಪರೂಪದ, ಪರಿಮಳಭರಿತ, ಪರಮರುಚಿಯ ನೀರ್ಗೊಜ್ಜು ಇದೀಗ ರೆಡಿ!

ದೇವಾನುದೇವತೆಗಳ ಕಾಲದಿಂದಲೂ ಚಾಲ್ತಿಯಲ್ಲಿರುವ ಈ ಅಡುಗೆ ಮಲೆನಾಡಿನ ಪರಂಪರೆಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿದೆ ಎಂದೆಲ್ಲ ನಾನು ಹೇಳುವುದಿಲ್ಲ. ಹಾಗೆ ಹೇಳಲಿಕ್ಕೆ ನನ್ನ ಬಳಿ ಯಾವುದೇ ಆಧಾರವಿಲ್ಲ. ರಿಸರ್ಚ್ ಮಾಡುವಷ್ಟೆಲ್ಲ ಸಮಯವಿಲ್ಲ. ನಾನು ಹೇಳುವುದಿಷ್ಟೇ: ಈ ನೀರ್ಗೊಜ್ಜನ್ನು ನೀವು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಚಕ್ಲುಪಟ್ಟೆ ಹೊಡೆದು ಕುಳಿತುಕೊಳ್ಳಿ. ಕಣ್ಣು ಮುಚ್ಚಿಕೊಳ್ಳಿ. ಚರಾಚರ ವಸ್ತುಗಳಿಂದ ಕೂಡಿದ ಇಹಲೋಕವನ್ನು ಕ್ಷಣಕಾಲ ಮರೆತುಬಿಡಿ. ದೇವರನ್ನು ಕಾಣುವ ಸಮಯ ಸನ್ನಿಹಿತವಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಬಟ್ಟಲನ್ನು ಬಾಯಿಯ ಬಳಿಗೆ ಒಯ್ಯಿರಿ. ಪರಿಮಳವನ್ನು ಆಘ್ರಾಣಿಸಿ. ಬಟ್ಟಲನ್ನು ತುಟಿಗೆ ತಾಗಿಸಿ. ಹಾಗೇ ಒಂದು ಸಿಪ್ ಗುಟುಕರಿಸಿ. ಯೆಸ್ಸ್ಸ್ಸ್!

ಕಾಲ ಹಾಳಾಗಿದೆ, ಮನುಷ್ಯ ಹಾಳಾಗಿದ್ದಾನೆ, ಬದುಕು ಬರಡಾಗಿದೆ, ಸ್ವಾರಸ್ಯವೆಲ್ಲ ಹೊರಟೋಗಿದೆ ...ಇತ್ಯಾದಿ ನಿಮ್ಮ ನಿರಾಶಾವಾದವನ್ನೆಲ್ಲ ಕಳೆದು ಮತ್ತೆ ಬದುಕಿನತ್ತ ಮುಖ ಮಾಡಿಸುವ ಅಮೃತ ಈ ಮಾವಿನಕಾಯಿ ಗೊಜ್ಜು. ಇದು ಹುಳಿಯಿದ್ದಷ್ಟೂ ರುಚಿ, ಖಾರವಿದ್ದಷ್ಟೂ ಬಾಯಿಸೆಳೆತ, ಪರಿಮಳವಿದ್ದಷ್ಟೂ ಮಜಾ ಮತ್ತು ಹೇರಳವಾಗಿದ್ದಷ್ಟೂ ಖರ್ಚು! ಮಾವಿನಕಾಯಿ ನೀರ್ಗೊಜ್ಜನ್ನು ಗುಟುಕು-ಗುಟುಕಾಗಿ ಕುಡಿಯಬೇಕು... ಒಂದು ಬಟ್ಟಲು ಮುಗಿಯುತ್ತಿದ್ದಂತೆ ಮತ್ತೊಂದು ಬಟ್ಟಲು. ಇದರ ಗಮ್ಮತ್ತೇ ಅಂಥದು: ಖಾರವೆನಿಸಿದರೂ ಬಿಡಲಾಗದು, ಹುಳಿಯೆನಿಸಿದರೂ ಮುಖ ಹಿಂಡಲಾಗದು!

ಹುಳಿಯಿರುವ ಯಾವುದೇ ಮಾವಿನಕಾಯಿಯಿಂದಲಾದರೂ ನೀರ್ಗೊಜ್ಜನ್ನು ಮಾಡಬಹುದಾದರೂ ಅಪ್ಪೆ, ಕಂಚಪ್ಪೆ, ಜೀರಿಗೆಗಳಂತಹ ಜಾತಿಯ ಕಾಯಿಗಳು ಹೆಚ್ಚು ಪ್ರಸಿದ್ಧ. ಅವು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳವನ್ನು ಗೊಜ್ಜಿಗೆ ನೀಡುವುದರಿಂದ ಪೇಯದ ಸೊಗಡು ಹೆಚ್ಚುತ್ತದೆ.

ಮಾವಿನಕಾಯಿ ನೀರ್ಗೊಜ್ಜು ಕುಡಿಯಲು ಸ್ವಲ್ಪ ಮಟ್ಟಿನ ರಸಿಕತೆಯೂ ಬೇಕಾಗುತ್ತದೆ ಎಂದರೆ ತಪ್ಪಾಗಲಾರದು. ನಾನು ನೋಡಿದ ಹಾಗೆ, ಸಾಮಾನ್ಯವಾಗಿ ಹುಳಿಯನ್ನು ದ್ವೇಷಿಸುವ ಗಂಡಸರೇ ಮಾವಿನಕಾಯಿ ನೀರ್ಗೊಜ್ಜನ್ನು ಕುಡಿಯುವುದು ಹೆಚ್ಚು! ಹೆಂಗಸರು ಅದೇಕೋ ಇದನ್ನು ಅನ್ನಕ್ಕೆ ಬೆರೆಸಿ ಉಣ್ಣುವುದನ್ನೇ ಇಷ್ಟ ಪಡುತ್ತಾರೆ. ಆದರೆ ಗಂಡಸರು ಬಟ್ಟಲಿಗೆ ಹಾಕಿಕೊಂಡು ಕುಡಿಯುತ್ತಾರೆ. ಅದು ಸರಿಯೇ: ನೀರ್ಗೊಜ್ಜನ್ನು ಅನ್ನಕ್ಕೆ ಬೆರೆಸಿ ಉಣ್ಣುವುದರಲ್ಲಿ ಅಂತಹ ಮಜಾ ಏನೂ ಇಲ್ಲ. ಆದರೆ ಅದನ್ನು ಕುಡಿಯುವುದುದಿದೆಯಲ್ಲ, ಆಹ್! ಬ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ!

ಮಲೆನಾಡು ಹವ್ಯಕರ ಮದುವೆಮನೆ ಊಟಗಳಲ್ಲಿ ನೀರ್ಗೊಜ್ಜು ಒಂದು ಖಾಯಂ ಐಟಮ್ಮು. ಅದು ಮಾವಿನಕಾಯಿಯ ಸೀಸನ್ ಆಗಿರಬೇಕಷ್ಟೇ: ತಿಳಿಸಾರು, ಸಾಂಬಾರು, ಚಿತ್ರಾನ್ನಗಳು ಆದಮೇಲೆ ಬರುವ ಪದಾರ್ಥವೇ ನೀರ್ಗೊಜ್ಜು. ಈ ನೀರ್ಗೊಜ್ಜನ್ನು ದೊನ್ನೆಗೆ ಹಾಕಿಸಿಕೊಂಡು ಕುಡಿಯಬೇಕು. ನೀರ್ಗೊಜ್ಜನ್ನು ದೊನ್ನೆಯಲ್ಲಿ ಕುಡಿಯುವ ಅನುಭವವೇ ಬೇರೆ. ಹೊಂಬಾಳೆಯಿಂದ ಮಾಡಿದ ಈ ದೊನ್ನೆ ಅದಾಗಲೇ ತಿಳಿಸಾರು ಹಾಕಿಸಿಕೊಂಡಿದ್ದ ದೊನ್ನೆ. ಈಗ ಅದನ್ನೇ ಖಾಲಿಮಾಡಿ ನೀರ್ಗೊಜ್ಜು ತುಂಬಿಸಿಕೊಳ್ಳುವುದು. ನೀರ್ಗೊಜ್ಜಿನ ನಂತರ ಬರುವ ಖೀರಿಗೂ ಇದೇ ದೊನ್ನೆ! ನೀರ್ಗೊಜ್ಜು ಬಡಿಸುವವರು ಮತ್ತೊಂದು ರೌಂಡು ಬರಲೇಬೇಕು. ಅದಿಲ್ಲದಿದ್ದರೆ ಪಂಕ್ತಿಯಲ್ಲಿರುವ ಎಲ್ಲರೂ ಅವರಿಗೆ ಶಾಪ ಹಾಕುವುದು ಖಾಯಂ. ಉರಿಬಿಸಿಲ ದಗೆಯಲ್ಲಿ, ಚಪ್ಪರದ ಕೆಳಗೋ ಶಾಮಿಯಾನಾದ ಕೆಳಗೋ ಬೆವರುತ್ತ ಊಟಕ್ಕೆ ಕೂತಿರುವವರಿಗೆ ಈ ನೀರ್ಗೊಜ್ಜು ಕೊಡುವ ರಿಲೀಫು -ಅದು ಶಬ್ದಗಳಿಗೆ ಮೀರಿದ್ದು. ಗ್ರಂಥಗಳೇನಾದರೂ ಹೊಮ್ಮುವುದಿದ್ದರೆ ಆಮೇಲೇ ಅದು ಹೊಮ್ಮುವುದು! ಮತ್ತೀ ಬಡಿಸುತ್ತಿರುವವರಿದ್ದಾರಲ್ಲಾ, ಇವರೂ ಈಗಾಗಲೇ ಕನಿಷ್ಟ ಎರಡು ದೊನ್ನೆ ನೀರ್ಗೊಜ್ಜು ಕುಡಿದಿರುತ್ತಾರೆಂಬುದನ್ನು ನೀವು ಗಮನಿಸಬೇಕು. ಅಡುಗೆಮನೆಯಲ್ಲಿ ನೀರ್ಗೊಜ್ಜಿನ ದೊಡ್ಡ ಕೌಳಿಗೆಗೇ ‘ಡೈರೆಕ್ಟ್ ಅಕ್ಸೆಸ್’ ಇರುವ ಇವರು, ತಾವು ಮೂರನೆಯದೋ-ನಾಲ್ಕನೆಯದೋ ಪಂಕ್ತಿಗೆ ಕೂರುವಷ್ಟರಲ್ಲಿ ಖಾಲಿಯಾಗಿಬಿಟ್ಟಿದ್ದರೆ ಎಂಬ ಮುಂಜಾಗ್ರತೆಯಿಂದ, ಅಲ್ಲೇ ಇರುವ ದೊನ್ನೆಗಳಲ್ಲಿ ಗೊಜ್ಜನ್ನು ಬಗ್ಗಿಸಿ ಬಗ್ಗಿಸಿಕೊಂಡು ಕುಡಿದು ಬಾಯಿ ಚಪ್ಪರಿಸಿಕೊಂಡಿರುತ್ತಾರೆ.

ನೀರ್ಗೊಜ್ಜು ಕುಡಿದುಬಿಟ್ಟರೆ ಅಷ್ಟಕ್ಕೇ ಮುಗಿಯಲಿಲ್ಲ; ಕೈ ತೊಳೆದು ಬಂದು ಸಣ್ಣದೊಂದು ಕವಳ ಹಾಕಿ ಗೋಡೆಗೊರಗುತ್ತೀರಿ ನೋಡಿ, ಆಮೇಲೆ ಇರುವುದು ಮಜಾ! ತೂಕಡಿಸಿ ತೂಕಡಿಸಿ ಬರುವ ಜೋಂಪು ನಿಮ್ಮನ್ನು ನಿದ್ರಿಸದೇ ಇರಲು ಸಾಧ್ಯವೇ ಇಲ್ಲವೆಂಬಂತೆ ಮಾಡುತ್ತದೆ. ಅದಕ್ಕೇ ನಾನು ಮೊದಲೇ ಹೇಳಿದ್ದು: ಯಾವ ಮಾದಕ ದ್ರವ್ಯಕ್ಕಿಂತಲೂ ಕಮ್ಮಿಯೇನಲ್ಲ ಇದು ಎಂದು. ಮಾವಿನಕಾಯಿ ನೀರ್ಗೊಜ್ಜು ಕುಡಿದಮೇಲೆ ಮಲಗಲೇಬೇಕು. ಅದಕ್ಕೆ ತಯಾರಾಗಿಯೇ ನೀವು ಇದನ್ನು ಸೇವಿಸಬೇಕು. ಊಟದ ನಂತರ ಯಾವುದೋ ಕೆಲಸ ಇಟ್ಟುಕೊಂಡು ಇದನ್ನು ಕುಡಿಯುವುದು ತರವಲ್ಲ. ಮಲೆನಾಡ ಹವ್ಯಕರು ಮಧ್ಯಾಹ್ನವೂ ಸೊಂಪು ನಿದ್ರೆ ತೆಗೆಯುವುದಕ್ಕೆ ಬರೀ ಕೆಲಸವಿಲ್ಲದಿರುವ - ಸೋಮಾರಿತನವಷ್ಟೇ ಕಾರಣವಲ್ಲ; ಅದರ ಹಿಂದೆ ಮಾವಿನ್‌ಕಾಯ್ ನೀರ್ಗೊಜ್ಜಿನ ಕೈವಾಡವೂ ಇದೆ ಎಂಬುದು ಕೆಲವರಿಗಷ್ಟೇ ತಿಳಿದ ಗುಟ್ಟು.

ಒಮ್ಮೆ ಈ ಗೊಜ್ಜಿನ ಪಾನದಲ್ಲಿರುವ ಸ್ವರ್ಗಸುಖಕ್ಕೆ ಬಲಿಯಾದಿರೋ, ನೀವಿದರ ಫ್ಯಾನ್ ಆದಿರಿ ಅಂತಲೇ ಅರ್ಥ. ಇನ್ನು, ತರಕಾರಿ ಮಾರ್ಕೆಟ್ಟಿಗೆ ಹೋಗಿ ಮಾವಿನಕಾಯಿ ಕೊಂಡುತಂದು ಸ್ವತಃ ಗೊಜ್ಜು ತಯಾರಿಸುತ್ತೀರೋ ಅಥವಾ ಅಧಿಕಮಾಸ ಕಳೆದು ಇದೀಗ ಶುರುವಾಗಿರುವ ಸಾಲುಸಾಲು ಮಲೆನಾಡ ಮದುವೆಮನೆಗಳಿಗೆ ಲಗ್ಗೆ ಇಡುತ್ತೀರೋ, ನಿಮಗೆ ಬಿಟ್ಟಿದ್ದು.


[ನೋಟ್: ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ. ಬರೆಯುವ ಭರದಲ್ಲಿ ಮಾವಿನಮರ ಚಿಗುರಿದ ಮೇಲೆ ಕಾಯಿ ಬಿಡುತ್ತೆ ಅಂತೇನೋ ಆಗಿಬಿಟ್ಟಿತ್ತು; ಅದನ್ನಿಲ್ಲಿ ತಿದ್ದಿದ್ದೇನೆ. ಮತ್ತೆ ಕೆಲವರು "ತಮ್ಮ ಕಡೆ ನೀರ್ಗೊಜ್ಜಿಗೆ 'ಅಪ್ಪೆಹುಳಿ' ಅಂತ ಕರೀತಾರೆ, 'ಮಾವಿನ್‌ಕಾಯ್ ಟ್ರೊಂಯ್' ಅಂತ ಕರೀತಾರೆ, ನೀವದನ್ನ ಮೆನ್ಷನ್ನೇ ಮಾಡಿಲ್ಲ, ನಮ್ಗೆ ಸಖತ್ ಬೇಜಾರಾಯ್ತು" ಅಂತ ಆಕ್ಷೇಪವೆತ್ತಿದ್ದಾರೆ. ಅವರಿಗೆ ನಮ್ಮನೆಗೆ ಬಂದ್ರೆ ಒಂದೊಂದ್ ಲೋಟ ಗೊಜ್ಜು ಕುಡಿಸುವುದಾಗಿ ಹೇಳಿ ಸಮಾಧಾನ ಮಾಡಿದ್ದೇನೆ. ಥ್ಯಾಂಕ್ಯೂ. ;) ]

26 comments:

ಮನಸಿನ ಮಾತುಗಳು said...

hmmm ....
೧. ನಿಂಗೆ ನೀರು ಗೊಜ್ಜು ಮಾಡಲೇ ಬತ್ತು.
೨.ನಿಂಗೆ ರಸಿಕತೆ ಇದ್ದು.. (ನೀನೆ ಹೇಳಿದ್ದು :P )
೩.ಮಾವಿನಕಾಯಿ ಹಾಂಗೆ ಕೊಯ್ಯಕು ಅಂತ ಗೊತ್ತು
೪. etc ..etc ..

ಆದರೆ ನಂಗಂತೂ ಅನ್ನಕ್ಕೆ ಕಲ್ಸ್ಕಳಕೆ ಇಷ್ಟ ಇಲ್ಯಪ್ಪ.. ಲೋಟದಲ್ಲಿ ಕುಡಿಯಕೆ ಇಷ್ಟ.. ;)
ಹಂಗೆ ನೀನು ನೀರು ಗೊಜ್ಜು ಮಾಡಿದಾಗ ನಮಗೂ ಪಾರ್ಸೆಲ್ ಮಡ್ಬುದು.. ..:)

ಲೇಖನ ಇಷ್ಟ ಆತು.. :-)

ಮನದಾಳದಿಂದ............ said...

ಸುಶ್ರುತ ಸರ್,
ಮಾವಿನಕಾಯಿ ನೀರ್ಗೊಜ್ಜಿನ ಮಹಿಮೆಯನ್ನು ರಸವತ್ತಾಗಿ ವರ್ಣಿಸಿ ನಮ್ಮೆಲ್ಲರ ಬಾಯಲ್ಲಿ ನೀರಿಳಿಸಿದ್ದೀರಾ! ಇದರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ! ಬಾಯಲ್ಲಿ ನೀರಿಳಿಸಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲೇ ಬೇಕು. ಅದಕ್ಕಾಗಿ ನೀವೇ ಕುದ್ದಾಗಿ ನೀರ್ಗೊಜ್ಜು ಮಾಡಿ ಎಲ್ಲಾ ಬ್ಲಾಗ್ ಮಿತ್ರರಿಗೂ ಕಳಿಸಿಕೊಡತಕ್ಕದ್ದು. ಆಗ ಮಾತ್ರ ಶಾಪ ವಿಮೋಚನೆ ಸಾಧ್ಯ!! ಹ್ಹ ಹ್ಹ ಹ್ಹಾ!!!!!!

Unknown said...

ನೀರ್ಗೊಜ್ಜು ಮಾಡ್ಕ್ಯಂಡು ಕುಡುದ್ರು ನಿದ್ರೆ ಬತಲ್ಯೋ, ಹೊಟ್ಟೆ ಉರಿಯೋ ಹೊಟ್ಟೆ ಉರಿ........!.ಇವತ್ತು ಕೈ ಬೆರಳಿಗೆ ಕೆಂಪುಮೆಣಸಿನ ಕಾಯಿ ಹಾಕಿ ದೃಷ್ಟಿ ತೆಕ್ಕ...........!

ಶಂಕರ ಹೆಗಡೆ said...

ನಿನ್ನೆ ಸಾಗರದಲ್ಲಿ ಮದುವೆ ಊಟ ಮಾಡಿ ಪೇಪರ್ ಹಿಡಿದಾಗ ಓದಿದ್ದು ಈ ಲೇಖನ. ( ನೀರ್ಗೋಜ್ಜು ಕುಡಿದಿದ್ದೆ ಅಂತ ಬೇರೆ ಹೇಳಬೇಕಾಗಿಲ್ಲ ತಾನೇ
? :) ) ನಿಮ್ಮ ಬ್ಲೋಗ್ ಗೆ ಬಂದು ಕಾಮೆಂಟ್ ಹಾಕದೆ ಇರಲಿಕ್ಕೆ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ನೀರ್ಗೋಜ್ಜು ಕುಡಿದಷ್ಟೇ ಸಂತೋಷವಾಯಿತು. ನಿದ್ದೆನು ಬಂತು :)

shivu.k said...

ಸುಶ್ರುತ,

ನಿನ್ನೆ ಲವಲವಿಕೆಯಲ್ಲಿ ಓದಿದೆ. ನಾವು ಬೆಂಗಳೂರಿನ ಬಯಲು ಸೀಮೆಯವರಾದರೂ ಈಗ ನಮ್ಮನೆಯಲ್ಲಿ ಇದು ನಿತ್ಯ ಇರಲೇಬೇಕು. ನನಗೆ ಮಲೆನಾಡಿನ ಈ ಗೊಜ್ಜು ಹೇಗೆ ತಿಳಿಯಿತು ಅಂತೀರಾ.. ನಾವು ಸಿರಸಿಯಲ್ಲಿರುವ ಗೆಳೆಯರ ಮನೆಗೆ ಹೋದಾಗಲೆಲ್ಲಾ ಪ್ರತಿಭಾರಿ ಒಂದೊಂದು ಐಟಮ್ ಕಲಿತುಬಿಡುತ್ತೇವೆ. ಮಲೆನಾಡಿನ ಅಡಿಗೆ ಐಟಮ್, ಜೋನಿಬೆಲ್ಲವೆಲ್ಲಾ ನಮ್ಮನೆಯಲ್ಲಿ ಇದ್ದೇ ಇರುತ್ತೆ. ನೀವು ಹೇಳಿದಂತೆ ನಿತ್ಯವೂ ದೊಡ್ಡ ತಟ್ಟೆಯಲ್ಲಿ ಪಾಯಸದಂತೆ ಹಾಕಿಕೊಂಡು ಸಿಪ್ ಬೈ ಸಿಪ್ ಕುಡಿಯುತ್ತಾ....ನಂತರ ಒಂದು ಇರಾನ್ ಕ್ಲಾಸಿಕಲ್ ಸಿನಿಮಾ ನೋಡಿದರೆ...ಸ್ವರ್ಗವೆನ್ನುವುದು ನನ್ನ ಪಕ್ಕದಲ್ಲೇ...

ಬರಹವೂ ಕೂಡ ಸಿಪ್ ಬೈ ಸಿಪ್ ಸೂಪರ್...

shivu.k said...

ಮತ್ತೆ ನಾನು ಈ ಐಟಮ್ ಸೂಪರ್ ಆಗಿ ಮಾಡುತ್ತೇನೆ. ಟೇಸ್ಟ್ ಮಾಡಲು ಮನೆಗೆ ಬರಬಹುದು.

Subrahmanya said...

ಮಾವಿನಕಾಯಿ ಸೀಸನ್ನಲ್ಲಿ ಬಾಯಲ್ಲಿ ನೀರೂರುವಂತೆ ಬರೆದಿದ್ದೀರಿ. ಯಾವಾಗ ಮಾಡ್ತೀರ ಹೇಳಿ..ನಾನು ಬರ್ತಿನಿ !.

Narayan Bhat said...

ಅಪ್ಪೆಹುಳಿಯ ರುಚಿಗಿಂತ ನಿಮ್ಮ ಬರವಣಿಗೆಯ ಸೊಗಸು ಇನ್ನೂ ಹೆಚ್ಚಿನ ರುಚಿ.

Sushrutha Dodderi said...

@ ದಿವ್ಯಾ,
ಪಾಯಿಂಟ್ ನಂ. ೨ ಓದಿ ನಂಗೆ ನಾಚ್ಕೇ ಅಂದ್ರೆ ನಾಚ್ಕ್ಯಾತು! :-|

ಮನದಾಳದಿಂದ,
ಅಯ್ಯಯ್ಯೋ! ಶಾಪ-ಗೀಪ ಹಾಕ್ಬೇಡಿ ಸಾರ್.. ಇವತ್ತೇ ಎಲ್ರಿಗೂ ಪಾರ್ಸೆಲ್ ಮಾಡ್ತೀನಿ ಗೊಜ್ಜು.. :P

ಶ್ರೀಶಂ,
ಸುಮ್ನಿರು ಮಾರಾಯಾ.. ನೀ ಯಾವಾಗ್ಲೂ ಹಿಂಗೆಲ್ಲ ಎಂತೆಂತೆಲ್ಲ ಹೇಳಿ ನನ್ನ ಮಳ್ ಮಾಡ್ತೆ.

ಶಂಕರ ಹೆಗಡೆ,
ಸೂಪರ್ರಲಾ? ;) ಕೊನೆಗೆ ಎಚ್ರ ಆಗಿ ಬೆಂಗ್ಳೂರ್ ಬಸ್ ಹತ್ತಿದ್ರಿ ತಾನೆ? ;)

ಶಿವು,
ವಾರೆವ್ಹಾ! ಗ್ರೇಟ್ ನೀವು! ಹಾಗಾದ್ರೆ ಈಗ ನನ್ ಹತ್ರ ಗೊಜ್ಜು ಮಾಡ್ಕೊಡು ಅಂತ ಹೇಳ್ತಿರೋವ್ರೆಲ್ರನ್ನೂ ಕರ್ಕೊಂಡು ನಿಮ್ಮನೆಗೆ ಬಂದ್ಬಿಡ್ತೀನಿ... :D

Subrahmanya,
ಶಿವು ಮನೆ ವಿಳಾಸ ಸಧ್ಯದಲ್ಲೇ ಕೊಡ್ತೀನಿ. ;)

Narayan Bhat,
ಥ್ಯಾಂಕ್ಯೂ ಸರ್.. :-)

Dr.D.T.Krishna Murthy. said...

ಅಪ್ಪೆ ಹುಳಿಯ ಹಾಗೇ ನಿಮ್ಮ ಬರಹವೂ ವಿಶಿಷ್ಟ !

PARAANJAPE K.N. said...

ಬಾಯಲ್ಲಿ ನೀರು ಬರ್ತಿದೆ, ನಿಮ್ಮ ನೀರ್ಗೊಜ್ಜು ಪುರಾಣ ಕೇಳಿ.

Ravi Hegde said...

ಅಪ್ಪೆಹುಳಿ ಸಕತ್ತಾಗಿದೆ..
ನಮ್ಮ ಕಡೆ ಹಲಸಿನ ಹಣ್ಣಿನ ಕಡಬು ಮಾಡದಾಗ ಅಪ್ಪೆಹುಳಿ ಇರಲೇ ಬೇಕು..
ಅವತ್ತಿನ ಊಟದ ಮಜನೆ ಬೇರೆ..

ರವಿ

ಬಾಲು said...

appe kaayi saaru nenp maadi hotte urisiddiya, so heavy hotte novu barali endu haaraisuve. shaapa beda andre kanishta 2 litre appe kaayi saaru / huli kodatakkaddu. :) :) :)

ninne vijaya karnataka dalli odidde. chennaagide lekhana.in

ಸೀತಾರಾಮ. ಕೆ. / SITARAM.K said...

ಜಗತ್ತಿನ ನತದೃಷ್ಟ ವ್ಯಕ್ತಿಗಳಲ್ಲಿ ಸಧ್ಯ ನಾನು ಸೇರಿಲ್ಲ!
ತಟ್ಟೆ ತು೦ಬಾ ಹಾಕ್ಕೊ೦ಡು ಎತ್ತಿ ಕುಡುಯುತ್ತಿದ್ದಾದ್ದು ನೆನಪಾಯಿತು!
ಪದೇ ಪದೇ ಅಡಿಗೆ ಮನೆಗೆ ನುಗ್ಗಿ ಬಾಯಾರಿಕೆಗೆ ಸಾರೇ ಕುಡಿದಿದ್ದಾಯಿತು!
ಬನ್ನವಿರದ, ಘನ ಪದಾರ್ಥಗಳಿರದ ಇದರ ರುಚಿ ಸುವಾಸನೆ ಎ೦ಥಾ ಅರಸಿಕರ, ಅಭೋಜ್ಯರ ಚಿತ್ತ ಚಾ೦ಚಲ್ಯಗೊಳಿಸುವದು!
ರಸವತ್ತಾಗಿ ಇದರ ಮಹಿಮೆ ನೆನಪು ಮಾಡಿಕೊಟ್ಟಿದ್ದಿರಾ! ಥ್ಯಾ೦ಕ್ಸ್.

ಸಾಗರದಾಚೆಯ ಇಂಚರ said...

ಸುಶ್ರುತ ಸರ್

ಚೆನ್ನಾಗಿದೆ ನೀರ್ಗೊಜ್ಜು ಬರಹ

ವನಿತಾ / Vanitha said...

ನೀರ್ಗೊಜ್ಜಿನಷ್ಟೇ ಸವಿ ನಿಮ್ಮ ಲೇಖನ..:))..

shridhar said...

ಸುಶ್ರುತ,
Last ಸಂಡೆ ಮನೆಲಿ ಮಾವಿನ ಕಾಯಿ ನೀರ್ ಗೊಜ್ಜು ..ತಿಂದು ಮಲಗಿದ್ದೂಂದೆ ಗೊತ್ತಿದ್ದು .. ಎಂತ ನಿದ್ರೆ .. ವಾಹ್ ..
ಆದ್ರು ಬೆಂಗಳೂರಿಗೆ ಬಂದ್ಮೆಲೆ ಊರಕಡೆ ಅಪ್ಪೆ ಮಿಡಿ ನೀರು ಗೊಜ್ಜು ಸಿಗಲ್ಲೆ ..
ಸೂಪೆರ್ ಲೇಖನ ... ನಿರ್ಗೊಜ್ಜು ಮಾಡಿದ್ರೆ ಕರೆಯಲ್ಲೆ ಮರ್ಯಡ್ದೊ ...

ವಿ.ರಾ.ಹೆ. said...

>>ತಮ್ಮ ಕಡೆ ನೀರ್ಗೊಜ್ಜಿಗೆ 'ಅಪ್ಪೆಹುಳಿ' ಅಂತ ಕರೀತಾರೆ>>

ಯಾವ ಕಡೆ ಅಂತನೂ ಹೇಳ್ಬೇಕು. ಇಲ್ಲಾಂದ್ರೆ ನಿಮ್ ಮನೆಮುಂದೆ ಧರಣಿ ಗ್ಯಾರಂಟಿ with demand for one bucket appehuLi ;)

ಚಿತ್ರಾ said...

ಸುಶ್ರುತ,
ನೀರುಗೊಜ್ಜು ಭಾಳ ರುಚಿ ಇದ್ದು. ಮೊನ್ನೆ ಊರಿಗೆ ಹೋದಾಗ ' ಲವ್ ಲವಿಕೆ' ಯಲ್ಲೇ ಓದಿದ್ದಿ. ಓದಿಯೇ ಬಾಯಲ್ಲಿ ನೀರು ಬರ್ತಾ ಇತ್ತು . ಹಾಂಗಾಗಿ ಊಟ ಮಾಡಕಾದ್ರೆ ೨ ಲೋಟ ಹೆಚ್ಚು ಕುಡಿದಿ ನೋಡು .
ಆಮೇಲೆ , ಸಂಜೆವರೆಗೂ ನಿದ್ರೆ ಮಾಡಿದ್ದೆ ಕೆಲಸ .
ಅಲ್ಲಾ, ಒಂದು ಡೌಟು . ಮಾಡಕೂ ಬತ್ತ ನಿಂಗೆ ಅಥವಾ ಬರೀ ಬರವಣಿಗೇಲಿ ಮಾತ್ರನಾ ಅಂತ !

ಜಲನಯನ said...

ಸುಶ್ರುತಾ...ನೀರ್ಗೊಜ್ಜು....ಇದು ಗೊಜ್ಜು ನೀರಾಗಿರೋದಕ್ಕಾ ..?
ಗೊಜ್ಜು ಅಂದ್ರೇನೇ ಬಾಯಲ್ಲಿ ನೀರೂರುತ್ತೆ..... ಒಂದಂತೂ ನಿಜ ಬ್ಯಾಚುಲರ್ಸ್ ಗೆ ಒಳ್ಲೆ ರಾಮಬಾಣ ...ತಾವೇ ಅಡುಗೆ ಮಾಡ್ಕೊಳ್ಳೋರ್ಗೆ...ಅಥವಾ ಸಮಯ ಇಲ್ದೋರಿಗೆ...

umesh desai said...

ಸುಶ್ರುತ ಲವಲವಿಕೆಯಲ್ಲಿ ಓದಿ ಬಾಯಲ್ಲಿ ನೀರು ಬರಸಿಕೊಂಡು ಒದ್ದಾಡಿದೆ ಅಂದಹಾಗೆ ಶಿವು ಮನೆಗೆ ನಾನೂ ಹೋಗಬೇಕು

Sushrutha Dodderi said...

@ ಡಾ. ಕೃಷ್ಣಮೂರ್ತಿ,
:-) ಧನ್ಯವಾದ ಸರ್..

ಪರಾಂಜಪೆ,
ಇದಕ್ಕೆ ಪರಿಹಾರ ಅದನ್ನು ಕುಡಿಯುವುದೊಂದೇ! ;)

ರವಿ ಹೆಗಡೆ,
ಆಹಾಂ? ಈ ವಿಷ್ಯ ಗೊತ್ತಿರ್ಲೆ ನಂಗೆ..

ಬಾಲು,
ಶಾಪ ಬ್ಯಾಡ ಬಾಲೂ, ಶಾಪ ಬ್ಯಾಡ.. ಎರಡೇನು, ನಾಲ್ಕು ಲೀಟರ್ ಕುಡಿಸ್ತೇನೆ!

ಸೀತಾರಮ ಕೆ.,
ಕಂಗ್ರಾಟ್ಸ್! ತಟ್ಟೆ ತಟ್ಟೆ ಗೊಜ್ಜು ಕುಡಿಯುವಷ್ಟು ಅದೃಷ್ಟ ನಿಮಗೆ ಸಿಕ್ಕಿದೆಯಲ್ಲ.. :-)

ಇಂಚರ, ವನಿತಾ,
ಥ್ಯಾಂಕ್ಸ್ ಥ್ಯಾಂಕ್ಸ್!

ಶ್ರೀಧರ,
ಬೆಂಗ್ಳೂರಲ್ಲೂ ಮಲ್ಲೇಶ್ವರಂ ಮಾರ್ಕೆಟ್ಟಲ್ಲಿ ಸ್ವಲ್ಪ ಹುಡುಕಾಡಿದ್ರೆ ಸಿಗ್ತು ನೋಡು.. ಮಾಡಿರೆ ಕರಿತಿ ತಗ. :-)

ವಿ.ರಾ.ಹೆ.,
ಶಿರ್ಸಿ-ಸಿದ್ದಾಪುರ (ಉತ್ತರ ಕನ್ನಡ)ದ ಕಡೆ ಗುರುವೇ.. ಹಿಂಗೆ ಎಲ್ಲರೂ ಬಕೆಟ್ಟುಗಟ್ಟಲೆ ಬೇಡಿಕೆ ಇಟ್ರೆ ನನ್ ಗತಿ ಎಂತು? :(

ಚಿತ್ರಕ್ಕ,
ಸುಪರ್ರಲ? ;) ಏ ಮಾಡಕ್ಕೂ ಬರ್ತೇ.. ಮತ್ತೆ ಸುಮ್-ಸುಮ್ನೆ ಬರದ್ದಿ ಮಾಡಿದ್ಯಾ? ನಾನು ಗುಡ್ ಗುಡ್ ಮಾಣಿ ಗೊತಿದಾ? ;) :P

ಜಲನಯನ,
ಹೂಂ.. ಹುಳಿ ಹುಳೀ ನೀರು.. ಅದೇ ದಪ್ಪಗಿದ್ರೆ (thick) ಅದನ್ನ ಮಂದನ್‌ಗೊಜ್ಜು ಅಂತ ಕರೀತಾರೆ.. ಅದ್ರ ಗಮ್ಮತ್ತು ಬೇರೇನೇ! ಉಪ್ಪಿನಕಾಯಿಯ ಥರ ನಾಲಿಗೆ ತುದಿಗೆ ನೆಕ್ಕಿಕೊಳ್ತಾ, ಗಟ್ಟಿಯಾಗಿ ಅನ್ನಕ್ಕೆ ಕಲಸಿಕೊಂಡು.. .. ... ~ಆಹ್! ಇರಿ, ಮತ್ಯಾವಾಗಾದ್ರೂ ಹೇಳ್ತೀನಿ ಅದ್ರ ಬಗ್ಗೆ. ;)

ದೇಸಾಯೀಜಿ,
ಅವ್ರಾಗೆ ಕರೆದ ಮೇಲೆ ಬಿಡ್ಲಿಕ್ ಆಗತ್ತಾ? ಹೋಗೋದೇ ಸೈ! :-)

@all,
ಅಂದ್ಹಾಗೆ ಮಾಲ್ತಕ್ಕ ಇಲ್ಲಿ ನೀರ್ಗೊಜ್ಜು ಮಾಡಿ ಸಂಭ್ರಮಿಸಿದ್ದಾರೆ, ಅದನ್ನೂ ಓದಿ. :-)

Ittigecement said...

ಸುಶ್ರುತ...

ಮಸ್ತ್ ಲೇಖನ !

Prasanna said...

ಸುಶ್ರುತರೆ...
ಒಳ್ಳೆ ಅಪ್ಪೆಹುಳಿ ಊಟ ಮಾಡಿ..ಡರ್ರ್ ರ‍್ರ್ ಎ೦ದು ತೇಗುವ ಮಜಾನೇ ಬೇರೆ...ಹಾಗೆ ತೇಗಿದ ಮೇಲೆ ಹಾಸಿಗೆ ಕ೦ಡರ೦ತೂ ಮು೦ದೆ ಕೇಳಲೇಬೇಡಿ.
ನಿಮ್ಮ ಲೇಖನ ಓದಿ ಒ೦ದು SMS ನೆನಪಾತು..."ಈ ಸಾರಿ ಹವ್ಯಕ ಜನಸ೦ಖ್ಯೆ ಹೆಚ್ಚು ಅಪ್ಪ ಸಾಧ್ಯತೆ ಜಾಸ್ತಿಯಡಾ..ಎ೦ತಕ್ಕ೦ದ್ರೆ ಈ ಸಾರಿ ಮಾವಿನಕಾಯಿ ಜಾಸ್ತಿ ಬ೦ಜಿಲ್ಯಡ..ಅದಕ್ಕೆ ಅಪ್ಪೆಹುಳಿ ಮಾಡಲೆ ಆಗ್ತಿಲ್ಲೆ...ಹ೦ಗಾಗಿ ಹವ್ಯಕರಿಗೆ ರಾತ್ರಿಡಿ ನಿದ್ರಿಲ್ಲೆ...!!!!"
ಆಪ್ಪೆಹುಳಿ ಆ ಪರಿ Powerful..!!!
ಅದು ಏನೇ ಇರಲಿ ...ಲೇಖನ ಸೂಪರ್ ಆಗಿದ್ದು..

Ragu Kattinakere said...

ಹ೦ಗೇ ಗೊಜ್ಜು ಬಡಿಸ ಸಡಗರವೂ ಪ್ರಸ್ತಾಪವಾಗಿ ಹೋಗ್ಲಿ ಮಾರಾಯ! ಮು೦ದೆ ಗಸಗಸೆ, ಅದ್ಯ೦ತದಾ ಅದೂ...ಜಾಯಿಕಾಯೀssss.

Very interesting write. You are very promising; are a break from usual nonsense and mediocrity.

minchulli said...

ಮಸ್ತ್ ಲೇಖನ ! ಮಸ್ತ್ ನೀರ್ಗೊಜ್ಜು !!