Wednesday, July 07, 2010

ರೇಶಿಮೆ ಸೀರೆ

ಬೆರಳು ಮಾಡಿ ತೋರಿಸಿದ ಸೀರೆಯನ್ನು
ಮೆತ್ತೆ ತುಂಬ ಹಾಸಿ ತೋರಿಸಿ
ಸರಭರ ಸದ್ದಿಗೆ ಪಟಪಟ ಮಾತು ಬೆರೆಸುವ
ಸೆರಗಿನ ಬಂಗಾರು ಶಂಕುಗಳನ್ನು
ಸವರಿ ನವಿರಲಿ ನೆರಿಗೆ
ಮೂಡದ ಹಾಗೆ ಇಡುವವ
ಕನಸು ಕಂಗಳ ಹುಡುಗನೇ ಇರಬೇಕು
ಎಂದೆನಿಸಿದ ಕ್ಷಣವೇ ಕಚ್ಚಿಕೊಂಡದ್ದು
ನಾಲಗೆ.

ಎಲ್ಲಾ ಸರಿ, ನೀನು ಹೀಗೆ,
ಹಣೆಯ ಮೇಲೆ, ಬೈತಲೆ ದಾರಿ
ಶುರುವಿಗೂ ಮುನ್ನ, ಒಂದು ಹುಂಡಿ
ಹುಡಿ ಕುಂಕುಮ ಇಟ್ಟುಕೊಂಡರೆ
ಲಕ್ಷಣವಾಗಿ ಕಾಣುತ್ತೀ-
ನನ್ನಮ್ಮನ ಹಾಗೆ
ಎಂದ ನಿನ್ನ ಬೆನ್ನಿಗೆ ಸದಾ
ಕಾಮನಬಿಲ್ಲಿತ್ತು.
ಬಿಸಿಲಲ್ಲೇ ಸುರಿಯತೊಡಗಬೇಕಾದರೆ
ಮಳೆಗೆ ಹುಚ್ಚೆಷ್ಟಿರಬೇಡ ಹೇಳು?

ಶಾರೆ ನೀರು ಸಾಕು;
ಹಸಿಹಸಿರು ಹೆಸರುಕಾಳು, ಸೆಖೆಯುಬ್ಬೆಯಲ್ಲೂ
ಬಿಳಿ ಹೊಟ್ಟೆಯೊಡೆದು
ಇಷ್ಟುದ್ದ ಬಯಕೆ ಮೊಳಕೆ.
ಇಷಾರೆ ನೋಟ ಸಾಕಾಯ್ತು;
ಪ್ರೀತಿಯುಕ್ಕಿ, ಕೆಂಪು ಹಳದಿ
ಸೀರೆ ತೆರೆ ಮರೆ ಅಟ್ಟಣಿಗೆ ಕುಲುಕು
ಪಿಸುಮಾತು.

ನಂಬಿ ಬಂದಿದ್ದೇನೆ ಹುಡುಗಾ..
'ಒಂದಲ್ಲಾ ಒಂದು ದಿನ, ಈ
ದುಡಿದ ಚಿಲ್ಲರೆ ಕಾಸಿನಿಂದಲೇ
ಅಮ್ಮನಿಗೊಂದು ರೇಶಿಮೆ ಸೀರೆ ಕೊಂಡೊಯ್ತೇನೆ ನೋಡು'
ಎಂಬ ನಿನ್ನ ಒದ್ದೆ ಆಶೆ ಕೇಳಿದಾಗಲೇ
ಚಿತ್ತೈಸಿಹೋದದ್ದು ಈ ಸಂಲಗ್ನ.

'ಬಾಯಿ ಮುಚ್ಚೇ ಬೋಸುಡಿ'
ಎಂಬ ನನ್ನಮ್ಮನ ಬೈಗುಳಕ್ಕೆ
ಬಾಗಿಲನ್ನೇ ಮುಚ್ಚಿ ಬಂದಿದ್ದೇನೆ..
ಈಗ ನೀನೇ ಗತಿ, ನೀನೇ ಧೃತಿ.
ಅತ್ತೆಯ ಬಳಿಗೆ ಕರೆದೊಯ್ಯಿ,
ಕಾಲು ಮುಟ್ಟಿ ನಮಸ್ಕಾರ ಮಾಡುತ್ತೇನೆ.

20 comments:

ದಿವ್ಯಾ said...

2 ನೆ ಸಲ್ಲಿನ ಕೆಲವೊಂದಷ್ಟು ಸಾಲು ನನಗೂ ಯಾರೋ ಹೇಳಿದ ನೆನಪು.. ;)

1 ನೆ ಸಲ್ಲಿನ ಕೊನೆ ಕೊನೆ ಸಾಲುಗಳು ಇಷ್ಟ ಆಯ್ತು... :-)

4 ನೆ ಸಲ್ಲಂತೂ ಸೂಪರ್... :-)
ಒಟ್ಟಾರೆ ಇಷ್ಟಾ ಆಯಿತು..:-)

shridhar said...

ಸುಶ್ರುತ ,
ಕವನ ಚೆನ್ನಾಗಿದ್ದು ... ರೇಷ್ಮೆ ಸೀರೆ ನೋಡುತ್ತ ನೋಡುತ್ತ , ಸೀರೆ ತೋರಿಸುವ ಮಾಣಿ ಮನ ಕೊಟ್ಟ ಮಾನಿನಿಯ ಮನದ ಭಾವ
ಚೆನ್ನಾಗಿದೆ ...

ಶ್ರೀನಿಧಿ.ಡಿ.ಎಸ್ said...

chanagidyapa!:D

Anonymous said...

ಇನ್ನೂ ಈ ೧೯ನೇ ಶತಮಾನದ್ದಂತಿರುವ ಸಾಹಿತ್ಯ ಬೇಕಾ ಅಂತ?
-PHK

ತೇಜಸ್ವಿನಿ ಹೆಗಡೆ said...

Good One..

Anonymous said...

super!!

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Hmmmm... Good!

Anonymous said...

maanige madve vayassu aagiddu howde howdu!
-kodsara

sunaath said...

ಸುಶ್ರುತ,
ನಿಮ್ಮ ಕವನಸಾಮರ್ಥ್ಯಕ್ಕೆ ದಂಗಾಗಿದ್ದೇನೆ. ರೇಶಿಮೆ ಸೀರೆಯಂತೆಯೇ
ನಿಮ್ಮ ಕವನವೂ ಇದೆ!

Raghu said...

ಚೆನ್ನಾಗಿದೆ ಈ 'ರೇಶಿಮೆ ಸೀರೆ'...
ನಿಮ್ಮವ,
ರಾಘು.

ಸಾಗರದಾಚೆಯ ಇಂಚರ said...

ಸುಶ್ರುತ್
ಅದ್ಭುತ ಕವನ
ಎರಡನೇ ಪ್ಯಾರ ಸಕತ್

Subrahmanya said...

Good one.

ಮನದಾಳದಿಂದ............ said...

ಶುಶ್ರುತ ಅವರೇ,
ಚಂದದ ಕವನ......... ತುಂಬಾ ಇಷ್ಟ ಆಯ್ತು.

ಅನೂಹ್ಯ said...

ಕಾಮನ ಬಿಲ್ಲಿನ ಕಲ್ಪನೆ ಅಂತೂ very intelligent thought! :) Very beautiful.

ಸೀತಾರಾಮ. ಕೆ. / SITARAM.K said...

ಅರ್ಥವಾಗಲಿಲ್ಲ!!


:-(((

ವಿ.ಆರ್.ಭಟ್ said...

ಮೌನವಾಗಿ ರೇಷ್ಮೆ ಸೀರೆಯಲ್ಲಿ ಗಾಳಹಾಕ ಹೊರಟ ಹುಡುಗನ ಹಾಡು ಕೆಲವರಿಗೆ ಅರ್ಥವಾಗಲಿಲ್ಲವಾದರೂ ಮತ್ತೆ ಕೆಲವರಿಗೆ ಅರ್ಥವಾಯ್ತು! ಪರವಾಗಿಲ್ಲ, ಪ್ರಯತ್ನಿಸಿದ್ದೀರಿ, ನಿಮ್ಮ ಮಾವಿನಕಾಯ್ ನೀರ್ಗೊಜ್ಜು ಚೆನ್ನಾಗಿತ್ತು !

umesh desai said...

ಸುಶ್ರುತ ಎಂದಿನಂತೆ ಕವಿತೆ ಚೆನ್ನಾಗಿದೆ

Karthik H.K said...

ಭಾವನೆಗಳನ್ನೂ ಹೀಗೂ ವ್ಯಕ್ತ ಪಡಿಸಬಹುದೆ? ಅದ್ಭುತವಾದ ಕವಿತೆ. ಮಳೆಗೆ ಹುಚ್ಚು ಹಿಡಿಸುವ ಕಲ್ಪನೆ ಚೆನ್ನಾಗಿದೆ. ಇನ್ನಷ್ಟು ಇಂಥ ಒಳ್ಳೆಯ ಕವಿತೆಗಳು ಹೊರಬರಲಿ :)

ಕಾರ್ತಿಕ್

ಸುಶ್ರುತ ದೊಡ್ಡೇರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

PHK,
ಈ ಇಪ್ಪತ್ತೊಂದನೇ ಶತಮಾನದಲ್ಲೂ ಒಮ್ಮೆ ಚಿಕ್ಕಪೇಟೆಯ ಸೀರೆ ಅಂಗಡಿಗಳ ಬೀದಿಯಲ್ಲಿ ಓಡಾಡಿ ಬಂದರೆ ನಿಮಗೆ ಇದಿದೇ ದೃಶ್ಯಗಳು ಕಾಣ್ತಾವೆ.. ಹಾಗಿದ್ದಾಗ ಸಾಹಿತ್ಯ ಹಳತಾಗೋದು ಹೇಗೆ?

~rAGU said...

ಇದರೊಡನೆ ಭಾವರ್ಥವನ್ನೂ ಬರೆದರೆ ಅನುಕೂಲವಾಗುತಿತ್ತೋ ಎ೦ದೆನಿಸುತ್ತದೆ.
ಬಂಗಾರು ಶಂಕು (design?), ಹುಂಡಿ ಹುಡಿ ಕುಂಕುಮ (ಹು೦ಡು ಹುಡಿ?), ಶಾರೆ ನೀರು (ಶರೆ?), ಹೀಗೆ ಇವೆಲ್ಲದರ ಅರ್ಥ ಬರೆದರೆ ಅನುಕೂಲ. ಅದೇನಿದ್ದರೂ ಕವನ ಸೊಗಸಾಗಿದೆ. ಅಥವಾ - ಬಾರಿ ಲಾಯ್ಕ್ ಬರ್ದ್ಯೋ!