Friday, January 10, 2014

ಮಖ್ನಾ ಆನೆಯ ವಿರಹ

ಸಿನೆಮಾ ಮುಗಿದಮೇಲೆ ಎದ್ದು ಹೊರಗೆ ಬರಲೇಬೇಕು
ಕೊನೆಯ ಸೀಟಿನಲ್ಲಿ ಕೂತು ನಿದ್ದೆ ಹೋಗಿದ್ದವನನ್ನೂ
ಎಬ್ಬಿಸಿ ಕಳುಹಿಸುತ್ತಾನೆ ಕಸ ಗುಡಿಸುವ ಹುಡುಗ

ಹೊರಗೆ ನೋಡಿದರೆ ಜ್ವರ ಬಿಟ್ಟ ಬೆಳಗಿನಂತೆ ಎಲ್ಲ ಹೊಸದಿದೆ
ನಿಲ್ಲಬಹುದು ಅಂಗಳದಲ್ಲಿ ದಿಗ್ಮೂಢತೆಯಲ್ಲಿ ಐದು ನಿಮಿಷ
ಆಮೇಲೆ ಹೊರಡಲೇಬೇಕು: ಮಳೆ ಬರುತ್ತಿದ್ದರೆ ತೊಯ್ದುಕೊಂಡೋ,
ಚಳಿಯಾಗುತ್ತಿದ್ದರೆ ಒದ್ದುಕೊಂಡೋ, ಬಿಸಿಲಿದ್ದರೆ ಬೈದುಕೊಂಡೋ.

ಫರ್ಲಾಂಗು ಕಳೆದಮೇಲೆ ಅವರೆಲ್ಲ ಮತ್ತೆ ಮೂಡುವರು:
ಕಪ್ಪು ಸೂಟಿನ ಹೀರೋ ಬಂದು ತನ್ನ ರಿವಾಲ್ವರಿನಿಂದ
ಟ್ರಾಫಿಕ್ಕಿನಲ್ಲಿ ನಿಂತಿದ್ದವರನ್ನೆಲ್ಲ ಸರಿಸಿ ದಾರಿ ಮಾಡಿಕೊಡುವನು.
ಚಂದಕ್ಕೆ ಪುಟವಿಟ್ಟ ಚೆಲುವಿ ನಾಯಕಿ ಕೈ ಹಿಡಿದು
ಪಾರ್ಕಿಗೆ ಕರೆದೊಯ್ಯುವಳು. ಹುಟ್ಟಿನಿಂದಲೇ ತೊಟ್ಟಿದ್ದಾರೇನೋ
ಎನಿಸುವ ಕನ್ನಡಕದ ತಂದೆ ಬನಿಯನ್ನಿನಲ್ಲೇ ಬಂದು
ಬೆಂಚಿನಲ್ಲಿ ಕೂತು ಸಂತೈಸುವನು. ತಾಯಿ ಕೈತುತ್ತು ತಿನಿಸುವಳು.
ಐಟೆಮ್ ಸಾಂಗಿನ ಹುಡುಗಿ ನರ್ತಿಸಿ ರಂಜಿಸುವಳು.

ರಾತ್ರಿಯಾಗುತ್ತಿದ್ದಂತೆ ಆವರಿಸುವ ಕತ್ತಲೆ
ಕಂಬಳಿಯಂತೆ ಬೆಚ್ಚಗೆ ಮೈಗಂಟಿದ ಸಿನಿಮಾ ಕಣಗಳನ್ನೆಲ್ಲ ಉದುರಿಸಿ
ಥರಥರ ನಡುಗಿಸುವುದು. ರಸ್ತೆಬದಿಯ ಪ್ಲಾಸ್ಟಿಕ್ ರಾಶಿ
ಸುಡುತ್ತಿರುವ ಅಗ್ಗಿಷ್ಟಿಕೆ ಚಳಿಯ ನೀಗಿಸಬಲ್ಲುದೆ?
ಪೆಟ್ರೋಲು ಕುಡಿದ ಮತ್ತ ವಾಹನಗಳು ಹಾಯ್ವ ರಭಸದಿ
ಕಾವು ಮೂಡಬಹುದೇ? ಒಂದು ಕಣ್ಣಾದರೂ ಇತ್ತ ನೋಡಬಹುದೇ?

ನಿದ್ರೆ ಆವರಿಸುತ್ತಿದ್ದಂತೆ ಎಲ್ಲ ಮನೆ ಬಂಗಲೆ ಕೋಟೆ ಉದ್ಯಾನ
ನೀಲಿಯೀಜುಕೊಳ ಥಳಥಳ ಗಾಜಿನಂಗಡಿ
ಪ್ರಸೂತಿಯಾಸ್ಪತ್ರೆಗೂ ಗೇಟು ಹಾಕಲಾಗುವ ಈ ಭೂಮಿಯಲ್ಲಿ
ರಸ್ತೆಗಳೊಂದೇ ಮುಗಿಯದ ರತ್ನಗಂಬಳಿ
ಸ್ವಾಗತಿಸಲ್ಯಾರೂ ಇರದಿದ್ದರೂ ಮುಂದೆ
ಮಖ್ನಾ ಆನೆಯಂತೆ ಒಬ್ಬನೆ ನಡೆಯುತ್ತಾನೆ ವಿರಹಿ:
ಕತ್ತಲೆ ಚಳಿ ಭಯಕ್ಕೆ ಥೇಟರಿನ ಪರದೆ ಸಹ ಗಡಗುಟ್ಟುವಾಗ.

11 comments:

ಸಿಂಧು sindhu said...

ಪ್ರೀತಿಯ ಸುಶ್ರುತ,
ಬಾಕೀದೆಂತಾರು ಇರ್ಲಿ. ಮುಖ್ಯ ವಿಷ್ಯ ಮೊದ್ಲಿಗೆ.
ಕವಿತೆ "ಯಾವತ್ತಿನಂತೆ" ಬನಿಯಿಳಿವ ಸಾಲ್ ಮೊಗ್ಗು. ಸಾಲೊಳಗೆ ಹೊಕ್ಕಿ ಹೊಕ್ಕಿದ ಹಾಗೆಲ್ಲ ಹೊಸ ರಸ.!

ಆಮೇಲೆ
ಈ ನಿಗೂಢ ಅವಿವರದ ಒಂದು ಸಾಲು ಕೊಡದು ಹೊಸಾ ಟ್ರೆಂಡಾ.?. ಇರ್ಲಿ ಹೆಂಗಿದ್ರೂ ಗೂಗಲಿಸ್ತ ಅಂತ.. :)

ಭಾವಾಭಿವ್ಯಂಜಕ ಅಥವಾ ಕವಿತೆಯೆಂಥ ಪ್ರೊಫೈಲ್ ಚಿತ್ರದ ಬಗ್ಗೆ ಈ ಮೊದಲೇ ಹೇಳಿಯಾಯ್ದು. ಒಂದೊಂದ್ಸಲ ಅನ್ನುಸ್ತು ಆ ಮಖ್ನಾ ಆನೆಗೂ, ಚಿರವಿರಹಿಗೂ, ಮತ್ತು ಕವಿಗೂ ಎಂಥ್ ಸಾಮ್ಯ!

ಪ್ರೀತಿಯಿಂದ,
ಸಿಂಧು

Sushrutha Dodderi said...

@ಸಿಂಧು ಅಕ್ಕ,

ಯಾವತ್ತಿನಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸೋ ನಿಂಗೆ ನಂದು ಭರಪೂರ ಪ್ರೀತಿ.

ಅವಿವರವೇ ಕವಿತೆ. ಅರಿವೇ ಮುಕ್ತಿ. :-)

-ಸು

Badarinath Palavalli said...

ದಿನವಹೀ ಬದುಕಿನ ಓಟವನ್ನು ಹೊಸ ಶೈಲಿಯಲ್ಲಿ ಸಮರ್ಥವಾಗಿ ಚಿತ್ರಿಸಿದ್ದೀರ.

Sandeepa Nadahalli said...

ಕಂಡವರಿಗಷ್ಟೇ ಕಾಣುವಂತೆ,
ಕಾಣದವಿರಿಗೆ ಭ್ರಮಿಸಿದಂತೆ,

ಅಕ್ಷರಗಳಲ್ಲಿ ಭಾವನೆಗಳು
ಮೋಡದಲ್ಲಿನ ಚಿತ್ರಗಳಂತೆ!

ಖುಷಿ ಕೊಡುತ್ತವೆ.

ತೇಜಸ್ವಿನಿ ಹೆಗಡೆ said...

ಕವಿತೆ ಓದುತ್ತಾ ಕೆಳ ಬಂದರೆ ಸಿಂಧುಳ ಕಮೆಂಟೇ ಹೊಸ ಹೊಳಹನ್ನು ಹುಟ್ಟಿ ಹಾಕಿ ಬಿಡ್ತು.. ಅದೂ ಒಂದು ಕವಿತೆಯಂತೇ ಇದೆ. ಹಾಗೇ ಸಂದೀಪನ ಕವಿತೆಯೂ ಇಷ್ಟವಾಯಿತು :) :) ಚೆನ್ನಾಗಿದೆ ಸುಶ್ರುತ.... ಹೊಸ ಪದವೊಂದರ ಅರ್ಥ ಕಲಿತೆ :)

VENU VINOD said...

adbhutaaaa

ISHWARA BHAT said...

ಕವನ ಚೆನ್ನಾಗಿದ್ದು ಅಣ್ಣಯ್ಯ.. ಖುಷಿಯಾತು ಒಂದೊಳ್ಳೆ ಕವನ ಓದಿ.

venu beleyur said...

ಕವನ ಚೆನ್ನಾಗಿದ್ದು

umesh desai said...

ಸುಶ್ರುತ ಮತ್ತೆ ನೀವು ಗಾಳದಲ್ಲಿ ಮೀನು ಹಿಡಿಯುತ್ತೀದ್ದೀರಿ..ಒಳ್ಳೆ ಖಮಂಗ ಕವನ..

prashasti said...

Sooper sushrutanna

Subrahmanya said...

ಎಂತಾ ಕತೆಯಾಯ್ತು !, ಛೆ :).