ಚುಮುಚುಮು ಚಳಿಯ ದಿನಗಳು ಮುಗಿದು ಇನ್ನೇನು ಹಬೆಹಬೆ ಸೆಖೆಯ ದಿನಗಳು ಶುರುವಾಗುತ್ತಿವೆ. ವಾರವಿಡೀ ದುಡಿದ ನಾಗರೀಕರಿಗೆ ಭಾನುವಾರವೊಂದು ಬಿಡುವಿನ ದಿನ. ಕೆಲವರಿಗೆ ಶನಿವಾರವೂ. ಬೆಳಗಿನಿಂದ ಸಂಜೆಯವರೆಗೆ ಹೆಂಡತಿ-ಮಕ್ಕಳೊಂದಿಗೆ ಸೋಮಾರಿತನದಲ್ಲಿ ಕಳೆದ ನಾಗರೀಕ, ಸಂಜೆಯ ಹೊತ್ತಿಗೆ ಮುಂದಿನ ವಾರಕ್ಕೆ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತರಲು ಹೊರ ಹೊರಡುತ್ತಾನೆ. ಹಾಗೇನು ಸಾಮಗ್ರಿಗಳನ್ನು ತರಲೇ ಹೋಗಬೇಕೆಂದಿಲ್ಲ, ‘ಶಾಪಿಂಗ್’ ಎಂಬ ನೆಪ ಹೇಳಿಕೊಂಡು ಹೊರಟರೆ ಮಾಲುಗಳಲ್ಲಿ, ಥಳಥಳ ಹೊಳೆವ ಶೋರೂಮುಗಳಲ್ಲಿ, ಪಕ್ಕದಂಗಡಿಗಳಲ್ಲಿ, ಅಷ್ಟೇ ಏಕೆ, ರಸ್ತೆ ಬದಿಗಳಲ್ಲೂ ಕೊಳ್ಳಲು ಬೇಕಾದ್ದು-ಬೇಡವಾದ್ದು ಸಾಕಷ್ಟಿದೆ ನಾಗರೀಕನಿಗೆ. ಹಾಗೆ ಹೊರಟವ ಸಂಜೆ ಬಿಸಿಲಿಗೆ ದಣಿದಿದ್ದಾನೆ. ಅವನಿಗೆ ಏನಾದರೂ ತಿನ್ನಬೇಕು. ತಣ್ಣಗೆ ಕುಡಿಯಬೇಕು. ಹಾಗಂತ ತೀರಾ ಹಸಿವಾದರೆ ಹೋಟೆಲಿಗೆ ಹೋಗಬಹುದಿತ್ತು. ಬಾಯಾರಿದರೆ ಜ್ಯೂಸ್ ಸೆಂಟರುಗಳು ತಮ್ಮ ಹಣ್ಣಿನ ಕಣ್ಣುಗಳಿಂದಲೇ ಕರೆಯುತ್ತವೆ. ಆದರೆ ತೀವ್ರ ಹಸಿವೂ-ಬಾಯಾರಿಕೆಯೂ ಆಗದವನಿಗೆ ಒಂದು ನಿಮಿಷ ನಿಂತು ದಣಿವಾರಿಸಿಕೊಳ್ಳುವಾಗ ಬಾಯಾಡಲು ಏನಾದರೂ ಬೇಕೆಂದು ಹುಡುಕುತ್ತಿದ್ದಾಗ ಕಾಣುವವನೆಂದರೆ, ಗೋಲ್ಗಪ್ಪ ಮಾರುವವನು.
ಈತ ನಮ್ಮ-ನಿಮ್ಮಂತೆಯೇ ಒಂದು ಹಳೇ ಶರ್ಟು-ಪ್ಯಾಂಟು ತೊಟ್ಟಿದ್ದಾನೆ. ತನ್ನೆದುರು ಇಷ್ಟೆತ್ತರದ ಸ್ಟೂಲಿನಂತಹ ಒಂದು ಬೆತ್ತದ ಸ್ಟಾಂಡ್ ಇಟ್ಟುಕೊಂಡಿದ್ದಾನೆ. ಅದರ ಮೇಲೆ ಒಂದು ಬುಟ್ಟಿ. ಆ ಬುಟ್ಟಿಯ ತುಂಬ ಪುಟ್ಟ ಪುಟ್ಟ ಪೂರಿಗಳ ಗೋಪುರ. ಸ್ಟಾಂಡಿನಲ್ಲುಳಿದ ಜಾಗದಲ್ಲಿ ಒಂದು ಮಡಿಕೆ ತುಂಬ ಹುಳಿಹುಳಿ ಪಾನಿ. ಒಂದು ಪುಟ್ಟ ದಬರಿಯಲ್ಲಿ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಈರುಳ್ಳಿ, ಎಸಳು ಕೊತ್ತಂಬರಿ ಸೊಪ್ಪು. ಹಾಗೇ ಪುಟ್ಟ ಬಟ್ಟಲುಗಳಲ್ಲಿ ಬಣ್ಣಬಣ್ಣದ ಪುಡಿಗಳು- ಹುಳಿ, ಉಪ್ಪು, ಖಾರ, ಮಸಾಲೆ. ಉತ್ತರ ಭಾರತದ್ಯಾವುದೋ ಸಣ್ಣ ಶಹರದಿಂದ ಬಂದ ಈ ಅಣ್ಣನಿಗೆ ಕನ್ನಡ ಬಾರದು. ನಿಮಗೆ ಬರುವ ಹರುಕು-ಮುರುಕು ಹಿಂದಿಯಲ್ಲೇ ಎಲ್ಲ ಸಂಭಾಳಿಸಬೇಕು. ದಣಿದ ನಿಮಗೆ, ನಿಮ್ಮ ಬಾಯ್ಚಪಲಕ್ಕೆ ಸರಿಯಾದ ತಿನಿಸು ಈ ಗೋಲ್ಗಪ್ಪ.
ಈ ಪೂರಿಗಳೋ, ಬೆಳಗಿನ ತಿಂಡಿಗೆ ಹೋಟೆಲಿನಲ್ಲಿ ಕೊಡುವ ಪೂರಿಯಷ್ಟು ದೊಡ್ಡವಲ್ಲ. ಮಧ್ಯಾಹ್ನದ ಊಟದ ಜತೆ ಕೊಡುವ ಪೂರಿಯಷ್ಟೂ ದೊಡ್ಡವಲ್ಲ. ಚನ್ನ-ಬಟೂರಕ್ಕೆ ಕೊಡುವಷ್ಟು ಬೃಹತ್ ಗಾತ್ರದವಂತೂ ಅಲ್ಲವೇ ಅಲ್ಲ. ಈ ಪೂರಿಗಳು ಗೋಲ್ಗಪ್ಪಕ್ಕಾಗಿಯೇ ಇಂಚುಪಟ್ಟಿ ಹಿಡಿದು ಅಳತೆ ಮಾಡಿ ಕರಿದವು. ಒಂದು ಪೂರಿ ಸರಿಯಾಗಿ ನಿಮ್ಮ ಬಾಯಿ ತುಂಬಬಲ್ಲದು. ಇವುಗಳನ್ನು ತನ್ನ ಬೆತ್ತದ ಬುಟ್ಟಿಯಲ್ಲಿ ಗೋಪುರದಂತೆ ಜೋಡಿಸಿದ್ದಾನೆ ಈ ಗೋಲ್ಗಪ್ಪದಣ್ಣ. ಈ ಗೋಪುರದಿಂದ ಒಂದೊಂದೇ ಪೂರಿಯನ್ನು ತೆಗೆಯುವ ಕಲೆ ಅವನಿಗೆ ಮಾತ್ರ ಗೊತ್ತು. ನೀವೇನಾದರೂ ಪ್ರಯತ್ನಿಸಹೊರಟಿರೋ, ಇಡೀ ಪಿರಮಿಡ್ಡೇ ಕಳಚಿ ಬಿದ್ದೀತು. ಈ ಪೂರಿಯ ಒಂದು ಮೈಗೆ ತಟ್ಟಿ ತೂತು ಮಾಡುತ್ತಾನೆ ಗೋಲ್ಗಪ್ಪದಣ್ಣ. ಊಹೂಂ, ನೀವು ಪ್ರಯತ್ನಿಸಬೇಡಿ: ಪೂರ್ತಿ ಪೂರಿ ಒಡೆಯುವುದು ಖಚಿತ! ಇದರೊಳಗೆ ನುರಿದ ಆಲೂ, ಸಣ್ಣಗೆ ಹೆಚ್ಚಿದ ಈರುಳ್ಳಿ, ಇನ್ನೂ ಏನೋ ತುಂಬುತ್ತಾನೆ ಗೋಲ್ಗಪ್ಪದಣ್ಣ. ಈಗ ಆತ ನಿಮ್ಮ ಕೈಗೊಂದು ಎಲೆಯಿಂದಲೋ, ಕಾಗದಿಂದಲೋ ಮಾಡಿದ ಪುಟ್ಟ ಬೌಲ್ ಕೊಡುತ್ತಾನೆ. ಪುಟ್ಟ ಪೂರಿಯನ್ನು ಪಾನಿಯ ಮಡಿಕೆಯಲ್ಲಿ ಅದ್ದಿ ಈ ಬೌಲಿನಲ್ಲಿಡುತ್ತಾನೆ. ಇನ್ನು ನೀವು ಜರೂರು ಮಾಡಬೇಕು. ಆ ಪಾನಿ ತುಂಬಿದ ಇಡೀ ಪೂರಿಯನ್ನು ಹಾಗೇ ತೆಗೆದು ಬಾಯಲಿಟ್ಟುಕೊಳ್ಳಬೇಕು. ಹುಳಿ, ಉಪ್ಪು, ಖಾರ, ಘಾಟು -ಎಲ್ಲ ಇರುವ ಈ ತಿನಿಸು ನಾಲಿಗೆಗೆ ಚುರುಕು ಮುಟ್ಟಿಸಿ, ಗಂಟಲನ್ನು ತಣಿಸಿ, ಹೊಟ್ಟೆಯೊಳಗೆ ಹೋಗಿ ಬಿದ್ದ ಸದ್ದಾಗುವುದರೊಳಗೆ, ಅಕೋ ಮತ್ತೊಂದು ಪೂರಿ ನಿಮ್ಮ ಬೌಲಿನಲ್ಲಿ! ತಡ ಮಾಡುವಂತಿಲ್ಲ, ಕೈಗೂ-ಬಾಯಿಗೂ ಕೆಲಸ ಕೊಡಬೇಕು. ಮತ್ತೊಂದು ಪೂರಿ ಬರುವುದರೊಳಗೆ ನೀವಿದನ್ನು ಗುಳುಂ ಮಾಡಬೇಕು. ಬೀದಿಬದಿಯಲ್ಲಿ ನಿಂತು, ಹಾಯುವ ವಾಹನ, ಎಡವಿಕೊಂಡು ಹೋಗುವ ನೂರಾರು ಜನಗಳ ನಡುವೆಯೇ ನೀವು ಮತ್ತು ಗೋಲ್ಗಪ್ಪದಣ್ಣ ಮಾತ್ರ ಆಗಿ ನಿಂತಿರುವ ಈ ಕ್ಷಣ, ಜಗವನೆಲ್ಲ ಮರೆತ ಕ್ಷಣ! ನೀವು ಕೊಡುವ ಹತ್ತು ರೂಪಾಯಿಯ ಹರುಕು ನೋಟಿಗೆ ಆರು ಗೋಲ್ಗಪ್ಪ, ಕೊನೆಗೊಂದು ಸುಕ್ಕಾ. ಒಂದು ಪ್ಲೇಟ್ ಸಾಕಾಗಲಿಲ್ಲವೋ ಮತ್ತೊಂದು ಹೇಳಿ. ಇನ್ನೂ ಬೇಕೆನಿಸಿತೋ, ಗೋಲ್ಗಪ್ಪದಣ್ಣನಿಗೆ ‘ಓರ್ ಏಕ್ ಪ್ಲೇಟ್’ ಎನ್ನಿ. ನಿಮ್ಮ ಮನ ತಣಿಯುವವರೆಗೂ ತಿನಿಸಲು ಗೋಲ್ಗಪ್ಪದಣ್ಣ ಸಿದ್ದ.
ಹಳ್ಳಿಯಿಂದ ಬಂದ ನಮಗೆ ಈ ಗೋಲ್ಗಪ್ಪದ ಪರಿಚಯ ಇರಲಿಲ್ಲ. ಪಾನಿಪುರಿ-ಮಸಾಲ ಪುರಿಗಳು ಗೊತ್ತಿದ್ದವು. ಪೇಟೆಗೆ ಹೋದಾಗ ಒಂದು ಪ್ಲೇಟ್ ಮಸಾಲ ಪುರಿ, ಒಂದು ಪ್ಲೇಟ್ ಪಾನಿಪುರಿ ತಿಂದು ಬಂದದ್ದುಂಟು. ಆದರೆ ಗೋಲ್ಗಪ್ಪ ನೋಡಿದ್ದು ಈ ನಗರಕ್ಕೆ ಬಂದಮೇಲೇ. ಈ ನಗರದವರಾದರೂ ಇದರೊಂದಿಗೇ ಬೆಳೆದವರಲ್ಲ, ಉತ್ತರ ಭಾರತದಿಂದ ಬಂದಿದ್ದು ಈ ತಿಂಡಿ. ಒಂದು ದಿನ ಏಕಾಏಕಿ ಬಂದಿಳಿದ ಈ ಹುಡುಗರು ನಗರದ ಆಯಕಟ್ಟಿನ ಜಾಗಗಳಲ್ಲಿ ತಮ್ಮ ಪೂರಿಯ ಗೋಪುರದೊಂದಿಗೆ ನಿಂತುಬಿಟ್ಟರಾ ಅಂತ ಅನುಮಾನ. ಯಾವುದೋ ಓಣಿಯ ಪುಟ್ಟ ಮನೆಯ ಹಜಾರದಲ್ಲಿ ಕೂತ ನೈಟಿಯ ಅಕ್ಕ ಒರೆದೊರೆದು ಕೊಟ್ಟ ಪೂರಿ, ಸಾರ್ವಜನಿಕ ನಲ್ಲಿಯಲ್ಲಿ ದಿನಬಿಟ್ಟು ಬಂದ ನೀರು, ಬಿಸಿಬಿಸಿ ನೀರಿನಲ್ಲಿ ಬೆಂದ ಆಲೂಗಡ್ಡೆ, ದೂರದ ಹೊಲದಲ್ಲಿ ಬೆಳೆದ ಈರುಳ್ಳಿಗಳೆಲ್ಲ ಹೀಗೆ ಇಲ್ಲಿ ಸಂಗಮಿಸಿ ಗೋಲ್ಗಪ್ಪದಣ್ಣನ ಬೆತ್ತದ ಸ್ಟಾಂಡ್ ಏರಿ ಕೂತುಬಿಟ್ಟಂತೆ. ಹಾಯುವವರ ಕಣ್ಸೆಳೆದು, ಕಾಲೇಜು ಹುಡುಗ-ಹುಡುಗಿಯರಿಗೆ ರುಚಿ ಹಿಡಿಸಿ, ವಾಕಿಂಗೆ ಹೋದ ಅಜ್ಜನೂ ಒಂದು ಕೈ ನೋಡುವ ಹಾಗೆ ಮಾಡಿಬಿಟ್ಟಿತು ವರ್ಷಗಳಲ್ಲಿ ಗೋಲ್ಗಪ್ಪವೆಂಬ ತಿಂಡಿ.
ನ್ಯೂಸ್‌ಪೇಪರುಗಳಲ್ಲಿ, ನ್ಯೂಸ್ ಛಾನೆಲ್ಲುಗಳಲ್ಲಿ ಆಗಾಗ ಬರುವುದುಂಟು ಸುದ್ದಿ- ಬೀದಿಬದಿ ಪದಾರ್ಥ ತಿನ್ನಬೇಡಿ, ಗೋಲ್ಗಪ್ಪಕ್ಕೆ ಬಳಸುವ ನೀರು ಕಲುಷಿತವಾಗಿರಬಹುದು, ಇತ್ಯಾದಿ. ಆದರೆ ಕೇಳುವವರ್ಯಾರು? ಜಮಾಯಿಸಿದ್ದೇವೆ ಗೋಲ್ಗಪ್ಪ ಗೋಪುರದ ಸುತ್ತ. ಕೊಟ್ಟಿದ್ದೇವೆ ಹತ್ತು ರೂಪಾಯಿ. ಚಾಚಿದ ಬೌಲಿನಲ್ಲಿ ಮೊಗೆಮೊಗೆದು ಇಡುತ್ತಿದ್ದಾನೆ ಗೋಲ್ಗಪ್ಪದಣ್ಣ: ಆರು ಗೋಲ್ಗಪ್ಪ, ಕೊನೆಯಲ್ಲೊಂದು ಸುಕ್ಕಾ. ಇಷ್ಟೇ ಆಶಯ: ನಮ್ಮ ಗೋಲ್ಗಪ್ಪದ ಪೂರಿಗಳಲ್ಲಿ ತುಂಬ ಪಾನಿ ತುಂಬಿರಲಿ. ಆರೋಗ್ಯ ಕೆಡದಿರಲಿ. ದಾಹ ನೀಗಲಿ. ತಿನ್ನುವ ಮೋಹ ನಾಳೆಗೂ ಇರಲಿ.
[ವಿಜಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]
4 comments:
ಓದುತ್ತಾ ಇದ್ರೆ ಗೋಲ್ಗಪ್ಪ ತಿನ್ಬೇಕು ಅನ್ಸೋದ್ರಲ್ಲಿ ಸಂಶಯನೆ ಇಲ್ಲ...
ಹಾ..... ನಾ ಈಗಲೇ ಒರಟೆ ಗೋಲ್ಗಪ್ಪ ತಿನ್ಲಿಕ್ಕೆ
Nice essay on golgappa puTTaNNa. :-) monne nanna nihaage golgappe tinnuva aase aaytu. akka tangi building kelagaDe hOgi tindu bandru. 'chennagittene?' anta keLide. pakkadalli mootri irlillamma adakke aStenu chennagirlillaa andloo. :-)
nice write up.
mootri = urinals.
Nanna hostel friends golgappa thinnokkanthane konaje to mangalore hogtha idru:)
Sukada swapna andre ide alva...
Post a Comment