Monday, April 13, 2015

ಮೇಲುಕೋಟೆಯಲ್ಲಿ...

ಮೇಲುಕೋಟೆಯ ದಾರಿಯಿಕ್ಕೆಲದಲ್ಲಿ ಉಸಿರು ಬೀರುವ ಹಸಿರ ಹೊಲ
ಕಲ್ಲಕಮಾನು ಸ್ವಾಗತಕ್ಕೆ, ಬಿರಿಬಿಡದ ಗಟ್ಟಿಯೊಣನೆಲ ಕೆಂಪಗೆ ಆಕಾಶ ನೋಡುತ್ತ.
ಟವೆಲು ಸುತ್ತಿದ ಮುದುಕ ಕಟ್ಟೆ ಮೇಲೆ, ಹೂಬುಟ್ಟಿಯಜ್ಜಿ ದಾರಿಬದಿಗೆ
ಮರದ ತೇರಿನ ಗಾಲಿಗೆ ವರಲೆ ಹುಳುಗಳ ಮುತ್ತಿಗೆ
ಒಡೆದ ತೆಂಗಿನ ಚಿಪ್ಪಿನೊಡಕು ಗರುಡಗಂಬದ ನೆತ್ತಿ ಮೇಲಿನ ಹಸಿದ ಹೊಟ್ಟೆಯ ಕಾಗೆಗೆ
ತಳ್ಳುಗಾಡಿಯ ಗಾಜುಕವಚದ ಹಿಂದೆ ದೊನ್ನೆಕಲಶದ ಗೋಪುರ
ಚೆಲುವನಾರಾಯಣನ ಕತ್ತಲ ಮೂರುತಿಗೆ ಪುಳಿಯೊಗರೆ ಪರಿಮಳದಭಿಷೇಕ

ಸದ್ದಿಲ್ಲದೆ ಬಂದ ನಲ್ಲಿನೀರು ಸಿಂಕಿನಲ್ಲಿದ್ದ ಪಾತ್ರೆಯನ್ನೆಲ್ಲ ತಾನೇ ತೊಳೆದಂತೆ,
ಮೇಲುಕೋಟೆಯಲ್ಲಿದ್ದಾಗ ಮಳೆ ಬರಬೇಕು ಅಂತೊಂದು ಅವ್ಯಕ್ತ ಆಸೆ..
ಅಲ್ಲಲ್ಲಿ ಎದ್ದ ಧೂಳನ್ನೆಲ್ಲ ತೆಪ್ಪಗಾಗಿಸಿ ಕರಗಿಸಿ ಹರಿವ ಕೆಂಪು ನೀರು
ಬಂಡೆಗಳ ಮೇಲೆ ಚಿತ್ರ ಬಿಡಿಸುವುದು. ಕಿವಿರುಗಳಿಗೆ ತಾಕಿದ ಹೊಸನೀರಿಗೆ
ಕಲ್ಯಾಣಿಯಲ್ಲಿನ ಮೀನು ಪುಳಕಗೊಳ್ವುದು. ಸೂರಂಚಿನ ದೋಣಿಗೆ ಬೊಗಸೆಯೊಡ್ಡಿ ನಿಂತ
ಹುಡುಗನ ಕೈ ದಣಿಯುವುದು, ಸಂಜೆಬೆಳಕಲ್ಲೂ ಚಳ್ಳನೆ ಹೊಳೆದ ಕೋಲ್ಮಿಂಚಿಗೆ
ಮೈ ನಡುಗುವುದು.  ತೋಯುತ್ತಲೇ ನಡೆಯುತ್ತಿರುವ
ಬೈರಾಗಿಗಳ ಕಮಂಡಲದೊಳಗಿನ ತೀರ್ಥದ ಮಟ್ಟ ಹೆಚ್ಚುವುದು.

ಟೆರಕೋಟಾ ಒಡವೆ ಧರಿಸಿದ ಹುಡುಗಿ ಈ ಮಳೆಯಲ್ಲಿ ನೆನೆಯುವುದಿಲ್ಲ.
ಕಿವಿಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಂಡವಳು ಕಲ್ಲ ಮಂಟಪದತ್ತ ಓಡುವಳು.
ತಾರಸಿಯ ಚಿತ್ತಾರದಿಂದೊಸರುವ ನೀರು, ಅಡ್ಡಗಾಳಿಗೆ ಸಿಕ್ಕು ತನ್ನತ್ತಲೇ ಧಾವಿಸುವ
ತುಂತುರುಗಳಿಗೂ ಆಕೆ ಹೆದರುವಳು. ಚೂರೇ ಎತ್ತಿದ ಚೂಡಿಯ ತುದಿಗೆ ತಾಕಿದ ಕೆಸರನ್ನಾಕೆ
ಈಗ ತೊಳೆದು ಸ್ವಚ್ಛಗೊಳಿಸಳು.  ಸರಕ್ಕನೆ ಮಂಟಪ ಹೊಕ್ಕ ಬಿಳಿ ಹಕ್ಕಿ
ರೆಕ್ಕೆ ಕೊಡವದಿರಲೆಂದು ಪ್ರಾರ್ಥಿಸುವಳು.

ನಗರದವರೆಗೂ ಚಾಚಿದೆ ಮೇಲುಕೋಟೆಯುಟ್ಟ ಸೀರೆಯ ಸೆರಗಿನಂಥ
ಕಪ್ಪು ಟಾರು ರಸ್ತೆ.  ಗಾಳಿಗೆ ಅಡ್ಡಬಿದ್ದ ದೊಡ್ಡ ಮರದಿಂದ ದಾರಿಯಲ್ಲಿ ಸಿಲುಕಿರುವ
ಚುಪುರು ಗಡ್ಡದ ಹುಡುಗ ನಿಂತಲ್ಲೇ ಚಡಪಡಿಸುತ್ತಿದ್ದಾನೆ.
ಆ ಮರದ ಬಾಗುಕೊಂಬೆಯಲ್ಲಿದ್ದ ಗೂಡೂ ಕಳಚಿಬಿದ್ದು ಮೊಟ್ಟೆಗಳೊಡೆದಿವೆ.
ಇಳಿಯುತ್ತಿರುವ ಕತ್ತಲೆಯ ನೋಡುತ್ತ ಕಲ್ಲುಮಂಟಪದಡಿ ನಿಂತಿರುವ ಹುಡುಗಿಯ
ಬೆದರುಗಣ್ಣುಗಳು ಬಿಳಿಹಕ್ಕಿಗೆ ತನ್ನ ಮೊಟ್ಟೆಗಳಂತೆ ಕಾಣುತ್ತಿವೆ.
ಕವಿಮನೆಯೊಳಗಿನ ಅಲಮಾರಿನಲ್ಲಿ ಜೋಡಿಸಿಟ್ಟ ಪುಸ್ತಕದಲ್ಲಿನ ಕವಿತೆಯೊಂದು
ಪಿಸುಗುಡುತ್ತಿದೆ: ಇಂದಿನೀ ಮಳೆ ಕಮ್ಮಿಯಾಗಲಿ, ಹನಿ ಕಡಿಯಲಿ.

4 comments:

Badarinath Palavalli said...

ಮೊದಲೆಲ್ಲ ಪಂಡಿತರು ಗಣಿತ ಮತ್ತು ಭಾಷಾ ನಿಘಂಟನ್ನು ಶ್ಲೋಕ ರೂಪದಲ್ಲಿ ಬರೆದಿಡುತ್ತಿದ್ದರು, ಇದೀಗ ನಮ್ಮ ನಡುವಿನ ಉತ್ತಮ ಬ್ಲಾಗರ್ ಶುಶ್ರೂಷರಿಂದ ಕಾವ್ಯ ರೂಪದಲ್ಲಿ ಪ್ರವಾಸ ಕಥನ. ಮೇಲುಕೋಟೆ ನೋಡಲೇ ಬೇಕೆಂದು ಆಸೆ ಹುಟ್ಟಿಸಿದ ಬರಹ.

Best of the best:
ಕಿವಿರುಗಳಿಗೆ ತಾಕಿದ ಹೊಸನೀರಿಗೆ
ಕಲ್ಯಾಣಿಯಲ್ಲಿನ ಮೀನು ಪುಳಕಗೊಳ್ವುದು

Sushrutha Dodderi said...

@Badarinath,

Thank you sir.. :-)

ಸಿಂಧು sindhu said...

ಪ್ರೀತಿಯ ಸುಶ್ರುತ,

i should say... ಮೇಲುಕೋಟೆ-ಯಿಲ್ಲಿ.. ಇಲ್ಲೇ ಕವಿತೆಯಲ್ಲಿ.
ತುಂಬ ಚೆನಾಗಿದ್ದು.
ಓದುವ ನನಗೆ ಸೂರಂಚಿಗೆ ಕೈನೀಡಿದ ಹಾಗೇ
ತಂಪು ತಂಪಾಗಿದ್ದು..

ಭಾಷೆ, ಗ್ರಹಿಕೆ ಎರಡೂ.. ಮಳೆಹನಿಗಳೇ.. ನಿರ್ಮಲ ನಿರಾಕಾರ ಮತ್ತೂ ಯಾವ ಆಕಾರಕ್ಕೂ ಎರಕಗೊಳ್ಳುವ ಹಾಗೆ..

ಅಭಿನಂದನೆಗಳು.

Unknown said...

U made me read Kannada like never before.. :) thoroughly enjoyed.