ಕಳಲೆ ಕತ್ತರಿಸಲು ಹರಿತ ಮೆಟಗತ್ತಿ ಬೇಕು.
ಮೆಟಗತ್ತಿಯಿದ್ದರೆ ಸಾಕೆ? ಗಟ್ಟಿಗಿತ್ತಿ ಸೊಸೆಯ ನಿಪುಣ ಕೈ ಬೇಕು
ಕಪ್ಪಿನೊಳಗಿನ ಬಿಳಿಯನೆಷ್ಟು ತೆಗೆಯಬೇಕೆಂದು ಗೊತ್ತಿರಬೇಕು
ತಿಳಿನೀರಿನೊಳಗೆ ಮುಳುಗಿಸಿ ಒತ್ತೊತ್ತಿ ಹಿಂಡಿಂಡಿ ಬಗ್ಗಿಸಿ ದಬರಿಯಿಂದ
ಹೊಸನೀರು ತುಂಬಿ ಮುಚ್ಚಿಟ್ಟು ಕಾಯುವ ತಾಳುಮೆ ಬೇಕು
ಹುಳಿಗಿಷ್ಟು, ಪಲ್ಯಕ್ಕಿಷ್ಟು, ಸಾಸ್ವೆಗಿಷ್ಟೆಂದು ತೆಗೆದಿಟ್ಟೂ
ಉಪ್ಪಿನಕಾಯಿಗೂ ಇಷ್ಟು ಉಳಿಸುವ ಜಾಣ್ಮೆ ಬೇಕು
ಕತ್ತರಿಸುಳಿದ ವಿಷಸಿಪ್ಪೆ ಯಾವ ಜಾನುವಾರ ಬಾಯಿಗೂ ಸಿಗದಂತೆ
ಗೊಬ್ಬರಗುಂಡಿಗೆಸೆಯುವ ಎಚ್ಚರಿಕೆಯಿರಬೇಕು
ಇಷ್ಟಿದ್ದರೆ ಸಾಕೆ? ಇದಕ್ಕೂ ಮುನ್ನ, ಬಿದ್ದ ಮಳೆ ಮೊಳೆಯುವ ಮೊದಲೇ
ಕಳಲೆ ತರಲು ಕುಡಗೋಲು ಹಿಡಿದು ಬಿದಿರಕಾನು ನುಗ್ಗಲೊಬ್ಬ ಗಂಡಸು ಬೇಕು
ಪದರ ಪದರಾಗಿ ಹಾಸಿದ ದರಕೆಲೆಗಳ ನಡುವೆ ಮುಚ್ಚಿರುವ
ಕೂಳೆ ಕಪ್ಪದಂತೆ ಹುಷಾರಾಗಿ ಹೆಜ್ಜೆ ಹಾಕಬೇಕು
ಸರ್ಪಮಂದಿರವಂತೆ ಮೆಳೆಗಳೊಡಲು ಎಂದು ಯಾವ ಕವಿಯೂ
ಎಚ್ಚರಿಸದಿದ್ದರೂ ಧಿಗ್ಗನೆ ಹೆಡೆಯೆತ್ತಿ ನಿಂತ ಹಾವನೆದುರಿಸುವ ಛಾತಿ ಬೇಕು
ತಗ್ಗಿ ಬಗ್ಗಿ ನಡೆದು ಬುಡಕ್ಕೆ, ಮೊಳಕೆಯ ಜುಟ್ಟು ಹಿಡಿಯುವಾಗ, ಅಮ್ಮಬಿದಿರಿಗೆ
ನೋವಾಗದಂತೆ ಶಾಪ ತಗುಲದಂತೆ ಸದ್ದಾಗದಂತೆ ನಾಜೂಕಾಗಿ ಕೊಯ್ಯಬೇಕು
ಸಂಗ್ರಹಿಸಿದ ಕಪ್ಪು ಮಿನಾರುಗಳನ್ನು ಹೊರೆಕಟ್ಟಿ ರಟ್ಟೆಯ ಮೇಲಿಟ್ಟು ತರುವಾಗ ಮನೆಗೆ
ಖಾಕಿಧಾರಿಗಳ್ಯಾರ ಕಣ್ಣಿಗೂ ಅಪ್ಪಿತಪ್ಪಿ ಸಹ ಬೀಳದ ಹಾಗೆ ಬಿಡುಗಣ್ಣಾಗಿರಬೇಕು
ಇಷ್ಟಾದರೆ ಆಯಿತೇ? ಕತ್ತರಿಸಿದಾಗ ಸಿಕ್ಕ ಗಾಲಿಗಳನೆಲ್ಲ ಸೇರಿಸಿ
ಕೋಲು ತೂರಿಸಿ ಹಗ್ಗ ಕಟ್ಟಿ ದೊಡ್ಡ ಗಾಡಿ ಮಾಡಿಕೊಡಲೊಬ್ಬ ಚಿಕ್ಕಪ್ಪ ಬೇಕು
ತೇರ ಹಗ್ಗ ಹಿಡಿದೆಳೆದು ಮನೆಯೆಲ್ಲ ಓಡಿಸಿ ಹೊಸ್ತಿಲ ಗಡಿ ದಾಟಿಸಿ
ಕಟ್ಟೆ ಅಂಗಳ ದಣಪೆಯಾಚೆಗೂ ಓಡಲು ಮಕ್ಕಳು ಬೇಕು
ಗಾರೆನೆಲವೆಲ್ಲ ಗೆರೆಗೆರೆಗಳಾಗಿ ಜಾರಿ ಬೀಳುವಷ್ಟು ಗಲೀಜಾಗಿ
ಮನೆಯೇ ಬಿದಿರಜಂಪೆಯಂತಾದರೂ ನಗುತ್ತಲೇ ಒರೆಸುವ ಚಿಕ್ಕಮ್ಮ ಬೇಕು
ತೆಳ್ಳಗೆ ತಾಳಿಹೊಡೆದ ಬಿಳಿಹೋಳುಗಳ ಪರಿಮಳದ ಚಕ್ರಸುಳಿಯಲಿ ಸಿಗದೆ
ಮಸಾಲೆಯರೆದು ಮಾಡಿದಡುಗೆಯ ತಿಂದು ಚಪ್ಪರಿಸಿ ಆಹಾ ಎನ್ನಲೊಬ್ಬ ಅಜ್ಜ ಬೇಕು
ಅಚ್ಚಮೆಣಸಿನಪುಡಿಯ ಸ್ವಚ್ಛ ಕೈಯಿಂದ ತೆಗೆದು ತಕ್ಕಷ್ಟೆ ಉಪ್ಪುಹುಳಿ ಬೆರೆಸಿ ಭರಣಿ ಮುಚ್ಚಳವನ್ನು
ಕೆಡದಂತೆ ಬಿಗಿಯಾಗಿ ಮುಚ್ಚಿ ನಾಗಂದಿಗೆಯಲಿಡಲೊಬ್ಬ ಅನುಭವಸ್ತ ಅಜ್ಜಿ ಬೇಕು
ಕಳಲೆ ಸವಿಯಲು, ಬಿದಿರ ಮೆಳೆಯಂತೆ ಒಟ್ಟಾಗಿ ಒಪ್ಪಾಗಿ ಇರುವ ತುಂಬುಸಂಸಾರ ಬೇಕು
ನೆನೆಸಿಟ್ಟ ನೀರಲ್ಲೆ ವಿಷಕಳೆದು ರುಚಿತಳೆದ ಕಳಲೆಯಂತೆ ವಿಶಾಲ ಹೃದಯವಿರಬೇಕು.
ಜತೆಗೆ, ಕೊಳಲಿಗೆಂದು ಬಿಡದೆ ಕಳಲೆಯಲ್ಲೆ ಬಿದಿರ ಕತ್ತರಿಸುವಷ್ಟು ನಿರ್ದಯತೆಯೂ ಇರಬೇಕು.
ಜತೆಗೆ, ಕೊಳಲಿಗೆಂದು ಬಿಡದೆ ಕಳಲೆಯಲ್ಲೆ ಬಿದಿರ ಕತ್ತರಿಸುವಷ್ಟು ನಿರ್ದಯತೆಯೂ ಇರಬೇಕು.
2 comments:
Nice poem.
Beautiful!! :)
Post a Comment